ಕತೆಗಾರಿಕೆಯ ಕೌಶಲವನ್ನು, ಕತೆಗಾರನ ಆಳವಾದ ಸಂವೇದನಾಶೀಲತೆಯನ್ನು, ಸಮಾಜಮುಖಿಯಾದ ನೈಜ ಕಾಳಜಿಯನ್ನು ಹೊಂದಿರುವ ಗಟ್ಟಿಯಾದ ಕಥಾವಸ್ತುವುಳ್ಳ ಇನ್ನಷ್ಟು ಕತೆಗಳು ಸಂಕಲನದ ಮಹತ್ವವನ್ನು ಹೆಚ್ಚಿಸಿವೆ. ಪ್ರಕಾಶ ಅವರು ನೆಲಮೂಲದ ಸಂಸ್ಕೃತಿಯ ಸತ್ವದಿಂದ ವಿಶೇಷವಾಗಿ ಪುಷ್ಟಿಗೊಂಡವರು. ಆ ಘಮಲನ್ನೂ ಕ್ರೂರ ವಾಸ್ತವವನ್ನೂ ಜೊತೆಜೊತೆಯಾಗಿ ಕಟ್ಟಿಕೊಡುವ ‘ಕಂಡಾಯದೊಡೆಯ ಉಘೇಉಘೇ, ಐರನ್ ಆನೆಗಳು, ನಿಗಿನಿಗಿಕೆಂಡ ಮುಂತಾದ ಕತೆಗಳಲ್ಲದೆ ಭಿನ್ನಮಾದರಿಯ ಕತೆಗಳೂ ಈ ಸಂಗ್ರಹದಲ್ಲಿವೆ.. ಸಂಕಲನದ ಅತ್ಯುತ್ತಮ ಕತೆಗಳಲ್ಲಿ ಆ ಸತ್ವವೇ ಮೈದುಂಬಿದೆ.
ಪ್ರಕಾಶ್ ಪುಟ್ಟಪ್ಪ ಕಥಾಸಂಕಲನ ‘ಗಾಂಧಿಜೋಡಿನ ಮಳಿಗೆ’ಗೆ ಡಾ. ಮಹೇಶ್ವರಿ ಯು. ಮುನ್ನುಡಿ
ಕನ್ನಡ ಕಥನಕಲೆಯಲ್ಲಿ ತನ್ನ ಹೆಜ್ಜೆಗುರುತನ್ನು ಭದ್ರವಾಗಿ ಮೂಡಿಸಿದ ಹಿರಿಯ ಕತೆಗಾರ ರಾಘವೇಂದ್ರ ಪಾಟೀಲರ ಹೆಸರಿನಲ್ಲಿ ಕೊಡಮಾಡುವ ಕಥಾಪ್ರಶಸ್ತಿಯನ್ನು ಈ ಬಾರಿ ಇಬ್ಬರು ತಮ್ಮದಾಗಿಸಿಕೊಂಡಿದ್ದಾರೆ. ಅವರಲ್ಲಿ ಒಬ್ಬರಾದ ಪ್ರಕಾಶ್ ಪುಟ್ಟಪ್ಪ ಅವರಿಗೆ ಮೊದಲಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಹೊಸಗನ್ನಡದ ಸಂದರ್ಭವನ್ನೇ ತೆಗೆದುಕೊಂಡರೂ ಸಣ್ಣಕತೆಗೆ ಶತಮಾನದ ಹಳಮೆ ಇದೆ. ಪಂಜೆ, ಮಾಸ್ತಿಯವರಿಂದ ತೊಡಗಿ ಉದ್ದಾಮ ಕತೆಗಾರರ ಉದ್ದಪಟ್ಟಿಯೇ ನಮ್ಮ ಕಣ್ಣಮುಂದೆ ಬರುತ್ತದೆ. ವಸ್ತು ಮತ್ತು ಕತೆಗಾರಿಕೆಯಲ್ಲಿ ನವೀನ ಪ್ರಯೋಗಗಳನ್ನು ಮಾಡುತ್ತ ಕನ್ನಡದ ಕಥಾಕಣಜವನ್ನು ಸಮೃದ್ಧಗೊಳಿಸಿದ, ಹೊಸಯಿಸಿದ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ, ದಲಿತ ಹಾಗೂ ಯಾವ ಚಳುವಳಿಯೊಂದಿಗೂ ಗುರುತಿಸಿಕೊಳ್ಳದ ಕತೆಗಾರರ ಅನನ್ಯ ಕೊಡುಗೆಯನ್ನು ನೆನೆಯುತ್ತ ‘ಗಾಂಧಿಜೋಡಿನಮಳಿಗೆ’ ಎಂಬ ಶೀರ್ಷಿಕೆಯನ್ನು ಹೊತ್ತ ಹದಿನಾಲ್ಕು ಕತೆಗಳ ಈ ಸಂಗ್ರಹಕ್ಕೆ ನನ್ನ ಓದಿನ ಹಿನ್ನಲೆಯಲ್ಲಿ ಕೆಲವು ಮಾತುಗಳನ್ನು ದಾಖಲಿಸುತ್ತಿದ್ದೇನೆ.

(ಪ್ರಕಾಶ್ ಪುಟ್ಟಪ್ಪ)
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪೊನ್ನಾಚಿಯೆಂಬ ಊರಿನವರಾಗಿದ್ದು ವೃತ್ತಿಯಲ್ಲಿ ಶಿಕ್ಷಕರಾಗಿರುವ ಕತೆಗಾರ ಪ್ರಕಾಶ ಪುಟ್ಟಪ್ಪನವರ ಪೂರ್ವಪರಿಚಯವಿಲ್ಲದ ನಾನು ಅವರ ಬಳಿ ಈ ಮುನ್ನುಡಿಯನ್ನು ಬರೆಯತೊಡಗಿದ ಹೊತ್ತಿಗೆ ಬಯೋಡೇಟಾ ಕೇಳಿದರೆ ಅತ್ಯಂತ ಚುಟುಕಾಗಿ ವಿವರವನ್ನು ಕೊಟ್ಟರು. ಈ ನಿರಾಡಂಬರ ಸರಳತೆ ನನಗೆ ಅವರನ್ನು ಪರಿಚಯಿಸಿತು. ಅವರ ಪ್ರಕಟಿತ ಕೃತಿ ‘ಮಣ್ಣಿಗೆ ಬಿದ್ದ ಮಳೆ’ ಕವನಸಂಕಲನದಿಂದ ಕೆಲವು ಕವನಗಳನ್ನು ಕಳುಹಿಸುವಂತೆ ಕೇಳಿದೆ. ವಾಟ್ಸಾಪ್ ಮೂಲಕ ಅವರು ಕಳುಹಿಸಿದ ಕವನಗಳನ್ನು ಓದಿದಾಗ ಚೊಚ್ಚಲ ಕವನಸಂಕಲನದಲ್ಲಿಯೇ ಅವರ ಅಭಿವ್ಯಕ್ತಿಯ ಸಾಮರ್ಥ್ಯದ ಬಗ್ಗೆ ಸುಳುಹನ್ನು ಕೊಟ್ಟವರಾಗಿ ಕಾಣಿಸಿದರು. ಸಾಮಾಜಿಕ ಕಾಳಜಿಯ ಜೊತೆಗೆ ಜನಪದೀಯ ನುಡಿಗಟ್ಟುಗಳ ಮೂಲಕ ರೂಪಕದ ಭಾಷೆಯಲ್ಲಿ ಕವನ ಹುಟ್ಟುವ ಮತ್ತು ಕಟ್ಟುವ ಪ್ರತಿಭೆಯ ಕಿಡಿ ಅವರಲ್ಲಿರುವುದನ್ನು ಗಮನಿಸಿದೆ. ಕಾವ್ಯಾಭಿವ್ಯಕ್ತಿ ಎನ್ನುವುದು ಒಂದು ಚಟವಾಗದೆ ಒಳಗಿನ ಉಸಿರಾಗಿ ವ್ಯಕ್ತಿತ್ವದ ಭಾಗವಾಗಿ ಇದ್ದಾಗ ಮಾತ್ರ ಅಂತಹ ರಚನೆಗಳು ಸಂಭವಿಸುತ್ತವೆ.
