ಮಾದೇವ ನನ್ನ ಕೈ ಹಿಡಿದು ಕೊತ್ತನೂರಿಗೆ ಹೋದಾಗ, ಅಲ್ಲಿನ ಪರಿಸ್ಥಿತಿ ನೋಡಿ, ಬೆಂಕಿಗಿಂತ ಬಾಣಲೆಯೇ ವಾಸಿಯಿತ್ತಲ್ಲವಾ ಎನಿಸಿಹೋಗಿತ್ತು. ಅದು ವಯಸ್ಸಾದ ತಂದೆ, ತಾಯಿ, ಮಡದಿ, ಮಕ್ಕಳಿದ್ದ ತುಂಬು ಕುಟುಂಬ, ಈ ಜೇನಿನ ಗೂಡಿಗೆ ಕಲ್ಲು ಹೊಡೆದುಬಿಟ್ಟೆನಾ! ನಡುಗಿ ಹೋಗಿದ್ದೆ. ಲಕ್ಷ್ಮಿ ಗುದ್ದಾಡಿದಳು, ಹಾದಿಬೀದಿ ರಂಪ ಮಾಡಿದಳು, ಯಾವಾಗ ನನ್ನ ಸೀರೆ, ಪೋಲ್ಕ ಜಗ್ಗಾಡಿ ನನ್ನ ಮೇಲೆ ಕೈ ಎತ್ತಿದಳೋ, ಮಾದೇವ ಕಡ್ಡಿ ತುಂಡು ಮಾಡಿಬಿಟ್ಟ.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಆಶಾ ಜಗದೀಶ್‌ ಬರೆದ ಕತೆ ‘ಎಲೆ ಉದುರುವ ಕಾಲಕ್ಕೆʼ

 

“ಮಳೆಗಾಲ ಶುರುವಾಗೋಕು ಮುಂಚೆ ಒಯ್ಯಪ್ಪಳ, ಚಿನ್ನಿಕಾಯಿ ಹಪ್ಪಳ, ಹಲಸಿನ್‌ಕಾಯಿ ಹಪ್ಪಳ, ಸವತೆಕಾಯಿ ಸಂಡಿಗೆ, ಥರಾವರಿ ಉಪ್ಪಿನಕಾಯಿಗಳು ಎಲ್ಲವನ್ನು ಮಾಡಿಟ್ಟುಕೊಳ್ಳಬೇಕು. ಕರಿಂಡಿಯನ್ನು ಬಿಸಿಲಿಗಿಟ್ಟು ತೆಗೆಯಬೇಕು. ಶಂಭುಲಿಂಗಣ್ಣಯ್ಯನಿಗೆ ಹೇಳಿ ಎರೆಡು ಮೂಟೆ ಮಾವಿಂಕಾಯಿ ಮಿಡಿ ತರಿಸಿ ಮಿಡಿಉಪ್ಪಿನಕಾಯಿ ಹಾಕಬೇಕು. ಎಷ್ಟು ಮಾಡಿಟ್ಟುಕೊಂಡರೂ ಕಡಿಮೆಯೇ. ಶ್ಯಾಮಲ, ಪ್ರೇಮ, ರಾಜೇಶ್ವರಿ, ಸಣ್ಣಪ್ಪಣ್ಣಯ್ಯ, ಶಂಭುಲಿಂಗಣ್ಣಯ್ಯ ಎಲ್ರಿಗೂ ನನ್ನಮನೆ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಕಾರದ ಚಟ್ಣಿಯೇ ಆಗಬೇಕು. ಇನ್ನೇನು ಮಳೆಗಾಲ ಶುರು ಆಗ್ತದೆ. ಅಷ್ಟರೊಳಗೆ ಒಂದು ಟ್ರ್ಯಾಕ್ಟರ್ ಮಣ್ಣು ಹೊಡೆಸಿ, ಕೊರೆದು ಕೊರೆದು ಕೊರಕಲು ಗುಂಡಿಗಳಾಗಿರೊ ಹಿತ್ತಲನ್ನ ಸಮ ಮಾಡಿಕೊಳ್ಳಬೇಕು. ಟ್ರ್ಯಾಕ್ಟರೋ ಟಿಂಪೋವೋ ನುಗ್ಗಸ್ಲಿಕ್ಕೆ ಬರ್ದಂಗ್ ಆತುಗಂಡಿರುವ ಮಾವಿನ್ ಮರದ ಬಗ್ಗೆ ಚಿಂತೆಯಾಗ್ತಿದೆ. ಇವ್ರಿಗೋ ಈ ಗುಡ್ಡು ಮರದ ಮೇಲೆ ಎಂಥದ್ದೋ ಪ್ರೀತಿ, ನಂಗೂ ಇದೆ, ಇಲ್ಲ ಅಂತಲ್ಲ. ಕಷ್ಟ ಕಾಲದಲ್ಲಿ ಹೊಟ್ಟೆಗೂ ಬಟ್ಟೆಗೂ ಆಗಿ ಬಂದಿದ್ದ ಮರ ಅದು, ಮಗನಂತದ್ದು. ಕಡಿದು ಮಾರೋದು ಅಂದ್ರೆ ಕರುಳು ಹರ್ದು ಚೆಲ್ಲಿದಂಗೆ. ಬೇರೆ ಎಂತಾದ್ರೂ ಸಾಧ್ಯವಾ ನೋಡಬೇಕು.

ಈ ಸಲವಾದ್ರೂ ಬಾವಿಗೆ ನೀರು ಬರುತ್ತದೋ ಇಲ್ಲವೋ. ಮೂರು ವರ್ಷ ಆಯ್ತು, ಬಾವಿ ತುಂಬಿ. ಸುಮ್ನೆ ಉಚ್ಚೆಹೊಯ್ದಂಗೆ ಮಳೆ ಬಂದ್ರೆ, ಅದಕ್ಕೆ ನೀರೇ ಆಗಲ್ಲ. ವೀರಪ್ಪ ವಡೆಯರು ಕಟ್ಟಿಸಿದ್ದ ಬಾವಿಯಂತೆ. ನಂತರ ಅವರ ಮಗ ಶಿವಾಜಿ ವಡೆಯರ್ ನಾವಿಲ್ಲಿಗೆ ಬಂದು, ತೋಟದ ಕೆಲಸ ಕೇಳಿಕೊಂಡು ಅವರ ಬಳಿ ಹೋದಾಗ, ದೊಡ್ಡ ಮನಸು ಮಾಡಿ ಉಳ್ಕಳಾಕೆ ಅಂತ ಈ ಮನೆ ಕೊಟ್ಟಿದ್ದರು. ನಂತರ ದುಡಿದು ಇದನ್ನು ಸ್ವಂತ ಮಾಡಿಕೊಂಡಿದ್ದೆವು. ಮನೆ ಚಿಕ್ಕದಿದ್ದರೂ ಈ ಬಾವಿಯೊಂದು ಇದ್ದುದರಿಂದ ಯಾವುದಕ್ಕು ಅಡಚಣೆ ಅಂತ ಇರಲಿಲ್ಲ. ಈಗ ಮೂರು ವರ್ಷದಿಂದ ಮಳೆ ಸರಿ ಆಗದೆ ನೀರಿಲ್ಲದಂತಾಗಿತ್ತು. ನನಗೆ, ನನ್ನ ಗಂಡನಿಗೆ ಇದರ ನೀರೇ ಆಗಿಬರುತ್ತಿದ್ದುದು. ಊರೆಲ್ಲ ಸುತ್ತಿಬಂದರೂ ಇಲ್ಲಿಗೆ ಬಂದು ಬಾವಿನೀರು ಕುಡುದ್ರೇ ಏನೋ ಒಂಥರಾ ತೃಪ್ತಿ. ಇದು ಒಣಗ ಹತ್ತಿದ್ದು ನಮ್ಮಿಬ್ಬರಿಗೂ ದಿಗಿಲಾಗಿತ್ತು. ಕೊನೆಗೆ ನಿರ್ವಾಹವಿಲ್ಲದೆ ಕೊಳವೆ ಬಾವಿಯ ನೀರು ತಂದು ಕುಡಿಯಲು ಶುರು ಮಾಡಿದ್ದೆವು.

ಈಗ ಅದೆಂತದ್ದೋ ನೀರಿನ ಶುದ್ದೀಕರಣ ಘಟಕ ಅಂತ ಮಾಡಿದಾರಲ್ಲ, ಊರಿಂದೆಲ್ಲ ಜನವೂ ಅದನ್ನೆ ಕುಡಿಯೋದು. ಇತ್ತಿತ್ಲಾಗೆ ನಾವೂ ಇನ್ನೆಂತ ಬಡಿವಾರ ಮಾಡೋದು ಅಂತ ಅದನ್ನೇ ತಂದು ಕುಡಿಯೋಕೆ ಶುರು ಮಾಡಿದೀವಿ. ಮಳೆಗಾಲ ಬರುತ್ತೆ ಅನ್ನೊ ವ್ಯಾಳಿಗೆ ಮಾಡ್ಕಳಾಕೆ ಅಂತ ಹಂಡೆ ಕೆಲ್ಸ ಇರ್ತದೆ. ಒಣಗಿರೋ ಗಿಡಗಳನ್ನೆಲ್ಲ ತುದಿ ತರಿದು ಹಾಕ್ಬೇಕು. ತುಳಸಿ, ತುಂಬೆ, ಕಾಮಕಸ್ತೂರಿಗಳ ತುಂಬುಕ್ಕೆ ತೆನೆಯೋ ತೆನೆ, ಅವುಗುಳ್ನ ತರೀದಿದ್ರೆ ಚಿಗುರೋದಾದ್ರೂ ಹ್ಯಾಗೆ. ಗಣೇಶದಾಸವಾಳದ ಗಿಡಾನ ಕೊಡ್ತೀನಿ, ಹಚ್ಕೋ ಅಂದಿದ್ದಳು ವಿಜಿ. ಅದರ ಬಣ್ಣ, ದೊಡ್ಡ ದಳ ಏನಾರೆ ಚೆಂದವೇ… ಐದು ದಳದ, ಇಷ್ಟಗಲೂಕೆ ಇರುವ ಹೂ, ಮಾಮೂಲಿವು ಐದು ಹೂಗಳಿಗೆ ಸಮ. ತಂದು ಹಿತ್ತಲಿನ ಕೈ ತೋಟಕ್ಕೆ ಹಚ್ಚಬೇಕು. ಮೇಲೊಂದ್ಸಾರಿ ಹತ್ತಿ, ಹೆಂಚುಗಳನ್ನ ನೋಡಿ, ಒಡೆದಿರುವ ಹೆಂಚುಗಳನ್ನ ಬದಲಾಯಿಸಬೇಕು. ಪಳತದೊಳಗೆ ಹೆಗ್ಗಣ ಕೊರೆದಿರೋ ಬಿಲಗಳಿಗೆ ಸಿಮೆಂಟ್ ಹಾಕಿಸಿ ಮೆತ್ತಿಸಬೇಕು. ಎಲ್ಲವೂ ಹದಿನೈದು ದಿನದಲ್ಲಿ ತೀರಬೇಕು. ಆಮೇಲೆ ಆರಾಮಾಗಿ ಮಗಳ ಮದುವೆ ದಿಬ್ಬಣಕ್ಕೆ ಹೋಗಿ ಬರಬಹುದು. ಮಗನ್ ಮದುವೆಯಂತೂ ನಾನಿಲ್ಲದೇ ಆಗಿಹೋಗಿದೆ, ಮಗ ರಮೇಶ ಕರೆಯಲೂ ಇಲ್ಲ, ಅದು ಬೇರೆ ಮಾತು. ಆದ್ರೆ ಕರೆದಾಗ ಹೋಗದಿದ್ರೆ ಹೇಗೆ ಹೇಳಿ. ಒಂದು ವೇಳೆ ಮಗಳು ಇಲ್ಲೇ ಇರು, ಎಂದರೆ ಇದ್ದು ಬಿಡುವುದು” ಎಂದುಕೊಂಡಳು ನಾಗವೇಣಿ.

ಇಲ್ಲಿಗೆ ಬಂದು ಭರ್ತಿ ಹದಿನೈದು ವರ್ಷ. ಈ ಊರು ಅವಳ ಕಷ್ಟವನ್ನೂ ಕೇಳಿದೆ, ಸುಖವನ್ನೂ ಕಂಡಿದೆ. ಆದರೆ ‘ಮುಪ್ಪಿಗೆ ಮಕ್ಕಳ ಆಸರೆ’ ಎನ್ನುವ ಹಾಗೆ ಅವಳಿಗೂ ಆಗುತ್ತಿದೆ. ಒಡೆದ ಕನ್ನಡಿಯಂತಿರುವ ಅವಳ ಬದುಕಲ್ಲಿ ನಾನಾ ರೀತಿಯ ಬಿಂಬಗಳು. ಇತ್ತಿತ್ತಲಾಗಿ ಅವಳಿಗೆ ಕುಳಿತಲ್ಲೆಲ್ಲಾ ತನ್ನ ಗತ ಜೀವನ ಕಣ್ಣ ಮುಂದೆ ಬಂದು ಕಾಡುತ್ತದೆ. ಯಾರ ಜೀವನವೂ ಯೋಜಿತವಲ್ಲ. ಯಾರಾದರೂ ತಮ್ಮ ಜೀವನ ಹಾಳಾಗಲಿ ಅಂತಲೋ ಅಥವಾ ತಾನು ಹಾಳಾಗಬೇಕು ಅಂತಲೋ ಕೇಳಿಕೊಳ್ಳುತ್ತಾರಾ? ಪ್ರತಿ ಹೆಜ್ಜೆ ಇಡುವಾಗಲೂ ಎಷ್ಟೊಂದು ಜಾಗ್ರತೆ ವಹಿಸಿರುತ್ತಾರೆ, ಆದರೂ ಕೆಲವೊಮ್ಮೆ ನಿಂತ ನೆಲ ಕುಸಿಯುತ್ತದೆ. ಮಗಳ ಮದುವೆ ಹತ್ತಿರ ಬಂದ ಬಂದ ಹಾಗೆ ಅವರನ್ನೆಲ್ಲಾ ಹೇಗೆ ಎದುರಿಸಬೇಕೆಂಬ ಉದ್ವೇಗವೂ ಹೆಚ್ಚಾಗುತ್ತಿದೆ. “ಇದೇನಿದು ಮತ್ತೆ ಮೈಮರೆತು ಕುಳಿತು ಬಿಟ್ಟೆನಲ್ಲ, ಇನ್ನೇನು ಗಂಡ ಬರುವ ಹೊತ್ತಾಯಿತು, ಕಾಫಿಗಿಡಬೇಕು” ಎಂದು ಎದ್ದಳು.

