Advertisement
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಗುರುರಾಜ್ ಸನಿಲ್ ಬರೆದ ಕತೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಗುರುರಾಜ್ ಸನಿಲ್ ಬರೆದ ಕತೆ

ಅಷ್ಟು ಕೇಳಿದ್ದೇ ತಡ, ಇಬ್ಬರ ಮುಖಗಳೂ ಕಳೆಗುಂದಿದುವು. ವಿಶ್ವನನ್ನು ತಿರಸ್ಕಾರದಿಂದ ನೋಡಿ ಕೋಪದಿಂದ ಮುಖ ಗಂಟಿಕ್ಕಿದ ಮುಖ್ಯಸ್ಥ ರಪ್ಪನೇ ತಿರುಗಿ ಯಂತ್ರದತ್ತ ನಡೆದರೆ, ಸ್ಥಳಪುರಾಣ ಓದಿದವನೂ ಕೆಂಪಗಾಗಿ ‘ಓ ಅಲ್ಲಿ ಕಾಣಿಸ್ತಿದೆಯಲ್ಲಾ ಹೊಳೆ… ಅದರಾಚೆಗಿಂದು ರಿಜರ್ವ್ ಫಾರೆಸ್ಟ್ ಇವ್ರೇ! ಈ ಜಾಗವೂ ಅದ್ರೊಳಗೆ ಬರುತ್ತೆ ಹೌದಾದ್ರೂ ಆ ಕಾನೂನು ಬರೋ ಎಷ್ಟೋ ಮೊದ್ಲಿಂದ್ಲೂ ಈ ದೇವಸ್ಥಾನ ಇಲ್ಲಿತ್ತೆಂಬುದು ನಿಮ್ಗೆ ಗೊತ್ತಿತ್ತಾ…? ಕಾನೂನು ಮಾಡಿರೋ ಸರ್ಕಾರ ಇದ್ಯಲ್ಲಾ, ಅದಕ್ಕೂ ಈ ದೇವ್ರೇ ಬೇಕು ಇವ್ರೇ.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಗುರುರಾಜ್ ಸನಿಲ್ ಬರೆದ “ಗುಡಿ ಮತ್ತು ಬಂಡೆ” ನಿಮ್ಮ ಈ ಭಾನುವಾರದ ಓದಿಗೆ

ಹೊಸ ಕಥಾಸಂಕಲನದ ಕೆಲಸ ಒಂದು ಹಂತಕ್ಕೆ ಪೂರ್ಣಗೊಂಡಿತ್ತು. ಕೊನೆಯ ಬಾರಿ ಪ್ರೂಫ್ ನೋಡಲೆಂದು ನಸುಕಿನಲ್ಲಿ ಎದ್ದ ವಿಶ್ವ, ಕಂಪ್ಯೂಟರ್‌ನೆದುರು ಕುಳಿತ. ಒಂದಷ್ಟು ಪುಟ ಸಾಗುತ್ತಲೇ ಬೆಳಕು ಹರಿದು, ಮೋಡ ಸರಿದ ಆಹ್ಲಾದಕರ ವಾತಾವರಣ ಏಕಾಗ್ರತೆಯನ್ನು ಸಡಿಲಿಸಿತು. ಎಲ್ಲಾದರೂ ಪ್ರಶಾಂತ ತಾಣಕ್ಕೆ ಹೋಗಿ ಕೂತು ದಿನವಿಡೀ ಓದಬೇಕೆನಿಸಿತು. ಮಹಾದೇವರ ‘ದ್ಯಾವನೂರು ಮತ್ತು ಒಡಲಾಳ’, ಗಿರಡ್ಡಿಯವರ ‘ಹಿಡಿಯದ ಹಾದಿ’ ಕೃತಿಗಳನ್ನು ಬಗಲಿಗೇರಿಸಿ, ಕಾರು ಹತ್ತಿ ದೂರದ ಸಹ್ಯಾದ್ರಿಯತ್ತ ಸಾಗಿದ.

