ಟಿಕಳಿ ಮಾರುವ ಹುಡುಗಿ

ಕ್ಷಮಿಸಿ,
ಟಿಕಳಿ ಮಾರುವ ಹುಡುಗಿ ನಾ
ಸುತ್ತಲೂರು ಮುತ್ತುವ ಸಂತೆಜಾತ್ರೆ
ನನ್ನುದರ ಅಕ್ಷಯ ಪಾತ್ರೆ.

ಸುಮಂಗಳೆಯರ ನಿತ್ಯ ಮಂಗಳಕೆ
ನನ್ನಿಡಿ ಕೂಳಿಗೆ ಹಾಡುವ
ಖಾಲಿ ಲಲಾಟದ ಲಾವಣ್ಯವತಿ.

ಚೆಲ್ಲುತ್ತೇನೆ,
ಮೆತ್ತ ಪಾದಗಳು ಹತ್ತಿರವಾದಂತೆ
ಅವ ಬಚ್ಚಿಟ್ಟ ಹೊಟ್ಟೆಯೊಳಗಿನ ಹತ್ತಿಪ್ಪತ್ತು ಕನಸುಗಳ.

ಕೂಗುತ್ತೇನೆ,
ಟಿಕಳಿಗೊಂದಂದು ಹೆಸರು,
ರಚನೆ, ರಂಗಿಗೊಂದರಂತೆ ಗುಂಪು
ಅವರೇಳಿದ ಮಂಗಳರ್ಥವ
ಯಥಾವತ್ತು ಕೂಗುತ್ತೇನೆ.

ಕ್ಷಮಿಸಿ,
ಖಾಲಿ ಲಲಾಟದ ಲಾವಣ್ಯವತಿ
ಚೌಕಾಸಿಯ ಸೋಂಕು ಟಿಕಳಿಗೆ ತಗುಲಿದಾಗಂತು
ಹೊಟ್ಟೆಯ ಕನಸುಗಳನು ಮತ್ತೆ
ಬಚ್ಚಿಟ್ಟು ಮುಂದೆ ನಡೆವ ಖಾಲಿ ಖಯಾಲಿನವಳು.

ನಾನೇಕೇ ಕವಿತೆಯಾಗುತ್ತಿಲ್ಲ?

ನಟ್ಟುನಡು ರಾತ್ರಿಯಲಿ ಪುಟ್ಟ ಮಗಳ ದಿಟ್ಟ ಪ್ರಶ್ನೆ
ಕೇಳುತ್ತಾಳೆ, ನಾನೇಕೆ ಕವಿತೆಯಾಗುತ್ತಿಲ್ಲ?
ಮಗಳೆಂದರೆ, ಮನೆ-ಮನಗಳ ತುಂಬಾ ಗಮನ
ಮಹಾಮೌನದಲೆ ಸಮೃದ್ಧ ಮಾತುಗಳ ಮಂಥನ.
ಹೌದು, ಮಗಳೇಕೆ ಕವಿತೆಯಾಗುತ್ತಿಲ್ಲ? ನನಗೂ ಸೋಜಿಗ
ಗರ್ಭಕಟ್ಟಿ, ಟಿಸಿಲೊಡೆದು, ಗೂಡುಬಿಚ್ಚಿಟ್ಟವಳು,
ಹುಟ್ಟಿನಲೇ ಮರುಜೀವ ಕೊಟ್ಟವಳು
ಗಟ್ಟಿ ಕವಿತೆಯಲ್ಲವೇ?

ಎಳಸು ಸೀಳಿಬಂದ ತುಟಿಯಂಚಿನ ನನ್ನ ಕಿರುನಗು
ನಿನ್ನ ಜೀವಿತದ ಪರಮೋಚ್ಛ ಗಳಿಗೆ,ಅಪ್ಪ
ಪುಟ್ಟ ಚಂದಿರ ಆಗಸ ಸೀಳಿ ಫಕ್ಕನೆ ನಕ್ಕಂತೆ
ಮಿಣುಕೊಂದು ರೆಕ್ಕೆಕೆದರಿ ಕುಣಿದಂತೆ
ಮೊಗದ ಮೇಲಿನ ನಿನ್ನ ಹತ್ತಿಕ್ಕಲಾಗದ ಹನಿಗಳೇ,ಸಾಕ್ಷಿಗಳಲ್ಲವೇ?
ನಾನೇಕೇ ಕವಿತೆಯಾಗುತ್ತಿಲ್ಲ?
ಕವಿತೆಗಳನ ಹುಟ್ಟಿಸುವ ಗಟ್ಟಿಗನಲ್ಲ ಮಗಳೆ, ಈ ಸಂಭ್ರಮ.
ಸೋಲುತ್ತಾನೆ, ಸಂಯಮದಿ ಜಾರುತ್ತಾನೆ
ಮಗಳೆಂದರೆ ಮನಸೊಳಗಣ ಮುಕ್ತತೆಯ ಮಾತುಕತೆ
ವೇದಾಂತಿಸಿ ಹಾದಿ ತಪ್ಪಿಸುತ್ತಾನೆ.

ಪುಟ್ಟ ಬೆರಳುಗಳಲಿ ಬೆಳಕಿನ ಪ್ರತಿಮೆಗಳಿಲ್ಲವೇ?
ನಿನ್ನಂತಹ ನನ್ನ ಪಾದಗಳಲಿ ರೂಪ-ಪ್ರತಿರೂಪಗಳಿಲ್ಲವೇ?
ಕಲಿತಿದ್ದೇನೆ, ಬೋರಲು ಬಿದ್ದು ಉರುಳಾಡಿ
ಭೂಮಿಯ ನೋಡಿ ನಗುವುದನ್ನು, ಅಳುವುದನ್ನೂ
ಹತ್ತಿರವಿಲ್ಲದ ನಿನ್ನ ಹೆಗಲ ಗೋಲದ ಹೊತ್ತು
ಇವಳೆ ನಿನ್ನ ಹಗಲ ಆಟಿಕೆ.

ಅವಳು ತಿರುಗುತ್ತಾಳೆ, ನಾನು ತೆವಳುತ್ತೇನೆ
ವಿಶ್ವಮಾನವರಾಗಿ.

 

ನಾಗರಾಜ ಪೂಜಾರ ಮೂಲತಃ  ಹೂವಿನಹಡಗಲಿಯ ಮಾಗಳದವರು.
ವೃತ್ತಿಯಿಂದ ಶಿಕ್ಷರಾಗಿದ್ದು ಪ್ರಸ್ತುತ ದೇವದುರ್ಗದ ಸೋಮನಮರಡಿ ಪ್ರೌಢ ಶಾಲೆಯಲ್ಲಿ ಕಾರ್ಯವನಿರ್ವಹಿಸುತ್ತಿದ್ದಾರೆ.
ಸಾಹಿತ್ಯದಲ್ಲಿ ಅಪಾರ ಆಸಕ್ತಿ ಇದ್ದು, ಕವಿತೆ ನೆಚ್ಚಿನ ಸಾಹಿತ್ಯ ಪ್ರಕಾರ.
‘ಅಪ್ಪನ ಗಿಲಾಸು’ ಎಂಬ ಇವರ ಕವನ ಸಂಕಲನ ಸಧ್ಯದಲ್ಲೇ ಪ್ರಕಟವಾಗಲಿದೆ.

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)