Advertisement
ರಾತ್ರಿ ಸ್ಕೂಲು, ಶನಿ ಮಹಾತ್ಮೆ ಮತ್ತು ಚಳ್ಳೆ ಹಣ್ಣಿನ ಮೇಷ್ಟ್ರು: ಎಸ್. ಗಂಗಾಧರಯ್ಯ ಅನುಭವ ಕಥನ

ರಾತ್ರಿ ಸ್ಕೂಲು, ಶನಿ ಮಹಾತ್ಮೆ ಮತ್ತು ಚಳ್ಳೆ ಹಣ್ಣಿನ ಮೇಷ್ಟ್ರು: ಎಸ್. ಗಂಗಾಧರಯ್ಯ ಅನುಭವ ಕಥನ

ಇದರಿಂದ ಆಗಬಹುದಾದ ಅನಾಹುತದ ಸೂಚನೆಯನ್ನು ಅರಿತ ನನ್ನ ಪಕ್ಕದಲ್ಲಿದ್ದ ಶಂಕರ ಅಳುತ್ತಾ ಒಮ್ಮೆಗೇ ಮೇಲೆದ್ದು ಆಚೆ ಓಡಲು ಯತ್ನಿಸಿದ. ಅದು ಗೊತ್ತಿದ್ದವರಂತೆ ಮೇಷ್ಟ್ರು ಅವನನ್ನು ತಡೆದು ಮತ್ತೆ ಕೂರಿಸಿದರು. ಮೇಷ್ಟ್ರು ಕೈಯ್ಯಲ್ಲಿದ್ದ ಕೋಲನ್ನು ಮೇಜಿನ ಮೇಲಿಟ್ಟು ಚಣೊತ್ತು ಮೌನವಾಗಿ ಕೂತುಬಿಟ್ಟರು. ನಂತರ ನಿಂತೇ ಇದ್ದ ಶಿವನನ್ನು ಕೂರಲು ಹೇಳಿ ನಮ್ಮತ್ತ ನೋಡಿ ಮುಗುಳ್ನಕ್ಕರು. ಬಡಪಾಯಿ ಜೀವ ಬದುಕಿತು ಅಂತ ನಾವು ನಿಟ್ಟುಸಿರು ಬಿಟ್ಟೆವು.
ಎಸ್.‌
ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಎರಡನೆಯ ಕಂತು

ಆಗ ನನ್ನ ಹಳ್ಳಿಗೆ ಇನ್ನೂ ಕರೆಂಟ್ ಬಂದಿರಲಿಲ್ಲ. ಸಂಜೆಯಾಗುತ್ತಲೇ ಊರಂಥ ಊರೆಲ್ಲಾ ಕತ್ತಲೆಯಲ್ಲಿ ಮುಳುಗುತ್ತಿತ್ತು. ಊರ ಬೀದಿಯಲ್ಲೆಲ್ಲಾ ಆ ಆಟ ಈ ಆಟ ಅಂತ ಕುಣಿದು ಕುಪ್ಪಳಿಸಿ ನನ್ನ ವಾರಿಗೆಯ ಮಕ್ಕಳೆಲ್ಲಾ ಮನೆ ಸೇರುತ್ತಿದ್ದುದೇ ಸಂಜೆ ಕತ್ತಲೆಯನ್ನು ಮೈಗಾಕಿಕೊಂಡು. ಕತ್ತಲ ಭಯವನ್ನು ಹಿಮ್ಮೆಟ್ಟಿಸುವ ಸಲುವಾಗಿ ನಾನು ಬಸ್ ಬಿಟುಗಂಡು ಊರೊಳಗಿಂದ ಒಮ್ಮೆ ಕಣ್ಮುಚ್ಚಿ ಓಡಲು ಶುರು ಮಾಡಿದರೆ ಮತ್ತೆ ಕಣ್ಣು ಬಿಡುತ್ತಿದ್ದದ್ದು ಮನೆ ತಲುಪಿದ ಮೇಲೇಯೆ. ನಾನು ಮನೆ ಸೇರುವ ಹೊತ್ತಿಗೆ ಮನೆಯ ಪಡಸಾಲೆಯಲ್ಲಿ ಹಚ್ಚಿದ ಲಾಟೀನೊಂದು ತೊಲೆಯೊಂದರ ಹಗ್ಗಕ್ಕೆ ನೇತು ಬಿದ್ದಿರುತ್ತಿತ್ತು. ಅದರಡಿಯಲ್ಲಿ ಬಹುತೇಕ ಸಂಜೆಗಳಲ್ಲಿ ಅಯ್ಯ ಮಹಾಭಾರತದ ಇಲ್ಲಾ ರಾಮಾಯಣದ ಯಾವುದಾದರೊಂದು ಭಾಗವನ್ನು ರಾಗವಾಗಿ ಹೇಳಿಕೊಳ್ಳುತ್ತಿರುತ್ತಿತ್ತು. ಬಂದವನೇ ಸೀದಾ ಅಯ್ಯನ ಪಕ್ಕ ಕೂತುಬಿಡುತ್ತಿದ್ದೆ. ಅಯ್ಯ ತನ್ನಷ್ಟಕ್ಕೆ ತಾನು ಹಳೆಗನ್ನಡದ ಅರ್ಥವನ್ನು ಹೊಸಗನ್ನಡದಲ್ಲಿ ವಿವರಿಸಿಕೊಳ್ಳುತ್ತಿತ್ತು. ನನಗೆ ಅರ್ಥ ಮಾಡಿಕೊಳ್ಳುವಂಥ ಪ್ರಸಂಗಗಳು ಬಂದರೆ ಕಥೆಯಾಗಿ ವಿವರಿಸುತ್ತಿತ್ತು. ನಾನು ರಾಮಾಯಣ ಮಹಾಭಾರತಗಳಲ್ಲಿ ಬರುವ ಕಥೆಗಳನ್ನು ಕೇಳಿಸಿಕೊಂಡಿದ್ದು ಹೀಗೆ. ಈ ಕೇಳುವಿಕೆ ನನ್ನ ಹೈಸ್ಕೂಲಿನ ದಿನಗಳವರೆಗೂ ಮುಂದುವರೆದಿತ್ತು. ಅವೆರಡೂ ಪುಸ್ತಕಗಳನ್ನು ಅಯ್ಯ ಅದೆಲ್ಲಿಂದ ತಂದಿತ್ತೋ ಗೊತ್ತಿಲ್ಲ, ಅಯ್ಯನ ಕೊನೆಯ ದಿನಗಳವರೆಗೂ ಅವು ಮನೆಯಲ್ಲಿದ್ದವು. ಮಿಕ್ಕಂತೆ ನಡುಮನೆ ಮತ್ತು ಅಡಿಗೆ ಮನೆಯಲ್ಲಿ ಬುಡ್ಡಿ ದೀಪಗಳು ಉರಿಯುತ್ತಿದ್ದವು. ನಮ್ಮದು ತೋಟದ ಮನೆ. ಈಗಲೂ ತೋಟದ ಮನೆಯೇ. ಊರಿನಿಂದ ಒಂದು ಫರ್ಲಾಂಗಿನಷ್ಟು ದೂರದಲ್ಲಿ ತೋಟದೊಳಗಿದ್ದ ಈ ಮನೆಗೆ ತೋಟದೊಳಗಣ ಮರಗಳ ನೆರಳಿನ ಕಪ್ಪು ಮತ್ತು ರಾತ್ರಿಯ ಕಪ್ಪು ಎರಡೂ ಕೂಡಾಡಿ ಭಯಂಕರ ಕತ್ತಲೆಯಾಗಿ ನನ್ನೊಳಗೆ ಹೇಳಲಸದಳವಾದ ನಡುಕವನ್ನು ಉಂಟುಮಾಡುತ್ತಿದ್ದವು. ಇದು ಸಾಲದೆಂಬಂತೆ ಬುಡುಗೊಚ್ಚ ಅನ್ನುವ ಅಜ್ಜ ಹೇಳುತ್ತಿದ್ದ ದೆವ್ವಗಳ ಕಥೆಗಳು ಮತ್ಮತ್ತೆ ನನ್ನೊಳಗೆ ಎದ್ದು ನಿಂತು ಮಾಮೇರಿ ಕಾಟ ಕೊಡುತ್ತಿದ್ದವು. ಈ ಕಾರಣಕ್ಕೇ ಸಂಜೆ ಒಮ್ಮೆ ಮನೆಯೊಳಕ್ಕೆ ಸೇರಿಕೊಂಡರೆ ಮುಗೀತು ಜಪ್ಪಯ್ಯ ಅಂದರೂ ಅಪ್ಪಿತಪ್ಪಿ ಪಡಸಾಲೆಯ ಉತ್ರಾಸನ್ನೂ ದಾಟುತ್ತಿರಲಿಲ್ಲ. ಇನ್ನು ಸರೊತ್ತಿನಲ್ಲಿ `ವಂದಕ್ಕೆ’ ಅವಸರವಾದರೆ ಅಜ್ಜಿಯ ಆಸರೆಯಲ್ಲಿ ಮನೆಯಾಚೆಗೆ ಹೋಗಬೇಕಾಗಿತ್ತು. ಆಗ ತೋಟದ ಕತ್ತಲೆಯಲ್ಲಿ ಏನೊಂದು ಬೆಳ್ಳಗೆ ಕಂಡರೂ ಅದು ದೆವ್ವದಂತೆಯೇ ಭಾಸವಾಗಿ ಒಮ್ಮೊಮ್ಮೆ ಬುದೂರನೆ ಮೇಲೆದ್ದು ಅರ್ಧಂಬರ್ದ ಆಗಿರುತ್ತಿದ್ದ ವಂದ ಚಡ್ಡಿಯೊಳಗೇ ಆಗಿ ಚೆಡ್ಡಿ ಪೂರಾ ಒದ್ದೆಯಾಗಿಬಿಡುತ್ತಿತ್ತು.

