Advertisement
ನಮ್ಮಮ್ಮ ನಾಗಮ್ಮ: ಸುಮಾ ಸತೀಶ್ ಸರಣಿ

ನಮ್ಮಮ್ಮ ನಾಗಮ್ಮ: ಸುಮಾ ಸತೀಶ್ ಸರಣಿ

ಒಟ್ನಾಗೆ ಅಮ್ಮ ದೋಡ್ಡ ಸಂಸಾರದಾಗೆ ಸೈ ಅನ್ನುಸ್ಕಂಡಿದ್ದು ಸಣ್ದೇನಲ್ಲ. ಅಪ್ಪ ರಾಜಕೀಯದಾಗಿತ್ತು. ಮನೇನಾಗೆ ಇರ್ತಾ ಇರ್ಲಿಲ್ಲ. ಮಾತುಕತೆಗೆ ಸಿಗುತ್ಲೇ ಇರ್ಲಿಲ್ಲ. ಮನ್ ತುಂಬಾ ಜನ. ಕೆಲ್ಸ. ಮದಮದಲು ಅತ್ತೆದೀರ್ಗೆ ಬಿಗುಮಾನ ಇತ್ತು. ನಮ್ಮ ದೊಡ್ಡತ್ತೆ ಮಾತೂ ಅಂದ್ರೆ ಮನ್ಯಾಗೆ ವೇದವಾಕ್ಯ. ಅವ್ರೂ ಒಂದಿನ ನಾವು ಎಂಟು ಜನ ಯಾವತ್ತಿದ್ರೂ ಒಂದೇನೇಯಾ ಅಂತ ಯೋಳ್ದಾಗ ಅಮ್ಮುಂಗೆ ನಾನೊಬ್ಳೇ ಅಲ್ವಾ ಅಂಗಾರೆ ಹೊರುಗ್ನೋಳು ಅಂತ ಸಂಕಟ ಆಗಿ ಮರೇನಾಗೆ ಕಣ್ಣಾಗೆ ನೀರು ಹಾಕ್ಕಂಡಿದ್ದ್ರು. ಆದ್ರೆ ಒಂದೂ ಮಾತು ಎದುರಾಡ್ದೇ ಅವುರ್ನ ಮರ್ವಾದೇಯಿಂದ್ಲೇ ನೋಡ್ಕಂತಿತ್ತು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮ ತಾಯಿಯ ಕುರಿತ ಬರಹ ನಿಮ್ಮ ಓದಿಗೆ

ಗೋರಿಬಿದ್ನೂರು ತಾಲೂಕ್ನಾಗಿರಾ ಕುರೂಡಿ ಅಂಬೋ ಸಣ್ಣ ಹಳ್ಳಿ ನಮ್ಮಮ್ಮುಂದು. ನಾಗಲಕ್ಷ್ಮಿ ಅಂತ ನಮ್ಮ ಅಮ್ಮಮ್ಮ ಹೆಸ್ರು ಇಟ್ಟುದ್ರು. ನಾಗಪ್ಪುನ್ನ ಪ್ರತಿಷ್ಟೆ ಮಾಡಿದ್ರಂತೆ. ಹೆಣ್ ಮಗೀ ಆಗಿದ್ಕೆ ನಾಗಲಕ್ಷ್ಮಿ ಅಂತ ಹೆಸ್ರು ಮಡಗಿದ್ರು. ನಾಕು ಜನ ಗಂಡು ಮಕ್ಳು ನಡುವ್ಯಾಗೆ ಒಬ್ಳೇ ಹೆಣ್ಣು ಕೂಸು. ಬೋ ಪಿರೂತಿ ನಮ್ಮ ತಾತುಂಗೆ ಅಜ್ಜೀಗೆ. ತಾತ ಅಮ್ಮಯ್ಯಾ ಅಂತ್ಲೇ ಕರೀತಿತ್ತು. ನಮ್ಮಜ್ಜೀ ನಾಗೂ ಅಂತಿತ್ತು. ನಂಟ್ರು ಪಂಟ್ರು ಬಳಗದಾಗೆಲ್ಲಾ ಹೆಂಗುಸ್ರು ನಾಗೂ ಅಂತ್ಲೇ ಕರೀತಿದ್ರು, ಗಂಡಸ್ರು ನಾಗಮ್ಮ ಅಂತಿದ್ರು. ನಾಗಕ್ಕಯ್ಯ, ನಾಗಮ್ಮಯ್ಯ ಹಿಂಗೆಲ್ಲಾ ಕರುಸ್ಕಂತಿದ್ರು. ಸ್ಯಾನೆ ಹೆಚ್ಚುಗಾರಿಕೆ ನಾಕೂ ಜನ ಅಣ್ಣ ತಮ್ದೀರಿಗೆ. ಆಗಿನ ಕಾಲುಕ್ಕೆ ಹೆಣ್ಣು ಮಗೀ ಅಂದ್ರೆ ಬ್ಯಾಗ್ನೇ ಲಗ್ನ ಮಾಡೋ ಕಾಲ. ಅಂತಾದ್ರಾಗೆ ನಮ್ಮಮ್ಮುಂಗೆ 19 ವರ್ಸ ಆದ್ ಮ್ಯಾಕೆ ಸುರು ಮಾಡಿದ್ರು.

ಹರ್ದಿರಾ ಸಲ್ಟು ಇಕ್ಕಂಡು ಬಂದ ಗಂಡು

ನಮ್ಮಪ್ಪನೇಯಾ ನೋಡ್ಕಂಡೋಗೋಕೆ ಬಂದ ಮದುಲ್ನೇ ಗಂಡು. ಅದ್ಯಾಕೋ ಈ ಸಂಬಂಧ ಬ್ಯಾಡ, ಎಂಟು ಜನ ನಾದಿನೀರಿರಾ ಸಂಸಾರ. ಮದ್ಲೇ ನಮ್ಮ ನಾಗಮ್ಮ ಸ್ಯಾನೆ ನಾಜೂಕಾಗಿ ಬೆಳ್ದಿರಾ ಕೂಸು ಅಂತ ಚಿಕ್ಕಪ್ಪದೀರು ಅವ್ರೂ ಇವ್ರೂ ಯೋಳುದ್ರು. ಅದ್ರಾಗೂ ನಮ್ಮಪ್ಪ ಯಾವ್ದೋ ಕೆಲ್ಸದ ಮ್ಯಾಗೆ ಬ್ಯಾರೆ ಊರಿಗೆ ಹೋಗಿದ್ದೋರು ಅಂಗೇ ಮಾಸೋಗಿರಾ ಅಂಗೀನಾಗೆ ಬಂದೌರೆ‌. ಜೊತ್ಯಾಗೆ ಎಲ್ಲೋ ಸಿಗಾಕ್ಕಂಡು ಸಲ್ಟು ವಸಿ ಹರ್ದೋಗಿತ್ತಂತೆ. ನಮ್ ಮಾವಂದ್ರು ಅದ್ನ ನೋಡಿ ಬ್ಯಾಡಾಕೆ ಬ್ಯಾಡ ಈ ಹುಡ್ಗ ಅಂತ ಸುಮ್ಕಾಗಿದ್ರಂತೆ. ಅದ್ರಾಗೂ ಸೊಗಸುಗಾರ ಪುಟ್ಸಾಮಿ ಅಂಗಿದ್ದ ನಮ್ ನಾಗ್ರಾಜ ಮಾಮ, ಯೇ ಈ ಗಂಡು ನಮ್ಮಕ್ಕಯ್ಯಂಗೆ ಬ್ಯಾಡ ಕಣಪ್ಪೋ. ಹರ್ದಿರಾ ಅಂಗಿ ಇಕ್ಕಂಡು ಯಾರಾನಾ ಹೆಣ್ ನೋಡಾಕ್ ಬತ್ತಾರಾ ಅಂತ ಮೂತಿ ತಿರುವಿತ್ತಂತೆ.

