Advertisement
ಕುಣಿಯಬೇಕಿದ್ದ ಕಾಲುಗಳ ಕಟ್ಟಿ…: ಜುಲೇಖಾ ಬೇಗಂ ಜೀವನ ವೃತ್ತಾಂತ

ಕುಣಿಯಬೇಕಿದ್ದ ಕಾಲುಗಳ ಕಟ್ಟಿ…: ಜುಲೇಖಾ ಬೇಗಂ ಜೀವನ ವೃತ್ತಾಂತ

ಸರಿ, ಮಳೆ ನಿಂತು ಮನೆ ತಲುಪುವ ಹೊತ್ತಿಗೆ ರಾತ್ರಿ ಎಂಟರ ಹೊತ್ತು. ದೊಡ್ಡ ರಾದ್ಧಾಂತವೇ ಆಗಿತ್ತು. ‘ಯಾಕಿಷ್ಟು ತಡವಾಯ್ತು?’ ಪ್ರಶ್ನೆ ಗಡುಸಾಗಿಯೇ ಕೇಳಿಸಿತು. ಏನು ಉತ್ತರಿಸಬೇಕೆಂದು ತೋರದೆ, ಬೇಬಿಯಕ್ಕನೊಂದಿಗೆ ಪಿಚ್ಚರ್ ನೋಡುವುದಕ್ಕೆ ಹೋಗಿದ್ದೆ ಎಂದುಬಿಟ್ಟೆ. ನಂತರ ಕೇಳಿದ್ದು, ಕೆನ್ನೆಯ ಮೇಲೆ ಬಿದ್ದ ಛಟಾರ್ ಎಂಬ ಏಟಿನ ದನಿಯಷ್ಟೇ! ‘ಹೇಳದೆ ಕೇಳದೆ ಇನ್ನೆಲ್ಲಿಯೂ ಹೋಗಕೂಡದು. ಡಾನ್ಸ್ ಕ್ಲಾಸ್ ಸೇರಿಸಿಯೇ ತಪ್ಪು ಮಾಡಿದೆ’ ಎಂದು ಹೇಳಿದ್ದರೆ ಅತ್ತು ಸುಮ್ಮನಾಗುತ್ತಿದ್ದೆ. ಆದರೆ ನುಡಿದಂತೆ ನಡೆದೇಬಿಟ್ಟರು!
ಕೀರ್ತಿ
ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹದಿನಾರನೆಯ ಕಂತು

ಈಗಲೂ ಹೆಣ್ಣೊಬ್ಬಳು ಕತ್ತಲಲ್ಲಿ ಹೊರಗೆ ಹೋದರೆ, ಆಗೇನಾದರೂ ಅವಳಿಗೆ ಆಪತ್ತು ಸಂಭವಿಸಿದರೆ ಖಂಡಿತಾ ಅದು ಆಕೆಯ ತಪ್ಪೇ ಹೊರತು, ಸಮಾಜದ ತಪ್ಪಲ್ಲ! ಹೆಣ್ಣು ಎಲ್ಲ ಬೇಲಿಯನ್ನು ದಾಟಿ ಆಗಸಕ್ಕೆ ನೆಗೆದಿದ್ದರೂ ಪುರುಷ ಪ್ರಾಧಾನ್ಯತೆಯ ಸಮಾಜ ಮಾತ್ರ ಆಕೆಯನ್ನು ನಿಯಂತ್ರಿಸುವ ಪ್ರಯತ್ನವನ್ನು ಅವ್ಯಾಹತವಾಗಿ ಮಾಡುತ್ತಾ ಬಂದಿದೆ. ಈ ಅರಿವು ನಮಗಾಗಿ ನಾವು ಎಚ್ಚೆತ್ತುಕೊಳ್ಳುವಷ್ಟರಲ್ಲಿ ಕಾಲವೇ ಸರಿದಿರುತ್ತದೆ ನೋಡಿ! ಈಗಲೇ ಹೀಗೆಂದ ಮೇಲೆ ಇನ್ನು ಆ ಕಾಲ ಹೇಗಿತ್ತು ಊಹಿಸಿ.

