ಹೀಗೊಂದು ಅವಘಡದ ಹಗಲು

ಶಹರದ ನಸುಕಿಗೂ ಈಗ ಭಯದ ನೆರಳು
ಕ್ಯೂನಲ್ಲಿ ತನ್ನ ಕಳೆದುಕೊಳ್ಳುವ ಸಮಯಕ್ಕೆ
ಇಲ್ಲೀಗ ಬೇಗ ಎಚ್ಚರ
ಬಸ್ಸು, ಕಾರುಗಳ ವೇಗ
ಫ್ಲೈ ಓವರಿಗೆ ಸೋಕುವ ಮೊದಲೇ
ಸಂಜೆಯ ಸೊಳ್ಳೆಗಳಂತೆ ಮುತ್ತುವ ಜನ
ಕಾಫಿ ಹೀರುವ ಮೊದಲೇ
ಗಡಗುಡಿಸುವ ಭೀಮಕಾಯದ
ಬೈಕುಗಳು ರೊಯ್ಯನೆ ಹಾರುತ್ತವೆ
ನಂದಿಬೆಟ್ಟಕ್ಕೋ, ಚಿಕ್ಕಮಗಳೂರಿಗೋ
ಬಿಟ್ಟ ಬಾಯಿ ಬಿಟ್ಟಂತೆ ಬೆಪ್ಪಾದವರ ಅಣಕಿಸುತ್ತ

ಲಕ್ಷಗಳಲ್ಲಿ ತೂಗುವ ದಿರಿಸು, ಮತ್ತೆ ಪರಿಕರಗಳು
ಹೊಸ ರಕ್ತವ ಕುದಿಸುವ ಕಂಪನಿಯ ಪರ್ಕ್ ಗಳು
ಅಲ್ಲೆಲ್ಲೋ ದೂರದೂರಿನಲ್ಲಿ ಹೆತ್ತ ಕರುಳು
ಅಂದು ಮುಂಜಾನೆ ಹಿಂಡಿ ನೋಯಿಸುತ್ತದೆ
ಅವಳ
ದೇವರಿಗೆ ದೀಪ ಹಚ್ಚಿ ಕೈ ಮುಗಿಯುವುದಷ್ಟೇ
ಪಾಲಿನ ಪಂಚಾಮೃತ
ಅಲ್ಲೇ ಇರು , ಸುಖವಾಗಿರು ಮಗನೆ
ಅಂದದ್ದು ಕೇಳಿರಲಾರದು ಇನ್ನೂ
ಆಯತಪ್ಪಿದ ಜಿಗಿತ
ಪಾತಾಳವೆಂದರೆ ಇದೇ ಇರಬಹುದು

ಅವಳ ಕರುಳಬಳ್ಳಿ ಹರಡಿದಲ್ಲೆಲ್ಲ
ರಕ್ತದೋಕುಳಿ
ಸೂರ್ಯ ಇನ್ನೂ ಉದಯಿಸಬೇಕಷ್ಟೇ
ಆಗಲೇ ಮಾರಣ ಹೋಮ
ಮಗನ ದಿಟ್ಟಿ ತೆಗೆಯುವುದ ಮರೆತುಬಿಟ್ಟೆ
ಗೋಳಾಡುತ್ತಾಳೆ ಅಮ್ಮ
ಕೈಯಲ್ಲಿ ಕೆಂಪು ನೀರ ಬಟ್ಟಲು
ಎಲೆಯ ಮಧ್ಯೆ ಅಡಿಕೆ
ಮದುವೆಯೂ, ಸಂಸಾರವೂ, ಮಕ್ಕಳೂ
ಸುಣ್ಣ ಕರಗಿ ನೀರಿಗೆ ಇನ್ನಷ್ಟು ರಂಗು
ಅವನೆಲ್ಲಿ ಈಗ?

ಅದೋ ಸಿಡಿದು ಚೂರಾದ ಅವಳ ಒಡಲ
ಗುರುತು ಸಿಗದ ಭಾಗಗಳು ಚದುರಿ ಹೋಗಿವೆ
ಕನಸುಗಳೆಲ್ಲ ವೇಗದೊಂದಿಗೆ ಇಲ್ಲವಾಗಿವೆ
ಅವಳ, ಅವರೆಲ್ಲರ
ಎದೆಗೂಡಲ್ಲಿ ಒಂಟಿ ದೀಪದ ಮಿಣುಕ ಬಿಟ್ಟು

ಬರುವ ಭಾನುವಾರ
ಅದೇ ಫ್ಲೈಓವರ್ ಮೇಲೆ
ಮತ್ತೆ ಗಡಗುಡು ಸದ್ದು
ಅದರ ಗುಂಡಿಗೆ ಸ್ತಬ್ದವಾಗಿ
ಚೆಲ್ಲಿದ ಹೊಸಬಿಸಿ ರಕ್ತದ ಕಲೆ ಕಾಣದಂತೆ
ತನ್ನ ಕಲ್ಲು ಎದೆಯ ಹರವಿ ಹಾರೈಸುತ್ತದೆ
ಕಂದಾ,
ಅಮ್ಮ ಹಚ್ಚುವ ಹಣತೆ ನಿನ್ನ ಕಾಯಲಿ.