ಇದ ಒಂದ ಎರಡ ತಿಂಗಳ ಹಿಂದಿನ ಮಾತ ಇರಬೇಕ ಒಂದ ದಿವಸ ಮುಂಜ-ಮುಂಜಾನೆ ನಮ್ಮ ಮನ್ಯಾ ಫೋನ ಮಾಡಿದಾ. ಹಂಗ ಅಂವಾ ಜಾಸ್ತಿ ಆನಲೈನ ಚಾಟಿಂಗ ಒಳಗ ಸಿಕ್ಕಿರತಾನ ಹಿಂಗಾಗಿ ಫೋನ ಮಾಡೋದ ಕಡಮಿ ಆದರೂ ಯಾಕ ಫೋನ್ ಮಾಡಿದಾ ಅಂತ ಅನ್ಕೋತ ಫೋನ ಎತ್ತಿದೆ.
“ಲೇ, ಆಡ್ಯಾ ನಾ ಹೇಳೋದ ಕೇಳ ಇಲ್ಲೆ, ಒಂದ ಭಾರಿ ಸಿರಿಯಸ್ ವಿಷಯ ಮಾತೊಡದ ಅದ ನಿನ್ನ ಜೊತಿ. ಸಂಜಿಗೆ ಫ್ರೀ ಇರ, ನಾ ಹುಬ್ಬಳ್ಳಿಗೆ ಬಂದೇನಿ, ಭೆಟ್ಟಿ ಆಗಿ ಮಾತಾಡೋಣು” ಅಂತ ಹೇಳಿ ಫೋನ ಇಟ್ಟ ಬಿಟ್ಟ. ಇವಂದೇನಪಾ ಹಂತಾ ವಿಶೇಷ ಅಂತ ನಾ ವಿಚಾರ ಮಾಡಲಿಕತ್ತೆ, ಹಂಗ ಇಂವಾ ನನ್ನ ಕಿಂತಾ ಎರಡ ವರ್ಷಕ್ಕ ಸಣ್ಣಂವಾ, ಇನ್ನು ಮದುವಿ ಅಂತೂ ಆಗಿಲ್ಲಾ. ಯಾಕ ಆಗಿಲ್ಲಾ ಅನ್ನೋದಕ್ಕ ಕಾರಣ ’ನಮ್ಮ ಮಂದ್ಯಾಗ ಕನ್ಯಾ ತೀರಿ ಹೋಗ್ಯಾವ’ ಅನ್ನೋದೇನ ಅಲ್ಲ ಮತ್ತ. ಹಂಗ ನಮ್ಮ ಮಂದ್ಯಾಗ ಕನ್ಯಾ ತಳಕ್ಕ ಹತ್ತಿದ್ದರು ಇವಂಗ ಸಿಕ್ಕ ಸಿಗ್ತಿದ್ವು, ಯಾಕಂದರ ಈ ಮಗಂದ ದೊಡ್ಡ ನೌಕರಿ, HDFC Bank ಒಳಗ ರಿಲೇಶನ್ ಶಿಪ್ ಮ್ಯಾನೇಜರ್ ಅಂತ ಕೆಲಸ, ಏನಿಲ್ಲಾಂದರೂ ತಿಂಗಳಿಗೆ ಒಂದ ೭೦-೮೦ ಸಾವಿರ ರೂಪಾಯಿ ಪಗಾರದಂವಾ. ಇನ್ನ ಹಂತಾವಂದೂ ಯಾಕ ಲಗ್ನಾ ಆಗಿದ್ದಿಲ್ಲಾ ಅನ್ನಲಿಕ್ಕೆ ಕಾರಣ ಏನಪಾ ಅಂದರ ಈ ಮಗಾ ಹಿಂದಕ ರವಿನಗರದಾಗ ಇದ್ದಾಗ ಒಂದ ಲಿಂಗಾಯತರ ಹುಡಗಿಗೆ ಲೈನ ಹೊಡಿತಿದ್ದಾ ಮುಂದ ಅಕಿನ್ನ ಪಟಾಯಿಸಿ, ಮಾಡ್ಕೊಂಡರ ಅಕಿನ್ನ ಮಾಡ್ಕೋತೇನಿ ಅಂದು ತನ್ನ ಪಟಪಟ್ಟಿ ಮ್ಯಾಲೆ ಊರೇಲ್ಲಾ ಕರಕೊಂಡ ಅಡ್ಡಾಡೊದ ಎಲ್ಲಾ ಮುಗದಿತ್ತ ಆದರ ಮನ್ಯಾನ ಅವ್ವಾ ಇವಂಗ ಅಡ್ಡಗಾಲ ಹಾಕಿ ಬಿಟ್ಲು, ಇರೋಂವ ಒಬ್ಬ ಮಗಾ ಇದ್ದಿ, ಹಂತಾವ ಲಿಂಗಾಯತ ಹುಡಗಿನ್ನ್ ಮಾಡ್ಕೋತಿ ಏನ? ನಾ ಜೀವಂತ ಇರೋತನಕ ಅದ ಸಾಧ್ಯನ ಇಲ್ಲಾ ಅಂತ ಕೂತ ಬಿಟ್ಟಳು.