ಬೆಳಗು ಮುಂಜಾನಿಗೆ ಬೆಳಕರಿಯುವ ಮುಂಚೆಯೇ ಎದ್ದು ಗದ್ದೆ ಬಯಲಿಗೆ ಹೊರಟುಬಿಡುವ ಮಾದೇವ, ಮತ್ತೆ ಬರುವುದು ಸರಿ ಏಳೂವರೆ ಎಂಟಕ್ಕೆ. ಅದಕ್ಕೆ ಅವನಿಗೆ ಯಾವ ವಾಚಿನ ಅಗತ್ಯವೂ ಇರಲಿಲ್ಲ. ನಾಗವೇಣಿಗೂ, ಗಂಡ ಬಂದನೆಂದರೆ ಹೊತ್ತು ಏಳೂವರೆಯೋ ಎಂಟೋ ಅಗಿರುತ್ತದೆ ಎಂದು ತಿಳಿದುಬಿಡುವುದು.

ಒಲೆಯ ಮೇಲೆ ಹಾಲು ಉಕ್ಕುತ್ತಿತ್ತು, ಒಳಬಂದ ಮಾದೇವ, “ನಾಗು ಹಾಲು ಉಕ್ಕುತತಿ ನೋಡಾ” ಅಂದ. ಓಡಿ ಸರ್ರನೆ ಗ್ಯಾಸ್ ಆರಿಸಿಬಿಟ್ಟಳು. ಅವಳ ಈ ಅನ್ಯಮನಸ್ಕತೆ ಕಳೆದೆರೆಡು ವಾರಗಳಿಂದ ಶುರುವಾಗಿದ್ದು ಮಾದೇವನ ಗಮನಕ್ಕೂ ಬಂದಿದೆ. ಅವನಿಗೆ ಎಲ್ಲವೂ ಗೊತ್ತು. ತನ್ನ ನಿರ್ಧಾರ ತಾನು ಮಾಡಿಕೊಳ್ಳಲು ಅವಳ ಪಾಡಿಗೆ ಅವಳನ್ನು ಬಿಟ್ಟಿದ್ದಾನೆ. ಇರುವಷ್ಟು ದಿನ ಹೀಗೆ ಇದ್ದುಬಿಡಬೇಕೆಂಬುದು ಅವನ ಆಸೆ. ಬಿಸಿಬಿಸಿ ಹಾಲನ್ನು ಹಿತ್ತಾಳೆ ಲೋಟಕ್ಕೆ ಬಗ್ಗಿಸಿ, ಸಕ್ಕರೆ ಮತ್ತು ಆಗ ತಾನೆ ಹುರಿದು ಪುಡಿಮಾಡಿದ ಕಾಫಿಪುಡಿ ಹಾಕಿ, ಎತ್ತಿ ಹಾಕತೊಡಗಿದಳು ನಾಗು. ಅವಳೀ ಕೆಲಸದಲ್ಲಿ ಪಳಗಿದವಳು. ಹಾಲಿನೊಳಗೆ ಸಕ್ಕರೆ, ಕಾಫಿ ಪುಡಿ ಬೆರೆತು, ನೊರೆ ನೊರೆ ಕಾಫಿ ಉಕ್ಕಿ ಬಂದಿತು. ಕಾಫಿಯ ಘಮಲು ಅಲ್ಲೇ ಒಲೆಯ ಮುಂದೆ ಬೆಂಕಿ ಕಾಯಿಸುತ್ತಾ ಕುಳಿತಿದ್ದ ಮಾದೇವನಿಗೂ ತಲುಪಿ, ಅವನು ಜಿಹ್ವಾ ಚಾಪಲ್ಯಕ್ಕೊಳಗಾದ. ಇಬ್ಬರೂ ಯಾವ ಮಾತಿಲ್ಲದೆ, ಕತೆಯಿಲ್ಲದೆ ಮಾಮೂಲಿನ ಕೆಲಸವನ್ನು ಮುಗಿಸುವಂತೆ ಕಾಫಿ ಕುಡಿದು ಮುಗಿಸಿದರು. ಇತ್ತಿತ್ತಲಿಗೆ ಇಬ್ಬರಿಗೂ ಮಾತಾಡುವುದಕ್ಕೆ ವಿಷಯಗಳು ಸಿಗುತ್ತಿಲ್ಲ. ಆದರೆ ಅವರಿಬ್ಬರಿಗೂ ಒಬ್ಬರನ್ನೊಬ್ಬರು ಅವಲಂಬಿಸದೆ ಬೇರೆ ದಾರಿಯೂ ಇಲ್ಲ. ಇಬ್ಬರ ನಡುವಿನ ಅನ್ಯೋನ್ಯತೆಗೆ ಮಾತಿನ ಅಗತ್ಯವೂ ಇರಲಿಲ್ಲ.

ಕಾಫಿ ಕುಡಿದು ಜಳಕಕ್ಕೆ ನಡೆದ ಮಾದೇವ. ರಾತ್ರಿ ಉಳಿದಿದ್ದ ಅನ್ನವನ್ನ ಮತ್ತೊಮ್ಮೆ ಕುಕ್ಕರ್‌ನಲ್ಲಿಟ್ಟು ಬೇಯಿಸಿ ತೆಗೆದು, ಕೊಣಿಗೆಯ ಮೇಲೆ ಒಂಚೂರು ಉಪ್ಪು, ಒಂದಿಷ್ಟು ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ನಾದತೊಡಗಿದಳು. ಮಾದೇವ ಹಂಡೆ ತುಂಬ ಕಾದಿದ್ದ ಬಿಸಿನೀರನ್ನು ಮೈನೋವು ಇಳಿವಂತೆ ಹೊಯ್ದುಕೊಳ್ಳುತ್ತಿದ್ದುದು, ಇದ್ದಲ್ಲಿಂದಲೇ ಅವಳಿಗೆ ಕೇಳುತ್ತಿತ್ತು. “ಬೆನ್ನುಜ್ಜೋಕೆ ಬರ್ಲೇನ್ರೀ” ಕೇಳಿದಳು ನಾಗು. “ಇರ್ಲಿ ಬಿಡು ನಾಳೆ ಉಜ್ಜಂತೆ” ಅಲ್ಲಿಂದಲೇ ಉತ್ತರಿಸಿದ. ಅವ ಸ್ನಾನ, ಪೂಜೆ ಮುಗಿಸಿ ಬಂದಾಗ ರೊಟ್ಟಿ ಮೆಶಿನ್ನಿನಲ್ಲಿ ಉಳಿ ಒತ್ತಿಕೊಳ್ಳುತ್ತಾ, ಒಲೆ ಮೇಲೆ ಬಿಸಿಬಿಸಿ ರೊಟ್ಟಿ ಬೇಯಿಸುತ್ತಿದ್ದಳು ನಾಗು. ಎಂದಿನಂತೆ ಮುಚ್ಚಟೆಯಿಂದ ಬಡಿಸಿದಳು. ಉಂಡು ಕೈ ತೊಳೆದು, ಬಾಳೆ ತೋಟಕ್ಕೆ ಮಣ್ಣು ಗೊಬ್ಬರ ಹೊಡೆಸಬೇಕೆಂದು, ತೋಟದ ಕಡೆ ಹೊರಟು ಹೋದ ಮಾದೇವ. ಅವನು ಅತ್ತ ಕಡೆ ಹೋದ ಮೇಲೆ ಈ ಖಾಲಿ ಮನೆಗೆಲ್ಲಾ ನಾಗು ಒಬ್ಬಳೇ. ತನಗೂ ತಟ್ಟೆಗೆ ಎರಡು ರೊಟ್ಟಿ ಹಚ್ಚಿಕೊಂಡು ಕೂತಳು. ಒಂದು ತುತ್ತೂ ಒಳ ಹೋಗಲಿಲ್ಲ. ಅಂತರ್ ಪಟ ಹಿಂದಕ್ಕೆ ಸರಿಯಿತು.

“ಅದೂ ಮಳೆಗಾಲವೇ, ಅಪ್ಪಯ್ಯ ಪ್ರತಿಮ ಚಿಕ್ಕಿ ಮಗಳು ಶಾಂತಲ, ಮೈನೆರೆದಾಳೆ ಅಂತ ಅಮ್ಮನ್ನು, ನನ್ನು ನೆಲ್ಲೂರಿಗೆ ಕರ್ಕೊಹೊಗ್ತಾಯಿದ್ದ. ಮನೆ ತುಂಬ ಹುಟ್ಟಿದ್ದು ನಾಲ್ಕೂ ಹೆಣ್ಣೇ. ಹಾಗಂತ ಅಪ್ಪಯ್ಯ ಎಂದೂ ಬೇಸರ ಪಟ್ಟದ್ದೇ ಇಲ್ಲ. ನಾವೆಲ್ಲ ಹೆಣ್ಣುಮಕ್ಕಳೆಂದರೆ ಅವನಿಗೆ ಬಲು ಪ್ರೀತಿ. ಅದ್ರಲ್ಲೂ ಕೊನೆ ಮಗಳು, ಕಿರೀ ಮಗಳು ಅಂತ ನನ್ಮೇಲೆ ತುಸು ಹೆಚ್ಚೇ ಪ್ರೀತಿ. ನಾ ಇದ್ದದ್ದು ಅಪ್ಪನಂತೇ. ಅಜ್ಜಿ ಹೇಳುತ್ತಿದ್ದಳು, “ಸೋಮ ನಿನ್ ಹೆಂಡತಿ, ನಿನ್ನ ಪೂರಾ ನುಂಗಿ, ಹೆಣ್ಣು ಮಾಡಿ ಕಡೀಗ್ ತಗದ್ದಾಳೆ ಕಣೋ” ಅಂತ. ಅಪ್ಪನೆಂದರೆ ನನಗೂ ಜೀವ. ಇಂತ ಅಪ್ಪ ಒಂದಿನ ಹಠಾತ್ ಬಾರದ ಲೋಕಕ್ಕೆ ಹೋಗಿಬಿಟ್ಟ. ಮನೆಯ ನಡುಗಂಬವೇ ಕುಸಿದಂತಾಯಿತು. ಮಗ ಸತ್ತ ಚಿಂತೆಯಲ್ಲೇ ಅಜ್ಜಿಯೂ ಮಗನ ಹಾದಿ ಹಿಡಿದಳು. “ನಾ ಎಷ್ಟಾರ ಗಟ್ಟಿಯೇ, ಇಷ್ಟೆಲ್ಲ ನೋಡಿಯೂ ಸತ್ತಿಲ್ಲ” ಅನ್ನುತ್ತಿದ್ದಳು ಅಮ್ಮ. ನಾವೆಲ್ಲ ಮಕ್ಕಳು ಅಮ್ಮನ ಸುತ್ತ ಕೋಳಿ ಮರಿಗಳಂತೆ ಹುದುಗಿ, ಗೊಳೋ ಎಂದು ಅಳುತ್ತಿದ್ದೆವು. ಆಗಲೇ ಬದುಕಿನ ಬಿಸಿ ಮುಟ್ಟಲಾರಂಭಿಸಿದ್ದು. ಇದ್ದ ಒಂದೆಕರೆ ಗದ್ದೆಯನ್ನು, ಉತ್ತು ಬಿತ್ತು ಸಾಲದಿದ್ದಾಗ, ಅಪ್ಪಮೈ ತುಂಬ ಸಾಲ ಮಾಡಿಕೊಂಡಿದ್ದ. ದುಡ್ಡು ಕೊಟ್ಟವರು ಸುಮ್ಮನಿರುತ್ತಾರೆಯೇ? ಬಾಗಿಲು ತಟ್ಟಲು ಶುರುಮಾಡಿದರು. ಗಂಡು ದಿಕ್ಕಿಲ್ಲದ ಮನೆ, ಮನೆ ತುಂಬ ಬರಿ ಹೆಣ್ಣುಮಕ್ಕಳು, ಕಣ್ಣಾಕುವವರಿಗೂ ಸದರವಾಗಿಬಿಟ್ಟಿತು. ಅಮ್ಮ ಇನ್ನು ತಡಮಾಡಲಿಲ್ಲ……..”

