ಅಂದು ನನ್ನ ತಂದೆ ಸಂಭ್ರಮಿಸಿದ್ದು ಒಂದು ರೂಪಕವಾಗಿ ಮನದಲ್ಲಿ ಉಳಿದಿದೆ. ಅವರೆಲ್ಲ ಚೂಡಾ ತಿಂದ ಮೇಲೆ ಲಿಂಗಾಯತರಾದ ಶಿವಪ್ಪನವರಿಗೆ ಸಮೀಪದ ಲಿಂಗಾಯತರ ಮನೆಯಿಂದ ನೀರು ತಂದು ಕೊಟ್ಟ ನಂತರ ಅವರು ನೀರು ಕುಡಿದರು! ಆದರೆ ತಾಯಿ ಮಾಡಿಕೊಟ್ಟ ಚಹಾವನ್ನು ಎಲ್ಲರ ಜೊತೆ ಶಿವಪ್ಪ ಅವರೂ ಕುಡಿದರು. ಇದೆಲ್ಲ ನನಗೆ ವಿಚಿತ್ರ ಎನಿಸಿತು. ಅದೇ ನಳದ ನೀರು. ಲಿಂಗಾಯತರ ಮನೆಗೆ ಹೊಕ್ಕಾಗ ಅದು ಹೇಗೆ ಶುದ್ಧವಾಗುವುದು? ಆ ‘ಶುದ್ಧ’ ನೀರನ್ನು ನನ್ನ ತಂದೆ ತರುವಾಗ ಅಶುದ್ಧವಾಗುವುದಿಲ್ಲವೆ?
ರಂಜಾನ್ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿಯ ಇಪ್ಪತ್ತೊಂದನೇ ಕಂತಿನಲ್ಲಿ ಜಾತಿ ಜಾತಿಗಳ ನಡುವೆ ನಡೆಯುವ ಸೂಕ್ಷ್ಮ ವಿಚಾರಗಳನ್ನು ಬರೆದಿದ್ದಾರೆ.

 

ಜಾತಿ ಮತ್ತು ಧರ್ಮಗಳ ಚೌಕಟ್ಟುಗಳು ಮನುಷ್ಯರನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತವೆ. ಅಹಂ ಮತ್ತು ಮೂಢನಂಬಿಕೆಗಳು ಆ ಚೌಕಟ್ಟುಗಳ ಒಳಗೇ ಮನೆ ಮಾಡಿಕೊಂಡಿರುತ್ತವೆ. ಆದರೆ ಉದಾತ್ತವಾಗಿ ಯೋಚಿಸುವ ಜನಸಾಮಾನ್ಯರು ಈ ಚೌಕಟ್ಟುಗಳೊಳಗೆ ಇದ್ದುಕೊಂಡೇ ಮಾನಸಿಕವಾಗಿ ಇವನ್ನೆಲ್ಲ ಮೀರಿರುತ್ತಾರೆ. ಹಾಗೆ ಮೀರಿದವರಲ್ಲಿ ನನ್ನ ತಂದೆ ತಾಯಿಗಳೂ ಇದ್ದರು.

ಬರಗಾಲದ ದಿನಗಳನ್ನು ಹೊರತುಪಡಿಸಿದರೆ, ನಾವೆಲ್ಲ ಚೆನ್ನಾಗಿ ತಿನ್ನುತ್ತಿದ್ದೆವು. ಬೆಳಿಗ್ಗೆ ಸಜ್ಜಕ, ಹಾಲು, ಚಪಾತಿ, ಅಜ್ಜಿಯ ವ್ಯಾಪಾರದಲ್ಲಿ ಉಳಿದ ಬಾಳೇಹಣ್ಣು ಮುಂತಾದವು ಇರುತ್ತಿದ್ದವು. ಮಧ್ಯಾಹ್ನ ಮತ್ತು ರಾತ್ರಿ ಊಟದಲ್ಲಿ ರೊಟ್ಟಿಯೇ ಪ್ರಮುಖ ಪಾತ್ರ ವಹಿಸುತ್ತಿತ್ತು. ನಮಗೆ ರೊಟ್ಟಿ, ಖಾರಬ್ಯಾಳಿ (ದಾಲ್) ಮತ್ತು ಗೋಳಿಪಲ್ಲೆ ಕೂಡ ಅಷ್ಟೇ ಪ್ರಿಯವಾಗಿದ್ದವು. ಅಕ್ಕಿಯ ಬಳಕೆ ಬಹಳೇ ಕಡಿಮೆ ಇತ್ತು. ರೋಗ ರುಜಿನ ಅಥವಾ ಹಬ್ಬಗಳಲ್ಲಿ ಮಾತ್ರ ಅದಕ್ಕೆ ಪ್ರವೇಶ.

ತಂದೆ ಹೊಟೇಲ್‌ಗೂ ಹೋಗುತ್ತಿರಲಿಲ್ಲ. ಏನೇ ತಿಂದರೂ ಮನೆಯವರ ಜೊತೆಗೇ ತಿನ್ನುವುದು ಅವರ ಸಂಸ್ಕಾರವಾಗಿತ್ತು. ರವಿವಾರದ ಸಂತೆಯಲ್ಲಿ ಮಕ್ಕಳಿಗೆ, ಮನೆಗೆ ಬೇಕಾದ ದವಸಧಾನ್ಯ ಕಾಯಿಪಲ್ಲೆ (ತರಕಾರಿ) ಮುಂತಾದವುಗಳ ಜೊತೆಗೆ ಇಷ್ಟವಾದ ಹಣ್ಣು ಹಂಪಲಗಳನ್ನೂ ಖರೀದಿಸುವುದು. ನನಗೆ ಪ್ರಿಯವಾದ ಸುಲಗಾಯಿ ಮತ್ತು ಕಬ್ಬಿನ ಗಳ ಕೂಡ ಇರುತ್ತಿದ್ದವು.

