ಮೊದಲನೇ ಮಗನ ಚೆಡ್ಡಿಗೆ ಕೂಡುವ ಭಾಗದಲ್ಲಿ ತೇಪೆ ಹಾಕಿಸಿ ಎರಡನೆಯವನಿಗೆ ಹಾಕುತ್ತಿದ್ದರು, ಅವನ ನಂತರ ಮೂರನೇ ಅವನು, ಅದಾದ ಮೇಲೆ ನಾಲ್ಕು, ಐದು ಹೀಗೆ. ಕೊನೇ ಹುಡುಗನ ಬಳಿ ಬರುವ ಹೊತ್ತಿಗೆ ಚಡ್ಡಿಗೆ ತೇಪೆ ಹಾಕಲು ಜಾಗವೇ ಇರ್ತಾ ಇರಲಿಲ್ಲ. ಆಗಿನ್ನೂ ಪ್ರೈವೇಟ್ ಸ್ಕೂಲ್ ಬಂದಿರಲಿಲ್ಲ ಮತ್ತು ಎಲ್ಲರೂ ಸರ್ಕಾರಿ ಶಾಲೆ. ತೇಪೆ ಇಲ್ಲದಿರುವ ಚೆಡ್ಡಿ ಹಾಕಿದವನು ಮನೆಯ ಮೊದಲ ಮಗ ಎಂದು ಸುಲಭವಾಗಿ ಗೊತ್ತಾಗುತ್ತಿತ್ತು. ತೇಪೆ ಬಟ್ಟೆಯ ದಪ್ಪದ ಮೇಲೆ ಹುಡುಗ ಅವರ ಮನೆಯಲ್ಲಿ ಎಷ್ಟನೆಯವನು ಎಂದು ನೂರಕ್ಕೆ ನೂರರಷ್ಟು ನಿಖರವಾಗಿ ಹೇಳುವ ಮೇಷ್ಟ್ರುಗಳು ಇದ್ದರು!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ತನೆಯ ಕಂತು

ಹಿಂದಿನ ಸಂಚಿಕೆ ಮುಕ್ತಾಯ ಹೀಗಿತ್ತು..

ಕೈ ಬೆರಳಿಗೆ ಮಸಿ ಬಳಿದು ಅದನ್ನು ಸೇಲ್ ಡೀಡ್ ಮೇಲೆ ಒತ್ತಬೇಕು. ಇದಕ್ಕೆ ಒಬ್ಬ ಅಟೆಂಡರ್ ನಿಯೋಜಿತ ಆಗಿರ್ತಾನೆ. ಸಣ್ಣಗೆ ಹಂಚಿ ಕಡ್ಡಿ ಹಾಗೆ ಇರ್ತಾನೆ ಮತ್ತು ಮುಂದಿನ ಎರಡು ಹಲ್ಲು ಇರುಲ್ಲ. ನನ್ನ ಸರದಿ ಬಂತಾ, ಕೈ ಬೆರಳಿಗೆ ಮಸಿ ಬಳಿದ. ಪೇಪರು ಮೇಲೆ ಅದನ್ನ ಒತ್ತುವ ಮೊದಲು ಎಡಗೈ ಚಾಚಿ ಹೂಂ ಹೂಂ ಜಲ್ದಿ ಜಲ್ದಿ ಅಂದ! ಬಲಗೈಯಲ್ಲಿ ನನ್ನ ಎಡಗೈ ಬಲವಾಗಿ ಹಿಡಿದಿದ್ದಾನೆ. ಬಲಗೈ ಮಾತ್ರ ಫ್ರೀ! ಜಲ್ದಿ ಜಲ್ದಿ ಅಂದನಲ್ಲಾ ಏನು ಜಲ್ದಿ ಅಂದೆ. ಆಫೀಸರು ಎದುರೇ ಕೂತಿದ್ದ. ಇವನು ಅವರ ಶಿಷ್ಯ ಲಂಚ ಕೇಳ್ತಾ ಇದಾನೆ ಅಂತ ದೂರು ಹೇಳಿದರೆ ಹ್ಯಾಗೆ? ಅವನ ಕಡೆ ನೋಡಿದೆ. ಆಫೀಸರ್ ಅವನೂ ಅವಸರ ಮಾಡಬೇಕೆ? ಇಬ್ಬರಿಗೂ ಅಂಡರ್ ಸ್ಟ್ಯಾಂಡಿಂಗ್ ಇದೆ ಅನಿಸಿತು. ದೂರು ಕೊಡಲಿಲ್ಲ, ತೆಪ್ಪಗೆ ಜೇಬಿಂದ ಎರಡು ಹತ್ತರ ನೋಟು ಬಿಡಿಸಿ ಕೊಟ್ಟೆ. ಇನ್ನೂ ಬೇಕು.. ಅಂದ. ಮೂರು ನೋಟು ಅವನ ಕೈ ಸೇರಿದ ಮೇಲೆ ಅದನ್ನು ಅವನ ಜೇಬಿಗೆ ತುರುಕಿಕೊಂಡ. ನಂತರ ನನ್ನ ಬೆರಳು ಬಾಂಡ್ ಪೇಪರಿನ ಮೇಲೆ ಬಲವಾಗಿ ಊರಿ ಅವನ ಭಾರ ಎಲ್ಲಾ ಬಿಟ್ಟು ಹೊರಳಿಸಿದ. ಅವನು ಎಷ್ಟು ಕೋಪ ರೋಷದಿಂದ ಬೆರಳನ್ನು ಹೊರಳಿಸಿದ್ದ ಅಂದರೆ ಒಂದು ಕಾಲ ಮೇಲೆ ನಿಂತು ಇಡೀ ಅವನ ತೂಕವನ್ನು ನನ್ನ ಬೆರಳಿಗೆ ಹೊರೆಸಿದ್ದ. ಈ ಪ್ರಯೋಗಕ್ಕೆ ಒಳಗಾದ ನನ್ನ ಬೆರಳು ಒಂದು ವಾರ ನೋವಿನಿಂದ ನರಳಿತ್ತು ಮತ್ತು ಈ ಕಾರಣಕ್ಕಾಗಿ ಇರಬೇಕು ಮತ್ಯಾವುದೂ ಆಸ್ತಿ ಪಾಸ್ತಿ ಕೊಳ್ಳುವ ಯೋಜನೆಯನ್ನು ಸುಮಾರು ವರ್ಷ ಮಾಡಲೇ ಇಲ್ಲ!

ಸೈಟಿನ ದಾಖಲೆ ಪತ್ರ ಬಂತಾ, ಅದನ್ನು ಸಂಪೂರ್ಣ ಮರೆತೇ ಬಿಟ್ಟಿದ್ದೆ. ಅದರ ನೆನಪು ಹೇಗಾಯಿತು ಎನ್ನುವುದು ಮತ್ತೊಂದು ರೋಚಕ ಕತೆ.

ಮುಂದಕ್ಕೆ…

ಬಾಡಿಗೆ ಮನೆ ಹೊಕ್ಕಿದ್ದು ಹೇಳಿದೆ. ಅಲ್ಲಿಂದ ಸಾಲು ಸಾಲು ಪ್ರಾಬ್ಲಂಗಳು ಶುರು. ಬಾವಿ ಇತ್ತು, ಅದರಲ್ಲಿ ನೀರಿಲ್ಲ. ಸುತ್ತಲೂ ನೀಲಗಿರಿ ತೋಪು, ಬಹುಶಃ ಅದು ಭೂಮಿಯಲ್ಲಿನ ನೀರು ಎಳೆದು ಬಿಡುತ್ತಿತ್ತು ಅಂತ ಕಾಣುತ್ತೆ.(ಇದು ಒಂದು ಸಂಶೋಧನೆಯ ವಸ್ತು ಆಯಿತು. ಈ ಸಂಶೋಧನೆ ಎಂಬತ್ತರ ಹೊಸದರಲ್ಲಿ ವ್ಯಾಪಕ ಪ್ರಚಾರ ಪಡೆಯಿತು. ತೊಂಬತ್ತರ ಆದಿಯಲ್ಲಿ ನೀಲಗಿರಿ ಮರಗಳನ್ನು ಕಡಿದು ರಾಶಿ ಮಾಡಿ ಮಾರಿದರು!)

