Advertisement
ನಟಿ ಅಕ್ಷತಾ ಪಾಂಡವಪುರ ಬರೆದ ದಿನಚರಿಯ ಪುಟಗಳು

ನಟಿ ಅಕ್ಷತಾ ಪಾಂಡವಪುರ ಬರೆದ ದಿನಚರಿಯ ಪುಟಗಳು

ಬಾಗಿಲು ಕಿಟಕಿ ಮುಚ್ಚಿದ ಆ ನಾಲ್ಕು ಗೋಡೆಯ ನಡುವಲ್ಲಿ ನಾನೊಬ್ಬಳು ಒಂಟಿ ಪಿಶಾಚಿಯಂತಿದ್ದೆ. ನಾ ಮಲಗುವ ಕೋಣೆಯಲ್ಲಿ ಯಾವಾಗಲೂ ದೀಪವೊಂದನ್ನು ಉರಿಸಿಡುತ್ತಿದ್ದೆ. ಕೋಣೆಯೊಳಗೆ ಒಂದೆರಡು ಗಂಟೆಗಳನ್ನು ತೂಗು ಹಾಕಿಕೊಂಡಿದ್ದೆ. ಎದ್ದರೆ ಮತ್ತೆ ಕಿಟಕಿಯ ಬಳಿ ನೋಡುತ್ತಿರಲಿಲ್ಲ. ಗಂಟೆಗಳನ್ನು ಮೆಲುವಾಗಿ ಬಾರಿಸಿ ಕಣ್ಣು ಮುಚ್ಚಿ ಉಸಿರನ್ನು ಒಳ ಎಳೆದು ಮತ್ತೆ ಹೊರ ಬಿಟ್ಟು ತಕ್ಷಣಕ್ಕೆ ಸಮಾಧಾನ ಮಾಡಿಕೊಳ್ಳುತ್ತಿದ್ದೆ. ಆದರೂ ಈ ಸಮಾಧಾನ ಪ್ರತಿ ರಾತ್ರಿಗೂ ಸಾಕಾಗುತ್ತಿರಲಿಲ್ಲ. ಒಂದೊಂದು ರಾತ್ರಿಯಲ್ಲಿ ಯಾವ ಶಬ್ಧ ಕೇಳಿಸಿದರೂ ಭಯವಾಗುತ್ತಿತ್ತು. ನನ್ನ ಏದುಸಿರಿಗೇ ನಾನು ಹೆದರುತ್ತಿದ್ದೆ. ಪಕ್ಕದ ಕೋಣೆಯಿಂದ ಸ್ನೇಹಿತರ ಮಾತು ನಗು ಕೇಕೆ ಕೇಳಿಸಿದರೆ ಸಾಕು ಹೆದರಿ ಸಾಯುತ್ತಿದ್ದೆ.
ನಟಿ ಅಕ್ಷತಾ ಪಾಂಡವಪುರ ಬರೆದ ದಿನಚರಿಯ ಪುಟಗಳು.

ಅದು ಹಾಸ್ಟೆಲ್ ಜೀವನ. ದೂರದ ದೆಹಲಿಯಲ್ಲಿದ್ದೆ. ಬೆಳಗ್ಗೆ ಐದೂವರೆಗೆ ಎದ್ದರೆ ರಾತ್ರಿ ಎಷ್ಟೊತ್ತಿಗೆ ಬಂದು, ರೂಮು ಸೇರಿ ಮಲಗುತ್ತಿದ್ದೆನೋ ಗೊತ್ತಿಲ್ಲ; ಅಷ್ಟು ಕೆಲಸವಿರುತ್ತಿತ್ತು. ಅಷ್ಟೇ ಆಯಾಸವಾಗುತ್ತಿತ್ತು. ಆದ್ದರಿಂದ ಆದಷ್ಟು ಬೇಗ ರೂಮಿಗೆ ಹೋಗಿ ದಿಂಬಿಗೆ ತಲೆ ಕೊಟ್ರೆ ಸಾಕಪ್ಪ ಅನ್ನಿಸುತ್ತಿತ್ತಾದರೂ, ಬಯಸಿದ ನಿದ್ರೆ ಬರುವುದು ಮಾತ್ರ ಅಷ್ಟು ಸುಲಭದ ಮಾತಾಗಿರಲಿಲ್ಲ. ತಣ್ಣೀರಿನ ಸ್ನಾನ ಮಾಡಿ ಒಂದು ನಿಮಿಷ ಧ್ಯಾನ ಮಾಡಿ ನನಗೆ ನಾನೆ ಗುಡ್ ನೈಟ್ ಹೇಳಿಕೊಂಡು ದಿಂಬಿಗೆ ತಲೆಯಾನಿಸಿದರೆ ಸಾಕು; ದೃಷ್ಟಿ ಫ್ಯಾನ್ ಕಡೆ ಸಾಗಿ, ಅಲ್ಲಿಂದ ಪುಸ್ತಕದ ರಾಕ್ ಮತ್ತಲ್ಲಿಂದ ಬಟ್ಟೆಯ ಅಲ್ಮಾರಿ ಕಡೆ ಸುತ್ತಿ ಕಿಟಕಿಯ ಬಳಿ ನಿಲ್ಲುತ್ತಿತ್ತು. ಆಗ ತಕ್ಷಣ ಎದ್ದು ಕಿಟಕಿ ಮುಚ್ಚಿ, ಮಂಚದ ಮೇಲೆ ಬಂದು ಕೂರುತ್ತಿದೆ. ಅಷ್ಟು ಸೆಕೆಯಲ್ಲಿ ಎಲ್ಲಾ ಕಿಟಕಿ ಬಾಗಿಲನ್ನು ಮುಚ್ಚಿ ಮಲಗುವುದು ನಿಜಕ್ಕೂ ನರಕವೇ ಸರಿ.

