ಕಣ್ಣು ತೇವಗೊಂಡು, ಭಾವ ಗಂಟಲುಬ್ಬಿ ಬಂದು, ಆ ನವದುರ್ಗೆಯರಲ್ಲೂ, ನನ್ನಲ್ಲೂ, ನನ್ನ ಮಗಳಲ್ಲೂ ಅಮ್ಮನನ್ನೇ ಗುರುತಿಸುತ್ತಾ ಅವಳು ಕಲಿಸಿದ ದೇವರ ನಾಮ ಗುನುಗುತ್ತೇನೆ. ಅವಳನ್ನೇ ಮೈವೆತ್ತಂತೆ ಮತ್ತೆ ಮತ್ತೆ ಮೈದುಂಬಿ ಹಾಡುವಾಗ, ನನ್ನ ಮಗಳು ಕೂಡ ನನ್ನ ಜೊತೆ ಗುನುಗುತ್ತಾ ಮುಗುಳ್ನಗುತ್ತಾಳೆ. ತಲೆಮಾರುಗಳ ಸಂಯೋಜನೆಯೊಂದು ಸಜೀವವಾಗಿ ಕಣ್ಣೆದುರು ನಿಂತಂತಾಗುತ್ತದೆ. ನನ್ನೊಳಗಿನ ಅಮ್ಮ ಈಗ ಅವಳ ತುಟಿಯಲ್ಲಿ ಮೂಡುತ್ತಿದ್ದಳೆ. ಅವಳೂ ಕೂಡ ನಾಳೆ ನಾ ಅಮ್ಮನಿಂದ ಕಲಿತು, ಕಲಿಸಿದ ಹಾಡನ್ನೇ ತನ್ನದೇ ದನಿಯಲ್ಲಿ, ತನ್ನದೇ ಭಾವದಲ್ಲಿ ಪುನರ್ಜೀವಗೊಳಿಸುತ್ತಾಳೆ.
ನವರಾತ್ರಿ ಆಚರಣೆಯಲ್ಲಿ ಅಮ್ಮನ ನೆನಪುಗಳ ಕುರಿತು ಗಾಯತ್ರಿ ರಾಜ್ ಬರಹ
ನವರಾತ್ರಿ ಹಬ್ಬ ಬಂತಂದ್ರೆ… ನನ್ನ ಮನಸ್ಸು ಮತ್ತೆ ತವರು ಮನೆಯ ಅಂಗಳಕ್ಕೆ ಹಿಂತಿರುಗಿಬಿಡುತ್ತದೆ. ಯಾವುದೋ ಹಾಡಿನ ಸಾಲು ಗುನುಗುತ್ತಾ ಅಂಗಳದಲ್ಲಿ ಹೂಕಟ್ಟುತ್ತಿದ್ದ ಅಮ್ಮನ ಆ ಬೆರಳಿನ ಸ್ಪರ್ಶಕ್ಕೆ, ಅವಳ ಹಸಿರು ಬಳೆಗಳ ಶಬ್ದಕ್ಕೆ, ಮನೆ ತುಂಬ ಹರಡಿದ್ದ ಅಡುಗೆಯ ಘಮ ಮತ್ತು ಎದೆಯ ತುಂಬಾ ತುಂಬಿದ ಅವಳ ಹಾಡಿನ ಸರಿಗಮಕ್ಕೆ ಮನಸ್ಸು ಮತ್ತೆ ಹಸಿಯಾಗುತ್ತದೆ.