ಬಾವಿಯಲ್ಲಿ ರಾತ್ರಿ ಸುಮಾರು ಏಳು ಬಕೇಟ್ ನೀರು ಶೇಖರ ಆಗೋದು. ಅದನ್ನು ಸೇದೋದಕ್ಕೆ ನಾಲ್ಕು ಮನೆಯವರೂ ಪೈಪೋಟಿ, ಪೈಪೋಟಿ. ಒಂದೆರೆಡು ವಾರ ಅದನ್ನೂ ಪ್ರಯತ್ನಿಸಿ ಕೈ ಬಿಟ್ಟೆವು. ಓನರಿಣಿ ಮನೆ ಕ್ವಾರ್ಟರ್ಸ್‌ನಲ್ಲಿತ್ತು. ಅಲ್ಲಿಂದ ಅಂದರೆ ನಾವಿದ್ದ ಬಾಡಿಗೆ ಮನೆಗೆ ಹತ್ತು ನಿಮಿಷ. ಅವರ ಮನೆಯಿಂದ ಕೆಲವು ವಾರ ತುರ್ತು ಅಗತ್ಯಕ್ಕೆ ನೀರು ಹೊತ್ತೆವು. ನಂತರ ಒಬ್ಬ ಕೆಲಸದಾಕೆ ಸಿಕ್ಕಿದರು. ಅವರು ದಿವಸಕ್ಕೆ ಹತ್ತು ಬಿಂದಿಗೆ ನೀರು ಕ್ವಾರ್ಟರ್ಸ್‌ನಿಂದ ಹೊತ್ತು ತರೋದು, ನಾವು ರಾತ್ರಿ ಬಾವಿಯಿಂದ ಸ್ವಲ್ಪ ನೀರು ಸೇದುವುದು.. ಹೀಗೆ ಹೇಗೋ ಮ್ಯಾನೇಜ್ ಮಾಡಿದೆವು. ಮೊದಲನೇ ತಿಂಗಳು ಬಾಡಿಗೆ ಕೊಟ್ಟ ನಂತರ ಹೊಸಾ ಸಮಸ್ಯೆನಲ್ಲಿ ಸಿಕ್ಕಿಕೊಂಡದ್ದು ಅರಿವಾಯಿತು. ಸಮಸ್ಯೆಯಲ್ಲಿ ಹೇಗೆ ಸಿಕ್ಕಿಕೊಂಡೆ ಅಂದರೆ ಅದೇ ಒಂದು ವಿಚಿತ್ರ. ಈಗ ಅದರ ಹಿನ್ನೆಲೆ.

(ವಿದ್ಯಾರಣ್ಯಪುರ, ನಂಜಪ್ಪ ವೃತ್ತದ ರಸ್ತೆ ಈಗ (2024)

ನಮ್ಮ ಕಾರ್ಖಾನೆಯಲ್ಲಿ(ಬಹುಶಃ ಎಲ್ಲಾ ಕಾರ್ಖಾನೆಗಳಲ್ಲಿಯೂ ಇದೇ ವ್ಯವಸ್ಥೆ ಆಗ ಜಾರಿಯಲ್ಲಿತ್ತು). ಆಗ ಎರಡು ದಿವಸ ಸಂಬಳ, ಅದೂ ಬೇರೆ ಬೇರೆ ರೀತಿ. ಪ್ರತ್ಯಕ್ಷ ಮತ್ತು ಪರೋಕ್ಷ ಕೆಲಸಗಾರರು ಅಂತ ಎರಡು ಗುಂಪು (direct ಮತ್ತು in direct ಅಂತ)ಮೆಶೀನ್ ಮೇಲೆ ಕೆಲಸ ಮಾಡುವವರು ಡೈರೆಕ್ಟ್ ಆದರೆ ಮಿಕ್ಕವರು ಮತ್ತು ಅಧಿಕಾರಿಗಳು indirect ಅಂತ ಸ್ಥೂಲ ವಿಭಜನೆ. ಡೈರೆಕ್ಟ್ ವರ್ಕರ್ಸ್‌ಗಳಿಗೆ ಹಲವು ಸೌಲಭ್ಯ ಇತ್ತು. ಅದರಲ್ಲಿ ಬಹು ಮುಖ್ಯವಾದದ್ದು ಮತ್ತು ಮಿಕ್ಕವರಿಗೆ ಹೊಟ್ಟೆ ಉರಿಸುತ್ತಾ ಇದ್ದದ್ದು ಡೈರೆಕ್ಟ್ ಕೆಲಸಗಾರರಿಗೆ ಓವರ್ ಟೈಮ್ ಹಣ ದುಪ್ಪಟ್ಟು ಬರುವುದು. ಅಂದರೆ ಗಂಟೆಗೆ ಐದು ರುಪಾಯಿ ಸಂಬಳ ಅಂತ ಇದ್ದರೆ ಇದ್ದರೆ ಓವರ್ ಟೈಮ್ ಮಾಡಿದರೆ ಅದು ಹತ್ತು ರುಪಾಯಿ ಆಗುತ್ತಿತ್ತು. ಇಂಡೈರೆಕ್ಟ್ ಕೆಲಸಗಾರರಿಗೆ ಒಂದು ಗಂಟೆಗೆ ಐದು ರೂಪಾಯಿ ಇದ್ದರೆ ಬರೀ ಐದೇ ಬರ್ತಿತ್ತು. ಇದು ಹೊಟ್ಟೆ ಉರಿ ಬರಿಸುತ್ತಾ ಇದ್ದರೂ ಮಿಕ್ಕವರು ಹೊಟ್ಟೇಲಿ ಹಾಕಿಕೊಂಡಿದ್ದರು, ಕಾರಣ ಟ್ರೇಡ್ ಯೂನಿಯನ್‌ಗಳು ಈ ವ್ಯವಸ್ಥೆ ತರಲು ಅಪಾರ ಶ್ರಮ ಪಟ್ಟಿದ್ದರಂತೆ. ಟ್ರೇಡ್ ಯೂನಿಯನ್‌ಗಳ ಹೋರಾಟದಿಂದ ಈ ಸವಲತ್ತು ಸಿಕ್ಕಿದೆ ಎನ್ನುವ ಭಾವನೆ ಇತ್ತು. ಬಹುಶಃ ಈ ಹೊಟ್ಟೆ ಉರಿ ತಣಿಸಲು ಇಂಡೈರೆಕ್ಟ್ ಕೆಲಸಗಾರರಿಗೆ ಒಂದನೇ ತಾರೀಖು ಸಂಬಳ ಕೊಡೋರು ಅಂತ ನನ್ನ ಖಚಿತವಾದ ಅಂದಾಜು. ಇದು ನನ್ನ ಅನಿಸಿಕೆ, ನಿಜ ಇದ್ದರೂ ಇರಬಹುದು. ಇನ್ ಡೈರೆಕ್ಟ್ ಕೆಲಸಗಾರರಿಗೆ ಸಂಬಳ ಲೆಕ್ಕ ಹಾಕಲು ಸಮಯ ಬೇಕು ಎನ್ನುವ ಸಬೂಬು ಹೇಳುತ್ತಿದ್ದರು. ಬಹುಶಃ ಅದು ನಿಜ ಇದ್ದರೂ ಇರಬಹುದು, ಕಾರಣ ಆಗಿನ್ನೂ ಕಾಲ್ಕ್ಯುಲೆಟರ್ ಹುಟ್ಟುತ್ತಿದ್ದ ಸಮಯ, ಕಂಪ್ಯೂಟರ್ ಹೆಸರು ಗೊತ್ತಿರಲಿಲ್ಲ ಮತ್ತು ಲೆಕ್ಕ ಪತ್ರ ಇಲಾಖೆ ಅಂಕಿ ಸಂಖ್ಯೆಗಳಿಂದ ತುಂಬಿ ತುಳುಕಾಡುತ್ತಿದೆ ಎನ್ನುವ ನಂಬಿಕೆ(ಅದರ ಅಂದರೆ ಆ ಇಲಾಖೆ ಮುಂದೆ ಹಾದರೆ ನನಗೆ ಅಲ್ಲಿ ಬರೀ ಅಂಕಿಗಳೇ ಕಾಣೋದು. ಅಲ್ಲಿ ಕೆಲಸ ಮಾಡುವ ಎಲ್ಲರೂ ಪೋಸ್ಟ್‌ ಗ್ರಾಜುಯೇಟ್ ಕಾಲೇಜಿನಲ್ಲಿ ಲೆಕ್ಕದ ಮೇಷ್ಟ್ರ ರೀತಿ ಕಾಣಿಸೋರು) ಡೈರೆಕ್ಟ್ ಕೆಲಸಗಾರರಿಗೆ ಏಳನೇ ತಾರೀಖು ಸಂಬಳ. ಏಳನೇ ತಾರೀಖು ಸಂಬಳದವರು ಒಂದನೇ ತಾರೀಖು ಸಂಬಳ ಪಡೆಯುವವರಿಂದ ಕೈಸಾಲ ಪಡೆಯುವುದು ಅತಿ ಸಹಜವಾಗಿತ್ತು. ಇದರಿಂದ ಕಾಮ್ರೆಡರಿ ವೃದ್ಧಿಸುತ್ತೆ ಅಂತ ನಮ್ಮ ಸಣ್ಣ ಪುಟ್ಟ ಲೀಡರ್‌ಗಳು ಹೇಳುತ್ತಿದ್ದರು! ಕಾಮ್ರೆಡರಿ ಪದಕ್ಕೆ ಅರ್ಥ ನಿಧಾನಕ್ಕೆ ನನಗೂ ತಿಳಿಯಿತು.

