ಕಾದು ಕಾದು ಹಣ್ಣಾದ ಜಮೀಲಾಗೆ ಯಾಕೋ ಮಸೀದಿ ದಾರಿಯೇ ನೋಡುವಂತಾಗಿತ್ತು. ಹತ್ತು ವರುಷದ ಮಗ ಮುನೀರ ರೋಜಾ ಬಿಡಲು ಮಸೀದಿಗೆ ಹೋಗಿದ್ದ. ಇಡೀ ದಿನ ಉಪವಾಸವಿದ್ದು ನಾಲ್ಕನೆಯ ತರಗತಿ ಓದ್ತಿದ್ದ ಮುನೀರನಿಗೆ ಅಪ್ಪ ಹಸೇನ್ ಎಂದರೆ ಪಂಚಪ್ರಾಣ. ಮದುವೆಯಾದ ವರುಷಕ್ಕೇ ಝಿಕ್ರಿಯಾಸಾಬ್ ತೋಟ ಬಿಟ್ಟು ಸೈಕಲ್ ಮೇಲೆ ಐಸ್ ಮಾರ್ತಾ ಹೊಸ ಜೀವನ ಶುರು ಮಾಡಿದ್ದ ಹಸೇನ್.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಸಂತೆಬೆನ್ನೂರು ಫೈಜ್ನಟ್ರಾಜ್ ಬರೆದ ಕತೆ ‘ಅಲ್ಲಾ ದೇವರು, ಅನ್ನ ದೇವರು!’ ನಿಮ್ಮ ಈ ಭಾನುವಾರದ ಓದಿಗೆ
ಜಮೀಲಾಬಿ ಅಜಾನ್ ಆಗಿ ಸುಮಾರು ಹೊತ್ತಾದರೂ ರೋಜಾ ಬಿಡದೇ ಕಾಯುತ್ತಿದ್ದಳು. ಬೆಳಿಗ್ಗೆ ಮೂರು-ಮೂರುವರೆಗೆ ಎದ್ದು ಸಾಹುಕಾರ್ ಇಕ್ಬಾಲ್ ಸಾಹೇಬರ ಮನೆಯಲ್ಲಿ ಕಸ ಮುಸುರೆ ಮಾಡಿಬಂದು ಅವರು ಕೊಟ್ಟ ಅಳಿದುಳಿದ ಪರೋಟ ಖಿಚಡಿ ತಂದು ಹಲ್ಲುಜ್ಜಿ ಹೆಂಡತಿಗಾಗಿ ಕಾಯ್ತಾ ಇದ್ದ ಗಂಡ ಹಸೇನ್ ಪೀರಾಃ ಗಾಗಿ ಕೊಟ್ಟಾಗ ಬೆಳಗಿನ ಅಜಾನ್ ಆಗಲು ಹತ್ತು ನಿಮಿಷ ಬಾಕಿ ಇತ್ತು. ಇಬ್ಬರೂ ಗಬಗಬನೆ ಅದನ್ನೇ ಹಂಚಿ ತಿಂದು ನೀರು ಕುಡಿದಾಗ ಮಸೀದಿಯ ಮೈಕು ಅಲ್ಲಾಹು ಅಕ್ಬರ್… ಎಂಬ ಕೂಗು ಸುಮ್ಮನೆ ಕೂತ ಎತ್ತಿಗೆ ಬಾರಿಕೋಲಿನಿಂದ ಬಾರಿಸಿದಂತೆ ಕೇಳಿತ್ತು. ಹಸೇನ್ ಜಮೀಲಾಬಿ ಮುಖ ನೋಡಿದ ಅವಳಿಗೆ ಗೊತ್ತಾಯಿತು; ಗಂಡನಿಗೆ ಹೊಟ್ಟೆ ತುಂಬಿಲ್ಲಾ ಎಂದು!