“ನಾಗು ಏನೆ ಇದು ತಟ್ಟೆಗಿಟ್ಟುಕೊಂಡು ತಿನ್ನದೆ ಎಲ್ಲಿ ಕಳೆದು ಹೋಗಿದೀಯಾ ಮಾರಾಯ್ತಿ”. ನಾಗು ಗಂಡನ ಮಾತಿನಿಂದ ಎಚ್ಚೆತ್ತಳು. ತಂಗಳಾಗಿದ್ದ ರೊಟ್ಟಿಯನ್ನು ತಿನ್ನಲು ಮನಸು ಬಾರದೆ, ಹುಲಿಯನಿಗೆ ಹಾಕಿ ಅಡುಗೆ ಮನೆಗೆ ನಡೆದಳು. “ನಿ ದಿನಾ ಹಿಂಗ್ ಮಾಡ್ಕಂತಾ ಕುಂತ್ರೆ ಹೆಂಗೆ ಮಾರಾತಿ?” ಗಂಡನ ಪ್ರೀತಿ ಕಾಳಜಿಗೆ ಕಣ್ತುಂಬಿ ಬಂತು. “ಇಲ್ಲ ರೀ, ಹಂಗೇನಿಲ್ಲ, ತಿಂತೇನಿ” ಅನ್ನುತ್ತಾ ರೊಟ್ಟಿ ಚಟ್ಣಿ ಹಚ್ಚಿಕೊಂಡು, ನಿಮಿಷಾರ್ಧದಲ್ಲಿ ಮುಗಿಸಿ, ತಟ್ಟೆ ಒಯ್ದಿಟ್ಟಳು. ‘ಹಂಗಾರೆ ತಾನೆಷ್ಟೊತ್ತಿಂದ ಹಿಂಗೆ ಕೊಂತಿರೋದು’ ಗಡಿಯಾರ ನೋಡಿದಳು. ಹನ್ನೆರೆಡು ಎಂದು ತೋರಿಸುತ್ತಿತ್ತು. ಮಧ್ಯಾಹ್ನದ ಅಡುಗೆಗಿಡಬೇಕು. ನೆನ್ನೆಯದೇ ಸಾರಿದೆ, ಸ್ವಲ್ಪ ಅನ್ನಕ್ಕಿಟ್ಟರೆ ಸಾಕು ಎಂದುಕೊಂಡು, ಹಾಗೇ ಸ್ವಲ್ಪ ಹೊತ್ತು ಅಡ್ಡಾದಳು. ಮಾದೇವ ಅದಾಗಲೇ ಆಳು ಮಕ್ಕಳ ಜೊತೆ ಹೆಂಚಿನ ಮೇಲೆ ಹತ್ತಿದ್ದ. ಸರಬರ ಸರಬರ ಎಂದು ಹೆಂಚಿನ ಮೇಲೆ ಓಡಾಡುತ್ತಿದ್ದ ಶಬ್ದ, ಸ್ಪಷ್ಟವಾಗಿ ಕೇಳಿಸುತ್ತಿತ್ತು. ನಾಗು ಮತ್ತೆ ತನ್ನ ಲೋಕಕ್ಕೆ ಹಿಂತಿರುಗಿ, ಬಿಟ್ಟಲ್ಲಿಂದ ಮುಂದುವರಿದಳು……

“ಅಮ್ಮನಿಗೆ ಮನೆಯ ಬಡತನ, ಸಾಲ, ಹಸಿವು, ಅನ್ನ ಯಾವುದೂ ಕಾಡಲಿಲ್ಲ. ಅವಳ ಚಿಂತೆಯೆಲ್ಲ, ಈ ನಾಲ್ಕು ಹೆಣ್ಣುಮಕ್ಕಳನ್ನ ಒಂದು ಸುರಕ್ಷಿತ ನೆಲೆಗೆ ಸೇರಿಸಿಬಿಡಬೇಕೆಂಬುದು. ಕೊನೆಗೆ ತನ್ನ ತವರಲ್ಲಿ ಸಹಾಯ ಬೇಡಿಕೊಂಡಳು. ಮೊದಲೇ ಅಪ್ಪಯ್ಯನ ಹೆಣ್ಣುಮಕ್ಕಳ ಮೇಲಿನ ವ್ಯಾಮೋಹ ಕಂಡು ಉರಿದುಕೊಳ್ಳುತ್ತಿದ್ದ ಸೀತತ್ತೆ, ಎಷ್ಟು ಉರಿ ಕಾರಬೇಕೋ ಅಷ್ಟೂ ಕಾರಿಕೊಂಡಳು. ಆಗಿಬರುತ್ತಿದ್ದ ದೊಡ್ಡ ದೊಡ್ಡ ಸಂಬಂಧಗಳೊಂದೂ ಆಗಿಬರದಂತೆ ನೋಡಿಕೊಂಡಳು. ಕೊನೆಗೆ ಕೂಲಿನಾಲಿ ಮಾಡುವಂಥವರೇ ಆಗಲಿ, ಯಾವ ವರೋಪಚಾರ ಕೇಳದ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತ ಹುಡುಗರನ್ನು ಹುಡುಕಿ ಅಮ್ಮ ತನ್ನ ಶಕ್ತ್ಯಾನುಸಾರ ಮದುವೆ ಮಾಡಿದಳು. ಈ ವಿಷಯದಲ್ಲಿ ಅಕ್ಕಂದಿರೇ ವಾಸಿ. ಅಕ್ಕಂದರದ್ದೆಲ್ಲ ಆದ ಮೇಲೆ, ಕೊನಿಗೆ ಉಳುದವ್ಳು ನಾನು. ಅಮ್ಮ ನನ್ನ ಪಾಣಿಗ್ರಹಣಕ್ಕಾಗಿ ಗಂಡು ಹುಡುಕಲು ಶುರುಮಾಡಿದಳು. ನನ್ನ ದುರಾದೃಷ್ಟವೋ ಏನೋ, ಪರಿಸ್ಥಿತಿ ತಿಳಿದಿದ್ದ ಯಾರೂ ಈ ಬಡ ನಿರ್ಗತಿಕರ ಮನೆಯ ಹುಡುಗಿಯನ್ನು ಮದುವೆ ಮಾಡಿಕೊಳ್ಳಲು ಮುಂದೆ ಬರಲಿಲ್ಲ. ಮೂರು ಮದುವೆ ಮಾಡಿ ಅಮ್ಮನಂತಾ ಅಮ್ಮನ ರಟ್ಟೆಯೂ ಸೋತುಹೋಗಿದ್ದವು. ನನ್ನದೊಂದು ಹೇಗಾದರೂ ಸರಿ, ಯಾರಾದರೂ ಸರಿ, ಮಾಡಿ ಮುಗಿಸಿ ಗೆಲ್ಲಬೇಕೆಂದು ಶತಾಯಗತಾಯ ಪ್ರಯತ್ನಿಸುತ್ತಿದ್ದಳು.

ಮಾಬಲಿ ಮಾವಯ್ಯ, ಪರಮೇಶನ ಸಂಬಂಧ ಹೊತ್ತು ತಂದಾಗ ಅಮ್ಮನಿಗೆ ಎಷ್ಟು ಸಂತೋಷವಾಗಿತ್ತು. ಅವರಿಗೆ ಬೇಕಾದಷ್ಟು ಆಸ್ತಿ-ಪಾಸ್ತಿ ಇತ್ತು. ಅರಮನೆಯಂತ ಮನೆಯಿತ್ತು. ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳಿದ್ದರು. ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆಯಲ್ಲಿದ್ದರೆ, ಅಣ್ಣನೂ ಮದುವೆಯಾಗಿ ಸಂಸಾರ ಹೂಡಿದ್ದ. ಇನ್ನು ಇವ ಕೊನೆಯವನು, ಆದರೆ….. ಕೊನೆಯೆಂಬ ಪದಕ್ಕಿರುವ ಅಷ್ಟಾರ್ಥಗಳು ನನ್ನ ಹೆಜ್ಜೆ ಹೆಜ್ಜೆಗೂ ಸಿಕ್ಕಿ ಕಾಡುವುದೆಂಬ ಸತ್ಯ ನನಗೊಂದೂ ಗೊತ್ತಿರಲಿಲ್ಲ…….”

“ನಾಗೂ…..” ಮಾದೇವ ಕೂಗುತ್ತಿದ್ದಾನೆ. ಜಗಲಿಯಲ್ಲಿದ್ದ ನಾಗು, ಓಡಿ ಹಿತ್ತಲಿಗೆ ಬಂದಳು.”ಚಂದ್ರ, ಬಸ್ಯ ಬಂದಾರೆ ಎಲೆ ಹಾಕು, ಅವ್ರಿಗಿವತ್ತು ಇಲ್ಲೆ ಊಟ” ಎನ್ನುತ್ತಾ, ಅವರು ಇರುವಲ್ಲಿಗೆ ಹುಡುಕಿ ಹೋದ. ನೆನಪುಗಳಲ್ಲಿ ಇರುಕಿಕೊಂಡ ನಾಗು ಎಲೆ ಹಾಕುತ್ತಿದ್ದಳು. ಚಂದ್ರ, ಬಸ್ಯ ಮಾದೇವನೊಂದಿಗೆ ಊಟಕ್ಕೆ ಕುಳಿತರು. ಈ ಹುಡುಗರ ನಿಷ್ಕಾಮ ಪ್ರೀತಿ! ಅದಕ್ಕೆ ಏನೆಂದು ಹೇಳಲು ಅವಳಿಗೆ ತಿಳಿಯುವುದಿಲ್ಲ. ಗೊತ್ತುಗುರಿ ಇಲ್ಲದೆ ಈ ಊರಿಗೆ ಬಂದಾಗಿನಿಂದಲೂ ಈ ಹುಡುಗರು ತನಗಿಬ್ಬರು ತಮ್ಮಂದಿರಂತೆ ಇದ್ದಾರೆ. ಅಂತೇ ನಾಗು-ಮಾದೇವರಿಗೆ ಅವರ ಮೇಲೆ ಅಷ್ಟೆ ಒಲುಮೆ. ಶಿವಾಜಿ ವಡೆಯರ ಮುಂದೆ ನಿಂತು ಕೆಲಸ ಕೇಳುವಾಗ ದೇಹವನ್ನು ಹಿಡಿಮಾಡಿಕೊಂಡು, ಅಂಗಲಾಚಿ ಬೇಡಿಕೊಂಡಿದ್ದರು. ಇಂಥವರಿಗೆ ಹೇಗೆ ಕೆಲಸ ಕೊಡುವುದು ಎಂದು ಬಹಳ ಯೋಚಿಸಿದ ಶಿವಾಜಿ ವಡೆಯರು, ಕೊನೆಗೂ ಇವರ ಪರಿಸ್ಥಿತಿ ನೋಡಲಾಗದೆ ಕರಗಿ ಕೆಲಸ ಕೊಟ್ಟು ಉಪಕಾರ ಮಾಡಿದ್ದರು. ಎರಡು ಮೂರು ವರ್ಷ ಜನರ ಕೆಟ್ಟ ಕುತೂಹಲಕ್ಕೆ ಬಲಿಯಾಗಿ ಅಂಜುತ್ತ ಬದುಕಿದರು. ಜೊತೆಗೆ ಜನರ ಚಾಡಿ ಮಾತುಗಳು, ಕುಹುಕ, ಹೀಗಳೆಯುವಿಕೆ, ಎಲ್ಲವನ್ನು ಅವಡುಗಚ್ಚಿ ನುಂಗಿ ಬದುಕ ಕಟ್ಟಿಕೊಂಡರು.

ಮರ್ಯಾದಸ್ತರೆಂದು ಮನೆಗೆ ಬಂದವರೂ ಅವಳನ್ನು ಆಪಾದಮಸ್ತಕ ನುಂಗುವಂತೆ ನೋಡುತ್ತಿದ್ದಾಗ ಅವರ ಸೋಗಲಾಡಿತನಕ್ಕೆ ಹೇಸಿಗೆ ಪಟ್ಟುಕೊಳ್ಳುತ್ತಿದ್ದಳು. ಗಂಡನಿಲ್ಲದ ಸಮಯ ನೋಡಿಕೊಂಡು ಬರುತ್ತಿದ್ದ ಗುಳ್ಳೆ ನರಿಗಳಿಂದಾಗಿ ಕೆಲವೊಮ್ಮೆ ಜೀವ ಬಾಯಿಗೆ ಬಂದುಬಿಡುತ್ತಿತ್ತು. ಮೂವರೂ ಊಟ ಮುಗಿಸಿ ಎದ್ದರು. ಎಲೆ ತೆಗೆದು ಬಾನಿಗೆ ಒಯ್ದು ಬಿಸುಟಿ ಬಂದಳು. ಮಿಟ್ಲಿ ಬಾಳೆಯ ಚಿಪ್ಪೊಂದನ್ನು ಇರಿಸಿ ಎಲೆ-ಅಡಿಕೆ ತಾಟು ಒಯ್ದು ಅವರ ಮುಂದಿಟ್ಟು, ಬಿಸಿಲಿಗಿಟ್ಟಿದ್ದ ಕರಿಂಡಿಯ ನೆನಪಾಗಿ ಹಿತ್ತಲಿಗೆ ನಡೆದಳು. “ಲೇ ಇವಳೇ ಅಡಕತ್ತರಿ ಕೊಡೇ” ಎಂದ ಮಾದೇವನ ಕೂಗು ಹಿತ್ತಲಿಗೂ ಕೇಳಿಸಿತು. ನಾಗಂದಿಗೆ ಮೇಲೆದ್ದ ಅಡಕತ್ತರಿ ಒಯ್ದು ಕೊಡುವಾಗ, ತನ್ನ ಸ್ಥಿತಿಯೂ ಒಂದು ರೀತಿ, ಅಡಕತ್ತರಿಗೆ ಸಿಕ್ಕಿಕೊಂಡ ಅಡಕೆಯಂತಾಗಿದೆ ಎನಿಸಿತವಳಿಗೆ…….

“…….ಆದರೆ ಪರಮೇಶನ ಬಗ್ಗೆ ಮದುವೆಗು ಮುಂಚೆ ನನಗೆ ಏನೊಂದೂ ತಿಳಿದಿರಲಿಲ್ಲ. ನಾವಿದ್ದ ಪರಿಸ್ಥಿತಿಯಲ್ಲಿ ಅಮ್ಮನಿಗೆ ಎಂಥವನಾದರೂ ಸರಿ, ಗಂಡು ಅಂತ ಒಂದು ಪ್ರಾಣಿ ಸಿಕ್ಕರೆ ಸಾಕಿತ್ತು. ನಮ್ಮ ಬಡತನದ ಲಾಭ ಮಾಡಿಕೊಂಡು, ಮಾಬಲಿ ಮಾವಯ್ಯ, ಎರಡೂ ಕಡೆಯಿಂದಲೂ ಉಂಡೂ, ಕೊಂಡೂ ಹೋಗಿದ್ದ. ಗಂಡು ಸ್ವಲ್ಪ ಪೆದ್ದು ಅಂತಷ್ಟೆ ನನಗೂ, ಅಮ್ಮನಿಗೂ ಹೇಳಿದ್ದದ್ದು. ಅದರೆ ಮದುವೆಯಾದ ಮೊದಲ ರಾತ್ರಿಯೇ ಗೊತ್ತಾದದ್ದು, ಅವನು ಪೆದ್ದನಲ್ಲ, ಪೂರ್ಣ ಹುಚ್ಚ ಎಂದು. ಅತ್ತೆ, ಗೋಳಾಡಿದೆ, ನಾವು ಬಡವರಾಗಿದ್ದೆವು. ನಮ್ಮನ್ನು ಯಾರು ಬೇಕಾದರೂ ಮೋಸಗೊಳಿಸಬಹುದಿತ್ತು. ಅದು ಅವರ ದೃಷ್ಟಿಯಲ್ಲಿ ಅನ್ಯಾಯವೇ ಆಗಿರಲಿಲ್ಲ.