ದಟ್ಟ ಕಾಡಿನ ನಡುವೆ ಒಂದಿಷ್ಟು ಜಾಗ ಮಾಡಿಕೊಂಡು, ಯಾವ ವೈಭವವೂ ಇಲ್ಲದೆ ಜುಳುಜುಳು ನಾದದೊಡನೆ ಪಶ್ಚಿಮಾಭಿಮುಖವಾಗಿ ಹರಿಯುತ್ತಿದ್ದ ನದಿಯೊಂದರ ವಯ್ಯಾರದ ನಡುಗೆ ವಿಶ್ವನನ್ನು ಸೆಳೆಯಿತು. ನದಿಯ ಪಾತ್ರದ ಬಂಡೆಯೊಂದರ ಮೇಲೆ ಕುಳಿತ. ಅದು ಫೆಬ್ರವರಿ ತಿಂಗಳು. ಹರಿವ ನೀರ ಒರತೆ ತೆಳುವಾಗಿತ್ತು. ‘ಒಡಲಾಳ’ ತೆರೆದ. ಆದರೆ ನದಿಯ ಉಸಿರಿನಲ್ಲಿ ಹೊಮ್ಮುತ್ತಿದ್ದ ಮೃದುವಾದ ಮರ್ಮರದಿಂದ ಅಕ್ಷರಗಳ ಮೇಲೆ ಗಮನ ನಿಲ್ಲಲಿಲ್ಲ. ಒಂದೆರಡು ಗಳಿಗೆ ಅಲ್ಲೇ ಅಡ್ಡಾಡಿದ. ಸಮೀಪದ ಕಾಡಿನಿಂದ ದಾಹ ತೀರಿಸಿಕೊಳ್ಳಲು ಬರುವ ಕಾಟಿ, ಕಾಡುಹಂದಿಗಳ ಹೆಜ್ಜೆ ಗುರುತುಗಳನ್ನೂ ಅವು ಅಲ್ಲೇ ವಿರಮಿಸುತ್ತಿದ್ದ ಕುರುಹನ್ನೂ ಕಂಡು ರೋಮಾಂಚನಗೊಂಡ. ಬಳಿಕ ಹಳೆಯ ದೇವಾಲಯವೊಂದರ ನೆನಪಾಗಿ ಅಲ್ಲಿಗೆ ಹೋಗಿ ತುಂಬ ದಿನವಾಯಿತೆಂದು ಎದ್ದು ಅತ್ತ ಹೊರಟ.

*****

ಅದು, ಮನೋಹರವಾದ ವೃಕ್ಷ ದೇವತೆಗಳಿಂದ ನಿಬಿಡವಾದ ಪಶ್ಚಿಮಘಟ್ಟದ ಸೆರಗು. ಆ ಅರಣ್ಯದ ನಡುವೆ ಬಂಡೆಯ ಚೂರುಗಳಿಂದ ಕಟ್ಟಲಾದ, ಮೂರು ಅಡಿ ಎತ್ತರದ ಅಗಲವಾದ, ವಿಶಾಲವಾದ ಆವರಣ. ಒಳಗೆ, ಕೆಲವು ಶತಮಾನಗಳಷ್ಟು ಹಿಂದೆ, ಮಣ್ಣಿನ ಗೋಡೆಯ ಮೇಲೆ ಹಂಚು ಹೊದೆಸಿದ ಪ್ರಕೃತಿ ಸಹಜ ಸುಂದರ ದೇವಾಲಯ. ದೇವಳದೊಳಗೂ, ಸುತ್ತಲಿನ ವೃಕ್ಷಗಳಿಂದಾವೃತ್ತವಾದ ಪ್ರದೇಶದೊಳಗೂ ದೈವೀಶಕ್ತಿಯ ನವಿರಾದ ಕಂಪನದ ಹೊಳಹೊಂದು ಸದಾ ಪಸರಿಸಿದ್ದುದು ಅನೇಕ ಬಾರಿ ವಿಶ್ವನ ಒಳ ಮನಸ್ಸಿಗೆ ಸೋಕಿತ್ತು. ಆದ್ದರಿಂದಲೇ ಅಂಥ ‘ದೇವರ’ ಇರುವು ಆತನನ್ನು ಅತ್ತ ಸೆಳೆಯುತ್ತಿತ್ತು. ಆಗಾಗ ತನ್ನವರೊಂದಿಗೆ ಬಂದು ದಿನವಿಡೀ ಕಳೆದು ಮನಃಶಾಂತಿ ಪಡೆದು ಹಿಂದಿರುಗುತ್ತಿದ್ದ.