ಇಂವಾ ನಾ ಮಾಡ್ಕೊಂಡರ ಅಕಿನ್ನ ಮಾಡ್ಕೋತೇನಿ ಅಂತ ಹಟಾ ಹಿಡದ ಕೂತಾ, ಪಾಪ ಆ ಹುಡಗಿ ಕಾದ ಕಾದ್ಲು. ಇತ್ತಲಾಗ ಅವರವ್ವ ಸಾಯಿಲಿಲ್ಲಾ, ಈ ಮಗಾ ಅಕಿನ್ನ ಕಟಗೊಳಿಲ್ಲಾ, ಇನ್ನ ನಾ ಹಂಗ ಕೂತರ ಮುಂದ ನನ್ನ ಗತಿ ಏನ ಅಂತ ಅಕಿ ಬ್ಯಾರೆ ಯಾರನೊ ಕಟಗೊಂಡ ಹುಬ್ಬಾಳ್ಳ್ಯಾಗ ಸಂಸಾರ ಹೂಡಿದ್ಲು. ಇವಂಗರ ಅಕಿನ್ನ ಮರಿಲಿಕ್ಕೆ ಆಗತಿದ್ದಿಲ್ಲಾ, ಆದರ ಅಕಿ ಭಾಳ ಪ್ರ್ಯಾಕ್ಟಿಕಲ್ ಇದ್ದಳು, ’ಆತ, ಇಷ್ಟ ದಿವಸ ಇಬ್ಬರೂ ಕೂಡೆ ಅಡ್ಡಾಡಿದ್ವಿ, ಎಂಜಾಯ ಮಾಡಿದ್ವಿ, ನಾ ಅಂತೂ ಮದ್ವಿಗೂ ತಯಾರಿದ್ದೆ, ನಮ್ಮ ಮನ್ಯಾಗೂ ಏನ ಪ್ರಾಬ್ಲೇಮ ಇದ್ದಿದ್ದಿಲ್ಲಾ, ಆದರ ನೀನ ತಯಾರಿಲ್ಲಾ, ನಾನರ ಏನ ಮಾಡ್ಲಿ, ನಂದ ವಯಸ್ಸ ಹೋಗ್ತದ, ಇನ್ನ ಮುಂದ let us be friends’ ಅಂತ ಕೈ ಕೊಟ್ಟ, ಮುಂದ ಅದ ಕೈಯಾಗ ಲಗ್ನ ಪತ್ರ ಕೊಟ್ಟ ಹೋಗಿ ಬಿಟ್ಲು. ಅಕಿದ ಏನ ಕಾಲಗುಣಾನೊ ಏನೋ ಅಕಿ ಇವನ ಲೈಫನಾಗಿಂದ ಕಾಲತಗಿಯೊದಕ್ಕು ಅವರವ್ವ ಒಂದ ದಿವಸ ಕೂತ ಕೂತಲ್ಲೇ ಗೊಟಕ್ ಅಂದ ಬಿಟ್ಟಳು, ಅಷ್ಟರಾಗ ಅತ್ತಲಾಗ ಆ ಹುಡಗಿ ಲಗ್ನಾ ಮಾಡ್ಕೊಂಡ ಎರಡ ಸರತೆ ರೆಗ್ಯುಲರ ಚೆಕ ಅಪ್ ಗೆ ಗೈನಾಕಲಜಿಸ್ಟ ಕಡೆ ಹೋಗಿ ಬಂದಿದ್ಲು.
ಈ ಮಗಾ ಫುಲ್ ಮಾನಸಿಕ ಆಗಿ ಬಿಟ್ಟ, ಏನಿಲ್ಲದ ಆವಾಗ- ಇವಾಗ ಥರ್ಟಿ- ಸಿಕ್ಸ್ಟಿ ಹಾಕೊಂವಾ ತೊಗೊ ಈಗ ಥರ್ಟಿ ಕಮ್ಮಿ ಕ್ವಾರ್ಟರಗೆ ಬಂದ ಬಿಟ್ಟಾ, ಇನ್ನ ಇಂವಾ ಹಿಂಗs ಹೊಂಟರ ಹಳ್ಳಾ ಹಿಡಿತಾನ ಅಂತ ಅವರ ಅಕ್ಕಾ ಅವಂಗ ನೀ ಬೆಂಗಳೂರಿಗೆ ಟ್ರಾನ್ಸಫರ ತೊಗೊಂಡ ಬಾ ಅಂತ ಇಲ್ಲಿಂದ ಎಬಿಸಿಗೊಂಡ ಹೋದ್ಲು. ಹಂಗ ಅಲ್ಲೇ ಹೋದ ಮ್ಯಾಲೆ ಅಂವಾ ಸುಧಾರಿಸಿದಾ ಅನ್ನೊದಕಿಂತ ಅವಂಗ ಬ್ಯಾರೆ ಕಡೇ ಲಕ್ಷ ಕೊಡಲಿಕ್ಕೆ ಟೈಮ ಇರತಿದ್ದಿಲ್ಲಾ, ಬ್ಯಾಂಕಿನಾಗ ಪ್ರಮೋಶನ್ ಸಿಕ್ಕ ಮ್ಯಾನೇಜರ ಆದ, ಗಾಡಿ ಹೋಗಿ ಕಾರ ಬಂತು, ಮುಂದ ಒಂದ ಪ್ಲ್ಯಾಟ ಬ್ಯಾರೆ ತೊಗೊಂಡಾ, ಒಟ್ಟ ಆರಾಮ ಇದ್ದಾ, ಹಂಗ ಆ ಹುಡಗಿನ್ನ ಲಗಭಗ ಮರತಂಗ ಆಗಿತ್ತ, ಅದರಾಗ ಅಂವಾ ಹುಬ್ಬಳ್ಳಿಗೆ ಬರೋದ ಕಡಿಮೆ ಆಗಿತ್ತ, ನಾವು ಅವಂಗ ಮದವಿ ವಿಷಯ ತಗಿಲಿಕ್ಕೆ ಹೋಗ್ತಿದ್ದಿಲ್ಲಾ, ಎಲ್ಲೆ ಮದುವಿ ಅಂದರ ಅಂವಾ ಮತ್ತ ಫ್ಲ್ಯಾಶ್ ಬ್ಯಾಕಿಗೆ ಹೋಗಿ ಮಾನಸಿಕ ಆಗ್ತಾನ ಅಂತ ಆ ಹಳೆ ಹುಡಗಿ ಬಸರಿದ್ದಿದ್ದು-ಹಡದಿದ್ದು ಏನು ಅವನ ಮುಂದ ಹೇಳಲಿಕ್ಕೆ ಹೋಗಲಿಲ್ಲಾ.
