Advertisement
ಹಾಡೊಂದು ವಾಪಸ್ಸು ಕೈ ಬೀಸಿ ಕರೆದಿತ್ತು…: ವಿನಾಯಕ ಅರಳಸುರಳಿ ಕೃತಿಯ ಆಯ್ದ ಭಾಗ

ಹಾಡೊಂದು ವಾಪಸ್ಸು ಕೈ ಬೀಸಿ ಕರೆದಿತ್ತು…: ವಿನಾಯಕ ಅರಳಸುರಳಿ ಕೃತಿಯ ಆಯ್ದ ಭಾಗ

ಡಾ. ಪುರುಷೋತ್ತಮ್ ಹೇಳಿದ ಮಾತನ್ನು ಗಂಭೀರವಾಗಿ ತೆಗೆದುಕೊಂಡೆ. ಮೊಬೈಲನ್ನು ಆನ್ ಮಾಡಿ ಅಪ್ಪನ ಇಷ್ಟದ ಹಾಡುಗಳನ್ನು ಹಾಕಿ ಇಯರ್ ಫೋನನ್ನು ಅಪ್ಪನ ಕಿವಿಗೆ ತೊಡಿಸಿದೆ. ಒಂದಿಡೀ ಬದುಕಿನುದ್ದಕ್ಕೂ ಅವನ ಬೆಳಗು, ಮಧ್ಯಾಹ್ನ, ಸಂಜೆಗಳನ್ನು ಸಲಹಿದ, ‘ಇದೀಗ ಚಿತ್ರಗೀತೆಗಳು’ ಎಂಬ ಘೋಷಣೆಯ ಮೂಲಕ ಅವನ ಹೃದಯದಲ್ಲಿ ದೀಪ ಹಚ್ಚಿದ, ಅವನ ಬಾಲ್ಯ, ಪ್ರೀತಿ, ನೆನಪುಗಳ ಸರ್ವಸ್ವವೂ ಆದ ಹಾಡುಗಳನ್ನು ಒಂದೊಂದಾಗಿ ನೇರ ಅವನ ಹೃದಯಕ್ಕೇ ಕೇಳುವಂತೆ ಹಾಕಿದೆ…
ವಿನಾಯಕ ಅರಳಸುರಳಿ ಬರೆದ “ಇಲ್ಲೇ ಎಲ್ಲೋ ಅಪ್ಪ ಕರೆದಂತಿದೆ” ಹೊಸ ಕೃತಿಯ ಆಯ್ದ ಭಾಗ ನಿಮ್ಮ ಓದಿಗೆ

“ಇದೇನಿದು? ಒಬ್ಬ ಮನುಷ್ಯನಿಗೆ ಇಷ್ಟೊಂದು ಸೀಜ಼ರ್ ಮಾತ್ರೆಗಳನ್ನ ಕೊಟ್ಟು ಎಚ್ಚರಾಗು ಎಚ್ಚರಾಗು ಅಂದ್ರೆ ಹೇಗೆ? ಪ್ರತೀ ವ್ಯಕ್ತಿಗೂ ಅವನ ದೇಹದ ತೂಕದ ಆಧಾರದ ಮೇಲೆ ಲೆಕ್ಕ ಹಾಕಿ ಫಿಟ್ಸ್ ಮಾತ್ರೆಗಳನ್ನ ಕೊಡಬೇಕು. ನಿಮ್ಮ ಅಪ್ಪ ಸೋತು ಐವತ್ತೂ ಚಿಲ್ಲರೆ ಕೇಜಿ ಆಗಿದ್ದಾರೆ. ಅಂಥವರಿಗೆ ಹೊತ್ತಿಗೆ ಏಳು ಫಿಟ್ಸಿನ ಮಾತ್ರೆ! ಸೀಜ಼ರ್ ಬಂತು ಅಂತ ಡೋಸ಼್ ಹೆಚ್ಚು ಮಾಡ್ತಾ ಹೋಗೋದಾ? ವಾಟೀಸ್ ದಿಸ್ ನಾನ್ಸೆನ್ಸ್?”