ಬಡತನ ಹಾಸಿ ಹೊದ್ದಿರೋ ಅನಾಥ ಹಸೇನ್‌ಗೆ ಮದುವೆಯೇ ಬೇಕಿರಲಿಲ್ಲ. ಹೋಳಿಗೆ ಝಿಕ್ರಿಯಾಸಾಬ್ ಕುಟುಂಬದಲ್ಲಿ ಒಬ್ಬನಾಗಿ ಅವರ ಮಾವಿನತೋಟ ಕಾಯ್ತಾ, ಕಲ್ಲಂಗಡಿ ಸೀಸನ್ ಇದ್ದಾಗ ಅದನ್ನು ಮುರಿದ ಕೂಲಿಯಿಂದ ಒಂದಿಷ್ಟು ದುಡ್ಡು ಕಾಣುತ್ತಿದ್ದ. ಸುತ್ತ-ಮುತ್ತ ಮಾವು, ದಾಳಿಂಬೆ ತೋಟಗಳಾಗಲೀ, ಕಲ್ಲಂಗಡಿಯ ಹೊಲಗಳಾಗಲೀ ಹಿಡಿದರೆ ಹಸೇನ್ ಕಾಯ್ದು ಕೊಡುತ್ತಿದ್ದ. ಸಂತೆಬೆನ್ನೂರಿನ ಸಮೀಪ ದೊಡ್ಡಬ್ಬಿಗೆರೆ ಎಂಬ ಒಂದು ಚಿಕ್ಕ ಹಳ್ಳಿ. ಅಲ್ಲೊಂದು ಮಾವಿನತೋಟ ಕೇಣಿಗೆ ಹಿಡಿದಿದ್ದರು ಈ ಝಿಕ್ರಿಯಾಸಾಬ್. ಅಲ್ಲಿ ಹಸೇನ್ ಕಾಯಲೆಂದು ಹೋಗಿದ್ದ ಅಲ್ಲಿಗೆ ದಿನಾ ಕಳೆ ಕೀಳಲು ಪಕ್ಕದ ರಾಗಿ ಹೊಲಕ್ಕೆ ಹೆಣ್ಣು ಮಕ್ಕಳ ಗುಂಪು ಬರುತ್ತಿತ್ತು. ತೋಟದ ಪಕ್ಕವೇ ರಾಗಿ ಹೊಲ. ಹಸೇನ್ ಹಾಗೇ ಅಡ್ಡಾಡ್ತಾ ಅತ್ತ ಸುಳಿಯುವಾಗ ಆ ಹೆಣ್ಣುಗಳ ಬಳಿಯಿಂದ ರಾಜ್ಕುಮಾರ್ ಸಿನಿಮಾದ ಹಾಡುಗಳು ಯಾವಾಗಲೂ ಕೇಳುತ್ತಿದ್ದವು. ಹಸೇನ್ ಸಂತೆಬೆನ್ನೂರಿನ ವೆಂಕಟೇಶ್ವರ ಟಾಕೀಸಿನಲ್ಲಿ ವಾರದ ಸಂತೆ ಪ್ರತೀ ಗುರುವಾರ. ಆ ದಿನ ಹಾಕೋ ಕನ್ನಡ ಸಿನಿಮಾ ಒಂದೂ ಬಿಡದಂತೆ ನೋಡ್ತಾಯಿದ್ದ. ಟಾಕೀಸಿನ ಮಾಲೀಕರಾದ ಚನ್ನಮ್ಮ ಇವನಿಗೆ ಗಳಸ್ಯ-ಕಂಠಸ್ಯ!
ಕನ್ನಡ ಸಿನಿಮಾಗಳು ಅದರಲ್ಲೂ ರಾಜ್ ಕುಮಾರ್ ಅಂದ್ರೆ ಅದೇನೋ ಮೋಡಿ. ಮಯೂರ ಸಿನಿಮಾ ಇಪ್ಪತ್ತಕ್ಕೂ ಹೆಚ್ಚು ಬಾರಿ ನೋಡಿದ್ದ! ಅಂಥಾ ಹಾಡುಗಳನ್ನ ಹಾಡ್ತಾ ಇರೋರ್ಯಾರು ಅಂತ ವಿಚಾರಿಸಿದಾಗ ಗುಜರಿ ದಾದುಸಾಬ್ ಮಗಳು ಜಮೀಲಾ ಅಂತಾ ಗೊತ್ತಾಗಿ ಮತ್ತೂ ಅಚ್ಚರಿಯಾಯ್ತು; ಮುಸ್ಲೀಮರ ಹುಡುಗಿ ರಾಜ್ ಕುಮಾರ್ ಹಾಡು ಹಾಡುವುದೆಂದರೆ? ಯಾಕೋ ಮನಸಿಗೆ ಬಿದ್ದಂಗಾಗಿ ಝಿಕ್ರಿಯಾಸಾಬ್ ಕಿವಿಗೆ ಹಾಕಿದ. ಹುಡುಗೀನ ನೋಡದೇ ಮುಂದುವರೆಯುವ ನಿರ್ಧಾರ ಮಾಡಿಬಿಟ್ಟಿದ್ದ. ಏನೋ ಎಂತೋ ಎಂಬಂತೆ ಅವರು ದಾದುಸಾಬ್ ಬಳಿ ಪ್ರಸ್ತಾಪಿಸಿದರು. ಬರಿ ಹಾಡು ಕೇಳಿ ಮರುಳಾದ ಇವನು ಬಾಳುವೆ ಹೇಗೆ ನಡಸ್ತಾನೆ…. ಮಗಳನ್ನ ಹೇಗೆ ಸಾಕ್ತಾನೆ ಅನ್ನೋ ಧಾವಂತ ದಾದು ಸಾಹೇಬರಿಗೆ. ಝಿಕ್ರಿಯಾಸಾಬ್ ಹಸೇನನ ಬಗ್ಗೆ ಮನೆ ಮಗನೆಂಬಂತೆ ಭರವಸೆ ನೀಡಿದ ಮೇಲೆ ಮದುವೆ ಮುಗಿದು ಹೋಗಿತ್ತು.