ಸಂಸಾರದ ಬಗ್ಗೆ ಸಂಪೂರ್ಣ ಕಾಳಜಿ, ಶಿಸ್ತು, ಕಾಯಕದಲ್ಲಿ ಚಾಕಚಕ್ಯತೆ, ಸ್ವಚ್ಛತೆ, ಪ್ರಾಮಾಣಿಕತೆ ಮತ್ತು ಯಾವುದೇ ದೌರ್ಬಲ್ಯಗಳಿಲ್ಲದ ನಿಯಮಬದ್ಧ ಬದುಕಿನಿಂದಾಗಿ ಅವರು ಸರ್ವರ ಗೌರವಕ್ಕೆ ಪಾತ್ರರಾಗಿದ್ದರು. ನನ್ನ ತಾಯಿ ಚಹಾ ಕುಡಿಯುತ್ತಿದ್ದರು ಮತ್ತು ಎಲೆ ಅಡಿಕೆ ತಿನ್ನುತ್ತಿದ್ದರು. ಆದರೆ ನನ್ನ ತಂದೆಗೆ ಅಂಥ ತಲಬು ಕೂಡ ಇದ್ದಿದ್ದಿಲ್ಲ. ರಾಮುದಾದಾ ಅವರ ಮನೆಯಲ್ಲಿ ಹಬ್ಬದೂಟ ಮಾಡಿದ ನಂತರ ಅಲ್ಲಿ ಇಟ್ಟ ಎಲೆ ಅಡಿಕೆಯನ್ನು ನಾವೆಲ್ಲ ತಿನ್ನುತ್ತಿದ್ದೆವು. ಅಂಥ ಹೋಳಿಗೆ ಊಟದ ಪ್ರಸಂಗದಲ್ಲಿ ಮಾತ್ರ ನನ್ನ ತಂದೆ ಎಲೆ ಅಡಿಕೆ ತಿಂದ ನೆನಪು. (ನಮ್ಮ ವಿಜಾಪುರದಲ್ಲಿ ಹೋಳಿಗೆಯನ್ನು ನೆನಸಿಕೊಂಡು (ಅದ್ದಿ) ತಿನ್ನಲು ಗುಳಂಬ ಅಂತ ಮಾಡುತ್ತಿದ್ದರು. ಅದು ಚೆನ್ನಾಗಿ ಕಾಸಿದ ಬೆಲ್ಲದ ನೀರು. ಬಹಳಷ್ಟು ಜನರಿಗೆ ಹಬ್ಬದೂಟಕ್ಕೆ ಕರೆದಾಗ ಹೋಳಿಗೆ ಜೊತೆ ಹಾಲಿನ ಬದಲು ಗುಳಂಬ ಕೊಡುತ್ತಿದ್ದರು. ಗುಳ ಅಂದರೆ ಬೆಲ್ಲ; ಅಂಬ ಅಂದರೆ ನೀರು. ಗುಳಂಬ ಎಂದರೆ ಬೆಲ್ಲದ ನೀರು.)

ತಂದೆಯ ಉದಾತ್ತ ಭಾವದಲ್ಲಿ ಯಾರೂ ಹೊರಗಿನವರಾಗಿರಲಿಲ್ಲ. ಯಾವ ಜಾತಿ ಧರ್ಮಗಳೂ ಅವರಿಂದ ದೂರವಾಗಲಿಲ್ಲ. ಅನೇಕ ಕಾಯಕಗಳ ಕೌಶಲ ಹೊಂದಿದ್ದ ಅವರು ಮಾದರಿ ಹಮಾಲರಾಗಿದ್ದರು. ಓದು ಬರಹ ಬರದಿದ್ದರೂ ಮನದಲ್ಲೇ ಸರಿಯಾಗಿ ಲೆಕ್ಕಪತ್ರ ಇಡುತ್ತಿದ್ದರು. ಅವರ ನೆನಪಿನ ಶಕ್ತಿ ಅಗಾಧವಾಗಿತ್ತು.

ಅವರು ತಮ್ಮ ಕೆಲಸದಲ್ಲಿ ತೋರಿಸುವ ನಿಷ್ಠೆಯಿಂದಾಗಿ ಜನಪ್ರಿಯರಾಗಿದ್ದರು. ಕಬ್ಬು ಬೆಳೆಗಾರರು ತಾವೇ ತಯಾರಿಸಿದ ಬೆಲ್ಲಕ್ಕೆ ಹೆಚ್ಚಿನ ಧಾರಣೆ ಬರುವವರೆಗೆ ಕಾಯ್ದಿಡುವುದಕ್ಕಾಗಿ ಬೆಲ್ಲದ ಪೆಂಟಿಗಳಿಗೆ ತಟ್ಟು ಹೊಲಿದಿಡುವ ವ್ಯವಸ್ಥೆ ಮಾಡುತ್ತಿದ್ದರು. ನನ್ನ ತಂದೆ ಆ ಕೆಲಸದಲ್ಲಿ ಕೂಡ ರೈತರ ಮಧ್ಯೆ ಪ್ರಸಿದ್ಧರಾಗಿದ್ದರು. ಶ್ರೀಮಂತ ರೈತರು ಮನೆಯವರೆಗೆ ಬಂದು ತಟ್ಟು ಹೊಲಿಯುವ ಕೆಲಸಕ್ಕೆ ಆಹ್ವಾನಿಸುತ್ತಿದ್ದರು. ಅವರು ಈಗಾಗಲೇ ಆ ಕೆಲಸಕ್ಕಾಗಿ ಬೇರೆಯವರಿಗೆ ಒಪ್ಪಿಗೆ ನೀಡಿದ್ದರೆ, ಹೀಗೆ ಬಂದವರು ಎಷ್ಟೇ ಹೇಳಿದರೂ ಒಪ್ಪುತ್ತಿರಲಿಲ್ಲ. ಆ ಕೆಲಸ ಮುಗಿದ ಮೇಲೆಯೆ ನಿಮ್ಮೂರಿಗೆ ಬರುವುದಾಗಿ ತಿಳಿಸುತ್ತಿದ್ದರು. ಆ ರೈತರು ಕಾಯುತ್ತಿದ್ದರು. ಕೈಯಲ್ಲಿನ ಕೆಲಸ ಮುಗಿದ ಕೂಡಲೆ ಮಾತು ಕೊಟ್ಟ ಪ್ರಕಾರ ಅವರ ಊರಿಗೆ ಹೋಗಿ ಕೆಲಸ ಮುಗಿಸಿ ಬರುತ್ತಿದ್ದರು. ಅಡತಿ ಅಂಗಡಿಗಳು ಶುಕ್ರವಾರ ಬಂದ್ ಇರುವ ಸಂದರ್ಭದಲ್ಲಿ ಇನ್ನೊಂದು ದಿನ ಹೇಳಿಕೊಂಡು ಅವರು ಈ ಕೆಲಸ ಮಾಡಿ ಬರುತ್ತಿದ್ದರು.

ಹೀಗೆ ಅವರು ಒಂದು ಸಲ ಬೆಲ್ಲದ ಪೆಂಟಿಗೆ ತಟ್ಟು ಹೊಲಿಯಲು ಇನ್ನೊಬ್ಬ ವ್ಯಕ್ತಿಯ ಜೊತೆ ಗೂಗ್ಯಾಳ ಗ್ರಾಮಕ್ಕೆ ಹೋಗಿದ್ದರು. ಅವರು ಗೂಗ್ಯಾಳ ಗೌಡರ ಮನೆಗೆ ನದಿ ದಾಟಿ ನಡೆದು ಹೋಗುವಷ್ಟರಲ್ಲಿ ರಾತ್ರಿಯಾಗಿತ್ತು. ಅವರ ಮನೆಯಲ್ಲಿನ ಅಡುಗೆಯವಳು ‘ಬನ್ನಿ ತಮ್ಮಗೋಳ್ರ್ಯಾ’ ಎಂದು ಪ್ರೀತಿಯಿಂದ ಕರೆದು ಕುಂಬಳಕಾಯಿಯನ್ನು ಕರಕರನೆ ಕೊರೆದು ಪಟಪಟ ಬಿಸಿರೊಟ್ಟಿ ಮಾಡಿ ಹೊಟ್ಟಿತುಂಬ ಉಣ್ರಿ ನಾಚಕೋ ಬ್ಯಾಡ್ರಿ ಎಂದು ಹೇಳಿದ್ದನ್ನು ನನ್ನ ತಂದೆ ಜೀವನದಲ್ಲಿ ಮರೆಯಲೇ ಇಲ್ಲ. ಅವರ ಮನಸ್ಸು ಕೃತಜ್ಞತಾಭಾವದ ಆಗರವಾಗಿತ್ತು. ಗೂಗ್ಯಾಳ ಗೌಡರು ಬಹಳ ಅಂತಃಕರಣದ ವ್ಯಕ್ತಿಯಾಗಿದ್ದರು. ಅವರ ಮನೆಯ ಕೆಲಸದವರೂ ಹಾಗೇ ಇದ್ದರು ಎಂದು ತಂದೆಯ ಅನುಭವದಿಂದ ತಿಳಿದುಬಂದಿತು.

