ಯಕ್ಷಗಾನ ಬಿಟ್ಟು ಗಂಭೀರವಾಗಿ ಯಾವುದಾದರೂ ನೌಕರಿ ಸೇರಿಕೊಂಡು ದುಡಿಯಬೇಕು ಇದು ನಮ್ಮ ತಂದೆಯ ವರಾತ. ಯಕ್ಷಗಾನ ಕಲಾವಿದನಿಗೇನು ಸಮಾಜದಲ್ಲಿ ಗೌರವವಿಲ್ಲ. ಅಷ್ಟಾಗಿ ಈಗಿನ ಕಾಲದಲ್ಲಿ ಯಕ್ಷಗಾನದವನಿಗೆ ಯಾರು ಹೆಣ್ಣು ಕೊಟ್ಟಾರು. ರಾತ್ರಿಯಿಡೀ ನಿದ್ದೆ ಬಿಡುವುದು, ಹಗಲು ನಿದ್ದೆ ಮಾಡುವುದು ಗೂಬೆಯಂತೆ. ಇದೇನು ಅಂಥಹ ಪುರುಷಾರ್ಥ ಸಾಧನೆಯ ಹಾದಿಯಲ್ಲ. ಇವುಗಳೆಲ್ಲ ನನ್ನ ತಂದೆಯವರ ಹಳವಂಡ. ತಂದೆಯವರ ಈ ಧೋರಣೆಯು ನನಗೇನೂ ಪರಿಣಾಮ ಬೀರದು. ಯಾಕೆಂದರೆ ಅವರು ಯಾವುದನ್ನೂ ಗಂಭೀರವಾಗಿ ಸ್ವೀಕರಿಸಿದವರಲ್ಲ. ಮನಸ್ಸಿಗನಿಸಿದ್ದನ್ನು ಕಾರಿಕೊಂಡಾರು. ಅಲ್ಲಿಗೆ ಮುಗಿಯಿತು. ನನ್ನ ಈಗಿನ ಸ್ಥಿತಿ ತಿಳಿದರೆ ಬಿರುಸಾದ ಬಾಣಗಳು ಬಂದಾವು ಅವರ ಬತ್ತಳಿಕೆಯಿಂದ.
ರವಿಶಂಕರ್ ಎಸ್. ಎಲ್. ಮತ್ತು ಇಟಗಿ ಮಹಾಬಲೇಶ್ವರ ಭಟ್ಟ, ಜಂಟಿಯಾಗಿ ಬರೆದ ಕತೆ “ಮನ್ವಂತರ” ನಿಮ್ಮ ಈ ಭಾನುವಾರದ ಓದಿಗೆ
“ಛೇ…. ಬದುಕು ಇಷ್ಟು ಭಾರವೇ” ಹೊಳೆದಂಡೆಯಲ್ಲಿ ಕುಳಿತು ನಾನು ತಲೆ ಕೆಡಿಸಿಕೊಂಡು ಯೋಚಿಸುತ್ತಿದ್ದೇನೆ. ಬಾರೆಬೈಲು ಗಿರೀಶ ಎನ್ನುವ ಹೆಸರಿನವನಾದ ನಾನು ಈಗಾಗಲೆ ಯಕ್ಷಗಾನ ರಂಗದಲ್ಲಿ ವೇಷಧಾರಿಯಾಗಿ ತುಂಬಾ ಪ್ರಸಿದ್ಧಿಯನ್ನು ಹೊಂದಿದ್ದೇನೆ. ಬಾಲ್ಯದಲ್ಲಿ ಬಡತನವು ಕಾಡಿದ್ದು ನಿಜ. ಇಂದು ಸಮಾಜದಲ್ಲಿ ಕಾಣಿಸಿಕೊಳ್ಳುವಲ್ಲಿ ನನ್ನ ತಪಸ್ಸು ಸಾಮಾನ್ಯವಾದದ್ದೇನಲ್ಲ. ಸವೆಸಿದ ಹಾದಿ ಸಾಕಷ್ಟು ಕಠಿಣತರವಾದದ್ದೆ. ಬೀಡಿ ಸೇದುತ್ತಲೇ ಚಹ ಕುಡಿಯುತ್ತ ದಿನ ಕಳೆಯವ ಅಪ್ಪ ಸೀನಯ್ಯ. ಊರವರಿಗೆಲ್ಲ ಬುದ್ದಿವಾದವೋ, ಉತ್ತಮ ಸಲಹೆಗಳನ್ನೋ ಕೊಡುತ್ತ ಎಲ್ಲರಿಗೂ ಅಚ್ಚುಮೆಚ್ಚಿನ ಸೀನಣ್ಣ. ಮನೆಯಲ್ಲಿ ಮಾತ್ರ ಶತಸೋಮಾರಿ. ಕೆಲಸ ಎನ್ನುವುದನ್ನು ಮಾಡಿಯೇ ಗೊತ್ತಿಲ್ಲ ಅವನಿಗೆ. ಅಮ್ಮ ಗೌರಮ್ಮ ಯಾವಾಗಲೂ ಚಟುವಟಿಕೆಯುಳ್ಳ ವ್ಯಕ್ತಿ. ಇದ್ದ ಪುಟ್ಟ ಹೊಲದಲ್ಲಿ ಆಯಾ ಕಾಲಕ್ಕಾಗುವ ದವಸ ಧಾನ್ಯಗಳನ್ನು ಬೆಳೆಯುವಳು. ತಮ್ಮ ಮನೆಯ ನೆಟ್ಟಿ-ಕೊಯ್ಲುಗಳಲ್ಲದೇ ಬೇರೆಯವರ ಮನೆಗೂ ಕೂಲಿಗೆ ಹೋಗುವುದು ಅನಿವಾರ್ಯವಾಗಿತ್ತು. ಆಕೆಯ ಶ್ರಮವನ್ನು ಹಾಗೂ ನಿಷ್ಠೆಯನ್ನು ಊರವರು ಬಾಯ್ತುಂಬ ಹೊಗಳುವರು.
ಹೀಗಿರುವ ದಂಪತಿಗಳ ನಾಲ್ಕು ಹೆರಿಗೆಗಳಲ್ಲಿ ಉಳಿದವನೇ ನಾನು. ಶಾಲಾ ದಿನಗಳಲ್ಲಿ ಚುರುಕಾಗಿಯೇ ಇದ್ದೆ, ಓದಿಗಿಂತಲೂ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಕುತೂಹಲವನ್ನು ಬೆಳೆಸಿಕೊಂಡಿದ್ದೆ. ಅಂತೂ ಇಂತೂ ಪಿಯೂಸಿ ಮುಗಿದಿತ್ತು. ಅಮ್ಮನಿಗಾದರೋ ನಾನು ಟಿಸಿಹೆಚ್ ಮಾಡಿ ಶಾಲಾ ಅಧ್ಯಾಪಕನಾಗಲಿ ಎನ್ನುವ ಹಂಬಲ. ನನಗೆ ಯಕ್ಷಗಾನ ಕಲಾವಿದನಾಗಬೇಕೆಂಬ ತುಡಿತ ಅಂತರ್ನಿಹಿತ ಸ್ರೋತವಾಗಿ ಹೃದಯದಲ್ಲಿ ಹರಿಯುತಿತ್ತು. ಹೈಸ್ಕೂಲ್‌ನಲ್ಲಿ ನಾಟಕ ಮುಂತಾದ ಕಾರ್ಯಕ್ರಮಗಳಲ್ಲಿ ಮುಂದಾಗಿಯೇ ಭಾಗವಹಿಸುತ್ತಿದ್ದೆ. ಮಂಜುನಾಥ ಮಾಸ್ತರರು ಕಲಿಸಿ ಮಾಡಿಸಿದ ಯಕ್ಷಗಾನ ಬಯಲಾಟದಲ್ಲಿ ನರಕಾಸುರವಧೆಯ ಕೃಷ್ಣನಾಗಿ ಚೆನ್ನಾಗಿಯೇ ಅಭಿನಯಿಸಿ ಶಾಲೆಯಲ್ಲಿ ಹೆಸರುವಾಸಿಯಾಗಿದ್ದೆ. ಪಿ.ಯೂ.ಸಿ ಮುಗಿದ ಮೇಲೆ ಒಂದು ವರ್ಷ ಹಾಗೂ ಹೀಗೂ ತಿರುಗಾಡಿ ಕಾಲಹರಣವಾಯಿತು. ನಂತರ ಉಡುಪಿಯ ಯಕ್ಷಗಾನ ಕಲಾ ಕೇಂದ್ರಕ್ಕೆ ಸೇರಿಕೊಂಡೆ. ಊಟ-ವಸತಿಗಳೊಡನೆ ಎರಡು ವರ್ಷಗಳ ಕಾಲ ತರಬೇತಿಯು ನಡೆಯಿತು. ನೃತ್ಯದಲ್ಲಿ ಪರಿಣತಿಯನ್ನು ಸಾಧಿಸಿದ್ದ ನಾನು ಮೇಳ ಒಂದರಲ್ಲಿ ಪುಟ್ಟ ಕಲಾವಿದನಾಗಿ ಸೇರಿಕೊಂಡೆ. ಆಕರ್ಷಕ ಮೈಮಾಟ, ಚುರುಕಾದ ನಡೆಯಿಂದ ಜನರನ್ನು ಸೆಳೆಯುವ ಶಕ್ತಿಯಿಂದಾಗಿ ಸಹಜವಾಗಿಯೇ ಜನರು ಗುರುತಿಸಿದರು. ದೊಡ್ಡ ದೊಡ್ಡ ಮೇಳಗಳಲ್ಲಿ ಅವಕಾಶ ತಾನೇ ಹುಡುಕಿಕೊಂಡು ಬಂದಿತು. ನಾಯಕ ಪಾತ್ರಧಾರಿಯಾಗಿ ಇಂದು ಸ್ಥಾಪಿತ ಕಲಾವಿದ ನಾನು. ಶಿವ, ವಿಷ್ಣು, ಕೃಷ್ಣ, ರಾಮ, ದೇವೇಂದ್ರ, ಅರ್ಜುನ ಇಂತಹುವುಗಳೇ ನನ್ನ ಇಷ್ಟದ ಪಾತ್ರಗಳು. ನನ್ನ ಪಾತ್ರಗಳನ್ನು ನೋಡಲು ಜನರು ಮುಗಿಬೀಳುತ್ತಾರೆ. ಸಣ್ಣ ಪ್ರಾಯದಲ್ಲಿಯೇ ಪ್ರಖ್ಯಾತಿ ಹಾಗೂ ಹಣಗಳಿಕೆಯ ಮಟ್ಟ ಚೆನ್ನಾಗಿದ್ದರೂ ಅಹಂಕಾರವೆನ್ನುವ ಸರ್ಪ ಹೆಡೆ ಎತ್ತಲಿಲ್ಲ; ಇದು ನನ್ನ ಅದೃಷ್ಟ. ವಿದ್ಯೆಗೆ ವಿನಯವೇ ಭೂಷಣ ಇದು ನಾನು ನಂಬಿದ ಧ್ಯೇಯ. ಸಹ ಕಲಾವಿದರ ಒಟ್ಟಂದದ ಸಹಾನುಭೂತಿಯೇ ನನ್ನ ಸೌಭಾಗ್ಯವೆಂದು ನಂಬಿದ್ದೇನೆ.
