ಅವರು ಹೇಳಿದ ದ್ವೀಪವಾಸಿ ಮುತ್ತುಕೋಯಾನ ಕಥೆಯನ್ನು ಕೇಳಿದರೆ ಏಕಕಾಲದಲ್ಲಿ ನಗುವೂ ವಿಷಾದವೂ ಖೇದವೂ ನಗುವೂ, ವಿಷಾದವೂ, ಖೇದವೂ, ವೈರಾಗ್ಯವೂ ಉಂಟಾಗುವ ಹಾಗೆ ಇತ್ತು. ಮುಕ್ತಿಯಾರರು ಹೇಳಿದ ಹಾಗೆ ಮುತ್ತುಕೋಯಾರಿಗೆ ಸುಮಾರು ಎಂಬತ್ತರ ಆಸುಪಾಸು ವಯಸ್ಸು ಇರಬಹುದು. ಅವರು ಕಳೆದ ಮೂವತ್ತು ವರ್ಷಗಳಿಂದ ಮಾನಸಿಕ ಅಸ್ವಸ್ಥರಂತೆ ನಟಿಸುತ್ತಾ ಮೀನು ಹಿಡಿದುಕೊಂಡು ಈ ಪುಟ್ಟ ದ್ವೀಪದಲ್ಲಿ ಬದುಕುತ್ತಿದ್ದರು. ಹಾಗೆ ನಟಿಸಿರದೆ ಇದ್ದರೆ ಇವರು ಜೈಲು ಪಾಲಾಗಬೇಕಿತ್ತು. ಏಕೆಂದರೆ ಅವರಿಂದ ಅಂತಹ ಒಂದು ದೊಡ್ಡ ಅಪರಾಧ ಘಟಿಸಿಹೋಗಿತ್ತು.
ಅಬ್ದುಲ್ ರಶೀದ್ ಬರೆದ ಈ ಭಾನುವಾರದ ಕತೆ “ಅಮವಾಸ್ಯೆಯ ಇರುಳ ಅಸಂಖ್ಯ ನಕ್ಷತ್ರಗಳು” ನಿಮ್ಮ ಓದಿಗೆ
ಎಷ್ಟೊಂದು ನೀಲ ಈ ಶಾಂತಸಾಗರ, ಎಷ್ಟು ಅಪರಿಮಿತ ಈ ನಿಸರ್ಗ ಸೌಂದರ್ಯ ಮತ್ತು ಎಷ್ಟೆಲ್ಲ ಅನೂಹ್ಯ ಆಕಾಶದ ಈ ಹಗಲಿನ ಬಣ್ಣಗಳು. ಆದರೆ ಇಷ್ಟೆಲ್ಲ ಆನಂದಗಳ ನಡುವೆ ಊಹಿಸಲೂ ಸಾಧ್ಯವಿಲ್ಲದ ಮನುಷ್ಯ ನಿರ್ಮಿತ ಗೋಳುಗಳು. ಮತ್ತು ಇವೆಲ್ಲವನ್ನೂ ಯೋಚಿಸಿಕೊಂಡು ಈ ಪಯಣದ ನಡುವೆಯೇ ಏಕಾಂಗಿಯಾಗುತ್ತಿರುವ ನಾನು. ಬಹುಶಃ ಹಿಂದಿನ ಯಾವುದೋ ಒಂದು ಜನ್ಮದಲ್ಲಿ ನಾನೂ ಹೀಗೇ ಯಾವುದೋ ಒಂದು ಖಂಡದಲ್ಲಿ, ಏನೋ ಒಂದು ಜೀವಿಯಾಗಿದ್ದವನು ಇಂತಹದೇ ಯಾವುದೋ ಒಂದು ತಮಾಷೆಯೂ, ಅಸಂಗತವೂ ಆದ ಆಕಸ್ಮಿಕವೊಂದರಲ್ಲಿ ಶಿಕ್ಷೆಗೆ ಒಳಗಾಗಿರಬಹುದು. ಅದರಿಂದ ತಪ್ಪಿಸಿಕೊಳ್ಳಲು ಹೀಗೆ ಈ ಮನುಷ್ಯ ಜನ್ಮ ತಳೆದಿರುವವನಂತೆ ನಟಿಸುತ್ತಾ ಲೋಕಾಂತರ ಚಲಿಸುತ್ತಿರಬಹುದು ಎಂದೆಲ್ಲ ಯೋಚಿಸಿಕೊಂಡು ಮತ್ತಷ್ಟು ಗಾಬರಿಗೊಳ್ಳುತ್ತೇನೆ. ಅಷ್ಟು ಹೊತ್ತಿಗೆ ಕಣ್ಣೆದುರೇ ಏನೋ ಒಂದು ಮನುಷ್ಯ ಅಚ್ಚರಿ ಜರುಗುತ್ತದೆ. ಅದನ್ನು ಅಟ್ಟಿಸಿಕೊಂಡು ಹೋಗುವ ಹೊತ್ತಿಗೆ ಈ ವಿಹ್ವಲತೆ ಮರೆಯಾಗಿಬಿಡುತ್ತದೆ. ಮತ್ತೆ ಅದರ ಹಿಂದೆ ಸಂಚಾರ. ಅದರ ನಂತರ ಮತ್ತೆ ಸಂಭವಿಸುವ ಖಿನ್ನತೆ. ಎಲ್ಲಿಂದಲೋ ಕೇಳಿ ಬರುವ ಒಂದು ದಿವ್ಯ ಸಂಗೀತದಂತಹ ಪ್ರೀತಿಯ ಎಳೆ. ಮತ್ತೆ ಮನುಷ್ಯನಾಗುತ್ತೇನೆ.
ಕಳೆದ ವರ್ಷದ ಕಾರ್ತಿಕ ಅಮವಾಸ್ಯೆಯ ಇಂತಹದೇ ಹಗಲು ಈ ದ್ವೀಪ ಸಮೂಹದ ಈ ಜನವಿರಳ ದ್ವೀಪವನ್ನು ಹುಡುಕಿಕೊಂಡು ಬರಲು ಇಂತಹದೇ ಒಂದು ಕಾರಣವಿತ್ತು. ಅದರ ಹಿಂದೆ ಒಂದು ಕತೆಯೂ ಇತ್ತು. ಈ ಕತೆಯನ್ನು ವಿವರಿಸುವ ಮೊದಲು ಆದಿ ಅನಾದಿ ಕಾಲದಿಂದಲೂ ಅರಬಿ ಕಡಲಿನ ನಡುವೆ ಬೃಹತ್ ಆಮೆಗಳಂತೆ ಬಿಸಿಲಲ್ಲಿ ಹೊಳೆಯುತ್ತ ಮಲಗಿರುವ ಈ ದ್ವೀಪಮಾಲೆಯ ಕುರಿತು ಅರಿಯಬೇಕು. ಹಲವು ನೂರು ಮಿಲಿಯನ್ ವರ್ಷಗಳ ಹಿಂದೆ ಕಡಲ ತಳದ ನೆಲದಲ್ಲಿ ಉಂಟಾದ ಲಾವಾಗ್ನಿಯಿಂದಾಗಿ ಮೇಲೆದ್ದು ಬಂದ ಬೂದಿಯ ಮೇಲೆ ಅಣಬೆಗಳ ಹಾಗೆ ಎದ್ದು ನಿಂತ ಪುಟ್ಟಪುಟ್ಟ ಮಣ್ಣ ಬಟ್ಟಲುಗಳು ಇವು. ಹಾಗೆ ನೋಡಿದರೆ ನಾವು ಬದುಕುತ್ತಿರುವ ಈ ಭೂಮಿಯ ಕಥೆಯೂ ಹೀಗೇ ಅಲ್ಲವೇ.. ಎಲ್ಲವೂ ಕೇವಲ ನಿರುದ್ದಿಶ್ಯ ಸೃಷ್ಟಿಗಳು. ಕೆಲವು ದೊಡ್ಡವು ಕೆಲವು ಸಣ್ಣವು ಮತ್ತು ಸಣ್ಣ ದೊಡ್ಡ ಮನುಷ್ಯರು ಅಷ್ಟೇ.
ಇಬ್ನ್ಬತೂತನಿಂದ ಹಿಡಿದು ವಾಸ್ಕೋಡಗಾಮನವರೆಗೆ, ಸಾಮ್ರಾಜ್ಯಶಾಹಿಗಳಿಂದ ಹಿಡಿದು ಕಡಲುಗಳ್ಳರವರೆಗೆ, ಮಸಾಲೆ ಪದಾರ್ಥಗಳಿಂದ ಹಿಡಿದು ಖಚ್ಚಾತೈಲದವರೆಗೆ ಸರಕುಗಳನ್ನೂ ಮನುಷ್ಯರನ್ನೂ ಹೊತ್ತ ಕಂಟೈನರುಗಳೂ, ಯುದ್ಧನೌಕೆಗಳೂ, ಐಷಾರಾಮೀ ಪ್ರಯಾಣಿಕ ಹಡಗುಗಳೂ ಈ ದ್ವೀಪ ಸಮೂಹಗಳನ್ನು ತಾಗಿಕೊಂಡೇ ಆಳ ಕಡಲಿನಲ್ಲಿ ಅತ್ತಿಂದಿತ್ತ ಸಂಚರಿಸುತ್ತಿರುತ್ತವೆ. ಅವುಗಳಿಗೆ ದೂರದಿಂದಲೇ ದಾರಿ ತೋರಿಸಲೆಂದೇ ಇರುಳಿಡೀ ಜ್ವಾಜಲ್ಯಮಾನವಾದ ದೀಪಗಳನ್ನು ತಿರುಗಿಸುತ್ತಾ ನಿಂತಿರುವ ದೀಪಸ್ತಂಬಗಳು ಇಲ್ಲಿನ ಎಲ್ಲಾ ದ್ವೀಪಗಳಲ್ಲೂ ಇವೆ. ಇವು ಈ ದ್ವೀಪಗಳು ಕಡಲಿನ ನಡುವೆ ಎದ್ದು ನಿಂತಿರುವ ಹವಳ ದಿಬ್ಬಗಳಿಂದ ಉಂಟಾಗಿರುವ ಭೂಪ್ರದೇಶವಾಗಿರುವುದರಿಂದ ಆಕಸ್ಮಿಕವಾಗಿ ಈ ಹಡಗುಗಳೇನಾದರೂ ದಾರಿ ತಪ್ಪಿ ಈ ದಿಬ್ಬಗಳಿಗೆ ಡಿಕ್ಕಿ ಹೊಡೆದರೆ ಭಯಂಕರ ಅನಾಹುತಗಳು ಉಂಟಾಗುವ ಸಂಭವವಿರುತ್ತವೆ. ಹಾಗಾಗಿ ತಡೆಯೇ ಇಲ್ಲದ ಸಾಗರದ ನಡುವೆ ನಿರಾಂತಂಕವಾಗಿ ಚಲಿಸುವ ಈ ಹಡಗುಗಳು ಈ ದ್ವೀಪಗಳ ಬಳಿ ಬಂದಾಗ ಎಚ್ಚರಿಕೆಯಿಂದ ಚಲಿಸಬೇಕಾಗುತ್ತದೆ. ಹಾಗೆ ಎಚ್ಚರವಿಲ್ಲದೆ ಚಲಿಸಿ ಅವಘಡಕ್ಕೀಡಾದ ಹಡಗುಗಳ ಕುರಿತು ಹಲವು ಕಥೆಗಳೂ, ಕೆಲವು ಐತಿಹ್ಯಗಳೂ ಈ ದ್ವೀಪಗಳಲ್ಲಿವೆ. ಕೆಲವು ಕಥೆಗಳಂತೂ ನಗು ಬರಿಸುವಷ್ಟು ತಮಾಷೆಯವೂ ಹೆದರಿಸಿಬಿಡುವಷ್ಟು ಭಯಾನಕವೂ ಆಗಿವೆ. ಈ ಎಲ್ಲದರ ಕುರಿತು ಇನ್ನೊಮ್ಮೆ ಹೇಳುವೆ.
ಈಗ ಹೇಳಹೊರಟಿರುವುದು ಕಳೆದ ಕಾರ್ತಿಕ ಅಮವಾಸ್ಯೆಯ ಹಗಲು ಈ ಜನವಿರಳ ದ್ವೀಪಕ್ಕೆ ನಾನು ಹೊರಟಿರುವ ಕಾರಣದ ಕುರಿತು. ಬಹುಶಃ ಈ ಕಥೆಯನ್ನು ಕೇಳಿದ ಮೇಲೆ ನಿಮಗೆ ಏನನಿಸಬಹುದು ಎಂದು ನಾನು ಊಹಿಸಲಾರೆ. ಆದರೆ ನನಗಂತೂ ಈ ಭೂಲೋಕ ಎನ್ನುವುದು ಎಷ್ಟು ವಿಶಾಲವೂ ಅನಂತವೂ ಆಗಿದ್ದರೂ ಇಲ್ಲಿ ಈ ಭೂಲೋಕದಲ್ಲಿ ನಡೆಯುವ ಹಲವು ಘಟನಾವಳಿಗಳು ನಮ್ಮ ನಾಭಿಯಿಂದ ಶುರುವಾಗಿ ಹೃದಯದಲ್ಲಿ ಕೊನೆಯಾಗುವಷ್ಟು ನಿಕಟವೂ ಸಂಕಟಕರವೂ ಆಗಿರುತ್ತವೆ ಎಂಬ ಸತ್ಯ ಗೊತ್ತಾಗಿದೆ. ಲೋಕದ ಯಾವುದೋ ಕೊನೆಯಲ್ಲಿ ಸಂಕಟವನ್ನು ಉಂಟು ಮಾಡುವ ದುರ್ಘಟನೆಯೊಂದರ ಆರಂಭ ನಮ್ಮ ಕಣ್ಣ ಎದುರಿನ ಬಯಲಲ್ಲೇ ಶುರುವಾಗಿರುತ್ತದೆ. ಅಥವಾ ಲೋಕದ ಎಲ್ಲೋ ಮೂಲೆಯಲ್ಲಿ ಶುರುವಾದ ಪರಿಮಳವೊಂದು ನಮ್ಮ ಕಣ್ಣ ಮುಂದೆಯೇ ಹೂವಿನಂತೆ ಅರಳಿ ಇಲ್ಲೇ ಬಾಡಿ ಬಿದ್ದುಬಿಡುತ್ತದೆ. ಲೋಕದ ಸಮಸ್ತ ವಹಿವಾಟುಗಳೂ ಕೊನೆಗೆ ಒಂದು ಸಣ್ಣ ಚೀತ್ಕಾರದೊಂದಿಗೆ ಕೊನೆಗೊಳ್ಳುತ್ತದೆ. ಇಂತಹದೇ ಒಂದು ಸಂಕಟದ ಕಥೆಯೊಂದರ ಎಳೆಯನ್ನು ಹುಡುಕುತ್ತಾ ನಾನು ಇರುವ ದ್ವೀಪದಿಂದ ಹಡಗು ಹತ್ತಿ ಹೊರಟು ಈ ಜನವಿರಳ ದ್ವೀಪವನ್ನು ತಲುಪಿದ್ದೆ.

