ಎಲ್ಲರ ಜಗಳದಲ್ಲಿ ಬಡವಾಗಿರುವುದು ನಾವೇ ನಾವು, ಸಾಮಾನ್ಯರು. ಏಕೆಂದರೆ ನಾವು ಪ್ರಕೃತಿಯ ಭಾಗವಲ್ಲವೇ! ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರ ಬೆಳೆಯುವ ಮಣ್ಣಿಗೆ ಅನಾರೋಗ್ಯವುಂಟಾದರೆ ನಮ್ಮ ಆರೋಗ್ಯವೂ ಕೆಡುತ್ತದೆ ಎಂದು ಕಳೆದ ‘ಆಸ್ಟ್ರೇಲಿಯಾ ಪತ್ರ’ದಲ್ಲಿ ಬರೆದಿದ್ದೆ. ಅದು ಈ ಬಾರಿ COP28 ಹವಾಮಾನ ಬದಲಾವಣೆ ಸಮಾವೇಶದಲ್ಲಿ ಮತ್ತಷ್ಟು ಸ್ಪಷ್ಟವಾಗಿದೆ. ನಿನ್ನೆ ಶುಕ್ರವಾರ ಸಮಾವೇಶದಲ್ಲಿ ಚರ್ಚೆಗೆ ಬಂದ ಮುಖ್ಯ ವಿಷಯ ಭೂಮಿಯ ತಾಪಮಾನವನ್ನು ಏರಿಸುತ್ತಿರುವ ಆಹಾರ ಪದ್ಧತಿ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
ನವೆಂಬರ್ ತಿಂಗಳು ಮುಗಿಯಿತು. ಕನ್ನಡಿಗರು ತಮ್ಮ ನಾಡ ಹಬ್ಬ ಕನ್ನಡ ರಾಜ್ಯೋತ್ಸವ ಮತ್ತು ಬೆಳಕಿನ ದೀಪಾವಳಿ ಹಬ್ಬಗಳನ್ನು ಆಚರಿಸಿ ನಲಿದಾಡಿದರು. ಭಾರತದಲ್ಲಿ ವಿಶ್ವ ಕಪ್ ಕ್ರಿಕೆಟ್ ಪಂದ್ಯಗಳು ನಡೆದು ಅತ್ತಿದ್ದು, ನಕ್ಕಿದ್ದು ಆಯ್ತು. ಬೆಂಗಳೂರಿನಲ್ಲಿ ಸೆಕೆ, ಧಗೆ, ಮಳೆಗಳ ಅವಾಂತರವಿದ್ದಂತೆಯೇ ನಮ್ಮ ರಾಣಿರಾಜ್ಯದಲ್ಲೂ ಬಿಸಿಲು, ತೀವ್ರ ಉಷ್ಣತೆ ಕಾಡಿದೆ. ಜೊತೆಜೊತೆಗೆ ಅಪರೂಪದ ಮಳೆಯೂ ಸಾಕಷ್ಟು ಬಿದ್ದಿದೆ. ಖಂಡಿತವಾಗಿಯೂ ಇದು ಆಸ್ಟ್ರೇಲಿಯಾದ ಬೇಸಿಗೆಯ ಸೂಚನೆಗಳು ಅನ್ನೋದರಲ್ಲಿ ಸಂಶಯವೇ ಇಲ್ಲ. ಬಿಸಿಲು-ಮಳೆ-ಚಂಡಮಾರುತ ಇದ್ದರೇನೇ ನಮ್ಮಲ್ಲಿ ಬೇಸಿಗೆ! ಅಂದ ಹಾಗೆ ಇಲ್ಲಿ ಡಿಸೆಂಬರ್ ತಿಂಗಳಿಂದ ಫೆಬ್ರವರಿ ತಿಂಗಳವರಗೆ ಬೇಸಿಗೆ. ನಮ್ಮ Down Under ಪಾತಾಳಲೋಕದಲ್ಲಿ ಋತುಗಳೆಲ್ಲ ಉಲ್ಟಾಪಲ್ಟಾ!