ಬಾಡಿಗೆ ಮನೆ ಸೇರಿದ ಮೇಲೆ ಮೊದಲನೇ ಸಂಬಳ ಬಂತಾ? ಹರಿಶ್ಚಂದ್ರನ ಮೊಮ್ಮಗನ ಹಾಗೆ ನೇರ ಓನರ್ ಮನೆಗೆ ಹೋದೆನಾ. ಗರಿ ಗರಿ ನೋಟು ಜೇಬಿನಿಂದ ತೆಗೆದು ಎಣಿಸಿ ಓನರ್ ಅಮ್ಮನಿಗೆ ತಗೊಳಿ ಬಾಡಿಗೆ ಅಂತ ಕೈ ಚಾಚಿದೆ. ಆಕೆ ಮುಖದಲ್ಲಿ ರಾತ್ರಿ ನೂರು ಸೂರ್ಯ ನೋಡಿದರೆ ಆಗುತ್ತಲ್ಲಾ ಆಶ್ಚರ್ಯ ಅಂತಹ ಭಾವ ಕಾಣಿಸಿತು. ಕಪ್ಪಗೆ ಗುಂಡು ಗುಂಡಾಗಿದ್ದ, (ಆಕೆ ಆಗ ಜಯ ಲಲಿತ ತರಹ ಇದ್ದರು)ಅವರು ಆಶ್ಚರ್ಯದಿಂದ ಸಂಪೂರ್ಣ ಟಮೋಟ ಬಣ್ಣಕ್ಕೆ ತಿರುಗಿದ್ದರು! ಏನು ನಿಮಗೆ ಬೇರೆ ಸಂಬಳ ಕೊಡ್ತಾರಾ ಅಂತ ಕಣ್ಣು ಅರಳಿಸಿದರು.

ಹೌದು ನಮಗೆ ಒಂದನೇ ತಾರೀಖು ಸಂಬಳ ಅಂದೆ. ಬಹುಶಃ ಈ ಸುದ್ದಿ ಅವರಿಗೆ ಮೊದಲ ಬಾರಿ ಗೊತ್ತಾಗಿರಬೇಕು, ಕಾರಣ ಕ್ವಾರ್ಟರ್ಸ್‌ನಲ್ಲಿ ಅವರಿಗೆ ಗೊತ್ತಿದ್ದ ಯಾರಿಗೂ ಒಂದನೇ ತಾರೀಖು ಸಂಬಳ ಬಂದಿದ್ದು ಅವರು ಕೇಳಿರಲಾರರು. ನಂತರ ಇದರ ಬಗ್ಗೆ ಅವರಿಗೆ ತಿಳಿದವರ ಹತ್ತಿರ ಮತ್ತು ಮಹಿಳಾ ಮಂಡಳಿಯಲ್ಲಿ ಸುಮಾರು ವಿಚಾರ ವಿನಿಮಯ, ಚರ್ಚೆ ನಡೆದಿರಬೇಕು. ಒಂದನೇ ತಾರೀಖು ರಜಾ ಇದ್ದರೆ, ಒಂದನೇ ತಾರೀಖು ಮತ್ತು ಅದರ ಹಿಂದಿನ ದಿನವೂ ರಜಾ ಇದ್ದರೆ ಸಂಬಳ ಯಾವ ದಿವಸ ಕೊಡುತ್ತಾರೆ.. ಮೊದಲಾದ ಸಂಶಯಗಳನ್ನು ಏಳನೇ ತಾರೀಖಿನ ಸಂಬಳದವರೊಂದಿಗೆ ಹೋಲಿಸಿ ಅವರದ್ದೇ ಒಂದು ತಿಳುವಳಿಕೆಗೆ ತಲುಪಿರಬೇಕು [ಮನೆ ಗಂಡಸಿನ ಹತ್ತಿರ ಈ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿರಲಾರದು, ಕಾರಣ ಗಂಡಸು ಹೆಂಡ್ತಿಗೆ ತನ್ನ ಹಣಕಾಸಿನ ಸುದ್ದಿ ಹೇಳಬಾರದು ಎನ್ನುವ ಅನ್ ರಿಟನ್ ರೂಲು ಅಥವಾ ಲಾಜಿಕ್ ಆಗಿನ ಶೇ ತೊಂಬತ್ತೊಂಬತ್ತು ಪಾಯಿಂಟ್ ಒಂಬತ್ತು ಜನ ಗಂಡಸರು ಫಾಲೋ ಮಾಡುತ್ತಿದ್ದರು. ನನ್ನಂಥ ಕೆಲವು ಬಕರಾಗಳು ಮಾತ್ರ ಪ್ರತಿ ಪೈಸೆ ಗಳಿಕೆ ಆಯ ವ್ಯಯಗಳನ್ನು ವಿಧೇಯರಾಗಿ ಮನೆಯಾಕೆಗೆ ತಿಳಿಸುತ್ತಿದ್ದೆವು. ಇದರಿಂದ ಸುಮಾರು ಗಂಡಸರು ನಮ್ಮನ್ನು ದ್ವೇಷಿಸುತ್ತಾ ಇದ್ದರು. ಬೇವರ್ಶಿಗಳಿಗೆ ಒಂದು ಶಿಕ್ರೇಟ್ ಕಾಪಾಡಿಕೊಳ್ಳಲು ಆಗೋದಿಲ್ಲ ಎನ್ನುವ ಅವರ ಮಾನಸಿಕ ಭಾವನೆಗಳನ್ನು ಸಮಯ ಸಿಕ್ಕಾಗಲೆಲ್ಲ ಹೊರ ಹಾಕುತ್ತಿದ್ದರು, ನಮಗೆ ಕೇಳುವ ಹಾಗೆ! ಅವರ ಲೆಕ್ಕದಲ್ಲಿ ನಾವು ಬೇವರ್ಶಿಗಳು! ಆದರೆ ಅವರ ಹೆಂಡತಿಯರ ಕಣ್ಣಲ್ಲಿ ನಮ್ಮನ್ನು ಕಂಡರೆ ಅಭಿಮಾನ ತುಳುಕಿ ತುಣುಕುತ್ತಿತ್ತು! ಕ್ವಾರ್ಟರ್ಸ್ ರಸ್ತೆಯಲ್ಲಿ ನಡೆಯುತ್ತಾ ಹೋದರೆ ಕಿಟಕಿ ಬಾಗಿಲು ತೆರೆದು ನನ್ನನ್ನು ಕಣ್ಣು ತುಂಬಿ ನೋಡುವ ಹೆಂಗಸರು ಕಾಣಿಸುತ್ತಿದ್ದರು. ಮನೆ ಮುಂದೆ ಹರಟುತ್ತಾ ಕುಳಿತಿರುತ್ತಿದ್ದ ಹೆಂಗಸರು ನನ್ನನ್ನು ನೋಡಿದ ಕೂಡಲೇ ಕಾಲು ಹಿಂದೆ ಸರಿಸಿ ಸೆರಗು ಸರಿಪಡಿಸಿಕೊಂಡು ಒಂದು ಅಭಿಮಾನದ ಮೆಚ್ಚುಗೆ ತುಂಬಿದ ನೋಟವನ್ನು ನನ್ನ ಮೇಲೆ ಎಸೆಯುತ್ತಾ ಇದ್ದರು. ಕೆಲವು ಸಲ ಎನ್ನಾ ಚಾರ್, ಕಾಪಿ ಸಾಪತ್ರಿಂಗಲಾ ಅನ್ನೋರು. ತಮಿಳು ಬರ್ತಾ ಇರ್ಲಿಲ್ಲ ಮತ್ತು ಅವರು ಯಾಕೆ ಹೀಗೆ ಕೇಳುತ್ತಾರೆ ಅಂತ ಗೊತ್ತಾಗುತ್ತಾ ಇರಲಿಲ್ಲ. ನಾಚಿಕೆಯಿಂದ ಆರೂವರೆ ಅಡಿ ಎತ್ತರದ ನನ್ನ ದೇಹ ನಾಲ್ಕು ಅಡಿಗೆ ಅಥವಾ ಮೂರು ಅಡಿಗೆ ಕುಸಿಯುತ್ತಿತ್ತು]. ಎಷ್ಟೋ ದಿವಸದ ನಂತರ ನಮ್ಮನೆಗೆ ಕೆಲಸಕ್ಕೆ ಬರ್ತಾ ಇದ್ದವರಿಂದ ಅವರಿಗೆ ನನ್ನ ಕಂಡರೆ ಅಭಿಮಾನ ಅವರಿಗೆ ಅಂತ ಗೊತ್ತಾಗಿತ್ತು! ಆಗ ನಿಜವಾಗಲೂ ಹೇಳುತ್ತೇನೆ, ನೆಲದ ಮೇಲೆ ಅಂಗಾತ ಮಲಗುವಷ್ಟು ನಾಚಿಕೆ ಪಟ್ಟೆ.