ಕಾದು ಕಾದು ಹಣ್ಣಾದ ಜಮೀಲಾಗೆ ಯಾಕೋ ಮಸೀದಿ ದಾರಿಯೇ ನೋಡುವಂತಾಗಿತ್ತು. ಹತ್ತು ವರುಷದ ಮಗ ಮುನೀರ ರೋಜಾ ಬಿಡಲು ಮಸೀದಿಗೆ ಹೋಗಿದ್ದ. ಇಡೀ ದಿನ ಉಪವಾಸವಿದ್ದು ನಾಲ್ಕನೆಯ ತರಗತಿ ಓದ್ತಿದ್ದ ಮುನೀರನಿಗೆ ಅಪ್ಪ ಹಸೇನ್ ಎಂದರೆ ಪಂಚಪ್ರಾಣ. ಮದುವೆಯಾದ ವರುಷಕ್ಕೇ ಝಿಕ್ರಿಯಾಸಾಬ್ ತೋಟ ಬಿಟ್ಟು ಸೈಕಲ್ ಮೇಲೆ ಐಸ್ ಮಾರ್ತಾ ಹೊಸ ಜೀವನ ಶುರು ಮಾಡಿದ್ದ ಹಸೇನ್.
ಹಂತ ಹಂತವಾಗಿ ಸುಧಾರಣೆ ಕಂಡ ಸಂಸಾರ ನಾಲ್ಕು ಜನರೆದುರು ಹಾಡುವ ರಾಜ್ ಕುಮಾರ್ ಹಾಡಿನಂತಾಗಿತ್ತು! ದಿನಕ್ಕೈದು ಬಾರಿಯಲ್ಲದಿದ್ದರೂ ಜುಮ್ಮ ಜುಮ್ಮ ಮಾತ್ರ ಯಾವ ಕಾರಣಕ್ಕೂ ನಮಾಜ್ ತಪ್ಪಿಸುತ್ತಿರಲಿಲ್ಲ; ವರುಷಕ್ಕೊಮ್ಮೆ ರೋಜಾ ಕೂಡಾ ಮಾಡ್ತಾಯಿದ್ದ ಹಸೇನ್!
ಮಗ ಹುಟ್ಟಿದ, ಬಾಳು ಇನ್ನೂ ಚೆಂದಾಯ್ತು ಎಂದು ಕನಸುಗಳ ಪೆಡಲ್ ತುಳಿಯುತ್ತಾ ಹಸೇನ್ ಒಮ್ಮೊಮ್ಮೆ ಮೈಮರೆತು ಸಾಗುತ್ತಿದ್ದ. ನಾಳಿನ ದಿನಗಳ ಲೆಕ್ಕ ಹಾಕ್ತಾ ಭವಿಷ್ಯದ ದಾರಿ ಸವೆಸುವಾಗಲೇ ಅದೊಮ್ಮೆ ಅದೆಲ್ಲಿತ್ತೋ ಗ್ರಹಚಾರವೆಂಬ ಹಳೇ ಲಾರಿ ಬಂದು ಗುದ್ದಿಬಿಟ್ಟಿತು; ಬಿದ್ದ ಏಟಿಗೆ ಕಾಲೊಂದು ಕಳೆದುಕೊಂಡು ಹಸೇನ್ ಮೂಲೆ ಹಿಡಿದ, ಎರೆಡು ಕೋಲುಗಳೇ ಅವನ ಕಾಲುಗಳಾದವು. ಜಮೀಲಾಬಿ ಕೈಗೆ ಸೌಟಿನ ಜೊತೆ ಮೊರ ಬಂತು ಕೆರೆಬಿಳಚಿಯಿಂದ ತಂಬಾಕು ಎಲೆ ತಂದು ಬೀಡಿ ಕಟ್ಟಲಾರಂಭಿಸಿದಳು, ಜೀವನ ಸಿಂಗಲ್ ಫೀಜಿದ್ದಾಗಿನ ಹಾಡಾದಂತಾಯಿತು.
ಬಾಗಿಲು ದಾಟಿ ಹೊರ ಬಂದು ಬೀದಿಯ ಕೊನೆ ಮೂಲೆಯವರೆಗೂ ಕಣ್ಣ ಹಾಯಿಸಿದಳು, ಮಗನ ಸುಳಿವಿಲ್ಲ. ಮಸೀದಿಗೆ ಇಫ್ತಿಯಾರ್‍ಗಂತ ಹೋದವರೆಲ್ಲಾ ಬರುತ್ತಿದ್ದಾರೆ ಮಗ ಮಾತ್ರ ಇನ್ನು ಬಂದಿಲ್ಲ ಅನ್ನೋ ಚಿಂತೆ ಒಂದೆಡೆಯಾದರೆ ಬೆಳಿಗ್ಗೆ ಅಪ್ಪ-ಮಗ ಮಾತಾಡಿಕೊಳ್ತಿದ್ದ ಮಾತುಗಳು ನೆನಪಾಗುತ್ತಿದ್ದವು. ಕುಂಟುತ್ತಲೇ ಮಡದಿಗೆ ಸಣ್ಣ ಪುಟ್ಟ ಸಹಾಯ ಮಾಡ್ತಾ ಜಮೀಲಾಬಿ ಕಟ್ಟಿದ್ದ ಬೀಡಿಗಳ ಬಾಯಿ ಮಡಚುತ್ತಾ ಮಗನಿಗೆ ಇಂದು ಯಾರದಾದರೂ ದಾವತ್ ಇದೆಯಾ ಮಗನೇ ಎಂದು ಕೇಳಿದ್ದ.