ಒಳ್ಳೆ ಗಾಢ ಬಿಸಿಲಿನ ಜೊತೆ ಮಳೆ ಸೇರಿಕೊಂಡು ಎರಡರ ಜುಗಲ್ ಬಂದಿ ನಡೆದಿದೆ ಎಂದರೆ ನಿಮಗೆ ಗೊತ್ತಲ್ಲಾ, ಎಲ್ಲೆಲ್ಲೂ ಹಸಿರು ಬಣ್ಣದೋಕುಳಿ! ಹಿಂದಿನ ಎಲ್ಲಾ ಬೇಸಿಗೆಗಳನ್ನೂ ಸೋಲಿಸಿ ಈ ಬಾರಿ ತೀವ್ರ ಉಷ್ಣದ ಅಲೆಗಳು (heatwaves) ಮೆರೆದಾಡಲಿವೆ, ಜೋಪಾನವಾಗಿರಿ, ಎನ್ನುವ ಸರಕಾರದ ಸುದ್ದಿ ಕೇಳಿ ನಾವೆಲ್ಲಾ ಕಂಗಾಲಾಗಿರುವಾಗ ಈ ಹಸಿರಿನ ಪದರಗಳು ನಮ್ಮ ಕಣ್ಣರಳಿಸಿವೆ. ಮನಸ್ಸು ಹಿತವಾಗಿದೆ.
ಅದೇನು ಬಣ್ಣಬಣ್ಣದ ಹಸಿರು ಅಂತೀರಾ! ಎಳೆ, ತಿಳಿ, ತೆಳು, ಹಗುರ, ಮಂದ್ರ, ಲಘು, ಮಂದ ಹಸಿರಿನಿಂದ ಹಿಡಿದು ಗಾಢ, ದಪ್ಪದ, ದಟ್ಟ, ಗಟ್ಟಿ, ಒತ್ತಾದ ಕಡು ಹಸಿರು ಬಣ್ಣ ಛಾಯೆಗಳ ರಂಗಿನೋಕುಳಿ. ಅದನ್ನು ಹೊತ್ತ ಹುಲ್ಲು, ಗಿಡ, ಸಸಿ, ಬಳ್ಳಿ, ಮರ, ಎಲೆ, ಕೊಂಬೆ-ಟೊಂಗೆಗಳಲ್ಲಿ ಅದೆಷ್ಟು ಸೌಂದರ್ಯ ತುಂಬಿದೆ ಎಂದರೆ ಅಷ್ಟೆಲ್ಲಾ ಛಾಯೆಗಳನ್ನು ಗಮನಿಸುತ್ತಾ, ಅವನ್ನು ಆಸ್ವಾದಿಸುವುದರಲ್ಲೇ ಗಂಟೆಗಳು ಕಳೆದುಹೋಗುತ್ತವೆ. ಇದಕ್ಕೆಲ್ಲಾ ಇಂಬು ಕೊಡುವಂತೆ ಬಣ್ಣಬಣ್ಣದ ಹೂ ರಾಶಿ ತುಂಬಿಕೊಂಡಿದೆ. ಆಸ್ಟ್ರೇಲಿಯಾದಲ್ಲಿ ಡಿಸೆಂಬರ್ ಕಾಲಿಟ್ಟಿತೆಂದರೆ ನಿಸರ್ಗವು ತನ್ನಲ್ಲಿನ ಸ್ವರ್ಗದ ವಿಶೇಷ ಬಾಗಿಲನ್ನು ತೆರೆಯಿತೇನೋ ಎನ್ನುವಂತೆ ಭಾಸವಾಗುತ್ತದೆ. ಸೃಷ್ಟಿಯ ಸೊಬಗನ್ನು ತೋರುತ್ತಾ ಬಣ್ಣಗಳ, ದುಂಬಿಗಳ, ಜೇನ್ನೊಣಗಳ, ಚಿಟ್ಟೆಗಳ, ಹಕ್ಕಿಗಳ ಸಾಲುಸಾಲು ತೇರುಗಳು ಹೊರಟಿವೆ.
