ಶರಾವತಿ ನದಿಗೆ ಅಣೆಕಟ್ಟು ಕಟ್ಟುತ್ತಾರಂತೆ, ನಮ್ಮೂರು ಮುಳುಗುತ್ತದಂತೆ, ನಾಡಿಗೇ ಬೆಳಕು ದೊರೆಯಲಿದೆಯಂತೆ ಎಂಬೆಲ್ಲ ಸುದ್ದಿಗಳನ್ನು ಕೇಳುವಾಗ, ಮೀನಾಕ್ಷಿಯವರಿಗಿನ್ನೂ ಸಣ್ಣ ಹರೆಯ. ಈ ಎಲ್ಲ ಹೇಳಿಕೆಗಳ ನಡುವೆ ಒಂದಕ್ಕೊಂದು ಸಂಬಂಧವಿಲ್ಲ ಎಂದೆನಿಸುತ್ತಿತ್ತು. ಆದರೆ ಹುಟ್ಟಿದೂರು ತೊರೆಯಲೇಬೇಕಾಯಿತು. ಮುಂದಕ್ಕೆ ಎಷ್ಟೊಂದು ಊರುಗಳಲ್ಲಿ, ಕಷ್ಟಗಳ ಮೆಟ್ಟಿಲೇರಿ ಬದುಕನ್ನು ಕಟ್ಟಿಕೊಳ್ಳಬೇಕಾಯಿತು ಎಂಬುದೇ ‘ಹರಿವ ನದಿ’ಯಲ್ಲಿರುವ ಜೀವನಗಾಥೆ. ಅಮ್ಮ ಮೀನಾಕ್ಷಿ ಭಟ್ಟರ ಜೀವನದಲ್ಲಿ ಎದುರಾದ ಸವಾಲುಗಳು ಮಗಳು ಭಾರತಿ ಹೆಗಡೆಗೆ ಇಂದಿಗೂ ಸ್ಫೂರ್ತಿ. ಲೇಖಕಿಯೂ ಆಗಿರುವ ಅವರು ಅಮ್ಮನ ದನಿಗೆ ಅಕ್ಷರ ರೂಪ ನೀಡಿದ್ದಾರೆ. ಈ ಆತ್ಮಕತೆಯ ಒಂದು ಅಧ್ಯಾಯ ಕೆಂಡಸಂಪಿಗೆ ಓದುಗರಿಗಾಗಿ ಇಲ್ಲಿದೆ.
ದೇವರು ಮುನ್ನಡೆಸಿದ್ದಾ…?
ಮನೆಯ ಹೊರಗಿನ ಕಟ್ಟೆಯ ಮೇಲೆ ಕುಳಿತು ಎದುರಿಗಿನ ವಿಶಾಲವಾದ ತೋಟವನ್ನು ನೋಡುತ್ತಿದ್ದೇನೆ ಒಬ್ಬಂಟಿಯಾಗಿ. ಸೂರ್ಯ ಮುಳುಗಲು ತಯಾರಿ ನಡೆಸುತ್ತಿದ್ದ. ಇಳಿಸಂಜೆಯ ಬಿಸಿಲಿನಲ್ಲಿ ಸರಿದು ಹೋಗುತ್ತಿರುವ ದಟ್ಟವಾದ ನೆರಳುಗಳು. ತೊಯ್ದಾಡುತ್ತಿರುವ ತೆಂಗಿನ ಮರಗಳು, ಯಾವ್ಯಾವುದೋ ಮರಗಳಿಂದ ಬರುವ ತಣ್ಣನೆಯ ಗಾಳಿ. ಬಗೆಬಗೆಯ ಹಕ್ಕಿಗಳ ಕಲರವ, ಎದುರಿಗಿನ ಬೀದಿಯಲ್ಲಿ ಆಡುತ್ತಿರುವ ಮುದ್ದಾದ ಇಬ್ಬರು ಮೊಮ್ಮಕ್ಕಳು… ಎಲ್ಲವನ್ನೂ ನೋಡುತ್ತ ಕುಳಿತಿದ್ದೇನೆ. ಕುಗ್ರಾಮವೊಂದರಲ್ಲಿ ಬೆಳೆದ ಮೀನಾಕ್ಷೀ ಎಂಬ ಹೆಸರಿನ ನಾನು ಎಲ್ಲೆಲ್ಲೋ ಸುತ್ತಾಡಿ ಈಗ ಇಲ್ಲಿಗೆ ಬಂದಿದ್ದೇನೆ. ಅದ್ಯಾವ ಶಕ್ತಿ ನನ್ನನ್ನು ಇಲ್ಲಿಯವರೆಗೆ ಹೀಗೆ ತಂದು ಕೂರಿಸಿದೆ ಎಂದು ಅಚ್ಚರಿಯಿಂದ ನೋಡುತ್ತಿದ್ದೇನೆ.
ಅವತ್ತೂ ಇಂಥದ್ದೇ ಒಂದು ಸಂಜೆ, ಅವರೊಡನೆ ಕುಳಿತಿದ್ದೆ. ಆ ಸಂಜೆ ತುಂಬ ಘೋರ ಅನಿಸುತ್ತಿತ್ತು. ಆ ಸಂದರ್ಭವೇ ಹಾಗಿತ್ತು. ಪ್ರತಿದಿವಸವೂ ಹಗಲುರಾತ್ರಿಗಳೆಲ್ಲ ನನಗೆ ಘೋರವೇ ಎನಿಸುತ್ತಿತ್ತು. ಯಾವುದೋ ಭೀಕರವಾದುದೊಂದಕ್ಕೆ ನಾನು ತೆರೆದುಕೊಳ್ಳಲು ವಿಧಿ ಬೆನ್ನ ಹಿಂದೆ ಹುನ್ನಾರ ನಡೆಸುತ್ತಿದೆ ಎನಿಸುತ್ತಿತ್ತು. ಇವರಿಗೆ ಹಾರ್ಟ್ ಆಪರೇಷನ್ ಮಾಡಬೇಕೆಂದು ಅಷ್ಟೊತ್ತಿಗಾಗಲೇ ತಯಾರಿ ನಡೆಯುತ್ತಿತ್ತು. ಅದು ಎಂಭತ್ತರ ದಶಕ.