ಇದರ ಎಫೆಕ್ಟ್ ನನಗೆ ಹೇಗೆ ಆಯಿತು ಅದನ್ನು ವಿವರಿಸಬೇಕು. ಒಂದನೇ ತಾರೀಖು ಕೆಲಸ ಮುಗಿಸಿಕೊಂಡು ಮನೆಗೆ ಬಂದರೆ ಮಹಡಿ ಏರುವ ಮೊದಲನೇ ಮೆಟ್ಟಲಲ್ಲಿ ಓನರ್ ಕೂತಿರುತ್ತಿದ್ದಳು, ಬಾಡಿಗೆ ವಸೂಲಿಗೆ. ಸೆಕೆಂಡ್ ಶಿಫ್ಟ್ ಕೆಲಸ ಮುಗಿಸಿ ರಾತ್ರಿ ಹನ್ನೊಂದುವರೆಗೆ ಮನೆ ಸೇರಿದರೆ ಹನ್ನೊಂದು ಮೂವತ್ತೊಂದಕ್ಕೆ ಆಕೆ ಪ್ರತ್ಯಕ್ಷ ಬಾಡಿಗೆ ವಸೂಲಿಗೆ. ತಮ್ಮನ ಮನೆಯಲ್ಲಿ ನಾನು ಬರೋದನ್ನ ಕಾದು ಕೂತಿರುತ್ತಾಳೆ ಎಂದು ನನ್ನಾಕೆ ಪತ್ತೆದಾರಿಕೆ ಮಾಡಿದ್ದಳು. ಒಂದರಂದು ರಜಾ ಬಂದರೆ ಅದರ ಹಿಂದಿನ ದಿನವೇ ಆಕೆ ಹಾಜರು ಬಾಡಿಗೆ ವಸೂಲಿಗೆ… ಸಂಬಳದ ಮೊದಲನೇ ಖರ್ಚು ದೇವರಿಗೆ ಒಂದು ಫಲಾಮೃತ ಅಭಿಷೇಕಕ್ಕೆ ಹೋಗಲಿ ಅಂತ ನನ್ನಾಕೆ ಇರಾದೆ. ಎಲ್ಲರೂ ಮಲ್ಲೇಶ್ವರಕ್ಕೆ ಹೋಗಿ ವೈಶಾಲಿ ಹೋಟಲ್‌ನಲ್ಲಿ ನಲ್ಲಿ ತಲಾ ಒಂದೊಂದು ಮಸಾಲೆ ದೋಸೆ ತಿಂದು ಸಂಬಳದ ಮೊದಲ ಖರ್ಚಿಗೆ ನಾಂದಿ ಹಾಡೋದೂ ಎಂದು ನನ್ನ ಇರಾದೆ. ಇದು ನಾವು ಅಲ್ಲಿರುವ ತನಕ ಸಾಧ್ಯವೇ ಆಗಲಿಲ್ಲ! ಆದರೂ ಒಂದು ಉಪಾಯ ಕಂಡು ಹಿಡಿದಿದ್ದೆ. ಉಪಾಯ ಕಂಡು ಹಿಡಿಯೋದರಲ್ಲಿ ನಾನು ಎಕ್ಸ್ಪರ್ಟ್ ತಾನೇ. ಸಂಬಳ ತಗೊಂಡ ಕೂಡಲೇ ಅದರಲ್ಲಿನ ಕೆಲವು ನೋಟು ತೆಗೆದು ಬೇರೆ ಜೇಬಲ್ಲಿ ಇಡುತ್ತಿದ್ದೆ. ಕವರ್‌ನಲ್ಲಿ ಮಿಕ್ಕಿದ್ದ ದುಡ್ಡು ಬಾಡಿಗೆಗೆ ಕೊಡುವುದರಿಂದ ಶುರು ಆಗಿ ಮಿಕ್ಕ ವೆಚ್ಚಗಳಿಗೆ ಹೋಗುತ್ತಿತ್ತು! ಸಂಬಳದ ಮೊದಲ ಖರ್ಚು ಬಾಡಿಗೆಗೆ ಕೊಟ್ಟಿಲ್ಲ, ಬೇರೆ ತೆಗೆದು ಇಟ್ಟಿದ್ದೀನಿ ನೋಡು ಅಂತ ಹೆಂಡತಿಗೆ ತೋರಿಸುತ್ತಿದ್ದೆ.

(ದೊಡ್ಡ ಬೊಮ್ಮಸಂದ್ರ ಕೆರೆ ಈಗ)

ಟೆಕ್ನಿಕಲ್ ಆಗಿ ಇದು ಸಖತ್ ಗುಡ್ ಐಡಿಯಾ. ಇದು ಮೊದಮೊದಲು ಮೆಚ್ಚುಗೆ ಪಡೆಯಿತು. ನಂತರ ಈ ನನ್ನ ಬುದ್ಧಿವಂತಿಕೆ ನಮ್ಮ ಸಂಸಾರದ ದೊಡ್ಡ ಸರ್ಕಲ್ ನಲ್ಲಿ ವ್ಯಾಪಕ ಪ್ರಚಾರ ಪಡೆಯಿತು! ಗಂಡು ನಂಟರು ನನ್ನ ಉಬ್ಬಿದ ಎರಡೂ ಜೇಬನ್ನು ಅಸೂಯೆ ಕಣ್ಣಿನಿಂದ ನೋಡುತ್ತಿದ್ದರು. ತುಂಬಾ ಆಪ್ತರು ಕೆಲವು ಸಲ ನಿನಗೆ ಈ ಹುಚ್ಚು ಐಡಿಯಾ ಹೇಗೆ ಹೊಳೆಯುತ್ತೆ, ನಮಗೆ ಈ ತರಹದ ಕ್ರ್ಯಾಕ್ ಐಡಿಯಾ ಬರೋದೇ ಇಲ್ಲ…. ಅಂತ ತಮ್ಮ ಹೊಟ್ಟೆಕಿಚ್ಚು ತೋರಿಸುತ್ತಿದ್ದರು. ಅವರವರ ಹೆಂಡಂದಿರು ಚೆನ್ನಾಗಿ ಬೈದು, ಗೋಪಿನ ನೋಡಿ ಕಲಿತುಕೋ ಅಂತ ಹಿಡಿ ಉಪ್ಪು ಹಾಕಿ ರುಬ್ಬಿರ್ತಾರೆ ಅಂತ ಅರ್ಥ ಆಗ್ತಾ ಇತ್ತು.

ಆದರೆ ಅದೇ ಹೆಂಗಸರ ಕಣ್ಣಲ್ಲಿ ನನ್ನ ಬಗ್ಗೆ ಅಭಿಮಾನ ಮೆಚ್ಚುಗೆ ಎದ್ದು ಕಾಣಿಸೋದು. ಅವರವರಲ್ಲೇ ಮಾತು ಕತೆ ಆದಾಗ ಅದಕ್ಕೆ ಎಷ್ಟೊಂದು ಬುದ್ಧಿನೇ, ನಮ್ಮದೂ ಇದೆ ನೋಡು ಅಂತ ಮಾತಾಡಿಕೊಳ್ಳೋದು ನನ್ನ ಕಿವಿಗೆ ಬೀಳೋದು. ಅದು ಅಂದರೆ ನಾನು. ನಮ್ಮದು ಅಂದರೆ ಅವರ ಗಂಡ ಎಂದು ಅರ್ಥೈಸಿದ್ದೆ…. ಹತ್ತಿರ ಹೋಗ್ತಾ ಇದ್ದ ಹಾಗೆ ಈ ಮಾತು ಬದಲಾಗುತ್ತಿತ್ತು.

