ತಿರುಗಿ ಮೇಳದ ಜಾಗಕ್ಕೆ ಬರುವ ಹೊತ್ತಿಗೆ ದೇವಿಗೂ ರಕ್ತ ಬೀಜಾಸುರನಿಗೂ ಯುದ್ಧ ಶುರುವಾಗಿತ್ತು. ದೇವಿ ಕೈಯ್ಯಲ್ಲಿರುವ ಕತ್ತಿಗಳನ್ನು ಜಳಪಿಸುತ್ತಾ ಹಲ್ಲು ಕಡಿಯುತ್ತಾ ನೆಗೆನೆಗೆದು ಕುಣಿಯುತ್ತಿದ್ದಾಳೆ. ರಕ್ತಬಿಜಾಸುರನೂ ಅಷ್ಟೇ ಗತ್ತಿನಲ್ಲಿ ಹೆಗಲ ಮೇಲಿದ್ದ ದಪ್ಪನೆಯ ಗದೆಯನ್ನು ಆಗಾಗ ಮೇಲೆತ್ತಿ ತಿರುವುತ್ತಾ ಲಯ ಬದ್ಧವಾಗಿ ಹೆಜ್ಜೆಗಳನ್ನು ಹಾಕುತ್ತಾ ದೇವಿಯನ್ನು ಯುದ್ಧಕ್ಕೆ ಆಹ್ವಾನಿಸುತ್ತಿದ್ದಾನೆ. ಸ್ಟೇಜಿನಿಂದ ದೂರದಲ್ಲಿ ಯಾರೋ ಹಾಸಿದ್ದ ಚಾಪೆಯಲ್ಲಿ ಕೂರುವ ಹೊತ್ತಿಗೆ ಹೊಟ್ಟೆಯ ಜೊತೆಗೆ ತಲೆಯೂ ಸುತ್ತಿ ಬಂದಂತೆ ಆಗ ತೊಡಗಿತು. ದೇವಿ ರಕ್ತಬೀಜಾಸುರರ ಅಬ್ಬರದ ದನಿ ಕೇಳಿದಂತೆಲ್ಲಾ ತಲೆ ಸುತ್ತು ಜಾಸ್ತಿಯಾಗಿತ್ತು.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಹದಿನಾಲ್ಕನೆಯ ಕಂತು
ಚಿಕ್ಕಂದಿನ ಕೆಲವು ಸಂಗತಿಗಳು ಅಪಾರ ಖುಷಿಯನ್ನು ಕೊಡುವುದರ ಜತೆಗೇನೆ ಆವಾಗಿನ ಪೆದ್ದುತನ, ಹುಚ್ಚು ಕುತೂಹಲ ಹಾಗೂ ಮೊಂಡ ಧೈರ್ಯವನ್ನೂ ನೆನಪಿಸುತ್ತವೆ. ಇಂಥ ಮೊಂಡುತನ ಕೆಲವೊಮ್ಮೆ ನಮ್ಮಿಂದ ಕೆಲವು ಯಡವಟ್ಟುಗಳನ್ನು ಮಾಡಿಸುತ್ತಿತ್ತು. ಇದಕ್ಕೆ ಕೆಲವು ಮನೆಗಳಲ್ಲಿನ ವಾತಾವರಣವೂ ಕಾರಣವಾಗಿತ್ತು. ನಾನು ಮಿಡ್ಲ್ ಸ್ಕೂಲ್ಗೆ ಹೋಗುವಾಗಲೇ ನನ್ನ ಕೆಲ ಗೆಳೆಯರು ಬೀಡಿ ಸೇದುವುದರಲ್ಲಿ ನಿಸ್ಸೀಮರಾಗಿದ್ದರು. ಕಾರಣ ಅವರುಗಳ ಮನೆಯಲ್ಲಿ ಅಪ್ಪನೋ ಇಲ್ಲವೇ ಅಜ್ಜನೋ ಅವರುಗಳಿಗೆ ಒಲೆಯ ಬೆಂಕಿಯಲ್ಲಿ ಬೀಡಿಯನ್ನು ಹಚ್ಚಿಸಿಕೊಂಡು ಬರಲು ಹೇಳುತ್ತಿದ್ದರು. ಹಂಗೆ ಒಲೆಯ ಕೆಂಡದಲ್ಲಿ ಬೀಡಿ ಹಚ್ಚಿಸಿಕೊಳ್ಳುವಾಗ ಕುತೂಹಲಕ್ಕೆ ಈ ಹೊಗೆ ಅನ್ನೋದು ಹೆಂಗೆ ಬರುತ್ತೆ ನೋಡೇ ಬಿಡೋಣ ಅಂತ ಒಂದೊಂದು ದಮ್ ಹೊಡೆಯಲು ಶುರುಮಾಡಿ ಕಡೆಗದು ಚಟವಾಗಿಬಿಟ್ಟಿತ್ತು. ಇಂಥದ್ದೊಂದು ಪ್ರಯೋಗವನ್ನು ನಾನೂ ನಡೆಸಿದ್ದೆ. ಆದರದು ಬೀಡಿಯ ವಿಚಾರದಲ್ಲಿ ಅಲ್ಲ. ಕುಡಿತದ ವಿಚಾರದಲ್ಲಿ. ಹಿಂಗೆ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಕುಡಿದಿದ್ದೆ. ಹಂಗೆ ಕುಡಿದದ್ದು ರಮ್ಮು ಅಂತ ಗೊತ್ತಾಗಿದ್ದ ಕೆಲವು ವರ್ಷಗಳು ಕಳೆದ ಮೇಲೆಯೇ. ಕುಡಿದದ್ದಾದರೂ ಯಾವುದರಲ್ಲಿ? ತೆಂಗಿನ ಕಾಯಿಯ ಚೊಟ್ಟೆಯಲ್ಲಿ! ಕುಡಿತ ಅಂದರೆ ಏನೂಂದರೆ ಏನೂ ಗೊತ್ತಿಲ್ಲದ ಹೊತ್ತಲ್ಲಿ ಗೆಳೆಯನೊಬ್ಬನ ಉಮೇದಿಗೆ ಹೂಂಗುಟ್ಟಿ ಕುಡಿದದ್ದು ಒಂದರ್ಧ ಚೊಟ್ಟೆಯಷ್ಟು ರಮ್ಮು. ಆಗ ನಮ್ಮೂರಿನಲ್ಲಿ ಕದ್ದು ಮುಚ್ಚಿ ಕುಡಿಯುವವರು ಕೆಲವರಿದ್ದರು. ಒಬ್ಬ ಮಾತ್ರ ರಾಜಾರೋಷವಾಗಿ ಕುಡಿಯುತ್ತಿದ್ದ ಕುಡುಕನಿದ್ದ. ಅವನು ಹುಡುಗರಿಂದ ಹಿಡಿದು ಮುದುಕರವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ಭಯ ಹುಟ್ಟಿಸುತ್ತಿದ್ದ. ಸಂಜೆಗೇ ಕಂಠಪೂರ್ತಿ ಕುಡಿದು ಬರುತ್ತಿದ್ದ ಅವನು ಅಮಲು ಇಳಿಯುವವರೆಗೂ ಆ ಚಣದಲ್ಲಿ ಅವನಿಗೆ ಹೆಂಗನಿಸುತ್ತೋ ಹಂಗೆ ಕೂಗಾಡುತ್ತಿದ್ದ. ಇಲ್ಲಾ ಯಾರಾದರೊಬ್ಬರ ಹೆಸರನ್ನಿಡಿದು ಅವರ ಮನೆಯ ಮುಂದೆ ನಿಂತು ಬಾಯಿಗೆ ಬಂದಂತೆ ಬೈಯ್ಯುತ್ತಿದ್ದ. ಕೆಲವೊಮ್ಮೆ ತಮಾಷೆಯನ್ನು ಮಾಡುತ್ತಾ ನಗಾಡಿಸಲು ಯತ್ನಿಸುತ್ತಿದ್ದ. ಆದರೆ ತಮಾಷೆ ಹೋಗಿ ಅಮಾಸೆ ಆಗಿಬಿಟ್ಟಾತು ಅಂತ ಜನ ಅವನ ತಮಾಷೆಯನ್ನೂ ಬೈಗುಳಕ್ಕೆ ಸಮನಾಗೇ ಸ್ವೀಕರಿಸುತ್ತಿದ್ದರು. ಇದು ದೊಡ್ಡವರ ಪರಿಯಾದರೆ ನಮ್ಮಂಥ ಹುಡುಗರಿಗೆ ಇದು ವಿಚಿತ್ರವಾಗಿ ಕಾಣಿಸುತ್ತಿತ್ತು. ಹಂಗೆ ಆಡಾಕೆ ಅವರೆಲ್ಲಾ ಕುಡಿಯೋದಾದರೂ ಏನು? ಕುಡ್ದಾಗ ಅದು ಹಂಗೆಲ್ಲಾ ಆಡಿಸುತ್ತಾ? ಕುಡ್ದಾಗ ಅವರೆಲ್ಲಾ ಬೇಕಂತಲೇ ಸರಿಯಾಗಿ ನಡೆಯಲಾರದೆ ತಟ್ಟಾಡಿಕೊಂಡು ಹೋಗ್ತಾರ? ಇಲ್ಲಾ ನಿಜವಾಗ್ಲೂ ಹಂಗೆ ಆಗುತ್ತಾ? ಇಂಥ ಹತ್ತಾರು ಪ್ರಶ್ನೆಗಳು ಅಂಥವರನ್ನು ಕಂಡಾಗಲೆಲ್ಲಾ ನನ್ನೊಳಗೆ ಹುಟ್ಟಿಕೊಳ್ಳುತ್ತಿದ್ದವು. ಹಿಂಗೆ ಹುಟ್ಟಿಕೊಳ್ಳುತ್ತಿದ್ದ ಪ್ರಶ್ನೆಗಳು ಎಂದಾದರೊಮ್ಮೆ ಹಂಗೆ ಕುಡಿದರೆ ಹೆಂಗಿರುತ್ತೆ ಅನ್ನುವ ಸಣ್ಣ ಆಸೆ ಹಾಗೂ ಕುತೂಹಲಗಳನ್ನು ಹುಟ್ಟಾಕುತ್ತಿದ್ದವು. ಇಂಥ ಆಸೆ ಮತ್ತು ಕುತೂಹಲಗಳೇ ಅವತ್ತು ಗೆಳೆಯ ಕೇಳಿದ ಕೂಡಲೆ ಒಂದು ಕೈ ನೋಡೇ ಬಿಡೋಣ ಅನ್ನುವಂತೆ ಮಾಡಿತ್ತು.
ನನ್ನೂರಿನ ಸುತ್ತ ಮುತ್ತಲ ಹಳ್ಳಿಗಳಲ್ಲಿ ಜಾತ್ರೆಗಳು ಶುರುವಾದರೆ ಸಾಕು ಅವುಗಳೊಂದಿಗೆ ಒಂದೊಂದು ಊರಿನಲ್ಲೂ ನಾಟಕ ಅಥವಾ ಮೇಳ ಇದ್ದೇ ಇರುತ್ತಿದ್ದವು. ಎರಡು ಮೂರು ದಿನಗಳ ಕಾಲ ನಡೆಯುತ್ತಿದ್ದ ಜಾತ್ರೆಯಲ್ಲಿ ಒಂದು ದಿನ ಈ ಮೇಳ ಇಲ್ಲಾ ನಾಟಕಗಳು ನಡೆಯುತ್ತಿದ್ದವು. ಅದು ಹೆಚ್ಚಾಗಿ ಪೌರಾಣಿಕ ನಾಟಕಗಳನ್ನೇ ಕಲಿಯುತ್ತಿದ್ದ ಕಾಲ. ಆಗೊಮ್ಮೆ ಈಗೊಮ್ಮೆ ಸಾಮಾಜಿಕ ನಾಟಕಗಳನ್ನೂ ಆಡುತ್ತಿದ್ದರು. ಈ ನಾಟಿಕ ಇಲ್ಲಾ ಮೇಳಗಳನ್ನು ಕಲಿಸುವ ಮೇಷ್ಟ್ರುಗಳು ಬೇರೆ ಊರಿನಿಂದ ಬರುತ್ತಿದ್ದು ತಿಂಗಳುಗಟ್ಟಲೇ ನಮ್ಮ ಊರಿನಲ್ಲೇ ಉಳಿದು ತಾಲೀಮು ಮಾಡಿಸುತ್ತಿದ್ದರು. ಅಂತೆಯೇ ಆ ಮೇಷ್ಟ್ರುಗಳಿಗೆ ನಾಟಕದಲ್ಲಿ ಪಾತ್ರ ಮಾಡಲು ಸೇರುತ್ತಿದ ಮನೆಯವರಿಂದ ತುಂಬಾ ಒಳ್ಳೆಯ ಆತಿಥ್ಯವೂ ಸಿಗುತ್ತಿತ್ತು. ಊರ ಮಕ್ಕಳಿಗೆ ಈ ತಾಲೀಮನ್ನು ನೋಡುವುದೇ ಖುಷಿ ಅಂದರೆ ಖುಷಿಯ ಸಂಗತಿಯಾಗಿತ್ತು. ಜತೆಗೆ ಈ ನಾಟಕಗಳು ನಡೆಯುವ ಒಂದೆರಡು ದಿನಗಳ ಮುಂಚೆಯೇ ಬರುತ್ತಿದ್ದ ಸೀನರಿಯವರ ಬಳಿಯೂ ಮಕ್ಕಳ ದಂಡೇ ನೆರೆಯುತ್ತಿತ್ತು. ಬಣ್ಣಬಣ್ಣದ ಪರದೆಗಳು, ಬಂಗಾರದ ಬಣ್ಣದ ಕಿರೀಟಗಳು, ಫಳಾರಿಸುವ ಗದೆಗಳು, ಪಾತ್ರಧಾರಿಗಳಿಗಾಗಿ ಇರುತ್ತಿದ್ದ ಧಿರಿಸುಗಳು-ಎಲ್ಲವೂ ನಮ್ಮನ್ನು ಪುಳಕಿತಗೊಳಿಸುತ್ತಿದ್ದವು. ತಾಲೀಮು ಶುರುವಾದ ದಿನದಿಂದ ನಾಟಕವನ್ನು ಆಡಿ ಮುಗಿಸುವವರೆಗಿನ ದಿನಗಳು ನಮಗೆ ಸ್ಕೂಲಿನ ಬಗೆಗಿನ ಗ್ಯಾನವನ್ನೇ ಮಂಕುಮಾಡಿಬಿಡುತ್ತಿದ್ದವು. ಹೆಚ್ಚೂ ಕಡಿಮೆ ಆಗ ಸ್ಕೂಲಿಗೆ ಬೇಸಿಗೆ ರಜೆ ಇರುತ್ತಿತ್ತು. ತಾಲೀಮಿನ ಮನೆಯೇ ನಮಗೆ ನಿಜವಾದ ಸ್ಕೂಲಾಗಿಬಿಡುತ್ತಿತ್ತು. ಸಂಜೆಗೇ ಹೊಟ್ಟೆಗೆ ಒಂಚೂರು ಹಾಕಿಕೊಂಡು ಅತ್ತ ದೌಡಾಕಿಬಿಡುತ್ತಿದ್ದೆವು. ಎಷ್ಟೋ ದಿನ ತಾಲೀಮು ಮುಗಿಯುವುದರೊಳಗೆ ಅಲ್ಲೇ ನಿದ್ದೆ ಮಾಡಿಬಿಟ್ಟಿರುತ್ತಿದ್ದೆವು. ನಾನು ಕಂಡಂತೆ ಮೊದಮೊದಲು ನನ್ನೂರಿನಲ್ಲಿ ಪೌರಾಣಿಕ ನಾಟಕದ್ದೇ ಕಾರುಬಾರು. ಬಹುತೇಕ ಅದು ದೇವಿ ಮಹಾತ್ಮೆಯೇ ಆಗಿರುತ್ತಿತ್ತು. ಅದಕ್ಕೆ ದುಷ್ಠರನ್ನು ಶಿಕ್ಷಿಸುವ, ಶಿಷ್ಠರನ್ನು ರಕ್ಷಿಸುವ ಕಥೆ ಒಂದು ಕಾರಣವಾಗಿದ್ದರೆ, ಅದರಲ್ಲಿ ಬರುವ ಪ್ರಮುಖ ಪಾತ್ರಗಳಾದ ದೇವಿ ಮತ್ತು ರಕ್ತಬೀಜಾಸುರನ ಪಾತ್ರಗಳನ್ನು ಮೈದುಂಬಿಕೊಂಡು ಅದ್ಭುತವಾಗಿ ನಿರ್ವಹಿಸುತ್ತಿದ್ದ ರತ್ನಯ್ಯ ಮತ್ತು ರುದ್ರಪ್ಪ ಎಂಬ ಖಾಯಂ ಪಾತ್ರಧಾರಿಗಳು ಇಡೀ ನಾಟಕಕ್ಕೆ ವಿಶೇಷ ಖಬರ್ರು ತರುತ್ತಿದ್ದರು. ಜತೆಗೆ ಮೂಡ್ಲಗಿರಿಯಪ್ಪ ಮಾಡುತ್ತಿದ್ದ ಸಾರಥಿಯ ಪಾತ್ರವೂ ಜನರನ್ನು ನಗೆಗಡಲಿನಲ್ಲಿ ಮುಳುಗಿಸುತ್ತಿತ್ತು. ನಾಟಕದ ಕೊನೆಯ ಯುದ್ಧದ ದೃಶ್ಯವಂತೂ ರೋಮಾಂಚನ ಹುಟ್ಟಿಸುವಷ್ಟು ರೋಚಕವಾಗಿರುತ್ತಿತ್ತು.