ಈ ಸಂಗ್ರಹವು ಗಾಂಧಿಯುಗದ ಕಥಾನಕವನ್ನು ತಳಸಮುದಾಯದ ಮುನಿಯನ ಸಾಕ್ಷಿಪ್ರಜ್ಞೆಯಿಂದ ನಿರೂಪಿಸುವ ಅದೇ ಶೀರ್ಷಿಕೆಯ ಮೊದಲ ಕತೆಯಿಂದ ತೊಡಗಿ ಬಹುಮುಖವಾದ ಸಾಮಾಜಿಕ ತಲ್ಲಣಗಳನ್ನು, ಬಹುಮುಖ್ಯವಾಗಿ ಮಣ್ಣಿನಮಕ್ಕಳ ಒಡಲಸಂಕಟಗಳನ್ನು ಬದುಕಿನ ಬವಣೆಗಳನ್ನು ಗರ್ಭೀಕರಿಸಿದ ಕೃತಿ. ಸ್ವಾತಂತ್ರ್ಯ ಚಳವಳಿಯಲ್ಲಿ ಈ ಸೂರಿನಲ್ಲಿ ಸಾಮಾನ್ಯ ಜನರಿಂದಲೇ ನಡೆದ ಹೋರಾಟದ ಕತೆಯ ಎಳೆಯನ್ನು ಬಳಸಿಕೊಂಡು ಮುನಿಯನೆಂಬ ಮೋಚಿ ತನ್ನ ಆರಾಧ್ಯನಾದ ಗಾಂಧೀಜಿಗಾಗಿ ಹೊಲಿದ ಚಪ್ಪಲಿಯ ಹಿಂದಿನ ಅನುಭೂತಿ, ಅದನ್ನು ಕೈಯಾರೆ ಕೊಡಬೇಕೆಂಬ ಮುಗ್ಧ ಹಂಬಲ, ಆ ಹಂಬಲ ಇನ್ನೇನು ಈಡೇರುವುದಕ್ಕೆ ಮೊದಲು ತಲಪಿದ ಗಾಂಧಿಹತ್ಯೆಯ ದುರಂತ ವಾರ್ತೆ- ಹೀಗೆ ಘಟನೆಗಳ ಸರಣಿ ಮನಕಲಕುತ್ತದೆ. ಹಲವು ಆಯಾಮಗಳುಳ್ಳ ಗಾಂಧೀಜಿಯ ವ್ಯಕ್ತಿತ್ವದ ಸ್ವದೇಶಿ ಆಂದೋಲನದ ಎಳೆಯನ್ನು ಕತೆ ಫೋಕಸ್ ಮಾಡುವುದರಿಂದ ಗಾಂಧೀಜಿ ಹುತಾತ್ಮರಾದ ಘಟನೆಯನ್ನು ಸಾಮಾನ್ಯವಾಗಿ ನೋಡುವ ದೃಷ್ಟಿಕೋನಕ್ಕಿಂತ ಬೇರೆಯೇ ಆದ ನೋಟವನ್ನು ಬೇಡುತ್ತದೆ. ಗಾಂಧೀಜಿಯವರ ಅಗಲಿಕೆಯ ಬಳಿಕ ಕ್ಷೀಣಿಸಿದ ಸ್ವದೇಶೀ ಆಂದೋಲನವನ್ನು ಕತೆ ಧ್ವನಿಸುತ್ತದೆ ಎನ್ನುವುದರಲ್ಲಿ ಅತಿಶಯವಿಲ್ಲ.
‘ಭಾರತ ಬಿಟ್ಟು ತೊಲಗಿ’ ಚಳವಳಿಯು ಹಳ್ಳಿಹಳ್ಳಿಗಳಲ್ಲಿ ಮೂಡಿಸಿದ ಸಂಚಲನ ಹಾಗೂ ಈಸೂರು ಕೇಂದ್ರವಾಗಿ ನಡೆದ ಸ್ವದೇಶೀ ಆಂದೋಲನದ ಎಳೆಯೊಂದು ಪ್ರಕಾಶ ಪುಟ್ಟಪ್ಪನವರಿಂದ ಕತೆಯೊಂದನ್ನು ಬರೆಯಿಸಿತು ಎನ್ನುವುದು ವಿಶೇಷ. ಈ ವಸ್ತುವಿನ ಆಯ್ಕೆ ಮತ್ತು ಅದರ ಹಿಂದಿರುವ ಕಾಣ್ಕೆ ನನಗೆ ಮುಖ್ಯವಾಗಿ ಕಾಣುತ್ತದೆ… ಈಸೂರು ಸತ್ಯಾಗ್ರಹವು ಬಹುಸಂಖ್ಯೆಯ ಸಾಮಾನ್ಯ ಜನರ ಪಾಲ್ಗೊಳ್ಳುವಿಕೆಯ ಹೋರಾಟವಾಗಿ ಇತಿಹಾಸದಲ್ಲಿ ದಾಖಲಾಗಿದೆ. ವಸಾಹತುಶಾಹಿಗೆ ಇದಿರಾಗಿ ಹೋರಾಡಿದ ತಳಸಮುದಾಯದ ಗಾಂಧೀಮಾರ್ಗದ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುವ ಮುನಿಯನ ಕನಸು ಕೇಂದ್ರವಾದರೆ ದೇಶೀಯ ಗುಡಿಕೈಗಾರಿಕೆಗಳಿಗೆ ಬ್ರಿಟಿಶ್ ವಸಾಹತುಶಾಹಿಯಿಂದ ಬಂದ ಆಪತ್ತು, ಅದಕ್ಕೆ ಸಂದ ಪ್ರತಿರೋಧ, ‘ಕ್ವೀನ್ ಎಲಿಜಬೆತ್ ಕಾಬ್ಲರ್ ಷಾಪ್’ ಎಂಬ ಬೋರ್ಡ್ ತೊಲಗಿ ‘ಗಾಂಧಿಜೋಡಿನ ಮಳಿಗೆ’ ಎಂಬ ಹೆಸರನ್ನು ತೂಗುಹಾಕುವುದು, ಇತ್ಯಾದಿ ವಿವರಗಳು ಅದಕ್ಕೆ ಪೂರಕವಾಗಿ ಬರುತ್ತವೆ. ಗಾಂಧೀಜಿಯ ಕುರಿತಾಗಿದ್ದ ಮುಗ್ಧ ಆರಾಧ್ಯಭಾವ ಕೆಲವೊಂದು ಭಾಗಗಳಲ್ಲಿ ಮೆಲೊಡ್ರಮಾಟಿಕ್ ಅನಿಸಿದರೂ ಗಾಂಧೀಜಿಯ ಕೊಲೆಯಾದ ನಿಮಿತ್ತ ತನ್ನ ಹಂಬಲವನ್ನು ಈಡೇರಿಸಿಕೊಳ್ಳಲಾಗದ ಮುನಿಯನ ಹತಾಶೆ ಒಟ್ಟು ಕತೆಯಲ್ಲಿ ಪ್ರಬಂಧ ಧ್ವನಿಯಾಗಿ ನಿಲ್ಲುತ್ತದೆ. ಯಾಕೆಂದರೆ ಈ ಕತೆ ಗಾಂಧೀಜಿ ಕೊಲೆಯಾದ ಕಾರಣ- ಪರಿಣಾಮಗಳನ್ನು ರೂಢಿಗತವಾದ ಕೋಮುವಾದಿ ನೆಲೆಯಲ್ಲಿ ಫೋಕಸ್ ಮಾಡದೆ ಗಾಂಧೀಜಿಯ ಹತ್ಯೆಯೊಂದಿಗೆ ಅನಾಥವಾದ ದೇಶೀಚಿಂತನೆಯ ಅವನತಿಯ ಆ ಮತ್ತೊಂದು ಆಯಾಮವನ್ನು ಸೂಕ್ಷ್ಮವಾಗಿ ಧ್ವನಿಸುತ್ತದೆಯಾದ್ದರಿಂದ ವಿಶೇಷವೆನಿಸುತ್ತದೆ. ಗಾಂಧೀಚಿಂತನೆಯ ಬಹುಮುಖ್ಯವಾದ ಅಂಶವನ್ನು ಮರೆತುಹೋದ ಮನಸ್ಸುಗಳಿಗೆ ಕತೆ ಮುಟ್ಟಿಸುತ್ತದೆ.
