ಪದ್ಮಾಳ ಅತ್ತೆ, ಮಾವನಿಗೂ ಚಿಂತೆ ಮನೆ ಮಾಡಿತು. ತಮ್ಮ ವಂಶ ಬೆಳೆಸುವ ಕುಡಿ ಪಡೆಯಲು ಅದೇನು ಮಾಡಬೇಕೋ ತಿಳಿಯದಾಯಿತು. ದೇವರಾಜನಿಗೆ ಮತ್ತೊಂದು ಮದುವೆ ಮಾಡಿದರೆ ಹ್ಯಾಗೆ ಎನ್ನುವ ಆಲೋಚನೆ ಅವರಲ್ಲಿ ಮೊಳೆಯಿತು. ಕೆಲ ಸಂಬಂಧಿಕರು ಮದುವೆ ಮಾಡುವುದೇ ಸರಿಯೆಂದು ಸಲಹೆ ನೀಡಿದರು. ಇದು ಪದ್ಮಾಳ ಕಿವಿ ತಲುಪಿ ವಿಚಿತ್ರ ಸಂಕಟದಲ್ಲಿ ಮುಳುಗಿದಳು. ದಿನಪೂರ್ತಿ ಮಾತಿಲ್ಲದೆ ಚಿಂತೆಯಲ್ಲೇ ಮುಳುಗಿದಳು. ಲೋಕದ ಪರಿವೆಯನ್ನೇ ಮರೆಯತೊಡಗಿದಳು. ಮುಸುರಿ ತಿಕ್ಕುವಾಗ ಒಂದೇ ದಬರಿಯನ್ನು ತಾಸೊತ್ತು ತಿಕ್ಕುತ್ತಿದ್ದಳು.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಟಿ.ಎಸ್. ಗೊರವರ ಬರೆದ “ಕತ್ತಲಿನಾಚೆ” ನಿಮ್ಮ ಈ ಭಾನುವಾರದ ಓದಿಗೆ
ಮಟ ಮಟ ಮಧ್ಯಾಹ್ನ. ಅಂಗಳದಲ್ಲಿ ಬಿಸಿಲು ಸುರಿಯುತ್ತಿದೆ. ಗಾಳಿ ಎಲ್ಲೋ ಹಾಳಾಗಿ ಹೋಗಿದೆ. ಕುದಿ ಕುಚ್ಚುತ್ತಿದೆ. ಹಣೆಯ ಮ್ಯಾಲೆ, ಬಗಲು, ಕಂಕುಳಲ್ಲಿ ಬೆವರು ಸೆಲೆಯೊಡೆದು ಎದೆಯೊಳಗೆ ಸಂಕಟ ಮೊಟ್ಟೆ ಇಡುತ್ತಿದೆ. ಮನೆಗೆಲಸ ಮುಗಿಸಿದ್ದ ಪದ್ಮಾ ಒಲ್ಲದ ಮನಸಿನಿಂದ ಒಂದೆರಡು ರೊಟ್ಟಿ, ಬದನೆಕಾಯಿ ಪಲ್ಯೆ ತಿಂದು ಅಂಗಳದ ಬೇವಿನ ಮರದ ನೆರಳಿಗೆ ಬಂದು ಕುಳಿತಳು.
ಸೆಲೆಯೊಡೆಯತೊಡಗಿದ್ದ ಬೆವರೇನೋ ನಿಂತಿತು. ಆದರೆ, ಎದೆಯೊಳಗೆ ಮೀಟತೊಡಗಿದ್ದ ಎಂಥದೋ ಸಂಕಟ ನಿಲ್ಲುತ್ತಿಲ್ಲ. ಬಾಯೊಳಗೆ ಉಪ್ಪುಪ್ಪು ನೀರು ಬಂದಂತೆನಿಸಿತು. ತಲೆನೋವು ಶುರುವಾಯ್ತು. ತನ್ನ ಬದುಕು ಹರಿದ ಬಟ್ಟೆಯಂತಾಗಿದೆಯೆಂದು ಹಳಹಳಿಸಿದಳು. ಕಣ್ಣೊಳಗೆ ತೆಳ್ಳಗೆ ನೀರಾಡತೊಡಗಿತು. ಸೆರಗಿನಿಂದ ಒರೆಸಿಕೊಂಡಳು. ಜಲ್ಮಕ್ಕೆ ಮಾತ್ರ ತುಸುವೂ ಸಮಾಧಾನವಾಗುತ್ತಿಲ್ಲ. ನೆಲಕ್ಕೆ ಕೈಯೂರಿ ಬೇವಿನಮರ ದಿಟ್ಟಿಸಿದಳು. ಬಿರು ಬಿಸಿಲಿಗೆ ಸವಾಲೊಡ್ಡಿ ಹಚ್ಚಗೆ ಮುಗುಳ್ನಗತೊಡಗಿತ್ತು. ಮೈ ಚಾಚಿದ ಅದರ ರೆಂಬೆ-ಕೊಂಬೆಗಳು ಆರೋಗ್ಯಪೂರ್ಣ ತರುಣಿಯನ್ನು ನೆನಪಿಸುವಂತಿದ್ದವು. ಮದುವೆಗೂ ಮುಂಚೆ ತಾನು ಅದ್ಯಾರ ಹಂಗೂ ಇಲ್ಲದೆ, ಲೋಕದ ಚಿಂತೆಗಳಿಲ್ಲದ ಈ ಮರದ ರೆಂಬೆಗಳಂತೆಯೇ ಇದ್ದೆನೆಂದು ಅಂದುಕೊಂಡಳು.
ಎಡಗೈಗೆ ಅದೇನೋ ಮೆತ್ತಗೆ ತಾಕಿತು. ನೋಡಿದರೆ ಎರಡು ಸೆಗಣಿ ಹುಳುಗಳು ಸಣ್ಣದೊಂದು ಸೆಗಣಿ ಉಂಡೆಯನ್ನು ತಮ್ಮ ದಾರದಂತಹ ತೆಳು ಕಾಲುಗಳಿಂದ ಉರುಳಿಸುತ್ತಿವೆ. ಸೋಜಿಗಗೊಂಡಳು. ಎಲ್ಲಿಗೆ ಉರುಳಿಸಿಕೊಂಡು ಹೋಗುತ್ತಿವೆ ಎನ್ನುವುದು ತಿಳಿಯಲಿಲ್ಲ ಅವಳಿಗೆ. ತುಸು ಹೊತ್ತು ಹಾಗೇ ನೋಡಿದಳು. ಆ ಸೆಗಣಿ ಉಂಡೆ ಒಂದಿಂಚೂ ಕದಲಿರಲಿಲ್ಲ. ಆದರೆ, ಆ ಹುಳುಗಳು ಚೈತನ್ಯದಿಂದ ಉರುಳಿಸಲು ಸೆಣಸುತ್ತಲೇ ಇದ್ದವು. ಅವುಗಳ ಸೆಣಸಾಟದಂತೆಯೇ ಈ ಸಂಸಾರದಲ್ಲಿ ತಾನೂ ಸೆಣಸುತ್ತಿದ್ದೇನೆ. ಆದರೆ, ಅವುಗಳ ಚೈತನ್ಯ ತನ್ನಲ್ಲಿಲ್ಲ. ಆ ಹುಳುಗಳ ಜಾಗ ಗೊತ್ತಿದ್ದರೆ ಹುಳುಗಳ ಸಮೇತ ಆ ಸೆಗಣಿ ಉಂಡೆಯನ್ನು ಎತ್ತಿಟ್ಟು ಬರಬೇಕೆನಿಸಿತವಳಿಗೆ. ಅವಳ ತಲೆ ಮ್ಯಾಲೆ ಗುಬ್ಬಿಯೊಂದು ಹಿಕ್ಕೆ ಹಾಕಿತು. ಒರೆಸಿಕೊಳ್ಳುತ್ತ ಮರದ ಮ್ಯಾಲೆ ಹುಡುಕಿದಳು. ಅದು ಕಾಣದಂತೆ ಪುರ್ರನೆ ಹಾರಿ ಹೋಗಿತ್ತು. ಮರ ದಿಟ್ಟಿಸುತ್ತಲೇ ಬೇವಿನ ಕಾಯಿಗಳ ಗೊಂಚಲು ಮನ ಸೆಳೆದವು. ಆ ಮರದ ಫಲವಂತಿಕೆ ಅವಳಲ್ಲಿ ಅಸೂಯೆ ಹುಟ್ಟಿಸಿತು. ಎಷ್ಟೊಂದು ಕಾಯಿಗಳು. ತನಗೆ ಒಂದೇ ಒಂದು ಮಗುವಾಗಿದ್ದರೆ ಈ ನಾಯಿ ಪಾಡು ಬರುತ್ತಿರಲಿಲ್ಲವೆಂದು ಒಳಗೊಳಗೆ ದುಃಖಿಸತೊಡಗಿದಳು. ಈ ಬಾಳ್ವೆಯೇ ಸಾಕೆನಿಸತೊಡಗಿ ಕಣ್ಣಂಚು ಒದ್ದೆಯಾದವು.
***
ಒಬ್ಬಳೇ ಮಗಳಾದ ಪದ್ಮಾ ರಮೇಶಪ್ಪ, ಜಯಮ್ಮನ ಮುದ್ದಿನ ಮಗಳು. ಇವರು ಬೇರೆಯವರ ಹೊಲದಲ್ಲಿ ಕೂಲಿ ದುಡಿಯುತ್ತಿದ್ದರೂ ಪದ್ಮಾಳನ್ನು ಯಾವತ್ತೂ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗಿರಲಿಲ್ಲ. ಪದ್ಮಾ ನೀಟಾಗಿ ಮನೆಗೆಲಸ, ಅಡಿಗೆ ಮಾಡಿ ಅಪ್ಪ-ಅವ್ವನನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಳು. ಪದ್ಮಾ ಮಾಡುವ ಬೆಂಡೆಕಾಯಿ ಪಲ್ಯೆ, ಚವಳಿಕಾಯಿ ಪಲ್ಯೆ, ಬೆರಳು ಕಚ್ಚಿಕೊಳ್ಳುವಂತೆ ಮಾಡುವ ಹುಳ್ಳಿಕಟ್ಟಿನ ಸಾರು ರಮೇಶಪ್ಪ, ಜಯಮ್ಮನಿಗೆ ಇಷ್ಟವಾಗಿದ್ದವು. ತಾವು ಕೂಲಿ ಹೋದ ಹೊಲದಲ್ಲಿ ಕಿತ್ತುಕೊಂಡು ಬರುತ್ತಿದ್ದ ಕಿರಕಸಾಲಿ ತಪ್ಪಲು ಪಲ್ಯೆಗಂತೂ ಮಾರು ಹೋಗಲೇಬೇಕು. ಹಂಚಿನಲ್ಲಿ ಒಂದಿಷ್ಟು ಒಳ್ಳೆ ಎಣ್ಣೆ ಹಾಕಿ, ಅದರಲ್ಲಿ ಬೆಳ್ಳೊಳ್ಳಿ, ಕಿರಕಸಾಲಿ ತಪ್ಪಲು, ಉಪ್ಪು, ಖಾರದ ಪುಡಿ ಹಾಕಿ ತಾಳಿಸಿ ಕೊಟ್ಟರೆ ರಮೇಶಪ್ಪ ಎಂಟತ್ತು ಬಿಸಿ ರೊಟ್ಟಿ ಚಪ್ಪರಿಸುತ್ತಿದ್ದ. ಇದ್ದುದರಲ್ಲಿಯೇ ಅವಳಿಗೆ ಹದವಾಗಿ ಅಡುಗೆ ಮಾಡುವ ಕಲೆ ಕರಗತವಾದಂತಿತ್ತು.