ಅಂದ ಹಾಗೆ ಈ ಕಥೆ ಶುರುವಾಗುವುದು ಆಗ್ನೇಯ ಯುರೋಪಿನ ಬಾಲ್ಕನ್ ಪ್ರಾಂತ್ಯದ ಮಾಂಟೆನಿಗ್ರೋ ದೇಶದ ಕಡಲ ತೀರದ ಊರೊಂದರಲ್ಲಿ. ನಮ್ಮ ತಾರುಣ್ಯದ ಕಾಲದಲ್ಲಿ ಮಾರ್ಷಲ್ ಟಿಟೋನ ಯುಗೋಸ್ಲಾವಿಯಾದ ಸಮಾಜವಾದೀ ಸರ್ವಾಧಿಕಾರಿ ಗಣರಾಜ್ಯದ ಒಂದು ಭಾಗವಾಗಿದ್ದ ಈ ಮಾಂಟೆನಿಗ್ರೋ ಆನಂತರ ತುಂಡುತುಂಡಾಗಿ, ಕಾಲಾಂತರದಲ್ಲಿ ಜನಾಂಗೀಯ ಸರಣಿ ಹತ್ಯಾಕಾಂಡಗಳಿಗೆ ಸಿಲುಕಿ ಜರ್ಜರಿತವಾಗಿ, ಇದೀಗ ಹಲವು ನಿಟ್ಟುಸಿರುಗಳೊಂದಿಗೆ ಬದುಕುತ್ತಿರುವ ದೇಶ. ಸುಂದರ ಕಡಲ ತೀರಗಳಿಗೂ, ಸುಂದರಿಯರಾದ ಸ್ತ್ರೀಯರಿಗೂ, ಕೋಟೆ ಕೊತ್ತಲಗಳಿಗೂ, ವಲಸೆ ಹಕ್ಕಿಗಳಿಗೂ, ಪುರಾತನ ಕ್ರೈಸ್ತ ಪ್ರಾರ್ಥನಾ ಮಂದಿರಗಳಿಗೂ, ಲೋಕವಿಖ್ಯಾತ ಕಡಲುಗಳ್ಳರಿಗೂ ಮತ್ತು ಲೋಕದೆಲ್ಲೆಡೆ ಸಂಚರಿಸುವ ನಾವಿಕರಿಗೂ ಹೆಸರಾದ ದೇಶವಿದು.
ಈ ಊರಿನಲ್ಲಿ ಈಕೆ ಒಬ್ಬಳು ಪ್ರಖ್ಯಾತ ರೂಪದರ್ಶಿ. ತನ್ನ ಈ ತಾರುಣ್ಯದ ಬಹುತೇಕ ಹಗಲುಗಳಲ್ಲಿ ತುಂಡುಡುಗೆ ತೊಟ್ಟು ಹೊಳೆವ ಬಂಗಾರದ ಬೀಚುಗಳಲ್ಲಿ ಛಾಯಾಗ್ರಾಹಕರುಗಳಿಗೆ ತನ್ನ ಬಂಗಾರದ ದೇಹವನ್ನು ಬಳುಕಿಸಿ ತೋರಿಸಬೇಕಾದ ಬದುಕು ಇವಳದು. ಅದು ಇವಳಿಗೆ ಬಹುತೇಕ ಇಷ್ಟವೂ ಕೂಡಾ. ಏಕೆಂದರೆ ರೂಪದರ್ಶಿಗೆಂದೇ ಹೇಳಿ ಮಾಡಿಟ್ಟಿರುವ ಕೃಶವಾದ ಆದರೆ ಕಟುವಾದ ತಿರುವುಭರಿತ ಹೊಳೆವ ದೇಹ ಇವಳದು. ಗರ್ಭವತಿಯಾಗಿ ದೊಡ್ಡ ಹೊಟ್ಟೆ ಹೊತ್ತುಕೊಂಡು ಓಡಾಡುತ್ತಿರುವ ಈಕೆಗೆ ಈಗಾಗಲೇ ಅಂಬೆಗಾಲಿಟ್ಟು ಮುದ್ದಾಡಿಸಿಕೊಳ್ಳುತ್ತಿರುವ ಮಗುವೊಂದೂ ಇದೆ. ಈಕೆಗೆ ಹೊಟ್ಟೆ ತುಂಬಾ ಪ್ರೀತಿಯನ್ನೂ , ಮನೆಯ ತುಂಬಾ ಮಕ್ಕಳನ್ನೂ ಕರುಣಿಸಲೆಂದೇ ಜನ್ಮ ತಳೆದಿರುವಂತಹ ಗೆಳೆಯನೂ ಇದ್ದಾನೆ. ಕಟೆದ ವಿಗ್ರಹದಂತಿರುವ ಆತ ಈ ಲೋಕಕ್ಕೆ ಸೇರಿರುವ ಹಾಗೆ ಕಾಣಿಸದಷ್ಟು ಮುದ್ದಾಗಿದ್ದಾನೆ.
ಮಾಂಟೆನಿಗ್ರೋದ ಈ ಅನುಪಮ ರೂಪದರ್ಶಿಗೊಬ್ಬ ಅವಳಿ ಸಹೋದರ. ಆತ ಈಕೆಯ ಇನ್ನೊಂದು ಆತ್ಮದಂತೆ ಇದ್ದವನು. ಈತ ಕೆಲಸ ಮಾಡುತ್ತಿರುವುದು ಅರಬ್ ರಾಷ್ಟ್ರಗಳಿಂದ ಲೋಕದೆಲ್ಲೆಡೆಗೆ ಕಚ್ಚಾತೈಲ ಸಾಗಿಸುವ ಅಂತರಾಷ್ಟ್ರೀಯ ಸರಕು ಹಡಗೊಂದರಲ್ಲಿ. ಈ ಸರಕಿನ ಹಡಗು ಕಳೆದ ಸೆಪ್ಟೆಂಬರ್ ತಿಂಗಳ ಕೊನೆಯ ವಾರದಲ್ಲಿ ಈಗ ನಾನು ವಿವರಿಸುತ್ತಿರುವ ಜನವಿರಳ ದ್ವೀಪದಿಂದ ಸುಮಾರು ಇಪ್ಪತ್ತು ನಾಟಿಕಲ್ ಮೈಲು ದೂರದಲ್ಲಿ ಚಲಿಸುತ್ತಿತ್ತು. ಈ ಕಡಲ ನಡುವೆಯೇ ಈತ ನಾಪತ್ತೆಯಾಗಿದ್ದ. ನಾಪತ್ತೆಯಾಗುವ ಕೆಲ ತಾಸುಗಳ ಮೊದಲು ಈತ ಮಾಂಟೆನಿಗ್ರೋದ ತನ್ನ ಗೆಳತಿಯೊಂದಿಗೆ ಫೋನಿನಲ್ಲಿ ಮಾತಾಡಿದ್ದ. ಮಾತಾಡುತ್ತಲೇ ಈತನ ಕರೆ ಕಡಿತಗೊಂಡಿತ್ತು. ಮಾರನೆಯ ಬೆಳಗ್ಗೆಯಷ್ಟೇ ಈತ ಚಲಿಸುತ್ತಿರುವ ಹಡಗಿನಲ್ಲಿ ಇಲ್ಲದಿರುವುದು ಕಪ್ತಾನನ ಅರಿವಿಗೆ ಬಂದಿತ್ತು. ಆಕೆಯ ಪ್ರಕಾರ ಆಕೆ ಬದುಕಿರುವ ತನಕ ಆಕೆಯ ಆತ್ಮದಂತಿರುವ ಈ ಅವಳಿ ಸಹೋದರ ಅಳಿದು ಹೋಗುವುದು ಸಾಧ್ಯವಿರಲಿಲ್ಲ.
‘ನಾವಿಬ್ಬರು ಹುಟ್ಟಿದ್ದು ಕೆಲವೇ ಕ್ಷಣಗಳ ಅಂತರದಲ್ಲಿ. ಹಾಗಾಗಿ ನಮ್ಮಿಬ್ಬರ ಸಾವು ಬೇರೆಬೇರೆ ಕಾಲ ಮತ್ತು ದೇಶಗಳಲ್ಲಿ ಸಂಭವಿಸುವುದು ಸಾಧ್ಯವಿಲ್ಲ. ನನ್ನ ಅವಳಿ ಸಹೋದರ ಅಸೀಮ ಈಜುಗಾರ ಕೂಡಾ. ಆತ ಕಡಲಿನಲ್ಲಿ ಮುಳುಗಿ ಸಾಯಲು ಸಾಧ್ಯವೇ ಇಲ್ಲ. ಆತ ಹಡಗಿಂದ ಕಳಚಿ ಬಿದ್ದವನು ಈಜುತ್ತಾ ಈ ದ್ವೀಪ ಸಮೂಹದ ಯಾವುದಾದರೂ ನಿರ್ಜನ ದ್ವೀಪವನ್ನು ತಲುಪಿರಬಹುದು. ದಯವಿಟ್ಟು ಅವನನ್ನು ಹುಡುಕಿಕೊಡಿಡು ಮತ್ತು ನನ್ನನ್ನು ಬದುಕಿಸಿ’ ಎಂದು ಹಗಲುರಾತ್ರಿ ನಿದ್ದೆಗೆಟ್ಟು ಈ ಭೂಪ್ರದೇಶದ ಎಲ್ಲೆಡೆಗೆ ಸಂದೇಶಗಳನ್ನು ಕಳುಹಿಸುತ್ತಿದ್ದಳು. ಅಂತಹದೇ ಒಂದು ಸಂದೇಶ ನನಗೂ ಬಂದಿತ್ತು.
ತನ್ನದೇ ಆತ್ಮದಂತಿರುವ ಅವಳಿ ಸಹೋದರನನ್ನು ಕಂಡು ಹಿಡಿದೇ ಬಿಡುವೆ ಎನ್ನುವ ಅಧಮ್ಯ ಚಲದ ಸಹೋದರಿಯೊಬ್ಬಳ ಹೊಟ್ಟೆಯೊಳಗಿನ ಸಂಕಟಗಳು. ಆ ಅವಳಿ ಸಹೋದರ ನಾಪತ್ತೆಯಾದ ಇರುಳು ಆ ಕಚ್ಚಾತೈಲದ ಹಡಗು ನಾನಿರುವ ದ್ವೀಪದಿಂದ ಕೆಲವು ಗಾವುದ ಮೈಲು ದೂರದ ಆಳ ಕಡಲಲ್ಲಿ ಸದ್ದಿಲ್ಲದೆ ಚಲಿಸುತ್ತಿತ್ತು ಎಂಬುದನ್ನು ನೆನಸಿಕೊಂಡೇ ಕರುಳು ಕಿವಿಚಿದಂತಾಗಿತ್ತು. ಕಡಲ ನಡುವೆ ಕಾಣೆಯಾದ ಆಕೆಯ ಅವಳಿ ಸಹೋದರ ಕಾಣೆಯಾಗಿರುವ ನನ್ನ ಆತ್ಮವೂ ಆಗಿರಬಹುದು ಎಂದು ಅನಿಸುತ್ತಿದ್ದ ದಿನಗಳವು. ನೀಲ ಶಾಂತಸಾಗರದ ನಡುವಿನ ನಿರ್ಜನ ಹವಳ ದ್ವೀಪಗಳ ನಡುವಿನ ತೆಂಗಿನ ತೋಪಿನ ಅಡಿಯಲ್ಲಿ ಆತ ನಿಜಕ್ಕೂ ಬದುಕುತ್ತಿರಬಹುದು ಎಂದು ಅಂದುಕೊಂಡೇ ಎಂದು ಅಂದುಕೊಂಡೇ ಈ ದ್ವೀಪಕ್ಕೆ ಹೊರಟ ಹಡಗೊಂದನ್ನು ಹತ್ತಿಕೊಂಡಿದ್ದೆ.