ಮುನೀರ ಶಾಲೇಲಿ ಕೊಟ್ಟ ಹತ್ತು ಸಾರಿ ಮಗ್ಗಿ ಬರೆವ ಹೋಂ ವರ್ಕ್ ಮಾಡ್ತಾ ನಿನ್ನೆ ಯಾರದೂ ಇದ್ದಿಲ್ಲ ಇವತ್ ಇರಬಹುದೇನೋ…. ಯಾಕೆ-ಅಂದ ರಂಝಾನ್ ಮುಗೀತಾನೆ ಬಂತು ಮಸೀದಿ ಬಿರಿಯಾನಿ ತಿಂದೆ ಇಲ್ಲ ಇವತ್ತು ಇಫ್ತಿಯಾರ್ಗೆ ಹೋದಾಗ ಇದ್ರೆ ತರ್ತಿಯೇನೋ ಅಂತ.
ಮುಸ್ಲೀಮರ ಹುಡುಗಿ ರಾಜ್ ಕುಮಾರ್ ಹಾಡು ಹಾಡುವುದೆಂದರೆ? ಯಾಕೋ ಮನಸಿಗೆ ಬಿದ್ದಂಗಾಗಿ ಝಿಕ್ರಿಯಾಸಾಬ್ ಕಿವಿಗೆ ಹಾಕಿದ. ಹುಡುಗೀನ ನೋಡದೇ ಮುಂದುವರೆಯುವ ನಿರ್ಧಾರ ಮಾಡಿಬಿಟ್ಟಿದ್ದ. ಏನೋ ಎಂತೋ ಎಂಬಂತೆ ಅವರು ದಾದುಸಾಬ್ ಬಳಿ ಪ್ರಸ್ತಾಪಿಸಿದರು. ಬರಿ ಹಾಡು ಕೇಳಿ ಮರುಳಾದ ಇವನು ಬಾಳುವೆ ಹೇಗೆ ನಡಸ್ತಾನೆ…. ಮಗಳನ್ನ ಹೇಗೆ ಸಾಕ್ತಾನೆ ಅನ್ನೋ ಧಾವಂತ ದಾದು ಸಾಹೇಬರಿಗೆ.
ಏ ಹೋಗಪ್ಪಾ ಚಿಕ್ ಮಕ್ಳು ರೋಜಾ ಮಾಡದೇ ಇಲ್ವೇನೋ ಅನ್ನಂಗೆ ಅನುಮಾನ ಮಾಡ್ತಾರಲ್ಲಿ, ಮೊನ್ನೆ ಮೌಸನ್ ಹಮೀದಣ್ಣ ‘ಏ ರೋಜಾ ಇದೀಯೇನೋ? ಸುಳ್ಳು ಹೇಳಿ ತಿನ್ನಕ್ ಬರ್ತೀಯಾ ನಡಿಯಲೆ ಹೊರಗೆʼ ಅಂತ ರಟ್ಟೆ ಹಿಡಿದು ಎಳೆದಾಡ್ತು. ನಂಗೆ ಅಳು ಬಂತು ಅಷ್ಟರಲ್ಲಿ ಆ ಫಯಾಜ್ ಮೇಷ್ಟ್ರು “ಏನೋ ಮಾರಾಯ ನಮಾಜ್ ರೋಝಾ ಮಸೀದಿ-ಗಳು ದೊಡ್ಡವರ ಸ್ವತ್ತು, ಭಕ್ತಿ ಅವರ ಹಕ್ಕು ಅಂತ ಅಂದ್ಕೊಂಡಿದ್ದೀರಾ? ಚಿಕ್ಕ ಮಕ್ಕಳಿಗೆ ಮಾತಾಡ್ತೀರಲ್ಲಾ ನಿಮ್ಮ ಪ್ರಾಮಾಣಿಕತನ ನೀವೇ ಪ್ರಶ್ನಿಸಿಕೊಳ್ಳಿ’’ ಅಂತ ಗದರಿಸಿದ ಮೇಲೆ ಸುಮ್ಮನಾಗಿದ್ದು. ಅವತ್ತಿಂದ ಖಜೂರ್ ತಿಂದು ಮಸೀದಿ ವರಾಂಡದಲ್ಲೇ ಇಫ್ತಿಯಾರ್ ಮುಗಿಸಿ ಬರ್ತಾ ಇದೀನಿ. ಬಡವರು ಅಂದ್ರೆ ಹಂಗಾ ಅಥವಾ ಚಿಕ್ಕ ಮಕ್ಕಳ ರೋಜಾನೇ ನಂಬಲ್ವಾ?