‘ಮದುವೆ ಆಗಿಹೋಗಿದೆ, ಹೇಗೋ ಅನುಸರಿಸಿಕೊಂಡು ಹೋಗು, ಇಲ್ಲವಾದರೆ ಬದುಕು ಮೂರಾಬಟ್ಟೆಯಾಗುತ್ತದೆ’ ಎಂದು ಅಮ್ಮ ಗೋಗರೆದಳು, ನನ್ನ ಹಾಳು ಹಣೆಬರಹಕ್ಕೆ, ಅವಳೂ ನನ್ನನ್ನು ಕೂಡಿ ಅತ್ತಳು. ಹುಚ್ಚು ಗಂಡನೊಂದಿಗೆ ಹೊಸಬಾಳು ಶುರುವಾಯಿತು.
ಯಾವಾಗಲೂ ಜೊಲ್ಲು, ಗೊಣ್ಣೆ ಸುರಿಸುತ್ತಾ, ಹೀ…. ಎಂದು ವಿಕಾರವಾಗಿ ನಗುತ್ತಿದ್ದ ಪರಮೇಶನನ್ನು ಕಂಡಕ್ಷಣವೆ ಭಯ, ಹೇಸಿಗೆ ಒಟ್ಟೊಟ್ಟಿಗೆ ಹುಟ್ಟಿ ಓಡಿಬಿಡುತ್ತಿದ್ದೆ. ಇದರಿಂದ ಸಮಸ್ಯೆ ಇನ್ನೂ ಹೆಚ್ಚಾಯಿತು. “ಗಂಡನ ಹತ್ರ ಹೋಗಲ್ಲ, ಮಗ್ಗುಲಾಗ್ ಮಲ್ಗಲ್ಲ ಅಂದ್ರೆ ಏನೇ? ಏನುಕ್ಕೆ ನಿನ್ನ ಮಾಡ್ಕಂಡ್ ಬಂದಿರಾದು?” ಅಂತ ಅತ್ತೆ ಬಯ್ಯುತ್ತಿದ್ದಳು. ಹೊಡೆಯುವುದೂ ಮಾಮೂಲಾಯಿತು. ಕೊನೆಗೆ ಪರಮೇಶನೊಂದಿಗೆ ಕೋಣೆಯೊಳಗೆ ಕೂಡಿಹಾಕತೊಡಗಿದರು. ಅತ್ತೆ, ಕೂಗಿದೆ, ರಂಪ ಮಾಡಿದೆ, ಯಾರಿಗೂ ಕರುಣೆಬರಲಿಲ್ಲ, ಬಾಗಿಲು ತೆಗೆಯಲಿಲ್ಲ. ಇದು ನಿತ್ಯ ಮುಂದುವರಿಯಿತು. ಕೊನೆಗೆ ನಿರ್ವಾಹವಿಲ್ಲದೆ ಪರಮೇಶನನ್ನು ಸಹಿಸಿಕೊಳ್ಳಬೇಕಾಗಿ ಬಂತು.

ಮದುವೆಯಗಿ ಐದು ವರ್ಷ ಕಳೆಯುವುದರೊಳಗೆ, ಮೂರು ಮಕ್ಕಳು ಮಡಿಲು ತುಂಬಿದವು. ನಾನು ಸಂಸಾರ ಮಾಡಲಿಲ್ಲ, ದಾಂಪತ್ಯ ಸುಖ ಕಾಣಲಿಲ್ಲ, ಗಂಡನ ಪ್ರೀತಿ ಎಂದರೇನೆಂದು ಗೊತ್ತಾಗಲಿಲ್ಲ, ಪರಮೇಶನಿಗೆ ಕಾಮ ನೆತ್ತಿಗೇರಿದಾಗಲೆಲ್ಲ ಕಾಡುಮೃಗದಂತೆ ಮೈ ಹರಿದು ಮುಕ್ಕುತ್ತಿದ್ದ. ಇದರಿಂದ ನಾನು ಮೂರು ಮಕ್ಕಳ ತಾಯಿಯಾದೆ. ಅವರ ಮೇಲಿನ ನನ್ನ ಸಿಟ್ಟಿಗೂ, ನನ್ನ ಮೇಲಿನ ಅವರ ಸಿಟ್ಟಿಗೂ, ಎಲ್ಲಕ್ಕು ಕಾರಣವಿತ್ತು. ಎಲ್ಲರಿಗೂ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಕಾರಣಗಳು ಸಿಗುತ್ತವೆ. ಅವರವರಿಗೆ ಅವರವರ ಮೂಗೇ ನೇರ. ಆದರೆ ಯಾವ ಕಾರಣ-ಸಮರ್ಥನೆಗಳೂ ನನ್ನಂತ ಬಡ, ನಿರ್ಗತಿಕ, ತಂದೆಯಿಲ್ಲದ ಮಗಳಿಗೆ ಕೆಲಸಕ್ಕೆ ಬರುವುದಿಲ್ಲ ನೋಡಿ. ಮಕ್ಕಳು ನನ್ನನ್ನು ಜೀವಂತವಾಗಿಟ್ಟಿದ್ದವು. ಎಷ್ಟು ಮುದ್ದಾದ ಮಕ್ಕಳು… ನಾ ಹೆತ್ತ ಮಕ್ಕಳು….. ಇಷ್ಟೇ ಜೀವನ ಎಂದುಕೊಂಡು ಬದುಕುತ್ತಿದ್ದವಳಿಗೆ, ಜೀವನ ಇನ್ನೂ ಏನೋ ನೋಡಲಿಕ್ಕಿದೆ ಎನ್ನುವಂತೆ ಓಡುತ್ತಿತ್ತು….”

ಮಾದೇವ ತೋಟದ ಕಡೆ ಹೋಗಿಯಾಗಿತ್ತು. ಉಂಡ ಪಾತ್ರೆ ತೊಳೆದಿಟ್ಟು, ನಾಲ್ಕು ದಿನದಿಂದ ಬಟ್ಟೆ ಒಗೆದಿರಲಿಲ್ಲ, ಎಲ್ಲ ಕೂಡಿಟ್ಟುಕೊಂಡು, ಕೆರೆ ಕಡೆ ಹೊರಟಳು. ಬಟ್ಟೆಗಳಾದರೂ ಎಷ್ಟು, ಇಬ್ಬರ ಬಟ್ಟೆ, ಬರೇ ಇಬ್ಬರ ಬಟ್ಟೆ. ಮಕ್ಕಳಾ, ಮರಿಯಾ ರಾಶಿ ಬೀಳೋಕೆ. ಕೈಲಿದ್ದ ಮಾದೇವನ ಶರ್ಟನ್ನು ಮೆಲುವಾಗಿ ಮುದ್ದಿಸಿದಳು. ಈ ಸರ್ತಿಯ ಮುಂಗಾರಿನ್ನು ಶುರುವಾಗಿರಲಿಲ್ಲ. ಯಾರದ್ದಾದರೂ ತೋಟದಲ್ಲಿ ತೊಳೆಯೋಣೆಂದರೆ ಅದು ಇನ್ನೊಂದು ರೀತಿಯ ಸಮಸ್ಯೆ. ಅವತ್ತು ಹೀಗೆ ವಡೆಯರ ತೋಟದಲ್ಲಿ ಬಟ್ಟೆ ಒಗಿತಾ ಇದ್ದಳು. ಆಗ ಅಲ್ಲಿಗೆ ಅವ ಎಲ್ಲಿಂದ ಬಂದನೋ, ಆ ಬೆಂಕಿ ಕಿಷ್ಟ, “ಏನ್ ನಾಗಮ್ಮ ಬಟ್ಟೆ ವಗಿತಿದಿಯಾ” ಅಂತ ಬಳಸಿಕೊಂಡು ಬಂದವನು, ಒಂಟಿ ಇದ್ದವಳನ್ನು ತಬ್ಬಿ ಎಳೆದಾಡಿಬಿಟ್ಟಿದ್ದ. “ಏನೇ ಆ ಮುದಿಯ ಏನ್ ಸುಖಾ ಕೊಟ್ಟಾನು ನನ್ನತ್ರ ಬಾರೆ” ಅಂತ ಬಲಾತ್ಕಾರಕ್ಕೆ ಎಳೆಸಿದ್ದ. ಆಗ ಅಲ್ಲಿಗೆ ಅವತ್ತು ದೇವರ ಹಂಗೆ, ಚಂದ್ರ ಬಂದಿರದೇ ಹೋಗಿದ್ದರೆ ಏನಾಗಿರುತ್ತಿತ್ತೋ ಏನೋ. ಬಂದವನೇ ಅವನಿಗೆ ನಾಲ್ಕು ಸಮ್ಮ ಬಿಗಿದು ವೀರಭದ್ರಸ್ವಾಮಿ ದೇವಳಕ್ಕೆ ಎಳೆದು ತಂದಿದ್ದ. ಊರಿನ ಯಜಮಾನರೆಲ್ಲ ಸೇರಿದರು. ವಿಷಯ ಕೇಳಿದ ಮಾದೇವ ಸ್ಮೃತಿ ತಪ್ಪಿದವನಂತೆ, ಕಿಷ್ಟನನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದ. ಕೊನೆಗೆ ಹಿರಿಯರು ಕಿಷ್ಟನಿಗೆ ಹತ್ತುಸಾವಿರ ದಂಡ ಹಾಕಿ, ಅವಳ ಕಾಲು ಹಿಡಿದು ಕ್ಷಮೆ ಕೇಳುವ ಶಿಕ್ಷೆ ವಿಧಿಸಿದರು. ಮಾದೇವ ಪೋಲಿಸು, ಕೇಸು ಎಂದು ಎಗರಾಡಿದ. ಆದರೆ ಊರು, ಮರ್ಯಾದೆ ಅಂತೆಲ್ಲ ಹೇಳಿ ಹಿರಿಯರು, ಮಾದೇವನನ್ನು ಸುಮ್ಮನಾಗಿಸಿದರು. ನಾಗುವಿಗೂ ಇನ್ಯಾವ ಅನಾಹುತವಾಗುವುದು ಬೇಡವಾಗಿತ್ತು. ಮಾದೇವ ಅವಳನ್ನು ದೇವತೆಯಂತೆ ನಡೆಸಿಕೊಂಡ.

ಈ ಘಟನೆಯಿಂದ ಒಂದಷ್ಟು ಪೋಲಿ ಜನ ಅವರನ್ನು ನೋಡುತ್ತಿದ್ದ ದೃಷ್ಟಿ ಬದಲಾಯಿತು. ಊರ ಹೆಂಗಸರು ಮಾತ್ರ ಬೇಕಾಗಿ ವಿಷಯ ತೆಗೆದು, ಬಾಯಲ್ಲಿ ಅಯ್ಯೋ ಅನ್ನುತ್ತಿದ್ದರು, ಆದರೆ ಅವರ ಮುಖದ ಕುಹುಕ ಇನ್ನೇನೋ ಹೇಳುತ್ತಿತ್ತು. “ಅವನ್ಯಾಕೆ ಸುಮ್‌ಸುಮ್ನೆ ಇವ್ಳ್ ಮೈ ಮುಟ್ತಾನೆ, ಇವಳೇನ್ ಮಾಡಿದ್ಲೋ, ಮಳ್ಳಿ ಇದ್ದಂಗಿದಾಳೆ, ಮಾಡೋದೆ ಗೊತ್ತಾಗಲ್ಲ, ಅಷ್ಟುಕ್ಕು ಇದೆಲ್ಲ ಇವ್ಳಿಗೇನ್ ಹೊಸ್ದ?” ಅಂತ ಮರೇಲಿ ಮಾತಾಡಿಕೊಳ್ಳುತ್ತಿದ್ದುದು ಅವಳ ಕಿವಿಗೂ ಬೀಳುತ್ತಿತ್ತು. ಯಾರ ಹತ್ರ ಅಂತ ಜಗಳ ಆಡ್ತಾಳೆ, ಯಾರನ್ನ ಅಂತ ಬಯ್ತಾಳೆ. ಅಂದಷ್ಟು ಆಡಿದಷ್ಟು ನೋವಾಗುವುದು ತನಗೇ ಹೊರತು ಒಪ್ಪಿಕೊಳ್ಳಲು, ಅರ್ಥಮಾಡಿಕೊಳ್ಳಲು ತಯಾರಿಲ್ಲದ ಇವರನ್ನೇನು ಮಾಡುವುದು ಎಂದುಕೊಂಡಳು. ಸುಮ್ಮನಾಗುವುದನ್ನು ಬಿಟ್ಟು ಬೇರೆ ಯಾವ ಸಭ್ಯ ದಾರಿಗಳೂ ಅವಳಿಗೆ ಕಾಣಲಿಲ್ಲ. ಅವಳ ಅಳು, ನೋವು, ಸಂಕಟ ಆ ನಾಲ್ಕು ಗೋಡೆಗಳ ಮಧ್ಯೆ ಸಮಾಧಿಯಾಗುತ್ತಿದ್ದವು. ಮಾದೇವ ಮಾತ್ರ ತನ್ನ ಶಕ್ತಿ ಮೀರಿ ಅವಳ ಬದುಕಿಗೊಂದು ಅರ್ಥ ತಂದುಕೊಟ್ಟಿದ್ದ. ಆದರೆ ಅವಳ ನೋವು, ಮಾನಾಪಮಾನ?! ಕಾಲವೇ ಎಲ್ಲವನ್ನು ಮಾಯಿಸಬೇಕಿತ್ತು…. ಕೆರೆಯಂಗಳದ ಗುಂಡಿಗಳಲ್ಲಿ ಇಂಗಿ ಉಳಿದಿದ್ದ ನೀರಿನಲ್ಲಿಯೇ ಬಟ್ಟೆ ತೊಳೆದುಕೊಂಡು ಮನೆ ಸೇರಿದಳು ನಾಗು. ಸಂಜೆಯ ಕಾಫಿಗಿಡಬೇಕಿತ್ತು. ಮಾದೇವ ಇನ್ನು ಬಂದಿರಲಿಲ್ಲ. ಅವನ ದಾರಿ ಕಾಯುತ್ತಾ…. ಗತಕ್ಕೆ ಜಾರಿದಳು.