ಹಾಗೆ ಪ್ರಕೃತಿ-ಸ್ವರ್ಗದ ಭಾವ ಹೆಚ್ಚುವುದು ಮನೆಮಟ್ಟಿಗೆ ಕೈತೋಟ ಮಾಡಿರುವವರಲ್ಲಿ, ಸಣ್ಣಪುಟ್ಟ ತೋಟವಿರುವವರಲ್ಲಿ. ಆಸ್ಟ್ರೇಲಿಯಾ ಪೂರ್ತಿ ಕೈತೋಟಿಗರ ವಿವಿಧ ‘ಗಾರ್ಡನಿಂಗ್ ಗ್ರೂಪ್’ ಗಳು ಹರಡಿಕೊಂಡಿವೆ. ಇವರೆಲ್ಲಾ ಸದಾ ಕಾಲ ಮಾತನಾಡುವುದು ಏನು ಬೆಳೆಯುವುದು, ಹೇಗೆ ಬೆಳೆಯುವುದು ಎನ್ನುವುದರ ಬಗ್ಗೆ. ದೇಶದ ರಾಜ್ಯಗಳಲ್ಲಿ ಇರುವ ತರಾವರಿ ಹವಾಮಾನಕ್ಕೆ ತಕ್ಕಂತೆ, ಅಲ್ಲಿನ ಮಣ್ಣಿಗೆ ಹೊಂದುವ ತರಕಾರಿ, ಹಣ್ಣು, ಹರ್ಬ್ಸ್, ತಿನ್ನಲು ಅರ್ಹವಾದ ಹೂಗಳು, ಇತ್ಯಾದಿ ಬೆಳೆಯುವುದು ಸುಲಭದ ಮಾತಲ್ಲ.
ಕೈತೋಟಿಗರ ಸಾಹಸಗಳಿಗೆ, ಪೇಚಾಟಕ್ಕೆ, ಪ್ರಶ್ನೆಗಳಿಗೆ ಸಾಕ್ಷಿಯಾಗುವುದು ಗಾರ್ಡನಿಂಗ್ ಗ್ರೂಪ್‌ಗಳು. ಫೇಸ್ ಬುಕ್, ಮೆಸೆಂಜರ್, ವಾಟ್ಸಾಪ್ ಇತ್ಯಾದಿ ಸಾಮಾಜಿಕ ತಾಣಗಳಲ್ಲಿ ಹುಟ್ಟುವ ಈ ಗುಂಪುಗಳು ಸಮುದಾಯಗಳ ಹಸಿರುಕಣ್ಣುಗಳು. ಮನೆಮಟ್ಟಿಗೆ ಆಹಾರ ಬೆಳೆಯಲು ಪ್ರೋತ್ಸಾಹ ಕೊಡುವ ಈ ಗುಂಪುಗಳ ಸದಸ್ಯರು ಪರಸ್ಪರ ಬೆಂಬಲ ಮತ್ತು ಸಹಕಾರ ಕೊಡುತ್ತಾ ಒಬ್ಬರಿಗೊಬ್ಬರು ನೆರವಾಗುತ್ತಾರೆ. ತರಕಾರಿ ಬೆಳೆಯುವ ಆಲೋಚನೆಯಿಟ್ಟುಕೊಂಡು ಸದಸ್ಯರಾಗುವ ಜನರು ಬರುಬರುತ್ತಾ ಸ್ನೇಹಿತರಾಗಿ, ಅವರಲ್ಲಿ ಆಗಾಗ ಆಪ್ತಸಮಾಲೋಚನೆ ಕೂಡ ನಡೆಯುತ್ತದೆ. ಕ್ರಮೇಣ ಕೈತೋಟಿಗರ ಗಮನ ಆಸ್ಟ್ರೇಲಿಯನ್ ಬುಷ್ ಟಕರ್ (bushtucker) ಅಂದರೆ ಅಬೊರಿಜಿನಲ್ ಜನರ ಆಹಾರವಾಗಿದ್ದ ಸ್ಥಳೀಯ ಹಣ್ಣುಗಳು, ಹರ್ಬ್ಸ್, ಗೆಡ್ಡೆಗೆಣಸುಗಳು, ತರಕಾರಿಗಳತ್ತ ಹರಿಯುತ್ತಿದೆ.