ಮಸೀದಿಗಳಲ್ಲಿ ಸಾಮಾನ್ಯವಾಗಿ ಅಂಥ ಮನಸಿನ ಜನ ಇರ್ತಾರಪ್ಪಾ ಬಿಡು-ಎಂದು ಮಗನಿಗೇ ಸಮಾಧಾನ ಮಾಡಿದ್ದ! ಮನೇಲೇ ಹೆಂಡತಿ ಜೊತೆ ರೋಜಾ ಮಾಡ್ತಾ, ಕೂತೇ ನಮಾಜ್ ಪೂರೈಸಿಕೊಳ್ತಿದ್ದ ಹಸೇನ್!
ಮೂಲೇಲಿದ್ದ ತೇಪೆ ಹಾಕಿದ ಹಳೇ ಬುರ್ಖಾ ತಲೆ ಮೇಲೆ ಹೊದ್ದು ‘ಈಗ ಬಂದೆ’ ಅಂದು ಮಸೀದಿ ಕಡೆ ಹೊರಟೆ ಬಿಟ್ಟಳು ಜಮೀಲಾಬಿ. ದಾರಿಲೆಲ್ಲಾ ಮಗನದೆ ಚಿಂತೆ ಅವಳಿಗೆ. ನಾಳೆ ಏನೋ ಭಾಷಣ ಇದೆ ಗಟ್ ಮಾಡಬೇಕು ಬೆಳಿಗ್ಗೆ ಬೇಗ ಎಬ್ಬಿಸಮ್ಮ ಅಂದಿದ್ದ. ರಾತ್ರಿ ತರಾವಿ ನಮಾಝಿಗೆ ನಾನೆ ಹೋಗಬೇಡ ಬೇಗ ಬಂದು ಬರ್ಕೊಂಡು ಮಲಗು ಅಂದಿದ್ದೆ-ಅಂತ ಒಬ್ಬಳೇ ಮಾತಾಡ್ತಾ ಹೋಗ್ತಾ ಇದ್ದಳು.
ದಿನಾ ರೋಜಾ ಬ್ಯಾಡ ಮಗನೆ ಅಂತ ಹಸೇನ್ ಹೇಳ್ತಾ ಇದ್ದ. ಶಾಲೆಗೆ ಹೋಗ್ತೀಯ ಅಲ್ಲಿ ಹಾಲು-ಊಟ ಇರುತ್ತೆ. ಬಡವರು ನಾವು ಹೊಟ್ಟೆ ತುಂಬಾ ಊಟ ಕೂಡಾ ನಸೀಬಿಲ್ಲ. ಎರೆಡು, ನಾಕು, ಅಥವಾ ಆರು ರೋಜಾ ಇದ್ದು ಬಿಟ್ಟುಬಿಡು ಅಂದರೆ; ಸುತಾರಾಂ ಒಪ್ಪದೇ ಶಾಲೇಲಿ ನಮ್ ಜಾತಿಯ ಹುಡುಗ್ರು ಎಲ್ಲರೂ ರೋಜಾ ಇರ್ತಾರೆ, ನಾನಿರದಿದ್ರೆ ಅಣಕಿಸ್ತಾರೆ, ಅದೂ ಅಲ್ಲದೇ ಬಡತನದ ಅರಿವು ನನಗೆ ಹೊಸತಲ್ಲ ಉಣ್ಣದೇ ಎಷ್ಟು ದಿನ ಶಾಲೆಗೆ ಹೋಗಿಲ್ಲ? ಒಂಥರಾ ಇದೂ ಹಿಂಗೆಯಾ-ಅಂತ ಅಂದು ವಯಸ್ಸಿಗೆ ಮೀರಿದ ಮಾತಾಡಿ ಅಪ್ಪನ ಬಾಯಿ ಮುಚ್ಚಿಸಿದ್ದ!