ಅದು ದೇವಿ ಮತ್ತು ರಕ್ತಬೀಜಾಸುರರ ನಡುವಿನ ಯುದ್ಧದ ದೃಶ್ಯವಾಗಿರುತ್ತಿತ್ತು. ಈ ಸೆಣೆಸಾಟದಲ್ಲಿ ದೇವಿ ರಕ್ತಬೀಜಾಸುರನ ವಧೆ ಮಾಡುತ್ತಿದ್ದಳು. ಆ ಹೊತ್ತಿಗೆ ಸರಿಯಾಗಿ ಬೆಳಕಾಗುತ್ತಿತ್ತು. ರಾತ್ರಿಯಿಡೀ ಬಯಲಲ್ಲಿ ಕೂತು ಮೇಳವನ್ನು ನೋಡುತ್ತಿದ್ದ ಜನ ಆ ಕ್ಷಣಕ್ಕಾಗಿ ಕಾತರಿಸುತ್ತಿದ್ದರು. ಹೀಗೆ ಯುದ್ಧ ಮಾಡುವಾಗ ಆರ್ಭಟಿಸಿ ಬೊಬ್ಬಿರಿಯುತ್ತಿದ್ದ ದೇವಿ, ಈ ನಡುವೆ ಹಲವು ಸಾರ್ತಿ ಮೂರ್ಛೆ ಹೊಗಿಬಿಡುತ್ತಿದ್ದಳು. ಆಗ ಅವಳನ್ನು ಆತು ಹಿಡಿದು ಮಂಗಳಾರತಿ ಎತ್ತಿ ಭಕ್ತಿಯಿಂದ ಪೂಜಿಸಿಸುತ್ತಿರುವಾಗಲೇ ಇದ್ದಕ್ಕಿದ್ದಂತೆ ಎದ್ದು ಮತ್ತೆ ಆರ್ಭಟಿಸುತ್ತಿದ್ದಳು. ಆ ಆರ್ಭಟಕ್ಕೆ ಒಂಚೂರು ನೋಡುತ್ತಾ ಮತ್ತೊಂಚೂರು ನಿದ್ದೆ ಮಾಡುತ್ತಿದ್ದವರೂ ಎಚ್ಚರಗೊಂಡು ಬಿಡುತ್ತಿದ್ದರು. ಎಂಥದೋ ಸಂಚಾರವಾದವರಂತೆ ಇಡೀ ಸಭಿಕ ಸಮೂಹವೇ ಮೌನಕ್ಕೆ ಶರಣಾಗಿ ಬಿಡುತ್ತಿತ್ತು. ಇವರಿಬ್ಬರ ಕುಣಿತಕ್ಕೆ ಮರದ ಹಲಗೆಗಳಿಂದ ಹಾಕಿರುತ್ತಿದ್ದ ಸ್ಟೇಜಿನಲ್ಲಿ ಮುರಿದು ಬೀಳುವಂಥ ಸದ್ದಾಗುತ್ತಿತ್ತು. ಕೆಲವು ಸಾರ್ತಿ ಇವರಿಬ್ಬರ ನಡುವೆ ಹಿಡಿದಿರುತ್ತಿದ್ದ ಏಣಿಯೂ ಏಟು ತಗಂಡುಬಿಡುತ್ತಿತ್ತು.
ಆ ಸಲ ಎಂದಿನಂತೆ ದೇವಿ ಮಹಾತ್ಮೆ ಮೇಳ. ಎರಡು ದಿನ ಮುಂಚೆಯೇ ಬಂದಿದ್ದ ಸೀನರಿಯವರು ರೆಡಿ ಮಾಡಿದ್ದ ಜಗ ಜಗಿಸುವ ಸ್ಟೇಜು, ಸಣ್ಣ ಮಕ್ಕಳ ಕಣ್ಣು ಕುಕ್ಕುತ್ತಿತ್ತು. ಬೆಳಗಿನಿಂದಲೇ ಅಲ್ಲಿ ಜಮಾಯಿಸಿದ್ದ ಮಕ್ಕಳು ಊಟ, ತಿಂಡಿಗೆಂದು ಮಾತ್ರ ಮನೆಗೆ ಹೋಗಿ ಮುಗಿದ ತಕ್ಷಣವೇ ವಾಪಸ್ಸಾಗುತ್ತಿದ್ದರು. ಸಂಜೆಯಿಂದಲೇ ನನ್ನ ಪುಟ್ಟ ಹಳ್ಳಿಯಲ್ಲಲ್ಲದೆ ಸುತ್ತ ಮುತ್ತಲಿನ ಹಳ್ಳಿಯವರು ಹೊದೆಯಲೊಂದು ಕಂಬಳಿ ಅಥವಾ ರಗ್ಗು, ಹಾಸಲೊಂದು ಚಾಪೆಯ ಜೊತೆಗೆ ಮೇಳ ನಡೆಯುವ ಸ್ಥಳಕ್ಕೆ ಸೇರ ತೊಡಗಿದ್ದರು. ಮುಂಚೆ ಬಂದವರು ತಮ್ಮರುಗಳಿಗಾಗಿ ಜಾಗಗಳನ್ನು ಹಿಡಿದುಕೊಂಡಿರುತ್ತಿದ್ದರು. ಜನರೆಲ್ಲಾ ಹೀಗೆ ಒಬ್ಬೊಬ್ಬರಾಗಿ ಮೇಳ ನಡೆಯುವ ಜಾಗದಲ್ಲಿ ಕೂಡಿಕೊಳ್ಳುತ್ತಿದ್ದರೆ ಗೆಳೆಯ ಶಂಕರ ನಾನು ಮತ್ತು ಮತ್ತಿಬ್ಬರು ಗೆಳೆಯರನ್ನು ಸ್ಟೇಜಿನ ಹಿಂಭಾಗಕ್ಕೆ ಕರೆದುಕೊಂಡು ಹೋಗಿ ತಾನು ತಂದಿದ್ದ ಪುಟ್ಟ ಬಾಟಲಿಯೊಂದನ್ನು ಜೇಬಿನಿಂದ ತೆಗೆದು ತೋರಿಸಿ ಆಸೆ ಮತ್ತು ಆತಂಕಗಳನ್ನು ಒಟ್ಟಿಗೇ ಹುಟ್ಟು ಹಾಕಿದ್ದ. ಅದಕ್ಕಾಗಿ ಅವನು ಜಾಗ ಹಾಗು ಸಮಯವನ್ನು ಅವನೇ ನಿಗಧಿ ಮಾಡಿದ್ದ. ಅದು ಹೇಗೆ ತಂದ, ಅದಕ್ಕೆಷ್ಟು ದುಡ್ಡು, ಅಂತ ನಾವು ಕೇಳಲೂ ಇಲ್ಲ, ಅವನು ಹೇಳಲೂ ಇಲ್ಲ. ಆಗದು ನಮ್ಮ ಮನಸ್ಸಿಗೆ ಹೊಳೆದಿರಲೂ ಇಲ್ಲ.