ನಮ್ಮವರಿಗೆ ಹೃದಯದ ಸಮಸ್ಯೆ ಇದೆಯೆಂದು ವೈದ್ಯರು ಹೇಳಿಯಾಗಿತ್ತು. ಆಪರೇಷನ್ ಮಾಡಿಸಲೇ ಬೇಕೆಂದೂ ಹೇಳಿದ್ದರು. ಮನೆಯಲ್ಲಿ ಸದಾ ಅದರ ಕುರಿತೇ ಮಾತುಕತೆಗಳು ನಡೆಯುತ್ತಿದ್ದವು. ನನ್ನ ಅಣ್ಣ ಜೈರಾಮಣ್ಣಯ್ಯ ಇವರನ್ನು ಒಮ್ಮೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಆಂಜಿಯೋಗ್ರಾಮ್ ಮಾಡಿಸಿಕೊಂಡು ಬಂದಿದ್ದ. ಅದು ಗಂಭೀರ ಸ್ವರೂಪದಲ್ಲಿತ್ತು. ಯಾವುದೋ ಅವ್ಯಕ್ತ ಭಯ ಎಲ್ಲರನ್ನೂ ಕಾಡುತ್ತಿತ್ತು.
ನನಗಂತೂ ಹಗಲ್ಯಾವುದು, ರಾತ್ರಿಯಾವುದು ಎಂದು ತಿಳಿಯಲಾರದಷ್ಟು ಮಂಕು ಕವಿದಿತ್ತು. ಸಾವು ಎದುರಿಗೆ ಬಂದು ಕಾಲೂರಿ ಕುಳಿತು ಅಣಕಿಸುತ್ತಿದ್ದಂತೆ ಭಾಸವಾಗುತ್ತಿತ್ತು. ಮುಂದೇನು… ಮುಂದೇನು…? ಎಷ್ಟು ಯೋಚಿಸಿದರೂ ಬಗೆಹರಿಯಲಾರದ ಪ್ರಶ್ನೆಯಾಗಿತ್ತು. ಐನಕೈ ಗಜಾನನ ಶಾಸ್ತ್ರಿಗಳು ಎಂದೇ ಹೆಸರುವಾಸಿಯಾದ ನನ್ನ ಪತಿ ಖ್ಯಾತ ಯಕ್ಷಗಾನ ಅರ್ಥಧಾರಿ, ಪ್ರವಚನಕಾರ, ಸಂಸ್ಕೃತ ಪಂಡಿತ, ಖ್ಯಾತ ಜ್ಯೋತಿಷಿ… ಹೀಗೆ ಏನೆಲ್ಲ ಹೆಸರು ಪಡೆದವರು. ಅವರು ಮಾತನಾಡುತ್ತಿದ್ದರೆ ಎಂಥವರಾದರೂ ಕೂತು ಕೇಳಬೇಕೆಂಬ ವಾಕ್‌ಚಾತುರ್ಯ ಅವರಿಗಿತ್ತು. 80 ವರ್ಷದ ವೃದ್ಧರಿಂದ ಹಿಡಿದು ಆಗತಾನೇ ಮಾತು ಬರುವ ಪುಟ್ಟ ಮಗುವಿನವರೆಗೆ ಎಲ್ಲರೂ ಇವರ ಮಾತುಗಳನ್ನು ಆಲಿಸುತ್ತಿದ್ದರು. ಎಲ್ಲ ವಯೋಮಾನದವರನ್ನೂ ಹಿಡಿದು ನಿಲ್ಲಿಸುವ ಶಕ್ತಿ ಅವರಲ್ಲಿತ್ತು. ಎಲ್ಲ ಜಾತಿ, ವರ್ಗದವರೂ ಇವರಿಗೆ ಸ್ನೇಹಿತರು, ವಿಶ್ವಾಸಿಗರು. ಸರಳ ಸಜ್ಜನಿಕೆಯ ಪ್ರತೀಕವಾಗಿದ್ದ ನನ್ನ ಪತಿ ಇನ್ನು ಕೆಲವೇ ದಿವಸಗಳಲ್ಲಿ ನಮ್ಮನ್ನೆಲ್ಲ ಅಗಲಿ ಹೋಗಬಹುದು, ಅವರು ಬದುಕುವುದು ಬಹುಶಃ ಕಷ್ಟ. ಅವರ ಪ್ರಾಣವನ್ನು ಈ ವಿಶ್ವಾಸಿಗರ ಪೈಕಿ ಯಾರಾದರೂ ಬಂದು ಕಾಪಾಡಲಾರರೇ? ಯಾವುದಾದರೂ ಒಂದು ಶಕ್ತಿ ಇವನ್ನೆಲ್ಲ ತಡೆದು ನಿಲ್ಲಿಸಬಹುದೇ?