ಸಂಕಲನದಲ್ಲಿ ಅತ್ಯಂತ ಹೈಲೈಟ್ ಆಗುವ ಕತೆಯೆಂದರೆ ‘ವಿಲೇಜ್ ಪೋಸ್ಟ್ ಆಫೀಸ್’ ಸರಳವಾದ ಕಥನವಿದ್ದೂ ಬಹುಮುಖವಾದ ಆಯಾಮಗಳನ್ನು ಹೊಂದಿದ ಈ ಕತೆ ಸ್ಥಿತ್ಯಂತರಕ್ಕೆ ಒಳಗಾಗುವ ಗ್ರಾಮಭಾರತದ ಸಂಕೀರ್ಣ ಸ್ವರೂಪವನ್ನು ಹಿಡಿದಿಡುವುದರ ಜೊತೆಗೆ ಮನುಷ್ಯ ಮತ್ತು ಪರಿಸರದ ಸಂಬಂಧದ ಎಳೆಗಳನ್ನು, ಪರಿಸ್ಥಿತಿಯ ಕೂಸಾಗಿ ಪಾಡು ಪಡುವ ಮನುಷ್ಯನ ಅವಸ್ಥೆಯನ್ನು, ಜಾಗತೀಕರಣದ ಹುನ್ನಾರಗಳನ್ನು-ಒಡಲಲ್ಲಿರಿಸಿಕೊಂಡು ಮನಸ್ಸನ್ನು ಮುಟ್ಟುತ್ತದೆ. ಶಿವಣ್ಣ ಮತ್ತು ಸುಬ್ಬಯ್ಯ ಎಂಬ ಎರಡು ಪಾತ್ರಗಳಿಗೆ ಪೋಸ್ಟ್ ಆಫೀಸಿನೊಂದಿಗೆ ವ್ಯಾವಹಾರಿಕತೆಯನ್ನು ಮೀರಿ ಬೆಳೆಯುವ ಭಾವನಾತ್ಮಕ ಸಂಬಂಧವು ಕತೆಯ ಕೊನೆಗೆ ಸುಬ್ಬಯ್ಯನ ಆತ್ಮಹತ್ಯೆಯಲ್ಲಿ ಕ್ಲೈಮಾಕ್ಸಿಗೆ ತಲಪುತ್ತದೆ. ಹಲವು ಬಗೆಯ ವಿಶ್ಲೇಷಣೆಗೆ ಒಡ್ಡುವ ಈ ಕತೆಯು ಪ್ರಾತಿನಿಧಿಕವಾಗಿ ನಿಲ್ಲಬಲ್ಲ ಸತ್ವವನ್ನು ಹೊಂದಿದೆ.
ಪೊನ್ನಾಚಿಯೆಂಬ ಊರಿನಲ್ಲಿ ಒಂದು ಅಂಚೆ ಕಛೇರಿ ಆರಂಭವಾದ ಕಥನದಿಂದ ತೊಡಗಿ ಅದರ ಏಳುಬೀಳುಗಳ ಕಂಪನಗಳನ್ನು ಕತೆ ಅತ್ಯಂತ ಮನೋಜ್ಞವಾಗಿ ಸೆರೆಹಿಡಿದಿದೆ. ಅದೇ ಊರಿನ ಮತ್ತು ತಮಿಳು ಕನ್ನಡ ಎರಡೂ ಬಲ್ಲವನಾಗಿದ್ದ ಶಿವಣ್ಣನಿಗೆ ಹೊಸದಾಗಿ ಆರಂಭವಾದ ಪೋಸ್ಟ್ ಆಫೀಸಿನ ಮುಖ್ಯ ಜವಾಬ್ದಾರಿಯನ್ನು ಆದೇಶಿಸಿ ಪತ್ರಬರುವುದು, ಅವನಿಗೆ ಸಹಾಯಕನಾಗಿ ಗುತ್ತಿಗೆ ಆಧಾರದಲ್ಲಿ ಸುಬ್ಬಯ್ಯನ ನೇಮಕವಾಗುವುದು – ಈ ಇಬ್ಬರ ಬದುಕಿನ ಗತಿ ಪೋಸ್ಟ್ ಆಫೀಸಿನ ಅಸ್ತಿತ್ವದೊಂದಿಗೆ ಹೆಣೆದುಕೊಂಡಿರುವುದು ಕತೆಯ ವಿನ್ಯಾಸವಾಗಿ ಬೆಳೆಯುತ್ತದೆ. ಆದರೆ ಇದೊಂದೇ ಅಲ್ಲ. ಬೇರೆ ಆಯಾಮಗಳೂ ಇವೆ. ದಂತಚೋರ ವೀರಪ್ಪನ್ ನಾಡಿಗೆ ಕಂಟಕನಾದರೆ ಆ ನಿಮಿತ್ತವಾಗಿ ಪೊನ್ನಾಚಿ ಪರಿಸರದಲ್ಲಿ ಬೀಡುಬಿಟ್ಟ ಎಸ್ಟಿಎಫ್ ಸಿಬ್ಬಂದಿ ತಮ್ಮ ಊರಿನ ಬಂಧುಮಿತ್ರರೊಂದಿಗೆ ನಡೆಸುವ ಪತ್ರವಿನಿಮಯ ಪೋಸ್ಟ್ ಆಫೀಸನ್ನು ಸಕ್ರಿಯವಾಗಿರಿಸುತ್ತದೆ. ಅವರ ಜೊತೆ ಶಿವಣ್ಣ ಮತ್ತು ಸುಬ್ಬಯ್ಯನವರಿಗೆ ಒಂದು ಬಾಂಧವ್ಯ ಬೆಳೆಯುತ್ತದೆ. ವೀರಪ್ಪನ್ ಉಪಟಳದಿಂದ ನಾಡು ಭಯದ ವಾತಾವರಣದಲ್ಲಿದ್ದರೆ ವ್ಯಾವಹಾರಿಕವಾಗಿ ಕಳೆಕಟ್ಟಿದ್ದ ಪೋಸ್ಟ್ ಆಫೀಸಿನಿಂದಾಗಿ ಶಿವಣ್ಣ ಸಂತಸದಿಂದ ಇದ್ದ. ಹಾಗೆಯೇ ಗಣಿಗಾರಿಕೆ ನಡೆಯುತ್ತಿದ್ದಾಗ ಕೂಡ ಕಾರ್ಮಿಕರ ಮತ್ತು ಸಿಬ್ಬಂದಿಯ ಪತ್ರವ್ಯವಹಾರ, ಮನಿ ಆರ್ಡರ್ ಇತ್ಯಾದಿ ಚಟುವಟಿಕೆಗಳು ಪೋಸ್ಟ್ ಆಫೀಸನ್ನು ಸಕ್ರಿಯವಾಗಿಸುತ್ತದೆ. ಪರಿಸರವಾದಿಗಳ ಹೋರಾಟದ ಫಲವಾಗಿ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಕೋರ್ಟ್ ಆದೇಶ ಬಂದಾಗ ‘ಮುಂದೆ ಹೇಗೆ’ ಎಂಬ ಚಿಂತೆ ಶಿವಣ್ಣನನ್ನು ಕಾಡುತ್ತದೆ. ನೈತಿಕವಾಗಿ ನೋಡಿದರೆ ಯಾವುದನ್ನು ನಾವು ಆಗಬೇಕಾದ್ದು ಅಂತ ಹೇಳುತ್ತೇವೋ ಅದು ಶಿವಣ್ಣ , ಸುಬ್ಬಯ್ಯ ಮತ್ತು ಪೋಸ್ಟ್ ಆಫೀಸಿನ ಅಸ್ತಿತ್ವದ ದೃಷ್ಟಿಯಿಂದ ಅಪೇಕ್ಷಣೀಯ ಅಲ್ಲ. ವ್ಯವಹಾರ ಕಡಿಮೆಯಾಧರೆ ಪೋಸ್ಟ್ ಆಫೀಸನ್ನು ಬೇರೆಕಡೆಗೆ ಸ್ಥಳಾಂತರಗೊಳಿಸುವ ಸಾಧ್ಯತೆಯ ಸೂಚನೆಯೇ ಅವರ ಆತಂಕಕ್ಕೆ ಕಾರಣವಾಗುತ್ತದೆ. ಅದಕ್ಕಾಗಿ ವ್ಯವಹಾರವನ್ನು ಹೆಚ್ಚಿಸಲು ಶಿವಣ್ಣ ಪಡುವ ಪಾಡು, ಸುಬ್ಬಯ್ಯನ ಸಾಂತ್ವನ, ಉಪದೇಶ ಕೊನೆಗೆ ಸಮಸ್ಯೆ ತನ್ನ ಬದುಕಿನ ಬುಡಕ್ಕೇ ಬಂದಾಗ ಸುಬ್ಬಯ್ಯ ತಾನೂ ಅಧೈರ್ಯಗೊಳ್ಳುವುದು ಪರಿಸ್ಥಿತಿಯ ವ್ಯಂಗ್ಯಕ್ಕೆ ಕನ್ನಡಿ ಹಿಡಿಯುತ್ತದೆ. ಹೇಗಾದರೂ ಮಾಡಿ ಪೋಸ್ಟ್ ಆಫೀಸನ್ನು ಉಳಿಸಿಕೊಳ್ಳುವ ಸಲುವಾಗಿ ಮೇಲಧಿಕಾರಿಗಳನ್ನು ಭೇಟಿಮಾಡಲು ಹೋದ ಶಿವಣ್ಣ ಅವರಿಗೆ ತಮ್ಮ ಅಹವಾಲನ್ನು ಮುಂದಿಟ್ಟು ಮನವರಿಕೆಮಾಡಲು ಶತಾಯಗತಾಯ ಪ್ರಯತ್ನಿಸಿ ಕೊನೆಗೂ ಎರಡು ವರ್ಷ ಪ್ರಾಯೋಗಿಕವಾಗಿ ಆಫೀಸ್ ನಡೆಸಲು ಅನುಮತಿ ತೆಗೆದುಕೊಂಡು ಮರಳಿ ಬರುವಷ್ಟರಲ್ಲಿ ಸುಬ್ಬಯ್ಯನ ಹೆಣ ಪೋಸ್ಟ್ ಆಫೀಸಿನ ಬೋರ್ಡಿನ ಕಂಬಿಗಳಲ್ಲಿ ನೇತಾಡುತ್ತಿದ್ದ ದೃಶ್ಯವನ್ನು ನೋಡಬೇಕಾಗುತ್ತದೆ. ಇಂತಹ ಒಂದು ಸಂಕೀರ್ಣ ಸನ್ನಿವೇಶವನ್ನು ಕತೆಗಾರರು ಸಂಯಮದಿಂದ ನಿರೂಪಿಸಿದ್ದಾರೆ. ಹಾಗೆಂದು ಸುಬ್ಬಯ್ಯ ಮತ್ತು ಶಿವಣ್ಣ ಅದಲುಬದಲುಗೊಳ್ಳಬಹುದಾದ ಪಾತ್ರಗಳಲ್ಲ. ಇಬ್ಬರಿಗೆ ಪ್ರತ್ಯೇಕ ಐಡೆಂಟಿಟಿ ಇದೆ. ಸುಬ್ಬಯ್ಯನ ಮುಗ್ಧತೆ, ಸಣ್ಣ ಸಣ್ಣ ಸಂಭ್ರಮ, ದುಃಖ, ಆತಂಕ, ನಿರಾಶೆ, ಹಾಗೆಯೇ ಇಬ್ಬರೂ ಪೋಸ್ಟ್ ಆಫೀಸನ್ನು ವ್ಯಾವಹಾರಿಕ ನೆಲೆಯಲ್ಲೂ ಭಾವನಾತ್ಮಕವಾಗಿಯೂ ಹಚ್ಚಿಕೊಂಡ ರೀತಿ ಜೀವಂತವಾಗಿ ಕಣ್ಣಿಗೆ ಕಟ್ಟುತ್ತದೆ.
ಪುಟ್ಟಪ್ಪನವರಿಗೆ ಪಾತ್ರಗಳನ್ನು ಹೀಗೆ ನೈಜವಾಗಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಕೌಶಲ ಚೆನ್ನಾಗಿದೆ. ‘ಆಫೀಸು ಮುಚ್ಚುವುದಿಲ್ಲ’ ಎಂಬ ಸುದ್ದಿಯನ್ನು ಸುಬ್ಬಯ್ಯನಿಗೆ ಮೊದಲು ತಿಳಿಸಬೇಕು ಎಂಬ ಉತ್ಸುಕತೆಯಿಂದ ಓಡೋಡಿ ಬಂದ ಶಿವಣ್ಣ ‘ಚುಚ್ಚಿದ ಎದೆಯ ಗಾಯಕ್ಕೆ ಮತ್ತೆ ಮುಳ್ಳು ಚುಚ್ಚಿದಂತೆ ತನ್ನಕಣ್ಣು ತಾನು ನಂಬದಂತೆ ನಿಂತ’ ಎಂಬ ನಿರೂಪಕನ ಮಾತು ಹೃದಯವನ್ನು ಮುಟ್ಟುತ್ತದೆ. ಮುಖ್ಯವಾಗಿ ಎರಡು ಪಾತ್ರಗಳನ್ನು ಕೇಂದ್ರದಲ್ಲಿಟ್ಟುಕೊಂಡು ಹುಲು ಮನುಜನ ಪಾಡನ್ನು, ಬದುಕಿನ ಹೋರಾಟವನ್ನು ಅಬ್ಬರ ಆವೇಶಗಳಿಲ್ಲದೆ ಚಿತ್ರಿಸಿದ ಬಗೆ ಮನಮುಟ್ಟುತ್ತದೆ. ಒಂದು ಪ್ರಾದೇಶಿಕ ಆವರಣದಲ್ಲಿ ಸಂಭವಿಸುವ ಈ ಕತೆ ಅದರ ಆ ಮಿತಿಯನ್ನುಮೀರಿ ಜಾಗತಿಕಮಟ್ಟದಲ್ಲೂ ಸಮಾನಾಂತರ ಸನ್ನಿವೇಶಗಳಲ್ಲಿ ಸಿಲುಕುವ ಸಾಮಾನ್ಯ ಮನುಷ್ಯರ ಅವಸ್ಥೆಯನ್ನು ಪ್ರತಿನಿಧಿಸುತ್ತದೆ ಎನ್ನುವುದರಿಂದಲೂ ಇದು ಮಹತ್ವವನ್ನು ಪಡೆದುಕೊಳ್ಳುತ್ತದೆ. ಹಾಗಾಗಿ ಒಂದು ಪ್ರಾತಿನಿಧಿಕ ಸ್ವರೂಪ ಈ ಕತೆಗೆ ದಕ್ಕಿದೆ.
ಕತೆಗಾರಿಕೆಯ ಕೌಶಲವನ್ನು, ಕತೆಗಾರನ ಆಳವಾದ ಸಂವೇದನಾಶೀಲತೆಯನ್ನು, ಸಮಾಜಮುಖಿಯಾದ ನೈಜ ಕಾಳಜಿಯನ್ನು ಹೊಂದಿರುವ ಗಟ್ಟಿಯಾದ ಕಥಾವಸ್ತುವುಳ್ಳ ಇನ್ನಷ್ಟು ಕತೆಗಳು ಸಂಕಲನದ ಮಹತ್ವವನ್ನು ಹೆಚ್ಚಿಸಿವೆ. ಪ್ರಕಾಶ ಅವರು ನೆಲಮೂಲದ ಸಂಸ್ಕೃತಿಯ ಸತ್ವದಿಂದ ವಿಶೇಷವಾಗಿ ಪುಷ್ಟಿಗೊಂಡವರು. ಆ ಘಮಲನ್ನೂ ಕ್ರೂರ ವಾಸ್ತವವನ್ನೂ ಜೊತೆಜೊತೆಯಾಗಿ ಕಟ್ಟಿಕೊಡುವ ‘ಕಂಡಾಯದೊಡೆಯ ಉಘೇಉಘೇ, ಐರನ್ ಆನೆಗಳು, ನಿಗಿನಿಗಿಕೆಂಡ ಮುಂತಾದ ಕತೆಗಳಲ್ಲದೆ ಭಿನ್ನಮಾದರಿಯ ಕತೆಗಳೂ ಈ ಸಂಗ್ರಹದಲ್ಲಿವೆ.. ಸಂಕಲನದ ಅತ್ಯುತ್ತಮ ಕತೆಗಳಲ್ಲಿ ಆ ಸತ್ವವೇ ಮೈದುಂಬಿದೆ. ‘ಕಂಡಾಯದೊಡೆಯ ಉಘೇಉಘೆ’, ‘ಗೂಳೀಮದ್ದು, ‘ನಿಗಿನಿಗಿಕೆಂಡ,’ ‘ಕರಿಜಾತಿಮಾರವ್ವ’- ಈ ಮೊದಲಾದ ಕತೆಗಳ ಜನಪದೀಯ ವಸ್ತುವನ್ನು ಅದರ ಸಹಜ ಪರಿಸರದಲ್ಲಿ, ನೈಜತೆಯಲ್ಲಿ ಕಟ್ಟಿಕೊಡುವಾಗಲೂ ಅದನ್ನು ವೈಭವೀಕರಿಸುವ ಇರಾದೆ ಕತೆಗಾರನಿಗೆ ಇಲ್ಲ. ಬದಲಾಗಿ ಸಾಮಾಜಿಕ ಸನ್ನಿವೇಶದ ಒಳಹೊಕ್ಕು ಪರಿಸ್ಥಿತಿಯ ಸೂಕ್ಷ್ಮವ್ಯಂಗ್ಯಗಳನ್ನು ಬಗೆಯುವ ವೈಚಾರಿಕ ನಿಲುವು ಇದೆ. ಅದು ಭಾಷಣದ ರೂಪದಲ್ಲೋ ವಾದವಿವಾದದ ರೂಪದಲ್ಲೋ ಬಾರದೆ ಆಳವಾದ ಸಂವೇದನೆಯಾಗಿ ಕತೆಯ ಆಂತರ್ಯದಲ್ಲಿ ಹುದುಗಿರುವುದು ಕತೆಗಳ ಹೆಚ್ಚುಗಾರಿಕೆಯಾಗಿದೆ.