ನೈಲಾನ್ ದಾರದಿಂದ ತಂದೆ ಮೀನಿನ ಬಲೆ ಹೆಣೆಯುತ್ತಿದ್ದರು. ಆಶ್ಚರ್ಯವೆಂದರೆ ಅದು ಕಂಪ್ಯೂಟರ್ ಸಹಾಯದಿಂದ ಮಾಡಿದ ಹಾಗೆ ನೀಟಾಗಿ ಇರುತ್ತಿತ್ತು. ಆ ಬಲೆಯ ರಂಧ್ರಗಳು ಕರಾರುವಾಕ್ಕಾಗಿ ಇರುತ್ತಿದ್ದವು. ಒಂದು ದಿನ ಭಾರಿ ಮಳೆಯ ರಾತ್ರಿ ಅವರು ತಮ್ಮ ಒಬ್ಬ ಗೆಳೆಯನೊಂದಿಗೆ ಮೀನು ಹಿಡಿಯಲು ಭೂತನಾಳ ಕೆರೆ ಸೇರುವ ಹಳ್ಳಕ್ಕೆ ಹೋಗಿದ್ದರು. ಬೆಳಿಗ್ಗೆ ಮೀನಿನ ರಾಶಿ ತಂದಾಗ ನನಗೆ ಆಶ್ವರ್ಯವಾಯಿತು. ಅಷ್ಟು ದೊಡ್ಡ ಮೀನುಗಳು ಮಳೆಯಲ್ಲಿ ಅದು ಹೇಗೆ ಬೀಳುತ್ತವೆ ಎಂದು ಯೋಚಿಸುತ್ತಿದ್ದೆ. ಮೀನುಗಳು ಆ ಹಳ್ಳದಲ್ಲೇ ಏಕೆ ಬೀಳುತ್ತವೆ ಎಂಬುದು ಯಕ್ಷಪ್ರಶ್ನೆಯಾಗಿ ಕಾಡುತ್ತಿತ್ತು. ಮೀನುಗಳು ಪ್ರವಾಹದ ವಿರುದ್ಧ ಈಜುತ್ತವೆ ಎಂಬುದು ಬಹಳ ದಿನಗಳ ನಂತರ ಗೊತ್ತಾಯಿತು. ಹಳ್ಳ ರಭಸದಿಂದ ಹರಿಯುವಾಗ ಕೆರೆಯ ಮೀನುಗಳು ಹಳ್ಳಕ್ಕೆ ಬರುತ್ತಿದ್ದವು. ಸತ್ತ ಮೀನುಗಳು ಮಾತ್ರ ಪ್ರವಾಹದ ಜೊತೆ ಹರಿಯುತ್ತವೆ.

ಮೀನು ಹಿಡಿದದ್ದರಲ್ಲಿ ಅರ್ಧ ಪಾಲು ಜೊತೆಗಾರನಿಗೆ ಕೊಟ್ಟು ಉಳಿದ ಅರ್ಧಭಾಗದಲ್ಲಿ ಒಂದಿಷ್ಟು ಇಟ್ಟುಕೊಳ್ಳುತ್ತಿದ್ದರು. ಉಳಿದದ್ದನ್ನು ಗಲ್ಲಿಯ ಮೀನುಪ್ರಿಯರು ಹಂಚಿಕೊಳ್ಳುತ್ತಿದ್ದರು. ಹಾವುಮೀನನ್ನು, ಅಂದರೆ ಹಾವಿನ ಹಾಗೆ ಉದ್ದವಾಗಿರುವ ಮೀನನ್ನು ನಾನು ಮೊದಲ ಬಾರಿಗೆ ನೋಡಿದ್ದು ಹೀಗೆ ತಂದ ಮೀನುಗಳ ರಾಶಿಯಲ್ಲೇ. ಸರಳ ಸಹಜವಾಗಿ ಮೂಡಿಬಂದ ಅವರ ದಾಸೋಹಭಾವ ನನಗೆ ಬಹಳ ಹಿಡಿಸುತ್ತಿತ್ತು.