ಬಿಜಾಪುರದಲ್ಲಿ ಕ್ಯಾಂಪ್ ನಡೆಯುತ್ತಿತ್ತು. ಅಲ್ಲೊಂದು ವಾಡೆ ಇತ್ತು. ಈಗಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಆಗಿ, ಗಿಜಿಗಿಜಿಗುಡುತ್ತಿದೆ. ನಾನು ಹೇಳುತ್ತಿರುವ ಈ ಕಥೆ 1969ರದ್ದು. ಇದು ಮದುವೆಯಾದ ನಂತರ ನಡೆದ ಘಟನೆ. ಆಗೇನು ಜನರು ಅಲ್ಲಿ ಅಷ್ಟಾಗಿ ಓಡಾಡುತ್ತಿರಲಿಲ್ಲ. ಅಲ್ಲಿನ ಆಸ್ರ್‌ಮಹಲ್ ಎಂಬಲ್ಲಿ ಒಂದಷ್ಟು ಕಲಾವಿದರು ಉಳಿದಿದ್ದರು. ಬೆಳಿಗ್ಗೆ ಹತ್ತು ಗಂಟೆಗೆ ರಿಹರ್ಸಲ್ ಶುರುವಾಗುತ್ತಿತ್ತು. ರಿಹರ್ಸಲ್‌ಗೆ ಹೋಗಬೇಕಾದರೆ ಆ ವಾಡೆಯೊಳಗಿಂದಲೇ ತೆರಳಬೇಕಿತ್ತು. ಆವತ್ತೊಂದು ದಿನ ನನ್ನ ಗಂಡ ಇನ್ನೂ ಎದ್ದಿರಲಿಲ್ಲ. ‘ನೀ ಹೋಗಿರು. ಬರ್ತೀನಿ’ ಎಂದರು. ಕಾಯುವಂತಿರಲಿಲ್ಲ ನಾನು. ಏಕೆಂದರೆ ರಿಹರ್ಸಲ್‌ಗೆ ತಡವಾಗಿ ಬಂದವರಿಗೆ ಐದು ರೂಪಾಯಿಗಳ ದಂಡ ವಿಧಿಸುತ್ತಿದ್ದರು. ನಾವಿಬ್ಬರೂ ಕೂಡಿ ಗಳಿಸುತ್ತಿದ್ದದ್ದು ನೂರು ರೂಪಾಯಿ ಮಾತ್ರ. ಹಾಗಿರುವಾಗ, ನಮ್ಮಿಬ್ಬರಿಂದ ಹತ್ತು ರೂಪಾಯಿ ಬರೀ ದಂಡ ಕಟ್ಟುವುದಕ್ಕೆ ವ್ಯಯವಾಗುತ್ತದಲ್ಲಾ ಎಂದು ಸಂಕಟವಾಗುತ್ತಿತ್ತು. ನನ್ನ ಐದು ರೂಪಾಯಿಗಳನ್ನಾದರೂ ಉಳಿಸಿಕೊಳ್ಳಬೇಕೆಂದು ಓಡಿನಡೆಯುತ್ತಿದ್ದೆ. ಆಗಲೇ ತಡವಾಗಿಹೋಗಿತ್ತು. ಅವಸರದ ಹೆಜ್ಜೆಗಳನ್ನಿಡುತ್ತಾ, ವಾಡೆ ಪ್ರವೇಶಿಸಿದೆ. ಅಲ್ಲೇ ಪಕ್ಕದಲ್ಲೊಬ್ಬ ಮೂತ್ರ ಮಾಡುತ್ತಿದ್ದ ಭಂಗಿಯಲ್ಲಿ ನಿಂತಿದ್ದ. ನಾನು ಹೋದ ಸದ್ದಾಗುತ್ತಿದ್ದಂತೆ ಹಾಗೇ ತಿರುಗಿಬಿಟ್ಟ. ತನ್ನ ಗುಪ್ತಾಂಗಗಳನ್ನು ತೋರಿಸುತ್ತಾ, ವಿಚಿತ್ರ ನಗುನಕ್ಕ. ಈಗ ನೆನೆದರೂ ತೀರಾ ಅಸಹ್ಯವೆನಿಸುತ್ತದೆ.

