Advertisement
ನಾಗರೇಖಾ ಗಾಂವಕರ ಬರೆದ ಈ ಭಾನುವಾರದ ಕತೆ “ಸೋಡಿನಾಟ”

ನಾಗರೇಖಾ ಗಾಂವಕರ ಬರೆದ ಈ ಭಾನುವಾರದ ಕತೆ “ಸೋಡಿನಾಟ”

ನೌಕರಿ ಸೇರಿದ ಹೊಸದರಲ್ಲಿ ಅಪ್ಪನ ಉಮೇದಿಗೆ ಕಡಿಮೆ ಇರಲಿಲ್ಲ. ಸಾಯುವವರೆಗೂ ಮನೆಯ ಜವಾಬ್ದಾರಿ ನಿಭಾಯಿಸುತ್ತಾ ಬದುಕಿದ ಜೀವ ತನ್ನಪ್ಪ. ಸಾಯುವ ಹಿಂದಿನ ದಿನವೂ “ಅಪ್ಪಾ!! ಸುಸ್ತಾಗಿದೆ ನಿಂಗೆ. ಮನಿಕಾ” ಎಂದು ಹಾಸಿಗೆ ಜಾಡಿಸಿ ತಲೆದಿಂಬು ಸರಿ ಮಾಡಿಕೊಟ್ಟರೆ “ಮಾಬ್ಲೂ ಮಲಗುಲಾ ಮನೇ!! ಆ ಹಾಳೆ ಕಟ್ಟು ತಕಂಡ ಬಾ!!” ಎಂದು ತಮ್ಮ ಲೆಕ್ಕದ ಪುಸ್ತಕ ತರಿಸಿಕೊಂಡು ಆ ವರ್ಷದ ಖರ್ಚು ವೆಚ್ಚ ಬರೆದುದನ್ನು ಮತ್ತೊಮ್ಮೆ ಚೆಕ್ ಮಾಡಿದ್ದರು. “ಮಾಬ್ಲು ಗಿಡವಕ್ಕೆ ಈ ಸಲ ಗೊಬ್ಬರ ಹಾಕಬೇಕಾಗತ. ಯಾರಿಗರೂ ಹೇಳ. ಗೊಬ್ಬರ ಇದೇ ನೋಡ. ಚೌತಿ ಮುಗದ್ದೆ ಹಾಕಸೇ ಬಿಡುವಾ” ಎಂದರು.
ನಾಗರೇಖಾ ಗಾಂವಕರ ಬರೆದ ಕತೆ “ಸೋಡಿನಾಟ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