ಅದ್ಯಾಕೋ ಬ್ಯಾರೆ ಯಾವ ಗಂಡೂ ನಮ್ ತಾತುಂಗೆ ಮನ್ಸಿಗೆ ಬರ್ದೆ ಆರು ತಿಂಗ್ಳ ಗಂಟ ಕಾಯ್ಕಂಡು ಕೂಕಂಡು, ತಿರ್ಗಾ ಅದೇ ಗಂಡ್ನೇ ಕರ್ಕಂಡು ಬಂದೇಟ್ಗೆ ಎಲ್ರೂ ಬ್ಯಾಡಾ ಬ್ಯಾಡಾ ಅಂದ್ರೂ ಸುತ ಕ್ಯೋಳ್ದೇ ಹುಡುಗ ಬುದ್ದಿವಂತ.‌ ಮಗ್ಳನ್ನ ಚೆಂದಾಕಿ ನೋಡ್ಕಂತಾನೆ ಅಂತ ಹಠ ಹಿಡ್ದು ಲಗ್ನ ಮಾಡ್ಕೊಟ್ಟೌರೆ. ಮಗೀನ ಒಪ್ಸಾವಾಗ ನಮ್ಮಜ್ಜೀಗೆ ಜೀವಾ ನಿಲ್ದೆ ಅಳಾನೋ ಅಳಾ. ನಮ್ ತಾತ ಮಗೀನ ಮುದ್ದಾಗಿ ಸಾಕಿದೀವಿ. ಚೆಂದಾಕಿ ನೋಡ್ಕಳಿ ಅಂತ ನಮ್ ಅಜ್ಜಿ ತಾತುಂಗೆ (ಅಪ್ಪನ ಅಪ್ಪ ಅಮ್ಮ) ಯೋಳಿ ಬಂದೌರೆ.

ಮನೆಯೋ ಚತ್ರಾನೋ

ಇತ್ಲಾಗೆ ಚಿಕ್ಮಾಲೂರಿಗೆ ಬಂದ ಮ್ಯಾಕೆ ಮನ್ ತುಂಬಾ ಜನ್ವೋ ಜನ ಕಂಡೇಟ್ಗೆ ನಮ್ಮಮ್ಮ ಗಾಬ್ರಿ ಬಿದ್ದೋಗೈತೆ. ಯಪ್ಪಾ ಸಿವ್ನೇ ಎಂತಾ ಕಷ್ಟ ಬಂತಪ್ಪ ಅಂತ ದ್ಯಾವುರ್ನ ಬೇಡ್ಕಂತಂತೆ. ಮದ್ಲಿಂದ್ಲೂ ನಮ್ಮಮ್ಮುಂಗೆ ದ್ಯಾವ್ರು ದಿಂಡ್ರು ಅಂದ್ರೇ ಬೋ ಬಕ್ತಿ ಕಣೇಳಿ. ಯಾಪಾಟಿ ಅಂದ್ರೆ ಯೋಳಾಕಾಗವಲ್ದು. ನಾಷ್ಟಾ ಗೀಷ್ಟಾ ಇಲ್ದಿದ್ರೂ ಸೈ, ಉಪಾಸಾ ಇದ್ಕಂಡೇ ಪೂಜೇ ಮಾಡೋ ಪೈಕಿ. ಬೆಳಗಾನಾ ಎದ್ದು ಪೂಜೇ, ದ್ಯಾವ್ರ ಹಾಡು, ಊರ್ನಾಗಿರಾ ರಾಮ್ ದ್ಯಾವ್ರ ಗುಡೀಗೆ ಹುವ್ವಾ ಏರ್ಸೋದು( ಪೋಣಿಸೋದು) ಈಟೇಯಾ. ನಮ್ಮಜ್ಜೀ‌ ಬಲು ಮುತುವರ್ಜಿನಾಗೆ ಕೆಲ್ಸ ಬೊಗ್ಸೆ ಮಾಡುಸ್ದೆ ಭೋಗವಾಗಿ ಬೆಳಸಿತ್ತು. ಅದ್ರಾಗೂ ವಸಿ ಅನುಕೂಲ್ವಾಗೂ ಇದ್ರು. ಮನೆ ಕೆಲ್ಸುಕ್ಕೆ ಜನ್ವೂ ಮಡಿಕ್ಕಂಡಿದ್ರು. ಇಲ್ಲಿ ನೋಡೀರೇ ಮನೆ ಚತ್ರ ಇದ್ದಂಗೆ ಐತೆ. ಅದ್ಕೇ ಗಾಬ್ರಿ ಬಿದ್ದೋಗವ್ರೆ.

