ವೆಂಕೂಬಾಯಿ ನನ್ನ ಪಾಲಿನ ಮಹಾತಾಯಿ ಆಗಿದ್ದರು. ನಾನು ಅವರ ಮಗನೇ ಎನ್ನುವಷ್ಟರ ಮಟ್ಟಿಗೆ ಪ್ರೀತಿಸುತ್ತಿದ್ದರು. ನನಗಾಗಿ ಅವರು ಬ್ರಾಹ್ಮಣ ಸಂಪ್ರದಾಯದ ಎಲ್ಲ ಕಟ್ಟಳೆಗಳನ್ನು ಮೀರುತ್ತಿದ್ದರು. ಖುಷಿಯ ವಿಚಾರವೆಂದರೆ “ನಾನು ಮೀರುತ್ತಿದ್ದೇನೆ” ಎಂಬ ಭಾವವೂ ಅವರಲ್ಲಿ ಇರಲಿಲ್ಲ. ನಾನು ಬಿಸಿಬಿಸಿ ರೊಟ್ಟಿ ಪ್ರಿಯ. ಊಟದ ಸಮಯಕ್ಕೆ ಹೋದಾಗಲೆಲ್ಲ ನನಗಾಗಿ ರೊಟ್ಟಿ ಬಡಿಯುತ್ತಿದ್ದರು. ಆಗ ನನ್ನನ್ನು ಅಡುಗೆ ಮನೆಗೆ ಕರೆದು ಊಟ ಬಡಿಸುತ್ತಿದ್ದರು. ಈ ಪ್ರಿವಿಲೆಜ್ ನನಗೊಬ್ಬನಿಗೆ ಮಾತ್ರ. ಬೇರೆ ಮಕ್ಕಳ ಊಟ ಹೊರಗಡೆ!
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 76ನೇ ಕಂತು ನಿಮ್ಮ ಓದಿಗೆ

“ಮತಧರ್ಮದ ವಿಷಯದಲ್ಲಿ ಜಗಳವಾಡಬೇಡ. ಸಾಂಗತ್ಯ ಶ್ಲಾಘನೀಯವಾದದ್ದು. ಸತ್ಯದ ಮೇಲೆ ನಿನ್ನ ಸಂಪೂರ್ಣ ಸ್ವಾಮ್ಯವಿದೆ ಎಂದು ಕಲ್ಪನೆ ಮಾಡಿಕೊಳ್ಳಬೇಡ. ನಿನ್ನ ಸ್ವಾಮ್ಯ ಇಲ್ಲದೆ ಇರಬಹುದು. ಯಾವ ಮತಧರ್ಮವೂ ಸತ್ಯದ ಮೇಲೆ ಪೂರ್ಣ ಸ್ವಾಮ್ಯ ಹೊಂದಿರುವುದಿಲ್ಲ. ನೀನು ಬೇರೆ ಬೇರೆ ರೀತಿಗಳಲ್ಲಿ ಹಾಗೂ ಬೇರೆ ಬೇರೆ ವ್ಯಕ್ತಿಗಳಲ್ಲಿ ಅಭಿವ್ಯಕ್ತಿಯಾಗುವ ದೇವರನ್ನು ಅರಿಯಲು ಪ್ರಯತ್ನಿಸು” ಎಂದು ಅಶೋಕನ ಶಿಲಾಶಾಸನವೊಂದು ಹೇಳುತ್ತದೆ.

೨೩೦೦ ವರ್ಷಗಳಷ್ಟು ಹಿಂದಿನ ಈ ಚಿಂತನೆ ‘ನಿತ್ಯ ಹೊಸತು’ ಎಂಬ ಭಾವ ಮೂಡಿಸುತ್ತದೆ.