ಪೂಜಾರಿಕೆಯ ಉತ್ತರಾಧಿಕಾರ ಮಗ ಮಾದೇಶನಿಗೆ ಹಸ್ತಾಂತರಿಸುವಲ್ಲಿ ಬಸವಯ್ಯನಿಗೆ ಮಗನಿಂದಲೇ ಎದುರಾದ ತೊಡಕು ‘ಕಂಡಾಯದೊಡೆಯ ಉಘೇಉಘೇ’ ಕತೆಯ ಕೇಂದ್ರ. ಪಾರಂಪರಿಕವಾದ ದೇವರ ಚಾಕರಿಯನ್ನು ಸ್ವೀಕರಿಸಲು ಮಾದೇಶನ ಅಸಮಾಧಾನ ಅಸಹಕಾರಗಳ ಕಾರಣವನ್ನು ಕತೆ ಸೂಚಿಸುತ್ತದೆ. ಅದರ ಮಧ್ಯೆಯೂ ವಟುಧಾರಣೆಯ ಆಚರಣೆ ನಡೆದು ಇನ್ನೇನು ಮಂಟೇಸ್ವಾಮಿಯ ಜಾತ್ರೆಯಲ್ಲಿ ಗುರುತರವಾದ ಜವಾಬ್ದಾರಿಯನ್ನು ವಹಿಸಬೇಕಾದ ಸಂದರ್ಭದಲ್ಲಿ ಮಾದೇಶನ ವ್ರತಭಂಗದಿಂದ ಎದುರಾದ ಬಿಕ್ಕಟ್ಟು ಕತೆಯ ಕ್ಲೈಮಾಕ್ಸ್ ಆಗಿ ಯೋಚನೆಗೆ ಹಚ್ಚುತ್ತದೆ.
‘ನಿಗಿನಿಗಿಕೆಂಡ’ ಕತೆಯಲ್ಲಿ ಊರ ತಳಸಮುದಾಯದವರ ಬದುಕಿನ ಅತಂತ್ರಸ್ಥಿತಿಗೆ ಕಾರಣವಾದ ಸನ್ನಿವೇಶ, ಅವರಲ್ಲ ಒಬ್ಬಳಾದ ಗಟ್ಟಿಗಿತ್ತಿ ಹೆಂಗಸು ಚೌಡಿಯು ತೀರ ಹತಾಶ ಸ್ಥಿತಿಯಲ್ಲಿ ಕಂಡುಕೊಂಡ ಬದುಕಿನ ದಾರಿ, ಕಲ್ಲುದೇವರನ್ನು ಸ್ಥಾಪಿಸಿ ಧೂಪದೊಂದಿಗೆ ‘ಉಘೇಉಘೇ ಮಾದೇವ’ದ ಘೋಷಣೆಯ ಮೂಲಕ ಆರಂಭವಾಗಿ ಆರ್ಥಿಕವಾಗಿ ಚೇತರಿಸಿಕೊಳ್ಳುವುದು, ಅದರ ಮುಂದಿನ ಬೆಳವಣಿಗೆಗೆಳು, ಕೊನೆಗೆ ಅರಣ್ಯ ಇಲಾಖೆಯ ಕಾಯಿದೆ ಬಂದು ಚೌಡಿಯ ಬದುಕು ಮತ್ತೆ ಅಧೋಗತಿಗೆ ಇಳಿದು ಆಕೆ ಮತ್ತೆ ಮರಳಿ ಊರಿಗೆ ಬರುವಲ್ಲಿ ಕತೆಯ ಕೊನೆಯಾಗುತ್ತದೆ.
ಹೊಟ್ಟೆಗಿಲ್ಲದೆ ಕೆಲಸ ಹುಡುಕಿಕೊಂಡು ಊರುಬಿಟ್ಟು ಹೋದ ಚೌಡಿಗೆ ಕೇರಿಯವಳು ಎಂಬ ಕಾರಣಕ್ಕೆ ಹೋಟೆಲಲ್ಲಿ ಪಾತ್ರೆತೊಳೆಯುವ ಕೆಲಸವೂ ನಿರಾಕರಿಸಲ್ಪಟ್ಟ ಹೊತ್ತಿನಲ್ಲಿ ಮಲೆಯ ಒಡೆಯನ ಮೇಲೆ ನಂಬಿಕೆಯಿರಿಸಿ ಲಿಂಗವನ್ನು ಹೋಲುವ ಕಲ್ಲನ್ನು ತರುವುದು, ಭಕ್ತಿಯ ನುಡಿಗಟ್ಟುಗಳ ಮೂಲಕ ಮಾಯ್ಕಾರ ಮಾದೇವನಿಗೆ ಧೂಪದಘಮಲನ್ನು ಅರ್ಪಿಸಿ ಶರಣಾಗುವುದು- ಅಲ್ಲಿಂದ ಅದು ಸ್ವಲ್ಪಕಾಲ ಅವಳ ಜೀವನದ ದಾರಿಯಾಗುವುದು ಕತೆಗಾರರ ನಿರೂಪಣೆಯಲ್ಲಿ ದೇವನೂರರ ಕುಸುಮಬಾಲೆ ಕೃತಿಯಲ್ಲಿ ಬೇರೊಂದು ನೆಲೆಯಲ್ಲಿ ನಿರಾಕರಣೆಗೊಳಗಾದ ಸ್ಥಿತಿಯಿಂದ ತನ್ನನ್ನು ತಾನು ಉದ್ಧರಿಸಿಕೊಳ್ಳುವ ಯಾಡನೆಂಬ ಮಗುವಿನ ತಾಯಿ ಅಕ್ಕಮಹಾದೇವಿಯನ್ನು ನೆನಪಿಸುತ್ತದೆ.