ಯಾರದ್ದೋ ಮನೆ ಬಿಸಿಬೇಳೆ ಭಾತ್ ಚೆನ್ನಾಗಿರಲಿಲ್ಲ… ಅಂತ ಕೇಳೋದು! ಇದು ನನ್ನ ಬುದ್ಧಿವಂತಿಕೆಗೆ ದೊರೆತ ಮೆಚ್ಚುಗೆ ಅಂತ ನನಗೆ ಹೇಳಿಕೊಳ್ಳಲಾಗದ ಸಂತೋಷ. ಹೆಂಡತಿಗೂ ಸಹ ಹೇಳದೆ ಈ ಸಂತೋಷವನ್ನು ಸುಮಾರು ವರ್ಷ ಅನುಭವಿಸಿದ್ದೇನೆ ಮತ್ತು ಹೊಟ್ಟೆ ಒಳಗೆ ಅದುಮಿಕೊಂಡ ಅತ್ಯಂತ ಸುಖ ಕೊಟ್ಟ ಈ ರಹಸ್ಯದಿಂದ ಹೊಟ್ಟೆ ಉಬ್ಬರಿಸಿದ್ದು ಮತ್ತೂ ಮತ್ತೂ ಉಬ್ಬರಿಸುತ್ತಾ ಹೋಗಿ ಈಗ ಆಲ್ ಇಂಡಿಯಾ ಲೆವೆಲ್ ತಲುಪಿದೆ, ಹೊರ ಹಾಕಲು ಆಸ್ಪದವೇ ಸಿಗದೆ. best bulged tummy ಅಂತ ಒಂದು ಅವಾರ್ಡ್ ಏನಾದರೂ ಇದ್ದಿದ್ದರೆ ಅದು ನನಗೇ ಬರ್ತಾ ಇತ್ತು.

ಓನರ್ ಜತೆ ಆಗಾಗ ಸಣ್ಣ ಪುಟ್ಟ ಮುನಿಸು ಹುಟ್ಟುತ್ತಿತ್ತು ಮತ್ತು ಅದು ಸಂಬಳದ ದಿವಸ ಹತ್ತಿರ ಬಂದ ಹಾಗೆ ಕರಗುತಲು ಇತ್ತು.
ಮನೆ ಕಟ್ಟಿದ ಕತೆಗೆ ಈಗ ಜಂಪಿಸುತ್ತೇನೆ.

ಒಂದು ದಿವಸ ಹೆಂಡತಿ ಮಗು ಜತೆ ಮೇಲಿನ ರೂಫ್‌ನಲ್ಲಿ ಕ್ರಿಕೆಟ್ ಆಟ ಆಡುತ್ತಿದ್ದೆ. ಮಗ ಬ್ಯಾಟ್ಸ್ ಮನ್ ನಾನು ಬೋಲರ್, ಹೆಂಡತಿ ವಿಕೆಟ್ ಕೀಪರ್. ಎರಡು ಓವರ್ ಆಡಿದ್ದಿವಿ ಅಂತ ಕಾಣುತ್ತೆ. ಎರಡು ಓವರ್ ಒಂದೇ ಸಮ ಆಡುವುದು ಯಾವುದೇ ಹೆಂಡತಿಗೆ ಅಸಾಧ್ಯ. ಯಾಕೆ ಅಂದರೆ ಹೆಣ್ಣಿನ ಮನಸು ಚಂಚಲ ಅಲ್ಲವೇ. ಮೂರನೇ ಓವರಿನ ಮೊದಲನೇ ಬಾಲು ಮಗ ಬಾರಿಸಿದ. ಬಾಲ್ ಬಿಟ್ಟ ಹೆಂಡತಿ ಒಂದು ಕ್ಷಣ ನಿಂತು ಸುತ್ತಲೂ ನೋಡಿದಳು. ನಿಮ್ಮ ಸೈಟ್ ಯಾವಕಡೆ ಬರುತ್ತೆ ಅಂತ ಕೇಳಿದಳು. ನಾನು ಒಂದು ಕ್ಷಣ ತಬ್ಬಿಬ್ಬಾದೆ. ಸುತ್ತಲೂ ನೋಡಿದೆ ರೂಫ್ ಮೇಲೆ ನಿಂತು ಕೊಂಡೇ. ಸೈಟ್ ಯಾವ ಕಡೆ ಬರುತ್ತೆ ಅಂತ ಸೂಜಿ ಮೊನೆ ಅಂದಾಜು ಸಹ ನನಗೆ ಇರಲಿಲ್ಲ. ಅದು ಹೆಂಡತಿ ಎದುರು ತೋರಿಸಲು ಸಾಧ್ಯವೇ? ನಿಂತ ಕಡೆಯಿಂದ ಅಂಬೇಡ್ಕರ ಪ್ರತಿಮೆಯಲ್ಲಿದ್ದ ಹಾಗೆ ಬಲಗೈ ಚಾಚಿ ನೋಡು ಅಲ್ಲಿ ಅಂದೆ!

ಹೆಂಡತಿ ಕಿಸಕ್ ಅಂದಳು. ಆ ಕಡೆ ನಿಮ್ಮ ಫ್ಯಾಕ್ಟರಿ ಅಲ್ಲವೇ…. ಅಂದಳು! ನಾನು ತಬ್ಬಿಬ್ಬಾದೆ. ಹೌದಾ ಆಕಡೆ ಅಂತ ನೆನಪು….. ಅಂದೆ. ಮತ್ತೊಮ್ಮೆ ಕಿಸಕ್ ರಿಪೀಟ್ ಆಯಿತು. ನಾಳೆ ಸೈಟ್ ಹತ್ತಿರ ಹೋಗಿ ನೋಡೋಣವಾ ಅಂತ ಕೇಳಿದಳು. ಮುಂದೆ ಮಾತು ಬೆಳೆಸಲಿಲ್ಲ ಅಂತ ನನಗೆ ಒಳಗೊಳಗೇ ಸಂತೋಷ ಆಯಿತು. ಅಡಕತ್ತರಿಯಲ್ಲಿ ಸಿಕ್ಕಿಕೊಳ್ಳುವ ಅವಕಾಶ ತಪ್ಪಿದರೆ ಯಾವ ಗಂಡಸಿಗೆ ತಾನೇ ಸಂತೋಷ ಆಗೊಲ್ಲ ಹೇಳಿ! ತಲೆ ಆಡಿಸಿ ಮಾರನೇ ಸಂಜೆ ಸೈಟ್ ನೋಡುವ ಪ್ರೋಗ್ರಾಂ ಫಿಕ್ಸ್ ಮಾಡಿದೆವು.

ಇದುವರೆವಿಗೂ ನಾನು ಆ ಸೈಟ್ ನೋಡಿರಲಿಲ್ಲ ಮತ್ತು ಹೆಂಡತಿಗೆ ಇದನ್ನು ಅಂದರೆ ನಾನು ಸೈಟ್ ನೋಡಿಲ್ಲದಿರುವುದನ್ನು ಹೇಳಿರಲಿಲ್ಲ. ಕಾರಣ ಸ್ಪಷ್ಟ, ಜಾಗ ನೋಡದೇ ಅಷ್ಟೊಂದು ಹಣ ಸುರಿಯೋಕ್ಕೆ ನೀನೇನು ಕುಭೇರನ ಮಗನೇ ಅಂತ ಅಂದು ಬಿಟ್ಟಾ ಳುಎನ್ನುವ ಯೋಚನೆ(ಕುಭೇರನ ಅನ್ನುವುದು ವ್ಯಾಕರಣ ತಪ್ಪು ಅಂತ ನನಗೆ ಗೊತ್ತು. ಅದು ಕುಬೇರ, ಕುಭೇರನ ಅಲ್ಲ ಭ ಅಲ್ಲ ಬ ಅಂತಲೂ ಗೊತ್ತು. ಅಲ್ಲಿ ಮಹಾಪ್ರಾಣ ಪ್ರಯೋಗ ಇಲ್ಲ ಅಂತ ಗೊತ್ತು. ಆದರೆ ಕೆಲವು ಸಲ ನಮ್ಮ ಮಾತಿಗೆ ಹೆಚ್ಚಿನ ಪವರ್ ತುಂಬ ಬೇಕು ಅಂದರೆ ಹೆಚ್ಚಿನ ಮಹಾಪ್ರಾಣಗಳ ಪ್ರಯೋಗ ಬೇಕೇ ಬೇಕು ಎಂದು ನಮ್ಮ ಮಂತ್ರಿಗಳ ಭಾಷಣ ಕೇಳಿ ಕೇಳಿ ನಂಬಿದ್ದೇನೆ). ಆಗ ಆ ಹಣ (ಮೂರು ಸಾವಿರದ ಏಳುನೂರು) ನಮಗೆ( ತಳ ಮಧ್ಯಮ ವರ್ಗದವರಿಗೆ.. ಅಂದರೆ ಲೋಯರ್ ಮಿಡಲ್ ಕ್ಲಾಸ್) ದೊಡ್ಡ ಮೊತ್ತವೇ. ಯಾವ ಶತ ಪೆದ್ದಾನೂ ಊಹೂಂ ಸಹಸ್ರ ಪೆದ್ದನೂೂ ಜಾಗ ನೋಡದೇ ಅಷ್ಟು ಹಣ ಸುರಿಯುವ ಸಾಧ್ಯತೆ ಕೋಟಿಗೆ ಒಂದು ಊಹೂಂ ಕೋಟಿಗೆ ಒಂದಲ್ಲ, ಸಾಧ್ಯತೆಯೇ ಇಲ್ಲ.