ಒಂದೆರಡು ಕೃಷಿ ತೋಟಗಳನ್ನು ಹಾದು, ದಟ್ಟ ಕಾನನದ ಮಧ್ಯೆಯಿಂದ ಗುಡ್ಡವೊಂದನ್ನು ಕೊರೆದು ಮಾಡಿದ್ದ ಮಣ್ಣಿನ ರಸ್ತೆಯಲ್ಲಿ ವಿಶ್ವ ಇಂದೂದೇವಳದತ್ತ ಸಾಗಿದ. ಆದರೆ ಇವತ್ತೇಕೋ ಆ ಹಾದಿಯಲ್ಲಿ ಕೆಂಪು ಬಣ್ಣದ ರಾಕ್ಷಸ ಧೂಳೆದ್ದು ಸುತ್ತಲಿನ ಹಸುರು, ಆಗಸವೆಲ್ಲವನ್ನೂ ಮಲೀನಗೊಳಿಸಿತ್ತು. ಡೈನಮೈಟ್ ಸಿಡಿಸಿ ಎಲ್ಲಿಂದಲೋ ಒಡೆದು ತಂದಿದ್ದ ಬಂಡೆಯ ದೊಡ್ಡ ದೊಡ್ಡ ತುಂಡುಗಳು ಸೋತು ಸತ್ತ ದೈತ್ಯ ರಾಕ್ಷಸರಂತೆ ಮೈಚೆಲ್ಲಿ ಬಿದ್ದಿದ್ದವು. ಕರ್ರಗಿನ ಹತ್ತಾರು ಶಿಲ್ಪಿಗಳು ಆ ಬಂಡೆಗಳ ಮೇಲೆ ಕುಳಿತು ಕೆತ್ತನೆಯಲ್ಲಿ ಮಗ್ನರಾಗಿದ್ದರು. ಉಳಿಯೇಟುಗಳ ಕಿಣಿಕ್ ಕಿಣಿಕ್ ಕಿಣಿಕ್ ಸದ್ದು, ಕಾರ್ಮಿಕರ ಗೌಜಿ ಗದ್ದಲ ಕಾನನದ ಪ್ರಶಾಂತತೆಯನ್ನು ಕೆಡಿಸುತ್ತಿತ್ತು. ಅದನ್ನು ದಾಟಿ ಮುಂದೆ ಹೋದ ವಿಶ್ವನಿಗೆ ಎದುರು ಕಂಡ ದೃಶ್ಯ, ನಿಂತ ನೆಲವೇ ಕುಸಿಯುವಂತೆನಿಸಿತು! ಈ ಮೊದಲು ಅಲ್ಲೊಂದು ಪುರಾತನ ದೇವಸ್ಥಾನವಿತ್ತೆಂಬ ಕುರುಹೇ ಅಲ್ಲಿ ಕಾಣಲಿಲ್ಲ!