ದಾರಿಯಲ್ಲಿ ಮೌಲಾನ ಸಾಬ್ ಎದುರಾದರು. ಜಮೀಲಾಬಿ ಮುಖ ಮುಚ್ಚಿ ಮುಂದೆ ಸಾಗಿದಳು. ಅಷ್ಟು ದೂರ ಹೋದಾಗ ಅವರೇ “ನೋಡಮ್ಮ ನಿನ್ನ ಮಗನನ್ನು ಕನ್ನಡ ಶಾಲೆಗೆ ಕಳಿಸು ಬೇಡ ಅನ್ನಲ್ಲ ಆದರೆ ಮುಂಜಾನೆ ಸಂಜೆ ಮದರಸಾಕ್ಕೂ ಕಳಿಸಮ್ಮ ಜೀವನಕ್ಕೆ ಎರೆಡೂ ವಿದ್ಯೆ ಬೇಕು” ಅಸಹನೆಯಿಂದ ಎಂಬಂತೆ ಹೇಳಿದಾಗ “ಹೋಂದೆ ಹಝರತ್” ಅನ್ನುತ್ತಾ ಮುಂದೆ ನಡದೇ ಬಿಟ್ಟಳು. ಬೆಳಿಗ್ಗೆ ಎದ್ದು ಆ ಹುಡುಗ ಸೋಮನಾಳ್ ಛಾನಲ್ ಬಳಿ ಹೋಗಿ ಜಾಲಿ ಜರಲು ಅಥವಾ ಕಟ್ಟಿಗೆ ಕಡಿದುಕೊಂಡು ಬಂದು, ಕೆಲವು ಮನೆಗಳಿಗೆ ಪೇಪರ್ ಹಾಕಿದರೆ ನನಗೂ ಮನೆಗೂ ಹಗುರ. ಸಂಜೆ ನಾ ಕಟ್ಟಿದ ಬೀಡಿ ಕಟ್ಟುಗಳನ್ನು ಕೊಡಲು ಬೀಡಿಯವರ ಮನೆಗೆ ಹೋಗಬೇಕು-ಇಷ್ಟರ ನಡುವೆ ಶಾಲೆ ಓದು-ಬರಹ, ಅವರಪ್ಪನ ಚಾಕರಿ ಮಾಡೋ ಮಗು ಮದರಸಾಕ್ಕೆ ಹೇಗೆ ಬಂದೀತು.. .. ಅನ್ನೋ ಮಾತು ಜಮೀಲಾಬಿ ಗಂಟಲಲ್ಲೇ ಉಳಿದವು!
ಮಸೀದಿ ಸಮೀಪವಾಗುತ್ತಿದ್ದಂತೆ ಗುಜು ಗುಜು ಶಬ್ಧ ಕೇಳುತಿತ್ತು. ಮಕ್ಕಳ ಗಲಾಟೆ ಜೋರಾಗಿತ್ತು. ವರಾಂಡದಲ್ಲಿ ಕೆಲವು ಮುಖಂಡರು ತಟ್ಟೆ ತುಂಬಾ ಬಿರಿಯಾನಿ ಹೇರಿಕೊಂಡು ಮಾಂಸ ಜಗಿಯುತ್ತಿದ್ದರು. ಚಿಕ್ಕ ಮಕ್ಕಳಿಗೆ ನಾಯಿಗಳಿಗೆ ಗದರುವಂತೆ ಜೋರು ಮಾಡುತ್ತಾ ಇದ್ದದ್ದು ಜಮೀಲಾಬಿ ನೋಡಿದಳು.
ಆ ಮೌಸನ್ ಹಮೀದ್ ಬುರ್ಖಾಧಾರಿ ಹೆಣ್ಣು ಈ ಹೊತ್ತಲ್ಲಿ ಮಸೀದಿ ಬಳಿ…. ಎಂದುಕೊಂಡು ಬಂದ. ರಂಜಾನ್ ತಿಂಗಳೆಂದರೆ ಬೇಡುವವರಿಗೂ ಹಬ್ಬ. ಆಡೋ ಹುಡುಗರಿಂದ ಹಿಡಿದು ಅಲ್ಲಾಡೋ ಮುದುಕರವರೆಗೂ ಬೊಗಸೆಯೊಡ್ಡೋರೆ! ಆದರೆ ಈ ಹೊತ್ತಲ್ಲಿ ಯಾರೂ ಬರಲ್ವೇ…. ಅಂದುಕೊಂಡು ಜಮೀಲಾಬಿ ಹತ್ತಿರ ಬಂದು ಏನೆಂಬಂತೆ ನೋಡಿದ
‘ಹಮಾರ ಬೇಟ ಮುನೀರ…..” ಅನ್ನುವಷ್ಟರಲ್ಲಿ ಓ ತುಮೆ ಲಂಗ್ಡ ಹಸೇನ್ ಕಿ ಜೋರು .. .. ಅರೇ ಮುನೀರ, ಮುನೀರಾ ಎಂದು ಅಬ್ಬರಿಸುವಂತೆ ಕರೆದ. ಮುನೀರ ಬಂದ, ತಲೆ ಮೇಲೆ ಮಾಸಲು ಟೋಪಿ ನೆತ್ತಿ ಮುಟ್ಟಿತ್ತು. ಎರೆಡೂ ಕೈ ಮಸಿ ಮಸಿಯಾಗಿದ್ದವು. ಅಮ್ಮನ್ನ ನೋಡಿ ಸಣ್ಣಗೆ ಮುಖ ಅರಳಿಸಿದ. ಇವಳು ಮುಖ ನೋಡದೇ ಕೈಗಳನ್ನೇ ನೋಡುತ್ತಿದ್ದಳು.