ಇನ್ನೇನು ಮಾಡಲಿ, ಜೋರಾಗಿ ಓಡಿದೆ. ಹುಲಿಯೇ ಬೆನ್ನಟ್ಟಿ ಬಂದಷ್ಟು ವೇಗವಾಗಿ ಓಡಿದೆ. ಈ ರೀತಿಯ ಸಂಗತಿ ಜರುಗಿದಾಗ ಕಾಲೂ ಕಣ್ಣೂ ಸಂಭಾಷಿಸುತ್ತವೇನೊ, ಅದಕ್ಕೆ ಮನಸ್ಸೇ ಸೇತುವಾಗುತ್ತದೇನೊ. ಓಡುತ್ತಲೇ ಅದೇನೊ ಗೊತ್ತಿಲ್ಲ ಕಣ್ಣೀರು ಹರಿಯುತ್ತಿತ್ತು. ಓಡಿದಷ್ಟೇ ಜೋರಾಗಿ ಅಳಬೇಕು ಎಂದೆನಿಸಿತು. ನಾನಿದ್ದ ಕಂಪೆನಿಯಲ್ಲಾಗ ಮಕ್ಕನ್ ಸಾಬ್ ಎಂಬುವವರು ಕ್ಯಾಂಟಿನ್ ನೋಡಿಕೊಳ್ಳುತ್ತಿದ್ದರು. ಅಳುತ್ತಿದ್ದ ನನ್ನ ನೋಡಿದ್ದೇ ಏನಾಯಿತೆಂಬ ಒಂದೇ ಪ್ರಶ್ನೆ. ಹೇಳಲಾಗದೇ ಒದ್ದಾಡಿದೆ. ನಾಚಿಕೆ ತೊರೆದು ಅಂತೂ ಎಲ್ಲವನ್ನೂ ತಿಳಿಸಿದೆ. ಸಿಟ್ಟುಗೊಂಡಿದ್ದ ಅವರು ಕೈಯಲ್ಲೊಂದು ಕುಡುಗೋಲು ಹಿಡಿದು ಅವನಿದ್ದಲ್ಲಿಗೆ ಕರೆದೊಯ್ದರು. ಅವನು ಅಲ್ಲಿಯೇ ನಿಂತಿದ್ದ. ಮಕ್ಕನ್ ಸಾಬ್ ಅವರು ಹೋದದ್ದೇ ಅವನ ಗುಪ್ತಾಂಗಗಳಿಗೆ ಕೈಹಾಕಿ ಎಳೆದಾಡಲಾರಂಭಿಸಿದರು. ಇದೇನು ನೋಡುತ್ತಿದ್ದೇನೆ ಎಂದು ಅಂದಾಜಿಸಲೂ ಆಗದ ಸ್ಥಿತಿ ನನ್ನದು. ಹಾಕಿ ಕಣ್ಣುಮುಚ್ಚಿ ತಿರುಗಿ ನಿಂತೆ. ಕುಡುಗೋಲಿನಲ್ಲಿ ಕತ್ತರಿಸಿ ಬಿಡಬೇಕೆಂಬ ಆಕ್ರೋಶ ಮಕ್ಕನ್ ಸಾಬ್ ಅವರಲ್ಲಿದ್ದುದು ಕಂಡಿದ್ದೆ. ಅಪಾಯವೊಂದು ಜರುಗುವ ಮುನ್ನ ನಾನಾಗಿಯೇ ತಡೆಯಲೇ? ಅನ್ನಿಸಿತಾದರೂ ಕಣ್ಣೆದುರು ಧುತ್ತೆಂದು ನಿಂತ ಸಾವಿನ ಭಯ ಅಥವಾ ಕಾಮದ ಭಾವನೆಯನ್ನು ಉದ್ರೇಕಿಸುವ ಗುಪ್ತಾಂಗವಿಲ್ಲದೆ ಬದುಕುವ ಅಸಹಾಯಕತೆಯ ಸಂಕಟ ಅವನನ್ನು ಕಾಡಿದರೆ ಉಳಿದವರು ಎಚ್ಚೆತ್ತುಕೊಳ್ಳುತ್ತಾರೆ ಎಂದು ಮನಸ್ಸು ಹೇಳಿದ್ದಕ್ಕೆ ನನ್ನ ದೇಹವೂ ಕಲ್ಲಂತೆ ನಿಂತುಬಿಟ್ಟಿತು!