ಅದು ಯಾಕೋ ಗೊತ್ತಿಲ್ಲ. ಹಡಗು ಹತ್ತುವ ಮೊದಲು ಬಲು ಉಲ್ಲಾಸದಿಂದಲೂ, ಬಹಳಷ್ಟು ಉತ್ಸಾಹದಿಂದಲೂ ಅಪರಿಮಿತ ಕುತೂಹಲಗಳಿಂದಲೂ ತುಂಬಿಕೊಂಡಿದ್ದ ನಾನು ಹಡಗು ಚಲಿಸಲು ತೊಡಗಿದೊಡನೆ ಅದು ಯಾಕೋ ದುಗುಡಗೊಂಡಿದ್ದೆ. ಆ ದುಗುಡ ನಿಧಾನಕ್ಕೆ ಒಂದು ತರಹದ ಏಕಾಂಗಿತನಕ್ಕೆ ತಿರುಗಿಕೊಳ್ಳುತಿತ್ತು. ಈ ಏಕಾಂಗಿತನ ಮಾನಸಿಕ ಕ್ಷೋಭೆಗೂ, ದೈಹಿಕ ಅಸ್ವಸ್ಥತೆಗೂ ಪರಿವರ್ತನೆಗೊಂಡು ಪಯಣದ ಮದ್ಯೆಯೇ ಒಂದು ತರಹದ ಅನ್ಯ ಮನಸ್ಕತೆ. ಕಾಣುವುದರಲ್ಲೂ, ಕೇಳುವುದರಲ್ಲೂ ಒಂದು ತೆರನಾದ ವಿಹ್ವಲತೆ. ಯಾಕೋ ಜಗತ್ತೇ ಕೊನೆಯಾಗುತ್ತಿರುವಂತೆ ಅನಿಸತೊಡಗಿತ್ತು.. ಹಿಮಾಲಯದ ಶ್ವೇತ ಪರ್ವತ ಶಿಖರಗಳ ತಪ್ಪಲಲ್ಲಾದರೂ, ಮಲೆನಾಡಿನ ಹಸಿರು ಪರ್ವತಗಳ ನಡುವಿನ ಹುಲ್ಲುಗಾವಲ ಬಯಲುಗಳಲ್ಲಾದರೂ, ಇದೀಗ ನಾನು ಚಲಿಸುತ್ತಿರುವ ನೀಲ ನೀಲ ಕಡಲಿನ ನಡುವಿನಲ್ಲಿಯೂ ಒಮ್ಮಿಂದೊಮ್ಮೆಲೆ ತುಂಬಿಕೊಳ್ಳುವ ಒಂದು ರೀತಿಯ ಅಸಹಾಯಕತೆ.
ಅದುವರೆಗೆ ಮೌನವಾಗಿದ್ದ ಕಡಲಿನಲ್ಲಿ ಚಲಿಸುತ್ತಿರುವ ಹಡಗು ಉಂಟು ಮಾಡುತ್ತಿರುವ ಸದ್ದು, ನಡು ನಡುವಿನಲ್ಲಿ ಕಡಲಿಂದ ಎದ್ದು ದೂರಕ್ಕೆ ಹಾರುತ್ತಿರುವ ಹಾರು ಮೀನುಗಳ ಜಿಗಿತ, ದೂರದೂರದಲ್ಲಿ ಹಾರುತ್ತ ತೆರಳುತ್ತಿರುವ ಡಾಲ್ಫಿನ್ನುಗಳ ಹಿಂಡು ಹಿಂಡು. ಈ ನಡುವಲ್ಲಿ ಯಾರೋ ಒಬ್ಬಳು ಅಪರಿಚಿತಳ ಕಾಣೆಯಾದ ಅವಳಿಯನ್ನು ವೃಥಾ ಹುಡುಕುತ್ತ ಹೊರಟಿರುವ ಒಂಟಿ ನಾನು.
‘ಹೊರಡುತ್ತಿರುವೆ.ಆದರೆ ಅವನು ಬದುಕಿ ಉಳಿದಿರಲಿಕ್ಕಿಲ್ಲ’
ಹಡಗು ಹತ್ತುವ ಮೊದಲು ಅವಳಿಗೆ ಸಂದೇಶ ಕಳಿಸಿದ್ದೆ.
‘ದಯವಿಟ್ಟು ಈಗಲೇ ಈ ಕೆಟ್ಟ ಮಾತು ಬೇಡ .ನಾನು ಬದುಕಿರುವೆ ಎಂದರೆ ಅವನೂ ಬದುಕಿಕೊಂಡಿರುತ್ತಾನೆ. ಇದು ದೈವ ನಿರ್ಣಯ’ ಅವಳು ಉತ್ತರಿಸಿದ್ದಳು.
‘ಅಲ್ಲಿ ಆ ದ್ವೀಪಗಳಲ್ಲಿ ನರ ಬೇಟೆಗಾರರು ಇಲ್ಲ ತಾನೇ’
ಅವಳ ಇನ್ನೊಂದು ಅಮಾಯಕ ಪ್ರಶ್ನೆ.
‘ಇಲ್ಲ. ಹೆದರದಿರು. ನನ್ನ ಹಾಗೆಯೇ ಇರುವ ಕೇವಲ ಮನುಷ್ಯರು ಅವರು’
ನಗು ಬಂದರೂ ಉತ್ತರಿಸಿದ್ದೆ.
‘ಮನುಷ್ಯರು ಇಲ್ಲದ ಕಡೆ ಅವನು ಈಜಿ ತಲುಪಿದ್ದರೆ ತಿನ್ನಲು ಏನಾದರೂ ಸಿಕ್ಕಿರಬಹುದೇ?’
‘ಕೈಗೆಟುಕುವಷ್ಟು ಕೆಳಗೆ ಕಾಯಿಗಳು ತೂಗುತ್ತಿರುವ ತೆಂಗಿನ ಮರಗಳೂ ಇವೆ. ತೀರದಲ್ಲೇ ಓಡಾಡುವ ಕಡಲ ಏಡಿಗಳೂ ಇವೆ ಹೆದರದಿರು’ ಅಂದಿದ್ದೆ
‘ಬಹುಶಃ ಆ ದೇವರೇ ನಿನ್ನನ್ನು ನನಗೆ ಪರಿಚಯಿಸಿರುವ ಹಾಗೆ ಅನಿಸುತ್ತದೆ’
ಅವಳು ಪ್ರೀತಿಯದೊಂದು ಇಮೋಜಿಯೊಂದಿಗೆ ಉತ್ತರಿಸಿದ್ದಳು.
‘ನನಗೂ ಹಾಗೇ ಅನಿಸುತ್ತದೆ’
ನಾನು ಮನಸಿನಲ್ಲಿಯೇ ಅಂದುಕೊಂಡು ಹಡಗು ಹತ್ತಿದ್ದೆ.

ಬೇರೆ ಎಲ್ಲಾದರೂ ಮನಸು ಮಾಡಿದರೆ ನಾವು ಬದುಕುತ್ತಿರುವ ಈ ಲೋಕದ ಒಂದು ತುದಿಯಿಂದ ಇನ್ನೊಂದು ತುದಿಗೆ ಒಂದೆರೆಡು ದಿನಗಳಲ್ಲಿ ಹೋಗಿ ತಲುಪಿಬಿಡಬಹುದು.
ಆದರೆ ಅರಬಿ ಕಡಲಿನ ನಡುವೆ ಯಾರೋ ಎಸೆದು ಹೋದ ಮಣಿಹಾರವೊಂದರ ಕಳಚಿದ ಮುತ್ತುಗಳ ಹಾಗೆ ಹರಡಿರುವ ಈ ದ್ವೀಪ ಸಮೂಹದ ಒಂದು ದ್ವೀಪದಿಂದ ಇನ್ನೊಂದು ದ್ವೀಪಕ್ಕೆ ತಲುಪಬೇಕಾದರೆ ಬಹಳ ಲೆಕ್ಕಾಚಾರ ಮಾಡಬೇಕಾಗುತ್ತದೆ. ಕೆಲವೊಮ್ಮೆ ಮಳೆ ಬಿರುಗಾಳಿ ಕಡಲ ಮಾರುತಗಳ ಕಾಲದಲ್ಲಿ ಕೆಲವು ನೂರು ಮೈಲುಗಳ ಸನಿಹದಲ್ಲೇ ಇರುವ ದ್ವೀಪವೊಂದನ್ನು ತಲುಪಲು ಬಹಳ ದಿನಗಳೇ ತಗುಲಿಬಿಡುತ್ತದೆ. ಯಾವಾಗಲೋ ಹೊರಡುವ ಹಡಗುಗಳು ಹಲವು ದ್ವೀಪಗಳನ್ನು ಬಳಸಿ ನೀವು ಹೋಗಬೇಕಾದ ದ್ವೀಪವನ್ನು ತಲುಪುತ್ತವೆ. ಇದಕ್ಕೆ ಬೇಕಾದ ಅನುಮತಿಗಳು, ಪ್ರಯಾಣದ ಕಾರಣದ ದಾಖಲೆಗಳು, ಹಿಂತಿರುಗುವ ದಿನದ ಪ್ರಮಾಣಗಳು ಈ ಎಲ್ಲವನ್ನೂ ಒದಗಿಸಿ ಒಂದು ದೊಡ್ಡ ನಿಟ್ಟುಸಿರಿಟ್ಟು ಹಡಗೊಂದನ್ನು ಹತ್ತಿ ಗಂಟೆಗಟ್ಟಲೆ ಕಡಲನ್ನು ನಿಟ್ಟಿಸುತ್ತಾ ಕುಳಿತಿರಬೇಕಾಗುತ್ತದೆ. ಅಪರಿಚಿತರ ಜೊತೆ ಮಾತೇ ಆಡದ ದ್ವೀಪವಾಸಿಗಳ ಮೌನ ಮುರಿಯಬೇಕಾದರೆ ಒಂದು ಆತ್ಮೀಯ ಪರಿಚಯವೂ ಬೇಕಾಗುತ್ತದೆ.
ಹಡಗು ಹತ್ತಿ ಹೊರಡುವ ಎರಡು ದಿನಗಳ ಮೊದಲು ಕಲ್ಲಿಕೋಟೆಯ ಜಿಲ್ಲಾ ನ್ಯಾಯಾಲದಲ್ಲಿ ಮುಕ್ತಿಯಾರರಾಗಿರುವ ದ್ವೀಪದ ಹಿರಿಯರೊಬ್ಬರನ್ನು ಮಾತನಾಡಿಸಿದ್ದೆ. ಮುಕ್ತಿಯಾರರು ಅಂದರೆ ದ್ವೀಪವಾಸಿಗಳ ಪರವಾಗಿ ವ್ಯಾಜ್ಯಗಳಲ್ಲಿ ವಾದಿಸುವ ಅಧಿಕಾರ ಪಡೆದಿರುವ ಸ್ಥಳೀಯ ಹಿರಿಯರು. ನಾನು ಮಾತನಾಡಿಸಿದ ಆ ಹಿರಿಯರು ಏಕಕಾಲದಲ್ಲಿ ಕಥೆಗಾರರೂ, ಆಧ್ಯಾತ್ಮಚಿಂತಕರೂ, ಮಾಯಮಂತ್ರಗಳಲ್ಲಿ ಪರಿಣಿತರೂ ಆಗಿದ್ದರು. ನಾನೂ ಕಥೆಗಾರನೆಂದು ಅವರಿಗೂ ಒಂದು ರೀತಿಯ ನಿರ್ವಾಜ್ಯ ಮಮತೆ.
‘ಮುಕ್ತಿಯಾರರೇ ಹೀಗೊಂದು ಘಟನೆ ಸಂಭವಿಸಿದೆ. ನನ್ನ ಅಪರಿಚಿತ ಸ್ನೇಹಿತೆಯ ಮುಳುಗಿದ ಸಹೋದರ ಈಜಿ ತಲುಪಿರಬಹುದಾದ ಆ ದ್ವೀಪವನ್ನು ತಲುಪಬೇಕಾಗಿದೆ. ಅದಕ್ಕೆ ನಿಮ್ಮ ಮಾರ್ಗದರ್ಶನ ಬೇಕಾಗಿದೆ’ ಎಂದು ಪೀಠಿಕೆ ಹಾಕಿದ್ದೆ
‘ನಿಮಗೆ ಹುಚ್ಚಾ? ಈಜು ಬರುವವರು ಯಾರೂ ಸುಮ್ಮನೆ ನೀರಿಗೆ ಹಾರುವುದಿಲ್ಲ. ಸಾಯಬೇಕೆನಿಸಿದರೆ ಮಾತ್ರ ನೀರಿಗೆ ಬೀಳುತ್ತಾರೆ. ಅವನು ಬದುಕಿರುವುದಿಲ್ಲ. ನೀವು ಸುಮ್ಮನೆ ಕೂರಿ’ ಎಂದು ಗದರಿದ್ದರು.
‘ಮುಕ್ತಿಯಾರರೇ ನನಗೂ ಅದು ಗೊತ್ತು. ಆದರೆ ಪಡೆದವನು ಅಂದುಕೊಂಡರೆ ಯಾವ ಪವಾಡವಾದರೂ ಸಂಭವಿಸಬಹುದಲ್ಲಾ’ ಅವರಿಗೆ ಮಾಂಟೆನಿಗ್ರೋದ ಅಪರಿಮಿತ ಸುಂದರಿಯೂ ಆಕೆಯ ಅವಳಿ ಸಹೋದರನೂ ಜೊತೆಗಿರುವ ಚಿತ್ರವನ್ನು ತೋರಿಸಿದ್ದೆ. ಜೊತೆಗೆ ಕಡಲು ರಕ್ಷಣಾ ಪಡೆ ಒದಗಿಸಿದ ಆತ ಮುಳುಗಿರಬಹುದಾದ ಅಕ್ಷಾಂಶ ರೇಖಾಂಶಗಳ ನಕ್ಷಾಚಿತ್ರವನ್ನೂ ತೋರಿಸಿದೆ.
‘ಓ ಇದು ಪಡೆದವನ ಕೆಲಸವಲ್ಲ. ಭಗವತಿಯ ಕೋರಿಕೆ’ ರೂಪದರ್ಶಿಯ ಕಡಲ ತೀರದ ಚಿತ್ರವನ್ನು ನೋಡಿದ ಮುಕ್ತಿಯಾರರು ನಕ್ಕಿದ್ದರು.
ಅವರು ಈ ರೀತಿ ಕಣ್ಣು ಕಿರಿದುಗೊಳಿಸಿ ತಮ್ಮ ದಪ್ಪ ಕನ್ನಡಕಗಳ ಹಿಂದಿನಿಂದ ನಕ್ಕರೆಂದರೆ ಅಲ್ಲೊಂದು ಕಥೆಯ ಅಂಶವಿದೆ ಎಂದೇ ಲೆಕ್ಕ. ಕಥೆಯ ಅಂಶವಿದೆ ಎಂದರೆ ನಮ್ಮಿಬ್ಬರ ಕಣ್ಣುಗಳೂ ಏಕಕಾಲದಲ್ಲಿ ಅರಳುತ್ತವೆ. ನಾವಿಬ್ಬರು ದ್ವೀಪದ ಬಿಳಿಯ ಮರಳ ತೀರದಲ್ಲಿ ಕುಳಿತು ಇಂತಹ ಹಲವು ಆತ್ಮೀಯ ಕಥೆಗಳನ್ನು ಹಂಚಿಕೊಳ್ಳುತ್ತಿರುತ್ತೇವೆ.