ತೆರೆದ ಕಿಟಕಿ ಅಂದ್ರೆ ಭಯ, ಬಾಗಿಲು ಮುಚ್ಚಿದರೂ ಕಿಟಕಿಯ ರೂಪ ನೋಡಿ ಭಯ. ಮತ್ತೆ ಅದರ ಮೇಲೆ ಬಟ್ಟೆ, ಮತ್ತೊಂದು ಮೊಗದೊಂದು ಬಟ್ಟೆ ಅಬ್ಬಾ… ಆಗ ನನ್ನ ಹಾವ-ಭಾವದಲ್ಲಿ ಅದೆಷ್ಟೆಷ್ಟೋ ಬದಲಾವಣೆಗಳು! ಮಲೆನಾಡಿನಲ್ಲಿದ್ದ ಆ ದಿನಗಳಲ್ಲಿ ಅದ್ಯಾರೋ ಒಬ್ಬಾತ ಸ್ನಾನ ಮಾಡುವ ದೃಶ್ಯವನ್ನು ನೋಡುತ್ತಿದ್ದ ಎಂಬ ಮಾತು ಹರಿದಾಡಿತ್ತು. ಊಹೆಯ ಆ ಕಣ್ಣು ಗುಳ್ಳೆಗಳು. ಕಾಲೇಜು ದಿನಗಳಲ್ಲಿ ಸ್ನೇಹಿತೆ ಮಾಡಿದ ತಪ್ಪಿಗೆ ಅವಳಿಲ್ಲದ್ದಿದ್ದರು ಕಿಟಕಿಯ ಬಳಿ ನಿಂತು ಕೈ ಬೀಸುತ್ತಿದ್ದ ನೆನಪು. ಮೈಸೂರಿನ ಪಿಜಿ ಯಲ್ಲಿದ್ದಾಗ ಪ್ರತಿ ದಿನ ಒಂದೊಂದು ರೂಮಿಂದ ಹೊರಗೂ ಕೇಳಿಬರುತ್ತಿದ್ದ ಧ್ವನಿ ಮತ್ತು ಕಾಂಡಾಮು ಪ್ಯಾಕೆಟ್ಗಳು. ಮತ್ತೆ ಆ ಊರಿನಲ್ಲಿ ಪ್ರದರ್ಶನ ಮುಗಿಸಿ ನಾವೆಲ್ಲಾ ಸ್ನೇಹಿತೆಯರು ಮಲಗಿದ್ದ ಕೊನೆಯ ಕಿಟಕಿಯಿಂದ ಉದ್ದನೆ ನಿಂತು ನೋಡುತ್ತಾ ನೋಡುತ್ತಾ ಓಡಿ ಹೋದ ಆ ಕಪ್ಪನೆಯ, ದಪ್ಪನೆಯ ಆಕೃತಿ ನನ್ನ ನಿದ್ದೆಗೆ ಬಿಗಿಯಾದ ಕಡಿವಾಣ ಹಾಕಿದ್ದವು.

ತೆರೆದ ಕಿಟಕಿ ಅಂದ್ರೆ ಭಯ, ಬಾಗಿಲು ಮುಚ್ಚಿದರೂ ಕಿಟಕಿಯ ರೂಪ ನೋಡಿ ಭಯ. ಮತ್ತೆ ಅದರ ಮೇಲೆ ಬಟ್ಟೆ, ಮತ್ತೊಂದು ಮೊಗದೊಂದು ಬಟ್ಟೆ ಅಬ್ಬಾ… ಆಗ ನನ್ನ ಹಾವ-ಭಾವದಲ್ಲಿ ಅದೆಷ್ಟೆಷ್ಟೋ ಬದಲಾವಣೆಗಳು!