“ಅಜ್ಜ ಅಜ್ಜಿಯ ಮುದ್ದಿನಲ್ಲಿ ಮಕ್ಕಳು ಬೆಳೆಯುತ್ತಿದ್ದರು, ನಾನೇ ಅಲ್ಲಿ ಪರಕೀಯಳು. ಮಕ್ಕಳೊಂದಿಗೂ ಹೆಚ್ಚು ಕಾಲ ಕಳೆಯಲು ಆಗುತ್ತಿರಲಿಲ್ಲ. ಅಡುಗೆ, ಮನೆಗೆಲಸದ ಜೊತೆ ದನಕಟ್ಟಬೇಕು, ಕೊಟ್ಟಿಗೆ ಗುಡಿಸಬೇಕು, ಹುಲ್ಲು, ಕಟ್ಟಿಗೆ ತರಬೇಕು, ಹಾಲು ಹಿಂಡಬೇಕು, ಮೇವು ಹಾಕಬೇಕು. ನನ್ನ ಮಕ್ಕಳಿಗೆ ಸುಖ ಇತ್ತು, ಆ ಸುಖದಲ್ಲಿ ನನ್ನ ನೋವು ಮರೆತು ಬದುಕುತ್ತಿದ್ದೆ. ಆಗ ಮುಂಗಾರು ಬಿತ್ತನೆಯ ಸಮಯ, ಪಡುವುಗಡೆಯಿಂದ ಬಿತ್ತನೆ ಭತ್ತ ಹಾಕಿಕೊಂಡು ಮಾದೇವ ಬಂದಿದ್ದ. ಆಗಲೇ ನಮ್ಮಿಬ್ಬರ ಭೇಟಿ ಆದದ್ದು. ನಾನೋ ಮೂರು ಮಕ್ಕಳ ತಾಯಿ, ಅವನೂ ನಾಲ್ಕು ಮಕ್ಕಳ ತಂದೆ. ದಿನಾ ಮನೆಗೆ ಬರುತ್ತಿದ್ದವನು, ನನ್ನ ಸ್ಥಿತಿ ಕಂಡು ಮರುಕಪಡುತ್ತಿದ್ದ. ನಿಧಾನವಾಗಿ ನನ್ನ ದುಃಖವನ್ನೆಲ್ಲಾ ಅವನಲ್ಲಿ ಹೇಳಿಕೊಳ್ಳತೊಡಗಿದೆ. ನಮ್ಮ ಈ ಸ್ನೇಹ, ಪ್ರೀತಿಯ ಮಜಲಿಗೆ, ಯಾವಾಗ ತಿರುಗಿತೋ ಗೊತ್ತಿಲ್ಲ. ನಾವಿಬ್ಬರೂ ಆ ವಯಸ್ಸನ್ನು ಮೀರಿದ್ದೆವು ನಿಜ, ಅದರೆ ಬದುಕಿನ ಯಾವ ಸುಖವನ್ನೂ ನಾನು ಕಂಡಿರಲಿಲ್ಲ.

ಅವನು ನನ್ನಲ್ಲಿ ಬಣ್ಣಬಣ್ಣದ ಕನಸು ತುಂಬಿದ. ನಾನು ಆ ವಯಸ್ಸಿನಲ್ಲಿ, ಆ ಸ್ಥಿತಿಯಲ್ಲಿ ಹದಿಹರೆಯದ ಕನಸು ಕಾಣತೊಡಗಿದೆ. ನನ್ನನ್ನು ಒಂದು ಹೆಣ್ಣು, ಒಬ್ಬ ಮನುಷ್ಯಳು, ಕನಿಷ್ಟಪಕ್ಷ ಒಂದು ಪ್ರಾಣಿ ಎಂದು ಪರಿಗಣಿಸಿದ್ದರೂ ಸಾಕಿತ್ತು. ನನಗೂ ಬದುಕಿನಲ್ಲಿ ಇವನ್ನೆಲ್ಲಾ ಅನುಭವಿಸುವ ಹಕ್ಕಿತ್ತು ಅಲ್ಲವಾ. ಮಕ್ಕಳ ಬಗ್ಗೆ ಹೆಚ್ಚು ಯೋಚಿಸಲು ಇರಲಿಲ್ಲ, ಅವರು ಅಜ್ಜ ಅಜ್ಜಿಯರ ಸುಪರ್ದಿನಲ್ಲಿ ಚೆನ್ನಾಗೆ ಬೆಳೆಯುತ್ತಿದ್ದರು. ತಾಯಿ ಎನ್ನುವವಳು ಎದುರಿಗಿದ್ದರೂ ಅವಳ ಮಮತೆ, ವಾತ್ಸಲ್ಯಕ್ಕೆ ಈಡು ಮಾಡದೆ ದೂರವಿಟ್ಟು ಬೆಳೆಸುತ್ತಿದ್ದರು ಅತ್ತೆ, ಮಾವ. ನನಗೆ ಪ್ರೀತಿಸಲೂ, ಪ್ರೀತಿಸಿಕೊಳ್ಳಲೂ ಯಾರೂ ಇರಲಿಲ್ಲ. ಮಾದೇವ ಆ ಪ್ರೀತಿಯನ್ನು ಮೊಗೆಮೊಗೆದು ಕೊಟ್ಟ. ಒಂದಿನ ನಾ ಆ ನರಕದಿಂದ ಪಾರಾಗಿ, ಮದೇವನೊಟ್ಟಿಗೆ ಓಡಿ ಬಂದುಬಿಟ್ಟೆ. ಯಾವುದು ಸರಿ ಯಾವುದು ತಪ್ಪು ಎಂದು ಗೊತ್ತಿರಲಿಲ್ಲ ಅಂದರೆ ತಪ್ಪಾಗುತ್ತದೆ, ನನಗದು ಬೇಕಿರಲಿಲ್ಲ. ಹಾಗಾದರೆ ನನ್ನ ಜೀವನದಲ್ಲಿ ನಡೆದಿರುವುದೆಲ್ಲ ಸರಿಯಾ? ಮನುಷ್ಯನಿಗೆ ಸರಿ ಮಾಡಲು ಎಷ್ಟು ಹಕ್ಕಿರುತ್ತದೋ, ತಪ್ಪು ಮಾಡಲೂ ಅಷ್ಟೇ ಅಧಿಕಾರವಿರುತ್ತದೆ. ಹೊರಹಾಕಲು ಒಂದೂರಾದರೆ, ಒಳಗೊಳ್ಳಲು ಒಂದೂರು. ಅಷ್ಟಾದ ಮೇಲೂ ನಾವೆಲ್ಲ ಮನುಷ್ಯರೇ. ಶಿವಾಜಿ ವಡೆಯರೂ ಮನುಷ್ಯರೇ. ಇಲ್ಲದಿದ್ದರೆ ನಾವು ನಿರ್ಗತಿಕರಾಗಿ ಬಂದು ನಿಂತಾಗ, ಆಶ್ರಯ ಕೊಡುತ್ತಿರಲಿಲ್ಲ. ಭಿಕ್ಷೆಯಲ್ಲ ನಾವು ಬೇಡಿದ್ದು, ಕೆಲಸ. ಅವರು ಕೊಟ್ಟರು, ನಾವು ಬದುಕಿಕೊಂಡೆವು. ಹದಿನೈದು ವರ್ಷಗಳಾಯಿತು, ನಾವಿಬ್ಬರೂ ಸಂಸಾರ ಹೂಡಿ. ನಂಬಿ ಬಂದವಳನ್ನು, ಅವನೂ ಕೈ ಬಿಡಲಿಲ್ಲ.

ಇತ್ತಿತ್ತಲಾಗಿ ಅವಳಿಗೆ ಕುಳಿತಲ್ಲೆಲ್ಲಾ ತನ್ನ ಗತ ಜೀವನ ಕಣ್ಣ ಮುಂದೆ ಬಂದು ಕಾಡುತ್ತದೆ. ಯಾರ ಜೀವನವೂ ಯೋಜಿತವಲ್ಲ. ಯಾರಾದರೂ ತಮ್ಮ ಜೀವನ ಹಾಳಾಗಲಿ ಅಂತಲೋ ಅಥವಾ ತಾನು ಹಾಳಾಗಬೇಕು ಅಂತಲೋ ಕೇಳಿಕೊಳ್ಳುತ್ತಾರಾ?

ಮಾದೇವ ನನ್ನ ಕೈ ಹಿಡಿದು ಕೊತ್ತನೂರಿಗೆ ಹೋದಾಗ, ಅಲ್ಲಿನ ಪರಿಸ್ಥಿತಿ ನೋಡಿ, ಬೆಂಕಿಗಿಂತ ಬಾಣಲೆಯೇ ವಾಸಿಯಿತ್ತಲ್ಲವಾ ಎನಿಸಿಹೋಗಿತ್ತು. ಅದು ವಯಸ್ಸಾದ ತಂದೆ, ತಾಯಿ, ಮಡದಿ, ಮಕ್ಕಳಿದ್ದ ತುಂಬು ಕುಟುಂಬ, ಈ ಜೇನಿನ ಗೂಡಿಗೆ ಕಲ್ಲು ಹೊಡೆದುಬಿಟ್ಟೆನಾ! ನಡುಗಿ ಹೋಗಿದ್ದೆ. ಲಕ್ಷ್ಮಿ ಗುದ್ದಾಡಿದಳು, ಹಾದಿಬೀದಿ ರಂಪ ಮಾಡಿದಳು, ಯಾವಾಗ ನನ್ನ ಸೀರೆ, ಪೋಲ್ಕ ಜಗ್ಗಾಡಿ ನನ್ನ ಮೇಲೆ ಕೈ ಎತ್ತಿದಳೋ, ಮಾದೇವ ಕಡ್ಡಿ ತುಂಡು ಮಾಡಿಬಿಟ್ಟ. “ನಿಂಗೆಂತದ್ದೇ ಮಾರಾತಿ ನಾ ಕಮ್ಮಿ ಮಾಡಿರಾದು, ತ್ವಾಟ, ಗದ್ದೆ, ಮನೆ, ವಡವೆ, ವಸ್ತ್ರ, ಯವ್ದ್ರಗಾರೂ ಪಾಲು ಕೇಳಕತ್ತಾಳೇನು…. ಆದ್ರ ಅವ್ಳೂ ನಿನ ಹಂಗ ಹೆಣ್ಣು, ಯಾವ್ದೋ ಗಳಿಗೆಲಿ ಇಬ್ರು ಈ ನಿರ್ಧಾರ ಮಾಡೇವಿ, ಈಗ ನಿ ವಲ್ಲೆ ಅಂದ್ರೆ ಅವ್ಳುನ್ನ ಒಯ್ದು ಹೊಳ್ಳಿ ಬಿಟ್ ಬರಾಕಕತೇನು, ಹೌದಂದ್ರೆ ಹೇಳು” ಅಂತ ನನ್ ಬೆನ್ನಿಗ್ ನಿಂತ ಮಾದೇವ. ಇನ್ನು ಇದು ಹೊಂದೂದಿಲ್ಲ ಅಂತ ನನ್ನನ್ನು ಹೊರಡಿಸಿಕೊಂಡು ಎದ್ದುಬಿಟ್ಟ. ಅವ್ಳದ್ದು ತಪ್ಪು ಅಂತ ನನಗೂ ಹೇಳಲು ಮನಸು ಬರಲಿಲ್ಲ. ಯಾವ ಹೆಂಡ್ತಿ ತಾನೆ ಗಂಡುನ್ನ ಹಂಚ್ಕೊಳಾಕೆ ತಯಾರಿರ್ತಾಳೆ! ಅರ್ಧ ಆಸ್ತಿ ಕೇಳಿದ್ರೂ ಕೊಟ್ ಬಿಡೋಳೋ ಏನೋ. ನಾನು ಅವಳ ಗಂಡನ್ ಹಂಚ್ಕೊಳಾಕೆ ಬಂದುಬಿಟ್ಟಿದ್ದೆ. ಒಂದು ಕ್ಷಣ ಅವಳಿಗೆ ಸೇರಿದ್ದನ್ನ ಅವಳಿಗೇ ಕೊಟ್ಟು ಹೊಳ್ಳಿಬಿಡಬೇಕೆನಿಸಿದರೂ, ಪಾದಗಳು ಸಹಕರಿಸಲಿಲ್ಲ. ಮನಸು ಬರಿದಾಗಿತ್ತು. ಇನ್ನು ತನ್ನ ಪಾಡು ಇಷ್ಟೆಯಾ? ಇದು ಇನ್ನೂ ಎಲ್ಲಿಗ್ ಹೋಗಿ ಮುಟ್ಟುತತಿ? ಎನ್ನುವುದು ಅಯೋಮಯವಾಗಿ ಕಂಡಿತ್ತು. ತೊರೆದು ಬಂದ ದಾರಿಗೆ, ಕತ್ತು ಮುಳುಗುವ ಹಳ್ಳ ಅಡ್ಡ ಬಿದ್ದಿತ್ತು, ಮುಂದೆ ಹಿಡಿದು ಹೋಗಬೇಕಾದ ಹಾದಿ, ಇರುಳಲ್ಲಿ ಮೋಡ ಕವಿದಂತೆ, ಸೆರಗಿನೊಳಗೆ ಹಗಲ ಮುಚ್ಚಿ ನಿಂತಿತ್ತು. ಮಾದೇವನೂ ತಲೆ ಮೇಲೆ ಕೈ ಹೊತ್ತು ಕೂತುಬಿಟ್ಟಿದ್ದ. ಯಾರಿಗೂ ತೀರ್ಮಾನ ತೆಗೆಯುವ ಧೈರ್ಯವಿರಲಿಲ್ಲ.

“ನಡಿ ಸಾಕು, ಇದು ಏನಂತ ಒಂದ್ ತೀರ್ಮಾನ ಆಗದಿಲ್ಲ, ಇನ್ನು ಮಾಡದೇನೈತಿ, ಹೋಗೋನ್ ನಡಿ” ಅಂತ ಜಬ್ಬರಿಸಿ ಹಿಡಿಯಾಗಿ ಮುದುರಿಕೊಂಡು ಕುಳಿತಿದ್ದ ನನ್ನನ್ನು ಏಳಿಸಿದ. ಆಗ ಊಹಿಸಲಾರದ್ದೊಂದು ಘಟನೆ ನಡೆದುಹೋಯಿತು.