ಮಕ್ಕನ್ ಸಾಬ್ ಕುಡುಗೋಲು ಹಿಡಿದು ಹೋಗುವ ಅವಶ್ಯವೇ ಇರಲಿಲ್ಲ. ಅವರದು ದೈತ್ಯ ದೇಹ. ಒಮ್ಮೆ ಎದೆ ಸೆಟೆದು ನಿಂತರೆ ಪೈಲ್ವಾನರೇ ಸೈ. ಅಂತಹವರು ಈ ಅಶಕ್ತ ಗಂಡಸಿನ ಎದುರು ನಿಂತರೆ ಅವನ ಕಥೆ ಏನಾಗಬೇಡ? ಬೈಗುಳಗಳ ಸುರಿಮಳೆ, ಕಣ್ಣಲ್ಲೇ ಬೆದರಿಕೆ, ಕೈಯಲ್ಲಿ ಕುಡುಗೋಲು… ಆ ದೃಶ್ಯ ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ನಡೆದದ್ದನ್ನು ಕಂಪೆನಿಯಲ್ಲಿ ಹೇಳಕೂಡದೆಂದು ಅವರೇ ಒತ್ತಾಯಿಸಿದರು. ಮಕ್ಕನ್ ಸಾಬ್ ಅವರು ಜೊತೆನಿಂತ ಆ ದಿನವನ್ನು ಕೃತಜ್ಞತೆಯಿಂದಲೇ ಸ್ಮರಿಸುವೆ.

ದಾರಿಹೋಕನ ಕಥೆ ಅಂತಿರಲಿ, ಮದುವೆಯಾದ ಬಳಿಕ ನೃತ್ಯ ಕಲಿಯುವ ನನ್ನ ಕನಸು ನುಚ್ಚುನೂರಾದದ್ದು ಈಗಲೂ ಸಹಿಸಲಾರೆ. ಮಾತಾಡುವುದಕ್ಕೆ ಗಂಡಸರಿಗಿರುವ ಸ್ವಾತಂತ್ರ್ಯ ಹೆಣ್ಣಿಗಿರದು. ಗಂಡು ಏನು ಮಾಡಿದರೂ ಅದು ಕ್ಷಮ್ಯ. ಹೆಣ್ಣು ಏನಾದರೂ ಮಾಡುವುದಿರಲಿ, ಅಪ್ಪಣೆ ಇಲ್ಲದೆ ಮನೆಯ ಹೊಸಿಲನ್ನೂ ದಾಟುವಂತಿಲ್ಲ ಬಿಡಿ. ಮಾಂಡ್ರೆ ಕವಿಗಳ ಕಂಪೆನಿಯಲ್ಲಿ ಇದ್ದಾಗಲೇ ಕಾರ್ಗಲ್ ಬೇಬಿಯ ಪರಿಚಯವಾಗಿತ್ತು. ಬೇಬಿ ನಮ್ಮ ಕಂಪೆನಿಗೆ ಸೇರಿದ ಬಗ್ಗೆ, ಅವಳು ಬಂದೊಡನೆ ಎಲ್ಲರೂ ಬೆರಗುಗೊಂಡ ಬಗ್ಗೆ, ಅತೀ ಹೆಚ್ಚು ಸಂಬಳ ಪಡೆಯುತ್ತಿದ್ದ ಬಗ್ಗೆ ಒಂದಷ್ಟು ಸಂಗತಿಗಳನ್ನು ನಿಮ್ಮೊಡನೆ ಮುಂದೆ ಹಂಚಿಕೊಳ್ಳುವೆ.

