Advertisement
ನನಸಾಗದ ಕನಸುಗಳು: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ನನಸಾಗದ ಕನಸುಗಳು: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ವಿಜಯ ಮತ್ತು ಅಯ್ಯಪ್ಪನಿಗೆ ವಿಷಯದ ಗಾತ್ರ ಅರ್ಥವಾಯಿತು. ಕನಕ ಟೀ ಮಾಡಿಕೊಟ್ಟು ಕುಡಿದರು. ಅಷ್ಟರಲ್ಲಿ ಮಣಿ ಬಂದ. ಸಮತಿಯನ್ನು ಕರೆದು ಒಂದು ತಟ್ಟೆಯಲ್ಲಿ ತೆಂಗಿನಕಾಯಿ ಜೊತೆಗೆ ಎಲ್ಲವನ್ನು ಇಟ್ಟು ಕೊಟ್ಟಳು. ವಿಜಯ ತೆಗೆದುಕೊಳ್ಳುತ್ತ ಈಹೊತ್ತಿನಿಂದ “ನೀವು ನಾವು ನೆಂಟರಾದೆವು” ಎಂದಳು. ಸುಮತಿ ಎಲ್ಲವನ್ನೂ ಒಂದು ಸಣ್ಣ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಟ್ಟಳು. ವಿಜಯ, ಸುಮತಿಯನ್ನು ನೋಡುತ್ತ ಮನಸ್ಸಿನಲ್ಲಿ ಏನೋ ಲೆಕ್ಕಾಚಾರ ಹಾಕಿಕೊಳ್ಳುತ್ತಾ ಹಾಗೇ ಕುಳಿತುಕೊಂಡಿದ್ದಳು. ಅಯ್ಯಪ್ಪ, “ಹೋಗೋಣವ?” ಎಂದ. ವಿಜಯ, ಸುಮತಿಯನ್ನು ಎದುರಿಗೆ ಕರೆದು ನಿಲ್ಲಿಸಿಕೊಂಡು ನೋಡಿದಳು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಹದಿನೈದನೆಯ ಕಂತು ನಿಮ್ಮ ಓದಿಗೆ

ಅದೇ ದಿನ ಸಾಯಂಕಾಲ ಅಯ್ಯಪ್ಪ, ವಿಜಯ; ಮಣಿ ಮನೆಯ ಬಾಗಿಲಿಗೆ ಬಂದರು. ಅಷ್ಟರಲ್ಲಿ ಎಲ್ಲಿಗೊ ಹೋಗಿದ್ದ ಮಣಿ ಕೂಡ ಮನೆಗೆ ಬಂದ. ಮಣಿಗೆ ಅಯ್ಯಪ್ಪ ಮೊದಲೇ ಗೊತ್ತಿದ್ದರಿಂದ ಆಶ್ಚರ್ಯ ಏನೂ ಇರಲಿಲ್ಲ. ಆದರೆ ಮೊದಲ ಬಾರಿಗೆ ಅಯ್ಯಪ್ಪನ ಜೊತೆ ಅವರ ಪತ್ನಿ ಬಂದಿರುವುರಿಂದ ಯಾಕೊ ಏನೋ ಎಡವಟ್ಟಾಗಿದೆ ಎಂದುಕೊಂಡ. ಮಣಿ, ಅಯ್ಯಪ್ಪ ಮತ್ತು ಅವರ ಪತ್ನಿಯನ್ನು ಮನೆ ಒಳಕ್ಕೆ ಆಹ್ವಾನಿಸಿದ. ಮನೆಯಲ್ಲಿ ಮಣಿ ತಾಯಿ, ಅತ್ತೆ ಅಲಮೇಲು ಅತ್ತೆ ಮಗಳು ಸುಶೀಲ, ಸುಮತಿ ಎಲ್ಲರೂ ಇದ್ದರು. ಮನೆ ಒಳಗೆ ಸ್ಥಳವಿಲ್ಲದೆ ಸುಶೀಲ ಮತ್ತು ಸುಮತಿ ಮನೆ ಹೊರಕ್ಕೆ ಬಂದರು. ಅವರಿಬ್ಬರೂ ಲಂಗಾ ದಾವಣಿಗಳನ್ನು ಧರಿಸಿ ಉದ್ದನೆ ಜಡೆಗಳನ್ನು ಹಾಕಿಕೊಂಡು ಹೂ ಮುಡಿದುಕೊಂಡು ಮುದ್ದಾಗಿ ಕಾಣಿಸುತ್ತಿದ್ದರು. ಕನಕ ಮತ್ತು ಅಲಮೇಲು ಮನೆ ಒಳಗಿದ್ದು, ಅಯ್ಯಪ್ಪ ಮತ್ತು ವಿಜಯ ಮನೆ ಒಳಕ್ಕೆ ಬಂದು ಕುಳಿತುಕೊಂಡರು. ಮಣಿ ಅಯ್ಯಪ್ಪನ ಪಕ್ಕದಲ್ಲಿ ಬಂದು ನಿಂತುಕೊಂಡ. ಅಯ್ಯಪ್ಪ ಮಣಿಯನ್ನು ಕುಳಿತುಕೊಳ್ಳುವಂತೆ ಹೇಳಿ ಮಣಿ ಗಲಿಬಿಲಿಯಿಂದ ಕುಳಿತುಕೊಂಡ.