ಹಮೀದ್ ಮಾತಾಡದೇ ಇಬ್ಬರನ್ನೂ ಗಮನಿಸಿ ಕಳ್ಳನಂತೆ ಒಳ ಹೋದ. ಕ್ಯಾ ಬೇಟ ಇದು ಅಂದ ಜಮೀಲಾಬಿ-ಗೆ ಬಿರಿಯಾನಿ ಪಾತ್ರೆ ತೊಳದರೆ ಕವರ್ ತುಂಬಾ ಬಿರಿಯಾನಿ ಕೊಡ್ತೀನಂದ್ರು ಅದ್ಕೆ ತೊಳಿತಿದ್ದೆ ಅಮ್ಮಿಜಾನ್ ನೀನು ಬಂದ್ಯಾ…. ತಡಿ ಅಂದವನೇ ಇವಳ ಮಾತಿಗೂ ಕಾಯದೇ ಒಳ ಓಡಿ ಬಿಳಿ ಪ್ಲಾಸ್ಟಿಕ್ ಕವರೊಂದನ್ನು ತಂದ ಅದರಲ್ಲಿ ಸೀದ, ತಳ ಹತ್ತಿದ ಅನ್ನ, ಮೂಳೆ ಹೆಚ್ಚಿರುವ ಮಾಂಸದ ಐದಾರು ತುಂಡುಗಳು ಕಾಣುತ್ತಿದ್ದವು!
ಜಮೀಲಾಬಿ ಕಣ್ಣು ತುಂಬಿ ಬಂದಿದ್ದವು. ನಾಲ್ಕನೆಯ ತರಗತಿ ಓದ್ತಿದ್ದ ಕಂದನಿಗೆ, ಮುಂಜಾನೆಯಿಂದ ಉಪವಾಸವಿರೋ ಮಗು ಕೈಲಿ ಕೆಲಸ ಮಾಡಿಸ್ತಿರೋದು, ಅದೂ ಬಿರಿಯಾನಿ ಆಸೆ ತೋರಿಸಿ! ಮಸೀದಿ ಮಂದಿಗೆ ಬೆಂಕಿ ಬೀಳ ಅಂದುಕೊಂಡಳು.
ಅಮ್ಮಿ, ಬಾಬಾ ಇವತ್ತು ಹೊಟ್ಟೆ ತುಂಬಾ ಊಟ ಮಾಡ್ತಾರಲ್ವಾ? ಅವರಿಗೆ ಮಸೀದಿ ಬಿರಿಯಾನಿ ಅರ್‍ಮಾನ್ ಅಲ್ವಾ? ನಡೆಯೋಕ್ಕೆ ಬಂದಿದ್ರೆ ಮಸೀದಿಗೆ ಬಂದು ಬಾಬಾ ದಿನಾ ತಿನ್ನಬಹುದಿತ್ತಲ್ವಾ? ನಾಳೆನೂ ಪಾತ್ರೆ ತೊಳೆದು ತಗಂಡು ಬರ್ತೀನಿ ರಮಜಾನ್ ಮುಗಿದರೆ ಬಿರಿಯಾನಿ ಸಿಗಲ್ಲ ಅಲ್ವಾ… ಮುನೀರ ಮಾತಾಡ್ತಾನೇ ಇದ್ದ.
ಜಮೀಲಾಬಿ ಅವನ ಕೈಲಿದ್ದ ಪಾಕೀಟು ಕಸಿದು ಮಸೀದಿಯ ವರಾಂಡಾದಲ್ಲೇ ಇಟ್ಟು ಮಗನ ಕೈ ಹಿಡಿದೆಳೆದು ಬಿರ ಬಿರನೆ ಹೊರ ನಡೆದಳು. ಮಗ ತಿರುತಿರುಗಿ ಕವರನ್ನೇ ನೋಡ್ತಾ ನಡೆದ. ಜಮೀಲಾಬಿ ಕಣ್ಣುಗಳು ಕೆರೆಯಾಗಿದ್ದವು…. ಮಸೀದಿ ತಾಯಿ-ಮಗನನ್ನು ಮೂಕವಾಗಿ ನೋಡುತ್ತಲೇ ಇತ್ತು!
(ಅರ್ಥಗಳು-ಅಜಾನ್=ಪ್ರಾರ್ಥನಾ ಕೂಗು ರೋಜಾ=ಉಪವಾಸ ಖಿಚಡಿ=ಪಲಾವ್ ಜುಮ್ಮ=ಶುಕ್ರವಾರ ನಮಾಜ್=ಪ್ರಾರ್ಥನೆ ಇಫ್ತಿಯಾರ್= ಉಪವಾಸ ಮುಕ್ತಾಯದ ಭೋಜನ. ಅದಾವತ್=ಊಟದ ಆಹ್ವಾನ ರಂಜಾನ್=ಮುಸ್ಲಿಂ ಮಾಸ(ಹಬ್ಬ) ಖಜೂರ್= ಖರ್ಜೂರ(ಉತ್ತತ್ತಿ) ತರಾವಿ ನಮಾಜ್= ರಂಜಾನ್ ತಿಂಗಳ ಪ್ರತೀ ರಾತ್ರಿಯ ವಿಶೇಷ ಪ್ರಾರ್ಥನೆ ನಸೀಬು=ಅದೃಷ್ಟ ಮೌಲಾನಸಾಬ್= ಧರ್ಮಗುರುಗಳು ಮದರಸಾ=ಅರಬ್ಬಿ ವಿದ್ಯಾಕೇಂದ್ರ ಹಝರತ್=ಗುರುಗಳು ಮೌಸನ್=ಮಸೀದಿಯ ಸೇವಕ ಹಮಾರ= ನಮ್ಮ ಬೇಟ=ಮಗ ಲಂಗ್ಡ=ಕುಂಟ ಜೋರು=ಹೆಂಡತಿ ಅರಮಾನ್=ಆಸೆ)
*****
ಸಂತೆಬೆನ್ನೂರು ಫೈಜ್ನಟ್ರಾಜ್
ಬಳ್ಳಿಯೊಡಲ ಕುಸುಮದಂತೆ ಹುದುಗಿದೆನ್ನ ಗೀತವು-ಎಂಬ ಕವಿವಾಣಿಯಂತೆ ನನ್ನ ಈ ಕತೆ ನನ್ನೊಡಲ ಭಾವಬಿಂಬ. ಕಂಡ, ಕೇಳಿದ, ನೊಂದ-ನೋವಿನ ವಿಚಾರಧಾರೆ ಹಸಿ ಹಸಿಯಾಗಿ ಚಿತ್ರಿತ ಕತೆ ಈ – ಅಲ್ಲಾ ದೇವರು, ಅನ್ನದೇವರು!