ನಾಲ್ಕು ಗುಂಟೆ ಜಾಗದಲ್ಲಿ ಬೆಳೆದ ಬದನೆಕಾಯಿಗಳನ್ನು ಮನೆಗೆ ತರುವಾಗ ದಾರಿಯಲ್ಲಿ ಅನೇಕರು ಬೇಡಿ ಇಸಿದುಕೊಳ್ಳುತ್ತಿದ್ದರು. ಕೊನೆಗೆ ಮನೆಗೆ ಬಂದಾಗ ಬುಟ್ಟಿಯಲ್ಲಿ ನಾಲ್ಕು ಬದನೆಕಾಯಿ ಉಳಿದಿರುತ್ತಿದ್ದವು. ಯಾವುದೇ ತರಕಾರಿ ಬೆಳೆದರೂ ಅಂತಿಮ ಪರಿಣಾಮ ಇದೇ ಆಗಿರುತ್ತಿತ್ತು. ಅವರು ಹಾಲು ಮಾರುವಾಗ ಎಂದೂ ನೀರು ಬೆರೆಸುತ್ತಿರಲಿಲ್ಲ. ಹೀಗಾಗಿ ಜನರು ಹಾಲುಕೊಳ್ಳಲು ಹಾತೊರೆಯುತ್ತಿದ್ದರು. ದಿನಂಪ್ರತಿ ಹಾಲು ತೆಗೆದುಕೊಳ್ಳುವವರು ತಿಂಗಳಾದ ಮೇಲೆ ಹಣ ಕೊಡುತ್ತಿದ್ದರು. ಅವರಲ್ಲಿ ಯಾರಾದರೂ ಬಿಟ್ಟರೆ ಮಾತ್ರ ಇನ್ನೊಬ್ಬರಿಗೆ ಅವಕಾಶ ಸಿಗುತ್ತಿತ್ತು. ಕೆಲವರು ಆಕಳು ಕೊಳ್ಳಲು ಹಣ ಕೊಡುವುದಾಗಿ ಹೇಳುತ್ತಿದ್ದರು. ‘ನನ್ನ ಹಮಾಲಿ ಕೆಲಸದಿಂದಾಗಿ ಇದಕ್ಕಿಂತ ಹೆಚ್ಚು ಆಕಳುಗಳನ್ನು ಚೆನ್ನಾಗಿ ನೋಡಿಕೊಳ್ಳಲಿಕ್ಕಾಗದು’ ಎಂದು ಕೃತಜ್ಞತಾ ಭಾವದಿಂದ ನಿರಾಕರಿಸುತ್ತಿದ್ದರು. ಅವರಿಗೆ ಹಸುಗಳು ಕೇವಲ ಹಾಲು ಕೊಡುವ ಯಂತ್ರಗಳಾಗಿರಲಿಲ್ಲ. ಅವುಗಳೊಂದಿಗೆ ಅವರು ತಾದಾತ್ಮ್ಯ ಭಾವ ಹೊಂದುತ್ತಿದ್ದರು. ಅವುಗಳಿಗೆ ನ್ಯಾಯ ಒದಗಿಸದೆ ಹಾಲು ಪಡೆಯುವುದನ್ನು ಅವರು ಎಂದೂ ಇಷ್ಟಪಡಲಿಲ್ಲ. ಗಿರಾಕಿಗಳಿಗೆ ಹಾಲು ಕೊಡುವ ಸಂದರ್ಭದಲ್ಲಿ ಬಡ ಬಾಣಂತಿಯರು ಮುಜುಗರದೊಂದಿಗೆ ಕೂಸಿನ ಜೊತೆ ಮಿಳ್ಳಿ ತೆಗೆದುಕೊಂಡು ಬಂದರೆ ಅವರಿಗೆ ಕಾಳಜಿ ತೋರುತ್ತ ಮೊದಲು ಹಾಲು ಕೊಟ್ಟು ಕಳಿಸುತ್ತಿದ್ದರು. (ಕೆಲ ವರ್ಷಗಳ ಹಿಂದೆ ಸಿಂಗಾಪುರಕ್ಕೆ ಹೋದಾಗ, ಅಲ್ಲಿನ ಒಂದು ಪ್ರಮುಖ ಸ್ಥಳದಲ್ಲಿ, ಚಕ್ಕಡಿಯಲ್ಲಿ ಧಾನ್ಯದ ಚೀಲಗಳನ್ನು ಹೇರುತ್ತಿರುವ ಹಮಾಲರ ಕಂಚಿನ ಮೂರ್ತಿಗಳನ್ನು ಕಂಡೆ. ಬಹುಶಃ ಇಡೀ ಜಗತ್ತಿನಲ್ಲಿ ಹಮಾಲರನ್ನು ಮೂರ್ತಿ ಮಾಡಿ ಗೌರವಿಸಿದ ದೇಶವೆಂದರೆ ಸಿಂಗಾಪುರ ಮಾತ್ರ ಇರಬೇಕು. ಆಶ್ಚರ್ಯವೆಂದರೆ ಚಕ್ಕಡಿಯಲ್ಲಿ ನಿಂತು ಚೀಲವನ್ನು ಜೋಡಿಸಿಡುತ್ತಿರುವ ಹಮಾಲನ ಮೂರ್ತಿ ನನ್ನ ತಂದೆಯ ಹಾಗೆಯೆ ಇದೆ. ‘ಇದು ನನ್ನ ತಂದೆಯ ಮೂರ್ತಿಯೆ ಹೌದು’ ಎಂದು ತಿಳಿಯುವಷ್ಟು ಸಾಮಿಪ್ಯ ಹೊಂದಿದೆ.)

ನನ್ನ ತಂದೆ ಹಮಾಲಿ ಮಾಡುವ ಅಡತಿ ಅಂಗಡಿಗೆ ಒಬ್ಬ ಶ್ರೀಮಂತ ಮುಸ್ಲಿಂ ರೈತ ಕೃಷಿ ಉತ್ಪನ್ನಗಳನ್ನು ಮಾರಾಟಕ್ಕೆ ತೆಗೆದುಕೊಂಡು ಬರುತ್ತಿದ್ದರು. ಅವರಿಗೆ ಬಹಳ ದಿನಗಳ ನಂತರ ಗಂಡುಕೂಸು ಹುಟ್ಟಿತು. ಒಂದು ಸಲ ಅವರು ಆ ಪುಟ್ಟ ಮಗನನ್ನು ಅಡತಿ ಅಂಗಡಿಗೆ ಕರೆದುಕೊಂಡು ಬಂದಿದ್ದರು. ನನ್ನ ತಂದೆ ಆ ಮಗುವನ್ನು ಎತ್ತಿಕೊಂಡವೇಳೆಯಲ್ಲಿ ಅವರಿಗೆ ಬುತ್ತಿ ತೆಗೆದುಕೊಂಡು ಅಂಗಡಿಗೆ ಹೋಗಿದ್ದೆ. ಆ ಮಗುವಿಗೆ ಬೆಳ್ಳಿಯ ಉಡುದಾರ ಹಾಕಿದ್ದರು. ನೆದರು (ದೃಷ್ಟಿ) ಆಗಬಾರದೆಂದು ಹಣೆಗೆ ಕಪ್ಪು ಹಚ್ಚಿದ್ದರು. ಒಟ್ಟಾರೆ ಆ ಮಗು ಹಿಂದುಗಳ ಮಗುವಿನಂತೆಯೆ ಸಿಂಗಾರಗೊಂಡಿತ್ತು. ‘ನೋಡು ಅವರು ಮಗುವನ್ನು ಎಷ್ಟು ಪ್ರೀತಿಯಿಂದ ಸಿಂಗರಿಸಿದ್ದಾರೆ’ ಎಂದು ತಂದೆ ಖುಷಿ ವ್ಯಕ್ತಪಡಿಸಿದರು.

ತಂದೆಯ ಉದಾತ್ತ ಭಾವದಲ್ಲಿ ಯಾರೂ ಹೊರಗಿನವರಾಗಿರಲಿಲ್ಲ. ಯಾವ ಜಾತಿ ಧರ್ಮಗಳೂ ಅವರಿಂದ ದೂರವಾಗಲಿಲ್ಲ. ಅನೇಕ ಕಾಯಕಗಳ ಕೌಶಲ ಹೊಂದಿದ್ದ ಅವರು ಮಾದರಿ ಹಮಾಲರಾಗಿದ್ದರು. ಓದು ಬರಹ ಬರದಿದ್ದರೂ ಮನದಲ್ಲೇ ಸರಿಯಾಗಿ ಲೆಕ್ಕಪತ್ರ ಇಡುತ್ತಿದ್ದರು.