‘ಹಾಗಾದರೆ ನೀವು ಹೋಗಲೇಬೇಕು.ಕಡಲಲ್ಲಿ ಬಿದ್ದವನು ಸಿಗದಿದ್ದರೂ ಒಂದು ಅನುಪಮ ಕಥೆಯಂತೂ ನಿಮಗೆ ಸಿಕ್ಕೇ ಸಿಗುವುದು’ ಅವರೇ ನನ್ನನ್ನು ಹುರಿದುಂಬಿಸಿದ್ದರು.
‘ನೀವು ಅಮವಾಸ್ಯೆಯ ಹಿಂದಿನ ಇರುಳು ಇಂತಹದೊಂದು ಹಡಗು ಹತ್ತಿ ಆ ದ್ವೀಪದಲ್ಲಿ ಇಳಿಯಿರಿ’ ಅಂದಿದ್ದರು.
ಪೂರ್ವಾಹ್ನ ಹನ್ನೊಂದರ ಸುಮಾರಿಗೆ ಅಮವಾಸ್ಯೆಯ ಕಡಲ ಇಳಿತ ಶುರುವಾಗಲು ತೊಡಗುವುದು. ಅದಕ್ಕೂ ಮೊದಲು ನೀವು ಆ ದ್ವೀಪ ತಲುಪುವಿರಿ. ಆ ದ್ವೀಪದಿಂದ ಸಣ್ಣದೊಂದು ದೋಣಿ ಹತ್ತಿ ಅದರ ಬಳಿಯ ಇನ್ನೊಂದು ಸಣ್ಣ ದ್ವೀಪ ತಲುಪುವ ಹೊತ್ತಿಗೆ ಕಡಲ ನೀರು ಎರಡಾಳು ಎತ್ತರಕ್ಕೆ ಬಂದಿರುವುದು. ಅಲ್ಲಿ ಇಳಿದೊಡನೆ ಮುತ್ತುಕೋಯಾ ಎಂಬ ನನ್ನ ಕಕ್ಷಿಯನ್ನು ವಿಚಾರಿಸಿ. ಮೀನು ಹಿಡಿಯುವ ಆ ಅರೆಹುಚ್ಚು ಮನುಷ್ಯ ನಿಮಗೆ ಸಹಾಯ ಮಾಡುವನು’ ಅಂದಿದ್ದರು.
ಅವರು ಹೇಳಿದ ದ್ವೀಪವಾಸಿ ಮುತ್ತುಕೋಯಾನ ಕಥೆಯನ್ನು ಕೇಳಿದರೆ ಏಕಕಾಲದಲ್ಲಿ ನಗುವೂ ವಿಷಾದವೂ ಖೇದವೂ ನಗುವೂ, ವಿಷಾದವೂ, ಖೇದವೂ, ವೈರಾಗ್ಯವೂ ಉಂಟಾಗುವ ಹಾಗೆ ಇತ್ತು. ಮುಕ್ತಿಯಾರರು ಹೇಳಿದ ಹಾಗೆ ಮುತ್ತುಕೋಯಾರಿಗೆ ಸುಮಾರು ಎಂಬತ್ತರ ಆಸುಪಾಸು ವಯಸ್ಸು ಇರಬಹುದು. ಅವರು ಕಳೆದ ಮೂವತ್ತು ವರ್ಷಗಳಿಂದ ಮಾನಸಿಕ ಅಸ್ವಸ್ಥರಂತೆ ನಟಿಸುತ್ತಾ ಮೀನು ಹಿಡಿದುಕೊಂಡು ಈ ಪುಟ್ಟ ದ್ವೀಪದಲ್ಲಿ ಬದುಕುತ್ತಿದ್ದರು. ಹಾಗೆ ನಟಿಸಿರದೆ ಇದ್ದರೆ ಇವರು ಜೈಲು ಪಾಲಾಗಬೇಕಿತ್ತು. ಏಕೆಂದರೆ ಅವರಿಂದ ಅಂತಹ ಒಂದು ದೊಡ್ಡ ಅಪರಾಧ ಘಟಿಸಿಹೋಗಿತ್ತು.
ಕೇಳಿದರೆ ಕೇಳುಗರಲ್ಲಿ ನಗುವೂ ವಿಷಾಧವೂ ಖೇದವೂ ವೈರಾಗ್ಯವೂ, ವಿಷಾಧವೂ, ಖೇದವೂ, ವೈರಾಗ್ಯವೂ ಏಕಕಾಲದಲ್ಲಿ ಹೊಮ್ಮಬಹುದಾದ ರಾಷ್ಟ್ರದ್ರೋಹದ ಅಪರಾಧವದು. ಅತಿ ಸಣ್ಣ ಆಕಸ್ಮಿಕವೊಂದರಲ್ಲಿ ಘಟಿಸಿದ ಆ ಅಪರಾಧ ಮುತ್ತುಕೋಯಾರಿಗೆ ಜೀವನ ಮತ್ತು ಮರಣದ ಪ್ರಶ್ನೆಯಾಗಿತ್ತು. ಒಂದು ಒಂದು ದೊಡ್ಡ ಕಾಲ್ಚೆಂಡಾಟದ ಮೈದಾನಕ್ಕಿಂತ ಇನ್ನೂ ಸ್ವಲ್ಪ ದೊಡ್ಡದಿರುವ ಈ ಪುಟ್ಟ ಹವಳ ದ್ವೀಪದಲ್ಲಿ ಬದುಕುತ್ತಿರುವ ಮುತ್ತುಕೋಯಾ ಒಂದು ವೇಳೆ ರಾಷ್ಟ್ರದ್ರೋಹದ ಅಪರಾದಕ್ಕೆ ಶಿಕ್ಷೆಗೊಳಗಾಗಿದ್ದರೆ ಕಡಲ ಆಚೆಕಡೆಯಲಿರುವ ಕೇರಅಳದ ಕಣ್ಣೂರಿನ ಸೆಂಟ್ರಲ್ ಜೇಲಿನ ಪಾಲಾಗಬೇಕಿತ್ತು.
ಮುತ್ತುಕೋಯಾ ಅವರ ಮಾನಸಿಕ ಅಸ್ವಸ್ಥತೆಯ ಕಥೆಯನ್ನು ನನಗೆ ಹೇಳಿದ್ದ ಮುಕ್ತಿಯಾರರು ಅದರ ಹಿಂದಿರುವ ಗಹನವಾದ ರಾಷ್ಟ್ರ ಅಪರಾಧದದ ವಿಷಯವನ್ನೂ ಹೇಳಿದ್ದರು. ಅದನ್ನು ಕೇಳಿ ನನ್ನಲ್ಲಿ ನಗುವೂ ಅಚ್ಚರಿಯೂ ವಿಷಾದವೂ ಜೊತೆಜೊತೆಯಲ್ಲಿಯೇ ಉಂಟಾಗಿತ್ತು.
‘ನೋಡಿ ಇವರೇ ಇದು ನಗುವ ಅಥವಾ ಅಚ್ಚರಿ ಪಡುವ ವಿಷಯವಲ್ಲ. ಅಪರಾಧದ ಸಾಭೀತಾಗಿದ್ದರೆ ಅಪರಾಧಿಯು ಜೀವಮಾನ ಪೂರ್ತಿ ಜೀವಾವಧಿ ಶಿಕ್ಷೆಯನ್ನು ಅನುಭವಿಸಬೇಕಿದ್ದ ಗುರುತರವಾದ ಕೃತ್ಯವಿದು. ಆದರೆ ನಾನು ನನ್ನ ಕಕ್ಷಿಗೆ ಮಾನಸಿಕ ಅಸ್ವಸ್ಥತೆಯನ್ನು ನಟಿಸಲು ಹೇಳಿ ಅವನನ್ನು ಆ ಶಿಕ್ಷೆಯಿಂದ ಪಾರುಮಾಡಿದೆ’ ಮುಕ್ತಿಯಾರರು ಮಂಜುಮಂಜಾದ ತಮ್ಮ ಕನ್ನಡಕವನ್ನು ಮುಂಡಿನ ತುದಿಯಿಂದ ಒರೆಸಿಕೊಂಡಿದ್ದರು.
‘ಆಯ್ತು ಮುಕ್ತಿಯಾರರೇ. ಸರಿ. ಒಪ್ಪಿದೆ. ಆದರೆ ಈ ವೃತ್ತಾಂತವನ್ನು ಎಲ್ಲಿಯೂ ನಿಮ್ಮ ಕಥೆಗಳಲ್ಲೂ ನೀವು ಬರೆದ ಹಾಗಿಲ್ಲವಲ್ಲ’ ಎಂದು ನಾನು ಕೇಳಿದ್ದೆ.
‘ನೀವು ಎಂಥ ಹೇಳುವುದು. ಇದೆಲ್ಲ ಕತೆಯಲ್ಲಿ ಬರೆಯುವ ವಿಷಯವಾ. ಇದನ್ನು ನಾನೂ ಬರೆಯಬಾರದು ನೀವೂ ಬರೆಯಬಾರದು. ಇದೆಲ್ಲ ರಾಷ್ಟ್ರದ ಪರಮೋಚ್ಛ ಚಿಹ್ನೆಗಳಿಗೆ ಸಂಬಂಧಿಸಿದ ವಿಷಯ’ ಎಂದು ಅವರು ವಿಷಯವನ್ನು ಅಲ್ಲಿಗೇ ನಿಲ್ಲಿಸಿದ್ದರು.
ಚಿಹ್ನೆಗಳನ್ನೂ ಅವರನ್ನೂ ಗೌರವಿಸುವ ನಾನು ಆ ಮಾತಿಗೆ ಎದುರು ಹೇಳದೆ, ‘ಉಳಿದ ಕಥೆ ಹೇಳಿ’ ಎಂದು ಕೇಳಿಕೊಂಡಿದ್ದೆ.
ತಲೆತಲಾಂತರಗಳಿಂದ ಹವಳ ದಿಬ್ಬಗಳ ಮೇಲಿನ ಈ ಪುಟ್ಟ ಪುಟ್ಟ ನೆಲಗಳಲ್ಲಿ ಅಮಾಯಕರಂತೆ ಬದುಕುತ್ತಿರುವ ದ್ವೀಪವಾಸಿಗಳಿಗೆ ಅವರ ನೆಲ ಬಿಟ್ಟರೆ ಲೋಕದ ಉಳಿದ ನೆಲವೆಲ್ಲವೂ ನರಕಗಳಂತೆ ಅನಿಸುವುದಂತೆ. ಹಂದಿಯೂ, ನಾಯಿಯೂ, ಹಾವುಗಳೂ, ಮಂಗಗಳೂ, ಹುಲಿ ಸಿಂಹಗಳೂ, ಕುಟಿಲ ಮನುಷ್ಯರೂ ಇರುವ ಕಾರಾಸ್ಥಾನಗಳು. ಇನ್ನು ಅಲ್ಲಿರುವ ಜೇಲಿನಲ್ಲಿ ಇರುವುದಕ್ಕಿಂತ ಜೀವನಪೂರ್ತಿ ಮಾನಸಿಕ ಅಸ್ವಸ್ಥನಂತೆ ಬದುಕುವುದೇ ಲೇಸು ಅಂದುಕೊಂಡು ಮುತ್ತುಕೋಯಾ ಉಳಿದ ಜೀವಿತವನ್ನು ಮಾನಸಿಕ ಅಸ್ವಸ್ಥನಂತೆ ನಟಿಸುತ್ತಾ ಬದುಕುತ್ತಿದ್ದರು. ಇಂತಹ ನಟಿಸುವ ಮಾನಸಿಕ ಅಸ್ವಸ್ಥನೊಡನೆ ಬದುಕಲಾರೆ ಎಂದು ಅವರ ಮೊದಲ ಮಡದಿ ಸಾರಾಂಬಿ ತನ್ನ ಮೂರು ಮಕ್ಕಳನ್ನು ಎತ್ತಿಕೊಂಡು ಇನ್ನೊಂದು ದ್ವೀಪಕ್ಕೆ ಪರಾರಿಯಾಗಿದ್ದಳು. ಈಗ ಇವರೊಡನೆ ಬದುಕುತ್ತಿರುವ ಎರಡನೆಯ ಹೆಂಡತಿ ಕೀಯಾಂಬಿ ನಿಜವಾಗಿಯೂ ಅರೆಬರೆ ಮಾನಸಿಕ ಅಸ್ವಸ್ಥಳೇ ಆಗಿದ್ದಳು. ಆಕೆಯದೂ ಇಂತಹದೇ ಇನ್ನೊಂದು ಕಥೆ. ಕಡಲಿಗೆ ಜಿಗಿದು ತೊರಕೆ ಮೀನುಗಳನ್ನು ಬರ್ಚಿಯಿಂದ ಇರಿದು ತಂದು ಒಣಗಿಸಿ ಮಾರುವ ಕಾಯಕದ ಇವಳ ಮೊದಲನೆಯ ಗಂಡ ಅಕಸ್ಮಾತ್ತಾಗಿ ಬರ್ಚಿ ತನ್ನ ಎದೆಗೇ ತಾಗಿಸಿಕೊಂಡು ತೀರಿ ಹೋದ ಮೇಲೆ ಇವಳೂ ಅರೆ ತಲೆ ಕೆಟ್ಟ ಅವಸ್ಥೆಯಲ್ಲಿ ಬದುಕುತ್ತಿದ್ದವಳು ಒಲ್ಲದ ಮನಸಿನಿಂದ ತನ್ನ ತಂದೆಯ ಪ್ರಾಯದ ಮುತ್ತುಕೋಯಾರನ್ನು ನಿಖಾ ಮಾಡಿಕೊಂಡಿದ್ದಳು.