ಬೇರೆ ಬೇರೆ ವ್ಯಕ್ತಿಗಳಲ್ಲಿ ಅಭಿವ್ಯಕ್ತಿಯಾಗುವ ದೇವರು ಆತ್ಮಸಾಂಗತ್ಯದ ರೂಪದಲ್ಲೇ ಇರುತ್ತದೆ. ಅಂತಃಸಾಕ್ಷಿಯೆ ದೇವರಾಗಿರುವುದರಿಂದ ಅದುವೆ ಆತ್ಮಸಾಂಗತ್ಯಕ್ಕೆ ಮೂಲವಾಗಿರುತ್ತದೆ. ಅಂತೆಯೆ ಅಂತಃಸಾಕ್ಷಿ ಎಂಬ ಮೂಲದೇವರ ಮುಂದೆ ಎಲ್ಲ ಉತ್ಸವ ಮೂರ್ತಿಗಳು ತೋರಿಕೆಯ ದೇವರಾಗುತ್ತವೆ. ಆ ದೇವರುಗಳ ಮೂಲಕ ಹುಟ್ಟಿದ ಧರ್ಮಗಳೂ ಗೌಣವಾಗುತ್ತವೆ.

ಇಂಥ ಮಾನವ ಸಂಬಂಧಗಳು ಎಲ್ಲಾ ಜಾತಿ, ಧರ್ಮ, ಸಂಪ್ರದಾಯ, ಭಾಷೆ ಮತ್ತು ದೇಶಗಳನ್ನು ಮೀರಿ ಇರುತ್ತವೆ. ಪ್ರೀತಿಗೆ ಯಾವುದೇ ಚೌಕಟ್ಟು ಇರುವುದಿಲ್ಲ. ಆತ್ಮಸಾಂಗತ್ಯವೇ ಅನನ್ಯ ಪ್ರೀತಿ. ಈ ಪ್ರೀತಿಗೆ ವಯಸ್ಸು, ಬುದ್ಧಿಮತ್ತೆ, ಅಂತಸ್ತು ಮತ್ತು ಲಿಂಗಭೇದ ಕೂಡ ಇರುವುದಿಲ್ಲ. ಈ ಎಲ್ಲ ವಲಯಗಳನ್ನು ದಾಟಿದ ನಂತರವೇ ಆತ್ಮಸಾಂಗತ್ಯವೆಂಬ ಅನಂತವಾದ ವಲಯದ ಸಾಕ್ಷಾತ್ಕಾರವಾಗುತ್ತದೆ.

ನನಗೆ ಇಂಥ ಸಾಕ್ಷಾತ್ಕಾರವಾಗಲು ಜಯಲಕ್ಷ್ಮೀ ಆದ್ಯ (ಯರನಾಳ) ಅವರ ತಾಯಿ ವೆಂಕೂಬಾಯಿ ಕಾರಣ. ಇದೆಲ್ಲ ಅರ್ಧ ಶತಮಾನಕ್ಕೂ ಹಿಂದಿನ ಮಾತು. ಅವರ ಜೀವನ ವಿಧಾನದಿಂದ ಆ ಯೌವನದಲ್ಲಿ ನಾನು ಬಹಳಷ್ಟು ಕಲಿತೆ.

ಅವರದು ಮಾಧ್ವ ಸಂಪ್ರದಾಯದ ಆದ್ಯ ಮನೆತನ. ಕಟ್ಟುನಿಟ್ಟಿನ ಬದುಕು. ಜಯಲಕ್ಷ್ಮಿಯ ತಂದೆ ಅನಂತಾಚಾರ್ಯರು ಸಂಸ್ಕೃತ ಪಂಡಿತರು. ಮೃದು ಸ್ವಭಾವದ ಅವರು ಸದಾ ಮೌನಿ. ಮಾತನಾಡಿಸಿದರೆ ಹಿತಮಿತವಾಗಿ ಮಾತನಾಡಿ ತಮ್ಮ ಪೂಜಾ ಪುನಸ್ಕಾರಗಳಿಗೆ ಸಂಬಂಧಿಸಿದ ಕೆಲಸ ಕಾರ್ಯಗಳಲ್ಲಿ ತೊಡಗಿರುವವರು. ತಮ್ಮ ಸಮಾಜದ ಪೂಜೆ ಮುಂತಾದ ಧಾರ್ಮಿಕತೆಗೆ ಸಂಬಂಧಿಸಿದ ಕರ್ತವ್ಯ ನಿರ್ವಹಣೆಗಾಗಿಯೆ, ಅವರ ಮತಸ್ಥರು ಹಳೆ ಶೈಲಿಯ ಸುಂದರ ಮನೆಯನ್ನು ಬಿಟ್ಟು ಕೊಟ್ಟಿದ್ದರೆಂಬ ನೆನಪು.