ಬಾಗಿಲು ಕಿಟಕಿ ಮುಚ್ಚಿದ ಆ ನಾಲ್ಕು ಗೋಡೆಯ ನಡುವಲ್ಲಿ ನಾನೊಬ್ಬಳು ಒಂಟಿ ಪಿಶಾಚಿಯಂತಿದ್ದೆ. ನಾ ಮಲಗುವ ಕೋಣೆಯಲ್ಲಿ ಯಾವಾಗಲೂ ದೀಪವೊಂದನ್ನು ಉರಿಸಿಡುತ್ತಿದ್ದೆ. ಕೋಣೆಯೊಳಗೆ ಒಂದೆರಡು ಗಂಟೆಗಳನ್ನು ತೂಗು ಹಾಕಿಕೊಂಡಿದ್ದೆ. ಎದ್ದರೆ ಮತ್ತೆ ಕಿಟಕಿಯ ಬಳಿ ನೋಡುತ್ತಿರಲಿಲ್ಲ. ಗಂಟೆಗಳನ್ನು ಮೆಲುವಾಗಿ ಬಾರಿಸಿ ಕಣ್ಣು ಮುಚ್ಚಿ ಉಸಿರನ್ನು ಒಳ ಎಳೆದು ಮತ್ತೆ ಹೊರ ಬಿಟ್ಟು ತಕ್ಷಣಕ್ಕೆ ಸಮಾಧಾನ ಮಾಡಿಕೊಳ್ಳುತ್ತಿದ್ದೆ. ಆದರೂ ಈ ಸಮಾಧಾನ ಪ್ರತಿ ರಾತ್ರಿಗೂ ಸಾಕಾಗುತ್ತಿರಲಿಲ್ಲ. ಒಂದೊಂದು ರಾತ್ರಿಯಲ್ಲಿ ಯಾವ ಶಬ್ಧ ಕೇಳಿಸಿದರೂ ಭಯವಾಗುತ್ತಿತ್ತು. ನನ್ನ ಏದುಸಿರಿಗೇ ನಾನು ಹೆದರುತ್ತಿದ್ದೆ. ಪಕ್ಕದ ಕೋಣೆಯಿಂದ ಸ್ನೇಹಿತರ ಮಾತು ನಗು ಕೇಕೆ ಕೇಳಿಸಿದರೆ ಸಾಕು ಹೆದರಿ ಸಾಯುತ್ತಿದ್ದೆ. ಹೋಗಿ ಬೈದು ಬರುತ್ತಿದ್ದೆ. ಕಿಟಕಿ ಅಂದ್ರೆ ಇಷ್ಟ ಆದ್ರೆ ಅದರಿಂದ ಕಾಣಿಸಿಕೊಂಡ ದೃಶ್ಯಗಳು ಮಾತ್ರ ಕಿಟಕಿಯಾಚೆಯಿಂದ ಹೊರ ಬರುವ ತಂಗಾಳಿಯೊಂದಿಗಿನ ಸುಖ ನಿದ್ರೆಯನ್ನೇ ಹಾಳು ಮಾಡಿತ್ತು. 

ಆ ಕೋಣೆಯೊಳಗೆ ನನ್ನ ರಾತ್ರಿಯ ವಿಶ್ರಾಂತಿ ಬದುಕು ತೀರಾ ಕ್ರೂರವಾಗಿತ್ತು. ಯಾರ ಬಳಿಯಲ್ಲೂ ಹೇಳಿಕೊಳ್ಳಲಾಗುತ್ತಿರಲಿಲ್ಲ. ಹೇಳಿಕೊಂಡರೆ ಅವಮಾನವಾಗುವುದೇನೋ ಎಂದು ಹೆದರುತ್ತಿದ್ದೆ. ಆದರೆ ಅದನ್ನೆಲ್ಲ ಬರೆಯುತ್ತಿದ್ದೆ. ತರಗತಿಯಲ್ಲಿ ಕಲಾವಿದೆಯಾಗಿ ಹೊರಹಾಕುತ್ತಿದ್ದೆ. ಆಗ ನನ್ನ ಮುಂದೆ ಯಾರೇ ಕಂಡರೂ ಅದೇ ಆಕೃತಿಯಂತೆ ಕಂಡು ಕ್ರೂರವಾಗಿ ಪ್ರತಿಕ್ರಿಯಿಸುತ್ತಿದ್ದೆ. ತತ್ ಕ್ಷಣಕ್ಕೆ ಸಹಜ ಸ್ಥಿತಿಗೆ ಮರಳೋದು ಆಗೋದು ಕಷ್ಟವಾಗುತ್ತಿತ್ತು. ತರಗತಿಯಲ್ಲಿ ಇದು ಹೆಚ್ಚಾದಾಗ ನನ್ನಿಂದ ತಪ್ಪಿಸಿಕೊಳ್ಳಲು ಶುರುಮಾಡಿದ್ದಾರೇನೋ ಎಂದೆನ್ನಿಸುತ್ತಿತ್ತು. ಒಂದು ವರ್ಷ ನನ್ನ ಜೊತೆ ರೂಮ್ ಹಂಚಿಕೊಂಡಿದ್ದ ಗೆಳತಿ ನನ್ನ ಭಯಪಡುವುದಕ್ಕೆ ಏನಾದರೂ ಮಾಡಬೇಕೆಂದು ಒಮ್ಮೆ ಆಪ್ತ ಸಮಾಲೋಚನೆಗೆ (counselling) ಹೋಗಲು ಸೂಚಿಸಿದಳು. ಅಲ್ಲದೇ ಪ್ರತಿ ಶನಿವಾರ ಸೈಕಿಯಾಟ್ರಿಕ್ ಶಾಲೆಗೆ ತಾನೂ ನನ್ನ ಜೊತೆ ಬರುವುದಾಗಿಯೂ ತಿಳಿಸಿದ್ದಳು. ಅವಳು ಹಾಗೆಂದ ತಕ್ಷಣ ನನಗೆ ಏನೊಂದೂ ತೋಚಲಿಲ್ಲ. ಅಲ್ಲದೇ “ಅರೇ ನಾನು ಕೌನ್ಸೆಲ್ಲಿಂಗ್ ಗೆ ಹೋಗಬೇಕಾ? ಅದೆಂದೂ ಸಾಧ್ಯವಿಲ್ಲ. ನನಗೆ ಅಂಥದ್ದೇನೂ ಆಗಿಲ್ಲ ಅಂತೆನ್ನಿಸಿತು. ಆದರೂ ಅವಳ ಮಾತನ್ನು ಹಾಗೆ ತಳ್ಳಿ ಹಾಕಲು ಇಷ್ಟವಾಗಲಿಲ್ಲ. ಒಮ್ಮೆ ಹೋಗಿಬಂದರಾಯಿತು ಅಂತ ಅವಳ ಹಿತನುಡಿಯನ್ನು ಪಾಲಿಸಲು ಮನಸು ಮಾಡಿದೆ; ಯಾಕೆಂದರೆ ಒಂದು ವರ್ಷಗಳ ಕಾಲ ಅವಳು ರಾತ್ರಿಯಲ್ಲಿನ ನನ್ನ ಚಿತ್ರ-ವಿಚಿತ್ರ ವರ್ತನೆಯನ್ನು ಸಹಿಸಿದ್ದಳು.

