ಸಬಿತ ಚಿಕ್ಕಿಗೆ ಬರೆಯುವ ಪತ್ರದಲ್ಲಿ ಪದ್ದಜ್ಜನ ಮಾಮೂಲಿನ ಕ್ಷೇಮ ಸಮಾಚಾರ, ಉಭಯ ಕುಶಲೋಪರಿ, ಅಳಿಯಂದಿರಿಗೆ ಮೊಮ್ಮಕ್ಕಳಿಗೆ ಆಶೀರ್ವಾದದ ಜೊತೆಗೆ ಪತ್ರ ಮುಗಿಯುತಿದ್ದರೆ ಬಾಗಿದೊಡ್ಡನಿಗೆ ಬರೆಯಲು ಬಾಕಿ ಇನ್ನೊಂದಷ್ಟು ವಿಚಾರಗಳು ಇರುತ್ತಿದ್ದವು. ಮೊಮ್ಮಗನ ಸುದ್ದಿಸೊಲಕ ಮೊಲೆ ಹಾಲು ತಿನ್ನುವ ಮೊಮ್ಮಗಳಿಗೆ ಅಮಾವಾಸ್ಯೆ ಹುಣ್ಣಿಮೆಗೆ ಕೊಡಬೇಕಾದ ಮನೆ ಔಷಧಿಯ ಪಟ್ಟಿ. ಮೊಮ್ಮಕ್ಕಳಿಬ್ಬರೂ ಲೂಟಿ ಮಾಡಿಕೊಳ್ಳದ ಹಾಗೆ ವಸಂತಿ ಮಕ್ಕಳನ್ನು ಸಂಭಾಳಿಸುತ್ತಾಳೆಯೇ ಎನ್ನುವ ವಿವರ.
ದೇವಿಕಾ ನಾಗೇಶ್ ಬರೆದ ಈ ಭಾನುವಾರದ ಕತೆ “ಕತೆ ಕತೆ ಕಾರಣ” ನಿಮ್ಮ ಓದಿಗೆ
ಕಥೆಗೊಂದು ಕಾರಣ ಬೇಕು ಎಂದು ಈ ಹಿಂದೆ ಯಾರಾದರೂ ಹೇಳುತ್ತಿದ್ದರೆ ಬಹುಶಃ ಸುಪ್ರೀತ ಖಂಡಿತಕ್ಕೂ ಒಪ್ಪುತ್ತಿರಲಿಲ್ಲ. ಮೊನ್ನೆ ಲಾಸ್ ಏಂಜಲೀಸ್‌ನನ ಹೋಟೆಲ್ ಒಂದರಲ್ಲಿ ಮಗ ಸೊಸೆಯೊಂದಿಗೆ ಊಟಕ್ಕೆ ಕೂತಿದ್ದ ಹೊತ್ತು ಅವರು ಕುಳಿತಿದ್ದ ಟೇಬಲ್‌ಗೆ ಎದುರಾಗಿ ಕೂತಿದ್ದ ತಾಯಿ ಮಗಳು ಮೊಮ್ಮಗ (ಳ) ಜೋಡಿ ಅವಳನ್ನು ಬೇಡ ಬೇಡವೆಂದರೂ ಮತ್ತೆ ಮತ್ತೆ ಅವರತ್ತ ಸೆಳೆದಿತ್ತು. ತನ್ನ ಊರಿನಲ್ಲಿ ಬಾಲ್ಯದಲ್ಲಿ ಯಾವತ್ತೋ ಕಂಡಿದ್ದ ಯಕ್ಷಗಾನದ ಸ್ತ್ರೀ ಪಾತ್ರಧಾರಿಯ ನೆನಪಾಗಿತ್ತು. ಅಲ್ಲಲ್ಲ ಆ ಮೊಮ್ಮಗನದ್ದು ತಕ್ಷಣ ನೋಡಿದರೆ ಸವಿತ ಚಿಕ್ಕಿಯದೇ ಮುಖ, ಹಾವಭಾವ ಮಾತ್ರ ಯಕ್ಷಗಾನದ ಸ್ತ್ರೀ ಪಾತ್ರಧಾರಿಯದ್ದು ಎಂದು ಥಟ್ ಅಂಥ ನೆನಪಾಗಿ ಸುಪ್ರೀತಾ ಆ ಮೂವರನ್ನು ಮತ್ತೆ ಮತ್ತೆ ನೋಡುತ್ತಾ ಊಟ ಮುಂದುವರಿಸಿದ್ದಳು.
ಕೇಜೋನ್ ಮೂಲದ ಬ್ವಯಿಲಿಂಗ್ ಕ್ರಾಬ್ ಎಂಬ ಆ ಹೋಟೇಲಿಗೆ ಜಗತ್ತಿನ ಮೂಲೆ ಮೂಲೆಯ ಜನ ಮುಗಿಬೀಳುತ್ತಾರೆ. ಈ ಹೋಟೇಲಿನ ಆಹಾರಕ್ಕೆ ಅದರದೇ ಆದ ವಿಶೇಷ ರುಚಿಯಿದೆ ಎಂಬ ಬಿಲ್ಡಪ್ ಕೊಟ್ಟು ಮಗ ಸೊಸೆ ಆನ್ಲೈನ್‌ನಲ್ಲಿ ಸ್ಥಳ ಕಾದಿರಿಸಿ ಅಲ್ಲಿಗೆ ಕರೆ ತಂದಿದ್ದರು. ಅವರ ಮಾತು ನಿಜ ಅನ್ನುವಂತೆ ಹೊಟೇಲಿನ ಮುಂದೆ ಜನ ಜಾತ್ರೆಯೇ ಸೇರಿತ್ತು. ಊರು ಪರ ಊರಿನ ಪ್ರೇಮಿಗಳು, ನೆಂಟರಿಷ್ಟರು ಕೊರೆಯುವ ಚಳಿಯಲ್ಲಿ ಹೋಟೆಲಿನ ಹೊರಗೆ ಕೂತು ತಮ್ಮ ಸರದಿಗಾಗಿ ಕಾಯುತ್ತಿದ್ದರು. ತಟ್ಟೆ ಲೋಟಗಳ ಹಂಗಿಲ್ಲದೆ ನಡೆಯುವ ಅಲ್ಲಿನ ಊಟದ ವಿಶೇಷತೆಯೇ ಬೇರೆ. ಕ್ರಿವ್ಸ್‌ಗಳು ಗಿರಾಕಿಗಳಿಗಾಗಿ ಕಾದಿರಿಸಿದ ಟೇಬಲ್ ಮೇಲೆ ಸ್ವಚ್ಛ ಬಿಳಿಯ ಹಾಳೆಯನ್ನು ಹಾಸಿ ಅದರ ಮೇಲೆ ಒಂದಷ್ಟು ಲಿಂಬು ಹೋಳುಗಳನ್ನು ತಂದು ಸುರಿಯುತ್ತಾರೆ. ಜೊತೆಗೆ ಬಟ್ಟೆ ಕೊಳೆಯಾಗದಂತೆ ಉಣ್ಣುವವರು ಧರಿಸಲು ಪ್ಲಾಸ್ಟಿಕ್ ಮೇಲು ಹೊದಿಕೆ, ಎಟ್ಟಿ, ಜೆಂಜಿಯ ಮೇಲ್ಕವಚ ಕತ್ತರಿಸಲು ತಿನ್ನಲು ಅನುಕೂಲವಾಗುವಂತೆ ಕತ್ತರಿ, ಮುಳ್ಳು ಚಮಚ ಹೀಗೆ ಪರಿಕರಗಳು. ಇನ್ನೇನು ಊಟಕ್ಕೆ ಸಿದ್ಧವಾಗುತ್ತೇವೆ ಅನ್ನುವಷ್ಟರಲ್ಲಿ ಪುಟ್ಟ ಪುಟ್ಟ ಪ್ಲಾಸ್ಟಿಕ್ ಡಬ್ಬಗಳಲ್ಲಿ ಉಪ್ಪು ಕರಿಮೆಣಸು ಪುಡಿಯ ಮಿಶ್ರಣ ಬಿಸಿ ಬಿಸಿ ಹಬೆಯಾಡುತ್ತಿರುವ ಮೆಕ್ಕೆಜೋಳದ ತೆನೆಗಳು, ಹುರಿದ ಹಪ್ಪಳದ ತುಂಡುಗಳು ಜೊತೆಗೆ ಪ್ಲಾಸ್ಟಿಕ್ ತಟ್ಟೆಗಳಲ್ಲಿ ಮಸಾಲೆಯ ಹೂರಣದೊಂದಿಗೆ ಮಿರುಗುವ ಎಟ್ಟಿ ಜೆಂಜಿಯ ಖಾದ್ಯಗಳು. ಅಲ್ಲಿ ಕೂತವರು ಪಂಚ ಇಂದ್ರಿಯಗಳ ಸಮೇತ ಎರಡೂ ಕೈ ಬಳಸಿ ತಿನ್ನುವುದನ್ನು ನೋಡುವುದೇ ಒಂದು ಚೆಂದ. ಸುಪ್ರೀತಳಂತೂ ತನ್ನ ಕೈಬಾಯಿಗಳ ಜೊತೆ ಆಟವಾಡುತ್ತಲೇ ಎದುರು ಆ ಕಡೆ ಈ ಕಡೆ ಕೂತ ಗಿರಾಕಿಗಳ ಊಟದ ವೈಖರಿಯನ್ನು ಕಣ್ಣು ತುಂಬಿಸಿಕೊಳ್ಳುತ್ತ ಊಟ ಮುಗಿಸಿದಳು.
