Advertisement
ಧೀಮಂತ ಪತ್ರಕರ್ತ ಐ.ಕೆ. ಜಾಗೀರದಾರ್: ರಂಜಾನ್ ದರ್ಗಾ ಸರಣಿ

ಧೀಮಂತ ಪತ್ರಕರ್ತ ಐ.ಕೆ. ಜಾಗೀರದಾರ್: ರಂಜಾನ್ ದರ್ಗಾ ಸರಣಿ

ಅವರೆಲ್ಲ ಕುಳಿತ ಕುರ್ಚಿ, ಪ್ಲೇಟು ಮತ್ತು ಆಹಾರದಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ. ಅದು ನಾಲ್ಕು ಮಾಸ್ಟರ್ ಬೆಡ್ ರೂಂ ಮನೆಯಾಗಿತ್ತು. ಎಲ್ಲ ಕೋಣೆಗಳನ್ನು ತೋರಿಸಿದರು. ಅವೆಲ್ಲ ಒಂದೇ ಸೈಜಿನ ಕೋಣೆಗಳು. ಪಲ್ಲಂಗ, ಬೆಡ್, ಹೊದಿಕೆ ಹೀಗೆ ಯಾವುದರಲ್ಲೂ ವ್ಯತ್ಯಾಸ ಇರಲಿಲ್ಲ. ಒಂದು ಇಬ್ಬರು ಮಕ್ಕಳ ಕೋಣೆ, ಇನ್ನೊಂದು ಅವರ ಕೋಣೆ, ಮತ್ತೊಂದು ಮನೆಗೆಲಸದ ಹೆಣ್ಣುಮಗಳ ಕೋಣೆ. (ಅವರು ಮನೆಯ ಹಿರಿಯರ ಹಾಗೆ ಇದ್ದರು!) ಉಳಿದ ನಾಲ್ಕನೆಯ ಕೋಣೆ ಅತಿಥಿಗಳದ್ದು. ಇದನ್ನೆಲ್ಲ ನೋಡಿ ಮತ್ತು ಕೇಳಿ ನಾನು ನಾಚಿ ನೀರಾದೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 96ನೇ ಕಂತು ನಿಮ್ಮ ಓದಿಗೆ

ಕರ್ನಾಟಕ ಸರ್ಕಾರದ ಕೃಷಿ ಮಾರಾಟ ಮಂಡಳಿ ಪ್ರಕಟಿಸುತ್ತಿದ್ದ “ಕೃಷಿಪೇಟೆ” ಮಾಸಪತ್ರಿಕೆಯ ಉಪ ಸಂಪಾದಕನಾಗಿ 1976ರಿಂದ ಸೇವೆ ಸಲ್ಲಿಸುತ್ತಿದ್ದ ನಾನು 1982ನೇ ಆಗಸ್ಟ್ 16ರಂದು ಉಪ ಸಂಪಾದಕನಾಗಿ ಪ್ರಜಾವಾಣಿ ಸೇರಿದೆ. ಜನರಲ್ ಡೆಸ್ಕಲ್ಲಿ ಮಧ್ಯಾಹ್ನದ ಪಾಳಿಯಿಂದ ಕೆಲಸ ಶುರುವಾಯಿತು. ಐ.ಕೆ. ಜಾಗೀರದಾರ್ ಅವರನ್ನು ನಾನು ಮೊದಲ ಬಾರಿಗೆ ಅಂದೇ ನೋಡಿದ್ದು. ಬಹಳ ದಿನಗಳ ನಂತರ ಗೊತ್ತಾಯಿತು, ಅವರು ನಮ್ಮ ವಿಜಾಪುರದ ದರ್ಗಾ ಗ್ರಾಮದವರು ಎಂದು. ಅವರು ನಮ್ಮ 17ನೇ ಶತಮಾನದ ಸೂಫಿ ಸಂತ ಖ್ವಾಜಾ ಅಮೀನುದ್ದೀನ್ ಚಿಸ್ತಿ ಅವರ ವಂಶಜರು. ನಮ್ಮಿಬ್ಬರ ಮೂಲ ಒಂದೇ ಹಳ್ಳಿ ಎಂಬುದು ತಿಳಿದು ಆಶ್ಚರ್ಯವೆನಿಸಿತು.

ಬಂಗಾರ ಬಣ್ಣದ ಅವರು ಹಣೆಯ ಮೇಲಿನ ಕಪ್ಪು ಚುಕ್ಕೆಯಿಂದಾಗಿ ಮಾಧ್ವ ಬ್ರಾಹ್ಮಣರ ಹಾಗೆ ಕಾಣುತ್ತಿದ್ದರು. ನಮ್ಮ ಬಿಜಾಪುರ ಕಡೆ ಜಾಗೀರದಾರ್ ಅಡ್ಡ ಹೆಸರಿನ ಕೆಲ ಮಾಧ್ವ ಬ್ರಾಹ್ಮಣರ ಕುಟುಂಬಗಳ ಪರಿಚಯವಿದ್ದ ನನಗೆ ಮೊದಲ ನೋಟಕ್ಕೆ ಇವರೂ ಹಾಗೇ ಕಂಡರು.