ನನ್ನ ತಂದೆಗೆ ಒಬ್ಬ ಶ್ರೀಮಂತ ಕುರುಬ ಮಿತ್ರರಿದ್ದರು. ಅವರಿಬ್ಬರ ಮಧ್ಯೆ ಗಾಢವಾದ ಸಂಬಂಧ ಬೆಳೆದಿತ್ತು. ನನ್ನ ತಂದೆಯ ಮಾತಿಗೆ ಅವರು ಬಹಳ ಬೆಲೆ ಕೊಡುತ್ತಿದ್ದರು. ಒಂದು ದಿನ ಅವರ ಮಗಳಿಗೆ ಗಂಡು ನೋಡಲು ಅರ್ಜುನಗಿ ಗ್ರಾಮಕ್ಕೆ ಹೋದರು. ಅಡತಿಗೆ ಮಾಲು ತೆಗೆದುಕೊಂಡು ಬರುವ ಊರಿನ ಒಬ್ಬ ಬಿಚಾಯತ (ರೈತ) ಅಲ್ಲಿನ ಪ್ರತಿಷ್ಠಿತ ಕುರುಬರ ಮನೆತನದ ಬಗ್ಗೆ ಹೇಳಿದ್ದ. ಅವರು ಹೆಣ್ಣು ಹುಡುಕುತ್ತಿದ್ದಾರೆ ಎಂದೂ ತಿಳಿಸಿದ್ದ. ಆ ರೈತನ ಮಾತಿನಿಂದ ಉತ್ಸುಕರಾದ ನನ್ನ ತಂದೆ, ಗೆಳೆಯನ ಮಗಳಿಗಾಗಿ ಗಂಡು ನೋಡಲು ಆ ಗ್ರಾಮಕ್ಕೆ ಹೋದರು. ಅವರ ಮನೆತನ, ನಡಾವಳಿ ಮುಂತಾದವುಗಳನ್ನು ಗಮನಿಸಿ ವಾಪಸ್ ಬಂದು ಖುಷಿಯಿಂದ ತಿಳಿಸಿದರು. ಕೆಲ ದಿನಗಳ ನಂತರ ಆ ಶ್ರೀಮಂತ ಕುರುಬ ಮಿತ್ರ ಬಂದು ‘ಅಬ್ದುಲ್‍ಸಾಬ್, ಎಲ್ಲ ವಿಚಾರಿಸಿದೆ. ಸಾಲಾವಳಿ (ಜಾತಕ) ಕೂಡಿ ಬರುವುದಿಲ್ಲ. ಅವರದು ಉಣ್ಣೆ ಕಂಕಣ ನಮ್ಮದು ಹತ್ತಿ ಕಂಕಣ ಎಂದು ತಿಳಿಸಿದರು. ನನ್ನ ತಂದೆ ಆಯ್ತು ಇನ್ನೊಂದು ಕಡೆ ನೋಡೋಣ ಎಂದರು. ಅವರು ಸ್ವಂತಕ್ಕೆ ಇಂಥ ಚೌಕಟ್ಟುಗಳಲ್ಲಿ ನಂಬಿಕೆ ಇಲ್ಲದಿದ್ದರೂ ಇನ್ನೊಬ್ಬರ ನಂಬಿಕೆಯನ್ನು ಪ್ರಶ್ನಿಸುತ್ತಿದ್ದಿಲ್ಲ.

ನಮ್ಮ ಮನೆಯಲ್ಲಿ ನಡೆದ ಯಾವುದೋ ಸಮಾರಂಭದಲ್ಲಿ ಓಣಿಯಲ್ಲಿದ್ದ ನಾಲ್ಕೈದು ದಲಿತ ಕೂಲಿಕಾರರನ್ನೂ ಊಟಕ್ಕೆ ಕರೆದಿದ್ದರು. ರಾತ್ರಿ ಬಹಳ ಹೊತ್ತಿನ ಮೇಲೆ ಅವರು ತಮ್ಮ ಗಂಗಾಳ(ಊಟದ ತಟ್ಟೆ)ಗಳನ್ನು ತೆಗೆದುಕೊಂಡು ಬಂದರು. ಅವುಗಳನ್ನೇಕೆ ತಂದಿರಿ ಇಲ್ಲಿ ನಿಮಗೆ ವ್ಯವಸ್ಥೆ ಇದೆ ಎಂದರು. ಅವರು ಕೇಳಲಿಲ್ಲ. ‘ನಿಯಮ ಮೀರಿದರೆ ನಾವು ನರಕಕ್ಕೆ ಹೋಗ ಬೇಕಾಗುವುದು’ ಎಂದು ಅವರಲ್ಲಿನ ಹಿರಿಯರೊಬ್ಬರು ದೈನ್ಯದಿಂದ ಹೇಳಿದರು. ನನ್ನ ತಂದೆ ಮೌನವಾಗಿ ಅವರ ಗಂಗಾಳದಲ್ಲೇ ಊಟಕ್ಕೆ ನೀಡಿದರು. ಅವರು ಅಂಗಳದ ಒಂದು ಮೂಲೆಯಲ್ಲಿ ಕುಳಿತು ಊಟ ಮಾಡಿ ಹೋದರು.

ಅಡತಿ ಅಂಗಡಿಯಲ್ಲಿ ಬಹಳವೆಂದರೆ ಮೂವರು ಖಾಯಂ ಹಮಾಲರು ಇರುತ್ತಿದ್ದರು. ಹಮಾಲರು ತಮ್ಮ ಕೈಕೆಳಗೆ ಒಂದಿಬ್ಬರು ಹುಡುಗರನ್ನು ಇಟ್ಟುಕೊಳ್ಳಬಹುದಿತ್ತು. ಆದರೆ ಹಾಗೆ ಇಟ್ಟುಕೊಂಡವರು ಆ ಹುಡುಗರ ಖರ್ಚುವೆಚ್ಚ ನೋಡಿಕೊಳ್ಳಬೇಕಿತ್ತು. ನನ್ನ ತಂದೆಯ ಕೈಕೆಳಗೆ ಇಬ್ಬರು ಗೊಲ್ಲರ ಹುಡುಗರು ಕೆಲಸ ಮಾಡುತ್ತಿದ್ದರು. (ವಿಜಾಪುರದಲ್ಲಿ ಸಾಂಪ್ರದಾಯಿಕವಾಗಿ ಹಂದಿ ಸಾಕಣೆ ಮಾಡುವವರಿಗೆ ‘ಗೊಲ್ಲರು’ ಎಂದು ಕರೆಯುತ್ತಾರೆ.) ಅವರು ನನ್ನ ತಂದೆಯ ಜೊತೆಗೇ ಇರುತ್ತಿದ್ದರು. ನಾನು ಅಂಗಡಿಯ ಕಡೆಗೆ ಹೋದಾಗ ಒಂದೊಂದು ಸಲ ಸೇವು, ಚುರಮುರಿ (ಮಂಡಕ್ಕಿ), ಹುರಿದ ಸೇಂಗಾ, ಉಳ್ಳಾಗಡ್ಡಿ, ಹಸಿಮೆಣಸಿನಕಾಯಿ ತರಿಸಿ ಕಬ್ಬಿಣಬುಟ್ಟಿಯಲ್ಲಿ ಮಿಕ್ಸ್ ಮಾಡುತ್ತಿದ್ದರು. ನಾವು ನಾಲ್ವರೂ ಕೂಡಿ ತಿಂದೆವು.

