“ಕಾವ್ಯಕ್ಕಾ, ಗಿಡಗಳ ಒಳಗೆ ಇರೋ ಆಹಾರವಾಹಕ – ಜಲವಾಹಕಗಳ ಹಾಗೆ ನಮ್ಮೊಳಗೆ ಇರೋ ‘ಪೈಪ್’ಗಳ ಬಗ್ಗೆ ತಿಳ್ಸ್ತೀನಿ ಅಂದಿದ್ಯಲ್ಲ?” ಎಂದಳು. “ಜಾಣೆ ವಿಭಾ, ಮರ್ಯೋದೇ ಇಲ್ಲ ಅಲ್ವಾ? ಹೇಳ್ತೀನಿ ಕೇಳು. ಏನ್ಮಾಡೋದು, ನಾವು ಗಿಡ ಮರಗಳ ಹಾಗೆ ನಮ್ಮೊಳಗೇ ‘ಬೆಳಕಡುಗೆ’ ಅಂದ್ರೆ ‘ಫೋಟೋಸಿಂಥೆಸಿಸ್’ ಮಾಡಿ ಆಹಾರ ತಯಾರು ಮಾಡ್ಕೊಳ್ಳಕ್ಕಾಗಲ್ವಲ್ಲ? ಅದಕ್ಕೆ ದಿನವಿಡೀ ಅಡುಗೆ-ತಿಂಡಿ ಅದೂ ಇದೂ ಅಂತ ಮಾಡ್ತಾ ಇರ್ಬೇಕು!” ಎಂದು ಮಾತು ಮುಂದುವರಿಸುವಾಗ ವಿಭಾ “ಹೇ ಹೋಗಕ್ಕಾ! ನಮ್ಮೊಳಗೇ ನಾವು ಗಿಡಗಳ ಹಾಗೆ ಊಟ ರೆಡಿ ಮಾಡಿಕೊಂಡ್ಬಿಟ್ರೆ, ರುಚಿಯಾದ ಚುರುಮುರಿ, ಪಾನಿಪೂರಿ ಎಲ್ಲಾ ಮಿಸ್ ಆಗಲ್ವಾ? ನೀನೊಳ್ಳೆ! ಇವಾಗಿರೋದೇ ಸರಿಯಾಗಿದೆ ನೋಡು!” ಎಂದಳು.
ಕ್ಷಮಾ ವಿ. ಭಾನುಪ್ರಕಾಶ್ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ಯಲ್ಲಿ ಎರಡನೆಯ ಕತೆ
ಸೂರಕ್ಕಿ (ಸನ್ ಬರ್ಡ್), ಪಿಕಳಾರ(ಬುಲ್ಬುಲ್) ಹಕ್ಕಿಗಳ ಇಂಚರದ ಸದ್ದನ್ನು ಕೇಳಿ ವಿಭಾಗೆ ಎಚ್ಚರವಾದಾಗ, ಆಗಲೇ ಅಕ್ಕ ಏನೋ ಓದುತ್ತಾ ಕುಳಿತಿದ್ದಳು. ‘ಗುಡ್ ಮಾರ್ನಿಂಗ್’ ಹೇಳುತ್ತಾ ಎದ್ದು ಬಂದಾಗ, ಹೊರಗೆ ಭಾವ ವ್ಯಾಯಾಮ ಮಾಡ್ತಾ ಇದ್ದದ್ದು ಕಾಣಿಸಿತು; “ಅರೆ! ಯಾವಾಗ ಬಂದ್ರಿ ಭಾವ?” ಎನ್ನುತ್ತಾ ಹೊರಗೇ ಹೋದಳು ವಿಭಾ. “ಬಾರೋ ವಿಭಾ! ಹೇಗಿದಿಯಾ?” ಎಂದರು ಪ್ರಕಾಶ್. “ನಾನು ಆರಾಮ್ ನೋಡಿ. ಏನು ಅಷ್ಟು ಲೇಟಾಗಿ ಬಂದು, ಆಗ್ಲೇ ಎದ್ದು ವ್ಯಾಯಾಮ ಮಾಡ್ತಾ ಇದೀರಾ?” ಎಂದಳು ವಿಭಾ. “ಹೌದು ಕಣೋ, ಆರೋಗ್ಯಕ್ಕಾಗಿ ಮಾಡ್ಬೇಕಲ್ಲ ಮತ್ತೆ? ಇಲ್ಲಿ ನೋಡು ಹೇಗಿದೆ ಕಲ್ಲು – ಕಲ್ಲಿನ ಹಾಗಿದೆ ಬೈಸೆಪ್ಸ್!” ಅಂತ ನಗೆಯಾಡಿದರು. ಆಗ, ಅವರ ಕೈಯಲ್ಲಿ ಉಬ್ಬಿದ್ದ ನರಗಳನ್ನು ಕಂಡು, ಅಕ್ಕ ಹೇಳಿದ್ದ ನರಗಳ ಬಗೆಗಿನ ಮಾತುಕತೆ ನೆನಪಾಗಿ, “ಸೂಪರ್ ಭಾವ, ನೀವು ಮುಂದುವರೆಸಿ, ನಾನು ಅಕ್ಕನ ಹತ್ರ ಮಾತಾಡೋಕಿದೆ” ಅಂತ ಕಾವ್ಯಳನ್ನು ಹುಡುಕುತ್ತಾ ಒಳಹೋದಳು. ಓದುತ್ತಾ ಕುಳಿತಿದ್ದ ಕಾವ್ಯ, ವಿಭಾಳನ್ನು ನೋಡಿ, “ನೀನು ಬ್ರಶ್ ಮಾಡಿ ಬಾ, ನಾನು ಕಾಫಿ ತರುವೆ, ಅಂಗಳದಲ್ಲಿ ಕೂತು ಮಾತಾಡುವಾ” ಎಂದಳು. ವ್ಯಾಯಾಮ ಮುಗಿಸಿ ಬಂದ ಭಾವನೂ, ಬ್ರಶ್ ಮಾಡಿ ಬಂದ ಪುಟ್ಟ ನಾದಿನಿಯೂ, ಕಾಫಿಯೊಂದಿಗೆ ಕಾವ್ಯಳೂ ಹೊರಬಂದಾಗ, ಸೂರ್ಯ ಹಿತವಾಗಿ ಉದಯಿಸುತ್ತಾ ಹೊಂಬೆಳಕು ಸೂಸುತ್ತಿದ್ದ.
