ಆಮ್ರಪಾಲಿ

ಅದ್ಯಾವ ಸ್ಪರ್ಶ ಪುರುಷಾರ್ಥ..
ಪುಣ್ಯ ಭೂಮಿಯ ತಗುಲಿತು..
ಮೋಡವೆಂಬ ಕಡಲು ಬಿಚ್ಚಿ
ನಿನ್ನ ಆತ್ಮದ ಇಂಚಿಂಚು
ತೊಳೆಯಿತು
ಮತ್ತೆ ಮತ್ತೆ ನರನಾಡಿಗಳಲ್ಲಿ ಹೊಳೆಯಿತು…
ಅದ್ಯಾವ ಪ್ರೇಮ ಬಿಂದು…
ಹೇಳು ಆಮ್ರಪಾಲಿ…?

ಅದೆಷ್ಟು ಗ್ರಹಗಳು
ಬಂದೆರಗಿದವು ನಿನ್ನ ಮೇಲೆ..
ನಾಲ್ಕೆ ಗುಂಡಿಯ ಇಕ್ಕಳಗಳ ಬಿಚ್ಚಿ..
ತುಸು ನಿಮಿರಿ ತುಸು ಬೆವರಿ
ಕಮರಿಕೊಂಡವು..
ಕಿಚ್ಚು ನಂದಿಸಿಕೊಂಡವು..
ನಿನಗೋ ಎದಿಯೊಳಗೆ ಹರಿತವಾದ ಇಳಿಗಿ ಮಣಿ ಬಿಟ್ಟಂಗ…
ಯಾರು ದಾಟಿದರು ಹೇಳು ಆಮ್ರಪಾಲಿ ಈ ವಾಂಛೆಯ?

ನಕ್ಷತ್ರಗಳ ಉರುಳಿಸುವ
ಯೌವನಕೆ..
ಮುತ್ತು ರತ್ನ ವಜ್ರ ವೈಢೂರ್ಯ
ಹಿಡಿದೇ ಬಂದರು..
ದೇಹವೆಂಬುದ ದೇಗುಲವಾಗಿಸಲಿಲ್ಲವೆಂಬ
ಕೊರಗು ಅರಿಯದಾದರು….

ಸೋರಿಹೋಗುವ ಆ ಬೆಳದಿಂಗಳೆಲ್ಲ
ರಾಡಿ ಹುಣ್ಣಿಮೆಯೆಂದು ಯಾರು ತಿಳಿದರು ಹೇಳು ಆಮ್ರಪಾಲಿ…?

ಅಸಂಖ್ಯ ಅತೃಪ್ತ ಆತ್ಮಗಳ
ತಣಿಸಿದವಳಂತೆ..
ಪುರದ ಪುಣ್ಯವೇ ಎಂಬಂತೆ
ಮೆರೆದವಳಂತೆ…
ಕೊನೆಗೆ ಒಮ್ಮೆಯಾದರೂ ಪೂರ್ಣ ಪುರುಷನ ಕಂಡವಳಂತೆ…

ಎಂತ ಪುಣ್ಯವತಿ ಮಾರಾಯತಿ ಆಮ್ರಪಾಲಿ…

ಅವಳು ಆಜಾದಿನ ಹುಡುಗಿ….!

“ನಕಾಬು”ಗಳಲ್ಲಿ
ಹಿಡಿದು ಕಟ್ಟಲಾರಿರಿ ನೀವು
ಅವಳ ಕನಸುಗಳ…
ಬೇಡಿ ಕಳಚಿದ ಅವಳ ಬಾಹುಗಳ…
ಮುಡಿ ಹಿಡಿದು ಜಗ್ಗಿದರೂ
ಬಗ್ಗಿ ಬಡಿಯಲಾರಿರಿ…
ಅವಳ ಹೊಕ್ಕಳು ಹುರಿಯಲ್ಲಿ
ಬಿಡುಗಡೆಗೊಂಡ ನಿರಾಳ
ಉಸಿರುಗಳ….

ಲೋಕದ ಹುಟ್ಟಿನ ಟೀಕೆದಾರರೇ..
ಅವಳು ರುದ್ರಿ ಕಾಳ ಭದ್ರಿ..
ನಿಮ್ಮ ತಲೆಗಳ ಚೆಂಡಾಡಿದವಳು…
ಹಸಿ ಹಸಿ ರಕ್ತವನ್ನೇ ಕುಡಿದು ತೇಗಿದವಳು…
ಬಟ್ಟೆ ಕಳಚಿದಳೆಂದು ಬಿಳಿಚದಿರಿ…
ಹೊಟ್ಟೆ, ಹೊಕ್ಕಳು ಇನ್ನೇನೋ ಎವೆಯಿಕ್ಕಿ ಕದ್ದು ನೋಡಿದವರೇ..
ಇದೀಗ ಕಣ್ಣ್ ಬಿಟ್ಟೇ ನೋಡಿ..
ಅವಳು ಬಟ್ಟೆ ಕಳಚಿದರೂ
ನೀವು ಬೆತ್ತಲು….!

ಸಾಕಲ್ಲವೇ?

ಮತ್ತೊಮ್ಮೆ ಓದಿಕೊಳ್ಳಿ..
ಅವಳು ಆಜಾದಿನ ಹುಡುಗಿ…..

ಅವಳು ಕಳಚಿದ್ದು…
ಬರೀ ಬಟ್ಟೆಯಲ್ಲ….ನಿಮ್ಮ….

ಧರ್ಮದ “ಅಂಕುಶ”
ಪುರುಷತ್ವದ “ಅಹಂ ”
ಶತಮಾನಗಳ “ಬೇಡಿ ”

ಇನ್ನು…. ಇಷ್ಟ ಅಂದ್ರ್ ಇಷ್ಟೇ

ಬೆತ್ತಲಾದವನನ್ನು ಬೆತ್ತಲಾಗಿಯೇ
ಹೆತ್ತವಳ ಮುಂದೆ ನಿಮ್ಮದೆಂತ..
ಪೌರುಷ.. ಅಂತೀನಿ.

ದೇವರಾಜ್‌ ಹುಣಸಿಕಟ್ಟಿ ರಾಣೇಬೆನ್ನೂರಿನವರು
ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಬಿಡಿ ಚಿತ್ರಗಳು ಮತ್ತು ಇತರ ಕವಿತೆಗಳು ಇವರ ಪ್ರಕಟಿತ ಕೃತಿ
ಕವಿತೆಯ ಓದು, ಬರೆಯುವುದು ಇವರ ಹವ್ಯಾಸ