ಇಳಿಸಂಜೆ ಹೊತ್ತುಗಳಲಿ
ಈ ಹಾದಿಯಲಿ ಪರಿಮಳವೊಂದು
ಸುಮ್ಮನೆ ಸರಿದು ಹೋಗುತ್ತದೆ
ತೂಗಿಕೊಳ್ಳುತ್ತವೆ ಝುಮುಕಿ
ತಮ್ಮ ಪಾಡಿಗೆ ತಾವೇ.
ಪಸೆಯ ಮುಂಗುರುಳು
ಬೆಳಕ ಕೊಳದೊಳಗೆ
ಮುಳು ಮುಳುಗಿ
ಏಳುತಿವೆ.
ಬೆನ್ನಿನಲಿ ಕಣ್ಣು ಹೊತ್ತವ ಅವಳೆದೆಯ
ತಳಮಳಕೆ ನಲುಗುವ ಸುಖದಲ್ಲಿದ್ದಾನೆ
ಬಿಕರಿಯಾಗದ ತನ್ನ ಒಲವಿನೂರಿನ ‘ಸರಕು!’
ಸುಖಾಸುಮ್ಮನೆ
ನವೆಯುತ್ತಾನೆ ನೋಯುತ್ತಾನೆ.
ಸುಳಿಸುಳಿದು ಬಳಲಿ
ಗೊಣಗುತ್ತಾನೆ..
ಇದು ಯಾವ ಲೋಕದ ಹೂವು?
ಯಾಕಾದಳು ಇವಳು
ನನ್ನೆದೆಯ ಕಾವು?
ಲೋಲಾಕಿನ ಲೋಕದಲೂ
ಲಯದ ಲಾಲಿತ್ಯ.!
ಪರಿಮಳಕೆ ಪತರಗುಟ್ಟುವ ಹುಡುಗಿ
ಸೊಕ್ಕುವ ನಾಳೆಗಳ ಹೆಣಿಗೆಯಲಿ
ನಕ್ಕು ಝುಮುಕಿ ಕಳಚುತ್ತಾಳೆ.
ಈಗೀಗ ಬಿಕ್ಕುವುದರ ಕುರಿತು
ಕೇಳಿದರೆ ಗೊತ್ತಿಲ್ಲವೆನುತಾಳೆ.!
ಹದವಾದ ಬೇಸರವೊಂದು
ಸುಖವಾಗಿ ಆವರಿಸಿದೆ.
ಹಕ್ಕಿಯಾಲಾಪ
ಗರಿಕೆ ತುದಿಯ ಬೆಳಕು
ಕೆರೆಗಿಳಿದ ಸೂರ್ಯ…
ತೆರೆತೆರೆಯೂ ಮಿಲನ ಮುಗಿದ
ಹಾಸಿಗೆಯ ಸುಕ್ಕು.
ಕಪಾಟಿನಲಿ ಕೊಸರುತ್ತಿವೆ ಇನ್ನೊಂದು
ಜೋಡಿ ಝುಮುಕಿ
ನಾನವನ ನೋಡಬೇಕೇ ಸಖಿ.!
ಸುಮ್ಮನಾದರೂ ಅವಳ ಕಿವಿಗೊಂದು
ಸದ್ದು ಕೇಳುತ್ತದೆ.
ಹೊದ್ದ ಚಾದರದೊಳಗೆ ಮುದ್ದು
ಕನವರಿಸುತದೆ
ಹಸಿಹಸೀ ಹಗಲುಗಳ ಮೈಯ
ಮೇಲೆಲ್ಲಾ ಒಲವ ಕಾವ್ಯ
ತುಸುತುಸುವೇ ಹೊಳೆವ ಅವಳೀಗ
ಅವನೆಂಬ ಅವನ ಮಯ.!!!
ನಂದಿನಿ ವಿಶ್ವನಾಥ ಹೆದ್ದುರ್ಗ ಕಾಫಿಬೆಳೆಗಾರ್ತಿ ಮತ್ತು ಕೃಷಿ ಮಹಿಳೆ.
ಕಾವ್ಯ, ಸಾಹಿತ್ಯ ಮತ್ತು ಫೋಟೋಗ್ರಫಿ ಇವರ ಆಸಕ್ತಿಯ ವಿಷಯಗಳು.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