ಪದ್ಮಾ ನಿಜಕ್ಕೂ ಲಾವಣ್ಯವತಿ. ಅವಳು ಲಂಗ-ದಾವಣಿ ಧರಿಸಿ ನೀರು ತರಲು ಅನತಿ ದೂರದಲ್ಲಿದ್ದ ಸರಕಾರಿ ನಳಕ್ಕೆ ತೆರಳಿದರೆ ಸುಖಾಸುಮ್ಮನೆ ಹುಡುಗರು ಆ ದಾರಿಯಲ್ಲಿ ಕೆಲಸವಿದ್ದವರಂತೆ ನಟಿಸುತ್ತಾ ಅವಳ ಚೆಲುವು ಕಣ್ಮನ ತುಂಬಿಕೊಳ್ಳುತ್ತಿದ್ದರು. ಅವಳ ತುಟಿಯಿಂದ ನಗೆ ತುಳುಕಿದರಂತೂ ಹುಡುಗರು ಅದ ಕಂಡು ಬಹುಮಾನ ಗೆದ್ದವರಂತೆ ಆನಂದತುಂದಿಲರಾಗುತ್ತಿದ್ದರು. ಸಿನೇಮಾ ನಟಿಯಂತೆ ರಂಗು ರಂಗಾಗಿದ್ದ ಅವಳು ಹುಡುಗರಿಗೆ ಬೀಳುವ ರಾತ್ರಿಯ ಕನಸಿಗೆ ಖಾಯಂ ರಾಣಿಯಾಗಿದ್ದಳು. ಪದ್ಮಾಳಿಗೆ ತನ್ನ ಚೆಲುವಿನ ಅರಿವಿದ್ದರೂ ಮನೆಯಲ್ಲಿ ಹಾಸಿ ಹೊದ್ದು ಮಲಗಿದ್ದ ಬಡತನ, ತನ್ನ ಮ್ಯಾಲೆ ಅಗಾಧ ಪ್ರೀತಿ ತೋರುವ ಅಪ್ಪ-ಅವ್ವನ ಮುಖ ಕಣ್ಮುಂದೆ ಸುಳಿದು ಹುಡುಗರಿಗೆ ಸೊಪ್ಪು ಹಾಕದೆ ತಣ್ಣಗಿದ್ದಳು. ದಿನಗಳು ಉರುಳಿ ಕಾಲನೊಳಗೆ ಒಂದಾಗುತ್ತಾ ಹೋದಂತೆ ಅವಳ ಅಪ್ಪ-ಅವ್ವ ಮದುವೆ ಮಾಡಲು ಆ ಕಡೆ ಈ ಕಡೆ ವರ ನೋಡತೊಡಗಿದರು.
ಪದ್ಮಾ ರೂಪವತಿಯಾದ್ದರಿಂದ ವರ ಸಿಗುವುದೇನೂ ತಡವಾಗಲಿಲ್ಲ. ಪಕ್ಕದ ಹಳ್ಳಿಯಲ್ಲಿ ಇದ್ದುದರಲ್ಲೇ ತಮಗಿಂತ ಸ್ಥಿತಿವಂತರಾದ ಕಾತರಕಿ ದೇವರಾಜನೊಂದಿಗೆ ಪದ್ಮಾಳ ಮದುವೆ ಗಟ್ಟಿಯಾಯಿತು. ದೇವರಾಜನೂ ಒಬ್ಬನೇ ಮಗ. ಅಪ್ಪ ಗೋವಿಂದ, ಅವ್ವ ತಾಯವ್ವ ಇವರಿಷ್ಟೇ ಮನೆಯಲ್ಲಿರುವುದು. ಹಾಗಾಗಿಯೇ ರಮೇಶಪ್ಪ, ಜಯಮ್ಮ ತಮ್ಮ ಮಗಳು ಸುಖವಾಗಿರುತ್ತಾಳೆಂದು ದೇವರಾಜನಿಗೆ ಕೊಡಲು ಒಪ್ಪಿದರು. ಕಾರ್ತೀಕ ಮಾಸದಲ್ಲಿ ಮದುವೆಯೂ ಆಯಿತು. ಪದ್ಮಾ ದೇವರಾಜನ ಮನೆ ಸೇರಿದಳು. ರಮೇಶಪ್ಪ, ಜಯಮ್ಮ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಪದ್ಮಾಳ ಹಾಜರಿ ದೇವರಾಜನ ಮನೆಯಲ್ಲಿ ಹೊಸದಾಗಿ ಬೆಳಕು ಕುಡಿಚಾಚಿದಂತಾಯಿತು. ದೇವರಾಜನಂತೂ ಅವಳನ್ನು ಕ್ಷಣ ಹೊತ್ತೂ ಬಿಟ್ಟಿರದೇ ಪ್ರೀತಿಯ ಮಳೆಗರೆಯುತ್ತಿದ್ದ. ಹೊತ್ತು ಗೊತ್ತಿಲ್ಲದೆ ತುಟಿ ಮುತ್ತು ಬದಲಿಸುತ್ತಿದ್ದ. ಇಬ್ಬರೂ ಸೇರಿ ಸ್ವರ್ಗಕ್ಕೆ ಕಿಚ್ಚು ಹಚ್ಚುತ್ತಿದ್ದರು. ಪದ್ಮಾಳ ಅಡುಗೆಯ ರುಚಿ, ಅವಳು ಮನೆಯಲ್ಲಿ ಒಂದು ಕಸದ ತುಂಡೂ ಬೀಳದೆ ನೀಟಾಗಿಸುವ ಪರಿ, ಬಟ್ಟೆಯ ಮೇಲೆ ಸಣ್ಣ ಕಲೆಯ ಗುರುತೂ ಉಳಿಯದಂತೆ ಅವಳು ಬಟ್ಟೆ ತೊಳೆಯುತ್ತಿದ್ದ ರೀತಿ, ನಿತ್ಯ ಬೆಳಗ್ಗೆ ಬಗೆ ಬಗೆಯಲ್ಲಿ ಹಾಕುತ್ತಿದ್ದ ರಂಗೋಲಿ ಎಲ್ಲವೆಲ್ಲವನ್ನೂ ಅವಳ ಅತ್ತೆ, ಮಾವ ಓಣಿ ಮಂದಿಗೆಲ್ಲಾ ಹೇಳಿ ತಮ್ಮ ಸೊಸೆಯನ್ನು ಕೊಂಡಾಡಿದ್ದೇ ಕೊಂಡಾಡಿದ್ದು. ಬದುಕು ಹೀಗೆ ಇಳಕಲು ಇದ್ದ ಕಡೆ ನೀರು ಸರಾಗ ಹರಿದಂತೆ ಚೆಂದಗೆ ಸಾಗಿತ್ತು. ಹೀಗಿರುವಾಗಲೇ ಪದ್ಮಾಳಿಗೆ ದುರ್ವಾರ್ತೆಯೊಂದು ಬರಸಿಡಿಲಂತೆ ಬಂದೆರಗಿತು. ಅವಳ ಅಪ್ಪ, ಅವ್ವ ಹುಚ್ಚಾಳಂಬೆ ಸಾರು ತಿಂದು ಸಾವಿನ ಮನೆ ಸೇರಿದ್ದರು. ಕೂಲಿಗೆ ಹೋದಾಗ ಅದೇ ಮೊದಲ ಮಳೆಗೆ ಯಾರದೋ ಬದುವಿನಲ್ಲಿ ಪುದು ಪುದು ಎದ್ದಿದ್ದ ಆಳಿಂಬೆ ನೋಡಿ, ಅವು ಹುಚ್ಚಾಳಂಬೆಯೆಂದು ತಿಳಿಯದೇ ಕಿತ್ತು ತಂದು ಸಾರು ಮಾಡಿದ್ದರು. ಇಬ್ಬರೂ ಗಡದ್ದು ತಿಂದಿದ್ದರಿಂದ ರಾತ್ರಿ ಪೂರ ವಾಂತಿ, ಭೇದಿಯಾಗಿ ನಿಪ್ಪಾಸಿಯಾಗಿ ಅಸುನೀಗಿದ್ದರು. ಪದ್ಮಾ ಬೋರಾಡಿ ಅತ್ತಳು. ದೇವರಾಜ, ಅತ್ತೆ, ಮಾವ ಸಂತೈಸಿದರೂ ಅವಳ ಅಳು ನಿಲ್ಲುತಿಲ್ಲ. ಹಾಗೂ ಹೀಗೂ ಸಂಭಾಳಿಸಿದರು. ಅವರ ಮಣ್ಣು ಮಾಡಿ ಮನೆಗೆ ಬಂದರೂ ಪದ್ಮಾಳ ದುಃಖ ಕಡಿಮೆಯಾಗಲಿಲ್ಲ. ಗರ ಬಡಿದಂತೆ ಕುಳಿತಿರುವಾಗಲೇ ನೆನಪಿಸಿಕೊಂಡು ಏಕಾಏಕಿ ಜೋರು ಅಳುತ್ತಿದ್ದಳು. ಅತ್ತೆ, ಮಾವ, ಗಂಡ ಅವಳ ಸ್ಥಿತಿಗೆ ಮಮ್ಮಲ ಮರುಗಿದರು. ಮಗುವಿನಂತೆ ಸಂತೈಸಿದರು. ಅವಳ ದುಃಖ ತಹಬಂದಿಗೆ ಬರಲು ತಿಂಗಳುಗಳೇ ಉರುಳಬೇಕಾಯಿತು.