ಒಂದು ಸಲ ಅವರ ಮೂವರು ಹಮಾಲ ಮಿತ್ರರು ಮನೆಗೆ ಬಂದಾಗ ಇಂಥದೆ ‘ಪಾರ್ಟಿ’ ಮಾಡಿದ್ದರು. ಆದರೆ ತಾಯಿ ಇವೆಲ್ಲ ಸೇರಿಸಿ ಒಗ್ಗರಣೆ ಹಾಕಿ ಚೂಡಾ ಮಾಡಿ ರಾಶಿ ಹಾಕಿದ್ದಳು. ಬಂದವರಲ್ಲಿ ಅವರ ಆಪ್ತಮಿತ್ರ ಶಿವಪ್ಪ ಕೂಡ ಇದ್ದರು. ಅಂದು ನನ್ನ ತಂದೆ ಸಂಭ್ರಮಿಸಿದ್ದು ಒಂದು ರೂಪಕವಾಗಿ ಮನದಲ್ಲಿ ಉಳಿದಿದೆ. ಅವರೆಲ್ಲ ಚೂಡಾ ತಿಂದ ಮೇಲೆ ಲಿಂಗಾಯತರಾದ ಶಿವಪ್ಪನವರಿಗೆ ಸಮೀಪದ ಲಿಂಗಾಯತರ ಮನೆಯಿಂದ ನೀರು ತಂದು ಕೊಟ್ಟ ನಂತರ ಅವರು ನೀರು ಕುಡಿದರು! ಆದರೆ ತಾಯಿ ಮಾಡಿಕೊಟ್ಟ ಚಹಾವನ್ನು ಎಲ್ಲರ ಜೊತೆ ಶಿವಪ್ಪ ಅವರೂ ಕುಡಿದರು. ಇದೆಲ್ಲ ನನಗೆ ವಿಚಿತ್ರ ಎನಿಸಿತು. ಅದೇ ನಳದ ನೀರು. ಲಿಂಗಾಯತರ ಮನೆಗೆ ಹೊಕ್ಕಾಗ ಅದು ಹೇಗೆ ಶುದ್ಧವಾಗುವುದು? ಆ ‘ಶುದ್ಧ’ ನೀರನ್ನು ನನ್ನ ತಂದೆ ತರುವಾಗ ಅಶುದ್ಧವಾಗುವುದಿಲ್ಲವೆ? ಹೀಗೆ ಏನೆಲ್ಲ ಪ್ರಶ್ನೆಗಳು ಮನದಲ್ಲಿ ಉದ್ಭವಿಸಿದವು. ಅವರೆಲ್ಲ ಹೋದಮೇಲೆ ತಂದೆಗೆ ಕೇಳಿಯೆಬಿಟ್ಟೆ. ‘ನಾವು ಯಾರದೇ ಜೀವನವಿಧಾನವನ್ನು ಪ್ರಶ್ನಿಸಬಾರದು. ಅವರ ನಂಬಿಕೆ ಅವರಿಗೆ, ಅವರ ಜೊತೆಗಿನ ನಮ್ಮ ಪ್ರೀತಿಯ ಸಂಬಂಧ ಮಾತ್ರ ನಮಗೆ’ ಎನ್ನುವ ರೀತಿಯಲ್ಲಿ ಅವರು ಹೇಳಿದರು.

ಅವರು ಎಂದೂ ಧರ್ಮಗ್ರಂಥ ಹಿಡಿಯಲಿಲ್ಲ. ಏಕೆಂದರೆ ಓದು ಗೊತ್ತಿರಲಿಲ್ಲ. ಅವರು ಎಂದೂ ಮಾನವಧರ್ಮ ಬಿಡಲಿಲ್ಲ. ಏಕೆಂದರೆ ದ್ವೇಷ ಗೊತ್ತಿರಲಿಲ್ಲ. ಅಹಂಕಾರ ಅಳಿಸಿಕೊಂಡು, ಸ್ವಾಭಿಮಾನ ಉಳಿಸಿಕೊಂಡು ಬದುಕಲು ಕಲಿತದ್ದು ನನ್ನ ತಂದೆಯಿಂದಲೆ.

(ಸುಲಗಾಯಿ ಗಿಡ)

ಬೇಸಗೆ ರಜೆಯಲ್ಲಿ ಅನೇಕ ಸಲ ಕಾಕಾ ಕಾರಖಾನೀಸರ ಬೋರ್ಡಿಂಗಿನ ದಲಿತ ಮಿತ್ರರ ಜೊತೆ ಅವರ ಊರುಗಳಿಗೆ ಹೋಗಿದ್ದೇನೆ. ಒಂದು ಸಲ ಬೇಸಗೆಯಲ್ಲಿ ಒಬ್ಬ ಹುಡುಗನ ಹಳ್ಳಿಗೆ ಹೋದೆ. ಅದು ವಿಜಾಪುರದಿಂದ 40 ಕಿಲೋ ಮೀಟರ್‍ಗಳಷ್ಟು ದೂರದಲ್ಲಿತ್ತು. ಆ ಹಳ್ಳಿಯ ಹೆಸರು ಮರೆತಿದ್ದೇನೆ. ಸಂಜೆ ಬಿಟ್ಟ ಬಸ್ಸು ರಾತ್ರಿ ಸುಮಾರು ಒಂಬತ್ತು ಗಂಟೆಗೆ ಆ ಹಳ್ಳಿಯನ್ನು ತಲುಪಿತು. ಒಂದಿಷ್ಟು ದೊಡ್ಡ ಗುಡಸಲಿನಲ್ಲಿ ಹೊಗೆ ತುಂಬಿಕೊಂಡಿತ್ತು. ದನದ ಒಣಗಿಸಿದ ಮಾಂಸವನ್ನು ಇಳಿಬಿಟ್ಟಿದ್ದನ್ನು ಚಿಮಣಿ ಬೆಳಕಲ್ಲಿ ನೋಡಿ ಗಾಬರಿಯಾದೆ. (ದೇವತೆಗೆ ಬಲಿ ಕೊಟ್ಟ ಪ್ರಾಣಿಗಳ ಮಾಂಸ ಹೆಚ್ಚಾಗಿ ಸಂಗ್ರಹಿಸಿದ ಮೇಲೆ ಅದು ಕೆಡದಂತೆ ಇಡುವ ಕ್ರಮವಿದು. ಮೊಳಕೈ ಗಾತ್ರದ ಮಾಂಸದ ಪಟ್ಟಿಗಳನ್ನು ಮಾಡಿದ ನಂತರ ಅವುಗಳನ್ನು ಚೆನ್ನಾಗಿ ಒಣಗಿಸಿದ ಮೇಲೆ ಹೀಗೆ ಇಳಿಬಿಡುತ್ತಾರೆ. ಈ ರೀತಿ ಸಂಸ್ಕರಿಸಿದ ಒಣ ಮಾಂಸವನ್ನು ಬಹಳ ದಿನಗಳವರೆಗೆ ಕೆಡದಂತೆ ಇಡಬಹುದು. ದಲಿತರು, ಅಲೆಮಾರಿಗಳು ಮತ್ತು ಆದಿವಾಸಿಗಳಲ್ಲಿ ಹೀಗೆ ಸಂಸ್ಕರಿಸಿ ಒಣ ಮಾಂಸ ಸಂಗ್ರಹಿಸಿ ಇಡುವ ಪದ್ಧತಿ ಇದೆ.) ಆದರೆ ಅವನ ತಾಯಿಯ ಆತ್ಮೀಯ ಮಾತುಗಳಿಂದ ಇದನ್ನು ಮರೆತೆ. ದಣಿವಾಗಿದ್ದರಿಂದ ನಾವು ಊಟ ಮಾಡಿ ಮಲಗಿದೆವು.

