Advertisement
ಜೇಡ: ಶೇಷಗಿರಿ ಜೋಡಿದಾರ್ ಬರೆದ ದಿನದ ಕವಿತೆ

ಜೇಡ: ಶೇಷಗಿರಿ ಜೋಡಿದಾರ್ ಬರೆದ ದಿನದ ಕವಿತೆ

ಜೇಡ

 

 

 

 

ನಾಲ್ಕು ಜೋಡಿ ಕೀಲು ಕಾಲುಗಳ ಅಷ್ಟಪದಿ,
ಅಪರೂಪ ಸೃಷ್ಟಿ, ಬೆಳಕಿಲ್ಲದ ದೃಷ್ಟಿ
ಮೈಯೆಲ್ಲಾ ಕಣ್ಣು, ಸಹಸ್ರಾರು ಪ್ರತಿಬಿಂಬಗಳು
ಜಿಗಿ ಹಲಗೆಯ ಹಗುರ ದೇಹ, ಕಾಲುಗಳು ಕಡ್ಡಿ
ಬುದ್ದಿಯ ಬರ. ಒಮ್ಮೊಮ್ಮೆ ಬಹು ಭಾರ
ವರ್ಣಾಂಧತೆಯ ಅಂಟು ಜಾಡ್ಯ, ಬದುಕು ನಿರ್ವರ್ಣ
ಆದರ್ಶಪ್ರಿಯೆ, ಸದಾ ಏಕಾಂಗಿ, ಸಂಪರ್ಕ ನಿಷಿದ್ಧ
ಆದರೂ ಹೊಂಚುಹಾಕುವ ಹುಟ್ಟುಗುಣ
ಯಾರಿಗಾಗಿ? ಕಾದಿರುವ ಶಬರಿ?

ತಾನೇ ನೇಯ್ದ ಸುಂದರ ಭವನದಲಿ ಹೆಣೆದ ನಿಶ್ಯಬ್ಧ ಸಂಚು
ಕದ್ದುಮುಚ್ಚಿ ಯಾವುದೋ ತನ್ನ ತೆವಲಿನ ಋತುವಿನಲ್ಲಿ
ಕೂತಲ್ಲೇ ಬೀಸುತ್ತಾಳೆ ಮಾಯಾವಿ ಕಲೆಯ ಬಲೆ,
ಸ್ವಜಾತಿ ಭಕ್ಷಕಿ ಮಳ್ಳಿ ಹೊಂಚುಹಾಕುವ ಮಸಲತ್ತು
ಪ್ರಿಯತಮನ ಬರುವಿಕೆಗೆ ಏನೆಲ್ಲ ಕಸರತ್ತು..
ಮನಮೋಹಕ ಮೋಹದ ನುಣುಪಾದ ರೇಶಿಮೆಯ ಜಾಲ,
ಬಿನ್ನಹದ ಸಂದೇಶ, ಸುವಾಸಿತ ತಂತಿಗಳ ಸ್ವಾಗತ ಕರೆ
ರಾಸಲೇಲೆಯ ಕೂಟದ ಕಾಲ, ವಿರಹದಲಿ ಚಡಪಡಿಕೆ,
ಗಿರಕಿ ಹೊಡೆಯುತ್ತಾನೆ ಭಾವೋದ್ವೇಗಿ ರೋಮಿಯೋ
ಅಪಾಯ ಲೆಕ್ಕಿಸದೆ, ಕಾಮದ ಮಾರಕ ಕೋಟೆಯ ಸುತ್ತ.

ಹೆದರಿ, ಹೈರಾಣು ವಿರಹಿ ವಿಹ್ವಲ
ಅದರೂ ದಾಟಬೇಕಿದೆ ಕೂಟ ಸೇತುವೆಯನ್ನು
ಅಪರೂಪದಲಿ ಘೋಷಣೆಯಾದ ಕದನ ವಿರಾಮ
ಮೋಹದಲಿ ಹಾತೊರೆದ ಯೋಧ, ರಾಣಿ ಶಾಂತ;
ನಿರ್ಲಿಪ್ತ
ಒಪ್ಪಿಕೊಂಡಾಗಿದೆ ಆಹ್ವಾನ, ಆತ್ಮಾಹುತಿಗೆ
ಹೋಗಲೇ ಬೇಕು, ಪ್ರಿಯತಮೆಯ ಚುಂಬನಕೆ
ಅನಿವಾರ್ಯ ಆಲಿಂಗನ, ಮಾರಣಾಂತಿಕ ಸಂಭೋಗ

ಅನುಸರಿಸಬೇಕಿದೆ ವಂಶಪಾರಂಪರೆ,
ಅಳಿಯಬಾರದು ಸಂತತಿ,
ಆಗಲೇಬೇಕಿದೆ ಆಹುತಿ, ಕಾಮದ ಹವನದಲ್ಲಿ
ಬಲಿಯಾಗಲೇಬೇಕು ಪ್ರಿಯತಮೆಯ ಕರೆಗೆ
ನಿಸರ್ಗದ ನಿಚ್ಚಳ ಸರ್ವಕಾಲಿಕಾನ್ವಯ ಆಜ್ಞೆಯ ಮೇರೆಗೆ
ಕದಲುತ್ತಾನೆ ಎಚ್ಚರಿಕೆಯಿಂದ ವೀರ ಅಮರ ಯೋಧ…
ಅಮರತ್ವದೆಡೆಗೆ.

 

ಬೆಂಗಳೂರಿನ ಶೇಷಗಿರಿ ಜೋಡಿದಾರ್ ನಿವೃತ್ತ ಶಿಕ್ಷಕರು.  ವಿಜ್ಞಾನ, ಖಗೋಳ ವಿಜ್ಞಾನ ಮತ್ತು ಪರಿಸರ ವಿಷಯಗಳಲ್ಲಿ ಅಪಾರ ಆಸಕ್ತಿ. ಪರಿಸರ ಪ್ರೇಮಿಯೂ ಆಗಿರುವ ಇವರಿಗೆ ಪರಿಸರದ ಕುರಿತ ಕಾವ್ಯ ರಚನೆ ಹೆಚ್ಚು ಇಷ್ಟ.

 

 

(ಇಲ್ಲಷ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