ಅದೊಂದು ದಿನ ನಾನು ಊರೊಳಗಿಂದ ಆಟವನ್ನು ಮುಗಿಸಿಕೊಂಡು ಬರುವ ಹೊತ್ತಿಗೆ ಪಡಸಾಲೆಯಲ್ಲಿ ನೇತಾಕಿರುತ್ತಿದ್ದ ಲಾಟೀನಿನ ಜೊತೆಗೆ ಮತ್ತೆ ಮೂರು ಹೊಸಾ ಲಾಟೀನುಗಳು ಕೂಡಿಕೊಂಡಿದ್ದವು. ಅವೆಲ್ಲವಕ್ಕೂ ಸೀಮೆಎಣ್ಣೆ, ಬತ್ತಿಗಳನ್ನು ಹಾಕಿ ಹತ್ತಿಸಲಾಗಿತ್ತು. ಆ ನಾಲ್ಕೂ ಲಾಟೀನುಗಳ ಬೆಳಕು ಇಡೀ ಪಡಸಾಲೆಯಂಥ ಪಡಸಾಲೆಯನ್ನು ಫಳಾರಿಸುತ್ತಿತ್ತು. ಏಕೆಂದರೆ ಆ ಪಡಸಾಲೆ ಆನಾಡಿ ಬೆಳಕನ್ನು ಯಾವತ್ತೂ ಕಂಡಿರಲೇ ಇಲ್ಲ. ಒಂಥರಾ ಪರಮಾನಂದದಲ್ಲಿ ಪಡಸಾಲೆಯನ್ನು ಹೊಕ್ಕವನಿಗೆ ಮತ್ತೊಂದು ಅಚ್ಚರಿ ಕಾದಿತ್ತು. ಅದೆಂದರೆ ಪಡಸಾಲೆಯ ಮೂಲೆಯೊಂದರಲ್ಲಿದ್ದ ಬೀಸುವ ಕಲ್ಲಿನ ಮೇಲೆ ಪುಸ್ತಕಗಳ ಪೆಂಡಿಯೊಂದಿತ್ತು. ಅದರ ಪಕ್ಕದಲ್ಲಿ ದಪ್ಪದೊಂದು ಹುರಿಯಿಂದ ಬಿಗಿದಿದ್ದ ಸ್ಲೇಟುಗಳ ಕಟ್ಟೊಂದಿತ್ತು. ಆ ಕಟ್ಟಿನ ಮೇಲೆ ಬಳಪಗಳಿದ್ದ ಪುಟ್ಟ ಪುಟ್ಟ ಪೊಟ್ಟಣಗಳಿದ್ದವು. ಪುಸ್ತಕದ ಪೆಂಡಿಯಿಂದ ಒಂದು ಪುಸ್ತಕವನ್ನು ಎತ್ತಿಕೊಂಡೆ. ಆ ಇಡೀ ಪುಸ್ತಕದ ತುಂಬೆಲ್ಲಾ ದೊಡ್ಡದಾಗಿ ಚಿತ್ರಗಳನ್ನು ಬಿಡಿಸಲಾಗಿತ್ತು. ಸಾಲದ್ದಕ್ಕೆ ದಪ್ಪ ದಪ್ಪ ಅಕ್ಷರಗಳಲ್ಲಿ `ಇವನು ಬಸವ, ಇವಳು ಕಮಲ, ಓಡುವ ಆಟ’ ಮುಂತಾದ ಬರಹಗಳಿದ್ದವು. ಅಯ್ಯ ಸ್ಲೇಟು, ಪುಸ್ತಕ, ಬಳಪ ಹಾಗೂ ಲಾಟೀನುಗಳ ಲೆಕ್ಕವನ್ನು ಒಂದೆಡೆ ಗುರುತು ಹಾಕಿಕೊಂಡು ಬೀಸುವ ಕಲ್ಲಿನ ಮೇಲಿಂದ ಪಡಸಾಲೆಯಲ್ಲಿದ್ದ `ಕೊಮ್ಮೆ’ಯೊಂದರ ಮೇಲೆ ಪೇರಿಸಿ, ಆವರೆವಿಗೂ ಉರಿಯುತ್ತಿದ್ದ ಹೊಸಾ ಲಾಟೀನುಗಳನ್ನು `ತುಂಬಿ’, ಅವುಗಳನ್ನು ಅದೇ ಕೊಮ್ಮೆಯ ವಾರಾಸಿಗೆ ತೆಗೆದಿಕ್ಕಿತು.

ಇದಾದ ಮೂರ್ನಾಲ್ಕು ದಿನಕ್ಕೆ ವಯಸ್ಕರ ಶಿಕ್ಷಣ ಸಮಿತಿಯ ವತಿಯಿಂದ ರಾತ್ರಿ ಸ್ಕೂಲು ಊರ ನಡುವಿನ ಹಳೆಯ ಮನೆಯೊಂದರಲ್ಲಿ ಪ್ರಾರಂಭವಾಯ್ತು. ಅಯ್ಯ ಆ ಕಾಲಕ್ಕೆ ಎಲ್. ಎಸ್. ಓದಿದವರಾಗಿದ್ದರಿಂದ ಅವರೇ ಸ್ಕೂಲಿನ ಜವಾಬ್ದಾರಿ ತಗಂಡಿದ್ದರು. ಆ ಮೂರೂ ದಿನ ಅಯ್ಯ ಊರ ತುಂಬೆಲ್ಲಾ ಅಡ್ಡಾಡಿ ಒಂದಷ್ಟು ಜನರನ್ನು ರಾತ್ರಿ ಸ್ಕೂಲಿಗೆ ಹೊಂದಿಸಿತ್ತು. ನನ್ನ ವಾರಿಗೆಯ ಮಕ್ಕಳಿಗೆ ಸ್ಕೂಲೆಂದರೆ ಅದು ಹಗಲಿನಲ್ಲಿ ಮಾತ್ರ ನಡೆಯುವುದು ಅದೂ ಚಿಕ್ಕ ಮಕ್ಕಳಿಗೆ ಎಂದು ಮಾತ್ರ ಗೊತ್ತಿತ್ತು. ಆದರೆ ದೊಡ್ಡವರಿಗೆ, ಮುದುಕರು ತದುಕರಿಗಾಗಿ ಸ್ಕೂಲೊಂದು ಶುರುವಾಗುವುದು ಅದೂ ರಾತ್ರಿ ಹೊತ್ತಲ್ಲಿ ಎಂಬುದು ನಮ್ಮೊಳಗೆ ಅಪರಿಮಿತ ಅಚ್ಚರಿಯನ್ನು ಹುಟ್ಟಾಕಿತ್ತು. ಹಂಗಾಗಿಯೇ ಪ್ರಾರಂಭದ ದಿನ ನಮ್ಮೂರು ಸ್ಕೂಲಿನ ಮುಕ್ಕಾಲು ಭಾಗದಷ್ಟು ಮಕ್ಕಳು ಅಲ್ಲಿ ಜಮಾಯಿಸಿದ್ದೆವು.

ಅದೊಂದು ಹಳೆಯ ಮನೆ. ಹಳೆಯದಾದರೂ ನೋಡಲು ಚಂದವಿತ್ತು. ಮನೆಯ ವಿಶಾಲವಾದ ಪಡಸಾಲೆಯ ಇಕ್ಕೆಲಗಳಲ್ಲಿ ಜಗಲಿಗಳಿದ್ದವು. ಹಾಗೂ ಅಷ್ಟೇ ವಿಶಾಲವಾದ ನಡುಮನೆಯಿತ್ತು. ಅವತ್ತು ಸಂಜೆಗೇ ಅಯ್ಯ ತನ್ನೊಂದಿಗೆ ಒಂದಿಬ್ಬರನ್ನು ಕರಕಂಡು ಸ್ಲೇಟು, ಪುಸ್ತಕ, ಬಳಪ ಹಾಗೂ ಲಾಟೀನುಗಳನ್ನು ಆ ಮನೆಗೆ ಸಾಗಿಸಿತ್ತು. ಪಡಸಾಲೆಯಲ್ಲಿ ಒಂದು ಹಾಗೂ ನಡುಮನೆಯಲ್ಲಿ ಎರಡು ಲಾಟೀನುಗಳನ್ನು ಹಚ್ಚಿ ಇಡಲಾಗಿತ್ತು. ಕತ್ತಲಾಗುತ್ತಿದ್ದಂತೆ ಒಬ್ಬೊಬ್ಬರೇ ರಾತ್ರಿ ಸ್ಕೂಲಿನ ವಿದ್ಯಾರ್ಥಿಗಳು ಆಗಮಿಸತೊಡಗಿದರು. ಅವರುಗಳನ್ನು ನೋಡುತ್ತಲೇ ನಮ್ಮೊಳಗೆ ನಗು ಆಡಲಾರಂಭಿಸಿತು. ಏಕೆಂದರೆ ಅವರುಗಳೊಳಗೆ ಆಗಲೇ ಅರವತ್ತನ್ನು ದಾಟಿದ್ದ ನಮ್ಮನೆಯ ಕುರಿಗಳನ್ನು ನೋಡಿಕೊಳ್ಳುತ್ತಿದ್ದ ಕೆಂಪ್ಲಿಗಜ್ಜ, ನನ್ನ ಜೊತೆ ಓದುತ್ತಿದ್ದ ಹಟ್ಟಿಯ ಶಿವನ ಅಪ್ಪ ತಿಮ್ಮಯ್ಯ, ಮತ್ತೊಬ್ಬ ಸಹಪಾಠಿ ತಪಲನ ಅಪ್ಪ ಗೊರವಯ್ಯ, ಶಂಕರ ಎಂಬ ಗೆಳೆಯನ ಅಪ್ಪ ಸಿದ್ದನಂಜಯ್ಯ ಹೀಗೆ ಮುಂತಾಗಿ ಸುಮಾರು ಇಪ್ಪತ್ತು ಮಂದಿ ಮೊದಲ ದಿನ ಹಾಜರಾಗಿದ್ದರು. ಎಂದೂ ಪುಸ್ತಕ ಬಳಪಗಳನ್ನೇ ಮುಟ್ಟದಿದ್ದ, ಎಂದೂ ಅಕ್ಷರಗಳ ಗೋಜಿಗೇ ಹೋಗದಿದ್ದ ಅವರುಗಳು ಹುರುಪಿನಲ್ಲಿದ್ದರು.