ಒಂದು ತಿಂಗಳಿನಿಂದ ಅಲ್ಲಾಡದ ಸ್ಥಿತಿಯಲ್ಲಿ ಕಣ್ತೆರೆದು ಮಲಗಿದ್ದ ಅಪ್ಪನನ್ನು ಪರೀಕ್ಷಿಸಿದವರೇ ಹಿಂದಿಯಲ್ಲಿ ಹೆಚ್ಚೂ ಕಡಿಮೆ ಬೈಯುವ ಧಾಟಿಯಲ್ಲಿ ಹೇಳಿದ ನ್ಯೂರಾಲಜಿಸ್ಟ್ ಮನೋಹರರ ಮಾತಿಗೆ ನಾನು ಏನು ಹೇಳಬೇಕೋ ತಿಳಿಯದೇ ಕಣ್ಣು ಕಣ್ಣು ಬಿಟ್ಟೆ. ಇದನ್ನೆಲ್ಲ ನನಗೆ ಯಾರು ಹೇಳಬೇಕು? ನಲವತ್ತು ವರ್ಷಗಳ ಅಗಾಧ ಅನುಭವವಿರುವ ಆಸ್ಪತ್ರೆಯ ಹಿರಿಯ ವೈದ್ಯರೇ ಅಲ್ಲವಾ ಇಷ್ಟು ಡೋಸ಼್ ಏರಿಸಿದ್ದು? ವೈದ್ಯೋ ನಾರಾಯಣೋ ಹರಿಃ ಎನ್ನುತ್ತಾರೆ. ಅದರ ಮೂಲ ಅರ್ಥ ಏನಿದೆಯೋ ಏನೋ, ಆದರೆ ಡಾಕ್ಟರ್ ಎನ್ನುವವರು ಮನುಷ್ಯನೊಬ್ಬನ ಜೀವದ ಕೊನೆಯ ನಿರೀಕ್ಷೆಯಾಗಿರುತ್ತಾರೆ. ಅಂಥಾ ಡಾಕ್ಟರೇ ಹಿಂದು ಮುಂದು ನೋಡದೆ ಹೀಗೆ ಮಾಡಿದರೆ ಯಾರ ಬಳಿ ಹೇಳುವುದು?

(ವಿನಾಯಕ ಅರಳಸುರಳಿ)

“ನೋಡಿ, ನಾನು ಈಗಲೇ ಈ ಅತಿಯಾದ ಮಾತ್ರೆಗಳನ್ನೆಲ್ಲ ಒಂದೊಂದಾಗಿ ನಿಲ್ಲಿಸುತ್ತೇನೆ. ಅದರಿಂದ ಮತ್ತೆ ಫಿಟ್ಸು ಬಂದರೂ ಬರಬಹುದು. ಆದರೆ ಇದು ಅನಿವಾರ್ಯ. ಇದಕ್ಕೆ ನಿಮ್ಮ ಸಮ್ಮತಿ ಇದೆ ತಾನೇ?”

ಫಿಟ್ಸ್ ಎಂದಿದ್ದೇ ನನ್ನ ಕೈ ಕಾಲು ನಡುಗಿತು‌. ಆದರೆ ನನಗೆ ಬೇರೆ ದಾರಿಯಾದರೂ ಏನಿದೆ? ಹಣಗೆರೆಕಟ್ಟೆಯ ಪಂಡಿತರು, ಉದ್ಯಾವರದ ವೈದ್ಯರು, ಕಿರಣ್ ಆಸ್ಪತ್ರೆಯ ಡಾಕ್ಟರು, ನನ್ನ ಅಂತರಾತ್ಮ ಹಾಗೂ ಕೊನೆಗೆ ಅಪ್ಪನ ಮಂಪರುಗಟ್ಟಿದ ಮುಖ… ಇವೆಲ್ಲವೂ ಹೇಳಿದ್ದು ಇದನ್ನೇ ಅಲ್ಲವೇ? ಕಾಮನ್ ಸೆನ್ಸ್ ಇರುವ ಡಾಕ್ಟರೊಬ್ಬರು ಕೊನೆಗಾದರೂ ಸಿಕ್ಕರಲ್ಲ? ಅಪಾಯವನ್ನು ಎದುರಿಸದೆ ಬೇರೆ ದಾರಿಯಿಲ್ಲ. ಬೆಂಕಿಗಿಳಿಯದ ಹೊರತು ಬದುಕಿಲ್ಲ..

ಸರಿ ಸರ್ ಎಂದೆ.

ಅಗ್ನಿ ಪರೀಕ್ಷೆ ಆರಂಭವಾಯಿತು.