ಇನ್ನ ಇವತ್ತ ಅಂವಾ ಹುಬ್ಬಳ್ಳಿಗೆ ಬಂದ ನನ್ನ ಜೊತಿ ಸಿರಿಯಸ್ ಮಾತೋಡದ ಅದ ಅಂತಾನ ಅಂದ ಕೂಡಲೇ ನಾ ಒಂದ ಸ್ವಲ್ಪ ವಿಚಾರ ಮಾಡಲಿಕತ್ತೆ, ಮತ್ತೇಲ್ಲರ ಅಂವಾ ಹುಬ್ಬಳ್ಳಿ ಮಾಜಿನ್ನ ಫೇಸಬುಕನಾಗ ಕಂಟಾಕ್ಟ ಮಾಡಿ ಲಿಂಕ ಹಚಗೊಂಡ ಮತ್ತ ಅಕಿನ್ನ ತಲ್ಯಾಗ ತುಂಬ್ಕೊಂಡಾನೇನೋ ಅಂತ ಅನಸಲಿಕತ್ತ. ಅಲ್ಲಾ, ಈಗ ಒಂದ್ಯಾರಡ ಕೇಸ ಆಗ್ಯಾವ ನಮ್ಮ ಸರ್ಕಲನಾಗ ’ಲವ್ ಮಾಡಿದವನ ಬಿಟ್ಟ ಬ್ಯಾರೆವನ ಕಟಗೊಂಡ ಮುಂದ ಒಂದ ಹಡದ ಎರಡ ಮೂರ ವರ್ಷ ಆದಮ್ಯಾಲೆ ಮತ್ತ ಮಾಜಿದ ನೆನಪಾಗಿ, ಮತ್ತ ಲೈನ ಲಿಂಕ ಮಾಡ್ಕೊಂಡ ಕಡಿಕೆ ಎರಡು ಕಡೆ ಫ್ಯಾಮಿಲಿ ಹಳ್ಳಾ ಹಿಡದದ್ದ ನೋಡೇನಿ ಹಿಂಗಾಗಿ ನಂಗ ಡೌಟ ಬರಲಿಕತ್ತ.
ಇರಲಿ ಎದಕ್ಕ ಬಂದಾನ ಅಂಬೋದ ಸಂಜಿಗೆ ಗೊತ್ತಾಗೆ ಆಗ್ತದ ತೊಗೊ ಅಂತ ಸುಮ್ಮನಾದೆ. ಸಂಜಿಗೆ ಇಬ್ಬರು ಭೆಟ್ಟಿ ಆದವಿ, ಫರ್ಮಾಲಿಟಿಗೆ ನಿಮ್ಮ ಮನ್ಯಾಗ ಎಲ್ಲಾ ಆರಾಮ ಇದ್ದಾರ ಅದು-ಇದು ಅಂತ ನನಗ ಕೇಳಿದವನ ಸೀದಾ ಟಾಪಿಕಗೆ ಬಂದಾ.
’ದೋಸ್ತ ನಾ ಹೇಳೊದ ಈಗ ಸಿರಿಯಸ್ ಆಗಿ ಕೇಳ, ನಾ ನಮ್ಮ ಬ್ಯಾಂಕ ಒಳಗ ಒಂದ ಹುಡಗಿಗೆ ಲೈಕ ಮಾಡೇನಿ, she is from south canara, ಅಕಿನೂ ನನಗ ಲೈಕ ಮಾಡ್ತಾಳ, and we have decided to marry, ಮೊನ್ನೆ ಅಕ್ಕಾ-ಭಾವಗೂ ಕೇಳಿದೆ ಅವರು ’ಒಟ್ಟ ನೀ ಲಗ್ನ ಆಗಿ ಆರಾಮ ಇದ್ದರ ಆತಪಾ ನೀ ಯಾರನರ ಮಾಡ್ಕೊ’ ಅಂತ clearance ಕೊಟ್ಟಾರ. ಹುಡಗಿ ಪೇರೆಂಟ್ಸದ್ದು ಪ್ರಾಬ್ಲೇಮ ಏನಿಲ್ಲಾ’ ಅಂತ ಕಥಿ ಹೇಳಲಿಕ್ಕೆ ಶುರು ಮಾಡಿದಾ. ನಾ ಅಷ್ಟರಾಗ ಅಡ್ಡ ಬಾಯಿ ಹಾಕಿ “ಅಲ್ಲಲೇ, ಹುಡಗಿ ರಾಜಿ, ಅವರವ್ವಾ-ಅಪ್ಪಾ ರಾಜಿ, ನಿಮ್ಮಕ್ಕ ರಾಜಿ, ಮತ್ಯಾಕ ತಲಿಕೆಡಸಿಗೋತಿ, ಇದರಾಗ ಕ್ಲೈಮ್ಯಾಕ್ಸ ಎಲ್ಲೇ ಅದ” ಅಂತ ಅಂದೆ.
“ಲೇ, ನೀ ಪೂರ್ತಿ ಹೇಳೊದ ಕೇಳಲೆ, ನಾ ಬೆಂಗಳೂರಾಗ ರೆಜಿಸ್ಟರಡ್ ಮ್ಯಾರೇಜ್ ಮಾಡ್ಕೋಳೊಣು ಅಂದರ ಹುಡಗಿ ಪೇರೆಂಟ್ಸ್ ರೆಡಿ ಇಲ್ಲಾ, they are very traditional and landlords, so they want to perform ceremony in their native place, ಇನ್ನ ಅವರ ಊರಾಗ ಲಗ್ನಾ ಅಂದರ ನಮ್ಮ ಪೈಕಿ ಒಂದ ಹತ್ತಿಪ್ಪತ್ತ ಮಂದಿನ್ನ ಕರಕೊಂಡ ಹೋಗಬೇಕ”
“ಸರಿ, ಗಾಡಿ ಖರ್ಚ ಕೊಟ್ಟ ಕರಕೊಂಡ ಹೋಗ ಅದರಾಗೇನ” ಅಂತ ನಾ ಅಂದೆ.