ಹೆಬ್ಬಾಗಿಲ ಮುಂದೆ ಪುಟ್ಟ ಪ್ರಾಂಗಣ, ಮೇಲೆ ಕಟಾಂಜನವುಳ್ಳ ಮಹಡಿ, ಒಳಗಡೆ ವಿಶಾಲವಾದ ಕೋಣೆ. ಅದಕ್ಕೆ ಅಂಟಿಕೊಂಡು ಇರುವ ದೊಡ್ಡ ಅಡುಗೆ ಮನೆ. ಕೋಣೆಯಿಂದಲೇ ಹಾದು ಹಿತ್ತಲಕ್ಕೆ ಹೋಗಬೇಕಿತ್ತು. ಅಲ್ಲಿ ಕೂಡ ಒಂದು ಕೋಣೆ. ಅಲ್ಲಿ ಹಿಂದೂಮ್ಮೆ ಸುಭದ್ರ ಎಂಬ ಮಹಿಳೆ ವಾಸವಾಗಿದ್ದ ಕಾರಣ ಆ ಕೋಣೆಗೆ ಸುಭದ್ರಳ ಕೋಣೆ ಎಂದೇ ಕರೆಯುತ್ತಿದ್ದರು.

ಅನಂತಾಚಾರ್ಯರು ಆ ಜಾಗದಲ್ಲಿ ತಾವೇ ಅನ್ನ ಬೇಯಿಸಿಕೊಂಡು ಊಟ ಮಾಡುತ್ತಿದ್ದ ನೆನಪು. ಅವರು ಎಲ್ಲರ ಜೊತೆ ಸೇರಿ ಊಟ ಮಾಡಿದ್ದು ನೆನಪಿಲ್ಲ.

ಆ ತಾರುಣ್ಯದ ದಿನಗಳಲ್ಲಿ ನನ್ನ ಮೈಮನಗಳಲ್ಲಿ ಕಮ್ಯುನಿಸ಼ಂ ಕುಣಿಯುತ್ತಿತ್ತು. ಸಾಹಿತ್ಯವನ್ನು ಹೊಸ ದೃಷ್ಟಿಯಿಂದ ನೋಡಲು ಮನಸ್ಸು ಹಾತೊರೆಯುತ್ತಿತ್ತು. ಒಂದು ಸಲ ನಾನು ಅನಂತಾಚಾರ್ಯರ ಜೊತೆ ಕಾಳಿದಾಸನ ಅಭಿಜ್ಞಾನ ಶಾಕುಂತಲ ನಾಟಕದ ಕುರಿತು ಚರ್ಚಿಸುತ್ತಿದ್ದೆ. “ಶಕುಂತಲೆ ಉಂಗುರ ಕಳೆದುಕೊಂಡದ್ದೊಂದು ನೆಪ. ಅದೆಲ್ಲ ಮಹಿಳೆಗೆ ಪುರುಷ ಮಾಡುವ ಮೋಸದಾಟ. ರಾಜ ದುಷ್ಯಂತ, ತಾನು ಗುರುತಿಗಾಗಿ ಕೊಟ್ಟ ವಸ್ತುವಾದ ಉಂಗುರಕ್ಕಿಂತ ಜೀವಂತ ಶಕುಂತಲೆಯನ್ನು ಕಡೆಯಾಗಿ ಕಂಡದ್ದು ಪುರುಷ ಪ್ರಧಾನ ವ್ಯವಸ್ಥೆಯ ಸಂಕೇತ” ಎಂದು ಮುಂತಾಗಿ ಹೇಳಿದೆ. ಸಭ್ಯಗೃಹಸ್ಥರಾದ ಒಬ್ಬ ಸಂಸ್ಕೃತ ಪಂಡಿತರ ಮುಂದೆ ಹೀಗೆಲ್ಲ ಮಾತನಾಡಿದೆ ಎಂಬ ಅಳುಕು ಶುರುವಾಯಿತು. ಆಗ ಅವರು ಹೇಳಿದರು: “ನಾವೆಲ್ಲ ಶಬ್ದಾರ್ಥ ಅರಿತುಕೊಂಡು ಓದುತ್ತ ಬಂದವರು. ನೀವು ಯುವಕರು ವಿಶ್ಲೇಷಣಾ ಸಾಮರ್ಥ್ಯ ಹೊಂದಿದವರು” ಎಂದರು. ನನ್ನ ಬಗ್ಗೆ ನನಗೆ ನಾಚಿಕೆಯಾಗಿ ಮನದಲ್ಲೇ ಕೈ ಮುಗಿದೆ. ನಮ್ಮ ಮಾತು ಸರಿ ಇದ್ದರೂ ಔಚಿತ್ಯ ಪ್ರಜ್ಞೆ ಬಿಟ್ಟು ಮಾತನಾಡಬಾರದು ಎಂಬುದನ್ನು ಕಲಿತೆ. ಹೀಗಿದ್ದರು ಅನಂತಾಚಾರ್ಯರು.