ಪ್ರಾಚೀನ ದೇವಾಲಯವಿದ್ದ ಸ್ಥಳದಲ್ಲಿ ಕಾಂಕ್ರೀಟ್ ಕಲ್ಲಿನ ಗುಡಿಯೊಂದು ವಿಕಾರವಾಗಿ ತಲೆಯೆತ್ತುತ್ತಿತ್ತು! ಮುಕ್ತಾಯದ ಹಂತ ತಲುಪಿತ್ತು. ಆಸುಪಾಸಿನ ಅರಣ್ಯವಂತೂ ಯಂತ್ರಗಳ ತುಳಿತಕ್ಕೊಳಗಾಗಿ ಮರುಗುತ್ತಿರುವಂತೆ ಭಾಸವಾಗುತ್ತಿತ್ತು. ವಿಷಾದದಿಂದ ವಿಶ್ವ ಕಾರಿನಿಂದಿಳಿಯುತ್ತಲೇ ಅಲ್ಲಿನವರ ಗಮನ ಅವನ ಮೇಲೆ ನೆಟ್ಟಿತು. ವಿಶ್ವನತ್ತ ತಿರುಗಿದ ಒಬ್ಬ ‘ಯಾರು…?’ ಎಂಬಂತೆ ಪ್ರಶ್ನಾರ್ಥಕವಾಗಿ ಹುಬ್ಬು ಕುಣಿಸಿ ಅವನತ್ತ ಬರತೊಡಗಿದ. ಅವನ ವರ್ತನೆಯಿಂದ ಬೇಸರಗೊಂಡ ವಿಶ್ವ, ಆತ ಸಮೀಪಿಸುತ್ತಲೇ ಒರಟಾಗಿಯೇ ‘ದೇವಸ್ಥಾನಕ್ಕೆ ಬಂದವನು’ ಎಂದ. ‘ಹೋ, ಹೌದಾ…?’ ಎಂದು ನಿರಾಳ ಉಸಿರು ಚೆಲ್ಲಿದ ಆತ, ‘ಹೇ, ಸೇಖರ ಇಲ್ಲಿ ಬಾರೋ… ಇನೊಟೇಸನ್ ಕೊಡೋ ಇವರಿಗೆ…!’ ಎಂದು ಕೂಗಿದ.