ಕಡಲಕರೆಯಲ್ಲಿ ಹುಟ್ಟಿ ಬೆಳೆದವಳಾದ ಸುಪ್ರೀತಳಿಗೆ ಎಟ್ಟಿ ಜೆಂಜಿಯೇನು ಹೊಸದಲ್ಲ. ಆಕೆ ಸಣ್ಣದಿರುವಾಗ ಅವಳ ಪದ್ದಜ್ಜ ಕಡಲ ಆಯರೆಗೆ ಹೋಗಿ ಬರುವಾಗ ತನ್ನ ಪಟ್ಟೆ ಕೋಮಣದಲ್ಲಿ ಜೂವ ಜೂವ ಹೊರಳಾಡುವ ಬೂತಾಯಿ, ಬಂಗುಡೆ, ಎಟ್ಟಿ, ಜೆಂಜಿ, ಬಂಡಾಸ್, ತೊರಕೆ ಇವುಗಳಲ್ಲಿ ಯಾವುದಾದರೂ ಒಂದು ಕಟ್ಟಿ ತರುತ್ತಿದ್ದರು. ಜೆಂಜಿ ತಂದ ದಿನ ಅವು ಕೋಮಣದಿಂದ ಮಣ್ಣಿನ ಬಿಸಲೆಗೆ ಹಾಕುವಾಗ ನಂತರ ಅವುಗಳ ಕೈ ಕಾಲು ತುಂಡರಿಸಿ ಇಡುವವರೆಗೆ ಮನೆ ತುಂಬಾ ತೆವಳುತ್ತ ತನ್ನ ತಿಥಿಯಾಗುತ್ತದೆ ಇಂದು ಎಂಬ ಭಯಕ್ಕೆ ತಪ್ಪಿಸಿಕೊಳ್ಳಲು ಮೂಲೆ ಅರಸಿ ಓಡುತ್ತಿದ್ದವು. ಮಕ್ಕಳ ಸೈನ್ಯ ಅವುಗಳನ್ನು ತಲಾಸು ಮಾಡಿ ತಂದು ಮತ್ತೆ ಬಿಸಲೆಗೆ ಹಾಕುತ್ತಿದ್ದರು.
ಪದ್ದಜ್ಜನ ಹೆಂಡತಿಯೇ ಬಾಗಿದೊಡ್ಡ. ಬಾಗಿ ದೊಡ್ಡನ ಕಿವಿಗಳೆರಡರ ಮೇಲೆ ಇದ್ದ ಕೊಪ್ಪುಗಳು, ಮೇಲೆ ಕೆಳಗೆ ಮಂಡೆಗಳೆರೆಡನ್ನು ಜೋಡಿಸಿಟ್ಟಂತೆ ಕಾಣುತ್ತಿದ್ದ ಮೂಗಿಗಿಂತ ಮೂಗುತಿ ಭಾರವಾಯಿತೋ ಎನ್ನುವಂತೆ ನೇಲುತ್ತಿದ್ದ ಮೂಗುತಿ ಅವರ ಹೊಳೆಯುವ ಮೈ ಬಣ್ಣದ ಪುಟ್ಟ ಗಾತ್ರಕ್ಕೆ ವಿಶೇಷ ಕಳೆಯಂತೆ ಮಿನುಗುತ್ತಿತ್ತು. ಪದ್ದಜ್ಜನ ಕಿವಿಯಲ್ಲಿದ್ದ ಕೆಂಪು ಕಲ್ಲಿನ ಮುರುಗಿ ಬಿರು ಬಿಸಿಲಿಗೆ ಬೆಂದು ಕಂದು ಕಟ್ಟಿದ ಅವರ ಮೈ ಬಣ್ಣದ ಎದುರು ಮಂಕಾಗಿ ಕಾಣುತಿತ್ತು. ಈ ದಂಪತಿಗಳದ್ದು ಮಾಗಿದ ದಾಂಪತ್ಯ. ಕಡಲಾಯರೆಯಿಂದ ಬಂದ ಪದ್ದಜ್ಜ ಸ್ನಾನ ಮುಗಿಸಿ ಮೈ ಕೈಕಾಲುಗಳಿಗೆ ತೆಂಗಿನೆಣ್ಣೆ ಹಚ್ಚಿ ಸಂಜೆ ಹೊತ್ತು ಬೆಂಚಿನಲ್ಲಿ ಅಡ್ಡಾಗುತ್ತಿದ್ದರು. ಸುಪ್ರೀತ ಶಾಲೆಯಿಂದ ಬಂದವಳೇ ಬಾಗಿದೊಡ್ಡನನ್ನು ಹುಡುಕಿಕೊಂಡು ಅವರ ಮನೆಗೆ ಹೋಗುತ್ತಿದ್ದಳು. ಮೂಕ ಪ್ರಾಣಿ ಗಳಂತೆ ಮಕ್ಕಳು ಕೂಡ ತಮ್ಮ ಮೇಲೆ ಪ್ರೀತಿ ತೋರಿಸಿದರನ್ನು ಹೆಚ್ಚು ಹಚ್ಚಿಕೊಳ್ಳುವುದು ಅಲ್ಲವೇ. ಅಪರೂಪಕ್ಕೊಮ್ಮೆ ನೆಂಟರ ಹಾಗೆ ಬರುವ ಅವರ ಮೊಮ್ಮಕ್ಕಳಿಗಿಂತ ನೆರೆಕೆರೆಯಲ್ಲಿದ್ದು ತಮ್ಮ ಮಕ್ಕಳಂತೆ ಒಡನಾಡುವ ಈ ಪುಟ್ಟ ಮಕ್ಕಳ ಮೇಲೆ ಒಂದು ತೂಕ ಹೆಚ್ಚಿನ ಪ್ರೀತಿ ಈ ದಂಪತಿಗಳಿಗೆ ಇತ್ತು. ಇವರ ಮಕ್ಕಳಿಬ್ಬರೂ ಉದ್ಯೋಗ, ಓದು ಎಂದು ದೂರದ ಊರುಗಳಲ್ಲಿ ನೆಲೆಸಿದ್ದರು. ಮದುವೆ ಮಕ್ಕಳು ಎಂದಾಗಿ ಅವರ ಪಾಡಿಗೆ ಅವರಿದ್ದರು. ಹೀಗಾಗಿ ಅನುವು ಆಪತ್ತಿಗೆ ಆಗಿ ಬರುವ ನೆರೆಕೆರೆಯ ಮಕ್ಕಳೇ ತಮ್ಮಮಕ್ಕಳು ಎಂಬ ಪ್ರೀತಿ ಈ ದಂಪತಿಗಳು ತೋರಿಸುತ್ತಿದ್ದರು.
ಬಾಯಿ ತುಂಬಾ ಮಾತಾಡುತ್ತ ಆ ಮನೆ ಈ ಮನೆ ಎಂದು ಒಡ ನಾಡುವ ಮಕ್ಕಳ ನಡುವೆ ಸುಪ್ರೀತಾ ಸುಂಟರಗಾಳಿಯಂತವಳು. ಬಾಗಿ ದೊಡ್ಡನಿಗೆ ಇವಳ ಮೇಲೆ ವಿಶೇಷ ಪ್ರೀತಿ. ಮನೆಯಲ್ಲಿ ಮಾಡುವ ವಿಶೇಷ ಅಡಿಗೆ ತಿಂಡಿ ಎತ್ತಿಟ್ಟು ಸುಪ್ರೀತಾಳಿಗೆ ಗುಟ್ಟಿನಲ್ಲಿ ಕೊಡುತ್ತಿದ್ದರು. ಊರಿಗೊಂದೇ ಅಂಗಡಿಯಿದ್ದ ಆ ಕಾಲದಲ್ಲಿ ಚಾಕಲೇಟು ಮಕ್ಕಳಾರೂ ಕಂಡವರೇ ಅಲ್ಲ. ಆದರೆ ಬಾಗಿ ದೊಡ್ಡನ ಬಿರಡೆಯಲ್ಲಿ ಕೆಮ್ಮುವ ಮಕ್ಕಳಿಗೆ ಅಪರೂಪ ಕೊಮ್ಮೆ ಶುಂಠಿ ಪೆಪ್ಪರ್ಮಿಂಟು ದೊರೆಯುವುದಿತ್ತು. ಸುಪ್ರೀತಾ ಕೆಲವೊಮ್ಮೆ ಕೆಮ್ಮವ ನಾಟಕವಾಡಿ ಬಾಗಿ ದೊಡ್ಡನಲ್ಲಿ
ಶುಂಠಿ ಪೆಪ್ಪರಮಿಂಟ್ ಕೇಳಿ ಪಡೆದು ಸವಿಯುತ್ತಿದ್ದಳು.
ಭಾನುವಾರವೆಂದರೆ ಮಕ್ಕಳಿಗೆ ಶಾಲೆಗೆ ರಜೆ. ಇಳಿ ಸಂಜೆ ಹೊತ್ತು ಪದ್ದಜ್ಜ ಅವರ ಮನೆ ಹೊರಗೆ ಅವರೇ ಹಾಕಿರುತ್ತಿದ್ದ ತೆಂಗಿನ ಮಡಲಿನ ದೊಂಪದ ನೆರಳಿನಲ್ಲಿ ಬೆಂಚಿನ ಮೇಲೆ ಅಡ್ಡಾಗುತ್ತಿದ್ದರು. ವಾರಕ್ಕೆ ನಾಲ್ಕು ದಿನ ಕಡಲಾಯರೆಗೆ ಹೋಗುವ ಪದ್ದಜ್ಜನಲ್ಲಿ ಈ ಹೊತ್ತು ನೋಡಿಕೊಂಡು ತನಗೆ ಕಡಲು, ಬೋಟಿನಿಂದ ಮೀನಿನ ರಾಶಿ ಬಂದು ಬೀಳುವ ಧಕ್ಕೆ ತೋರಿಸುವಂತೆ ಹೇಳುತ್ತಿದ್ದಳು. ಆಗ ಅಲ್ಲಿ ಸುಳಿದಾಡುತ್ತಿರುವ ಸುಪ್ರೀತಳನ್ನು ಕಂಡರೆ ಬಾಗಿದೊಡ್ಡ ಜೋಪಾನ ತೆಗೆದಿರಿಸಿದ್ದ ಅವರ ಮಗ ರಾಮು ಮಾಮ ಮತ್ತು ಮಗಳು ಸಬಿತಾ ಚಿಕ್ಕಿ ಬರೆದಿರುವ ಪತ್ರಗಳ ಗಂಟು ತಂದು ಅದರಲ್ಲಿ ಕೆಲವು ಪತ್ರ ಆರಿಸಿ ತೆಗೆದು ಗಂಡನಿಗೆ ಅದನ್ನು ಓದಿ ಹೇಳುವ ಕೆಲಸ ಹಚ್ಚುತ್ತಿದ್ದರು. ಬರಿಯ ಕೈಬರಹ ಕಂಡೇ ಇದು ಯಾರು ಬರೆದ ಪತ್ರ ಎಂದು ಹೇಳಿ ಬಿಡುವಷ್ಟು ಜಾಣೆ ಆಕೆಯೀಗ, ಪತ್ರಗಳನ್ನು ಓದುವುದೆಂದರೆ ಸುಪ್ರೀತಗೆ ಇಷ್ಟವೇ, ಮನೆಗೆ ಸಾಮಾನು ಕಟ್ಟಿ ತರುವ ತುಂಡು ಪೇಪರ್ ಸಿಕ್ಕರೂ ಅವಳು ಓದಿ ಮುಗಿಸುವ ಜಾತಿಯವಳು. ಚಿಕ್ಕಿ ಓದುವ ಪ್ರಜಾಮತ ಅಪ್ಪ ಊರಿಗೆ ಬರುವಾಗ ಅಪರೂಪಕ್ಕೆ ತರುವ ಸುಧಾ, ನವಭಾರತ ಪತ್ರಿಕೆಗಳು ಆ ವಯಸ್ಸಿಗೆ ಅರ್ಥವಾಗದಿದ್ದರೂ ಒಂದಿಂಚು ಬಿಡದೆ ಓದಿ ಮುಗಿಸುವ ಅವಳ ಹುಚ್ಚಿಗೆ ಕೆಲವೊಮ್ಮೆ ‘ಪಾಠ ಪುಸ್ತಕ ಓದಿ ಮುಗಿಸು ಮೊದಲು’ ಎಂದು ಚಿಕ್ಕಿ ಬೈಯುವುದಿತ್ತು. ಆಗ ಅವಳಿಗೆ ದೊಡ್ಡವರ ಹಾಗೆ ಚಿಕ್ಕ ಮಕ್ಕಳಿಗೆ ಯಾಕೆ ಪುಸ್ತಕ ಇಲ್ಲ ಎಂದು ಬೇಸರ ಆಗುತ್ತಿತ್ತು. ದೊಡ್ಡವರ ದಿನಪತ್ರಿಕೆ, ವಾರ ಪತ್ರಿಕೆಗಳಲ್ಲಿರುವ ಪುಟ್ಟ ಪುಟ್ಟ ಚಿತ್ರ ಕಥೆಗಳು ಅವಳನ್ನು ಸೆಳೆಯುತ್ತಿತ್ತು. ಸಹಪಾಠಿಗಳು ಅಪರೂಪಕ್ಕೊಮ್ಮೆ ತರುತ್ತಿದ್ದ ಚಂದಮಾಮದ ಕಥೆಗಳನ್ನು ಓದುವುದೆಂದರೆ ಅವಳಿಗೆ ಜೀವ. ಆದರೆ ಇಲ್ಲಿ ಮಂದ ಕಿವಿಯ ಪದ್ದಜ್ಜ ಕೇಳಿಸಿಕೊಳ್ಳಬೇಕೆಂದರೆ ಸುಪ್ರೀತ ಪತ್ರಗಳನ್ನು ಎರಡೆರಡು ಸಲ ಓದ ಬೇಕಾಗಿ ಬರುತಿತ್ತು. ಮತ್ತು ಈ ಪತ್ರಗಳು ಓದಿ ಓದಿ ಅವಳಿಗೆ ಈ ಮೊದಲೇ ಬಾಯಿಪಾಠವಾಗಿರುತಿತ್ತು. ಹೀಗಾಗಿ ಬೋರು ಹೊಡೆಸುವ ಈ ಕೆಲಸದಿಂದ ತಪ್ಪಿಸಿಕೊಳ್ಳಲು ಮೂತ್ರ, ಕಕ್ಕಸು ಬರುತ್ತದೆ ಎನ್ನುವ ನೆಪ ಆಕೆ ಕೆಲವೊಮ್ಮೆ ಪ್ರಯೋಗಿಸಿ ಅಲ್ಲಿಂದ ಕಾಲು ಕೀಳುವುದಿತ್ತು.