ಕಾಲಕ್ಕೆ ಗಾಯ ಮಾಯಿಸುವ ಗುಣವಿದೆ. ದಿನಗಳು ಸರಿದಂತೆ ಅವಳ ಅಪ್ಪ-ಅವ್ವನ ಸಾವಿನ ನೋವು ಮರೆಗೆ ಸರಿಯಿತು. ಅನುದಿನ ಅಡುಗೆ, ಕಸ-ಮುಸರಿ, ಗಂಡ, ಅತ್ತೆ-ಮಾವನ ಕಾಳಜಿ ಮಾಡುವುದರಲ್ಲೇ ದಿನಗಳು ಸವೆಯತೊಡಗಿದವು. ಮದುವೆಯಾಗಿ ಮೂರ್ನಾಲ್ಕು ವರ್ಷಗಳೇ ಕಳೆದವು. ಇನ್ನೂ ಮಕ್ಕಳಾಗಲಿಲ್ಲ. ಇದು ಅವಳಲ್ಲಿ ಕಳವಳ ಮೂಡಿಸಿತು. ಮನೆ ಮಂದಿಯಲ್ಲಾ ಆ ದೇವರು, ಈ ದೇವರಿಗೆ ನಡೆದುಕೊಂಡರು. ಬೇಡಿಕೊಂಡು ಹರಕೆ ತೀರಿಸಿದರು. ಐನೋರ ಹತ್ರ ಅಂತ್ರ ಕಟ್ಟಿಸಿದರು. ಪದ್ಮಾ ಮನೆ ದೇವರಿಗೆ ಬೇಡಿಕೊಂಡು ಪ್ರತಿ ವಾರ ಉಪವಾಸ ಮಾಡತೊಡಗಿದಳು. ಇದ್ಯಾವುದೂ ಫಲ ನೀಡಲಿಲ್ಲ.
ಅತ್ತೆ-ಮಾವ ಈಗೀಗ ಇವಳ ಮ್ಯಾಲೆ ಸಿಡುಕತೊಡಗಿದರು. ಓಣಿ ಮಂದಿಯೂ ಮಕ್ಕಳಾಗಿಲ್ಲವೆಂದು ಆಡಿಕೊಳ್ಳುವುದು ಇವಳ ಕಿವಿಗೆ ಬಿದ್ದು ಹಿಂಸೆ ಅನಿಸತೊಡಗಿತ್ತು. ದೇವರಾಜನೂ ರಾತ್ರಿ ಅವಳ ಜೊತೆ ಮಲಗುತ್ತಿದ್ದನಷ್ಟೇ. ಹಗಲು ಮುಖ ಗಂಟು ಹಾಕಿಕೊಂಡು ಅಡ್ಡಾಡುತ್ತಿದ್ದ. ನಿತ್ಯ ಎಲ್ಲರೂ ಸಣ್ಣ ಸಣ್ಣ ತಪ್ಪು ಹುಡುಕಿ ಬಯ್ಯತೊಡಗಿದರು. ಇವಳು ಒಳಗೊಳಗೆ ನೋವು ತಿನ್ನ ತೊಡಗಿದಳು. ಒಮ್ಮೊಮ್ಮೆ ತನ್ನ ನಸೀಬು ಸರಿಯಿಲ್ಲವೆಂದು ತನ್ನನ್ನೇ ತಾನು ಹಳಿದುಕೊಳ್ಳುತ್ತಿದ್ದಳು. ಬಿಟ್ಟ ಕಣ್ಣು ಬಿಟ್ಟಂತೆ ನೆಲ ದಿಟ್ಟಿಸುತ್ತ ಕುಳಿತು ಬಿಡುತ್ತಿದ್ದಳು. ಮನೆಗೆಲಸದಲ್ಲೂ ಧ್ಯಾಸ ಕಡಿಮೆಯಾಯಿತು. ಅತ್ತೆ-ಮಾವ, ಗಂಡನಿಗೆ ನೆಪ ಬೇಕಿತ್ತು. ಮನೆಗೆಲಸ ಸರಿ ಮಾಡುತ್ತಿಲ್ಲವೆಂಬ ನೆಪವಿಟ್ಟುಕೊಂಡು ಏಕಾಏಕಿ ಎಲ್ಲರೂ ಬೈಯ್ಗುಳದ ಮಳೆ ಸುರಿಸುತ್ತಿದ್ದರು. ಪದ್ಮಾ ಹೀಗೆ ಬಯ್ಯಿಸಿಕೊಂಡವಳಲ್ಲ. ಇದೆಲ್ಲಾ ಹೊಸತವಳಿಗೆ. ನಿತ್ಯ ಮಮಕಾರ ತೋರುತ್ತಿದ್ದವರೇ ಹೀಗೆ ಜಗಳ ಕಾಯುತ್ತಿರುವುದು ಅವಳನ್ನು ನೊಂದುಕೊಳ್ಳುವಂತೆ ಮಾಡಿತು. ಮಗು ಪಡೆಯದ ತನ್ನ ಈ ಸ್ಥಿತಿಯಿಂದಾಗಿಯೇ ಇವರೆಲ್ಲಾ ತನ್ನನ್ನು ಸೇರುತ್ತಿಲ್ಲವೆಂಬ ಸಂಗತಿಯನ್ನು ಮನಗಂಡಿರುವ ಅವಳಿಗೆ ಏನು ಮಾಡಬೇಕೋ ತೋಚದಾಯಿತು. ನಿತ್ಯ ಕೂಳು ಕಣ್ಣೀರು ಒಂದು ಮಾಡತೊಡಗಿದಳು.
***
ಪದ್ಮಾಳ ಅತ್ತೆ, ಮಾವನಿಗೂ ಚಿಂತೆ ಮನೆ ಮಾಡಿತು. ತಮ್ಮ ವಂಶ ಬೆಳೆಸುವ ಕುಡಿ ಪಡೆಯಲು ಅದೇನು ಮಾಡಬೇಕೋ ತಿಳಿಯದಾಯಿತು. ದೇವರಾಜನಿಗೆ ಮತ್ತೊಂದು ಮದುವೆ ಮಾಡಿದರೆ ಹ್ಯಾಗೆ ಎನ್ನುವ ಆಲೋಚನೆ ಅವರಲ್ಲಿ ಮೊಳೆಯಿತು. ಕೆಲ ಸಂಬಂಧಿಕರು ಮದುವೆ ಮಾಡುವುದೇ ಸರಿಯೆಂದು ಸಲಹೆ ನೀಡಿದರು. ಇದು ಪದ್ಮಾಳ ಕಿವಿ ತಲುಪಿ ವಿಚಿತ್ರ ಸಂಕಟದಲ್ಲಿ ಮುಳುಗಿದಳು. ದಿನಪೂರ್ತಿ ಮಾತಿಲ್ಲದೆ ಚಿಂತೆಯಲ್ಲೇ ಮುಳುಗಿದಳು. ಲೋಕದ ಪರಿವೆಯನ್ನೇ ಮರೆಯತೊಡಗಿದಳು. ಮುಸುರಿ ತಿಕ್ಕುವಾಗ ಒಂದೇ ದಬರಿಯನ್ನು ತಾಸೊತ್ತು ತಿಕ್ಕುತ್ತಿದ್ದಳು. ಒಲೆಯಲ್ಲಿ ಬೆಂಕಿ ಮಾಡದೆ ಒಲೆಯ ಮ್ಯಾಲೆ ಅನ್ನಕ್ಕೆ ಇಟ್ಟು, ಇನ್ನೇನು ಅನ್ನವಾಗಬಹುದೆಂದು ಕಾಯುತ್ತಿದ್ದಳು. ಬಯಲು ಕಡೆಗೆ ಚರಿಗೆ ತೆಗೆದುಕೊಂಡು ಹೋದರೆ ಕುಳಿತಲ್ಲೇ ಕುಳಿತು ಬಿಡುತ್ತಿದ್ದಳು. ನಡು ರಾತ್ರಿಯಲ್ಲಿ ಎದ್ದು ‘ನನ್ನ ಮಗು ಎಲ್ಲೋತು’ ಎಂದು ಚೀರುತ್ತಿದ್ದಳು. ಇದು ಮನೆ ಮಂದಿಗೆ ಮೊದ ಮೊದಲು ಗಾಬರಿ ತರಿಸಿದರೂ ಇವಳ ಹುಚ್ಚುತನ ಒಂದರ್ಥದಲ್ಲಿ ಅವರಿಗೆ ವರವಾಯಿತು. ದೇವರಾಜನಿಗೆ ಮತ್ತೊಂದು ಮದುವೆ ಮಾಡಲು ಈಗ ಸಲೀಸು ಹಾದಿಯೊಂದು ತೆರೆದಂತಾಯಿತು.
ಪದ್ಮಾ ಮನೆಯಲ್ಲಿ ಯಾವ ಕೆಲಸವನ್ನೂ ಮಾಡದೇ ಭ್ರಮೆ ಹಿಡಿದವಳಂತೆ ಗೋಡೆಗೆ ಆತುಕೊಂಡು ಬಿಟ್ಟ ಕಣ್ಣು ಬಿಟ್ಟಂತೆ ಏನನ್ನಾದರೂ ದಿಟ್ಟಿಸುತ್ತ ಕುಳಿತು ಬಿಡುತ್ತಿದ್ದಳು. ಯಾವಾಗಲೋ ನಿದ್ದೆ ಯಾವಾಗಲೋ ಏಳುತ್ತಿದ್ದಳು. ಅವರತ್ತೆ ಕೊಟ್ಟ ರೊಟ್ಟಿಯನ್ನು ಮನಸು ಬಂದರೆ ತಿನ್ನುತ್ತಿದ್ದಳು. ಇಲ್ಲವೆ ಅಲ್ಲೇ ಇಟ್ಟು ಅದನ್ನು ಕಣ್ಣಲ್ಲೇ ತಿನ್ನುವಂತೆ ನೋಡುತ್ತ ಕುಳಿತು ಬಿಡುತ್ತಿದ್ದಳು. ಜಳಕ ಮಾಡದೆ ತಿಂಗಳುಗಳೇ ಉರುಳಿದವು. ಮನೆ ಮಂದಿಯಲ್ಲಾ ಹೊಡೆದು ಬಡಿದು ನೋಡಿದರು. ಅವಳು ಸರಿಯಾಗಲಿಲ್ಲ. ಊರ ತುಂಬಾ ಪದ್ಮಾ ಹುಚ್ಚಿಯೆಂದು ಸುದ್ದಿಯಾಯಿತು. ಒಮ್ಮೊಮ್ಮೆ ಊರ ಬೀದಿಯಲ್ಲಿ ಸುಖಾಸುಮ್ಮನೆ ತಿರುಗತೊಡಗಿದಳು. ಒಂದೆರಡು ಸಲ ದೇವರಾಜ ಹುಡುಕಿಕೊಂಡು ಹೋಗಿ ಮನೆಗೆ ಕರೆತಂದ. ಆದರೆ, ಪದ್ಮಾ ಒಂದು ಕಡೆ ಕುಳಿತುಕೊಳ್ಳದೆ ಅಲೆಯತೊಡಗಿದಳು. ಮತ್ತೊಂದೆರಡು ದಿನ ಮನೆಗೆ ಬರಲೇ ಇಲ್ಲ. ನೋಡಿದರೆ ಊರ ಹನುಮಪ್ಪನ ಗುಡಿಯಲ್ಲಿ ಕುಳಿತಿದ್ದಳು. ರಾತ್ರಿ ಗುಡಿಯಲ್ಲೇ ಮಲಗಿರುವುದಾಗಿ ಜನ ಹೇಳಿದರು.