ಮಹಾಬಲ ಗಾಂವಕರರು ಬಸ್‌ಸ್ಟಾಂಡಿನಲ್ಲಿ ನಿಂತು ಬಸ್ಸಿಗೆ ಕಾಯುತ್ತಿದ್ದರು. ಹನ್ನೆರಡುವರೆಗೆ ಬರೋ ಬಸ್ಸು ಇನ್ನೂ ಸ್ಟ್ಯಾಂಡಿಗೆ ಬಂದೆ ಇಲ್ಲ. ಬಸ್ಸಿನ ಚಕ್ರ ಸರಿಯಿಲ್ಲವೆಂದೂ, ಹಳ್ಳಿಗಾಡಿನ ರಸ್ತೆಗಳಿಗೆ ಚಕ್ರಗಳು ಬಹಳ ಬೇಗ ಜಖಂ ಆಗುತ್ತವೆಯೆಂದೂ ಕಂಡೆಕ್ಟರ್ ತಿಮ್ಮಣ್ಣ ಹೋದ ತಿಂಗಳು ಬಂದಾಗ ಹೇಳಿದ್ದ. ಇವತ್ತು ಅದೇ ಕಥೆ ಇರಬಹುದು. ಸುತ್ತ ನೋಡಿದರೆ ಆಗಲೇ ಬಸ್ಸು ತುಂಬುವಷ್ಟು ಜನ. ಆಗಷ್ಟೇ ಮೀನುಪೇಟೆಯಿಂದ ಬುಟ್ಟಿ ತುಂಬ ಮೀನು ತುಂಬಿಕೊಂಡು ಬಂದು ಸೊಂಟದ ಮೇಲೆ ಇಟ್ಟುಕೊಳ್ಳಲಾಗದೇ, ನೆಲಕ್ಕೆ ಇಟ್ಟು ಉಸ್ಸಪ್ಪಾ… ಎನ್ನುತ್ತಾ ಮಾದೇವಿ ಕೆಳಗೇ ಕೂತಳು. ಸ್ಟ್ಯಾಂಡಿನ ಮುಂಭಾಗದಲ್ಲಿ ಲಾಂಗರೂಟ್ ಬಸ್ಸುಗಳು ನಿಂತರೆ, ಹಿಂಭಾಗದಲ್ಲಿ ತಮ್ಮ ಊರಿಗೆ ಬಿಡುವಂತಹ ರೂರಲ್ ಬಸ್ಸುಗಳು ನಿಲ್ಲುತ್ತವೆ. ಅಲ್ಲೇ ಪಕ್ಕದಲ್ಲಿ ಒಂದು ಹೊಂಗೆ ಮರ. ಗಾಂವಕರರು ಅಂಕೋಲೆ ಪೇಟೆಗೆ ವಾರಕ್ಕೊಮ್ಮೆ ಇಲ್ಲವಾದರೆ ಎರಡು ಬಾರಿ ಬರುವುದು ವಾಡಿಕೆ. ಬಂದಾಗಲೆಲ್ಲಾ ಇಲ್ಲೇ ಈ ಮರದ ಕೆಳಗೆ ನಿಂತು ಬಸ್ಸು ಕಾಯುವುದು. ಇಂದೂ ಅಲ್ಲೇ ನಿಂತು ಬಸ್ಸು ಕಾಯುತ್ತಿದ್ದರು. ಮೀನುಬುಟ್ಟಿ ಹೊತ್ತು ತಂದ ಮಾದೇವಿ ಮೊದಲು ಒಮ್ಮೆ ಸೊಂಟದ ಮೇಲಿನ ಹೊರೆ ಇಳಿದರೆ ಸಾಕೆಂಬಂತೆ ಕೆಳಗೆ ಏನಿದೆ? ಏನಿಲ್ಲಾ? ಏನೂ ನೋಡದೇ ದಡ್ಡಕ್ಕನೇ ಬುಟ್ಟಿ ಕೆಳಗಿಟ್ಟು ಕೂತಳು. ಅಷ್ಟೇ!! ಮತ್ತೆ ತಟ್ಟನೇ ಜ್ಞಾನೋದಯವಾದಂತೆ ಆಚೆಈಚೆ ಮೇಲೆಕೆಳಗೆ ನೆಲ ನೋಡುತ್ತಾ ಅಲ್ಲೇ ಅಲ್ಪಸ್ವಲ್ಪ ಸರಿದು ಕೂತುಕೊಳ್ಳುವುದನ್ನೆ ನೋಡತೊಡಗಿದರು ಗಾಂವಕರರು. “ಇಸೀ… ಕಂಡಕಂಡಲ್ಲೇ ಎಂಜಲ ಉಗುಳುದು, ಹಾಳಬೀಳುಕೆ” ಎನ್ನುತ್ತಾ, ತಾನು ಕೂತ ಸ್ಥಳದ ಮಹಜರು ಮಾಡಿದ ಆಕೆ ಮತ್ತೊಮ್ಮೆ ಬುಟ್ಟಿ ಎತ್ತಿ ಇನ್ನಷ್ಟು ದೂರಕ್ಕೆ ಸ್ವಚ್ಛ ಎನ್ನಿಸಿದ ಜಾಗ ನೋಡಿ ಕೂತುಕೊಂಡಳು. ಗಾಂವಕರರಿಗೆ ಮರುಕ ಹುಟ್ಟಿತು. ‘ಇಡೀ ಊರಿಗೆ ಮೀನು ಸಪ್ಲೈ ಅವಳದೇ. ಇವಳು ತರುವ ಅದೇ ಬಂಗುಡೆ, ಬೂತಾಯಿ ಅಪರೂಪಕ್ಕೆ ಬೆಳ್ಳಂಜಿ, ತೊರ್ಕೆ, ಚಿಪ್ಪಿಕಲ್ಲು.. ಊರಿಗೆ ಫೆಮಸ್ಸು. ಅವಳಿಗೂ ಹಣಕಾಸಿನ ತೊಂದರೆ ಇದೆ. ಪಾಪ!! ಹೆಣ್ಣು ಹೆಂಗಸು ಕುಡುಕ ಗಂಡ ಎರಡು ದಿನ ದುಡಿದು ಐದು ದಿನ ಮೂರು ಹೊತ್ತು ಕುಡಿದು ಬ್ಯಾಲೆ ಮೇಲೆ ಬಿದ್ದಿರ್ತಾನೆ.. ’. ಅವಳತ್ತಲೇ ನೋಡುತ್ತಾ ಯೋಚಿಸುತ್ತಿದ್ದವರಿಗೆ ತಟ್ಟನೇ ಅವಳ ಕಣ್ಣು ತನ್ನನ್ನೇ ನೋಡುತ್ತಿರುವುದು ಗಮನಕ್ಕೆ ಬಂತು. ‘ಟೈಂ ಎಟ್ಟಾಯ್ತಾ ಒಡೆಯಾ!!’ ಸಡನ್ನಾಗಿ ಬಂದ ಪ್ರಶ್ನೆಗೆ ತಬ್ಬಿಬ್ಬಾದರು ಗಾಂವಕರರು. “ಒಂದೂ ಕಾಲಾಯ್ತ, ಮಾದೇವಿ, ಬಸ್ಸು ಇಂದೇ ಬರುವಂಗ್ಹೆ ಕಾಣುದಿಲ್ವೆ? ನಿನ್ನ ಮೀನ ಮುಗ್ಗುದೇ ಕಾಣ್ತಿದ ಇಂದೇ!!” ಎಂದರು. ಮೀನು ಮುಗ್ಗುವ ಮುನ್ನ ಮೀನು ಖಾಲಿಯಾಗಬೇಕು. ಊರವರು ಇವಳ ಮೀನಿಗೆ ಕಾದು ಕೂತಿರುತ್ತಾರೆ. ಮಧ್ಯಾಹ್ನ ಒಂದೂವರೆಯೊಳಗೆ ಬಸ್ಸು ಬರಲಿಲ್ಲವಾದರೆ ಮೀನು ಪಳದಿಗೆ ತೆಗೆದಿಟ್ಟ ಮಸಾಲೆಗೆ ಒಣ ಮೀನು ಕೊಯ್ದು ಬೇಯಿಸಿ ಉಂಡು ಮಲಗುತ್ತಾರೆ. ಆಕೆ ಆಗಾಗ ಅಲ್ಲಿ ಇಲ್ಲಿ ನಿಂತವರಲ್ಲಿ ಟೈಂ ಎಷ್ಟಾಯ್ರಾ ಒಡೆಯಾ? ಅಂತಲೋ, ‘ಏ! ತಮ್ಮ ಒಂದ ಗಂಟಿ ಹೋಡಿತಾ ಮಗಾ?ʼ ಅಂತಲೋ ಕೇಳುತ್ತಲೇ ಇದ್ದಳು.