ಈ ವಾರಾಂತ್ಯ ದುಬೈನಲ್ಲಿ ನಡೆಯುತ್ತಿರುವ COP28 ಹವಾಮಾನ ಬದಲಾವಣೆ ಸಮಾವೇಶದಲ್ಲಿ ಬ್ರಿಟನ್ನಿನ ರಾಜ ಮೂರನೇ ಚಾರ್ಲ್ಸ್ ಹೇಳಿರುವಂತೆ ನಾವು ಮನುಷ್ಯರು ಪ್ರಕೃತಿಯ ಮೇಲೆ, ಜೀವಜಾಲದ ಬಗ್ಗೆ ಬಹು ಅಪಾಯಕಾರಿ ಪ್ರಯೋಗಗಳನ್ನು ಮಾಡುತ್ತಿದ್ದೀವಿ. ಹವಾಮಾನ ಬದಲಾವಣೆಯ ದುಷ್ಪರಿಣಾಮಗಳು ನಮ್ಮನ್ನು ಕಾಡುತ್ತಿವೆ. ಅವರ ಮಾತು ಹೊಸತೇನಲ್ಲ. ಈ ಮಾತುಗಳನ್ನು ಹಲವಾರು ವರ್ಷಗಳಿಂದ ಕೇಳುತ್ತಲೇ ಬಂದಿದ್ದೀವಿ. ಪ್ರಕೃತಿಯ ಮೇಲೆ ನಡೆಯುತ್ತಿರುವ ಪ್ರಯೋಗಗಳು ಇವತ್ತಿನವಲ್ಲ. ಜಾಗತಿಕ ತಾಪಮಾನ ಏರುತ್ತಾ ಬಂದಿರುವುದು ನಿನ್ನೆಮೊನ್ನೆ ನಡೆದಿದ್ದಲ್ಲ. ಕೈಗಾರೀಕರಣದಿಂದ ಆರಂಭವಾದ, ಸಹಜ ಪ್ರಕೃತಿಗೆ ಧಕ್ಕೆ ತರುವ ಮಾನವ ಕೃತ್ಯಗಳು ಅವ್ಯಾಹತವಾಗಿ ನಡೆದಿವೆ. ಭೂಮಿಯೊಳಗಿನಿಂದ ಅಗೆದು ಬಗೆದು ಇಂಧನವನ್ನು ಉತ್ಪಾದಿಸಿ ಅದನ್ನು ವಿಪರೀತವಾಗಿ ಬಳಸುವುದು, ಭೂಮಿಯ ವಾತಾವರಣದಲ್ಲಿನ ಉಷ್ಣವನ್ನು ಏರಿಸುತ್ತಿರುವ ಮಾನವ ಚಟುವಟಿಕೆಗಳು ಶತಮಾನಗಳಿಂದ ನಡೆದಿದ್ದರೂ ಕಳೆದ ದಶಕಗಳ ಚಟುವಟಿಕೆಗಳು ಇನ್ನಿಲ್ಲದಷ್ಟು ಹಾನಿ ಮಾಡಿವೆ.
ಅವಕ್ಕೆ ಮೂಗುದಾರ ಹಾಕಲು ಪ್ರಯತ್ನಿಸಿ ಹರಸಾಹಸ ನಡೆದಿದ್ದರೂ ‘ಆಧುನಿಕತೆ’ ಮತ್ತು ‘ಪ್ರಗತಿ’ ಗಳಲ್ಲಿ ಅತೀವ ಆಸಕ್ತಿಯಿರುವ ಪಾಶ್ಚಾತ್ಯ ದೇಶಗಳ ಬಂಡವಾಳಶಾಹಿ ವ್ಯವಸ್ಥೆಗಳು ಅಂತಹ ಪ್ರಯತ್ನಗಳಿಗೆ ಇಂಬು ಕೊಡುವುದಿಲ್ಲ. ಉದಾಹರಣೆಗೆ ನೋಡಿ, ಅತ್ತ ಬ್ರಿಟನ್ನಿನಲ್ಲಿ ಪರಿಸರಕ್ಕೆ ಧಕ್ಕೆ ತರುವ ಕಲ್ಲಿದ್ದಲು ಇಂಧನ ಉತ್ಪತ್ತಿಗೆ ಬೆಂಬಲವು ಹೆಚ್ಚಾಗಿದೆ. ಇತ್ತ ನಮ್ಮ ಆಸ್ಟ್ರೇಲಿಯಾದಲ್ಲಿ ದೇಶೀಯ ಮಟ್ಟದಲ್ಲಿ ತೀವ್ರ ಹವಾಮಾನ ಬದಲಾವಣೆಯನ್ನು ತಡೆಗಟ್ಟುವ ಬಗ್ಗೆ ನಿಖರವಾದ ಮಾತುಗಳು ಇನ್ನೂ ಗಾಳಿಯಲ್ಲೇ ತೇಲಾಡುತ್ತಿವೆ. ದೇಶದ ಅತ್ಯಂತ ದೊಡ್ಡಪ್ರಮಾಣದ ಆರ್ಥಿಕ ಚಟುವಟಿಕೆಯಾದ ಗಣಿಕಾರಿಕೆ ಅವ್ಯಾಹತವಾಗಿ ಸಾಗಿದೆ. ನಿಲ್ಲಿಸುವ ಮಾತೇ ಇಲ್ಲ. ಪರ್ಯಾಯ ಆಲೋಚನೆಗಳಿಗೆ ಒಮ್ಮತವಿಲ್ಲ.