ಮರುಳು ನನಗೆ… ಅದೆಷ್ಟು ಸಲ ಇಂಥವನ್ನೆಲ್ಲ ನನಗೆ ನಾನೇ ಕೇಳಿಕೊಂಡಿಲ್ಲ. ಯಾವ ಪ್ರಶ್ನೆಗೂ ಇಲ್ಲಿ ಉತ್ತರವೇ ಇರಲಿಲ್ಲ. ಅವರಿಗೆ ಆಪರೇಷನ್ ಮಾಡಿಸಬೇಕು ಎಂದಕೂಡಲೇ ಭಯದಿಂದ ನಡುಗಿದ್ದೆ. ಅವರು ಬದುಕಬಹುದಾ? ಎಂದು. ಆದರೆ ಆಪರೇಷನ್ ಮಾಡಿಸಬೇಕೆಂದು ಒತ್ತಾಯಿಸಿದವಳೂ ನಾನೇ…
1969ರಲ್ಲಿ ಹಾರ್ಟ್‌ಅಟ್ಯಾಕ್ ಆದಾಗ ಅವರಿಗೆ ಚಿಕಿತ್ಸೆ ಮಾಡಿದ್ದ ಶಿವಮೊಗ್ಗದ ಡಾ.ಕೆ.ಜಿ. ನಾಗೇಶ್ ಹೇಳಿದ್ದರು, ‘10 ವರ್ಷಗಳ ನಂತರ ಈ ತೊಂದರೆ ಮತ್ತೆ ಬಂದೇ ಬರುತ್ತದೆ, ಆಗ ಆಪರೇಷನ್ ಮಾಡಿಸಲೇಬೇಕು’ ಎಂದು. ಅದನ್ನೊಮ್ಮೆ ಅವರಿಗೆ ನೆನಪಿಸಿದೆ. ‘ನೋಡಿ, ಈಗ ಆಪರೇಷನ್ ಮಾಡಿಸಲೇಬೇಕು’ ಎಂದು ನಾಗೇಶ್ ಹೇಳಿದ್ದರು. ಅದಕ್ಕೆ ಈಗ ಮಾಡಿಸಿಬಿಟ್ಟರಾಯಿತು’ ಎಂದು. ಅದಕ್ಕವರು, ಮೆಲ್ಲಗೆ ನಕ್ಕು, ‘ನಾಗೇಶ್ 10 ವರ್ಷ ಎಂದು ಹೇಳಿದ್ದರು, ನಾನು 16 ವರ್ಷ ಮುಂದೂಡಿದ್ದಿ. ಹಾಗಾಗಿ ಎಂತೂ ಆಗ್ತಿಲ್ಲೆ ಹೆದರಡ’ ಎಂದು ನನ್ನನ್ನು ಸಮಾಧಾನಿಸಿದ್ದರು. ಆದರೆ ನನ್ನೊಳಗೆ ಸಮಾಧಾನವಿರಲಿಲ್ಲ. ಅದಕ್ಕೆ ಜೈರಾಮಣ್ಣಯ್ಯನನ್ನು ಕರೆಸಿದೆ. ಅವನೇನೋ ಕಾರ್ಯತತ್ಪರನಾದ. ಇವರನ್ನು ಒಮ್ಮೆ ಬೆಂಗಳೂರಿಗೆ ಕರೆದುಕೊಂಡು ಹೋಗಿಬಂದ. ಹಾಗೆ ಬಂದಮೇಲೆ, ನನಗೆ ಮತ್ತೂ ಭಯವಾಗುತ್ತಿತ್ತು. ಇವರು ಉಳಿಯಬಹುದೇ ಎಂಬ ಪ್ರಶ್ನೆಯೇ ಸದಾ ಭಯ ಹುಟ್ಟಿಸುತ್ತಿತ್ತು.
ಆ ಭಯಕ್ಕೆ ಇವರ ಶಿಷ್ಯ ದಿಂಡಿನಕಾರು ನಾರಾಯಣನ ಬಳಿ ಪ್ರಶ್ನೆ ಕೇಳಿದೆ. ಅವ ಚೆನ್ನಾಗಿ ಹಸ್ತಸಾಮುದ್ರಿಕೆಯನ್ನು ಬಲ್ಲವನಾಗಿದ್ದ. ಅವನಿಗೆ ಕೈ ತೋರಿಸಿದೆ. ಇವನಾದರೂ ಭರವಸೆಯ ಮಾತನಾಡಬಹುದೆಂಬ ನಿರೀಕ್ಷೆ ನನ್ನಲ್ಲಿ. ಇವರ ಕೈ ನೋಡಿದವನೇ ಇದು ‘ಹುಷಾರಾಪ್ದು ಸ್ವಲ್ಪ ಕಷ್ಟಿದ್ರಾ…?’ ಎಂದು ನಿಧಾನಕ್ಕೆ ತಡೆತಡೆದು ಹೇಳಿದ. ನನ್ನ ಕೈ ತೋರಿಸಿದ ಕೂಡಲೇ ಕೈಯ್ಯನ್ನು ಪಕ್ಕಕ್ಕೆ ಇಟ್ಟು, ‘ನಿನ್ನ ಕೈ ನೋಡ ಅಗತ್ಯ ಇಲ್ಯೆ..’ ಎಂದು ಹೇಳಿಬಿಟ್ಟ, ಅವನ ಮಾತುಗಳಲ್ಲಿ ವೇದನೆ ಇತ್ತೇ, ವಿಷಾದವಿತ್ತೇ, ಆಗ ಏನನ್ನೂ ಗಮನಿಸುವ ಪರಿಸ್ಥಿತಿಯಲ್ಲಿ ನಾನಿರಲಿಲ್ಲ. ಅವತ್ತು ರಾತ್ರಿಯಿಡೀ ನನಗೆ ನಿದ್ದೆ ಬರಲಿಲ್ಲ. ಮಾರನೇ ದಿನ ಎಂದಿನಂತೆ ಎದ್ದೆ, ಮನೆಗೆಲಸಗಳೆಲ್ಲ ಯಾಂತ್ರಿಕವಾಗಿ ನಡೆಯುತ್ತಿದ್ದವು. ಆದರೆ ನನ್ನ ಮನಸ್ಸು ಸ್ಥಿಮಿತದಲ್ಲಿರಲಿಲ್ಲ. ಅವರು ಜಗುಲಿಯಲ್ಲಿ ಕುಳಿತು ಏನನ್ನೋ ಓದುತ್ತಿದ್ದರು. ಮಕ್ಕಳಿಬ್ಬರೂ ಕಾಲೇಜಿಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇರಲಿಲ್ಲ. ಅವರ ಪಕ್ಕ ಹೋಗಿ ಕುಳಿತೆ. ಒಂದೇ ಸಮನೆ ಅಳು ಬರತೊಡಗಿತು. ಆಗ ಅವರು ‘ಎಂತಕ್ಕೆ ಇಷ್ಟೆಲ್ಲ ಅಳ್ತಾ ಇದ್ದೆ, ಆಪದೆಲ್ಲ ಆಪ ಹಂಗೇ ಆಗ್ತು, ನೀ ಧೈರ್ಯ ತಂದ್ಕಳವು ಈಗ’ ಎಂದರು. ಹಾಗೆ ಹೇಳುವಾಗ ಅವರ ಧ್ವನಿಯೂ ನಡುಗುತ್ತಿತ್ತು. ಅಳುತ್ತಲೇ ತಲೆ ಎತ್ತಿ ಅವರ ಮುಖವನ್ನೊಮ್ಮೆ ದಿಟ್ಟಿಸಿದೆ. ಅವರ ಕಣ್ಣುಗಳೂ ತುಂಬಿಬಂದಿದ್ದವು. ‘ಅಲ್ಲ ನಾರಣ ಹೀಂಗೆ ಹೇಳಿಬಿಟ್ನಲೀ. ಮುಂದೆಂತದು ಹಂಗರೆ’ ಎಂದೆ. ‘ನಾರಣ ಹೇಳಿದ ತಕ್ಷಣ ಎಲ್ಲದೂ ಹಂಗೇ ನಡೆದುಹೋಗ್ತ, ಜ್ಯೋತಿಷಿಗಳು ಏನೋ ಒಂದು ಲೆಕ್ಕಾಚಾರದಲ್ಲಿ ಹೇಳತ್ವಪಾ. ಅವು ಹೇಳಿದ್ದೆಲ್ಲವೂ ನಡೆದುಬಿಡವು ಹೇಳಿಲ್ಯಲೆ’ ಎಂದರು.
‘ಒಂದೊಮ್ಮೆ ನಡೆದು ಹೋದರೆ ಮುಂದೇನು…’ ನಡುಗುತ್ತ ಕೇಳಿದೆ.
ಅವತ್ತೂ ಇಂಥದ್ದೇ ಒಂದು ಸಂಜೆ, ಅವರೊಡನೆ ಕುಳಿತಿದ್ದೆ. ಆ ಸಂಜೆ ತುಂಬ ಘೋರ ಅನಿಸುತ್ತಿತ್ತು. ಆ ಸಂದರ್ಭವೇ ಹಾಗಿತ್ತು. ಪ್ರತಿದಿವಸವೂ ಹಗಲುರಾತ್ರಿಗಳೆಲ್ಲ ನನಗೆ ಘೋರವೇ ಎನಿಸುತ್ತಿತ್ತು. ಯಾವುದೋ ಭೀಕರವಾದುದೊಂದಕ್ಕೆ ನಾನು ತೆರೆದುಕೊಳ್ಳಲು ವಿಧಿ ಬೆನ್ನ ಹಿಂದೆ ಹುನ್ನಾರ ನಡೆಸುತ್ತಿದೆ ಎನಿಸುತ್ತಿತ್ತು.
ಸ್ವಲ್ಪಹೊತ್ತು ಅವರೂ ಮೌನವಾದರು. ಒಂದು ದೊಡ್ಡ ನಿಟ್ಟುಸಿರು ಅವರಿಂದ ಹೊರಬಂತು. ಅವರಿಗೂ ದುಃಖವಾಗಿತ್ತು. ಗದ್ಗದಿತರಾಗಿ ಹೇಳಿದರು. ‘ನೋಡು ಮೀನಾಕ್ಷೀ, ಯಾವುದು ನಮ್ಮ ಕೈಯ್ಯಲ್ಲಿದ್ದು, ಏನು ನಡೆಯವೋ ಅದೇ ನಡೀತು. ತುಂಬ ಯೋಚಿಸಲೆ ಹೋಗಡ. ಧೈರ್ಯ ತಂದ್ಕಾ. ನೀ ಧೈರ್ಯಗೆಡಲಿಲ್ಲೆ. ಇಬ್ಬರು ಮಕ್ಕಳು ಇದ್ವಲೇ, ಅದು ನೆನಪಿರ್ಲಿ ನಿಂಗೆ, ದೇವರು ಮುಂದೆ ನಡೆಸಿಕ್ಯಂಡು ಹೋಗ್ತ.’ ಎಂದು ಹೇಳಿದರು.