ಅದರಂತೆ ನಾವು ಮೂವರು ಶಂಕರನೊಂದಿಗೆ ಊರಾಚೆಯಲ್ಲಿದ್ದ ದೇವಸ್ಥಾನದ ಪೌಳಿಗೆ ಹೋಗುವ ಹೊತ್ತಿಗೆ ಬೆಳಗಿನ ಜಾವಕ್ಕೆ ಬಂದಿತ್ತು. ಜನರೆಲ್ಲಾ ಮೇಳದ ಮೋಡಿಯಲ್ಲಿದ್ದರು. ಶಂಕರ ಇದಕ್ಕೆ ಮುಂಚೆ ಒಂದೆರಡು ಸಾರ್ತಿ ಕುಡಿದಿದ್ದೆ ಅಂತ ನಮ್ಮ ಬಳಿ ಹೇಳಿಕೊಂಡಿದ್ದ. ಹಂಗಾಗಿ ನಾವು ಅವನು ಹೇಳಿದಂತೆ ನಡೆದುಕೊಂಡಿದ್ದೆವು. ಆದರೆ ತಾನು ಕುಡಿದದ್ದರ ಬಗ್ಗೆ ಸುಳ್ಳು ಹೇಳಿದ್ದ ಅಂತ ನಮ್ಮೊಳಗೊಂದು ಸಣ್ಣ ಅನುಮಾನ ಮೂಡುವಂತೆಯೂ ಮಾಡಿತ್ತು. ಏಕೆಂದರೆ ಅವನಿಗೆ ನಮ್ಮಂತೆಯೇ ಹೇಗೆ ಕುಡಿಯ ಬೇಕು ಮತ್ತು ಯಾವುದರಲ್ಲಿ ಕುಡಿಯಬೇಕು ಅನ್ನುವುದು ಸರಿಯಾಗಿ ಗೊತ್ತಿರಲಿಲ್ಲ. ಹಂಗಾಗಿ, ಮನೆಯಿಂದ ಲೋಟಗಳನ್ನು ತಂದರೆ ಅನುಮಾನ ಬರಬಹುದೆಂಬ ಕಾರಣಕ್ಕೆ ತೆಂಗಿನ ಚೊಟ್ಟೆಗಳೇ ನಮಗವತ್ತು ಲೋಟಗಳಾಗಿದ್ದವು. ದೇವಸ್ಥಾನದ ಹಿಂದಿದ್ದ ಪುಟ್ಟ ಕೆರೆಯ ನೀರೇ ನಾವು ಬೆರಸಿಕೊಳ್ಳಬೇಕಾಗಿದ್ದ ನೀರಾಗಿತ್ತು. ಪೌಳಿ ಸೇರಿದ ಮೇಲೆ ನಮಗಾಗಿ ಅಡಗಿಸಿಟ್ಟಿದ್ದ ಚೊಟ್ಟೆಗಳನ್ನು ಶಂಕರ ಒಂದೊಂದಾಗಿ ತೆಗೆದು ಕೊಟ್ಟ. ನಂತರ ಎಲ್ಲರೂ ತಂತಮ್ಮ ಚೊಟ್ಟೆಗಳಿಗೆ ಬಳಸೋ ಕಟ್ಟೆಯಲ್ಲಿ ನೀರು ತುಂಬಿಕೊಂಡು ಬರುವುದೆಂದು ತೀರ್ಮಾನವಾಗಿ ಎಲ್ಲರೂ ಕತ್ತಲೆಯಲ್ಲೇ ಕಟ್ಟೆಯತ್ತ ಹೊರೆಟವು. ಆಗ ಕಟ್ಟೆ ದನಕರುಗಳಿಗೆ ನೀರು ಕುಡಿಸಲು, ಅವುಗಳ ಮೈ ತೊಳೆಯಲು, ಬಟ್ಟೆ ಹೊಗೆಯಲು, ಎರಡಕ್ಕೆ ಹೋದವರು ನೀರು ಮುಟ್ಟಲು ಮುಂತಾದ ಸಕಲಕೂ ಬಳಕೆಯಾಗುತ್ತಿತ್ತು. ಕಟ್ಟೆಯಲ್ಲಿ ತುಂಬಿಕೊಂಡ ನೀರು ನಾವು ಪೌಳಿಯನ್ನು ತಲುಪುವ ಹೊತ್ತಿಗೆ ಹೆಚ್ಚೂ ಕಡಿಮೆ ಅರ್ಧ ಮಾತ್ರ ಉಳಿದಿತ್ತು. ಆ ಉಳಿದ ನೀರಿಗೆ ಶಂಕರ ಬಾಟಲಿನಿಂದ ಎಲ್ಲರಿಗೂ ಸಮನಾಗಿ ರಮ್ಮನ್ನು ಸುರಿದ. ಅದರ ಘಾಟಿಗೇ ನನಗೆ ತಲೆ ತಿರುಗಿ ಬಂದ ಹಾಗಾಯ್ತು. ನನ್ನಂತೆ ಉಳಿದವರಿಗೂ ಆಗಿತ್ತು. ಆದರೂ ಇದೆಲ್ಲಾ ಮಾಮೂಲಿ, ಒಂದು ಗುಕ್ಕು ಕುಡಿದರೆ ಸರಿಯಾಗುತ್ತೆ, ಕುಡಿಯಿರಿ ಅಂತ ಶಂಕರ ಚೊಟ್ಟೆಯನ್ನೆತ್ತಿ ಒಂದು ಗುಕ್ಕು ಕುಡಿದ. ನಾನು ಕುಡಿದ ಗುಕ್ಕಿನ ರಮ್ಮು ನನ್ನ ಗಂಟಲಿನಲ್ಲಿ ಬೆಂಕಿಯನ್ನು ಹತ್ತಿಸಿಕೊಂಡು ಕೆಳಕ್ಕಿಳಿಯುತ್ತಾ ಹೋಗಿ ಜೊತೆಗೆ ಒಮ್ಮೆಗೇ ವಾಕರಿಕೆ ಬಂದಂತಾಗಿ ಬಾಯಲ್ಲಿದ್ದದ್ದನ್ನೆಲ್ಲಾ ಆಚೆ ಉಗಿದು ಬಿಟ್ಟೆ. ಅಷ್ಟು ಹೊತ್ತಿಗಾಗಲೇ ಕಣ್ಣುಗಳ ತುಂಬಾ ನೀರು ತುಂಬಿಕೊಂಡು ಬಿಟ್ಟಿದ್ದವು. ನಂಗಂತೂ ಬೇಡವೇ ಬೇಡ, ಅಂತ ಚೊಟ್ಟೆಯನ್ನು ಕೆಳಗಿಟ್ಟಿದ್ದ ಕಂಡ ಶಂಕರ, `ಒಂದೇ ಉಸ್ರಿಗೆ ಹಂಗೆ ಕುಡುದ್ರೆ ಇನ್ನೇನಾಗುತ್ತೆ, ನೋಡು ಹಿಂಗೆ ಇಷ್ಟಷ್ಟೇ ಕುಡಿಯ ಬೇಕು,’ ಅಂತ ಮತ್ತೊಂದು ಗುಟುಕನ್ನು ಚಪ್ಪರಿಸಿದ. ನಾನು ಚೊಟ್ಟೆಯಲ್ಲಿದ್ದುದ ಖಾಲಿ ಮಾಡುವ ಹೊತ್ತಿಗೆ, ಹೊಟ್ಟೆಯೊಳಗೆ ಸೇರಿದ್ದ ರಮ್ಮು ಸಣ್ಣಗೆ ಬೆಚ್ಚಗಾಗುತ್ತಾ, ಒಂಥರಾ ಸಂಕಟವನ್ನೂ, ಹೊಟ್ಟೆ ಪೂರಾ ತೊಳಿಸಿದಂಥ ಅನುಭವವನ್ನೂ ದೂಡುತ್ತಿತ್ತು.