ಪ್ರಜಾವಾಣಿಯ ಹಿರಿಯ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು ಸುಧಾ ವಾರಪತ್ರಿಕೆಯಲ್ಲಿ “ಅರಸು ಆಡಳಿತ ರಂಗ” ಸರಣಿ ಲೇಖನಗಳಿಂದ ಬಹಳ ಪ್ರಸಿದ್ಧರಾಗಿದ್ದರು. ಪ್ರತಿವಾರ ಬರುವ ಆ ಲೇಖನಗಳಿಗಾಗಿ ಜನ ಕಾಯುತ್ತಿದ್ದರು. ಪತ್ರಿಕಾ ಭಾಷೆಯ ಬಗ್ಗೆ ಅವರಿಗಿದ್ದ ಜ್ಞಾನ ಅನನ್ಯವಾಗಿತ್ತು. ಶಬ್ದಾಡಂಬರದ ಕಡೆಗೆ ಅವರೆಂದೂ ವಾಲುತ್ತಿರಲಿಲ್ಲ. ಉದ್ದನೆಯ ಸಾಲುಗಳನ್ನು ಅವರು ಎಂದೂ ಬರೆಯಲಿಲ್ಲ. ಆದರೆ ವಿಷಯವಸ್ತುವನ್ನು ರಂಜಕವಾಗಿ ಓದುಗರಿಗೆ ತಲುಪಿಸುವಂಥ ಸೃಜನಶೀಲತೆಯನ್ನು ಹೊಂದಿದ್ದರು. ಅವರ ಬರವಣಿಗೆಯು ಪತ್ರಿಕಾ ಭಾಷೆ ಮತ್ತು ಸೃಜನಶೀಲ ಭಾಷೆಯ ಸಂಗಮವಾಗಿತ್ತು. ಜನಸಾಮಾನ್ಯರಿಗೆ ಸಹಜಾಗಿ ತಿಳಿಯುವ ಶಬ್ದಗಳ ಮೂಲಕ ಚಿಕ್ಕ ಸಾಲುಗಳನ್ನು ಸೃಷ್ಟಿಸುತ್ತ, ಅಂಥ ಕೆಲವೇ ಸಾಲುಗಳ ಮೂಲಕ ಪ್ಯಾರಾ ಮುಗಿಸುತ್ತಿದ್ದರು. ವಿಷಯದ ಬಗ್ಗೆ ಸ್ಪಷ್ಟತೆ ಮತ್ತು ಭಾಷಾಪ್ರೌಢಿಮೆ ಇದ್ದವರು ಮಾತ್ರ ಸರಳವಾಗಿ ಬರೆಯಬಲ್ಲರು. ಅಂಥ ಸ್ಪಷ್ಟತೆ ಮತ್ತು ಪ್ರೌಢಿಮೆಯಿಂದ ಕೂಡಿದ ಅವರ ಭಾಷಾಶೈಲಿ ನನಗೆ ಹಿಡಿಸಿತ್ತು. ಅವರು ತಮ್ಮ ಸರಳ ಬರವಣಿಗೆಯಲ್ಲಿ ಮಹತ್ವದ್ದನ್ನು ಸೂಚಿಸುತ್ತಿದ್ದರು. ಅವರೆಂದೂ ಪುಟಗಟ್ಟಲೆ ವಿವರಿಸಲು ಹೋಗುತ್ತಿರಲಿಲ್ಲ. ಭಾಷೆಯಲ್ಲಿ ಗೊಂದಲವಿಲ್ಲದಾಗ ಮತ್ತು ವಿಷಯವನ್ನು ಸೃಜನಾತ್ಮಕವಾಗಿ ಗ್ರಹಿಸಿದಾಗ ಮಾತ್ರ ವಿವಿಧ ಕ್ಷೇತ್ರಗಳ, ವಿವಿಧ ಹುದ್ದೆಗಳ, ವಿವಿಧ ವರ್ಗಗಳ, ವಿವಿಧ ಸ್ತರಗಳ ಮತ್ತು ವಿವಿಧ ಶೈಕ್ಷಣಿಕ ಹಂತಗಳಲ್ಲಿ ವಿದ್ಯಾರ್ಜನೆ ಮಾಡಿರುವ ಓದುಗರನ್ನು ತಲುಪಲು ಸಾಧ್ಯ. ಇದುವೆ ನಿಜವಾದ ಪತ್ರಕರ್ತನ ಗುರಿಯಾಗಿರುತ್ತದೆ. ಅಂಥ ಗುರಿಯನ್ನು ಅವರು ಸಾಧಿಸಿದ್ದರು.

ಜಾಗೀರದಾರ್ ಅವರು ಯಾವುದಾದರೊಂದು ರಾಜಕೀಯ ಇಲ್ಲವೆ ಆಡಳಿತಾತ್ಮಕ ಸ್ಟೋರಿ ತೆಗೆದುಕೊಂಡು ಬರುವ ಹುಮ್ಮಸ್ಸಿನವರು. ಹೆಚ್ಚಾಗಿ ಅವರು ಕಚೇರಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಮಯವೆಂದರೆ ಹೊತ್ತು ಮುಳುಗುವ ಸಮಯ. ಅಲ್ಲಿಯವರೆಗೆ ಆ ಈ ಕಚೇರಿ, ಪೊಲೀಸ್ ಇಲಾಖೆ ಮತ್ತು ವಿಧಾನಸೌಧಕ್ಕೆ ಭೇಟಿ ಕೊಟ್ಟು ಬರುವುದು ಅವರ ಅಭ್ಯಾಸವಾಗಿತ್ತು.