ಇಷ್ಟೆಲ್ಲ ಇದ್ದರೂ ಇಂದು ಮಾತ್ರ ತಲೆ ಮೇಲೆ ಕೈ ಹೊತ್ತು ಕುಳಿತಿದ್ದೇನೆ. ಆಕಾಶವೇ ಕಳಚಿ ಬೀಳುತ್ತದೋ ಎಂದು ಭಾಸವಾಗುವಂತೆ ವಿಹ್ವಲ ಮನಸ್ಥಿತಿ ಆವರಿಸಿದೆ. ಹೌದು, ಇಂದು ನಾನು ಗುರುಗಳನ್ನು ನೋಡುವುದಕ್ಕೆಂದೇ ಅವರ ಮನೆ ಕಡೆಗೆÀ ಹೊರಟಿದ್ದೆ. ಹಾದಿಯಲ್ಲಿ ಹಸರಾಡಿಗುತ್ತು ಶಿವರಾಮ ಶೆಟ್ರು ಎದುರಾದರು. ಎಪ್ಪತ್ತರ ಪ್ರಾಯದ ನೇರ ಹಾಗೂ ನಿಷ್ಠೂರ ವ್ಯಕ್ತಿಯಾತ. ತುಂಬಾ ಹೊತ್ತು ಮಾತನಾಡಿದರು. ಹೊಸ ತಲೆಮಾರಿನ ಕಲಾವಿದರುಗಳಲ್ಲಿ ಅವರಿಗೆ ನಾನೆಂದರೆ ಇಷ್ಟವಂತೆ. “ಗಿರೀಶ ನೀನು ಚೆನ್ನಾಗಿ ಬೆಳೆದಿದ್ದೀಯಾ, ರಂಗದಲ್ಲಿ ಪಳಗಿದ್ದೀಯಾ” ಎಂದರು. “ವಿಷ್ಣು, ಕೃಷ್ಣ ಮುಂತಾದ ಪಾತ್ರಗಳಿಗೆ ಬದಲು ಯಾರನ್ನೂ ಯೋಚಿಸದಷ್ಟು ಚೆನ್ನಾಗಿ ಮಾಡುತ್ತೀಯಾ. ಸುಮಾರು ಅರವತ್ತು ವರ್ಷಗಳಿಂದ ನಾನು ಯಕ್ಷಗಾನದ ಖಾಯಮ್ ಪ್ರೇಕ್ಷಕ. ನೀ ಚೆಂದ ಮಾಡುತ್ತಿ ಮಹರಾಯ. ನಿನ್ನನ್ನು ಕಂಡಾಗ ಎರಡು ಮೆಚ್ಚುಗೆಯ ಮಾತುಗಳನ್ನಾಡದಿದ್ದರೆ ಆತ್ಮವಂಚನೆಯಾಗುತ್ತದೆ. ಒಳ್ಳೆಯದನ್ನು ಒಳ್ಳೆಯದೆಂದೇ ಹೇಳಬೇಕು. ಮೊನ್ನೆ ಕೆಂಜಾಲಬೈಲಿನ ಆಟದಲ್ಲಿ ದೇವವ್ರತನನ್ನು ನೋಡಿದೆ. ನಿಜವಾಗಿಯೂ ಶಿರಿಯಾರ ಮಂಜು ನಾಯ್ಕರನ್ನು ನೆನಪಿಸಿದ್ದೀಯಾ. ಪಾತ್ರಕೊಪ್ಪುವ ನಾಟ್ಯದ ತಿಳುವಳಿಕೆ, ಒಪ್ಪ ಓರಣದ ಆಕೃತಿ, ಮಾತುಗಾರಿಕೆಯ ಚಾಕಚಕ್ಯತೆ, ಪುರಾಣ ಜ್ಞಾನ ಇವುಗಳು ಒಬ್ಬ ಕಲಾವಿದನ ಮೂಲ ಬಂಡವಾಳ. ನಿನ್ನಲ್ಲಿ ಇವೆಲ್ಲವೂ ಹರಳುಗಟ್ಟಿವೆ. ಒಬ್ಬೊಬ್ಬ ಕಲಾವಿದನಲ್ಲಿ ಒಂದಲ್ಲಾ ಒಂದು ಕೊರತೆಯು ಇರುವುದು ಸಹಜವೆ. ಆದರೆ ನಿನ್ನಲ್ಲಿ ಆ ಯಾವ ಕೊರತೆಯನ್ನು ಗುರುತಿಸಲು ಆಗದು. ದೇವರು ಎಲ್ಲವನ್ನು ಕೊಟ್ಟಿದ್ದಾನೆ. ನೀನದನ್ನು ಸಮರ್ಪಕವಾಗಿಯೇ ಬಳಸಿಕೊಳ್ಳುತ್ತಿರುವೆ. ಮಾರ್ಗ ತಪ್ಪದೇ ಇದೇ ದಾರಿಯಲ್ಲಿ ನೀನು ಸಾಗಿದರೆ ಅಸಾಮಾನ್ಯ ಕಲಾವಿದನಾಗಿ ಈ ಯಕ್ಷಗಾನ ರಂಗವನ್ನು ಆಳುತ್ತೀಯಾ. ಖಂಡಿತಕ್ಕೂ ಮುಂದೆ ನಿನಗೆ ಉಜ್ವಲ ಭವಿಷ್ಯವಿದೆ. ಎಲ್ಲವೂ ಶುಭವಾಗಲಪ್ಪ” ಎಂದರು. ನನ್ನ ಮುಗುಳ್ನಗು ಅವರಾಡಿದ ಮಾತಿಗೆ ಮಾರುತ್ತರವಾಗಿತ್ತು. “ಶೆಟ್ಟರೆ, ಗುರುಗಳ ಮನೆಗೆ ಹೊರಟಿದ್ದೇನೆ. ನಿಮ್ಮ ಆಶಿರ್ವಾದ ಯಾವಾಗಲೂ ಹೀಗೆಯೇ ಇರಲಿ. ಮತ್ತೆ ಸಿಗೋಣ ಆಯಿತಾ” ಎಂದವನೆ ಮನಸ್ಸಿನಲ್ಲಿಯೇ ಗುನುಗುನಿಸುತ್ತ ಹೆಜ್ಜೆಗಳನ್ನು ಅವಸರಿಸಿದೆ.