ಇಂದು ಅಮ್ಮ ಇಲ್ಲದ ತವರು ಬಲು ದೂರ. ಆಕೆ ತಬ್ಬದ ಮನದಂಗಳ ಬಲು ಖಾಲಿ. ಆದರೆ ಮರೆಯಲಾಗದಿದ್ದು ಅವಳು ಕಲಿಸಿದ ಜೀವನ ಮೌಲ್ಯ, ಮಧುರ ನೆನಪು ಮತ್ತು ಅಪ್ಪುಗೆಯ ಬಿಸುಪು. ಇತ್ತೀಚಿನ ದಿನಗಳಲ್ಲಿ ಹಬ್ಬವೊಂದು ಕೇವಲ ಪಟ್ಟಿಯಂತೆ ಆಗಿ ಬಿಟ್ಟಿದೆ. ಆಡಂಬರವಿದೆ ಆದರೆ ಮೊದಲಿದ್ದ ಆಪ್ತ ಸಡಗರವಿಲ್ಲ. ಆಯಾ ಹಬ್ಬಕ್ಕೆ ಇಂಥದನ್ನು ಖರೀದಿ ಮಾಡು, ಚಂದ ಅಲಂಕಾರ ಮಾಡು, ಅತಿಥಿಗಳಿಗೆ ಭರ್ಜರಿ ತಯಾರಿ ಮಾಡು. ಎಲ್ಲವೂ ಸದ್ದುಗದ್ದಲದ ಯಾಂತ್ರಿಕ ಕ್ರಮಗಳಂತೆ ನಡೆದರೂ ನವರಾತ್ರಿ ಬಂತಂದ್ರೆ ಮಾತ್ರ ಆ ಬಾಹ್ಯ ಶ್ರಮಗಳ ಮಧ್ಯೆಯೂ ಅಮ್ಮ ನೆನಪಾಗಿಬಿಡ್ತಾಳೆ. ಅಮ್ಮನ, “ನವರಾತ್ರಿ ಎಂದರೆ ಬರೀ ಆಡಂಬರವಲ್ಲ ಕಣೇ, ಅದು ಒಂದು ಶ್ರದ್ಧೆ” ಎಂಬ ಮಾತು ಮನಸ್ಸಿನಲ್ಲಿ ಪ್ರತಿಧ್ವನಿಸುತ್ತದೆ.
ಹೌದು, ಹಬ್ಬವೆಂದರೆ ಬರೀ ಸಂಭ್ರಮದ ಆಚರಣೆಯಲ್ಲ. ನವರಾತ್ರಿಯಂತೂ ಇತರ ಹಬ್ಬಗಳಂತೆ ಸದ್ದುಗದ್ದಲಿನ ಹಬ್ಬ ಅಲ್ಲವೇ ಅಲ್ಲ. ಒಂಭತ್ತು ದಿನಗಳ ಆ ದೇವಿ ಆರಾಧನೆಯಲ್ಲಿ ಪ್ರತಿಯೊಂದು ಹೃದಯದಲ್ಲೂ ಮಲಗಿರುವ ಸ್ತ್ರೀಶಕ್ತಿಯನ್ನು ಜಾಗೃತಗೊಳಿಸುವ ಒಂದು ಆಂತರಿಕ ಪ್ರಕ್ರಿಯೆ ಇದೆ. ಪ್ರತಿದಿನವೂ ವಿವಿಧ ದೇವಿಯ ರೂಪಗಳೊಂದಿಗೆ ಆಕೆಯ ವಿಭಿನ್ನ ಶಕ್ತಿಗಳನ್ನು ಆರಾಧಿಸುತ್ತಾ ನಮ್ಮೊಳಗಿನ ಧೈರ್ಯ, ತಾಳ್ಮೆ, ಕರುಣೆ, ಜ್ಞಾನಗಳ ಅನುಷ್ಠಾನಗೊಳಿಸುವ ದಿವ್ಯ ಕ್ರಮವಾಗಿದೆ. ಹಾಗಾಗಿ ನವರಾತ್ರಿ ಮನದ ಶುದ್ಧೀಕರಣಕ್ಕೂ, ಆತ್ಮದ ಶಕ್ತೀಕರಣಕ್ಕೂ ಸಾಕ್ಷಿಯಾದ ಒಂದು ದಿವ್ಯ ಆಧ್ಯಾತ್ಮಿಕ ಯಾತ್ರೆ.