(ವಿದ್ಯಾರಣ್ಯಪುರ, ನಂಜಪ್ಪ ವೃತ್ತದ ರಸ್ತೆ ಆಗ (1984)

ಸೈಟ್ ನೋಡಲು ಹೋಗಿ ಸರಿಯಾದ ಜಾಗ ಅಲ್ಲಿ ಸಿಗದೇ ಹೆಂಡತಿ ಎದುರು ನಗೆಪಾಟಲಿಗೆ ಗುರಿಯಾಗೋದು ಯಾವ ಗಂಡಸಿಗೆ ಭೂಷಣ ಹೇಳಿ? ರವಿಯಾಕಾಶಕೆ ಭೂಷಣಂ ತರಹ ಗಂಡಿಂಗೆ ಹೆಂಡತಿಯೆದುರಂ ಜಾಣನೆಂದು ತೋರ್ಪುದು ಭೂಷಣಂ…

ಮಾರನೇ ದಿವಸ ಫ್ಯಾಕ್ಟರಿಗೆ ಹೋದಕೂಡಲೇ ಸೊಸೈಟಿ ಆಫೀಸಿಗೆ ಹೋಗಿ ಸೈಟ್ ಲೋಕೇಶನ್ನು, ನೇರ ಹೇಗೆ ಹೋಗಿ ಸೇರಬೇಕು ಅನ್ನುವ ಹಲವು ಸಂಗತಿಗಳನ್ನು ತಿಳಿದುಕೊಂಡೆ. ಲೇ ಔಟ್ ಮತ್ತು ಸೈಟ್ ಪ್ಲಾನ್ ಟೇಬಲ್ ಮೇಲೆ ಉದ್ದಕ್ಕೆ ಹರಡಿ ನನಗೆ ಅಲ್ಲಿ ಹೋಗುವ ಹಾದಿ ತೋರಿಸಿದರು. ವಿವರವಾಗಿ ಗೆರೆ ಎಳೆದು ಮೂರು ಮೂರು ಸಲ ಹೇಳಿ ನನಗೆ ಅರ್ಥ ಆಗಿದೆ ಅಂತ ಖಾತ್ರಿ ಆದಮೇಲೆ ಸರಿ ಅಂದರು. ಅವರೂ ಗಂಡುಗಳೇ ತಾನೇ? ಅವರಿಗೂ ಈ ಅನುಭವ ಚೆನ್ನಾಗಿಯೇ ಆಗಿದೆ ಅನಿಸಿತು. ಸನ್ನದ್ಧನಾಗಿ ಮತ್ತೆ ಒಂದೆರೆಡು ಸಲ ಮನಸಿನಲ್ಲೇ ಗುರುತು ಮಾಡಿಕೊಂಡು ಮನೆ ಸೇರಿದೆ. ನಮ್ಮ ಸೈಟಿನ ಮೊದಲ ದರ್ಶನಕ್ಕೆ ನಮ್ಮ ಭೇಟಿಯ ವೇದಿಕೆ ಸಿದ್ಧ ಆಯಿತು. ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಹೊಸ ಸ್ಥಳಗಳಿಗೆ ಹೋಗಬೇಕಾದರೆ ವಂಧಿ ಮಾಗಧರು, ಅವರ ಪರಿವಾರ, ಊಳಿಗದವರು, ಅಂತಃಪುರ, ದಾಸ ದಾಸಿಯರು… ಹೀಗೆ ಇಡೀ ರಾಜಧಾನಿ ಆನೆ ಕುದುರೆ ಪದಾತಿ ಸೈನಿಕರ ನಡುವೆ ಪ್ರಯಾಣ ಮಾಡುತ್ತಿದ್ದರು.

ನಂತರ ಪ್ರಜಾ ಪ್ರಭುತ್ವದಲ್ಲಿ ದೇಶಗಳು ಬಂದವು, ಅವು ರಾಜ್ಯ ಆದಾಗ ಇದರ ಅಂದರೆ ರಾಜ ಮಹಾರಾಜರ ಪ್ರವಾಸದ ಹೊರ ಮೈ ಸಂಪೂರ್ಣ ಬದಲಾಯಿತು. ಮೊದಲು ಒಂದು ಕಾರ್ಯಸೂಚಿ ಪಡೆ ಹೊರಡುತ್ತೆ. ಅಲ್ಲಿನ ಸ್ಥಳ ಪರಿಶೀಲನೆ ಮಾಡುತ್ತೆ. ಮೇಯಲು ಇರುವ ಹುಲ್ಲುಗಾವಲು ಹುಡುಕುತ್ತೆ. ಕುಡಿಯಲು ಇರುವ ಕೊಳಗಳ ಪಟ್ಟಿ ಆಗುತ್ತೆ. ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡ ನಂತರ ಮಂತ್ರಿ ಮುಖ್ಯಮಂತ್ರಿ, ಅವನ ಪರಿವಾರ, ರಾಣಿ ವಾಸ, ನರ್ತಕಿಯರು, ಅಪ್ಸರೆಯರು, ಕೈಮೈ ಪಾಲಿಶುದಾರರು, ಸರ್ಕಾರೀ ಉಸ್ತುವಾರಿ ಸಿಬ್ಬಂದಿ ಅಡುಗೆ… ಹೀಗೆ ಪರಿವಾರ ವಿಸ್ತಾರ ಆಗುತ್ತದೆ ಮತ್ತು ಅವರವರ ಯೋಗ್ಯತೆಗೆ ಅನುಸಾರವಾಗಿ ವಾಹನಗಳು ಸಿಬ್ಬಂದಿ ಜತೆಗೂಡಿ ನಿಗದಿತ ಸ್ಥಳ ಸೇರುತ್ತಾರೆ. ವ್ಯವಸ್ಥೆ ಲಾಗಾಯ್ತಿನಿಂದಲೂ ಹೀಗೇ ಇರುತ್ತದೆ ಮತ್ತು ಕೇರ್ ಟೇಕರ್ ಹುದ್ದೆ ಹೆಸರು ಬದಲಾಗುತ್ತೆ. ಹೇಳೋದು ಮರೆತೆ… ಪ್ರತಿಯೊಬ್ಬರಿಗೂ ಮಂತ್ರಿ ಪಂತ್ರಿ ಸೇರಿದ ಹಾಗೆ ಎಲ್ಲರಿಗೂ ಟಿ ಏ ಡಿ ಏ ಅವರ ಕುರ್ಚಿಗೆ ತಕ್ಕಹಾಗೆ ದೊರೆಯುತ್ತದೆ. ಇವೆಲ್ಲಕ್ಕೂ ಒಂದು ನೂತನ ನಾಮಕರಣ ಆಗಿದೆ. ಇಂತಹ ಪ್ರವಾಸಗಳಿಗೆ ಹೋಗಲು ಎಲ್ಲರೂ ತುದಿಗಾಲಲ್ಲಿ ನಿಂತಿರುತ್ತಾರೆ. ಮೋಜು ಮಸ್ತಿ ಕುಡಿತ ಕುಣಿತ…. ಇವೆಲ್ಲಕ್ಕೂ ಯಾರೋ ಬಡ ತೆರಿಗೆದಾರರ ಹಣ ವ್ಯಯ ಆಗುತ್ತೆ ಮತ್ತು ಇಂತಹ ಸಭೆಗಳು ಆಗಾಗ್ಗೆ ನಡಿತವೆ. ಒಂದು ಸಾಮಾನ್ಯ ಗಾದೆ ಎಲ್ಲರ ಮನಸ್ಸಿನಲ್ಲಿಯೂ ಕನಸಿನಲ್ಲಿ ಸಹ ಪ್ರತಿಧ್ವನಿಸುತ್ತದೆ. ಇದನ್ನು ಎಲ್ಲರೂ ಚಾಚೂ ತಪ್ಪದೇ ಆಚರಿಸುತ್ತಾರೆ. ಗಾದೆ ಯಾವುದು ಅಂತ ತಿಳಿಯಲಿಲ್ಲವೇ? ಅದೇ ಹುಚ್ಮುಂಡೆ ಮದುವೆಯಲ್ಲಿ ಉಂಡವನೇ ಜಾಣ!