*****

“ಜ್ವರ ಬರದೇ ಎರಡು ದಿನವಾಗಿದೆ. ಫಿಟ್ಸ್ ಡೋಸ಼್ ಸಹಾ ಕಡಿಮೆ ಮಾಡಿದ್ದೇವೆ. ಆದ್ರೂ ಯಾಕೆ ಅಪ್ಪನಿಗೆ ಎಚ್ಚರಿಕೆ ಆಗ್ತಿಲ್ಲ? ನಿಮ್ಮ ಅಪ್ಪನಿಗೆ ಯಾವುದಂದ್ರೆ ತುಂಬಾ ಇಷ್ಟ?”

“ಚಿತ್ರಗೀತೆಗಳು ಸರ್… ಹಳೆಯ ಹಾಡುಗಳು ಅಂದ್ರೆ ಅಪ್ಪನಿಗೆ ಪ್ರಾಣ”

“ಹಾಗಾದರೆ ಒಂದು ಕೆಲಸ ಮಾಡಿ. ಅವರಿಷ್ಟಟದ ಹಾಡುಗಳನ್ನು ಮೊಬೈಲಿನಲ್ಲಿ ಹಾಕಿ ಅವರಿಗೆ ಕೇಳಿಸಿ. ಅವರ ಜೊತೆ ಹೆಚ್ಚೆಚ್ಚು ಮಾತಾಡಿ. ಆದಷ್ಟೂ ಲವಲವಿಕೆಯಿಂದ ನಡೆದುಕೊಳ್ಳಿ. ನೋಡೋಣ..”

ಅಷ್ಟಂದ ಪುರುಷೋತ್ತಮ ಡಾಕ್ಟರು ಹೊರಗೆ ಹೊರಟರು. ಅಷ್ಟಕ್ಕೂ ನಾನೇನೂ ಅಪ್ಪನೊಂದಿಗೆ ಮಾತನಾಡುವುದನ್ನು ಬಿಟ್ಟಿರಲಿಲ್ಲ. ಪ್ರತಿ ಗಂಟೆ, ಪ್ರತಿ ನಿಮಿಷ ಅವನ ಅರೆಪ್ರಜ್ಞೆಯನ್ನು ಭೇದಿಸಲು ನೋಡುತ್ತಲೇ ಇದ್ದೆ. ಅಪ್ಪಾ.‌ ಹಸಿವಾಗ್ತಿದೆಯ? ಇಲ್ಲಿ ಹತ್ತಿರದಲ್ಲೇ ಪೀಲೆ ಇದೆ ತರ್ಲಾ? ಅಯ್ಯೋ ಅಪ್ಪಾ.. ನಿನ್ನೆ ರಾತ್ರೆ ಆಗುಂಬೆ ಘಾಟಿಯಿಂದ ಒಂದು ಹುಲಿ ಬಂದಿತ್ತಂತೆ ಗೊತ್ತಾ? ತೋಟಕ್ಕೆ ಹುಲ್ಲು ಕೊಯ್ಯೋಕೆ ಹೋದವರನ್ನ ಬೆರ್ಸ್ಕೊಂಡು ಹೋಯ್ತಂತೆ. ಬೆಂಗೇರಿ ಗುಡ್ಡದಲ್ಲಿ ಒಂದು ಕಾಡುಕೋಣಕ್ಕೂ ಹುಲಿಗೂ ಫುಲ್ ಫೈಟಿಂಗಾಗಿ ಕಾಡುಕೋಣ ಸತ್ತೇ ಹೋಯ್ತಂತೆ. ನಿಮಗೆ ಯಾರೂ ಹೇಳಿಲ್ವಾ ಅಪ್ಪಾ?”