ದೇವರಾಜ ‘ಬಾ ಮನೆಗೆ ಹೋಗುಣ. ಇಲ್ಲೇನು ಮಾಡ್ತಿ ಗುಡಿಯಾಗ’ ಎಂದು ಕೈ ಹಿಡಿದು ಎಳೆದ. ಅವಳು ಕೈ ಕೊಸರಿ ಇವನನ್ನು ಅಪರಿಚಿತನಂತೆ ನೋಡುತ್ತಾ ‘ನನ್ನ ಮಗ ಆಡಾಕ ಹೋಗ್ಯಾಣ. ಕರ್ಕೊಂಡು ಬರ್ತಿನಿ. ನಿ ನಡಿ. ಆ ಮ್ಯಾಲೆ ಬರ್ತಿನಿ..’ ಅಂದಳು. ಮನೆಗೆ ಕರೆತರುವುದು ವ್ಯರ್ಥ ಪ್ರಯತ್ನವೆಂದು ಅವಳನ್ನು ಅಲ್ಲಿಯೇ ಬಿಟ್ಟು ದೇವರಾಜ ಮನೆಗೆ ನಡೆದ.
ಪದ್ಮಾಳಿಗೆ ತನ್ನ ಚೆಲುವಿನ ಅರಿವಿದ್ದರೂ ಮನೆಯಲ್ಲಿ ಹಾಸಿ ಹೊದ್ದು ಮಲಗಿದ್ದ ಬಡತನ, ತನ್ನ ಮ್ಯಾಲೆ ಅಗಾಧ ಪ್ರೀತಿ ತೋರುವ ಅಪ್ಪ-ಅವ್ವನ ಮುಖ ಕಣ್ಮುಂದೆ ಸುಳಿದು ಹುಡುಗರಿಗೆ ಸೊಪ್ಪು ಹಾಕದೆ ತಣ್ಣಗಿದ್ದಳು. ದಿನಗಳು ಉರುಳಿ ಕಾಲನೊಳಗೆ ಒಂದಾಗುತ್ತಾ ಹೋದಂತೆ ಅವಳ ಅಪ್ಪ-ಅವ್ವ ಮದುವೆ ಮಾಡಲು ಆ ಕಡೆ ಈ ಕಡೆ ವರ ನೋಡತೊಡಗಿದರು.
ದೇವರಾಜನ ಅಪ್ಪ, ಅವ್ವ ಅಲ್ಲಿ ಇಲ್ಲಿ ಕನ್ಯೆ ನೋಡತೊಡಗಿದರು. ಎರಡನೇ ಸಂಬಂಧವಾದ್ದರಿಂದ ಇನ್ನೂ ಮೇಳೈಸಿರಲಿಲ್ಲ. ತಮ್ಮ ಸಂಬಂಧಿಕರಿಗೆ, ಪರಿಚಯದವರಿಗೆ ಕನ್ಯೆ ನೋಡಲು ಹೇಳಿ ತಾವೂ ಹುಡುಕತೊಡಗಿದರು. ಪದ್ಮಾ ಹುಚ್ಚಿಯಂತೆ ಬೀದಿ ಬೀದಿ ಅಲೆಯುತ್ತಾ ಅವರಿವರು ಕೊಟ್ಟ ಊಟ ತಿನ್ನುತ್ತಾ, ರಾತ್ರಿ ಹನುಮಪ್ಪನ ಗುಡಿಯಲ್ಲೇ ತಂಗುತ್ತಿದ್ದಳು. ಅವಳು ಹೆಚ್ಚು ಅನ್ಯಮನಸ್ಕಳಾಗಿ ಗರ ಬಡಿದಂತೆ ಕುಳಿತು ಬಿಡುತ್ತಿದ್ದಳು. ಎಚ್ಚರವಾದಾಗ ‘ನನ್ನ ಮಗು ಎಲ್ಲೋತು’ ಅನ್ನುತ್ತಿದ್ದಳು. ನೋಡಿದವರು ‘ಪಾಪ, ಈ ಪರಿಸ್ಥಿತಿ ಯಾವ ಹೆಣ್ಣಿಗೂ ಬರಬಾಡ್ದು..’ ಎಂದು ಮರುಗುತ್ತಿದ್ದರು.
ಗುಡಿಯಲ್ಲಿ ಮಲಗಿದ್ದ ಪದ್ಮಾ ಒಂದು ದಿನ ಬೆಳಗಿನ ಜಾವ ಹನುಮಪ್ಪನ ಕಲ್ಲಿನ ಮೂರ್ತಿಗೆ ‘ಏಯ್, ನನ್ನ ಮಗು ಎಲ್ಲಿ. ನೀನೇ ಕಳ್ಳತನ ಮಾಡಿದ್ದು. ಸರಳ ಕೊಡ್ತಿಯೋ ಇಲ್ವೊ. ಇಲ್ಲಾ ನಿನ್ನ ಪರಿಸ್ಥಿತಿ ನೆಟ್ಟಗ ಇರಲ್ಲ ನೋಡು. ಆ ಮ್ಯಾಲೆ ತಲೆ ಕೆಟ್ಟರೆ ನಾನು ಮನಷ್ಯಳೇ ಅಲ್ಲ. ಏನು ಮಾಡ್ತಿನೋ ನನ್ಗ ಗೊತ್ತಿಲ್ಲ. ಸುಮ್ನ ಕೊಟ್ಟು ಬಿಡು. ನೀನಾ ಕಳ್ಳತನ ಮಾಡಿಯಂಥ ಯಾರಿಗೂ ಹೇಳಲ್ಲ ಆಯ್ತ. ನಿನ್ಗೆ ಹೇಳ್ತಿರೋದು. ಸುಮ್ನ ನಿಂತಿಯಲ ಕಲ್ಲು ನಿಂತಂಗ. ಇಲ್ಲಿ ಒದರ್ತಿದಿನಿ. ಜಪ್ಪು ಅನ್ನವಲ್ಲಿ. ಕೊಡು ಅಂದೆ. ಒಂದು, ಎರಡು, ಮೂರು ಎಣಿಸ್ತಿನಿ. ಅಷ್ಟರೊಳಗ ಕೊಡು. ಒಂದು, ಎರಡು, ಮೂರು. ಹೇ ಕೊಡ್ತಿಯೋ ಇಲ್ಲ…’ ಅಂತ ಹನುಮಪ್ಪನ ಮೂರ್ತಿಗೆ ಬಲವಾಗಿ ಹೊಡೆಯತೊಡಗಿದಳು. ಹೊಡದೇ ಹೊಡೆದಳು. ಕೈ ನೋಯತೊಡಗಿ, ದಣಿದು ಆ ಬೆಳಗಿನ ಥಂಡಿಯಲ್ಲೂ ಬೆವೆತಳು. ಬೆವರು ಮೈ ಪೂರ ಆವರಿಸಿತ್ತು. ಸೋತವಳಂತೆ ಅಲ್ಲೇ ನೆಲಕ್ಕೆ ಅಡ್ಡಾದಳು. ಇವಳು ಮಲಗಿದ್ದಷ್ಟೇ ತಡ. ರೆಪ್ಪೆಗಳು ಒಂದಕ್ಕೊಂದು ಹೆಣೆದುಕೊಂಡವು. ಸಣ್ಣಗೆ ಸೆರಗು ಬೀಸುತ್ತಿದ್ದ ತಂಗಾಳಿಗೆ ನಿದ್ದೆ ಹೋದಳು.
ಎರಡ್ಮೂರು ತಾಸು ಬಿಟ್ಟು ಎಚ್ಚರವಾದಾಗ ಮೈ ಭಾರವಾಗಿತ್ತು. ಕೈಗಳು ಅಲ್ಲಲ್ಲಿ ಉಬ್ಬಿಕೊಂಡು ಬಾವು ಬಂದಂತಿದ್ದವು. ನೋವಿನಲ್ಲೇ ಮುಲುಕುತ್ತ ಗುಡಿಯ ಅಂಗಳಕ್ಕೆ ಬಂದಳು. ಹೊಟ್ಟೆಯೊಳಗೆ ಹಸಿವು ಪತರಗುಟ್ಟತೊಡಗಿತ್ತು. ಗುಡಿಯ ಎದುರಿಗಿನ ಮನೆಯ ಮುಂದೆ ನಿಂತಳು. ಆ ಮನೆಯವರು ಹಾಳೆಯಲ್ಲಿ ಉಪ್ಪಿಟ್ಟು ಹಾಕಿ ಕೊಟ್ಟರು. ತಿಂದು ಬೊಗಸೆಗೆ ಸುರಿದ ನೀರು ಕುಡಿದು ಮತ್ತೆ ಗುಡಿಯತ್ತ ಹೆಜ್ಜೆ ಬೆಳೆಸಿದಳು.
ಮತ್ತೆ ನಿದ್ದೆ ಬಂದಂತೆನಿಸಿತು. ಮಲಗಿದಳು. ಗೊರಕೆ ತೆಗೆದಳು. ಇಡೀ ದಿನ ಮಲಗಿದಳು. ಎಚ್ಚರವಾದಾಗ ಏಳೋ, ಎಂಟೋ ಆಗಿತ್ತು. ಮತ್ತೆ ಹಸಿವು. ಬೀದಿಗಿಳಿದಳು. ಮತ್ಯಾರದೋ ಮನೆಯಲ್ಲಿ ನೀಡಿದ ಅನ್ನ ತಿಂದು ಗುಡಿಯ ಕಡೆ ವಾಪಾಸಾದಳು. ಗುಡಿಯಲ್ಲಿ ಬೆಳಗುತ್ತಿದ್ದ ಹಣತೆ ನೋಡಿದಳು. ಸ್ವಲ್ಪ ಹೊತ್ತು ನೋಡಿದ ನಂತರ ಕಣ್ಣು ಉರಿದಂತಾಗಿ ದೃಷ್ಟಿ ಬದಲಿಸಿದಳು. ಹುಡುಗನೊಬ್ಬ ಹಾಸಿಗೆ, ತಲೆ ದಿಂಬು ಹಿಡಿದುಕೊಂಡು ಬರತೊಡಗಿದ್ದ. ಆ ಕಡೆ ನೋಡಿದಳು. ಆ ಹುಡುಗ ಅಲ್ಲೇ ಗುಡಿಯಲ್ಲಿ ಹಾಸಿಗೆ ಹಾಸಿ ಅಡ್ಡಾದ. ಅವನು ಮಲಗಿಕೊಂಡೆ ‘ಏನ್ಬೆ ಊಟ ಮಾಡಿದಿಲ್ಲ..’ ಅಂದ. ಪದ್ಮಾ ಅವನನ್ನು ನೋಡಿದಳೇ ವಿನಃ ಮಾತಾಡಲಿಲ್ಲ. ‘ಹುಚ್ಚರ ಜೊತಿ ಏನು ಮಾತಾಡೋದು…’ ಅಂದುಕೊಂಡು ಅಂವ ಮಲಗಿದ.