ಸೇದೋಬಾವೀಗ್ಳಿಂದ ನೀರು ಹೊರಾಟ

ಚತ್ರದ್ ತರ ದೊಡ್ಡ ಸಂಸಾರ ಅಂದ ಮ್ಯಾಗೆ ನೀರೂ ಸ್ಯಾನೆ ಬೇಕು. ಮನ್ಯಾಗೆ ನೀರು ತುಂಬ್ಸಾ ಕೆಲ್ಸ ಅಂದ್ರೆ ಸೊಂಟ ಬಿದ್ದೋಗ್ತಿತ್ತು. ಸೀ ನೀರಿಗೆ ಈರಾಪುರದ್ ರಸ್ತೇನಾಗಿರಾ ಬಾವಿ ತಾವ್ಕೇ ಹೋಗ್ಬೇಕಿತ್ತು. ಉಪ್ಪು ನೀರಿಗೆ ನಾಗಣ್ಣನ ಮನೆ ಮುಂದ್ಲ ಬಾವಿ. ನಮ್ಮಮ್ಮಂಗೆ ನೀರ್ ಸೇದಾಕೋಗಿ ರಟ್ಟೆ ಸೇದೋಗ್ತಿದ್ವು. ಅಮ್ಮನ್ ಕೈಲಿ ನೀಗ್ಸಾಕೆ ಆಗಾಕಿಲ್ಲ ಅಂತ ಆಳುಗ್ಳು ಸೇದಿ ಕೋಡೋರಂತೆ. ಅಮ್ಮ ದೊಡ್ಡ ಬಿಂದಿಗೇಗ್ಳಾಗೆ ನೀರು ಹೊತ್ಕಾ ಬಂದು ತೊಟ್ಟಿ ತುಂಬ್ಸಾ ಕೆಲ್ಸ ಮಾಡಾ ಹೊತ್ಗೆ ಜೀವಾ ಬಾಯಿಗ್ ಬಂದಂಗಾಗಿರ್ತಿತ್ತು. ನಮ್ಮತ್ತೆದೀರು ಸ್ಯಾನೆ ಗಟ್ಟಿ ಇದ್ರು. ಎಲ್ಸಾ ಕೆಲ್ಸವ ಸಲೀಸಾಗಿ ಮುಗ್ಸಾಕ್ತಿದ್ರು. ಆಳುಗ್ಳೂ ಕಾಳುಗ್ಳೂ ಅಂತ ಯಾರ್ನೂ ಮಡಿಕ್ಕಂಡಿರ್ಲಿಲ್ಲ. ನಮ್ಮಮ್ಮ‌ ಮೆತ್ತೆ. ರಟ್ಟೆನಾಗೆ ಆಸೊಂದು ಬಲ ಇರ್ಲಿಲ್ಲ. ನಮ್ಮಕ್ಕ ಹುಟ್ಟಿದ್ ಮ್ಯಾಗೆ ಅಪ್ಪ ಮನೆ ಪಕ್ಕದಾಗೇ ಬಾವಿ ತೋಡ್ಸಿದ್ರು. ಅದುಕ್ಕೆ ಪಂಪುಸೆಟ್ಟೂ ಹಾಕ್ಸಿದ್ರು. ಸೀದಾ ನೀರು ಬಂದು ತೊಟ್ಯಾಗೆ ಬೀಳ್ತಿತ್ತು. ಆಗ ನಮ್ಮಣ್ಣ ಸಣ್ಣ ಕೂಸು. ನಮ್ಮಜ್ಜೀ ತಾವ ಹೋಗಿ ಪಂಪುಸೆಟ್ಟು ಅಂದ್ರೆ ಯೋನು ಅಂತ ಕ್ಯೋಳಿದ್ಕೆ ನಮ್ಮಜ್ಜಿ ಯೋಳ್ಕಂತಾ, ಅಂಗೇಯಾ, ನಿನ್ನೆಂಡ್ರು ಬಂದ್ರೆ ಬಾವೀಲಿ ನೀರು ಸೇದಾಕೆ ಕಷ್ಟ ಆಗ್ತದಲ್ಲಪ್ಪ. ಅದ್ಕೇ ನಿಮ್ಮಪ್ಪ ಈಗ್ಲೇ ಎಲ್ಲಾ ಮಾಡುಸ್ತೌರೇ ಮೋಟ್ರು ಹಾಕ್ಸೌರೆ ಅಂತ ಕುಟುಕಿತ್ತು. (ನಮ್ಮಮ್ಮುಂಗೆ ಯೋಳೋ ತರುಕ್ಕೆ). ಪಾಪ ಅವುರ್ದೂ ಏನು ತಪ್ಪು. ಜೀವಾ ಸವುಸ್ಕಂಡು ಕೆಲ್ಸಾ ಮಾಡ್ತಿದ್ವು ಅಂಬ್ತ ಅನ್ನುಸ್ದೇ ಇದ್ದಾತಾ. ಆದ್ರೆ ಕಾಲಕ್ಕೆ ತಕ್ಕಂಗೆ ಅನುಕೂಲಗ್ಳು ಬಂದಂಗೆ ಊರಿನ್ ಮುಖ್ಯಸ್ಥರು ಅನ್ನುಸ್ಕಂಡಿರಾ ಅಪ್ಪ ಮದ್ಲು ತಾವೂ ಬದ್ಲಾಗಿ, ಜನುಕ್ಕೂ ತೋರುಸ್ಕಡೋರು ಆಟೇಯಾ. ಅದು ನಮ್ಮಮ್ಮುಂಗೇ ಅಂತ ಮಾಡ್ಸೌರೇನೋ ಅನ್ಸೋದು.

ಹೊಗೆಗೂಡಿಲ್ದೆ ಪರದಾಟ

ಮದುವಿ ಆದ್ ಹೊಸದ್ರಾಗೆ ಸೌದೆ ಒಲೇನಾಗೆ ಅಡುಗೆ ಮಾಡ್ಬೇಕಿತ್ತು. ಬಚ್ಚಲುಮನೀ ಅಟ್ಟದ ಮ್ಯಾಗೆ ಸೌದೆ ಒಟ್ಟಿರುತ್ತಿದ್ರು. ಕೆಳಗೆ ಹಂಡೆ ಒಲೀಗಾಕಾಕೆ ಹುಣ್ಸೇ ಹೊಟ್ಟು. ನಮ್ ಮನ್ಯಾಗೆ ಎಂಟು ಜನ ಅತ್ತೆದೀರು ಬಂದೂ ಹೋಗೂದು ಮಾಮೂಲಿ ಇತ್ತು. ಕೊನೀ ಅತ್ತೇಗೆ ಇನ್ನೂ ಮದ್ವೆ ಆಗಿರ್ಲಿಲ್ಲ. ಉಳ್ದೋರ ಮಕ್ಕಳೂ ಮೊಮ್ಮಕ್ಕಳೂ ನಂಟ್ರೂ ಪಂಟ್ರೂ ಬಂದೋರು ಬಂದಂಗೇಯಾ ಹೋದೋರು ಹೋದಂಗೇಯಾ. ಊರಿನ್ ಮುಖ್ಯಸ್ಥರು ಅಂಬ್ತ ನಮ್ಮಪ್ಪುನ್ನ ಹುಡೀಕ್ಕಂಡು ಬರಾ ಜನುಗ್ಳೂ ಸ್ಯಾನೇ. ಕಾಪೀ ಕಾಸಾಕ್ಕಿಕ್ಕಿದ್ ಬಟ್ಲಂತೂ ಕೆಳೀಕ್ಕೆ ಇಳ್ಸಾಕೇ ಪುರುಸೊತ್ತಿಲ್ದೆ ಮಸಿ ಕಟ್ಟೋಗಿರ್ತಿತ್ತು ಅಂದ್ರೆ ಲೆಕ್ಕ ಹಾಕ್ಕಳಿ ಮತ್ತೆ. ಒಬ್ರುಗೆ ಅದೇ ಕೆಲ್ಸವೇಯಾ. ಅದೂ ಅಲ್ದೆ ಅಡುಗೆ ಮನ್ಯಾಗೆ ಹೊಗೆಗೂಡೇ ಇರ್ಲಿಲ್ಲ. ಮೂಗೂ ಕಣ್ಣಾಗ್ಳಿಂದ ನೀರು ಕಿತ್ಕಂತಿತ್ತು. ಆಮ್ಯಾಕೆ ಹೊಗೆಗೂಡು ಕಟ್ಸೀರೂ ಸೈತ ಸರ್ಯಾಗಿ ಆಗ್ಲಿಲ್ಲ. ಹೊಗೆ ಆಚಿಕ್ ಹೋಗ್ತಿರಲಿಲ್ಲ. ಅಲ್ಲೇ ಮುಸುರ್ಕಂತಿತ್ತು.

