ಮಾಗಿಯ ಹನಿಗಳು
ಹತ್ತ ಬಯಸುತ್ತೇನೆ
ಅವನಿಗಾಗಿಯೇ
ಈ ಅಸಂಖ್ಯ
ಮೆಟ್ಟಿಲುಗಳನು,
ಆ ಎತ್ತರದಲಿ
ಅವನಿಲ್ಲದಿರಲಿ
ಎಂಬುದೊಂದೇ
ನಿರೀಕ್ಷೆ ನನಗೆ
******
ಇಲ್ಲೊಬ್ಬ ಹೆಣ್ಣು
ತಳ ಒಡೆದ ಮಡಿಕೆಯ
ಒಡೆಯನಿಗೆ ಮೊಗೆಮೊಗೆದು
ಪ್ರೀತಿ ಸುರಿಯುತ್ತಾಳೆ
ನೀಡಿದಷ್ಟೇ ಆಯ್ತು
ಪಡೆಯಲಿಲ್ಲವೆಂಬ
ನಿರಾಸೆ ಅವಳದ್ದು
ಮಡಿಕೆಯ ತಳ ಒಡೆದ
ಮಾಹಿತಿ
ಅವಳಿಗೆ ತಿಳಿಯದ್ದೇನಲ್ಲ
ಜಾಣಗುರುಡಿನ ಹುಡುಗಿ
ಸದ್ಯದ ನನ್ನ ಅಚ್ಚರಿ.
*****
ನಾನು ಆವರಿಸ
ಬಂದಾಗಲೆಲ್ಲಾ
ನೀನು ನಿರಾಕರಿಸುತ್ತಲೇ
ಇರು
ಹುರಿದುಕೊಳ್ಳಲಿ ಎದೆ
ಕಮ್ಮಗೆ
ಮಾಗಿ ಸೊಗಸಾಗಲು
ಇಷ್ಟು ವಿರಹ ಸಾಕು
*****
ಪ್ರೀತಿಸುವುದೆಂದರೆ
ಬಿಡಿಸಲಾಗದಷ್ಟು
ಕಡ ಪಡೆದು
ಹೃದಯ
ಅಡವಿಡುವುದು
ಬಡ್ಡಿಗಾಗಿಯೇ
ಅವನು
ಮತ್ತೆಮತ್ತೆ
ಬರುವಂತೆ
ಮಾಡುವುದು
*****
ಎರಡು ಹೆಜ್ಜೆಗಳ
ನಡುವಿನ ಸಮಯ
ಅಳೆಯುವಷ್ಟರಲ್ಲಿ
ಆತ್ಮಕ್ಕೆ
ಹೊಸಗಾಯವಾಗಿದೆ
ದಿನ ದೀರ್ಘವಾಗುವ
ಕುರಿತು ಮುಂದೊಮ್ಮೆ
ಬರೆಯುವೆ
*****
ಒಲವಿನೆಡೆಗೊಂದು
ಗಾಡ ವಿಷಾದ
ಮೂಡುವ ಮುನ್ನ
ಕಡುಮೋಹಿಯಾಗಿಬಿಡೆ
ಗೆಳತಿ
*****
ಇಲ್ಲಿ ಯಾವುದು
ಸುಲಭ?
ಪಲ್ಲವಿಸುವುದು
ಇಲ್ಲಾ
ಕಲ್ಲಾಗುವುದು?
*****
ನಾಳೆಗಳ ಕುರಿತು
ಏನು ಹೇಳಲಿ ಗೆಳತಿ
ಬಣ್ಣಗಳ ನೆನಪಲ್ಲಿ
ನಾ ಕಾಣುವ
ಕಪ್ಪು ಬಿಳುಪು
ಕನಸಲ್ಲವೇ ಅವು
*****
ಸೋಲುವ
ಸುಖದ ಕುರಿತು
ಅವನಿಗೆ
ಹೇಳಬೇಕಿತ್ತು
ಸೋತೆ
ಸುಖವೆನಿಸಲಿಲ್ಲ
*****
ಗುರಿಯಿರದ
ಕಾರ್ಯವೆಂದರೆ
ಇದೊಂದೇ ನೋಡೆ
ಗೆಳತಿ
ಈ ಹಾದಿಯಷ್ಟೆ ಚೆಲುವು
ಗಮ್ಯದ ಕುರಿತು
ಗೊಂದಲಗಳೇ
ಹೆಚ್ಚು
*****
ಅವ ಬರುವ ಮುನ್ನವೂ
ಬದುಕಿತ್ತು
ಚಿನ್ನದ ಹುಡಿ
ಚಿಮುಕಿಸಿದ್ದ ಸಂಜೆಗಳಿದ್ದವು
ಬಿಕ್ಕುತ್ತಲೇ ಎದ್ದ
ಮುಂಜಾನೆಗಳಿದ್ದವು
ನಡುರಾತ್ರಿಗಳ
ನವಿರು ಮಾತಿದ್ದವು
ಸುಡು ಮಧ್ಯಾಹ್ನಗಳೂ
ತಣ್ಣಗಿದ್ದವು
ದಾರಿಹೋಕನ ಒಮ್ಮೆ
ಹಿಂದಿರುಗಿ ನೋಡಿದೆ
ಕಣ್ಣ ಭೇಟಿಯೊಳಗೆಲ್ಲವೂ
ಅಂತ್ಯ
ಸೋಜಿಗಕ್ಕೆ ಸಂಭ್ರಮದ
ಕೊನೆ ಸಿಗಲೇ ಇಲ್ಲ
*****
ನಡುರಾತ್ರಿಯ ಕಡುಕತ್ತಲಿನಲ್ಲಿ
ಇನ್ನೇನು ಕಾಮನಬಿಲ್ಲು
ಸುಳಿಯತೆನ್ನುವ ವೇಳೆಗೆ
ಮತ್ತೆ ಇಳಿಯುತ್ತಿ ಗೆಳೆಯ
ನನ್ನ ಎದೆಯಾಳಕ್ಕೆ
ಹೊಸದೊಂದು ನೋವಿನ
ಹಾಡು ಹಾಡುತ್ತಾ
ಕಾಮನಬಿಲ್ಲಿಗೆ ಕತ್ತಲನೆ ಮತ್ತೆ
ಹೊದಿಸುತ್ತಾ
*****
ಜಗದ ನೋವುಗಳ ಎದೆಗೆ
ಕರುಣಿಸಿದ ಜನ್ನತನ
ಅನುಗ್ರಹಕೆ
ಅಭಾರಿಯಾಗಿರುವೆ
ಮಂಜುಗೋಪುರವಾಗಿಸಿದ
ಚಂದದ ನೋವುಗಳು
ಗಂಗೆಯಾಗಿ ಹರಿವಂತ
ಸಾಲುಗಳ ಹರಸಿಬಿಡು
ಕಾಫಿರನೆ
ನಿನ್ನ ಒಳ್ಳೆಯತನದಲ್ಲಿ
ನಂಬಿಕೆಯಿದೆ ನನಗೆ.
ನಂದಿನಿ ವಿಶ್ವನಾಥ ಹೆದ್ದುರ್ಗ ಕಾಫಿಬೆಳೆಗಾರ್ತಿ ಮತ್ತು ಕೃಷಿ ಮಹಿಳೆ.
ಕಾವ್ಯ, ಸಾಹಿತ್ಯ ಮತ್ತು ಫೋಟೋಗ್ರಫಿ ಇವರ ಆಸಕ್ತಿಯ ವಿಷಯಗಳು.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಅರ್ಥಪೂರ್ಣವಾದ ಅಕ್ಕ