ಅದೂ ಇದೂ ಮಾತಾಡಿದ ನಂತರ, ಮತ್ತೆ ವಿಷಯವನ್ನು ನರಗಳ ಕಡೆಗೇ ಹೊರಳಿಸಿದ ವಿಭಾ, “ಸಸ್ಯಗಳಲ್ಲಿರುವಂತೆಯೇ ನಮ್ಮಲ್ಲೂ ಒಂದು ಅಂಗದಿಂದ ಮತ್ತೊಂದಕ್ಕೆ ರಕ್ತವನ್ನು ಕೊಂಡೊಯ್ಯೋದು ನರಗಳೇ ಅಲ್ವಾ ಅಕ್ಕ?” ಎಂದಳು. ಕಾಫಿಯೊಂದಿಗೆ ಇಂತಹ ಆಸಕ್ತಿಕರ ಪ್ರಶ್ನೆಗಳು, ವಿಜ್ಞಾನದ ಬಗೆಗಿನ ಮಾತುಕತೆ ಕಾವ್ಯ – ಪ್ರಕಾಶ್ ಇಬ್ಬರಿಗೂ ಪಂಚಪ್ರಾಣ. ಇದಕ್ಕೆ ಉತ್ತರಿಸುತ್ತಾ “ಹಾಗೆ ನೋಡಿದ್ರೆ, ನರಗಳು ಅಂತ ನಾವು ಆಡುಮಾತಿನಲ್ಲಿ ಬಳಸ್ತೀವಿ ವಿಭಾ; ಆದ್ರೆ, ನಮ್ಮ ಮುಂಗೈಯಲ್ಲಿ, ಕಾಲಿನ ಮೇಲೆ ಕಾಣೋದೆಲ್ಲಾ ನರಗಳಲ್ಲಾ; ಅವು ರಕ್ತನಾಳಗಳು. ನರಗಳು ಬಹಳ ಸೂಕ್ಷ್ಮವಾಗಿ, ಚರ್ಮದ ಮತ್ತು ಮಾಂಸಖಂಡಗಳ ಒಳಗೆ ಅಡಗಿರುತ್ವೆ; ಹೀಗೆ ಎದ್ದು ಕಾಣೋದಿಲ್ಲ” ಎಂದರು ಭಾವ. ಆಗ ಕಾವ್ಯ, “ಹೌದು, ನರಗಳಂದ್ರೆ ಮೆದುಳಿಗೆ ಮತ್ತು ನರವ್ಯವಸ್ಥೆಗೆ ಸಂಬಂಧಪಟ್ಟ ವಿಶೇಷ ಜೀವಕೋಶಗಳು. ಅವು ನಮ್ಮ ಇಂದ್ರಿಯಗಳಿಗೆ ಮತ್ತು ಮೆದುಳಿಗೆ ಸಂಪರ್ಕಸೇತುವೆ. ನಮ್ಮ ಸೆನ್ಸ್ ಆರ್ಗನ್‌ಗಳು – ಅಂದ್ರೆ ಗೊತ್ತೇ ಇದ್ಯಲ್ಲ – ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ – ಇವೆಲ್ಲಾ ಏನೇನನ್ನು ಗುರುತಿಸುತ್ವೆ ಅನ್ನೋದನ್ನೆಲ್ಲಾ ಮೆದುಳಿಗೆ ಹೇಳ್ತಾ, ಮೆದುಳಿನ ಉತ್ತರ ಏನು ಅಂತ ವಾಪಾಸ್ ಮೆಸೇಜ್ ಹೊತ್ತು ಬರುವ ‘ಪೋಸ್ಟ್ ಮ್ಯಾನ್’, ಈ ನರಗಳು!” ಎಂದಳು.
