‘ಈಗ ಈ ಊರು ಶರಾವತಿ ನದಿಯ ನಡುವೆ ಅಲ್ಲಲ್ಲಿ ಇರುವ ಗುಡ್ಡವೊಂದರ ಮೇಲೆ ನಿರುಮ್ಮಳವಾಗಿ ಕೂತ ಪುಟ್ಟದೊಂದು ದ್ವೀಪದಂತೆ ಕಾಣುತ್ತದೆ. ಈಗ ಅಂದರೆ ಲಿಂಗನಮಕ್ಕಿ ಡ್ಯಾಮ್ ಆಗಿ ಶರಾವತಿ ನದಿಗೆ ಅಣೆಕಟ್ಟು ಕಟ್ಟಿದ ಮೇಲೆ ಜಲದ ರಾಶಿಯೇ ಒಂದೆಡೆ ನಿಂತಂತೆ ಭಾಸವಾಗುತ್ತದೆ. ಆದರೆ ಆಗ ಹಾಗಿರಲಿಲ್ಲ. ಶರಾವತಿ ಇಲ್ಲಿ ಸ್ವಚ್ಛಂದವಾಗಿ ಹರಿಯುತ್ತಿದ್ದಳು. ಅದರ ಸುತ್ತ ಕಾಡು, ಎದುರಿಗೆ ತೋಟ, ಅಂತಹ ಒಂದು ಸುಂದರ ಪ್ರದೇಶವದು. ಎಲ್ಲಿಗೇ ಹೋಗುವುದಿದ್ದರೂ ಒಂದೆರಡು ಮೈಲು ದೂರ ನಡೆದೇ ಹೋಗಬೇಕು’ – ವಿದ್ಯುತ್ ಹುಟ್ಟುವ ಮುನ್ನ ಶರಾವತಿ ನದಿ ದಂಡೆ ಹೇಗಿತ್ತು ಎಂಬುದನ್ನು ‘ಹರಿವ ನದಿ’ ಆತ್ಮಕತೆ ನಿರೂಪಿಸುತ್ತದೆ. ಭಾರತಿ ಹೆಗಡೆ ನಿರೂಪಿಸಿದ ಮೀನಾಕ್ಷಿ ಭಟ್ಟರ ಈ ಆತ್ಮಕತೆ ನಾಳೆ ಸಿದ್ಧಾಪುರದಲ್ಲಿ ಬಿಡುಗಡೆಯಾಗಲಿದ್ದು, ಈ ನಾಡು ವಿದ್ಯುತ್ ಲೋಕಕ್ಕೆ ತೆರೆದುಕೊಂಡ ಪಲ್ಲಟಗಳ ವಿವರವಾದ ನಿರೂಪಣೆಯಿದೆ. ಪುಸ್ತಕದ ಮತ್ತೊಂದು ಅಧ್ಯಾಯ ಇಲ್ಲಿದೆ. 

 

ನಾಡಿಗೆ ಬೆಳಕು ನೀಡಬೇಕೆಂದು ಶರಾವತಿ ನದಿಗೆ ಅಣೆಕಟ್ಟು ಕಟ್ಟುತ್ತಾರಂತೆ,
ಅದರಿಂದ ವಿದ್ಯುತ್‌ಶಕ್ತಿ ತಯಾರಿಸಿ ಎಲ್ಲ ಕಡೆ ಬೆಳಕು ನೀಡುತ್ತಾರಂತೆ. ಅದಕ್ಕೆ ತುಂಬ ಊರುಗಳು ಮುಳುಗುತ್ತವೆಯಂತೆ…

ಹೀಗೆಂಬ ಸುದ್ದಿಗಳು ನನ್ನ ಊರಿನಲ್ಲಿ ಹರಿದಾಡುವಾಗ ನಾನಿನ್ನೂ ಚಿಕ್ಕವಳು. ಬೆಳಕು ಎಂದರೆ ಸೂರ್ಯನ ಬೆಳಕನ್ನು ಮತ್ತು ಚಿಮಣಿ ದೀಪವನ್ನು ನೋಡಿದ ನನಗೆ ನೀರಿನಿಂದ ಹೇಗೆ ಬೆಳಕು ಬರಬಲ್ಲದು ಎಂಬುದನ್ನು ಊಹಿಸಲೂ ಕಷ್ಟವಾದ ಕಾಲವದು. ಯಾರೊಬ್ಬರು ಮನೆಗೆ ಬರಲಿ, ರಸ್ತೆಯಲ್ಲಿ ಯಾರೇ ಹೋಗಲಿ, ಹೋಯ್, ಎಂತದ್ರೋ… ನಿಮ್ಮನೆ ಮುಳಗ್ತಡನೋ.. ಎಂದು ಕೇಳುವಂತಹ ಸ್ಥಿತಿಯದು. ಹೌದಡಾ… ಎಮ್ಮನೆ ಮುಳುಗ್ತಡ, ನಿಮ್ಮನೆ ಕತೆ ಎಂತದ್ರಾ…? ಎಂದು ಅವರೂ ಕೇಳುವ ಹಾಗೆ. ತೋಟಕ್ಕೆ, ಗದ್ದೆಗೆ ಬರುವ ಆಳುಕಾಳುಗಳಿಂದ ಹಿಡಿದು, ಅಕ್ಕಪಕ್ಕ, ನೆಂಟರು ಇಷ್ಟರು ಎಲ್ಲರ ಬಾಯಲ್ಲೂ ಇದೇ ಮಾತು, ಊರು ಮುಳುಗುತ್ತದೆ, ಅದೂ ಕರೆಂಟು ತರಿಸಲು.

ಹೀಗೆ ಸುದ್ದಿ ದಟ್ಟವಾಗುವ ಹೊತ್ತಿಗೇ ಅಂಥದ್ದೆಲ್ಲ ಏನು ಎಂದು ಅರಿಯದಂತಹ ಪರಿಸ್ಥಿತಿಯಲ್ಲೇ ನಮ್ಮನೆಯಲ್ಲಿ ಒಂದು ಅನಾಹುತ ನಡೆದುಹೋಗಿತ್ತು! ಆ ದಿನ ನನಗಿನ್ನೂ ನೆನಪಿದೆ. ಅದೆಂತಹ ಮಳೆ. ಯಾವ ಕಾಲವೆಂಬುದನ್ನು ಗುರುತಿಸಲಾಗದಷ್ಟು ಮಳೆ, ಮಧ್ಯಾಹ್ನವಾ, ಬೆಳಿಗ್ಗೆಯಾ, ಸಂಜೆಯಾ ಎಂದು ಗೊತ್ತಾಗದಷ್ಟು ಮೋಡ ಕವಿದ ಆಕಾಶ. ಎಲ್ಲಿ ನೋಡಿದರೂ ಥಂಡಿ ಥಂಡಿ ವಾತಾವರಣ. ಬೆಳೆಹುಲ್ಲು ಹಾಕಿದರೂ ಮಣ್ಣಿನ ನೆಲದಲ್ಲಿ ಒರತೆ ಎದ್ದಿದೆಯೇನೋ ಎಂಬಂತೆ ಕಾಲಕೆಳಗಿನ ನೆಲ ತಣ್ಣಗೆ ಕೊರೆಯುತ್ತಿತ್ತು. ಇಷ್ಟಾದರೂ ಈ ಲಾರಿಗಳು ಮಾತ್ರ ಆಗಾಗ ಬಂದುಹೋಗುತ್ತಿದ್ದವು. ಈ ಮಣ್ಣಿನ ಹಾದಿಯಲ್ಲಿ ಈ ಲಾರಿಗಳ ಚಕ್ರ ಹುಗಿಯದಿದ್ದರೆ ಸಾಕು.. ಎಂದುಕೊಳ್ಳುತ್ತಿರುವಾಗಲೇ ‘ಈಗೀಗಂತೂ ಬೆಳಿಗ್ಗೆ ಬೆಳಿಗ್ಗೆನೇ ಈ ಲಾರಿಗಳ ಹಾವಳಿಯಪ್ಪಾ. ಮೊದ್ಲೆಲ್ಲ ಮಧ್ಯಾಹ್ನನಾದ್ರೂ ಬತ್ತಿದ್ದ, ಈಗ ಇಷ್ಟೊತ್ತಿಗೇ ಬಂದು ವಕ್ಕರಸ್ತವಪಾ…’ ಅತ್ತಿಗೆ ಗೊಣಗಿಕೊಂಡೇ ಅಕ್ಕಿತೊಳೆದು ಒಲೆಯ ಮೇಲೆ ಕೊತಕೊತನೆ ಕುದಿಯುತ್ತಿರುವ ಅರ್ಧ ನೀರಿರುವ ಚರಿಗೆಗೆ ಹಾಕಿ ಒಲೆಯಲ್ಲಿ ಅರ್ಧ ಸುಟ್ಟ ಕಟ್ಟಿಗೆಯನ್ನು ಮುಂದೂಡಿದಳು. ಅದಾಗಲೇ ತಾಮ್ರದ ಚರಿಗೆಯಲ್ಲಿನ ನೀರು ದೊಡ್ಡ ಉರಿಗೆ ಮತ್ತಷ್ಟು ಕುದಿಯತೊಡಗಿತು. ಅತ್ತಿಗೆ ಅಕ್ಕಿತೊಳೆಯುತ್ತಿದ್ದಾಳೆಂದರೆ ಅದು ಮಧ್ಯಾಹ್ನದ ಸಮಯವಾಗಿರಬಹುದು ಎಂದು ಊಹಿಸಿಕೊಂಡು ಹೇಳಬಹುದಾಗಿತ್ತು. ಅಷ್ಟು ಮೋಡ ತುಂಬಿದ ವಾತಾವರಣ. ‘ಲಾರಿ ಅದರಷ್ಟಕ್ಕೆ ಬಂದ್ರೆ ನಿಂಗೆಂತ ಕಷ್ಟ, ನಿನ್ನ ಕೆಲ್ಸ ನೀ ನೋಡಕ್ಯ…’ ಎಂದ ಅಣ್ಣಯ್ಯನ ಮಾತುಗಳನ್ನು ಸರಿಯಾಗಿ ಕೇಳಿಸಿಕೊಳ್ಳದ ಅತ್ತಿಗೆ, ಅವತ್ತಿನ ಮಧ್ಯಾಹ್ನದ ಊಟಕ್ಕೆ ತಂಬುಳಿ ಮಾಡಲು ನೆಕ್ಕರಕನ ಕುಡಿ, ಇಲಿಕಿವಿ ಕುಡಿಗಳನ್ನು ಕೊಯ್ಯಲು ಹಿತ್ತಲಿಗೆ ಹೋದಳು. ಅಣ್ಣ-ಅತ್ತಿಗೆಯರ ಈ ಸಂಭಾಷಣೆ ಕೇಳಿಸಿಕೊಂಡು ಕೊಟ್ಟಿಗೆಯಲ್ಲೇನೋ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಅಣ್ಣಯ್ಯ ‘ನಿಂಗಕ್ಕೆಲ್ಲ ಎಂತ ಗೊತ್ತಿದ್ದು, ಜೋಗಕ್ಕೆ ಕರೆಂಟು ಮಾಡಕು ಅಂದರೆ ಲಿಂಗನಮಕ್ಕಿಗೆ ಡ್ಯಾಮ್ ಕಟ್ಟಕು. ಹಾಂಗೆ ಕಟ್ಟಿ ಕರೆಂಟು ತಂದ್ರೆ ಇಡೀ ನಾಡಿಗೇ ಬೆಳಕು ಬತ್ತು… ಬೆಳಕು… ಅದಕ್ಕೆ ಈ ಲಾರಿಗಳ ಶಬ್ದವನ್ನು ತಡ್ಕಂಬದೇಯ’ ಎಂದು ಎರಡೂ ಕೈಗಳನ್ನು ಮೇಲಕ್ಕೆತ್ತಿ ಹೇಳುವುದನ್ನು ಕೇಳಿದ ನನಗೆ ನಾಡಿಗೆ ಬೆಳಕು ಕೊಡುವುದು ಅಂದರೇನು. ಈಗೇನು ನಾವು ಕತ್ತಲೆಯಲ್ಲಿದ್ದೇವಾ…? ಮುಖ್ಯವಾಗಿ ನೀರಿನಿಂದ ಬೆಳಕು ಬರುವುದು ಎನ್ನುವುದೇ ದೊಡ್ಡ ಸೋಜಿಗ. ನಮ್ಮನೆಯಲ್ಲಿ ಪ್ರತಿದಿವಸ ಬೆಳಗಿಸುವ ಚಿಮಣಿ ದೀಪದ ಗುಡ್ನಕ್ಕಿಂತಲೂ ದೊಡ್ಡದಿರುತ್ತದಾ ಇದು? ಜಗತ್ತು ಎನ್ನುವುದು ಅದೆಷ್ಟು ದೊಡ್ಡದಿರಬಹುದು ಹಾಗಿದ್ದರೆ? ಕೊಳಚಗಾರು ಊರಿಗಿಂತಲೂ ಎಷ್ಟುಪಟ್ಟು ಅದು ದೊಡ್ಡದಿರಬಹುದು, ಅಷ್ಟು ದೊಡ್ಡ ಊರಿಗೆ ಇನ್ನೆಷ್ಟು ದೀಪಗಳು ಬೇಕಾಗಬಹುದು. ಬಹುಶಃ ನೂರಾರು ದೀಪದ ಗುಡ್ನಗಳನ್ನು ಸೇರಿಸಿದರೆ ಎಷ್ಟು ಬೆಳಕು ಬರಬಹುದೋ ಅಷ್ಟು ಬೆಳಕು ಬರಬಹುದಾ? ಅಷ್ಟೊಂದು ದೀಪದ ಗುಡ್ನಗಳನ್ನು ಎಲ್ಲಿಂದ ತರಬಹುದು? ಎಲ್ಲಿ ಸಿಗುವುದು ಇವೆಲ್ಲ..? ಹೀಗೇ ಏನೇನೋ ಯೋಚನೆ ಬಂದು ತಲೆ ಹಾಳಾಯಿತೇ ಹೊರತು ಉತ್ತರ ಸಿಗಲಿಲ್ಲ. ಅಣ್ಣನಿಗೆ ಕೇಳುವುದಕ್ಕೆ ಭಯ. ಇದೆಲ್ಲ ನಿಂಗೆಂತಕೆ ಎಂದು ಬೈಯ್ಯಬಹುದು. ಇಷ್ಟಕ್ಕೂ ಜೋಗದಲ್ಲಿ ಕರೆಂಟು ಉತ್ಪತ್ತಿಯಾದಮೇಲೆ ಹೇಗೂ ನಮ್ಮನೆಗೂ ಬೆಳಕು ಬರುತ್ತದಲ್ಲ, ಆಗ ಹೇಗೂ ತಿಳಿಯುತ್ತದೆ, ಇದೆಷ್ಟು ದೊಡ್ಡ ಬೆಳಕು ಎಂಬುದು ಎಂದು ಸಮಾಧಾನಿಸಿಕೊಂಡು ಹಿತ್ಲಕಡೆಗೆ ಹೋದೆ.

ನನಗಾಗ ಎಂಟೋ ಹತ್ತೋ ವಯಸ್ಸಿರಬಹುದು. ಜಗತ್ತು ಎಂದರೆ ಏಳೆಂಟು ಮನೆಗಳಿರುವ ನನ್ನ ಊರು ಕೊಳಚಗಾರು, ನಮ್ಮನೆ ತೋಟ, ತೋಟದಾಚೆ ತಣ್ಣಗೆ ಹರಿಯುವ ಶರಾವತಿ ನದಿ, ಸಮೀಪದಲ್ಲಿರುವ ತುಮರಿ ಗುಡ್ಡದಾಚೆ ಇರುವ ನನ್ನ ಅಜ್ಜನ ಮನೆ ಕೌಲಮನೆ, ಅದರ ಸುತ್ತಮುತ್ತ ಇರುವ ಬೆಳ್ಳೆಣ್ಣೆ, ಮೂಗಿಮನೆ, ಹೆಬ್ಬೇಲಮ್ಮನ ದೇವಸ್ಥಾನ… ಇವಿಷ್ಟೇ ನನ್ನ ಜಗತ್ತಾಗಿತ್ತು. ಇದರಾಚೆ ಏನಾದರೂ ಊರುಗಳಿರಬಹುದಾ ಎಂದು ಯೋಚಿಸುವ ಮನಸ್ಥಿತಿ ನನ್ನದಾಗಿರಲೇ ಇಲ್ಲ. ಯಾಕೆಂದರೆ ಈ ನಾಲ್ಕಾರು ಹಳ್ಳಿಗಳನ್ನು ಬಿಟ್ಟರೆ ಬೇರೆ ಊರನ್ನು ನಾನು ನೋಡಿದವಳಲ್ಲ. ಸಾಗರ, ತಾಳಗುಪ್ಪ ಮುಂತಾದ ಪೇಟೆಗಳ ಕುರಿತು ಎಲೆ ವ್ಯಾಪಾರಕ್ಕೆಂದು ಅಣ್ಣಯ್ಯ ಹೋಗಿ ಬಂದು ಮಾಡಿರುವ ಕಾರಣಕ್ಕೆ ಕೇಳಿ ಗೊತ್ತಿತ್ತು ಅಷ್ಟೇ. ಜಗದ ಅರಿವಿಲ್ಲದ ಪುಟ್ಟ ಹುಡುಗಿಯಾದ ನನಗೆ ಜಗಕ್ಕೆ ಬೆಳಕು ಕೊಡುವುದೆಂದರೇನು ಅದೂ ನೀರಿನಿಂದ, ಅದಕ್ಕಾಗಿ ಈ ಶರಾವತಿ ನದಿಗ್ಯಾಕೆ ಅಣೆಕಟ್ಟು… ಎಂದು ಆಶ್ಚರ್ಯವಾಗುತ್ತಿತ್ತು. ಅಷ್ಟೇ ಅಲ್ಲ, ನಾವೆಲ್ಲ ಈ ಊರು ಬಿಡಬೇಕಾಗಿಯೂ ಬರಬಹುದು ಎನ್ನುತ್ತಿದ್ದರು. ನಾವ್ಯಾಕೆ ಊರು ಬಿಡಬೇಕಾಗುತ್ತದೆ? ಪ್ರಶ್ನೆಗಳೇನೋ ಇದ್ದವು. ಆದರೆ ಕೇಳಲು ಭಯ. ಲಿಂಗನಮಕ್ಕಿಯಲ್ಲಿ ಡ್ಯಾಮು ಕಟ್ಟುತ್ತಾರೆ, ಜೋಗದಲ್ಲಿ ಕರೆಂಟು ಉತ್ಪತ್ತಿಯಾಗುತ್ತದೆ ಎನ್ನುವಾಗಲೇ ನಮ್ಮೂರಿನಲ್ಲಿ ಬಿರುಸಿನ ಚಟುವಟಿಕೆಗಳು ನಡೆಯತೊಡಗಿದವು. ಕಲ್ಲು, ಕಬ್ಬಿಣ ತುಂಬಿದ ಲಾರಿಗಳ ಓಡಾಟ ಜೋರಾಗಿದ್ದವು. ನೆಟ್ಟಗೆ ಒಂದು ಸೈಕಲ್ ಕೂಡ ನೋಡದ ನಾವು ಲಾರಿಯೊಂದು ಊರಿಗೆ ಬರುತ್ತದೆಂದರೆ ಅದನ್ನೇ ಕೌತುಕದಿಂದ ನೋಡುತ್ತಿದ್ದೆವು. ಲಾರಿ ಶಬ್ದ ಕೇಳಿದ ತಕ್ಷಣ ನಾನು, ತಂಗಿ, ಅಣ್ಣಂದಿರೆಲ್ಲ ಮನೆಯ ಹೊರಗೆ ನಿಂತು ‘ಮೋಟಾರು ಬಂತೂ…’ ಎಂದು ಕೂಗುತ್ತಾ ಅದನ್ನು ನೋಡಲು ಹೋಗುತ್ತಿದ್ದ ನೆನಪುಗಳಿವೆ.

ಇದರ ಜೊತೆಗೆ ಲಿಂಗನಮಕ್ಕಿ ಡ್ಯಾಮ್ ಆದರೆ ನಮ್ಮ ತೋಟ ಮನೆಗಳೆಲ್ಲ ಮುಳುಗುತ್ತವೆ. ಅದಕ್ಕೂ ಮುಂಚೆಯೇ ನಾವೆಲ್ಲಾದರೂ ಬೇರೆಕಡೆ ಸ್ಥಳಾಂತರಗೊಳ್ಳಬೇಕು ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಅದರ ಬಹುತೇಕ ಮಾತುಕತೆಗಳು ನಮ್ಮನೆಯಲ್ಲೇ ಆಗುತ್ತಿದ್ದವು. ಅಪ್ಪ ಊರಿನ ಮುಖಂಡನಾಗಿದ್ದ. ಅಪ್ಪನನ್ನು ಕೇಳದ ಹೊರತು ಊರಿನಲ್ಲಿ ಯಾವುದೂ ನಡೆಯುತ್ತಿರಲಿಲ್ಲ. ಅಪ್ಪ, ಅಣ್ಣಯ್ಯ, ಗಪ್ಪತಣ್ಣಯ್ಯ ಊರವರೊಂದಿಗೆ ಇದರ ಬಗ್ಗೆಯೇ ಚರ್ಚಿಸುತ್ತಿದ್ದರು. ಸರ್ಕಾರ ಪರಿಹಾರದ ಹಣ ಕೊಡುತ್ತದೆ, ಇದರಿಂದ ಬೇರೆಕಡೆ ಜಮೀನು ನೋಡಬೇಕು, ಪರಿಹಾರ ಎಷ್ಟು ಕೊಡುತ್ತಾರೆ, ಯಾವ ರೂಪದಲ್ಲಿ ಕೊಡುತ್ತಾರೆ, ಅದನ್ನು ಹೇಗೆ ಪಡೆಯುವುದು ಇಂಥವುಗಳ ಬಗ್ಗೆಯೇ ಚರ್ಚೆ ನಡೆಯುತ್ತಿತ್ತು. ಅಲ್ಲಿ ಜಮೀನಿದೆ, ಇಲ್ಲಿ ಜಮೀನಿದೆ ಎಂಬ ಎಲ್ಲ ಅಡಬಡ ಸುದ್ದಿಗಳೂ ಸಾಕಷ್ಟು ಕೇಳಿಬರುತ್ತಿದ್ದವು. ಒಟ್ಟಿನಲ್ಲಿ ನಮ್ಮನೆ ಮತ್ತು ಇಡೀ ಊರು ಈ ಅಬ್ಬರದ ಮಳೆಯಂತೆಯೇ ಜೋಗದ ಕರೆಂಟು ಮತ್ತು ಲಿಂಗನಮಕ್ಕಿ ಡ್ಯಾಮ್‌ನ ಸುದ್ದಿಯಿಂದ ತುಂಬಿ ಹೋಗಿತ್ತು. ಇವೆಲ್ಲ ಕೇಳುತ್ತಿದ್ದ ನನಗೆ, ಹಾಗಿದ್ದರೆ ನಾವು ಈ ಊರನ್ನು ಬಿಡಬೇಕಾಗಿ ಬರುತ್ತದೆಯಾ? ನಾವಿಲ್ಲಿ ಜಾಸ್ತಿ ದಿವಸ ಇರುವುದಿಲ್ಲ ಎಂಬುದನ್ನು ಕಲ್ಪಿಸಿಕೊಳ್ಳುವುದೇ ಕಷ್ಟವಾಗುತ್ತಿತ್ತು. ಈ ಮನೆ, ಈ ತೋಟ, ಈ ಶರಾವತಿ ಹೊಳೆ, ಈ ತುಮರಿ ಗುಡ್ಡ ಇವನ್ನೆಲ್ಲ ಬಿಟ್ಟು ಹೋಗುವುದಾ? ಹೋಗುವುದಾದರೆ ಮತ್ತೆಲ್ಲಿಗೆ? ಹೇಗೆ? ಆ ಊರು ಹೇಗಿರಬಹುದು, ಅಲ್ಲಿ ಕರೆಂಟು ಇರುತ್ತದಾ? ಹೀಗೆ ನಾನಾ ಪ್ರಶ್ನೆಗಳು ನನ್ನ ತಲೆಯಲ್ಲಿ ಗಿರುಗುಡುತ್ತಿದ್ದವು. ಇವೆಲ್ಲ ನನ್ನ ತಲೆಯಲ್ಲಷ್ಟೇ ಗಿರಿಗುಟ್ಟಿ ಅಲ್ಲೇ ನಾಶವಾಗುತ್ತಿದ್ದವು ಕೂಡ. ಯಾವ ಪ್ರಶ್ನೆಗಳನ್ನೂ ಹೊರಗೆ ಹಾಕುವ ಹಾಗಿರಲಿಲ್ಲವಲ್ಲ. ಏನಿದ್ದರೂ ಅಪ್ಪ ನಡೆದ ಹಾದಿಯಲ್ಲಿ ನಾವು ನಡೆಯುವುದು, ಅಪ್ಪ ಎಲ್ಲಿಗೆ ಕರೆದುಕೊಂಡು ಹೋಗುತ್ತಾನೋ ಅಲ್ಲಿಗೆ ಹೋಗುವುದಷ್ಟೇ ನಮ್ಮ ಕಾಯಕ.

ಹಾಗೆ ನೋಡಿದರೆ ಈ ಊರೂ ನಮ್ಮದೇನಾಗಿರಲಿಲ್ಲ. ನಾನು ಹುಟ್ಟಿ ಬೆಳೆದದ್ದು ಈ ಶರಾವತಿ ನದಿಯ ತಟದಲ್ಲಿರುವ ಕೊಳಚಗಾರು. ಆದರೆ ನನ್ನ ಊರು ಇದೂ ಆಗಿರಲಿಲ್ಲ, ನಾವಿಲ್ಲಿಗೆ ವಲಸೆ ಬಂದವರು ಎಂದು ಅಮ್ಮನಿಂದ, ಅಣ್ಣಯ್ಯನಿಂದ ಕೇಳಿ ತಿಳಿದಿದ್ದೆ. ಅಪ್ಪ ಸಮೀಪದಲ್ಲಿರುವ ಕೌಲುಮನೆಯಿಂದ ಇಲ್ಲಿಗೆ ಬಂದವನು, ಕೌಲುಮನೆ ನನ್ನ ಅಮ್ಮನ ಹುಟ್ಟಿದ ಮನೆ, ಅಂದರೆ ನನ್ನ ಅಜ್ಜನ ಮನೆ. ನಿಜ, ವಿಶ್ವವಿಖ್ಯಾತ ಜೋಗದ ಜಲಪಾತದ ತಪ್ಪಲಲ್ಲಿರುವ ಒಂದು ಪುಟ್ಟ ಹಳ್ಳಿಯಾದ ಕೊಳಚಗಾರಿನಲ್ಲಿ ಹುಟ್ಟಿದವಳು ನಾನು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್, ಲಿಂಗನಮಕ್ಕಿ, ಜೋಗದ ಮಾರ್ಗವಾಗಿ ಬರುವ ಕೊಳಚಗಾರು ಜೋಗದಿಂದ ಹತ್ತು ಕಿ.ಮೀ. ದೂರದಲ್ಲಿದೆ. ಸಾಗರದಿಂದ ಜೋಗ ಮಾರ್ಗದ ಹೊದ್ದಿನಲ್ಲಿರುವ ಇಡುವಾಣಿಯಿಂದ ಮೂರು ಮೈಲಿ ದೂರದಲ್ಲಿರುವ ಕೊಳಚಗಾರು, ಹೊನ್ನೆಮರಡು, ಭಾರಂಗಿ ಹೋಬಳಿಗೆ ಸೇರಿದೆ. ಶರಾವತಿ ನದಿಯ ದಂಡೆಯ ಮೇಲಿರುವ ಎಂಟ್ಹತ್ತು ಮನೆಗಳಿರುವ ಒಂದು ಪುಟ್ಟ ಹಳ್ಳಿ ಈ ಕೊಳಚಗಾರು. ಅಂದರೆ ಮೂಗಿಮನೆ, ಎಲೆಮನೆ, ಕೌಲಮನೆ, ಹೊಸಮನೆ ಎಲ್ಲಾ ಸೇರಿಸಿದರೆ ಒಂದು ಗ್ರಾಮ ಆಗಬಹುದು.

ಈಗ ಈ ಊರು ಶರಾವತಿ ನದಿಯ ನಡುವೆ ಅಲ್ಲಲ್ಲಿ ಇರುವ ಗುಡ್ಡವೊಂದರ ಮೇಲೆ ನಿರುಮ್ಮಳವಾಗಿ ಕೂತ ಪುಟ್ಟದೊಂದು ದ್ವೀಪದಂತೆ ಕಾಣುತ್ತದೆ. ಈಗ ಅಂದರೆ ಲಿಂಗನಮಕ್ಕಿ ಡ್ಯಾಮ್ ಆಗಿ ಶರಾವತಿ ನದಿಗೆ ಅಣೆಕಟ್ಟು ಕಟ್ಟಿದ ಮೇಲೆ ಜಲದ ರಾಶಿಯೇ ಒಂದೆಡೆ ನಿಂತಂತೆ ಭಾಸವಾಗುತ್ತದೆ. ಆದರೆ ಆಗ ಹಾಗಿರಲಿಲ್ಲ. ಶರಾವತಿ ಇಲ್ಲಿ ಸ್ವಚ್ಛಂದವಾಗಿ ಹರಿಯುತ್ತಿದ್ದಳು. ಅದರ ಸುತ್ತ ಕಾಡು, ಎದುರಿಗೆ ತೋಟ, ಅಂತಹ ಒಂದು ಸುಂದರ ಪ್ರದೇಶವದು. ಎಲ್ಲಿಗೇ ಹೋಗುವುದಿದ್ದರೂ ಒಂದೆರಡು ಮೈಲು ದೂರ ನಡೆದೇ ಹೋಗಬೇಕು. ರಸ್ತೆಯ ಪಕ್ಕದ ಗುಡ್ಡವೊಂದಕ್ಕೆ ಅಂಟಿಕೊಂಡಂತಿರುವ ನಮ್ಮ ಮನೆ ಸೋಗೆಮನೆಯಾಗಿತ್ತು. ರಸ್ತೆಯ ಇನ್ನೊಂದು ಪಕ್ಕದ ಕೆಳಭಾಗದಲ್ಲಿ ಸುಮಾರು ಒಂದೂವರೆ ಎಕರೆಯಷ್ಟು ಅಡಿಕೆ ತೋಟ, ಅದರಲ್ಲಿ ಬಾಳೆ, ವೀಳ್ಯದೆಲೆ, ಮೆಣಸು, ಏಲಕ್ಕಿ ಎಲ್ಲವನ್ನೂ ಒಳಗೊಂಡಿದ್ದ ಸಮೃದ್ಧಿಯಾದ ಹಸಿರಿನ ತೋಟವದು. ಇಂಥ ಪ್ರಕೃತಿಯ ನಡುವೆ 1950ನೇ ಇಸವಿ ಆಗಸ್ಟ್ 30ರಂದು ಇದೇ ಕೊಳಚಗಾರಿನಲ್ಲಿ ಹುಟ್ಟಿದವಳು ನಾನು. ನನಗೆ ಮೀನಾಕ್ಷೀ ಎಂದು ಹೆಸರಿಟ್ಟಿದ್ದರು.

ಯಾವ ಕಾಲವೆಂಬುದನ್ನು ಗುರುತಿಸಲಾಗದಷ್ಟು ಮಳೆ, ಮಧ್ಯಾಹ್ನವಾ, ಬೆಳಿಗ್ಗೆಯಾ, ಸಂಜೆಯಾ ಎಂದು ಗೊತ್ತಾಗದಷ್ಟು ಮೋಡ ಕವಿದ ಆಕಾಶ. ಎಲ್ಲಿ ನೋಡಿದರೂ ಥಂಡಿ ಥಂಡಿ ವಾತಾವರಣ. ಬೆಳೆಹುಲ್ಲು ಹಾಕಿದರೂ ಮಣ್ಣಿನ ನೆಲದಲ್ಲಿ ಒರತೆ ಎದ್ದಿದೆಯೇನೋ ಎಂಬಂತೆ ಕಾಲಕೆಳಗಿನ ನೆಲ ತಣ್ಣಗೆ ಕೊರೆಯುತ್ತಿತ್ತು. ಇಷ್ಟಾದರೂ ಈ ಲಾರಿಗಳು ಮಾತ್ರ ಆಗಾಗ ಬಂದುಹೋಗುತ್ತಿದ್ದವು.

ನಾನು ಹುಟ್ಟುವ ಹೊತ್ತಿಗೆ ಮನೆತುಂಬ ಜನ ಇದ್ದರು. ಅಣ್ಣಯ್ಯನ ಮದುವೆಯಾಗಿತ್ತು. ಅಣ್ಣಯ್ಯ-ಅತ್ತಿಗೆ, ಗಪ್ಪತಣ್ಣಯ್ಯ, ಗುರಣ್ಣ, ಕಮಲಾಕರಣ್ಣ, ಜೈರಾಮಣ್ಣಯ್ಯ ಎಲ್ಲ ಇದ್ದರು. ನಂತರ ನನಗೊಬ್ಬಳು ತಂಗಿಯೂ ಹುಟ್ಟಿದ್ದಳು. ಅಂಗಳದ ತುಂಬೆಲ್ಲ ಆಟವಾಡಿ, ಗುಡ್ಡಬೆಟ್ಟ ಹತ್ತಿ, ಮರಗಳನ್ನೆಲ್ಲ ಸುತ್ತಿ ಓಡಾಡಿದ ಬಾಲ್ಯ ನಮ್ಮದಲ್ಲ. ಕರ್ಮಠ ಬ್ರಾಹ್ಮಣರ ಮನೆತನದಲ್ಲಿ ಹುಟ್ಟಿ, ಅತಿಯಾದ ಮಡಿ, ಮೈಲಿಗೆ ವಾತಾವರಣದಲ್ಲಿ ಬೆಳೆದ ಕಾರಣಕ್ಕಾಗಿ ಹುಟ್ಟಿ ಸ್ವಲ್ಪ ಓಡಾಡುವ ಹಾಗಾಗುತ್ತಿದ್ದಂತೆಯೇ ನಾವೆಲ್ಲ ಮನೆಗೆಲಸಕ್ಕೆ ಅಣಿಯಾಗಿಬಿಡಬೇಕಾಗಿತ್ತು. ಹಾಗಾಗಿ ಬಾಲ್ಯದ ನೆನಪು ಎಂದರೆ ನಮಗೆ ಮನೆಗೆಲಸದ ನೆನಪು ಮಾತ್ರ.

ನಮ್ಮ ಮನೆ ಹುಲಿಮನೆ ಎಂದೇ ಹೆಸರಾಗಿತ್ತು ಮತ್ತು ನನ್ನ ಅಪ್ಪನಿಗೆ ಹುಲಿಯಜ್ಜ, ಹುಲಿ ಹೆಗಡೇರು ಎಂದೇ ಹೆಸರಿತ್ತು. ಒಂದರ್ಥದಲ್ಲಿ ಹುಲಿಯಹಾಗೇ ಇದ್ದ ಅವನು. ಹುಲಿಯಜ್ಜ ಬಂದ, ಹುಲಿಮನೆ ಹೆಗಡೇರು ಬಂದರು ಎಂದರೆ ಊರಲ್ಲೆಲ್ಲ ಬಹು ಮರ್ಯಾದೆ ಇತ್ತು. ನನ್ನ ಅಪ್ಪ ಹುಲಿಮನೆ ಲಕ್ಷ್ಮೀನಾರಾಯಣಪ್ಪ ಮೂಲತಃ ಸಿದ್ದಾಪುರ ತಾಲೂಕಿನ ಹುಲಿಮನೆ ಮನೆತನದವನು. ಹುಲಿಮನೆ ಎಂಬ ಹೆಸರಿಗೆ ತಕ್ಕ ಹಾಗೆ ದರ್ಪ, ಗತ್ತು, ಗಾಂಭೀರ್ಯ ಇದ್ದವ. ಇವನೆಂದರೆ ಊರವರಿಗೆ ಗೌರವ, ಮನೆ ಮಕ್ಕಳಿಗೆಲ್ಲ ಹೆದರಿಕೆ. ಸಿದ್ದಾಪುರ ತಾಲೂಕಿನ ಕುಮಟಾ ರಸ್ತೆಯಲ್ಲಿ ಸಿಗುವ ಬೇಡ್ಕಣಿಯಿಂದ ಎರಡು ಕಿ.ಮೀ. ದೂರದಲ್ಲಿರುವ ಪುಟ್ಟ ಊರು ಹುಲಿಮನೆ. ಏಳೆಂಟು ಮನೆಗಳಿರುವ ಹುಲಿಮನೆ ಕೂಡ ಇಂಥದ್ದೇ ಹಸಿರು ಸಂಪತ್ತಿನ ನಡುವೆ ಇರುವಂಥ ಊರು. ಸುತ್ತ ಕಾಡು, ಬೆಟ್ಟ, ಗುಡ್ಡಗಳ ತಪ್ಪಲಲ್ಲಿ ತಣ್ಣಗೆ ಪವಡಿಸಿದೆಯೇನೋ ಎಂದೆನಿಸುವ ಈ ಊರು ಎಷ್ಟು ಚೆಂದವೋ ಅಷ್ಟೇ ದುರ್ಗಮವೂ ಆಗಿತ್ತು. ಹುಲಿಕೂಗು ಕೇಳಿಸುತ್ತಿದ್ದಂತಹ, ಕಿರುಬ, ಕಾಡುಕೋಣಗಳ ಹಾವಳಿಯಿದ್ದಂಥ ದಟ್ಟಕಾಡಿನ ನಡುವೆ ಅಡಕೆ ತೋಟ, ಗದ್ದೆಗಳಿರುವ ಸಮೃದ್ಧಿ ಊರದು.

`ಈ ಜಮೀನಷ್ಟೂ ಎನ್ನ ಅಪ್ಪಂದೇ ಆಗಿತ್ತು. ಎಂಗ ಐದು ಜನ ಪಂಚಪಾಂಡವರು ಹುಟ್ಟಿ ಈ ಜಮೀನೆಲ್ಲ ಹಂಚಂಪಾಡಾತು’ ಎಂದು ತನ್ನ ಇಳಿವಯಸ್ಸಿನಲ್ಲಿ ಹೇಳಿ ಅಪ್ಪ ನಿಟ್ಟುಸಿರು ಬಿಟ್ಟಿದ್ದು ನನಗಿನ್ನೂ ನೆನಪಿದೆ. ಅಪ್ಪ ಹಾಗೆ ನಿಟ್ಟುಸಿರು ಬಿಡುವುದಕ್ಕೆ ಕಾರಣವಿತ್ತು. ತನ್ನ 90ನೇ ವಯಸ್ಸಿನವರೆಗೂ ಆರೋಗ್ಯವಾಗಿದ್ದ ಅಪ್ಪ, ಅಹಂಕಾರದಿಂದ ತನ್ನ ವೈಭವದ ದಿನಗಳನ್ನು ಕೈಯ್ಯಾರೆ ಹಾಳುಮಾಡಿಕೊಂಡನೇನೋ ಎಂದು ಎಷ್ಟೋ ಸಲ ಅನಿಸಿದ್ದಿದೆ. ಯಾಕೆಂದರೆ ಒಬ್ಬ ಪ್ರಭಾವಿ ಮನುಷ್ಯ, ತೂಕದ ಮಾತುಗಾರಿಕೆ ಇದ್ದಂತಹ ಅಪ್ಪ ಮಾತನಾಡಿದನೆಂದರೆ ಯಾರಿಗಾದರೂ ಭಯವಾಗುತ್ತಿತ್ತು. ಎದುರಿಗಿದ್ದವರು ನಡುಗುವಂತೆ ಮಾತನಾಡುತ್ತಿದ್ದ ಅಪ್ಪನೆದುರು ಮಕ್ಕಳು, ಸ್ವತಃ ನನ್ನ ಅಮ್ಮ, ಆಳುಕಾಳುಗಳೆಲ್ಲ ಗಟ್ಟಿಯಾಗಿ ಉಸಿರು ಬಿಡಲೂ ಹೆದರುತ್ತಿದ್ದರು. ಅಪ್ಪ ಮನೆಯಲ್ಲಿದ್ದಾನೆಂದರೆ ಮಕ್ಕಳು ಉಸಿರು ಬಿಡಲೂ ಯೋಚಿಸುತ್ತಿದ್ದರು. ಅಂಥ ದರ್ಪದ ವ್ಯಕ್ತಿಯಾಗಿದ್ದ ಅಪ್ಪನ ಬದುಕು ಮುಂದೆ ಏನೇನೋ ಆಗಿಬಿಟ್ಟಿತು.

ಅಪ್ಪ ಒಟ್ಟು ಐದು ಗಂಡುಮಕ್ಕಳ ಪೈಕಿ ಎರಡನೆಯವನು. ಅನುಕ್ರಮವಾಗಿ ಕೃಷ್ಣಪ್ಪ ಹೆಗಡೆ, ಲಕ್ಷ್ಮೀನಾರಾಯಣ ಹೆಗಡೆ. ಗಣಪತಿ ಹೆಗಡೆ, ಸೀತಾರಾಮ ಶಾಸ್ತ್ರಿ ಮತ್ತು ಪರಮಶಾಸ್ತ್ರಿ ಹಾಗೂ ಮೂವರು ಹೆಣ್ಣುಮಕ್ಕಳು ಸೇರಿ ನನ್ನ ಅಜ್ಜ-ಅಜ್ಜಿಯರಿಗೆ ಒಟ್ಟು ಎಂಟು ಮಕ್ಕಳು. ಈ ಹೆಣ್ಣುಮಕ್ಕಳ ಪೈಕಿ ಒಬ್ಬಳನ್ನು ಸಿದ್ದಾಪುರ ತಾಲೂಕಿನ ಜಾತಕ, ಮತ್ತೊಬ್ಬಳನ್ನು ಅದೇ ಊರಿನ ಬಳಿಯ ಕತ್ರಗಾಲು ಮತ್ತು ಇನ್ನೊಬ್ಬಳನ್ನು ಐನಕೈಗೆ ಕೊಟ್ಟು ಮದುವೆ ಮಾಡಲಾಗಿತ್ತಂತೆ. ಈ ಐನಕೈಗೆ ಕೊಟ್ಟ ನೇತ್ರಾವತಿ ಎಂಬುವಳೇ ನನ್ನ ಅತ್ತೆ. ಅಂದರೆ ನನ್ನ ಸೋದರತ್ತೆಯೂ ಹೌದು, ಮನೆ ಅತ್ತೆಯೂ ಹೌದು.

ಹುಲಿಮನೆಯೆಂದರೆ ಆ ಕಾಲದಲ್ಲಿ ಹೆಸರುವಾಸಿಯಾದ ಮನೆತನವಾಗಿತ್ತು. ಒಂದೇ ಕುಟುಂಬದಲ್ಲಿ ಇಬ್ಬಿಬ್ಬರು ಮಹಾನ್ ಕಲಾವಿದರು ಇದ್ದರು. ನನ್ನ ಚಿಕ್ಕಪ್ಪ ಸೀತಾರಾಮ ಶಾಸ್ತ್ರಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಮಹಾನ್ ನಾಟಕಕಾರನಾಗಿದ್ದ. ಮತ್ತೊಬ್ಬ ಚಿಕ್ಕಪ್ಪ ಪರಮಶಾಸ್ತ್ರಿ ಕೂಡ ಪ್ರಸಿದ್ಧ ಯಕ್ಷಗಾನ ಅರ್ಥಧಾರಿಯಾಗಿದ್ದ. ಹಾಗೆಯೇ ನನ್ನ ಅಪ್ಪ ಲಕ್ಷ್ಮೀನಾರಾಯಣಪ್ಪನೂ ದೊಡ್ಡ ನಾಟಿ ವೈದ್ಯನಾಗಿದ್ದ. ನನ್ನ ಚಿಕ್ಕಪ್ಪಂದಿರಿಬ್ಬರೂ ಮೊದಲು ಹೆಗಡೆಯೇ ಆಗಿದ್ದು, ಶಾಸ್ತ್ರಿ ಎಂಬುದು ಅವರಿಗೆ ಸಿಕ್ಕ ಗೌರವವಾಗಿತ್ತು. ಇದೆಲ್ಲವೂ ಲಭಿಸಿದ್ದು ಅವರೆಲ್ಲ ಈ ಹುಲಿಮನೆಯನ್ನು ಬಿಟ್ಟಮೇಲೆಯೇ. ಅದರಲ್ಲೂ ನನ್ನ ಚಿಕ್ಕಪ್ಪ ಸೀತಾರಾಮ ಶಾಸ್ತ್ರಿ ದೊಡ್ಡ ನಾಟಕಕಾರನಾಗಿದ್ದೇ ಒಂದು ಮಹಾನ್ ರೋಚಕ ಕತೆಯೇ ಇದೆ. ಅದನ್ನೆಲ್ಲ ಮುಂದೆ ಹೇಳುತ್ತೇನೆ.