ಹಾಂ, ಬೇಬಿ ಮತ್ತು ನಾನು ಇಬ್ಬರೂ ಒಟ್ಟಾಗಿ ನೃತ್ಯ ಕಲಿಕೆಗೆ ಹೋಗುತ್ತಿದ್ದೆವು. ಅಂದು ಬೇಗನೆ ತರಗತಿ ಮುಗಿದಿತ್ತು. ನಾವು ಓಡಾಡುತ್ತಿದ್ದ ಆ ಜಾಗದಲ್ಲಿ ಅಡತಿ ಅಂಗಡಿ ಇದೆ. ಅಂದರೆ ರೈತರು ತಾವು ಬೆಳೆದದ್ದನ್ನು ತಂದು ಶೇಖರಿಸಿ ಇಡುತ್ತಾರಲ್ಲಾ, ಎಪಿಎಂಸಿಯ ರೀತಿ. ಆ ಅಡತಿ ಅಂಗಡಿಯ ಹತ್ತಿರದ ಬರುತ್ತಿದ್ದಂತೆ ನಮ್ಮಿಬ್ಬರನ್ನೂ ಮಾಲೀಕರು ಬರಹೇಳುತ್ತಿದ್ದಾರೆಂದು ಜವಾನನೊಬ್ಬ ತಿಳಿಸಿದ. ಒಬ್ಬರಿಗಿಂತ ಇಬ್ಬರು ಲೇಸು ಎಂಬ ಮಾತಿಲ್ಲವೇ? ಇಬ್ಬರೂ ಒಳಹೊಕ್ಕರೆ ಸಿನೆಮಾದಲ್ಲಿ ಶ್ರೀಮಂತರು ವಿಲಾಸ ಪಡುವಾಗ ತೋರಿಸುವ ದೃಶ್ಯವೇ ಕಣ್ಮುಂದೆ ನಿಂತಂತಿದೆ. ಊರ ಧನಿಕರೆಲ್ಲ ಕಸೂತಿ ಮಾಡಿದ ದಿಂಬು, ರಂಗು ರಂಗಾದ ಹಾಸಿಗೆಯ ಮೇಲೆ ವಿರಮಿಸುತ್ತಿದ್ದರು. ನಾವ್ಯಾಕೆ ಇಲ್ಲಿಗೆ ಬಂದಿದ್ದೇವೆ ಎಂಬುದೇ ಯಕ್ಷಪ್ರಶ್ನೆಯಾಗಿತ್ತು ನನಗೆ! ಪರಿಚಯಕ್ಕೆಂದು ಕರೆದಿದ್ದಾರೆ, ಹೆದರಬೇಡಿ ಎಂದರು. ನಮ್ಮ ಜೊತೆ ಪರಿಚಯ ಬೆಳೆಸುವಂಥದ್ದೇನಿದೆ? ಯಾವ ಕಡೆಯಿಂದ ಯೋಚಿಸಿದರೂ ಉತ್ತರ ಹೊಳೆಯುತ್ತಿಲ್ಲ. ಮುಜುಗರದಲ್ಲೇ ಹೋಗಿ ನಿಂತೆವು. ಕೂರಿಸಿ ಮಾತಿಗೆ ಪೀಠಿಕೆ ಹಾಕಿದವರು, ಎ.ಬಿ.ಪಾಟೀಲ್. ದೊಡ್ಡ ಸಿರಿವಂತನೆಂದು ನಾನು ಕೇಳಿಬಲ್ಲೆ. ಅಡತಿ ಅಂಗಡಿ, ತೋಟ, ಅರಮನೆಯಂಥ ಮನೆ, ಆಳು ಕಾಳು, ಹೀಗೆ ಪಟ್ಟಿ ಹೇಳುತ್ತಲೇ ಇದ್ದರು. ಪಟ್ಟಿ ಪ್ರವಚನ ಆದ ಮೇಲೆ, ‘ಇವಿಷ್ಟು ನನ್ನವು’ ಎಂದರು. ಆಗಲಿ, ಬೇಡ ಎಂದವರಾರು? ಎಂಬುದು ನನ್ನ ಮುಖಭಾವವಾಗಿತ್ತು. ಮುಂದುವರೆದು ಅವರೇ ಹೇಳಿದರು, ದಿನಕ್ಕೆ ಸಾವಿರಾರು ರೂಪಾಯಿ ಖರ್ಚಾದರೂ ಅದರಿಂದ ತನಗೆ ಲಾಭವೇ ಇದೆಯೆಂದರು. ಇದೆಲ್ಲ ವಿಷಯ ನನಗೇಕೆ ಎಂದು ನನ್ನ ಪೆದ್ದು ತಲೆಗೆ ಆಗಲೂ ಅರ್ಥವಾಗಿರಲಿಲ್ಲ.