ಇವರಿಬ್ಬರು ಹೀಗೆ ಅರೆ ಮೂಕರ ಹಾಗೆ ಅರಬಿ ಕಡಲಿನ ಅಗಾದ ದೂರದ ಈ ಪುಟ್ಟ ದ್ವೀಪದಲ್ಲಿ ಮಾತಿಲ್ಲದೆ ಬದುಕುತ್ತಿರುವುದು ಹೆಚ್ಚು ಯಾರಿಗೂ ಗೊತ್ತಿರಲೂ ಇಲ್ಲ. ಏಕೆಂದರೆ ಈ ದ್ವೀಪದಲ್ಲಿ ಇರುವುದು ಏಳೋ ಎಂಟೋ ಗುಡಿಸಲುಗಳು, ಅಲ್ಲಿ ಬದುಕುತ್ತಿರುವವರೂ ಹಲವು ಕಥೆಗಳನ್ನು ಒಳಗಿಟ್ಟುಕೊಂಡ ಇವರ ಹಾಗಿರುವವರೇ. ಎಲ್ಲರದು ಒಂದೊಂದು ಕಥೆ. ಇತಿಹಾಸದ ಒಂದೊಂದು ತಮಾಷೆಗಳಿಗೆ ಸಿಲುಕಿ ಒಂದೊಂದು ಮೂಲೆಯಲ್ಲಿ ದಿಕ್ಕಾಪಾಲಾಗಿ ಬದುಕುತ್ತಿರುವವರು. ಇವರು ಬದುಕುತ್ತಿರುವ ಈ ದ್ವೀಪಗಳ ಕಥೆಯೂ ಹೀಗೆಯೇ. ಮುಕ್ತಿಯಾರರು ಕಥೆಯನ್ನು ಮುಂದುವರಿಸಿದ್ದರು. ಎರಡು ದಿನ ಕಳೆದು ನಾನು ಹಡಗು ಹತ್ತಿದ್ದೆ.
*****
ಇರುಳು ಹಡಗಲ್ಲಿ ಕಳೆದು ಬೆಳಗಾಗಿ ಅದರಿಂದ ಇಳಿದು ಸಣ್ಣದೊಂದು ದೋಣಿ ಹತ್ತಿ ಮುತ್ತುಕೋಯಾರನ್ನು ಸೇರಿಕೊಂಡಿದ್ದೆ. ಮುಖದ ಮೇಲೊಂದು ಮಾನಸಿಕ ಅಸ್ವಸ್ಥತೆಯ ಕಳೆ ಅಂಟಿಸಿಕೊಂಡು ಬಾಯಿಯ ತುಂಬ ಕವಳ ತುಂಬಿಕೊಂಡು, ಅದರ ರಸವನ್ನು ತಮ್ಮ ಮುಖದ ಬಿಳಿಯ ರೋಮರಾಶಿಯ ಮೇಲೂ ಒಂದಿಷ್ಟು ಬೀಳಿಸಿಕೊಂಡು ಒಂದು ಅಪಹಾಸ್ಯದ ನಗುವನ್ನು ಹೊತ್ತುಕೊಂಡು ದೋಣಿಯ ಮುಂದೆ ಕೌಪೀನಧಾರಿಯಾಗಿ ಕುಳಿತಿದ್ದರು.. ಅದಾಗಲೇ ಯಾವುದೋ ಮಾಂತ್ರಿಕ ಮಾರ್ಗವಾಗಿ ನಾನು ಬರುವ ಸುದ್ದಿ ಅವರಿಗೆ ಗೊತ್ತಾಗಿರುವ ಹಾಗಿತ್ತು. ನನ್ನ ಕಂಡೊಡನೆ ಸಲಾಂ ಹೇಳಿ ಎದ್ದು ನಿಂತರು. ಬನ್ನಿ ಹೋಗುವಾ ಎಂದು ದೋಣಿಯನ್ನು ನೀರಿಗೆ ತಳ್ಳಿದರು. ಅವರ ಹಿಂದೆಯೇ ಬಂದ ಕೀಯಾಂಬಿ ತಾನೂ ದೋಣಿಯನ್ನು ಒಂದಿಷ್ಟು ತಳ್ಳಿ ತಾನೂ ದೋಣಿಯಲ್ಲಿ ಕುಳಿತುಕೊಂಡಳು.
ಅವಳಿಗೆ ಲಗೂನಿನ ಇನ್ನೊಂದು ತುದಿಯಲ್ಲಿ ಹವಳ ದಿಬ್ಬಗಳಿಗೆ ಅಂಟಿಕೊಂಡು ಬದುಕುತ್ತಿರುವ ಕವಡೆ ಚಿಪ್ಪುಗಳನ್ನು ಆಯುವ ಕಾಯಕ. ಮುತ್ತುಕೋಯ ಪುಟ್ಟ ದೋಣಿ ಹತ್ತಿ ನೀಲ ಲಗೂನಿನ ಮೇಲೆ ಗಾಣ ಹಾಕಲು ಹೊರಟರೆ ಈಕೆ ಹಿಂಬದಿಯಿಂದ ತಾನೂ ದೋಣಿಯನ್ನು ದೂಡಿ ಹತ್ತಿ ಹುಟ್ಟು ಹಾಕುತ್ತಿದ್ದಳು. ಮುತ್ತುಕೋಯನ ಹಲವು ಬಗೆಯ ಗಾಳಣಗಳಿಗೆ ಕಡಲ ಎರೆಹುಳಗಳನ್ನು ಪೋಣಿಸಿ ಕೊಡುತ್ತಿದ್ದಳು. ಗಂಟೆಗಟ್ಟಲೆ ಶಾಂತ ಲಗೂನಿನ ಮೇಲೆ ದೋಣಿಯಲ್ಲಿ ಕಳೆಯುವ ಇವರಿಬ್ಬರು ಅಪ್ಪಿ ತಪ್ಪಿಯೂ ಒಬ್ಬರಿನ್ನೊಬ್ಬರ ಜೊತೆ ಹೆಚ್ಚು ಮಾತು ಆಡುತ್ತಿರಲಿಲ್ಲ. ಎಲ್ಲವೂ ಕೈಸನ್ನೆ, ಮುಖದ ಹಾವಭಾವ. ಕಾರ್ತಿಕ ಅಮವಾಸ್ಯೆಯ ಇನ್ನೇನು ಬರಿದಾಗಬೇಕಿದ್ದ ನೀಲ ಲಗೂನ್ ಮರಳುಗಾಡಿನಂತೆ ಬಹಳ ದೂರಕ್ಕೆ ಮೈ ಚೆಲ್ಲಿಕೊಂಡು ಮಲಗಿತ್ತು. ಸ್ಫಟಿಕ ನೀಲ ನೀರ ಒಳಗಿನಗೆ ಹವಳ ದಿಬ್ಬಗಳ ನಡುವೆ ಬಣ್ಣಬಣ್ಣದ ಮತ್ಸ್ಯಗಳು ಲಗುಬಗೆಯಲ್ಲಿ ಈಜಾಡುತ್ತಿರುವುದೂ ಕಾಣಿಸುತ್ತಿದ್ದವು. ಆಕಾಶದ ಮುಖ ಕ್ಷಣಕ್ಕೊಂದು ಬಣ್ಣ ಬದಲಿಸಿಕೊಂಡು ಇನ್ನೇನು ಮಳೆ ಬಂದರೂ ಬರಬಹುದು ಎನ್ನುವ ಹಾಗೆ ಮಂಕುಮಂಕಾಗಿ ಕಾಣಿಸುತ್ತಿತ್ತು. ಸ್ವಲ್ಪ ಹೊತ್ತಲ್ಲೇ ನೀರು ಬರಿದಾಗುತ್ತ ಹವಳದ ಬಂಡೆಗಳ ತುದಿ ದೋಣಿಯ ತಳಕ್ಕೆ ತಾಗುವ ಸದ್ದು ಕೇಳಿಸ ತೊಡಗಿತು. ನೋಡು ನೋಡುತ್ತಿದ್ದಂತೆ ಕಡಲ ನೀರು ಖಾಲಿಯಾಗಿ ದೋಣಿ ಉಸುಕಿನ ಮೇಲೆ ಮಗುವಿನಂತೆ ತಂಗಿಬಿಟ್ಟಿತು.
ನಿರ್ಭಾವುಕನಾಗಿ ಹುಟ್ಟು ಹಾಕುತ್ತಿದ್ದ ಮುತ್ತುಕೋಯ ದೋಣಿಯ ಮೂಲೆಯಲ್ಲಿ ಬಿದ್ದುಕೊಂಡಿದ್ದ ಕಬ್ಬಿಣದ ಸಲಾಕೆ ಎತ್ತಿಕೊಂಡು ಬಾಯೊಳಗಿಷ್ಟು ತಂಬಾಕಿನ ಪುಡಿ ತುಂಬಿಸಿಕೊಂಡು ಹಿಂಬಾಲಿಸುವಂತೆ ಬಾಯಿಂದ ಸದ್ದಿನ ಸನ್ನೆ ಮಾಡಿ ನಡೆಯುತ್ತಿದ್ದ. ಕೀಯಾಂಬಿ ತನ್ನ ಅರೆ ಸೀರೆಯನ್ನು ಮೊಣಕಾಲವರೆಗೆ ಎತ್ತಿಕೊಂಡು ಒಂದು ಚೀಲವನ್ನು ಹೆಗಲಿಗೆ ಎಸೆದುಕೊಂಡು ತಾನೂ ಬಾಯಿ ತುಂಬಾ ಕವಳ ಹಾಕಿಕೊಂಡು ನಡೆಯತೊಡಗಿದಳು, ಅವಳ ಮುಖದಲ್ಲೂ ಏನೋ ಒಂದು ತರಹದ ಹುಚ್ಚು ನಗು.
ಕಾಲಿಟ್ಟಲ್ಲಿ ಜರುಗುವ ಉಸುಕು, ಒದ್ದೆಯಾಗುವ ಪಾದಗಳು, ಮರಳು ನೆಲದ ನಡುವೆ ಅಲ್ಲಲ್ಲಿ ಉಳಿದುಕೊಂಡಿರುವ ಸಣ್ಣ ಸಣ್ಣ ನೀರ ಗುಳಿಗಳು, ಆ ಗುಳಿಗಳೊಳಗೆ ಇನ್ನೂ ಉಳಿದುಕೊಂಡಿರುವ ಸಣ್ಣ ಪುಟ್ಟ ಮತ್ಸ್ಯ ಜೀವಿಗಳು, ಕಡಲ ಶಂಖಗಳು, ಕಡಲೊಳಗಿನ ಹುಳ ಹುಪ್ಪಟೆಗಳು ಮತ್ತು ಅಲ್ಲಲ್ಲಿ ಅಂಗಾತ ಬಿದ್ದುಕೊಂಡಿರುವ ಕಮಲದ ಹೂಗಳ ಹಾಗಿರುವ ನಕ್ಷತ್ರಮೀನುಗಳು – ಇವುಗಳೆಲ್ಲವೂ ಇನ್ನು ನಾಲ್ಕಾರು ತಾಸುಗಳಲ್ಲಿ ಮರಳಿ ತುಂಬಿಕೊಳ್ಳಲಿರುವ ಕಡಲಿಗೆ ಕಾಯುತ್ತ ಆ ಸಣ್ಣ ನೀರ ಗುಳಿಗಳೊಳಗೆ ಚಡಪಡಿಸಿಕೊಂಡಿದ್ದವು. ನಾನು ಮೀನುಗಾರ ಮುದುಕ ಮುತ್ತುಕೋಯಾರ ಹಿಂದೆ ಹೆಜ್ಜೆ ಹಾಕುತ್ತಿದ್ದೆ. ಕೀಯಾಂಬಿ ಮನಸಿನಲ್ಲೇ ಏನೋ ಗೊಣಗಿಕೊಂಡು ತುಟಿ ಅಲ್ಲಾಡಿಸುತ್ತಾ ನಡೆದು ಬರುತ್ತಿದ್ದಳು.
ಅಮವಾಸ್ಯೆ ಮತ್ತು ಹುಣ್ಣಿಮೆಗಳ ಹಗಲು ದ್ವೀಪಗಳನ್ನು ಸುತ್ತುವರಿದಿರುವ ಲಗೂನ್ ಕಡಲುಗಳ ಹುಚ್ಚು ಇಳಿಯುವುದಂತೆ ಮತ್ತು ದ್ವೀಪವಾಸಿಗಳ ಹುಚ್ಚು ಏರುವುದಂತೆ. ಹೀಗೆ ಹುಚ್ಚು ಹಿಡಿದು ಬರಿದಾದ ಕಡಲಿನ ನಡುವೆಯೇ ಪ್ರೇಮಿಯೊಬ್ಬಳಿಗಾಗಿ ಬಡಿದಾಡಿ ಸತ್ತು ಹೋದ ಇಬ್ಬರು ದ್ವೀಪವಾಸಿ ತರುಣರ ಕುರಿತೂ ಮುಕ್ತಿಯಾರರು ತಮ್ಮ ಕಥೆಯೊಂದರಲ್ಲಿ ಬರೆದಿದ್ದರು. ಆ ಕಥೆಯ ಕೊನೆಯಲ್ಲಿ ಆ ತರುಣಿಯೂ ಅವಳ ಪ್ರೇಮಿಯೂ ಕಡಲಿಗೆ ಹಾರಿ ಸಾಯುತ್ತಾಳೆ. ಆದರೆ ಬಡಿದಾಡಿ ಸತ್ತ ಯಾವ ಪ್ರೇಮಿಗಾಗಿ ಅವಳು ಸತ್ತಳು ಎಂಬುದನ್ನು ಮುಕ್ತಿಯಾರರು ತಮ್ಮ ಕಥೆಯಲ್ಲಿ ಹೇಳುವುದಿಲ್ಲ.
ಕೇಳಿದರೆ ಸಿಟ್ಟು ಮಾಡಿಕೊಳ್ಳುತ್ತಾರೆ.