ವಿಭಾ ನಗುತ್ತಾ “ಓಹ್! ಹಾಗಿದ್ರೆ ನರಗಳು ಪೋಸ್ಟ್ ಮ್ಯಾನ್ ಥರ! ಆದ್ರೆ, ನಮ್ ಊರಿನ ಪೋಸ್ಟ್ ಮ್ಯಾನ್ ಥರ ನಿಧಾನವಲ್ಲ ಸಧ್ಯ! ಸೂಪರ್ ಫಾಸ್ಟ್ ಕೆಲ್ಸ ಅವುಗಳದ್ದು ಅಲ್ವಾ?” ಎಂದಳು. ಹಬೆಯಾಡುವ ಕಾಫಿ ಕುಡಿಯುತ್ತಾ ನಗೆಯಾಡುತ್ತಾ ಉತ್ತರಿಸಿದ ಭಾವ, “ಸರಿಯಾಗಿ ಹೇಳ್ದೆ ನೋಡು; ನಾನೀಗ ಬಿಸಿಬಿಸಿ ಫಿಲ್ಟರ್ ಕಾಫಿಯನ್ನು ಒಂಚೂರು ಹೆಚ್ಚೇ ಚಪ್ಪರಿಸಲು ಹೋಗಿ, ನಾಲಿಗೆ ಸುಟ್ಟಾಗ, ಅರೆಕ್ಷಣದಲ್ಲೇ ನನ್ನ ನರಗಳು ನನಗೆ ಕಾಫಿ ಕಪ್ ಹಿಂದಕ್ಕೆಳೆದುಕೊಳ್ಳುವಂತೆ ಸಂದೇಶ ಕಳಿಸಿದ್ವು. ಕಾಫಿಯ ಬಿಸಿ ನಮ್ಮ ನಾಲಗೆಯ ತುದಿಯಲ್ಲಿರುವ ನರಸಂವೇದಕಗಳಿಗೆ ತಿಳಿದ ಅರೆಕ್ಷಣದಲ್ಲೇ, ಆ ಮೆಸೇಜ್ ಅನೇಕ ನರಗಳ ‘ನೆಟ್ವರ್ಕ್’ ಮೂಲಕ ಮೆದುಳಿಗೆ ಅಥವಾ ಸ್ಪೈನಲ್ ಕಾರ್ಡ್‌ಗೆ ತಲುಪಿ, ಅವು ವಾಪಾಸ್ ತಮ್ಮ ಆಜ್ಞೆಯನ್ನು ಮತ್ತೊಂದು ನರಗಳ ಜಾಲದ ಮೂಲಕ ನನ್ನ ಕೈಯೊಳಗಿನ ಮಾಂಸಖಂಡಗಳಿಗೆ ತಲುಪಿಸಿ, ಕೈಯಲ್ಲಿ ಹಿಡಿದ ಕಾಫಿ ಕಪ್ ಹಿಂದಕ್ಕೆಳೆವಂತೆ ಮಾಡ್ತು. ಎಂತಹ ಸೂಪರ್ ಫಾಸ್ಟ್ ಪೋಸ್ಟ್ ಮ್ಯಾನ್ ನೋಡು!” ಎಂದರು.
ಇದನ್ನೇ ಕೇಳ್ತಾ ಮೈಮರೆತಿದ್ದ ವಿಭಾಳ ಬಳಿ ಕಳ್ಳಬೆಕ್ಕಿನಂತೆ ಹಿಂದಿನಿಂದ ಬಂದ ಕಾವ್ಯ, ಮುಖದ ಹತ್ತಿರ ಬಂದು ರಪ್ ಅಂತ ಚಪ್ಪಾಳೆ ತಟ್ಟಿದಳು; ಆಗ ಪಕ್ಕನೆ ಕಣ್ಮುಚ್ಚಿದ ಅವಳನ್ನು ನೋಡಿ ಕಾವ್ಯ ನಗುತ್ತಾ “ಈಗ ನೋಡು, ಹೇಗೆ ರಪ್ ಅಂತ ರೆಪ್ಪೆ ಮುಚ್ಚಿದೆ? ಅದೂ ಕೂಡ ಈ ನರಗಳೊಳಗೆ ಓಡಾಡಿದ ಸಂದೇಶಗಳ ಫಲಿತಾಂಶವೇ! ನರವ್ಯವಸ್ಥೆಯನ್ನೇ ಅಧ್ಯಯನ ಮಾಡುವ ತಜ್ಞರು ಹೇಳುವ ಪ್ರಕಾರ ಒಂದು ನಿಮಿಷಕ್ಕೆ ಇಂತಹ ಲಕ್ಷಾಂತರ ನಿರ್ಧಾರಗಳನ್ನು ನಮ್ಮ ಮೆದುಳು ತೊಗೊಳ್ತಾ ಇರತ್ತಂತೆ! ನಮ್ಮ ನರವ್ಯವಸ್ಥೆ ಅದೆಷ್ಟು ಅದ್ಭುತವಾಗಿದೆಯೆಂದ್ರೆ, ಸಾಮಾನ್ಯವಾಗಿ ನಡೆಯುವ ನಿತ್ಯದ ಕೆಲಸಗಳಿಗೆ ಬೇಕಾದ ಸಂದೇಶಗಳನ್ನು ರವಾನಿಸೋಕೆ ಒಂದು ಸಾಮಾನ್ಯ ರೂಟ್ ಫಾಲೋ ಮಾಡತ್ತೆ, ಹೀಗೆ ಸಡನ್ ಆಗಿ ತ್ವರಿತವಾಗಿ ಆಗಬೇಕಾದ ಕೆಲಸಗಳಿಗೆ ಮತ್ತೊಂದು ರೂಟ್ ಬಳಸತ್ತೆ” ಎಂದಳು.