ಬೆಳಗಾದಾಗ ಅವನ ತಮ್ಮಂದಿರು ಮತ್ತು ತಂಗಿಯರನ್ನು ನೋಡಿ ಕರುಳು ಕಿತ್ತುಬಂದಂತಾಯಿತು. ಅವು ದೊಡ್ಡದಾದ ಹರುಕು ಬಟ್ಟೆಯನ್ನು ಹಾಕಿಕೊಂಡು ನಿಂತಿದ್ದವು. ಅವು ತೊಟ್ಟ ಅಂಗಿಗಳು ಪಾದದವರೆಗೆ ಬಂದಿದ್ದವು. ಒಂದು ಹುಡುಗಿ ಹಾಕಿಕೊಂಡ ಅಂಗಿಯಂತೂ ಬೆನ್ನೆಲ್ಲ ಕಾಣುವಷ್ಟು ಹರಿದಿತ್ತು. ಉಳ್ಳವರು ತೊಟ್ಟು ಹಳೆಯದಾದ ಮೇಲೆ ಕೊಟ್ಟ ಬಟ್ಟೆಗಳು ಅವೆಲ್ಲ ಎಂಬುದನ್ನು ಅರಿಯಲು ಬಹಳ ಸಮಯ ಬೇಕಾಗಲಿಲ್ಲ.

 (ಬಡ್ಡರ್ಗಿ ಅಂದರೆ ಒಣಮಾಂಸ)

ಆ ಮಕ್ಕಳು ಎದ್ದ ಮೇಲೆ ಬೋಗುಣಿ ಹಿಡಿದುಕೊಂಡು ಹೋಗಿ, ಸ್ವಲ್ಪ ಹೊತ್ತಿನ ನಂತರ ಹುಗ್ಗಿಯನ್ನು ತೆಗೆದುಕೊಂಡು ಬಂದವು. ಹಿಂದಿನ ದಿನ ಆ ಹಳ್ಳಿಯಲ್ಲಿ ಶ್ರೀಮಂತನೊಬ್ಬನ ಮನೆಯಲ್ಲಿ ಮದುವೆ ಇತ್ತಂತೆ. ಲಗ್ನದಲ್ಲಿ ಉಳಿದ ಹುಗ್ಗಿಯನ್ನು ಆತ ಬೆಳಿಗ್ಗೆ ಹಂಚಿಬಿಟ್ಟ. ನೂಕುನುಗ್ಗಲಿನಲ್ಲಿ ಹುಗ್ಗಿಯನ್ನು ತೆಗೆದುಕೊಳ್ಳುವ ಅನುಭವವನ್ನು ಮಕ್ಕಳು ತಾಯಿಗೆ ಹೇಳಿದವು. ಹುಗ್ಗಿ ಹುಳಿಯಾಗಿತ್ತು. ತಿಂದೆವು.

ನಂತರ ನನ್ನ ಗೆಳೆಯ ಆ ಹುಡುಗರನ್ನು ಕರೆದು, ಸಿಕ್ಕಾಪಟ್ಟೆ ಬೆಳೆದ ಅವರ ತಲೆಗೂದಲನ್ನು ಕತ್ತರಿಸಿಬಿಟ್ಟ. ಸರಿಯಾಗಿ ಕೂದಲು ಕತ್ತರಿಸುವ ಅನುಭವ ಇಲ್ಲದ ಕಾರಣ ಹುಡುಗರ ತಲೆಗಳು ಹಂಡಬಂಡವಾಗಿ ಮೊದಲಿಗಿಂತಲೂ ಅಸಹ್ಯವಾಗಿ ಕಂಡವು.

ಒಂದು ಬೇಸಗೆಯಲ್ಲಿ ವಿಜಾಪುರದಿಂದ 30 ಕಿಲೋ ಮೀಟರ್‍ಗಳಷ್ಟು ದೂರದ ಮನಗೂಳಿ ಗ್ರಾಮಕ್ಕೆ ಇಬ್ಬರು ಬೋರ್ಡಿಂಗ್ ಗೆಳೆಯರ ಜೊತೆ ಹೋದೆ. ಒಬ್ಬ ದಲಿತ ಸಮಾಜದ ಒಂದು ವರ್ಗಕ್ಕೆ ಸೇರಿದವನಾಗಿದ್ದರೆ, ಇನ್ನೊಬ್ಬ ದಲಿತ ಸಮಾಜದ ಇನ್ನೊಂದು ವರ್ಗಕ್ಕೆ ಸೇರಿದವನಾಗಿದ್ದ. ಅವರಿಬ್ಬರೂ ನನಗೆ ಆತ್ಮೀಯರಾಗಿದ್ದರು. ಮನಗೂಳಿಯಲ್ಲಿ ಬಸ್ ಇಳಿದ ಮೇಲೆ ನೇರವಾಗಿ ಸಮೀಪದಲ್ಲೇ ಇದ್ದ, ಒಂದು ವರ್ಗಕ್ಕೆ ಸೇರಿದ ಗೆಳೆಯನ ಮನೆಗೆ ಹೋದೆವು. ಮಗ ಬರುವನೆಂಬ ಮಮತೆಯಿಂದ ಅವನ ತಾಯಿ ಹೋಳಿಗೆ ಮಾಡಿದ್ದಳು. ನಮಗೂ ಊಟ ಮಾಡಲು ಒತ್ತಾಯಿಸಿದಳು. ನಾವು ಮೂವರು ಕೂಡಿ ಊಟ ಮಾಡಿದೆವು. ನಂತರ ಮುಂದುವರೆದು, ನಾನು ಮತ್ತು  ದಲಿತ ಸಮಾಜದ ಮತ್ತೊಂದು ವರ್ಗಕ್ಕೆ ಸೇರಿದ ಗೆಳೆಯನ ಜೊತೆ ಅವನ ಮನೆಗೆ ಹೋದೆ. ಕೈಕಾಲು ಮುಖ ತೊಳೆದುಕೊಂಡು ಕುಳಿತೆವು. ಅವನ ಅಕ್ಕ ಊಟಕ್ಕೆ ರೆಡಿ ಮಾಡಿ ಕರೆದಳು. ಆತ ಮೌನವಾಗಿದ್ದ. ಊಟಕ್ಕೆ ಏಳುವ ತಯಾರಿಯಲ್ಲಿದ್ದ. ನನಗಂತೂ ಮತ್ತೆ ಊಟ ಮಾಡಲು ಸಾಧ್ಯವೇ ಇರಲಿಲ್ಲ. ನಾವಿಬ್ಬರು ಅದಾಗಲೇ ಊಟ ಮಾಡಿ ಬಂದದ್ದನ್ನು ತಿಳಿಸಿದೆ. ಅವನ ಅಕ್ಕ ಬ್ರಹ್ಮಾಂಡಕ್ಕೇ ಬೆಂಕಿ ಬಿದ್ದವರ ಹಾಗೆ ಧ್ವನಿ ತೆಗೆದಳು. ತಮ್ಮನಿಗೆ ಬಹಳ ಬೈಯ್ದಳು. ‘ ಆ ಜಾತಿಯವರ ಮನೆಯಲ್ಲಿ ತಿಂದು ಬಂದೆಯಾ ಕುಲಗೇಡಿ’ ಎಂದು ಹೀಯಾಳಿಸಿದಳು. ಈ ಹೊಸ ಅನುಭವದಿಂದ ಬೆಚ್ಚಿಬಿದ್ದೆ. ನನ್ನ ಗೆಳೆಯನಂತೂ ಗರ ಬಡಿದವರ ಹಾಗೆ ಮೌನವಾಗಿ ಕುಳಿತ. ನಾನು ಅಂದೇ ವಿಜಾಪುರಕ್ಕೆ ವಾಪಸ್ ಬಂದೆ. (ಈಗ ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ವೈಚಾರಿಕತೆಯೂ ತಕ್ಕಮಟ್ಟಿಗೆ ಬೆಳೆದಿದೆ. ಆದರೆ ಅನೇಕ ಮೇಲ್ಜಾತಿಯವರ ಹಾಗೆ ಕೆಲ ವಿದ್ಯಾವಂತ ಅಸ್ಪೃಶ್ಯರಲ್ಲಿ ಕೂಡ ಈ ಜಾತಿ ಪ್ರಜ್ಞೆ ಇನ್ನೂ ಜೀವಂತವಾಗಿದೆ. ನಾನು ಗುಲ್ಬರ್ಗದಲ್ಲಿದ್ದಾಗ ನಡೆದ ಘಟನೆ ಇದು. ದಲಿತ ಸಮಾಜದ ಒಂದು ವರ್ಗಕ್ಕೆ ಸೇರಿದ ಯುವತಿ ಮತ್ತು  ಅದೇ ಸಮಾಜದ ಮತ್ತೊಂದು ವರ್ಗಕ್ಕೆ ಸೇರಿದ ಯುವಕ ಪ್ರೀತಿಸಿದರು. ಅವರು ಸ್ನಾತಕೋತ್ತರ ಪದವೀಧರರಾಗಿದ್ದರು. ಇಬ್ಬರೂ ಮದುವೆಯಾಗಲು ಪ್ರಯತ್ನಿಸಿದರು. ಆ ಪರಿಚಿತ ಯುವತಿ, ನಾನು ಸುದ್ದಿ ಸಂಪಾದಕನಾಗಿದ್ದ ಪತ್ರಿಕಾಲಯಕ್ಕೆ ಬಂದು ತನ್ನ ಅಳಲನ್ನು ತೋಡಿಕೊಂಡಳು. ನಾವು ಗೆಳೆಯರು ಸೇರಿ ಮದುವೆ ಮಾಡುವುದಾಗಿಯೂ ರಕ್ಷಣೆ ಕೊಡುವುದಾಗಿಯೂ ತಿಳಿಸಿದೆ. ಆದರೆ ಆಕೆ ಮತ್ತೆ ಬರಲಿಲ್ಲ. ಆರು ತಿಂಗಳ ನಂತರ ಬೀದಿಯಲ್ಲಿ ಸಿಕ್ಕಳು. ವಿಚಾರಿಸಿದೆ. ‘ನಮ್ಮ ಸಂಸ್ಕೃತಿ ಅವರ ಸಂಸ್ಕೃತಿ ಹೊಂದೂದಿಲ್ಲ ಅಂತ ಮನ್ಯಾಗ ಹೇಳದ್ರಿ. ನನಗೂ ಹಂಗ ಅನಸ್ತ್ರೀ. ದೂರಾದೇವ್ರಿ’ ಎಂದಳು.)