ಕೆಲ್ಸಾ ಮಾಡ್ಸಾದ್ರಾಗೆ ಜಾಣೆ

ನಮ್ಮಮ್ಮ‌ ಕೈಲಾಗದಿದ್ರೂ ಸುಲಭ ಮಾಡ್ಕಣಾಕೆ ವಸಿ ತಲೆ ಉಪ್ಯೋಗ್ಸ್ತಿದ್ರು. ಕರೆಂಟ್ ಇಸ್ಟೋವ್ ಯಾವಾಗ್ಲೋ ಅಪ್ಪ ತಂದಿಕ್ಕಿದ್ರಂತೆ. ನಮ್ಮಜ್ಜಿ ಅದ್ನ ಅಟ್ಟದ ಮ್ಯಾಕೆ ಕಟ್ಟಿ ಮಡಗಿತ್ತು. ಅದ್ನ ಇಳ್ಸಿ ನಡು ಮನ್ಯಾಗೆ( ಅಡುಗೆ ಮನೇನಾಗೆ ಕರೆಂಟ್ ಯವಸ್ಥೆ ಇರ್ನಿಲ್ಲ ಅದುಕ್ಕೆ) ಅದ್ನ ಇಕ್ಕಂಡು ಕಾಪಿ ಟೀ ಅದ್ರಾಗೆ ಮಾಡ್ತಿದ್ರು. ಆಮ್ಯಾಕಾಮ್ಯಾಕೆ ಕುಕ್ಕರ್ ಬಂದ ಮ್ಯಾಕೆ ಅದ್ರಾಗೆ ಅನ್ನವೂ ಬೇಯಿಸ್ತಿದ್ರು. ನಾನು ಹುಟ್ಟಿದ್ ಮ್ಯಾಗೇ ಸೀಮೆಣ್ಣೆ ಬತ್ತಿ ಸಣ್ಣ ಇಸ್ಟೋವು ಬಂತು. ಅದು ಹತ್ತು ಬತ್ತೀದು. (ಕಿರುಬೆಳ್ಳಿಗಿಂತ ವಸಿ ಸಣ್ಣ ಬತ್ತಿ) ಬತ್ತಿ ಹಾಕೋದು, ಒಳೀಕ್ಕೋದ್ರೆ ಅದ್ನ ಮ್ಯಾಕೆತ್ತಿ ಹೊಸ್ದು ಕೊಡೋದು, ಸೀಮೆಣ್ಣೆ ತುಂಬ್ಸಾದೂ ಎಲ್ಲಾ ರಾಮಪ್ಪಾನೇ ಮಾಡ್ತಿತ್ತು. ಆಮ್ಯಾಕೆ ಹದಿನೈದು ಬತ್ತಿ ಇರಾ ದೊಡ್ಡ ಇಸ್ಟೋವು ಬಂತು. ಆಟೋತ್ಗೆ ಅಮ್ಮ ಮನೇ ಕೆಲ್ಸಕ್ಕೆ ಆಳುಗಳ್ನ ರೂಡಿ ಮಾಡಿತ್ತು. ಮದಮದ್ಲು ಎಲ್ಲಾ ಮಾಡೀ‌ಮಾಡೀ ಸೊರಗೋಗಿತ್ತು. ನಿಧಾನುಕ್ಕೆ ಮುಸುರೇ ಪಾತ್ರೇಗೆ ಮುದ್ದಮ್ಮ , ನಾಗಮ್ಮ, ಕಮಲಮ್ಮ ಯಾರೋ ಒಬ್ರು. ಬಟ್ಟೆ ಒಗಿಯಾಕೆ ಅಗಸರ ಪುಟ್ಟಲಿಂಗಪ್ಪ. ( ವರ್ಷಕ್ಕೆ ನಲವತ್ತು ರೂಪಾಯಿ. ಆಮ್ಯಾಗೆ ಅರವತ್ತು ರೂಪಾಯಿ ಆಯ್ತು. ಹೆಸುರ್ಗೆ ದುಡ್ಡು ಈಟೇಯಾ. ಆದ್ರೆ ನಮ್ಮಪ್ಪ ಕಾಳು ಕಡಿ ಕಾಯಿ ಬೆಲ್ಲ ಎಲ್ಲಾನೂವೇ ಆಳುಮಕ್ಕಳಿಗೆ ಧಾರಾಳವಾಗೇ ಕೊಡೋರು. ನಮ್ಮಮ್ಮನೂ ರಾಮಪ್ಪುಂಗೆ ಹೊಗೆಸೊಪ್ಪಿಗೆ, ಹೆಣ್ಣಾಳುಗಳ್ಗೆ ಕಡ್ಡಿಪುಡೀಗೆ ಕಾಸು ಕೊಡ್ತಿತ್ತು.)

ಮುದ್ದೆ ತಿರುವೋದ್ನ ಕಲ್ತು

ಸುರೂನಾಗೆ ಒಂದಷ್ಟು ವರ್ಸಾ ಮುದ್ದೆ ತಿರುವೋದ್ಕೂ ಸೈ ಅಂತ ಕಲ್ತು, ಆಳುಗಳ್ಗೆ ಮುದ್ದೆ ಮಾಡಾಕಾರು. ಸೇರಿಟ್ಟು ಹಾಕೀರೆ ದೋಡ್ಡವು ನಾಕೇ ಮುದ್ದೇಯಾ ಮಾಡ್ಬೇಕಿತ್ತು. ಎಲ್ಡು ಆಳುಗ್ಳು ಮಧ್ಯಾನ್ನದ ಊಟುಕ್ಕೆ ( 11ಗಂಟೆ) ಕಾಯಮ್ಮು. ಸಾಯಂತ್ರಕ್ಕೆ (ಸಾಯಂಕಾಲ, ಮುಸ್ಸಂಜೆ ಹೊತ್ತು ಅಂಬೋರು) ಒಂದು ಮೂರು ಗಂಟೆನಾಗೆ ಕಳೆ ಕೀಳಾಕೆ ಏಸು ಜನ ಆಳು ಬಂದಿರ್ತಾರೋ ಅವುರ್ಗೆ ಸಣ್ಣ ಮುದ್ದೆಗ್ಳು ಮಾಡಾಕ್ಬೇಕಿತ್ತು. ಅಂಗೇ ಒಂದಷ್ಟು ವರ್ಸ ಮಾಡೌರೆ. ಅಮ್ಮ ಸ್ಯಾನೆ ಭಯಸ್ಥೆ. ನಿಧಾನಸ್ಥೆ. ಸೂಕ್ಸ್ಮವಾಗಿ ಬೆಳೆದಿತ್ತಲ್ಲ ಅದುಕ್ಕೆ. ಆದ್ರೆ ನಮ್ಮಮ್ಮ ಆಳು‌ಮಕ್ಕಳನ್ನ ಚೆನ್ನಾಗಿ ಇಟ್ಕಂಡಿತ್ತು. ನಾಗಮ್ಮ ಮುದ್ದಮ್ಮದೀರು ಯಾರ ಮನ್ಯಾಗೂ ಮುಸುರೆ ತಿಕ್ದೋರಲ್ಲ. ನಮ್ಮಮ್ಮ ಅವುರ್ ತಾವ ಕೆಲ್ಸ ಮಾಡುಸ್ಕಂತಿದ್ರು. ಅದ್ರಾಗೆ ಬಲು ಜಾಣೆ. ನಾಜೂಕಾಗಿ ಮಾತಾಡ್ತಿತ್ತು, ಧಾರಾಳ ಬುದ್ದಿ ಇತ್ತು, ಅಂಗಾಗಿ ಎಲ್ಲಾದುಕ್ಕೂ ಜನ ಓಡಿಬರಾರು. ಯಕ್ಕೋ ಯಕ್ಕೋ ಅಂತ ಯೋಳಿದ್ಕೆಲ್ಲ ತಲೆ ಆಡ್ಸಾರು. ಈತರ ಕೆಲ್ಸ ಮಾಡ್ಸಾಕೂ ಬರ್ಬೇಕು. ಈಗ್ಲೂ ಸುತ 78 ವರ್ಸದಾಗೂ ಸೈತ ನಂಗೆ ಯೋಳ್ಕೊಡೋದು ನಮ್ಮಮ್ಮನೇಯಾ. ಫೋನ್ ಮಾಡೀರೆ ಕೆಲ್ಸದೋರ ತಾವ ಇಂಗೆ ಯೋಳು. ಕೆಲ್ಸಾ ಮಾಡುಸ್ಕಾ, ಅವುರ್ನ ಚೆಂದಾಕಿ ನೋಡ್ಕ ಅಂತಾರೆ. ಆದ್ರೆ ಅವುರ್ಗೆ ಕಷ್ಟ ಅಂದ್ರೆ ಬೋ ಮರುಗೋ ಜೀವ. ಬಡುವುರ್ಗೆ ಸಾಯಾ ಮಾಡಾದ್ರಾಗೆ ವಸಿ ಮುಂದೆನೇಯಾ.