ಆಗ ಪ್ರಕಾಶ್ ಕೂಡ ದನಿಸೇರಿಸಿ “ನಾವು ಎಲ್ಲಾದ್ರೂ ಬೇಗ ಹೋಗ್ಬೇಕಿದ್ರೆ ಶಾರ್ಟ್ ಕಟ್ ಬಳಸ್ತೀವಲ್ಲ! ಹಾಗೆ! ಬಿಸಿ ತಾಗಿದಾಗ ಬೇಗ ಕೈಯನ್ನು ಹಿಂದೆ ಎಳೆದುಕೊಳ್ಳೋಕೆ, ಕಣ್ಣಿಗೆ ಧೂಳು ಬೀಳೋಷ್ಟರಲ್ಲಿ ರೆಪ್ಪೆ ಮುಚ್ಚೋಕೆ, ಬಾಲ್ ನಮಗೆ ತಾಗುವಷ್ಟರಲ್ಲಿ ತಪ್ಪಿಸಿಕೊಳ್ಳೊಕೆ ಬೇಗ ನಿರ್ಧಾರ ತೊಗೋಬೇಕಾಗತ್ತಲ್ವಾ? ಹಾಗಾಗಿ, ಶಾರ್ಟ್ ಕಟ್ ಬಳಸುವ ನರವ್ಯವಸ್ಥೆ, ಮೆದುಳುಬಳ್ಳಿ ಅಥವಾ ಬೆನ್ನುಹುರಿ ಅಂತೀವಲ್ಲ? ಸ್ಪೈನಲ್ ಕಾರ್ಡ್! ಅದರ ಮುಖಾಂತರ ಬೇಗ ನಿರ್ಧಾರ ತೊಗೊಂಡು ಕಾರ್ಯನಿರ್ವಹಿಸುತ್ತೆ. ಮೆದುಳಿನ ಬದ್ಲು ಮೆದುಳಿನ ಬಳ್ಳಿಯೇ ಇಲ್ಲಿ ಸೂಪರ್ ಫಾಸ್ಟ್ ನಿರ್ಧಾರ ತೊಗೊಳ್ಳತ್ತೆ” ಎಂದರು. ಆಗ ವಿಭಾ, “ಅಂದ್ರೆ ಶಾರ್ಟ್ ಕಟ್ ತೊಗೊಳ್ಳೋ ಭರದಲ್ಲಿ, ಮೆದುಳನ್ನೇ ಬೈಪಾಸ್ ಮಾಡ್ತೀವಲ್ವಾ?” ಎಂದಳು. ಅವಳ ಬುದ್ಧಿವಂತಿಕೆಗೆ ಬೆರೆಗಾಗುತ್ತಾ, “ಕರೆಕ್ಟ್ ಪುಟ್ಟ; ಎಕ್ಸಾಕ್ಟ್ಲೀ!” ಎಂದಳು ಕಾವ್ಯ.