“ಹಂಗ ಅಲ್ಲಲೇ, ಅವರ ತಮ್ಮ ಕಸ್ಟಮ್ಸ್ ಪ್ರಕಾರ ಮದುವಿ ಮಾಡೋರು, ಅದಕ್ಕ ನಮ್ಮ ಕಡೆ ಒಬ್ಬರ ಯಾರರ ಬೆಸ್ಟ ಮ್ಯಾನ ಬೇಕ… ಅದಕ್ಕ ನೀನಗ ಆ ಬೆಸ್ಟ ಮ್ಯಾನ ಅಂತ ಫಿಕ್ಸ್ ಮಾಡಲಿಕ್ಕೆ ಬಂದೇನಿ, ನಾ ಹೋಗೊ ಬರೋ ಗಾಡಿ ಖರ್ಚ ಕೊಡತೇನಿ ನೀ ಏನ ಕಾಳಜಿ ಮಾಡಬ್ಯಾಡ, ಎರಡ ದಿವಸ ರಜಾ ಹಾಕಿ ಬಾ, ಹಂಗ ಮ್ಯಾರೇಜ ಇರೋದ ಸಂಡೇನ ಅದ’ ಅಂತ ಅಂವಾ ಹೇಳಿದಾ.
“ಇದೇನ ಬೆಸ್ಟ ಮ್ಯಾನ ಅಂದರ ನಾ ಬೆಸ್ಟs ಇದ್ದೇನಿ, ನಿಂಗ ಒಟ್ಟ ಲಗ್ನಕ್ಕ ಒಂದಿಬ್ಬರ ಖಾಸ ದೋಸ್ತರ ಬರಬೇಕ ಹೌದಲ್ಲ, ನಾನು ರಾಘ್ಯಾ ಬರತೇವಿ ತೊಗೊ” ಅಂತ ನಾ ಅಂದರ.
“ಲೇ, ಹಂಗ ಬೆಂಗಳೂರಿಂದ ನಮ್ಮ ದೋಸ್ತರ ಬರ್ತಾರ ಆದರ ಮದುವಿಗೆ ಒಬ್ಬ ಖಾಸ ದೋಸ್ತ ಬೆಸ್ಟ ಮ್ಯಾನ ಆಗಬೇಕಂತ ಆ ಬೆಸ್ಟಮ್ಯಾನ ನೀನ” ಅಂದಾ. ನಂಗ ಸರಿ ತಿಳಿವಲ್ತಾಗಿತ್ತ, ಅದು ಅವಂಗ ಲಗೂನ ಅರ್ಥ ಆತ
“ಲೇ, ನಾ ಮಾಡ್ಕೋಳಿಕತ್ತಿದ್ದ ಕ್ರಿಶ್ಚನ್ನರ ಹುಡಗಿಗಲೇ.. ಅಕಿ ಹೆಸರ ಎಲಿಜಾಬೆಥ್ ಜಾನ್ ಡಿ’ಸಿಲ್ವಾ ಅಂತ, ಅವರ ಲಗ್ನ ಪದ್ದತಿ ಪ್ರಕಾರ ನಂಗ ಒಬ್ಬಂವ ಬೆಸ್ಟಮ್ಯಾನ ಬೇಕು, ಈಗರ ತಿಳಿತಿನ” ಅಂದಾ. ಓ.ಹೋ.. ಈಗ ಎಲ್ಲಾ ತಿಳಿತ ನೋಡ್ರಿ, ಈ ಮಗಾ ಮಾಡ್ಕೋಳಿಕತ್ತಿದ್ದ ಕ್ರಿಶ್ಚಿಯನ ಹುಡಗಿನ್ನ ಅದಕ್ಕ ಈಗ ದೋಸ್ತರ ನೆನಪಾಗಿ ಓಡಿ ಬಂದಾನ ಅಂತ ಗ್ಯಾರಂಟೀ ಆತ.
ಆದರು ಏನ ನಸೀಬ ಮಗಂದ ಅಂತೇನಿ, ಜೀವನದಾಗ ಎರಡೆರಡ ಪಟಾಯಿಸಿ ಲವ ಮಾಡಿದಾ, ನಮಗರ ಹದಿನಾಲ್ಕ ವರ್ಷ ಆದರೂ ಲಗ್ನಾ ಮಾಡ್ಕೊಂಡೋಕಿನ್ನ ಪಟಾಯಿಸಿ ಲವ ಮಾಡಲಿಕ್ಕೆ ಆಗವಲ್ತು. ಅಲ್ಲಾ, ಹಂಗ ಬ್ರಾಹ್ಮಣರಾಗ ಹುಡಗ್ಯಾರ ಇತರೆ ಜಾತಿ ಹುಡಗರ ಹಿಂದ ಬಿದ್ದ ಓಡಿ ಹೋಗೊದ ಭಾಳ ಕಾಮನ್ ಹಂತಾದರಾಗ ಇಂವಾ ಬ್ಯಾರೆ ಕಾಸ್ಟನೋಕಿನ ಲಗ್ನಾ ಮಾಡ್ಕೊಂಡ ನಮ್ಮ ಕಡೆ ಕರಕೊಂಡ ಬಂದನಲಾ ಅಂತ I felt proud about him, next time ಅವಂಗ ಬ್ರಾಹ್ಮಣರ ಅಧಿವೇಶನದಾಗ ಸನ್ಮಾನ ಮಾಡಬೇಕು ಅಂತ ಮೆಂಟಲಿ ನೋಟ ಮಾಡ್ಕೊಂಡೆ.