ಆದರೆ ಈ ಹುರುಪು ಅವರುಗಳೊಳಗೆ ಬಹಳ ದಿನ ಬಾಳಿಕೆ ಬರಲಿಲ್ಲ. ತಿಂಗಳೊಪ್ಪತ್ತು ಅನ್ನುವುದರೊಳಗೆ ಒಬ್ಬೊಬ್ಬರೇ ಕಣ್ಣಿ ಎಸೆಯತೊಡಗಿದ್ದರು. ನನ್ನ ವಾರಿಗೆಯ ಹುಡುಗರಿಗೂ ಅಷ್ಟೇ. ದಿನಾ ಅವರು ಜೋರಾಗಿ ಓದಿಕೊಳ್ಳುತ್ತಿದ್ದ ಅವವೇ ಪದಗಳು ಬೇಸರ ತರಿಸತೊಡಗಿದ್ದವು. ಯಾವಾಗ ದಿನದಿಂದ ದಿನಕ್ಕೆ ಒಬ್ಬೊಬ್ಬರಾಗಿ ಎಪ್ಪೆಸ್ ಹೊಡೆಯತೊಡಗಿದರೋ ಆಗ ಅಯ್ಯ ಅವರುಗಳನ್ನು ಹುಡುಕಿ ಕರೆ ತರುವ ಕೆಲಸವನ್ನ ನನಗೆ, ತಪಲನಿಗೆ ಹಾಗೂ ಶಂಕರನಿಗೆ ವಹಿಸಿತ್ತು. ಹಂಗಾಗಿ ನಾವುಗಳು ಸಾಯಂಕಾಲದ ಆಟ ಮುಗಿಸಿಕೊಂಡವರೇ ಸಂಜೆಗೇ ಸೀದಾ ರಾತ್ರಿ ಸ್ಕೂಲಿನ ಮನೆಯತ್ತ ಪೇರಿ ಕೀಳುತ್ತಿದ್ದೆವು. ಅಲ್ಲಿಂದ ಅವತ್ತು ಸ್ಕೂಲಿಗೆ ಬರದವರ ಮನೆಯತ್ತ ಓಡುತ್ತಿದ್ದೆವು. ಹಂಗೂ ಕೆಲವರು ನಾವು ಹೋಗುವ ಹೊತ್ತಿಗೆ ನಾಪತ್ತೆಯಾಗಿಬಿಟ್ಟಿರುತ್ತಿದ್ದರು. ಯಾವಾಗ ರಾತ್ರಿ ಸ್ಕೂಲು ಬರಬರುತ್ತಾ ಕುಂಟತೊಡಗಿತೋ ಅಯ್ಯ ಆ ಮನೆಯಲ್ಲಿ ವಾರ ಹದಿನೈದು ದಿನಕ್ಕೊಮ್ಮೆ ಶನಿ ಮಹಾತ್ಮೆಯನ್ನು ಓದುವುದು, ಭಜನೆ ಅಥವಾ ತತ್ವಪದಗಳನ್ನು ಹಾಡಿಸುವುದು ಮುಂತಾದ ತನ್ನ ವಿದ್ಯಾರ್ಥಿಗಳ ಎದೆಗೆ ಹತ್ತಿರದ ಸಂಗತಿಗಳನ್ನು ಮುಂದಾಗಿಸಿತು. ನಮಗಂತೂ ಅಯ್ಯನ ತೀರ್ಮಾನ ಇನ್ನಿಲ್ಲದ ಖುಷಿಯ ಸಂಗತಿಯಾಗಿತ್ತು. ಏಕೆಂದರೆ ಶನಿಮಹಾತ್ಮೆ ಓದುವ ಹೊತ್ತಲ್ಲಿ ಚಿಗಣಿ, `ತಮ್ಟ’ ಪಲ್ಲಾರಗಳು ಸಿಗುತ್ತಿದ್ದವು. ಶನಿಮಹಾತ್ಮೆ ಓದುತ್ತಿದ್ದ ದಿನ ಕೆಲ ಹೆಂಗಸರೂ ಅಲ್ಲಿಗೆ ಬರುತ್ತಿದ್ದರು. ಅಲ್ಲಿ ತಮ್ಮ ಮನೆಯವರು ಮತ್ತಿತರ ಮುದುಕರೆಲ್ಲಾ ಸ್ಲೇಟು ಬಳಪಗಳ ಜೊತೆಗಿರುತ್ತಿದ್ದದ್ದನ್ನು ಕಂಡು ಮುಸು ಮುಸು ನಗುತ್ತಾ ನಾಚಿಕೆಗೊಳಗಾಗುತ್ತಿದ್ದರು. ಹಿಂಗೆ ತತ್ವಪದ, ಶನಿಮಹಾತ್ಮೆಗಳ ಮಹಿಮೆಯಿಂದಾಗಿ ತಗಾ ಹಳೆಯ ವಿದ್ಯಾರ್ಥಿಗಳೊಂದಿಗೆ ಹೊಸಬರೂ ಅತ್ತ ಮುಖಮಾಡ ತೊಡಗಿದರು. ಈ ನೆಪದಲ್ಲಿ ವಾರಕ್ಕೊಮ್ಮೆಯಾದರೂ ಒಂದೆರಡು ಗಂಟೆಗಳ ಕಾಲ ತತ್ವಪದಗಳ ಹಾಡುಗಾರಿಕೆ ಇರುತ್ತಿತ್ತು. ಆದರೆ ಅದು ಸಾಲದೆಂದು ಅಯ್ಯ ಮತ್ತವರ ವಾರಿಗೆಯವರು ಯೋಚಿಸಿ ಸ್ಕೂಲು ಶುರುವಾಗುವ ಮುನ್ನ ದಿನವೂ ಒಂದೆರಡು ಭಜನೆಯ ಹಾಡುಗಳನ್ನು ಕಡ್ಡಾಯವಾಗಿ ಹಾಡಿಸತೊಡಗಿದರು. ಆಗ ಆ ಚಣಕ್ಕೆ ಸಾಕ್ಷಿಯಾಗಿ ಬರುತ್ತಿದ್ದ ಹೆಂಗಸರಲ್ಲಿ ಕೆಲ ಅಜ್ಜಿಯಂದಿರು ಸ್ಕೂಲು ಮುಚ್ಚುವವರೆಗೂ ಅಲ್ಲೇ ಕೂತು ತೂಕಡಿಸುತ್ತಿದ್ದರು. ರಾತ್ರಿ ಒಂಭತ್ತು ಅಥವಾ ಒಂಭತ್ತೂವರೆಗೆ ಸ್ಕೂಲು ಖಲಾಸಾಗುತ್ತಿತ್ತು. ಮಿಕ್ಕಂತೆ ಭಜನೆಯ ದಿನಗಳಲ್ಲಿ ಅದು ಸರೋತ್ತನ್ನೂ ದಾಟುತ್ತಿತ್ತು. ಅವತ್ತು ಸ್ಲೇಟು, ಬಳಪ, ಪುಸ್ತಕಗಳಿಗೆ ಪೂರಾ ರಜೆ ಕೊಡಲಾಗುತ್ತಿತ್ತು. ಆ ದಿನಗಳಲ್ಲಿ ನಮ್ಮ ಹಾಜರಿ ಕೂಡಾ ಕಡೆಯವರೆಗೂ ಇರುತ್ತಿತ್ತು. ಹಿಂಗೆ ಅಕ್ಷರಗಳ ಜೊತೆಗೆ ಆಧ್ಯಾತ್ಮಿಕ ಲೋಕವೂ ಅಲ್ಲಿ ತೆರೆದುಕೊಳ್ಳತೊಡಗಿತ್ತು. ಈ ಕಾರಣದಿಂದಾಗಿ ಊರಿನಲ್ಲಿ ಒಂದೆರಡು ತತ್ವಪದ ಹಾಡುವ ಗುಂಪುಗಳೂ ಹುಟ್ಟಿಕೊಂಡವು. ಈಗಲೂ ನನ್ನ ಹಳ್ಳಿಯಲ್ಲಿ ಯಾವುದೇ ಜಾತಿ, ಧರ್ಮದ ಹಂಗಿಲ್ಲದೆ ಒಗ್ಗೂಡಿರುವ ತತ್ವಪದ ಹಾಡುವ ತಂಡವಿದೆ.