ತಿರುಗಿ ಮೇಳದ ಜಾಗಕ್ಕೆ ಬರುವ ಹೊತ್ತಿಗೆ ದೇವಿಗೂ ರಕ್ತ ಬೀಜಾಸುರನಿಗೂ ಯುದ್ಧ ಶುರುವಾಗಿತ್ತು. ದೇವಿ ಕೈಯ್ಯಲ್ಲಿರುವ ಕತ್ತಿಗಳನ್ನು ಜಳಪಿಸುತ್ತಾ ಹಲ್ಲು ಕಡಿಯುತ್ತಾ ನೆಗೆನೆಗೆದು ಕುಣಿಯುತ್ತಿದ್ದಾಳೆ. ರಕ್ತಬಿಜಾಸುರನೂ ಅಷ್ಟೇ ಗತ್ತಿನಲ್ಲಿ ಹೆಗಲ ಮೇಲಿದ್ದ ದಪ್ಪನೆಯ ಗದೆಯನ್ನು ಆಗಾಗ ಮೇಲೆತ್ತಿ ತಿರುವುತ್ತಾ ಲಯ ಬದ್ಧವಾಗಿ ಹೆಜ್ಜೆಗಳನ್ನು ಹಾಕುತ್ತಾ ದೇವಿಯನ್ನು ಯುದ್ಧಕ್ಕೆ ಆಹ್ವಾನಿಸುತ್ತಿದ್ದಾನೆ. ಸ್ಟೇಜಿನಿಂದ ದೂರದಲ್ಲಿ ಯಾರೋ ಹಾಸಿದ್ದ ಚಾಪೆಯಲ್ಲಿ ಕೂರುವ ಹೊತ್ತಿಗೆ ಹೊಟ್ಟೆಯ ಜೊತೆಗೆ ತಲೆಯೂ ಸುತ್ತಿ ಬಂದಂತೆ ಆಗ ತೊಡಗಿತು. ದೇವಿ ರಕ್ತಬೀಜಾಸುರರ ಅಬ್ಬರದ ದನಿ ಕೇಳಿದಂತೆಲ್ಲಾ ತಲೆ ಸುತ್ತು ಜಾಸ್ತಿಯಾಗಿತ್ತು. ಮೊದಲೇ ತೊಳಿಸುತ್ತಿದ್ದ ಹೊಟ್ಟೆ ಮತ್ತೂ ಹೆಚ್ಚು ತೊಳಿಸತೊಡಗಿತ್ತು. ಕೂರಲು ಅಸಾಧ್ಯವಾಗಿ ಚಾಪೆಯಲ್ಲಿ ಮಲಗಿ ಕಣ್ಮುಚ್ಚಿದರೆ, ತಲೆಯಾದಿಯಾಗಿ ಎಲ್ಲವೂ ಸುತ್ತಿದಂತೆ ಆಗುತ್ತಿತ್ತು. ಹಂಗೇ ನಿದ್ದೆಯೂ ಬಂದುಬಿಟ್ಟಿತ್ತು.
ಚಾಪೆಯ ಯಜಮಾನರು ಏಳಿಸಿದಾಗ ಮೇಳದಲ್ಲಿ ರಕ್ತ ಬೀಜಾಸುರನ ಸಂಹಾರವಾಗಿ ಬೆಳಕು ಹರಿದಿತ್ತು. ಆ ಬೆಳಗಿನ ಬೆಳಕಿಗೆ ಕಣ್ಣು ಬಿಡಲಾರದೆ ಎದ್ದು ನಿಂತರೆ ಸರಿಯಾಗಿ ನಿಲ್ಲಲಾರದೆ, ನಡೆಯಲಾರದೆ ಅಂತೂ ಇಂತೂ ಮನೆ ತಲುಪಿ ಮಲಗಿದವನಿಗೆ ಅಸಾಧ್ಯ ತಲೆ ನೋವು ಮೈಪೂರಾ ಭಾರವಾಗಿ ಹೋಗಿತ್ತು. ರಾತ್ರಿಯೆಲ್ಲಾ ನಿದ್ದೆಗೆಟ್ಟು ಹಿಂಗಾಗೈತೆ ನಿದ್ದೆ ಮಾಡಿದ್ರೆ ಎಲ್ಲಾ ಸರಿಯಾಗುತ್ತೆ ಅಂತ ಅಜ್ಜಿಯ ಸಮಾಧಾನ ಮಾಡುತ್ತಿತ್ತು. ಅದು ನಾನು ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆದ ವರ್ಷ.
ಇಂಥದ್ದೊಂದು ಯಡವಟ್ಟಿಗೆ ಒಮ್ಮೆ ಖುದ್ದು ದೇವಿ ಪಾತ್ರಧಾರಿಯೂ ಸಿಲುಕಿದ್ದರು. ಇದು ನಾವು ಚೊಟ್ಟೆ ರಮ್ಮಿನ ಪ್ರಯೋಗವನ್ನು ನಡೆಸುವುದಕ್ಕೆ ಒಂದೆರಡು ವರ್ಷ ಮುಂಚೆ ನಡೆದಿದ್ದ ಸಂಗತಿ. ದೇವಿ ಮಹಾತ್ಮೆ ಮೇಳದಲ್ಲಿ ಇವರದ್ದು ಖಾಯಂ ದೇವಿಯ ಪಾತ್ರ. ನಸುಗೆಂಪು ಬಣ್ಣ, ಮೀಸೆಯಿಲ್ಲದ ಕೋಲು ಮುಖ, ಚೂಪನೆಯ ಮೂಗು, ಅಗಲ ಕಣ್ಣುಗಳು, ತಿದ್ದಿ ತೀಡಿದಂತ ಕಣ್ಣ ಹುಬ್ಬುಗಳಿಂದಾಗಿ ಸೀರೆ ಉಡಿಸಿದರೆ ಹೆಂಗಸಿನ ಥರವೇ ಕಾಣುತ್ತಿದ್ದರು. ಉದ್ದಕ್ಕೆ ಬೆಳೆದಿದ್ದ ಕೂದಲಿಗೆ ಹರಳೆಣ್ಣೆ ಹಾಕಿ ಹಿಂದಕ್ಕೆ ಬಾಚಿಕೊಂಡು ಸದಾ ಯಾವುದಾದರೊಂದು ನಾಟಕದ ಮಟ್ಟನ್ನು ಗುನುಗಿಕೊಂಡು ಅಡ್ಡಾಡುತ್ತಿದ್ದ ಇವರನ್ನು ಕಂಡರೆ ನನಗೆ ಕೆಲವೊಮ್ಮೆ ಭಯವಾಗಿ ಬಿಡುತ್ತಿತ್ತು. ಕಣ್ಣುಗಳಲ್ಲಿ ಬೆಂಕಿಯುಗುಳುತ್ತಾ, ಮುಖದಲ್ಲಿ ರೌದ್ರ ಭಾವವನ್ನು ಮೆರೆಸುತ್ತಾ, ಕಟಕಟನೆ ಹಲ್ಲು ಕಡಿಯುತ್ತಾ, ಎರಡೂ ಕೈಗಳಲ್ಲಿ ಹಿಡಿದಿರುತ್ತಿದ್ದ ಕತ್ತಿಗಳನ್ನು ಎತ್ತಿ ಮಧ್ಯೆ ಅಡ್ಡಲಾಗಿ ಹಿಡಿದಿರುತ್ತಿದ್ದ ಏಣಿಯನ್ನೂ ಲೆಕ್ಕಿಸದೆ ರಕ್ತಬೀಜಾಸುರನತ್ತ ನುಗ್ಗುತ್ತಿದ್ದ ಆ ದೇವಿ ನನ್ನ ಕಣ್ಮುಂದೆ ಬಂದು ಬಿಡುತ್ತಿದ್ದಳು. ಇಂಥ ಈ ಭಯ ಹೆಚ್ಚೂ ಕಡಿಮೆ ನಾನು ಹೈಸ್ಕೂಲ್ ಮೆಟ್ಟಿಲು ಹತ್ತುವವರೆಗೂ ನನ್ನನ್ನು ಕಾಡುತ್ತಿತ್ತು.