ಕಥೆಯಲ್ಲಿ ಎಲ್ಲವನ್ನೂ ಹೇಳಬಾರದು ಎನ್ನುವುದು ಅವರ ಕಥಾ ಸಿದ್ಧಾಂತ. ಉದಾಹರಣೆಗೆ ಮುತ್ತುಕೋಯಾ ಎಂಬ ಈ ಮೀನುಗಾರ ಮುದುಕ ಜೀವಿತಕಾಲವಿಡೀ ಮಾನಸಿಕ ಅಸ್ವಸ್ಥನಂತೆ ನಟಿಸುವಂತೆ ಮಾಡಿದ ಆ ಗಹನ ಅಪರಾದ ಏನು ಎಂಬುದನ್ನು ಬರೆಯಬಾರದು.
‘ಹೇಳಿದರೂ ಪರವಾಗಿಲ್ಲ.ಆದರೆ ಅದನ್ನು ಬರೆಯಬಾರದು. ಯಾರೂ ಇಲ್ಲದ ಕಡೆ ಆಡಿದ ಮಾತಿಗೆ ಕಾನೂನಿನ ಅಂಗೀಕಾರವಿಲ್ಲ. ಆದರೆ ನಿನ್ನ ಲೇಖನಿಯಿಂದ ಹಾಳೆಯ ಮೇಲೆ ಒಂದು ತೊಟ್ಟು ಮಸಿ ಬಿದ್ದರೂ ಅದು ಕಾನೂನಿನ ಪ್ರಕಾರ ಒಂದು ದಾಖಲೆಯಾಗುತ್ತದೆ. ಹುಷಾರು’ ಎನ್ನುತ್ತಿದ್ದರು
ತಮ್ಮ ಜೀವಿತದ ಬಹುದೊಡ್ಡ ಕಾಲವನ್ನು ಕಲ್ಲಿಕೋಟೆಯ ನ್ಯಾಯಾಲಯದಲ್ಲಿ ಮುಕ್ತಿಯಾರಾಗಿ ಕಳೆದಿದ್ದ ಅವರು ಎಲ್ಲವನ್ನೂ ಕಾನೂನಿನ ಕಣ್ಣಿನಿಂದಲೇ ನೋಡುತ್ತಿದ್ದರೂ ಅವರ ಕಥೆಗಳಲ್ಲಿ ಮಾನವ ಹೃದಯದ ಪ್ರೇಮ ಭಾವನೆಗಳು ಅವರಿಗೇ ಗೊತ್ತಿಲ್ಲದಂತೆ ಅಲ್ಲಲ್ಲಿ ಜಿನುಗಿ ಬಿಡುತ್ತಿದ್ದವು. ಇದಕ್ಕೆ ಅವರ ಸ್ವಂತ ಬದುಕಿನಲ್ಲಿ ಸಂಭವಿಸಿದ ಪ್ರೇಮ ಘಟನೆಯೂ ಕಾರಣ.
ಸಣ್ಣ ಪ್ರಾಯದಲ್ಲೇ ದೊಡ್ಡ ಸಾಧನೆಯ ತರುಣ ಕವಿಯಾಗಿದ್ದ ಅವರು ಅವರದೇ ದ್ವೀಪದ ಕೆಳಜಾತಿಯ ಮುಸಲ್ಮಾನ ತರುಣಿಯನ್ನು ಪ್ರೀತಿಸಿ ಗಡೀಪಾರಾಗಿ ಬಿಟ್ಟಿದ್ದರು. ದ್ವೀಪದ ಕುಲೀನ ಮತ್ತು ಮಾಂತ್ರಿಕ ವಿದ್ಯೆಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ಮೇಲುಜಾತಿಯ ಮುಸಲ್ಮಾನ ಮನೆತನಕ್ಕೆ ಸೇರಿದ್ದ ಅವರು ಬಹಳ ಕಾಲ ದ್ವೀಪಕ್ಕೆ ಕಾಲಿಟ್ಟಿರಲೇ ಇಲ್ಲ. , ಕಲ್ಲಿಕೋಟೆಯಲ್ಲೇ ಉಳಿದುಕೊಂಡು ಅಲ್ಲಿಯೇ ಮುಕ್ತಿಯಾರರಾಗಿ ದ್ವೀಪವಾಸಿಗಳ ಮೊಕದ್ದಮೆಗಳನ್ನು ಮೊಕದ್ದಮೆಗಳನ್ನು ನಿಭಾಯಿಸಿಕೊಂಡು ಈ ನಡುವೆ ಕಥೆಗಳನ್ನೂ ಬರೆದುಕೊಂಡು ಒಂಟಿಯಾಗಿ ಬದುಕುತ್ತಿದ್ದರು.
‘ನಾನು ಒಂಟಿ ಗಂಡಸು ಆದರೆ ಬ್ರಹ್ಮಚಾರಿಯಲ್ಲ’ ಎಂದು ಅವರು ಕಣ್ಣು ಮಿಟುಕಿಸಿ ನಗುತ್ತಿದ್ದರು.
ಯಾವುದೋ ಕೌಟುಂಬಿಕ ಭೂವ್ಯಾಜ್ಯದ ನೆಪದಲ್ಲಿ ಹಡಗು ಹತ್ತಿ ಬೇಪೂರಲ್ಲಿ ಇಳಿದು ಕಲ್ಲಿಕೋಟೆಯಲ್ಲಿ ಅವರನ್ನು ಸೇರುತ್ತಿದ್ದ ಅವರ ತಾರುಣ್ಯದ ಪ್ರೇಮಿ.
ಇದನ್ನೂ ಅವರು ಕಥೆಯೊಂದರಲ್ಲಿ ಕಣ್ಣು ಮಿಟುಕಿಸಿದ ಹಾಗೆ ಬರೆದಿದ್ದರು.
ಹುಚ್ಚು ಪ್ರೇಮ, ಹುಚ್ಚು ಕಡಲು ಮತ್ತು ಮುಗಿಯುತ್ತಿರುವ ಮನುಷ್ಯನ ಆಯಸ್ಸು. ಹಳೆಯ ಕೇಸಿನ ವಿಚಾರ ಕೇಳಿ ಮುಗಿಸಿದ ಅವಳು ನನ್ನ ಒಂಟಿ ಹಾಸಿಗೆಯ ಮೇಲೆ ಮೈಮುರಿದು ಮಲಗಿದಳು. ನಾವಿಬ್ಬರೂ ಕೂಡಿದ ಮೇಲೆ ಅವಳು ಮೈಮುರಿದು ಎದ್ದು ಚಹಾಗೆ ನೀರಿಡಲು ವಿದ್ಯುತ್ ಒಲೆಯ ಗುಂಡಿ ಅದುಮಿದಳು. ನಿಧಾನಕ್ಕೆ ಕೆಂಡವಾಗುತ್ತಿದ್ದ ಒಲೆಯ ಸುರುಳಿಗಳು. ನನ್ನ ಒಂಟಿಕೋಣೆಯ ಕಿಟಕಿಯಿಂದ ತೂರಿಬರುತ್ತಿದ್ದ ಬೆಳಕಿನಲ್ಲಿ ಹೊಳೆಯುತ್ತಿದ್ದ ಅವಳ ಕಿವಿಯ ಅಲಿಕತ್ತುಗಳು. ನಮಗಿಬ್ಬರಿಗೂ ಪ್ರಾಯವೆಂಬುದು ಆಗಿಯೇ ಇಲ್ಲವೇನೋ ಎಂಬಂತೆ ಮೆಲ್ಲಗೆ ಹಬೆಯೆಬ್ಬಿಸತೊಡಗಿದ ಚಹಾದ ಕೆಟಲ್ಲು. ಅವಳು ಮತ್ತೆ ದ್ವೀಪದ ಅದೇ ಹುಡುಗಿಯಾಗಿ ಮೈಯೆಲ್ಲ ಮಿನುಗಿಕೊಂಡು ನಾಚುತ್ತಿದ್ದಳು.
ಮುಕ್ತಿಯಾರರ ಕಥೆಗಳ ತುಂಬ ಇಂಥದ್ದೇ ಶೃಂಗಾರಭರಿತ ಪ್ರತಿಮೆಗಳು.
ಆ ಪ್ರೇಮಿಯೂ ಕಾಲವಾಗಿ, ಹೆಂಡತಿಯೂ ಕಾಲವಾಗಿ ತಾವು ಮಾತ್ರ ಚಿರತರುಣನಂತೆ ಬದುಕುತ್ತಿದ್ದ ಮುಕ್ತಿಯಾರರಿಗೆ ‘ಇನ್ನೊಂದು ಮದುವೆಯಾಗಿ’ ಎಂದು ಸೂಚಿಸಿದ್ದೆ.
‘ನೋಡೋಣ ನೀನು ತೋರಿಸಿದ ಮಾಂಟೆನಿಗ್ರೋದ ಸುಂದರಿಯಂತಹ ಸ್ವರ್ಗಕನ್ಯೆ ಸಿಕ್ಕಿದರೆ’ ಎಂದು ಅವರು ನಕ್ಕಿದ್ದರು.
‘ಒಂದು ವೇಳೆ ಸಿಕ್ಕಿದರೆ ನೀವು ಹೋದ ಮೇಲೆ ನಾನು ಉಳಿದಿದ್ದರೆ ಅವಳನ್ನೇ ನಾನು ಮರು ಮದುವೆಯಾಗುತ್ತೇನೆ’ ಎಂದು ನಾನೂ ನಕ್ಕಿದ್ದೆ.
‘ಅದಕ್ಕೂ ಮೊದಲು ಆ ಸುಂದರಿಯ ಅವಳಿ ಸಹೋದರನನ್ನು ಕಂಡುಹಿಡಿಯಲಾಗುವುದೋ ನೋಡಿ, ಹಾಗೆ ಕಂಡು ಹಿಡಿದರೆ ನಾವೂ ಹಡಗು ಹತ್ತಿ ಯುಗೋಸ್ಲಾವಿಯಾಕ್ಕೆ ಹೋಗೇ ಬಿಡೋಣ’ ಮುಕ್ತಿಯಾರರು ತಮಾಷೆ ಮಾಡಿದ್ದರು.
ಇಲ್ಲಿ ನೋಡಿದರೆ ನಾನು ಕಡಲಲ್ಲಿ ಮುಳುಗಿದವನನ್ನು ಹುಡುಕಲು ಬಂದಿರುವುದೇ ಒಂದು ತಮಾಷೆ ಎಂಬಂತೆ ಮುಖ ಮಾಡಿಕೊಂಡು ಕಾನೂನಿನ ಕಣ್ಣಲ್ಲಿ ಮಾನಸಿಕ ಅಸ್ವಸ್ಥರಾಗಿದ್ದ ಮುತ್ತುಕೋಯಾ ಅವರು ಕೈಯಲ್ಲಿ ಸಲಾಕೆ ಹಿಡಿದುಕೊಂಡು ಕಡಲ ತಳದ ಮರಳ ಗುಳಿಗಳೊಳಗಿಂದ ಕಡಲ ಎರೆಹಾವುಗಳನ್ನು ಎಳೆದು ತೆಗೆಯುತ್ತಿದ್ದರು. ಎಳೆದಷ್ಟೂ ಮುಗಿಯದ ಕರುಳಿನ ಹಾಗಿರುವ ಈ ಎರೆಹಾವುಗಳು ನಿಧಾನಕ್ಕೆ ಬಿಟ್ಟುಬಿಟ್ಟುಕೊಂಡು ಮುತ್ತುಕೋಯಾರ ಮುಷ್ಟಿಯೊಳಕ್ಕೆ ಸೇರುತ್ತಿದ್ದವು. ಮುಷ್ಟಿಯೊಳಗೆ ಹಾವಂತೆ ಸುತ್ತಿಕೊಳ್ಳುತ್ತಿದ್ದ ಅವುಗಳನ್ನು ಅವರು ಮಡದಿ ಕೀಯಾಂಬಿಯ ಕೈಗೆ ವರ್ಗಾಯಿಸುತ್ತಿದ್ದರು. ಆಕೆ ಅವುಗಳ ಹೊಟ್ಟೆಯೊಳಗಿನ ಮರಳು ಆಹಾರವನ್ನು ಸೀಟಿ ತೆಗೆದು ಚಪ್ಪಟೆ ಮಾಡಿ ಚೀಲದೊಳಕ್ಕೆ ತುರುಕಿಕೊಳ್ಳುತ್ತಿದ್ದಳು.
ನಂಬಲೂ ಆಗದ ಜೀವವ್ಯಾಪಾರ. ಅಮವಾಸ್ಯೆಗೆ ಬರಿದಾಗುವ ಕಡಲು. ಕಡಲ ತಳದಲ್ಲಿ ತಂಗಬಹುದಾದ ದೋಣಿ. ಮರಳ ರಂದ್ರಗಳಲ್ಲಿ ಲಕ್ಷಾನುಲಕ್ಷ ವರ್ಷಗಳಿಂದ ಬದುಕುತ್ತಿರುವ ಕಡಲ ಬಳ್ಳಿಯಂತಹ ಎರೆಹಾವುಗಳನ್ನು ಚೀಲದೊಳಕ್ಕೆ ತುಂಬುತ್ತಿರುವ ಅರೆ ಅಸ್ವಸ್ಥ ಹೆಂಗಸು ಕೀಯಾಂಬಿ.
ಇವರ ಬಳಿ ಇದನ್ನೆಲ್ಲ ಹೇಳಿಕೊಳ್ಳುವುದು ಹೇಗೆ ಎಂಬಂತೆ ಕಾರ್ತಿಕ ಅಮವಾಸ್ಯೆಯ ಹಗಲು ಪೂರಾ ಬರಿದಾಗಿ ಹೋಗಿರುವ ಕಡಲ ತಳದ ಮರಳ ಮೈದಾನ ನಡು ಮಧ್ಯಾಹ್ನದ ಬಿಸಿಲಲ್ಲಿ ಬಂಗಾರದ ಹಾಗೆ ಹೊಳೆಯುತ್ತಿತ್ತು.