ಹೀಗೆ ಹೊರಟ ಅವಳ ಸವಾರಿ ಶಾಂತಕ್ಕನ ಮನೆಗೆ ಹೋಗುತ್ತಿತ್ತು. ಅಲ್ಲಿ ಅವರು ಕಟ್ಟಿ ಕಟ್ಟಿ ಗುಡ್ಡೆ ಹಾಕುತ್ತಿದ್ದ ಬೀಡಿಗಳನ್ನು ಲೆಕ್ಕ ಮಾಡಿ 25ರ ಹಾಗೆ ಕಟ್ಟು ಹೊಡೆಯುವುದೆಂದರೆ ಸುಪ್ರೀತಳಿಗೆ ಇಷ್ಟವೇ. ಅವಳು ಶಾಂತನ ಬೀಡಿ ಸೂಪಿನಲ್ಲಿ ಕೈಯಾಡಿಸುವುದು ಕಂಡರೆ ಮನೆಯಲ್ಲಿ ಅಜ್ಜಿ, ಚಿಕ್ಕಿ ಬೈಯ್ಯುವರೆಂಬ ಹೆದರಿಕೆ ಇದ್ದರೂ ಅವಕಾಶ ಸಿಕ್ಕಿದಾಗ ಸುಪ್ರೀತ ಈ ಕೆಲಸ ತಪ್ಪಿಸುವವಳಲ್ಲ, ಜೊತೆಗೆ ತಮ್ಮದೇ ಬಾಡಿಗೆ ಮನೆಯಲ್ಲಿದ್ದ ಶಾಂತನ ಮನೆಯಲ್ಲಿ ಇಳಿ ಸಂಜೆ ಹೊತ್ತು ಕೂತರೆ ತನ್ನ ಸಹಪಾಠಿಗಳಾಗಿದ್ದವರು ಶಾಲೆ ಬಿಟ್ಟು ಬೀಡಿ ಕಟ್ಟುತ್ತಿರುವ ಗುಲಾಬಿ, ವಸಂತಿ, ಜಯ ಮುಖಕ್ಕೆ ಪಾಂಡ್ಸ್ ಪೌಡರ್ ಹಾಕಿಕೊಂಡು ಕಾಲಿಗೆ ಚಪ್ಪಲಿ ಹಾಕಿಕೊಂಡು ಬಣ್ಣದ ಬಟ್ಟೆ ಧರಿಸಿ ಚೆನ್ನಾಗಿ ಅಲಂಕರಿಸಿಕೊಂಡು ಬೀಡಿ ಬ್ರಾಂಚಿಗೆ ಬೀಡಿ ಕೊಂಡು ಹೋಗುವುದನ್ನು ನೋಡಬಹುದು ಎಂಬ ಆಶೆಯು ಅವಳಿಗಿರುತಿತ್ತು. ಬೀಡಿಯ ಆ ಲೋಕದೊಳಗೆ ಅವಳ ಮನೆಯಲ್ಲಿ ನಿಷೇಧವಿತ್ತಲ್ಲ, ಹಾಗೆ ಸುಪ್ರೀತಳಿಗೆ ಇವರನ್ನೆಲ್ಲ ಕದ್ದು ನೋಡುವ ಆಶೆ.
ರಜೆ ದಿನಗಳಲ್ಲಿ ಸುಪ್ರೀತ ಇಡೀ ದಿನ ಮನೆಯಲ್ಲಿ ಇರಬೇಕೆಂದರೆ ಅವಳನ್ನು ಕಟ್ಟಿ ಹಾಕಬೇಕಷ್ಟೇ. ಮನೆ ಕೆಲಸವೆಂದರೆ ಸೋಮಾರಿಯಾದ ಇವಳಿಗೆ ಚಿಕ್ಕಿ ಇಂತಿಷ್ಟು ಕೆಲಸ ಮಾಡಿ ಮುಗಿಸಲೇಬೇಕು ಎಂದು ತಾಕೀತು ಮಾಡುತ್ತಿದ್ದರು. ಅವಳು ಮಾಡಬೇಕಿದ್ದ ನಿತ್ಯದ ಕೆಲಸ ಮುಗಿಯಿತೆಂದರೆ ಮತ್ತೆ ಅವಳ ತಂಟೆಗೆ ಯಾರೂ ಬರುತ್ತಿರಲಿಲ್ಲ.
ಪದ್ದಜ್ಜನ ಕಿವಿಯಲ್ಲಿದ್ದ ಕೆಂಪು ಕಲ್ಲಿನ ಮುರುಗಿ ಬಿರು ಬಿಸಿಲಿಗೆ ಬೆಂದು ಕಂದು ಕಟ್ಟಿದ ಅವರ ಮೈ ಬಣ್ಣದ ಎದುರು ಮಂಕಾಗಿ ಕಾಣುತಿತ್ತು. ಈ ದಂಪತಿಗಳದ್ದು ಮಾಗಿದ ದಾಂಪತ್ಯ. ಕಡಲಾಯರೆಯಿಂದ ಬಂದ ಪದ್ದಜ್ಜ ಸ್ನಾನ ಮುಗಿಸಿ ಮೈ ಕೈಕಾಲುಗಳಿಗೆ ತೆಂಗಿನೆಣ್ಣೆ ಹಚ್ಚಿ ಸಂಜೆ ಹೊತ್ತು ಬೆಂಚಿನಲ್ಲಿ ಅಡ್ಡಾಗುತ್ತಿದ್ದರು. ಸುಪ್ರೀತ ಶಾಲೆಯಿಂದ ಬಂದವಳೇ ಬಾಗಿದೊಡ್ಡನನ್ನು ಹುಡುಕಿಕೊಂಡು ಅವರ ಮನೆಗೆ ಹೋಗುತ್ತಿದ್ದಳು.
ಬಾಗಿ ದೊಡ್ಡನ ಮೇಲೆ ಇವಳಿಗೆ ಕಂಡಾಪಟ್ಟೆ ಪ್ರೀತಿ. ಇದಕ್ಕೆ ಕಾರಣವೂ ಇತ್ತು. ಇವಳು ಚಿಕ್ಕವಳಿರುವಾಗ ಹುಟ್ಟಿದ್ದ ಇವಳ ಪುಟ್ಟ ತಮ್ಮನನ್ನು ಎತ್ತಿಕೊಳ್ಳುತ್ತೇನೆ ಎಂದು ಸುಪ್ರೀತ ಆಸೆ ಪಡುತ್ತಿದ್ದರೆ ಪ್ರತಿ ಸಲವೂ ಅವಳ ಅಮ್ಮ ಮತ್ತು ಅಜ್ಜಿ ಹೋಗು, ಹೋಗು ಮಗುವನ್ನು ನೀನು ಬೀಳಿಸುತ್ತೀಯಾ ಎಂದು ಅಟ್ಟುತ್ತಿದ್ದರು. ಅದರೆ ಅವಳಿಗಿಂತ ಸ್ವಲ್ಪ ದೊಡ್ಡವಳಿದ್ದ ಅವಳ ಅಕ್ಕನಿಗೆ ತಮ್ಮನನ್ನು ಎತ್ತಿಕೊಳ್ಳಲು ಬಿಡುತ್ತಿದ್ದರು. ಇದು ಕಂಡು ಮುಖ ಚಿಕ್ಕದು ಮಾಡಿ ಕುಳಿತಿರುತ್ತಿದ್ದ ಸುಪ್ರೀತಳನ್ನು ಎಷ್ಟೋ ಸಲ ಬಾಗಿ ದೊಡ್ಡ ಅವರ ಮನೆಗೆ ಕರೆದುಕೊಂಡು ಹೋಗಿ ಅವರ ಮಗಳು ಸಬಿತ ಚಿಕ್ಕಿಯ ಪುಟ್ಟ ಮಗುವನ್ನು ಇವಳು ಬೇಕೆಂದಷ್ಟು ಹೊತ್ತು ಹಿಡಿದುಕೊಂಡಿರಲು ಬಿಡುತ್ತಿದ್ದರು. ಇವಳು ಮಗುವನ್ನು ಎತ್ತಿಕೊಂಡಿರುವಷ್ಟು ಹೊತ್ತು ದೂರದ ಮಂಚದಲ್ಲಿ ಮಲಗಿ ಪುಸ್ತಕದ ಮೇಲೆ ಕಣ್ಣಾಡಿಸುತ್ತ ಆಗೊಮ್ಮೆ ಈಗೊಮ್ಮೆ ಇವಳ ಕಡೆ ನೋಡುತ್ತ ಮಲಗಿರುತ್ತಿದ್ದ ಸಬಿತ ಚಿಕ್ಕಿಯ ಮೇಲೆ ಇವಳಿಗೆ ವಿಶೇಷ ಗೌರವ. ಒಂದಕ್ಷರ ಓದಿ ಬರೆಯಲು ಗೊತ್ತಿಲ್ಲದ ಬಾಗಿದೊಡ್ಡ ಮತ್ತು ಪದ್ದಜ್ಜನ ಮಗಳು ಇವರು ಹೇಗೆ ಇಷ್ಟೆಲ್ಲಾ ಓದಿದ್ದು ಎನ್ನುವ ಅಚ್ಚರಿ ಕೂಡ ಸುಪ್ರೀತಳಿಗಿತ್ತು. ಬೆಂಗಳೂರಿನ ಯಾವುದೋ ಕಾಲೇಜಿನಲ್ಲಿ ಓದುವ ಮಕ್ಕಳಿಗೆ ಇವರು ಪಾಠ ಹೇಳುತ್ತಿದ್ದಾರೆ. ಅವರು ಬಾಣಂತನ ಮುಗಿಸಿ ಬೆಂಗಳೂರಿಗೆ ಹಿಂತಿರುಗುವಾಗ ತನ್ನ ಸಹಪಾಠಿಯಾಗಿದ್ದು ನಂತರ ಬೀಡಿ ಕಟ್ಟುತ್ತಿದ್ದ ವಸಂತಿ ಅವರ ಜೊತೆ ಹೋಗುತ್ತಾಳೆ ಎಂದು ತಿಳಿದಾಗ ವಸಂತಿಯ ಅದೃಷ್ಟಕ್ಕೆ ಸುಪ್ರೀತ ಕರುಬಿದ್ದಳು. ಸಬಿತ ಚಿಕ್ಕಿಯ ಮಗು ನೋಡಿಕೊಳ್ಳಲು ಈಕೆ ಹೋಗಿದ್ದು ಎಂದು ಸುಪ್ರೀತಳಿಗಾದರೂ ಆಗ ಅರಿವಿಗೆ ಬರುವ ವಯಸ್ಸಲ್ಲ.
ಬಾಗಿದೊಡ್ಡ ತನ್ನ ಮಕ್ಕಳಿಗೆ ಪತ್ರ ಬರೆಯಬೇಕಿದ್ದರೆ ಸುಪ್ರೀತಳ ರಜಾದಿನ ಕಾಯುತ್ತಾರೆ. ಸಬಿತ ಚಿಕ್ಕಿಯಿಂದ ಬಂದಿರುತಿದ್ದ ಪೋಸ್ಟ್ ಕವರ್‌ನಲ್ಲಿರುವ ಪೋಸ್ಟ್ ಆಫೀಸ್ ಸೀಲು ಬಿದ್ದ ಸ್ಟ್ಯಾಂಪ್‌ಗಳನ್ನು ಇವಳಿಗೆ ಜೋಪಾನ ಎತ್ತಿಟ್ಟುಕೊಡಲು ಕಾಯುವ ಬಾಗಿದೊಡ್ಡ ಸುಪ್ರೀತಳಿಗೆ ಅವಳ ನೋಟ್ ಬುಕ್ಕಿನ ಎರಡು ಹಾಳೆ ತರಲು ಮೊದಲೇ ಹೇಳಿರುತ್ತಿದ್ದರು. ಅಂದು ಮನೆಯಿಂದ ಹೊರಡುವಾಗ ಚಿಕ್ಕಿ ನಡುವೆ ಕರೆಯಬಾರದು ಎಂಬ ಎಚ್ಚರದಲ್ಲಿ ತನಗೆ ನಿಗದಿ ಪಡಿಸಿರುವ ಆ ದಿನದ ತನ್ನ ಮನೆಕೆಲಸ, ಶಾಲೆಯ ಕೆಲಸ ಸುಪ್ರೀತ ಮೊದಲೇ ಮುಗಿಸುತ್ತಿದ್ದಳು. ಆದರೂ ಸುಪ್ರೀತ ಮನೆಯಿಂದ ಹೊರಡುವಾಗ ಚಿಕ್ಕಿ, ದೊಡ್ಡ’ ಇನ್ನು ಅಲ್ಲೇ ಪಟ್ಟಾಂಗ ಹಾಕಿ ಜಕ್ಕ್ ಹೊಡೆಯುವುದಲ್ಲ ಬೇಗ ಬಾ ‘ಎಂದು ವಾರ್ನಿಂಗ್ ಮಾಡಿಯೇ ಮಾಡುತ್ತಿದ್ದರು.