ಸಣ್ಣಗೆ ಮುಂಗಾರಿನ ಸುಣುಕು ಕಾಣತೊಡಗಿತ್ತು. ಎಪ್ರಿಲ್ ಮುಗಿದು ನಿನ್ನೆಗೇ ಎರಡು ದಿನವಷ್ಟೇ. ಈ ಸಲದ ಮಳೆಗಾಲ ಬೇಗ ಅಂತಿದ್ದರು. ಹಾಗೇ ಇರಬಹುದೇನೋ? ನಾಳೆ ಮಳೆ ಹೆಚ್ಚಾದರೆ ತನ್ನಂತವರಿಗೆ ಬಂದು ಹೋಗುವುದು ಈ ವಯಸ್ಸಿನಲ್ಲಿ ಕಷ್ಟ. ಇಂದು ಬಂದಿದ್ದು ಏನಕ್ಕೂ ಒಳ್ಳೆಯದಾಯ್ತು ಅನ್ನಿಸಿತು. ಬಸ್ಸಿಗೆ ಕಾದೂಕಾದೂ ಬೇಸರಹೆಚ್ಚಿತು. ಕಂಕುಳಲ್ಲಿ ಒತ್ತಿ ಇಟ್ಟುಕೊಂಡ ದಿನಪತ್ರಿಕೆಯ ನೆನಪಾಯ್ತು. ಶೆಟ್ಟಿ ಬುಕ್‌ಸ್ಟಾಲ್‌ನಲ್ಲಿ ಕೊಂಡುಕೊಂಡಿದ್ದರು. ಮನೆಗೆ ಹೋಗಿ ಓದಿದರಾಯ್ತೆಂದು ಹಾಗೇ ಇಟ್ಟುಕೊಂಡಿದ್ದು ನೆನಪಾಗಿ ಪೇಪರ ಬಿಚ್ಚಿದರು. ಮೊದಲ ಪುಟ ಓದಿ ಎರಡನೇ ಪುಟ ತಿರುವಿದಾಗ “ಕಡಿಮೆ ಅಂಕ- ವಿದ್ಯಾರ್ಥಿ ಆತ್ಮಹತ್ಯೆ”- ಶೀರ್ಷಿಕೆ ಗಮನ ಸೆಳೆಯಿತು, ಬೆಳಗಾವಿಯ ಹುಡುಗನೊಬ್ಬ ಕಡಿಮೆ ಅಂಕ ಬಂದದ್ದಕ್ಕೆ ನೊಂದುಕೊಂಡು, ತಂದೆ ಬೈದಾರೆಂಬ ಭಯವೂ ಸೇರಿ ಜೀವನದಿಂದಲೇ ಓಡಿಹೋಗಿದ್ದ. ತನ್ನಿಂದ ಸಾಧಿಸಲಾಗದೆಂಬ ಕೀಳರಿಮೆ ಜೀವವನ್ನು ತೆಗೆದುಕೊಂಡಿತ್ತು. ಎಳೆಯ ವಯಸ್ಸಿನ ಮಕ್ಕಳ ಪಲಾಯನವಾದಿ ಬುದ್ದಿಗೆ ಎದೆಯಲ್ಲಿ ಅದೆಂಥದ್ದೋ ನೋವು. ಕರುಳು ಚುರಕ್ ಎಂದಿತು.