ಈ ಸ್ಕೂಲು ಒಂದೆರಡು ವರ್ಷ ನಡೆದ ನೆನಪು. ಆಮೇಲೆ ಏನಾಯ್ತೋ ನೆನಪಿಲ್ಲ. ನಾವೂ ನಮ್ಮೂರ ಸ್ಕೂಲಿನಿಂದ ಶೆಟ್ಟೀಕೆರೆಯ ಮಿಡ್ಲೂಸ್ಕೂಲಿಗೆ ಹೋಗತೊಡಗಿದ್ದೆವು. ಅಲ್ಲಿನ ಹೊಸಾ ಲೋಕದಿಂದಾಗಿ ನಮಗೂ ರಾತ್ರಿ ಸ್ಕೂಲಿನ ಬಗ್ಗೆ ನಿಗಾ ಕಡಿಮೆಯಾಗಿತ್ತು. ಆದರೆ ಆಗ ಒಂಚೂರು ನಿಗಾ ವಹಿಸಿ ಬಂದವರು ಮಾತ್ರ `ಅಡ್ಡಂಬಡ್ಡ’ ತಮ್ಮ ಹೆಸರುಗಳನ್ನು ಬರೆಯುವುದನ್ನು ಕಲಿತಿದ್ದರು. ಅವರುಗಳಲ್ಲಿ ನಮ್ಮ ಕುರಿಗಳನ್ನು ನೋಡಿಕೊಳ್ಳುತ್ತಿದ್ದ ಕೆಂಪ್ಲಿಂಗಜ್ಜ ಒಬ್ಬರಾಗಿದ್ದರು. ಕುರಿಗಳನ್ನು ಅಡ್ಡಾಡಿಸಲು `ಬಾರೆ’ಯತ್ತ ಹೋದಾಗಲೆಲ್ಲಾ ಎರೆ ಮಣ್ಣಿನ ಮೆತುವಿನ ಮೇಲೋ ಇಲ್ಲಾ ಎಂಥದಾರ ಹಸಿರು ಸೊಪ್ಪನ್ನು ಉಂಡುಗಟ್ಟಿಕೊಂಡು ಬಂಡೆಗಳ ಮೇಲೋ ಹೆಸರನ್ನು ಬರೆದು ರೂಢಿ ಮಾಡಿಕೊಳ್ಳುತ್ತಿತ್ತು. ಅಪರೂಪಕ್ಕೊಮ್ಮೆ ಕುರಿ ಕಾಯಲು ಅವರೊಂದಿಗೆ ಹೋಗುತ್ತಿದ್ದ ಹೊತ್ತಲ್ಲಿ ಹಂಗೆ ಬರೆದು ನನಗೆ ತೋರಿಸುತ್ತಿತ್ತು. `ಒಂದು ಕರ‍್ಗು ಇತ್ತು ಕಣ್ಲ ಮಗಾ, ನಾಕು ಅಕ್ಷರ ಕಲೀದಂಗೆ ಈ ಘಟ ಹಂಗೇ ಬಿದ್ದೋಗಿಬಿಡುತ್ತಲ್ಲಾ ಅಂತಾವ. ಕಲ್ತೇ ನೋಡು ಬಡ್ಡಿ ಮಗಂದ…’ ಅಂತ ಹೇಳಿಕೊಳ್ಳುತ್ತಿತ್ತು. ಆಗ ಕೆಂಪ್ಲಿಂಗಜ್ಜನ ಬೋಡು ಬಾಯಿಯ ತುಂಬಾ ಮೂಡುತ್ತಿದ್ದ ನಗುವಿನೊಳಗೆ ನಿರಾಳತೆಯ ಭಾವವೊಂದು ಎದ್ದಾಡುತ್ತಿತ್ತು.

ಮುಂದೆ ರಾತ್ರಿ ಸ್ಕೂಲು ನಡೆಯುತ್ತಿದ್ದ ಇದೇ ಮನೆ ಒಂದಷ್ಟು ವರ್ಷ ನಾಟಕಗಳ ತಾಲೀಮಿನ ತಾಣವಾಗಿತ್ತು. ಆಗ ನನ್ನೂರಿನಲ್ಲಿ ವರ್ಷಕ್ಕೆ ಒಂದು ಪೌರಾಣಿಕ ಮತ್ತೆ ಒಂದು ಸಾಮಾಜಿಕ ನಾಟಕವನ್ನು ತಪ್ಪದೇ ಆಡುತ್ತಿದ್ದರು. ಅದು ಹಬ್ಬ ಅಥವಾ ಜಾತ್ರೆಗಳಲ್ಲಿ ಆಗಿರುತ್ತಿತ್ತು.. `ರಕ್ತ ರಾತ್ರಿ’ ಎಂಬ ಸಾಮಾಜಿಕ ಹಾಗೂ `ದೇವಿ ಮಹಾತ್ಮೆ’ಎಂಬ ಪೌರಾಣಿಕ ನಾಟಕಗಳು ಬಹುತೇಕ ಖಾಯಮ್ಮಾಗಿರುತ್ತಿದ್ದವು. ಇವುಗಳಲ್ಲಿ ಪಾರ್ಟು ಮಾಡುತ್ತಿದ್ದವರು ಮಾತ್ರ ಈ ರಾತ್ರಿ ಸ್ಕೂಲಿನ ವಿದ್ಯಾರ್ಥಿಗಳು ಕೆಲವರು ಇದ್ದೇ ಇರುತ್ತಿದ್ದರು. ಅಯ್ಯ `ರಕ್ತ ರಾತ್ರಿ’ ನಾಟಕದಲ್ಲಿ ಅಭಿನಯಿಸುತ್ತಿತ್ತು. ನನ್ನೂರಿನಿಂದ ಕೆಲವು ಮೈಲಿ ದೂರದಲ್ಲಿರುವ ಬರಗೂರು ಎಂಬ ಹಳ್ಳಿಯಿಂದ ಬಂದು ಶಿವಲಿಂಗಪ್ಪ ಅನ್ನುವ ಮೇಷ್ಟ್ರು `ರಕ್ತ ರಾತ್ರಿ’ ನಾಟಕವನ್ನು ತುಂಬಾ ಚಂದವಾಗಿ ಕಲಿಸುತ್ತಿದ್ದರು. `ದೇವಿ ಮಹಾತ್ಮೆ’ ನಾಟಕ ಕಲಿಸುತ್ತಿದ್ದ ಮೇಷ್ಟ್ರು ಹೆಸರು ಮರೆತುಹೋಗಿದೆ. ಆದರೆ ರಕ್ತಬೀಜಾಸುರ ಪಾತ್ರ ಮಾಡುತ್ತಿದ್ದ ರುದ್ರಪ್ಪ, ದೇವಿ ಪಾತ್ರ ಮಾಡುತ್ತಿದ್ದ ರತ್ನಯ್ಯ ಅವರ ನಟನೆಯನ್ನು ನೆನಪಿಸಿಕೊಂಡರೆ ಈಗಲೂ ಮೈ ಜುಮ್ಮೆನ್ನುತ್ತೆ.. ಇವತ್ತಿಗೂ ಅವರಿಬ್ಬರ ಪಾತ್ರಗಳು, ಅವರ ಅಬ್ಬರಿಸುವಿಕೆ, ಅವರುಗಳ ಹಾಡುತ್ತಿದ್ದ `ಮಟ್ಟು’ಗಳು ಆಗಾಗ ಕಣ್ಮುಂದೆ ಬಂದು ನಿಲ್ಲುತ್ತವೆ.