ಇಂದು ನನ್ನ ಉನ್ನತಿಗೆ ತನ್ನ ಎಲ್ಲ ಶ್ರಮವನ್ನು ಧಾರೆ ಎರೆದ ಗುರುಗಳ ಎದುರು ಹೋಗುವಾಗ ಸಣ್ಣ ಅಳುಕು ಇದ್ದೇ ಇರುತಿತ್ತು. ಜಗುಲಿಯ ಮೇಲೆ ಪಂಚೆ-ಶಲ್ಯಗಳಿಂದ ಶೋಭಿಸುತ್ತ ಕುಳಿತಿದ್ದರು. “ಬಾರೋ ಗಿರೀಶ, ಬಾಯಾರಿಕೆಗೆ ಬೇಕಾ?” ಗುರುಗಳು ಸ್ವಾಗತಿಸಿದರು. ಉಭಯ ಕುಶಲೋಪರಿ ಆದ ಮೇಲೆ ನಾನೇ ಕೇಳಿದೆ. “ಗುರುಗಳೇ ನಾನು ಮೊನ್ನೆದಿನ ಮಾಡಿದ ಸುಧನ್ವ ಸರಿಯಾಯಿತಾ” ಎಂದೆ. ನನ್ನಲ್ಲಿ ಆತ್ಮವಿಶ್ವಾಸ ತುಂಬಿ ತುಳುಕುತಿತ್ತು. ಎಲೆ ಅಡಿಕೆ ಬಾಯಲ್ಲಿ ತುಂಬಿಕೊAಡಿದ್ದ ಗುರುಗಳಿಂದ ನುಡಿ ಹೊರಬರಲಿಲ್ಲ. ಉಗುಳು ನುಂಗುತ್ತಾ “ನೀನು ಮುಂದಿನ ಪ್ರದರ್ಶನದಲ್ಲಿ ದ್ರೌಪದಿಯಾಗಬೇಕು” ಎಂದರು. ವಿಚಿತ್ರವಾಗಿ ತೋರಿತು. ಯಾವಾಗಲೂ ಇಲ್ಲದ ಸೂಚನೆಯನ್ನು ಒಮ್ಮೆಲೇ ನೀಡಿದರು. “ಹಾಂ, ಗುರುಗಳೇ ನನ್ನ ನರ್ತನದಲ್ಲಿ, ಮಾತಿನಲ್ಲಿ ಕುಂದುಂಟಾಯಿತಾ?” ಎಂದೊರಲಿದೆ. ಅದಕ್ಕವರು “ಗಾಳಿ ನಾರಾಯಣ ಶೇರುಗಾರರಲ್ಲಿ ಹೋಗು. ಅವರಲ್ಲಿರುವ ಸ್ತ್ರೀಪಾತ್ರ ನಿರ್ವಹಣೆಯ ಕೌಶಲಗಳನ್ನು ಕರಗತ ಮಾಡಿಕೊ” ಎಂದರು. ಪಾರಂಪರಿಕ ಯಕ್ಷಗಾನದಲ್ಲಿ ಗಂಡಸರೇ ಹೆಣ್ಣುಪಾತ್ರಗಳನ್ನು ಮಾಡುವುದು ವಾಡಿಕೆಯಾಗಿ ಬೆಳೆದು ಬಂದಿದೆ. ಇಲ್ಲಿಯವರೆಗೆ ಹಲವಾರು ಪ್ರದರ್ಶನಗಳಲ್ಲಿ ವಿಭಿನ್ನ ಮನಸ್ಥಿತಿಯ ಪಾತ್ರಗಳನ್ನು ತೊಟ್ಟಿದ್ದೆನೇ ಹೊರತು ಸ್ತ್ರೀಪಾತ್ರಕ್ಕೆ ಒಡ್ಡಿಕೊಂಡಿರಲಿಲ್ಲ. ಅದಕ್ಕೆ ಒಪ್ಪುವ ನಯ-ನಾಜೂಕುಗಳು ನನ್ನದಲ್ಲವೆಂಬ ತಿಳುವಳಿಕೆ ನನಗಿತ್ತು. ಆ ಕುರಿತು ಲಕ್ಷ್ಯವನ್ನೂ ಕೊಟ್ಟಿರಲಿಲ್ಲ. ಜೊತೆಗಾರರಾಗಿ ಅಭಿನಯಿಸುತ್ತಿದ್ದ ಆರೂರು ಸರ್ವೋತ್ತಮ, ತಾಳಿಪಾಡಿ ವಿಠಲ ಕುಲಾಲ ಅವರ ಪಾತ್ರದೊಳಗಣ ತಾದಾತ್ಮ್ಯತೆಯನ್ನು ಕಂಡು ಸಂತಸ ಪಟ್ಟಿದ್ದೆ. ಆ ಕುರಿತು ಆಕರ್ಷಣೆ ಇದ್ದರೂ ನಾನೇ ಹೆಣ್ಣಾಗುವ ಆಲೋಚನೆಯನ್ನೇ ಮಾಡಿರಲಿಲ್ಲ. ಆದರೆ ಈಗ ಇದ್ದಕ್ಕಿದ್ದಂತೆ ತನ್ನ ಗುರುಗಳ ಆಣತಿಯನ್ನು ಕೇಳಿದಾಗ ಒಪ್ಪಿಕೊಳ್ಳಲಂತೂ ಸಾಧ್ಯವೇ ಇರಲಿಲ್ಲ. ಮೊದಲ ಬಾರಿಗೆ ಅವರಾಡಿದ ಮಾತಿಗೆ ತಿರುಗಿ ನುಡಿಯುವ ಧೈರ್ಯವನ್ನು ಮಾಡಿದೆ. “ಆಗದು ಗುರುಗಳೆ” ಎಂದೆ. “ಯಾಕೆ” ಎಂದರು. ಅದಕ್ಕೆ “ನನ್ನಿಂದ ನಿರ್ವಹಿಸಲು ಸಾಧ್ಯವಿಲ್ಲ. ನಾನದಕ್ಕೆ ಜನ ಅಲ್ಲ” ಎಂದೆ. “ಈಗ ನೀನು ಮಾಡುವ ಪಾತ್ರಗಳನ್ನು ನಾನು ಒಪ್ಪದಿದ್ದರೆ” ಎಂದರು. ನಾನಾವಾಗ ನಿರುತ್ತರನಾದೆ. “ಬರುವ ಹುಣ್ಣಿಮೆಯ ದಿನ ನಡೆಯುವ ಪಟೇಲರಮನೆಯ ಆಟಕ್ಕೆ ನೀನು ದ್ರೌಪದಿಯಾಗುತ್ತೀಯಾ. ಅಷ್ಟೆ” ಎಂದು ಎದ್ದು ನಡೆದೇ ಬಿಟ್ಟರು.
ಬಡಪೆಟ್ಟಿಗೆ ಬಗ್ಗುವ ಜನರಲ್ಲ ಅವರು. ಹಾಗೆಂದು ನಾನು ಹೌದೆಂದು ತಲೆ ತಗ್ಗಿಸಿ ಸ್ತ್ರೀಪಾತ್ರವಾಗುವುದಕ್ಕೆ ಮನಸ್ಸು ಒಪ್ಪುವುದೇ ಇಲ್ಲ. ಆ ವೇಷಭೂಷಣಗಳೇ ಒಂದು ತರಹ ಹಿರಿಗಲು. ಸೀರೆ ಉಡಬೇಕು, ಕುಪ್ಪಸ ತೊಡಬೇಕು, ಲಂಗದೊಳಗೆ ಕಾಲಾಡಿಸಿ ಕಿರು ಹೆಜ್ಜೆ ಹಾಕಬೇಕು. ಅಮಮ, ಎಣಿಸಿದರೇ ಮೈ ಜೀಕರಿಸುತ್ತದೆ. ಹೇಗೆ ಇದನ್ನು ನಿಭಾಯಿಸುವುದು ಎನ್ನುವುದೇ ಸಮಸ್ಯೆಯಾಗಿ ಕಾಡುತ್ತಿದೆ. ಬದುಕು ಭಾರವಾಗಿ ಕಂಡಿದ್ದು ಅದಕ್ಕಾಗಿ. ನಾನು ಸ್ತ್ರೀಪಾತ್ರ ಮಾಡುವುದೇ ಅನಿವಾರ್ಯ ಎಂದಾದ ಮೇಲೆ ನಾನು ನೇರವಾಗಿ ಹೋದದ್ದೇ ನಗಾರಿ ಮನೆಗೆ. ಅವರ ಕುಟುಂಬಕ್ಕೆ ತಲೆತಲಾಂತರದಿಂದ ಬಂದ ಹೆಸರು ಇದು. ನಗಾರಿ ಭಾರಿಸುವ ಉದ್ಯೋಗದವರಾಗಿದ್ದರಂತೆ ಇವರ ಹಿರಿಯರು. ವಾಡಿಕೆಯಿಂದ ಈ ಹೆಸರೇ ಅವರ ಮನೆತನಕ್ಕೆ ಸ್ಥಿರವಾಗಿ ಅಂಟಿಕೊಂಡಿದೆ. ನಾವೆಲ್ಲ ನಗಾರಿ ಎಂತಲೇ ಕರೆಯುವುದು. ಯಕ್ಷಗಾನದಲ್ಲಿ ಅಷ್ಟಾಗಿ ಆಸಕ್ತಿ ಇಲ್ಲದಿದ್ದರೂ ಆಗಾಗ ನನ್ನ ವೇಷಗಳನ್ನು ನೋಡುತ್ತಿದ್ದ. ಸುಮಾರಿನ ಮಟ್ಟಿನ ವಿಮರ್ಶೆಯನ್ನು ಮಾಡುತ್ತಿದ್ದ. ಆದರೆ ಯಾವತ್ತೂ ನನ್ನನ್ನು ಕುಂದಿಸುವ ಮನಸ್ಸು ಮಾಡಿದವನಲ್ಲ. ನಾನವನ ಮನೆಗೆ ಹೋಗುವಷ್ಟರಲ್ಲಿ ಆತ ಹೊರಗೆಲ್ಲೋ ಹೋಗಿದ್ದ. ಬಂದಾಗ ನನ್ನ ನಿರುತ್ಸಾಹವನ್ನು ಗಮನಿಸಿದ, ಅಕ್ಕರೆಯಿಂದ “ಏನಾಯ್ತೋ ಗಿರಿ” ಎಂದು ಮಾತಾಡಿಸಿದ. ನನ್ನೆಲ್ಲ ಅಳಲನ್ನು ತೋಡಿಕೊಂಡೆ. ಪ್ರಶಾಂತನಾದರೋ ಇದನ್ನು ಕೇವಲವಾಗಿ ತೆಗೆದುಕೊಂಡ. “ಅಲ್ಲಯ್ಯಾ ಇದ್ಯಾವ ಸೀಮೆ ಸಮಸ್ಯೆ ಮಹರಾಯ” ಎಂದ. ಪ್ರಶಾಂತನ ಮಾತು ತುಸು ಬೆಳಕು ಮೂಡಿಸಿದ್ದು ನಿಜ. ಮುಂದುವರೆದ ಆತ, “ನನ್ನಿಂದ ಅದು ಸಾಧ್ಯವಿಲ್ಲ ಎಂದು ಹೇಳಿಬಿಡು ನಿನ್ನ ಗುರುಗಳಲ್ಲಿ” ಎಂದ. ಮುಂದುವರೆದು “ಆ ವೇಷಭೂಷಣಗಳಲ್ಲಿ ನಿನ್ನನ್ನು ಕಲ್ಪಸಿಕೊಳ್ಳಲೇ ಸಾಧ್ಯವಿಲ್ಲ” ಎಂದ. “ನೀನು ಸೀರೆಯುಟ್ಟು ನುಲಿಯುವುದು ಅಸಹ್ಯದ ಪರಮಾವಧಿ” ಎಂದ. “ನಿನ್ನ ಇಲ್ಲಿಯವರೆಗಿನ ಕರಿಯರ್ ಹಾಳಾಗುತ್ತದೆ ಕಣೋ”. “ಯಾವ ಕಾರಣಕ್ಕೂ ನೀನು ಸ್ತ್ರೀಯಾಗುವುದು ನನಗೆ ಇಷ್ಟವಿಲ್ಲ” ಎಂದ. “ನೀನು ಹೆಣ್ಣಾಗಿ ಅಭಿನಯಿಸುವುದಕ್ಕೆ ಪ್ರಾರಂಭಿಸಿದರೆ ಮುಂದೊಂದು ದಿನ ಹೆಣ್ಣೇ ಆಗಿಬಿಡುತ್ತಿ” ಎಂದು ಜೋರಾಗಿ ನಕ್ಕ. “ನೀನೇ ಹೇಳುತ್ತಿದ್ದೆಯಲ್ಲ, ತುಂಬಾ ಒಳ್ಳೆಯ ಸ್ತ್ರೀವೇಷಧಾರಿಯಾಗಿದ್ದ ಶಿವಶಂಕರ ರಾವ್ ಮದುವೆಯಾದಮೇಲೆ ಅವನ ಹೆಂಡತಿ, ಹೆಣ್ಣುವೇಷ ಒಂದನ್ನು ಬಿಟ್ಟು ಬೇರೆ ಯಾವ ವೇಷ ಬೇಕಾದರೂ ಮಾಡಿ ಎಂದು ತಾಕೀತು ಮಾಡಿದ್ದನ್ನು” ನೆನಪಿಸಿದ. ಅದಕ್ಕಾಗಿ ಆತ ಯಕ್ಷಗಾನವನ್ನೆ ಬಿಟ್ಟು ಶಾಮಿಯಾನ ಖುರ್ಚಿ ವ್ಯವಹಾರ ಶುರು ಮಾಡಿ ಬದುಕಿರುವುದು ನನ್ನ ಕಣ್ಣ ಮುಂದೆ ಬಂತು. “ಅಲ್ಲವೋ ಗಿರಿ, ಸುಖಾಸುಮ್ಮನೆ ಮಂಡೆಬಿಸಿ ಮಾಡಿಕೊಳ್ಳಬೇಡ. ನಿರ್ದಾಕ್ಷಿಣ್ಯವಾಗಿ ನಿರಾಕರಿಸು” ಸಲಹೆಯನ್ನು ನೀಡಿದ. ಈ ರೀತಿ ಹೇಳುವುದು ಅವನಿಗೋ ಸುಲಭ. ನನಗೆ ಒದಗಿದ ಧರ್ಮ ಸಂಕಟವನ್ನು ಹೇಳುವುದಾದರೂ ಹೇಗೆ? ಅವನಿಗದು ಅರ್ಥವಾಗುವುದಿಲ್ಲ. ಅತ್ತ ಧರಿ ಇತ್ತ ಪುಲಿ ಎಂಬಂತಾಗಿದೆ ನನ್ನ ಸ್ಥಿತಿ. ಅವನು ಛೇಡಿಸುತ್ತಾನೆ. ಹಂಗಿಸುತ್ತಾನೆ. ಆದರೆ ನಾನು ನನ್ನ ವೃತ್ತಿಧರ್ಮವನ್ನು ಮೀರುವುದಕ್ಕಾಗುತ್ತದೆಯೇ? ಗುರುಗಳು ನನ್ನ ಶ್ರೇಯಸ್ಸನ್ನು ಬಯಸಿದವರು. ಈಗವರ ಮಾತನ್ನು ಧಿಕ್ಕರಿಸಿ ನಡೆಯಲಾರೆ. ಅವರು ಹೇಳಿದ ಹಾಗೆ ಆ ಪಾತ್ರವನ್ನೂ ಮಾಡಲಾರೆ. ನಗಾರಿಯ ಮಾತುಗಳು ಕೋಲಾಹಲದ ಸದ್ದಾಗಿ ಕಿವಿಯಲ್ಲಿ ಗುಯ್ಯಿ ಗುಡುತ್ತಿದೆ. ಎಲ್ಲರೂ ನನ್ನನ್ನು ಕೀಳಾಗಿ ಕಾಣುತ್ತಾರೆ. ಇಲ್ಲಿಯವರೆಗೆ ಗಳಿಸಿದ ಕೀರ್ತಿ ಮಣ್ಣು ಪಾಲಾಗುತ್ತದೆ. ಮನಸ್ಸಿಗೊಪ್ಪದ ಸ್ತ್ರೀಪಾತ್ರ ಮಾಡುವುದಕ್ಕಿಂತ ಸಾಯುವುದೇ ಲೇಸು. ನಗಾರಿ ಇಷ್ಟು ಹೇಳಿದ ಮೇಲಂತೂ ಬದುಕುವ ಯಾವ ಭರವಸೆಯೂ ಉಳಿಯಲಿಲ್ಲ. ಅವನಲ್ಲಿ ಏನನ್ನೂ ಹೇಳದೆ ಹೊರಟೆ.
ಎಲ್ಲಿಗೆ? ಪ್ರಶ್ನೆ ಬೃಹದಾಕಾರವಾಗಿ ಕಾಡಿತು. ಮನೆಗೆ ಹೋದರೆ, ಅಲ್ಲಿ ಅಪ್ಪನ ವ್ಯಂಗ್ಯಭರಿತ ಮಾತುಗಳನ್ನು ಕೇಳ ಬೇಕಾಗುತ್ತದೆ. ಮನಸ್ಸಿಗಾದ ಗಾಯ ಮತ್ತಿಷ್ಟು ಉಲ್ಭಣಿಸುತ್ತದೆ. ಅಪ್ಪನಿಗೆ ಯಾವತ್ತೂ ನಾನು ಯಕ್ಷಗಾನ ಕಲಾವಿದನಾಗುವುದು ಇಷ್ಟವಿಲ್ಲದ ಮಾತು. ಆಗಾಗ ನಾಲಿಗೆಯ ಹರಿಬಿಟ್ಟು ಇರಿಯುತ್ತಿರುತ್ತಾರೆ. ಯಕ್ಷಗಾನ ಬಿಟ್ಟು ಗಂಭೀರವಾಗಿ ಯಾವುದಾದರೂ ನೌಕರಿ ಸೇರಿಕೊಂಡು ದುಡಿಯಬೇಕು ಇದು ನಮ್ಮ ತಂದೆಯ ವರಾತ. ಯಕ್ಷಗಾನ ಕಲಾವಿದನಿಗೇನು ಸಮಾಜದಲ್ಲಿ ಗೌರವವಿಲ್ಲ. ಅಷ್ಟಾಗಿ ಈಗಿನ ಕಾಲದಲ್ಲಿ ಯಕ್ಷಗಾನದವನಿಗೆ ಯಾರು ಹೆಣ್ಣು ಕೊಟ್ಟಾರು. ರಾತ್ರಿಯಿಡೀ ನಿದ್ದೆ ಬಿಡುವುದು, ಹಗಲು ನಿದ್ದೆ ಮಾಡುವುದು ಗೂಬೆಯಂತೆ. ಇದೇನು ಅಂಥಹ ಪುರುಷಾರ್ಥ ಸಾಧನೆಯ ಹಾದಿಯಲ್ಲ. ಇವುಗಳೆಲ್ಲ ನನ್ನ ತಂದೆಯವರ ಹಳವಂಡ. ತಂದೆಯವರ ಈ ದೋರಣೆಯು ನನಗೇನೂ ಪರಿಣಾಮ ಬೀರದು. ಯಾಕೆಂದರೆ ಅವರು ಯಾವುದನ್ನೂ ಗಂಭೀರವಾಗಿ ಸ್ವೀಕರಿಸಿದವರಲ್ಲ. ಮನಸ್ಸಿಗನಿಸಿದ್ದನ್ನು ಕಾರಿಕೊಂಡಾರು. ಅಲ್ಲಿಗೆ ಮುಗಿಯಿತು. ನನ್ನ ಈಗಿನ ಸ್ಥಿತಿ ತಿಳಿದರೆ ಬಿರುಸಾದ ಬಾಣಗಳು ಬಂದಾವು ಅವರ ಬತ್ತಳಿಕೆಯಿಂದ.
ಇನ್ನು ಅಮ್ಮನ ಮಡಿಲು ನಿಜಕ್ಕೂ ಸಾಂತ್ವನದಾಶ್ರಯ. ಮತ್ತೆ ಮತ್ತೆ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಾಳೆ. ಸೀಮಿತ ಪ್ರಪಂಚದ ಆಕೆ ತನ್ನ ಕಣ್ಣುಗೊಂಬೆ ನಾನು ಅಂತ ತಿಳಿದಿದ್ದಾಳೆ. ಅಪ್ಪನ ವ್ಯಂಗ್ಯದ ನುಡಿಗಳಿಗೆ ಆಗಾಗ ಗುರಾಣಿಯಾಗುತ್ತಾಳೆ. ಒಮ್ಮೆ ಯಕ್ಷಗಾನದಿಂದ ನೀನು ಬಾರೀ ದುಡಿದೆ ಎಂದು ಅಪ್ಪ ಹಿಯಾಳಿಸಿದಾಗ, ನಿಮ್ಮ ಆಸ್ಪತ್ರೆಯ ಖರ್ಚನ್ನು ನಿಭಾಯಿಸಿದ್ದೇ ಯಕ್ಷಗಾನದ ದುಡಿಮೆಯ ಪ್ರತಿಫಲ ಎಂದು ಸಮಜಾಯಿಷಿಕೆ ಕೊಟ್ಟಿದ್ದಳು. ವ್ಯಾವಹಾರಿಕ ಪ್ರಪಂಚದಲ್ಲಿ ಇನ್ನೊಬ್ಬರಿಗೆ ತಿಳಿಯದಂತೆ ಮೋಸ ಮಾಡಿಯಾದರೂ ತನ್ನ ಲಾಭವನ್ನು ಮಾತ್ರ ನೋಡಿಕೊಳ್ಳುವವ ಬುದ್ದಿವಂತ ಎಂಬ ಅನಿಸಿಕೆ ಸಮಾಜದಲ್ಲಿ ಹಾಸುಹೊಕ್ಕಾಗಿರುವಾಗ ನನ್ನಮ್ಮ ನಿಜಕ್ಕೂ ಮುಗ್ಧಳು. ಅವಳಿಗೆ ಇಂತಹ ಜಂಜಾಟಗಳೆಲ್ಲ ಅರ್ಥವಾಗದು. ಮತ್ತೆ ಅಮ್ಮನಿಗೆ ಇದೆಲ್ಲ ಗೊತ್ತಾಗಿ ಮನಸ್ಸು ನೊಂದುಕೊಳ್ಳಲೂ ಬಾರದು.