ಮೇಳದ ಕೊನೆಯಲ್ಲಿ ಬರುತ್ತಿದ್ದ ದೇವಿ ಮತ್ತು ರಕ್ತಬೀಜಾಸುರರ ನಡುವಿನ ಯುಧ್ದದ ಈ ದೃಶ್ಯ ಬರುತ್ತಿತ್ತು. ಅದಕ್ಕಾಗಿ ಜನರೂ ಕಾಯುತ್ತಿದ್ದರು… ರಕ್ತಬೀಜಾಸುರನ ಸಂಹಾರವಾಗುತ್ತಿದ್ದದ್ದೇ ಸರಿಯಾಗಿ ಬೆಳಕಾಗುವ ಹೊತ್ತಿಗೆ.
ಆ ಸಾರ್ತಿ ಮೇಳ ಎಂದಿನಂತೆ ಬಲು ವೈನಾಗಿ ನಡೆಯುತ್ತಿತ್ತು. ಪ್ರತಿ ಸಲದಂತೆ ಜನರೂ ಸೇರಿದ್ದರು. ದೇವಿಗೂ ರಕ್ತ ಬೀಜಾಸುರನಿಗೂ ಯುದ್ಧ ಶುರುವಾಗಿತ್ತು. ದೇವಿ ಕೈಯ್ಯಲ್ಲಿರುವ ಕತ್ತಿಗಳನ್ನು ಹಿಡಿದು ಆರ್ಭಟಿಸುತ್ತಿದ್ದಳು. ಹಲ್ಲು ಕಡಿಯುತ್ತಾ ನೆಗೆನೆಗೆದು ಕುಣಿಯುತ್ತಿದ್ದಳು. ರಕ್ತಬಿಜಾಸುರನೂ ಅಷ್ಟೇ ಗತ್ತಿನಲ್ಲಿ ಹೆಗಲ ಮೇಲಿದ್ದ ದಪ್ಪನೆಯ ಗದೆಯನ್ನು ಆಗಾಗ ಮೇಲೆತ್ತಿ ತಿರುವುತ್ತಾ ಲಯ ಬದ್ಧವಾಗಿ ಹೆಜ್ಜೆಗಳನ್ನು ಹಾಕುತ್ತಾ ದೇವಿಯನ್ನು ಕೆಣಕುತ್ತಿದ್ದನು. ಆಗ ಹುಚ್ಚೆದ್ದು ಕುಣಿಯುತ್ತಿದ್ದ ದೇವಿ ಇದ್ದಕ್ಕಿದ್ದಂತೆ ಕುಸಿದು ಬೀಳುತ್ತಾಳೆ. ಪೂಜೆ ಮಂಗಳಾರತಿಗಳು ಆದವು. ದೇವಿ ಮೇಲೇಳಲಿಲ್ಲ. ಮತ್ತೊಂದು ಸುತ್ತು ಪೂಜೆ ನಡೆಯಿತು. ಆಗಲೂ ದೇವಿ ಮೇಲೇಳದೆ ಹಂಗೇ ಕೊಸರಾಡಿದಳು. ಮುಖಕ್ಕೆ ನೀರು ಚಿಮುಕಿಸಿದರು. ಆಗ ಕೊಂಚ ಗೆಲುವಾದ ದೇವಿ ಏನೇನೋ ಗೊಣಗತೊಡಗಿದಳು. ದೇವಿ ಯಾವತ್ತೂ ಹೀಗೆ ಗೊಣಗಿದ್ದನ್ನ ಕಂಡಿರದಿದ್ದ ಮೇಳದ ಮೇಷ್ಟ್ರು ತಾರಕದಲ್ಲಿ ಹಾರ್ಮೋನಿಯಂ ನುಡಿಸಿ ಅವಳನ್ನು ಪ್ರಚೋದಿಸಲು ನೋಡಿದರು. ಪ್ರಯೋಜವನಾಗಲಿಲ್ಲ. ಪಾತ್ರಧಾರಿಯೊಳಗೆ ಮೈದುಂಬಿಕೊಂಡಿರುವ ದೇವಿ ಏನನ್ನೋ ಕೇಳುತ್ತಿದ್ದಾಳೆ, ಅದು ಇವರಿಗೆ ಅರ್ಥವಾಗುತ್ತಿಲ್ಲ ಅಂತ ಕೆಲ ಭಕ್ತರು ಮಾತನಾಡಿಕೊಳ್ಳತೊಡಗಿದ್ದರೆ, `ಎಲೈ ಚಂಡಿಯೇ ಈಗಿಂದೀಗಲೇ ನಿನ್ನ ರಕ್ತವನ್ನು ಹೀರಿ ಬಿಡುವೆ, ಶಹಬ್ಬಾಷ್,’ ಅನ್ನುತ್ತಾ ಹೆಗಲ ಮೇಲೆ ಗದೆಯನ್ನೊತ್ತು ರಕ್ತಬಿಜಾಸುರ ಗರ್ಜಿಸುತ್ತಿದ್ದಾನೆ. ಮೇಳ ಕಲಿಸಿದ್ದ ಮೇಷ್ಟ್ರು ಎಷ್ಟೇ ಸನ್ನೆ ಮಾಡಿದರೂ ಅದನ್ನು ಗಮನಿಸುವ ಸ್ಥಿತಿಯಲ್ಲಿ ಅವನಿರಲಿಲ್ಲ. ಅಷ್ಟರಲ್ಲಿ ದೇವಿ ಮೇಲೆದ್ದಳು. ನಿಂತಲ್ಲಿ ನಿಲ್ಲಲಾಗದೆ ತಟ್ಟಾಡುತ್ತಾ ರಕ್ತ ಬೀಜಾಸುರನತ್ತ ನಡೆದಳು. ಆಗ ಸ್ಟೇಜಿನ ಮೇಲಕ್ಕೆ ಹೋದ ಮೇಸ್ಟ್ರು ಅದೇನು ಹೇಳಿದರೋ, ಅದೇನು ಮಾಡಿದರೋ ಅಂತೂ ತಟ್ಟಾಡುತ್ತಾ ಬಂದ ದೇವಿ ಒಮ್ಮೆ ಹೂಂಕರಿಸಿ ಕೈಯ್ಯಲ್ಲಿದ್ದ ಎರಡೂ ಕತ್ತಿಗಳನ್ನು ರಕ್ತಬಿಜಾಸುರನ ಕುತ್ತಿಗೆಗೆ ಇಟ್ಟಳು. ರಕ್ತಬೀಜಾಸುರ ನಿರಾಯಾಸವಾಗಿ ಸೋಲೊಪ್ಪಕೊಳ್ಳುವ ಮೂಲಕ ಆ ಸಲದ ಮೇಳ ಮುಗಿದಿತ್ತು.