ಅಂದರೆ… ಅವರಿಗೆ, ನನಗೆ ಇಬ್ಬರಿಗೂ ಗೊತ್ತಿತ್ತು. ಇದು ಜಾಸ್ತಿ ದಿವಸ ಮುಂದುವರಿಯುವುದಿಲ್ಲವೆಂದು. ನಮ್ಮಿಬ್ಬರ ಅಳುವೂ, ದುಃಖವೂ, ಸಂಕಟವೂ ಎಲ್ಲವನ್ನೂ ಸಾವೆಂಬ ದುರುಳ ರಕ್ಕಸನು ನಗುತ್ತಲೇ ನೋಡುತ್ತ ಹೊಂಚುಹಾಕಿ ಕಾಯುತ್ತಿರುವಂತೆ ಅನಿಸುತ್ತಿತ್ತು. ಎಷ್ಟೊತ್ತಿಗೆ ಬೇಕಾದರೂ ಇವರನ್ನು ಇಲ್ಲಿಂದ ಕಿತ್ತೊಯ್ಯಬಹುದು. ಅದಕ್ಕೆ ನಾನು ಮಾನಸಿಕವಾಗಿ ಸಜ್ಜಾಗಬೇಕಿತ್ತು. ಆದರೇನು ಮಾಡಲಿ? ಅದನ್ನು ಒಪ್ಪುವ ಸ್ಥಿತಿಯಲ್ಲಿ ನಾನಿರಲಿಲ್ಲ.
ಬಯಸೀ ಬಯಸೀ, ಹಟ ತೊಟ್ಟು ಇವರನ್ನು ಮದುವೆಯಾದವಳು ನಾನು. ಎಲ್ಲರ ವಿರೋಧವನ್ನೂ ಲೆಕ್ಕಿಸದೇ, ಎಲ್ಲರನ್ನೂ ಎದುರು ಹಾಕಿಕೊಂಡು ಮದುವೆಯಾದವರು ನಾವು. ಅವರನ್ನು ಪ್ರೇಮಿಸುತ್ತೇನೆಂದು ತಿಳಿದ ಕೂಡಲೇ ಅವನಿಗೇನಿದೆ ಎಂದು ಮದುವೆಯಾಗುತ್ತೀ ಎಂದು ಅಬ್ಬರಿಸಿದ ಅಪ್ಪನಿಗೆ, ಅವನಿಗೆ ಮದುವೆ ಮಾಡಿಕೊಟ್ಟರೆ ನಾಳೆದಿನ ಅವನ ಸಂಸಾರವನ್ನೂ ನಾವೇ ನೋಡಬೇಕಾಗಿ ಬರಬಹುದು ಎಂದು ವ್ಯಂಗ್ಯವಾಗಿ ಹೇಳಿದ ಗಪ್ಪತಣ್ಣಯ್ಯನಿಗೆ, ನಗುವಿನಲ್ಲೇ ಉತ್ತರಿಸಿ, ಹಟ ತೊಟ್ಟು ಮದುವೆಯಾದವರು ನಾವು. ಮದುವೆಯಾಗುವಾಗಲೇ ಅಂದುಕೊಂಡಿದ್ದೆ, ಯಾವುದೇ ಕಾರಣಕ್ಕೂ ಬದುಕಲು ಸಾಧ್ಯವಿಲ್ಲ ಎಂದು ಅಪ್ಪನ ಮನೆಯ ಬಾಗಿಲಿಗೆ ಬಂದು ನಿಲ್ಲಬಾರದೆಂಬ ಶಪಥ ತೊಟ್ಟವಳು ನಾನು. ಇವತ್ತು ಆ ಶಪಥವನ್ನೇ ಅಲುಗಾಡಿಸುವಂತೆ ವಿಧಿ ನನ್ನ ಬದುಕಲ್ಲಿ ಆಟವಾಡುತ್ತಿದೆ. ಇಬ್ಬರೂ ಪ್ರೇಮಿಸಿ ಮದುವೆಯಾದ ಮೇಲೆ ನನ್ನ ಮಾವನ ಮನೆಯವರು ನಮ್ಮ ಕೈಬಿಟ್ಟರು, ಒಂದು ರೀತಿಯಲ್ಲಿ ನಮ್ಮನ್ನು ಮನೆಯಿಂದ ಹೊರಹಾಕಿಬಿಟ್ಟರು. ಅಷ್ಟರ ನಂತರ ನಮ್ಮದೇ ಜೀವನವನ್ನು ಬೀಳುತ್ತ, ಏಳುತ್ತ ಸಾಮಾಜಿಕವಾಗಿ ಗೌರವದ ಬದುಕನ್ನು ಕಟ್ಟಿಕೊಂಡು ಹೇಗ್ಹೇಗೋ ಇಲ್ಲಿಯವರೆಗೂ ಬಂದು ನಿಂತದ್ದಾಯಿತು. ಈಗ ಅವರನ್ನು ಕಿತ್ತೊಯ್ಯಲೆಂದೇ ಬಂದೆರಗಿದ ಈ ಕಾಯಿಲೆ.