ಊರ ತುಂಬಾ ರಾತ್ರಿಯ ನೀರವತೆ ಆವರಿಸಿತ್ತು. ಸಣ್ಣಗೆ ಗಾಳಿ ಸುಳಿಯತೊಡಗಿತ್ತು. ಊರಂತ ಊರೇ ನಿದ್ದೆಗೆ ಜಾರಿತ್ತು. ಅಲ್ಲೊಂದು ಇಲ್ಲೊಂದು ನಾಯಿ ಬೊಗಳುತ್ತಿದ್ದವು. ಎಲ್ಲೋ ದೂರದಲ್ಲಿ ಮಗುವಿನ ಅಳು ಕೇಳತೊಡಗಿತ್ತು. ಪದ್ಮಾ, ಆ ಮಗುವಿನ ಅಳು ಯಾವ ಕಡೆಯಿಂದ ಬರುತ್ತಿದೆ ಎಂದು ಆಲಿಸಲು ಕಿವಿಗೊಟ್ಟಳು. ಮಗು ಅಳು ನಿಲ್ಲಿಸಿತು. ಗೊಂದಲಗೊಂಡಳು. ಅದು ತನ್ನದೆ ಮಗುವೆಂಬಂತೆ ಚಡಪಡಿಸತೊಡಗಿದಳು. ಅವಳಿಗೇ ಗೊತ್ತಾಗದಂತೆ ಕಣ್ರೆಪ್ಪೆ ತೊಯ್ದವು. ಗುಡಿಯಲ್ಲಿ ಮಲಗಿದ್ದ ಆ ಹುಡುಗನನ್ನು ಎಬ್ಬಿಸಿದಳು. ಅವನು ಎದ್ದು ಕಕ್ಕಾಬಿಕ್ಕಿಯಾದ. ‘ನನ್ನ ಮಗು ಕೊಡು ಎಲ್ಲಿಟ್ಟಿ. ಈಗ ಅಳಾಕುಂತಿತ್ತು. ಏನೂ ಗೊತ್ತಿಲ್ಲದ ಮಳ್ಳನಂಗ ಮಲಗಿಯಲ.’ ಎಂದಳು.
ಆ ಹುಡುಗ ಅಚ್ಚರಿಯ ಹಳ್ಳದಲ್ಲಿ ಬಿದ್ದ. ಏನು ಮಾಡಬೇಕೋ ತಿಳಿಯಲಿಲ್ಲ ಅವನಿಗೆ. ಮಾತು ತುಟಿಯ ದಾಟದೆ ಅವಳನ್ನೇ ದಿಟ್ಟಿಸಿದ. ಎಡಗಡೆ ಹರಿದ ಜಂಪರಿನಿಂದ ಹೌದೋ ಅಲ್ಲವೋ ಎನ್ನುವಷ್ಟು ಅವಳ ಮೊಲೆಯ ಸ್ವಲ್ಪ ಭಾಗ ತೋರತೊಡಗಿತ್ತು. ಅವನೊಳಗೆ ಹರೆಯ ಮಿಸುಗೊಡೆಯಿತು. ‘ಬಾ ನನ್ನ ಜೊತೆ. ಇಲ್ಲೇ ಇರ್ಬಹುದು ನಿನ್ನ ಮಗು..’ ಎಂದ. ಪದ್ಮಾ ಖುಷಿಗೊಂಡು ಬೆಳ್ದಿಂಗಳಂತೆ ನಕ್ಕಳು. ಆ ಹುಡುಗನಿಗೆ ಅವಳು ಮೋಹಕವಾಗಿ ಕಂಡಳು. ಗುಡಿಯ ಹಿಂದೆ ಕರೆದುಕೊಂಡು ಹೋದ. ಅಲ್ಲಿ ಕತ್ತಲು ಹಾಸಿ ಹೊದ್ದು ಮಲಗಿತ್ತು. ‘ನಾ ಹೇಳಿದಂಗ ಕೇಳು. ಅಂದ್ರ ನಿನ್ನ ಮಗುನ್ನ ಕೊಡ್ತಿನಿ..’ ಅಂದ. ಅವಳು ‘ಹ್ಞೂಂ’ ಎಂದಳು.
ಆ ಹುಡುಗ ಆ ಕಡೆ ಈ ಕಡೆ ನೋಡಿದ. ನರಪಿಳ್ಳೆಯ ಸುಳಿವೂ ಕಾಣಲಿಲ್ಲ. ಉದ್ರೇಕಗೊಂಡಿದ್ದ. ಅವಳನ್ನು ತಬ್ಬಿ ಮುತ್ತಿಟ್ಟ. ಅವಳು ಪ್ರತಿರೋಧಿಸಲಿಲ್ಲ. ಮಾತು ಕೊಟ್ಟಂತೆ ನಡೆದುಕೊಂಡಳು. ಸುಖದ ನರಳಿಕೆ ಇಬ್ಬರನ್ನೂ ಮುತ್ತಿತು. ಇಬ್ಬರ ಹಣೆಯ ಮೇಲೂ ಬೆವರ ಹನಿಗಳು ಸಾಲುಗಟ್ಟಿದವು. ಅವನು ಆನಂದದ ತುತ್ತ ತುದಿಯಲ್ಲಿ ತೇಲತೊಡಗಿದ. ಎಲ್ಲ ಮುಗಿದ ಮೇಲೆ ಮತ್ತೆ ಗುಡಿಗೆ ಕರೆದುಕೊಂಡು ಬಂದ. ‘ಮಗು ಎಲ್ಲೋ ಹೋಗಿದೆ. ನಾಳೆ ಹುಡುಕಿ ಕೊಡ್ತೀನಿ..’ ಅಂದ. ಇವನ ಮೇಲೆ ಭರವಸೆ ಇಟ್ಟವಳಂತೆ ಹ್ಞೂಂಗುಟ್ಟಿದಳು. ಇಬ್ಬರೂ ನಿದ್ದೆಗೆ ಜಾರಿದರು.
ಮತ್ತೆ ಮಾರನೆಯ ರಾತ್ರಿ. ಅದೇ ಗುಡಿಯ ಹಿಂದಿನ ಕತ್ತಲು. ಆ ಹುಡುಗ ಹೇಳುವ ಮೊದಲೇ ಪದ್ಮಾ ತಾನೇ ಸೀರೆ ಎತ್ತಿದಳು. ಸುಳಿಗಾಳಿಯಲ್ಲೂ ಮೈ ಬೆವರಿತು. ಮತ್ತೆ ಗುಡಿಗೆ ಬಂದು ನಿದ್ದೆ ಹೋದರು. ದಿನಗಳು ಉರುಳಿದವು. ಮೂರ್ನಾಲ್ಕು ತಿಂಗಳಾಗಿರಬೇಕು. ಪದ್ಮಾ ಸ್ವಲ್ಪ ದಪ್ಪವಾದಂತೆ ಗೋಚರಿಸತೊಡಗಿದಳು. ಹುಡುಗನ ಎದೆಯೊಳಗೆ ಹೆದರಿಕೆಯ ಸುಂಟರಗಾಳಿ ಎದ್ದಿತು. ಇದು ತನ್ನ ತಲೆಗೆ ಬರುವಂತಿದೆ ಎಂದುಕೊಂಡ. ಹೇಗಾದರೂ ಮಾಡಿ ಇವಳಿಂದ ದೂರವಾಗಬೇಕೆಂದುಕೊಂಡ. ಆ ರಾತ್ರಿ ಹುಡುಗ ಪದ್ಮಾಳ ಹೊಟ್ಟೆ ಮುಟ್ಟುತ್ತಾ ‘ನಿನ್ನ ಮಗು ಹೊಟ್ಟೇಲಿ ಇದೆ. ಒಂದಿಷ್ಟು ದಿನ ಕಳೆದ ಮ್ಯಾಲೆ ಹೊರಗ ಬರುತ್ತ. ಹೊಟ್ಟೆ ಜೋಪಾನ ನೋಡ್ಕೊ. ನಾನು ಊರಿಗೆ ಹೋಕ್ತಿನಿ. ನಾಳಿಂದ ಈ ಕಡೆ ಬರಲ್ಲಾ..’ ಎಂದು ಹೇಳಿದ.
ಪದ್ಮಾ ಗೆಲುವಿನಿಂದ ತನ್ನ ಹೊಟ್ಟೆಯನ್ನು ಪದೇ ಪದೆ ನೋಡಿಕೊಳ್ಳುತ್ತಾಳೆ. ಹೊಟ್ಟೆ ಸವರಿಕೊಳ್ಳುತ್ತಾ ‘ಮಗು ಇದ್ರೊಳಗ ಐತಾ. ಯಾವಾಗ ಹೊರಗ ಬರುತ್ತಾ. ಆಯ್ತು ಮಗು ಬರೋ ತನ ಜೋಪಾನ ನೋಡ್ಕೋತಿನಿ..’ ಎನ್ನುತ್ತಾಳೆ. ಮರುದಿನದಿಂದ ಆ ಹುಡುಗ ಗುಡಿಯ ಕಡೆ ಮಲಗಲು ಬರುವುದನ್ನು ಬಿಟ್ಟ. ಪದ್ಮಾ ಹೊಟ್ಟೆ ನೋಡಿಕೊಳ್ಳುತ್ತಾ ಖುಷಿಗೊಳ್ಳತೊಡಗಿದಳು. ಅವಳ ತುಟಿಯಲಿ ಹೀಗೆ ನಗೆ ನವಿಲು ಲಾಸ್ಯವಾಡಿ ಅದೆಷ್ಟು ದಿನಗಳಾಗಿತ್ತೋ. ಮುಖದಲ್ಲಿ ಒಂದು ಸಣ್ಣ ಕಾಂತಿಯ ಸೆಳಕು ಕಾಣತೊಡಗಿತ್ತು. ಅವಳ ಸಡಗರಕ್ಕೆ ಪಾರವೇ ಇರಲಿಲ್ಲ.