ಓಡೋಡಿ ಬಂದ ಕುಳ್ಳಗಿನ ಮನುಷ್ಯನೊಬ್ಬ, ಅತೀ ವಿನಯ ಪ್ರದರ್ಶಿಸುತ್ತ ‘ಎಲ್ಲಿಂದ ಬಂದ್ರಿ ಸಾರ್…?’ಎಂದ. ವಿಶ್ವ ಉದಾಸೀನದಿಂದ ‘ಉಡುಪಿ’ ಎಂದ. ಹೋ, ಹೌದಾ… ಬಹಳ ಹಳೆಯ ದೇವಸ್ಥಾನ ಸಾರ್ ಇದು…! ಕೆಲವು ವರ್ಷಗಳಿಂದ ಹಾಳು ಬಿದ್ದಿತ್ತು ನೋಡಿ. ಇದರ ಸ್ಥಳ ಪುರಾಣ ಬಹಳ ವಿಶೇಷವಿದೆ ಸಾರ್! ಹಿಂದೆ, ಆಗಾಗ ಇಲ್ಲಿನ ಗ್ರಾಮಸ್ಥರನ್ನೂ, ಮೃಗಪಕ್ಷಿಗಳನ್ನೂ ಹಿಂಸಿಸಿ ಕೊಲ್ಲುತ್ತಿದ್ದ ಇಂತಿಂಥ ಹೆಸರಿನ ಕ್ರೂರ ರಾಕ್ಷಸರುಗಳನ್ನು ಸಂಹರಿಸಿ, ಇಲ್ಲೇ ತಪಸ್ಸು ಮಾಡುತ್ತಿದ್ದ ಋಷಿಯೊಬ್ಬನಿಗೊಲಿದು, ನೆಲೆ ನಿಂತ ದೇವ್ರಂತೆ ಇದು! ಭಕ್ತರು ಬೇಡಿದ್ದನ್ನೆಲ್ಲ ಈಡೇರಿಸುವ ಕಾರ್ಣಿಕದ ದೇವ್ರು-ಅಂತ ನಮ್ಮ ಹಿರಿಯರೂ ನಂಬುತ್ತಾರೆ. ಆದ್ರೆ ಹಿಂದಿನ ದೇವಸ್ಥಾನದ ಪುರೋಹಿತ್ರಿಗೆ ಸಂಭಾವನೆ ಕೊಡೋರಿಲ್ದೇ ಈಚೀಚೆಗೆ ಸರಿಯಾಗಿ ಪೂಜೆನೇ ನಡೀತಿರ್ಲಿಲ್ಲ ನೋಡಿ. ವಾರಕ್ಕೊಂದಿನ ಅವರು ಬಂದು ಗರ್ಭಗುಡಿ ಕ್ಲೀನ್ ಮಾಡಿ, ದೀಪ ಹಚ್ಚಿಟ್ಟು ಹೋಗುತ್ತಿದ್ದರು. ಹಾಗಾಗಿಯೋ ಏನೋ ನಮ್ಮೂರ ಶ್ರೀಮಂತ ಶೆಟ್ರೊಬ್ಬರಿಗೆ ಈ ದೇವರು ಕನಸಿನಲ್ಲಿ ಕಾಣಿಸಿಕೊಂಡು, ತನಗೊಂದು ಹೊಸ ದೇವಸ್ಥಾನ ಕಟ್ಟಿಸಿಕೊಡಬೇಕೆಂದು ಅಪ್ಪಣೆ ಮಾಡಿದನಂತೆ! ಆ ಪುಣ್ಯಾತ್ಮರು ಆವತ್ತೆ ಮನಸ್ಸು ಮಾಡಿ, ಗ್ರಾಮಸ್ಥರಿಂದಲೂ ದಾನ ಧರ್ಮ ಪಡೆದು ಕಟ್ಟಿಸ್ತಿದ್ದಾರೆ. ಇನ್ನು ಪ್ರತಿನಿತ್ಯ ವಿಶೇಷ ಪೂಜೆ ಪುನಸ್ಕಾರಗಳು ನಡಿತಾವೆ. ಇಷ್ಟಕ್ಕೇ ಒಂದು ಕೋಟಿ ಖರ್ಚು ಬೀಳುತ್ತೆ ಸಾರ್! ನಿಮ್ಮಂಥ ದಾನಿಗಳು ಮನಸ್ಸು ಮಾಡಿದ್ರೆ, ಇನ್ನು ಮುಂದೆ ದೂರದಿಂದ ಬರುವ ಭಕ್ತಾದಿಗಳಿಗೂ ತಂಗೋ ವ್ಯವಸ್ಥೆ ಮಾಡಲಿದ್ದೇವೆ’ ಎಂದು ರಪರಪನೇ ರೆಡಿಮೇಡ್ ವಿವರಣೆ ನೀಡಿದವನು, ಶಿಲಾ ಕಟ್ಟಡದತ್ತ ತಿರುಗಿ ಭಕ್ತಿಯಿಂದ ಕೈಮುಗಿದು ಏನೋ ಪ್ರಾರ್ಥಿಸಿದಂತೆ ನಟಿಸಿ ‘ಹ್ಹೆಹ್ಹೆಹ್ಹೇ…!’ ಎನ್ನುತ್ತ ಆಮಂತ್ರಣದೊಂದಿಗೆ ಖರ್ಚುವೆಚ್ಚದ ಪತ್ರವನ್ನೂ ವಿಶ್ವನ ಕೈಗೆ ತುರುಕಿಸಿದ.