ಈ ರಾತ್ರಿ ಸ್ಕೂಲು, ಈ ನಾಟಕಗಳ ತಾಲೀಮು, ಈ ತತ್ವಪದ ಸೆಳೆತ ಜಾಸ್ತಿಯಾಗುತ್ತಲೇ ನಾವು ನಮ್ಮ ಹಗಲಿನ ಸ್ಕೂಲಿಗೆ ಅಪರೂಪಕ್ಕೆ ಮುಖ ತೋರಿಸತೊಡಗಿದೆವು. ಇಂಥ ನಮ್ಮ ಅಪರೂಪಕ್ಕೆ ಕಾರಣವನ್ನು ವಿಚಾರಿಸಲಾಗಿ ತಿಳಿದು ಬಂದ ಸಂಗತಿಯಿಂದ ನಮ್ಮ ಸ್ಕೂಲಿನ ಮೇಷ್ಟ್ರು ರಾಂಗಾಗಿದ್ದರು. ಆ ಕಾರಣಕ್ಕೆ ಅವರೊಂದು ದಿನ ಸೀದಾ ನಮ್ಮ ಮನೆಯತ್ತ ಬೆಳಬೆಳಗ್ಗೆಯೇ ಬಂದುಬಿಟ್ಟಿದ್ದರು. ಅಯ್ಯನಿಗೆ ನಾನು ಸ್ಕೂಲಿಗೆ ಚಕ್ಕರ್ ಹೊಡೆಯುತ್ತಿದ್ದದ್ದು ಗೊತ್ತಿದ್ದರೂ ಯಾಕೋ ಅದನ್ನು ಅಷ್ಟು ತಲೆಗಾಕಿಕೊಂಡಿರಲಿಲ್ಲ. ಯಾವಾಗ ಆ ಮೇಷ್ಟ್ರು ಬಂದು ಅಯ್ಯನಿಗೆ `ನೋಡಿ ನೀವು ಒಂದೆರಡು ಅಕ್ಷರಗಳನ್ನ ಕಲಿತಿದ್ರಿಂದ ನಿಮಗೂ ಬೇರೊಬ್ಬರಿಗೆ ಹೇಳಿಕೊಡಲು ಸಾಧ್ಯ ಆಗಿದ್ದು…’ ಮುಂತಾದ ಮಾರ್ಮಿಕ ಮಾತುಗಳನ್ನಾಡಿದ್ದರಿಂದ ಅಯ್ಯ ನನ್ನ ಸಿ.ಎಲ್.ಗಳನ್ನೆಲ್ಲಾ ಏಕ್ದಂ ಬರಕಾಸ್ತು ಮಾಡಿಬಿಟ್ಟಿತ್ತು. ಹಂಗಾಗಿ ಮೇಷ್ಟ್ರು ಬಂದ ದಿನದಿಂದಲೇ ನಾನು ಸ್ಕೂಲಿಗೆ ಹೋಗಬೇಕಾಗಿ ಬಂದಿತ್ತು. ಇದೇ ಗತಿ ಗೆಳೆಯರಾದ ಶಂಕರ, ಶಿವ, ತಪಲರಿಗೂ ಆಗಿತ್ತು. ಹಿಂಗೆ ಕಟ್ನೀಟು ಮಾಡಿದ ಮೇಷ್ಟ್ರು ಒಳ್ಳೆಯವರಲ್ಲ ಅನಿಸಿತ್ತು. ಆಗ ನಾವು ನಾಲ್ಕನೆಯ ಕ್ಲಾಸಿನಲ್ಲಿದ್ದೆವು.

ನಾನು ಪ್ರೈಮರಿ ಶಾಲೆಯಲ್ಲಿ ಓದುವ ಕಾಲಕ್ಕೆ ಮೇಷ್ಟ್ರುಗಳೆಂದರೆ ಹಳ್ಳಿಯ ಜನ ಅಪಾರ ಗೌರವ ಕೊಡುತ್ತಿದ್ದರು. ಅವರುಗಳೂ ಅಷ್ಟೆ ಹಳ್ಳಿಯವರ ಜೊತೆ ತುಂಬಾ ಸ್ನೇಹದಿಂದ ಇರುತ್ತಿದ್ದರು. ದೂರದ ಊರಿನಿಂದ ಬಂದವರಾಗಿದ್ದರೆ ಅವರು ನಮ್ಮ ಹಳ್ಳಿಯಲ್ಲಿಯೇ ಉಳಿಯುತ್ತಿದ್ದರು. ಆಗ ಅವರಿಗೆ ಬಾಡಿಗೆಯಿಲ್ಲದೆ ಮನೆಗಳನ್ನು ಕೊಡುವುದು, ಮನೆಯಲ್ಲಿ ಕರೇವು ಆಗುತ್ತಿದ್ದರೆ ಹಾಲು ಮಜ್ಜಿಗೆಗಳನ್ನು ಕೊಡುವುದು, ಹಣ್ಣುಗಳ ಕಾಲದಲ್ಲಿ ಹಣ್ಣು ಹಂಪಲುಗಳನ್ನು ತಲುಪಿಸುವುದು ಧರ್ಮದ ಕಾರ್ಯವೆಂದು ತಿಳಿದಿದ್ದ ಕಾಲ ಅದು. ಹೀಗೆ ಕೇಳದೇ ಸಿಗುತ್ತಿದ್ದ ಸೌಲಭ್ಯಗಳ ಜೊತೆಗೆ ಕೆಲ ಮೇಷ್ಟ್ರುಗಳು ಮಕ್ಕಳಿಗೆ ಕೆಲವು ಕಡ್ಡಾಯದ ಕೆಲಸಗಳನ್ನೂ ಹೇಳುತ್ತಿದ್ದರು. ಅಂಥದ್ದೊಂದು ಕೆಲಸವನ್ನು ನಮಗೊಬ್ಬರು ಮೇಷ್ಟ್ರು ವಹಿಸಿದ್ದರು.

ಈ ಮೇಷ್ಟ್ರು ನಮ್ಮೂರಿನ ಪಕ್ಕದ ಶೆಟ್ಟೀಕೆರೆಯಿಂದ ಬರುತ್ತಿದ್ದರು. ಕೊಂಚ ಮೂಗಿನಿಂದ ಮಾತನಾಡುತ್ತಿದ್ದ ಅವರ ಮಾತುಗಳು ಒಮ್ಮೆಗೇ ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ಹಂಗಾಗಿ, ಊರಿನಲ್ಲಿ ದೊಡ್ಡವರು `ಕೊಯ್ಕ್ ಮೇಷ್ಟ್ರು’, ಅಂತ ಕರೆಯುತ್ತಿದ್ದರು. ಜಾತಿಯಲ್ಲಿ ಬ್ರಾಹ್ಮಣರಾಗಿದ್ದ ಅವರು ಓದಿನ ವಿಚಾರದಲ್ಲಿ ಎಷ್ಟು ಕಟ್ಟುನಿಟ್ಟೋ, ಅಷ್ಟೇ ಸಂಪ್ರದಾಯದ ಮನೋಧರ್ಮದವರಾಗಿದ್ದರು. ಆಗ ಒಂದನೆಯ ತರಗತಿಯಿಂದ ನಾಲ್ಕನೆಯ ತರಗತಿಯವರೆಗೆ ಇಡೀ ಸ್ಕೂಲಿಗೆ ಒಬ್ಬರೇ ಮೇಷ್ಟ್ರು ಇರುತ್ತಿದ್ದರು. ಮಕ್ಕಳು ಮಾಡುತ್ತಿದ್ದ ಗಲಾಟೆಯನ್ನು ತಪ್ಪಿಸಲು ಒಂದೊಂದು ಕ್ಲಾಸಿನವರಿಗೆ ಒಂದೊಂದು ಕೆಲಸ ಹಚ್ಚುತ್ತಿದ್ದರು. ಒಂದನೆಯ ಕ್ಲಾಸಿಗೆ ಅಕ್ಷರ ತಿದ್ದುವ ಕೆಲಸವಾದರೆ, ಎರಡನೆಯ ಕ್ಲಾಸಿಗೆ ಕಾಗುಣಿತ, ಮೂರನೆಯ ಕ್ಲಾಸಿಗೆ ಪಾಠ ಓದಿಸುವುದು, ನಾಲ್ಕನೆಯ ಕ್ಲಾಸಿಗೆ ಮಗ್ಗಿ ಹೇಳುವುದು ಹೀಗೆ ಓದಿಸುವುದನ್ನೂ, ಬರೆಸುವುದನ್ನೂ ಒಟ್ಟೊಟ್ಟಿಗೇ ಮಾಡಿಸುತ್ತಿದ್ದರು. ಅಷ್ಟಕ್ಕೂ ಗಲಾಟೆ ಜಾಸ್ತಿಯಾಗಿ ಕಿರಕಿರಿ ಅನಿಸಿದಾಗ ಯಾವುದಾದರೊಂದು ಕ್ಲಾಸನ್ನು ಆಟ ಆಡಿಕೊಳ್ಳಲು ಆಚೆ ಬಿಡುತ್ತಿದ್ದರು.

ಈ ಮೇಷ್ಟ್ರು ಯಾರ ಮನೆಯಿಂದ ಏನನ್ನು ತಂದು ಕೊಟ್ಟರೂ ಬಿಲ್ಕುಲ್ ಮುಟ್ಟುತ್ತಿರಲಿಲ್ಲ. ಹಲಸಿನ ಹಣ್ಣು, ಮಾವಿನ ಹಣ್ಣಿನ ಕಾಲದಲ್ಲಿ ಒತ್ತಾಯ ಮಾಡಿದರೆ ಒಪ್ಪಿಕೊಳ್ಳುತ್ತಿದ್ದ ಇವರಿಗೆ ಅವುಗಳನ್ನು ಯಾರಾದರೂ ಅವರ ಮನೆಯವರೆಗೆ ತಲುಪಿಸಬೇಕಿತ್ತು. ನಾನು ಕೆಲವೊಮ್ಮೆ ನಮ್ಮ ಅಜ್ಜನ ಒತ್ತಾಯಕ್ಕೆ ಹೀಗೆ ಏನನ್ನಾದರೂ ಹೊತ್ತುಕೊಂಡು ಅವರ ಜೊತೆಯಲ್ಲಿ ಅವರ ಮನೆಗೆ ಹೋಗಿದ್ದುಂಟು. ಯಾವಾಗಲೂ ಬಿಳಿಯ ಪಂಚೆ ಮತ್ತು ಬಿಳಿಯ ತುಂಬು ತೋಳಿನ ಶರ್ಟಿನಲ್ಲಿರುತ್ತಿದ್ದ ಅವರು ಒಳ್ಳೆ ಕಡ್ಡಿ ಪೈಲ್ವಾನನ ಥರ ಸಣ್ಣಕ್ಕಿದ್ದರು. ಅವರು ನಡೆದು ಹೋಗುತ್ತಿದ್ದರೆ ನಾವು ಓಡಿ ಹೋಗಬೇಕಿತ್ತು. ಅಷ್ಟು ಬಿರಬಿರನೆ ನಡೆಯುತ್ತಿದ್ದರು. ಕೈಯ್ಯಲ್ಲಿ ಯಾವಾಗಲೂ ಬಿದಿರಿನ ಇಲ್ಲವೇ ಲೆಕ್ಕೆ ಗಿಡದ `ಸಿಲುಪೆ’ಯೊಂದು ಇರುತ್ತಿತ್ತು. `ಈಗ ಬಿಡ್ತೀನಿ ಅಂದ್ರೆ ಹಂಗಿಂಗಲ್ಲ’ ಅಂತ ಕೋಲನ್ನು ಎತ್ತಿ ಹೆದರಿಸುತ್ತಿದ್ದರು. ಹೊಡೆಯುತ್ತಿದ್ದದ್ದು ತುಂಬಾಂದರೆ ತುಂಬಾ ಕಡಿಮೆ.