ಎಲ್ಲಾ ಕೆಲ್ಸುಕ್ಕೂ ರಾಮಪ್ಪ

ರಾಮಪ್ಪಂದು ಊರಿಗೆ ನಲ್ಲಿ ನೀರು ಬಿಡೋ ಕ್ಯಾಮೆ. ಇಡೀ ದಿನ ನಮ್ಮ ಮನೆ ಮುಂದ್ಲ ಕರೆಂಟ್ ರೂಮಿನ್ ತಾವ ಇರ್ತಿದ್ನ. ಮೂರೊತ್ತೂ ಮನೆ ತಾವೇ ಇರ್ತಿದ್ದ. ಬೆಳಗ್ಗೆ ಹಾಸ್ಗೆ ಸುತ್ತಿ ಕಸ ಉಡುಗೋದ್ರಿಂದ (ಗುಡಿಸು) ಹಿಡ್ಕಂಡು, ಮಜ್ಜಿಗೆ ಕಡೆಯೋದು, ಹುವ್ವ ಕಟ್ಟೊದು ಹಿಂಗೆ.‌ ಮಸಾಲೆ ಕುಟ್ಟಿ ಕೊಡೋದು, ದ್ವಾಸೆ, ಇಡ್ಲೀಗೆ ಅಕ್ಕಿ ಕುಟ್ಟಿ ಕೊಡೋದು ಒಂದೇ ಎಲ್ಡೇ. ನಮ್ಮಮ್ಮ ತರಕಾರಿ ಹಚ್ಚೋದ್ನೂ ಕಲಿಸಿತ್ತು. ಆಳುಗಳ್ಗೆ ನಿಧಾನುಕ್ಕೆ ಕೆಲ್ಸಾ ಯೋಳ್ಕಟ್ಟು ಕಲ್ಸೋದ್ರಾಗೆ ಫಸ್ಟು. ಆದ್ರೆ ಇವೆಲ್ಲಾ ಸ್ಯಾನೆ ವರ್ಸ ಆದ್ಮೇಲೇಳಿ. ಅದ್ಕೂ ಮದ್ಲು ಅಂಗೇ ನೀಗುಸ್ಕಂಡು ಹೋಗ್ತಿತ್ತು. ನಮ್ಮಮ್ಮ‌ ಕೆಲ್ಸ ಕಲ್ಸಿದ್ ಮ್ಯಾಗೆ ರಾಮಪ್ಪನ್ ಕೆಲ್ಸ ಎಷ್ಟು ಚೆಂದಾಕಿರ್ತಿತ್ತು ಅಂದ್ರೆ ಹೆಂಗುಸ್ರಿಗಿಂತ ಹುವ್ವ ಕಟ್ಟಾದ್ರಾಗೆ ಫಾಸ್ಟು ಆಗಿದ್ದ. ಅವುರ್ನ ಗದರೋನು. ಸರ್ಯಾಗಿ ಕಟ್ರಮ್ಮಣ್ಣೀದೀರಾ ಅಂತಾವಾ. ಅವ್ರೆಲ್ಲ ನಮ್ಮಮ್ಮುಂಗೆ ಗಲಾಟೆ ಮಾಡಾಟ, ಯಕ್ಕೋ ನೀನು ಈವಪ್ಪಂಗೆ ಕೆಲ್ಸ ಕಲ್ಸಿ ಬ್ಯಾಡಾ ನಮ್ ಕತೆ. ಕಾಟಾ ತಡ್ಕಣಾಕಾಗಾವಲ್ದು ಅಂತಾವ.

ತಿಂಡೀ ಕಾಲಿ ಆಗಿ

ಒಂದು ದೊಡ್ಡ ಕೊಳದಪ್ಪಲೆನಾಗೆ ರಾಸಿ ತರಕಾರಿ ಹಾಕಿ ಗೊಜ್ಜು ಮಾಡೀರೆ ಒಂದೇ ಊಟ್ಗೆ(ಹೊತ್ತು) ಕಲಾಸ್. ಆಸೊಂದು ಜನ. ಒನ್ನೊಂದು ದಿನ ನಮ್ಮಮ್ಮುಂಗೆ ಕಾಲೀನೇ ಆಗೋಗ್ತಿತ್ತು. ಬರೇ ಚಪಾತಿ ರೊಟ್ಟಿ ತಿನ್ನಂಗೆ ಆಗ್ತಿತ್ತು. ಒಂದು ಕಿತ ಎಲ್ಡೇ ಚಪಾತಿ ಮಿಕ್ಕಿದ್ವು. ಇನ್ನೇನ್ ತಟ್ಟೆಗೆ ಹಾಕ್ಕಾಬೇಕು, ಊರಿಂದ ಯಾರೋ ಬಂದ್ರು.‌ ಆಗ್ಲೇ 11 ಗಂಟೆ. ಹೊಟ್ಟೆ ಸುಡ್ತಾ ಐತೆ. ಕಣ್ಣಾಗೆ ನೀರು. ನಮ್ಮಜ್ಜೀ ತಾವ ಯೋಳಾಂಗಿಲ್ಲ, ಭಯ. ಆಗಿನ್ ಕಾಲ್ದಾಗೆ ಅತ್ತೆದೀರ ಕೂಟ ಮಾತುಕತೆ ಎಲ್ಲಿತ್ತು. ಕೊನೀಗೆ ಬ್ಯಾಗ್ ಬ್ಯಾಗ್ನೆ ಅನ್ನುಕ್ಕಿಕ್ಕಿ ಬಸಿಯೋ ಹೊತ್ಗೆ 12 ಗಂಟೆ ಆಗಿತ್ತು. ಯಾರೂ ಕಾಣ್ದಂಗೆ ಒಂದು ತಟ್ಟೇನಾಗೆ ಬಿಸಿ ಅನ್ನ ಇಕ್ಕಂಡು ಬೆಣ್ಣೆ ಹಾಕ್ಕಂಡು ಗಬಗಬನೆ ಉಂಡು ಕೈತೊಳ್ಕಂಡು ಸಾರ್ಗೆ ಇಕ್ಕಾಕೆ ಹೋಗಿದ್ದೂ ಮರೆಯಾಕಾದೀತೇ. ಸೀಮೆಣ್ಣೆ ಇಸ್ಟೋವ್ ಬಂದ್ ಮ್ಯಾಗೇನೆ ಜೀವುಕ್ಕೆ ವಸಿ ನೆಮ್ದಿ ಸಿಕ್ಕಿದ್ದು.