ವಿಶ್ವನ ಹೊಟ್ಟೆ ಉರಿಯುತ್ತಿತ್ತು! ‘ಹೌದು. ಅದೆಲ್ಲ ಸರಿ. ಆದರೆ ಹಿಂದಿದ್ದ ದೇವಸ್ಥಾನ ಬಹಳ ಗಟ್ಟಿಮುಟ್ಟಾಗಿಯೇ ಇತ್ತಲ್ಲವೇ…? ಜೀರ್ಣೋದ್ಧಾರದ ಅಗತ್ಯವಿತ್ತೇ…? ಅಲ್ಲದೇ ಈ ಪ್ರದೇಶವನ್ನು ಸಂರಕ್ಷಿತ ಅರಣ್ಯವೆಂದು ಸರಕಾರವೂ ಘೋಷಿಸಿರೋವಾಗ ದೇವಾಸ್ಥಾನಾಭಿವೃದ್ಧಿಗೆ ಅರಣ್ಯ ಕಾನೂನು ಅನುಮತಿ ನೀಡಿತೇ…?’ ಎಂದು ವಿಶ್ವ ದುಗುಡದಿಂದಲೇ ಪ್ರಶ್ನಿಸಿದ.

ಅಷ್ಟು ಕೇಳಿದ್ದೇ ತಡ, ಇಬ್ಬರ ಮುಖಗಳೂ ಕಳೆಗುಂದಿದುವು. ವಿಶ್ವನನ್ನು ತಿರಸ್ಕಾರದಿಂದ ನೋಡಿ ಕೋಪದಿಂದ ಮುಖ ಗಂಟಿಕ್ಕಿದ ಮುಖ್ಯಸ್ಥ ರಪ್ಪನೇ ತಿರುಗಿ ಯಂತ್ರದತ್ತ ನಡೆದರೆ, ಸ್ಥಳಪುರಾಣ ಓದಿದವನೂ ಕೆಂಪಗಾಗಿ ‘ಓ ಅಲ್ಲಿ ಕಾಣಿಸ್ತಿದೆಯಲ್ಲಾ ಹೊಳೆ… ಅದರಾಚೆಗಿಂದು ರಿಜರ್ವ್ ಫಾರೆಸ್ಟ್ ಇವ್ರೇ! ಈ ಜಾಗವೂ ಅದ್ರೊಳಗೆ ಬರುತ್ತೆ ಹೌದಾದ್ರೂ ಆ ಕಾನೂನು ಬರೋ ಎಷ್ಟೋ ಮೊದ್ಲಿಂದ್ಲೂ ಈ ದೇವಸ್ಥಾನ ಇಲ್ಲಿತ್ತೆಂಬುದು ನಿಮ್ಗೆ ಗೊತ್ತಿತ್ತಾ…? ಕಾನೂನು ಮಾಡಿರೋ ಸರ್ಕಾರ ಇದ್ಯಲ್ಲಾ, ಅದಕ್ಕೂ ಈ ದೇವ್ರೇ ಬೇಕು ಇವ್ರೇ. ಹಾಗಾಗಿ ಅಂಥ ದೊಡ್ಡ ಮನುಷ್ಯ್ರೇ ಇಂಥ ಒಳ್ಳೆಯ ಕೆಲ್ಸ ಮಾಡಿಸ್ತಿರೋದು…! ಹೋಗ್ಲಿ ಬಿಡಿ. ಮುಂದಿನ ವಾರಮೂರು ದಿನಗಳ ಕಾಲ ವಿಶೇಷ ಕಾರ್ಯಕ್ರಮವಿದೆ. ಕೊನೆಯ ದಿನ ಮಹಾ ಅನ್ನ ಸಂತರ್ಪಣೆನೂ ನಡೆಯುತ್ತದೆ. ಆವತ್ತು ಬಂದು ಪ್ರಸಾದ ಸ್ವೀಕರಿಸಿ ಹೋಗ್ಬೇಕು ತಾವು!’ ಎಂದು ನುಡಿದವನು, ಕೈಯಲ್ಲಿದ್ದ ಫೋನನ್ನು ರಪ್ಪನೇ ಕಿವಿಗಂಟಿಸಿಕೊಂಡು ಯಾರನ್ನೋ ಕೆಟ್ಟದಾಗಿ ಬೈಯ್ಯುತ್ತ ದೂರ ಹೋದ.