(ಚಳ್ಳೆ ಹಣ್ಣು)

ಇಂಥ ಇವರಿಗೆ ಒಂದು ಮೋಹ ಇತ್ತು. ಅದು ಚಳ್ಳೆ ಹಣ್ಣಿನದು. ಎರದೆ ಹಣ್ಣಿನಷ್ಟು ಗಾತ್ರದ, ಅಂಟಂಟಾಗಿರುತ್ತಿದ್ದ ಈ ಹಣ್ಣೆಂದರೆ ಅವರಿಗೆ ತುಂಬಾ ಇಷ್ಟ. ಈ ಹಣ್ಣಿನ ಕಾಲ ಬಂದರೆ ಸಾಕು, ಅವುಗಳನ್ನು ಯಾರಿಂದಲಾದರೂ ಹೆಂಗಾದರೂ ಮಾಡಿ ತರಿಸಿಕೊಳ್ಳುತ್ತಿದ್ದರು. ಈ ಕಾರಣಕ್ಕೆ ಅವರಿಗೆ `ಚೊಳ್ಳೆ ಹಣ್ಣಿನ ಮೇಷ್ಟ್ರು’ಅನ್ನುವ ಮತ್ತೊಂದು ಅಡ್ಡ ಹೆಸರು ಕೂಡ ಇತ್ತು. ಊರಿನ ಪಕ್ಕದಲ್ಲಿದ್ದ ನಾವು ಮಳ್ಳು ಹೊಲ ಅಂತ ಕರೆಯುತ್ತಿದ್ದ ನಮ್ಮ ಹೊಲದ ಬದುವಿನಲ್ಲಿ ದೊಡ್ಡದೊಂದು ಚಳ್ಳೆ ಹಣ್ಣಿನ ಮರವಿತ್ತು. ಸದಾ ಹಚ್ಚಂಥ ಹಸಿರಿನಿಂದಿರುತ್ತಿದ್ದ ಅದರ ಎಲೆಗಳು ಒರಟೊರಟಾಗಿರುತ್ತಿದ್ದವು. ಅದು ಹೊಲದಲ್ಲಿ ಬೆಳೆಯುವ ಪೈರಿಗೆ ತೊಂದರೆ ಕೊಡುತ್ತೆ ಅನ್ನುವ ಕಾರಣಕ್ಕೆ ಅದರ ಕೆಳಗಿನ ಕೊಂಬೆಗಳನ್ನು ಆಗಾಗ ಸರವಲಾಗುತ್ತಿತ್ತು. ಕೈಯ್ಯಳತೆಗೆ ಅದರ ಒಂದೂ ಕೊನೆಯೂ ಸಿಗುತ್ತಿರಲಿಲ್ಲ. ಸುಮಾರು ಎರಡಾಳು ಎತ್ತರದಲ್ಲಿ ಛತ್ರಿಯಂತೆ ಹರವಿಕೊಂಡಿದ್ದ ಅದರ ಹಣ್ಣು ಬೇಕೆಂದರೆ ಮರವನ್ನು ಹತ್ತಲೇಬೇಕಿತ್ತು. ಆ ಹಣ್ಣು ಮಕ್ಕಳಾದ ನಮಗೆ ಅಷ್ಟು ಇಷ್ಟದ ಹಣ್ಣಾಗಿರಲಿಲ್ಲ. ಜೊತೆಗೆ ಆ ಕಾಲದಲ್ಲಿ ನಮಗೆ ಹಣ್ಣುಗಳಿಗೆ ಬರವಿರುತ್ತಿರಲಿಲ್ಲ. ಕಾರೆ, ಮಾವು, ಹಲಸು ಮುಂತಾದ ಹಣ್ಣುಗಳು ಅದೇ ಹೊತ್ತಲ್ಲಿ ನಮಗಾಗಿ ಮಿಗುವಷ್ಟು ಸಿಕ್ಕುತ್ತಿದ್ದವು. ಈ ಚಳ್ಳೆಹಣ್ಣನ್ನು ಚೀಪಿದರೆ ಒಂಚೂರು ಸೀಪರು ಮಾತ್ರ ಸಿಕ್ಕು ಮಿಕ್ಕಂತೆ ಬಾಯಿ ಅಂಟಂಟಾಗಿಬಿಡುತ್ತಿತ್ತು.

ಆ ವರ್ಷ ಈ ಹಣ್ಣಿನ ಕಾಲ ಬರುತ್ತಿದ್ದಂತೆ, ಮೇಷ್ಟ್ರು ಅವುಗಳನ್ನು ಬಿಡಿಸಿಕೊಂಡು ಬರುವ ಜವಾಬ್ದಾರಿಯನ್ನು ನನಗೆ ಮತ್ತು ನನ್ನ ಇಬ್ಬರು ವಾರಿಗೆಯವರಾದ ಶಂಕರ ಮತ್ತು ಹಟ್ಟಿಯ ಶಿವನಿಗೆ ವಹಿಸಿದ್ದರು. ತಪಲನಿಗೂ ನಮ್ಮ ಜೊತೆ ಬರುವ ಅಪಾರ ಆಸೆ ಇದ್ದರೂ ಅದ್ಯಾವ ಕಾರಣಕ್ಕೋ ಏನೋ ಮೇಷ್ಟ್ರು ಅವನನ್ನು ಕಳಿಸುತ್ತಿರಲಿಲ್ಲ. ಶಂಕರ ಚೆನ್ನಾಗಿ ಮರ ಹತ್ತುತ್ತಾನೆ ಎಂಬುದು ಹೆಂಗೋ ಮೇಷ್ಟ್ರಿಗೆ ಗೊತ್ತಾಗಿತ್ತು. ಶಿವ ಶಂಕರನಿಗಿಂತ ಬಲು ವೈನಾಗಿ ಮರ ಹತ್ತುತ್ತಿದ್ದ ಎಂಬುದು ಅವನೊಂದಿಗೆ ಮರಗೋತಿ ಆಟ ಆಡುವ ನಮಗೆ ಗೊತ್ತಿತ್ತು. ಇನ್ನೇನು ಊಟದ ಹೊತ್ತು ಹತ್ತಿರ ಆಗುತ್ತಿದೆ ಅನ್ನುವಂಥ ಹೊತ್ತಲ್ಲಿ ನಮ್ಮನ್ನು ಈ ಕೆಲಸಕ್ಕೆ ಕಳಿಸುತ್ತಿದ್ದರು. ಹಾಗೆ ಕಳಿಸುವಾಗ ಶಂಕರ ಮಾತ್ರ ಮರವನ್ನು ಹತ್ತಿ ಕೀಳಬೇಕೆಂದೂ ಹಾಗೆ ಕಿತ್ತವುಗಳನ್ನು ನಾನು ಶರ್ಟಿನ ಕೆಳಭಾಗವನ್ನು ಮಡಿಚಿ ಅದರೊಳಕ್ಕೆ ಹಾಕಿಕೊಂಡು ಬರಬೇಕೆಂದು ಹೇಳಿ ಕಳಿಸುತ್ತಿದ್ದರು. ಹಂಗೆ ಹಾಕಿಕೊಂಡು ಬರುತ್ತಿದ್ದ ನನ್ನ ಶರ್ಟಿನ ಕೆಳಭಾಗ ಚಳ್ಳೆ ಹಣ್ಣಿನ ಅಂಟಿನಿಂದ ಮುಟ್ಟಿದರೆ ಸಾಕು ಪಿತುಗುಡುತ್ತಿತ್ತು. ಶಿವನನ್ನು ಯಾವ ಕಾರಣಕ್ಕೂ ಮರ ಹತ್ತಿಸಕೂಡದು ಜೊತೆಗೆ ಅವನ ಕೈಗೆ ಹಣ್ಣುಗಳನ್ನು ಕೊಡಕೂಡದು ಎಂಬ ಕಟ್ಟಪ್ಪಣೆಯೂ ಇರುತ್ತಿತ್ತು. ನಮಗಿಂತಲೂ ಕಟ್ಟುಮಸ್ತಾಗಿದ್ದ ಶಿವನನ್ನು ಯಾವ ಕಾರಣಕ್ಕೆ ಮರ ಹತ್ತಿಸ ಕೂಡದೆಂದು ಹೇಳುತ್ತಿದ್ದಾರೆ ಅನ್ನುವುದು ನನಗೂ ಶಂಕರನಿಗೂ ನಮ್ಮ ಯೋಚನೆಗೂ ಮೀರಿದ ಸಂಗತಿಯಾಗಿತ್ತು. ಕೆಲವು ದಿನ ಹಾಗೇ ಮಾಡಿದೆವು. ಶಿವ ನಮ್ಮ ಜೊತೆ ಬಂದರೂ ಅವನು ಮರ ಹತ್ತುವ ತನ್ನ ಅಗಾಧ ಇರಾದೆಯನ್ನು ಹತ್ತಿಕ್ಕಿಕೊಂಡು ಯಾಪು ಮೋರೆ ಹಾಕಿಕೊಂಡಿರುತ್ತಿದ್ದ. ನಮ್ಮ ಪ್ರೀತಿಯ ಗೆಳೆಯನಾಗಿದ್ದ ಶಿವ ಹೀಗೆ ಬೇಸರದಿಂದ ಇರುತ್ತಿದ್ದುದು ನಮಗೆ ಒಳಗೊಳಗೇ ಒಂಥರಾ ಸಂಕಟವಾಗುತ್ತಿತ್ತು. ಈ ಮೇಷ್ಟ್ರು ಯಾಕೋ ಶಿವನ ಬಗ್ಗೆ ಬೇರೆ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಅನಿಸುತ್ತಿತ್ತು. ಈ ಸಂಕಟದ ಹಿನ್ನೆಲೆಯಲ್ಲಿ ನಮ್ಮ ಮನೆಗಳಿಗೆ ಖುದ್ದು ಮೇಷ್ಟ್ರೇ ಬಂದು ನಮ್ಮನ್ನು ದಿನವೂ ಸ್ಕೂಲಿನ ಮುಖವನ್ನು ನೋಡುವಂತೆ ಮಾಡಿದ್ದ ಅಸಮಾಧಾನವೂ ನಮ್ಮೊಳಗೆ ಕೆಲಸ ಮಾಡುತ್ತಿತ್ತು. ಇದರ ಪರಿಣಾಮವಾಗಿ ಅವತ್ತೊಂದು ದಿನ ಶಿವನನ್ನೇ ಮರಕ್ಕೆ ಹತ್ತಿಸಿ ಹಣ್ಣುಗಳನ್ನು ಕೀಳಿಸುವುದು, ಆ ನಂತರ ಅವುಗಳನ್ನು ನಾನು ತೆಗೆದುಕೊಂಡು ಹೋಗುವುದು ಅನ್ನುವ ತೀರ್ಮಾನಕ್ಕೆ ನಾನೂ ಶಂಕರ ಬಂದೆವು. ಈ ನಮ್ಮ ಪ್ಲ್ಯಾನಿಗೆ ಶಿವ ಮೊದಮೊದಲು ಹೆದರಿದ. ಮೇಷ್ಟ್ರಿಗೆ ಗೊತ್ತಾದರೆ ಅಷ್ಟೇ ಅಂತ ಒಲ್ಲೆ ಅಂದ. ನಾವು ಯಾವುದೇ ಕಾರಣಕ್ಕೂ ಈ ವಿಷಯವನ್ನು ಮೇಷ್ಟ್ರಿಗೆ ಹೇಳುವುದಿಲ್ಲ ಅಂತ ಊರ ಗುಡಿಯ ಕರಿಯಮ್ಮದೇವಿಯ ಮೇಲೆ ಆಣೆ ಮಾಡಿದೆವು. ಅದರ ನಂತರ ಶಿವೂನೇ ಹತ್ತಿ ಹಣ್ಣುಗಳನ್ನು ಕೀಳುತ್ತಿದ್ದ.