ನಾನು ಸೈಟ್ ನೋಡೋಕ್ಕೆ ಅಂತ ಹೊರಟ ಪ್ರಸಂಗ ಎಲ್ಲೆಲ್ಲಿಗೋ ಎಳೆದುಕೊಂಡು ಹೋಗ್ತಾ ಇದೆ ಅಂತ ನಿಮಗೆ ಅನ್ನಿಸಿತಾ? ನನಗೂ ಸಹ ಹಾಗೇ ಅನಿಸಿದ್ದು. ಬನ್ನಿ ಈ ಪ್ರಸಂಗ, ಸೈಟ್ ನೋಡಲು ಹೋದ ಪ್ರಸಂಗ ಮುಂದುವರೆಸೋಣ…

ಶಿಫ್ಟ್ ಮುಗಿಸಿ ಮನೆಗೆ ಬಂದೆ. ಹತ್ತುನಿಮಿಷ ಹಾಗೆ ಹೀಗೆ ಸಮಯ ಕಳೆದು ಹೋಗೋಣ ಸೈಟ್ ನೋಡುಕ್ಕೆ.. ಅಂದೆ. ಬಿಸಿಲು ಇಳಿಯಲಿ, ಅಷ್ಟು ಹೊತ್ಗೆ ಮಗು ಏಳುತ್ತೆ ಅಂತ ಉತ್ತರ ಬಂತು. ರೂಮಿನಲ್ಲಿ ಚಾಪೆ ಹಾಸಿ ದಿಂಬು ಪೇರಿಸಿಕೊಂಡು ಹಾ ಅಂತ ಬಿದ್ದೆನಾ… ಮಂಚ ಇರಲಿಲ್ಲ ನಾವು ಬಾಡಿಗೆಗೆ ಬಂದಾಗ. ಮತ್ತು ಅದನ್ನು ಇನ್ನೂ ಕೊಂಡಿರಲಿಲ್ಲ. ಮಂಚ ಕೊಂಡ ಕತೆ ಮುಂದೆ ವಿಸ್ತಾರವಾಗಿ ಹೇಳುವೆ…

ಕಿವಿ ಹತ್ತಿರ ಯಾರೋ ತಮಟೆ ಹೊಡೀತಾ ಇದಾರೆ ಅನಿಸಿ ಕಣ್ಣು ತೆರೆದೆ. ಎದುರಿಗೇ ತ್ರಿಶೂಲ ಹಿಡಿದ ಕಿರೀಟ ಧರಿಸಿದ ಬಿಳಿ ಸೀರೆ ಕೆಂಪು ಅಂಚಿನದು ನೀಟಾಗಿ ಉಟ್ಟ, ಆಗ ತಾನೇ ಬ್ಯೂಟಿ ಪಾರ್ಲರ್‌ನಿಂದಾ ಆಚೆ ಬಂದಿರುವ ಕಾಳಿ ಮಾತೆ ಕಾಣಿಸಬೇಕೇ? ಹೇ ದುರ್ಗೇ ಪಾಹಿಮಾಂ… ಅಂತ ಕೈಮುಗಿಯಲು ಕೈ ಎತ್ತಿದೆ.

ಕುಂಭಕರ್ಣ, ಮೇಲೆ ಏಳಬಾರದೆ ಒಂದು ಗಂಟೆಯಿಂದ ಅರಚಿಕೊಳ್ತಾ ಇದೀನಿ ಅಂತ ನನ್ನಾಕೆ ಕಿರುಚುತ್ತಾ ಇದ್ದಳು. ದುರ್ಗಾ ಮಾತೆ ಸೀನು ಚೇಂಜ್ ಆಯ್ತಾ.. ಎದ್ದೆ, ಮೂರೂ ಜನ ನಾನು ನನ್ನಾಕೆ ನಮ್ಮ ಕುಮಾರ ಕಂಠೀರವ ಹೊರಟೆವು. ವಾಹನ ನನ್ನ ಐರಾವತ ನನ್ನ ಕೈಯಲ್ಲಿತ್ತು!

ನನ್ನ ಐರಾವತದ ಕತೆ ಏನಪ್ಪಾ ಅಂದರೆ ಅದರ ವಯಸ್ಸು ಆಗ ಇಪ್ಪತ್ತು ವರ್ಷ ಇರಬೇಕು. ನಾನು ಪಿಯುಸಿ ಓದುತ್ತಿದ್ದ ಕಾಲದಲ್ಲಿ ಅದನ್ನು ನನಗೆ ನಮ್ಮ ಮೂರನೇ ಅಣ್ಣ ಹ್ಯಾಂಡ್ ಓವರ್ ಮಾಡಿದ್ದ.

ಹ್ಯಾಂಡ್ ಓವರ್ ಸಂಸ್ಕೃತಿ

ನಮ್ಮ ಪೀಳಿಗೆಯಲ್ಲಿ ಈ ಹ್ಯಾಂಡ್ ಓವರ್ ಸಂಸ್ಕೃತಿ ಎಲ್ಲಾ ಕುಟುಂಬದಲ್ಲೂ ಇದ್ದವು. ಒಂದೆರೆಡು ಉದಾಹರಣೆ, ನನ್ನ ಅನುಭವದ್ದು… ಇದನ್ನು ಹೇಳಿಬಿಟ್ಟು ಸೈಟ್ ಸಂಗತಿಗೆ ಬರುತ್ತೇನೆ. ನಮ್ಮ ಕಾಲದಲ್ಲಿ ಐದಾರು ಜನ ಮಕ್ಕಳು ಒಂದು ತಂದೆಗೆ ಕಾಮನ್. ಕಿತ್ತು ತಿನ್ನುವ ಬಡತನ. ಅದರ ಪರಿಣಾಮ ಅಂದರೆ ಮಕ್ಕಳಿಗೆ ಚೆಡ್ಡಿ ಹೊಲಿಸಲು ಕಾಸು ಇರ್ತಾ ಇರಲಿಲ್ಲ. ಮೊದಲನೇ ಮಗನ ಚೆಡ್ಡಿಗೆ ಕೂಡುವ ಭಾಗದಲ್ಲಿ ತೇಪೆ ಹಾಕಿಸಿ ಎರಡನೆಯವನಿಗೆ ಹಾಕುತ್ತಿದ್ದರು, ಅವನ ನಂತರ ಮೂರನೇ ಅವನು, ಅದಾದ ಮೇಲೆ ನಾಲ್ಕು, ಐದು ಹೀಗೆ. ಕೊನೇ ಹುಡುಗನ ಬಳಿ ಬರುವ ಹೊತ್ತಿಗೆ ಚಡ್ಡಿಗೆ ತೇಪೆ ಹಾಕಲು ಜಾಗವೇ ಇರ್ತಾ ಇರಲಿಲ್ಲ. ಆಗಿನ್ನೂ ಪ್ರೈವೇಟ್ ಸ್ಕೂಲ್ ಬಂದಿರಲಿಲ್ಲ ಮತ್ತು ಎಲ್ಲರೂ ಸರ್ಕಾರಿ ಶಾಲೆ. ತೇಪೆ ಇಲ್ಲದಿರುವ ಚೆಡ್ಡಿ ಹಾಕಿದವನು ಮನೆಯ ಮೊದಲ ಮಗ ಎಂದು ಸುಲಭವಾಗಿ ಗೊತ್ತಾಗುತ್ತಿತ್ತು. ತೇಪೆ ಬಟ್ಟೆಯ ದಪ್ಪದ ಮೇಲೆ ಹುಡುಗ ಅವರ ಮನೆಯಲ್ಲಿ ಎಷ್ಟನೆಯವನು ಎಂದು ನೂರಕ್ಕೆ ನೂರರಷ್ಟು ನಿಖರವಾಗಿ ಹೇಳುವ ಮೇಷ್ಟ್ರುಗಳು ಇದ್ದರು! ಹುಡುಗಿಯರ ಹ್ಯಾಂಡ್ ಓವರ್ ಸಂಸ್ಕೃತಿ ಹುಡುಗರದ್ದಕ್ಕಿಂತಲು ವಿಭಿನ್ನ. ಅದನ್ನು ಇನ್ಯಾವಾಗಲಾದರೂ ಹೇಳುತ್ತೇನೆ, ನೆನಪಿಸಿ.

ನನ್ನ ಐರಾವತ ಅಂದರೆ ನನ್ನ ಸೈಕಲ್. ನಾನು ಅದರ ಮೇಲೆ ಕುಳಿತರೆ ಐರಾವತ ಸೈಕಲ್ ಮೇಲೆ ಕುಳಿತ ಹಾಗೆ ಕಾಣುತ್ತಿತ್ತು ಅಂತ ನನ್ನ ಗೆಳೆಯರು ಹೇಳುತ್ತಿದ್ದರಂತೆ. ಇದು ನನಗೆ ಮೂರನೇಯವರು ಹೇಳಿದ್ದು. ಅದು ನಿಜ ಇದ್ದರೂ ಇರಬಹುದು. ನೂರಾ ಮೂವತ್ತು ಕೇಜಿ ಮನುಷ್ಯ ಸೈಕಲ್ ಮೇಲೆ ಕೂತರೆ ಹೇಗೆ ಕಾಣಬಹುದು ಕಲ್ಪಿಸಿಕೊಳ್ಳಿ..!