ಹಾಗೆಂದೇ ಅಮ್ಮನ ಮಾತುಗಳನ್ನು ಮತ್ತೆ ಮತ್ತೆ ನೆನೆಯುತ್ತಾ, ಮುರಿದು ಬಿದ್ದ ಮನಸ್ಸಿಗೆ ಹುರಿದುಂಬಿಸುತ್ತಾ, ರಮಿಸುತ್ತಾ, ಸಿದ್ಧಗೊಳಿಸಿ ದೇವರ ಮುಂದೆ ಅಮ್ಮನ ಹೆಸರಿನಲ್ಲಿ ದೀಪ ಇಡುತ್ತೇನೆ. ಆಗ ಮನಸ್ಸಿನಲ್ಲೂ ಬೆಚ್ಚನೆಯ ಶಕ್ತಿಯೊಂದು ಆವರಿಸುತ್ತದೆ. ಹಚ್ಚಿಟ್ಟ ದೀಪ ಬರಿದೇ ಆರಾಧನೆಯ ಬೆಳಕು ಆಗಿರದೆ, ಅವಳು ಹಚ್ಚಿದ ಜ್ಞಾನದ ಬೆಳಕಿನಂತೆ ಮನೆ – ಮನದಲ್ಲೂ ಹಬ್ಬಿ ತಬ್ಬಿ ನಿಂತಾಗ, ನವದುರ್ಗೆಯರ ಪಟದಲ್ಲಿ ಅಮ್ಮನ ಹೆಸರಿನ ದೀಪದ ಜ್ಯೋತಿ ಪ್ರತಿಫಲಿಸಿ ಅಮ್ಮ ದೇವರಂತೆ ಉನ್ನತ ಸ್ಥಾನಕ್ಕೇರಿರುವಂತೆ ನವದುರ್ಗೆಯರ ಶಕ್ತಿಯಲ್ಲೂ ಅವಳನ್ನೇ ಕಾಣುವ ಯತ್ನ ಮಾಡುತ್ತಿದ್ದೇನೆ.
ಹೌದು ಅಮ್ಮ ಎಲ್ಲಿಲ್ಲ?
ಶೈಲಪುತ್ರಿಯ ಪರ್ವತದಂಥ ದೃಢ ನಿಲುವಿನಲ್ಲಿ, ಬ್ರಹ್ಮಚಾರಿಣಿಯ ಶುದ್ಧ ನಡೆಯಲ್ಲಿ, ಚಂದ್ರಘಂಟೆಯನ್ನು ನೆನೆಯುವ ಮೌನದ ಪ್ರಾರ್ಥನೆಯಲ್ಲಿ, ಕುಷ್ಮಾಂಡಳ ಸೃಷ್ಟಿಯ ಬೆಳಕಿನಲ್ಲಿ, ಸ್ಕಂದಮಾತೆಯ ಮಾತೃತ್ವದ ನಗುವಿನಲ್ಲಿ ಅಥವಾ ಕಾತ್ಯಾಯಿನಿಯ ಅಗ್ನಿಯಂತೆ ಜ್ವಲಿಸುವ ಶಕ್ತಿಯಲ್ಲಿ? ಎಲ್ಲಿಲ್ಲ ಅಮ್ಮ? ಭಯವನ್ನು ಹೊಡೆದೋಡಿಸುವ ಕಾಳರಾತ್ರಿಯ ಜ್ವಾಲೆಯಲ್ಲಿ, ಮಹಾಗೌರಿಯ ಶಾಂತ ನಗುವಿನಲ್ಲಿ ಅಥವಾ ಸಿದ್ಧಿದಾತ್ರೀ ಯ ಪ್ರಾರ್ಥನೆಯ ಮೃದು ಸ್ಪಂದನೆಯಲ್ಲಿ. ಎಲ್ಲಿಲ್ಲ ಅಮ್ಮ? ಈ ಎಲ್ಲಾ ಗುಣಗಳನ್ನು ಅವಳೆ ತಾನೆ ನನ್ನೊಳಗೆ ಹುಟ್ಟಿಸಿದ್ದು? ನಮ್ಮೊಳಗಿನ ಅಮ್ಮ… ಸಕಲ ಸ್ತ್ರೀ ಶಕ್ತಿಯೊಳಗಿನ ಅಮ್ಮಾ! ಜಗನ್ಮಾತೆ!