ಎಲ್ಲರೂ ಉಸಿರುಗಟ್ಟಿ ಅಯ್ಯಪ್ಪನ ಕಡೆಗೆ ನೋಡತೊಡಗಿದರು. ಅಯ್ಯಪ್ಪ, “ಮಣಿ ನಿಮ್ಮಪ್ಪ ನನಗೆ ತುಂಬಾ ಒಳ್ಳೇ ಸ್ನೇಹಿತ. ನಿನ್ನ ಜೊತೆ ನಾನು ಜಗಳ ಆಡುವುದಕ್ಕೆ ಬಂದಿಲ್ಲ” ಎನ್ನುತ್ತಿದ್ದಂತೆ ಕನಕ, “ಅಣ್ಣ ಅದು ಏನೋ ಸರಿಯಾಗಿ ಬಿಡಿಸಿ ಹೇಳಣ್ಣ” ಎಂದಳು. ಅಯ್ಯಪ್ಪ, “ತಂಗಚ್ಚಿ ಹೇಳ್ತೀನಿ ಇರಮ್ಮ. ಮಣಿ, ನಾನು ಯಾರು ಗೊತ್ತ? ನಿನಗೆ ಗೊತ್ತಿಲ್ಲ ಅನಿಸುತ್ತೆ. ನಾನು, ನಿನಗೆ ಕಾರ್ಮಿಕರ ಮುಖಂಡ ಅಂತ ಮಾತ್ರ ಗೊತ್ತಿದೆ ಅಷ್ಟೇ. ಆದರೆ ನಾನು ಸೆಲ್ವಿ ಅಪ್ಪ ಅಂತ ಗೊತ್ತಿಲ್ಲ ಅಲ್ಲವೆ?” ಎಂದರು. ಮಣಿಗೆ ಈಗ ಏನು ಹೇಳಬೇಕೊ ಅರ್ಥವಾಗಲಿಲ್ಲ. ಅಯ್ಯಪ್ಪ ಮತ್ತೆ “ನೀನೂ ನನ್ನ ಮಗಳು ಸೆಲ್ವಿ ಇಬ್ಬರೂ ಲವ್ ಮಾಡ್ತಾಇದ್ದೀರಿ ತಾನೇ?” ಎಂದಿದ್ದೆ ಕನಕ ಮತ್ತು ಆಲಮೇಲು ದಿಗ್ಭ್ರಮೆಯಾಗಿ ಕಣ್ಣುಕಣ್ಣು ಬಿಡತೊಡಗಿದರು. ಅಯ್ಯಪ್ಪ, “ಈಗ ಸಮಸ್ಯೆ ಎಂದರೆ ನೀನು ಸೆಲ್ವಿಯನ್ನ ತಕ್ಷಣವೆ ಮದುವೆ ಮಾಡಿಕೊಳ್ಳಬೇಕು” ಎಂದರು. ಸ್ವಲ್ಪ ಹೊತ್ತು ಸುಧಾರಿಸಿಕೊಂಡ ಮಣಿ, “ಅಂಕಲ್ ನಾನು ಸೆಲ್ವಿಯನ್ನು ಖಂಡಿತ ಮದುವೆ ಮಾಡಿಕೊಳ್ತೀನಿ. ಸೆಲ್ವಿ ಡಿಗ್ರಿ ಮುಗಿಸಲಿ” ಎಂದ. ಅಯ್ಯಪ್ಪ, “ಅದೇ ಸಮಸ್ಯೆ ಮಣಿ” ಎಂದರು. ವಿಜಯ “ತಂಬಿ, ನಿನಗೆ ವಿಷಯ ಗೊತ್ತಿಲ್ಲವ?” ಎಂದಳು. ಮಣಿ ತಲೆ ತಗ್ಗಿಸಿಕೊಂಡು ಸುಮ್ಮನಾದ.

ಅಯ್ಯಪ್ಪ ವಿಜಯ ಇಬ್ಬರೂ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ವಿಜಯ, “ನೋಡಿ ಕನಕಮ್ಮ. ನನ್ನ ಮಗಳು ಸೆಲ್ವಿ ಎರಡು ತಿಂಗಳು ಗರ್ಭಿಣಿ. ಬೇಗನೇ ಮದುವೆ ಮಾಡಿದರೆ ಚೆನ್ನ. ಇಲ್ಲ ಅಂದರೆ ಮದುವೆಗೆ ಮುಂಚೇನೆ ಮಗೂನ ಮನೆಯಲ್ಲಿ ಹೆತ್ತುಕೊಳ್ಳುವುದಕ್ಕಾಗುತ್ತ ಹೇಳಿ?” ಎಂದಳು. ಅಯ್ಯಪ್ಪನ ಪತ್ನಿ ವಿಜಯ ಮಾತು ಕೇಳಿದ ಕನಕ ಮತ್ತು ಅಲಮೇಲು ಇಬ್ಬರಿಗೂ ಗಣಿ ಸುರಂಗಗಳ ಒಳಕ್ಕೆ ಬಿದ್ದು ಹೋದಂತಾಯಿತು. ಇಬ್ಬರಿಗೂ ಜೋರಾಗಿ ಕಿರುಚಿಕೊಳ್ಳಬೇಕು ಎನಿಸಿದರೂ ಆಗಲಿಲ್ಲ. ಯಾವ ರೀತಿಯಲ್ಲಿ ಪ್ರತಿಕ್ರಿಯೆ ತೋರಬೇಕೊ ಅರ್ಥವಾಗದೆ ಕನಕ ಮತ್ತು ಅಲಮೇಲು ಮಣಿ ಕಡೆಗೆ ನೋಡಿದರು. ಮಣಿ ಆಗಲೇ ತಲೆ ಬಗ್ಗಿಸಿಕೊಂಡುಬಿಟ್ಟಿದ್ದ.