ಹಸಿವಾದಾಗಷ್ಟೇ ಊಟಕ್ಕಾಗಿ ಮನೆ ಮನೆ ಅಲೆಯುತ್ತಿದ್ದಳು. ಒಂದು ದಿನ ಹೀಗೆ ಊಟಕ್ಕಾಗಿ ಅಲೆಯುತ್ತಾ ತಮ್ಮ ಮನೆಯ ಮುಂದೆಯೇ ನಿಲ್ಲುತ್ತಾಳೆ. ಪದ್ಮಾಳ ಅತ್ತೆ ತಾಯವ್ವ ಇವಳನ್ನು ನೋಡಿ ಕರುಳು ಚುರುಗುಟ್ಟಿ ಒಳ ಕರೆದೊಯ್ದು ಕೈ, ಮುಖ ತೊಳೆದು ಊಟಕ್ಕೆ ಹಾಕುತ್ತಾಳೆ. ತಾಯವ್ವ ಮಾತಾಡಿಸಿದರೂ ಪದ್ಮಾ ತನ್ನದೇ ಲೋಕದಲ್ಲಿರುತ್ತಾಳೆ. ಊಟ ಮುಗಿದ ಮ್ಯಾಲೆ ಎದ್ದ ಪದ್ಮಾ ‘ನೋಡಮ್ಮ ಇಲ್ಲಿ ನನ್ನ ಹೊಟ್ಟೆಯೊಳಗೆ ಮಗು ಇದೆ. ಒಂದಿಷ್ಟು ದಿನದಾಗ ಹೊರಗ ಬರುತ್ತ…’ ಅಂತ ಕಿಲ ಕಿಲ ನಕ್ಕಳು.
ತಾಯವ್ವ ಗಾಬರಿಗೆ ಬಿದ್ದಳು. ಅವಳ ಹೊಟ್ಟೆ ದಿಟ್ಟಿಸಿದಳು. ಇವಳು ಬಸುರಿಯಾಗಿದ್ದು ನಿಜವೆನಿಸಿತು. ತಮ್ಮ ತಪ್ಪಿನ ಅರಿವಾಗಿ ಹಳಹಳಿಸುತ್ತಿರುವಾಗಲೇ ಮಗ ದೇವರಾಜ ಮನೆಗೆ ಬಂದ. ಪದ್ಮಾಳನ್ನು ನೋಡಿ ಕೆಂಡಾಮಂಡಲನಾದ. ‘ಈ ಹುಚ್ಚೀನ ಯಾಕ ಕರ್ಕೊಂಡಿ ಮನಾಗ. ಗೊಡ್ಡ ಹೆಂಗಸಿದು. ಇವ್ಳ ಜೊತಿಗೆ ನಮ್ದೇನು. ಅಷ್ಟು ತಿಳಿಯಲ್ಲನುಬೇ ನಿನಗ ಮುದುಕಿ ಆಗಿ..’ ಎಂದು ಸಿಟ್ಟಿಗೆದ್ದು ಒದರಾಡತೊಡಗಿದ. ತಾಯವ್ವ ಕಣ್ಣೀರುಗರೆಯತೊಡಗಿದಳು. ದೇವರಾಜ ಅವರವ್ವ ಅಳುತ್ತಿರುವುದಕ್ಕೆ ಹೌಹಾರಿದ. ತಾನು ಬಯ್ಯಬಾರದಿತ್ತು ಅಂದುಕೊಂಡ. ‘ಸಿಟ್ಟಿನ್ಯಾಗ ಅಂದೆ. ಅದ್ಕ ಅಳ್ತಾರನಬೆ..’ ಅಂತಾ ರಮಿಸಲು ನೋಡಿದ. ತಾಯವ್ವ ಬಿಕ್ಕಳಿಸಿ ಬಿಕ್ಕಳಿಸಿ ಅಳತೊಡಗಿದಳು. ಪದ್ಮಾ ಅಳುಕುತ್ತಲೇ ಅವರನ್ನು ನೋಡತೊಡಗಿದಳು. ಕ್ಷಣ ಹೊತ್ತು ತಡೆದು ನಗತೊಡಗಿದಳು. ದೇವರಾಜ ಅವಳಿಗೆ ಕೆಂಗಣ್ಣು ಬಿಟ್ಟ. ಅವಳು ಹೊಟ್ಟೆ ತೋರಿಸಿ‘ ಇಲ್ನೋಡು. ಇದ್ರೊಳಗೆ ಮಗು ಐತಿ. ಒಂದಿಷ್ಟು ದಿನದಾಗ ಹೊರಗ ಬರುತ್ತ…’ ಎಂದು ನಗ ತೊಡಗಿದಳು. ದೇವರಾಜ ಅವಳ ಬಸುರಿ ಹೊಟ್ಟೆ ನೋಡಿ ಮೂರ್ಛೆ ಹೋದ.
***
ತಾಯವ್ವ ತನ್ನ ಗಂಡ ಗೋವಿಂದನಿಗೂ ನಿಜ ಹಕೀಕತ್ತು ಹೇಳಿದಳು. ಏನು ಮಾಡಬೇಕೋ ತಿಳಿಯದಾಯಿತು ಅವರಿಗೆ. ದೇವರಾಜನಂತೂ ಅನಿರೀಕ್ಷಿತ ಆಘಾತದಿಂದ ತತ್ತರಿಸಿ ಹೋಗಿದ್ದ. ಅವನಿಗೆ ಅವಮಾನವೇ ಕತ್ತರಿಸಿಕೊಂಡು ಮೈ ಮ್ಯಾಲೆ ಬಿದ್ದಂತಾಗಿತ್ತು. ತನ್ನ ಬಗೆಗೆ ತಾನೇ ರೋಷಗೊಂಡ. ಪದ್ಮಾ ಮಾತ್ರ ತನಗೂ ಲೋಕಕ್ಕೂ ಸಂಬಂಧವೇ ಇಲ್ಲದಂತೆ ಹೊಟ್ಟೆ ನೋಡಿಕೊಳ್ಳುತ್ತಾ ಹರ್ಷಗೊಂಡು ಇನ್ನೇನು ಮಗು ಬಂದು ಬಿಡುತ್ತದೆಂದು ಹೇಳಿದ್ದನ್ನೇ ಹೇಳುತ್ತಾ ಇವರೆಲ್ಲರ ಕಡೆ ನಗು ಬಿಸಾಕುತ್ತಿದ್ದಳು.
ತಾಯವ್ವ ‘ಪದ್ಮಾ ಬಸುರಿ ಇರೋದು ಯಾರ್ಗೂ ಹೇಳಬ್ಯಾಡ್ರಿ. ಹೇಳಿದ್ರ ಮಂದಿ ತಲಿಗೊಂದು ಮಾತಾಡ್ತಾರ. ಅದ್ಕ ಸುಮ್ಮನ ಇದ್ದು ಬಿಡೋಣ್ರು. ಇನ್ಮೇಲೆ ಆಕಿ ಮನ್ಯಾಗ ಇರ್ಲಿ. ಆ ಮ್ಯಾಲೆ ಇಕಿ ಬಸುರಿ ಇರೋದು ಮಂದಿಗೆ ತಾನ ಗೊತ್ತಾಗುತ್ತ. ಆದ್ರ ಇಕಿ ಇರೋದ್ರಿಂದ ಯಾರ್ಗೂ ಅನುಮಾನ ಬರಲ್ಲ. ಇಲ್ಲಂದ್ರ ನಮ್ಮ ಮರ್ಯಾದಿ ನಾವ ಕಳ್ಕೊಂತಿವಿ. ದೇವ್ರಾಜ ನೀನು ಮನಸಿಗೆ ಹಚ್ಕೊಬ್ಯಾಡ. ನೀನರ ಏನು ಮಾಡ್ಬೇಕು. ದೇವ್ರು ಕೊಟ್ಟಂಗ ಅದಿ. ಇಕಿ ಹೊಟ್ಯಾಗ ಇರೋ ಕೂಸಿನ ಅಪ್ಪ ಯಾರಾದ್ರೂ ಇರ್ಲಿ. ಮಂದಿಗಂತೂ ಗೊತ್ತಾಗಲ್ಲ. ನೀನು ಇನ್ನೊಂದು ಮಾಡಿಕೊಂಡಿದ್ರೂ ತಾಪತ್ರಯ ಅನುಭವಿಸಬೇಕಿತ್ತು. ನಮ್ಮ ಹಿರಿಯರ ಪುಣ್ಯ ಇರ್ಬೇಕು. ಪದ್ಮಾ ನಮ್ಮ ಸೊಸಿ. ನಿನ್ನ ಹೆಂಡತಿ. ಅಕಿ ಹೊಟ್ಯಾಗ ಹುಟ್ಟೋ ಮಗು ಈಗ ನಿಂದಾ ಅನ್ಕೋ. ಅಕಿನ ನಾವು ಚೊಲೋತ್ನಾಗ ನೋಡ್ಕೋಬೇಕು. ಇಲ್ಲಾಂದ್ರ ಕೈಯ್ಯಿಗೆ ಬಂದಿದ್ದು ಬಾಯ್ಗೆ ಬರಲ್ಲ. ಚೊಲೋ ನೋಡ್ಕೊಂಡ್ರ ಅಕಿ ತಲಿನೂ ಸುದ್ದಾಗುತ್ತ. ನಮ್ಮ ಮನಿ ಬೆಳಗಾಕ ಒಂದು ಕೂಸುನು ಸಿಗುತ್ತ. ನಾವು ಗಟ್ಟಿ ಧೈರ್ಯ ಮಾಡೋಣ. ಪದ್ಮಾಂದು ತಪ್ಪಿಲ್ಲ. ನಮ್ದೂ ತಪ್ಪಿಲ್ಲ. ಆ ಪರಮಾತ್ಮ ಆಡಿಸಿದಂಗ ಆಡಾಕಂತಿವಿ. ಅಕಿ ಬ್ಯಾರೆದವ್ರಿಗೆ ಬಸುರಿ ಆಗಿದ್ದು ಮರ್ಯಾದೆಗೇಡು ಅಂತ ಅನ್ಕೊಳ್ಳುದು ಬ್ಯಾಡ..’ ಅಂತ ಕಡ್ಡಿ ಮುರಿದಂತೆ ಹೇಳಿದಳು. ಗೋವಿಂದನಿಗೂ ತಾಯವ್ವನ ಮಾತು ಸರಿ ಅನಿಸಿತು. ದೇವರಾಜ ಮಾತ್ರ ಏನು ಮಾಡಬೇಕೆಂದು ತಿಳಿಯದೆ ಗರ ಬಡಿದವನಂತೆ ಕುಳಿತಿದ್ದ.