‘ಇನ್ನು ಸ್ವಲ್ಪ ಹೊತ್ತಲ್ಲೇ ಕಡಲ ನೀರು ಮತ್ತೆ ತುಂಬಿಕೊಳ್ಳಲು ತೊಡಗುವುದು. ಅಷ್ಟರೊಳಗೆ ಅದಾ ಅಲ್ಲಿ ಕಾಣುವ ತೆಂಗಿನ ತೋಪಿನ ಬಳಿ ಹೋಗಿ ನಾವು ಮತ್ತೆ ಮರಳಬೇಕಾಗುವುದು’ ಪೂರ್ವದಿಕ್ಕಿಗೆ ಕೈತೋರಿಸಿ ಮುತ್ತುಕೋಯಾ ಎಚ್ಚರಿಸಿದರು.

ಅಲ್ಲಿ ಹೋಗಿ ನೋಡಿದರೆ ಬೋರ್ಗರೆಯುವ ಕಡಲಿಗೆ ಚಾಚಿಕೊಂಡಂತೆ ಒಂದು ತೆಂಗಿನ ತೋಪು ಮತ್ತು ಕುರುಚಲು ಕಾಡು, ನಡುವಲ್ಲಿ ಭಾರತದ ಸಾರ್ವಭೌಮತ್ವವನ್ನು ಸಾರುವ ಅಂತಾಅಂತರಾಷ್ಟೀಯ ಗಡಿಯ ಕಲ್ಲು. ಅದಕ್ಕೂ ಆಚೆ ಕಡಲಿಗೆ ದೂಡಿದಂತೆ ಕಾಣಿಸುವ ಒಂದು ಪುರಾತನ ಮಸೀದಿ. ಮಸೀದಿಯ ಕೈತೊಳೆಯುವ ನೀರ ಕೊಳದ ಕಟ್ಟೆಯ ಮೇಲೆ ಬಣ್ಣ ಬಣ್ಣದ ಕಡಲ ಶಂಖಗಳು ಪ್ರಣಯದಾಟಕ್ಕೆ ಸಿದ್ಧರಾಗಿ ಸಾಲುಸಾಲಾಗಿ ಮೆರವಣಿಗೆಯಲ್ಲಿ ಸಾಗುತ್ತಿದ್ದವು. ಅದರಾಚೆಯ ಅಂತರಾಷ್ಟ್ರೀಯ ಕಡಲಿನಲ್ಲಿ ಚುಕ್ಕಿ ಚುಕ್ಕಿಗಳಂತೆ ಸರಕು ಸಾಗಾಣಿಕೆಯ ಹಡಗುಗಳೂ ತೈಲ ನೌಕೆಗಳೂ ಸಾಗುತ್ತಿದ್ದವು.
‘ನೀವು ಹೇಳಿದ ಅವಳಿ ಸಹೋದರ ಮುಳುಗಿದ ಕಡಲು ಪ್ರದೇಶ ಅದೇ ಇರಬಹುದು’ ಮುತ್ತುಕೋಯಾ ದೂರದ ಕಡಲನ್ನು ಬೆರಳು ತೋರಿಸಿ ಸೂಚಿಸಿದರು.
ಏನೂ ಸಂಭವಿಸಿಯೇ ಇಲ್ಲವೆಂಬಂತೆ ದೂರದಲ್ಲಿ ಅಲೆಅಲೆಯಾಗಿ ಮರಳುತ್ತಿರುವ ಕಡಲ ಅಲೆಗಳು.
‘ಅವನು ಅಲ್ಲಿ ಮುಳುಗಿದ್ದರೆ ಈಜಿ ಬರುತ್ತಿದ್ದರೆ ಇಲ್ಲೇ ತೇಲಿ ತಲುಪಬೇಕಾಗಿತ್ತು’ ಅವರು ಮೆಲ್ಲಗೆ ಗೊಣಗಿದರು.
‘ಹಾಗೆ ತಲುಪಿದರೂ ಅವನು ಇಲ್ಲಿ ಬದುಕಿ ಇರಲಾಗುವುದಿಲ್ಲ’ ಅವರು ತಮ್ಮಷ್ಟಕ್ಕೆ ಮಾತನಾಡುತ್ತಿದ್ದರು.
‘ಕಡಲು ತನ್ನದಲ್ಲದ ಏನನ್ನೂ ತನ್ನೊಳಗೆ ಬದುಕಿ ಇರಲು ಬಿಡುವುದಿಲ್ಲ. ನಾಶ ಮಾಡುತ್ತದೆ. ’
‘ನಿಮಗೆ ಈ ಮಸೀದಿಯ ಕಥೆ ಗೊತ್ತಿರಬಹುದು’ ಅವರು ನನ್ನನ್ನೇ ಉದ್ದೇಶಿಸಿ ಮಾತನಾಡುತ್ತಿದ್ದರು.
‘ನೂರು ಇನ್ನೂರು ವರ್ಷಗಳ ಹಿಂದೆ ಇದೇ ಜಾಗದಲ್ಲಿ ಹಾಯಿ ಹಡಗೊಂದು ಬಿರುಗಾಳಿಗೆ ಸಿಲುಕಿ ಹವಳ ಬಂಡೆಗಳಿಗೆ ಡಿಕ್ಕಿ ಹೊಡೆದು ನಿಂತುಕೊಂಡಿತ್ತು. ಅದರೊಳಗಿದ್ದವರು ಎಲ್ಲರೂ ತೀರಿ ಹೋಗಿದ್ದರು. ಒಬ್ಬರನ್ನು ಬಿಟ್ಟು. ’
‘ಇಂತಹದೇ ಅಮವಾಸ್ಯೆಯ ಹೊತ್ತು ಕಡಲು ಬರಿದಾದಾಗ ಕವಡೆ ಹೆಕ್ಕುತ್ತಾ ಇಲ್ಲಿಗೆ ಬಂದ ನಮ್ಮ ಹಿರಿಯರು ಅವರನ್ನು ನೋಡಿದಾಗ ಇನ್ನೂ ಉಸಿರಾಡುತ್ತಿದ್ದ ಅವರು ಅವರದೇ ಭಾಷೆಯಲ್ಲಿ ಏನೋ ಬಡಬಡಿಸುತ್ತಿದ್ದನಂತೆ. ’
‘ಅವನ ಕೈಯಲ್ಲಿ ನಮ್ಮದೇ ಧರ್ಮದ ಗ್ರಂಥವೂ ಇತ್ತಂತೆ.
‘ಕಡಲು ಉಕ್ಕುವ ಸಮಯವಾಗಿದ್ದರಿಂದ ಅವರನ್ನು ತೀರಿಹೋಗಲು ಬಿಟ್ಟು ಅವರು ವಾಪಾಸು ಬಂದರಂತೆ.ʼ
‘ಆದರೆ ಅವರನ್ನು ಹಾಗೆಯೇ ಸಾಯಲು ಬಿಟ್ಟು ಬಂದ ಕಾರಣ ಕಡಲು ಉಕ್ಕುವ ಸಮಯ ಎಂದು ಆಗಿರಲಿಲ್ಲ.ʼ
‘ಹಾಯಿ ದೋಣಿಯಲ್ಲಿ ಬಂದವರು ಕಣ್ಣೂರಿನ ಬೀಬಿ ರಾಣಿಯ ಕಡೆಯ ಭಟರು ಎಂದು ಅವರು ಹೆದರಿಕೊಂಡಿದ್ದರು.ʼ
‘ಬೀಬಿ ರಾಣಿಯ ಕಡೆಯವರು ನಮ್ಮಿಂದ ಕವಡೆಗಳನ್ನು ಕಿತ್ತುಕೊಂಡು ಬರಲು ಹೊರಟವರು ಎಂಬುದು ಅವರ ಭಯವಾಗಿತ್ತು.ʼ
‘ಕವಡೆಯ ಕಪ್ಪ ಕೊಡದಿದ್ದರೆ ರಾಣಿಯ ಭಟರು ಹೆಡೆಮುರಿಗೆ ಕಟ್ಟಿ ಕಣ್ಣೂರಿಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದರಂತೆ.ʼ
‘ದ್ವೀಪವಾಸಿಗಳಿಗೆ ಅದು ನರಕ ಶಿಕ್ಷೆಗಿಂತಲೂ ದೊಡ್ಡದಾದ ರೌರವ ಶಿಕ್ಷೆಯಾಗಿತ್ತು.ʼ
‘ಹಾಗಾಗಿ ಸಾಯದೆ ಉಳಿದ ಒಬ್ಬನನ್ನು ಅಲ್ಲೇ ಸಾಯಲು ಬಿಟ್ಟು ಅವರು ವಾಪಾಸು ಬಂದರು.ʼ
‘ಹಾಗೆ ಕುಡಿಯಲು ನೀರೂ ಇಲ್ಲದೆ ತೀರಿ ಹೋದ ಮಹಾನುಭಾವನ ಹೆಸರಿನ ಮಸೀದಿ ಇದು’
ಮುತ್ತುಕೋಯಾ ತಣ್ಣಗೆ ಹೇಳುತ್ತಿದ್ದರು.
‘ರಾಣಿಯ ಕ್ರೂರ ಭಟನಿಗೇಕೆ ಮಸೀದಿ ಕಟ್ಟಿಸಿದರು’ ನಾನು ಕೇಳಿದೆ.
‘ಅವರು ಬೀಬಿ ರಾಣಿಯ ಪಡೆಯ ಭಟರಾಗಿರಲಿಲ್ಲ. ಪ್ರವಾದಿಗಳ ನಾಡಿನಿಂದ ಹಾಯಿದೋಣಿ ಹತ್ತಿ ಬಂದ ಔಲಿಯಾ ಮಹಾನುಭಾವರಾಗಿದ್ದರು’
‘ಅದು ನಿಮ್ಮ ಹಿರಿಯರಿಗೆ ಹೇಗೆ ಗೊತ್ತಾಯಿತು?’
‘ಹೇಗೆ ಗೊತ್ತಾಯಿತು ಅಂದರೆ ನಮ್ಮ ಹಿರಿಯರು ಅಮವಾಸ್ಯೆ ಕಳೆದು ಮುಂದಿನ ಹುಣ್ಣಿಮೆಯಲ್ಲಿ ಕವಡೆ ಹೆಕ್ಕಲು ಹೋದಾಗ ಮಹಾನುಭಾವರ ಮೃತ ಶರೀರ ಹಾಯಿ ದೋಣಿಯಲ್ಲಿ ಹಾಗೇ ಕದಲದೇ ಕೊಳೆಯದೇ ಕುಳಿತುಕೊಂಡಿತ್ತು ಮತ್ತು ಅವರ ಕೈಯಲ್ಲಿದ್ದ ಧರ್ಮಗ್ರಂಥ ಹಾಗೇ ಇತ್ತು.
ಹಾಗಾಗಿ ಅವರು ಇಲ್ಲೇ ಈ ಮಸೀದಿಯನ್ನು ನಿರ್ಮಿಸಿದರು.
ಎಂತಹ ಮಳೆ ಬಂದರೂ ಬಿರುಗಾಳಿ ಎದ್ದರೂ ಮಸೀದಿಯ ಈ ಇಷ್ಟು ಜಾಗ ಮುಳುಗದೆ ಹೀಗೇ ಇರುತ್ತದೆ.’
ಮುತ್ತುಕೋಯಾ ಅವರು ಮಸೀದಿಯ ಒಳಹೊಕ್ಕು ಮಹಾನುಭಾವರ ಗೋರಿಗೆ ನಮಸ್ಕರಿಸಿ ಕಣ್ಣಿಗೊತ್ತಿಕೊಂಡು ಅದರ ಮುಂದಿನ ದೀಪಕ್ಕೆ ಎಣ್ಣೆ ಎರೆದು ದೀಪ ಹೊತ್ತಿಸಿ ಬೆನ್ನು ಹಾಕದೆ ತಿರುಗಿ ಬಂದು ವಾಪಾಸು ನಡೆಯತೊಡಗಿದರು.
ನಡುವಲ್ಲಿ ಕುರುಚಲು ಕಾಡನಡುವೆ ನಿಂತಿದ್ದ ಭಾರತ ದೇಶದ ಸಾರ್ವಭೌಮತ್ವ ಸಾರುವ ಗಡಿಯ ಕಲ್ಲಿನ ಮುಂದೆ ನಿಂತುಕೊಂಡೆ.
ಕಲ್ಲಿನ ನಡುವಲ್ಲಿ ಸಿಂಹದ ಮುಖ ಮತ್ತು ಅಶೋಕ ಚಕ್ರ.
ಇವರಿಂದ ಅಕಸ್ಮಾತಾಗಿ ಸಂಭವಿಸಿದ ರಾಷ್ಟ್ರದ್ರೋಹದ ಗಡಿಯ ಕಲ್ಲು ಇದೇ ಅಲ್ಲವೇ…!
ಗಡಿಯ ಕಲ್ಲನ್ನೂ ಅದರ ಸುತ್ತ ಬೆಳೆದು ನಿಂತಿರುವ ಸಸಿಗಳ ಸಂಕುಲವನ್ನೂ, ಅರಳಿದ ಕಾಡುಹೂಗಳನ್ನೂ, ಅದರಾಚೆಗೆ ಮಲಗಿರುವ ಮಲಗಿರುವ ಮಹಾನುಭಾವರ ಮಸೀದಿಯನ್ನೂ, ಅದಕ್ಕೂ ಆಚೆ ಮೊರೆಯುತ್ತಿರುವ ಕಡಲ ಅಲೆಗಳನ್ನೂ ದೂರದೂರದಲ್ಲಿ ಸಾಗುತ್ತಿರುವ ಐರಾವತಗಳಂತಹ ಸರಕು ನೌಕೆಗಳನ್ನೂ ನೋಡುತ್ತ ಮುತ್ತುಕೋಯಾರ ಮುಖವನ್ನು ದಿಟ್ಟಿಸಿದೆ.
ಮುತ್ತುಕೋಯಾ ಮಗುವಿನಂತೆ ಪೆಕರು ಪೆಕರಾಗಿ ಮುಖ ಮಾಡಿಕೊಂಡು ಸಿಂಹದ ಮುಖ ನೋಡುತ್ತ ಕೈ ಹಿಸುಕಿಕೊಳ್ಳುತ್ತಿದ್ದರು. ಅವರಿಗೂ ನನ್ನ ಮನಸಲ್ಲಿ ನಡೆಯುತ್ತಿರುವುದು ಗೊತ್ತಾಗಿ ಹೋಗಿದೆ ಅನಿಸಿತು.