ಸಣ್ಣ ಪ್ರತಿಕ್ರಿಯೆಯೂ ಇಲ್ಲದ, ದೇಹದ ಇಂಚಿಂಚಿನಲ್ಲೂ ಯಾತನೆಯನ್ನೇ ತುಂಬಿಕೊಂಡ, ಜೀವದ ಜೀವವೇ ಆದ, ಎಂದೂ ಕಳೆದುಕೊಳ್ಳಲಿಚ್ಚಿಸಿದ ಅತ್ಯಾಪ್ತ ಜೀವದೆದುರು ನಿರಂತರವಾಗಿ ಅವರ ಬದುಕಿನ ಖುಷಿಯ ಸಂಗತಿಗಳನ್ನು ಹರಡಿಕೊಂಡು ಕೂರುವುದಿದೆಯಲ್ಲ? ಅದು ಎಂಥಾ ಸಂಕಟದ ಸಂಗತಿಯೆನ್ನುವುದು ಅನುಭವಿಸಿದವರಿಗಷ್ಟೇ ಗೊತ್ತು. ಈಗ ಮಾತನಾಡುತ್ತಾನೆ, ಇನ್ನೊಂದು ಕ್ಷಣಕ್ಕೆ ಮಾತನಾಡುತ್ತಾನೆ, ಸಣ್ಣ ಮುಗುಳ್ನಗೆಯನ್ನಾದರೂ ಕೊಡುತ್ತಾನೆ, ಒಂದೇ ಒಂದು ಸಲ ನನ್ನ ಕೈ ಹಿಡಿದು ಅಣ್ಣಾ ಎನ್ನುತ್ತಾನೆ… ಹಾಗಂತ ಕಾದ ಕ್ಷಣಗಳು ಅದೆಷ್ಟೋ? ಕಳೆದ ಆರು ತಿಂಗಳ ಒಂದೊಂದು ಕ್ಷಣದಲ್ಲೂ ಇದೊಂದೇ ಪ್ರಾರ್ಥನೆ.. ಇದೊಂದೇ ನಿರೀಕ್ಷೆ..

ಡಾ. ಪುರುಷೋತ್ತಮ್ ಹೇಳಿದ ಮಾತನ್ನು ಗಂಭೀರವಾಗಿ ತೆಗೆದುಕೊಂಡೆ. ಮೊಬೈಲನ್ನು ಆನ್ ಮಾಡಿ ಅಪ್ಪನ ಇಷ್ಟದ ಹಾಡುಗಳನ್ನು ಹಾಕಿ ಇಯರ್ ಫೋನನ್ನು ಅಪ್ಪನ ಕಿವಿಗೆ ತೊಡಿಸಿದೆ. ಒಂದಿಡೀ ಬದುಕಿನುದ್ದಕ್ಕೂ ಅವನ ಬೆಳಗು, ಮಧ್ಯಾಹ್ನ, ಸಂಜೆಗಳನ್ನು ಸಲಹಿದ, ‘ಇದೀಗ ಚಿತ್ರಗೀತೆಗಳು’ ಎಂಬ ಘೋಷಣೆಯ ಮೂಲಕ ಅವನ ಹೃದಯದಲ್ಲಿ ದೀಪ ಹಚ್ಚಿದ, ಅವನ ಬಾಲ್ಯ, ಪ್ರೀತಿ, ನೆನಪುಗಳ ಸರ್ವಸ್ವವೂ ಆದ ಹಾಡುಗಳನ್ನು ಒಂದೊಂದಾಗಿ ನೇರ ಅವನ ಹೃದಯಕ್ಕೇ ಕೇಳುವಂತೆ ಹಾಕಿದೆ..

ತಾರೆಗಳ ತೋಟದಿಂದ ಚಂದಿರ ಬಂದ
ನೈದಿಲೆಯ ಅಂದ ನೋಡಿ ಆಡಲು ಬಂದ

ನೆನಪಿದೆಯಾ ಅಪ್ಪಾ? ಆ ಬಂಗಾರದ ಸಂಜೆಯಲ್ಲಿ ಸ್ಪೀಕರಿನಲ್ಲಿ ಕೇಳಿದ ನೀನು ಮೇಲೆ ಆಕಾಶಕ್ಕೆ ಕೈ ತೋರಿಸಿ ನಕ್ಷತ್ರ ಎಂದು ಸನ್ನೆ ಮಾಡಿದ್ದ ಹಾಡು.. ಮಾತೇ ಆಡಲಾಗದ ಹೊತ್ತಲ್ಲೂ ಊ್ಞಂ.. ಆ… ಎಂದು ಹಾಡಲು ಪ್ರಯತ್ನಿಸಿದ್ದ ಹಾಡು.. ನೆನಪಾಯಿತಾ ಅಪ್ಪ?  ಒಂದು ಸಲ, ಇನ್ನೊಂದೇ ಒಂದು ಸಲ ಆ ಸಂಜೆಗೆ, ಆ ಸುಂದರ ಕ್ಷಣಕ್ಕೆ ಹೋಗೋಣ. ಏಳು ಅಪ್ಪ.. ಕಣ್ಬಿಡು ಅಪ್ಪ.‌.