ದಿನಗಳು ಉರುಳಿದವು. ತಾಯವ್ವ ಪದ್ಮಾಳನ್ನು ತನ್ನ ಕಣ್ಣ ಗೊಂಬೆಯಂತೆ ಕಾಳಜಿ ಮಾಡಿದಳು. ತಾಯವ್ವನ ಆಣತಿಯಂತೆ ದಿನದಿಂದ ದಿನಕ್ಕೆ ಪದ್ಮಾಳ ಒಳಗಿನ ಹುಚ್ಚು ಕಮ್ಮಿಯಾಗುತ್ತಾ ಬಂತು. ಅವಳು ಬಸುರಿ ಇರೋದು ಸುತ್ತ-ಮುತ್ತಲ ಮನೆಯವರಿಗೆಲ್ಲಾ ಗೊತ್ತಾಗಿ ‘ಪಾಪ ಮದ್ವಿಯಾಗಿ ಬಾಳ ವರ್ಷ ಆಗಿತ್ತು. ಪದ್ಮಾಗ ಮಕ್ಕಳ ಆಗುಲ್ಲ ಅನ್ಕೊಂಡಿದ್ವಿ. ದೇವ್ರಾಜ ದಡಕ್ಕನ ದುಡ್ಕಿ ಬ್ಯಾರೆ ಮದ್ವಿಯಾಗಿದ್ರ ಪದ್ಮಾನ ಬಾಳೆ ಮೂರಾಬಟ್ಟಿಯಾಗ್ತಿತ್ತು. ದೇವ್ರು ಅಕಿ ಪಾಲಿಗೆ ಅದಾನ. ಎಲ್ಲಾ ಚೊಲೋ ಆತು ನೋಡೀಗ..’ ಅಂತ ಮಾತಾಡಿಕೊಂಡರು.
ಪದ್ಮಾ ಮೊದಲಿನಂತಾದಳು. ಅವಳಿಗೆ ಹುಚ್ಚು ಹಿಡಿದಿದ್ದು, ತಾನು ಮನೆ ಬಿಟ್ಟು ಹೋಗಿದ್ದು ಯಾವುದೂ ನೆನಪಿಲ್ಲ. ಸಹಜವೆಂಬಂತೆ ಇದ್ದಳು. ತಾಯವ್ವ ತೋರುವ ಅಕ್ಕರೆಗೆ, ಪ್ರೀತಿಗೆ ಹ್ಯಾಗೆ ಕೃತಜ್ಞಳಾಗಿರಬೇಕೆಂಬುದೇ ಪದ್ಮಾಳಿಗೆ ತೋಚದಾಗಿತ್ತು. ಎಲ್ಲ ಮನೆಗೆಲಸ ತಾಯವ್ವನೇ ಮಾಡುತ್ತಿದ್ದಳು. ಪದ್ಮಾ ಮಾಡಲು ಹೋದರೆ ‘ನೀನು ಬಸುರಿ ಹೆಣ್ಮಗಳು. ಆರಾಮಿರು. ಹಡೆದಿಂದ ಮತ್ತೆ ಕೆಲ್ಸ ಮಾಡೋದು ಐತಿ…’ ಅಂತ ಪ್ರೀತಿಯಿಂದ ಗದರುತ್ತಿದ್ದಳು. ಪದ್ಮಾ ನಗುತ್ತ ಹ್ಞೂಂಗುಟ್ಟುತ್ತಿದ್ದಳು.
ದೇವರಾಜ ಎಂದಿನಂತೆ ಕಳೆಯಾಗಿರಲಿಲ್ಲ. ಜೋಲು ಮಾರಿ ಹಾಕಿ ತಿರುಗುತ್ತಿದ್ದ. ಪದ್ಮಾಳಿಗೆ ಅವನನ್ನು ನೋಡಿ ಕೆಡುಕೆನಿಸುತ್ತಿತ್ತು. ‘ಯಾಕ್ರಿ ಸಪ್ಪಗದಿರಿ. ಆರಾಮೈತಿಲ್ಲ. ಡಾಕ್ಟ್ರ ಹತ್ರಾನರ ತೋರಿಸ್ಕೊಳ್ರಿ’ ಎಂದು ಮಮತೆ ತೋರುತ್ತಿದ್ದಳು. ಇಂವ ‘ಹೇ ಆರಾಮದಿನಿ. ನನಗೇನಾಗೈತಿ’ ಅಂತ ತುಟಿಯಲ್ಲಿ ನಗು ಅರಳಿಸಲು ಯತ್ನಿಸಿ ಸೋಲುತ್ತಿದ್ದ. ಅವನ ಗೆಳೆಕಾರರು ‘ದೇವ್ರಾಜ, ಅಂತೂ ಗಣ್ಮಾಗ ಅಂತ ತೋರಿಸಿದೆಪಾ. ಇನ್ನೇನು ಮಗ ಬಂದು ಬಿಡ್ತಾನ. ಪಾರ್ಟಿ ಕೊಡಿಸೋ ಮತ್ತ..’ ಎಂದು ನಕಲಿ ಮಾಡುತ್ತಿದ್ದರು. ತನ್ನೊಳಗಿನ ಸಂಕಟ ತೋರಗೊಡದೆ ‘ಹೇ ಕೊಡಿಸೂಣು…’ ಅಂತ ಹೇಳುತ್ತಲೇ ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದ. ಮೈ ಕೈ ತುಂಬಿಕೊಂಡಿದ್ದ ದೇವರಾಜ ದಿನದಿಂದ ದಿನಕ್ಕೆ ಸೊರಗಿ ಸೋತವನಂತೆ ತೋರತೊಡಗಿದ್ದ. ಅವನ ಅವ್ವ, ಅಪ್ಪ, ಹೆಂಡತಿ ಎಲ್ಲ ಇವನ ಅವತಾರ ನೋಡಿ ಮರುಗುತ್ತಿದ್ದರು.
ಹೊತ್ತು ಹೊತ್ತಿಗೆ ಊಟ ಮಾಡದೇ ಚಿಂತಾಕ್ರಾಂತನಾಗಿ ಸುಮ್ಮನೆ ಕುಳಿತು ಬಿಡುತ್ತಿದ್ದ. ಹೆಂಡತಿಯ ಬಸಿರು ಮಾಡಿದವನು ಯಾರಿರಬಹುದೆಂದು ಆಲೋಚಿಸುತ್ತಿದ್ದ. ಹೀಗೆ ಆಲೋಚಿಸುವಾಗ ಅವನೊಳಗೆ ನೂರು ಸಂಕಟದ ಅಲೆಗಳೆದ್ದು ಹಿಂಸಿಸುತ್ತಿದ್ದವು. ತನಗೆ ಮಕ್ಕಳನ್ನು ಹುಟ್ಟಿಸುವ ತಾಕತ್ತಿಲ್ಲವೆಂಬುದನ್ನು ನೆನದು ಕಣ್ಣೀರುಗರೆಯುತ್ತಿದ್ದ. ರಾತ್ರಿ ಪದ್ಮಾ ಯಾರೊಂದಿಗೋ ಮಲಗಿದಂತೆ ಕನಸು ಬಿದ್ದು ಚಿಟ್ಟನೆ ಚೀರಿ ಬೆವತು ಬಿಡುತ್ತಿದ್ದ. ಹೀಗಾದಾಗೆಲ್ಲ ಮನೆ ಮಂದಿ ಹೌಹಾರುತ್ತಿದ್ದರು. ದೇವರಾಜ ಇತ್ತಿತ್ತಲಾಗಿ ರಾತ್ರಿ ಮಲಗಲು ಹಾಸಿಗೆ ಹಿಡಿದುಕೊಂಡು ಹನುಮಪ್ಪನ ಗುಡಿಗೆ ಹೋಗತೊಡಗಿದ. ರಾತ್ರಿ ಗುಡಿಯಲ್ಲಿ ಹತ್ತಾರು ಜನ ಮಲಗುತ್ತಿದ್ದರು. ಇಂವ ಕಣ್ಣಿಗೆ ಕಣ್ಣು ಹಚ್ಚದೆ ಎದ್ದು ಕುಳಿತು ಆ ಹತ್ತಾರು ಜನರಲ್ಲಿ ಪದ್ಮಾಳೊಂದಿಗೆ ಮಲಗಿದವನು ಯಾರಿರಬಹುದೆಂದು ಕಣ್ಣು ಪಿಳುಕಿಸದೆ ಎಲ್ಲರನ್ನೂ ದಿಟ್ಟಿಸುತ್ತಿದ್ದ. ಕಣ್ಣು ಸೋತ ನಂತರ ಪತ್ತೆ ಹಚ್ಚುವುದು ಹ್ಯಾಗೆಂದು ತಿಳಿಯದೆ ಯಾವಾಗಲೋ ನಿದ್ದೆ ಹೋಗುತ್ತಿದ್ದ.
ಒಂದು ದಿನ ಹನುಮಪ್ಪನ ಗುಡಿಯಲ್ಲಿ ರಾತ್ರಿ ಮಲಗಿ ಬೆಳಗ್ಗೆ ಮನೆಗೆ ಬಂದಾಗ ಪದ್ಮಾಳ ಡಿಲೆವರಿಯಾಗಿತ್ತು. ಇಂವ ಮನೆಯೊಳಗೆ ಬಂದ ಕೂಡಲೇ ತಾಯವ್ವ ‘ದೇವ್ರಾಜ ನನ್ಗ ಗಂಡ ಹುಟ್ಯಾನ ನೋಡು..’ ಎಂದು ಹರ್ಷ ವ್ಯಕ್ತಪಡಿಸಿದಳು. ಇವನಿಗೆ ಏನು ಮಾಡಬೇಕೆಂದೇ ತೋಚಲಿಲ್ಲ. ಆ ಕೋಣೆಯಲ್ಲಿ ಕೂಸು ಅಳತೊಡಗಿತ್ತು. ಪದ್ಮಾ ‘ಅಳ್ಬಾಡ್ಬು ಪುಟ್ಟಾ. ನಿಮ್ಮಪ್ಪ ಬರ್ತಾನ ತಡಿ ಈಗ..’ ಅಂತ ರಮಿಸತೊಡಗಿದ್ದಳು. ದೇವರಾಜ ಮಾತಿಲ್ಲದೆ ಕೋಣೆಯೊಳಗೆ ಬಂದ. ಅವನನ್ನು ನೋಡಿದ ಪದ್ಮಾ ನಾಚುತ್ತಲೇ ಮಗುವನ್ನು ಅವನ ಕೈಗೆ ಕೊಟ್ಟಳು. ದೇವರಾಜ ಆ ಮಗುವನ್ನು ಕಣ್ತುಂಬಿಕೊಂಡ. ತುಟಿಯಲ್ಲಿ ಹೌದೋ ಅಲ್ಲವೋ ಅನ್ನುವಷ್ಟು ನಗು ಅರಳಿತು. ಮಗುವನ್ನು ಮುದ್ದಿಸಿ ಪದ್ಮಾಳ ಕೈಗೆ ಕೊಟ್ಟು ಹೊರ ಬಂದು ಅಳತೊಡಗಿದ. ತಾಯವ್ವ ಕಣ್ಣೀರು ಒರೆಸಿ ರಮಿಸಿದಳು.