ಅಯ್ಯಪ್ಪ, “ನೋಡು ಮಣಿ ಆಗಿದ್ದು ಆಗೋಯಿತು. ಮದುವೆ ಒಂದು ತಿಂಗಳೊಳಗೆ ಇಟ್ಟುಕೊಂಡುಬಿಡೋಣ. ಲೇಟ್ ಮಾಡಿದರೆ ಚೆನ್ನಾಗಿರುವುದಿಲ್ಲ. ನೀವು ಏನೇನು ಬೇಕೊ ತಯಾರಿ ಮಾಡಿಕೊಳ್ಳಿ. ಅದರ ಮೇಲೆ ನಾನು ಏನೂ ಹೇಳುವುದಿಲ್ಲ” ಎಂದು ಎದ್ದುನಿಂತ. ಕನಕಳಿಗೆ ಇನ್ನೂ ಅವರ ಮಾತುಗಳ ಮೇಲೆ ನಂಬಿಕೆ ಬರದೆ ಒಣಗಿ ಹೋಗಿದ್ದ ಬಾಯಿಂದ ನಾಲಿಗೆಯನ್ನು ಹೊರಳಿಸಿ ಒಂದಷ್ಟು ಶಕ್ತಿಯನ್ನು ಕ್ರೋಡೀಕರಿಸಿಕೊಂಡು ವಿಧಿ ಇಲ್ಲದೆ “ಮಣಿ ಅವರು ಹೇಳುವುದು ನಿಜಾನೇನಪ್ಪ?” ಎಂದು ಕೇಳಿದಳು. ಮಣಿ ಬಸವಣ್ಣನಂತೆ ತಲೆ ಅಲ್ಲಾಡಿಸಿ “ಹೌದು!” ಎಂದ. ಯಾಕೆಂದರೆ ಅವನಿಗೆ ತಪ್ಪಿಸಿಕೊಳ್ಳುವ ಎಲ್ಲಾ ಸುರಂಗಗಳೂ ಮುಚ್ಚಿಹೋಗಿದ್ದವು. ಸೆಲ್ವಿ ಗರ್ಭವತಿಯಾದ ಮೇಲೆ ಅವನಿಗೆ ಹೇಳಲು ಇನ್ನೇನು ಉಳಿದಿದೆ? ಆದರೆ ಸೆಲ್ವಿ ನಿಜವಾಗಿಯೂ ಗರ್ಭವತಿಯಾಗಿದ್ದಾಳೆಯೇ ಎನ್ನುವ ಸಂದೇಹ ಮಾತ್ರ ಎಲ್ಲೋ ಒಂದು ಕಡೆ ಮೂಲೆಯಲ್ಲಿ ಅವನನ್ನು ಅಣಕಿಸುತ್ತಿತ್ತು. ಹುಡುಗಿ ಅಷ್ಟು ಸುಲಭವಾಗಿ ಗರ್ಭ ಧರಿಸಿಬಿಡುತ್ತಾಳೆಯೆ? ಕೊನೆಗೆ ಅವಳ ಅಪ್ಪ ಅಮ್ಮನೇ ಬಂದು ಖುದ್ದಾಗಿ ಹೇಳುತ್ತಿರುವಾಗ ನಂಬಲೇಬೇಕಿತ್ತು.