ಜಾಗೀರದಾರ್ ಸದಾ ಜಾಗೃತ ಪತ್ರಕರ್ತ. ಪತ್ರಿಕಾರಂಗ ಅವರ ಜೀವಾಳವಾಗಿತ್ತು. ಪತ್ರಿಕೆ ಸಂಬಂಧಿಸಿದ ರಾಜಕೀಯ, ಸಾಮಾಜಿಕ ಮತ್ತು ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ರಂಜಕ ಸುದ್ದಿಗಳನ್ನು ಬಿಟ್ಟು ಅವರ ಮನಸ್ಸು ಬೇರೆ ವಿಷಯಕ್ಕೆ ಎಳಸುತ್ತಿರಲಿಲ್ಲ. ಹಾಗೆ ಸೃಜನಶೀಲವಾಗಿ ಅನುಭವಿಸಿದ್ದನ್ನು ಹೇಳುವ ಕಥನಶೈಲಿಯೂ ಅವರಿಗೆ ಕರಗತವಾಗಿತ್ತು. ಅವರ ಜೊತೆ ಸೇರಿದಾಗ ಇಂಥ ಆಕರ್ಷಕ ಸುದ್ದಿಯನ್ನು ಕೇಳುವ ಕುತೂಹಲ ಸಹಜವಾಗೇ ಹೆಚ್ಚುತ್ತಿತ್ತು.

ಅವರು ಒಬ್ಬ ವರದಿಗಾರ ಆಗಿ ಸಮಾಜದ ಸೂಕ್ಷ್ಮತೆಗಳ ಕಡೆಗೆ ತದೇಕಚಿತ್ತದಿಂದ ಗಮನ ಹರಿಸುತ್ತಿದ್ದರು. ಅಂಥ ಅನೇಕ ರಂಜಕ ಮತ್ತು ರೋಚಕ ಸಂಗತಿಗಳನ್ನು ಅವರ ಬಾಯಿಂದ ಕೇಳುವುದೇ ಒಂದು ಆನಂದ. ಅವರ ಮಾತುಗಳಿಂದ ಪತ್ರಕರ್ತರೇ ರೋಮಾಂಚನಗೊಳ್ಳುತ್ತಿದ್ದರು. ಒಂದು ಸಲ ಬೆಂಗಳೂರಿನ ಬ್ರಿಗೆಡ್ ರೋಡಲ್ಲಿ ಮದ್ಯದಂಗಡಿಯೊಂದರ ಕಳ್ಳತನವಾಗಿತ್ತು. ಕಳ್ಳರು ಹಣದೊಂದಿಗೆ ರಾಯಲ್ ಸೆಲ್ಯೂಟ್ ಬಾಟಲಿಗಳನ್ನೂ ಒಯ್ದಿದ್ದರು. ಆ ಸುದ್ದಿಗೆ ಜಾಗೀರದಾರ್ “ರಾಯಲ್ ಸೆಲ್ಯೂಟ್” ಎಂದೇ ಹೆಸರಿಟ್ಟಿದ್ದರು.

ಇಂದಿರಾ ಗಾಂಧಿಯವರ ಕುರಿತು ಅವರಿಗೆ ಸಂಬಂಧಿಸಿದ ಮೂರು ಘಟನೆಗಳನ್ನು ಹೇಳಿದ್ದರು. ಆ ಮೂಲಕ ವಿ.ಐ.ಪಿ.ಗಳ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸೂಚಿಸಿದ್ದರು. ಇಂದಿರಾ ಗಾಂಧಿ ಅವರು ಚುನಾವಣಾ ಪ್ರಚಾರಕ್ಕಾಗಿ ಒಂದು ಕಡೆ ಪಕ್ಷದ ರಾಜ್ಯ ನಾಯಕರು ಕರೆದುಕೊಂಡು ಹೋಗಿದ್ದರು. ಅವರಿಗೆ ವಾಷ್‌ರೂಂ ವ್ಯವಸ್ಥೆ ಮಾಡುವ ಪ್ರಜ್ಞೆಯೂ ಇದ್ದಿದ್ದಿಲ್ಲ. ಮೊದಲ ನೇಚರ್ ಕಾಲ್‌ಗಾಗಿ ಅವರು ಕಾಲೇಜಿನ ಕೋಣೆಯೊಂದನ್ನು ಬಳಸಬೇಕಾಯಿತು! ಚುನಾವಣೆಯ ಸಂದರ್ಭದಲ್ಲಿ ಇನ್ನೊಂದು ಘಟನೆ ನಡೆಯಿತು. ಇಂದಿರಾಜಿ ಅವರು ರಾತ್ರಿ ಚುನಾವಣಾ ಭಾಷಣ ಮುಗಿಸಿಕೊಂಡು ಬದಾಮಿ ಐಬಿಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ಅಧಿಕಾರಿಯೊಬ್ಬರು ಬಂದು ರೂಂ ಕೇಳಿದರು. ಇಂದಿರಾಗಾಂಧಿ ಅವರಿಗೆ ವ್ಯವಸ್ಥಿತವಾದ ರೂಂ ಕಾದಿರಿಸಲಾಗಿದೆ. ಬೇರೆ ರೂಂ ಭರ್ತಿಯಾಗಿವೆ ಎಂದು ಅಲ್ಲಿನ ಮೇಟಿ ತಿಳಿಸಿದ. ಅವರು ಬರುವುದು ಗೊತ್ತಾದ ಮೇಲೆ ತಿಳಿಸು, ನಾನು ಎದ್ದು ಹೋಗುವೆ ಎಂದು ಆ ಅಧಿಕಾರಿ ಹೇಳಿದ. ಅಧಿಕಾರಿಗೆ ತಿಳಿಹೇಳುವ ಧೈರ್ಯ ಇಲ್ಲದ್ದರಿಂದ ಮೇಟಿ ರೂಂ ಕೊಟ್ಟ. ಎಲ್ಲ ಕಡೆ ಚುನಾವಣಾ ಭಾಷಣ ಮುಗಿಸಿಕೊಂಡು ಇಂದಿರಾ ಗಾಂಧಿಯವರು ಐಬಿಗೆ ಬರಬೇಕಾದರೆ ತಡರಾತ್ರಿಯಾಗಿತ್ತು. ಸಂಬಂಧಪಟ್ಟವರು ಮೇಟಿಗೆ ಕೂಗಿದರು. ಮೇಟಿ ಗಾಬರಿಯಿಂದ ಓಡಿ ಬಂದು ಅಧಿಕಾರಿಯನ್ನು ಎಬ್ಬಿಸುವುದಾಗಿ ಹೇಳಿ ರೂಂ ಕಡೆಗೆ ಧಾವಿಸಿದ. ಆಗ ಇಂದಿರಾಜಿಗೆ ಗೊತ್ತಾಗಿ ಎಬ್ಬಿಸದಿರಲು ಸೂಚಿಸಿದರು. ಕಾರಲ್ಲೇ ನಿದ್ದೆಹೋದರು!