ಪ್ರಕಾಶ್ ತನ್ನ ಕ್ಯಾಮೆರಾವನ್ನು ಚಾರ್ಜ್ ಮಾಡೋಕೆ ಒಳಹೊರಟಾಗ, ಮಾತಾಡ್ತಾ ಕಾಫಿ ಮುಗಿಸಿ, ಅಕ್ಕ ತಂಗಿಯರಿಬ್ಬರೂ ಕೈತೋಟಕ್ಕೆ ಹೊರಟರು. ಅಂದಿನ ಬೆಳಗಿನ ತಿಂಡಿ ರೊಟ್ಟಿಗೆ ಹಾಕೋಕೆ ಬೇಕಾದ ಸೊಪ್ಪು ಬಿಡಿಸುತ್ತಾ ಮಾತು ಮುಂದುವರೆಸಿದರು ಅಕ್ಕ-ತಂಗಿ! ಮತ್ತೆ ಈ ಎಲೆಗಳನ್ನು ನೋಡಿ ವಿಭಾಳಿಗೆ ಹಿಂದಿನ ದಿನದ ಮಾತುಕತೆ ನೆನಪಾಯ್ತು. “ಕಾವ್ಯಕ್ಕಾ, ಗಿಡಗಳ ಒಳಗೆ ಇರೋ ಆಹಾರವಾಹಕ – ಜಲವಾಹಕಗಳ ಹಾಗೆ ನಮ್ಮೊಳಗೆ ಇರೋ ‘ಪೈಪ್’ಗಳ ಬಗ್ಗೆ ತಿಳ್ಸ್ತೀನಿ ಅಂದಿದ್ಯಲ್ಲ?” ಎಂದಳು. “ಜಾಣೆ ವಿಭಾ, ಮರ್ಯೋದೇ ಇಲ್ಲ ಅಲ್ವಾ? ಹೇಳ್ತೀನಿ ಕೇಳು. ಏನ್ಮಾಡೋದು, ನಾವು ಗಿಡ ಮರಗಳ ಹಾಗೆ ನಮ್ಮೊಳಗೇ ‘ಬೆಳಕಡುಗೆ’ ಅಂದ್ರೆ ‘ಫೋಟೋಸಿಂಥೆಸಿಸ್’ ಮಾಡಿ ಆಹಾರ ತಯಾರು ಮಾಡ್ಕೊಳ್ಳಕ್ಕಾಗಲ್ವಲ್ಲ? ಅದಕ್ಕೆ ದಿನವಿಡೀ ಅಡುಗೆ-ತಿಂಡಿ ಅದೂ ಇದೂ ಅಂತ ಮಾಡ್ತಾ ಇರ್ಬೇಕು!” ಎಂದು ಮಾತು ಮುಂದುವರಿಸುವಾಗ ವಿಭಾ “ಹೇ ಹೋಗಕ್ಕಾ! ನಮ್ಮೊಳಗೇ ನಾವು ಗಿಡಗಳ ಹಾಗೆ ಊಟ ರೆಡಿ ಮಾಡಿಕೊಂಡ್ಬಿಟ್ರೆ, ರುಚಿಯಾದ ಚುರುಮುರಿ, ಪಾನಿಪೂರಿ ಎಲ್ಲಾ ಮಿಸ್ ಆಗಲ್ವಾ? ನೀನೊಳ್ಳೆ! ಇವಾಗಿರೋದೇ ಸರಿಯಾಗಿದೆ ನೋಡು!” ಎಂದಳು. ಚಾಕಲೇಟ್ ಪ್ರಿಯೆ ಕಾವ್ಯ ತನ್ನ ತಂಗಿಯ ಮಾತಿಗೆ ತಲೆದೂಗುತ್ತಾ, “ಅದೂ ಕರೆಕ್ಟೇ! ಇಲ್ಲದಿದ್ರೆ ನಾವು ಚಾಕಲೇಟ್ ಸವಿಯೋಕೆ ಸಾಧ್ಯವಿತ್ತಾ?” ಎಂದಳು ನಗುತ್ತಾ. ಹಾಗೇ ಮಾತು ಮುಂದುವರೆಸುತ್ತಾ, “ನಾವು ತಿಂದ ಆಹಾರ ಯಾವುದೇ ಇರ್ಲಿ, ಅದು ನಮ್ಮ ಜೀರ್ಣಾಂಗ ವ್ಯವಸ್ಥೆಯೊಳಗೆ ಹೋಗಿ, ಅಲ್ಲಿ ಬಗೆಬಗೆಯ ಭೌತಿಕ-ರಾಸಾಯನಿಕ ಪ್ರಕ್ರಿಯೆಗಳಿಗೆ ಒಳಪಡತ್ತೆ. ಕೊನೆಗೆ ದೊಡ್ದ ಆಹಾರದ ಕಣಗಳೆಲ್ಲಾ ಜೀರ್ಣವಾಗಿ, ಆಹಾರದಲ್ಲಿದ್ದ ಪೋಷಕಾಂಶಗಳು ನಮ್ಮ ರಕ್ತ ಸೇರತ್ವೆ. ಆದ್ರೆ ಅವು ರಕ್ತದಲ್ಲಿದ್ರೆ ಸಾಕಾಗಲ್ವಲ್ಲ? ನಮ್ಮ ದೇಹದ ಪ್ರತಿಯೊಂದು ಜೀವಕೋಶ ಅಂದ್ರೆ ‘ಸೆಲ್’ಗಳಿಗೆ ಈ ಆಹಾರ ತಲುಪ್ಬೇಕು. ಇಲ್ಲದಿದ್ರೆ ನಮಗೆ ಶಕ್ತಿ ಬರೋದಿಲ್ಲ. ಹಾಗಾಗಿ ಗ್ಲೂಕೋಸ್, ನೀರು, ವಿಟಮಿನ್, ಖನಿಜಾಂಶ ಅಂದ್ರೆ ಮಿನರಲ್ಸ್, ‘ಅಮೈನೋ ಆಸಿಡ್’ಗಳಂತಹ ಅನೇಕ ಬಗೆಯ ಪೋಷಕಾಂಶಗಳು ರಕ್ತದ ಮೂಲಕ ನಮ್ಮ ಜೀವಕೋಶಗಳನ್ನ ಸೇರತ್ತೆ” ಎಂದಳು.