ಕಣ್ಣು ತೇವಗೊಂಡು, ಭಾವ ಗಂಟಲುಬ್ಬಿ ಬಂದು, ಆ ನವದುರ್ಗೆಯರಲ್ಲೂ, ನನ್ನಲ್ಲೂ, ನನ್ನ ಮಗಳಲ್ಲೂ ಅಮ್ಮನನ್ನೇ ಗುರುತಿಸುತ್ತಾ ಅವಳು ಕಲಿಸಿದ ದೇವರ ನಾಮ ಗುನುಗುತ್ತೇನೆ. ಅವಳನ್ನೇ ಮೈವೆತ್ತಂತೆ ಮತ್ತೆ ಮತ್ತೆ ಮೈದುಂಬಿ ಹಾಡುವಾಗ, ನನ್ನ ಮಗಳು ಕೂಡ ನನ್ನ ಜೊತೆ ಗುನುಗುತ್ತಾ ಮುಗುಳ್ನಗುತ್ತಾಳೆ. ತಲೆಮಾರುಗಳ ಸಂಯೋಜನೆಯೊಂದು ಸಜೀವವಾಗಿ ಕಣ್ಣೆದುರು ನಿಂತಂತಾಗುತ್ತದೆ. ನನ್ನೊಳಗಿನ ಅಮ್ಮ ಈಗ ಅವಳ ತುಟಿಯಲ್ಲಿ ಮೂಡುತ್ತಿದ್ದಳೆ. ಅವಳೂ ಕೂಡ ನಾಳೆ ನಾ ಅಮ್ಮನಿಂದ ಕಲಿತು, ಕಲಿಸಿದ ಹಾಡನ್ನೇ ತನ್ನದೇ ದನಿಯಲ್ಲಿ, ತನ್ನದೇ ಭಾವದಲ್ಲಿ ಪುನರ್ಜೀವಗೊಳಿಸುತ್ತಾಳೆ.
ಹೀಗೆ, ಅಮ್ಮ ಹಾಡಿದ್ದ ಹಾಡು, ಈಗ ನನ್ನ ಮಗಳ ಪಲುಕಿನಲ್ಲಿ ಜೀವಂತವಾದಂತಾಗಿ ಹಾಡಿನ ಪ್ರತಿಯೊಂದು ಅಲೆಗಳಲ್ಲಿ ಅಮ್ಮ ಮುಗುಳ್ನಗುತ್ತಾಳೆ, ಪಿಸುಗುಟ್ಟುತ್ತಾಳೆ,
“ನಾನೆಲ್ಲೂ ಹೋಗಿಲ್ಲ ಮಗಳೇ, ನಿನ್ನೊಳಗೆ, ನಿನ್ನ ಮಗಳೊಳಗೆ ನಾನಿದ್ದೇನೆ” ಎಂದು ಹೇಳಿದಂತಾಗುತ್ತದೆ.
ಹೌದೆನ್ನುವಂತೆ ಮನಸ್ಸು ಹಗುರವಾಗುತ್ತದೆ. ಅಮ್ಮ ಕಟ್ಟಿಹೋದ ಸಂಪ್ರದಾಯ, ಅವಳು ಕೊಟ್ಟುಹೋದ ಶಕ್ತಿ, ಅವಳು ಬಿಟ್ಟುಹೋದ ನಂಬಿಕೆ…. ಎಲ್ಲವೂ ನನ್ನ ಮೂಲಕ ನನ್ನ ಮಗಳಿಗೆ ಹರಿಯುತ್ತಿರುವುದ ನೋಡಿ ಮನಸ್ಸಿನಲ್ಲೇ ನಗುತ್ತೇನೆ.
ಅಮ್ಮ ನನ್ನ ಕೈ ಹಿಡಿದು ತಂದ ಸಂಸ್ಕಾರ, ಇಂದೀಗ ನಾನು ನನ್ನ ಮಗಳ ಕೈಗೆ ಇಡುತ್ತಿದ್ದೇನೆ. ಅವಳು ಬೆಳೆದಂತೆ ಅವಳೊಳಗೆ ಬೆಳೆಯುತ್ತಿರುವ ಈ ಹಬ್ಬ, ನಾವು, ನಮ್ಮದು ಎಂಬ ಸಂಪ್ರದಾಯದ ಬಿತ್ತನೆ, ನನ್ನನ್ನು ಮಾತ್ರವಲ್ಲ, ಅಮ್ಮನನ್ನೂ ಜೀವಂತವಾಗಿರಿಸುತ್ತಿದೆ. ಇದು ಕೇವಲ ಆಚರಣೆಯಲ್ಲ, ಇದು “ನಾವು” ಎಂಬ ಬಾಂಧವ್ಯದ ಬಿತ್ತನೆ. ಅಮ್ಮನಲ್ಲೂ ಇತ್ತು, ನನ್ನಲ್ಲೂ ಇದೆ, ಮಗಳಲ್ಲೂ ಇರುತ್ತೆ ಮುಂದೆ ಅವಳ ಮಗಳಲ್ಲೂ ಇದು ಹರಿಯುವ ಒಂದು ನಿರಂತರ ಶ್ರೇಣಿಯ ಜ್ಯೋತಿ.