ಕತೆಯಲ್ಲಿ ವರ್ಣ ಮತ್ತು ವರ್ಗಸಂಘರ್ಷದ ಎಳೆಗಳು ದಟ್ಟವಾಗಿವೆ. ಉಳುವವನೇ ಹೊಲದೊಡೆಯ ಕಾನೂನಿನ ಅರಿವು ಇಲ್ಲದ ಸ್ಥಿತಿ ಮತ್ತು ಉಂಟಾದ ಸ್ಥಿತಿಯಿಂದ ಜರಗುವ ಬದಲಾವಣೆಗಳು, ಭೂಮಿಯ ಒಡೆಯರಾದರೂ ವ್ಯವಸಾಯದ ಕಷ್ಟಕಾರ್ಪಣ್ಯಗಳಿಗೆ ಅಂಜಿ ಅದಕ್ಕೆ ವಿಮುಖರಾಗಿ ಧೂಪದ ವ್ಯಾಪಾರಕ್ಕೆ ತೊಡಗಿಕೊಳ್ಳುವ ವ್ಯಂಗ್ಯ, ಧೂಪದ ವ್ಯಾಪಾರದಿಂದ ಆರ್ಥಿಕ ಸ್ಥಿತಿಸುಧಾರಿಸಿಕೊಂಡ ಕೇರಿಯವರಿಗೆ ಕರುಬಿ ಇತರ ಪಂಗಡಗಳವರೂ ತೊಡಗಿಕೊಂಡು ಒಡ್ಡುವ ಪೈಪೋಟಿ, ಕೇರಿಯವರ ಮುಂದೆ ಇತರರ ಸೋಲು, ಚೌಡಿಗೆ ಸುಬ್ಬಪ್ಪನ ಧಮಕಿ, ಮತ್ತೆ ಊರು ಸೇರುವಂತಾಗಲು ಯೋಜನೆ ಹಾಕಿಕೊಳ್ಳುವುದು, ಅರಣ್ಯ ಇಲಾಖೆಗೆ ಸಲ್ಲಿಸುವ ದೂರಿನ ಹಿನ್ನೆಲೆಯಲ್ಲಿ ಇಲಾಖೆಯು ಚೌಡಿಯ ಮಗ ಸಿದ್ರಾಮನನ್ನು ಬಂಧಿಸಿ ಧೂಪದ ಚಕ್ಕೆಗಳನ್ನು ಮುಟ್ಟುಗೋಲು ಹಾಕಿದ ಪರಿಣಾಮವಾಗಿ ಚೌಡಿಯ ವ್ಯಾಪಾರ ಸ್ಥಗಿತಗೊಳ್ಳುವುದು-ಕತೆಯ ಕೊನೆಯಲ್ಲಿ ತನ್ನ ಈ ಪರಿಸ್ಥಿತಿಯು ಕೂಡ ಆ ಮಾಯ್ಕಾರನ ಮಾಟವೇ ಎಂದುಕೊಂಡು ಆಕೆ ‘ಕೊನೆಗೂ ನಿನ್ನಾಟ್ವೇ ತಾನೆ ನಡ್ಯೂದು ಒಪ್ಪುಸ್ಕೊ ನನ್ ಕಡೆ ಆರತಿಯಾ’ ಎಂದು ತನ್ನಚೀಲದಲ್ಲಿದ್ದ ಅಷ್ಟೂ ಧೂಪವನ್ನು ಕೆಂಡದ ಗುಳಿಗೆ ಹಾಕಿದರೆ ‘ನಿಗಿನಿಗಿ ಕೆಂಡದಲ್ಲಿ ಬಿದ್ದ ಧೂಪದ ಬಿರುಸಿನ ಹೊಗೆ ಸೂರ್ಯನನ್ನೇ ಮುಟ್ಟುವ ಹಾಗೆ ಆಕಾಶ ಮುಟ್ಟುತ್ತಿತ್ತು’ ಎಂದು ಕತೆ ಕೊನೆಯಾಗುತ್ತದೆ. ನಿಗಿನಿಗಿಕೆಂಡ ಹಾಗೂ ಧೂಪದ ಹೊಗೆ ಎನ್ನುವುದು ಒಂದು ರೂಪಕವಾಗಿ ಚೌಡಿ ಮತ್ತು ಕೇರಿಯವರ ಬದುಕನ್ನು ಒಟ್ಟಾರೆಯಾಗಿ ವ್ಯಂಜಿಸುತ್ತದೆ.
‘ಮಾರುತಿ ಟೆಂಟ್’ ಕತೆ ಆಧುನಿಕತೆಯ ಧಾಳಿಯಿಂದಾಗಿ ಜರಗುವ ಸ್ಥಿತ್ಯಂತರಗಳು ಜನರ ಬಾಳಿನಲ್ಲಿ ತರುವ ಬದಲಾವಣೆಗಳನ್ನು ಕೇಂದ್ರೀಕರಿಸಿದೆ. ಕ್ಷೌರಿಕ ವೃತ್ತಿಯ ಚೆನ್ನಯ್ಯನ ಮಗ ಸೋಮ ಈ ವೃತ್ತಿಯಬಗ್ಗೆ ಸಾಮಾಜಿಕವಾಗಿ ಇರುವ ಕೀಳುಭಾವನೆಯ ಹಿನ್ನಲೆಯಲ್ಲಿ ತಾನು ಅದನ್ನು ಮುಂದುವರಿಸಲು ನಿರಾಕರಿಸುವ ನೆಲೆಯಿಂದ ತೊಡಗುವ ಕತೆ ಆತ ಪರ್ಯಾಯ ಕೆಲಸಗಳನ್ನು ಹುಡುಕಿ ಬದುಕಿನಲ್ಲಿ ಸೆಟ್ಲ್ ಆದನೆಂದು ತಂದೆ ಸಮಾಧಾನಗೊಳ್ಳುವುದು ಇತ್ಯಾದಿ ವಿವರಗಳಲ್ಲಿ ಮುಂದುವರಿಯುತ್ತದೆ. ಆದರೆ ಟೆಂಟ್ ಸಿನಿಮಾ ಥಿಯೇಟರ್‌ನಲ್ಲಿ ಸಣ್ಣಕೆಲಸ ದೊರೆತು ಮುಂದುವರಿಯುತ್ತಿರುವಾಗಲೇ ತರಹೇವಾರಿ ಡಿವಿಡಿಗಳು, ಸಿಡಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟ ಪರಿಣಾಮವಾಗಿ ಮಾರುತಿಟೆಂಟ್‌ನ್ನು ಉಳಿಸಿಕೊಳ್ಳುವ ಸವಾಲು ಎದುರಾದದ್ದು ಅದಕ್ಕಾಗಿ ಅವನು ಮಾಡಿದ ಪ್ರಯತ್ನಗಳು ವಿಫಲವಾಗಿ ಅಂತಿಮವಾಗಿ ಕೈಗೊಂಡ ಉಪಾಯದಲ್ಲಿ ಬದುಕಿನ ವ್ಯಂಗ್ಯ ಇದೆ.
ದೇವರ ಸಿನಿಮಾವೆಂದು ಹೇಳಿ ಜನರಿಗೆ ಬತ್ತಲೆ ಸಿನಿಮಾವನ್ನು ತೋರಿಸಿ ಉದ್ಯೋಗವನ್ನು ಉಳಿಸಿಕೊಳ್ಳುವ ಸೋಮನಿಗೆ ತನ್ನ ಮಗ ಬಸವನಿಗೆ ಈ ವಿಚಾರ ಗೊತ್ತಾಗಬಾರದು ಆತ ಸಿನೆಮಾ ನೋಡಬಾರದು ಎಂಬ ಎಚ್ಚರ ಇದೆ. ಕೊನೆಗೂ ತಂದೆಗೆ ಗೊತ್ತಾಗದೆ ಕಾವಲುಗಾರನ ಕಣ್ತಪ್ಪಿಸಿ ಬಸವ ಟೆಂಟ್‌ನೊಳಗೆ ನುಗ್ಗಿ ಸಿನೆಮಾ ನೋಡುವುದರಲ್ಲಿ ಕತೆಯ ಕ್ಲೈಮ್ಯಾಕ್ಸ್ ಇದೆ. ವ್ಯಕ್ತಿ ಭ್ರಷ್ಟನಾಗುವುದು, ಸಮಾಜ ಭ್ರಷ್ಟಗೊಳ್ಳುವುದು, ಎಳೆಯ ತಲೆಮಾರು ಅದಕ್ಕೆ ಸಾಕ್ಷಿಯಾಗುವುದು ಕಾರ್ಯ ಕಾರಣ ಸಂಬಂಧದ ಈ ವಿನ್ಯಾಸದಲ್ಲಿ ಕತೆಯ ಹೆಣಿಗೆ ಇದೆ. ಇದು ನಾಗಾಲೋಟದಲ್ಲಿ ಸಾಗುತ್ತಿರುವ ಬದುಕಿನ ಗತಿಯಲ್ಲಿ ಯಾರು ಹೊಣೆಗಾರರೆಂದೇ ತೀರ್ಮಾನಿಸಲಾಗದ ವ್ಯಕ್ತಿಯ ನೈತಿಕ ಬದುಕಿನ ದುರಂತವನ್ನೂ ಸಾಮಾಜಿಕ ಬದುಕಿನಲ್ಲಿ ನೈತಿಕತೆಯ ಅವನತಿಯನ್ನೂ ಏಕಕಾಲಕ್ಕೆ ಧ್ವನಿಸುತ್ತದೆ. ‘ಕಾಗದದ ದೋಣಿ’ ಕತೆಯು ಎತ್ತುವ ಐಡೆಂಟಿಟಿಯ ಪ್ರಶ್ನೆ ಕೂಡ ಏಕಕಾಲಕ್ಕೆ ವೈಯಕ್ತಿಕವಾದದ್ದು ಮತ್ತು ಸಾಮಾಜಿಕವಾದದ್ದು. ಕತೆಗಾರನಿಗೆ ಇರಬೇಕಾದ ಸಾಮಾಜಿಕ ಹೊಣೆಯನ್ನು ಪ್ರಕಾಶ ಅವರು ಚೆನ್ನಾಗಿ ಅರಿತಿದ್ದಾರೆ. ‘ಪರಿಧಿ’ ಕತೆಯಲ್ಲಿ ಪೂಜಾರಿವೃತ್ತಿಯ ತಂದೆಗೆ ಮಗ ಅಂತರ್ಜಾತೀಯ ವಿವಾಹವಾದ ಕಾರಣಕ್ಕೆ ಎದುರಾಗುವ ಸಮಸ್ಯೆ ಇದೆ. ಬಹಿಷ್ಕಾರಕ್ಕೊಳಗಾಗುವ ಹಾಗೂ ಜಾತಿಭ್ರಷ್ಟನಾಗುವುದರ ಜೊತೆಗೆ ವಿದ್ಯಾಭ್ಯಾಸದ ಆರ್ಥಿಕ ಹೊರೆಯ ಸಮಸ್ಯೆಯೂ ಸೇರಿ ಕುಟುಂಬ ಬಸವಳಿಯುವ ಸ್ಥಿತಿಯಲ್ಲಿ ಅಪರಾಧಿ ಯಾರೆಂಬ ಚಿಂತನೆಗೆ ಕತೆ ನಮ್ಮನ್ನು ಕೊಂಡೊಯ್ಯುತ್ತದೆ.