ಅಕ್ಕನ ಮಾತನ್ನೇ ಗಮನವಿಟ್ಟು ಕೇಳುತ್ತಿದ್ದ ವಿಭಾ, “ಆದ್ರೆ ಇಲ್ಲಿ ನೋಡು, ಈ ನರಗಳು, ಅಲ್ಲಲ್ಲ, ರಕ್ತನಾಳಗಳು ನಮ್ ಕೈಮೇಲೆ ಎಷ್ಟು ದೊಡ್ಡದಾಗಿ ಕಾಣತ್ತೆ. ಹಾಗಿರುವಾಗ ಕಣ್ಣಿಗೆ ಕಾಣದ ಅಷ್ಟು ಪುಟ್ಟ ಜೀವಕೋಶಗಳಿಗೆ ಅದು ಹೇಗೆ ರಕ್ತವನ್ನ ತಲುಪಿಸೋಕೆ ಸಾಧ್ಯ?” ಎಂದಳು. ಆಗ ಕಾವ್ಯ, “ಈ ರಕ್ತನಾಳಗಳಿವೆಯಲ್ಲಾ, ಅವು ಕೂಡ ಸಸ್ಯಗಳಲ್ಲಿದ್ದ ಹಾಗೆ, ದೊಡ್ಡದಾದ ಪೈಪುಗಳು ಬರ್ತಾ ಬರ್ತಾ ಕವಲೊಡೆಯುತ್ತಾ, ಚಿಕ್ಕ ನಾಳಗಳಾಗಿ ಬದಲಾಗತ್ವೆ. ಮುಖ್ಯವಾಗಿ ‘ಆರ್ಟರಿ’ ಅಂದ್ರೆ ಅಪಧಮನಿ, ‘ವೇನ್ಸ್’ ಅಂದ್ರೆ ಅಭಿಧಮನಿ ಅನ್ನೋ ಎರಡು ಬಗೆಯ ರಕ್ತನಾಳಗಳಿರತ್ವೆ; ಇವು ಸಣ್ಣದಾಗುತ್ತಾ, ಪ್ರತೀ ಜೀವಕೋಶಕ್ಕೂ ಆಹಾರವನ್ನ ತಲುಪಿಸೋಕೆ ‘ಕ್ಯಾಪಿಲ್ಲರಿ’ ಅಂದ್ರೆ ಕಿರುಕೊಳವೆಯಾಗಿ ಮಾರ್ಪಾಡಾಗುತ್ವೆ. ಈ ‘ಪೈಪ್’ಗಳಲ್ಲಿ ಕೇವಲ ಪೋಷಕಾಂಶ, ನೀರು ಮಾತ್ರ ತಲುಪಲ್ಲ, ನಾವು ಉಸಿರಾಡೋ ಆಮ್ಲಜನಕ ಕೂಡ ಜೀವಕೋಶಗಳಿಗೆ ತಲುಪೋದು ಇದೇ ನಾಳಗಳ ಮೂಲಕ” ಎಂದಳು.
ಇದೆಲ್ಲಾ ಕೇಳ್ತಾ, ಕೈತೋಟದಲ್ಲಿ ಸುತ್ತಾಡ್ತಾ ಇದ್ದ ವಿಭಾಗೆ ಮತ್ತೊಂದು ಪ್ರಶ್ನೆ ಮೂಡಿತು. “ಕಾವ್ಯಕ್ಕಾ, ಈ ಗಿಡಗಳಲ್ಲಿ ಇರೋ ಜಲವಾಹಕದಲ್ಲಿ ‘ಒನ್ ವೇ’ ಸಂಚಾರ, ಆಹಾರವಾಹಕದಲ್ಲಿ ‘ಟೂ ವೇ’ ಸಂಚಾರ ಅಲ್ವಾ? ನಮ್ಮ ದೇಹದ ಒಳಗಿರೋ ಈ ರಕ್ತನಾಳಗಳಲ್ಲಿ ಒನ್ ವೇ ನಾ? ಟೂ ವೇ ನಾ?” ಎಂದಳು. ಈ ಪ್ರಶ್ನೆಯಿಂದ ಖುಷಿಯಾದ ಕಾವ್ಯ, “ಇಲ್ಲೆಲ್ಲಾ ಒನ್ ವೇ ನೇ ಕಣೋ. ಅದ್ರಲ್ಲೂ ಆಮ್ಲಜನಕ ಇರೋ ಶುದ್ಧರಕ್ತ, ಇಂಗಾಲದ-ಡೈ-ಆಕ್ಸೈಡ್ ಇರುವ ಅಶುದ್ಧ ರಕ್ತದ ಜೊತೆ ಮಿಕ್ಸ್ ಆಗೋ ಹಾಗೇ ಇಲ್ಲ. ಅವು ಮಿಕ್ಸ್ ಆದ್ರೆ, ಎಲ್ಲಾ ಜೀವಕೋಶಗಳಿಗೆ ಸರಿಯಾಗಿ ಆಮ್ಲಜನಕ ಸಿಗದೇ, ಉಸಿರಾಟದ ಸಮಸ್ಯೆ, ಮೈ ಬಣ್ಣ ನೀಲಿಯಾಗೋದು – ಇವೆಲ್ಲಾ ಆಗತ್ತೆ.” ಎಂದಳು. ಆಗ ಮನೆಯೊಳಗಿಂದ ಪ್ರಕಾಶ್ ‘ನೀರಿನ ಮೋಟರ್ ಆನ್ ಮಾಡು ಕಾವ್ಯ’ ಎಂದು ಕೂಗಿದ್ದು ಕೇಳಿ ವಿಭಾಗೆ ಮತ್ತೇನೋ ಹೊಳೆಯಿತು.