ಆ ಕೋಣೆಯೊಳಗೆ ನನ್ನ ರಾತ್ರಿಯ ವಿಶ್ರಾಂತಿ ಬದುಕು ತೀರಾ ಕ್ರೂರವಾಗಿತ್ತು. ಯಾರ ಬಳಿಯಲ್ಲೂ ಹೇಳಿಕೊಳ್ಳಲಾಗುತ್ತಿರಲಿಲ್ಲ. ಹೇಳಿಕೊಂಡರೆ ಅವಮಾನವಾಗುವುದೇನೋ ಎಂದು ಹೆದರುತ್ತಿದ್ದೆ. ಆದರೆ ಅದನ್ನೆಲ್ಲ ಬರೆಯುತ್ತಿದ್ದೆ. ತರಗತಿಯಲ್ಲಿ ಕಲಾವಿದೆಯಾಗಿ ಹೊರಹಾಕುತ್ತಿದ್ದೆ.

ಭಾಷೆ ತಿಳಿಯದಿದ್ದರೂ ನನ್ನ ಭಾವವನ್ನು ಅರ್ಥ ಮಾಡಿಕೊಂಡು ಸಂತೈಸಿದ್ದಳು. ಅಷ್ಟೇ ಅಲ್ಲದೇ ಎಷ್ಟೊತ್ತಿಗೇ ಆಗಲೀ, ಭಯ ನನ್ನನ್ನು ಇನ್ನಿಲ್ಲದಂತೆ ಅಟ್ಟಿಸಿಕೊಂಡು ಬಂದು, ದುಃಖ ತಡೆಯಲಾರದಾಗಲೆಲ್ಲ ಸೀದಾ ಓಡಿಹೋಗಿ ಅವಳ ಕೋಣೆಯ ಬಾಗಿಲು ಬಡಿಯುತ್ತಿದ್ದೆ. ಆಗೆಲ್ಲ ನನ್ನ  ಕಣ್ಣೀರು ಒರೆಸಿ ಧೈರ್ಯ ನೀಡಿ ನನ್ನನ್ನು ನನ್ನ ಕೋಣೆಯತ್ತ ಕರೆತಂದು ‘ನೋಡು ಅಲ್ಲಿ ನಿಜಕ್ಕೂ ಯಾರೂ ಇಲ್ಲ, ಆಣೆ ಮಾಡಿ ಹೇಳುತ್ತೇನೆ’ ಎಂದು ಸಣ್ಣ ಮಗುವಿಗೆ ಹೇಳುವಂತೆ, ಧೈರ್ಯದ ಮಾತುಗಳನ್ನಾಡಿ ಸಮಾಧಾನ ಮಾಡಿ ಮಲಗಿಸುತ್ತಿದ್ದಳು. ತೀರ ಭಯಗೊಂಡ ರಾತ್ರಿಗಳನ್ನು ಒಬ್ಬಳೇ ಕಳೆಯಲಾರದೇ ಅವಳ ಜೊತೆಯಲ್ಲಿ ಕಳೆದ ರಾತ್ರಿಗಳು ಹಲವಿವೆ. ಆಗೆಲ್ಲ ನಿದ್ದೆಯಲ್ಲಿ ಏನೇನೋ ಮಾತಾಡುತ್ತಿದ್ದೆನಂತೆ, ಚೀರುತ್ತಿದ್ದೆನಂತೆ, ಅಳುತ್ತಿದ್ದೆನಂತೆ. ಬೆಳಗಾದಾಗ ಅವಳೇ ಇವನ್ನೆಲ್ಲ ನನಗೆ ಹೇಳುತ್ತಿದ್ದಳು. ಭಾಷೆ ಗೊತ್ತಿಲ್ಲದ ಕಾರಣ ಏನು ಮಾತಾಡಿದೆ ಅಂತ ಮಾತ್ರ ಹೇಳುತ್ತಿರಲಿಲ್ಲ. ಆದರೂ ತಿಳಿದುಕೊಳ್ಳುವ ಕುತೂಹಲವಿದ್ದ ನಾನು ಏನೇನಲ್ಲ ಹೇಳಿದೆನಂತ ಹೇಳೆಂದು ಅವಳನ್ನು ಪೀಡಿಸುತ್ತಿದ್ದೆ. ಆಗೆಲ್ಲ  ಹಿಂದಿಯಲ್ಲಿ ಮಾತಾಡು ಹೇಳ್ತಿನಿ ಅಂತ ರೇಗಿಸುತ್ತಿದ್ದಳು. ಆದರೆ ಈ ಭಯಕ್ಕೆ ಕಾರಣ ಕೆಟ್ಟ ಅನುಭವ. ಆ ಅನುಭವದ ಭಾಷೆ ನನ್ನ ಅಂತರಾಳದ ಭಾಷೆ. ಅದನ್ನು ಪದಗಳಲ್ಲಿ ಬಿಡಿಸಿಟ್ಟು ಹೇಳಲು ನಿಜಕ್ಕೂ ಕಷ್ಟ.