ಕಿವಿಯಲ್ಲಿ ಹಿತವಾಗಿ ಹಾಕಿದ ಹಾಡಿನ ಬಗ್ಗೆ ಒಂದೊಂದೇ ಪ್ರಶ್ನೆ ಕೇಳುತ್ತ ಅಪ್ಪನ ಪಕ್ಕ ನಿಂತಿದ್ದೆ. ಆಗಲೇ ಆಕೆ ಕುಂಟುತ್ತಾ ಒಳಗೆ ಬಂದರು. ಐವತ್ತು ದಾಟಿದ ನರ್ಸ್. ಬಹಳ ವರ್ಷಗಳಿಂದ ಅಲ್ಲೇ ಕೆಲಸ ಮಾಡುತ್ತಿದ್ದ, ಎಲ್ಲರೊಟ್ಟಿಗೂ ನಗುನಗುತ್ತಾ ಮಾತನಾಡುತ್ತಿದ್ದ, ಹೆಡ್ ಸಿಸ್ಟರ್ ಬೈದರೂ ಮುಗುಳ್ನಗೆಯಲ್ಲೇ ಉತ್ತರಿಸುತ್ತಿದ್ದ, ಮಾನವೀಯತೆಯ ಗಾಢ ಲೇಪವಿದ್ದ ಹಿರಿಯ ನರ್ಸ್. ಅಪ್ಪನನ್ನೂ ಸಹಾ ಸದಾ ಮಾತನಾಡಿಸಲು ನೋಡುತ್ತಲೇ ಇದ್ದರು. ಈಗ ಕಿವಿಗೆ ಇಯರ್ ಫೋನು ತೊಟ್ಟು ಶೂನ್ಯವನ್ನೇ ವೀಕ್ಷಿಸುತ್ತಿದ್ದ ಅವನನ್ನು ನೋಡಿದವರೇ “ಅರೆರೇ, ಎಂತದಿದು. ಹಾಡು ಕೇಳೋದಾ? ಯಾವ ಹಾಡು ಮರ್ರೆ. ನಂಗೂ ಸ್ವಲ್ಪ ಹೇಳಿ” ಎಂದು ಅಪ್ಪನ ಪಕ್ಕ ಬಂದು ನಿಂತರು‌.

“ಅವರಿಗೆ ಹಾಡುಗಳು ಅಂದ್ರೆ ತುಂಬಾ ಇಷ್ಟ.‌ ಅದರಲ್ಲೂ ಹಳೆಯ ಹಾಡುಗಳು..”

ನಾನು ಹೇಳಿದೆ.

“ಹಳೆಯ ಹಾಡು ನಿನಗೆ ಮಾರಾಯ‌. ಅವರಿಗೆ ಅದು ಪ್ರಾಯದಲ್ಲಿದ್ದಾಗ ಕೇಳಿದ ಹಾಡು! ಇರು… ಅವರು ನಿಮ್ಮ ಅಮ್ಮನ ಜೊತೆ ಟಾಕೀಸಲ್ಲಿ ನೋಡಿರಬಹುದಾದ ಹಾಡನ್ನ ನಾನು ಹಾಡ್ತೇನೆ. ಹೇಗೆ ಮಾತಾಡ್ತರೆ ಅಂತ ನೋಡ್ತಿರು” ಎಂದವರೇ  ಅಪ್ಪನ ಪಕ್ಕ ನಿಂತು ಅವನಿಗೆ ಸ್ಪಷ್ಟವಾಗಿ ಕೇಳುವಂತೆ ಹಾಡತೊಡಗಿದರು.

ಅಮರ ಮಧುರ ಪ್ರೇಮ
ನೀ ಬಾ ಬೇಗ ಚಂದಮಾಮ..

ಸದಾನುರಾಗದಿ ತಾ ನಿನಗಾಗಿ
ಕಾದಿದೆ ಈ ಸುಮರಾಗೀ
ಸುಮ ಯೌವನವು ಬಾಡುವ ಮೊದಲೇ
ಬಾವಗದೇನೋ ನೀ ಬಳಿ ಸಾರೇ
ಬಾ ಬೇಗ ಚಂದಮಾಮ..
ಬಾ ಬೇಗ ಚಂದಮಾಮ..