‘ನಾ ನಿನ್ನನ್ನ ಮದುವೆಯಾಗಬೇಕೆಂದಿದ್ದೇನೆ. ನಿನಗೆ ನಾನ್ಯಾವತ್ತೂ ಮೋಸ ಮಾಡುವುದಿಲ್ಲ. ನಿನ್ನ ಹೆಸರಿಗೆ ಇಂತಿಷ್ಟು ಜಾಗೀರು, ಆಸ್ತಿ ಎಲ್ಲವನ್ನೂ ಬರೆದಿಟ್ಟು ನಂತರವಷ್ಟೇ ಮದುವೆಯಾಗುತ್ತೇನೆ. ಅವನನ್ನು ಬಿಟ್ಟುಬಿಡು’ ಎಂದು ಹೇಳುತ್ತಿದ್ದರೆ ನಗಬೇಕೋ ಅಳಬೇಕೋ ಒಂದೂ ತಿಳಿಯಲಿಲ್ಲ. ಸಾಧ್ಯವಿಲ್ಲ ಎಂಬಂತೆ ತಲೆಯಲ್ಲಾಡಿಸಿದೆ. ಮನವೊಲಿಕೆಯ ಪ್ರಯತ್ನವನ್ನು ಅವರೂ ಕೈಬಿಡಲಿಲ್ಲ. ‘ಹಾಳುಬಾವಿಗೆ ಬಿದ್ದಿದ್ದೀಯಾ. ಒಳ್ಳೆ ನಿರ್ಧಾರ ಮಾಡಿದ್ರೆ ಸುಖವಾಗಿರಬಹುದು’ ಅಂತೇನೇನೊ ಬಡಬಡಾಯಿಸುತ್ತಿದ್ದರು. ‘ಈಗದು ಆಗದ ಮಾತು. ಮನಸ್ಸು ಕೊಟ್ಟವರೊಂದಿಗೇ ಬಾಳುತ್ತಿದ್ದೇನೆ. ಅಲ್ಲಾ, ಮದುವೆಯಾಗಿದ್ದೀನಿ ಅಂತ ಗೊತ್ತಿದ್ದೂ ಹೀಗೆ ಕೇಳ್ಬಹುದಾ ನೀವು? ನಿಮ್ಮನೆಯಲ್ಲೂ ನನ್ನಷ್ಟೇ ವಯಸ್ಸಿನ ತಂಗಿ ಇದ್ದಿದ್ರೆ, ಆಕೆಗೂ ಹೀಗೆ ಬೇರೆ ಮದುವೆ ಮಾಡಿಸ್ತಿದ್ರಾ?’ ನಾನೂ ಕೇಳೇಬಿಟ್ಟೆ. ಗಂಟೆಗಟ್ಟಲೆ ನಡೆದದ್ದು ಬರೀ ಪ್ರಯೋಜನವಿಲ್ಲದ ವಾಗ್ವಾದ. ಹೊರಗೆ ಧೋ ಎಂದು ಸುರಿವ ಮಳೆ, ಒಳಗೆ ಮಾತುಗಳ ಮುತ್ತು ಉದುರುತ್ತಿತ್ತು. ಹೌದು, ಅವು ಮುತ್ತುಗಳೇ ಆಗಿತ್ತೆಂದು ಅನಿಸುತ್ತದೆ. ಆದರೆ, ನನ್ನೊಳಗಿನ ಮುಗ್ಧತೆ, ಅದಾಗಲೇ ರೂಢಿಯಾಗಿದ್ದ ಸಾಂಸಾರಿಕ ಮೌಲ್ಯಗಳು ಹೆಕ್ಕಿಕೊಳ್ಳುವ ಜಾಣತನವನ್ನು ತೋರಲಿಲ್ಲ.