ಹೀಗೆ ಇದು ಹತ್ತಿರತ್ತಿರ ಒಂದು ತಿಂಗಳು ನಡೆಯಿತು. ಮರದಲ್ಲಿ ಹಣ್ಣುಗಳ ಕಾಲವೂ ಮುಗಿಯುತ್ತಾ ಬಂದಿತ್ತು. ಈ ನಡುವೆ ಶಿವ ಯಾವ ಕಾರಣಕ್ಕೋ ಕೆಲವು ದಿನ ಸ್ಕೂಲಿಗೆ ಬರಲಿಲ್ಲ. ಆಗ ನಾವಿಬ್ಬರೇ ಹೋಗಿ ಸಿಕ್ಕಿದಷ್ಟನ್ನು ತಂದು ಕೊಡುತ್ತಿದ್ದೆವು. ಅವತ್ತು ಶನಿವಾರ. ಮಾರ್ನಿಂಗ್ ಕ್ಲಾಸು. ಶಿವ ಕ್ಲಾಸಿಗೆ ಬಂದ. ಪುಸ್ತಕಗಳಿಲ್ಲದೆ ಬರೀ ಸ್ಲೇಟನ್ನು ಮಾತ್ರ ತಂದಿದ್ದಕ್ಕೋ ಇಲ್ಲಾ ಒಂದು ವಾರ ಸ್ಕೂಲಿಗೆ ತಪ್ಪಿಸಿಕೊಂಡಿದ್ದಕ್ಕೋ ಶಿವನನ್ನು ನೋಡುತ್ತಲೇ ಮೇಷ್ಟ್ರಿಗೆ ಅಸಾಧ್ಯ ಕೋಪ ಬಂದು ಹತ್ತಿರ ಬರುವಂತೆ ಕೋಲಿನಿಂದ ಸನ್ನೆ ಮಾಡಿದರು. ಮೇಷ್ಟ್ರಿಗೆ ಬಂದಿದ್ದ ಕೋಪಕ್ಕೆ ಶಿವ ಥಂಡೊಡೆದು ಹೋಗಿದ್ದ. ಸಾಲದ್ದಕ್ಕೆ ತಾನು ದಿನವೂ ಚಳ್ಳೆ ಹಣ್ಣನ್ನು ಕಿತ್ತುಕೊಡುತ್ತಿದ್ದ ಸಂಗತಿ ಗೊತ್ತಾಗಿಬಿಟ್ಟಿದೆ ಅದಕ್ಕೇ ಮೇಷ್ಟ್ರು ಈನಾಡಿ ರಾಂಗ್ ಆಗಿದಾರೆ ಅಂದುಕೊಂಡು ಹಿಂದಿರುಗಿ ಬೆಂಚುಗಳ ಮೇಲೆ ಕೂತಿದ್ದ ನಮ್ಮತ್ತ ನೋಡಿದ. ನಾವೂ ಕಕ್ಕಾಬಿಕ್ಕಿಯಾಗಿದ್ದರಿಂದ ನಮ್ಮ ದೈನೇಶಿ ನೋಟದಿಂದ ಎಲ್ಲ ಅರ್ಥವಾದವನಂತೆ, `ಸಾ ನಾನು ಎಷ್ಟು ಬ್ಯಾಡ ಅಂದ್ರು ಅವ್ರು ಮರ ಹತ್ತುಸ್ತಿದ್ರು. ದಿನಾಲೂ ನಾನೇ ಹಣ್ಣು ಕಿತ್ತು ಕೊಡ್ತಿದ್ದೆ…’ ಅನ್ನುತ್ತಾ ಅಳುವಿನ ರಾಗ ನುಡಿಸತೊಡಗಿದ. ಇದರಿಂದ ಆಗಬಹುದಾದ ಅನಾಹುತದ ಸೂಚನೆಯನ್ನು ಅರಿತ ನನ್ನ ಪಕ್ಕದಲ್ಲಿದ್ದ ಶಂಕರ ಅಳುತ್ತಾ ಒಮ್ಮೆಗೇ ಮೇಲೆದ್ದು ಆಚೆ ಓಡಲು ಯತ್ನಿಸಿದ. ಅದು ಗೊತ್ತಿದ್ದವರಂತೆ ಮೇಷ್ಟ್ರು ಅವನನ್ನು ತಡೆದು ಮತ್ತೆ ಕೂರಿಸಿದರು. ಮೇಷ್ಟ್ರು ಕೈಯ್ಯಲ್ಲಿದ್ದ ಕೋಲನ್ನು ಮೇಜಿನ ಮೇಲಿಟ್ಟು ಚಣೊತ್ತು ಮೌನವಾಗಿ ಕೂತುಬಿಟ್ಟರು. ನಂತರ ನಿಂತೇ ಇದ್ದ ಶಿವನನ್ನು ಕೂರಲು ಹೇಳಿ ನಮ್ಮತ್ತ ನೋಡಿ ಮುಗುಳ್ನಕ್ಕರು. ಬಡಪಾಯಿ ಜೀವ ಬದುಕಿತು ಅಂತ ನಾವು ನಿಟ್ಟುಸಿರು ಬಿಟ್ಟೆವು. ಆ ವರ್ಷ ನಾಲ್ಕನೆಯ ಕ್ಲಾಸಿನಿಂದ ಪಾಸಾಗಿ ನಾನು, ತಪಲ ಮತ್ತು ಶಂಕರ ಮಿಡ್ಲ್ ಸ್ಕೂಲ್‌ಗೆ ಹೋದೆವು. ಶಿವನ ಓದು ಅಷ್ಟಕ್ಕೇ ಮುಗಿದಿತ್ತು. ತಪಲ ಮತ್ತು ಶಂಕರ ತುಂಬಾ ಹಿಂದೆಯೇ ಕಾಲವಾಗಿ ಹೋದರು. ಊರಿಗೆ ಹೋದಾಗ ಅಪರೂಪಕ್ಕೆ ಸಿಕ್ಕುವ ಶಿವ ಅದೇ ಆ ಎಳೆತನದ ನಗುವಿನೊಂದಿಗೆ ಮಾತಿಗಿಳಿಯುತ್ತಾನೆ.