ಫ್ಲೋರಿನ ನರ್ಸ್ ಹುಡುಗಿಯರೆಲ್ಲ ಅಪ್ಪನ ಸುತ್ತ ಬಂದು ನೆರೆದಿದ್ದರು. ಮಮತೆಯೊಂದು ಮನುಷ್ಯಳಾಗಿ ಹಾಡಿದಂತೆ ಆಕೆ ಹಾಡಿಯೇ ಹಾಡಿದರು.

ಬಾ ಬೇಗ ಚಂದಮಾಮ..
ನೀ ಬಾ ಬೇಗ ಚಂದಮಾಮ..

ಹಾಡು ಮುಗಿಯಿತು. ಎಲ್ಲರೂ ಉಸಿರು ಬಿಗಿ ಹಿಡಿದಂತೆ ಅಪ್ಪನನ್ನೇ ನೋಡಿದೆವು. ಒಂದು ಸಣ್ಣ ಕದಲಿಕೆಗಾಗಿ.. ಒಂದೇ ಒಂದು ಮುಗುಳುನಗೆಗಾಗಿ..

“ಎಂತದಿದು ಬಾಲಕೃಷ್ಣ ಅವರೇ? ನಾನು ನಿಮಗೋಸ್ಕರ ಹಾಡಿದ್ದು. ನೀವೇ ಹೀಗೆ ಸುಮ್ಮನೆ ಮಲಗಿದರೆ ಹೇಗೆ? ಇದೇ ಹಾಡನ್ನ ಸ್ಪರ್ಧೆಯಲ್ಲಿ ಹಾಡಿದ್ದರೆ ನನಗೆ ಪ್ರೈಸ಼್ ಕೊಡ್ತಿದ್ರು ಗೊತ್ತುಂಟಾ. ಹೇಳಿ ಬಾಲಕೃಷ್ಣ ಅವರೇ.. ನಿಮಗೆ ಹಾಡು ಇಷ್ಟ ಆಗಿಲ್ವಾ?”

ಅಪ್ಪನ ಕೈ ಅದುರಿತು. ಕಣ್ಣು ಕದಲಿತು. ನಿಶ್ವಲವಾಗಿ ಮಲಗಿದ್ದ ಮುಖವನ್ನು ನಿಧಾನವಾಗಿ ಕದಲಿಸಿದ ಅಪ್ಪ ‘ಆಯ್ತು’ ಎಂಬಂತೆ ಸನ್ನೆ ಮಾಡಿದ!

ಕಳೆದ ಹದಿನೈದು ದಿನಗಳಲ್ಲಿ ಇದೇ ಮೊದಲ ಬಾರಿಗೆ ಅಪ್ಪ ನಮ್ಮ ಒಂದು ಮಾತಿಗೆ ಪ್ರತಿಕ್ರಿಯಿಸಿದ್ದ. ನೆರೆದ ನರ್ಸುಗಳೆಲ್ಲ ಹೋ ಎಂದು ಜೋರಾಗಿ ಚಪ್ಪಾಳೆ ತಟ್ಟಿ ನಕ್ಕರು.‌ ಕಡಿಮೆ ಮಾಡಿದ ಫಿಟ್ಸು ಡೋಸ಼ಿಗೋ, ಕಫಕ್ಕೆ ಕೊಟ್ಟ ಮಾತ್ರೆಗೋ, ಜ್ವರ ಇಳಿದ ನೆಮ್ಮದಿಗೋ, ನನ್ನ ಎವೆಯಿಕ್ಕದ ಪ್ರಾರ್ಥನೆಗೋ, ಇಲ್ಲಾ ಈ ತಾಯಿ ಹಾಡಿದ ಹಾಡಿಗೋ.. ಯಾವುದೋ ಒಂದಕ್ಕೆ ಸೋತ ಅಪ್ಪ ಸಣ್ಣದಾಗಿ ತುಟಿ ಕೊಂಕಿಸಿ ನಕ್ಕುಬಿಟ್ಟ.

ಚಂದಮಾಮ ಆಗಷ್ಟೇ ಬಂದಿದ್ದ.

(ಕೃತಿ: ಇಲ್ಲೇ ಎಲ್ಲೋ ಅಪ್ಪ ಕರೆದಂತಿದೆ, ಲೇಖಕರು: ವಿನಾಯಕ ಅರಳಸುರಳಿ, ಪ್ರಕಾಶಕರು: ಸಸಿ ಪ್ರಕಾಶನ, ಪುಟಗಳು: 345, ಬೆಲೆ: ರೂ. 350/-, ಪ್ರತಿಗಳಿಗೆ – 9513018456)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