ಕೌನ್ಸೆಲಿಂಗ್ ನಲ್ಲಿ ಅವರಾಡಿದ ದೊಡ್ಡ ದೊಡ್ಡ ಪದಗಳ ಮಾತುಗಳಾವುವೂ ನನಗೆ ಒಂದಿಷ್ಟೂ ಅರ್ಥವಾಗಲಿಲ್ಲ. ನನ್ನ ರೋಗಕ್ಕೆ, ನನ್ನ ಭಯವೆಂಬ ರೋಗಕ್ಕೆ ಮದ್ದು ನನ್ನಲ್ಲೇ ಇದೆ ಎಂದನ್ನಿಸಿ ಧೈರ್ಯ ತಂದುಕೊಂಡು ಸ್ವಲ್ಪಸ್ವಲ್ಪವೇ ಬದಲಾಗುತ್ತ ಹೋದೆ. ಹಿಂದಿ ಕಲಿಕೆಯಲ್ಲಿನ ಆಸಕ್ತಿಯನ್ನು ಮತ್ತಷ್ಟು ಹುರುಪುಗೊಳಿಸಿಕೊಂಡೆ. ರಾತ್ರಿ ಹೊತ್ತಿನಲ್ಲಿ ಜೋರಾಗಿ ಹಾಡುವುದು, ಓದುವುದನ್ನು ಜೊತೆಗೆ ಸಂಭಾಷಣೆಯನ್ನು ಇನ್ನು ಜೋರಾಗಿ ಹೇಳಿಕೊಳ್ಳುತ್ತಾ ನನ್ನನ್ನು ಸಂಪೂರ್ಣವಾಗಿ ಹಲವು ಕೆಲಸಗಳಲ್ಲಿ ತೊಡಗಿಸಿಕೊಂಡೆ. ನೃತ್ಯ ಮಾಡುವುದು, ರಾತ್ರಿ ಹೊತ್ತಿನಲಿ ಮೇಕ್ ಅಪ್ ಮಾಡಿಕೊಳ್ಳುವುದು, ಸ್ನೇಹಿತರ ಜೊತೆ ರಾತ್ರಿ ವೇಳೆಯಲಿ ಟೀ ಕುಡಿಯಲು ಹೊರಗೆ ಹೋಗುವುವಂಥ ಹೊಸ ಅಭ್ಯಾಸಗಳು ನನ್ನ ಮನಸ್ಸು ಮತ್ತು ದೇಹವನ್ನು ಸದಾ ಏನಿಲ್ಲೊಂದು ಕೆಲಸದಲ್ಲಿ ಸಕ್ರಿಯವಾಗಿರುವಂತೆ ಮಾಡಿದ್ದವು. ಮನೆಯರೊಟ್ಟಿಗಿನ ಫೋನ್ ಸಂಪರ್ಕವನ್ನು ಆದಷ್ಟು ಕಡಿಮೆ ಮಾಡಿದೆ. ಇಲ್ಲದ್ದಿದ್ದರೆ ಬಡತನದ ವಿಷಯಳು ಮತ್ತೆಮತ್ತೆ ಕಿವಿಗೆ ಬೀಳುತ್ತಿದ್ದರೆ ನೋವುಗಳು ಮರುಕಳಿಸಿ, ಕೆಲಸದಲ್ಲಿ ಏಕಾಗ್ರತೆಯನ್ನು ತಂದುಕೊಳ್ಳುವುದು ಕಷ್ಟವಾಗುತ್ತಿತ್ತು. ಹಾಗಾಗಿ  ಭವಿಷತ್ತಿನ ಸಲುವಾಗಿಗಾದರೂ ಈ ಎಲ್ಲ ನೋವುಗಳನ್ನು ಮರೆತು ಕೆಲಸದ ಮೇಲೆ ಗಮನವಹಿಸಬೇಕಾದುದ್ದುದು ನನ್ನ ಮೊದಲ ಆದ್ಯತೆಯಾಗಿತ್ತು.

ಭಯ ನನ್ನನ್ನು ಇನ್ನಿಲ್ಲದಂತೆ ಅಟ್ಟಿಸಿಕೊಂಡು ಬಂದು, ದುಃಖ ತಡೆಯಲಾರದಾಗಲೆಲ್ಲ ಸೀದಾ ಓಡಿಹೋಗಿ ಅವಳ ಕೋಣೆಯ ಬಾಗಿಲು ಬಡಿಯುತ್ತಿದ್ದೆ. ಆಗೆಲ್ಲ ನನ್ನ  ಕಣ್ಣೀರು ಒರೆಸಿ ಧೈರ್ಯ ನೀಡಿ ನನ್ನನ್ನು ನನ್ನ ಕೋಣೆಯತ್ತ ಕರೆತಂದು ‘ನೋಡು ಅಲ್ಲಿ ನಿಜಕ್ಕೂ ಯಾರೂ ಇಲ್ಲ, ಆಣೆ ಮಾಡಿ ಹೇಳುತ್ತೇನೆ’ ಎಂದು ಸಣ್ಣ ಮಗುವಿಗೆ ಹೇಳುವಂತೆ, ಧೈರ್ಯದ ಮಾತುಗಳನ್ನಾಡಿ ಸಮಾಧಾನ ಮಾಡಿ ಮಲಗಿಸುತ್ತಿದ್ದಳು.

ಭಯದಿಂದ ಇಷ್ಟಿಷ್ಟೇ ಹೊರಬಂದನಂತರ ಕಿಟಕಿಯಲ್ಲಿ ಕಾಣಿಸುವ ಆ ಆಕೃತಿಗಳ ಬಗ್ಗೆ ತರಗತಿಯಲ್ಲಿ ಮಾತಾಡತೊಡಗಿದೆ. ಅವುಗಳ ಬಗ್ಗೆ, ನನ್ನ ಭಯದ ಬಗ್ಗೆಯೇ ಹಾಸ್ಯ ಮಾಡುತ್ತ  ಅವುಗಳನ್ನು ನಿರ್ಲಕ್ಷಿಸತೊಡಗಿದೆ. ಅದೇ ಹೊತ್ತಿನಲ್ಲಿ ವೈಕಂ ಮೊಹಮ್ಮದ್ ಬಷಿರವರ ‘ನೀಲಿ ಕಂದೀಲು’ ಓದಿದ್ದ ನೆನಪು. ಕಹಿ ಅನುಭವಗಳನ್ನು ಮರೆಯಲೆಂದೇ ಸಿನಿಮಾ, ಕ್ರೀಡೆ, ಪುಸ್ತಕ, ಸ್ನೇಹಿತರೊಟ್ಟಿಗೆ ಮಾತು ಕತೆ, ಹರಟೆ, ಪ್ರೀತಿ ಅಂತೆಲ್ಲ ಆ ಕ್ಷಣದ ಅನುಭವಗಳನ್ನು ಇನ್ನಿಲ್ಲದಂತೆ ಅನುಭವಿಸುತ್ತಾ ಹೋದೆ. ಮೊದಲಿಂದಲೂ ನಟನೆಯಲ್ಲಿ ಆಸಕ್ತಿ ಹೊಂದಿದ್ದ ನನಗೆ, ನಟಿಯಾಗುವ ಆಸೆಯನ್ನು ಪೂರೈಸಿಕೊಳ್ಳುವ ನಿಟ್ಟಿನಲ್ಲಿ ಮನಸ್ಸು ಮತ್ತು ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳುವುದನ್ನು ರೂಢಿಸಿಕೊಂಡೆ. ಜೊತೆಜೊತೆಗೆ ನನ್ನಲ್ಲಿನ ಭಯದ ಮೂಲವಾಗಿದ್ದ ಕಿಟಕಿಯನ್ನು ಸಿಂಗರಿಸಿಡುವುದನ್ನು, ಪ್ರೀತಿಸುವುದನ್ನು ಕಲಿತೆ. ಅಷ್ಟೇ ಅಲ್ಲ ನನ್ನನ್ನು ಭಯಕ್ಕೀಡುಮಾಡುತ್ತಿದ್ದ ಪಾತ್ರವನ್ನೇ ನನ್ನ ನಾಟಕ ಪಾತ್ರವನ್ನಾಗಿ ಮಾಡಿಕೊಂಡೆ.

ನಮ್ಮದು ಕೂಡು ಕುಟುಂಬ. ತೊಟ್ಟಿ ಜಾಲರಿ ಮನೆಯಾದ್ದರಿಂದ ಕಿಟಕಿಯ ಸಂಖ್ಯೆ ಕಡಿಮೆ. ಕಿಟಕಿ ಪರಿಚಯವಾಗಿದ್ದೇ ಈ ಘಟನೆಯಲ್ಲಿ ಮತ್ತು ಕಂಡ ಚಿತ್ರಣದಲ್ಲಿ. ನಾನು ಸದಾ ಕನಸು ಕಾಣುವ ಹುಡುಗಿ. ನಮ್ಮಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಅಧಿಕವಿದ್ದರೂ ನನಗೇನೂ ತೊಂದರೆ ಅನ್ನಿಸಿದ್ದಿಲ್ಲ. ನಾವು ಎಲ್ಲಿಯೂ ನಮ್ಮಿಷ್ಟದಂತೆ ಇರುವುದಕ್ಕೆ ಅವಕಾಶಗಳಿರುತ್ತಿರಲಿಲ್ಲ. ಮುಖಕ್ಕೆ ಪೌಡರ್ ಹೆಚ್ಚಾದರೆ ಆಹಾ ಬೆಡಗಿ ಎಂದರೆ, ರೇಡಿಯೋದ ಹಾಡಿಗೆ ಹೆಜ್ಜೆ ಹಾಕಿದರೆ ಮುಂದೆ ಕ್ಯಾಬರೆ ಡ್ಯಾನ್ಸರ್ ಆಗುತ್ತಾಳೇನೋ ಎಂದು ದೂಷಿಸುವರು. ಹೊರಗಡೆ ಆಡಲು ಹೋದರಂತೂ ಗಂಡುಬೀರಿ ಪಟ್ಟ ಸಿಗೋದು ಗ್ಯಾರಂಟಿ! ಇನ್ನು ಹುಡುಗರ ಜೊತೆ ಮಾತಾಡಿದರೆ ಅವರೆಲ್ಲ ಸುಮ್ಮನಿರುವವರೇ? ಇವ್ಳು ಖಂಡಿತಾ ಯಾವೋನ್ ಜೊತೆಗಾದ್ರೂ ಓಡಿ ಹೋಗ್ತಾಳೆ ನೋಡ್ತಿರು ಅಂತ ತೀರ್ಮಾನಕ್ಕೆ ಬರುವ ಜನರು. ಇಂಥಜನಗಳ ನಡುವಿದ್ದು ಮಾತನಾಡಲೂ ಹೆಚ್ಚು ಅವಕಾಶವಿರುತ್ತಿರಲಿಲ್ಲ.. ಹೇಗೆ ಒಂದೇ ಎರಡೇ, ಈ ಕಟ್ಟಳೆಗಳು? ನಿಜಕ್ಕೂ ಆಗೆಲ್ಲ ಅವರ ಮಾತಿನ ಧಾಟಿ ಗೊತ್ತಿಲ್ಲದೇ ಮುಗ್ಧವಾಗಿ ಎಲ್ಲರ ಜೊತೆ ಆಟಕ್ಕಿಳಿಯುತ್ತಿದ್ದೆ. ಆದರೆ ಅವರ ಮಾತಿನ ಅರ್ಥ-ಅನರ್ಥಗಳು ಗೊತ್ತಾದ ದಿನದಿಂದ ಮೇಕಪ್ ಮಾಡಿಕೊಳ್ಳುವುದಿರಲಿ, ಹೊಗರೆ ಆಡಲು ಹೋಗಲೂ ಹೆದರುತ್ತಿದ್ದೆ.  ಒಳ್ಳೆ ಕ್ರೀಡಾಪಟುವಾಗಿದ್ದ ನಾನು ಎಲ್ಲ ಆಟಗಳನ್ನೂ ಚೂಡಿದಾರ ದುಪ್ಪಟದಲ್ಲೇ ಆಡುತ್ತಿದ್ದೆ. ಕ್ರಮೇಣ ನನ್ನಿಷ್ಟದ  ಕ್ರೀಡೆಯಿಂದಲೇ ದೂರವಾದದ್ದು ಮಾತ್ರ ನಿಜಕ್ಕೂ ದುರಂತ.

ಮೊದಲಿಂದಲೂ ನಟನೆಯಲ್ಲಿ ಆಸಕ್ತಿ ಹೊಂದಿದ್ದ ನನಗೆ, ನಟಿಯಾಗುವ ಆಸೆಯನ್ನು ಪೂರೈಸಿಕೊಳ್ಳುವ ನಿಟ್ಟಿನಲ್ಲಿ ಮನಸ್ಸು ಮತ್ತು ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳುವುದನ್ನು ರೂಢಿಸಿಕೊಂಡೆ. ಜೊತೆಜೊತೆಗೆ ನನ್ನಲ್ಲಿನ ಭಯದ ಮೂಲವಾಗಿದ್ದ ಕಿಟಕಿಯನ್ನು ಸಿಂಗರಿಸಿಡುವುದನ್ನು, ಪ್ರೀತಿಸುವುದನ್ನು ಕಲಿತೆ. ಅಷ್ಟೇ ಅಲ್ಲ ನನ್ನನ್ನು ಭಯಕ್ಕೀಡುಮಾಡುತ್ತಿದ್ದ ಪಾತ್ರವನ್ನೇ ನನ್ನ ನಾಟಕ ಪಾತ್ರವನ್ನಾಗಿ ಮಾಡಿಕೊಂಡೆ.

ನಾನು ಆಗ ಸಿನಿಮಾ ಶೈಲಿಯಲ್ಲಿ ಹಾಡುತ್ತಿದ್ದೆ, ಕುಣಿಯುತ್ತಿದ್ದೆ , ನನ್ನ ಹಾವ ಭಾವವೆಲ್ಲ ಹಾಗೆ ಇತ್ತು. ಆದರೆ ಬದುಕಿನ ಅನುಭವಗಳನ್ನು ಮತ್ತೊಮ್ಮೆ ಮೊಗದೊಮ್ಮೆ ಮೆಲುಕು ಹಾಕುವನಂತೆ ಮಾಡಿ ನನಗೆ ಜೀವನದ ಮಹತ್ವದ ಜೊತೆಗೆ ನಾನೊಬ್ಬಳು ಕಲಾವಿದೆಯನ್ನಾಗಿ ಮಾಡಿದ್ದು ರಂಗಭೂಮಿ. ಆದರೆ ಇಲ್ಲಿ ಅಂಥವೆಲ್ಲ ಮಾತುಗಳನ್ನು ಕೇಳಿಲ್ಲ ಅಂತಲ್ಲಾ! ಕೇಳಿಸಿದರೂ ಕೇಳಿಸಿಲ್ಲವೆಂಬಂತೆ ಅವನ್ನು ನಿರ್ಲ್ಯಕ್ಷಿಸುತ್ತೇನೆ. ಎಲ್ಲವನ್ನೂ ಎದುರಿಸಿ ನಿಲ್ಲುವುದನ್ನು ಕಲಿತಿದ್ದೇನೆ. ವಿಪರ್ಯಾಸವೆಂದರೆ ಆಗ ಹಾಗೆಲ್ಲ ಮಾತನಾಡುತ್ತಿದ್ದವರು ಮುಗ್ದ ಜನರು, ಒಂದು ಚೌಕಟ್ಟಿನಲ್ಲಿ ತಮ್ಮ ಬದುಕನ್ನು ಕಂಡವರು. ಆದರೆ ಇಲ್ಲಿನ ಕೋಶ ಓದಿಕೊಂಡ ಜನರು, ಚೌಕಟ್ಟಿನಿಂದ ಹೊರಬಂದು ನಮ್ಮನ್ನು ಚೌಕಟ್ಟಿನಲಿಡಬಯಸುತ್ತಾರೆ. ಒಟ್ಟಿನಲ್ಲಿ ನಾನು ಬದಲಾಗಿದ್ದೇನೆ. ಈ ಎಲ್ಲ ಬದಲಾವಣೆಗೆ ಕಾರಣ ಈ ಭಯ! ಈ ಭಯ ನನ್ನನ್ನು ಆಗಾಗ ಕಾಡುತ್ತ, ನನ್ನನ್ನು ಮತ್ತಷ್ಟು ಗಟ್ಟಿಗೊಳಿಸುವ ಜೊತೆಗೆ, ತನ್ನ ರೂಪವನ್ನೂ ಕಳೆದುಕೊಳ್ಳಲಿ ಎಂಬುದು ನನ್ನ ಆಶಯ.

About The Author

ಅಕ್ಷತಾ ಪಾಂಡವಪುರ

ಪ್ರಶಸ್ತಿ ವಿಜೇತ ಚಿತ್ರನಟಿ ಮತ್ತು ರಂಗಕರ್ಮಿ. ಎನ್ ಎಸ್ ಡಿ ಪದವೀದರೆ. ಊರು ಪಾಂಡವಪುರ.ಇರುವುದು ಬೆಂಗಳೂರು.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