ತಡಬಡಿಸಿದ ಕನಕ ಕೊನೆಗೆ “ಅಣ್ಣ ಒಂದು ಸಮಸ್ಯೆ ಇದೆ. ದಯವಿಟ್ಟು ಕುಳಿತುಕೊಳ್ಳಿ” ಎಂದಳು. ಅಯ್ಯಪ್ಪ, ವಿಜಯಳ ಕಡೆಗೆ ನೋಡುತ್ತ ಕುಳಿತುಕೊಂಡ. ಕನಕ, “ನಮ್ಮ ಹುಡುಗಿ ಸುಮತಿ ಮಣಿಗಿಂತ ಒಂದು ವರ್ಷ ಚಿಕ್ಕವಳು. ಅವಳಿಗೆ ಮೊದಲು ಮದುವೆಯಾಗಿದ್ದರೆ ಚೆನ್ನಾಗಿತ್ತು. ನನ್ನ ಗಂಡ ಕೂಡ ಅದನ್ನೇ ಹೇಳುತ್ತಿದ್ದರು” ಎಂದಳು. ಅಯ್ಯಪ್ಪ, “ಓ ಹೌದಾ!” ಎಂದು ಸ್ವಲ್ಪ ಹೊತ್ತು ಕೈಯಲ್ಲಿ ಗಡ್ಡ ಹಿಡಿದುಕೊಂಡು ಆಲೋಚನೆ ಮಾಡಿದ ಮೇಲೆ “ನೋಡು ತಂಗಾಚಿ. ಈಗ ಮಣಿ ಮದುವೆ ಮುಂದೂಡಲಂತೂ ಸಾಧ್ಯವಿಲ್ಲ. ನಮ್ಮ ಪೈಕಿ ಒಬ್ಬ ಒಳ್ಳೆ ಹುಡುಗ ಇದ್ದಾನೆ. ಅವನು ಗಣಿಯಲ್ಲಿ ಕೆಲಸ ಮಾಡ್ತಾಇದ್ದಾನೆ. ಕಾಲೋನಿಯಲ್ಲಿ ಅವನಿಗೆ ಮನೆಯೂ ಇದೆ. ನೀವು ಒಪ್ಪಿಕೊಂಡರೆ ಆ ಹುಡುಗ್ನ ಇದೇ ಭಾನುವಾರು ನಿಮ್ಮ ಮನೆಗೆ ಕರೆದುಕೊಂಡು ಬರ್ತೀನಿ. ನೀವು ನೋಡಿ ಒಪ್ಪಿದರೆ ಎರಡೂ ಮದುವೇನ ಒಂದೇ ದಿನ ಮಾಡಿಬಿಡೋಣ. ಖರ್ಚೂ ಕಡಿಮೆಯಾಗುತ್ತೆ” ಎಂದ. ಕನಕ, ಮಣಿ ಕಡೆಗೆ ನೋಡಿದಳು. ಮಣಿ ವಿಧಿ ಇಲ್ಲದೆ ಮತ್ತೆ ಬಸವನಂತೆ ತಲೆ ಅಲ್ಲಾಡಿಸಿದ. ಅಲಮೇಲು ಅವರ ಮಧ್ಯೆ ಪೆಚ್ಚುಮುಖ ಹಾಕಿಕೊಂಡು ನೆಲವನ್ನು ನೋಡುತ್ತಿದ್ದಳು. ಕನಕ, “ಆಯಿತು. ಹುಡುಗನ್ನ ಕರ್ಕೊಂಡು ಬನ್ನಿ. ದೇವರು ಮಾಡಿದಂಗೆ ಆಗೋಗಲಿ” ಎಂದಳು. ಮಣಿ ವಿಧಿ ಇಲ್ಲದೆ ತಲೆ ಅಲ್ಲಾಡಿಸಿದ.

ಅಲಮೇಲು ಮುಖವನ್ನು ಸೀರೆಯ ಸೆರಗಿನಿಂದ ಮುಚ್ಚಿಕೊಂಡು ಎದ್ದು ಮನೆ ಹೊರಕ್ಕೆ ಹೋಗಿಬಿಟ್ಟಳು. ವಿಜಯ ಮತ್ತು ಅಯ್ಯಪ್ಪ ಒಬ್ಬರನ್ನೊಬ್ಬರು ನೋಡಿಕೊಂಡರು. ಅಯ್ಯಪ್ಪ, “ನಾವು ಇನ್ನು ಹೋಗಬಹುದ?” ಎಂದಿದ್ದಕ್ಕೆ ಕನಕ, “ಕುಳಿತುಕೊಳ್ಳಿ ಮೊದಲು ಬಾರಿಗೆ ನಮ್ಮ ಮನೆಗೆ ಬಂದಿದ್ದೀರಿ” ಎಂದು ಮಣಿಯನ್ನು ಹೊರಕ್ಕೆ ಕರೆದು ಅಂಗಡಿಯಲ್ಲಿ ಬಾಳೆಹಣ್ಣು, ತೆಂಗಿನಕಾಯಿ, ಹೂವು, ಎಲೆ ತೆಗೆದುಕೊಂಡು ಬರುವಂತೆ ಹೇಳಿ ಕಳುಹಿಸಿದಳು. ಮಣಿ ಅಂಗಡಿ ಕಡೆಗೆ ಹೋದ. ಅವನ ಮನಸ್ಸು ಸಂಪೂರ್ಣವಾಗಿ ವ್ಯಾಕುಲಗೊಂಡಿತ್ತು. ಹೊರಗೆ ಎಲ್ಲವನ್ನೂ ಕೇಳಿಸಿಕೊಂಡ ಮೇಲೆ ಸುಮತಿ ಮತ್ತು ಸುಶೀಲ ಪಕ್ಕದ ಮನೆ ಗೋವಿಂದನ ಮನೆ ಹತ್ತಿರಕ್ಕೆ ಹೋಗಿ ನಿಂತುಕೊಂಡರು. ಸುಮತಿ, ಸುಶೀಲಳ ಕಡೆಗೆ ನೋಡಿದಳು. ಸುಶೀಲ ಮುಖ ಸಂಪೂರ್ಣವಾಗಿ ಬಾಡಿಹೋಗಿದ್ದರೂ ಸಣ್ಣದಾಗಿ ನಗಲು ಪ್ರಯತ್ನಿಸಿದಳು.