ಬೇರೆ ಬೇರೆ ವ್ಯಕ್ತಿಗಳಲ್ಲಿ ಅಭಿವ್ಯಕ್ತಿಯಾಗುವ ದೇವರು ಆತ್ಮಸಾಂಗತ್ಯದ ರೂಪದಲ್ಲೇ ಇರುತ್ತದೆ. ಅಂತಃಸಾಕ್ಷಿಯೆ ದೇವರಾಗಿರುವುದರಿಂದ ಅದುವೆ ಆತ್ಮಸಾಂಗತ್ಯಕ್ಕೆ ಮೂಲವಾಗಿರುತ್ತದೆ. ಅಂತೆಯೆ ಅಂತಃಸಾಕ್ಷಿ ಎಂಬ ಮೂಲದೇವರ ಮುಂದೆ ಎಲ್ಲ ಉತ್ಸವ ಮೂರ್ತಿಗಳು ತೋರಿಕೆಯ ದೇವರಾಗುತ್ತವೆ. ಆ ದೇವರುಗಳ ಮೂಲಕ ಹುಟ್ಟಿದ ಧರ್ಮಗಳೂ ಗೌಣವಾಗುತ್ತವೆ.

ಅವರು ಹೊಸದರ ಜೊತೆಗೆ ಇರುತ್ತಿರಲಿಲ್ಲ. ಆದರೆ ಹೊಸತನವನ್ನು ವಿರೋಧಿಸುತ್ತಿರಲಿಲ್ಲ. ಜಯಲಕ್ಷ್ಮಿಗೆ ನಾವೆಲ್ಲ ಜಯಕ್ಕ ಎನ್ನುತ್ತಿದ್ದೆವು. ಆ ಮನೆಯಲ್ಲಿ ಗಂಟೆಗಟ್ಟಲೆ ಕಮ್ಯುನಿಸ್ಟ್ ಸಿದ್ಧಾಂತ ಮತ್ತು ಜಾಗತಿಕ ಆಗುಹೋಗುಗಳ ಚರ್ಚೆ ಆಗುತ್ತಿತ್ತು. ಆಕೆ ಸಂಸ್ಕೃತ ಎಂ.ಎ. ನಲ್ಲಿ ಫಸ್ಟ್ ರ್ಯಾಂಕ್ ಬಂದ ನೆನಪು. ಆದರೆ ಅವಳು ಕಮ್ಯುನಿಸ಼ಂ ಸತ್ಯ ಎಂಬುದನ್ನು ಮನಗಂಡಳು.

ತಾಯಿ ವೆಂಕೂಬಾಯಿ ತಮ್ಮ ಮನೆಗೆಲಸ ಮಾಡುತ್ತಲೇ ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರು. ನನ್ನ ಬಗ್ಗೆ ಅವರಿಗೆ ಅಪಾರವಾದ ಪ್ರೀತಿ ಇತ್ತು. ನಾನು ಏನು ಹೇಳುತ್ತೇನೆ ಎಂಬುದೆಲ್ಲ ಗೊತ್ತಾಗದಿದ್ದರೂ ಅದು ವಾಸ್ತವ ಎಂಬುದರ ಅರಿವಾಗಿತ್ತು.