ಅವರಲ್ಲೊಂದು ಬಚ್ಚಿಟ್ಟ ತಳಮಳವಿದೆ. ಹೇಳಿಕೊಳ್ಳಲು ಆಗದ, ನೆನಪಾದರೆ ಎದೆ ಚುಚ್ಚುವ ಗಾಢ ವಿಷಾದವಿದೆ… ಅವನೇ ಗುರುರಾಜ. ರಾಮಚಂದ್ರ ಮಾಸ್ತರರ ಮಗ. ಬರೋಬ್ಬರಿ ಎರಡೂವರೆ ವರ್ಷಗಳಾದವು. ಆವತ್ತು ಹೀಗೆ, ತಾನು ಪೆನ್‌ಶನ್ ಪಡೆಯಲು ಬಂದಿದ್ದೆ. ಬ್ಯಾಂಕಿನಿಂದ ದುಡ್ಡು ಪಡೆದು, ಮಾರ್ಕೆಟ್ಟು ಸುತ್ತಿ, ಒಂದೆರೆಡು ಹೂಮಾಲೆ, ತರಕಾರಿ, ಮೀನು ಖರೀದಿಸಿಕೊಂಡು ಬಸ್ಸಿಗೆ ಕಾದು ಕುಳಿತಿದ್ದೆ. ತಟ್ಟನೇ ಗುರುರಾಜ ಬಂದು ತಲುಪಿದ್ದ. ಕೆದರಿದ ಕೂದಲು, ಬಿಳಿಚಿದ ಮುಖ, ಚಿಂತೆ ಮಾಡಿಮಾಡಿ ಅಥವಾ ನಿದ್ದೆ ಇಲ್ಲದೇ ಕಳೆದ ಕುರುಹಾಗಿ ಒಳಸೇರಿದ ಕಣ್ಣುಗಳು. ಲವಲವಿಕೆಯ ಹುಡುಗ, ಶಿಸ್ತಾಗಿ ಪ್ಯಾಂಟು ಟೀ ಶರ್ಟ ಹಾಕಿಕೊಂಡು ಜಬರದಸ್ತ ಇರುತ್ತಿದ್ದವ ಹೀಗೇಕೆ ಮಂಕು ಬಡಿದವನಂತಿದ್ದಾನೆ ಎನ್ನಿಸಿ ಗಾಂವಕರರ ಮನಸ್ಸು ಮುದುಡಿತು. ಉಳಿದ ದಿನಗಳಲ್ಲಾದರೇ ತಾನೇ ಓಡೋಡಿ ಬಂದು “ಮಾಬ್ಲಣ್ಣ… ಬಸ್ಸ ಬರಲಾ ಇನ್ನೂ?” ಎಂದೊ, “ಮಾಬ್ಲಣ್ಣ ಒಂದ ಕಪ್ ಚಾ ಕುಡಿಸ್ತ್ಯಾ?” ಎಂತಲೋ ತಾನಾಗಿಯೇ ಬಂದು ಮಾತನಾಡಿಸುತ್ತಿದ್ದ ಗುರು ಯಾಕೋ ಎಲ್ಲೋ ಕಳೆದುಹೋದವನಂತೆ ಕಾಣುತ್ತಿದ್ದ. ಗಾಂವಕರರು ತಾವೇ ಮಾತನಾಡಿಸಿದರಾಯ್ತೆಂದು ಹತ್ತಿರ ಬಂದರು. “ಗುರು ಯಾವಾಗ ಬಂದೆ ಅಪ್ಪಾ?” ಗಾಂವಕರರ ಪ್ರಶ್ನೆ ಅವನಿಗೆ ಕೇಳಿಸಿದಂತೆ ಕಾಣಲಿಲ್ಲ. ಮತ್ತೊಮ್ಮೆ ಕೇಳಿದರು. ಈಗ ಒಮ್ಮೇಲೆ ಎಚ್ಚರಗೊಂಡವನಂತೆ ಅವರನ್ನು ನೋಡಿದವನೇ “ಮಾಬ್ಲಣ್ಣಾ!!” ಎಂದ. ಆ ದನಿ ಹೂತ ಬಾಯಿಂದ ಬಂದಂತಿತ್ತು. ಅದೇ ಸಣ್ಣಗಿನ ದನಿಯಲ್ಲಿ “ಈಗೇ ಬಂದೆ. ಹುಬ್ಬಳ್ಳಿ ಕಾರವಾರ ಬಸ್ಸಿಗೆ” ಎಂದ. ಅವನ ಮುಖ ನೋಡಿ ಮತ್ತೆ ಪ್ರಶ್ನೆ ಕೇಳಬೇಕೆನ್ನಿಸಲಿಲ್ಲ.