ಈ ನವರಾತ್ರಿಯಲ್ಲಿ ಅಮ್ಮ ನನಗೆ ಮತ್ತೆ ಸಿಕ್ಲು.
ಅಮ್ಮ ನಮ್ಮೊಂದಿಗೇ ಇದ್ದಾಳೆ ಮತ್ತು ನಾಳೆ ನಾನು ನನ್ನ ಮಗಳಲ್ಲಿ.
ಕಲಿಸಿದ ಹಾಡಿನಲ್ಲಿ…
ಆಚರಿಸುವ ಹಬ್ಬಗಳಲ್ಲಿ…
ಮುನ್ನಡೆಸುವ ಸಂಪ್ರದಾಯಗಳಲ್ಲಿ.
ಹೀಗೆ ತಲೆಮಾರುಗಳನ್ನು ಜೋಡಿಸುವುದೇ ನಿಜದ ಹಬ್ಬ, ನಿಜದ ನವರಾತ್ರಿ ಹಬ್ಬ ಅಲ್ವಾ?
ಇದು ಕೇವಲ ದೇವರನ್ನು ಪ್ರಾರ್ಥಿಸುವ ಹಬ್ಬ ಹೇಗಾದೀತು? ತಲೆತಲೆಮಾರನ್ನು ಜೋಡಿಸುವ, ನೆನಪು ಮತ್ತು ನಂಬಿಕೆಗಳನ್ನು ಕೊಂಡೊಯ್ಯುವ ಹಬ್ಬ. ಸಂಪ್ರದಾಯಗಳನ್ನು ಬೆಸೆಯುವ ಸುಗಂಧ ಹೂವಿನ ಹಾರದ ದಾರದಂತೆ, ಅಮ್ಮ – ನಾನು – ನನ್ನ ಮಗಳು, ಮಿಳಿತಗೊಂಡ ನವರಾತ್ರಿಯ ಒಂದು ನಿರಂತರ ಹರಿಯುವಂತ ದಿವ್ಯಗಾನ. ಪ್ರಾರ್ಥನೆಯಾಚೆಗಿನ ಶಕ್ತಿ, ನೆನಪಿನಾಚೆಗಿನ ನಂಬಿಕೆ, ತಲೆಮಾರುಗಳಾಚೆಗಿನ ನಿರಂತರ ಬದುಕು.

ಗಾಯತ್ರಿ ರಾಜ್ ಮೂಲತಃ ದಾವಣಗೆರೆ ಮೂಲದವರಾಗಿದ್ದು, ಓದಿದ್ದು ವಿಜ್ಞಾನವೇ ಆದರೂ ಸಾಹಿತ್ಯವನ್ನು ಪ್ರವೃತ್ತಿಯಾಗಿ ಆಯ್ದುಕೊಂಡವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ ಇವರು ಅನೇಕ ಕೃತಿಗಳನ್ನು ಬರೆದು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಬಣ್ಣದ ಜೋಳಿಗೆ (ಕಥಾಸಂಕಲನ), ಬ್ಯೂಟಿಫುಲ್ ಲೈಫ್ (ಅಂಕಣ ಬರಹಗಳ ಸಂಕಲನ), ೧೫ ಸಣ್ಣ ಕಥೆಗಳು (ಕಥಾಸಂಕಲನ), ೩ ನೀಳ್ಗತೆಗಳು (ಕಥಾಸಂಕಲನ), ಹೊಸಕತೆಗಳು (ಕಥಾಸಂಕಲನ), ಟ್ರಾಯ್ (ಐತಿಹಾಸಿಕ ಕಾದಂಬರಿ), ಈ ಹೃದಯ (ಪ್ರೇಮಕಥೆಗಳು) ಇವರ ಪ್ರಕಟಿತ ಕೃತಿಗಳು. ಕಸಾಪ ದ “ಶ್ರೀಮತಿ ಕೆ.ಎಸ್ ಭಾರತಿ ರಾಜಾರಾಮ್ ಮಧ್ಯಸ್ಥ ದತ್ತಿ ಪ್ರಶಸ್ತಿ ಹಾಗೂ ಅವ್ವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.