ಅವರು ದಾಸರ ಪದಗಳನ್ನು ಹಾಡುತ್ತಿದ್ದರು. ಬಹುಶಃ ನನ್ನ ಮಾತುಗಳ ಅರ್ಥವನ್ನು ಅವರು ದಾಸರ ಪದಗಳಲ್ಲಿ ಹುಡುಕುತ್ತಿರಬಹುದು ಎನಿಸುತ್ತದೆ. ಒಂದು ದಿನ ಅವರು ಹೀಗೆ ಹೇಳಿದರು: “ನೋಡು ನಿಮ್ಮ ಕಾಕಾ (ಅನಂತಾಚಾರ್ಯರು) ವ್ಯಾಸ ಪೀಠದವರು. ನಾನು ದಾಸ ಪೀಠದವಳು.”

ಅವರು ಹೇಳಿದ ಒಂದು ಮಾತು ನನ್ನ ಅರಿವಿಗೆ ಹೊಸತನದ ಹೊಳವು ಮೂಡಿಸಿತು. ಯಾವುದೇ ಧರ್ಮ ಎಷ್ಟೇ ಕರ್ಮಠವಾಗಿದ್ದರೂ ಅದರೊಳಗೇ ಒಂದು ಬಂಡಾಯದ ಧ್ವನಿ; ಗದ್ದಲೆಬ್ಬಿಸದೆ ಹೊಸತನವನ್ನು ಉಸುರುತ್ತಲೇ ಇರುತ್ತದೆ ಎಂಬುದರ ಅರಿವಾಯಿತು.

ಇಸ್ಲಾಂ ಧರ್ಮದಲ್ಲಿ ಹೊಸತನದ ಸೂಫಿಗಳು ಸೃಷ್ಟಿಯಾಗಿ ಕರ್ಮಠತನವನ್ನು‌ ಅಲ್ಲಗಳೆದರು. ಶೈವರಲ್ಲಿ ಲಿಂಗವಂತರು, ವೈಷ್ಣವರಲ್ಲಿ ದಾಸರು ಹೊಸ ಹಾದಿ ಹಿಡಿದರು. ಕ್ರೈಸ್ತರಲ್ಲಿ ಪ್ರೊಟೆಸ್ಟೆಂಟ್ ಶಾಖೆ ಶುರುವಾಯಿತು‌. ಜೈನರಲ್ಲಿ ದಿಗಂಬರ ಮತ್ತು ಶ್ವೇತಾಂಬರ ಮುಂತಾದವು. ಬೌದ್ಧರಲ್ಲಿ ಹೀನಾಯಾನ, ಮಹಾಯಾನ, ವಜ್ರಯಾನ ಮುಂತಾದವು.

ಹೀಗೆ ಎಲ್ಲವೂ ಬದಲಾಗುತ್ತಲೇ ಇರುತ್ತವೆ.

ವೆಂಕೂಬಾಯಿಯವರ ಮಾತಿನಲ್ಲಿ ಇಂಥ ವಿಜ಼ನ್ ಇತ್ತು. ದಾಸಪೀಠ ಅವರಿಗೆ ಪುರೋಗಾಮಿಯಾಗಿ ಕಂಡಿತ್ತು!

ಸಮಾಜಕ್ಕೆ ಹೊಸದನ್ನು ಹೇಳುವಾಗ ನಾವು ನಮ್ಮ ಪರಂಪರೆಯಲ್ಲಿ(ಸಂಪ್ರದಾಯ ಅಲ್ಲ) ಬರುವ ಇಂಥ ಹೊಸ ದಾರಿಗಳೊಂದಿಗೆ ಕಸಿ ಮಾಡುತ್ತ ಸಾಗಬೇಕಾಗುವುದು. ಆಶ್ಚರ್ಯವೆಂದರೆ ಎಲ್ಲ ಧರ್ಮಗಳಲ್ಲೂ ಹೊಸ ದಾರಿ ತೋರಿಸುವ ಭಕ್ತಿಮಾರ್ಗಗಳಿವೆ. ಇವೆಲ್ಲ ಸೇರಿ ಭಕ್ತಿಪಂಥವಾಗಿದೆ.