ಅದಕ್ಕಾಗಿ ನೇರವಾಗಿ ಊರಿನ ಹೊರಗಿರುವ ಈ ಹೊಳೆದಂಡೆಗೆ ಬಂದೆ. ಸಾವಿರ ಬಾರಿ ಯೋಚಿಸಿದರೂ ಸಾಯುವುದಲ್ಲದೇ ಬೇರೆ ವಿಧಿ ಗೋಚರಿಸುವುದಿಲ್ಲ. ಬಣ್ಣಬಣ್ಣದ ಕಲಾಪ್ರಪಂಚ ನನಗೆ ಕತ್ತಲಾಗಿ ಹೋಯಿತು. ಹರಿಯುವ ಹೊಳೆಯನ್ನೇ ದಿಟ್ಟಿಸಿದರೆ ತರಗೆಲೆಯೊಂದು ತೇಲುತ್ತಿದೆ. ಆ ಎಲೆಯ ಮೇಲೆ ಕೆಂಪಿರುವೆ ಕುಳಿತಿದೆ. ಬದುಕಿಗಾಗಿ ತರಹರಿಸುತ್ತಿದೆ. ಹಣ-ಕೀರ್ತಿ ಹೊಂದಿದ, ಯೋಚಿಸಲು ಶಕ್ತನಾದ ನಾನು ಆ ಇರುವೆಗಿಂತಲೂ ಕಡಿಮೆಯಾದೆನೆ? ಸಾಯುವಂಥ ತಪ್ಪನ್ನೇನು ಮಾಡಿಲ್ಲ ಎನ್ನುವ ಅರಿವಿದೆ. ಆದರೆ ಗುರುಗಳ ನುಡಿಯನ್ನು ತೆಗೆದು ಹಾಕಲಾರೆ. ಅಂತೆಯೇ ಯಾವ ಕಾರಣಕ್ಕೂ ಸ್ತ್ರೀಪಾತ್ರವಾಗಲಾರೆ. ಈ ಇಬ್ಬಂದಿತನದಿಂದ ಹೊರ ಬರುವುದೆಂತು? ಎಷ್ಟು ಚಿಂತಿಸಿದರೂ ಕಣ್ಣೆದುರು ಆಳವಿರುವ ನೀರಿನ ಗುಂಡಿ ಹಾಗೂ ದೊಡ್ಡ ಕಲ್ಲೇ ಕಾಣುತ್ತದೆ. ಕಣ್ಮುಚ್ಚಿದರೂ ಕಾಣುವುದು ಅವುಗಳೆ. ಅಯ್ಯೋ, ಆ ನಮ್ಮ ಅಮ್ಮ ಇದನ್ನು ಸಹಿಸಿಯಾಳೆ? ಈ ಪ್ರಾಯದಲ್ಲಿ ಆಕೆ ಸಂಕಟ ಪಡಬೇಕೆ?………. “ಛೇ”………

ಅಷ್ಟಕ್ಕೂ ಆ ನನ್ನ ಪವಿ ಏನೆಂದುಕೊಂಡಾಳು. ತನ್ನ ಸರ್ವಸ್ವವನ್ನೂ ನನಗಾಗಿ ಮೀಸಲಿಡಲು ತೆರೆದು ನಿಂತ ಪವಿತ್ರ. ಹೌದು ಈ ಪವಿತ್ರಳದ್ದೇ ಒಂದು ಕತೆ. ಶಾಲಾ ಅಧ್ಯಾಪಕರಾದ ನಮ್ಮೂರಿನ ಜನಪ್ರಿಯ ಮೇಷ್ಟ್ರು ಜನಾರ್ದನ ಅವರ ಒಬ್ಬಳೇ ಮಗಳು. ಪಕ್ಕದ ಊರು ಶಿವಾರಿಬೆಟ್ಟದ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರವರು. ಅವರಿಗೆ ಊರಿನಲ್ಲಿ ಬಹಳ ಗೌರವವಿದೆ. ಪವಿತ್ರಳಾದರೋ ನೇರ ಸ್ವಭಾವದ ನಿರ್ಭಿಡೆಯ ಹುಡುಗಿ. ಅತ್ಯಂತ ಮೃದು ಗುಣ ಅವಳ ಅಲಂಕಾರ. ಆದರೆ ಯಾರಲ್ಲೂ ಮುಲಾಜಿಲ್ಲದೇ ಮಾತಾಡಬಲ್ಲಳು. ತನ್ನ ನಿರ್ದಿಷ್ಟ ಅಭಿಪ್ರಾಯವನ್ನು ವ್ಯಕ್ತ ಪಡಿಸಬಲ್ಲಳು. ಇನ್ನೊಬ್ಬರ ಮನಸ್ಸಿಗೆ ಹಿಂಸೆ ಎನಿಸದೆ ಸರಿಯಾಗಿ ಮನಸ್ಸಿಗೊಪ್ಪುವ ಹಾಗೆ ತಿಳಿಸಿಕೊಡುವ, ಯಾವುದು ತಪ್ಪು-ಯಾವುದು ಸರಿ ಎಂದು ಧೃಡವಾಗಿ ತಿಳಿಹೇಳುವ ಜಾಣ್ಮೆಯು ಅವಳಿಗೆ ಸಿದ್ಧಿಸಿದೆ. ವಯಸ್ಸಿಗೂ ಮೀರಿದ ಜ್ಞಾನದ ಹರವಿದೆ. ಪದವಿಯ ವಿದ್ಯಾಭ್ಯಾಸವನ್ನು ಮುಗಿಸಿ ಮನೆಯಲ್ಲೇ ಇದ್ದಳು. ಜನಾರ್ದನ ಮೇಷ್ಟ್ರಿಗೆ ಮಗಳಿರುವ ವಿಷಯ ಗೊತ್ತಿತ್ತು. ಆದರೆ ನೋಡಿಯೂ ಮಾತಾಡಿಯೂ ಗೊತ್ತಿರಲಿಲ್ಲ. ಒಮ್ಮೆ ಆಕೆ ನನ್ನದೊಂದು ಪ್ರದರ್ಶನಕ್ಕೆ ಬಂದಿದ್ದಳು. ಐರಾವತ ಎಂಬ ಹೆಸರಿನಿಂದ ಪ್ರಚಲಿತವಾದ ಗಜಗೌರಿವ್ರತಕತೆ ಆ ದಿನದ ಆಖ್ಯಾನ. ನಾನು ಮಾಡಿದ ಅರ್ಜುನನ ಪಾತ್ರ ಆಕೆಗೆ ಬಹಳೇ ಇಷ್ಟವಾಯಿತಂತೆ. ಕಥಾನಕ ಮುಗಿದ ಮೇಲೆ ನಾವು ಬಣ್ಣ ಹಚ್ಚಿಕೊಳ್ಳುವ ಚೌಕಿಗೆ ಬಂದಳು. ಅವರ ತಂದೆಯೂ ಜೊತೆಗಿದ್ದರು. ಬಾಯ್ತುಂಬ ಹೊಗಳಿದಳು. ನನ್ನ ಪಾತ್ರವನ್ನು ಮೆಚ್ಚಿಕೊಂಡವರು ಯಾರೆ ಆಗಲಿ ಹೊಗಳುವುದು ಹೊಸತೇನಲ್ಲ. ಆದರೆ ಹೀಗೆ ಯೌವನದ ಹುಡುಗಿಯೊಬ್ಬಳು ಹೃದಯತುಂಬಿ ಇಷ್ಟದ ಮಾತನಾಡುವಾಗ ಒಳಗೊಳಗೇ ಪುಳಕಗೊಂಡೆ. ಹಾಗೆ ಸಂಪರ್ಕವು ಮುಂದುವರೆಯಿತು. ಇಂದು ನನ್ನ ಬಾಳಸಂಗಾತಿಯಾಗುವುದಕ್ಕೆ ಕಾತರಳಾಗಿ ನಿಂತಿದ್ದಾಳೆ. ಅವರ ಮನೆಯವರ ಒಪ್ಪಿಗೆಯ ಮುದ್ರೆಯೂ ಸಿಕ್ಕಿದೆ. ವಿಷಯ ತಿಳಿದು ನನ್ನ ಅಮ್ಮ ಕೂಡ ಸಂತಸ ಪಟ್ಟಿದ್ದಾಳೆ. ಇಂದು ನಾನೇನಾದರೂ ಹೇಡಿಯಾಗಿ ನೀರಿನ ಗುಂಡಿಗೆ ಕಲ್ಲನ್ನು ಕಟ್ಟಿಕೊಂಡು ಹಾರಿದೆನಾದರೆ ಆಕೆ ಖಂಡಿತವಾಗಿ ನನ್ನನ್ನು ಕ್ಷಮಿಸಲಾರಳು.