ಬಡತನವೆಂಬುದು ಶಾಪ ಎಂದೇ ಇಲ್ಲದವರ ಅಂಬೋಣ. ಮುಸ್ಲಿಂ ಜಗತ್ತಿನಲ್ಲಿ ಕೆಲವೆಡೆ ಅದು ತೀರಾ ಘೋರ. ಹಬ್ಬ ಬಂದರೆ ಹಿಗ್ಗುವ ಮಂದಿ ಎಲ್ಲಿದ್ದಾರೋ ಏನೋ ಆದರೆ ಮುಸ್ಲೀಮರಲ್ಲಿ ಅದರಲ್ಲೂ ಬಡವರು ರಂಝಾನ್ ಹಬ್ಬ ಬಂತೆಂದರೆ ಬೆಚ್ಚಿ ಬೀಳುತ್ತಾರೆ. ಹೊಸ ಹಬ್ಬ, ಖರ್ಚಿನ ಹಬ್ಬ, ದಾನದ ಹಬ್ಬ. ಇಲ್ಲದವರ ತೊಳಲಾಟವನ್ನು ಉಳ್ಳವರು ಹೇಗೆ ಸಮಯಕ್ಕೆ ತಕ್ಕಂತೆ ಹಿಡಿ ಬಿರಿಯಾನಿಗಾಗಿ ದುರುಪಯೋಗ ಮಾಡಿಕೊಳ್ಳುತ್ತಾರೆ ಎಂಬ ನೈಜ ಚಿತ್ರಣದ ಅನಾವರಣವೀ ಕತೆ! ಪತ್ರಿಕೆಯೊಂದರಲ್ಲಿ ಇದು ಪ್ರಕಟವಾದಾಗ ಅಪಾರ ಪ್ರತಿಕ್ರಿಯೆಗಳು ಬಂದವು. ಅದರಲ್ಲಿ ಪ್ರತಿಕ್ರಿಯೆಗಿಂತ ಧಮಕಿಗಳೇ ಅಧಿಕ ಅನ್ನಬಹುದು!
ಮಸೀದಿಯನ್ನು ಅವಹೇಳನ ಮಾಡಿದ್ದೀರಿ, ಮಸೀದಿ ಮಂದಿಗೆ ಅವಮಾನವಾಗುತ್ತೆ, ಮುಸ್ಲೀಮರ ಜೀವನ ಹೊರಪ್ರಪಂಚಕ್ಕೆ ಬೇಕಾ-ಅನ್ನುವ ದೂರುಗಳು ಅನವರತ ಬಂದವು. ವಾಸ್ತವ ನೆಲೆಗಟ್ಟಿನಲ್ಲಿ ಕಂಡ ಸತ್ಯವನ್ನು ಕತೆಯಾಗಿಸಿ ಎದುರಿಗಿಟ್ಟಿದ್ದೇನೆ; ಅರಗಿಸಿಕೊಳ್ಳಿ ಅಥವಾ ಬದಲಾಗಿ ಅಂದು ಮೌನವಾದೆ. ಜಮೀಲಾಬಿಯ ಸ್ವಾಭಿಮಾನ ಮತ್ತು ಬಾಲಕ ಮುನೀರನ ಮುಗ್ಧತೆ, ಅಪ್ಪನ ಬಿರಿಯಾನಿ ಆಸೆ ಈಡೇರಿಸಲಿಲ್ಲವಲ್ಲ ಅಂತ ತಳಮಳಿಸುವ ಅವನ ಅಮಾಯಕತೆಯಿಂದ ಈ ಕತೆ ನನಗೆ ಬಹಳ ಬಹಳ ಇಷ್ಟ!
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಹೃದಯಕ್ಕೆ ತಟ್ಟಿ ಕಣ್ಣಲ್ಲಿ ನೀರಿಳಿತಾ ಇದೆ.