ಅಷ್ಟೊತ್ತಿಗೆ ಬಸ್ಸು ಬಂದು ನಿಂತಿತ್ತು. ಬಸ್ಸು ಬಂದ ತಕ್ಷಣ ದಡಬಡ ಹತ್ತಿ ಒಂದೆರಡು ಸೀಟು ಹಿಡಿದು, “ಅಣ್ಣಾ, ಇಲ್ಲ ಕುಳ್ಳು, ಅಕ್ಕಾ ನೀ ಇಲ್ಲಿ ಕುಳ್ಳು” ಎಂದೆಲ್ಲ ಓಡಾಡಿಕೊಂಡು ಎಲ್ಲರ ಪ್ರೀತಿ ಗಳಿಸುತ್ತಿದ್ದ ಹುಡುಗ ಗುರು ಇವತ್ತು ಮ್ಲಾನ ಮುಖದಲ್ಲಿ ತಣ್ಣಗೆ ಹಿಂಭಾಗದ ಸೀಟು ಹಿಡಿದು ಸುಮ್ಮನೇ ಕೂತುಬಿಟ್ಟಿದ್ದ.

ಬಸ್ಸು ಹೊರಟಿತು. ಆ ದಿನ ಮನೆಗೆ ಬಂದು ತಲುಪಿದಾಗ ಒಂದೂವರೆ ಗಂಟೆ. ಮೀನು ಮಾದೇವಿ ಆ ದಿನ ಬಂದಿರಲಿಲ್ಲ. ತಾವೇ ಅಂಕೋಲೆಯಿಂದಲೇ ಮೀನು ತಂದಿದ್ದರು. ತಡವಾದ ಬಗ್ಗೆ ಆಕ್ಷೇಪಿಸುತ್ತಾ ಹೆಂಡತಿ ಕೋಮಲೆ ಕಿರಿಕಿರಿ ಗೊಣಗುತ್ತಲೇ ಮೀನು ಕತ್ತರಿಸಿ ತಂದಳು. ಐದಾರು ಹೋಳು ತೆಗೆದು ಆಗಲೇ ರುಬ್ಬಿ ಇಟ್ಟ ಮಸಾಲೆ ಬೆರೆಸಿ ಕುದಿಸಿದಳು. ಇನ್ನು ನಾಲ್ಕು ಹೋಳು ತೆಗೆದು ಖಾರ ಬಳಿದು ಫ್ರೈ ಮಾಡಿ ಬಡಿಸಿದ್ದಳು. ಬಿಸಿ ಗಂಜಿಗೆ ‘ಹಾಯ್’ ಎನ್ನುವಷ್ಟು ಉಂಡು ಸಣ್ಣಗೆ ನಿದ್ದೆಗೆ ಜಾರಿದ್ದರು ಗಾಂವಕರರು. ನಿದ್ದೆ ಅಂತಿಂಥ ನಿದ್ದೆಯಲ್ಲ. ಮನೆ ಮೇಲೆ ಮನೆ ಬಿದ್ದರೂ ಎಚ್ಚರಾಗದಂತಹ ನಿದ್ದೆ. ಏನೇನೋ ಕನಸುಗಳು, ಗಾಬರಿಗಳು, ಅದೇ ದ್ಯಾವ್ರ ಮನೆ. ರಾಶಿ ರಾಶಿ ಜನ. ಕಾರ್ತಿಕ ಮಾಸದ ಕೊನೆ ದಿನ. ಸೋಡಿನ ಆಟ ಜೋರಾಗಿ ನಡೆದಿದೆ. ಹಾ! ಹೂಂ. ನಂದೇ ಗುರಿ… ನೋಡ! ಈಗೇ ಬಿತ್ತ… ಹೋ ಹೋ… ದೇವರ ಮನೆ ಮುಂದೆ ದೊಡ್ಡ ಜಾಗ. ನಡುವೆ ಇಟ್ಟ ತೆಂಗಿನ ಕಾಯಿಗೆ ಗುರಿ ಇಟ್ಟು ಒಬ್ಬೊಬ್ಬರೂ ಕಲ್ಲು ಹೊಡೆಯುತ್ತಿದ್ದಾರೆ. ಗುರಿ ತಪ್ಪುತ್ತಲೇ ಇದ್ದಾರೆ. ಅಷ್ಟರಲ್ಲಿ ಒಬ್ಬನ ಗುರಿ ನಾಟೇ ಬಿಟ್ಟಿತು. ಜೋರಾದ ಸದ್ದು…. ಹೋಓಓಓಓಓಓ….