ಎಲ್ಲರ ಜಗಳದಲ್ಲಿ ಬಡವಾಗಿರುವುದು ನಾವೇ ನಾವು, ಸಾಮಾನ್ಯರು. ಏಕೆಂದರೆ ನಾವು ಪ್ರಕೃತಿಯ ಭಾಗವಲ್ಲವೇ! ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರ ಬೆಳೆಯುವ ಮಣ್ಣಿಗೆ ಅನಾರೋಗ್ಯವುಂಟಾದರೆ ನಮ್ಮ ಆರೋಗ್ಯವೂ ಕೆಡುತ್ತದೆ ಎಂದು ಕಳೆದ ‘ಆಸ್ಟ್ರೇಲಿಯಾ ಪತ್ರ’ದಲ್ಲಿ ಬರೆದಿದ್ದೆ. ಅದು ಈ ಬಾರಿ COP28 ಹವಾಮಾನ ಬದಲಾವಣೆ ಸಮಾವೇಶದಲ್ಲಿ ಮತ್ತಷ್ಟು ಸ್ಪಷ್ಟವಾಗಿದೆ. ನಿನ್ನೆ ಶುಕ್ರವಾರ ಸಮಾವೇಶದಲ್ಲಿ ಚರ್ಚೆಗೆ ಬಂದ ಮುಖ್ಯ ವಿಷಯ ಭೂಮಿಯ ತಾಪಮಾನವನ್ನು ಏರಿಸುತ್ತಿರುವ ಆಹಾರ ಪದ್ಧತಿ. ಅಂದರೆ, ನಾವು ತಿನ್ನುತ್ತಿರುವ ಆಹಾರ, ಅದನ್ನು ಬೆಳೆಯುತ್ತಿರುವ ವಿಧಾನಗಳು. ಇದು ನಮಗೆಲ್ಲರಿಗೂ, ನಮ್ಮ ದಿನನಿತ್ಯದ ಜೀವನದಲ್ಲಿ ಸಲ್ಲುವ ಚರ್ಚೆ ಮತ್ತು ವಿಷಯ.