ಸಯಾಮೀಸ್ ಅವಳಿಗಳಾದ ಇಂದು ಮತ್ತು ಬಿಂದುವಿನ ಕತೆಯನ್ನು ಮುಂಡಕೈ ದುರಂತದೊಂದಿಗೆ ಕನೆಕ್ಟ್ ಮಾಡುವ ‘ಮ್ಯಾಚ್ ದ ಫಾಲೋಯಿಂಗ್’ ಎಂಬ ಕತೆ ಬದುಕು ಕ್ರೂರವೋ, ಸಾವು ಕ್ರೂರವೋ ಎಂದು ತೀರ್ಮಾನಿಸಲಾಗದ ಸಂಕೀರ್ಣತೆಯನ್ನು ನಮ್ಮ ಮುಂದಿರಿಸುತ್ತದೆ.
ಪುರುಷತ್ವವನ್ನು ವೃದ್ಧಿಸುತ್ತದೆಯೆನ್ನಲಾದ ಗೂಳಿಮದ್ದನ್ನು ಅರಸಿಕೊಂಡು ಕಾಡಿನ ಗರ್ಭಕ್ಕೆ ತಿಪ್ಪಯ್ಯನೊಂದಿಗೆ ಸಾಗುವ ಪ್ರಸಾದನ ಸಂಚಾರಿಭಾವಗಳು ಕಾಡಿನಲ್ಲಿ ಒಂದಾದ ವ್ಯಕ್ತಿತ್ವದ ತಿಪ್ಪಯ್ಯನ ಮಾತುಗಳಿಗೆ ವೈದೃಶ್ಯವನ್ನೊಡ್ಡುತ್ತವೆ. ಕತೆಯ ಕೊನೆಯಲ್ಲಿ ಆನೆಗೆ ಕುರುಜ ಬಲಿಯಾದ ದುರಂತವಾರ್ತೆಯ ಬೆನ್ನಲ್ಲೆ ‘ಗುಡಿಯ ಮುಂಭಾಗದಲ್ಲಿದ್ದ ಗಂಟೆಯ ನಾಲಿಗೆ ಕಿತ್ತು ಕೆಳಗೆ ಬಿದ್ದಿತ್ತು’ ಎಂಬ ಭರತವಾಕ್ಯವಿದೆ.

(ಡಾ. ಮಹೇಶ್ವರಿ ಯು.)
ವ್ಯವಸಾಯದ ಭೂಮಿ ಕಲ್ಲುಕೋರೆಯಾಗಿ, ಗಣಿಗಾರಿಕೆಯ ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆಗೊಳ್ಳುವ ವಿಕೃತಿ ಸಾಹಿತ್ಯಸಂವೇದನೆಯನ್ನೂ ಮೀಟಿ ಕೆಲವೊಂದು ಕೃತಿಗಳು ಈಗಾಗಲೇ ಗಮನಸೆಳೆದಿವೆ. ಸಂಕಲನದ ‘ಐರನ್ ಆನೆಗಳು’ ಕತೆ ಈ ವಿದ್ಯಮಾನಕ್ಕೆ ಒಡ್ಡುವ ಪ್ರತಿಕ್ರಿಯೆ ಕುತೂಹಲಕರವಾದುದು. ಧನದಾಹಿಗಳ ಹೊಟ್ಟೆತುಂಬಲು ಜೆಸಿಬಿಯಂತ್ರವು ತನ್ನ ಸೊಂಡಿಲು ಹಾಕಿ ಬಗೆಬಗೆದು ಹಾಕುವ ಚಿತ್ರ ಕತೆಯ ಕೇಂದ್ರದಲ್ಲಿದೆ. ಶಿವನಜ್ಜಿಯ ತಲ್ಲಣಗಳು, ಕಳವಳ, ಭೂಮಿಯನ್ನು ವ್ಯವಸಾಯ ಭೂಮಿಯನ್ನಾಗಿ ಉಳಿಸಿಕೊಳ್ಳಲು ಮಾಡುವ ಪ್ರಯತ್ನಗಳು, ಪ್ರತಿರೋಧವನ್ನು ಅಣಗಿಸಲು ಒಡ್ಡುವ ಆಮಿಷಗಳಿಗೆ ಬಲಿಯಾಗದಿರುವ ಸಿದ್ಲಿಂಗನ ಮನಃಸ್ಥಿತಿ- ಗಣಿಗಾರಿಕೆಗೆ ಜನರಿಂದಲೇ ಮೂಡಿಬಂದ ಹೋರಾಟ, ಆರಂಭದಲ್ಲಿ ಏಕಾಂಗಿಯಾಗಿ ಪ್ರತಿಭಟಿಸಿದ ಸಿದ್ಲಿಂಗ ಕೊನೆಗೂ ಗಳಿಸಿದ ಯಶಸ್ಸು ಒಟ್ಟಾರೆಯಾಗಿ ಊರಿಗೆ ತರುವ ಒಂದು ಪಾಸಿಟಿವ್ ಎನರ್ಜಿ ವಿಶೇಷವಾದದ್ದು.