ನನ್ನ ಅಪ್ಪ ಐದು ಜನ ಮಕ್ಕಳಲ್ಲಿ ಎರಡನೆಯವನಾಗಿ ಹುಲಿಮನೆಯಲ್ಲಿ ಬೆಳೆದವನು. ನಂತರ ಮನೆಯಾಳ್ತನಕ್ಕೆಂದು ಕೌಲುಮನೆಗೆ ಬಂದು ಸೇರಿದವನು. ಇತ್ತ ಸಾಗರ ತಾಲೂಕಿನ ಜೋಗದ ಸಮೀಪದ ಕೌಲುಮನೆಯ ನಾಗಾಭಟ್ಟನಿಗೂ ಐವರು ಹೆಣ್ಣುಮಕ್ಕಳು. ಬೇಕಾದಷ್ಟು ಆಸ್ತಿಪಾಸ್ತಿ ಎಲ್ಲ ಇದ್ದರೂ ನಾಗಾಭಟ್ಟನಿಗೆ ಗಂಡುಸಂತಾನವಿರಲಿಲ್ಲ. ನಾಲ್ವರು ಹೆಣ್ಣುಮಕ್ಕಳನ್ನು ಮದುವೆಮಾಡಿಕೊಟ್ಟಿದ್ದ. ಕಿರಿಯವಳಾದ ಪಾರ್ವತಿಗೆ ಮದುವೆ ಮಾಡಿ ಮನೆಯಳಿಯನನ್ನು ತರುವ ಇರಾದೆ ಅವನಿಗಿತ್ತು. ಈ ವಿಷಯ ತಿಳಿದು ಲಕ್ಷ್ಮೀನಾರಾಯಣಪ್ಪ ಹುಲಿಮನೆಯಲ್ಲಿರುವ ಜಮೀನನ್ನೆಲ್ಲ ತನ್ನ ಅಣ್ಣ ತಮ್ಮಂದಿರಿಗೇ ಬರೆದುಕೊಟ್ಟು ಕೌಲುಮನೆಯ ಪಾರ್ವತಿಯನ್ನು ಮದುವೆಯಾಗಿ ಮನೆಯಾಳ್ತನಕ್ಕೆ ಬಂದ.
ನನ್ನ ಅಮ್ಮನ ಅಕ್ಕಂದಿರಾದ ತಿಪ್ಪಮ್ಮ, ಸಾವಿತ್ರಮ್ಮ, ಶೇಷಮ್ಮ, ಲಕ್ಷ್ಮಮ್ಮ. ಇವರಲ್ಲಿ ದೊಡ್ಡವಳಾದ ತಿಪ್ಪಮ್ಮನನ್ನು ಮದುವೆಮಾಡಿ ಅಲ್ಲೇ ಸಮೀಪದ ಗದ್ದೆಮನೆಗೆ ಕೊಟ್ಟಿದ್ದರು.

ಸಾವಿತ್ರಮ್ಮನನ್ನು ತಾಳಗುಪ್ಪ ಸಮೀಪದ ಹಂಸಗಾರಿಗೂ, ಶೇಷಮ್ಮನನ್ನು ಸಾಗರ ಸಮೀಪದ ಕೌಲುಕೋಡಿಗೂ ಲಕ್ಷ್ಮಮ್ಮನನ್ನು ಹಿರೇಮನೆಗೂ ಮದುವೆಮಾಡಿ ಕೊಡಲಾಗಿತ್ತು. ಈ ಪೈಕಿ ತಿಪ್ಪಮ್ಮ ಮತ್ತು ನನ್ನ ಅಮ್ಮ ಪಾರ್ವತಿ ಈ ಇಬ್ಬರೂ ದಪ್ಪಗೆ ಸ್ವಲ್ಪ ಕುಳ್ಳಗೆ ಇದ್ದರು.
ಲಕ್ಷ್ಮಮ್ಮನನ್ನು ನಾನು ನೋಡಿರಲೇ ಇಲ್ಲ. ಶೇಷಮ್ಮಮ್ಮ ಮತ್ತು ಸಾವಿತ್ರಿ ಹಿರಿಯಮ್ಮ ಇಬ್ಬರೂ ಆಳ್ತನದಲ್ಲಿ ಸಣ್ಣಕೆ ಇದ್ದು ಸ್ವಲ್ಪ ಎತ್ತರಕ್ಕೆ ಇದ್ದರು. ನನ್ನ ಅಪ್ಪನ ಪೈಕಿ ಎಲ್ಲರೂ ಎತ್ತರ ಮತ್ತು ಅಗಲ ಮೈಕಟ್ಟಿನವರೇ ಆಗಿದ್ದರು. ಅದರಲ್ಲೂ ನನ್ನ ಅಪ್ಪ ಮತ್ತು ನನ್ನ ಕಕ್ಕ ಸೀತಾರಾಮ ಶಾಸ್ತ್ರಿ ಇಬ್ಬರೂ ಎತ್ತರ, ಅಗಲವಾದ ಮೈಕಟ್ಟು ಹೊಂದಿದ್ದು ಬಹು ಸುಂದರವಾಗಿದ್ದರು. ಕಕ್ಕನಿಗೆ ಮುಖ ಅಗಲವಾಗಿದ್ದರೆ ಅಪ್ಪನಿಗೆ ಉರೂಟನೆಯ ಮುಖವಾಗಿತ್ತು. ಅಪ್ಪ ಅಮ್ಮನ ಜೋಡಿ ಎಂದರೆ ಅಮ್ಮ ದಪ್ಪಗೆ ಇದ್ದು ಸ್ವಲ್ಪ ಎತ್ತರ ಕಡಿಮೆ ಇದ್ದು ಎಣ್ಣೆಗಪ್ಪಿನಲ್ಲಿದ್ದರೆ, ಅಪ್ಪ ಮಾತ್ರ ಎತ್ತರದ ಆಳ್ತನವಾಗಿದ್ದು ಕೆಂಪುಕೆಂಪುಗೆ ನೋಡಲು ಬಹುಸುಂದರವಾಗಿದ್ದ. ಯಾರಾದರೂ ಒಮ್ಮೆ ನಿಂತು ನೋಡುವಂತಹ ರೂಪವಂತ ನನ್ನ ಅಪ್ಪ.
ಕೌಲುಮನೆಗೆ ಬಂದ ನನ್ನ ಅಪ್ಪ ಲಕ್ಷ್ಮೀನಾರಾಯಣಪ್ಪ ವಾಸ್ತವ್ಯ ಹೂಡಿ ಮನೆಯ ಒಡೆತನವನ್ನು ಗಳಿಸಿ, ಇಡೀ ಊರಿಗೇ ಪ್ರಭಾವೀ ವ್ಯಕ್ತಿಯಾಗಿ ಬೆಳೆದ. ಉತ್ತಮ ವಾಗ್ಮಿ, ಎಂಥವರನ್ನಾದರೂ ಕೇಳಿಸಬಲ್ಲ ವಾಕ್‌ಚಾತುರ್ಯ ಇವೆಲ್ಲ ನನ್ನಪ್ಪನಿಗೆ ತಂತಾನೇ ಒಲಿದಿತ್ತು. ಹಾಗಾಗಿ ಅವನೊಬ್ಬ ಪ್ರಭಾವಿ ವ್ಯಕ್ತಿಯಾಗಿದ್ದರಲ್ಲಿ ಯಾವ ಆಶ್ಚರ್ಯವೂ ಇರಲಿಲ್ಲ. ಆದರೆ ಅವನ ಮತ್ತು ನನ್ನ ಅಮ್ಮನ ದಾಂಪತ್ಯ ಜೀವನ ಮಾತ್ರ ಅಷ್ಟೇನೂ ಸುಖವಾಗಿರಲಿಲ್ಲವೆಂದು ಅಮ್ಮ ತನ್ನ ಕೊನೆಯ ದಿನಗಳಲ್ಲಿ ಆಗಾಗ ಹೇಳಿಕೊಳ್ಳುತ್ತಿದ್ದುದುಂಟು. ಅಂದರೆ ನಾನು ಹುಟ್ಟಿ, ಬೆಳೆಯುವ ಹೊತ್ತಿಗೆ ಅಪ್ಪನಿಗೆ ವಯಸ್ಸು ಅರವತ್ತು ಮೀರಿತ್ತು. ಹಾಗಾಗಿ ಅಪ್ಪನ ಪ್ರಾಯದ ದಿನಗಳ ಕತೆಗಳೆಲ್ಲ ನನಗೆ ಕೇಳಿ ಗೊತ್ತಿತ್ತೇ ಹೊರತು ಸ್ವತಃ ನೋಡಿ ಗೊತ್ತಿರಲಿಲ್ಲ. ಆದರೆ ಅಪ್ಪ ಇಲ್ಲಿ ಕೌಲುಮನೆಯಲ್ಲಿ ಸಂಸಾರ ಹೂಡಿ ತನ್ನದೇ ಒಂದು ಸಾಮ್ರಾಜ್ಯ ಸ್ಥಾಪಿಸುವ ಹೊತ್ತಿಗೆ ಅಲ್ಲಿಯೂ ಒಂದಿಷ್ಟು ಅನಿರೀಕ್ಷಿತ ಘಟನೆಗಳು ನಡೆದುಹೋದವು. ಗದ್ದೆಮನೆಗೆ ಮದುವೆಯಾಗಿ ಹೋಗಿದ್ದ ನನ್ನ ದೊಡ್ಡಮ್ಮ ತಿಪ್ಪಮ್ಮನ ಗಂಡ ತೀರಿಹೋಗಿ ಅವಳು ತವರುಮನೆಯನ್ನು ಸೇರಿಕೊಂಡಳು. ಸಾವಿತ್ರಿ ಹಿರಿಯಮ್ಮನನ್ನು ಎಳವೆಯಲ್ಲೇ ಮದುವೆ ಮಾಡಿ ಸಾಗರದ ಸಮೀಪದ ಹಳ್ಳಿ ಹಂಸಗಾರಿಗೆ ಕೊಡಲಾಗಿತ್ತು. ಆದರೆ ಮದುವೆಯಾಗಿ ಒಂದು ವರ್ಷಕ್ಕೇ ಅವಳ ಗಂಡನೂ ತೀರಿಹೋಗಿ ಅವಳೂ ಕೌಲುಮನೆಗೇ ಬಂದಿದ್ದಳು. ಇಬ್ಬರು ಹಿರಿಯಮ್ಮಂದಿರೂ ಅಲ್ಲಿಯೇ ಇರುವ ಹೊತ್ತಿಗೇ ಹಿರೇಮನೆಗೆ ಕೊಟ್ಟ ನನ್ನ ಮತ್ತೊಬ್ಬ ದೊಡ್ಡಮ್ಮ ಲಚ್ಚಹಿರಿಯಮ್ಮ ತೀರಿಕೊಂಡಳು. ಅವಳಿಗೆ ಶಿವರಾಮ, ಶ್ರೀನಿವಾಸ ಮತ್ತು ವಿಶಾಲಾಕ್ಷಿ ಎಂಬ ಮೂವರು ಮಕ್ಕಳಿದ್ದರು. ಆ ಮೂವರು ಮಕ್ಕಳನ್ನೂ ನನ್ನ ದೊಡ್ಡಮ್ಮ ತಿಪ್ಪಮ್ಮನೇ ತಂದು ಸಾಕಿಕೊಂಡಳು. ಅವಳಿಗೆ ಮಕ್ಕಳಾಗಿರಲಿಲ್ಲ. ಹಾಗಾಗಿ ಈ ಮಕ್ಕಳನ್ನೇ ತನ್ನ ಮಕ್ಕಳೆಂದು ಸಾಕುತ್ತಿದ್ದಳು. ಸಾವಿತ್ರಿ ಹಿರಿಯಮ್ಮನ ಬದುಕಂತೂ ಥೇಟು ಫಣಿಯಮ್ಮನ ಬದುಕಿನ ಹಾಗೇ ಆಯಿತು. ಮದುವೆಯಾಗಿ ಒಂದು ವರ್ಷಕ್ಕೆ ಗಂಡ ಸತ್ತು, ಅವಳ ತಲೆ ಬೋಳಿಸಿ, ಬಿಳಿಸೀರೆ ಉಡಿಸಿ ಜಪಸರ ಹಿಡಿಸಿ ಕೂರಿಸಿಬಿಟ್ಟಿದ್ದರು. ಸಾವಿತ್ರಿ ಹಿರಿಯಮ್ಮನನ್ನು ನಾವೆಲ್ಲ ನೋಡಿದ್ದು ಇದೇ ರೀತಿಯಲ್ಲೆ. ಅಂಥ ಸಾವಿತ್ರಿ ಹಿರಿಯಮ್ಮ 76 ವರ್ಷ ಅದೇ ಬಿಳಿಸೀರೆಯಲ್ಲೇ ಕಳೆದು ಹೋದಳು. ಬದುಕಿನುದ್ದಕ್ಕೂ ಜಪಮಣಿ ಸರ ಹಿಡಿದು ಜಪಮಾಡುತ್ತ, ಮಡಿಮಾಡುತ್ತ ಕಾಲಕಳೆಯುತ್ತಿದ್ದಳು. ಎಂ.ಕೆ. ಇಂದಿರಾ ಅವರ ಫಣಿಯಮ್ಮ ಕಾದಂಬರಿ ಓದಿದಾಗ, ಆ ಸಿನಿಮಾ ನೋಡಿದಾಗಲೆಲ್ಲ ನನಗೆ ಸಾವಿತ್ರಿ ಹಿರಿಯಮ್ಮನೇ ನೆನಪಿಗೆ ಬರುತ್ತಿದ್ದಳು. ಮತ್ತೊಬ್ಬ ದೊಡ್ಡಮ್ಮ ಶೇಷಮ್ಮನನ್ನು ಕೌಲಕೋಡು ಎಂಬ ಊರಿಗೆ ಮದುವೆಮಾಡಿ ಕೊಡಲಾಗಿತ್ತು. ಇವರಿಗೆ ಮೂವರು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳು ಇದ್ದರು. ಎಲ್ಲರೂ ಮನೆಯೊಳಗೆ ಸೇರಿಕೊಂಡಾಗ, ಇಬ್ಬರು ವಿಧವೆಯರು, ಮೂವರು ಅನಾಥ ಮಕ್ಕಳು, ಅವರ ನಡುವೆ ಮುತೈದೆ ನನ್ನ ಅಮ್ಮ ಪಾರ್ವತಿ. ಬಸಿರು ಬಾಣಂತನವೆಂದು ಬದುಕು ನೂಕುತ್ತಿರುವಾಗ, ಅದೇನು ಅಲ್ಲಿ ಸಮಸ್ಯೆ ಎದುರಾಯಿತೋ ಗೊತ್ತಿಲ್ಲ. ಅಪ್ಪ ಅಮ್ಮನ ನಡುವೆ ಹುಳಿ ಹಿಂಡುವ ಸಾಕಷ್ಟು ಕೆಲಸವೂ ಅಲ್ಲಿ ನಡೆದಿದ್ದವು ಎನಿಸುತ್ತದೆ. ಅಮ್ಮನ ಕಡೆಯ ದಿನಗಳಲ್ಲಿ ಒಮ್ಮೊಮ್ಮೆ ಇದನ್ನೆಲ್ಲ ನೆನಸಿಕೊಂಡು ಕಣ್ಣೀರು ಹಾಕುತ್ತಿದ್ದಳು. ಅವಳ ಅಕ್ಕಂದಿರಿಬ್ಬರೂ ಅಮ್ಮನಿಗೆ ತ್ರಾಸು ಕೊಡುತ್ತಿದ್ದರಂತೆ. ನನ್ನ ಅಪ್ಪನಿಗೆ ಅಮ್ಮನ ವಿರುದ್ಧವೇ ಚಾಡಿ ಹೇಳಿ, ಗಂಡ ಹೆಂಡತಿಯ ನಡುವೆ ಕಲಹ ತಂದಿಟ್ಟುಬಿಟ್ಟಿದ್ದರಂತೆ. ಎಷ್ಟೆಂದರೆ ಕಡೆಕಡೆಗೆ ಅಮ್ಮ ಕೊಟ್ಟ ನೀರು ಕೂಡ ಅಪ್ಪ ಕುಡಿಯುತ್ತಿರಲಿಲ್ಲವಂತೆ, ಗಂಡ ಹೆಂಡತಿ ಎಂಬುದು ಹೆಸರಿಗೆ ಮಾತ್ರ ಅನ್ನುವಷ್ಟು ಇಬ್ಬರೂ ಅಪರಿಚಿತರಾಗಿಬಿಟ್ಟಿದ್ದರು. ಬಹುಶಃ ಎಳೆ ವಯಸ್ಸಿನಲ್ಲಿಯೇ ವಿಧವೆಯರಾದ ತಮ್ಮ ಕಣ್ಣ ಮುಂದೆ ತಂಗಿ ಮುತೈದೆಯಾಗಿ, ಬಣ್ಣಬಣ್ಣದ ಸೀರೆ ಉಟ್ಟು, ಮೈತುಂಬ ಬಂಗಾರ ತೊಟ್ಟು, ಗಂಡನ ಸುಖ, ಮಕ್ಕಳ ಸುಖಗಳನ್ನೆಲ್ಲ ಅನುಭವಿಸುತ್ತಿರುವ ಅಮ್ಮನನ್ನು ನೋಡಿ ಇವರಿಗೆ ಸೈರಿಸಲಾಗಿರಲಿಕ್ಕಿಲ್ಲ. ಅದಕ್ಕೇ ಅಮ್ಮನನ್ನು ಕಡೆಗಣಿಸಿ, ಅಮ್ಮನ ವಿರುದ್ಧವೇ ಚಾಡಿ ಹೇಳಿಕೊಡುತ್ತಿದ್ದಿರಬಹುದೆಂದು ನಾನೀಗ ಈ ಇಳಿ ವಯಸ್ಸಿನಲ್ಲಿ ನಿಂತು ಯೋಚಿಸುತ್ತಿದ್ದೇನೆ. ಆಗ ಅವರ ಪರಿಸ್ಥಿತಿ ಏನಿತ್ತೋ ನನಗಂತೂ ಗೊತ್ತಿಲ್ಲ.