“ಅಯ್ಯೋ, ಅಯ್ಯೋ, ಬರ‍್ರೋ ಬರ‍್ರೋ, ನನ್ನ ಮಗ ಗುರು ಹೊಳಿಗೆ ಹಾರ್ಕಂಡ ಕಡಾ. ಅಯ್ಯಪ್ಪೋ, ಅಯ್ಯೋ ಗುರು.. ಗುರು… ಯಾಕ್ ಹಿಂಗ ಮಾಡ್ಕಂಡ್ಯೋ ನನ್ನ ಮಗನೇ?” ಎನ್ನುತ್ತಾ ಅವರಪ್ಪ ಓಡುತ್ತಿದ್ದರೆ ಅವನ ಹಿಂದೆ ಹತ್ತಾರು ಜನ ಓಡತೊಡಗಿದರು. ಪಡಸಾಲೆಯಲ್ಲಿ ಮಲಗಿದ್ದ ಗಾಂವಕರರು ದಡಕ್ಕನೇ ಎದ್ದು ಕುಳಿತರು. ನೋಡುತ್ತಲೇ ಕಲ್ಲಾದರು “ಅಯ್ಯೋ ದೇವರೇ ಗುರುರಾಜಗೆ ಏನೂ ಆಗದಿರಲಿ. ಬೇಗ ಸಿಗುವಂತಾಗಲಿ, ಕಂದ ಜೀವಂತವಾಗಿರಲಿ” ಎಂದು ಪ್ರಾರ್ಥಿಸುತ್ತಾ ಚಪ್ಪಲಿಮೆಟ್ಟಿ ಹೊರಟರು. ಆದರೆ ಗುರುರಾಜ ಜೀವ ಹೊತ್ತು ಬರಲೇ ಇಲ್ಲ. ಮಾಬ್ಲಣ್ಣನ ಹರಕೆ, ಊರವರ ಹರಕೆ ಎಲ್ಲವನ್ನೂ ಸುಳ್ಳುಸುಳ್ಳೇ ಮಾಡಿ ಹೆಣವಾಗಿ ಗುರು ಮನೆಗೆ ಬಂದ. ಮಹಾಬಲಣ್ಣನಿಗೆ ಕನಸಲ್ಲಿ ಕಂಡ ಸೋಡಿನಾಟ ನೆನಪಾಯಿತು. ದ್ಯಾವ್ರ ಸೋಡಿನಾಟಕ್ಕೆ ಎಳೆ ಕಾಯಿ ಬಲಿಯಾಗಿತ್ತು!!!

ಗುರುರಾಜ ಯಾಕೆ ಜೀವ ತೆಗೆದುಕೊಂಡ. ಗುರುರಾಜನ ದುಡುಕಿನ ನಿರ್ಧಾರದ ಹಿಂದಿನ ಒತ್ತಡವೇನು? ನಿರೀಕ್ಷಿಸಿದ್ದ ಸೀಟು ಸಿಗಲಿಲ್ಲ ಅಂತೆ, ಏನೋ ಡಿಪ್ರೆಶನ್ ಅಂತೆ, ಲವರ್ ಬಿಟ್ಟಹೋದ್ಳಂತೆ ಅಂತೆಲ್ಲಾ ಜನರಾಡಿಕೊಂಡಿದ್ದರು. ಯಾವುದು ಸತ್ಯವೋ? ಈ ವಯಸ್ಸಿನಲ್ಲೂ ತುಂಬು ಭರವಸೆಯಿಂದ ಬದುಕುವ ತಮ್ಮ ಬಗ್ಗೆ ಬಹಳ ಖುಷಿ ಅವರಿಗೆ. ತಿಂಗಳಿಗೊಮ್ಮೆ ಬರುವ ಪೆನ್‌ಶನ್ ಪಡೆಯಲು ಬರುವ ಅಗತ್ಯ ಇಲ್ಲದೇ ಇದ್ದರೂ ಹೀಗೆ ಬಂದುಹೋಗುವ ಖಯಾಲಿ ಕೊಡುವ ಉಮೇದು ತಮ್ಮದು. ಸೋತಾಗಲೆಲ್ಲಾ ಗೆಲುವಿನ ರುಚಿ ಕಾಣುವ ಶ್ರಮ, ಕನಸು. ಆದರೆ ಈಗಿನ ಮಕ್ಕಳು. ಛೇ!! ಈ ರೀತಿ ಅಕಾಲ ಮೃತ್ಯುವನ್ನು ತಾವಾಗಿಯೇ ಆಹ್ವಾನಿಸುವ ಇವರನ್ನು ಸುಧಾರಿಸುವುದಾದರೂ ಹೇಗೆ?