ದೂರದಲ್ಲಿ ಮರಳಲ್ಲಿ ಮಲಗಿದ್ದ ನಾಡದೋಣಿಯ ಮೇಲೆ ಕಾಲಾನಿಸಿ ಕುಳಿತ ಕೀಯಾಂಬಿ ನಮ್ಮತ್ತ ಕೈಬೀಸಿ ಕರೆಯುತ್ತಿದ್ದಳು.
‘ಇನ್ನು ಕಡಲು ತುಂಬಿಕೊಳ್ಳಲು ತೊಡಗುವುದು. ಅದಕ್ಕೂ ಮೊದಲು ನಾವು ದೋಣಿಯನ್ನು ಸೇರಬೇಕು’ ಮುತ್ತುಕೋಯಾ ಅವರಷ್ಟಕ್ಕೆ ಕೊಂಚ ಎತ್ತರದ ಧ್ವನಿಯಲ್ಲಿ ಗೊಣಗಿದರು.
ಕಡಲ ನೀರು ತುಂಬಿಕೊಂಡಾಗ ದೋಣಿ ಮೆಲ್ಲನೆ ಮೇಲಕ್ಕೇರುವುದು.
ಮೀನುಗಳು ಮೊರೆಯುವ ಕಡಲಿಂದ ಈಜಿ ಬಂದು ಲಗೂನನ್ನು ಸೇರಿಕೊಳ್ಳುವವು.
ನಾವೂ ದೋಣಿ ಹತ್ತಿ ಹುಟ್ಟು ಹಾಕುತ್ತಾ ತೇಲಲು ತೊಡಗುವೆವು.
ಕೀಯಾಂಬಿ ಬಟ್ಟೆಯ ಚೀಲದಿಂದ ಕಡಲ ಎರೆಗಳನ್ನು ಗಾಣಕ್ಕೆ ಪೋಣಿಸಿಕೊಡುವಳು.
ಮುತ್ತುಕೋಯಾ ನೀರಿಗೆ ಗಾಣ ಎಸೆದು ಮೀನು ಬೇಟೆಗೆ ತೊಡಗುವರು.
ತುಂಬಿಕೊಂಡ ಲಗೂನಿನ ನೀರಿನಲ್ಲಿ ಬಣ್ಣ ಬಣ್ಣದ ಮೀನುಗಳು.
ಜಗತ್ತಿನ ಒಂದು ಕೊನೆಯ ಈ ಅನೂಹ್ಯ ಸ್ವರ್ಗದಲ್ಲಿ ಒಂದು ದೋಣಿಯಲ್ಲಿ ನಾವು ಮೂವರು ಮತ್ತು ಸಂಜೆಯ ಆಕಾಶದಲ್ಲಿ ಮಿನುಗತೊಡಗುವ ಅಮವಾಸ್ಯೆಯ ಇರುಳ ಅಸಂಖ್ಯ ನಕ್ಷತ್ರಗಳು.
ಕೀಯಾಂಬಿ ಬಾಯಲ್ಲಿ ತುಂಬಿಕೊಂಡಿದ್ದ ತಾಂಬೂಲವನ್ನು ತುಂಬಿಕೊಳ್ಳುತ್ತಿರುವ ಕಡಲ ನೀರಿಗೆ ಪಿಚಕ್ಕೆಂದು ಉಗಿದು ನಮ್ಮಿಬ್ಬರನ್ನು ನೋಡಿ ನಕ್ಕಳು.
*****
ಒಂದು ಇರುಳು ಇನ್ನೊಂದು ಹಡಗಿನಲ್ಲಿ ಕಳೆದು ನಾನಿರುವ ದ್ವೀಪ ತಲುಪಿ ಮುಕ್ತಿಯಾರರನ್ನು ನೋಡಲು ಹೋದೆ. ಅವರು ಇನ್ನೊಂದು ಹಡಗು ಹತ್ತಿ ಬೇಪೂರು ತಲುಪಿದ್ದರು.
ಕಲ್ಲಿಕೋಟೆಯ ಜಿಲ್ಲಾ ನ್ಯಾಯಾಲದಲ್ಲಿ ಇನ್ನೊಂದು ಭೂವ್ಯಾಜ್ಯದಲ್ಲಿ ಅವರು ವಾದಿಸಬೇಕಿತ್ತು.
‘ಮುಳುಗಿ ಹೋದ ಅವಳಿ ಸಹೋದರ ಸಿಗುವುದು ಬಿಡಿ. ಅವನ ಆತ್ಮವೂ ಅಲ್ಲಿ ಕಾಣಿಸಲಿಲ್ಲ ಮುಕ್ತಿಯಾರೇ’
‘ಅದು ಕಾಣಿಸುವುದಿಲ್ಲ ಅಂತ ನನಗೂ ಗೊತ್ತಿತ್ತು ಆದರೆ ನೀವು ಅಲ್ಲಿಗೆ ಹೋಗಿ ಆ ಮಸೀದಿಯನ್ನೂ, ಆ ಅಶೋಕ ಚಕ್ರವಿರುವ ಗಡಿಯ ಕಲ್ಲನ್ನೂ ನೋಡಿ ಬರಬೇಕು ಅನ್ನುವುದು ನನ್ನ ಮನಸಿನ ಆಶಯವಾಗಿತ್ತು’
ಮುಕ್ತಿಯಾರರು ತಮ್ಮ ಎಂದಿನ ಸಣ್ಣಗಿನ ಧ್ವನಿಯಲ್ಲಿ ಆಚೆಕಡೆಯಿಂದ ಫೋನಿನಲ್ಲಿ ನಗುತ್ತಿದ್ದರು.
‘ಹೌದು ಎರಡನ್ನೂ ನಾನು ನೋಡಿದೆ. ಎಲ್ಲವೂ ಅರ್ಥವಾಯಿತು’
ನಾನೂ ನಕ್ಕೆ.
‘ಮುತ್ತುಕೋಯಾ ಬೇಕೆಂದು ಮಾಡಿದ ಅಪರಾದ ಅಲ್ಲ ಅದು‘
‘ಪ್ರತಿ ವರ್ಷ ರಜಬ್ ಮಾಸದ ೨೮ ನೆಯ ದಿನ ಆ ದ್ವೀಪದಲ್ಲಿ ಶಹೀದಾಗಿ ಮಲಗಿರುವ ಆ ಮಹಾನುಭಾವನ ವರ್ಷದ ಉರೂಸು ನಡೆಯುತ್ತದೆ. ಆ ದಿನ ದ್ವೀಪದ ಜನರೆಲ್ಲರೂ ಅಲ್ಲಿ ಸೇರುತ್ತಾರೆ.ʼ
‘ಅದಕ್ಕೂ ಎರಡು ದಿನ ಮೊದಲು ಎಲ್ಲರೂ ಸೇರಿ ಆ ಮಸೀದಿಯ ಕಾಡನ್ನು ಸ್ವಚ್ಚಗೊಳಿಸುತ್ತಾರೆ.ʼ
‘ಮುತ್ತುಕೋಯಾ ಕೈಯಲ್ಲೊಂದು ಉದ್ದದ ಕತ್ತಿ ಹಿಡಿದು ತಾನೂ ಕಾಡು ಸ್ವಚ್ಚಗೊಳಿಸುತ್ತಿದ್ದ.ʼ
‘ಆ ಕಾಡು ಪೊದೆಯೊಳಗೆ ರಾಷ್ಟ್ರದ ಗಡಿಯ ಕಲ್ಲು ಇರುವುದು ಅವನಿಗೆ ತಿಳಿದಿರಲಿಲ್ಲ. ‘
‘ಆತ ಬೀಸಿದ ಸದ್ದಿಗೆ ಏನೋ ಸದ್ದಾಯಿತು.ʼ
‘ನೋಡಿದರೆ ಅಶೋಕ ಚಕ್ರದ ಮೇಲಿರುವ ಸಿಂಹದ ಮೂಗಿಗೆ ಪೆಟ್ಟಾಗಿ ಸ್ವಲ್ಪ ಕಿತ್ತು ಹೋಗಿಬಿಟ್ಟಿತ್ತು.ʼ
‘ಗೊತ್ತಿದ್ದು ಮಾಡಿದರೂ ಗೊತ್ತಿಲ್ಲದೆ ಮಾಡಿದ್ದರೂ ಅಪರಾಧ ಅಪರಾಧವೇ……’
‘ಮುತ್ತುಕೋಯನಿಗೆ ಮೂವತ್ತು ವರ್ಷಗಳ ಹಿಂದೆ ಈ ಗುರುತರ ಅಪರಾಧಕ್ಕಾಗಿ ಶಿಕ್ಷೆಯಾಗಬೇಕಿತ್ತು.
ಮಾನಸಿಕ ಅಸ್ವಸ್ಥ ಎಂಬ ಕಾರಣಕ್ಕಾಗಿ ಶಿಕ್ಷೆಯಾಗಲಿಲ್ಲ.
ಸಿಂಹದ ಮೂಗಿಗೆ ಪೆಟ್ಟಾದ ಗಡಿಕಲ್ಲನ್ನು ಸರಿಪಡಿಸಿ ಮತ್ತೆ ಕೂರಿಸಲಾಯಿತು.
ಮುಕ್ತಿಯಾರರು ಫೋನಲ್ಲೇ ಆ ಘಟನೆಯ ಇತಿಹಾಸವನ್ನು ನುರಿತ ಇತಿಹಾಸಕಾರನಂತೆ ವಿವರಿಸುತ್ತಿದ್ದರು.
‘ಕಡಲಿನಲ್ಲಿ ಕಳೆದುಹೋದ ಆ ಅವಳಿ ಸಹೋದರನನ್ನು ಕಾಯುತ್ತಿರುವ ಸಹೋದರಿಗೆ ಏನು ಹೇಳಲಿ ಮುಕ್ತಿಯಾರರೇ’ ಎಂದು ಕೇಳಿದೆ.
ಎಂತಹ ಕಠಿಣ ಸಂದರ್ಭದಲ್ಲೂ ಆಧ್ಯಾತ್ಮಿಕ ಸಲಹೆ ನೀಡುವ ಮಾನಸಿಕ ಗುರುವೂ ಹೌದು ಅವರು.
‘ನೀವು ಏನೂ ಹೇಳುವುದು ಬೇಡ. ಆಕೆಗೆ ಈ ವಿಷಯ ಈಗಾಗಲೇ ಗೊತ್ತಾಗಿರುತ್ತದೆ. ಸುಮ್ಮನಿರಿ’ ಎಂದಿದ್ದರು ಅವರು.

ಈ ಕಥೆ ಬರೆದಿಟ್ಟು ಈಗಾಗಲೇ ಒಂದು ವರ್ಷವೇ ಕಳೆದಿದೆ.
ಪ್ರಕಟಿಸುವುದೇ ಬೇಡವೇ ಎಂಬ ಆತ್ಮ ಜಿಜ್ಞಾಸೆಯೂ ಶುರುವಾಗಿದೆ.
ಕೇಳೋಣವೆಂದರೆ ಮುಕ್ತಿಯಾರರು ವಯೋ ಸಹಜ ಕಾರಣಗಳಿಂದ ಅಸ್ವಸ್ಥರಾಗಿ ಮಾತನಾಡಲಾಗದ ಸ್ಥಿತಿಯಲ್ಲಿ ಮಲಗಿದ್ದಾರೆ.
ನಿನ್ನೆ ಸುಮ್ಮನೆ ಕುತೂಹಲಕ್ಕೆ ಮಾಂಟೇನಿಗ್ರೋದ ಆ ಅನುಪಮ ರೂಪದರ್ಶಿಯ ಇನ್ಸ್ಚಾಗ್ರಾಮ್ ಇನ್ಸ್ಟಾಗ್ರಾಮ್ ತೆರೆದು ನೋಡಿದೆ.
ಆಕೆ ಆ ದೇಶದ ಇನ್ನೂ ಖ್ಯಾತಳಾದ ರೂಪದರ್ಶಿಯಾಗಿ ಬೆಳೆದಿದ್ದಾಳೆ.
ಜೊತೆಗೆ ಅವಳಿಗೆ ಅವಳಿ ಗಂಡು ಮಕ್ಕಳು ಜನಿಸಿವೆ.
ತಾನು ಅವಳಿ ಮಕ್ಕಳ ಸಿಂಗಲ್ ಪೇರೆಂಟ್ ಎಂದು ಹೆಮ್ಮೆಯಿಂದ ಘೋಷಿಸಿಕೊಂಡಿದ್ದಾಳೆ.
ಕಟೆದ ಪುತ್ತಳಿಯಂತೆ ಇದ್ದ ಆಕೆಯ ಪ್ರಿಯಕರನ ಫೋಟೋ ಆಕೆಯ ಇನ್ಸ್ಚಾಗ್ರಾಮ್ಇನ್ಸ್ಟಾಗ್ರಾಮ್ ನಲ್ಲಿ ಎಲ್ಲೂ ಕಾಣಿಸುತ್ತಿಲ್ಲ.
ಜೊತೆಗೆ ಕಡಲಿನಲ್ಲಿ ಕಳೆದುಹೋದ ಅವಳಿ ಸಹೋದರನ ಚಿತ್ರವೂ ಕಾಣಿಸುತ್ತಿಲ್ಲ.
ಬಹುಶಃ ಆಕೆ ಮುಕ್ತಿಯಾರರು ಇಲ್ಲಿಂದಲೇ ಪಡೆದವನಲ್ಲಿ ಬೇಡಿಕೊಂಡ ಹಾಗೆ ಹೊಸ ಬದುಕು ಆರಂಭಿಸಿದ್ದಾಳೆ.
(ಫೋಟೋಗಳು: ಲೇಖಕರವು)

ಕೆಂಡಸಂಪಿಗೆಯ ಸಂಪಾದಕ. ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.