ಹೊರಕ್ಕೆ ಬಂದ ಅಲಮೇಲು ಪಕ್ಕದ ಮನೆ ಗೋವಿಂದನ ಮನೆ ಒಳಕ್ಕೆ ಹೋಗಿ ಜೋರಾಗಿ ಅಳುತ್ತಾ ಕುಳಿತುಕೊಂಡಳು. ಪಾತ್ರೆಗಳನ್ನು ತೊಳೆಯುತ್ತಿದ್ದ ಗೋವಿಂದನ ಪತ್ನಿ ಧರಣಿ, “ಯಾಕೆ ಅಲಮೇಲಕ್ಕ ಅಳ್ತಾ ಇದ್ದೀಯ?” ಎನ್ನುತ್ತಾ ಪಾತ್ರೆಗಳನ್ನು ಅಲ್ಲೇ ಬಿಟ್ಟುಬಂದು ಪಕ್ಕದಲ್ಲಿ ಕುಳಿತುಕೊಂಡಳು. ಮಣಿಯನ್ನು ಅಂಗಡಿಗೆ ಕಳುಹಿಸಿದ ಕನಕ ಮತ್ತೆ ಮನೆ ಒಳಕ್ಕೆ ಬಂದು ಕುಳಿತುಕೊಂಡಳು. ವಿಜಯ, “ಇವರ‍್ಯಾರು? ಯಾಕೆ ಮನೆಯಿಂದ ಎದ್ದೋದರು?” ಎಂದಳು. ಕನಕ, “ನಮ್ಮ ಸ್ವಂತ ಅಣ್ಣನ ಪತ್ನಿ ಅತ್ತಿಗೆ. ನಮ್ಮ ಗಂಡನ ಸ್ವಂತ ತಂಗಿ. ಕೊಟ್ಟು ತೆಕೊಂಡಿದ್ದೀವಿ. ಅವರು ವೆಲ್ಲೂರು ಹತ್ತಿರದ ಸೇನೂರಿನಿಂದ ಬಂದಿದ್ದಾರೆ. ನೀವು ಬಂದಾಗ ಎದ್ದು ಹೊರಕ್ಕೆ ಹೋದರಲ್ಲ ಇಬ್ಬರು ಹುಡುಗಿಯರು. ಅದರಲ್ಲಿ ಒಂದು ಹುಡುಗಿ ನನ್ನ ಮಗಳು. ಇನ್ನೊಬ್ಬಳು ನಮ್ಮ ಅಣ್ಣನ ಮಗಳು” ಎಂದಳು.

ವಿಜಯ ಮತ್ತು ಅಯ್ಯಪ್ಪನಿಗೆ ವಿಷಯದ ಗಾತ್ರ ಅರ್ಥವಾಯಿತು. ಕನಕ ಟೀ ಮಾಡಿಕೊಟ್ಟು ಕುಡಿದರು. ಅಷ್ಟರಲ್ಲಿ ಮಣಿ ಬಂದ. ಸಮತಿಯನ್ನು ಕರೆದು ಒಂದು ತಟ್ಟೆಯಲ್ಲಿ ತೆಂಗಿನಕಾಯಿ ಜೊತೆಗೆ ಎಲ್ಲವನ್ನು ಇಟ್ಟು ಕೊಟ್ಟಳು. ವಿಜಯ ತೆಗೆದುಕೊಳ್ಳುತ್ತ ಈಹೊತ್ತಿನಿಂದ “ನೀವು ನಾವು ನೆಂಟರಾದೆವು” ಎಂದಳು. ಸುಮತಿ ಎಲ್ಲವನ್ನೂ ಒಂದು ಸಣ್ಣ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಟ್ಟಳು. ವಿಜಯ, ಸುಮತಿಯನ್ನು ನೋಡುತ್ತ ಮನಸ್ಸಿನಲ್ಲಿ ಏನೋ ಲೆಕ್ಕಾಚಾರ ಹಾಕಿಕೊಳ್ಳುತ್ತಾ ಹಾಗೇ ಕುಳಿತುಕೊಂಡಿದ್ದಳು. ಅಯ್ಯಪ್ಪ, “ಹೋಗೋಣವ?” ಎಂದ. ವಿಜಯ, ಸುಮತಿಯನ್ನು ಎದುರಿಗೆ ಕರೆದು ನಿಲ್ಲಿಸಿಕೊಂಡು ನೋಡಿದಳು. ವಿಜಯ, “ಕನಕಮ್ಮ ನಿಮ್ಮ ಮಗಳಿಗೆ ಎಷ್ಟು ವಯಸ್ಸು?” ಎಂದಳು. “ಮುಂದಿನ ತಿಂಗಳು ಬಂದರೆ 19 ವರ್ಷ ತುಂಬುತ್ತೇ ಎಂದಳು. ವಿಜಯ, “ಆಯಿತು ಕನಕಮ್ಮ ನಾವು ಇನ್ನು ಬರ್ತೀವಿ” ಎಂದಳು. ಅಯ್ಯಪ್ಪ ಮತ್ತೊಮ್ಮೆ “ನಾವು ಭಾನುವಾರ ಬರ್ತೀವಮ್ಮ” ಎಂದೇಳಿ ಹೊರಟುಹೋದರು.