ಕಾಕಾರ ಬೋರ್ಡಿಂಗಲ್ಲಿ ಮ್ಯಾಟ್ರಿಕ್ ಓದುತ್ತಿದ್ದ ಒಬ್ಬ ದಲಿತ ಹುಡುಗ ತನ್ನ ಸಂಬಂಧಿಕರ ಹುಡುಗಿಯನ್ನು ಪ್ರೀತಿಸುತ್ತಿದ್ದ. ಅವಳಿಗೂ ಇವನ ಜೊತೆ ಮದುವೆಯಾಗುವ ಇಚ್ಛೆ ಇತ್ತು. ಆಕೆಯ ತಂದೆ ತಾಯಿಗಳು ಅವಳನ್ನು ದೇವರಿಗೆ ಬಿಡುವ ವಿಚಾರದಲ್ಲಿದ್ದರು. ಹೀಗೆ ತಮ್ಮ ಹೆಣ್ಣುಮಕ್ಕಳನ್ನು ದೇವದಾಸಿಯಾಗಿಸುವುದರಿಂದ ಆರ್ಥಿಕ ಸಂಕಷ್ಟಗಳಿಂದ ಪಾರಾಗಬಹುದೆಂಬ ಆಶಯ ಅವರದಾಗಿತ್ತು. ಕೊನೆಗೆ ಯಾರ ಮಾತೂ ಕೇಳದೆ ದೇವದಾಸಿಯನ್ನಾಗಿಸಿ ಮುಂಬೈ ಕಾಮಾಟಿಪುರಕ್ಕೆ ಕಳುಹಿಸಿದರು! ಆ ಹುಡುಗ ಕೆಲ ದಿನ ಹುಚ್ಚು ಹಿಡಿದವನಂತೆ ತಿರುಗಿದ.

ನನ್ನ ಹಿರಿಯ ದಲಿತ ಮಿತ್ರನೊಬ್ಬನ ಇಬ್ಬರು ಅಕ್ಕಂದಿರು ಮುಂಬೈನ ಕಾಮಾಟಿಪುರದಲ್ಲಿ ಕಸಬಿನಿ (ವೇಶ್ಯೆ)ಯರಾಗಿದ್ದರು. ನೌಕರಿ ಸಿಕ್ಕ ಮೇಲೆ ಆತ ಅವರ ವೇಶ್ಯಾವೃತ್ತಿಯನ್ನು ಬಿಡಿಸಿ ಮನೆಗೆ ಕರೆದುಕೊಂಡು ಬಂದ. ಆತ ಮದುವೆಯಾಗಿರಲಿಲ್ಲ. ಇಬ್ಬರೂ ಅಕ್ಕಂದಿರು ಅವನಿಗೆ ಅಡುಗೆ, ಮನೆಗೆಲಸ ಮುಂತಾದವುಗಳನ್ನು ಮಾಡುತ್ತ ಚೆನ್ನಾಗಿದ್ದರು. ಅವರ ಮಾತುಗಳನ್ನು ಕೇಳುವುದಕ್ಕೆ ಬಹಳ ಖುಷಿ ಎನಿಸುತ್ತಿತ್ತು. ಅವರ ವಾಗ್ವಾದದ ಮಾತುಗಳು ವ್ಯಂಗ್ಯಮಿಶ್ರಿತ ಹಾಸ್ಯದಿಂದ ಕೂಡಿದವುಗಳಾಗಿದ್ದವು. ಅವರಿಬ್ಬರ ಮಧ್ಯೆ ತಮಾಷೆಯ ಮಾತಿನ ಸ್ಪರ್ಧೆ ಏರ್ಪಡುತ್ತಿತ್ತು. ಅಂಥ ಕನ್ನಡ ಭಾಷೆಯ ವೈಶಿಷ್ಟ್ಯವನ್ನು ಮುಂದೆ ನಾನು ಯಾರಲ್ಲಿಯೂ ಕಾಣಲಿಲ್ಲ. ಹೀಗೆ ಖುಷಿಪಡುತ್ತ ಇರಬೇಕೆಂದು ಅವರು ಬಯಸಿದರೂ ಆಗಲಿಲ್ಲ. ಐದಾರು ತಿಂಗಳುಗಳು ಕಳೆದ ನಂತರ ಒಂದು ದಿನ ಅವರು ಹೇಳದೆ ಕೇಳದೆ ಮನೆಬಿಟ್ಟು ಮುಂಬೈಗೆ ಹೊರಟು ಹೋದರು!

(ಚಿತ್ರಗಳು: ಸುನೀಲಕುಮಾರ ಸುಧಾಕರ)