ಲೋಕಲ್ ಬಸ್ಸು

ಹರಿದ ತಿಕೀಟಿನ ಹಿಂದೆ ತರಹೇವಾರಿ ಬರಹಗಳು
ಪಯಣಕೆ ಸಾಕು ಬೇಕಾಗುವಷ್ಟು
ದಿನಸಿ, ಹಾಲು, ಸೊಪ್ಪು, ಸೆದೆಯ ಲೆಕ್ಕಾಚಾರ
ಅಲ್ಲೇ ಮೂಲೆಯಲೇ ಮಗಳು ಮೈನೆರೆತ ನೆನಪು
ಆಚಾರಕ್ಕಾದರು ಜಾತಕ ಬರೆಸಬೇಕು
ಇದ್ದೆ ಇರುತದಲ್ಲವೇ ಊರು ಸಮೀಪಿಸಿದಂತೆ.

ಪಶುಪತಿಯೇ ಅವತರಿಪ ತಾಂತ್ರಿಕ ಕ್ಲಚ್ಚು
ಏರಿಳಿತಗಳ ಒಗ್ಗಿಸಿಕೊಂಡು ಮುನ್ನಡೆದಂತೆ
ಮುಕ್ಕಣನವತಾರಿ ಚಾಲಕ ಬುರುಬುರು ಬೀಸುವ
ಹಿಡಿ ವಾಯು ಹಿಡಿದ ಹನುಮ ನಮಗೆಲ್ಲ
ಎಂಬಿತ್ಯಾದಿ ಅಂತೆ ಕಂತೆಯ ಮಾತಿನ ಸಂತೆ.

ಊರು ಕೇರಿ, ಕಾಡು ಮೇಡಿನ ಮಧ್ಯೆ
ಕಾಲವನು ಮೀರಿ ರೊಯ್ಯನೆ ಸಾಗುತಿರಲು,
ಹೋಲ್ಡಾನ್! ಕೀರಲು ಧ್ವನಿ ಕೇಳಿಸುತದೆ.
ಹಿರಿಯ ನಾಗರಿಕರಿಗಿಲ್ಲಿ ಸಹಕರಿಸಿ
“ಮುಂದೆ ಬಾ ಮಗಳೆ” ಎಂಬ ಸಮಾನತೆಯ ಕರೆ
ಈ ಇವರನೆಲ್ಲಾ ಸಹಿಸಿ ಸಹಿಸಿ, ಥೂ…..
ಗೊಣಗುತಲೇ ಮುನ್ನಡೆಯುತಾಳೆ ಮಗಳು
ಆಪಲ್ನ ಬುಟ್ಟಿ ಕೆಳಗಿಡುತ

ಮುಂದೆ ಮುಂದೆ ಸಾಗುತಲೇ ಸೈಜಿನ ಗಾಜು ಸೀಳಿ
ಎಲ್ಲಯೋ ಕದ್ದ ಕೋಳಿಯ ಮೈಘಮಲು ಘಮ್ಮೆಂದು ನುಸುಳಿತು
ಚಿಟಕಿ ಮಸಾಲೆ ಸಾಕು,
ಸ್ವಲ್ಪೇ ಸ್ವಲ್ಪ ಸ್ಪೈಸಿ ಇದ್ದರೆ ಸೂಕ್ತ
ಖಾರವಾಗಿರಲೇ ಬೇಕು!
ಹೀಗೆ ಅವರವರ ಏಣಿನ ಮಾತುಗಳಿಗಿಲ್ಲಿ ಅವಕಾಶ ಮುಕ್ತ.
ಮೇಲೆ “ಅನುಭವವೇ ಅಮೃತ” ಎಂಬ ಸಾಲು ಸಾಲು ಉಕ್ತ.

ದಾರಿಯುದ್ದಕೂ ಸಾಗುವ ಗುಸುಗುಸು ಪಿಸುನುಡಿಗೆ ಸಾಕ್ಷಿ ಈ ತಿಕೀಟು.
ಯಾನ ಮೇರೆ ಮುಟ್ಟುವ ತನಕ ಬಚ್ಚಿಟ್ಟು ಮುಟ್ಟಬೇಕು
ಪರ್ಸು, ಪಾಕೀಟು, ಬೀಗರುಂಗರ ಎಂದು ಬೀಗುವಂತಿಲ್ಲ,
ಮಗುವ ತುಟಿಯ ಬಿಂದುವನು ಒರೆಸುವಂತಿಲ್ಲ
ಬಚ್ಚಿಟ್ಟು ಮುಟ್ಟಬೇಕು.
ಇಂತಿಪ್ಪ ಲೋಕಲ್ ಬಸ್ಸೊಳಗಣ
ಭಾವ-ಅನುಭಾವದ ಒಗ್ಗಿಟ್ಟಿನಲಿ
ಒಂದಾದ ‘ನಾನು’,
ಪಯಣದ ಒಟ್ಟು ಬಾಬತ್ತಿನಲಿ
ಬೆವರಾಗಿ ಶೂನ್ಯವನು ಮಗ್ಗಲು ಬದಲಿಸುತ
ಕೊನೆಗೆ ಕಂದನ ತುಟಿಗೆ ತಿಕೀಟು ಒರೆಸಿ
ಟಾರು ಹಾದಿಯ ಧೂಳಿನಲಿ ಲೀನವಾಗಲೇ?

 

ನಾಗರಾಜ ಪೂಜಾರ ಮೂಲತಃ  ಹೂವಿನಹಡಗಲಿಯ ಮಾಗಳದವರು.
ವೃತ್ತಿಯಿಂದ ಶಿಕ್ಷರಾಗಿದ್ದು ಪ್ರಸ್ತುತ ದೇವದುರ್ಗದ ಸೋಮನಮರಡಿ ಪ್ರೌಢ ಶಾಲೆಯಲ್ಲಿ ಕಾರ್ಯವನಿರ್ವಹಿಸುತ್ತಿದ್ದಾರೆ.
ಸಾಹಿತ್ಯದಲ್ಲಿ ಅಪಾರ ಆಸಕ್ತಿ ಇದ್ದು, ಕವಿತೆ ನೆಚ್ಚಿನ ಸಾಹಿತ್ಯ ಪ್ರಕಾರ.
‘ಅಪ್ಪನ ಗಿಲಾಸು’ ಎಂಬ ಇವರ ಕವನ ಸಂಕಲನ ಸಧ್ಯದಲ್ಲೇ ಪ್ರಕಟವಾಗಲಿದೆ.