ಕೊತಕೊತನೆ ಕುದಿಯುತ್ತಿರುವ ಮನಸ್ಸು. ಮೈಯಲ್ಲೂ ಬಿಸಿ ಏರಿದ್ದು ಗೊತ್ತಾದದ್ದೇ ಹೆಗಲಿಗೆ ತಣ್ಣನೆ ಕೈಯ್ಯ ಸ್ಪರ್ಷವಾದಾಗ. ಹಿಂತಿರುಗಿ ನೋಡಿದರೆ ನೆನೆದವರ ಮನದಲ್ಲಿ ಎಂಬ ಗಾದೆಯಂತೆ ನನ್ನ ದೇವತೆ ನಿಂತಿದ್ದಾಳೆ. “ಏನು ಧ್ಯಾನವೋ? ಹೊಳೆದಂಡೆಯಲ್ಲಿ” ಪ್ರಶ್ನೆ ಎದುರಾಯಿತು. “ಹಾಗೇನಿಲ್ಲ” ಎಂದೆ. “ಮತ್ತೇನು ಮಹಾಶಯ, ಒಬ್ಬಂಟಿಗನಾಗಿ ಲೋಕಾವಲೋಕನವೋ” ಎಂದಳು ನಾಟಕೀಯವಾಗಿ. ಇವಳ ವಿನೋದಪ್ರವೃತ್ತಿ ಹೊಸದೇನಲ್ಲ. ಆದರೆ ಇಂದಿನ ಸ್ಥಿತಿ? “ಎರಡು ದಿನಗಳಿಂದಲೂ ನನ್ನನ್ನು ಭೇಟಿಮಾಡುವ ಆಸಕ್ತಿಯಿರಲಿಲ್ಲವೇ ಗಿರಿ? ಮುಂದಿನ ಹುಣ್ಣಿಮೆಯವರೆಗೆ ಯಾವ ಯಕ್ಷಗಾನಪ್ರದರ್ಶನವೂ ಇಲ್ಲ ಎಂದಿದ್ದೆ.” ನಾನೂ ಸುತ್ತುಬಳಸು ಬಿಟ್ಟು ನೇರವಾಗಿ ಪ್ರಸ್ತಾಪಿಸಲು ಮುಂದಾದೆ. “ಬಾ ಪವಿ, ಕುಳಿತುಕೊ, ಇಂದು ನಾನೊಂದು ಸಂಕಟದಲ್ಲಿ ಸಿಲುಕಿದ್ದೇನೆ. ಇಲ್ಲಿಯವರೆಗೆ ಬಾರದೆ ಇದ್ದುದು ಇಂದು ನನ್ನನ್ನು ಚಿಂತೆಯೊಂದು ಹಿಂಡಿಹಿಪ್ಪೆ ಮಾಡುತ್ತಿದೆ.” “ಹೌದೆ, ನನ್ನ ವೀರಅರ್ಜುನನೆ ಅದೇನೆಂದು ಅಪ್ಪಣೆಯಾಗಲಿ” ಎಂದಳು ಕಣ್ಣನ್ನು ಮಿಟುಕಿಸುತ್ತ.
“ಗುರುಗಳ ಅಭಿಪ್ರಾಯದಲ್ಲಿ ನಾನಿನ್ನು ಸ್ತ್ರೀಪಾತ್ರ ಮಾಡಬೇಕಂತೆ. ಆ ಕುರಿತು ಯೋಚಿಸಿದವನೇ ಅಲ್ಲ. ಯಕ್ಷಗಾನ ರಂಗದಲ್ಲಿ ನಾಯಕನಾಗಿ ಈವರೆಗೆ ವಿಜೃಂಭಿಸಿ, ಈಗ ಹೆಣ್ಣಾಗುವುದು ಸಾಧ್ಯವಾಗದ ವಿಷಯ, ಗುರುಗಳ ಅನಿಸಿಕೆಯನ್ನೂ ನಿರಾಕರಿಸಲಾರೆ. ಇದು ನನ್ನ ಅಂತರಂಗದ ಹೊಯ್ದಾಟ” ಒಂದೇ ಸವನೆ ಎಲ್ಲವನ್ನೂ ಹೊರಗೆಡಹಿ ನಿರುಮ್ಮಳನಾದೆ.
ಕೇಳಿದ ಪವಿತ್ರ ನಗುವುದಕ್ಕೆ ಪ್ರಾರಂಭಿಸಿದಳು. ಮತ್ತೆ ಮತ್ತೆ ನಗುತ್ತಲೇ ಇದ್ದಳು. ನಾನಾಗ ಮತ್ತಿಷ್ಟು ಕುಸಿದೆ. ಮನಸ್ಸಿನಲ್ಲೇ ಸ್ತಿಮಿತ ತಂದುಕೊಂಡು “ನೀನಾದರೂ ನನ್ನನ್ನು ಅರ್ಥ ಮಾಡಿಕೊಳ್ಳುತ್ತೀಯಾ ಎಂದು ಭಾವಿಸಿದ್ದೆ. ನಿನ್ನನ್ನು ನಾನು ನನ್ನ ಜೀವದಷ್ಟೇ ಪ್ರೀತಿಸುತ್ತೇನೆ. ಇದನ್ನು ತಿಳಿದಿರುವ ನಿನಗೆ ನಾನಿಂದು ನಗುವ ವಸ್ತುವಾದೆನೆ?” ಅಲವತ್ತುಕೊಂಡೆ. ಆ ಕ್ಷಣಕೆ ಆಕೆಯ ಕಣ್ಣುಗಳು ಹೊಳೆಯುತ್ತಿದ್ದವು. ನೋಡಬೇಕಿತ್ತು ಅದ್ಯಾವ ರೀತಿಯ ಆತ್ಮವಿಶ್ವಾಸ, ಆಹಾ! ಕೆಲ ಹೊತ್ತು ನೀರವ ಮೌನ. ನೀರಿನ ಹರಿಯುವಿಕೆಯ ಜುಳುಜುಳು ನಾದ, ಹಕ್ಕಿಯ ಕಲರವ ಬಿಟ್ಟರೆ ಮತ್ಯಾವ ಸದ್ದಿಲ್ಲ. ನನಗೆ ಒಳಗೊಳಗೆ ಬದುಕಿನ ಆಸೆಯು ಕ್ಷೀಣಿಸುತ್ತಿರುವ ಪರಿತಾಪ. ನನ್ನ ಏಕೈಕ ಆಶಾಕಿರಣ ಈ ನನ್ನ ಪ್ರೇಮದ ಮೂರ್ತಿ ನನ್ನನ್ನು ಗೇಲಿ ಮಾಡುತ್ತಿದೆ. ಶೂನ್ಯದತ್ತ ದೃಷ್ಟಿಯನ್ನು ನೆಟ್ಟಿದ್ದೆ.
ಕೆಲಕಾಲ ಸುಮ್ಮನಿದ್ದ ಪವಿ “ಹಾಗೇಕೆನ್ನುವಿಯೋ ಗಿರಿ” ಎಂದಳು. “ನಿನ್ನ ಆಲೋಚನೆಗಳೇ ದಾರಿ ತಪ್ಪಿವೆ. ಸ್ತ್ರೀಪಾತ್ರಗಳನ್ನು ಮಾಡುವುದು ಏನು ಅನಾಚಾರವೇ? ಯಕ್ಷಗಾನ ಪ್ರಪಂಚದಲ್ಲಿ ಪುರುಷರೇ ಸ್ತ್ರೀಪಾತ್ರಗಳನ್ನು ಮಾಡುವುದು ಸಂಪ್ರದಾಯ ತಾನೆ. ನೀನೀವರೆಗೆ ತೊಟ್ಟಿಲ್ಲದೇ ಇರಬಹುದು. ನಿನ್ನ ಒಡನಾಡಿಗಳಾದ ಸ್ತ್ರೀ ವೇಷಧಾರಿಗಳು ಗಂಡಸರೆ ಅಲ್ಲವೆ. ಎಷ್ಟೊಂದು ಜನ ಅದರಲ್ಲೇ ಪ್ರಸಿದ್ಧಿಯನ್ನು ಹೊಂದಿದವರಿದ್ದಾರೆ. ಕೊಕ್ಕರ್ಣೆ ನರಸಿಂಹ ಕಾಮತ್, ಕೋಳ್ಯೂರು ರಾಮಚಂದ್ರ ರಾಯರು, ಕೆರೆಮನೆ ಗಜಾನನ ಹೆಗಡೆ ಮೊದಲಾದವರ ಜೀವನದ ಸಿದ್ಧಿ ಇರುವುದೇ ಸ್ತ್ರೀಪಾತ್ರ ನಿರ್ವಹಣೆಯಲ್ಲಿ. ಈಗಲೂ ನಮ್ಮಂತಹ ಹುಡುಗಿಯರೇ ನಾಚುವಂತಹ ನಾಟ್ಯ, ಒನಪು ವೈಯ್ಯಾರದಿಂದ ಮೆರೆಯುವ ಸ್ತ್ರೀ ಪಾತ್ರ ನಟರೆಷ್ಟಿದ್ದಾರೆ. ಅವರೆಲ್ಲ ನಿನ್ನಂತೆ ಕೀಳರಿಮೆಗೆ ಒಳಗಾಗಿದ್ದರೆ ಈ ರಂಗದಲ್ಲಿ ಇರುತ್ತಿದ್ದರೆ?” ಪಟಪಟನೆ ಮಾತಿನಮಳೆ ಸುರಿಯುತ್ತಿದೆ. ನಾನೆಂದೆ “ಪವಿ, ಒಪ್ಪಿಕೊಳ್ಳುವುದು ಅಷ್ಟು ಸುಲಭವಲ್ಲ. ಚೌಕಿಯಲ್ಲಿ ವೇಷವನ್ನು ಮಾಡಿಕೊಳ್ಳುವಾಗಲೇ ಹಿಂಸೆಯಾಗುವುದಕ್ಕೆ ತೊಡಗುತ್ತದೆ. ಉಳಿದವರ ಜೊತೆಗಿನ ಸಲುಗೆಯ ಒಡನಾಟವೇ ಸಹಿಸುವುದಕ್ಕಾಗದು. ಬೇರೆ ಕಲೆಗಳಂತಲ್ಲ ಯಕ್ಷಗಾನ ಪಾತ್ರದ ತೊಡಗುವಿಕೆ. ಇಲ್ಲಿ ಮುಖವರ್ಣಿಕೆಗೆ ಅಂತ ಯಾರೂ ಇರುವುದಿಲ್ಲ. ನಾವು ಮುಖಕ್ಕೆ ಬಣ್ಣವನ್ನು ಹಚ್ಚಿಕೊಳ್ಳಲು ಪ್ರಾರಂಭಿಸುವಾಗಲೇ ಪಾತ್ರಕ್ಕೆ ಪರಕಾಯಪ್ರವೇಶ ಆಗುತ್ತದೆ. ಪಾತ್ರಕ್ಕೊಂದು ಭೂಮಿಕೆ ಸಿದ್ಧವಾಗುತ್ತದೆ. ಸ್ತ್ರೀಯಾಗಿ ಪರಿವರ್ತನೆ ಆಗುವ ವಿಚಾರವೇ ನನಗೆ ಹೊಂದುವ ವಿಷಯವಲ್ಲ.” ಅದಕ್ಕವಳು ತಣ್ಣಗೆ ಪ್ರತಿಕ್ರಿಯಿಸಿದಳು “ಗಿರಿ, ಸ್ತ್ರೀ ಪಾತ್ರ ಧರಿಸುವುದು ಎಂದರೆ ಕೇವಲ ಸೀರೆ-ಕುಪ್ಪಸ ತೊಡುವುದು ಅಂತ ಅಷ್ಟೇ ಯಾಕೆ ಭಾವಿಸುವೆ? ಆ ನರ್ತನ ಶೈಲಿಯನ್ನು ನಾಜೂಕುಗೊಳಿಸಿದರೆ ಸಾಕೆ?” ವಾದಕ್ಕೆ ಸಿದ್ದಾಗಿದ್ದ ಮನಸ್ಥಿತಿಯೇ ಹೇಳಿತು. “ಇದು ನನ್ನ ಅಸ್ತಿತ್ವದ ಪ್ರಶ್ನೆ.” ಕಾದ ಕಬ್ಬಿಣವನ್ನು ತನ್ನ ಆಕಾರಕ್ಕೆ ಬಗ್ಗಿಸಿಕೊಳ್ಳುವ ಕಮ್ಮಾರನ ಜಾಣ್ಮೆ ಈ ನನ್ನ ಪವಿತ್ರಳದು. ಹೇಗೆ ಸುಮ್ಮನಿರುತ್ತಾಳೆ “ಗಿರಿ, ಒಬ್ಬ ಎಣ್ಣೆ ಬರುವಾಗ ಕಣ್ಣುಮುಚ್ಚಿಕೊಂಡಿದ್ದನAತೆ ಹಾಗಾಯ್ತು ನಿನ್ನ ಸ್ಥಿತಿ. ಈ ಜಗತ್ತಿನಲ್ಲಿ ಸಾಧಕರೆಲ್ಲರೂ ಹಾಗೆಯೇ. ಬಂದ ಅವಕಾಶವನ್ನು ಪೊಸ್ಸೀಟೀವ್ ಕಡೆಗೆ ಪ್ರಯತ್ನಪೂರ್ವಕವಾಗಿ ಬಳಸಿಕೊಳ್ಳುತ್ತಾರೆ. ಆಗ ಮಾತ್ರ ಯಶಸ್ಸು ಸಿಗಲು ಸಾಧ್ಯ. ಇಲ್ಲದಿದ್ದರೆ ಟ್ರಯಲ್ ಅಂಡ್ ಎರರ್ ಇದ್ದೇ ಇರುತ್ತದೆ. ಮುನ್ನುಗ್ಗುವುದು ನಮ್ಮ ಮುಂದಿರುವ ಗುರಿಯಾಗಬೇಕು”. ಇವಳಿಗೇನು ಗೊತ್ತು ಮನದೊಳಗಣ ಹೊಯ್ದಾಟ? “ಪವಿ, ನಿನ್ನ ಅನಿಸಿಕೆ ಸಮರ್ಪಕವೇ ಆದರೂ ನಾನು ಇದನ್ನು ಸಮ್ಮತಿಸಲಾರೆ. ಸಾಮಾಜಿಕವಾಗಿ ಉತ್ತಮ ಕಲಾವಿದನೆಂದು ಗುರುತಿಸಿಕೊಂಡವನು ನಾನು. ಇದ್ದಕಿದ್ದಂತೆ ಸ್ವರೂಪವನ್ನು ಬದಲಿಸಿದರೆ ನನ್ನ ಇಡೀ ವ್ಯಕ್ತಿತ್ವವೇ ಮಾಸಿ ಹೋಗುತ್ತದೆ. ಸ್ತ್ರೀ ಪಾತ್ರಗಳು ನಿಕೃಷ್ಟ ಎನ್ನುವ ಅಭಿಪ್ರಾಯವೇನಿಲ್ಲ. ಆದರೆ ನಾನು ಸ್ತ್ರೀ ಆಗಲಾರೆ. ಯೋಚಿಸಿದಷ್ಟೂ ಮತ್ತೆ ಮತ್ತೆ ಸಿಕ್ಕುಗಳು ಹೆಚ್ಚಾಗುತ್ತವೆ. ಪರಿಹಾರದ ದಾರಿ ಕಾಣೆ” ಎಂದೆ. “ಈ ಭಾರಕ್ಕೆ ನಾನು ಕುಸಿದು ಹೋಗಿದ್ದೇನೆ ಪರಿಹಾರ ಬೇಕೇ ಬೇಕು” ನಾನು ಮಾತನ್ನು ಮುಗಿಸಿರಲಿಲ್ಲ. “ಸುಮ್ಮನಿರು” ಪವಿತ್ರಳ ಮಾತಿನ ಗತಿಯಲ್ಲಿ ಸ್ಥಿರತೆ ಇತ್ತು. “ಗಂಡಾಗಿ ಹುಟ್ಟಿರುವೆ. ಹೆಣ್ಣಿನ ಮಾನಸಿಕತೆಯನ್ನು ಅನುಭವಿಸುವುದಕ್ಕೇ ಸಾಧ್ಯವೆ ಇಲ್ಲವೇ.? ಪುರಾಣ ಕಾಲವೇನು ಈಗೇನು ಸಮಾಜದಲ್ಲಿ ಸ್ತ್ರೀಯರ ಆಂತರಂಗಿಕ ತೊಳಲಾಟ ವ್ಯತ್ಯಾಸವೇನಿಲ್ಲ. ಸಮಾಜವನ್ನು ಒಮ್ಮೆ ಅವಲೋಕಿಸು. ಸಿಂಗಲ್ ಪೇರೆಂಟ್ಸ್ ಸಮಸ್ಯೆಗಳಲ್ಲಿ ತಾಯಿಯಾದವಳು ತಾಯಿಯಾಗಿ ತಂದೆಯಾಗಿ ಮಕ್ಕಳನ್ನು ಸಾಕುತ್ತಾಳೆ. ಗಂಡಿಗಾದರೆ ಹಾಗೇನಿಲ್ಲ. ತಾಯಿಯಿಲ್ಲದ ಮಗುವಿಗೆ ತಾಯಿಯಾಗಲು ಹೆಣಗುತ್ತಾನೆ. ಹೆಚ್ಚಿನ ಭಾಗ ಗುರಿ ಮುಟ್ಟುವುದಕ್ಕೆ ಸಾಧ್ಯನಾಗುವುದಿಲ್ಲ. ಯಾಕೆಂದರೆ ಗಂಡಾಗಿದ್ದೂ ಹೆಣ್ಣಿನ ಮಾನಸಿಕತೆಯನ್ನು ಅವರು ಅನುಭವಿಸಲು ಸಿದ್ದರಿರುವುದಿಲ್ಲ. ಆದರೆ ನೀನು ಕಲಾವಿದ. ಪರಕಾಯ ಪ್ರವೇಶವೇ ನಿನ್ನ ಶಕ್ತಿ. ಯಕ್ಷಗಾನದಲ್ಲಿ ಸ್ತ್ರೀಪಾತ್ರವನ್ನು ಮಾಡುವವನಿಗೆ ಗಂಡಾಗಿದ್ದೂ ಹೆಣ್ಣಿನ ಆಂತರಂಗಿಕ ಸಂವೇದನೆಯನ್ನು ಅರ್ಥಮಾಡಿಕೊಂಡು ಕಲಾವಿದನಾಗಿ ತೆರೆದಿಡುವ ಸಾಧ್ಯತೆ ಇದೆ ಎನ್ನುವುದನ್ನು ಗಮನಿಸು. ನಿನಗೊಂದು ಅವಕಾಶವು ತಾನಾಗಿಯೇ ಬಂದಿದೆ. ಗಂಡಾದವ ತನ್ನ ಮಾನಸಿಕ ಸ್ಥಿತಿಯನ್ನು ಹೆಣ್ತನಕ್ಕೆ ಹೊಂದಿಸಿ ಅಭಿನಯಿಸ ಬೇಕು. ಐವರು ಗಂಡಂದಿರನ್ನು ಹೊಂದಿದ್ದ ದ್ರೌಪದಿಯೋ, ಅಸಹಾಯ ಶೂರನೆನಿಸಿದ ಪತಿ ರಾಮನಿದ್ದಾಗ್ಯೂ ಸುಖವನ್ನು ಕನಸಿನಲ್ಲಿಯಷ್ಟೇ ಕಂಡ ಸೀತೆಯೋ ಅಥವಾ ಇನ್ನಿತರ ಪೌರಾಣಿಕ ಸ್ತ್ರೀಯರ ಒಳಮನಸ್ಸಿನಲ್ಲಿ ಅನುಭವಿಸಿದ ಯಾತನೆಯನ್ನು ಕಲಾವಿದನ ಭಾವಾಭಿವ್ಯಕ್ತಿಯಲ್ಲಿ ತೋರ್ಪಡಿಸುವ ಸಂದರ್ಭವು ನಿನಗೊದಗಿದೆ. ಈಗಿನ ಹೆಂಗಸರನ್ನು ಸೂಕ್ಷ್ಮವಾಗಿ ಗಮನಿಸು. ಪೌರಾಣಿಕ ಪಾತ್ರಗಳಿಗಾಗುವ ಒಂದಿಷ್ಟು ದ್ರವ್ಯ ದೊರೆಯುತ್ತವೆ. ‘ಏಳು, ಎದ್ದೇಳು ಗುರಿ ಮುಟ್ಟುವವರೆಗೆ ವಿಶ್ರಮಿಸದಿರು’ ಎಂದ ವಿವೇಕಾನಂದರನ್ನು ನೆನಪಿಸಿಕೊ. ನೀನು ದ್ರೌಪದಿಯ ಪಾತ್ರಕ್ಕೆ ಸಿದ್ದನಾಗು. ಉಳಿದವುಗಳ ಬಾಗಿಲುಗಳು ತನ್ನಿಂದ ತಾನೇ ತೆರೆದುಕೊಳ್ಳುತ್ತವೆ. ಮನಸ್ಸಿನಲ್ಲಿ ಅನ್ಯಥಾ ಕೊರಗಬೇಡ. ಆವರಿಸಿದ ಭೂತವನ್ನು ಕೊಡಹಿ ಹಾಕು. ಆವಾಗ ಮಾತ್ರ ಭವಿಷ್ಯ ಉಜ್ವಲವಾಗಿರುತ್ತದೆ ಗಿರಿ.”
