ಎಂಟುಗಂಟೆಗೆ ಕೆಲಸದವಳು ಬಂದಾಗಲೂ ಬಾಗಿಲು ತೆರೆದ ಕೂಡಲೇ ಅದೇ ದೃಶ್ಯ. ಜೊತೆಗೆ ಅವನ ಮನೆ ಬಾಗಿಲು ತೆಗೆದಾಗ ಹಾಲಿನಲ್ಲಿ ಕಣ್ಣಿಗೆ ಬೀಳುತ್ತಿದ್ದ ನೀರಿನ ಹೂಜಿ, ಹಾಸಿದ ಚಾಪೆ, ಮುಂದೆ ದೇವರಪಟ ಎಲ್ಲಾ ನಾಪತ್ತೆ. ಕೆಲಸದವಳನ್ನು ಮುಂದೆ ಮಾಡಿಕೊಂಡು ಒಂದೆರಡು ಹೆಜ್ಜೆ ಒಳಗೆ ಹೋದಾಗ ಮನೆ ಖಾಲಿಯಾಗಿರುವುದು ಅರಿವಾಯಿತು. ತಕ್ಷಣ ಇವರು ಇಂಟರ್ಕಾಮ್ನಲ್ಲಿ ಸೆಕ್ಯೂರಿಟಿಯವನಿಗೂ, ರಾಧಾಕೃಷ್ಣನ್ಗೂ ಹೇಳಿದರು. ಎಲ್ಲಾ ತಕ್ಷಣ ಓಡಿ ಬಂದರು. ಹೆಜ್ಜೆ ಮೇಲೆ ಹೆಜ್ಜೆ ಇಡುತ್ತಾ ಮನೆ ಪೂರ್ತಿ ಸುತ್ತು ಹಾಕಿದರು.
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಉಮಾ ರಾವ್ ಬರೆದ ಕತೆ “ಹಾವಾಡಿಗ”
ಬೆಂಗಳೂರಿನ ದಕ್ಷಿಣವಲಯದಲ್ಲಿ ತಲೆ ಎತ್ತಿದ್ದ ಐಶಾರಾಮಿ ವಸತಿ ಸಮುಚ್ಚಯಗಳಲ್ಲಿ `ಸ್ವರ್ಗ ಅಪಾರ್ಟ್ಮೆಂಟ್ಸ್’ ಕೂಡ ಒಂದು. ಅದರಲ್ಲಿದ್ದ ನೂರು ಮನೆಗಳಲ್ಲಿ ವಾಸಿಸುವವರಿಗೆ ದಿನನಿತ್ಯ ಜೀವನ ಸುಖಮಯ, ಸುಗಮವಾಗಿ ಮಾಡಲು ಅಷ್ಟೂ ಸೌಕರ್ಯಗಳನ್ನು ಒದಗಿಸಲಾಗಿತ್ತು. ಬೆಳಗಿನ ಬಿಸಿಲಲ್ಲಿ ಮಿರಮಿರ ಮಿರುಗುವ ಈಜುಕೊಳವಿತ್ತು. ಟೇಬಲ್ ಟೆನ್ನಿಸ್, ಬಿಲಿಯರ್ಡ್ಸ್ ಮುಂತಾದ ಆಟಗಳನ್ನು ಒಳಗೊಂಡ ಕ್ಲಬ್ಹೌಸ್ ಇತ್ತು. ಬಣ್ಣಬಣ್ಣದ ಹೂಗಿಡಗಳನ್ನು ಒಳಗೊಂಡ ತೋಟವೂ, ನಡುನಡುವೆ ಗುಲ್ಮೊಹರ್ ಮರಗಳು, ಅದರ ಮಧ್ಯೆ ಹಾದುಹೋಗುವ ಕಾಲುದಾರಿಗಳೂ ಇದ್ದುವು. ಕೋಕ್, ಪೆಪ್ಸಿ, ಕಿಟ್ಕ್ಯಾಟ್, ರಿಗ್ಲೇಸ್ ಮುಂತಾದುವನ್ನು ಮಾರುವ ಸಣ್ಣ ಅಂಗಡಿಯಿತ್ತು.
ಇಪ್ಪತ್ನಾಲ್ಕು ಗಂಟೆ ಕರೆಂಟ್ ಒದಗಿಸಲು ಜನರೇಟರ್ ವ್ಯವಸ್ಥೆ ಇತ್ತು. ಇದಕ್ಕೆಲ್ಲಾ ಕಾವಲು ಕಾಯುವ ಸೆಕ್ಯೂರಿಟಿ ಗಾರ್ಡುಗಳಿದ್ದರು. ಅಲ್ಲಿ ಮನೆಗೆಲಸ ಮಾಡಲು ಬರುವ ಹೆಂಗಸರಿಗೆ ಕನ್ನಡದ ಜೊತೆಗೆ ಹಿಂದಿ, ತಮಿಳು ಕೂಡ ಮಾತಾಡಲು ಬರುತ್ತಿತ್ತು. ಅವರಿಗೆಲ್ಲಾ ಒಂದು ಫೋಟೋ ಸಹಿತ ಐ.ಡಿ. ಕಾರ್ಡ್ ಕೊಡಲಾಗಿತ್ತು.
ಸ್ವರ್ಗ ಕಾಂಪ್ಲೆಕ್ಸ್ನಲ್ಲಿ ದೇಶದ ಬೇರೆ ಬೇರೆ ಭಾಗಗಳಿಂದ ಬಂದ ಜನರು ವಾಸಿಸುತ್ತಿದ್ದರು. ರೆಡಿಮೇಡ್ ಗಾರ್ಮೆಂಟ್ಸ್, ಪ್ಲಾಸ್ಟಿಕ್ ಸಾಮಾನುಗಳು ಇತ್ಯಾದಿಗಳ ಸಣ್ಣಪುಟ್ಟ ಕಾರ್ಖಾನೆಗಳ ಮಾಲೀಕರು, ಅಮೆರಿಕಾ ತಮ್ಮ ಹಿತ್ತಲೆಂಬಂತೆ ಅಲ್ಲಿ ಹೋಗಿ ಬಂದು ಮಾಡುವ ಸಾಫ್ಟ್ವೇರ್ ಇಂಜಿನಿಯರ್ಗಳು, ವಿದೇಶಕ್ಕೆ ತಮ್ಮ ಮಕ್ಕಳನ್ನೆಲ್ಲಾ ವಲಸೆ ಕಳಿಸಿ, ಇಲ್ಲಿ ನಾಯಿ ಸುತ್ತಿಸುತ್ತಾ ಆರಾಮ ಜೀವನ ಮಾಡುವ ನಿವೃತ್ತ ಅಧಿಕಾರಿಗಳು, ಫ್ರಿಲ್ಯಾನ್ಸ್ ಪತ್ರಕರ್ತರು, ಟೀವಿ ಸೀರಿಯಲ್ ನಿರ್ಮಾಪಕರು, ಬಹುರಾಷ್ಟ್ರೀಯ ಕಂಪನಿಗಳ ಎಕ್ಸಿಕ್ಯೂಟಿವ್ಗಳು ಹೀಗೆ. ಎಲ್ಲರೂ ಒಬ್ಬರೊಬ್ಬರ ನಡುವೆ ಶಿಷ್ಟರಾಗಿ ವರ್ತಿಸುತ್ತಿದ್ದರು.
ಈ ನೂರು ಕುಟುಂಬಗಳ ನಡುವೆ ಆಗಾಗ ಸಣ್ಣಪುಟ್ಟ ಜಗಳಗಳೂ ನಡೆದುಹೋಗುತ್ತಿದ್ದವು. ಯಾರದೋ ಮನೆಯ ಕೆಲಸದವಳು ತಮ್ಮ ಮೆಟ್ಟಿಲುಗಳ ಮೇಲೆ ಎಲೆ ಅಡಿಕೆ ಉಗಿದಿದ್ದರ ಬಗ್ಗೆಯೋ, ತಮ್ಮ ಮನೆಯ ಪಾರ್ಟಿಯ ಮಾರನೆಯ ದಿನ ತಮ್ಮ ಕೆಲಸದವಳು ತೆಗೆದುಕೊಂಡು ಹೋಗುತ್ತಿದ್ದ ಖಾಲಿ ಬಿಯರ್ ಬಾಟಲುಗಳಲ್ಲಿ ಒಂದು ನಾಲ್ಕನ್ನು ಸೆಕ್ಯುರಿಟಿ ಗಾರ್ಡ್ ತೆಗೆದಿಟ್ಟುಕೊಂಡದ್ದರ ಬಗ್ಗೆಯೋ, ಒಬ್ಬ ಕಂಪೆನಿ ಕಾರಿನ ಡ್ರೈವರ್ ಬಂದು ಹೋಗುವ ಕೆಲಸದ ಹುಡುಗಿಯರ ಮೇಲೆ ಹಿಂದಿಯಲ್ಲಿ ಕಾಮೆಂಟ್ ಮಾಡುವುದರ ಬಗ್ಗೆಯೋ ಈ ಜಗಳಗಳು ಇರುತ್ತಿದ್ದವು.
ಪ್ರತಿ ತಿಂಗಳೂ ತಪ್ಪದೆ ಆಗುತ್ತಿದ್ದ ಕಮಿಟಿ ಮೀಟಿಂಗುಗಳಲ್ಲಿ ಈ ಜಗಳಗಳ ಬಗ್ಗೆ ಚರ್ಚೆ ಆಗುತ್ತಿತ್ತು. ಆಗ ಸದಸ್ಯರೆಲ್ಲಾ ಸೇರಿ `ನಾವೆಲ್ಲಾ ಸಿವಿಲೈಜ್ಡ್ ಪೀಪಲ್. ಒಳ್ಳೆ ಸಾಧಾರಣಸ್ಥರಂತೆ ಕಿತ್ತಾಡುವುದು ತಮ್ಮ ಮಟ್ಟಕ್ಕೆ ತಕ್ಕುದಲ್ಲ’ ಎಂದು ಹೇಳಿಕೊಂಡು, ಮತ್ತೆ ಏನೂ ಆಗದವರಂತೆ ಒಬ್ಬರಿಗೊಬ್ಬರು ಗುಡ್ಮಾರ್ನಿಂಗ್, ಗುಡ್ನೈಟ್ ಹೇಳಿಕೊಂಡು ಓಡಾಡುತ್ತಿದ್ದರು.
ಸ್ವರ್ಗ ಕಾಂಪ್ಲೆಕ್ಸ್ನಲ್ಲಿ ಸಮಾರಂಭಗಳಿಗೂ ಏನೂ ಕೊರತೆ ಇರಲಿಲ್ಲ. ವಾರಕ್ಕೊಂದೋ ಎರಡೋ ಬರುತ್ತಲೇ ಇದ್ದ ಹುಟ್ಟಿದ ಹಬ್ಬಗಳಿಗೆ ಮಕ್ಕಳೆಲ್ಲಾ ಹೋಗಿ ಮ್ಯಾಜಿಕ್ ಶೋ ನೋಡಿ, ಕ್ಯಾಂಡಲ್ ಊದಿ, ಕೇಕ್ ಸಮೋಸಾ ತಿಂದು, ಹ್ಯಾಪಿ ಬರ್ತ್ಡೇ ಹಾಡಿ ಬರುತ್ತಿದ್ದರು. ಇನ್ನು ಆಗಾಗ ಆಗುತ್ತಿದ್ದ ಡಿನ್ನರ್ಗಳಲ್ಲಿ ಕಾಂಪ್ಲೆಕ್ಸ್ನವರೆಲ್ಲಾ ಸೇರುತ್ತಿದ್ದರು. `ರೋಟಿ ಸಾಗರ’ದಿಂದ ಬರುತ್ತಿದ್ದ ಪಂಜಾಬಿ ಊಟ ಹೊಡೆದು, ಬಿಯರ್ ಕುಡಿದು, ಅಂತ್ಯಾಕ್ಷರಿ ಆಡಿ, ಸರ್ದಾರ್ಜೀ ಜೋಕುಗಳನ್ನು ಹೇಳಿ, ತಮ್ಮ ಇತ್ತೀಚಿನ ಸಿಂಗಪುರ – ಬ್ಯಾಂಕಾಕ್, ಮಲೇಶಿಯಾ ಟ್ರಿಪ್ಪುಗಳ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದರು. ಅವರ ನಡುವೆ ಬ್ಯಾನರ್ಜಿ “ಎಲ್ಲವೂ ಮಾಡಿದ್ದೇ ಮಾಡಿ ಬೇಸರವಾಯ್ತು. ಅದಕ್ಕೇ ಈ ಸಲ ಆಫ್ರಿಕಾಗೆ ಹೋಗಿ ಬರಬೇಕೆಂದು ಇದ್ದೇನೆ” ಎಂದು ಘೋಷಿಸಿದಾಗ, ಆಫ್ರಿಕಾ, ಸಿಂಗಾಪುರ, ಬ್ಯಾಂಕಾಕ್ಗಿಂತ ಹೆಚ್ಚಿನದೋ ಕಡಿಮೆಯೋ ತಿಳಿಯದೆ, ಹೇಗೆ ಪ್ರತಿಕ್ರಿಯಿಸಬೇಕೆಂದು ಅರ್ಥವಾಗದೆ, “ನೀನು ಬಿಡು, ಯೂ ಆರ್ ಡಿಫರೆಂಟ್” ಎಂದು ತೇಲಿಸಿ ಬಿಡುತ್ತಿದ್ದರು.
ಹೀಗೆ ಸರಾಗವಾಗಿ ನಡೆಯುತ್ತಿದ್ದ ಆ ಕಾಂಪ್ಲೆಕ್ಸ್ನ ದಿನಚರಿಯನ್ನು ಆ ಭಾನುವಾರ ನಡೆದ ಘಟನೆ ಅಲ್ಲೋಲಕಲ್ಲೋಲಗೊಳಿಸಿತು. ಅಂದು ಬೆಳಗ್ಗೆ ಎಲ್ಲರೂ ಗಡದ್ದಾಗಿ ತಿಂಡಿ ತಿಂದು, ಪೇಪರ್ ಹಿಡಿದು ಆರಾಮವಾಗಿ ಕೂತಿದ್ದಾಗ ಸಣ್ಣ ತ್ರಿಚಕ್ರ ವಾಹನವೊಂದು ಕಾಂಪ್ಲೆಕ್ಸ್ನ ಮುಂದೆ ಬಂದು ನಿಂತಿತು. ಅದನ್ನು ಬಾಲ್ಕನಿಯಿಂದ ಗಮನಿಸಿದ ಕೆಲವು ಗೃಹಿಣಿಯರು ಯಾರದೋ ಮನೆಗೆ ಹೊಸ ಫ್ರಾಸ್ಟ್ಫ್ರೀ ಫ್ರಿಜ್ ಬಂದಿರಬೇಕೆಂದುಕೊಂಡು ಒಳಗೆ ಹೋದರು. ಆದರೆ ಸ್ವಲ್ಪ ಹೊತ್ತಿನ ನಂತರ ಏರುದನಿಯಲ್ಲಿ ನಡೆಯುತ್ತಿದ್ದ ವಾಗ್ವಾದ ಕೇಳಿ ಕೆಲವರು ಮತ್ತೆ ತಮ್ಮ ಬಾಲ್ಕನಿಗಳಿಗೆ ಮರಳಿ ಬಂದರು. ಆ ಬಿಲ್ಡಿಂಗ್ ರೆಸಿಡೆಂಟ್ಸ್ ಸೊಸೈಟಿಯ ಸೆಕ್ರೆಟರಿ ರಾಧಾಕೃಷ್ಣನ್ ಕೈಯಲ್ಲಿ `ಡೆಕ್ಕನ್ ಹೆರಾಲ್ಡ್’ ಹಿಡಿದೇ ಕೆಳಗಿಳಿದು ಬಂದರು. ಅಲ್ಲಿ ವಿಚಿತ್ರ ವೇಷದ ವ್ಯಕ್ತಿಯೊಬ್ಬ ಕೈಯಲ್ಲಿರುವ ಕಾಗದಪತ್ರಗಳನ್ನು ಸೆಕ್ಯೂರಿಟಿ ಗಾರ್ಡುಗಳ ಮುಂದೆ ಹಿಡಿದು ವಾದಿಸುತ್ತಿದ್ದ. ರಾಧಾಕೃಷ್ಣನ್ ಹತ್ತಿರದಿಂದ ಆ ವ್ಯಕ್ತಿಯನ್ನು ಕೂಲಂಕುಷವಾಗಿ ಪರೀಕ್ಷಿಸಿದವರೇ ಸ್ವಲ್ಪ ಕಸಿವಿಸಿಗೊಂಡರು. ಚೌಕಳಿ ಚೌಕಳಿಯ ತುಂಡುಪಂಚೆ, ತೆಳುವಾದ ಅರ್ಧತೋಳಿನ ಜುಬ್ಬಾ, ದಟ್ಟಮೀಸೆ, ಹಣೆಯಲ್ಲಿ ವಿಭೂತಿ, ಕುಂಕುಮ, ಕತ್ತಿನಲ್ಲಿ ಬಣ್ಣ ಬಣ್ಣದ ಮಣಿಗಳು, ರುದ್ರಾಕ್ಷಿಹಾರದ ಜೊತೆಗೆ ಕರಿದಾರದಿಂದ ನೇತಾಡುತ್ತಿರುವ ತಾಯಿತ, ಹೆಗಲಿನಿಂದ ಜೋತುಬಿದ್ದ ಒಂದು ಗುಂಡು ಬುಟ್ಟಿ. ಆ ಬುಟ್ಟಿ ಮುಚ್ಚಿಯೇ ಇದ್ದರೂ ನೋಡಿದ ತಕ್ಷಣ ಯಾರಿಗಾದರೂ ತಿಳಿಯಲೇ ಬೇಕು ಅದರಲ್ಲೇನಿದೆಯೆಂದು.
ರಾಧಾಕೃಷ್ಣನ್ ಗಾರ್ಡ್ ಕಡೆ ತಿರುಗಿ `ಏನಯ್ಯಾ ಇವನ ಜೊತೆ ಏನು ವಾದ, ಇಂಥ ಹಾವಾಡಿಗರು, ದೊಂಬರಾಟದವರನ್ನೆಲ್ಲಾ ಸುಮ್ಮಸುಮ್ಮನೆ ಕಾಂಪ್ಲೆಕ್ಸ್ ಒಳಗಡೆ ಬಿಡಬಾರದೆಂದು ಎಷ್ಟು ಸಲ ಹೇಳಿಲ್ಲ?’ ಎಂದು ರೇಗಿದರು.
ಗಾರ್ಡ್ `ಇಲ್ಲ ಸಾರ್… ಇವರು…’ ಎಂದು ತೊದಲಿದಾಗ ಹಿಂದಿನಿಂದ ಪ್ರತ್ಯಕ್ಷನಾದ ಎಡ್ಮಿನಿಸ್ಟ್ರೇಟಿವ್ ಮ್ಯಾನೇಜರ್ ಶಶಿಧರ `ಇಲ್ಲ ಇವರು… `ಎ’ ಬ್ಲಾಕಿನಲ್ಲಿ… ಬಾಡಿಗೆಗೆ ಬಂದಿದ್ದಾರೆ…’ ಎಂದು ವಿವರಿಸಿದ.
`ಆಂ?’ ಮುವತ್ತು ವರ್ಷ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಬದುಕು ಸವೆಸಿದ್ದ ರಾಧಾಕೃಷ್ಣನ್ಗೆ ಹರ್ಷದ್ ಮೆಹತಾ ನಾಟಕಗಳು ಕೂಡ ಇಂತಹ ಶಾಕ್ ಕೊಟ್ಟಿರಲಿಲ್ಲ.
ಶಶಿಧರ ತನ್ನ ಕೈಯಲ್ಲಿದ್ದ ಅಗ್ರಿಮೆಂಟ್ ಕಾಪಿ ರಾಧಾಕೃಷ್ಣನ್ ಮುಂದೆ ಹಿಡಿಯುತ್ತಾ “ಎಲ್ಲಾ ಪೇಪರ್ಸ್ ಆರ್ಡರ್ನಲ್ಲಿದೆ ಸರ್. ಓನರ್ ನಮಗೆ ಬರೆದಿರೋ ಕಾಗದಾನೂ ಜೊತೆಗೆ ತಂದಿದ್ದಾರೆ” ಎಂದಾಗ ರಾಧಾಕೃಷ್ಣನ್ ಹಾಗೇ ಶಶಿಧರನನ್ನು ಪಕ್ಕಕ್ಕೆ ಕರೆದರು. ಶಶಿಧರ `ನಾನು ಒಳಗೆ ಹೋಗಿ ಚೆಕ್ ಮಾಡಿದೆ ಸರ್, ಚೆಕ್ ಟ್ಯಾಲಿ ಆಗುತ್ತೆ’ ಎಂದಾಗ ಓನರ್ಗೆ `ಫೋನ್ ಮಾಡಿ ಕೇಳ್ರೀ’ ಎಂದು ಅಸಹನೆಯಿಂದ ಗುಡುಗಿದರು. `ಟ್ರೈ ಮಾಡ್ದೆ ಸಾರ್, ಅವರು ಅಮೆರಿಕಾಗೆ ಮಗನ ಮನೆಗೆ ಹೋಗಿಬಿಟ್ಟಿದ್ದಾರೆ’ ಎಂದಾಗ ಇವರಿಗೆಲ್ಲಾ ಬೇರೆ ದಾರಿಯೇ ಇಲ್ಲದಂತಾಯಿತು.
ಇದೆಲ್ಲಾ ಸುದ್ದಿ ಬಿಲ್ಡಿಂಗ್ನಲ್ಲಿ ಹರಡಿ ಎಲ್ಲರೂ ಭಾನುವಾರ ಬೆಳಗ್ಗೆಯ ತಮ್ಮ ಕೆಲಸಗಳನ್ನು ಒತ್ತಟ್ಟಿಗಿಟ್ಟು ಬಾಲ್ಕನಿಗೆ ಬಂದು ನಿಂತರು. ಮಕ್ಕಳೆಲ್ಲಾ ಕೆಳಗಡೆ ಸೇರಿ ಆ ಹಾವಾಡಿಗನ ಸುತ್ತ ಗುಂಪುಕಟ್ಟಿದರು. ಅವನು ಮಾತ್ರ ಇದ್ಯಾವುದರಿಂದಲೂ ವಿಚಲಿತನಾಗದೆ ತನ್ನ ಪಾಡಿಗೆ ತಾನು ತ್ರಿಚಕ್ರ ವಾಹನದಿಂದ ಸಾಮಾನುಗಳನ್ನು ಕೆಳಗಿಳಿಸತೊಡಗಿದ. ಅವನು ತಂದಿದ್ದೋ ಒಂದು ಚಾಪೆ ಸುತ್ತಿದ ಹಾಸಿಗೆ, ಒಂದಷ್ಟು ಪಾತ್ರೆ ಪಡಗ ಎರಡು ಮಡಕೆ, ಒಂದು ಸೀಮೆಣ್ಣೆ ಸ್ಟೊವ್, ನಾಲ್ಕೈದು ದೇವರ ಪಟಗಳು, ಬೆಡ್ಶೀಟಿನಲ್ಲಿ ಸುತ್ತಿದ್ದ ಬಟ್ಟೆಗಳ ಗಂಟು, ಕೋಲು, ಒಂದು ಗೋಣಿಚೀಲದ ತುಂಬಾ ಏನೇನೋ ಸಾಮಾನುಗಳು… ಕೊನೆಗೆ ತುಂಬಾ ಹುಷಾರಾಗಿ ಇಳಿಸಿಕೊಂಡು ಹೆಗಲ ಮೇಲೆ ಹಾಕಿಕೊಂಡಿದ್ದು ಒಂದರೊಳಗೊಂದು ಸೇರಿಸಿ ದಾರ ಕಟ್ಟಿದ್ದ ಎರಡು ಪುಂಗಿಗಳನ್ನು, ಇದನ್ನು ಕಂಡ ತಕ್ಷಣ ಎಲ್ಲರಿಗೂ ಮೈ ಜುಂ ಎಂದಿತು.
ಅವನ್ನೆಲ್ಲಾ ಒಂದೊಂದಾಗಿ ತಾನೇ ಎತ್ತಿಕೊಂಡು ಹೋಗಿ `ಎ’ ಬ್ಲಾಕಿನ ಮೂರನೇ ಮಹಡಿಯಲ್ಲಿದ್ದ ತನ್ನ ಮನೆಯೊಳಗೆ ಇಡತೊಡಗಿದ. ಮಾಮೂಲಿನಂತೆ ಸಾಮಾನೆತ್ತಿ ಇಡಲೋ ಬೇಡವೋ ಎಂದು ಅನುಮಾನಿಸುತ್ತಿದ್ದ ಸೆಕ್ಯೂರಿಟಿ ಗಾರ್ಡಿಗೆ ರಾಧಾಕೃಷ್ಣನ್ ಬೇಡವೆಂದು ಕಣ್ಣಲ್ಲೇ ಎಚ್ಚರಿಸಿದರು. ಈ ಮಧ್ಯೆ ತುಂಟ ಡಿಂಪಿ ಹಾವಾಡಿಗನ ಹತ್ತಿರ ಬಂದು ಆ ಬುಟ್ಟಿ ತೋರಿಸುತ್ತಾ “ಅಂಕಲ್, ಇದರಲ್ಲಿ ಹಾವಿದೆಯಾ?” ಎಂದು ಕೇಳಿ ಅಮ್ಮನ ಕೈಯಲ್ಲಿ ಏಟು ತಿಂದ. ಹೊಸದಾಗಿ ವಾಸಿಸಲು ಬಂದವರು ಹೆಸರು, ವೃತ್ತಿ ಇತ್ಯಾದಿ ದಾಖಲಿಸುವ ರಿಜಿಸ್ಟರಿನಲ್ಲಿ ಶಂಭು, ಹಾವಾಡಿಗ – ಎ – 30 ಎಂದು ತುಂಬಿಸಿ ಸಹಿಗಾಗಿ ರಾಧಾಕೃಷ್ಣನ್ ಹತ್ತಿರ ಬಂದಾಗ ಶಶಿಧರನ ಮೇಲೆ ಅವರು ಕೆಂಡವಾದರು. “ಏನಯ್ಯಾ ಇದು, ಅಷ್ಟು ಬುದ್ಧಿ ಬೇಡವೇ? ಪ್ರೊಫೆಶನ್ ಅನ್ನೋ ಕಡೆ ಬಿಸಿನೆಸ್ ಅಂತ ಬರಿ…” ಎಂದು ಗದರಿದರು. ಕಾಲುಗಂಟೆಯಲ್ಲಿ ಅಷ್ಟೂ ಸಾಮಾನು ಒಳಗೆ ಸಾಗಿಸಿದ ಶಂಭು ಮನೆ ಬಾಗಿಲು ಹಾಕಿ, ಬಾಲ್ಕನಿ ಬಾಗಿಲು ತೆಗೆದುಬಿಟ್ಟ. ಆ ಕ್ಷಣದಿಂದ `ಸ್ವರ್ಗ ಅಪಾರ್ಟ್ಮೆಂಟ್ಸ್’ನ ನಿವಾಸಿಗಳ ಬದುಕಿನಲ್ಲಿ ವಿಚಿತ್ರ ಅಶಾಂತಿ ಪ್ರಾರಂಭವಾಯಿತು.
ತಂದೆ ತಾಯಿ ತಮ್ಮ ಮಕ್ಕಳಿಗೆ ವಿಶೇಷ ಎಚ್ಚರ ಕೊಟ್ಟರು. ಶಂಭು ಜೊತೆಗೆ ಮಾತನಾಡಬಾರದೆಂದೂ, ಅವನು ಕರೆದರೂ ಅವನ ಮನೆಗೆ ಹೋಗಬಾರದೆಂದೂ, ಪೆಪ್ಪರಮಿಂಟ್, ಚಾಕಲೇಟ್ ಕೊಟ್ಟರೆ ಮುಟ್ಟಬಾರದೆಂದೂ ಹೇಳಿದರು. ಎ-32ಲ್ಲಿದ್ದ ಸೀತಾಚಂದ್ರನ್ `ನಮ್ಮ ಪಾಡಿಗೆ ನಾವಿದ್ದೆವಲ್ಲಾ… ಇದೆಲ್ಲಿ ಬಂತು ಗ್ರಹಚಾರ… ಸಕ್ಕರೆ, ಕಾಫಿಪುಡಿ, ಸಾಲ ಕೇಳಲೂ ಅಕ್ಕಪಕ್ಕದವರಿಲ್ಲದಂತಾಯಿತಲ್ಲಾ…” ಎಂದು ಕಣ್ಣೀರೇ ಇಟ್ಟರು. ಮನೆಕೆಲಸದವರು ಶಂಭು ಬಗ್ಗೆ ಏನು ತಿಳಿದುಕೊಳ್ಳಬೇಕು ಎಂಬುದರ ಬಗ್ಗೆ ಅವರದೇ ಮೀಟಿಂಗ್ ನಡೆದುಹೋಯಿತು.
‘ಇಂಥೋರ ಸಂಗ ಬೇಡಪ್ಪಾ, ಇವರೆಲ್ಲಾ ಮಂತ್ರ, ಮಾಟ ಬೇರೆ ಮಾಡ್ತಾರೆ’
`ಅವನ ಕಣ್ಣು ನೋಡಿದ್ಯಾ ಹೆಂಗಿದೆ…?’
`ಕೆಲಸ ಮಾಡೊಲ್ಲ ಅಂದ್ರೆ ಕೋಪದಿಂದ ಏನಾದ್ರೂ ಮಾಡಿದ್ರೆ…?’
`ಏಯ್… ಏನು ಮಾಡ್ತಾನೆ… ಹಾವೇನಾದರೂ ಛೂ ಬಿಡ್ತಾನಾ…?’
ಎಲ್ಲರೂ ಗೊಳ್ಳನೆ ನಕ್ಕರು.
ಒಂದೇ ಒಂದು ಮನೆ ಮಾಡುತ್ತಿದ್ದ ಮುದುಕಿ ನಂಜಮ್ಮ ಮಾತ್ರ `ಏಯ್, ನಂಗೇನೂ ಭಯ ಇಲ್ಲ, ನಾನು ಮಾಡ್ತೀನಿ. ನನ್ನ ರೆಟ್ಟೆ ಮೇಲೆ ಗರುಡಮಚ್ಚೆ ಇದೆ,’ ಎಂದಳು. ಇದನ್ನು ಕೇಳಿದ ಬೇರೆಯವರು ಅವಳತ್ತ ಅಸೂಯೆಯಿಂದ ನೋಡಿದರು.
ಇಡೀ ಕಾಂಪ್ಲೆಕ್ಸ್ಗೇ ಹಾಲು ಸರಬರಾಜು ಮಾಡಲು ಒಬ್ಬನಿಗೆ ಮಾತ್ರ ಪರ್ಮಿಶನ್ ಕೊಡಲಾಗಿತ್ತು. ಅವನು ಯಾರು ಹೊಸದಾಗಿ ಬಂದರೂ ಹೋಗಿ ವಿಚಾರಿಸುವಂತೆ, ಹಿಂಜರಿಯುತ್ತಲೇ ಶಂಭುವಿನ ಮನೆ ಬೆಲ್ ಮಾಡಿದ. ಆಗ ಅವನು, “ನಾನು ಪಾಕೆಟಿನ ಹಾಲು ತೊಗೊಳ್ಳೋಲ್ಲ. ಆಗ ಕರೆದ ಹಾಲೇ ಆಗಬೇಕು ನಮ್ಮ ನಾಗಪ್ಪಂಗೆ” ಎಂದು ಬಾಗಿಲು ಹಾಕಿಬಿಟ್ಟ. ಅಂದಿನಿಂದ ಯಾವುದೋ ಕೊಟ್ಟಿಗೆಯಲ್ಲಿ ಕರೆದ ಹಾಲು ಕ್ಯಾನೊಂದರಲ್ಲಿ ಅವನ ಮನೆಗೆ ಮಾತ್ರ ಬರತೊಡಗಿತು.
ಹಾಗಾಗಿ ಕಾರ್ಪಾರ್ಕಿನ ಒಂದು ಮೂಲೆಯಲ್ಲಿ ತಮ್ಮ ಡ್ರೈವರ್ ಮಲಗಲು ಪರ್ಮಿಶನ್ ಕೇಳಿ ಕಮಿಟಿಯವರಿಂದ ಇಲ್ಲ ಅನ್ನಿಸಿಕೊಂಡಿದ್ದ ವಿಮಲಾ ರಾಜೆ “ಪಾಪ ನಮ್ಮ ಶರದ್ ಇಲ್ಲಿ ಮಲಗಿದ್ರೆ ಏನಾಗ್ತಿತ್ತು. ಹೊರಗಿನೋನು ಬೇಡ ಅಂದ್ರು. ಈಗ ಈ ಹೊರಗಿನ ಹಾಲಿನವನನ್ನು ಬಿಡ್ತಿದಾರಲ್ಲಾ ಪರವಾಗಿಲ್ವಾ” ಎಂದು ಹಂಗಿಸಿದಳು. ಆದರೆ ಅವನನ್ನು ತಡೆಯಲು ಯಾರಿಗೂ ಧೈರ್ಯವಿರಲಿಲ್ಲ.
ಹೀಗಾಗಿ ಆ ಕಾಂಪ್ಲೆಕ್ಸ್ಗೇ ಒಂದು ರೀತಿ ಗರ ಬಡಿದಂತಾಗಿ, ಎಲ್ಲರ ಮನಸ್ಸೂ ಶಂಭುವಿನ, ಅವನ ಚಟುವಟಿಕೆಗಳ ಸುತ್ತ ಇಪ್ಪತ್ನಾಲ್ಕು ಗಂಟೆಗಳೂ ಸುತ್ತತೊಡಗಿದವು. ಅವನೊಡನೆ ಲಿಫ್ಟಿನಲ್ಲಿ ಕೂಡ ಓಡಾಡಲು ಹೆದರುತ್ತಿದ್ದ ಜನ ಕತೆಗಳನ್ನು ಮಾತ್ರ ಹುಟ್ಟಿಸಿದರು.
“ಸಂಜೆ ಹೊತ್ತು ಅವನ ಮನೆ ಬಾಗಿಲ ಹತ್ತಿರ ಹೋದರೆ ಹೇಗೆ ಕೇದಗೆ ಹೂ ವಾಸನೆ ಬರುತ್ತೆ ಗೊತ್ತಾ…?”
“ಮೊನ್ನೆ ನಮ್ಮ ಚಿಂಚು, ಪುಟ್ಟೂನ ಮನೆ ಒಳಗೆ ಕರೆದನಂತೆ, ಚಾಕೋಲೇಟ್ ಕೊಡ್ತೀನಿ ಅಂದನಂತೆ. ಇವರೆಲ್ಲಾ ಸದ್ಯ ಮನೆಗೆ ಓಡಿ ಬಂದರು…”
“ಅವತ್ತು ಅವನು ತೆಗೆದು ಹಾಕಿದ ನಿರ್ಮಾಲ್ಯದ ಹೂ ಗುಡಿಸಿ ಹಾಕಿದಳಲ್ಲಾ ಲಕ್ಕವ್ವ, ಎಷ್ಟು ಜ್ವರ ಬಂದು ಮಲಗಿಬಿಟ್ಟಿದಾಳೇಂತ…”
`ಅವನಿಗ್ಹೇಳಬೇಕು ಆ ತುಂಡುಪಂಚೇಲಿ ಹಾಗೆ ಸುತ್ತಾಡಬೇಡ ಅಂತ… ಇಲ್ಲೆಲ್ಲಾ ಫ್ಯಾಮಿಲಿ ಪೀಪಲ್ ಇದಾರೆ ಅಂತ”
“ಸದ್ಯ ಹೇಳೋರು ಯಾರ್ರಿ…?”
“ಹೇಗಿದ್ದ ಬಿಲ್ಡಿಂಗ್ ಹೇಗಾಗಿ ಹೋಯಿತು…?”
“ದಿನಾ ರಾತ್ರಿ ಹನ್ನೆರಡು ಗಂಟೆಗೆ ಪುಂಗಿನಾದ ಕೇಳಿಸುತ್ತೆ ಗೊತ್ತಾ… ನಾನು ಮೊದಲು ಯಾರೋ ನಾಗಿನ್ ಕ್ಯಾಸೆಟ್ ಹಾಕಿದಾರೆ ಅಂತಿದ್ದೆ… ಆಮೇಲೆ ಗೊತ್ತಾಯ್ತು…”
ಶಂಭು ಮನೆಯ ಪಕ್ಕದ ಮನೆಯ ಸೀತಾ ಚಂದ್ರನ್ ಗೋಳಂತೂ ಅತಿರೇಕಕ್ಕೇ ಹೋಗಿತ್ತು. “ನಾನು ಈ ಮನೆ ಮಾರೇ ಬಿಡೋಣಾಂತ ಏಜೆಂಟ್ ಹತ್ತಿರ ಹೋದೆ. ನಮ್ಮ ಏಜೆಂಟ್ ಕೇಳ್ತಾನೆ” ಯಾರ್ರೀ ಬರ್ತಾರೇ ಆ ಮನೇಗೆ? ಆಗ್ಲೇ ಎಲ್ಲರಿಗೂ ಗೊತ್ತಾಗಿದೆ, ನಾಲ್ಕೈದು ಲಕ್ಷಕ್ಕೆ ಮಾರಿ. ಯಾರಾದರೂ ಆಫೀಸ್ ಗೀಫೀಸ್ ಹಾಕ್ಕೊಂಡು ಬರ್ತಾರೆ ಅಂದ, ಇಂಥ ಮನೆ ಅಷ್ಟು ಕಡಿಮೆಗೆ ಮಾರೋದುಂಟೆ…? ಈ ಗೋಳು ನನ್ನ ಜನ್ಮಕ್ಕೆ ಹತ್ತಿದ್ದೇ…”
ಎಲ್ಲರೂ ಇಷ್ಟೆಲ್ಲಾ ತುಮುಲಗಳಲ್ಲಿದ್ದರೂ ಏನೂ ಆಗದಂತೆ ಶಾಂತಿಯಿಂದ ಇರುತ್ತಿದ್ದುದು ಶಂಭು ಕೆಳಗಡೆ ಮನೆಯ ಶಾರದಮ್ಮ ಮಾತ್ರ. ಎಂಬತ್ತು ವರ್ಷದ ಆಕೆ ಗಂಡ ಹೋದ ಮೇಲೆ ಮಕ್ಕಳೂ ಇಲ್ಲದಿದ್ದರಿಂದ ಒಬ್ಬರೇ ಇರುತ್ತಿದ್ದರು. ಅವತ್ತು ಎಲ್ಲರೂ ಸೇರಿದಾಗ ಝಾಡಿಸಿದರು. `ಅವನೇನ್ರೀ ಮಾಡ್ತಾನೆ? ತನ್ನ ಪಾಡಿಗೆ ತಾನಿದ್ದಾನೆ. ಸರಿಯಾಗಿ ಬಾಡಿಗೆ ಕೊಡ್ತಾನೆ, ಬೆಳಗ್ಗೆ ಹೋಗಿ ಸಂಜೆ ಮನೆಗೆ ಬರ್ತಾನೆ. ನೀವೆಲ್ಲಾ ಏನು ಹೇಳೋದು… ಕೈಯಲ್ಲಿ ಫೋನ್ ಸಿಗಿಸಿಕೊಂಡು ಕಾರಲ್ಲಿ ಓಡಾಡೋರು ಮಾಡೋದೇ ಕೆಲಸವಾ? ಅವರೇ ಮರ್ಯಾದಸ್ಥರು… ನೋಡಿ ಅವತ್ತು ಮಾಲಿ ಬರದೆ ಎರಡು ದಿನ ಗಿಡಕ್ಕೆ ನೀರು ಹಾಕೋರಿಲ್ದೆ ಅಯ್ಯೋ ಹೂವಿನ ಗಿಡ ಸೊರಗಿ ಹೋಯ್ತೂಂತ ಎಲ್ಲರೂ ಸುಮ್ನೆ ಗೊಣಗಿದ್ರಿ. ಏನಾದ್ರೂ ಮಾಡಿದ್ರಾ? ಶಂಭು ಕೆಳಗೆ ಬಂದವ್ನೇ ಪೈಪ್ನ ಗಾರ್ಡ್ನ್ ನಲ್ಲೀಗೆ ಸಿಕ್ಕಿಸಿ ಅರ್ಧಗಂಟೇಲಿ ಅಚ್ಚುಕಟ್ಟಾಗಿ ನೀರು ಹಾಯಿಸಿ, ಏನೂ ಆಗದಂತೆ ಒಳಗೆ ನಡೆದು ಬಿಟ್ಟ… ಸುಮ್ನೆ ಯಾಕೆ ಹುಚ್ಚುಚ್ಚಾಗಿ ಮಾತಾಡ್ತೀರಿ…” ಎಂದರು.
ಶಾರದಮ್ಮನ ಎದುರಿಗೆ ಎಲ್ಲರೂ ಸುಮ್ಮನಿದ್ದರೂ ಹಿಂದೆ “ಅಯ್ಯೋ ಈ ಮುದುಕಿಗೆ ಅರುಳು ಮರುಳಾಗಿದೆ. ಈಗಿನ ಕಾಲದವರ ವಿಷಯ ಗೊತ್ತಿದ್ರೆ ತಾನೇ…? ಇಷ್ಟರಮೇಲೆ ಇದಕ್ಕೆ ಯಾರಿಗೇನಾದರೆ ಏನು?…’ ಎಂದೆಲ್ಲಾ ಮಾತಾಡಿದರು.
ಅಂದು ಸ್ವರ್ಗ ಕಾಂಪ್ಲೆಕ್ಸ್ಗೆ ಅಮರಿದ ಹೊಸ ಗಂಡಾಂತರದ ಬಗ್ಗೆ ಚರ್ಚಿಸಲು ವಿಶೇಷ ಕಮಿಟಿ ಮೀಟಿಂಗನ್ನೇ ಕರೆಯಲಾಯಿತು. ಹೇಗಾದರೂ ಶಂಭು ತಾನಾಗಿಯೇ ಮನೆ ಬಿಡುವಂತೆ ಕಿರುಕುಳ ಕೊಡಲು ಉಪಾಯಗಳನ್ನು ಹುಡುಕಲಾಯಿತು.
“ಇನ್ನೇನು ಮಾಡೋಕೆ ಸಾಧ್ಯ? ಕೇಬಲ್ ಕಟ್ ಮಾಡೋದು ತುಂಬಾ ಇಫೆಕ್ಟಿವ್ ಆಗೇನೋ ಇರುತ್ತೆ. ಆದರೆ, ಟೀವೀನೆ ಇಲ್ಲದೋನ ಹತ್ತಿರ ಇದೇನು ಪ್ರಯೋಜನ…?”
“ನೀರು…”
“ಹೌದು. ನೀರು ಕಟ್ ಮಾಡದಿದ್ದರೂ… ಫ್ಲೋ ತುಂಬಾ ಕಡಿಮೆ ಆಗುವಂತೆ ಮಾಡಬಹುದಲ್ಲಾ? ಆಗ ಅವನು ಕಂಪ್ಲೇನ್ ಮಾಡುವ ಹಾಗೂ ಇಲ್ಲ. ಮಾಡಿದರೆ, ಎಲ್ಲಾ ಮನೆಗಳಿಗೂ ಇದೇ ಪ್ರಾಬ್ಲಮ್ ರಿಪೇರಿ ಮಾಡಿಸುತ್ತಿದ್ದೇವೆಂದು ಹೇಳುತ್ತಾ ಹೋದರೆ ಆಯ್ತು…”
“ಬ್ರಿಲಿಯಂಟ್ ಐಡಿಯಾ, ಇಟ್ ಶುಡ್ ವರ್ಕ್”
ಮಾರನೆಯ ದಿನ ಕಾಂಪ್ಲೆಕ್ಸಿನ ವಾಸಿಗಳಿಗೆ ಒಂದು ಅಚ್ಚರಿಯೇ ಕಾದಿತ್ತು. ಎರಡೂ ಕೈಗಳಲ್ಲಿ ಒಂದೊಂದು ಪ್ಲಾಸ್ಟಿಕ್ ಕೊಡ ಹಿಡಿದ ಶಂಭು ಧಡಧಡನೆ ಮೂರು ಮಹಡಿ ಇಳಿದು ಕೆಳಗೆ ಗಾರ್ಡನ್ ನಲ್ಲಿಯಿಂದ ನೀರು ತುಂಬಿಸಿ ಹತ್ತಿಹೋದ. ಇದೇ ರೀತಿ ನಾಲ್ಕಾರು ಟ್ರಿಪ್ಪುಗಳನ್ನು ಮಾಡಿದ. ಅವನು ನೀರು ಕಡಿಮೆ ಬಂದಿದ್ದರ ಬಗ್ಗೆ ಚಕಾರವೆತ್ತಲಿಲ್ಲ.
ಇವನು ಹೀಗೆ ಕೊಡ ಹೊತ್ತು ನೀರು ತುಳುಕಿಸಿಕೊಳ್ಳುತ್ತಾ ಮಹಡಿ ಹತ್ತುತ್ತಿದ್ದಾಗ ಎರಡನೇ ಮಹಡಿಯಲ್ಲಿದ್ದ ಒಂದು ಅಪಾರ್ಟ್ಮೆಂಟನ್ನು ಖರೀದಿಸಲು ಬಂದಿದ್ದ ಶೂ ವ್ಯಾಪಾರಿಯೊಬ್ಬರು ಎದುರಾದರು. ಅವರು ಮನೆ ಮಾರಾಟಗಾರನಿಗೆ `ಏನಯ್ಯಾ ಇದು ನೀರು ಹೊತ್ಕೊಂಡು ಹೋಗೋ ಸ್ಥಿತಿ ಇರೋ ಈ ಬಿಲ್ಡಿಂಗ್ನಲ್ಲಿ ನಂಗೆ ಮನೆ ತೋರಿಸ್ತಿದ್ದೀಯಲ್ಲಾ… ಇನ್ನು ಇಲ್ಲಿ ಮನೆಯೂ ಬೇಡ, ನಿನ್ನ ಸಾವಾಸವೂ ಬೇಡ…” ಎಂದು ಕೋಪದಿಂದ ಹೊರಟುಹೋದರು.
“ನೋಡ್ರಿ ಈ ಪ್ರಾಪರ್ಟಿ ವ್ಯಾಲ್ಯೂನೇ ಬಿದ್ದು ಹೋಗುತ್ತಿದೆ ಒಂದು ವ್ಯಕ್ತಿಯಿಂದ. ಏನಾದ್ರೂ ತಕ್ಷಣ ಮಾಡದೆ ಇದ್ರೆ ಆಗೊಲ್ಲ. ಲಾಯರ್ ರಾಜಣ್ಣ ಅವರನ್ನೂ ಈ ಎಮರ್ಜನ್ಸಿ ಮೀಟಿಂಗಿಗೆ ಕರೆದುಕೊಂಡು ಬಂದೆ” ಎಂದು ರಾಧಾಕೃಷ್ಣನ್ ವಿವರಿಸಿದರು.
ಎಲ್ಲರ ಷಡ್ಯಂತ್ರಗಳನ್ನೂ ಮೊದಲೇ ಅರಿತವನಂತೆ ಮುಖ ಮಾಡಿಕೊಂಡ ಮೆನನ್ “ನೋಡ್ರಿ ಇದೆಲ್ಲಾ ಈ ಫ್ಲ್ಯಾಟ್ ಓನರ್ದೇ ಕಾರುಬಾರು. ಇಂಥಾವನನ್ನು ಇಲ್ಲಿ ತಂದಿಟ್ಟು ಅಮೆರಿಕಾಗೆ ಹೋಗಿ ಕೂತಿದ್ದಾನೆ. ಇಲ್ಲಿ ಆಗ್ಲೇ ನಮ್ಮ ಕಾಂಪ್ಲೆಕ್ಸ್ ಹೆಸರು ಕೆಟ್ಟು, ಕಟ್ಟಡದ ಬೆಲೆ ಬೀಳುತ್ತಿದೆ. ಆರು ತಿಂಗಳ ನಂತರ ವಾಪಸ್ಸು ಬಂದು, ಇಡೀ ಬಿಲ್ಡಿಂಗ್ನನ್ನು ಅರ್ಧ ಬೆಲೆಗೆ ಕೊಂಡು, ಈ ಹಾವಾಡಿಗನ್ನ ಹೊರಗೆ ಹಾಕ್ತಾನೆ ಅಷ್ಟೆ…” ಎಂದು ಹೇಳಿದಾಗ, ಎಲ್ಲರಿಗೂ ಈ ವಿಷಯ ತಮಗೆ ಹೊಳೆಯಲೇ ಇಲ್ಲವಲ್ಲಾ ಎಂದು ಬೇಸರವಾಯಿತು.
ಎಲ್ಲರ ದೂರನ್ನೂ ಕೇಳಿದ ಲಾಯರ್ ರಾಜಣ್ಣ, “ನೋಡಿ, ಈ ವ್ಯಕ್ತಿಯ ಹತ್ತಿರ ರೇಶನ್ ಕಾರ್ಡಿದೆ. ಎಲ್ಲಾ ಡಾಕ್ಯುಮೆಂಟ್ಸ್ ಇದೆ ಅಂತೀರಿ. ಸರಿಯಾಗಿ ಬಾಡಿಗೆ ಕೊಡ್ತಾನೆ. ತನ್ನ ಪಾಡಿಗೆ ತಾನು ಇದ್ದಾನೆ. ಅವನನ್ನು ಕೇವಲ ವಿಚಿತ್ರ ವೃತ್ತಿಯವನೂಂತ ಇಲ್ಲಿಂದ ಓಡಿಸೋಕೆ ಆಗೋಲ್ಲ” ಅಂದುಬಿಟ್ಟರು.
`ಏನಾದರೂ ಕಾರಣ ಹುಡುಕಿ’ ಎಂದು ಎಲ್ಲರೂ ಪ್ರಾಣ ತೆಗೆದಾಗ `ಅವನೇನಾದರೂ ನಿಗೂಢವಾದ ಚಟುವಟಿಕೆಗಳಲ್ಲಿ ಇನ್ವಾಲ್ವ್ ಆಗಿದ್ರೆ… ರೌಡಿ ಅಂತಲೋ, ಆತಂಕವಾದಿಯಂತಲೋ ಅನುಮಾನ ಬರೋ ಹಾಗಿದ್ರೆ…’
ಎಲ್ಲರ ಕಿವಿ ನೆಟ್ಟಗಾಯಿತು. “ಹೌದು, ಐ ವಿಲ್ ವರ್ಕ್ ಆನ್ ದಿಸ್” ಎಂದು ರಾಧಾಕೃಷ್ಣ ಟೇಬಲ್ ಗುದ್ದಿದರು.
`ಕೇಸು ಸರಿಯಾಗಿ ತಯಾರು ಮಾಡಿ, ಸೀದಾ ಪೊಲೀಸ್ ಕಮಿಷನರ್ ಹತ್ತಿರವೇ ಹೋಗೋಣ’ ಎಂದಾಗ ಎಲ್ಲರ ಮುಖದ ಮೇಲೂ ಸಮಾಧಾನದ ನಗೆ ಮೂಡಿತು.
`ಸ್ವರ್ಗ ಅಪಾರ್ಟ್ಮೆಂಟ್’ನ ನಾಲ್ಕು ಜನ ಕಮಿಟಿ ಮೆಂಬರುಗಳು ಪೊಲೀಸ್ ಕಮಿಷನರ್ರೊಡನೆ ಅಪಾಯಿಂಟ್ಮೆಂಟ್ ತೆಗೆದುಕೊಂಡ ದಿನ ಮುಂಜಾನೆಯೇ ಒಂದು ವಿಚಿತ್ರ ನಡೆದುಹೋಯಿತು. ಬೆಳಗಾಗೆದ್ದು ಶಂಭುವಿನ ಎದುರು ಮನೆಯವರು ಪೇಪರ್, ಹಾಲು ಒಳಗಿಟ್ಟುಕೊಳ್ಳಲು ಬಾಗಿಲು ತೆಗೆದಾಗ, ಯಾವಾಗಲೂ ಮುಚ್ಚಿರುತ್ತಿದ್ದ ಅವನ ಮನೆ ಬಾಗಿಲು ಹಾರು ಹೊಡೆದಿದ್ದು ಕಂಡು ಅವರಿಗೆ ಆಶ್ಚರ್ಯವಾಯಿತು. ಏನೋ ಎಂದುಕೊಂಡು ಬಾಗಿಲು ಹಾಕಿಕೊಂಡರು. ಎಂಟುಗಂಟೆಗೆ ಕೆಲಸದವಳು ಬಂದಾಗಲೂ ಬಾಗಿಲು ತೆರೆದ ಕೂಡಲೇ ಅದೇ ದೃಶ್ಯ. ಜೊತೆಗೆ ಅವನ ಮನೆ ಬಾಗಿಲು ತೆಗೆದಾಗ ಹಾಲಿನಲ್ಲಿ ಕಣ್ಣಿಗೆ ಬೀಳುತ್ತಿದ್ದ ನೀರಿನ ಹೂಜಿ, ಹಾಸಿದ ಚಾಪೆ, ಮುಂದೆ ದೇವರಪಟ ಎಲ್ಲಾ ನಾಪತ್ತೆ. ಕೆಲಸದವಳನ್ನು ಮುಂದೆ ಮಾಡಿಕೊಂಡು ಒಂದೆರಡು ಹೆಜ್ಜೆ ಒಳಗೆ ಹೋದಾಗ ಮನೆ ಖಾಲಿಯಾಗಿರುವುದು ಅರಿವಾಯಿತು. ತಕ್ಷಣ ಇವರು ಇಂಟರ್ಕಾಮ್ನಲ್ಲಿ ಸೆಕ್ಯೂರಿಟಿಯವನಿಗೂ, ರಾಧಾಕೃಷ್ಣನ್ಗೂ ಹೇಳಿದರು. ಎಲ್ಲಾ ತಕ್ಷಣ ಓಡಿ ಬಂದರು. ಹೆಜ್ಜೆ ಮೇಲೆ ಹೆಜ್ಜೆ ಇಡುತ್ತಾ ಮನೆ ಪೂರ್ತಿ ಸುತ್ತು ಹಾಕಿದರು. ಬಿಕೋ ಅನ್ನುತ್ತಿದ್ದ ಮನೆಯಲ್ಲಿ ಉಳಿದಿದ್ದು ಎಂದರೆ ವಿಚಿತ್ರ ಊದುಕಡ್ಡಿ ವಾಸನೆ. ಜೊತೆಗೆ ರೂಮಿನ ಮೂಲೆಯಲ್ಲಿ ಮುಚ್ಚಿ ಹಾಗೇ ಇಟ್ಟಿದ್ದ ಹಾವಿನ ಬುಟ್ಟಿ. ಅದು ಕಂಡಕೂಡಲೇ ಎಲ್ಲರೂ ಹೌಹಾರಿದರು. ಆದರೆ, ಯಾರಿಗೂ ಅದನ್ನು ತೆಗೆದು ನೋಡುವ ಧೈರ್ಯ ಬರಲಿಲ್ಲ. ರಾಧಾಕೃಷ್ಣನ್ ಕೂಡ ಅದನ್ನು ದಿಟ್ಟಿಸುತ್ತಲೇ ಅದೇನಾದರೂ ಅಲ್ಲಾಡುತ್ತಿದೆಯೇ ಎಂದು ಪರಿಶೀಲಿಸಿದರು. ನಿಧಾನವಾಗಿ ಸದ್ದಿಲ್ಲದೆ ಮನೆ ಹೊರಗೆ ಬರಲು ಎಲ್ಲರಿಗೂ ಸನ್ನೆ ಮಾಡಿದರು. ಜೋರಾಗಿ ಬಾಗಿಲೆಳೆದುಕೊಂಡು, ತಮ್ಮ ಮನೆಯಿಂದಲೇ ಒಂದು ಬೀಗ ತಂದು ಹಾಕಿ, ಎಳೆದೆಳೆದು ನೋಡಿ ಬಿದ್ದಿದೆಯೇ ಎಂದು ಖಾತ್ರಿ ಮಾಡಿಕೊಂಡು, ಬೀಗದ ಕೈ ಸೆಕ್ಯೂರಿಟಿ ಗಾರ್ಡಿಗೆ ಕೊಟ್ಟರು.