ವೆಂಕೂಬಾಯಿ ನನ್ನ ಪಾಲಿನ ಮಹಾತಾಯಿ ಆಗಿದ್ದರು. ನಾನು ಅವರ ಮಗನೇ ಎನ್ನುವಷ್ಟರ ಮಟ್ಟಿಗೆ ಪ್ರೀತಿಸುತ್ತಿದ್ದರು. ನನಗಾಗಿ ಅವರು ಬ್ರಾಹ್ಮಣ ಸಂಪ್ರದಾಯದ ಎಲ್ಲ ಕಟ್ಟಳೆಗಳನ್ನು ಮೀರುತ್ತಿದ್ದರು. ಖುಷಿಯ ವಿಚಾರವೆಂದರೆ “ನಾನು ಮೀರುತ್ತಿದ್ದೇನೆ” ಎಂಬ ಭಾವವೂ ಅವರಲ್ಲಿ ಇರಲಿಲ್ಲ.

ನಾನು ಬಿಸಿಬಿಸಿ ರೊಟ್ಟಿ ಪ್ರಿಯ. ಊಟದ ಸಮಯಕ್ಕೆ ಹೋದಾಗಲೆಲ್ಲ ನನಗಾಗಿ ರೊಟ್ಟಿ ಬಡಿಯುತ್ತಿದ್ದರು. ಆಗ ನನ್ನನ್ನು ಅಡುಗೆ ಮನೆಗೆ ಕರೆದು ಊಟ ಬಡಿಸುತ್ತಿದ್ದರು. ಈ ಪ್ರಿವಿಲೆಜ್ ನನಗೊಬ್ಬನಿಗೆ ಮಾತ್ರ. ಬೇರೆ ಮಕ್ಕಳ ಊಟ ಹೊರಗಡೆ!

ನಾನು ಬಹಳ ಕಷ್ಟಪಟ್ಟು ಎಂ.ಎ. ಓದಲು ಧಾರವಾಡಕ್ಕೆ ಹೊರಟು ನಿಂತಾಗ ಏನೇನೋ ತಿಂಡಿ ತಿನಿಸು ಕಟ್ಟಿಕೊಟ್ಟ ನೆನಪು. ಧಾರವಾಡದಿಂದ ವಾಪಸ್ ಬಂದಾಗ ಅವರ ಮನೆಗೆ ಹೋಗಿದ್ದೆ. ಹೊಸದಾಗಿ ಬಂದ ೫೦ ರೂಪಾಯಿಯ ೪ ಕೋರಾ ನೋಟನ್ನು ಅವರು ನನಗಾಗಿ ತೆಗೆದಿಟ್ಟಿದ್ದರು. ಆ ಕಾಲದಲ್ಲಿ ಅಷ್ಟೊಂದು ಹಣ! ನನಗೂ ಆಶ್ಚರ್ಯವೆನಿಸಿತು. ಮಾತೃ ಪ್ರೇಮವೇ ಹಾಗೆ. ಹಣಕ್ಕಾಗಿ ಬಾಯಿ ಬಾಯಿ ಬಿಡುತ್ತಿದ್ದ ನಾನು ಅನಿವಾರ್ಯವಾಗಿ ತೆಗೆದುಕೊಂಡೆ.
ವೆಂಕೂಬಾಯಿ ನೆನಪು ಸದಾ ಹಸಿರು.

(ಚಿತ್ರದಲ್ಲಿ: ಎಡದಿಂದ ಬಲಕ್ಕೆ ಜಯಲಕ್ಷ್ಮೀ ಯರನಾಳ (ಎರಡನೇ ಮಗಳು), ವೆಂಕೂಬಾಯಿ (ವೆಂಕಟಲಕ್ಷ್ಮಿ), ಆದ್ಯ ಅನಂತಾಚಾರ್ಯ, ವಿಜಯಲಕ್ಷ್ಮಿ ಅಗರಖೇಡ, (ಮೊದಲ ಮಗಳು), ಸುಧಾ ಕುಲಕರ್ಣಿ (ಕೊನೆಯ ಮಗಳು) ಮನು, ವಿನು, ಮಧು (ವಿಜಯಲಕ್ಷ್ಮಿ ಮಕ್ಕಳು)