ಮದೇವನ ಹಿರಿಮಗ ಮಂಜ, “ಅಪ್ಪ ನಿಲ್ಲು” ಅಂದ. ಬೆಳಗಿಂದಾ ಆದ ರಂಪಾಟಕ್ಕೇ ಮನಸ್ಸು ನರಳಿ ಹಿಪ್ಪೆಯಾಗಿಹೋಗಿತ್ತು, ಈಗ ಮಗನದ್ದೇನು, ಅಂತ ದಿಗಿಲಾಗಿಬಿಟ್ಟಿತು. ನೀರಿಗಿಳಿದಮೇಲೆ…… ಎಂಥದ್ದೇ ಬಂದರೂ ವಿಧಿಯಿರಲಿಲ್ಲ, ಒಡ್ಡಿಕೊಳ್ಳಲೇಬೇಕಿತ್ತು. “ಅಮ್ಮ… ಯಾಕಿಷ್ಟು ಹಟ ಮಾಡ್ತಿದಿ, ಈಗ ಅಪ್ಪ ನಿರ್ಧಾರ ಮಾಡ್ಕಂಡ ಬಂದಾರ, ಅಷ್ಟಕ್ಕೂ ಆಗೋದಲ್ಲ ಆಗೇ ಹೋಗ್ಗೆತಿ, ಇನ್ನು ತಪ್ಸೋಕೇನೈತಿ. ನಿ ಸುಮ್ನ ಹಟ ಮಾಡಿದ್ರ ಅಪ್ಪುನ್ನ ಕಳ್ಕಬೇಕಾಗ್ತತಿ, ಅಷ್ಟಕ್ಕು ಚಿಕ್ಕವ್ವನಾದ್ರೂ ಎಲ್ಲಿಗಂತ ಹೋಗ್ತಾಳ ನೀನ ಹೇಳು, ಅಪ್ಪ ಹೇಳೋದ್ರಾಗೂ ಸತ್ಯ ಐತಿ, ನೋಡು ಯೋಚ್ನೆ ಮಾಡು” ಅಂದ. ವಯಸ್ಸು ಇಪ್ಪತ್ತಿದ್ದಾವು. ಆದ್ರೆ ಆ ಕ್ಷಣಕ್ಕೆ ನನ್ನ ಉಳಿಸೋಕಂತ, ಶ್ರೀಕೃಷ್ಣನೇ ಬಂದನೇನೋ ಅನ್ನುವ ಹಾಗೆ ಮಧ್ಯೆ ಬಂದು, ಪರಿಸ್ಥಿತಿಯನ್ನು ಅಷ್ಟರಮಟ್ಟಿಗಾದರೂ ಅರ್ಥಮಾಡಿಕೊಂಡು, ಮಾತನಾಡಿದ್ದ. ಅದೆಲ್ಲಕ್ಕಿಂತ, ಅವನು ಮಾತನಾಡುವಾಗ ಚಿಕ್ಕಮ್ಮನೆಂಬ ಪದ ಬಳಸಿದ್ದು ನನ್ನ ಮನಸ್ಸಿಗೆಷ್ಟೋ ಸಮಾಧಾನವಾಗಿತ್ತು. ಮಾದೇವನ ಮುದಿ ಅಪ್ಪ, ಅವ್ವನೂ “ಏ ಹಿಂಗ್ಯಾಕ್ ಹಟ ಮಾಡ್ತಿದೀಯವ್ವ, ಅವ್ನು ತಿರುಗ್ ನೋಡ್ದಂಗ್ ಹೊಂಟೋದ್ರೆ ಏನ್ಮಾಡ್ತಿ, ಗಂಡನ್ ಬಿಟ್ಟು ಬದುಕ್ತಿಯೇನು? ಅವ ಏನು ಗಂಡ್ಸು…. ಒಂದಲ್ಲುದ್ರೆ ಹತ್ತು ಆಗ್ತಾನ, ಆದ್ರ ಹೆಂಗ್ಸಿನ್ ಕತಿ ಹೇಳು, ಸುಮ್ನ… ಮಂಜ ಹೇಳ್ದಂಗ್ ಕೇಳವ್ವ” ಅಂತ ಮಗನ ವಕಾಲತ್ತು ವಹಿಸಿದರು.

ಮತ್ತೊಂದು ಹೆಣ್ಣಿನ ವಿರುದ್ಧವಾಗಿ ನಡೆಯುತ್ತಿರುವ ಈ ವ್ಯವಸ್ಥಿತ ಸಂಚು ಶುರುವಾದದ್ದು ಮಾತ್ರ ನನ್ನಿಂದ ಅನ್ನುವುದು ಗೊತ್ತಿದ್ದು, ಅಸಹಾಯಕಳಾಗಿ, ಅವರೆಲ್ಲರ ತೀರ್ಮಾನದ ಮೇಲೆ ನನ್ನ ಭವಿಷ್ಯವನ್ನಿಟ್ಟು ತೇಲುವ, ಮುಳುಗುವ ದಾರಿಗಳಲ್ಲಿ ನನ್ನ ಪಾಲಿಗೆ ಯಾವುದು, ಯಾವುದು ಬೇಕು ಎಂದು ಧ್ಯಾನಿಸುತ್ತಾ ಕೂತೆ. ಆ ಕ್ಷಣಕ್ಕೆ ಅಷ್ಟೇ ನನ್ನಿಂದಾದದ್ದು. ಕಣ್ಣು, ಮೂಗೊರೆಸಿಕೊಳ್ಳುತ್ತ ಎದ್ದು ಬಂದ ಲಕ್ಷ್ಮಿ, “ಸರಿ ಆದ್ರೆ ಅವ್ಳುನ್ನ ಈ ಮನೆಗೆ ಮಾತ್ರ ತಂದಿಡ್ಬೇಡ” ಅಂದಳು. ಅಷ್ಟು ಮಾತ್ರದ ಉಪಕಾರವನ್ನು ನಾವವಳಿಗೆ ಧಾರಾಳವಾಗಿ ಮಾಡಬಹುದಿತ್ತು. ಮಾದೇವನ ಮುಖ ಅರಳಿತು, ಲಕ್ಷ್ಮಿಯೂ ಮೃದುವಾದಳು. ಆ ಕ್ಷಣಕ್ಕೆ, ಜಗತ್ತನ್ನೇ ಗೆದ್ದಷ್ಟು ಸಂಭ್ರಮವಾಯಿತು. ಅವಳ ಒಂದು ಸಣ್ಣ ಮುಗುಳುನಗುವಿಗೇ ಆ ಶಕ್ತಿ ಬಂದುಬಿಟ್ಟಿತ್ತು. ಬೇರೆ ಏನೆಲ್ಲ ರೀತಿಯಲ್ಲಿ ದುರಂತವಾಗಬಹುದಾಗಿತ್ತಾದರೂ, ಹಾಗಾಗದಿದ್ದುದರಲ್ಲಿ ಆ ಮನೆಯವರ ಒಳ್ಳೆಯತನವನ್ನು ಹುಡುಕಬಹುದಿತ್ತು.

“ಮಾದೇವ ನನ್ನನ್ನು ಇಲ್ಲಿ ತಂದು, ಮನೆ ಮಾಡಿ ಇಟ್ಟ. ಅವ ಒಳ್ಳೆಯ ಕೆಲಸಗಾರ. ಕಷ್ಟಪಟ್ಟು ದುಡಿದ. ಬರಿಗೈ ದಾಸರಂತೆ ಬಂದು, ಈಗ ಇಲ್ಲಿ ಐದೆಕರೆ ಗದ್ದೆ, ಒಂದೆಕರೆ ತೋಟ ಮಾಡಿಕೊಂಡೆವು, ಮನೆ ಮಾಡಿಕೊಂಡೆವು. ಮಾತುಕೊಟ್ಟಂತೆ ನನ್ನನ್ನು ಸುಖವಾಗಿ ನೋಡಿಕೊಂಡ. ಕೂದಲು ನೆರೆತಂತೆ, ನೆನಪುಗಳ ಸಂಚಿಯ ಗಂಟು ಸಡಿಲಿಸಿಕೊಂಡು, ಮಕ್ಕಳನ್ನು ಎದುರು ತಂದು ನಿಲ್ಲಿಸುತ್ತಿದ್ದವು. ಕೊನೆಗಾಲದಲ್ಲಿ ಮಕ್ಕಳೊಂದಿಗೆ ಇರಬೇಕೆಂಬ ಆಸೆ. ‘ನಾಗು ನಿಂಗೆಲ್ಲಿ ಇಷ್ಟವೋ ಅಲ್ಲಿರು. ನನ್‌ ಬಗ್ಗೆ ಯೋಚ್ನೆ ಬೇಡ, ಎಲ್ಲೊ ಬಿದ್ದು ಸಾಯ್ತೀನಿ, ನೀನು ಸಂತೋಷವಾಗಿರ್ಬೇಕು, ಮಕ್ಳು ಬೇಕಂದ್ರೆ ಅಲ್ಲೇ ಹೋಗಿರು’, ಅನ್ನುತ್ತಿದ್ದ ಮಾದೇವ. ಯಾವ ನಿರ್ಧಾರಕ್ಕೂ ಬರಲಾಗಿರಲಿಲ್ಲ. ಈ ನಡುವೆಯೇ ಮಗನ ಮದುವೆ ಗೊತ್ತಾಗಿದೆ ಎಂಬ ಸುದ್ದಿ ತಿಳಿದದ್ದು. ಕೊನೆ ಪಕ್ಷ ತಾಯಿ ಅಂತಲಾದ್ರೂ ಕರೀತಾರೆ ಅಂತ ಕಾಯುತ್ತಿದ್ದವಳಿಗೆ ಕರೆ ಬರಲಿಲ್ಲ. ಎದುರಿಗಿದ್ದಾಗಲೆ ಸತ್ತಿದ್ದ ನನ್ನ ಅಸ್ತಿತ್ವಕ್ಕೆ, ಈಗ ಜೀವ ಬರುವ ನಂಬಿಕೆಯೂ ಸಾಯುತ್ತಿತ್ತು. ಮುಂದೆ ಓಡುತ್ತಿದ್ದ ಬಂಡಿಯ ಚಕ್ರ ಕೀಲು ಕಳೆದುಕೊಂಡಿತ್ತು………..”

“ನಾಗು…. ಯಾಕೆ ಇನ್ನು ದೀಪ ಹಚ್ಚದೆ ಹಾಗೆ ಕುಳಿತಿದ್ದೀ? ನಡಿ ಒಳಗೆ, ಕಾಫಿ ಮಾಡು” ಎಂದು ಎಬ್ಬಿಸಿದಾಗ ಹಾಳು ಚಿಂತೆಯಿಂದ ಎಚ್ಚೆತ್ತಳು ನಾಗು. ಮಗಳ ಮದುವೆಗೆ ಇನ್ನು ಕೆಲವೇ ಕೆಲವು ದಿನ, ಈ ಬಾರಿ ಹೋದರೆ ಅಲ್ಲೆ ಅವಳೊಂದಿಗೆ ಇರಬೇಕು ಅಂದುಕೊಂಡಿದ್ದಾಳೆ, ಆದರೂ ಎಂತದ್ದೋ ಅಧೀರತೆ ಕಾಡುತ್ತದೆ. ಒಲೆಯ ಮೇಲೆ ಕಾಫಿಗಿಟ್ಟಳು. “ನಾಳೆ ಕೊಡ್ತಿನಿ ಅಂದುದಾನೆ ಶಿವಾಜಣ್ಣ” ಅಂದ ಮಾದೇವ. ಒಂದು ನಕ್ಲೇಸು, ಎರಡು ಉಂಗುರ, ಕಾಲ್ಗೆಜ್ಜೆ, ಒಂದು ಜೊತೆ ಬಳೆ, ಒಂದು ಜೊತೆ ಬೆಂಡೋಲೆ ಝುಮ್ಕಿ ಮಗಳಿಗಾಗಿ ಅಂತ ಮಾಡಲು ಹಾಕಿದ್ದಳು. ಆದರೆ ಇಷ್ಟು ವರ್ಷ ಅವಳ ಸುಖಕ್ಕಾಗಿ, ಅವಳ ಹಿಂದೆ ಬಂದವನನ್ನು ಹೇಗೆ ಬಿಟ್ಟು ಹೋಗುವುದು ಎಂದು ಕೊರಗುತ್ತಿದ್ದಾಳೆ. ಕಾಫಿ ಕಾಯಿಸಿ ಕೈಗಿತ್ತಳು. ಕುಡಿದು ಮಾದೇವ ಅಲ್ಲೇ ಅಡ್ಡಾದ. ಮನೆಯ ಹೆಂಚಿಗೆ ಹಬ್ಬಿಸಿದ್ದ ದುಂಡು ಮಲ್ಲಿಗೆ ಬಳ್ಳಿ, ಹೆಂಚಿನ ಮೇಲೆ ಹಬ್ಬಿ, ಹೂ ಹಿಡಿದಿತ್ತು. ಬೆಳಗ್ಗೆ ಬಟ್ಟಲ ತುಂಬ ಮೊಗ್ಗು ಕೊಯ್ದಿಟ್ಟಿದ್ದಳು. ಅದನ್ನೀಗ ಕಟ್ಟುತ್ತಾ ಕೂತಳು. ಮನೆ ತುಂಬ ಮಲ್ಲಿಗೆಯ ಘಮ ತುಂಬಿಕೊಂಡಿತು. ತಮ್ಮ ಹದಿನೈದು ವರ್ಷದ ದಾಂಪತ್ಯವನ್ನು ಬಿಟ್ಟು ಮಕ್ಕಳಿರುವಲ್ಲಿಗೆ ಹೋಗುವುದು ಹೇಗೆ. “ಛೇ ಛೇ… ನಾಗು……. ಹಾಗೆಲ್ಲ ಎಂತೆಂತದ್ದೋ ಮಾತಾಡ್ಬೇಡ, ನಿ ಹೊರಟು ಹೋದೆ ಎಂದ ಮಾತ್ರಕ್ಕೆ ಕಡಿದು ಹೋಗುವ ಸಂಬಂಧವೇನೆ ನಮ್ಮದು?” ಎಂದು ಸಂತೈಸುತ್ತಿದ್ದ ಮಾದೇವ.