ಅಜ್ಜೀ‌ ಪಿರೂತಿ ಸಿಕ್ಕಿದ್ದು

ನಾನು ಇನ್ನಾ ಚಿಕ್ಕ ಮಗೀ ಇದ್ದೆ. ಒಂದಿನ ನಮ್ಮಜ್ಜೀ ನಮ್ಮಮ್ಮುನ್ನ ಕರ್ದು ಪಕ್ಕ ಕೂಡುಸ್ಕಂತು. ಅಮ್ಮಯ್ಯಾ ನಾನೂ ನೀನೂ ಯಾವತ್ತಿದ್ರೂ ಒಂದೇನೇಯಾ. ನಾವು ಸೆಂದಾಗಿರ್ಬೇಕು. ಯೋಳ್ದೋರ ಮಾತು ಕ್ಯೋಳ್ಕಂಡು ಹಾಳಾಗ್ಬಾರ್ದು ಅಂತ ಯೋಳ್ದೇಟ್ಗೆ ನಮ್ಮಮ್ಮುಂಗೆ ಕುಸಿ ತಡೆಯೋಕೇ ಆಗ್ನಿಲ್ಲ. ಅದಾದ್ ಮ್ಯಾಗೆ ಅತ್ತೆ ಸೊಸಿ ವಸಿ ಮಾತಾಡ್ಕಂಡು ಇದ್ರು. ಬರೇ ಹದ್ನೈದೇ ದಿನ್ವೇಯಾ. ನಮ್ಮಜ್ಜೀಗೆ ಲಕ್ವಾ ಹೊಡ್ದು ಒಂದು ಭಾಗ ಪೂರ್ತಿ ಬಿದ್ದೋಯ್ತು. ಅಂಗೇ ನಾಕೊರ್ಸ ಇದ್ರು. ಬಾಯಿ ಬಿದ್ದೋಗಿತ್ತು. ಬರೇ ನಾರಾಯಣ ಅಂತ ಮಾತ್ರ ಯೋಳ್ತಿತ್ತು. ನಮ್ಮಪ್ಪ ಎಲ್ಲೆಲ್ಲೋ ಕರ್ಕೋ ಹೋಗಿ ಔಸ್ದಿ ಮಾಡುಸ್ತು. ಈ ಟೇಮ್ನಾಗೆ ಮದಮದಲು ಮನೆ ತುಂಬಾ ಜನ. ಆಮೇಲಾಮೇಲೆ ಇಬ್ಬರು ಮೂರು ಅತ್ತೆದೀರು ತಿಂಗ್ಳು ಎಲ್ಡು ತಿಂಗ್ಳುತಕ ಇದ್ದು ನೋಡ್ಕಣಾರು. ನಮ್ಮ ಅತ್ತೆದೀರು ಬೋ ಸೆಂದಾಗಿ ನೋಡ್ಕಣಾರು. ಅವುರ್ ಜತ್ಗೆ ನಮ್ಮಪ್ಪ ಆಳುಗಳ್ನೂ ಇಕ್ಕಿದ್ರು. ಸ್ನಾನ ಮಾಡ್ಸಾದೂ, ಒಂದಾ ಎಲ್ಡಾ ಮಾಡ್ಸಾದೂ, ಬಟ್ಟೆ ಒಗೆಯಾದೂ ಆಳುಗಳೆ ಮಾಡ್ತಿದ್ರು. ಇಬ್ರು ಮೂರು ಜನ ಗೋಣೀಪಟ್ಟೆ ಮ್ಯಾಗೆ ಕುಂಡ್ರಿಸಿ ಹೊತ್ಕಂಡು ಹೋಗೋರು. ಊಟ ನಾಷ್ಟಾ ಮಾತ್ರ ಅತ್ತೆದೀರು ತಿನ್ಸೋರು. ನಮ್ಮಮ್ಮ ಮ್ಯಾಗ್ಲ ಉಸ್ತುವಾರಿ ಮಾಡಾರು. ಕೆಲ್ಸದೋರ್ನ ಕರ್ಸಾದೂ, ಮಾಡ್ಸಾದೂ ಎಲ್ಲಾ ಸೆಂದಾಕಿ ನೋಡ್ಕಂತಿದ್ರು.

ಒಂದ್ ಸಲ ಬಳ್ಳಾರಿ ಆಚೇಗ್ಳ ನಾಣ್ಯಾಪುರ ಅಂಬೋ ಊರ್ಗೆ ಅಜ್ಜೀನ ಔಸ್ದಿ ಕೊಡ್ಸಾಕೆ ಕರ್ಕೋ ಹೋಗಿದ್ರಂತೆ. ನಮ್ಮಮ್ಮ, ಸಾವಿತ್ರತ್ತೆ, ಗೋವಿಂದಪ್ಪ ಮೂರೂ ಜನ ಕೂಡ್ಕಂಡು ರಾತ್ರೆಲ್ಲಾ ಬಸ್ಸ್ನಾಗೆ ಹೋಗಿ, ಬೆಳ್ಗೆ ಹಲ್ಲೂ ತಿಕ್ದೇ ಔಸ್ದಿ ಕೊಡ್ಸಬೇಕೂಂತ ಯೋಳಿದ್ಕೆ ಅಂಗೇ ಸರ್ತೀಲಿ ನಿಂತು ಬಿಸ್ಲು ನೆತ್ತಿಗೇರಿದ್ ಮ್ಯಾಕೆ ಔಸ್ದಿ ಸಿಕ್ತು. ಆದ್ರೂ ಅದ್ರಾಗೆ ಅಜ್ಜೀಗೆ ಉಸಾರಿ ಆಗ್ಲಿಲ್ಲ.