ಅವತ್ತು ಏನು ನಡೆದಿತ್ತು ಅನ್ನುವುದು ಸುಮಾರು ದಿನಗಳಾದ ಮೇಲೆ ತಿಳಿದಿತ್ತು. ಏನಾಗಿತ್ತು ಅಂದರೆ, ರಾತ್ರಿಯಿಡೀ ಕುಣಿದಿದ್ದ, ದೊಡ್ಡ ದನಿಯಲ್ಲಿ ಅರುಚಿಕೊಂಡಿದ್ದ ದೇವಿಯ ಪಾತ್ರದಾರಿಗೆ ಬೆಳಗಿಜಾವದಲ್ಲಿ ಇನ್ನೇನು ಯುದ್ಧದ ದೃಶ್ಯ ಬರಬೇಕು ಅನ್ನುವಷ್ಟರಲ್ಲಿ ಗಂಟಲು ಕಟ್ಟಿ ಉಸಿರು ಹೊರಡದಂತಾಗಿತ್ತು. ಇಡೀ ನಾಟಕದ ಗಮ್ಮತ್ತು ಇರುವುದೇ ಈ ಕೊನೆಯ ದೃಶ್ಯದಲ್ಲಿ. ಹಂಗಾಗಿ ಆ ಪಾತ್ರಧಾರಿ ಗಾಬರಿಗೊಂಡಿದ್ದಾನೆ. ಅವನ್ಯಾರೋ ಪುಣ್ಯಾತ್ಮ ಒಂದು ಗುಟುಕು ಬಿಸ್ಕತ್ ಬ್ರ್ಯಾಂಡಿ ಕುಡಿದು ಬಿಡು ಎಲ್ಲಾ ಸರಿಯಾಗಿ ಬಿಡುತ್ತೆ ಅಂದಿದ್ದಾನೆ. ಹಂಗಂತ ಅಂದವನೇ ಅವನೇ ತಂದೂ ಕೊಟ್ಟಿದ್ದಾನೆ. ಸರಿ ಗಂಟಲು ಸರಿಯಾದರೆ ಸಾಕು ಅಂತ ಒಂಚೂರಿನ ಬದಲು ಜಾಸ್ತಿಯೇ ಕುಡಿದಿದ್ದಾರೆ. ನಂತರ ಸ್ವಯಂ ವೈದ್ಯನಾಗಿ ಇನ್ನೊಂದಿಷ್ಟು ಕುಡಿದರೆ ಗಂಟಲು ಪೂರಾ ಸರಿಯಾಗೇ ಬಿಡಬಹುದು ಅನ್ನುವ ಲೆಕ್ಕಾಚಾರದಲ್ಲಿ ಮತ್ತೂ ಕುಡಿದಿದ್ದಾರೆ. ಮೇಳದ ಉಮೇದಿನಲ್ಲಿದ್ದ ಸಂಜೆ ಸರಿಯಾಗಿ ಊಟ ಕೂಡ ಮಾಡದಿದ್ದ ಈ ಪಾತ್ರಧಾರಿಯೊಳಗೆ ಹೊಟ್ಟೆಯೊಳಗೆ ಬಿಸ್ಕತ್ ಬ್ರ್ಯಾಂಡಿ ಸರಿಯಾಗೇ ಕೆಲಸ ಮಾಡಲು ಶುರುವಿಟ್ಟುಕೊಂಡು ಬಿಟ್ಟಿತ್ತು.
ಮೇಳದಲ್ಲಿ ಹಿಂಗೆ ದುಷ್ಟ ಸಂಹಾರಕ್ಕಾಗಿ ಹೂಂಕರಿಸುತ್ತಿದ್ದ ಈ ಪಾತ್ರಧಾರಿ ಮುಂದೊಂದು ದಿನ ಸಣ್ಣದೊಂದು ಆಸ್ತಿಯ ವಿಚಾರಕ್ಕಾಗಿ ತಾನೇ ರಾಕ್ಷಸನಾಗಿಬಿಟ್ಟಿದ್ದರು. ನಾನಾಗ ಹೈಸ್ಕೂಲಿನಲ್ಲಿ ಓದುತ್ತಿದ್ದೆ. ಅವತ್ತು ಶನಿವಾರ. ಮಾರ್ನಿಂಗ್ ಕ್ಲಾಸನ್ನು ಮುಗಿಸಿಕೊಂಡು ಗೆಳೆಯರೆಲ್ಲಾ ಊರಿನ ಹಾದಿ ಹಿಡಿದಿದ್ದಾಗ ದೂರದಿಂದಲೇ ನನ್ನೂರಿನ ಕಡೆಯಿಂದ ಹಿಂದೆಂದೂ ಕೇಳಿರದಂಥ ದೊಡ್ಡದೊಂದು ಗಲಾಟೆಯ ಸದ್ದು ಕೇಳಿಸುತ್ತಿತ್ತು. ಅವಾಚ್ಯ ಬೈಗುಳಗಳು, ಗಾಬರಿಯ ಜೋರು ಕೂಗುಗಳು, ಅಳುತ್ತಿರುವ ಸದ್ದುಗಳು ನಮ್ಮನ್ನು ದಂಗು ಬಡಿಸಿದ್ದವು. ಕುಡುಗೋಲು, ಕೊಡಲಿ, ದೊಣ್ಣೆಗಳನ್ನಿಡಿದು ಹೊಡೆದಾಡಿದ್ದನ್ನು ಆವರೆಗೂ ನೋಡಿರದಿದ್ದ ನಮಗೆ ಅದು ಏನಿರಬಹುದು ಅಂತ ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಆದರೂ ಏನೋ ನಡೆಯ ಬಾರದ್ದು ನಡೆಯುತ್ತಿದೆ ಅನ್ನುವುದು ಖಾತ್ರಿಯಾಗಿ ಒಂದೇ ಉಸುರಿಗೆ ಅತ್ತ ಓಡಿದ್ದೆವು. ಹೋಗಿ ನೋಡಿದರೆ ಅದೇ ತಾನೇ ಕೊಯ್ಲು ಮುಗಿದಿದ್ದ ಹೊಲಮಾಳದಲ್ಲಿ ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುತ್ತಿದ್ದರು. ಕೆಲವರು ನೆಲಕ್ಕೆ ಬಿದ್ದು ಉರುಳಾಡುತ್ತಿದ್ದರು. ಕೆಲವರ ಮೈಯ್ಯಿಂದ ರಕ್ತ ಸುರಿಯುತ್ತಿತ್ತು. ಹೆಂಗಸರು ಮಕ್ಕಳು ಬಾಯಿ ಬಡಿದುಕೊಳ್ಳುತ್ತಿದ್ದರು. ಊರಂಥ ಊರಿನ ಜನವೆಲ್ಲಾ ಅಲ್ಲಿ ಜಮಾಯಿಸಿತ್ತು. ಅವರಲ್ಲಿ ಕೆಲವರು ಹೊಡೆದಾಟವನ್ನು ಬಿಡಿಸಲು ಹೆಣಗಾಡುತ್ತಿದ್ದರು. ಮತ್ತೆ ಕೆಲವರು ಬಿದ್ದಿದ್ದವರ ಹಾರೈಕೆಯಲ್ಲಿ ತೊಡಗಿದ್ದರು. ಇಷ್ಟರ ನಡುವೆಯೂ ಹೊಡೆದಾಟ ಮುಂದುವರೆದೇ ಇತ್ತು. ಯಾರು ಯಾರ ಕಡೆಯವರು ಅಂತ ನನಗೆ ಗೊತ್ತಾಗದಿದ್ದರೂ ಈ ದೇವಿಯ ಪಾತ್ರಧಾರಿ ತನ್ನ ಕೈಯ್ಯಲ್ಲಿದ್ದ ದೊಣ್ಣೆಯಿಂದ ತಲೆಬಿಚ್ಚಿಕೊಳ್ಳುವಂತೆ ಒಬ್ಬನಿಗೆ ಹೊಡೆದದ್ದು, ಹೊಡೆಸಿಕೊಂಡವನು ದೊಪ್ಪನೆ ನೆಲಕ್ಕೆ ಬಿದ್ದದ್ದನ್ನು ದೂರದಿಂದಲೇ ನೋಡಿದ ನಾನು ನಿಂತಲ್ಲೇ ನಡುಗಿ ಹೋಗಿದ್ದೆ. ಪೊಲೀಸಿನವರಿಗೆ ಯಾರು ಸುದ್ದಿ ಮುಟ್ಟಿಸಿದ್ದರೊ ಏನೋ ನಾವಿನ್ನೂ ಅಲ್ಲಿ ನಿಂತು ನೋಡುತ್ತಿರುವಾಗಲೇ `ಪೊಲೀಸ್ ಜೀಪ್, ಪೊಲೀಸ್ ಜೀಪ್’ ಅಂತ ಯಾರೋ ಜೋರಾಗಿ ಕೂಗಿಕೊಂಡರು. ಅದಕ್ಕಾಗೇ ಕಾಯುತ್ತಿದ್ದರೇನೋ ಅನ್ನುವಂತೆ ಏಟು ತಿಂದು ಕೆಳಗೆ ಬಿದ್ದಿದ್ದವರನ್ನು ಬಿಟ್ಟು ಉಳಿದವರು ಕಣ್ಣು ಮುಚ್ಚಿ ಬಿಡುವುದರೊಳಗೆ ದೇವಿ ಪಾತ್ರಧಾರಿಯೂ ಎಲ್ಲರೂ ಸೇರಿದಂತೆ ಅಲ್ಲಿಂದ ಮಾಯವಾಗಿದ್ದರು. ಹೊಡೆದಾಟ ಮುಗಿದಿತ್ತು. ಆದರೆ ಹಂಗೆ ಕೂಗಿಕೊಂಡದ್ದು ಬಿಟ್ಟರೆ ಪೊಲೀಸ್ ಜೀಪ್ ಬರಲೇ ಇಲ್ಲ. ದೇವಿ ಮತ್ತು ರಕ್ತಬೀಜಾಸುರನ ಪಾತ್ರಧಾರಿಗಳು ತೀರಿಕೊಂಡು ಸುಮಾರು ವರ್ಷಗಳೇ ಆಗಿವೆ. ಅಂತೆಯೇ ಮೇಳ ಮತ್ತು ನಾಟಕಗಳೂ ನಿಂತು ಹೋಗಿವೆ. ಎಲ್ಲ ಹಳ್ಳಿಗಳಂತೆ ನನ್ನ ಹಳ್ಳಿಯೂ ವಿಘಟನೆಯ ಭರದಲ್ಲಿ ಹಳ್ಳಿತನವನ್ನು ಕಳೆದುಕೊಂಡಿದೆ. ಆದರೆ ಆಗ ಆಡುತ್ತಿದ್ದ ಆ ಮೇಳಗಳು, ಅವುಗಳಲ್ಲಿ ಮಾಡುತ್ತಿದ್ದ ಆ ದೇವಿ ಮತ್ತು ರಕ್ತಬೀಜಾಸುರನ ಪಾತ್ರಗಳು ಈ ಚಣಕ್ಕೂ ನನ್ನೊಳಗೆ ಜೀವಂತವಾಗಿವೆ.
(ಹಿಂದಿನ ಕಂತು: ಮುಗುದನೊಬ್ಬನ ಮುನಿಸು ಮತ್ತು ನೆಲದ ನೆರಳ ಹಂಬಲದವರು)

ಎಸ್. ಗಂಗಾಧರಯ್ಯ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕುವಳ್ಳಿಯವರು. ಪ್ರಸ್ತುತ ವಾಸ ತಿಪಟೂರಿನಲ್ಲಿ. ಕಥಾ ಸಂಕಲನ: ನವಿಲ ನೆಲ, ಒಂದು ಉದ್ದನೆಯ ನೆರಳು, ದೇವರ ಕುದುರೆ, ಮಣ್ಣಿನ ಮುಚ್ಚಳ, ಎರೆ ನೆತ್ತಿ -ಈ ತನಕದ ಕಥೆಗಳು, ಕಾದಂಬರಿ: ಗಂಗಪಾಣಿ, ವ್ಯಕ್ತಿಚಿತ್ರ ಸಂಪುಟ: ಬಯಲ ಪರಿಮಳ, ಅನುವಾದ: `ವೈಕಂ ಕಥೆಗಳು’, ಲೋರ್ಕಾ ನಾಟಕ-`ಎರ್ಮಾ’, ಲೋರ್ಕಾಕಾವ್ಯ-`ಚರಮಗೀತೆ’, `ಹಲವು ರೆಕ್ಕೆಯ ಹಕ್ಕಿʼ-ವಿವಿಧ ಲೇಖಕರ ಕಥೆಗಳು, ಟರ್ಜೆನೇವ್ರ `ಬೇಟೆಗಾರನ ಚಿತ್ರಗಳು’, ದಾರಿಯೋ ಫೋ ನಾಟಕ-`ಗುಲಾಬಿ ಗರ್ಭ’, ಮಾರ್ಕ್ವೆಜ್ ಸಂದರ್ಶನ-`ಫ್ರೇಗ್ರನ್ಸ್ ಆಫ್ ಗ್ವಾವ’, ಚಿಂಗೀಝ್ ಐತ್ಮತೋವ್ನ ಕಾದಂಬರಿ- `ಜಮೀಲಾ’, ಬುನಿನ್ ಕಥೆಗಳು, ಅರ್ನೆಸ್ಟ್ ಹೆಮಿಂಗ್ವೆ -ಇಂಡಿಯನ್ಕ್ಯಾಂಪ್ ಮತ್ತು ಇತರ ಕಥೆಗಳು, ಮಾರ್ಕ್ವೆಜ್ ಕಥೆಗಳು, ದಾರಿಯೋ ಫೋ ವಾಚಿಕೆ, ಲೋರ್ಕಾ ನಾಲ್ಕು ನಾಟಕಗಳು, ಇವರ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಅನುವಾದ – 1996), ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಕಥೆ – 2018), ಡಾ. ಬೆಸಗರಹಳ್ಳಿ ರಾಮಣ್ಣಕಥಾ ಪ್ರಶಸ್ತಿ(2018), ಶಿವಮೊಗ್ಗ ಕರ್ನಾಟಕ ಸಂಘದ ಡಾ.ಯು.ಆರ್.ಅನಂತಮೂರ್ತಿ ಪ್ರಶಸ್ತಿ.(2018), ತುಮಕೂರಿನ ವೀ.ಚಿ.ಪ್ರತಿಷ್ಠಾನದ ವೀ.ಚಿ.ಪ್ರಶಸ್ತಿ (2018), ಸೇಡಂನ ಅಮ್ಮ ಪ್ರಶಸ್ತಿ(2022), ಶಾ. ಬಾಲೂರಾವ್ ಅನುವಾದ ಪ್ರಶಸ್ತಿ(2023) ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.