ಕನಕ, ಅಲಮೇಲುಳನ್ನು ಎಷ್ಟೇ ಕರೆದರೂ ಪಕ್ಕದ ಮನೆಯಿಂದ ಹೊರಕ್ಕೆ ಬರಲಿಲ್ಲ. ಸುಶೀಲ ಮಾತ್ರ ಸುಮತಿಯ ಜೊತೆಯಲ್ಲೇ ಇದ್ದಳು. ಕನಕ, ಧರಣಿ ಮನೆಗೆ ಬಂದು ಅಲಮೇಲು ಮುಂದೆ ಕುಳಿತುಕೊಂಡಳು. ಅಷ್ಟರಲ್ಲಿ ಗೋವಿಂದನೂ ಬಂದು ಕುಳಿತುಕೊಂಡ. ಕನಕ ಯಾವ ವಿಷಯವನ್ನೂ ಮುಚ್ಚಿಡದೆ ಎಲ್ಲವನ್ನೂ ಹೇಳಿದಳು. ಗೋವಿಂದ, “ಮಾಪಿಳ್ಳೆ ಇಂಥ ಕೆಲಸ ಮಾಡಿಬಿಟ್ಟನಾ? ಈಗ ಬೇರೆ ದಾರಿ ಏನೂ ಇಲ್ಲ. ಹುಡುಗಿ ಬಸರಿ ಆಗಿದ್ದಾಳೆ ಅಂದರೆ ಏನು ಮಾಡುವುದಕ್ಕಾಗುತ್ತೆ? ಮದುವೆ ಮಾಡಿಕೊಳ್ಳಲೇಬೇಕು. ಆದರೆ ಸುಶೀಲ ಎಂತಹ ಹುಡುಗಿ? ಪಾಪ! ಅವಳಿಗೆ ಬಾರೀ ಅನ್ಯಾಯ ಆಗಿಹೋಯಿತಲ್ಲ” ಎಂದು ಪಶ್ಚಾತ್ತಾಪ ಪಟ್ಟ. ಗೋವಿಂದ, ಮುಂದುವರಿಯುತ್ತ “ಅಯ್ಯಪ್ಪ ಒಳ್ಳೆಯವನೆ ನನಗೂ ಗೊತ್ತು. ಆ ಹುಡುಗಿ ಹೇಗೋ ಏನೊ?” ಎಂದು ದೀರ್ಘ ಉಸಿರು ತೆಗೆದ. ಕನಕ, “ನಾವು, ಈಗ ಏನು ಮಾಡುವುದಕ್ಕಾಗುತ್ತೆ ಗೋವಿಂದಣ್ಣ” ಎಂದಳು. ಗೋವಿಂದ, “ಹೌದು! ಕನಕಕ್ಕ ವಿಷಯ ಕೈಮೀರಿ ಹೋಗಿದೆ” ಎಂದ. ಕನಕ, ಅಲುಮೇಲು ಕೈಹಿಡಿದು ಬೇಡಿಕೊಂಡಳು. ಗೋವಿಂದ, “ಅಕ್ಕ ಯಾವ ಕಾಲಕ್ಕೆ ಏನು ಆಗಬೇಕೋ ಅದನ್ನು ತಪ್ಪಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ” ಎಂದ. ಕೊನೆಗೆ ಅಲಮೇಲು ಮೂಗೆಳೆಯುತ್ತ ಎದ್ದು ಹೊರಕ್ಕೆ ಬಂದಳು.