ನಮ್ಮ ಆಹಾರವನ್ನು ಹೇಗೆ ಬೆಳೆಯಬೇಕು, ಯಾವ್ಯಾವ ಆಹಾರಗಳನ್ನು ಬೆಳೆಯಬೇಕು ಎನ್ನುವುದು ಆಸ್ಟ್ರೇಲಿಯಾ ಮಟ್ಟಿಗೆ ಬಹಳ ಮುಖ್ಯವಾದದ್ದು. ಏಕೆಂದರೆ ಇದು ವಸಾಹತುಶಾಹಿಗಳ ನೆಲೆಸುವಿಕೆಯಿಂದ ಸಂಪೂರ್ಣವಾಗಿ ಬದಲಾದ ಖಂಡ-ದೇಶ. ಧರಿಸುವ ಉಡುಗೆ-ತೊಡುಗೆಗಳಿಂದ ಹಿಡಿದು, ಮಾತನಾಡುವ ಭಾಷೆ, ಆಚರಿಸುವ ಸಂಸ್ಕೃತಿಗಳು, ಕಲಿಯುವ ಶಿಕ್ಷಣ, ಉದ್ಯೋಗ, ಆರೋಗ್ಯ, ಸಂವಿಧಾನ, ನ್ಯಾಯ ನಿರ್ಣಯ ಪದ್ಧತಿಗಳು ಎಲ್ಲವೂ ಆಂಗ್ಲ-ಕೇಂದ್ರಿತವಾದ್ದವು. ವಸಾಹತುಶಾಹಿಗಳು ಬರುವ ಮುನ್ನ ಇದ್ದಿದ್ದ ಅಬೊರಿಜಿನಲ್ ಜನರ ಆಹಾರ ಪೈಕಿ, ಬೆಳೆಯುವಿಕೆ ವಿಧಾನ ಎಲ್ಲವೂ ನಿರ್ನಾಮವಾಗಿದ್ದವು. ಅಬೊರಿಜಿನಲ್ ಜನರು ಸಾವಿರಾರು ವರ್ಷಗಳ ಪ್ರಯತ್ನಗಳಿಂದ ರೂಢಿಸಿಕೊಂಡಿದ್ದ, ಈ ಖಂಡ-ದೇಶದ ನೆಲಕ್ಕೆ, ಮಣ್ಣಿಗೆ ತಕ್ಕುದಾದ ಆಹಾರಗಳು ಮಾಯವಾದವು.
ಈ ಹಿನ್ನೆಲೆಯಲ್ಲಿ COP28 ಸಮಾವೇಶದಲ್ಲಿ ೧೩೦ ದೇಶಗಳ ಮುಖಂಡರು ‘ಆಹಾರ’ ವಿಷಯದ ಬಗ್ಗೆ ಗಮನ ಹರಿಸಿದ್ದು ಸಮಯೋಚಿತವಾಗಿದೆ. ನೆಲವನ್ನು ನೋಯಿಸುವ, ಮಣ್ಣಿಗೆ ಘಾತವನ್ನುಂಟು ಮಾಡುವ ರಾಸಾಯನಿಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಲಾಭದ ದೃಷ್ಟಿಯಿಂದ ಆಹಾರವನ್ನು ಬೆಳೆಯುವುದು ನಿಲ್ಲಬೇಕು. ನಮ್ಮನಮ್ಮಲ್ಲಿನ ದುರಾಸೆಯನ್ನು, ‘ನಾನು-ಕೇಂದ್ರಿತ’ ಮನೋಭಾವನೆಯನ್ನು ಬಿಟ್ಟುಕೊಟ್ಟು ಎಲ್ಲರಿಂದ ಎಲ್ಲರಿಗಾಗಿ ಆಹಾರವನ್ನು ಬೆಳೆಯಬೇಕು. ನಾವು ಅವಲಂಬಿತರಾಗಿರುವ ಮಣ್ಣಿನ ಹಿತಕ್ಕಾಗಿ, ನೆಲದ ಕ್ಷೇಮಕ್ಕಾಗಿ, ಈ ಭೂಮಿಯ ಪರವಾಗಿ ನಾವು ಆಹಾರವನ್ನು ಬೆಳೆಯಬೇಕು. ನಮ್ಮ ಆಹಾರ ಒಂದು ಉತ್ಪಾದನಾ ವಸ್ತುವಲ್ಲ, ಅದು ನಮ್ಮಲ್ಲಿನ, ನಮ್ಮ ಜೀವಜಾಲದ ಒಂದು ಜೀವಂತ ಭಾಗ ಎನ್ನುವುದು ಮನದಟ್ಟಾಗಬೇಕು. ಹೀಗೆಲ್ಲಾ ಮಾತನಾಡುವುದು ನಮ್ಮ ‘ಗಾರ್ಡನಿಂಗ್ ಗ್ರೂಪ್’ ಕೈತೋಟಿಗರ ದಿನನಿತ್ಯ ಜೀವನವಾಗಿದೆ. ನಮ್ಮ ಆಹಾರ ನಮ್ಮ ಸಮುದಾಯದ ಹಸಿರುಕಣ್ಣು!
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.