ಮಾದೇವನ ಹಿರೀ ಮಗ ಮಂಜ ಮದುವೆ ಮುಂಜಿ ಅಂತ ಸಸೂತ್ರ ಆಗಿ ನೆಲೆ ನಿಂತಿದ್ದ. ಹೋದ ಅಷ್ಟಮಿಗೆ ಹೋದಾಗ ಭಾಳ ಒತ್ತಾಯ ಮಾಡಿ, “ಇಲ್ಲೇ ಇರ್ರೀ….. ಚಿಕ್ಕಿ, ನೀವೊಬ್ರೆ ಸುಮ್ನೆ ಅಲ್ಲೆಂತಕ್ ಇರಾದು” ಅಂತ ಅಂದಿದ್ದ. ಆದ್ರೆ ಲಕ್ಷ್ಮಿಯ ಅದೊಂದು ಮಾತನ್ನು, ಶಾಸನದಂತೆ ಪಾಲಿಸಲು ನಿಂತಿದ್ದಳು ನಾಗು. ಅವಳ ಮಮತೆ ವಾತ್ಸಲ್ಯಕ್ಕೆ ಉಣಿಸುವ ಹಂಬಲವಿತ್ತು, ಮಾದೇವನ ಮಕ್ಕಳು ಅವಳಿಗೆ ಮಕ್ಕಳಾದರು, ಮಾದೇವನ ಮಗಳು ಉಮಾದೇವಿಯ ಬಸಿರು ಬಾಣ್ತನಗಳು, ಇವಳ ಮನೆಯಲ್ಲಿಯೇ ನಡೆದವು. ಗರ್ಭಕೋಶದ ಕ್ಯಾನ್ಸರ್ ಅಂತ ಆಪ್ರೇಶನ್ ಆಗಿ, ಗರ್ಭಕೋಶ ಕಳೆದುಕೊಂಡು ಹೋಳಾಗಿದ್ದ ಲಕ್ಷ್ಮಿಗೆ, ನಾಗು, ಅವಳ ಪಾಲಿನ ಕರ್ತವ್ಯ ನಿಭಾಯಿಸಲು ನೆರವಿಗೆ ಬಂದುದರಿಂದ, ಇಬ್ಬರ ನಡುವಿನ ಕಂದಕಕ್ಕೆ ಮಣ್ಣು ಬಿದ್ದಂತಾಗಿತ್ತು. ಇಲ್ಲಿ ಇಷ್ಟು ವರ್ಷ ಸವೆಸುವ ಹೊತ್ತಿಗೆ ಕನಿಷ್ಟ ಮಾದೇವನ ಮನೆಯಲ್ಲಿ ಹಬ್ಬ ಹರಿದಿನ ಅಂತೇಳಿ ನಾಲ್ಕು ದಿನ ಇಳ್ಕೊಳೋವಷ್ಟು ಪರಿಸ್ಥಿತಿ ಸುಧಾರಿಸಿದೆ. ಅವಳಲ್ಲಿಗೆ ಹೋದಾಗ, ಮೀನು ಮಾಂಸ ಅಂತ ಒಳಮನೆಯೊಳಕ್ಕೂ ತರದೆ ಅವಳನ್ನು, ಹೇಸಿಗೆ ಮುಜುಗರದಿಂದ ಕಾಪಾಡುವಷ್ಟು ಕಾಳಜಿಯನ್ನು ಲಕ್ಷ್ಮಿ ತೆಗೆದುಕೊಳ್ಳುವಂತಾಗಿದ್ದಾಳೆ. ಉಮಾದೇವಿ ಸ್ವಂತ ಮಗಳೇ ಆಗಿಹೋಗಿದ್ದಾಳೆ. ಆದ್ರೂ ಕಳ್ಳು ಸಂಬಂಧ ಅಂತ ಒಂದಿರ್ತದಲ್ಲ… ಮುಟ್ಟು ನಿಂತಲ್ಲಿಂದ ಮಗು ಅನ್ನೊ ಹೊಸ ಜೀವ ಮೊದಲು ಮಿಸುಗಿದ್ದು, ಮಗ್ಗುಲು ತಿರುವಿದ್ದು, ಝಾಡಿಸಿ ಒದ್ದದ್ದು ಅಂತ ಹುಟ್ಟಿ ಭೂಮಿಗೆ ಬರಲ್ಲಿವರೆಗೂ ಏನೆಲ್ಲ ನೆನಪುಗಳು, ಚಾಚಿಕೊಳ್ಳುತ್ತವೆ. ರಕ್ತ ಸಿಕ್ತ ಮಗುವನ್ನ ಮೊದಲ ಬಾರಿಗೆ ಎದೆಗವಚಿಕೊಂಡ ಕ್ಷಣ, ಅದು ಸ್ಫುರಿಸಿದ ನಗಾರಿ-ನಾಗಾಲೋಟ ಹೇಳಿ ಮುಗಿಸಲು ಒಂದು ಯುಗ, ಒಂದು ಭಾಷೆ ಸಾಕಾಗದಿಲ್ಲ. ಆ ಮೋಹವೇ ಸಮಾಧಿಯವರೆವಿಗೂ ನಡೆಸುವುದು.

ಕುಂತಿಗೆ ಸೂರ್ಯದೇವ ಕರ್ಣನನ್ನು ಅನುಗ್ರಹಿಸಿದಂತೆ ಪರಮೇಶನ ಅನುಗ್ರಹವಾಗಿತ್ತು ಅವಳು ಹೆತ್ತ ಮೂರು ಮಕ್ಕಳಿಗೆ. ಗಂಡನ ಸಾಮಿಪ್ಯ, ಅನುಭೂತಿ, ಅನುಬಂಧದ ಹೊರತಾಗಿ ಅವಳು ಅವುಗಳನ್ನು ಹಡೆದಿದ್ದಳು. ಆದರೆ ತಾಯ್ತನವಂತೂ ಸುಳ್ಳಲ್ಲ! ಅವಳ ಎದೆ ಈಗಲೂ ಜಿನುಗುತ್ತದೆ ಮಕ್ಕಳಿಗಾಗಿ. ದುರ್ಬಲವಾಗುತ್ತಿರುವ ದೇಹದಲ್ಲಿ ಮನಸ್ಸೂ ಜರ್ಜರಿತಗೊಳ್ಳುತ್ತಾ ಎಂದಿಗಾಗುತ್ತದೋ ಕೊನೆ, ಒಮ್ಮೆ ತನ್ನ ಮಕ್ಕಳನ್ನು ಕಾಣಬೇಕು, ಅವುಗಳ ಆಸರೆಯಲ್ಲಿ ಪ್ರಾಣಬಿಡಬೇಕು ಎಂದು ಹಲುಬುತ್ತಾಳೆ. ಅವರ ಬಗ್ಗೆ ಆಸೆಯೆಷ್ಟೋ, ಭಯವೂ ಅಷ್ಟೇ ಇದೆ.

ಈಗ್ಗೆ ಹತ್ತು ವರ್ಷದ ಕೆಳಗೆ, ಬೈಲು ಬಸಪ್ಪನ ಜಾತ್ರೆಯಲ್ಲಿ ಹಣ್ಣು ಕಾಯಿ ಮಾಡಿಸಿಕೊಂಡು, ತಿರುಗಿ ಬರುವಾಗ ತೇರಿನ ಮುಂದೆಯೇ, ಮೂರು ಮಕ್ಕಳೊಂದಿಗೆ ಅತ್ತೆ, ಮಾವಯ್ಯ ಎದುರಾಗಿದ್ದರು. “ಅವಳೇ ನಿಮ್ಮವ್ವ” ಎಂದು ಅತ್ತೆಮ್ಮ ಅನ್ನೂತ್ಲೆ ಅಲ್ಲೇ ಇದ್ದ ಬೆಣಚು ಕಲ್ಲನ್ನು ಎತ್ತಿ ಅವಳತ್ತ ಬೀಸಿಬಿಟ್ಟಿದ್ದ ಮಗ. ಅವಳಲ್ಲೇ ಕುಸಿದು ಬಿದ್ದಿದ್ದಳು. ಹಣೆ ಒಡೆದು ರಕ್ತ ಸೋರುತ್ತಿತ್ತು. ಅಲ್ಲೆ ಜನಜಾತ್ರೆ ನಡುವೆ ಮುಲುಗುತ್ತಿದ್ದ ಅವಳನ್ನು ಹಾದು ಹೋಗುವಾಗ, ಅವರು ತುಪ್ಪಿ ಹೋದ ಎಂಜಲು ನೊರೆ ಗುಳ್ಳೆಗಳು, ಠಪ್ ಠಪ್ ಎಂದು ಒಡೆಯುತ್ತಿರುವುದನ್ನೇ ಅದೆಷ್ಟೋ ಹೊತ್ತು ನೋಡುತ್ತಾ ಗರಬಡಿದವಳಂತೆ ಕುಳಿತುಬಿಟ್ಟಿದ್ದಳು.

ಮದುವೆಯ ದಿನ ಕೊನೆಗೂ ಬಂತು. ರತ್ನಿ…. ತನ್ನ ಚಂದನದ ಗೊಂಬಿ ಮದುಮಗಳಾಗೋ ದಿನ ಬಂದೇ ಬಿಟ್ಟಿತು. ಕಾಲಾನ ಹಿಡಿದಿಡೋಕಾಗ್ತದೇನು, ಮಗಳು ತನ್ನುದ್ದಕ್ಕೂ ಬೆಳೆದು, ಇನ್ನೊಂದು ಮನೆ ಬೆಳಗೋಕೆ ಹೋಗೋದನ್ನು ತಪ್ಸೋಕಾಗ್ತದೇನು. ಅದೆಲ್ಲ ಒಂದು ಬೇಕಾಗಿರೋ ನಿಯಮದ ರೀತಿ ಹೊತ್ತು ನಡೀತೀವಲ್ಲ, ಆದರೂ ಈ ಬದುಕು ನಮ್ಮ ನಿಯತ್ತಿಗೆ ತಕ್ಕ ಹಾಗೇ ಏನು ಕೊಟ್ಟಿದೆ ಅಂತ ಕೇಳಿಕೊಳ್ಳುವಾಗ, ಮತ್ತೆ ಕಣ್ಣು ತುಂಬಿಕೊಳ್ತದೆ ಅಷ್ಟೇ. ಮಾದೇವ ಅವಳೊಂದಿಗೆ ಹೋಗುವಂತಿರಲಿಲ್ಲ, ಅವನು ಆ ಸಂಸಾರದಲ್ಲಿ ಏನೆಂದು ತಾನೇ ಗುರುತಿಸಿಕೊಳ್ಳಬಹುದಿತ್ತು. ತಾನೇ ಖುದ್ದಾಗಿ ಹೋಗಿ ಅವಳನ್ನು ಊರು ಮುಟ್ಟಿಸಿದ. ನಾಗು ಇರಲಾರದೆ, ಹೋಗಲಾಗದೆ ಒದ್ದಾಡಿದಳು. ಬಸ್ಸು ಬಂದು ಊರ ಮುಂದೆ ನಿಂತಿತು. ಹದಿನೈದು ವರ್ಷಗಳಲ್ಲಿ ಊರು ಬಹಳ ಬದಲಾಗಿದೆ, ಪರಿಚಯದ ಮುಖಗಳೊಂದೂ ಕಾಣುತ್ತಿಲ್ಲ, ನಿಧಾನವಾಗಿ ತನ್ನ ಮನೆಯ ಹುಡುಕಿಕೊಂಡು ಹೊರಟಳು. ದೂರದಿಂದ ಮನೆ ಕಾಣಿಸಿತು. ಮನೆಯೂ ತುಂಬಾ ಬದಲಾಗಿದೆ, ಮನೆಯ ಮುಂದೆ ಚಪ್ಪರ… ಒಳಗೆ ಹೋದಳು ನಾಗು. ಯಾರೂ ಮಾತಾಡಿಸಲಿಲ್ಲ, ಬಾಗಿಲಲ್ಲೆ ನಿಂತಳು, ಯಾರೋ ಹೋಗಿ ಮಗಳಿಗೆ, “ನಿಮ್ಮವ್ವ ಬಂದಾಳೆ ನೋಡೆ” ಅಂದು ನಕ್ಕಂತಾಯಿತು. ಮಗಳು ಹೊರಗೆ ತಲೆ ಹಾಕಿ ಹಣುಕಲಿಲ್ಲ. ಮರಳಿ ಹೋಗಿಬಿಡಲಾ ಅನ್ನಿಸಿತು, ತಿರುಗುವವಳಿದ್ದಳು, ಹುಡುಗಿಯೊಬ್ಬಳು ಬಂದು, “ಬಾ ಒಳಗೆ ಅಂದಳು”. ತನ್ನನ್ನೇ ಹೋಲುತ್ತಿದ್ದ ಮೂಗು ಮುಖ ನೋಡಿ ಮಗಳೇ ಇರಬೇಕು ಅಂದುಕೊಂಡಳು. ಹುಡುಗಿ ಅಮ್ಮ ಎನ್ನಲಿಲ್ಲ. ನಾಗು ಒಳಗೆ ಬಂದಳು. ಯಾರೊಬ್ಬರೂ ‘ನೀನಾ’ ಎಂದು ಕೇಳಲಿಲ್ಲ. ನೀರು ಬೇಕಾ? ಕೈ ಕಾಲು ತೊಳಿ ಅನ್ನಲಿಲ್ಲ, ನಾಗು ಅಲ್ಲೆ ಮೂಲೆಯಲ್ಲಿ ಮುದುರಿ ಕುಳಿತಳು.