ಹೊಲಕ್ಕೆ ನೀರು ಪಂಪ್ ಮಾಡೋಕೆ ಮೋಟರ್ ಆನ್ ಮಾಡಿದ ಕಾವ್ಯಳನ್ನೇ ಹಿಂಬಾಲಿಸುತ್ತಾ ನಡೆದ ವಿಭಾ, “ನೀನು ಮೋಟರ್ ಹಾಕಿದ್ದಕ್ಕೆ ಹೊಲದ ಪೈಪುಗಳಿಗೆ ನೀರು ಹೋಯ್ತಲ್ವಾ? ಹಾಗೇನೇ ನಮ್ಮ ಹೃದಯ ಕೂಡ, ರಕ್ತವನ್ನ ಪಂಪ್ ಮಾಡೋದು ಅಲ್ವಾ?” ಎಂದಳು. ಆಗ ಕಾವ್ಯ ಅಂಗಳದಲ್ಲಿ ಬಿಸಿಲು ಕಾಯಿಸುತ್ತಾ ನಿಂತು, “ಕರೆಕ್ಟು ಕಣೋ. ನಮ್ಮ ಹೃದಯವೇ ಶುದ್ಧ ರಕ್ತವನ್ನ ದೇಹದ ಎಲ್ಲಾ ಭಾಗಗಳಿಗೆ ತಲುಪೋ ಹಾಗೆ ಮತ್ತು ಅಶುದ್ಧ ರಕ್ತವನ್ನ ಶುದ್ಧೀಕರಣ ಮಾಡೋಕೆ ‘ಲಂಗ್ಸ್’ ಅಂದ್ರೆ ನಮ್ಮ ಶ್ವಾಸಕೋಶಕ್ಕೆ ಪಂಪ್ ಮಾಡೋದು; ನಮ್ಮ ಹೃದಯ, ‘ರಿಂಗ್ ರೋಡ್’ನ ನಡುವೆ ಇರುವ ‘ಸರ್ಕಲ್’ನ ಹಾಗೆ. ಊರಿನ ಸುತ್ತಲೂ ಇರುವ ರಿಂಗ್ ರೋಡ್ ಒಂದೆಡೆ ಈ ಸರ್ಕಲ್‌ನಲ್ಲಿ ಸೇರುವ ಹಾಗೆ, ನಮ್ಮ ಅಪಧಮನಿ ಮತ್ತು ಅಭಿಧಮನಿ ಅಂದ್ರೆ ‘ಆರ್ಟರಿ’ ಮತ್ತು ‘ವೇನ್’ಗಳೂ ಹೃದಯಕ್ಕೆ ಕನೆಕ್ಟ್ ಆಗತ್ವೆ. ನಿರ್ದಿಷ್ಟ ರಕ್ತನಾಳವು ನಿರ್ದಿಷ್ಟ ಅಂಗಕ್ಕೆ ಹೃದಯದಿಂದ ಪಂಪ್ ಆದ ಆಮ್ಲಜನಕವಿರುವ ಶುದ್ಧರಕ್ತವನ್ನು ಕೊಂಡೊಯ್ಯುತ್ತವೆ; ಆ ಅಂಗದಿಂದ ನಿರ್ದಿಷ್ಟ ರಕ್ತನಾಳವು ಅಶುದ್ಧ ರಕ್ತವನ್ನು ವಾಪಸ್ ಹೃದಯಕ್ಕೆ ತಂದುಕೊಡತ್ತೆ. ಆಗ ಮತ್ತೊಮ್ಮೆ ಹೃದಯವು ಈ ಅಶುದ್ಧ ರಕ್ತವನ್ನ ಶ್ವಾಸಕೋಶಕ್ಕೆ ಪಂಪ್ ಮಾಡಿ, ‘ಶುದ್ಧಮಾಡಿಕೊಡಪ್ಪಾ’ ಅಂತ ಕೊಡತ್ತೆ. ಅಲ್ಲಿಂದ ನಿರ್ದಿಷ್ಟ ರಕ್ತನಾಳವು ಮತ್ತೆ ಶುದ್ಧೀಕರಣಗೊಂಡ ರಕ್ತವನ್ನು ಹೃದಯಕ್ಕೆ ತಂದು, ಇದೇ ಚಕ್ರ ಮುಂದುವರೆಯತ್ತೆ.” ಎಂದು ವಿವರಿಸಿದಳು.