ನಾನು ಸೀಟಿನ ಮೇಲೆ ನಮ್ಮ ಮಗ ಬಾರ್ ಮೇಲಿದ್ದ ಮಕ್ಕಳ ಸೀಟ್‌ನಲ್ಲಿ, ನನ್ನಾಕೆ ಹಿಂದಿನ ಕ್ಯಾರಿಯರ್ ಮೇಲೆ ಕೂತು ಸೈಟ್ ವೀಕ್ಷಣೆಗೆ ಹೊರಟೆವು. ಮನೆ ಹಿಂದಿನ ಮಣ್ಣಿನ ರಸ್ತೆ ದಾಟಿ ಮುಂದೆ ಬಂದವ, ದೊಡ್ಡ ಹಳ್ಳ. ಅಲ್ಲಿ ಇಳಿದು ಸೈಕಲ್ ದೂಡಿಕೊಂಡು ಮುಂದೆ ಬಂದರೆ ದೊಡ್ಡ ಕೆರೆ, ಎರಡೂ ಕಡೆ ನೀರು. ಮಧ್ಯೆ ಕೆಸರು ಕೆಸರಿನ ಕಾಲು ದಾರಿ. ಸೈಕಲ್ ಮೇಲೆ ಕೂತು ಸರ್ಕಸ್ ಮಾಡುತ್ತಾ ಸಾಗಬೇಕು ಹಾಗಿದ್ದ ರಸ್ತೆ. ಸರ್ಕಸ್ ಮಾಡಬೇಕಾದರೆ ಮಗುಚಿಕೊಂಡರೆ ಅಂತ ಹೆದರಿಕೆ ಆಯ್ತಾ.. ಸೈಕಲ್ ದೂಡಿಕೊಂಡೇ ಕಾಲು ದಾರಿಯಲ್ಲಿ ಸರ್ಕಸ್ ಮುಂದುವರೆಸಿ ಎಡಕ್ಕೆ ತಿರುಗಿದೆವು. ತಲೆಯಲ್ಲಿ ಬೆಳಿಗ್ಗೆ ಹೌಸ್ ಬಿಲ್ಡಿಂಗ್ ಸೊಸೈಟಿಯಲ್ಲಿ ನೋಡಿದ್ದ ಪ್ಲಾನ್ ನಕ್ಷೆ ಅಚ್ಚು ಹೊಡೆದಿತ್ತು. ಎಡಗಡೆ ತಿರುಗಿ ಒಂದು ಕಿಲೋಮೀಟರ್ ಅಷ್ಟು ಸೈಕಲ್ ಹತ್ತಿ ಇಳಿದು ಹತ್ತಿ ಇಳಿದು ಸರ್ಕಸ್ ಮಾಡಿದ್ದೆವು. ಮರಗಳ ಒಂದು ಚಿಕ್ಕ ಕಾಡು ಬಂತಾ. ಅದನ್ನು ದಾಟಿ ಮುಂದೆ ಬಂದರೆ ಈಚಲ ಮರದ ಗುಂಪು . ಮುಂದೆ ಬಂದರೆ ಎದುರು ಒಂದು ಕೆರೆ ಮೊದಲು ಕಂಡ ಕೆರೆಗಿಂತ ಚಿಕ್ಕದು. ಅದರ ನಡುವೆ ಕಲ್ಲು ಚಪ್ಪಡಿ ಹಾಸಿರುವ ಪುಟ್ಟ ಬ್ರಿಡ್ಜ್, ಅದರ ಮೇಲೆ ಹಂಗೇ ಹೋದರೆ ಕೆರೆಯ ಆಕಡೆಯ ಅಂಚು. ಕೆರೆ ದಾಟಿ ನಿಂತೇವಾ..

(ದೊಡ್ಡ ಬೊಮ್ಮಸಂದ್ರ ಕೆರೆ)

ಕೆರೆ ತಿಳಿ ನೀರು ತುಂಬಿದ ಕೊಳ. ಅದರ ಸುತ್ತ ಕೊಕ್ಕರೆಗಳು ಮತ್ತು ಪಶ್ಚಿಮದ ಸೂರ್ಯ. ಕೆರೆಯ ಅಂಗಳದಲ್ಲಿ ಹುಲ್ಲು ಮೇಯುತ್ತಿರುವ ಹಸು, ಅದರ ಹಿಂದೆ ಅಮ್ಮನನ್ನು ಆತು ನಿಂತ ಕರು.. ಆಕಾಶದಲ್ಲಿ ಹಸಿರು ಹಳದಿ ಮಿಶ್ರಿತ ಮೋಡ…
ಹೆಂಡತಿ ಭುಜ ತಟ್ಟಿದಳು. ಸೈಟು ಎಲ್ಲಿದೆ? ಮರೆತು ಬಿಟ್ರಾ….

ಕೆರೆಕಡೆ ನೋಡುತ್ತಾ ಕವಿ ಆಗಿದ್ದವನು ಅವಳತ್ತ ತಿರುಗಿದೆ…
ಏನು.. ಅಂದೆ
ಸೈಟು ಸೈಟು ಎಲ್ಲಿದೆ? ಕೆರೆ ಹತ್ತಿರ ಕರ್ಕೊಂಡು ಬಂದು ಇಲ್ಲೇ ನಿಂತ್ರಿ…..
ಅವಳತ್ತ ತಿರುಗಿದೆ.
ಇಲ್ಲಿ ನೋಡು.. ಅಂದೆ.
ನನ್ನ ಕಡೆ ಕಣ್ಣು ಅಗಲಿಸಿ ನೋಡಿದಳು.
ನೀನು ನಿಂತಿದ್ದೀಯಲ್ಲ.. ಅದೇ ನಮ್ಮ ಸೈಟು…. ಅಂದೆ. ಮಗ ಆಗಲೇ ಅಲ್ಲಿ ಕುಣಿದು ಕುಪ್ಪಳಿಸುತ್ತಾ ಇದ್ದ. ಕೆರೆಯಲ್ಲಿನ ಕೊಕ್ಕರೆ ಕಂಡು ಎಕ್ಸೈಟ ಆಗಿದ್ದ.
ಎಷ್ಟು ಚೆನ್ನಾಗಿದೆ ಅಲ್ವಾ ಸೀನರಿ.. ಅಂದೆ…
ನನ್ನಾಕೆ ತಲೆ ಆಡಿಸಿದಳು. ಕೆರೆ ಸುತ್ತ ಇದ್ದ ಕೊಕ್ಕರೆ ಅಲ್ಲಿನ ನೀರು ಅದರ ಪಕ್ಕದ ತಂಪಾದ ಜಾಗ, ನಾವು ನಿಂತಿದ್ದ ಸಮತಟ್ಟಿನ ನೆಲ…… ಸೀನರಿ ಹೃದಯ ತುಂಬಿತ್ತು…

ಪಕ್ಕದಲ್ಲಿ ವಿಧಿ ನಿಂತು ಮಗನೇ ಕೋಟಿ ಕೊಟ್ಟರೂ ಬರೋಲ್ಲ ಇಲ್ಲಿಗೆ ಅಂದಿದ್ದೆ ಅಲ್ವಾ, ನಿನಗೆ ಹೇಗೆ ಬುಗುರಿ ತರಹ ಆಡಿಸ್ತಿನಿ ನೋಡ್ಕೋ.. ಅಂತ ಗಹ ಗಹ ಗಹ ಗಹಿಸಿತಾ….! ನಾಲ್ಕು ದಶಕದಲ್ಲಿ ನೆನಪು ಕೊಂಚ ಮಾಡಿರಬಹುದು. ಆದರೂ ವಿಧಿ ಹೆಚ್ಚು ಕಡಿಮೆ ಇದೇ ವಾಕ್ಯ ಹೇಳಿ ಹತ್ತಾರು ಸ್ಟೆಪ್ಸ್ ಹಾಕಿ ಗರ ಗರ ತಿರುಗಿ ಬಿಕ್ಕಿ ಬಿಕ್ಕಿ ನಕ್ಕಿರಬೇಕು.

ಪ್ರಿಯ ಓದುಗ ಮಹಾಶಯ,
ಇದು ಐವತ್ತನೇ ಕಂತು. ಹೇಗಿದೆ ಎಂದು ತಿಳಿಸಿ. ಇಷ್ಟ ಆದರೆ ಮುಂದುವರೆಸುವೆ….