ಸರಿ, ಇನ್ನ ಖಾಸ ದೋಸ್ತ ಇಲ್ಲಾ ಅನ್ನಲಿಕ್ಕೆಂತೂ ಬರಂಗಿಲ್ಲಾ, ಆಮ್ಯಾಲೆ ಅವನ ಪರಿಸ್ಥಿತಿ ಎಲ್ಲಾ ಗೊತ್ತ ಇತ್ತ, ಹಿಂಗಾಗಿ ನಾ ಅವರವ್ವನ ಗತೆ ’ನಮ್ಮ ಜಾತಿ ಹುಡಗಿ ಅಲ್ಲಾ ಅಂದರ ನಾ ಲಗ್ನಕ್ಕ ಬರಂಗಿಲ್ಲಾ, ನೀ ಜಾತಿ ಭ್ರಷ್ಟ ಮಾಡಲಿಕತ್ತಿ, ನಮ್ಮ ಮಂದ್ಯಾಗ ಏನ ಕನ್ಯಾ ಸತ್ತಿದ್ವೇನ… ಹಂಗ ಹಿಂಗ’ ಅಂತ ನಾ ಏನೂ ಓದರಾಡಲಾರದ ಅವಂಗ all the best ಹೇಳಿ ಕಳಸಿದೆ. ಹಂಗ ನಾವೇನರ ಅಡ್ಡಗಾಲ ಹಾಕಬೇಕು, ಆಮ್ಯಾಲೆ ಅಂವಾ ’ಹಂಗರ ಕನ್ಯಾ ಹುಡಕ ಬ್ರಾಹ್ಮರದ’ ಅಂತ ಅಂದರ ನಾ ಏನ ಮಾಡಲಿ ಅಂತ ಸುಮ್ಮನಾದೆ.
ಮುಂದ ಒಂದ ದಿವಸ ಮೊದ್ಲ ಮೂಡಬಿದ್ರೆಗೆ ಹೋಗಿ ಲಗ್ನದಾಗ ಹೀರೇಮನಷ್ಯಾರಗತೆ ಅಡ್ಡಾಡಿ, ಕೇಕ್, ವೈನ ಹೊಡದ ಚರ್ಚ ಒಳಗ ಒಂದನೇ ಬೆಂಚ ಮ್ಯಾಲೆ ಕೂತ ಫಾದರ ಕಡೆ ನಾನು ಆಶೀರ್ವಾದ ತೊಗೊಂಡ ಬಂದೆ, ಸಂಜಿಗೆ ಡಿ’ಸಿಲ್ವಾ ಅಂಕಲ್ ತಮ್ಮ ತೋಟದ ಮನಿ ಒಳಗ ರಿಸೆಪ್ಶನ್ ಇಟಗೊಂಡಿದ್ದರ, ಮತ್ತ ಕೇಕ, ವೈನ..ಅಗದಿ ನಮಗ ಚಾಂದಿನ ಚಾಂದಿ, ಏನಿಲ್ಲದ ಕುಡಿಲಿಕ್ಕೆ ಸಿಕ್ಕರ ಕಂಡೇನೋ ಇಲ್ಲೊ ಅನ್ನೊರಂಗ ಮಾಡೋರು ಇನ್ನ್ ಹಿಂಗ ಪುಗಶೆಟ್ಟೆ ಇಂಪೋರ್ಟೆಡ್ ವೈನ ಸಿಕ್ಕರ ಬಿಡ್ತೀರಿ, ಬೀರ ಗತೆ ಗಟಾ- ಗಟಾ ಕುಡದಿದ್ದ ಕುಡದಿದ್ದ. ಅದರಾಗ ಮನ್ಯಾ ನನ್ನ ಬಗ್ಗೆ ಒಂದ ಸ್ವಲ್ಪ ಜಾಸ್ತಿನ ಬೀಗರ ಮನ್ಯಾಗ ಹೇಳಿದ್ದಾ ಕಾಣ್ತದ ಅವರೇಲ್ಲಾ ನಂಗ hey.. best man enjoy yourself ಅಂತ ಹೇಳಿ ಸಿಕ್ಕಾ ಪಟ್ಟಿ ಕಾಳಜಿ ತೊಗೊಂಡರು. ಖರೇ ಹೇಳ್ಬೇಕಂದರ ನನ್ನ ಖಾಸ ಬೀಗರ ಮನ್ಯಾಗ ಸಿಗಲಾರದಷ್ಟ ರಿಸ್ಪೇಕ್ಟ ಕೊಟ್ಟರು. ನಾ ಹಿಂಗ ಪಾರ್ಟಿ ಒಳಗ ಎಂಜಾಯ್ ಮಾಡಲಿಕತ್ತಿದ್ದೆ, ಅದರಾಗ ಅವರ ಮಂಗಳೂರಿಂದ ಆರ್ಕೆಸ್ಟ್ರಾ ಬ್ಯಾರೆ ತರಸಿದ್ದರು ಕೇಳ್ತಿರೇನ ಹಳೇ ಹಿಂದಿ ಹಾಡ ಕೇಳ್ಕೋತ ಕುಡದಿದ್ದ ಕುಡದಿದ್ದ. ಮುಂದ ಒಮ್ಮಿಂದೊಮ್ಮಿಲೆ ಆರ್ಕೆಸ್ಟ್ರಾ ಬಂದ ಆತ ಆ ಹುಡಗಿ ಅಪ್ಪಾ ಮೈಕ ಹಿಡಕೊಂಡ