ಆಗ ವಿಭಾ, “ಅಬ್ಬ! ಎಷ್ಟೆಲ್ಲಾ ಕೆಲ್ಸ ಮಾಡತ್ತೆ ನಮ್ಮ ದೇಹ; ಹೀಗೆ ಪಂಪ್ ಮಾಡಿರೋ ರಕ್ತ, ಇಲ್ಲಿ ನೀರು ಚಿಮ್ಮಿದ ಹಾಗೆ ಒತ್ತಡದಿಂದ ಚಿಮ್ತಾ ಇರತ್ತಲ್ವಾ? ನಮ್ಮೊಳಗಿನ ರಕ್ತನಾಳಗಳು ಅದೆಷ್ಟು ಗಟ್ಟಿಯಾಗಿರ್ಬೇಕು ಆ ಒತ್ತಡವನ್ನ ತಡೆದುಕೊಳ್ಳೋಕೆ!” ಎಂದಳು. ಆಗ ಕಾವ್ಯ, “ಅಲ್ವಾ? ಸಿಕ್ಕಾಪಟ್ಟೆ ಜೋರಾಗಿ, ಒತ್ತಡದೊಂದಿಗೆ ನುಗ್ಗೋ ರಕ್ತವನ್ನ ತಡೆದುಕೊಳ್ಳೊಕೆ ಈ ರಕ್ತನಾಳಗಳ ಗೋಡೆಗಳು ಬಹಳ ಶಕ್ತವಾಗಿರತ್ವೆ; ಅದ್ರಲ್ಲೂ, ಹೃದಯಕ್ಕೆ ಹತ್ತಿರದಲ್ಲಿರುವ ರಕ್ತನಾಳವಾ ಅಥವಾ ದೂರದಲ್ಲಿರೋದಾ, ಹೃದಯದಿಂದ ರಕ್ತ ಕೊಂಡೊಯ್ತಾ ಇರೋದಾ ಅಥವಾ ವಾಪಸ್ ಹೃದಯಕ್ಕೆ ರಕ್ತ ತರೋದಾ ಅನ್ನೋ ಆಧಾರದ ಮೇಲೆ ಇವುಗಳ ಗೋಡೆ ಎಷ್ಟು ದಪ್ಪವಿರ್ಬೇಕು, ಅದೆಷ್ಟು ನಮ್ಯವಾಗಿ ಅಂದ್ರೆ ಫ್ಲೆಕ್ಸಿಬಲ್ ಇರ್ಬೇಕು ಅನ್ನೋದು ನಿರ್ಧಾರವಾಗತ್ತೆ. ಸರಿ, ನಡಿ, ಬಿಸಿಲು ಏರ್ತಾ ಇದೆ, ಒಳಗೆ ಹೋಗೋಣ. ಒಂಚೂರು ಬ್ಯಾಂಕ್ ಕೆಲ್ಸ ಇದೆ. ಮುಗ್ಸಿ ಬಂದು ಮತ್ತೆ ಮಾತು ಮುಂದುವರೆಸೋಣ” ಎಂದು ತಂಗಿಯ ಹೆಗಲ ಮೇಲೆ ಕೈ ಹಾಕಿ ಮನೆಯೊಳಗೆ ನಡೆದಳು ಕಾವ್ಯ. ಭೂಮಿಯ ಸಸ್ಯಗಳಿಗೆ ಬೆಳಕಡುಗೆ ಮಾಡೋಕೆ ಚಳಿಗಾಲದ ಸೂರ್ಯ ತುಸು ಹೆಚ್ಚೇ ಸೌರಶಕ್ತಿ ಕೊಡುವ ಉಮೇದಿಯಲ್ಲಿದ್ದ.
ಕ್ಷಮಾ ಸೂಕ್ಷ್ಮಾಣುಜೀವಿ ವಿಜ್ಞಾನದಲ್ಲಿ ಎಂ.ಎಸ್.ಸಿ ಪದವೀಧರೆ. ವಿಜ್ಞಾನ ಶಿಕ್ಷಕಿ. ವಿಜ್ಞಾನ ಲೇಖನಗಳ ಲೇಖಕಿ ಮತ್ತು ಅನುವಾದಕಿ. ರಿಸರ್ಚ್ ಮ್ಯಾಟರ್ಸ್ ನಲ್ಲಿ ವಿಜ್ಞಾನ ಲೇಖನಗಳ ಕನ್ನಡ ವಿಭಾಗದಲ್ಲಿ ಸಂಪಾದಕಿಯೂ ಆಗಿರುವ ಇವರು ಗಾಯಕಿಯೂ, ಕಂಠದಾನ ಕಲಾವಿದೆಯೂ ಹೌದು.