ತಮ್ಮ ಬಾಲ್ಯದ ದಿನಗಳಲ್ಲಿ ಕುಂಡೇ ಹರಿದ ಚಡ್ಡಿಯಲ್ಲೇ ಶಾಲೆಗೆ ಹೋಗುತ್ತಿದ್ದ ತಾವು ಆರನೇ ತರಗತಿಗೆ ನಪಾಸಾಗಿದ್ದರು. ಅಪ್ಪ ಆ ವರ್ಷ ಶಾಲೆ ಬಿಡಿಸಿ ದನ ಕಾಯಲು ಕಳಿಸಿದ್ದರು. ಮತ್ತೆ ಅದೇ ಆರನೇ ತರಗತಿಗೆ ದಾಖಲು ಮಾಡಿಕೊಳ್ಳಲು ಮನೆವರೆಗೂ ಬಂದ ಮಾಸ್ತರರಿಗೆ “ಅವನಿಗೆ ಶಾಲೆ ಬೇಡ ಬಿಡಿ” ಎಂದು ಹೇಳಿದ ಅಪ್ಪನ ನೆನಪಾಯಿತು. ದಿನ ಬೆಳಗಾದರೆ ಅವ್ವ ಮಾಡಿಕೊಡುತ್ತಿದ್ದ ಉದ್ದಿನ ದೋಸೆ ಮೇಲಿಟ್ಟು ಜೋನಿಬೆಲ್ಲ ಸವರಿ ತಿಂದು ಶಾಲೆಗೆ ಹೋದರೆ, ಮಧ್ಯಾಹ್ನ ಬಿಸಿ ಬಿಸಿ ಗಂಜಿ ಉಂಡು ಮತ್ತೆ ಶಾಲೆಗೆ. ಆದರೆ ಈಗ ದನಕಾಯುವ, ಸೆಗಣಿ ಬಳಿಯುವ, ನಾಟಿಗೆ ಗದ್ದೆ ಉಳುವ, ಹಲಗೆ ಹೊಡೆಯುವ, ಎತ್ತುಗಳ ಮೈ ತೊಳೆಸುವ ಒಂದೇ ಎರಡೇ… ಒಂದೇ ವರ್ಷಕ್ಕೆ ಈ ಕೆಲಸದ ಕಷ್ಟ ಎಷ್ಟೆಂದು ಅರಿವಾಗಿತ್ತು. ಅಪ್ಪನ ಕಾಲಿಗೆ ಬಿದ್ದು, ಕಾಡಿ ಬೇಡಿ ಮತ್ತೆ ನಪಾಸಾಗುವುದಿಲ್ಲವೆಂದೂ ಚೆನ್ನಾಗೀ ಓದುವೆನೆಂದೂ ಮಾಬ್ಲಣ್ಣ ಅತ್ತು ಕರೆದು ಮರುವರ್ಷ ಶಾಲೆಗೆ ಸೇರಿದ್ದರು. ತಮ್ಮನೂ ಅಣ್ಣನೂ ಒಂದೇ ತರಗತಿಯಲ್ಲಿ ಕಲಿತು ಇಬ್ಬರೂ ಒಟ್ಟಿಗೆ ಸರಕಾರಿ ಶಾಲೆಯ ಮಾಸ್ತರರಾಗಿದ್ದರು. ತಾವು ನೌಕರಿ ಸೇರಿದ ಹೊಸದರಲ್ಲಿ ಅಪ್ಪನ ಉಮೇದಿಗೆ ಕಡಿಮೆ ಇರಲಿಲ್ಲ. ಸಾಯುವವರೆಗೂ ಮನೆಯ ಜವಾಬ್ದಾರಿ ನಿಭಾಯಿಸುತ್ತಾ ಬದುಕಿದ ಜೀವ ತನ್ನಪ್ಪ. ಸಾಯುವ ಹಿಂದಿನ ದಿನವೂ “ಅಪ್ಪಾ!! ಸುಸ್ತಾಗಿದೆ ನಿಂಗೆ. ಮನಿಕಾ” ಎಂದು ಹಾಸಿಗೆ ಜಾಡಿಸಿ ತಲೆದಿಂಬು ಸರಿ ಮಾಡಿಕೊಟ್ಟರೆ “ಮಾಬ್ಲೂ ಮಲಗುಲಾ ಮನೇ!! ಆ ಹಾಳೆ ಕಟ್ಟು ತಕಂಡ ಬಾ!!” ಎಂದು ತಮ್ಮ ಲೆಕ್ಕದ ಪುಸ್ತಕ ತರಿಸಿಕೊಂಡು ಆ ವರ್ಷದ ಖರ್ಚು ವೆಚ್ಚ ಬರೆದುದನ್ನು ಮತ್ತೊಮ್ಮೆ ಚೆಕ್ ಮಾಡಿದ್ದರು. “ಮಾಬ್ಲು ಗಿಡವಕ್ಕೆ ಈ ಸಲ ಗೊಬ್ಬರ ಹಾಕಬೇಕಾಗತ. ಯಾರಿಗರೂ ಹೇಳ. ಗೊಬ್ಬರ ಇದೇ ನೋಡ. ಚೌತಿ ಮುಗದ್ದೆ ಹಾಕಸೇ ಬಿಡುವಾ” ಎಂದರು. ಮಾಬ್ಲಣ್ಣ ಹಾ! ಅಪ್ಪಾ! ನೀನೀಗ ಮಲಗು” ಎಂದು ಸಮಾಧಾನಿಸಿದ್ದರು. ರಾತ್ರಿ ಉಂಡು ಮಲಗಿದ ಅಪ್ಪ ಚಿರನಿದ್ರೆಗೆ ಜಾರಿದ್ದರು.