’today on this auspicious occasion my lovely daughter’s marriage…’ ಅಂತ ಏನೇನೋ ಹೇಳಿ ಕಡಿಕೆ ’it gives me immense pleasure to introduce my son-in-law …’ ಅಂತ ನಮ್ಮ ಮನ್ಯಾನ್ನ ಸ್ಟೇಜ ಮ್ಯಾಲೆ ಕರದ ಪರಿಚಯ ಮಾಡಿಸಿ ಹೊಗಳಿದ್ದ ಹೊಗಳಿದ್ದ, ನಂಗ ಅಂತೂ ಅವರ ಏನ ಹೇಳಲಿಕತ್ತಾರ ಅದರಾಗ ಎಷ್ಟ ಖರೆ, ಎಷ್ಟ ಸುಳ್ಳ ಒಂದು ಒಂದ ತಿಳಿವಲ್ತಾಗಿತ್ತ, ಅದರಾಗ ಫುಲ್ ಟೈಟ ಬ್ಯಾರೆ ಆಗಿ ಬಿಟ್ಟಿದ್ದೆ, ಒಟ್ಟ ಎಲ್ಲಾರೂ ಚಪ್ಪಾಳೆ ಹೊಡದ ಕೂಡಲೇ ನಾನು ಒಂದ ಕೈಯಾಗ ಗ್ಲಾಸ, ಇನ್ನೊಂದ ಕೈಯಾಗ ವೈನ ಬಾಟಲ್ ಹಿಡಕೊಂಡ ಚಪ್ಪಾಳೆ ಹೊಡಿತಿದ್ದೆ. ಮುಂದ ಒಮ್ಮಿಂದೊಮ್ಮೇಲೆ ಆ ಹುಡಗಿ ಅಪ್ಪಾ ನನ್ನ ಹೆಸರ ತೊಗೊಂಡ
‘I invite the best man of this marriage Mr.Adur to speak few good words about bridegroom’ ಅಂತ ಒದರಿ ಬಿಟ್ಟಾ, ನಂಗ ಅದನ್ನ ಕೇಳಿದ್ದ ಅರದಕ್ಕ ಅರ್ದಾ ಕುಡದದ್ದ ಇಳದ ಬಿಡ್ತ, ಇನ್ನ ಹೆಸರ ಒದರಿದ ಮ್ಯಾಲೆ ಮಾತಾಡ ಬೇಕ, ಅದರಾಗ ನನಗ ಮೊದ್ಲ best man ಆದರ ಭಾಷಣ ಮಾಡ್ಬೇಕಾಗ್ತದ ಅಂತ ಗೊತ್ತ ಇದ್ದಿದ್ದಿಲ್ಲಾ, ಈ ಮನ್ಯಾನೂ ಏನ ನನಗ ಹೇಳಿದ್ದಿಲ್ಲಾ, ಅಲ್ಲಾ ಪಾಪ ಅವಂಗರ ಗೊತ್ತ ಇತ್ತೊ ಇಲ್ಲೋ ಏನೋ ಯಾರಿಗೊತ್ತ. ಅಂವಾ ಕ್ರಿಶ್ಚಿಯನ ಹುಡಗಿ ಲಗ್ನಾ ಮಾಡ್ಕೊಂಡಿದ್ದ ಇದ ಫಸ್ಟ ಟೈಮ, ಸರಿ ಏನರ ಒಂದ ನಾಲ್ಕ ಮಾತಾಡಬೇಕ ಅಂತ ಸ್ಟೇಜ ಹತ್ತಿದೆ, ಒಂದ ಕೈಯಾಗ ಗ್ಲಾಸ ಹಂಗ ಇತ್ತ, ಇನ್ನೊಂದ ಕೈಯಾಗಿನ ಬಾಟಲಿ ಕೆಳಗ ಇಟ್ಟ ಮೈಕ ಬಡದ
“ಮೈಕ ಟೆಸ್ಟಿಂಗ ೧.೨.೩…೧.೨.೩..” ಅಂದೆ ಎಲ್ಲಾರ ನಗಲಿಕತ್ತರು. ಅಲ್ಲಾ ಇಷ್ಟೊತ್ತನಕ ಎಷ್ಟ ಮಂದಿ ಮಾತಾಡಿದ್ದರು ನಾ ಈಗ ಬಂದ ಮೈಕ ಟೆಸ್ಟಿಂಗ ಅಂದರ ನಗಲಾರದ ಏನ್ ಮಾಡ್ತಾರ, ನಾ ಕಡಿಕೆ ಕುಡದ ನಶೆ ದಾಗ ನಮ್ಮ ದೋಸ್ತನ್ನ ಬಗ್ಗೆ ಮಾತಾಡಲಿಕ್ಕೆ ಶುರು ಮಾಡಿದೆ, ನಮ್ಮ ಮನ್ಯಾಗರ ಕೈಯಾಗ ಬೀಯರ್ ಗ್ಲಾಸ ಇದ್ದರು ಮಾರಿ ಮ್ಯಾಲೆ ಬೆವರ ಬರಲಿಕ್ಕೆ ಶುರು ಆತ, ಅವಂಗೇಲ್ಲೆ ನಾ ಕುಡದ ನಶೇದಾಗ ಏನ ಮಾತಾಡ್ತೇನೋ ಅಂತ ಟೆನ್ಶನ್ ಹತ್ತಿತ್ತ ಕಾಣತದ, ನಾ ಮಾತ ಶುರು ಮಾಡಿದೆ.