ರಾಮು ಮಾಮನಿಗೆ ಪತ್ರ ಬರೆಯುವ ಕೆಲಸ ಸುಪ್ರೀತಳಿಗೆ ಸುಲಭದ್ದು. ಬರಿಯ ಚಿರಂಜೀವಿ ರಾಮುವಿಗೆ ನಿನ್ನ ಹೆತ್ತವರ ಆಶೀರ್ವಾದಗಳು. ನಾವು ಕ್ಷೇಮ; ನಿಮ್ಮ ಕ್ಷೇಮ ಸಮಾಚಾರ ಆಗಿಂದ್ದಾಗೆ ತಿಳಿಸುತ್ತಿರು. ಸೌಭಾಗ್ಯವತಿ ವಾರಿಜಾ ಮತ್ತು ಚಿರಂಜೀವಿಗಳಾದ ವಿನು ಮತ್ತು ವಸು ಹೇಗಿದ್ದಾರೆ? ಅವರಿಗೆ ನಮ್ಮ ಆಶೀರ್ವಾದಗಳನ್ನು ತಿಳಿಸು….. ಹೆಚ್ಚೆಂದರೆ ಇನ್ನೆರಡು ವಾಕ್ಯದಲ್ಲಿ ಪತ್ರ ಮುಗಿಯುತಿತ್ತು. ಪದ್ದಜ್ಜ ಇನ್ ಲ್ಯಾಂಡ್ ಲೆಟರ್ ತಂದಿದ್ದಾರೆ ಎಂದರೆ ರಾಮು ಮಾಮನಿಗೆ ಪತ್ರವೆಂದು ಲೆಕ್ಕ. ರಾಮು ಮಾಮನೂ ಇವರಿಗೆ ಪತ್ರ ಇನ್ ಲ್ಯಾಂಡ್ ಲೆಟರ್‌ನಲ್ಲಿಯೇ ಬರೆಯುವುದು. ಸಬಿತ ಚಿಕ್ಕಿಗೆ ಬರೆಯುವ ಪತ್ರದಲ್ಲಿ ಪದ್ದಜ್ಜನ ಮಾಮೂಲಿನ ಕ್ಷೇಮ ಸಮಾಚಾರ, ಉಭಯ ಕುಶಲೋಪರಿ, ಅಳಿಯಂದಿರಿಗೆ ಮೊಮ್ಮಕ್ಕಳಿಗೆ ಆಶೀರ್ವಾದದ ಜೊತೆಗೆ ಪತ್ರ ಮುಗಿಯುತಿದ್ದರೆ ಬಾಗಿದೊಡ್ಡನಿಗೆ ಬರೆಯಲು ಬಾಕಿ ಇನ್ನೊಂದಷ್ಟು ವಿಚಾರಗಳು ಇರುತ್ತಿದ್ದವು. ಮೊಮ್ಮಗನ ಸುದ್ದಿಸೊಲಕ ಮೊಲೆ ಹಾಲು ತಿನ್ನುವ ಮೊಮ್ಮಗಳಿಗೆ ಅಮಾವಾಸ್ಯೆ ಹುಣ್ಣಿಮೆಗೆ ಕೊಡಬೇಕಾದ ಮನೆ ಔಷಧಿಯ ಪಟ್ಟಿ. ಮೊಮ್ಮಕ್ಕಳಿಬ್ಬರೂ ಲೂಟಿ ಮಾಡಿಕೊಳ್ಳದ ಹಾಗೆ ವಸಂತಿ ಮಕ್ಕಳನ್ನು ಸಂಭಾಳಿಸುತ್ತಾಳೆಯೇ ಎನ್ನುವ ವಿವರ. ವಸಂತಿ ಹೆಣ್ಣು ಹುಡುಗಿ. ಅವಳ ಮೇಲೆ ಒಂದು ಕಣ್ಣು ಇಟ್ಟಿರು.. ನಿನ್ನ ಓದು ಕೆಲಸ ಎಂದು ಬೋಳೆ ಬಸವನ ಹಾಗೆ ಇರುವುದು ಅಲ್ಲ ಎನ್ನುವ ಸೂಕ್ಷ್ಮ, ಹಾಗೆ ಮಗುವಿಗೆ ಮೊಲೆ ಹಾಲು ಕೊಡುವಷ್ಟು ದಿನ ತಿಂಗಳಿಗೆ ಎರಡು ಸಾರಿ ಓಮದ ಪಲದೇ ಮಾಡಿ ಕುಡಿಯಲು ಕಿವಿ ಮಾತು.
ಹೇಳುವುದು ಮಾತ್ರವಲ್ಲದೆ … ಪತ್ರದ ಜೊತೆ ಗರಡಿಯ, ಮೂಲಸ್ಥಾನದ ಗಂಧ ಇಟ್ಟಿದ್ದೇನೆ. ಮಕ್ಕಳಿಗೂ ಹಾಕು. ನೀನೂ ನಿತ್ಯ ಹಾಕಿಕೊಳ್ಳು…. ಹೀಗೆ ನೂರೊಂದು ಸಲಹೆಗಳೊಂದಿಗೆ ಹಾಳೆಯನಾಲ್ಕು ಪುಟಗಳು ತುಂಬುತ್ತಿದ್ದವು. ಕೊನೆಯ ನಾಲ್ಕು ಗೆರೆ ವಸಂತಿಯ ಅಮ್ಮ ಅವರ ಮಗಳಿಗೆ ಹಿತವಚನದ ನಾಲ್ಕು ಸಾಲು ಬರೆಸಲು ಉಳಿಸುತ್ತಿದ್ದರು. ಸುಪ್ರೀತಾಳಿಗೆ ತನ್ನ ಸಹಪಾಠಿಯಾಗಿದ್ದ ವಸಂತಿಗೆ ತಾನು ನಾಲ್ಕಕ್ಷರ ಬರೆಯಬೇಕು ಎನ್ನುವ ಆಸೆ. ಆದರೆ ಸಬಿತ ಚಿಕ್ಕಿ ಓದಿ ಅವಳಿಗೆ ಕೊಡುವುದಿಲ್ಲವಾ ಎಂಬ ಭಯ, ತಪ್ಪು ಬರೆದರೆ ಅವರು ತಿದ್ದುವುದೇನೋ ಸರಿ. ಹಾಗಂಥ ವಸಂತಿಗೆ ಬರೆಯಬೇಕು ಎಂದು ಅನ್ನಿಸಿದ್ದೆಲ್ಲ ಬರೆಯುವುದು ಹೇಗೆ? ಎಂಬ ಕಸಿವಿಸಿಯಲ್ಲಿ ವಸಂತಿಯ ಅಮ್ಮ ರಾಧನಿಗೆ ಕಾದು ಅವರು ಹೇಳಿದ ಹಾಗೆ ಬರೆದು ಇಡೀ ಪತ್ರವನ್ನು ಒಮ್ಮೆ ಅವರಿಗೆ ಓದಿ ಹೇಳಿ ಪೋಸ್ಟ್ ಕವರಿನಲ್ಲಿ ಬರೆದ ಕಾಗದ ಹಾಕಿ ವಿಳಾಸ ಬರೆದು ಸುಪ್ರೀತ ಬಾಗಿದೊಡ್ಡನ ಕೈಯಲ್ಲಿ ಇಡುತ್ತಾಳೆ. ಇನ್ನು ದೇವರ ಗಂಧ ಪ್ರಸಾದ ಹಾಕಿ ಕವರ್‌ಗೆ ಅನ್ನದ ಅಗುಳು ಬಳಸಿ ಮುಚ್ಚಿ ಪೋಸ್ಟ್ ಡಬ್ಬಿಗೆ ಹಾಕುವ ಕೆಲಸ ಪದ್ದಜ್ಜನದು.