ಇವಳನ್ನು ಗಮನಿಸಿಯೂ ಗಮನಿಸದಂತೆ ಎಲ್ಲರೂ ಕೆಲಸದಲ್ಲಿ ಸುಳ್ಳೇ ತಲ್ಲೀನತೆ ನಟಿಸುತ್ತಿದ್ದರು. ಒಳಗಿಂದ ಬಂದ ಅತ್ತೆ “ಥೂ ದರಿದ್ರ ಇಲ್ಯಾಕೆ ಕುಂತಿದೀಯಾ? ಬ್ಯಾಡ್ರವ್ನಿಂದೆ ಓದೋಳು, ಒಳಮನ್ಯಾಕೆ ಬಂದೀಯೇನೆ, ನಡಿ ಹೊರಗೆ ಮೊದ್ಲು, ಅಲ್ಲೆ ಎಲ್ಲಾರ ಕೂರು” ಎಂದು ನಾಯಿಯನ್ನಟ್ಟುವ ಹಾಗೆ ಅಟ್ಟಿದಳು. ನಾಗುವಿಗೆ ಕಣ್ಣು ತುಂಬಿ, ಕೊರಳುಬ್ಬಿ ಬಂತು, ಬಾಯಿಗೆ ಸೆರಗು ಒತ್ತಿ, ಅಂಗಳಕ್ಕೆ ಬಂದಳು. ಉಮ್ಮಳಿಸುತ್ತಿದ್ದ ಅಳುವನ್ನು ಚಪ್ಪರದಡಿ ಸೋರದಂತೆ, ತಡೆದುಕೊಂಡಳು. ಮೂಲೆಯೊಂದರಲ್ಲಿ ಅಸ್ಪೃಷ್ಯಳಂತೆ ಕೂತಳು. ಶಾಮಿಯಾನಾ, ಸ್ಪೀಕರ್‌ಗಳನ್ನು ಹೊತ್ತು ಬಂದ ಟಿಂಪೊ, ದೂಳೆಬ್ಬಿಸುತ್ತ ಪೀಪಿ ಊದಿಕೊಂಡು ಬಂದು ಮನೆಯ ಮುಂದೆ ಬಂದು ನಿಂತಿತು. ಟೆಂಪೋ ಇಳಿದು ಜಗಲಿಗೆ ಬಂದ ಹುಡುಗನನ್ನು ಯಾರೆಂದು ನೋಡಿದಳು. ಗುರುತು ಹತ್ತಲು ಕಷ್ಟವಾಯಿತು. ಅರೆ… ನನ್ನ ಮಗ ಅನ್ನಿಸಿ, ದುಃಖದಿಂದ ಕಿವುಚಿಹೋದ ತುಟಿಗಳ ಮೇಲೊಂದು ಮೆಲುವಾದ ನಗೆಯನ್ನು ತರಿಸಿಕೊಂಡಳು. ಅವನ ದೃಷ್ಟಿ, ಅವಳನ್ನು ತಗುಲಿ ಕೆಂಡವಾಯಿತು. “ಥೂ ಬೋಸುಡಿ, ಕತ್ತೆಸೂಳೆ ನೀ ಯಾಕೆ ಇಲ್ಲಿಗ್ ಬಂದಿದ್ದು, ಇಲ್ಯಾರ್ ಮನೆ ಹಾಳ್ಮಾಡ್ಬೇಕು ಅಂತ ಬಂದಿದೀಯಾ” ಅಂತ ಬಂದವನೇ ಹೆತ್ತ ತಾಯಿಯೆಂದೂ ನೋಡದೆ ಹೊಡೆಯತೊಡಗಿದ. ನಾಗು ತತ್ತರಿಸಿ ಹೋದಳು.

ಎಲ್ಲರೂ ತಮಾಷೆ ನೋಡುತ್ತಿದ್ದರೇ ವಿನಾ ಬಿಡಿಸಿಕೊಳ್ಳಲು ಬರಲಿಲ್ಲ. ಅಲ್ಲಿಗೆ ಮತ್ತೊಬ್ಬ ಮಗನೂ ಬಂದು ಅಣ್ಣನನ್ನು ಕೂಡಿ, ಅವಾಚ್ಯ ಶಬ್ದಗಳಿಂದ ಬಯ್ಯತೊಡಗಿದ. ಎಷ್ಟೊಂದು ಬೆಳೆದುಬಿಟ್ಟಿದ್ದಾರೆ ಮಕ್ಕಳು! ಥಳಿತ ತಾಳಲಾರದೆ ಕಿರುಚುತ್ತಿದ್ದಳು ನಾಗು. ಮಗಳಾದರೂ ಚೂರು ಕರುಣೆಯಿಟ್ಟು ಬಿಡಿಸಿಕೊಳ್ಳಬಹುದೆಂದು ಬಾಗಿಲ ಕಡೆ ನೋಡಿದಳು. ಕಾಲಲ್ಲಿ ಒದ್ದರು, ಕೂದಲಿಡಿದು ಗೋಡೆಗೆ ಅಪ್ಪಳಿಸಿದರು. ಕೊನೆಗೆ ಅಲ್ಲಿಗೆ ಬಂದ ಮಗಳು “ಅಣ್ಣಯ್ಯ ಸಾಕ್‌ಬಿಡ್ರಿ ಹೊಡ್ದಿದ್ದು, ಮತ್ ಸತ್‌ಗಿತ್ತು ಹೋದೀತು, ಇದ್ರ್ ಹೆಣ ಏನಾರು ಬಿದ್ರೆ ನಮ್ಮನಿಯೇ ಮೈಲ್ಗೆ ಆಗಾದು, ಇಷ್ಟತ್ತೂ, ನೀವ್ ಬರ್ಲೀ ಅಂತಾನೇ ಇದುನ್ ಇಲ್ಲಿ ಇಟ್ಕಂಡಿದ್ದು. ಈ ಹೆಂಗ್ಸನ್ನ ಇಲ್ಲಿಗ್ ಕರ್ದಿದ್ದು, ಬರೀ ಹೊಡಿಯಾಕಲ್ಲ, ಇವಳು ಬಿಟ್ಟು ಹೋಗಿದ್ದುಕ್ಕೆ ನಮ್ಗೇನೂ ನಷ್ಟವಾಗಿಲ್ಲ, ಇನ್ನೂ ಸುಖ್ವಾಗಿದೀವಿ ಅಂತ ತೋರ್ಸಾಕೆ. ಮೊದಲು ಇಲ್ಲಿಂದ ತೊಲಗ್ಲಿ, ಕತ್ತಿಡಿದು ಹೊರಗ್ ದಬ್ಬಿ” ಅಂದಳು.

ಅಸ್ತವ್ಯಸ್ತವಾಗಿದ್ದ ಬಟ್ಟೆಯನ್ನು ಸರಿಮಾಡಿಕೊಳ್ಳುತ್ತಾ, ಸರ್ರನೆ ಎದ್ದು ನಿಂತಳು ನಾಗು. ಈ ಗಲಾಟೆಯಲ್ಲಿ ಪೋಲ್ಕದೊಳಗಿದ್ದ ವಡವೆಯ ಪರ್ಸು ಕೆಳಗೆ ಬಿತ್ತು. ಏನೆಂದು ನೋಡಲು ಬಂದ ಮಗಳಿಂದ ಪರ್ಸನ್ನು ಕಿತ್ತುಕೊಂಡ ನಾಗು, “ಛೀ ಮುಟ್ಬೇಡ……. ನಾಯಿ, ಇದು ನನ್ ಮಾದೇವನ ಬೆವರು, ಅವ್ನು ಕಷ್ಟಪಟ್ಟು ಸಂಪಾದ್ಸಿದ್ದು, ಬೀದಿನಾಯಿಗೆ ಹಾಕ್ತೀನೆ ಹೊರ್ತು, ನಿಮ್ಮಂತ ಹೊಟ್ಟೆಲುಟ್ಟಿದ ಕಜ್ಜಿನಾಯಿಗಳಿಗೆ ಕೊಡಲ್ಲ” ಅಂತ ಕಿರುಚುತ್ತಾ ಚಪ್ಪರ ದಾಟಿ ಹೊರಟಳು. ಮರೆಮಾಚಿ ಹಿಂದಿನಿಂದ ಬಂದ ಮಗ, “ಎಷ್ಟಾರ ಕೊಬ್ಬೆ ನಿನಗೆ” ಎನ್ನುತ್ತಾ, ಹೊಡೆಯಲು ಮುಂದಾದ. ಇದ್ದಕ್ಕಿದ್ದಂತೆ ಯಾರೋ ಜೋರಾಗಿ ಕಿರುಚಿದಂತಾಯಿತು. ಎದುರಿಗೆ ಮಚ್ಚು ಹಿಡಿದು ನಿಂತಿದ್ದ ಮಾದೇವ ಕಾಣಿಸಿದ. ಪುಟ್ಟ ಮಗು ಆಸರೆ ಬಯಸಿ ಓಡುವಂತೆ, ಮಾದೇವನ ಬಳಿ ಓಡಿ ಹೋದಳು ನಾಗು. “ಇನ್ನೊಂದು ಹೆಜ್ಜೆ ಮುಂದಿಟ್ಟರೆ, ಎಲ್ಲರನ್ನು ಕೊಚ್ಚಿ ಹಾಕ್ಬುಡ್ತೀನಿ ಹುಷಾರ್” ಎಂದು ಘರ್ಜಿಸಿದ ಮಾದೇವ. ಎಲ್ಲರೂ ಹೆದರಿ ಹಿಂದೆ ಸರಿದು ನಿಂತರು. ನಾಗುವನ್ನು ಹಿಂದಿನಿಂದ ಬಳಸಿ ಹಿಡಿದು, ನಡೆಸಿಕೊಂಡು ಹೊರಟು ಹೋದ.

ಎಲ್ಲರೂ ಗರಬಡಿದವರಂತೆ ನೋಡುತ್ತಿದ್ದರು. ಆವೇಶದಲ್ಲಿ, ದಾರಿಯುದ್ದಕ್ಕೂ ಮನೆಯಿದ್ದ ದಿಕ್ಕಿಗೆ ಬೊಗಸೆಯಿಂದ ಮಣ್ಣೆರಚುತ್ತಾ ಹೋಗುತ್ತಿದ್ದ ನಾಗು, ಕಂಡಳು.

*****

ಕತೆ ನನ್ನೊಳಗಿನ ನನ್ನನ್ನು ಹುಡುಕುತ್ತದೆ, ಒರೆಗೆ ಹಚ್ಚುತ್ತದೆ, ತಿದ್ದಿ ತೀಡುತ್ತದೆ. ಕತೆ ತಾನು ಆಗುವುದರ ಜೊತೆಗೆ ನನ್ನನ್ನು ಸಾದ್ಯಂತ ತಡವುತ್ತದೆ. ಕ್ಷಣದ ಹೊಳಪಿನೊಳಗೆ ಸ್ಫುರಿಸಿ ಕತೆ ಶುರುವಾಗುತ್ತದಾದರೂ ಮುಂದುವರೆದು ತಾನೇ ತನ್ನ ರೂಪವನ್ನು ಕಟೆಸಿಕೊಳ್ಳುತ್ತಾ ಹೋಗುತ್ತದೆ. ಕತೆಗೆ ಬೇಕಾದ ಎಲ್ಲಾ ತಾಂತ್ರಿಕ ಪರಿಕರಗಳಿದ್ದೂ ಒಮ್ಮೊಮ್ಮೆ ಕಥೆಯೇ ನನ್ನನ್ನು ಸೋಲಿಸಿಬಿಡುತ್ತದೆ. ಇನ್ನು ಸಾಧ್ಯವೇ ಇಲ್ಲ ಎಂದು ಕೈಚೆಲ್ಲಿ ಕೂತಾಗ ಕತೆ ತಾನೇ ಕೈಹಿಡಿದು ನಡೆಸುತ್ತದೆ; ಗೆಲುವಿನ ಹಾದಿಗೆ ಕರೆದೊಯ್ಯುತ್ತದೆ. ಕಥೆಯೊಂದು ನನ್ನ ಕಲ್ಪನೆಗೂ ಮೀರಿ ಯಶಸ್ವಿಯಾದಾಗ ಆಗುವ ಆನಂದವೇ ಬೇರೆ. ಎಷ್ಟೋ ಬಾರಿ ಕತೆ ಬರೆಯಲು ನಿರ್ಧರಿಸಿದಾಗ ಕತೆ ಬೆಳೆಯುವುದೇ ಇಲ್ಲ. ಒಮ್ಮೊಮ್ಮೆ ಯಾವ ತಯಾರಿಯಿಲ್ಲದಿರುವಾಗಲೂ ಕತೆ ತಾನೇ ತಾನಾಗಿ ಸುಲಲಿತವಾಗಿ ಹುಟ್ಟಿಬಿಡುತ್ತದೆ.
ದಿನ ನಿತ್ಯ ನಾವು ನೋಡುವ ಎಷ್ಟೋ ಘಟನೆಗಳು, ವ್ಯಕ್ತಿಗಳು ನಮಗರಿವಿಲ್ಲದೇ ನಮ್ಮೊಳಗಿಳಿದು ಕತೆಯ ಮೊಟ್ಟೆಗೆ ಕಾವು ಕೊಡುತ್ತಾರೆ. ಮರಿಯಾಗಿ ಹೊರಬರಲು ತುಡಿಯುತ್ತಾರೆ. ನನ್ನ ಕತೆಗಳಲ್ಲಿ ಬಹುತೇಕ ನಾನು ಕಂಡ ಸತ್ಯ ಘಟನೆಗಳ ಆಧಾರಿತವೇ ಆಗಿವೆ. ಆದರೆ ಸತ್ಯ ಘಟನೆಯೊಂದು ಕತೆಗಾರನ ಕೈಯಲ್ಲಿ ಹೊಂದುವ ರೂಪಾಂತರವೇ ಸೋಜಿಗ. ಒಟ್ಟಾರೆ ಕತೆ ನನ್ನಿಂದ ಬೆಳೆಯಿತು ಎನ್ನುವುದು ನನ್ನ ಅಹಂಕಾರವಾದರೆ ಕತೆಯಿಂದ ನಾನು ಸಾಕಷ್ಟು ಬೆಳೆದಿದ್ದೇನೆ, ಪ್ರಬುದ್ಧಳಾಗಿದ್ದೇನೆ ಎನ್ನುವುದು ನನ್ನ ವಿನೀತ ಭಾವ. ಮತ್ತದು ಸತ್ಯವೂ ಸಹ. ವಸ್ತುವಿನ ವಿಷಯಕ್ಕೆ ಬಂದಾಗ ಮಾನವೀಯ ಸಂಬಂಧಗಳ ನೆಲೆಗಳೇ ನನ್ನನ್ನು ಹೆಚ್ಚು ಕಾಡುತ್ತವೆ. ಕತೆಯಾದ ಮೇಲಿನ ಸ್ಥಿತಿಗಿಂತ ಕತೆ ಆಗುವ ಪ್ರಕ್ರಿಯೆಯಲ್ಲಿ ನನ್ನನ್ನು ನಾನು ಒಳಗೊಳ್ಳುವುದೇ ನನಗೆ ಹೆಚ್ಚು ಇಷ್ಟ.