ಅಯ್ಯಪ್ಪ ತಮ್ಮ ಮನೆಯಲ್ಲಿ ಎಲ್ಲರನ್ನು ಕರೆದು ಮುಂದೆ ಕೊರಿಸಿಕೊಂಡು “ನಿಮ್ಮ ತಾಯಿ ಏನೊ ಹೇಳ್ತಾಳೆ ನೋಡ್ರಪ್ಪ” ಎಂದಳು. ವಿಜಯ ನಿನ್ನೆ ಮಣಿ ಮನೆಗೆ ಹೋಗಿ ಬಂದ ಎಲ್ಲಾ ವಿಷಯಗಳನ್ನು ಹೇಳಿದಳು. ಸೊಸೆ, “ಹುಡುಗ ಹೇಗಿದ್ದಾನೆ? ಚೆನ್ನಾಗಿದ್ದಾನಾ?” ಎಂದಳು. ವಿಜಯ, “ಹುಡುಗ ಏನೊ ಚೆನ್ನಾಗಿಯೇ ಇದ್ದಾನೆ. ಇನ್ನೂ ಚಿಕ್ಕ ಹುಡುಗ ಸೆಲ್ವಿಗಿಂತ ಒಂದೆರೆಡು ವರ್ಷ ದೊಡ್ಡವನು ಅಷ್ಟೇ. ಏನು ಮಾಡುವುದು ಎಲ್ಲಾ ವಿಧಿ. ಊರಿಗೆಲ್ಲಾ ಗೊತ್ತಾಗಿದೆ. ನಮಗೆ ಮಾತ್ರ ಗೊತ್ತಾಗಲಿಲ್ಲ” ಎಂದಳು. ಅಯ್ಯಪ್ಪ, “ಅದು ಇರಲಿ. ಈ ವಿಷಯ ಹೇಳು” ಎಂದ. ವಿಜಯ, ಎರಡನೇ ಮಗನನ್ನು ಕುರಿತು “ನೋಡು ಪದ್ಮನಾಭ, ಅವರ ಮನೆಯಲ್ಲಿ ಒಂದು ಹುಡುಗ ಒಂದು ಹುಡುಗಿ ಇಬ್ಬರೇ ಇರುವುದು. ಮೊನ್ನೆ ಗಣಿಯಲ್ಲಿ ಸತ್ತೋದರಲ್ಲ ಸೆಲ್ವಮ್, ನಿಮ್ಮ ತಂದೆ ಸ್ನೇಹಿತರು ಅವರ ಮಕ್ಕಳು. ಹುಡುಗ ದೊಡ್ಡವನು ಹುಡುಗಿ ಒಂದು ವರ್ಷ ಚಿಕ್ಕವಳು. ಭಾನುವಾರ ಅವರ ಮನೆಗೆ ಹೋಗೋಣ. ನೀನು ಹುಡುಗಿಯನ್ನು ನೋಡು. ಇಷ್ಟ ಆದರೆ ಸರಿ. ಇಲ್ಲ ಅಂದರೆ ಇಲ್ಲ. ಹುಡುಗಿ ಸ್ವಲ್ಪ ಕಪ್ಪು. ಆದರೆ ತುಂಬಾ ಚೆನ್ನಾಗಿದ್ದಾಳೆ. ನಮ್ಮಲ್ಲಿ ಚೆನ್ನಾಗಿರೊ ಹುಡುಗಿಯರು ಎಲ್ಲಿ ಸಿಕ್ತಾರೆ?” ಅಂದಳು. ಪದ್ಮನಾಭನ್, “ಅಮ್ಮ ನನಗೆ ಇನ್ನೂ ಮದುವೆ ಬೇಡ” ಎಂದ. ಅಣ್ಣ, ಅತ್ತಿಗೆ ಇಬ್ಬರೂ “ಆಯಿತು ನೀನು ಮಾಡಿಕೊಳ್ಳಬೇಡ. ಸುಮ್ಮನೇ ನೋಡೋಣ ನಡಿ. ನಾವೆಲ್ಲ ಹುಡುಗನ್ನ ನೋಡಬೇಕಲ್ಲ? ಜೊತೆಗೆ ಹುಡುಗಿಯನ್ನೂ ನೋಡಿ ಬರೋಣ” ಎಂದು ಒತ್ತಾಯ ಮಾಡಿದರು.

ಅಯ್ಯಪ್ಪ, ವಿಜಯಳನ್ನು ಕುರಿತು “ಅದೇಗೆ ಅಲ್ಲಿ ನಮ್ಮ ಪೈಕಿ ಒಬ್ಬ ಒಳ್ಳೆ ಹುಡುಗ ಇದ್ದಾನೆ ಅಂತ ಹೇಳಿ ಈಗ ನಮ್ಮ ಹುಡುಗ ಅಂತ ಹೇಳುವುದು ಹೇಗೆ?” ಎಂದಿದ್ದಕ್ಕೆ, ವಿಜಯ, “ಯಾಕೆ ಹೇಳಬಾರದು ಗಣಿಯಲ್ಲಿ ಕೆಲಸ ಮಾಡುವ ಹುಡುಗನಿಗಿಂತ ಬೆಮೆಲ್ (ಬಿಇಎಮ್‌ಎಲ್) ನಲ್ಲಿ ಕೆಲಸ ಮಾಡುವ ಹುಡುಗ ಅಂದರೆ ಒಪ್ಪಿಕೊಳ್ಳುವುದಿಲ್ಲವೆ? ಬಂಗಾರದಂತೆ ಒಪ್ಪಿಕೊಳ್ತಾರೆ. ನಮ್ಮ ಮಗ ಪದ್ಮನಾಭನ್ ತರಹ ಹುಡುಗ ಸಿಕ್ಕೋದಕ್ಕೆಅವರಿಗೆ ಅದೃಷ್ಟ ಇರಬೇಕು ಅವರಿಗೆ. ಎಲ್ಲದಕ್ಕಿಂತ ಮುಖ್ಯವಾಗಿ ಹುಡುಗಿ ನೋಡುವುದಕ್ಕೆ ಚೆನ್ನಾಗಿದ್ದಾಳೆ” ಎಂದಳು. ಚಿಂತೆಯಲ್ಲಿ ಬಿದ್ದ ಅಯ್ಯಪ್ಪ, “ನಿನ್ನ ಮಗ ಒಪ್ಪಿಕೊಳ್ಳಬೇಕಲ್ಲ?” ಎಂದ. ವಿಜಯ, “ಹುಡುಗಿ ಚೆನ್ನಾಗಿದ್ದರೆ ಯಾಕೆ ಒಪ್ಪಿಕೊಳ್ಳುವುದಿಲ್ಲ? ಭಾನುವಾರ ಎಲ್ಲರೂ ಹೋಗೋಣ. ಪದ್ಮನಾಭನಿಗೆ ಹುಡುಗಿಯನ್ನು ತೋರಿಸೋಣ. ಒಪ್ಪಿಕೊಂಡರೆ ಸರಿ. ಇಲ್ಲ ಅಂದರೆ ಅನಂತರ ಬೇರೆ ಹುಡುಗನ್ನ ಕರೆದುಕೊಂಡು ಹೋಗೋಣ” ಎಂದಳು.