ದೇವರು ಮತ್ತು ಪರಿಸರದ ಕುರಿತು ಜನಸಾಮಾನ್ಯಗಿರುವ ಸಾಮಾನ್ಯ ಜ್ಞಾನವನ್ನು ಕಂಡ ವಿಶ್ವನಿಗೆ, ತಾನು ನಿಂತಿರುವುದು ಸುಡುಗಾಡೆಂಬಷ್ಟು ಹಿಂಸೆಯೆನಿಸಿತು. ಅಲ್ಲೆ ಸಮೀಪದ ಹೊಳೆಯನ್ನಾದರೂ ಕೊನೆಯ ಬಾರಿ ನೋಡಿಕೊಂಡು ಹಿಂದಿರುಗೋಣವೆಂದು ಹೊರಟ. ಕಟ್ಟಡ ಸಾಮಾಗ್ರಿಗಳು ಹೊಳೆ ಬಾಗಿಲನ್ನೂ ಮುಚ್ಚಿ ಹಾಳುಗೆಡವಿದ್ದುವು. ಆದರೂ ಮಾಮೂಲು ಕೂರುತ್ತಿದ್ದ ಬಂಡೆಯೊಂದರ ಮೇಲೆ ಹೋಗಿ ತುಸುಹೊತ್ತು ಕೂತ. ಓದಲು ಮನಸ್ಸಾಗದೆ ದೇಹ ಚಾಚಿ ಆಕಾಶ ದಿಟ್ಟಿಸುತ್ತ ಮಲಗಿದ. ಮೆಲ್ಲನೇ ಮಂಪರು ಹತ್ತಿತು.

ಉಳಿಯೇಟುಗಳ ಕಿಣಿಕ್ ಕಿಣಿಕ್ ಕಿಣಿಕ್ ಸದ್ದು, ಕಾರ್ಮಿಕರ ಗೌಜಿ ಗದ್ದಲ ಕಾನನದ ಪ್ರಶಾಂತತೆಯನ್ನು ಕೆಡಿಸುತ್ತಿತ್ತು. ಅದನ್ನು ದಾಟಿ ಮುಂದೆ ಹೋದ ವಿಶ್ವನಿಗೆ ಎದುರು ಕಂಡ ದೃಶ್ಯ, ನಿಂತ ನೆಲವೇ ಕುಸಿಯುವಂತೆನಿಸಿತು! ಈ ಮೊದಲು ಅಲ್ಲೊಂದು ಪುರಾತನ ದೇವಸ್ಥಾನವಿತ್ತೆಂಬ ಕುರುಹೇ ಅಲ್ಲಿ ಕಾಣಲಿಲ್ಲ!