ಸರಿ, ಮಳೆ ನಿಂತು ಮನೆ ತಲುಪುವ ಹೊತ್ತಿಗೆ ರಾತ್ರಿ ಎಂಟರ ಹೊತ್ತು. ದೊಡ್ಡ ರಾದ್ಧಾಂತವೇ ಆಗಿತ್ತು. ‘ಯಾಕಿಷ್ಟು ತಡವಾಯ್ತು?’ ಪ್ರಶ್ನೆ ಗಡುಸಾಗಿಯೇ ಕೇಳಿಸಿತು. ಏನು ಉತ್ತರಿಸಬೇಕೆಂದು ತೋರದೆ, ಬೇಬಿಯಕ್ಕನೊಂದಿಗೆ ಪಿಚ್ಚರ್ ನೋಡುವುದಕ್ಕೆ ಹೋಗಿದ್ದೆ ಎಂದುಬಿಟ್ಟೆ. ನಂತರ ಕೇಳಿದ್ದು, ಕೆನ್ನೆಯ ಮೇಲೆ ಬಿದ್ದ ಛಟಾರ್ ಎಂಬ ಏಟಿನ ದನಿಯಷ್ಟೇ! ‘ಹೇಳದೆ ಕೇಳದೆ ಇನ್ನೆಲ್ಲಿಯೂ ಹೋಗಕೂಡದು. ಡಾನ್ಸ್ ಕ್ಲಾಸ್ ಸೇರಿಸಿಯೇ ತಪ್ಪು ಮಾಡಿದೆ’ ಎಂದು ಹೇಳಿದ್ದರೆ ಅತ್ತು ಸುಮ್ಮನಾಗುತ್ತಿದ್ದೆ. ಆದರೆ ನುಡಿದಂತೆ ನಡೆದೇಬಿಟ್ಟರು! ಅಂದಿನಿಂದ, ಅಲ್ಲ. ಆ ಕ್ಷಣದಿಂದ ನೃತ್ಯ ಕಲಿಕೆ ಎಂಬುದು ನನ್ನ ಪಾಲಿಗೆ ಗಗನಕುಸುಮವೇ ಆಯಿತು. ಈಗಲೂ ನೃತ್ಯ ಕಲಿವ ಉತ್ಸಾಹ ಇದೆ. ಆದರೆ ದೇಹಸ್ಥಿತಿ ಅಷ್ಟು ಪೂರಕವಾಗಿಲ್ಲ.

ಮುಂದುವರೆಯುವುದು…
(ಹಿಂದಿನ ಕಂತು: ಹೆಣ್ಣಿನ ನೋವಿಗೂ ಬಣ್ಣವೇ ಮುಲಾಮು)

About The Author

ಕೀರ್ತಿ ಬೈಂದೂರ್

ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಂದೋಲನ ಪತ್ರಿಕೆಯ ಹಾಡುಪಾಡು ಪುಟದಲ್ಲಿ ಇವರ ಅನೇಕ ಲೇಖನಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