ಸಂಕಲನದ ಮತ್ತೊಂದು ಮಹತ್ವದ ಕತೆ ‘ಕರಿಜಾತಿ ಮಾರವ್ವ’. ಮಾರವ್ವನ ಹಬ್ಬದ ವಿವರಗಳ ಸಮೃದ್ದಿಯೊಂದೇ ಕತೆಯ ಉದ್ದೇಶವಲ್ಲ. ಹಬ್ಬದಲ್ಲಿ ಮೂರುಗ್ರಾಮದವರಿಗೆ ಜವಾಬ್ದಾರಿಯ ಹಂಚಿಕೆಯಿದ್ದು ಕಡೇಕೇರಿಯವರಿಗೆ ಗಲೀಜು ಸ್ವಚ್ಛಮಾಡುವ ಜವಾಬ್ದಾರಿ ಇದೆ. ಒಟ್ಟು ನಡಾವಳಿಯಲ್ಲಿ ಉಳ್ಳವರು ಮತ್ತು ಇಲ್ಲದವರ ಸಹಭಾಗಿತ್ವ ಹೇಗೆ ಎನ್ನುವುದರ ಸೂಕ್ಷ್ಮವನ್ನು ಕತೆಗಾರರು ಗಮನಿಸುತ್ತಾರೆ. ವಾದ್ಯನುಡಿಸುವ ಬೆಟ್ಟಣ್ಣನಿಗೆ ಹಬ್ಬದಲ್ಲಿ ಮಹತ್ವದ ಪಾತ್ರವಿದೆ. ಆದರೆ ಆತನ ಮಗ ಗೋವಿಂದ ಕಾಲೇಜು ಕಲಿತವನು, ಈ ಪಾರಂಪರಿಕ ವೃತ್ತಿಯನ್ನು ಮುಂದುವರಿಸುವುದರಲ್ಲಿ ಆಸಕ್ತನಲ್ಲ. ವಾದ್ಯನುಡಿಸುವ ವೃತ್ತಿ ಬೆಟ್ಟಣ್ಣನ ಬವಣೆ ಮತ್ತು ಬದುಕು ಆಗಿ ಜೀವನದ ನೊಗವನ್ನು ಹೊತ್ತುಕೊಂಡು ತಳಮಳಗೊಳ್ಳುವುದು, ಆತನ ಬಿಸಿಯುಸಿರು ನಮ್ಮನ್ನು ಸ್ಪರ್ಶಿಸುತ್ತದೆ. ವ್ಯವಸ್ಥೆಯಲ್ಲಿ ಎದ್ದುಕಾಣುವ ತಾರತಮ್ಯ, ಜಾತಿಯ ಕಟ್ಟುಪಾಡುಗಳು, ಶಾಲೆಗಳಲ್ಲಿ ಇನ್ನೂ ಉಳಿದಿರುವ ಅಸಮಾನತೆಯ ಕರಿನೆರಳು ಇತ್ಯಾದಿಗಳು ಶಿಕ್ಷಕ ಭೀಮ ಮೂಡಿಸಿದ ಎಚ್ಚರದ ಕುಲುಮೆಯಲ್ಲಿ ಕುದಿಯುತ್ತಿದ್ದುದು ಓದುಗನ ಸಾಕ್ಷಿಪ್ರಜ್ಞೆಗೆ ಕೇಳಿಸುತ್ತದೆ. ಪರಿಷೆಯ ಮುಂದಾಳಾಗಿ ವಾದ್ಯ ನುಡಿಸುತ್ತ ರಾಜನಂತೆ ಬಂದ ಬೆಟ್ಟಣ್ಣ ಎಲ್ಲರನ್ನು ಒಳಕಳುಹಿಸಿ ತಾನು ಒಳಹೋಗಲಾಗದ ಅಸಹಾಯಕತೆಯಲ್ಲಿ ನೋಯುತ್ತ ಹೊರಗೆ ನಿಂತಿರುವ ಚಿತ್ರ ಕಣ್ಣಿಗೆ ಕಟ್ಟುತ್ತದೆ. ಜಾಗೃತಪ್ರಜ್ಞೆಯ ಗೋವಿಂದ ವ್ಯವಸ್ಥೆಯ ಸಂರಕ್ಷಕರು ನೋಡುತ್ತಿದ್ದಂತೆಯೇ ಒಳಹೋಗಿ ದೇವಿಯ ದರ್ಶನ ಮಾಡಿದ ಘಟನೆಯ ಪರಿಣಾಮ ದಾರುಣವ್ಯಂಗ್ಯವಾಗಿ ಕರುಳನ್ನು ಇರಿಯುತ್ತದೆ. ಕರಿಜಾತಿಮಾರವ್ವನ ಅದೇ ಹಬ್ಬದ ಸಂದರ್ಭದಲ್ಲೇ ಹುಲಿ ಮತ್ತು ಕಾಡೆಮ್ಮೆಯ ಕಾದಾಟದ ನೆಪದಲ್ಲಿ ಹುಲಿವೇಷಧಾರಿಯ ಆವೇಶದ ಕ್ರಿಯೆ ಗೋವಿಂದನನ್ನು ಬಲಿತೆಗೆದುಕೊಳ್ಳುವ ಕ್ರೌರ್ಯ ಜರಗುತ್ತದೆ. ಕಾನೂನಿನ ಮೂಲಕ ಸಾಧಿಸಲಾಗದ್ದನ್ನು ಆಚರಣೆಯ ಮರೆಯಲ್ಲಿ ಸಾಧಿಸಿ ಅದನ್ನು ಮಾಡಿದ ತಪ್ಪಿಗೆ ಮಾರವ್ವ ಶಿಕ್ಷೆಕೊಟ್ಟಳೆಂಬಂತೆ ಸುದ್ದಿಹಬ್ಬಿಸುವುದು ಗೌಡರು ಮತ್ತು ಮಣೆಗಾರರ ಕ್ರೂರಹುನ್ನಾರದ ಭಾಗವಾಗಿದೆ. ಮತ್ತು ಅದು ‘ಮಾರಮ್ಮ ಎಂಬೋಳು ಮೈಮೇಲೆಬಂದು ಮಾಯಾದ ಏಟುಕೊಟ್ಟಾಳೋ/ ನನ್ನವ್ವ ಮಾಡಿದ ತಪ್ಪಿಗೆ ಮುನಿದಾಳೊ’ ಎಂದು ಹಾಡಾಗಿ ಅದೇ ಜನಪದರ ಬಾಯಲ್ಲಿ ಚಲಾವಣೆಗೊಳ್ಳುವುದು ವ್ಯಂಗ್ಯದ ಪರಾಕಾಷ್ಠೆಯಾಗಿ ಮನಸ್ಸನ್ನು ತಟ್ಟುತ್ತದೆ. ವ್ಯವಸ್ಥೆಯನ್ನು ಮುರಿದುಕಟ್ಟುವ ಸಾಮಾಜಿಕ ಎಚ್ಚರದೊಂದಿಗೆ ಸಂಘಟಿತ ಕ್ರಿಯಾಶಕ್ತಿ ಪ್ರಕಟವಾಗಬೇಕಾದ ಅಗತ್ಯವನ್ನು ಈ ಕತೆ ಧ್ವನಿಸುತ್ತದೆ.
ಕನ್ನಡ ಕಥನ ಪರಂಪರೆಯ ಹೊಸಪೀಳಿಗೆಯ ವಾರಸುದಾರರಾಗಿ ಪ್ರಕಾಶ ಪುಟ್ಟಪ್ಪನವರು ತಮ್ಮ ಈ ಕತೆಗಳ ಮೂಲಕ ಪ್ರಕಾಶಿಸುತ್ತಾರೆ ಎಂದರೆ ಅದು ಕೇವಲ ಅಲಂಕಾರಿಕವಲ್ಲ. ಅದನ್ನು ಸಾಬೀತು ಮಾಡುವ ಎಲ್ಲ ಯೋಗ್ಯತೆಯೂ ಅವರಲ್ಲಿದೆ. ‘ಗಾಂಧಿಜೋಡಿನ ಮಳಿಗೆ’ಯ ಪ್ರಕಾಶನವು ಶುಭಾರಂಭವಾಗಿ ಕನ್ನಡ ಕಥನಜಗತ್ತನ್ನೂ ಸಂವೇದನಾಶೀಲ ಓದುಗವರ್ಗವನ್ನೂ ಮತ್ತಷ್ಟು ವಿಸ್ತರಿಸಲಿ ಎಂಬ ಹಾರೈಕೆ ನನ್ನದು. ಕಥಾಪ್ರಶಸ್ತಿಯನ್ನು ಆಯೋಜಿಸುವ ಮೂಲಕ ಭರವಸೆಯ ಕತೆಗಾರರನ್ನು ಗುರುತಿಸುವ ಅವಕಾಶವನ್ನು ಒದಗಿಸಿದ ಪ್ರಶಸ್ತಿಸಮಿತಿಯ ಪದಾಧಿಕಾರಿಗಳನ್ನು ಅಭಿನಂದಿಸುತ್ತೇನೆ. ಹಾಗೆಯೇ ಜಾನಪದ ಸಮೃದ್ಧಿಯ ಕತೆಗಾರ ಕೃಷ್ಣಮೂರ್ತಿ ಹನೂರು ಅವರ ಊರಿನವರಾದ ಪ್ರಕಾಶ ಪುಟ್ಟಪ್ಪನವರನ್ನು ಸಹೃದಯಲೋಕ ಪ್ರೀತಿಯಿಂದ ಬರಮಾಡಿಕೊಳ್ಳಲಿ ಎಂದು ಆಶಿಸುತ್ತೇನೆ.
(ಕೃತಿ: ಗಾಂಧಿಜೋಡಿನ ಮಳಿಗೆ (ಕಥಾಸಂಕಲನ), ಲೇಖಕರು: ಪ್ರಕಾಶ್ ಪುಟ್ಟಪ್ಪ, ಪ್ರಕಾಶಕರು: ಅಮೂಲ್ಯ ಪುಸ್ತಕ, ಬೆಲೆ: 175/-)

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