“ಆದರೂ ಪವಿ” ಬಾಯ್ತೆರೆದೆ. ಆಕೆ ನುಡಿದಳು “ಆದರೂ ಹೋದರೂ ಇಲ್ಲ. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕೇವಲ ಹೆಣ್ಣು ಎಂದೋ ಕೇವಲ ಗಂಡು ಎಂದೋ ಇರುವುದಿಲ್ಲ. ಎಲ್ಲರಲ್ಲೂ ದೈಹಿಕವಾಗಿ ಮತ್ತು ಮಾನಸಿಕವಾಗಿಯೂ ಕೂಡ ಸ್ತ್ರೀತ್ವ-ಪುರುಷತ್ವಗಳು ಸಮ್ಮಿಶ್ರವಾಗಿಯೇ ಇರುತ್ತವೆ. ಜೆನೆಟಿಕ್ ಆಗಿಯೂ ಇದು ನಿಜವೆಂದು ಸಂಶೋಧನೆಯಿಂದ ಸಾಬೀತಾಗಿದೆ. ಅರ್ಧನಾರೀಶ್ವರನ ಪ್ರತಿಮೆ ನಮಗೊಂದು ದಾರಿದೀಪ. ಗಂಡು-ಹೆಣ್ಣುಗಳ ಮೈಮನಗಳ ಒಳಾಂತರಗಳ ರಚನೆ ಒಂದು ಸಂಕೀರ್ಣವೇ. ಅದರಲ್ಲಿ ಯಾವುದೋ ಒಂದು ಪ್ರಬಲವಾಗಿರುತ್ತದೆ. ಅದು ಸಾರ್ವತ್ರಿಕವಾಗಿ ಪ್ರಕಟವಾಗುತ್ತದೆ. ಉಳಿದ ಭಾವಗಳನ್ನೂ ಉದ್ದೀಪಿಸಿ ಅಭಿನಯಿಸಿದರೆ ಯಶಸ್ಸು ಖಂಡಿತ ಬಂದೇ ಬರುತ್ತದೆ. ಪ್ರಯತ್ನಿಸಿದರೆ ಯಾವ ತಪ್ಪೂ ಇರುವುದಿಲ್ಲ. ಗಿರಿ, ಆದ್ದರಿಂದ ದೃಢ ಮನಸ್ಸಿನಿಂದ ಮುಂದಾಗು. ಸಿದ್ದಿಗೋ ಪ್ರಸಿದ್ದಿಗೋ ಯಾವ ಕುಂದು ಬರುವುದಿಲ್ಲ.” ತೀಕ್ಷ್ಣವಾದ ಆಕೆಯ ನುಡಿಗಳನ್ನು ಕೇಳುತ್ತಿದ್ದ ನಾನು ಇಷ್ಟು ಹೊತ್ತೂ ಬಿಗಿಹಿಡಿದಿದ್ದ ಉಸಿರನ್ನು ಬಿಟ್ಟೆ. ಪರ್ವತ ಅಂತ ತಿಳಿದ್ದು ಮಂಜು ಕರಗಿ ಬಯಲಾಯಿತಲ್ಲ. ಇನ್ನೇಕೆ ತಡ. ಎದ್ದೆ, ಮೈ ಕೊಡಹಿದೆ. ಪವಿಯ ಕೈ ಚುಂಬಿಸಿದೆ. “ಕೇಳು ಪವಿ, ನಿನ್ನ ಆಶಯದಂತೆ ನಾನು ಸ್ತ್ರೀ ಪಾತ್ರಗಳನ್ನು ಮಾಡುತ್ತೇನೆ. ಮತ್ತು ಯಾವತ್ತೂ ಈ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ನನ್ನ ಗುರುಗಳಾಡಿದ ಮಾತನ್ನು ಯಾವತ್ತೂ ದಿಃಕರಿಸುವುದಿಲ್ಲ. ಯಾವ ಪಾತ್ರವೇ ಆಗಲಿ ನಾನದನ್ನು ನಿರ್ವಹಿಸುತ್ತೇನೆ. ನಿಜ, ನೀ ಹೇಳಿದ ಮಾತು, ಕಲೆಯು ಒದಗಿಸುವ ದಿವ್ಯಶಕ್ತಿ ಎಂದರೆ ಪರಕಾಯಪ್ರವೇಶ. ಬಾಹ್ಯ ವೇಷಭೂಷಣಗಳಿಂದ, ನೃತ್ಯ ಅಭಿನಯಗಳಿಂದ ಅಷ್ಟೇ ಅಲ್ಲ… ಮನಸ್ಸು-ಆತ್ಮಗಳಲ್ಲೂ ಪರಕಾಯಪ್ರವೇಶ ಮಾಡುವಂತಹ ಜ್ಞಾನೋದಯ ನನಗೆ ಇಂದು ಅಗಿದೆ. ಹೆಣ್ಣು ಗಂಡು ಎಂಬ ಪಾತ್ರಗಳಿಗೆ ಸೀಮಿತನಾಗದೆ ಮನುಕಲಕ್ಕೆ ಮಾದರಿಯಾಗುವಂತಹ ಕಲಾವಿದನಾಗಬೇಕು ಎಂದೆನಿಸಿದೆ ನನಗೆ” “ಅಂತು ಇಂತೂ ನನ್ನ ವೀರ ಅರ್ಜುನ ಬೃಹನ್ನಳೆಯಾಗಿ ವಿರಾಟರಾಜನ ಅರಮನೆಗೆ ಹೋಗಲು ಸಿದ್ಧ” ಎಂದು ಜೋರಾಗಿ ನಕ್ಕಳು ಪವಿ. ನಾನೂ ಅವಳ ನಗುವಿಗೆ ನನ್ನ ನಗುವನ್ನು ಸೇರಿಸಿದೆ.

ಹುಣ್ಣಿಮೆಯ ದಿನ ನಡೆದ ಪಟೇಲರಮನೆ ಯಕ್ಷಗಾನಪ್ರದರ್ಶನದಲ್ಲಿ ನಾನು ಮಾಡಿದ ದ್ರೌಪದಿಯ ಪಾತ್ರವು ಜನಮೆಚ್ಚುಗೆಯನ್ನು ಗಳಿಸಿತು…………. ಆಮೇಲಿನದ್ದು ಇತಿಹಾಸ.
ರವಿಶಂಕರ್ ವೃತ್ತಿಯಲ್ಲಿ ಗ್ರಾಫಿಕ್ ಡಿಸೈನರ್. ಪ್ರವೃತ್ತಿಯಾಗಿ ಫೋಟೋಗ್ರಫರ್, ಪ್ರವಾಸಿ ಹಾಗೂ ಸಾಹಿತ್ಯಾಭಿಮಾನಿ. ೨೦೦೨ ರಲ್ಲಿ ರಾಜ್ಯಮಟ್ಟದ ಫೋಟೋಗ್ರಫಿಯಲ್ಲಿ ಗ್ರಾಮೀಣ ಜೀವನ ವಿಭಾಗದಲ್ಲಿ ಮೊದಲ ಸ್ಥಾನ, ಹಾಗೂ ೨೦೨೩ ರಲ್ಲಿ, ಮಹಾಮಸ್ತಕಾಭಿಶೇಕದ ಚಿತ್ರಗಳಿಗೆ ಭಾರತ ಸರಕಾರದ ರಾಷ್ಟ್ರಪ್ರಶಸ್ತಿಯನ್ನು ಪಡೆದರು. ಚಿತ್ರಲೇಖನ ಹಾಗೂ ಸಣ್ಣಕತೆ ರಚನೆಗಳು ಅವರ ಹವ್ಯಾಸಗಳಾಗಿವೆ.
ಇಟಗಿ ಮಹಾಬಲೇಶ್ವರ ಭಟ್ಟ ವೃತ್ತಿಯಲ್ಲಿ ಯಕ್ಷಗಾನ ಕಲಾವಿದ, ಯಕ್ಷಗಾನ ಕವಿ ಹಾಗೂ ಕೃಷಿಕ. ನೂರಾರು ತಾಳಮದ್ದಳೆ ಕಾರ್ಯಕ್ರಮಗಳಲ್ಲಿ ಅರ್ಥಧಾರಿಯಾಗಿ ಭಾಗವಹಿಸಿದ್ದಾರೆ. ದೇಶ-ವಿದೇಶಗಳಲ್ಲೂ ಆಯೋಜನೆಗೊಂಡಿದ್ದ ಯಕ್ಷಗಾನ ಕಾರ್ಯಕ್ರಗಳಲ್ಲಿ ಭಾಗವಹಿಸಿದ್ದಾರೆ. ಯಕ್ಷಗಾನ ಕಲೆಯನ್ನು ಬೆಳೆಸಲು, ‘ಕಲಾಭಾಸ್ಕರ, ಎಂಬ ಸಂಸ್ಥೆಯನ್ನು ತಮ್ಮ ಊರಿನಲ್ಲಿ ಹುಟ್ಟುಹಾಕಿ, ಕಮ್ಮಟಗಳು, ಕಾರ್ಯಾಗಾರಗಳು ಹಾಗೂ ಹೊಸ ಪ್ರಸಂಗಗಳ ಪ್ರಯೋಗಗಳನ್ನು ನಡೆಸುತ್ತಾರೆ. ಯೋಗ ಹಾಗೂ ಆಯುರ್ವೇದಗಳಲ್ಲಿಯೂ ಪರಿಶ್ರಮವುಂಟು.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ


