ಬ್ರಿಟಿಷರಿಗೆ ಆ `ವ್ಯಾಘ್ರಸ್ವಪ್ನ’ ಎಷ್ಟು ನಿದ್ರೆ ಕೆಡಿಸಿತ್ತೆಂದರೆ ಅವರು ಆ ಸಿಟ್ಟನ್ನು ಕಾಡಿನಲ್ಲಿನ ನಿಜವಾದ ಹುಲಿಗಳನ್ನು ಕೊಂದು ಅವುಗಳ ಮೇಲೆ ಕಾಲನ್ನಿಟ್ಟು ಫೋಟೊ ತೆಗೆಸಿಕೊಂಡು ಗರ್ವದಿಂದ ಬೀಗುತ್ತಿದ್ದರು. ಟಿಪ್ಪು ಹುಲಿಯೊಂದಿಗೆ ಸೆಣಸುತ್ತಿರುವ ಹಲವಾರು ಚಿತ್ರಗಳು ಟಿಪ್ಪೂನ ಕಾಲದ ನಂತರ ರಚಿತವಾಗಿವೆ. ಟಿಪ್ಪೂ ನಿಜವಾಗಿ ಹುಲಿಯೊಂದಿಗೆ ಸೆಣಸಿದ ದಾಖಲೆಗಳಿಲ್ಲವೆನ್ನುತ್ತಾರೆ ಚರಿತ್ರಕಾರರು. ಆದರೆ, ಟಿಪ್ಪೂನ ಕಾಲದ್ದೇ ಆದ ದಂತ ಕತೆಯೊಂದರಲ್ಲಿ ಹೈದರಾಲಿ ಟಿಪ್ಪೂನನ್ನು ಹೈದರಾಬಾದ್‌ಗೆ ಒಪ್ಪಂದವೊಂದರೆ ವಿಚಾರಕ್ಕೆ ಕಳುಹಿಸಿದ್ದಾಗ ಅಲ್ಲಿನ ಕಾಡೊಂದರಲ್ಲಿ ಹುಲಿಯೊಂದನ್ನು ಎದುರಿಸಿದ್ದನಂತೆ.
ಡಾ. ಜೆ. ಬಾಲಕೃಷ್ಣ ಅವರ ಹೊಸ ಕೃತಿ “ನಡೆದಷ್ಟು ದೂರ” ಪ್ರವಾಸ ಕಥನದ ಬರಹ ನಿಮ್ಮ ಓದಿಗೆ

ಲಂಡನ್ನಿಗೆ ಇದು ನಮ್ಮ ಎರಡನೆಯ ಭೇಟಿಯಾಗಿದ್ದರೂ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂಗೆ ಮೊದಲನೆಯ ಭೇಟಿಯಾಗಿತ್ತು. ಈ ಬಾರಿ ನನಗೆ ಮತ್ತು ನನ್ನ ಪತ್ನಿಗೆ ಲಂಡನ್ ಮಾರ್ಗದರ್ಶಿ ನಮ್ಮ ಮಗಳೇ ಆಗಿದ್ದಳು. ಆಕ್ಸಫರ್ಡ್‌ನಲ್ಲಿ ನನ್ನ ಮಗಳು ಅನನ್ಯಳ ಪಿಎಚ್.ಡಿ. ಮುಗಿಯುವ ಹಂತದಲ್ಲಿದ್ದುದರಿಂದ ಅವಳು ಆಕ್ಸಫರ್ಡ್ ಬಿಡುವ ಮುನ್ನ ಆ ಶಿಕ್ಷಣ ನಗರಿಯನ್ನೊಮ್ಮೆ ನೋಡಲು ಅವಳ ಆಹ್ವಾನದ ಮೇರೆಗೆ ನಾವು ಹೋಗಿದ್ದೆವು. ನಾಲ್ಕು ದಿನ ಆಕ್ಸಫರ್ಡ್, ನಂತರ ಒಂದು ದಿನ ಕೇಂಬ್ರಿಡ್ಜ್ ನೋಡಿ ಲಂಡನ್‌ಗಾಗಿ ನಾಲ್ಕು ದಿನಗಳು ಮೀಸಲಿಟ್ಟಿದ್ದೆವು.

(ಡಾ. ಜೆ. ಬಾಲಕೃಷ್ಣ)

ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂ ಪ್ರವೇಶಿಸುತ್ತಿದ್ದಂತೆಯೇ ನನ್ನ ಮಗಳು ನಿಮಗೇನೋ ತೋರಿಸುತ್ತೇನೆ ಬನ್ನಿ ಎಂದು ಕರೆದೊಯ್ದಳು. ಎದುರಿಗೆ ಗಾಜಿನ ಪೆಟ್ಟಿಗೆಯಲ್ಲಿ ಟಿಪ್ಪೂ ಸುಲ್ತಾನನ ಪ್ರಖ್ಯಾತ ಯೂರೋಪಿಯನ್ನನ ಮೇಲೆ ದಾಳಿ ಮಾಡಿರುವ ಹುಲಿಯ `ಯಂತ್ರ’ ಗೊಂಬೆಯಿತ್ತು. ಅದರ ಮಿನಿಯೇಚರ್ ಕೃತಿ ಬೆಂಗಳೂರಿನ ಟಿಪ್ಪೂನ ಬೇಸಿಗೆ ಅರಮನೆಯಲ್ಲಿ ನೋಡಿದ್ದೆ. ಅಲ್ಲಿಯೇ ಟಿಪ್ಪೂ ಧರಿಸಿದ್ದ ವಸ್ತç, ಗಡಿಯಾರ, ಅವನ ಸಿಂಹಾಸನದಲ್ಲಿದ್ದ ಹುಲಿಯ ತಲೆಗಳು ಮುಂತಾದವಿದ್ದವು. ಬ್ರಿಟಿಷರಿಗೆ `ವ್ಯಾಘ್ರಸ್ವಪ್ನ’ವಾಗಿದ್ದ ಟಿಪ್ಪೂನನ್ನು ಜೀವಂತ ಕಂಡಷ್ಟು ಸಂತೋಷವಾಯಿತು ನನಗೆ. `ನಿಮ್ಮ ಲೇಖನಕ್ಕೆ ಬೇಕಾಗುತ್ತದೆ’ ಎಂದು ನನ್ನನ್ನು ಅಲ್ಲಿ ನಿಲ್ಲಿಸಿ ನನ್ನ ಮಗಳು ಫೋಟೊ ತೆಗೆದಳು.

*****

ಟಿಪ್ಪೂ ಸುಲ್ತಾನ್ ಮತ್ತು ಹುಲಿಯನ್ನು ನಾವು ಬೇರೆಬೇರೆಯಾಗಿ ನೋಡುವುದು ಸಾಧ್ಯವಿಲ್ಲ. ಟಿಪ್ಪೂ ಹುಲಿಯ ರೂಪಕವನ್ನು ಅತಿರೇಕಕ್ಕೆ ಕೊಂಡೊಯ್ದಿದ್ದ. ಆತನ ರಾಜಮುದ್ರೆಯಲ್ಲಿ, ನಾಣ್ಯಗಳಲ್ಲಿ, ಗೋಡೆಗಳ ಮೇಲೆ, ಬಾವುಟಗಳಲ್ಲಿ, ಅವನ ಅಡಿಕೆ ಡಬ್ಬಿಯ ಮೇಲೆಯೂ ಹುಲಿಯ ಚಿತ್ರವಿತ್ತು. ಹುಲಿಯ ಪಟ್ಟೆಗಳ ವಿನ್ಯಾಸದ ವಸ್ತ್ರ ಧರಿಸುತ್ತಿದ್ದ, ತನ್ನ ಸೈನಿಕರಿಗೂ ಅಂಥದೇ ವಸ್ತ್ರಗಳನ್ನು ಕೊಟ್ಟಿದ್ದ. ಅವನ ಕೆಲವು ಚಿಕ್ಕ ಫಿರಂಗಿಗಳನ್ನು ಸಹ ದಾಳಿಮಾಡಲು ಸಿದ್ಧವಿರುವ ಹುಲಿಗಳಂತೆ ವಿನ್ಯಾಸಗೊಳಿಸಲಾಗಿತ್ತು. ಅವನ ಸಿಂಹಾಸನಕ್ಕೆ ಹುಲಿಯ ಕಾಲುಗಳು ಹಾಗೂ ಹುಲಿಯ ತಲೆಗಳ ಆಕೃತಿಗಳಿದ್ದವು. ಯೂರೋಪಿಯನ್ನರ ಮೇಲೆ ವಿಶೇಷವಾಗಿ ಬ್ರಿಟಿಷರ ಮೇಲೆ ಹುಲಿಗಳು ಮತ್ತು ಆನೆಗಳು ದಾಳಿ ಮಾಡುತ್ತಿರುವ ಚಿತ್ರಗಳನ್ನು ಶ್ರೀರಂಗಪಟ್ಟಣದ ನಗರದ ಗೋಡೆಗಳ ಮೇಲೆಲ್ಲಾ ಬರೆಸಿದ್ದನಂತೆ. ಟಿಪ್ಪು ಶತ್ರುಗಳಿಗೆ ತನ್ನ ಶಕ್ತಿಯನ್ನು ಪ್ರದರ್ಶಿಸಲು ಒಂದು ಪ್ರಬಲ ಮತ್ತು ಪರಿಣಾಮಕಾರಿ ಸಂಕೇತವನ್ನು ಬಳಸಿಕೊಂಡಿದ್ದ. ಬ್ರಿಟಿಷರಿಗೆ ಆ `ವ್ಯಾಘ್ರಸ್ವಪ್ನ’ ಎಷ್ಟು ನಿದ್ರೆ ಕೆಡಿಸಿತ್ತೆಂದರೆ ಅವರು ಆ ಸಿಟ್ಟನ್ನು ಕಾಡಿನಲ್ಲಿನ ನಿಜವಾದ ಹುಲಿಗಳನ್ನು ಕೊಂದು ಅವುಗಳ ಮೇಲೆ ಕಾಲನ್ನಿಟ್ಟು ಫೋಟೊ ತೆಗೆಸಿಕೊಂಡು ಗರ್ವದಿಂದ ಬೀಗುತ್ತಿದ್ದರು. ಟಿಪ್ಪು ಹುಲಿಯೊಂದಿಗೆ ಸೆಣಸುತ್ತಿರುವ ಹಲವಾರು ಚಿತ್ರಗಳು ಟಿಪ್ಪೂನ ಕಾಲದ ನಂತರ ರಚಿತವಾಗಿವೆ. ಟಿಪ್ಪೂ ನಿಜವಾಗಿ ಹುಲಿಯೊಂದಿಗೆ ಸೆಣಸಿದ ದಾಖಲೆಗಳಿಲ್ಲವೆನ್ನುತ್ತಾರೆ ಚರಿತ್ರಕಾರರು. ಆದರೆ, ಟಿಪ್ಪೂನ ಕಾಲದ್ದೇ ಆದ ದಂತ ಕತೆಯೊಂದರಲ್ಲಿ ಹೈದರಾಲಿ ಟಿಪ್ಪೂನನ್ನು ಹೈದರಾಬಾದ್‌ಗೆ ಒಪ್ಪಂದವೊಂದರೆ ವಿಚಾರಕ್ಕೆ ಕಳುಹಿಸಿದ್ದಾಗ ಅಲ್ಲಿನ ಕಾಡೊಂದರಲ್ಲಿ ಹುಲಿಯೊಂದನ್ನು ಎದುರಿಸಿದ್ದನಂತೆ. 1795-1798ರ ಅವಧಿಯಲ್ಲಿ ನಿರ್ಮಾಣವಾಗಿರುವ ತುಮಕೂರು ಜಿಲ್ಲೆಯೊಂದರ ನರಸಿಂಹಸ್ವಾಮಿ ದೇವಾಲಯದ ಚಾವಣಿಯಲ್ಲಿ ಟಿಪ್ಪೂ ಹುಲಿಯೊಂದನ್ನು ತನ್ನ ಕತ್ತಿಯಿಂದ ಕೊಲ್ಲುತ್ತಿರುವ ಚಿತ್ರವಿದೆಯಂತೆ. ದೇವಿ ಚಾಮುಂಡಿಯ ವಾಹನವೂ ಆಗಿರುವ ಹುಲಿಯನ್ನು ತನ್ನ ಸಂಕೇತವನ್ನು ಟಿಪ್ಪೂ ಬಳಸಿಕೊಂಡಿದ್ದು ಧರ್ಮ ನಿರಪೇಕ್ಷತೆಯ ಆಗಿನ ಸಾಮಾಜಿಕ-ಧಾರ್ಮಿಕ ಪರಿಸರದ ಅಭಿವ್ಯಕ್ತಿ ಎನ್ನುತ್ತಾರೆ ಚರಿತ್ರೆಕಾರರು.