ಅವರು ಪ್ರಧಾನಿಯಾಗಿದ್ದಾಗ ದೇವರಾಜ ಅರಸರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಬಾಲಬ್ರೂಯಿಯಲ್ಲೇ ಅವರ ಊಟದ ವ್ಯವಸ್ಥೆ ಮಾಡಲಾಗಿತ್ತು. ಇಂದಿರಾ ಗಾಂಧಿ ಊಟ ಮಾಡುವ ಸಂದರ್ಭದಲ್ಲಿ ಕಾರ್ಯಕರ್ತರು ಮ್ಯಾನರ್ಸ್ ಇಲ್ಲದೆ ಅಲ್ಲೇ ಗುಂಪುಗೂಡಿ ನಿಂತಿದ್ದರು. ಇಂದಿರಾ ಗಾಂಧಿ ಅವರಿಗೆ ಆಗ ಬಹಳ ಕಿರಿಕಿರಿ ಎನಿಸಿತು. ಅರಸು ಅವರ ಬಗ್ಗೆ ಇಂದಿರಾ ಅವರಿಗೆ ಬೇಸರ ಹುಟ್ಟಲು ಇದೂ ಒಂದು ಕಾರಣ ಎಂಬ ಸೂಕ್ಷ್ಮವನ್ನು ಜಾಗೀರದಾರ್ ಅರಿತಿದ್ದರು.

ಒಂದು ಹಳ್ಳಿಯಲ್ಲಿ ನೀರಿನ ಅಭಾವ ವಿಪರೀತವಾಗಿತ್ತು. ಜನ ಶೌಚಕ್ಕೆ ರದ್ದಿ ಪೇಪರ್ ಬಳಸುತ್ತಿದ್ದರು. ಅವರ ಸಂಕಷ್ಟಗಳ ಕುರಿತು ಬರೆಯುತ್ತಲೇ ತಮಾಷೆಯಾಗಿ “ನಮ್ಮ ಹಳ್ಳಿಗರು ಯುರೋಪಿಯನ್ನರ ಹಾಗ ಬಹಳ ಮುಂದುವರಿದಿದ್ದಾರೆ. ಶೌಚಕ್ಕಾಗಿ ಟಾಯ್ಲೆಟ್ ಪೇಪರ್ ಬಳಸುತ್ತಾರೆ” ಎಂದು ನಕ್ಕಿದ್ದರು.

ಅವರ ಬದುಕಿನ ಸುಖ ಸಂತೋಷಗಳೆಲ್ಲ ಪತ್ರಿಕಾರಂಗದ ಪರಿಧಿಯಲ್ಲೇ ಇದ್ದವು. ಅವರದು ಸದಾ ಸಹಾಯಹಸ್ತ. ಸಿಪಾಯಿಯಿಂದ ಹಿಡಿದು ಇನ್ನಾರಿದ್ದರೂ ತಮ್ಮ ಕೈಲಾಗುವ ಎಲ್ಲ ರೀತಿಯ ಸಹಾಯ ಮಾಡುತ್ತಿದ್ದರು. ಎಂ.ಕೆ. ಶಂಕರ್ ಮತ್ತು ಗೆಳೆಯರು ಪ್ರೆಸ್‌ಕ್ಲಬ್‌ನಲ್ಲಿ “ದಿಲ್‌ದಾರಾ ಜಾಗೀರ್‌ದಾರಾ” ಎಂದು ಹಾಡುವುದನ್ನು ಕೇಳಿ ಸಂತೋಷದಿಂದ ನಕ್ಕಿದ್ದುಂಟು. ಕೆಲವರು ನಿವೃತ್ತ ಪತ್ರಕರ್ತರು ಸಮಯ ಸಿಕ್ಕಾಗ ಪ್ರೆಸ್ ಕ್ಲಬ್ ಕಡೆಗೆ ಬಂದು ಮೂಲೆಯೊಂದರಲ್ಲಿ ಕುಳಿತಿದ್ದನ್ನು ನೋಡಿದಾಗ ಅವರ ಮನಸ್ಸು ಕರಗುತ್ತಿತ್ತು. ಅವರನ್ನು ತಮ್ಮ ಟೇಬಲ್‌ಗೆ ಕರೆಸಿ ಅವರಿಗೆ ಪ್ರಿಯವಾದುದನ್ನು ಕುಡಿಸಿ ಕಳುಹಿಸುತ್ತಿದ್ದರು. (ಅಂದಿನ ಪತ್ರಕರ್ತರಿಗೆ ಸಂಬಳ ಬಹಳ ಕಡಿಮೆ. ಅಲ್ಲದೆ ಅವರಲ್ಲಿನ ಬಹುಪಾಲು ಜನರಿಗೆ ಬಡತನ ರೂಢಿಯಾಗಿತ್ತು.)