ನಮ್ಮ ಚಳ್ಳೆ ಹಣ್ಣಿನ ಪ್ರಸಂಗದ ನಂತರ ಮೇಷ್ಟ್ರು ಮುಂದೆ ಯಾವತ್ತೂ ಯಾರನ್ನೂ ಚಳ್ಳೆ ಹಣ್ಣು ತಂದುಕೊಡು ಅಂತ ಕೇಳಿರಲಿಲ್ಲ. ನಾವು ಮಿಡ್ಲ್ ಸ್ಕೂಲ್‌ಗೆ ಹೋಗುವಾಗ ಒಂದೆರಡು ವರ್ಷ ಹೊಲಮಾಳದ ಕಾಲ್ದಾರಿಯಲ್ಲಿ ದಿನವೂ ಈ ಮೇಷ್ಟ್ರು ಸಿಗುತ್ತಿದ್ದರು. ಆನಂತರ ಅವರು ಬೇರೆ ಯಾವುದೋ ಊರಿಗೆ ವರ್ಗವಾಗಿ ಹೋದರು. ಮತ್ತೆ ಅವರನ್ನು ನೋಡಿದ್ದು ಕಡಿಮೆಯೇ. ನಿವೃತ್ತಿಯಗಿದ್ದಾರೆಂದು ಕೇಳಿದ್ದೆ. ಮೈಸೂರಿನಲ್ಲಿ ಎಂ.ಎ.ಮುಗಿಸಿಕೊಂಡು ಬಂದು ಮತಿಘಟ್ಟದ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದೆ. ಈ ನಡುವೆ ವೈಕಂ ಮಹಮ್ಮದ್ ಬಷೀರರ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದೆ. 1997ರಲ್ಲಿ ಈ ಪುಸ್ತಕಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿತ್ತು. ಅದಾಗಿ ಕೆಲವು ತಿಂಗಳುಗಳು ಕಳೆದಿದ್ದವು. ಒಂದು ದಿನ ನನ್ನ ಕಾಲೇಜಿನ ವಿಳಾಸಕ್ಕೆ ಒಂದು ಪತ್ರ ಬಂತು. ಅದರಲ್ಲಿ ಇದೇ ಮೇಷ್ಟ್ರು ತುಂಬಾ ಪ್ರೀತಿಯಿಂದ ಅಭಿನಂದನೆಯ ಮಾತುಗಳನ್ನು ಬರೆದಿದ್ದರು. ಪತ್ರದ ಕೊನೆಯಲ್ಲಿ ನಾವು ತಂದುಕೊಡುತ್ತಿದ್ದ ಚಳ್ಳೆ ಹಣ್ಣಿನ ಬಗ್ಗೆಯೂ ಪ್ರಸ್ತಾಪಿಸುತ್ತಾ, `ನೀವು ನನಗೆ ಚಳ್ಳೆ ಹಣ್ಣನ್ನು ತಿನ್ನುವುದನ್ನು ಮಾತ್ರ ಬಿಡಿಸಲಿಲ್ಲ. ನಾನು ಮನುಷ್ಯನಾಗಿ ಯೋಚಿಸುವಂತೆ ಮಾಡಿದ್ರಿ. ಅದಕ್ಕಾಗಿ ವಂದನೆಗಳು’ಅಂತ ಭಾವನಾತ್ಮಕವಾಗಿ ಬರೆದಿದ್ದರು. ಅದನ್ನು ಓದಿದ ಆ ಚಣ ಹೋಗಿ ಮಾತನಾಡಿಸಬೇಕು ಅನಿಸಿತ್ತು. ಆದರೆ ಅವರು ಬದುಕಿರುವವರೆಗೂ ಹೋಗಲೇ ಇಲ್ಲ.

ಕೆಲವು ಅರ್ಥಗಳು:
ವಂದಕ್ಕೆ: ಉಚ್ಚೆ.
ಕೊಮ್ಮೆ: ಸಾಧಾರಣ ಎತ್ತರದ ಮಣ್ಣಿನ ಮಡಕೆ.
ತುಂಬಿ: ನಂದಿಸಿ.
ಬಸ್ ಬಿಟ್ಕಂಡು: ಬುರ್ರ್ ಅಂತ ಬಸ್ಸಿನ ಥರ ಸದ್ದು ಮಾಡಿಕೊಂಡು.
ಗೋಜಿಗೆ: ಸಹವಾಸಕ್ಕೆ.
ಕಣ್ಣಿ ಎಸೆ: ಕೈ ಕೊಡು.
ಎಪ್ಪೆಸ್ ಹೊಡೆ: ತಪ್ಪಿಸಿಕೊ.
ಮಟ್ಟುಗಳು: ಹಾಡುಗಳು.
ತಮ್ಟ: ತಂಬಿಟ್ಟು.
ಅಡ್ಡಂಬಡ್ಡ: ಅಡ್ಡಾದಿಡ್ಡಿ.
ಬಾರೆ: ದನಕುರಿಗಳು ಮೇಯುವ ಕುರುಚಲು ಗಿಡಗಳಿರುವ ಜಾಗ.
ಸಿಲುಪೆ: ತೆಳುವಾದ ಕಡ್ಡಿ.
(ಮೊದಲ ಕಂತು:  ಜಲ್ಲೆ ಗಾಡಿ ಮತ್ತು ಲಿಂಗಮುದ್ರೆ ಕಲ್ಲು)

About The Author

ಎಸ್. ಗಂಗಾಧರಯ್ಯ

ಎಸ್. ಗಂಗಾಧರಯ್ಯ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕುವಳ್ಳಿಯವರು. ಪ್ರಸ್ತುತ ವಾಸ ತಿಪಟೂರಿನಲ್ಲಿ. ಕಥಾ ಸಂಕಲನ: ನವಿಲ ನೆಲ, ಒಂದು ಉದ್ದನೆಯ ನೆರಳು, ದೇವರ ಕುದುರೆ, ಮಣ್ಣಿನ ಮುಚ್ಚಳ, ಎರೆ ನೆತ್ತಿ -ಈ ತನಕದ ಕಥೆಗಳು, ಕಾದಂಬರಿ: ಗಂಗಪಾಣಿ, ವ್ಯಕ್ತಿಚಿತ್ರ ಸಂಪುಟ: ಬಯಲ ಪರಿಮಳ, ಅನುವಾದ: `ವೈಕಂ ಕಥೆಗಳು’, ಲೋರ್ಕಾ ನಾಟಕ-`ಎರ್ಮಾ’, ಲೋರ್ಕಾಕಾವ್ಯ-`ಚರಮಗೀತೆ’, `ಹಲವು ರೆಕ್ಕೆಯ ಹಕ್ಕಿʼ-ವಿವಿಧ ಲೇಖಕರ ಕಥೆಗಳು, ಟರ್ಜೆನೇವ್‌ರ `ಬೇಟೆಗಾರನ ಚಿತ್ರಗಳು’, ದಾರಿಯೋ ಫೋ ನಾಟಕ-`ಗುಲಾಬಿ ಗರ್ಭ’, ಮಾರ್ಕ್ವೆಜ್ ಸಂದರ್ಶನ-`ಫ್ರೇಗ್ರನ್ಸ್ ಆಫ್ ಗ್ವಾವ’, ಚಿಂಗೀಝ್ ಐತ್ಮತೋವ್‌ನ ಕಾದಂಬರಿ- `ಜಮೀಲಾ’, ಬುನಿನ್ ಕಥೆಗಳು, ಅರ್ನೆಸ್ಟ್ ಹೆಮಿಂಗ್ವೆ -ಇಂಡಿಯನ್‌ಕ್ಯಾಂಪ್ ಮತ್ತು ಇತರ ಕಥೆಗಳು, ಮಾರ್ಕ್ವೆಜ್ ಕಥೆಗಳು, ದಾರಿಯೋ ಫೋ ವಾಚಿಕೆ, ಲೋರ್ಕಾ ನಾಲ್ಕು ನಾಟಕಗಳು, ಇವರ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಅನುವಾದ - 1996), ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಕಥೆ - 2018), ಡಾ. ಬೆಸಗರಹಳ್ಳಿ ರಾಮಣ್ಣಕಥಾ ಪ್ರಶಸ್ತಿ(2018), ಶಿವಮೊಗ್ಗ ಕರ್ನಾಟಕ ಸಂಘದ ಡಾ.ಯು.ಆರ್.ಅನಂತಮೂರ್ತಿ ಪ್ರಶಸ್ತಿ.(2018), ತುಮಕೂರಿನ ವೀ.ಚಿ.ಪ್ರತಿಷ್ಠಾನದ ವೀ.ಚಿ.ಪ್ರಶಸ್ತಿ (2018), ಸೇಡಂನ ಅಮ್ಮ ಪ್ರಶಸ್ತಿ(2022), ಶಾ. ಬಾಲೂರಾವ್ ಅನುವಾದ ಪ್ರಶಸ್ತಿ(2023) ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