ಇನ್ನು ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನ ಟಿಪ್ಪೂ ಸುಲ್ತಾನನ ಪ್ರಖ್ಯಾತ ಯೂರೋಪಿಯನ್ನನ ಮೇಲೆ ದಾಳಿ ಮಾಡಿರುವ ಹುಲಿಯ `ಯಂತ್ರ’ ಗೊಂಬೆಯ ವಿಷಯಕ್ಕೆ ಬರೋಣ. ಟಿಪ್ಪೂನ ಸಮಯದಲ್ಲಿ ಬ್ರಿಟಿಷರು ಆತನನ್ನು ಕಂಡು ಹೆದರುತ್ತಿದ್ದರು. ಬ್ರಿಟಿಷರು ಮೈಸೂರಿನ ಮೇಲೆ ನಾಲ್ಕು ಯುದ್ಧಗಳನ್ನು ನಡೆಸಿದ್ದರು. ಟಿಪ್ಪೂ ಸತ್ತಾಗ ಬ್ರಿಟನ್ನಿನಲ್ಲಿ ಸಂಭ್ರಮಾಚರಣೆಗಳು ನಡೆದುವಂತೆ. ಕವಿಗಳು, ನಾಟಕಕಾರರು ಹಾಗೂ ಚಿತ್ರಕಲಾವಿದರು ಆ ಘಟನೆಯನ್ನು ವರ್ಣಿಸಿ ತಮ್ಮ ಕೃತಿಗಳಲ್ಲಿ ಬಿಂಬಿಸಿದರು. ಟಿಪ್ಪೂನ ರಾಜಧಾನಿ ಶ್ರೀರಂಗಪಟ್ಟಣದ ಮೇಲಿನ ದಾಳಿ ಹಾಗೂ ಲೂಟಿಯು ಆಗಿನ ಬ್ರಿಟನ್ನಿನ ಹಲವಾರು ನಾಟಕ, ಚಿತ್ರಕಲೆಗಳಲ್ಲಿ ಕಂಡುಬಂದಿವೆ. ಪರಕೀಯ ಬ್ರಿಟಿಷರ ಅಪಾಯವನ್ನು ಮನಗಂಡಿದ್ದ ಟಿಪ್ಪು ಅವರನ್ನು ಅಷ್ಟೇ ಕಟುವಾಗಿ ದ್ವೇಷಿಸುತ್ತಿದ್ದ. ಆ ದ್ವೇಷವೇ ಅವನನ್ನು ಬ್ರಿಟಿಷ್ ಸೈನಿಕನೊಬ್ಬನನ್ನು ಕೊಲ್ಲುತ್ತಿರುವ ಹುಲಿಯ ಯಂತ್ರ ಗೊಂಬೆ ತಯಾರಿಸಲು ಪ್ರೇರಣೆ ನೀಡಿದೆ. ಟಿಪ್ಪೂನ ಯಂತ್ರ ಹುಲಿ ಬ್ರಿಟಿಷ್ ಸೈನಿಕನನ್ನು ಕೊಲ್ಲುತ್ತಿದ್ದರೂ ಬ್ರಿಟಿಷರು ಟಿಪ್ಪೂ ಸತ್ತನಂತರ ಅದನ್ನು ಬ್ರಿಟನ್ನಿಗೆ ಕೊಂಡೊಯ್ದು ಆ ಬಿಳಿ ಸೈನಿಕ ಬ್ರಿಟಿಷ್‌ನವನೆಂದು ಒಪ್ಪಿಕೊಳ್ಳದೆ ಯಾರೋ ಯೂರೋಪಿಯನ್ ಸೈನಿಕನೆಂದರು ಹಾಗೂ ದಾಖಲೆಗಳಲ್ಲಿ ಅದೇ ರೀತಿ ದಾಖಲಿಸಿದ್ದಾರೆ.