ಕಡಲಾಯರೆಗೆ ಹೋಗುವಾಗ ಪದ್ದಜ್ಜನ ನಿತ್ಯದ ಉಡುಗೆ ಎಂದರೆ ಸೊಂಟದ ಒಕ್ಕ ನೂಲಿಗೆ ಬಿಗಿದು ಕಟ್ಟುವ ಕೋಮಣದ ಮೇಲೆ ಸುತ್ತಲು ಒಂದು ಬೈರಾಸು ಮೇಲೊಂದು ಜಂಪರು. ಆದರೆ ಅವರು ಪೇಂಟೆಗೆ ಹೋಗುವಾಗ ತಲೆಗೊಂದು ಮುಂಡಾಸು, ಬನಿಯನ್ ಮೇಲೊಂದು ಜುಬ್ಬ, ಸೊಂಟಕ್ಕೆ ಬಿಗಿದ ಕೋಮಣದ ಮೇಲೊಂದು ಚಡ್ಡಿ, ಅದರ ಮೇಲೊಂದು ಬಿಳಿಯ ವೇಸ್ಟಿ ಇವಿಷ್ಟು ಬೇಕೇ ಬೇಕು. ಜೊತೆಗೆ ನೆರೆಕರೆಯ ಮನೆಯ ಕಣ್ಣಿಗೆ ಬಿದ್ದವರಲೆಲ್ಲ ಪೇಂಟೆಗೆ ಹೊರಡುವುದು ರಾಮುನಿಗೆ, ಸಬಿತನಿಗೆ ಬರೆದ ಪತ್ರ ಪೋಸ್ಟು ಮಾಡಲಿಕ್ಕೆ ಇದೆ.. ಎಂದು ನಾಲ್ಕು ಜನರಿಗಾದರೂ ಹೇಳಬೇಕು. ಗಂಡನ ಪೇಟೆಗೆ ಹೊರಡುವ ಲಹರಿ ನೋಡಿ ಬಾಗಿದೊಡ್ಡ ಕೆಲವೊಮ್ಮೆ ‘ಏನು ಮದುವೆ ದಿಬ್ಬಣಕ್ಕೆ ಹೊರಡುವುದೇ, ಬೆಳಗ್ಗಿನಿಂದ ನಿಮ್ಮ ಅಟ್ಟಣೆಯೇ ಮುಗಿಯಲಿಲ್ಲ. ಇನ್ನು ಇವತ್ತಿನ ಪೋಸ್ಟ್‌ಗೆ ಕಾಗದ ಹೋದ ಹಾಗೆಯೇ, ಇನ್ನು ನಾಳೆಯಿಂದ ಪುನಃ ಕುತ್ತಿಗೆ ಉದ್ದ ಮಾಡಿ ಮಕ್ಕಳ ಪತ್ರಕ್ಕೆ ಕಾಯುತ್ತೀರಿ.’ ಎಂದು ಬೈಯುವುದಿತ್ತು.
ವಸಂತಿ ಸಬಿತ ಚಿಕ್ಕಿಯ ಮನೆಯಲ್ಲಿ ಎರಡು ವರುಷ ಇದ್ದಳು ಎನ್ನುವ ಸುದ್ದಿ ಸುಪ್ರೀತ ಬಾಗಿದೊಡ್ಡನಿಗೆ ಸಬಿತ ಚಿಕ್ಕಿ ಬರೆದ ಪತ್ರ ಓದಿದಾಗ ತಿಳಿದದ್ದು. ಅದೇ ವರುಷದ ಕೊನೆಗೆ ಒಮ್ಮೆ ಸಬಿತಚಿಕ್ಕಿ ಮಕ್ಕಳೊಂದಿಗೆ ಅಮ್ಮನ ಮನೆಗೆ ಬಂದಾಗ ಅವರ ಜೊತೆ ವಸಂತಿ ಊರಿಗೆ ಬಂದವಳು ಬಾವಿಯ ನೀರಿಗೂ ಬಂದಿದ್ದಳು. ಆಗ ಆಕೆ ಚಿಕ್ಕಿಯ ಜೊತೆ ಏನು ಹೇಳಿದ್ದಳೋ, ಅವರು ಒಮ್ಮೆ ಅಜ್ಜಿಯ ಜೊತೆ ಮಾತಾಡುವಾಗ ‘ಶಾಲೆಗೆ ಹೋಗುವ ವಯಸ್ಸಿಗೆ ಮಗು ನೋಡುವ ಕೆಲಸಕ್ಕೆ ಕಳುಹಿಸಿದಳು ರಾಧಾ, ಪಾಪ ಹುಡುಗಿ ವಸಂತಿ ಅಲ್ಲಿ ಎಲ್ಲ ಕೆಲಸ ಮಾಡಬೇಕಂತೆ…’ ಎಂದು ಹೇಳಿದ್ದು ಸುಪ್ರೀತ ಕೇಳಿಸಿಕೊಂಡಿದ್ದಳು.
ನಂತರದ ವರುಷ ಆಕೆಯನ್ನು ರಾಮು ಮಾಮನಲ್ಲಿಗೆ ಗೋಕಾಕಕ್ಕೆ ಕಳುಹಿಸಿದ ಸುದ್ದಿ ಸಬಿತ ಚಿಕ್ಕಿ ಪತ್ರದಲ್ಲಿ ಬರೆದಿದ್ದರು. ಬಾಗಿದೊಡ್ಡ ರಾಮು ಮಾಮನ ಪತ್ರ ಓದಿಸುವಾಗ ಅದರಲ್ಲಿ ಅವರ ಹೆಂಡತಿ ಟೈಫಾಯಿಡ್ ಆಗಿ ಆಸ್ಪತ್ರೆ ಸೇರಿದ್ದ ಸುದ್ದಿ, ವಸಂತಿಯನ್ನು ಅಲ್ಲಿಗೆ ಕರೆಸಿಕೊಂಡ ಸುದ್ದಿ ಎಲ್ಲ ವಿಸ್ತಾರವಾಗಿ ಬರೆದು ರಾಧಕ್ಕನಿಗೆ ಒಂದು ಮಾತು ಹೇಳಿ ಅಮ್ಮ ಅವಸರದಲ್ಲಿ ಕರೆಸಿದೆವು ಎಂದು ಕೊನೆಯಲ್ಲಿ ಸೇರಿಸಿದ್ದರು. ಇದಾಗಿ ನಾಲ್ಕು ತಿಂಗಳು ಕಳೆಯುವಷ್ಟರಲ್ಲಿ ಮಲೇರಿಯಾ ಆಗಿ ವಸಂತಿಯೇ ಊರಿಗೆ ಹಿಂತಿರುಗಿದ್ದಳು.
ನಿನಗಿನ್ನು ಬೀಡಿ ಸೂಪ್ ಗತಿ ಎಂದು ಅವಳಮ್ಮ ರಾಧಾ ವಸಂತಿಗೆ ಬೀಡಿ ಕಟ್ಟಲು ಹಚ್ಚಿದರು. ಯಾಕೋ ಬೆಂಗಳೂರು ನಂತರ ಗೋಕಾಕ ಹೋಗಿ ಬಂದ ನಂತರ ವಸಂತಿಯಲ್ಲಿ ಬಾಲ್ಯದ ಹುರುಪು ಮಾಯವಾಗಿ ಬಿಟ್ಟಿದೆಯಲ್ಲ ಎಂದು ಅದೆಷ್ಟೋ ಸಲ ಸುಪ್ರೀತಳಿಗೆ ಅನ್ನಿಸೋದಿತ್ತು.