ಅಯ್ಯಪ್ಪ, ಈ ಮಹಿಳೆಯರ ತಲೆ ಓಡುವಂತೆ ನಮಗೇಕೆ ತಲೆ ಓಡುವುದಿಲ್ಲ ಎಂದು ತಲೆಯನ್ನು ಕೆರೆದುಕೊಂಡ. ಅಯ್ಯಪ್ಪ, “ಪದ್ಮನಾಭ ನೀನು ಹೇಳು” ಎಂದರು. ಪದ್ಮನಾಭ “ಆಯಿತು” ಎಂದ. ಎರಡನೆ ಮಗ ಪದ್ಮನಾಭನ್ ಐಟಿಐ ಮುಗಿಸಿ ಬೆಮೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ಜೊತೆಗೆ ಬೆಮೆಲ್ ಕಾರ್ಖಾನೆ ಕ್ವಾಟ್ರಸ್‌ನಲ್ಲಿ ಮನೆಯನ್ನು ಹಿಡಿದುಕೊಂಡಿದ್ದಾನೆ. ಅಯ್ಯಪ್ಪ, “ನಮ್ಮ ಹುಡುಗಿಯ ದುರದೃಷ್ಟ ಹೇಗಿದೆ ನೋಡಿ? ಇವಳಿಗೆ ಗಣಿಯಲ್ಲಿ ಕೆಲಸ ಮಾಡುವವನು ಸಿಕ್ಕಿದರೆ ಅವರ ಹುಡುಗಿಗೆ ಬೆಮೆಲ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಹುಡುಗ ಸಿಕ್ತಾನೆ” ಎಂದರೆ, ವಿಜಯ, “ಎಲ್ಲಾ ಅವರವರು ಕೇಳಿಕೊಂಡು ಬಂದಿರುವ ಅದೃಷ್ಟ” ಎಂದಳು.

ಪದ್ಮನಾಭನ್ ಪಿಯುಸಿವರೆಗೂ ಕಾಲೇಜಿನಲ್ಲಿ ಓದಿ ನಂತರ ಐಟಿಐಯಲ್ಲಿ ಪಿಟ್ಟರ್ ವಿಭಾಗದಲ್ಲಿ ಡಿಪ್ಲೊಮೊ ಮುಗಿಸಿ ಬೆಮೆಲ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಇದುವರೆಗೂ ಅವನ ಮದುವೆ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ. ಕಾರಣ ಅವನಿಗೆ ಇನ್ನೂ 24 ವರ್ಷ. ಬೆಮೆಲ್‌ನಲ್ಲಿ ಕೆಲಸಕ್ಕೆ ಸೇರಿ ಕೇವಲ ಮೂರು ವರ್ಷಗಳಾಗಿದ್ದವು. ಸರಿಯಾಗಿ 21 ವರ್ಷ ಮುಗಿಯುವುದರೊಳಗೆ ಅವನಿಗೆ ಕೆಲಸ ದೊರಕಿತ್ತು. ಜೊತೆಗೆ ಅವನು ರಾತ್ರಿ ವೇಳೆ ಕೆಜಿಎಫ್ ಪ್ರ.ದ.ಕಾಲೇಜ್‌ನಲ್ಲಿ ಆರ್ಟ್ಸ್‌ನಲ್ಲಿ ಡಿಗ್ರಿ ಬೇರೆ ಓದುತ್ತಿದ್ದನು. ದೊಡ್ಡ ಮಗನಿಗೆ ಮದುವೆಯಾಗಿ ಒಂದು ಮಗೂ ಕೂಡ ಇದ್ದು ಅವನು ಮೈಸೂರು ಗಣಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಪದ್ಮನಾಭನ್‌ಗೆ ಬೇಗನೆ ಮದುವೆ ಮಾಡುತ್ತಿದ್ದೇವೆಯ ಎಂಬ ಸಂದೇಹ ಅಯ್ಯಪ್ಪನ ಮನಸ್ಸಿನಲ್ಲಿ ಏಳದೇ ಇರಲಿಲ್ಲ. ಆದರೂ ಮೊದಲಿಗೆ ಹುಡುಗಿಯನ್ನು ತೋರಿಸಿ ಅನಂತರ ನೋಡೋಣ ಎಂದುಕೊಂಡ.

(ಹಿಂದಿನ ಕಂತು: ಒಳಗೊಂದು ಪರಿಸ್ಥಿತಿ.. ಹೊರಗೊಂದು ಪರಿಸ್ಥಿತಿ)

About The Author

ಡಾ. ಎಂ. ವೆಂಕಟಸ್ವಾಮಿ

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