ಇಬ್ಬರು ಮಕ್ಕಳಿದ್ದಾರೆ, ದೇವರು ನಡೆಸುತ್ತಾನೆ ಬಿಡು ಎಂದು ಬಿಟ್ಟರು ಅವರು. ದೇವರಿದ್ದಾನಾ… ಈ ಪ್ರಶ್ನೆಯನ್ನು ಗಟ್ಟಿಯಾಗಿ ಕೇಳಿಕೊಳ್ಳುವ ಸಮಯವಿದು. ಯಾವ ತಪ್ಪಿಗೆ, ಯಾರ ತಪ್ಪಿಗೆ ನಮಗೀ ಶಿಕ್ಷೆ? ಮಗ ರವಿ ಶಿರಸಿ ಕಾಲೇಜಿನಲ್ಲಿ ಬಿಎಸ್‌ಸಿ ಓದುತ್ತಿದ್ದ. ಮಗಳು ಭಾರತಿ ಸಿದ್ದಾಪುರದಲ್ಲೇ ಪಿಯುಸಿ ಓದುತ್ತಿದ್ದಳು. ನನಗೆ ವಿದ್ಯೆ ಇಲ್ಲ, ಆಸ್ತಿ, ಅಂತಸ್ತು, ಮನೆ, ಯಾವೊಂದೂ ಇಲ್ಲದವಳು ನಾನು. ಈ ಇಬ್ಬರು ಮಕ್ಕಳನ್ನು ಕಟ್ಟಿಕೊಂಡು ಏಕಾಂಗಿ ಬದುಕು ನನ್ನಿಂದ ಸಾಧ್ಯವೇ? ಇರಬರ ಧೈರ್ಯವನ್ನೆಲ್ಲ ಒಗ್ಗೂಡಿಸಿಕೊಂಡು ಬದುಕುತ್ತಿದ್ದೆ. ಯಾವ ಕಾರಣಕ್ಕೂ ನನ್ನ ಭಯವನ್ನು ಇವರೆದುರಿಗೆ ತೋರಿಸಬಾರದೆಂದು, ನಗುನಗುತ್ತಲೇ ಇರುತ್ತಿದ್ದೆ. ಆದರೂ ನನ್ನ ಧೈರ್ಯವನ್ನು ಉಡುಗಿಸುವಂತೆ ಇವರು ದಿನೇದಿನೇ ಕ್ಷೀಣವಾಗುತ್ತಿದ್ದರು.
ಇದು ಇಬ್ಬರಿಗೂ ಗೊತ್ತಿರುವ ಗುಟ್ಟು. ತಾನು ಬದುಕುವುದಿಲ್ಲವೆಂದು ಅವರಿಗೂ ತಿಳಿದಿತ್ತು. ನನಗೂ ತಿಳಿದಿತ್ತು. ಆದರೂ ಒಬ್ಬರಿಗೊಬ್ಬರು ಅದನ್ನು ಹೇಳಿಕೊಳ್ಳುತ್ತಿರಲಿಲ್ಲ. ಹೇಳಿಕೊಂಡರೆ ನಮ್ಮೊಳಗಿರುವ ಭಯವೇ ನಮ್ಮನ್ನು ನುಂಗಿಬಿಟ್ಟೀತೆಂಬ ಭಯ.
ಹೀಗೆ ಭಯದಿಂದಲೇ ಏನೂ ಆಗುವುದಿಲ್ಲ ಎಂದು ಒಬ್ಬರಿಗೊಬ್ಬರು ಅಭಯವನ್ನು ಕೊಟ್ಟುಕೊಳ್ಳುತ್ತಿದ್ದೆವು. ಐನಕೈ ಶಾಸ್ತ್ರಿಗಳಿಗೆ ಹುಷಾರಿಲ್ಲವೆಂಬ ಸುದ್ದಿ ಅಷ್ಟೊತ್ತಿಗಾಗಲೇ ಊರತುಂಬ ಹರಡಿತ್ತು. ಎಲ್ಲೆಲ್ಲಿಂದಲೋ ಜನ ಬರುತ್ತಿದ್ದರು. ನನಗೆ ಆ ಕ್ಷಣಕ್ಕೆ, ನಮಗೆ ದುಡ್ಡಿಲ್ಲ, ಮನೆಯಿಲ್ಲ, ಮಕ್ಕಳು ಇಬ್ಬರೂ ಇನ್ನೂ ಓದುತ್ತಿದ್ದಾರೆ. ನನಗೆ ಸಣ್ಣ ಪ್ರಾಯ, ಇವ್ಯಾವುದೂ ಕಣ್ಣೆದುರಿಗೆ ಸುಳಿಯುತ್ತಿರಲಿಲ್ಲ. ಇವರೊಬ್ಬರು ಬದುಕಿದರೆ ಸಾಕು ಎಂದಷ್ಟೇ ಯೋಚಿಸುತ್ತಿದ್ದೆ. ಕಡೆಗೂ ಅವರು ಬದುಕಲಿಲ್ಲ. ಕಾಲೂರಿ ಹೊಂಚುಹಾಕಿ ಬಾಗಿಲ ಬಳಿ ಕೂತಿದ್ದ ಸಾವೆಂಬ ಧೂರ್ತ ಮನೆಯೊಳಗೆ ಹೊಕ್ಕು ಇಲ್ಲಿಂದ ಕಿತ್ತುಕೊಂಡು ಹೋಗೇಬಿಟ್ಟ. ಕಡೆಯಲ್ಲಿ ಅವರು ಹೇಳಿದ ಮಾತು, ಧೈರ್ಯಗೆಡಬೇಡ, ದೇವರು ಮುನ್ನಡೆಸುತ್ತಾನೆ! ಇದು ಅವರನ್ನು ಕಳೆದುಕೊಂಡ ನಂತರ ಪ್ರತಿ ಹಂತದಲ್ಲೂ ನಾನು ನೆನಪಿಸಿಕೊಂಡಿದ್ದೇನೆ. ನನ್ನ ಶಕ್ತಿಯನ್ನೆಲ್ಲ ಒಗ್ಗೂಡಿಸಿಕೊಂಡು ನಡೆಯುತ್ತಲೇ ಹೋದೆ. ಅವರೆಂದಂತೆ ದೇವರು ನಡೆಸಿದನೆನಿಸುತ್ತದೆ.