ಅಜ್ಜಿ ಸೈಗೆ ಅರ್ಥ ಮಾಡ್ಕಂತಿದ್ದಿದ್ದು

ಯೋನಾರಾ ಬೇಕಾರೆ ನಮ್ಮಜ್ಜೀ ಸೈಗೆ( ಸನ್ನೆ) ಮಾಡೋರು. ನಮ್ಮತ್ತೆದೀರ್ಗಿಂತ ನಮ್ಮಮ್ಮುಂಗೆ ಅವುರ್ ಬಾಸೆ ಚೆಂದಾಗಿ ಅರ್ಥ ಆಗ್ತಿತ್ತು. ಒಂದು ಕಿತ ನಮ್ಮಜ್ಜಿ ಯೋನೋ ಯೋಳ್ತೌರೆ. ಆದ್ರೆ ಅತ್ತೆದೀರ್ಗೆ ಅರ್ತ ಆಗ್ದೆ ನಮ್ಮಮ್ಮುನ್ನ ಕರ್ದೌರೆ. ನಮ್ಮಮ್ಮ ಅಜ್ಜೀ ಸೈಗೆ ನೋಡಿ ಹೆಣ್ಮಕ್ಳಿಗೆ ಮಡ್ಲು ತುಂಬಬೇಕಾ ಅಂತ್ ಕ್ಯೋಳಿದ್ಕೆ ಹೂ ಹೂ ಅಂತ ಕಣ್ಣು ಅಳ್ಳಿಸಿದ್ರು. ತಕ್ಸಣ ನಮ್ಮಮ್ಮ ಮಡ್ಲು ತುಂಬಾಕೆ ಎಲ್ಲಾ ಸಿದ್ದ ಮಾಡ್ಕಂಡ್ರು.

ಅತ್ತಿಗೆ ನಾದ್ನೀರು ಒಂದಾಗಿದ್ದು

ಒಟ್ನಾಗೆ ಅಮ್ಮ ದೋಡ್ಡ ಸಂಸಾರದಾಗೆ ಸೈ ಅನ್ನುಸ್ಕಂಡಿದ್ದು ಸಣ್ದೇನಲ್ಲ. ಅಪ್ಪ ರಾಜಕೀಯದಾಗಿತ್ತು. ಮನೇನಾಗೆ ಇರ್ತಾ ಇರ್ಲಿಲ್ಲ. ಮಾತುಕತೆಗೆ ಸಿಗುತ್ಲೇ ಇರ್ಲಿಲ್ಲ. ಮನ್ ತುಂಬಾ ಜನ. ಕೆಲ್ಸ. ಮದಮದಲು ಅತ್ತೆದೀರ್ಗೆ ಬಿಗುಮಾನ ಇತ್ತು. ನಮ್ಮ ದೊಡ್ಡತ್ತೆ ಮಾತೂ ಅಂದ್ರೆ ಮನ್ಯಾಗೆ ವೇದವಾಕ್ಯ. ಅವ್ರೂ ಒಂದಿನ ನಾವು ಎಂಟು ಜನ ಯಾವತ್ತಿದ್ರೂ ಒಂದೇನೇಯಾ ಅಂತ ಯೋಳ್ದಾಗ ಅಮ್ಮುಂಗೆ ನಾನೊಬ್ಳೇ ಅಲ್ವಾ ಅಂಗಾರೆ ಹೊರುಗ್ನೋಳು ಅಂತ ಸಂಕಟ ಆಗಿ ಮರೇನಾಗೆ ಕಣ್ಣಾಗೆ ನೀರು ಹಾಕ್ಕಂಡಿದ್ದ್ರು. ಆದ್ರೆ ಒಂದೂ ಮಾತು ಎದುರಾಡ್ದೇ ಅವುರ್ನ ಮರ್ವಾದೇಯಿಂದ್ಲೇ ನೋಡ್ಕಂತಿತ್ತು. ಅಮ್ಮುನ ಒಳ್ಳೆತನ ಅವುರ್ನೂ ಗೆಲ್ತು.

ಆಳೂಕಾಳೂ ಕೈಲಿ ಕೆಲ್ಸ ಮಾಡ್ಸಾಕೆ ಸುರು ಆದ್ ಮ್ಯಾಗೆ ಅವುರ್ಗೂ ಕೆಲ್ಸ ಇಲ್ದೆ ಕುಸಿ ಆಗೋದು. ಅಮ್ಮುನ್ ತಾಳ್ಮೇ ಕಂಡು ಅವುರ್ ಕ್ವಾಪ್ವೂ ನಿಧಾನುಕ್ಕೆ ಕರಗ್ತಾ ಹೋಯ್ತು.‌ ನಮ್ಮ ದೊಡ್ಡತ್ತೆ ನಾಗೂ, ಅಮ್ಮಯ್ಯಾ ಅಂತ್ಲೇ ಪಿರೂತಿಯಿಂದ ಕರ್ಯೋರು. ಕೊನೇವರ್ಗೂ ಮನ್ಯಾಗೆ ಯಾವ್ದೇ ಮದ್ವೆ ಮುಂಜಿ ಇರ್ಲಿ, ಅವುರ್ದೇ ಪಾರುಪತ್ಯೆ ಇತ್ತು. ಅಮ್ಮ ಕುಸೀಲಿಂದ್ಲೇ ಅವುರ್ನ ಮದ್ಲು ಕರ್ಸಿ ಮೇಜವಾನಿ ಕೊಟ್ಟುಬಿಡ್ತಿದ್ರು. ಎಲ್ಲಾ ಅತ್ತೆದೀರೂ ಅತ್ಗೆ ಅಂತ ಬಾಯ್ತುಂಬಾ ಕರ್ಯೋ ಅಂಗಾದ್ರು. ಮನ್ಯಾಗೆ ಅವುರ್ದೇ ಮಾತು ನಡ್ಯಾ ಅಂಗೇ ಅಮ್ಮ ಬುಟ್ಟಿದ್ರು. ಅದ್ಕೇ ಅವುರ್ಗೂ ಕುಸೀನೇಯಾ.

ಮಡ್ಲು ತುಂಬೋ ಹಬ್ಬ

ಮಡ್ಲು ತುಂಬೋದಂತೂ ನಮ್ಮನ್ಯಾಗೆ ದೋಡ್ಡ ಉಗಾದಿ ಹಬ್ಬಕ್ಕಿಂತ್ಲೂ ಜಾಸ್ತೀನೇಯಾ. ಆಸು ಕುಸಿ ನಮ್ಗೂ. ಎಂಟು ಜನ ಅತ್ತೀದೀರು, ಅಳಿಯದೀರು, ಮಕ್ಳು ಮೊಮ್ಮಕ್ಕಳು, ನಂಟ್ರು ಎಲ್ಲ ಸೇರ್ಕಂಡು ಒಂದು ಜಾತ್ರೀನೇ ಆಗೋಗ್ತಿತ್ತು. ಇವತ್ಗೂ ನಾನೂ ನಮ್ಮಕ್ಕ ಮಡ್ಲು ತುಂಬ್ಕಾಬೇಕೂಂದ್ರೆ ನಮ್ ಕಣ್ಣಾಗೇ ಕುಣೀತೈತೆ ಆವಾಗಿನ್ ಮಡ್ಲು ತುಂಬಾ ದಿನ. ಅಪ್ಪ ಅಮ್ಮ‌ ಈಗ್ಲೂ ಅದ್ನೇ ತಿಳ್ಕಂತಾರೆ. ನಮ್ಮಮ್ಮುಂಗೆ ಕಣ್ಣಾಗೆ ನೀರು ತುಂಬ್ಕಂತೈತೆ‌. ಅತ್ತೆದೀರ್ನೆಲ್ಲ ಒಂದು ದಪ ನೆನುಸ್ಕಂತಾರೆ.