ಅವರ ಆಳವಾದ ಜೀವನಪ್ರೇಮ ನನ್ನ ಮೇಲೆ ಬಹಳ ಪರಿಣಾಮ ಬೀರಿದೆ. ಒಂದು ಸಲ ಪ್ರೆಸ್ ಕ್ಲಬ್‌ನಲ್ಲಿ ಕುಳಿತಾಗ ನಾನು ಕಮ್ಯೂನಿಜಂ ಬಗ್ಗೆ ಹೇಳತೊಡಗಿದೆ. ಅವರು ಬಹಳ ಆಸಕ್ತಿಯಿಂದ ಕೇಳುತ್ತ ಮೌನವಾಗೇ ಇದ್ದರು. ಸದಾ ಪ್ರಚಲಿತ ರಾಜಕೀಯ ಆಗುಹೋಗುಗಳ ಕಡೆಗೆ ಅವರ ಲಕ್ಷ್ಯವಿದ್ದುದರಿಂದ ಸೈದ್ಧಾಂತಿಕ ವಿಚಾರಗಳ ಕಡೆಗೆ ಹೆಚ್ಚು ಲಕ್ಷ್ಯ ಕೊಟ್ಟವರಲ್ಲ ಎಂಬ ಕಾರಣದಿಂದ ನಾನು ಕಮ್ಯೂನಿಜಂ ಬಗ್ಗೆ ಹೇಳುತ್ತಲೇ ಇದ್ದೆ. ಅವರು ಕೇಳುತ್ತಲೇ ಇದ್ದರು. ಕೊನೆಗೆ ಇಂದು ನೀವು ನಮ್ಮ ಮನೆಗೆ ಬಂದು ಉಳಿಯಬೇಕು ಎಂದರು. ನಾನು ಒಪ್ಪಿಕೊಂಡು ಅವರ ಚೇತಕ್ ಹಿಂದೆ ಕುಳಿತು ಕೋಲ್ಸ್ ಪಾರ್ಕ್ ಬಳಿಯ ಸ್ಪೆನ್ಸರ್ ರೋಡಿನಲ್ಲಿನ ಅವರ ಮನೆಗೆ ಹೋದೆ. ಅದೊಂದು ಭವ್ಯ ಮನೆ. ಅದರ ಕಥೆ ಹೇಳಿದರು. ಅವರ ಸೋದರ ಮಾವನವರ ಮನೆ ಅದು. ಹಿರಿಯ ಅಧಿಕಾರಿಯಾಗಿದ್ದ ಅವರು ನಿವೃತ್ತಿಯ ನಂತರ ಬೆಳಗಾವಿ ವಾಸಿಯಾಗಿದ್ದರು. ಒಳಗೆ ಹೋದಾಗ ಅವರ ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆ ಅವರ ಮನೆಗೆಲಸದ ಮಹಿಳೆಯೂ ಊಟಕ್ಕೆ ಕುಳಿತಿದ್ದರು. ಜಾಗೀರದಾರ್ ಎಲ್ಲರ ಪರಿಚಯ ಮಾಡಿಸಿದರು. ಅವರು ಮನೆಗೆಲಸದ ಮಹಿಳೆ ಎಂದು ಇಂಗ್ಲಿಷ್‌ನಲ್ಲಿ ಹೇಳಿದರು.

ಅವರೆಲ್ಲ ಕುಳಿತ ಕುರ್ಚಿ, ಪ್ಲೇಟು ಮತ್ತು ಆಹಾರದಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ. ಅದು ನಾಲ್ಕು ಮಾಸ್ಟರ್ ಬೆಡ್ ರೂಂ ಮನೆಯಾಗಿತ್ತು. ಎಲ್ಲ ಕೋಣೆಗಳನ್ನು ತೋರಿಸಿದರು. ಅವೆಲ್ಲ ಒಂದೇ ಸೈಜಿನ ಕೋಣೆಗಳು. ಪಲ್ಲಂಗ, ಬೆಡ್, ಹೊದಿಕೆ ಹೀಗೆ ಯಾವುದರಲ್ಲೂ ವ್ಯತ್ಯಾಸ ಇರಲಿಲ್ಲ. ಒಂದು ಇಬ್ಬರು ಮಕ್ಕಳ ಕೋಣೆ, ಇನ್ನೊಂದು ಅವರ ಕೋಣೆ, ಮತ್ತೊಂದು ಮನೆಗೆಲಸದ ಹೆಣ್ಣುಮಗಳ ಕೋಣೆ. (ಅವರು ಮನೆಯ ಹಿರಿಯರ ಹಾಗೆ ಇದ್ದರು!) ಉಳಿದ ನಾಲ್ಕನೆಯ ಕೋಣೆ ಅತಿಥಿಗಳದ್ದು. ಇದನ್ನೆಲ್ಲ ನೋಡಿ ಮತ್ತು ಕೇಳಿ ನಾನು ನಾಚಿ ನೀರಾದೆ. ನನ್ನ “ಅಮೃತ ಮತ್ತು ವಿಷ” ಪುಸ್ತಕವನ್ನು ಅವರಿಗೆ ಅರ್ಪಣೆ ಮಾಡಿದಾಗ ಹೀಗೆ ಬರೆದೆ:

ಅಗಲಿದ
ಮಾನವತಾವಾದಿ ಮಿತ್ರ
ಐ.ಕೆ. ಜಾಗೀರದಾರ್
ಅವರಿಗೆ
(ನಾ ಕಂಡ ಶ್ರೇಷ್ಠ ಪತ್ರಕರ್ತರಲ್ಲಿ ಒಬ್ಬರಾಗಿದ್ದ ಐ.ಕೆ. ಜಾಗೀರ್‌ದಾರ್ ಅವರ ಜೊತೆ ಒಂದು ಸಂಜೆ ಮಾತನಾಡುವಾಗ, ಕಮ್ಯೂನಿಜಂನ ಆದರ್ಶಗಳ ಬಗ್ಗೆ ವಿವರಿಸಿದೆ. ಇವೆಲ್ಲ ನನ್ನ ತಲೆಗೆ ಹೋಗುತ್ತಿಲ್ಲ ಎಂದು ಅವರು ತಿಳಿಸಿದರು. ಆ ರಾತ್ರಿ ಅವರ ಮನೆಗೆ ಕರೆದೊಯ್ದರು. ಅವರ ಮನೆಗೆಲಸದವಳು, ಅವರ ಪತ್ನಿ ಮತ್ತು ಅವರ ಮಕ್ಕಳ ಜೊತೆ ಡೈನಿಂಗ್ ಟೇಬಲ್ ಮೇಲೆ ಊಟ ಮಾಡುತ್ತಿದ್ದಳು. ಅವಳು ಇರುವ ಕೋಣೆ ಮತ್ತು ಹಾಸಿಗೆಗಳು ಜಾಗೀರ್‌ದಾರರ ಕೋಣೆ ಮತ್ತು ಹಾಸಿಗೆಗಳ ಹಾಗೇ ಚೊಕ್ಕಟವಾಗಿದ್ದವು. ಆಮೇಲೆ ನಾನೆಂದೂ ಅವರ ಜೊತೆ ಕಮ್ಯೂನಿಜಂ ಬಗ್ಗೆ ಮಾತನಾಡಲಿಲ್ಲ.)
ರಂಜಾನ್ ಹಬ್ಬದಲ್ಲಿ ಪ್ರಜಾವಾಣಿಯ ಎಲ್ಲ ಪತ್ರಕರ್ತರಿಗೆ ಮತ್ತು ಕೆಲ ಅಧಿಕಾರಿ ಮಿತ್ರರಿಗೆ ಹಬ್ಬದೂಟದ ವ್ಯವಸ್ಥೆ ಮಾಡುತ್ತಿದ್ದರು. ಅದು ಅವರಿಗೆ ಬಹಳ ಖಷಿಯ ಕ್ಷಣವಾಗಿತ್ತು. ಅಲ್ಲಿ ಪಾನಪ್ರಿಯರಿಗೂ ವ್ಯವಸ್ಥೆ ಮಾಡುತ್ತಿದ್ದರು. ಬದುಕಿನ ರೀತಿ ಅನನ್ಯವಾಗಿತ್ತು.

ಜಾಗೀರದಾರ್ ಅವರು ಸದಾ ಹಸನ್ಮುಖಿಯಾಗಿದ್ದು ತಮಾಷೆ ಮಾಡುವ ವ್ಯಕ್ತಿಯಾಗಿದ್ದರು. ಸಾಯಂಕಾಲ ಕಚೇರಿಯ ಒಳಗೆ ಬರುವಾಗ, ಮೊದಲಿಗೆ ಕಾಣುವ ಜಿ.ಎನ್. ರಂಗನಾಥ ರಾವ್ ಅವರಿಗೆ “ಹಲೋ ರಾಂಗನಾಥ್” ಎನ್ನುತ್ತ ಮುಂದೆ ಸಾಗುತ್ತಿದ್ದರು. ಜಯತೀರ್ಥ ಕದರಮಂಡಲಗಿ ಅವರಿಗೆ “ಏನಯ್ಯಾ ಬಡ ಬ್ರಾಹ್ಮಣ” ಎನ್ನುತ್ತಿದ್ದರು. ಅವರು ಎಷ್ಟೇ ತಮಾಷೆ ಮಾಡಿದರೂ ಸಹೋದ್ಯೋಗಿಗಳು ಎಂಜಾಯ್ ಮಾಡುತ್ತಿದ್ದರು. ಆದರೆ ಕಷ್ಟದಲ್ಲಿರುವವರಿಗೆ ಅವರು ಸಹಾಯ ಮಾಡುವುದನ್ನು ಎಂದೂ ಯಾರಿಗೂ ಹೇಳುತ್ತಿರಲಿಲ್ಲ. ನಂದಿನಿ ಲೇ ಔಟ್‌ನಲ್ಲಿ ನಾನು ಕೊಂಡ ಫ್ಲ್ಯಾಟಿಗೆ ಅವರು ಬ್ಯಾಂಕ್ ಸಾಲ ಕೊಡಿಸಲು ತಮ್ಮ ಆಸ್ತಿ ದಾಖಲೆಗಳೊಂದಿಗೆ ಗ್ಯಾರಂಟಿ ಕೊಡದಿದ್ದರೆ ನಾನು ಫ್ಲ್ಯಾಟ್ ಕೊಳ್ಳುವುದು ಕನಸಿನ ಮಾತಾಗಿತ್ತು. ಈ ವಿಚಾರವನ್ನು ನಾನು ನನ್ನ ಮಿತ್ರರಿಗೆ ಹೇಳಿದೆ. ಆದರೆ ಅವರು ಎಂದೂ ಈ ಕುರಿತು ಮಾತನಾಡಲಿಲ್ಲ. ಅವರು ಎಂದೂ ಜಂಭ ಕೊಚ್ಚಿಕೊಳ್ಳುತ್ತಿರಲಿಲ್ಲ. ಬೇರೆ ಪತ್ರಕರ್ತರು ಹೇಳುತ್ತಿದ್ದರು. ಮುಖ್ಯಮಂತ್ರಿ ದೇವರಾಜ ಅರಸರು ಟೇಬಲ್ ಷೇರ್ ಮಾಡಿಕೊಳ್ಳುತ್ತಿದ್ದುದು ಜಾಗೀರದಾರ್ ಜೊತೆ ಮಾತ್ರ ಎಂದು. ಅವರು ಪ್ರಜಾವಾಣಿಯ ದೊಡ್ಡ ಹುದ್ದೆಯಲ್ಲಿರಲಿಲ್ಲ. ಆದರೆ ಆ ಹಿರಿಯ ವರದಿಗಾರ ಹುದ್ದೆಗೆ ದೊಡ್ಡ ಘನತೆ ತಂದಿದ್ದರು. ಆ ಕಾಲದಲ್ಲಿ ಅವರಷ್ಟು ಜನಪ್ರಿಯರಾಗಿದ್ದ ಇನ್ನೊಬ್ಬ ಪತ್ರಕರ್ತ ಕಾಣಲಿಲ್ಲ.