ಪದ್ದಜ್ಜ ಸುಪ್ರೀತಳಿಗೆ ಕಡಲು ತೋರಿಸಲು ಕರೆದೊಯ್ಯಲಿಲ್ಲ. ಒಂದು ಮಹಾಲಯ ಅಮವಾಸೆಯಂದು ಊರಿಗೆ ಬಂದಿದ್ದ ಅವಳ ಮಾಮ ಸಮುದ್ರ ಸ್ನಾನಕ್ಕೆ ಅವಳನ್ನು ಅವಳ ಅಕ್ಕನನ್ನು ಕರೆದುಕೊಂಡು ಹೋಗಿ ಮಕ್ಕಳು ಭಯಪಡುತ್ತಿದ್ದರೂ ಲೆಕ್ಕಿಸದೆ ಇಬ್ಬರನ್ನು ಎರಡು ಕೈಯಲ್ಲಿ ಹಿಡಿದು ಸಮುದ್ರದ ಅಲೆಗೆ ತಲೆ ತಗ್ಗಿಸಿ ಕೊಡುವಂತೆ ಹೇಳಿದರು. ಆ ಸಮುದ್ರದ ಅಲೆಯಾದರೂ ಮಕ್ಕಳನ್ನು ಎಳೆದುಕೊಂಡು ಹೋಗಿಯೇ ಬಿಡುತ್ತೇನೆ ಎನ್ನುವ ರಭಸದಿಂದ ಬಂದು ಕೊಚ್ಚಿಕೊಂಡು ಹೋಗುತ್ತದೆ ಎನ್ನುವಾಗ ಮಾವ ಹಿಡಿದ ಕೈ ಬಿಡದೆ ಅಲ್ಲೆ ಕೂತು ಬಿಡಿ ಎಂದು ಬಿಟ್ಟರು. ಕೂತ ಮಕ್ಕಳಿಬ್ಬರಿಗೆ ಸಮುದ್ರ ಸ್ನಾನದ ಜೊತೆ ಮರಳು ಸ್ನಾನವು ಆಗಿಬಿಟ್ಟಿತ್ತು. ಒಂದರ ಮೇಲೆ ಒಂದು ದುಮ್ಮಿಕ್ಕಿ ಬರುವ ಅಲೆಗಳ ರಭಸ ಕಂಡು ದೊಡ್ಡವರು ಮಕ್ಕಳನ್ನು ಮಾತ್ರ ಸಮುದ್ರಕ್ಕೆ ಯಾಕೆ ಬಿಡುವುದಿಲ್ಲ ಎಂದು ಅಂದು ಸುಪ್ರೀತಾಗೆ ಮನದಟ್ಟಾಗಿತ್ತು. ಶಾಲೆಯಿಂದ ಒಮ್ಮೆ ಸೈಂಟ್ ಮೇರೀಸ್ ಐಲ್ಯಾಂಡಿಗೆ ಪಿಕ್ ನಿಕ್ ಹೋದಾಗ ಮೊದಲೇ ನಿಗದಿಯಾಗಿದ್ದಂತೆ ಭಾದ್ರಗಡ ದ್ವೀಪಕ್ಕೆ ಹೋಗುವ ಸುಪ್ರೀತ ಕುಳಿತಿದ್ದ ಬೋಟಿನಿಂದ ಸ್ಟೀಮರಿಗೆ ದಾಟುವ ಹಂತದಲ್ಲಿ ಅವಳ ಸಹಪಾಠಿಗಳಲ್ಲಿ ಮೂರು ನಾಲ್ಕು ಜನ ನೀರು ಪಾಲಾಗಿ ನಂತರ ರಕ್ಷಿಸಲ್ಪಟ್ಟು ಆಗುತ್ತಿದ್ದ ಅಪಾಯದಿಂದ ಸ್ವಲ್ಪದರಲ್ಲಿ ಬಚಾವಾದ ಸನ್ನಿವೇಶದ ನಂತರ ಸುಪ್ರೀತಾ ಯಾವತ್ತೂ ಕಡಲಿಗೆ ಹೋಗಬೇಕು ಎಂದು ಹಠ ಹಿಡಿದವಳಲ್ಲ. ಸಮುದ್ರದಿಂದ ಯಮ ಗಾತ್ರದ ಬೋಟುಗಳಿಂದ ಮೀನು ಬಂದು ರಾಶಿ ಬೀಳುವ ದಕ್ಕೆಯನ್ನು ನೋಡಿದ್ದು ಅವಳು ಅವಳ ಮದುವೆಯ ನಂತರ….. ಆ ಹೊತ್ತಿಗೆ ಅವಳ ಮಗ ಮರಳ ಮೇಲೆ ಮನೆ ಕಟ್ಟುವ ಕನಸುಗಾರನಾಗಿದ್ದ….
ಮೊನ್ನೆ ಸುಪ್ರೀತ ಅವಳ ಅಕ್ಕನಿಗೆ ಫೋನ್ ಮಾಡುವಾಗ ಯಾಕೋ, ಪದ್ದಜ್ಜ ಮತ್ತು ಬಾಗಿದೊಡ್ಡನ ನೆನಪು ಮಾಡಿದಳು. ಬೆಂಗಳೂರಿನಲ್ಲಿ ಸಬಿತ ಚಿಕ್ಕಿ ನಿನ್ನ ಕಣ್ಣಿಗೆ ಎಲ್ಲಾದರೂ ಬಿದ್ದಿದ್ದಾರೆಯೇ ಎಂದು ವಿಚಾರಿಸಿದಳು. ಆಗ ಅವಳಕ್ಕ ‘ಹೌದೇ, ಅವರು ಮೊದಲು ಇದ್ದದ್ದು ಬೆಂಗಳೂರಿನಲ್ಲಿ ಅಂತೆ…. ಆದರೆ ಈಗ ಇರೋದು ಅಲ್ಲೇ ಅಮೆರಿಕದಲ್ಲಿ ನ್ಯೂಜೆರ್ಸಿ ಎಂದು ಮೊನ್ನೆ ಯಾರೋ ಹೇಳಿದ ನೆನಪು…’
ಎಂದಳು.
ಅಂದ ಹಾಗೆ ಮೊನ್ನೆ…ಅಲ್ಲಿ ಲಾಸ್ ಏಂಜಲೀಸ್‌ನ ಹೋಟೆಲ್ ಒಂದರಲ್ಲಿ ಕಂಡ ಅಜ್ಜಿ, ಮಗಳು, ಮೊಮ್ಮಗ(ಳ ) ಮುಖದಲ್ಲಿ ನಾನು ಬಾಲ್ಯದಲ್ಲಿ ಕಂಡ ಸವಿತ ಚಿಕ್ಕಿಯ ಹೋಲಿಕೆ ಇದೆ ಎಂದುಕೊಂಡದ್ದು ತಪ್ಪಲ್ಲ; ಹಾಗಾದರೆ ಪದ್ದಜ್ಜ, ಬಾಗಿದೊಡ್ಡನ ಛಾಯೆಯು ಆ ಮುಖದಲ್ಲಿ ಇದ್ದ ಹಾಗಿತ್ತು ಎಂದು ನೆನಪಾಗಿ ಸುಪ್ರೀತ ಓ… ಅವರ ಪರಿಚಯವೇ ಕೇಳಲಿಲ್ಲ ಎಂದು ನಿಟ್ಟುಸಿರು ಬಿಟ್ಟಳು.
ದೇವಿಕಾ ನಾಗೇಶ್ ಹಾಸನ ಜಿಲ್ಲೆಯ, ಬೇಲೂರು ತಾಲೂಕಿನ, ಹಸುರು ಗುಡ್ಡದ ಮೂಲದವರು. ಈಗ ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಎದೆಯ ಮುಳ್ಳುಗಳು (ಕಥಾ ಸಂಕಲನ ), ಹರಿವ ತೇವದಿ ಉರಿವ ತೊಡರು (ಲೇಖನ ಸಂಕಲನ), ಸಾರ ಅಬೂಬಕರ್ (ಜೀವನ ಚರಿತ್ರೆ), ಮುಸ್ಸಂಜೆ (ಕವನ ಸಂಕಲನ) ಪ್ರಕಟಿತ ಕೃತಿಗಳು. ಓದು, ಬರಹ, ತಿರುಗಾಟ, ಸಿನೆಮಾ ನೋಡುವುದು ಇವರ ಹವ್ಯಾಸಗಳು.