ಹಂಚು

ಮಡ್ಲು ತುಂಬಾ ದಿನ ನಿಶ್ಚಯ ಆದೇಟ್ಗೆ ಮದ್ಲು ಮಾಡ್ತಿದ್ ಕೆಲ್ಸಾ ಅಂದ್ರೆ ಹಂಚು(ಬಾಣಲೆ) ಇಟ್ಕಣಾಕೆ ಮೂರ್ತ ನೋಡ್ತಿದ್ರು. ನಮಮ್ಮ ದೊಡ್ಡತ್ತೇಗೆ ಯೋಳ್ತಿದ್ರು. ನಮ್‌ ದೊಡ್ಡತ್ತೆ ಇನ್ನೊಂದು ಇಬ್ರು ಮೂರು ಅತ್ತೆದೀರ್ಗೆ ಯೋಳ್ ಕಳ್ಸೋರು. ಐವತ್ತು ಸೇರು ಅಕ್ಕಿ ತೊಳ್ದು ಹಾಕೋರು ಚಕ್ಲಿ ಮಾಡಾಕೆ. ಎಲ್ಡೂ ಮೂರೂ ದಿನ ಕುಂತು ಮಾಡೋರು. ಪಾಪದ ಕಳ್ಳೆ (ಪಾಕದ ಕಡ್ಲೆ) ಒಂದಿಪ್ಪತ್ತು ಸೇರು ಮಾಡಿ, ದೋಡ್ಡ ಉಂಡೆ ಕಟ್ಟೋರು. ಮಡ್ಲು ತುಂಬಾವಾಗ ಅಮ್ಮ ಅತ್ತೆದೀರ್ಗೇ ಬಿಡ್ತಿದ್ರು ಚಕ್ಲಿ ಹಾಕ್ಕಳಾಕೆ. ಅವ್ರೇ ಏಸು ಬೇಕೋ ಆಸು ಹಾಕ್ಕಣಾರು. ತಮ್ಮ‌ ಮಕ್ಕಳಿಗೂ ಹಾಕಾರು. ಅಮ್ಮ ತಲೆ ಕೆಡುಸ್ಕಂತಿರ್ಲಿಲ್ಲ. ಅವ್ರೇ ಮಾಡೋರೂ, ಅವ್ರೇ ತಗಂಡೋಗೋರೂ, ಕುಸಿಯಾಗಿದ್ರೆ ಸಾಕು ಅಂತ ನಿರುಮ್ಮಳ. ಆಮೇಲಾಮೇಲೆ ಐವತ್ತು ಸೇರು ಅಕ್ಕಿ ಮೂವತ್ತು ಸೇರ್ಗೆ ಇಳೀತು.

ತವರಿನ್ ಪಿರೂತಿ

ಎಷ್ಟೋ ಸತಿ ಚಕ್ಲಿ ಮನೇಗೇ ಉಳೀತಿರ್ಲಿಲ್ಲ. ಬಂದ್ ನಂಟ್ರುಗೆ ಕೊಟ್ಟು ಕಾಲಿ ಆಗ್ತಿತ್ತು. ಆಗ್ಲೂ ಅಮ್ಮ ಬ್ಯಾಸ್ರ ಮಾಡ್ಕಂತಿರ್ಲಿಲ್ಲ. ನಮ್ ಅಮ್ಮಮ್ಮ, ತಾತುಂಗೆ ಮಗ್ಳು ಅಂದ್ರೆ ಪಂಚಪ್ರಾಣವೇ ಸೈ. ವಾರಕ್ಕೊಂದು ದಪ ನಮ್ ತಾತ ಸೈಕಲ್ ಹಾಕ್ಕಂಡು ತಿಂಡಿ ತಕಂಡು ಬರ್ತಿತ್ತು. ಮಗುಳ್ನ ನೋಡ್ಕಂಡು ಕೊಟ್ಟು ಹೋಗ್ತಿತ್ತು. ನಮ್ಮಜ್ಜೀ ತರಾವರಿ ಮಾಡಾದ್ರಾಗೆ ಸ್ಯಾನೆ ಫ್ರೇಮಸ್ಸೂ. ಅದ್ಕೇ ನಮ್ಮಮ್ಮುಂಗೆ ತಿಂಡಿ ಮ್ಯಾಗೆ ಆಸೇ ಏನೂ ಇರ್ಲಿಲ್ಲ. ಮದ್ಲಿಂದ್ಲೂ ತಿನ್ನೋದು ಸ್ವಲ್ಪ ಕಮ್ಮಿನೇಯಾ. ನಮ್ಮ‌ ದೊಡ್ಡತ್ತೆ ಏಸೊಂದು ಕಿತ ಯೋಳೌರೆ, ನಿಮ್ಮಜ್ಜಿ ಡಬ್ಬದ ತುಂಬಾ ತಿಂಡಿ ಮಾಡಿ ಕಳುಸ್ತಿದ್ರು. ನಿಮ್ಮಮ್ಮ ಮೂಸ್ತಾನೇ ಇರಲಿಲ್ಲ. ನಾವೇ ತಿಂತಿದ್ವಿ ಅಂತ. ಅಂಗಾಗಿ ಚಕ್ಲಿ ಇಸ್ಯಾ ದೊಡ್ಡ ಇಸ್ಯಾನೂ ಆಗ್ತಿರ್ಲಿಲ್ಲ. ಅತ್ತಿಗೆ ನಾದಿನೀರ ಪಿರೂತಿ ಕಮ್ಮೀನೂ ಆಗ್ಲಿರ್ಲಿಲ್ಲ. ನಾವೂ ಸೈತ ಅದ್ಯಾಕೋ ಯಾವ್ದುನ್ನೂ ಸ್ಯಾನೆ ಹುಚ್ಚು ಹಿಡ್ದಂಗೆ ತಿನ್ನುತ್ಲೂ ಇರ್ನಿಲ್ಲ. ಬರೇ ಬೇಲಿ ಸಂದೀಗ್ಳ ಹಣ್ಣೂ ಕಾಯಿ ಹುಡೀಕ್ಕಂಡು ಅಡ್ಡಾಡ್ತಿದ್ವಿ.

About The Author

ಸುಮಾ ಸತೀಶ್

ಸುಮಾ ಸತೀಶ್‌ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ),  ಮನನ - ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು),  ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು - ಬರೆಹ) ಇವರ ಪ್ರಕಟಿತ ಕೃತಿಗಳು.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