ಪ್ರತಿಭಾವಂತ ಪತ್ರಕರ್ತ ಜಾಗೀರದಾರ್ ಅವರಿಗೆ ಗರ್ವ ಎಂಬುದೇ ಇರಲಿಲ್ಲ. ಅವರು ನನ್ನ ಪಕ್ಕದಲ್ಲಿ ಬಂದು ಕುಳಿತು ಸುದ್ದಿ ಬರೆಯಲು ಪ್ರಾರಂಭಿಸುತ್ತಿದ್ದರು. ಅವರು ಬರೆಯುವ ರೀತಿ ಕೂಡ ಅವರದೇ ಆಗಿತ್ತು. ಮುದ್ರಣಕ್ಕೆ ಬಳಸುವ ಪೇಪರ್ ಕಟ್ ಆಗಿ ಎ ಫೋರ್ ಸೈಜಿಗಿಂತ ಸ್ವಲ್ಪ ಕಡಿಮೆ ಸೈಜಿನವು ಆಗಿರುತ್ತಿದ್ದವು. ಅವುಗಳನ್ನು ಅರ್ಧ ಕಟ್ ಮಾಡಿದ ನಂತರ ಬಹಳ ಸ್ಪೀಡ್ ಆಗಿ ಬರೆದು ಓದಲು ಕೊಡುತ್ತಿದ್ದರು. ಮೊದಲ ಸಲ ನನಗೆ ಗಾಬರಿಯಾಯಿತು. ಯಾರೂ ದೊಡ್ಡವರಲ್ಲ, ಯಾರೂ ಸಣ್ಣವರಲ್ಲ, ಕಾಗುಣಿತ ದೋಷವಿದ್ದರೆ ತಿದ್ದಿ ಕೊಡ್ತಾ ಇರಿ. ಎಂದರು. ಒಂದು ಪೀಸ್ ಓದುವುದರೊಳಗೆ ಇನ್ನೊಂದು ಪೀಸ್ ರೆಡಿ ಇರುತ್ತಿತ್ತು. ಅಷ್ಟು ಸ್ಪೀಡಾಗಿ ಬರೆಯುತ್ತಿದ್ದರು.

40 ವರ್ಷಗಳ ಹಿಂದೆ ಪ್ರಜಾವಾಣಿ ಪತ್ರಿಕೆಯಲ್ಲಿ ಹೆಸರು ಪ್ರಕಟವಾಗುವುದೇ ದೊಡ್ಡ ಸಾಧನೆಯಾಗಿತ್ತು. ಒಂದೊಂದು ಸಲ ವೇದಿಕೆ ಮೇಲೆ ಹತ್ತಾರು ಜನ ಆಸೀನರಾಗಿರುತ್ತಿದ್ದರು. ಅವರೆಲ್ಲರ ಹೆಸರು ಬರೆಯಲಿಕ್ಕಾಗದ ಸ್ಥಿತಿಯಲ್ಲಿ “ಮುಂತಾದವರು” ಎಂದು ಕೊನೆಗೆ ಸೇರಿಸುವುದು ರೂಢಿ. ಒಬ್ಬ ವ್ಯಕ್ತಿ ಸಂಪಾದಕರ ಬಳಿ ಬಂದು ತಕರಾರು ಮಾಡಿದರು. ಸುದ್ದಿ ತಂದ ಜಾಗೀರದಾರ್ ಅವರನ್ನು ಸಂಪಾದಕರು ಕರೆದರು. ಬಂದ ವ್ಯಕ್ತಿ ಕೇಳಿದ್ದಕ್ಕೆ “ನಿಮ್ಮ ಹೆಸರು ಮುಂತಾದವರು ಎಂಬಲ್ಲಿ ಇದೆ. ನಿಮಗೆ ಕಾಣುವುದಿಲ್ಲ.” ಎಂದರು. ಬಂದವರು ಎಲ್ಲ ಮರೆತು ನಗುತ್ತ ಹೋದರು.

ಒಂದು ಸಲ ಸಂಪಾದಕ ಎಂ.ಬಿ. ಸಿಂಗ್ ಅವರು “ಜಾಗೀರದಾರ್ ನೀವು ಯಾವಾಗ ಸಂಪಾದಕ ಆಗೋದು” ಎಂದು ತಮಾಷೆ ಮಾಡಿದರು. ಆಗ ಜಾಗೀರದಾರ್ ಅವರು ಅಷ್ಟೇ ತಮಾಷೆಯಲ್ಲಿ “ಅದಿರಲಿ, ನೀವು ಯಾವಾಗ ಪತ್ರಕರ್ತ ಆಗೋದು” ಎಂದುಬಿಟ್ಟರು. ಇಬ್ಬರೂ ನಕ್ಕರು. ಹೀಗಿದ್ದರು ನಮ್ಮ ಜಾಗೀರದಾರ್.