ದೇವರಾಜ ಎಂದಿನಂತೆ ಊಟ ಮಾಡಿ ರಾತ್ರಿ ಮಲಗಲು ಹನುಮಪ್ಪನ ಗುಡಿಗೆ ಬಂದ. ಗುಡಿಯೊಳಗಿನ ದೀಪ ತನ್ನ ಪಾಡಿಗೆ ತಾನು ಬೆಳಗತೊಡಗಿತ್ತು. ಆಗಲೇ ಹತ್ತಾರು ಜನ ಹೊದ್ದುಕೊಂಡು ಮಲಗಿದ್ದರು. ಕಣ್ಣ ಬಳಿ ಮಗುವಿನ ಚಿತ್ರವೇ ಮೂಡಿದಂತಾಗಿ ಅವನಿಗೆ ನಿದ್ದೆ ಬರಲಿಲ್ಲ. ತುಸು ಹೊತ್ತು ಹಾಗೇ ಕಳೆದ. ಮಲಗಿದ ಕೆಲವರಲ್ಲಿ ಗೊರಕೆ ತಗೆದಿದ್ದರು. ಅವನಿಗೆ ಮತ್ತೆ ಮತ್ತೆ ಮಗುವಿನ ಅಳು, ಅದರ ಮುಖ ಕಣ್ಣೆದುರು ಮೆರವಣಿಗೆ ಹೊರಟಂತೆ ಭಾಸವಾಗತೊಡಗಿತು. ಪದ್ಮಾಳೊಂದಿಗೆ ಮಲಗಿದವನನ್ನು ಈಗ ಸುಲಭವಾಗಿ ಪತ್ತೆ ಹಚ್ಚಬಹುದು ಅನಿಸಿತವನಿಗೆ. ಮಲಗಿರುವವರು ಮುಖದ ಮ್ಯಾಲೆ ಹೊದ್ದ ಕೌದಿ ಸರಿಸಿ ನೋಡತೊಡಗಿದ. ಐದಾರು ಜನರನ್ನು ನೋಡಿರಬೇಕು. ಅದರಲ್ಲಿ ಮಗುವಿನ ಮುಖ ಹೋಲುವವರು ಯಾರೂ ಕಾಣಲಿಲ್ಲ. ಮತ್ತೆ ಉಳಿದವರ ಮುಖದ ಮ್ಯಾಲಿನ ಕೌದಿ ಸರಿಸಿ ನೋಡತೊಡಗಿದ. ಕೌದಿ ಸರಿಸಿದರೆ ಒಬ್ಬನು ದಿಂಬಿಗೆ ಮುಖ ಮಾಡಿ ದಬ್ಬು ಮಲಗಿದ್ದ. ದೇವರಾಜ ಅವನನ್ನು ಹಗುರ ಹೊಳಸಿದ. ಆದರೆ, ಅವನು ನಿದ್ದೆ ಕದಡಿದವನಂತಾಗಿ ಎದ್ದು ಕುಳಿತ. ದೇವರಾಜ ಅವನನ್ನು ದಿಟ್ಟಿಸಿ ನೋಡಿದ. ಮಗುವಿನ ಹೋಲಿಕೆ ಕಂಡಂತಾಯಿತು. ಮತ್ತೆ ಮತ್ತೆ ನೋಡಿದ. ರೋಷಗೊಂಡ. ‘ಲೇ ನನ್ನ ಹೆಂಡತಿ ಜೊತಿ ನೀನೇ ಹೌದಿಲ್ಲ ಮಲ್ಕೊಂಡಾಂವ..’ ಅಂದು ಅವನ ಕೊರಳಪಟ್ಟಿ ಹಿಡಿದ. ಅವನು ಕೈ ಕೊಸರಿಕೊಂಡು ಓಡತೊಡಗಿದ. ದೇವರಾಜ ಅವನ ಬೆನ್ನು ಹತ್ತಿದ. ಇಬ್ಬರೂ ಕತ್ತಲಲ್ಲಿ ಕರಗಿದರು.
*****
ನಾನು ಇಲ್ಲಿ ಈ ಕತೆಯ ವಿಶ್ಲೇಷಣೆಯ ಗೋಜಿಗೆ ಹೋಗುವುದಿಲ್ಲ. ಯಾಕೆಂದರೆ ಒಂದು ಕತೆ ಅಥವಾ ಕಾವ್ಯ ಪ್ರತಿ ಓದುಗನಿಗೂ ಭಿನ್ನವಾಗಿಯೇ ಕಾಣುತ್ತದೆ. ಚೇತೋಹಾರಿಯೆಂದರೆ ಒಂದೇ ಕತೆ ಮರು ಓದಿಗೆ ಬೇರೆಯದೇ ಅರ್ಥವನ್ನು ಹೊಳೆಸುತ್ತದೆ. ಇದು ಸಾಹಿತ್ಯದ ಕಸುವು. ಹಾಗಾಗಿ ಕತೆಯ ವಿಶ್ಲೇಷಣೆಯ ಬದಲಿಗೆ ‘ಕತ್ತಲಿನಾಚೆ’ ಕತೆ ಬರೆಯಲು ಪ್ರೇರಣೆಯಾದ ಸಂಗತಿಗಳ ಕುರಿತು ಹೇಳಬಯಸುವೆ.
ಇದು ಒಂದು ಊರಿನ ಕತೆಯಲ್ಲ. ಊರೂರಿನ ಕತೆ. ಹೆಣ್ಣನ್ನೇ ಯಾವತ್ತೂ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿರುವುದು ನಮ್ಮ ಇಂಡಿಯಾದಲ್ಲಿ ಹೊಸದೇನಲ್ಲ. ಮಗು ಆಗದಿದ್ದರೆ ಅದಕ್ಕೆ ಹೆಣ್ಣನ್ನೇ ಹೊಣೆಯಾಗಿಸಲಾಗುತ್ತಿದೆ. ಆದರೆ, ವಾಸ್ತವ ಬೇರೆಯೇ ಆಗಿರುತ್ತದೆ. ಮಗು ಆಗದಿರುವುದಕ್ಕೆ ಗಂಡೂ ಕಾರಣವೆಂಬ ಸರಳ ಸತ್ಯವನ್ನು ಅರಗಿಸಿಕೊಳ್ಳುವುದು ಇಲ್ಲಿ ಕಷ್ಟ. ಇಂಥಹ ಹತ್ತಾರು ಘಟನೆಗಳನ್ನು ಕೇಳಿದ್ದೇನೆ ಮತ್ತು ಕಂಡಿದ್ದೇನೆ.
ಒಂದು ವಿಷಣ್ಣ ಸಂಜೆ. ಮಧ್ಯಾಹ್ನದ ಬಿಸಿಲ ಧಗೆಗೆ ಕಾಯ್ದ ನೆಲದ ಕಾವು ಸಂಜೆಯಾದರೂ ತೊಲಗುತ್ತಿಲ್ಲ. ಆ ಧಗೆ ನನ್ನೊಳಗೂ ಅಟ್ಟಾಡಿಸತೊಡಗಿತ್ತು. ಗಡಿಗೆಯ ತಣ್ಣೀರು ಕುಡಿದರೂ ತೃಪ್ತನಾಗಲಿಲ್ಲ. ಸಂಜೆಯಾದ್ದರಿಂದ ಸುಮ್ಮನೆ ವಾಕ್ ಹೊರಟೆ. ಮನಸು ಮಾತ್ರ ಕಾರಣವಿಲ್ಲದೆ ಸಿಡಿಮಿಡಿಗೊಳ್ಳತೊಡಗಿತ್ತು. ನನ್ನ ಮುಂದೆ ಒಂದಿಬ್ಬರು ಮಧ್ಯವಯಸ್ಸಿನ ಹೆಂಗಸರು ಅದೇನೇನೋ ಮಾತಾಡುತ್ತ ಹೆಜ್ಜೆ ಹಾಕತೊಡಗಿದ್ದರು. ಅವರ ಮಾತಿನ ತುಣುಕುಗಳು ಅರೆಬರೆಯಾಗಿ ನನ್ನ ಕಿವಿಗಳ ಮೇಲೂ ಬೀಳತೊಡಗಿದ್ದವು. ‘ಆಕಿ ಮದುವ್ಯಾಗಿ ಏಳೆಂಟು ವರ್ಷ ಆಗಿತ್ತು. ಈಗ ಬಸಿರಾಗ್ಯಾಳ. ಅಕಿ ಗಂಡನ ಕಡೆಯಿಂದ ಏನೂ ಕಮಾಯ ಆದಂಗಿಲ್ಲ. ಅವ್ರ ಮನಿ ಎದುರಿಗೆ ಆ ಹುಡುಗ ಇದಾನಲಾ ಅವನ ಜೊತೆ ಇದಾಳ ಆಕಿ ಅಂತ ಸುದ್ದಿ ಇತ್ತು. ಅದು ಈಗ ಖರೆ ಆತು ನೋಡು..’ ಹೀಗಿತ್ತು ಅವರ ಮಾತಿನ ದಾಟಿ. ಈ ಮಾತು ಕೇಳುತ್ತಾ ಇಂಥಹ ಹತ್ತಾರು ಘಟನೆಗಳು ನೆನಪಿಗೆ ಬಂದವು. ನಾನು ಹೆಜ್ಜೆ ಹಾಕುತ್ತಲೇ ಇದ್ದೆ. ಮನಸೊಳಗೆ ಮಾತ್ರ ವಿಚಿತ್ರ ತಳಮಳ ನಡೆದಿತ್ತು. ವಾಕ್ ಮುಂದುವರೆಸದೆ ಮನೆಗೆ ಬಂದು ಕತೆ ಬರೆಯಲು ಕುಳಿತೆ. ಕತೆ ಬರೆಯವುದು ಮುಗಿದಾಗ ರಾತ್ರಿಯಾಗಿತ್ತು. ಅಂಗಳದಲ್ಲಿ ಬೀಸತೊಡಗಿದ್ದ ತಣ್ಣನೆ ಗಾಳಿ ಕಿಟಕಿಯಲಿ ಸುಳಿದು ಆರಾಮು ಅನಿಸತೊಡಗಿತು. ಮನಸು ಸುಖದಲ್ಲಿ ತೊಯ್ದಂತೆ ಭಾಸವಾಗತೊಡಗಿತು. ಇದಿಷ್ಟು ಈ ಕತೆಯ ಕತೆ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