“ಈಗ್ಲೇ ಹೋಗಿ ಯಾರಾದರೂ ಹಾವು ಹಿಡಿಯೋನ್ನ ಕರ್ಕೊಂಡು ಬಾ… ಇದೆಲ್ಲಾ ನಮಗ್ಯಾರಿಗೂ ಆಗದ ಕೆಲಸ” ಅಂದರು.
ಯಾವ ಲೇಖಕರಿಗೇ ಆಗಲಿ ನೀವು ಬರೆದಿರುವ ಕತೆಗಳಲ್ಲಿ ನಿಮಗೆ ತುಂಬಾ ಇಷ್ಟವಾದದ್ದು ಯಾವುದು ಎಂದು ಕೇಳಿದರೆ ಉತ್ತರ ಕೊಡುವುದು ತುಂಬಾ ಕಷ್ಟ. ಪ್ರತಿಯೊಂದು ಕತೆ
ಯೂ ಸೃಷ್ಟಿಯಾದಾಗ ಕತೆಗಾರರಿಗೆ ಒಂದಲ್ಲ ಒಂದು ರೀತಿ ಇಷ್ಟವಾಗಿಯೇ ಇರುತ್ತದೆ.
ನಾನು ಹಿಂದಿನಿಂದ ಬರೆದ ಹಲವಾರು ಕತೆಗಳನ್ನು ನೆನೆಸಿಕೊಂಡರೆ ಅದ್ಯಾಕೊ‘ಹಾವಾಡಿಗ’ತುಂಬಾ ಮುದಕೊಡುತ್ತಾನೆ.
ಮುಖ್ಯಕಾರಣ ಆ ಕತೆ ಬರೆಯುವಾಗ ಮತ್ತೆ ಓದಿದಾಗ ತರುವ ಖುಶಿ ಇರಬಹುದು. ಅದರ ಜೀವಂತಿಕೆಯಿರಬಹುದು. ನನ್ನ ಹಲವಾರು ಓದುಗರಿಗೂ ‘ಹಾವಾಡಿಗ’ನ ಬಗ್ಗೆ ಹಾಗೆ ಅನ್ನಿಸಿದ್ದು ಇರಬಹುದು.
‘ಹಾವಾಡಿಗ’ ಅವತರಿಸಿದ್ದು ಹೀಗೆ. ಎಂದೋ ಒಂದು ದಿನ ಬೆಂಗಳೂರಿನ ಮಾರ್ಕೆಟ್ಟೊಂದರ ಜನಸಂದಣಿಯಲ್ಲಿ ಅಪರೂಪಕ್ಕೆ ಪಕ್ಕಾ ಹಾವಾಡಿಗನೊಬ್ಬ ಕಣ್ಣಿಗೆ ಬಿದ್ದು ನನ್ನಲ್ಲಿ ವಿಚಿತ್ರ ಪುಳಕ ಹುಟ್ಟಿಸಿದ. ಅಂಥವನನ್ನು ಕಂಡದ್ದು ನನ್ನ ಬಾಲ್ಯದ ದಿನಗಳಲ್ಲೇ ಇರಬೇಕು. ಇಂದಿನ ಜನರ ನಡುವೆ ಒಂದು ಮ್ಯೂಸಿಯಮ್ ನಮೂನೆಯಂತೆ ಕಾಣುತ್ತಿದ್ದ ಅವನು ಕಾಲ್ಗೇಟ್ ಟೂತ್ಪೇಸ್ಟ್ ಕೊಳ್ಳುತ್ತಿದ್ದುದು ನೋಡಿ ಇನ್ನೂ ನಗು ಬಂತು. ಆ ಕ್ಷಣದಲ್ಲಿ ‘ಹಾವಾಡಿಗ’ ಕತೆ ಹುಟ್ಟಿತು.
ಬೆಂಗಳೂರಿನಲ್ಲಿ ಇಂದು ಸಾಮಾನ್ಯವಾಗಿರುವ ಐಶಾರಾಮಿ ಅಪಾರ್ಟ್ಮೆಂಟ್ ಕಾಂಪೆಕ್ಸ್ ಒಂದರಲ್ಲಿ ಆ ಹಾವಾಡಿಗ ವಾಸಿಸಲು ಬಂದರೆ ಅಲ್ಲಿನ ಜನರ ಪ್ರತಿಕ್ರಿಯೆ ಹೇಗಿರಬಹುದು ಎಂಬ ಒಂದು ಲಹರಿ ಸುಳಿದು ಹೋಗಿ ನನ್ನಿಂದ ಈ ಕತೆ ಸಹಜವಾಗಿ ಹರಿದು ಬರತೊಡಗಿತು. ಹಾಗೆಯೇ ನನ್ನೊಳಗಿಂದ ನಗು, ವ್ಯಂಗ್ಯ, ವಿಷಾದಗಳೂ ಒಟ್ಟಿಗೆ ಹರಿಯತೊಡಗಿದುವು. ಈಗ ನಮ್ಮನ್ನು ಸುತ್ತುವರಿದಿರುವ ಬದುಕಿನ ಶೈಲಿ, ಉಡುಗೆತೊಡುಗೆ ಊಟ ನೋಟಗಳ ಸೇಮ್ನೆಸ್ ನಮ್ಮಂತಿಲ್ಲದ, ವಿಚಿತ್ರವಾಗಿ ಕಾಣುವ ವ್ಯಕ್ತಿಗಳನ್ನು ಗುಮಾನಿಯಿಂದ ಕಾಣುವ ಹಾಗೆ ಮಾಡುತ್ತಿರುವುದು ಇಂದಿನ ಜಾಗತೀಕರಣದ ಫಲ. ಇದರೆದುರು ಅವನನ್ನು ನಿಲ್ಲಿಸಿ ನೋಡಿದಂತೆ ಕತೆ ಬೆಳೆಯತೊಡಗಿತು.
ಕತೆ ಮುಗಿದು ಮತ್ತೊಮ್ಮೆ ಓದಿದಾಗ ಈ ಸರಳ ಮನೋರಂಜಕಕತೆ ತೆರೆಸಿದ ಸಮಕಾಲೀನ ಜಗತ್ತಿನ ಬದುಕಿನ ಹಲವಾರು ಪದರಗಳು ಗೋಚರಿಸುತ್ತಾ ಹೋಯಿತು. ಇವು ಕತೆಗೆ ಹೊಸ ಆಯಾಮ, ತೂಕ ಕೊಟ್ಟಂತೆನಿಸಿತು.
ನನ್ನ ಅನ್ನಿಸಿಕೆ ಸರಿ ಎನ್ನಿಸುವಂತೆ ನೆನಪಾಗುವುದು ನನ್ನ ಪ್ರತಿಕತೆಯ ಮೊದಲ ಓದುಗರೂ ನೇರ ವಿಮರ್ಶಕಿಯೂ ಆಗಿದ್ದ ನನ್ನ ಅಮ್ಮ‘ಹಾವಾಡಿಗ’ ಓದಿದ ತಕ್ಷಣ ಇದು ನಿನ್ನ ಬೆಸ್ಟ್ ಕತೆ ಎಂದು ಉದ್ಗರಿಸಿದ್ದು!

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಕಥೆ ಚೆನ್ನಾಗಿದೆ…ಓದಿಸಿಕೊಂಡು ಹೋಗುತ್ತದೆ.
ಕಥೆ ಬಹಳ ಕುತೂಹಲ ತರಿಸಿತು.ಹಾವಾಡಿಗನಂತವರಿಂದ ನಮಗೆಲ್ಲ ಮನರಂಜನೆ ಬೇಕು. ಆದರೆ ಅಂತವರು ನಮ್ಮ ಹತ್ತಿರ ಬೇಡ ಎನ್ನುವ ಮನಸ್ಥಿತಿಯವರೇ ನಾವೆಲ್ಲ.ನಮ್ಮೆಲ್ಲರ ಮನಸ್ಥಿತಿಗಳನ್ನು ಬಹಳ ಚೆನ್ನಾಗಿ ನಿರೂಪಿಸಿದ ಕಥೆ. ಓದಿನ ಖುಷಿ ಕೊಟ್ಟ ಕಥೆ. 🙏🙏