ಇಂದು ಮಕ್ಕಳಿಬ್ಬರೂ ಒಳ್ಳೆಯ ಸ್ಥಾನದಲ್ಲಿದ್ದಾರೆ. ಇಬ್ಬರೂ ಬರಹಗಾರರು, ಪತ್ರಕರ್ತರು. ಮಕ್ಕಳು ಹೇಗ್ಹೇಗೋ ಓದಿಕೊಂಡರು, ಮುಂದೆ ಬಂದರು. ಇಬ್ಬರೂ ನೆಲೆ ನಿಂತಿದ್ದಾರೆ. ಮೂವರು ಮೊಮ್ಮಕ್ಕಳ ಸುಖೀ ಸಂಸಾರದ ನಡುವೆ ನಾನಿದ್ದೇನೆ. ಆದರೆ ಈ ಎಪ್ಪತ್ತರ ಹೊಸ್ತಿಲಲ್ಲಿ ನಿಂತು ಬದುಕಿನ ಪ್ರತಿ ಪುಟಗಳನ್ನು ತಿರುವುತ್ತಿದ್ದೇನೆ.
ಶರಾವತಿ ನದಿಯ ಹೊದ್ದಿನಲ್ಲಿರುವ ಜೋಗದ ಜಲಪಾತದ ಸಮೀಪದ ಕೊಳಚಗಾರಿನಲ್ಲಿ ಹುಟ್ಟಿದ ನಾನು ಏನೆಂದರೆ ಏನೂ ಇಲ್ಲದವಳಾಗಿ, ಬೆಂಗಳೂರಿನ ಮಗನ ಮನೆಯಲ್ಲಿ ನಿಂತು ಮತ್ತೆ ಅವರಿಗೇ ಕೇಳುತ್ತಿದ್ದೇನೆ. ನೀವು ಬಿಟ್ಟು ಹೋಗುವಾಗಿನ ಮಾತುಗಳಿನ್ನೂ ನನ್ನ ಕಿವಿಯಲ್ಲಿ ಗುಂಯ್‌ಗುಡುತ್ತಿದೆ. ಧೈರ್ಯಗೆಡದಿರು, ದೇವರು ನಡೆಸುತ್ತಾನೆಂದು.
ಇದು ದೇವರೇ ನಡೆಸಿದ್ದಾ…!
ನದಿಯಂತೆ ಹರಿದವಳು…
ಹೌದು ಮೌನದ ಹಾದಿಯಲ್ಲಿ ನಡೆಯುತ್ತ ಬಂದಿದ್ದೇನೆ. ಅವರನ್ನು ನೋಡುತ್ತ ಬಂದ ನನಗೆ ಅತಿಹೆಚ್ಚು ತಟ್ಟಿದ್ದೇ ಅವರೊಳಗಿನ ದಿವ್ಯ ಮೌನ. ಎಂತಹ ಮೌನವದು. ಹೆತ್ತ ಅಪ್ಪ ನಿರ್ಲಕ್ಷ್ಯಮಾಡಿ ಮನೆಯಿಂದ ಹೊರಹಾಕಿದಾಗಲೂ ಮಾತನಾಡದವರು, ತಾಯಂಥ ಅಕ್ಕ ತೀರಿಕೊಂಡಾಗಲೂ ಒಳಗೊಳಗೇ ದುಃಖ ಕುದ್ದರೂ ಮೌನದಿಂದಲೇ ನಕ್ಕವರು, ಇಡೀ ಬದುಕಲ್ಲಿ ನೋವುಗಳು, ಕಷ್ಟಗಳು, ಏನೇ ಬಂದರೂ ಮೌನದಿಂದಲೇ ಎಲ್ಲವನ್ನೂ ಸ್ವೀಕರಿಸಿದ ಮಹಾನ್ ಮೌನಿ. ದುರುಳ ಕಾಲನೊಂದಿಗೆ ಸೆಣಸಲಾಗದೇ ಕಡೆಗೂ ಇಲ್ಲಿಂದ ನಿರ್ಗಮಿಸಬೇಕಾಗಿ ಬಂದಾಗಲೂ ಮೌನವನ್ನು ಮುರಿಯದವರು. ಆದರೆ ಈ ಸುದೀರ್ಘ ಮೌನವನ್ನು ಒಪ್ಪಿಕೊಳ್ಳುವುದು ನನಗೆ ಕಷ್ಟವಾದರೂ ಒಪ್ಪಿಕೊಂಡಂತೆ ಅವರ ನೆನಪಲ್ಲಿ ಬದುಕುತ್ತ ಹೋದೆ. ಹಾಗೆ ನೋಡಿದರೆ ಕಳೆದುಕೊಳ್ಳುವುದು ಮತ್ತು ಸಾವು ಇವೆರಡೂ ನನಗೆ ಹೊಸದಲ್ಲ.