ಅಪ್ಪ-ಅಮ್ಮನ ನಡುವಿನ ವಿರಸ ದಾಂಪತ್ಯದಲ್ಲೇ ಮಕ್ಕಳೂ ಸಾಕಷ್ಟು ಹುಟ್ಟಿದರು. ರಾಧಾ ಮೊದಲು ಹುಟ್ಟಿದವಳು. ನಂತರ ಸುಶೀಲಾ, ಸರೋಜ ಎಂಬ ಮತ್ತಿಬ್ಬರು ಹೆಣ್ಣುಮಕ್ಕಳು ಹುಟ್ಟಿದ್ದರು. ಆದರೆ ದುರದೃಷ್ಟವಶಾತ್ ಈ ಇಬ್ಬರು ಹೆಣ್ಣುಮಕ್ಕಳು ಹದಿನೈದು ದಿವಸದ ಅಂತರದಲ್ಲಿ ತೀರಿಹೋದರಂತೆ. ನಂತರ ಹುಟ್ಟಿದವನೇ ಶ್ರೀಪಾದ. ನನ್ನ ಪ್ರೀತಿಯ ಅಣ್ಣಯ್ಯ. ಅವನ ನಂತರ ಕಮಲಾಕರ ಮತ್ತು ಗಣಪತಿ ಅಣ್ಣಯ್ಯಂದಿರು ಹುಟ್ಟಿದರು. ದೊಡ್ಡಕ್ಕಯ್ಯ ರಾಧಾಳನ್ನು ಕಂಡರೆ ನನ್ನ ದೊಡ್ಡಮ್ಮಂದಿರಿಗೆ ಅದರಲ್ಲೂ ತಿಪ್ಪಮ್ಮನಿಗೆ ತುಂಬ ಪ್ರೀತಿಯಿತ್ತಂತೆ. ಆ ಪ್ರೀತಿ ಎಷ್ಟಿತ್ತೆಂದರೆ ರಾಧಾಳ ಮದುವೆಯನ್ನು ತುಂಬ ವಿಜೃಂಭಣೆಯಿಂದ ಮಾಡಿಕೊಡಲಾಗಿತ್ತಂತೆ. ಅವಳನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕೊಪ್ಪ ಎಂಬ ಗ್ರಾಮದ ಶಿವರಾಂ ಹೆಗಡೆ ಎಂಬುವರಿಗೆ ಮದುವೆ ಮಾಡಿ ಕೊಡಲಾಗಿತ್ತು. ಆ ಮದುವೆ ಅದೆಷ್ಟು ಅದ್ಧೂರಿಯಾಗಿತ್ತೆಂದರೆ, ಅವಳ ಮದುವೆಯಲ್ಲಿ ಎಂಟು ಬಾಗಿಲು ಇರುವ ಮಂಟಪವನ್ನು ಮಾಡಿದ್ದರಂತೆ, ಸಾಮಾನ್ಯವಾಗಿ ಮಂಟಪಕ್ಕೆ ನಾಲ್ಕು ಬಾಗಿಲು ಮಾತ್ರ ಮಾಡುತ್ತಾರೆ. ಆದರೆ ಇವಳ ಮದುವೆಗೆ ಎಂಟು ಬಾಗಿಲಿನ ಮಂಟಪವಂತೆ. ಮದುವೆಗೆ ಜೋಡಿ ವಾಲಗವಂತೆ. ಚಿನ್ನವನ್ನೂ ಹೇರಳವಾಗಿ ಕೊಟ್ಟಿದ್ದರಂತೆ. ಅಷ್ಟೇ ಅಲ್ಲ, ಅವಳ ಗಂಡನ ಮನೆಯಲ್ಲಿ ಅವಳಿಗೆ ಚಿನ್ನದ ಜರಿಯ ಸೆರಗು ಮತ್ತು ಅಂಚಿರುವ ರೇಶಿಮೆ ಸೀರೆಯನ್ನು ಕೊಟ್ಟಿದ್ದರು. ಇವತ್ತಿಗೂ ಈ ಸೀರೆ ಅವಳ ಮಗಳು ಗಿರಿಜೆಯ ಬಳಿ ಇದೆ. ಅವಳ ಮದುವೆಯನ್ನು ಅದ್ಧೂರಿಯಾಗಿ ಸ್ವತಃ ತಿಪ್ಪಮ್ಮನೇ ನಿಂತು ಮಾಡಿದ್ದಳಂತೆ… ಹೀಗೆ ಅಮ್ಮ, ಸಾವಿತ್ರಿ ಹಿರಿಯಮ್ಮ, ಈ ಕತೆಗಳನ್ನು ಹೇಳುತ್ತಿದ್ದರೆ ನನಗೆ ರಾಜರಾಣಿಯರ ವೈಭವದ ಮದುವೆಯ ಕತೆಗಳೆಲ್ಲ ನೆನಪಾಗುತ್ತಿದ್ದವು.

ಆದರೆ ರಾಧಾಳನ್ನು ಮದುವೆ ಮಾಡಿ ಕೊಟ್ಟ ನಂತರದ ದಿನಗಳು ಕೌಲುಮನೆಯಲ್ಲಿ ಅಷ್ಟು ಸುಖಕರವಾಗಿರಲಿಲ್ಲ. ಕೆಲವು ವರ್ಷಗಳ ನಂತರ ನನ್ನ ಅಪ್ಪನಿಗೂ ದೊಡ್ಡಮ್ಮ ತಿಪ್ಪಮ್ಮನಿಗೂ ಏನೋ ಹೈಗೈ ಆಗಿ ನನ್ನ ಅಪ್ಪ ಸಂಸಾರ ಸಮೇತನಾಗಿ ಕೌಲುಮನೆಯಿಂದ ಹೊರಬೀಳಬೇಕಾದ ಸಂದರ್ಭ ಎದುರಾಯಿತು. ಒಂದು ರೀತಿಯಲ್ಲಿ ಅನಾಥನ ಹಾಗೆ ಅಪ್ಪ ಕೌಲುಮನೆಯಿಂದ ಹೊರಬೀಳಬೇಕಾಯಿತು ಎಂದರೂ ತಪ್ಪಿಲ್ಲ. ಯಾಕೆಂದರೆ ಹುಲಿಮನೆಯಲ್ಲಿರುವ ತನ್ನ ಜಮೀನನ್ನೆಲ್ಲ ಅಣ್ಣ ತಮ್ಮಂದಿರಿಗೆ ವಹಿಸಿಕೊಟ್ಟು, ಮಾವನ ಆಸ್ತಿ ಸಿಗುತ್ತದೆಂದು ಕೌಲುಮನೆಗೆ ಮನೆಯಾಳ್ತನಕ್ಕೆಂದು ಬಂದ ಅಪ್ಪನಿಗೆ ಇಲ್ಲಿಯೂ ಆಸ್ತಿ ಸಿಗದೇ ಅನಾಥನ ಹಾಗೆ ಹೊರಬೀಳುವಂಥ ಸಂದರ್ಭ ಎದುರಾಗಿದ್ದು ಬಹುಶಃ ವಿಧಿಯ ಕ್ರೌರ್ಯವೇ ಇರಬೇಕು.

ಈ ರೀತಿಯಲ್ಲಿ ಕೊಳಚಗಾರಿಗೆ ಬಂದವನು ನನ್ನ ಅಪ್ಪ. ಇಲ್ಲಿಯೇ ನಾನು ಹುಟ್ಟಿ, ಇದೆಲ್ಲ ನನ್ನದು, ಇದು ನಮ್ಮದೇ ಮನೆ ಎಂದು ತಿಳಿಯುವಷ್ಟರಲ್ಲಿಯೇ ಈ ಊರನ್ನೂ ಬಿಡಬೇಕೇ…? ಅದೂ ಕರೆಂಟಿಗಾಗಿ, ಬೆಳಕಿಗಾಗಿ…!