ಅವರು ಯಾರಿಗೂ ಹೆದರುತ್ತಿರಲಿಲ್ಲ. ಒಂದು ಸಲ ದೀರ್ಘ ಕಾಲ ಸ್ಟ್ರೈಕ್ ನಡೆಯಿತು. ಆ ಸ್ಟ್ರೈಕ್ ಒಬ್ಬ ಪ್ಯಾಕರ್ ಮೇಲೆ ಆದ ಅನ್ಯಾಯದ ವಿರುದ್ಧ ಇತ್ತು. ಹೀಗಾಗಿ ಸುಮಾರು ಎರಡು ತಿಂಗಳುಗಳಷ್ಟು ಕಾಲ ಪತ್ರಿಕೆ ನಿಂತಿತು. ಅದು ಮೊದಲ ಮತ್ತು ಕೊನೆಯ ಚಳವಳಿಯಾಯಿತು. ಆಗ ಪತ್ರಿಕೆಯ ಮಾಲಿಕರಲ್ಲೊಬ್ಬರು, ಕೆಲ ಪತ್ರಕರ್ತರು ಪ್ಯಾಕರ್ ಆಗಲು ಮಾತ್ರ ಯೋಗ್ಯರು ಎಂದು ಟೀಕಿಸಿದರು. ಇದು ಜಾಗೀರದಾರ್ ಅವರ ಕಿವಿಗೆ ಬಿದ್ದಿತು. ಅವರು ಬಂದರು. ಚಳವಳಿ ನಿರತ ಪತ್ರಕರ್ತರ ಮಿತ್ರರನ್ನು ಉದ್ದೇಶಿಸಿ ಮಾತನಾಡುತ್ತ, ಮಾಲೀಕರು ಹೇಳಿದ್ದು ಸರಿ. ನಾವು ಕೆಲ ಪತ್ರಕರ್ತರು ಪ್ಯಾಕರ್ ಆಗುವ ಯೋಗ್ಯತೆಯಾದರೂ ಹೊಂದಿದ್ದೇವೆ. ಆದರೆ ಅವರ ಪೂರ್ವಜರು ಈ ಪತ್ರಿಕೆಯನ್ನು ಬೆಳೆಸದೆ ಇದ್ದಿದ್ದರೆ ಇವರು ಪ್ಯಾಕರ್ ಆಗುವ ಯೋಗ್ಯತೆಯನ್ನು ಕೂಡ ಹೊಂದುತ್ತಿರಲಿಲ್ಲ ಎಂದು ಹೇಳಿಯೆ ಬಿಟ್ಟರು!

ನಂತರ ಅವರು ಒಂದು ದಿನ ಬೆಳಿಗ್ಗೆ ಮನೆಗೆ ಬಂದರು. ಪ್ರಜಾವಾಣಿಗೆ ರಾಜೀನಾಮೆ ಕೊಡುವುದಾಗಿ ಹೇಳಿದರು. ನನಗೆ ಶಾಕ್ ಆಯಿತು. ಇದೇನು ಹೇಳುವಿರಿ? ಏನಾಯಿತು? ಎಂದೆ. ಅವರು ನೊಂದವರ ಹಾಗೆ ಕಂಡರು. ಆದರೆ ಯಾರ ಬಗ್ಗೆಯೂ ಟೀಕೆ ಮಾಡಲಿಲ್ಲ. ಅಂದೇ ರಾಜೀನಾಮೆ ಕೊಟ್ಟರು.

ಮುಂದೆ ಸ್ವಲ್ಪ ದಿನಗಳಲ್ಲಿ “ಸಂಕೇತ” ಹೆಸರಿನ ಪಾಕ್ಷಿಕ ಪತ್ರಿಕೆ ಆರಂಭಿಸಿ ಸಂಪಾದಕರಾದರು. ಕೆಲ ತಿಂಗಳುಗಳಲ್ಲಿ ನನಗೆ ಕಾರವಾರಕ್ಕೆ ವರ್ಗವಾಯಿತು. ಬಾತ್ಮೀದಾರನಾಗಿ ಹೋದೆ. ಒಂದು ದಿನ ಜಾಗೀರದಾರ್ ಫೋನ್ ಮಾಡಿದರು. ಪಣಜಿಯಲ್ಲಿ ಸಹೋದರ ಎಂಜಿನಿಯರ್ ಆಗಿದ್ದಾರೆ. ತಾಯಿ ಅವರ ಬಳಿ ಹೋಗಿದ್ದಾರೆ. ಅವರನ್ನು ಕಾಣಲು ಪಣಜಿಗೆ ಹೋಗುವೆ. ಹೋಗುವ ಮೊದಲು ಹುಬ್ಬಳ್ಳಿಯಿಂದ ನಿಮ್ಮಲ್ಲಿಗೆ ಬರುವೆ. ಕೈಗಾಗೆ ಭೇಟಿ ನೀಡಿ ಪಣಜಿಗೆ ಹೋಗುವೆ. ಕೈಗಾಗೆ ಸಂಬಂಧಿಸಿದಂತೆ ನಿಮ್ಮ ಜೊತೆ ಚರ್ಚಿಸುವೆ. ಲೇಖನ ಬರೆಯಬೇಕಾಗಿದೆ ಎಂದು ತಿಳಿಸಿದರು. ನನಗೆ ಬಹಳ ಖುಷಿಯಾಯಿತು. ಮರುದಿನ ಬರುವವರಿದ್ದರು. ಆದರೆ ಹಿಂದಿನ ರಾತ್ರಿ ಹುಬ್ಬಳ್ಳಿಯಿಂದ ಜಾಗೀರದಾರ್ ಅವರ ನಿಧನದ ಸುದ್ದಿ ಬಂದಿತು! ಆ ಕ್ಷಣವೇ ನಾನು ಆರ್ಧ ಸತ್ತಂತೆ ಭಾಸವಾಯಿತು!

About The Author

ರಂಜಾನ್ ದರ್ಗಾ

ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ.  ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