ಸಾವಿನ ಸಂತತಿಯನ್ನೇ ಹೊತ್ತು ಬಂದಂತೆ ಇದ್ದ ನನ್ನ ತವರು ಮನೆ, ಅಲ್ಲಿ ಸಂಭವಿಸಿದ ಸರಣಿ ಸಾವುಗಳು, ನಂತರ ಇವರೊಂದಿಗೆ ಮದುವೆ, ಇಟಗಿಯ ಸಂಘರ್ಷದ ಬದುಕು, ಮೌನವಾಗಿ ಹರಿಯುವ ಶರಾವತಿ ನದಿ, ಆ ಬೆಟ್ಟಗುಡ್ಡಗಳು, ದಟ್ಟಕಾಡು, ನಾಡಿಗೆ ಬೆಳಕು ಕೊಡಬೇಕೆಂಬ ಕಾರಣಕ್ಕಾಗಿ ಜೋಗದ ಲಿಂಗನಮಕ್ಕಿ ಡ್ಯಾಮ್ ನಿರ್ಮಾಣ. ಅದರಿಂದಾಗಿ ಮುಳುಗಿದ ನನ್ನ ಊರು ಕೊಳಚಗಾರು, ನನ್ನ ಅಜ್ಜನ ಮನೆ ಕೌಲುಮನೆ, ವಿಧವೆಯರಾದ ದೊಡ್ಡಮ್ಮಂದಿರ ನಿಟ್ಟುಸಿರುಗಳು, ದರ್ಬಾರು ಮಾಡಲೆಂದೇ ಬಂದವನಂತಿದ್ದ ಅಪ್ಪನ ಆರ್ಭಟ, ಮೌನವಾಗಿಯೇ ರೋದಿಸುತ್ತಿದ್ದ ಅಮ್ಮನ ಕನವರಿಕೆಗಳು, ಮುಳಗಡೆ ಪರಿಹಾರ ಧನದಿಂದಲೇ ಕೊಂಡುಕೊಂಡ ಬ್ಯಾಡರಕೊಪ್ಪವೆಂಬ ಊರು ಸಂಪೂರ್ಣ ಒಣಗಿಹೋಗಿದ್ದು… ಎಲ್ಲವೂ… ಎಲ್ಲವೂ… ಒಂದು ಕನಸಿನಂತೆ ಭಾಸವಾಗುತ್ತಿದೆ. ಇವಿಷ್ಟೂ ನನ್ನೊಬ್ಬಳ ಬದುಕಿನಲ್ಲಿಯೇ ಸಂಭವಿಸಿದ್ದೇ ಹೌದೇ… ಎಷ್ಟೋ ಸಲ ನನ್ನನ್ನೇ ನಾನು ಕೇಳಿಕೊಂಡಿದ್ದೇನೆ.
ಹುಟ್ಟಿನಿಂದ ನೋಡುತ್ತ ಬಂದ ಈ ಶರಾವತಿ ನದಿ ಹೇಗೆ ಹರಿಯುತ್ತ ಹರಿಯುತ್ತಲೇ ಹೋಯಿತೋ ಹಾಗೆಯೇ ನನ್ನ ಬದುಕು ಹರಿಯುತ್ತಲೇ ಹೋಯಿತು. ಅದು ಕೊಳಚಗಾರಿನಿಂದ ಬ್ಯಾಡರಕೊಪ್ಪ, ಬ್ಯಾಡರಕೊಪ್ಪದಿಂದ ಇಟಗಿ, ನಂತರ ಬಂಜಗಾರು, ಅಲ್ಲಿಂದ ತಾರಗೋಡು, ಸಿದ್ದಾಪುರ, ನಂತರ ಬೆಂಗಳೂರು, ದಾವಣಗೆರೆ, ಮೈಸೂರು, ಈಗ ಮತ್ತೆ ಬೆಂಗಳೂರು ಹೀಗೆ ನದಿಯಂತೆಯೇ ಹರಿಯುತ್ತಲೇ ಇದ್ದೇನೆ. ಅದಕ್ಕೆ ಈ ಶರಾವತಿ ನದಿಯನ್ನು ನೋಡಿದಾಗಲೆಲ್ಲ, ಇದರಂತೆಯೇ ನನ್ನ ಬದುಕು ಎಂದು ಎಷ್ಟೋ ಸಲ ಅನಿಸಿದ್ದಿದೆ. ಆದರೆ ಈ ನದಿ ಹೀಗೆಲ್ಲ ಹರಿದು ಕಡೆಯಲ್ಲಿ ಸಮುದ್ರ ಸೇರಿ ಅದರೊಳಕ್ಕೆ ಲೀನವಾಗುತ್ತದೆ. ಹಾಗೆಯೇ ನನ್ನ ಗಮ್ಯ ಎಲ್ಲಿದೆಯೋ…? ದೈವದ ನಿಯಮ ಹೇಗಿದೆಯೋ…?
(ಕೃತಿ: ಹರಿವ ನದಿ (ಮೀನಾಕ್ಷಿ ಭಟ್ಟ ಆತ್ಮಕಥನ), ನಿರೂಪಣೆ: ಭಾರತಿ ಹೆಗಡೆ, ಪ್ರಕಾಶಕರು: ವಿಕಾಸ ಪ್ರಕಾಶನ, ಬೆಲೆ: 200/-)
ಪತ್ರಕರ್ತೆ, ಕವಯತ್ರಿ, ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ. ಈಗ ಬೆಂಗಳೂರಿನಲ್ಲಿ ವಾಸ. ಮೊದಲ ಪತ್ನಿಯ ದುಗುಡ (ಸಿನಿಮಾದಲ್ಲಿನ ಮಹಿಳಾ ಪಾತ್ರಗಳ ವಿಶ್ಲೇಷಣೆ), ಸೀತಾಳೆ ದಂಡೆಯ ಸದ್ದಿಲ್ಲದ ಕಥೆಗಳು(ಕಥಾ ಸಂಕಲನ), ಮಣ್ಣಿನ ಗೆಳತಿ(ಕೃಷಿ ಮಹಿಳೆಯರ ಅನುಭವ ಕಥನ)ಪುಸ್ತಕಗಳು ಪ್ರಕಟವಾಗಿವೆ.
ಚಂದದ ಬರವಣಿಗೆ