“ಹಂಗ ನಾನು ಮನ್ಯಾ ಹುಬ್ಬಳ್ಳ್ಯಾಗ ಖಾಸ ದೋಸ್ತರು, ನಮ್ಮ ಮನಿ ಕಡೇನ ಮನ್ಯಾನ ಮನಿ ಇತ್ತು…ಇಬ್ಬರು ಚಡ್ಡಿ ದೋಸ್ತರು ಒಂದ ಗಟರ ದಂಡ್ಯಾಗ ಕೂತ – ತೊಳ್ಕೊಂಡ ಅದ ದಂಡಿ ಮ್ಯಾಲೆ ಆಡಿ ಬೆಳದವರು…. ಹಂಗ ಸಣ್ಣೊರ ಇದ್ದಾಗ ಇಬ್ಬರು ಒಂದ ಚಿಣಿ-ದಾಂಡಲೇ ಆಡತಿದ್ವಿ, ಒಂದಾ ಬೋಕಾದಾಗ ಗುಂಡಾ ಸಂಬಂಧ ಹೊಡದಾಡತಿದ್ವಿ… ಇಬ್ಬರು ಒಮ್ಮೆ ದೊಡ್ಡೊರಾದ್ವಿ, ಚಡ್ಡಿ ಹೋಗಿ ಪ್ಯಾಂಟ ಬಂತು, ಚಿಣಿ-ದಾಂಡ ಹೋಗಿ ಬ್ಯಾಟ ಬಂತ, ಗುಂಡಾ ಆಡೊ ಬೋಕಾ ಹೋಗಿ, ಗುಂಡ ಹಾಕೊ ಬಾಟಲ್ ಬಂದ್ವು……
“ನಾವಿಬ್ಬರು ಎಷ್ಟ ಕ್ಲೋಸ ಅಂದ್ರ, ಏನ ಮಾಡಿದರು ಇಬ್ಬರೂ ಕೂಡೇ ಮಾಡ್ತಿದ್ವಿ, ಸಿನೇಮಾ, ಹೋಟೆಲ್, ಟ್ರಿಪ್ even public toiletಗೆ ಹೋದರು ಇಬ್ಬರು ಒಮ್ಮೆ ಹೋಗ್ತಿದ್ವಿ… ಮುಂದ ಲೈನ ಹೋಡಿಲಿಕ್ಕೂ ಇಬ್ಬರೂ ಕೂಡೆ ಸ್ಟಾರ್ಟ ಮಾಡಿದ್ವಿ.. ಮೊದ್ಲ ಮೊದ್ಲ ಒಬ್ಬೊಕಿಗೆ ಲೈನ ಹೊಡಿತಿದ್ವಿ ಆಮ್ಯಾಲೆ ಇದ ಮುಂದ ಪ್ರಾಬ್ಲೇಮ್ ಆಗ್ತದ ಅಂತ ಸಪರೇಟ ಆಗಿ ಲೈನ ಹೊಡಿಲಿಕ್ಕೆ ಹತ್ತಿದ್ವಿ… ಆದರ ಒಂದ ಫರಕ ಅಂದರ ಅವಂಗ ಬಿಳ್ತಿದ್ವು, ನಂಗ ಬಿಳತಿದ್ದಿಲ್ಲಾ ಇಷ್ಟ”
“ಹಂಗ ಅಂವಾ ಕಾಲೇಜ ಲೈಫ ಒಳಗ ಸಾಕಷ್ಟ ಪಟಾಯಿಸಿದರು, ಯಾವಕ್ಕು ಜೋತ ಬೀಳಲಿಲ್ಲಾ, ಯಾರಿಗೂ ಮದ್ವಿ ಮಾಡ್ಕೋತೇನಿ ಅಂತ ಕಮಿಟ್ ಆಗಲಿಲ್ಲಾ. ಸೀರಿಯಸ್ ಆಗಿ ನೌಕರಿ ಹಿಡದ ನನ್ನ ಕಿಂತ ಮೊದ್ಲ ಹಾದಿ ಹತ್ತಿದಾ. ಒಬ್ಬೊಕಿಗೆ ಅಂತೂ ನಾ ಮಾಡ್ಕೊಂಡರ ನಿಂಗ ಮಾಡ್ಕೋತೇನಿ ಅಂತ ಪ್ರಾಮಿಸ್ ಮಾಡಿ ಮುಂದ ಅವರವ್ವ ಬ್ಯಾಡ ಅಂದ್ಲು ಅಂತ ಬಿಟ್ಟ ಬಿಟ್ಟಾ.. ಅಷ್ಟ ಅವ್ವನ ಮಾತ ಮೀರತಿದ್ದಿಲ್ಲಾ i am sure ಅಂವಾ ಮುಂದ ಹೆಂಡ್ತಿ ಮಾತು ಮೀರಂಗಿಲ್ಲಾ” ಅಂತ ಅಂದ ಬಿಟ್ಟೆ.
ಅಲ್ಲೇ ಹಿಂದ ನಿಂತಿದ್ದ ಮನ್ಯಾ ಹಣಿ ಹಣಿ ಬಡ್ಕೊಳ್ಳಿಕತ್ತಾ, ನಾ ನನ್ನ ಭಾಷಣ ಮುಗಸೊ ಮೂಡನಾಗ ಇರಲಿಲ್ಲಾ, ನಾ ಹಂಗ ಶುರು ಹಚಗೊಂಡ
“ನಮ್ಮ ಮನ್ಯಾ ಏನ ಅನ್ನರಿ ದೇವರಂಥಾ ಹುಡಗಾ ಹಂತಾ ಹುಡಗ ಸಿಗಬೇಕಂದರ ಲೀಜಾ (ಎಲಿಜಾಬೆಥ್- ಅವನ ಹೆಂಡತಿ ) ಭಾಳ ಪುಣ್ಯಾ ಮಾಡ್ಯಾಳ, ಇನ್ನೇನ ವರ್ಷ ತುಂಬದೊರಾಗ ಅವರಿಬ್ಬರು ಒಂದ ಹಡೇಯೊದ ಗ್ಯಾರಂಟಿ ನಾವ ಇನ್ನೊಂದ ನಾಲ್ಕ ತಿಂಗಳಕ್ಕ baby shower ಫಂಕ್ಶನದಾಗ ಮತ್ತ ಭೆಟ್ಟಿ ಆಗೋಣ” ಅಂತ ಹೇಳಿ ಮೈಕ ಕೆಳಗ ಇಟ್ಟ ಮತ್ತ ವೈನ ಬಾಟಲ ಹಿಡ್ಕೊಂಡ ವಾಪಸ ಬಂದೆ.