ನೆನಪುಗಳು ಕಣ್ಣಾಲಿಗಳ ಒದ್ದೆಮಾಡಿದವು. ಮಂಜಾದ ನೋಟಕ್ಕೆ ದೂರದಲ್ಲಿ ತನ್ನೂರಿನ ಕೆಂಪು ಬಸ್ಸು ಬರುತ್ತಿರುವುದು ಕಂಡಿತು. ಮರುಗಳಿಗೆ ಮಾದೇವಿ “ಅಬ್ಬಾ ಈಗಾರೂ ಬಂತು ಬಸ್ಸು” ಎಂದು ಸಮಾಧಾನದ ಉಸುರೆಳೆದು ತಟ್ಟನೇ ಎದ್ದು ಬುಟ್ಟಿ ಎತ್ತಿ ಸೊಂಟದ ಮೇಲಿಟ್ಟುಕೊಂಡಳು.. ಬದುಕು… ಇಷ್ಟೇ.. ಹುಟ್ಟು ಸಾವಿನ ನಡುವೆ ನಿರಂತರ ಹೋರಾಟ ಎನಿಸುತ್ತಿದ್ದಂತೆ ಬಸ್ಸಿನ ಚಕ್ರ ಒಮ್ಮೆ ಗಿರ್‌ ಗಿರ್‌ ಎಂದು ತಿರುಗಿ ನಿಂತಿತು.

ದಡಬಡ್.. ಎನ್ನುತ್ತಾ ಜನ ನಿಂತ ಬಸ್ಸನ್ನು ಏರತೊಡಗಿದರು. ಗಾಂವಕರರು ಪತ್ರಿಕೆ ಮಡಿಚಿ ಪುನಃ ಕಂಕುಳಲ್ಲಿ ಹಿಡಿದು ನಿಧಾನ ಹೆಜ್ಜೆ ಮೇಲಿಡುತ್ತಾ ಹೇಗೋ ಒಂದು ಸೀಟು ಗಿಟ್ಟಿಸಿಕೊಂಡು ಕೂತರು. ಬಸ್ಸಿನ ಚಕ್ರಗಳು ನಿಧಾನಕ್ಕೆ ಜೀವ ಪಡೆದು ಚಲಿಸಲಾರಂಭಿಸಿದವು. ನಿರ್ಜೀವ ಚಕ್ರ ಸತ್ತು ಮತ್ತೆ ಹುಟ್ಟುವ ಹಾಗೇ ಜೀವಂತ ಮನುಷ್ಯರು ಸತ್ತು ಮತ್ತೆ ಬರುವಂತಿದ್ದರೇ.. ರೇ ರೇ.. ವಿಷಾದದ ನಗು ಸುಳಿದು ಒಮ್ಮೆ ತೇಗಿದರು. ಅರೇ! ಹುಚ್ಚು ಯೋಚನೆ.. ಇಲ್ಲಿ ನಿಲುಗಡೆ ಒಮ್ಮೆ ಮಾತ್ರ.

About The Author

ನಾಗರೇಖಾ ಗಾಂವಕರ

ನಾಗರೇಖಾ ಗಾಂವಕರ ದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ. ‘ಏಣಿ’, ‘ಪದಗಳೊಂದಿಗೆ ನಾನು (ಕವನ ಸಂಕಲನಗಳು), ಪಾಶ್ಚಿಮಾತ್ಯ ಸಾಹಿತ್ಯ ಲೋಕ- (ಪರಿಚಯಾತ್ಮಕ ಲೇಖನಗಳ ಅಂಕಣ ಬರಹ)

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