ಆ ದಕ್ಷಿಣ ಕನ್ನಡದ ಮಂದಿಗೆ ನನ್ನ ಉತ್ತರ ಕರ್ನಾಟಕದ ಮಾತ ಭಾಳ ಸೇರತ ಕಾಣತದ ಹತ್ತ ನಿಮಿಷ ಗಟ್ಟಲೇ ಚಪ್ಪಾಳೆ ಹೊಡದಿದ್ದ ಹೊಡದಿದ್ದ. ನಮ್ಮ ಮನ್ಯಾ ಮಾತ್ರ ಸಿಟ್ಟಿಗೆದ್ದ ’ಲೇ ದನಾ ಕಾಯೋನ ಎಲ್ಲಾ ಮರ್ಯಾದಿ ಕಳದ ಇಟ್ಟ ಬಿಟ್ಟಿ’ ಅಂತ ಹೋಯ್ಕೊಳಿಕತ್ತಾ, ಅಷ್ಟರಾಗ ಅವನ ಹೆಂಡ್ತಿ ಲೀಜಾ ಬಂದ I have got something to talk to you, will call you later ಅಂತ ನನಗ ಹೇಳಿ ಹೋದ್ಲು. ಅವಂಗರ ಟೆನ್ಶನ್ ಹತ್ತ. ನಾ ರಾತ್ರಿ ಹತ್ತಕ್ಕ ರೆಸೆಪ್ಶನ ಮುಗಿಸಿಕೊಂಡವನ ಹನ್ನೊಂದರ ದುರ್ಗಾಂಬ ಟ್ರಾವೇಲ್ಸ ಹಿಡದವನ ಹುಬ್ಬಳ್ಳಿಗೆ ರೈಟ ಅಂದೆ. ಆ ಮಾತಿಗೆ ಈಗ ಹತ್ತ ದಿವಸ ಆಗಲಿಕ್ಕೆ ಬಂತ, ಮಗಾ ಮದ್ವಿ ಮಾಡ್ಕೊಂಡ ಬೆಂಗಳೂರಿಗೆ ಹೋದೊಂವಾ ಇವತ್ತೀಗೂ ಒಂದ ಫೋನ ಇಲ್ಲಾ ಏನ ಸುಡಗಾಡ ಇಲ್ಲಾ. ಮದ್ವಿಗೆ ಬೆಸ್ಟ ಮ್ಯಾನ ಬೇಕಾದಾಗ ಒಂದ ಹತ್ತ ಸರತೆ ಫೋನ ಮಾಡ್ತಿದ್ದಾ, ಈಗ ನೋಡಿದ್ರ ಮರತ ಬಿಟ್ಟಾ. ಅಲ್ಲಾ ಮದ್ವಿ ಆದಮ್ಯಾಲೆ ಜನಾ ಬದಲಾಗ್ತಾರ ಅಂತಾರಲಾ ಅದ ಖರೇ ನೋಡ್ರಿ.
ಹಾಂ ಅನ್ನಂಗ ಇನ್ನೊಂದ ಹೇಳೊದ ಮರತೆ ಅವನ ಹೆಂಡತಿ ಮರದಿವಸ ನಾ ಹುಬ್ಬಳ್ಳಿಗೆ ಮುಟ್ಟೊ ಪುರಸತ್ತ ಇಲ್ಲದ ಫೋನ ಮಾಡಿದ್ಲು. ನಾ ಇಕಿ ಏನರ ಅವನ ಹಳೇ ಲಫಡಾ ಬಗ್ಗೆ ಕೇಳ್ತಾನೇನೂ ಅಂತ ಗಾಬರಿ ಆಗಿ ಫೋನ ಎತ್ತಿದರ ಅಕಿ
“did ಮನ್ಯಾ told you that I am pregnant” ಅಂತ ಕೇಳಿದ್ಲು. “ನೊ” ಅಂದೆ, “then how come you said about baby shower in the speech” ಅಂತ ಕೇಳಿದ್ಲು
” I just said it could happen any time now, as you are married” ಅಂದೆ.
ಅಕಿ ok ok ಅಂತ ನನಗ ಮುಂದ are you really pregnant ಅಂತ ಕೇಳಲಿಕ್ಕೂ ಅವಕಾಶ ಕೊಡದ ಫೋನ ಇಟ್ಟ ಬಿಟ್ಟಳು.
ಹುಟ್ಟಿದ್ದು ಶಿವಮೊಗ್ಗದೊಳಗ. ಮುಂದೆ ಕಲತಿದ್ದು ಬೆಳದಿದ್ದು ಬಲತಿದ್ದು ಎಲ್ಲಾ ಹುಬ್ಬಳ್ಳಿ ಒಳಗ. ಒಂದ ಆರ ವರ್ಷದಿಂದ ತಿಳದಾಗೊಮ್ಮೆ, ಟೈಮ ಸಿಕ್ಕಾಗೊಮ್ಮೆ ಕನ್ನಡ ಹಾಸ್ಯ ಲೇಖನಗಳನ್ನ ಬರಿಲಿಕತ್ತೇನಿ. ಉತ್ತರ ಕರ್ನಾಟಕದ ಆಡು ಭಾಷೆಯೊಳಗ ಬರೇಯೊದು ನನ್ನ ಲೇಖನಗಳ ವಿಶೇಷತೆ.