ಆಕಾಶದೆತ್ತರಕ್ಕೆ ಚಾಚಿಕೊಂಡಿದ್ದ ದೈತ್ಯ ಮರಗಳ ಮಧ್ಯೆ ಒಂದಿಷ್ಟು ವಿಶಾಲವಾದ ತಿಳಿನೀಲ ಬಾನು ನಿರ್ಮಲವಾಗಿ ಕಾಣಿಸುತ್ತಿದೆ. ತದೇಕಚಿತ್ತದಿಂದ ಅದನ್ನೇ ವೀಕ್ಷಿಸುತ್ತಿದ್ದ ವಿಶ್ವನಿಗೆ ಅಲ್ಲೊಂದು ಚಮತ್ಕಾರ ಗೋಚರಿಸಿತು. ಮಾನವ ಕಲ್ಪಿತ ಯಾವ ರೂಪಕ್ಕೂ ಹೋಲದಂತಹ ಪ್ರಕಾಶಮಾನ ಆಕೃತಿಯೊಂದು ನೋಡ ನೊಡುತ್ತಿದ್ದಂತೆಯೇ ಸ್ಫುಟವಾಗಿ ಪ್ರಕಟಗೊಂಡಿತು. ನಖಶಿಖಾಂತ ವಿಸ್ಮಯಗೊಂಡ ವಿಶ್ವ. ಆ ಶಕ್ತಿಯು ಮಾತಿಗಿಳಿಯಿತು ಎಂದವನಿಗೆ ಭಾಸವಾಯಿತು. ಮೋಡಿಗೊಳಗಾದವನಂತೆ ಕೇಳತೊಡಗಿದ.

“ಆದಿ ಅಂತ್ಯಗಳಿಲ್ಲದ ಅನಂತದೊಳಗೆ ಅನಂತನು ನಾನು. ಇಂಥ ನನ್ನನ್ನು ಸ್ತ್ರೀಯೋ ಪುರುಷನೋ, ಅದೋ, ಇದೋ? ಎಂದು ಭಾವಿಸಿಕೊಳ್ಳುವುದು ಆಯಾಯ ಜೀವರಾಶಿಯ ಅಂತರಂಗದರಿವಿಗೆ ಸೋಕುವ ವಿಚಾರ. ಈಗ್ಗೆ ಸಹಸ್ರ ಕೋಟಿ ವರುಷಗಳ ಹಿಂದೊಮ್ಮೆ ನನ್ನೊಳಗೆ ಏನಾದರೂ ಹೊಸತನ್ನು ಸೃಷ್ಟಿಸುವ ತುಡಿತವೆದ್ದಿತು. ಅದೇ ಗುಂಗಿನಿಂದ ತೋಚಿದ್ದನ್ನು ಸೃಷ್ಟಿಸುತ್ತ ಸಾಗಿದೆ. ಆದರೆ ಅವು ಯಾವುವೂ ಅಷ್ಟೊಂದು ತೃಪ್ತಿ ನೀಡಲಿಲ್ಲ. ಆದ್ದರಿಂದ ಕೊನೆಕೊನೆಗೆ ಸೃಷ್ಟಿ ಕಾರ್ಯದ ಮೇಲೆಯೇ ಉದಾಸೀನ ಬಂತು. ಒಂದಷ್ಟು ಕಾಲ ಏನೂ ಮಾಡದೆ ಕಾಲಹರಣ ಮಾಡುತ್ತಿದ್ದೆ. ಅದೇ ಸುಸಂದರ್ಭದಲ್ಲಿ ಒಳಗಿನ ಸೃಜನಶೀಲತೆಯು ಮತ್ತೆ ಅರಳಿತು. ಹೊಸ ಸೃಷ್ಟಿಗೆ ಪ್ರಚೋದಿಸಿತು. ತುಂಬಾ ಯೋಚಿಸಿದೆ. ಬಹಳವೇ ಛಂದೋಬದ್ಧವಾದ ಹೊಸ ರೂಪವೊಂದು ಒಳಗೆ ಪಡಿಮೂಡಿತು.

ತೀರದ ಆಸಕ್ತಿಯಿಂದ ಸೃಷ್ಟಿಸಿದೆ, ಪ್ರಾಣಶಕ್ತಿ ಸಂಚಯಿಸಿದೆ. ಆ ಜೀವಿ ವಿಶೇಷವಾಗಿತ್ತು. ಮುಗ್ಧವಾಗಿತ್ತು ಮತ್ತು ಆಕರ್ಷಕವಾಗಿಯೂ ಇತ್ತು. ಆದರೂ ತೃಪ್ತಿಯಾಗಲಿಲ್ಲ. ಕೋಮಲವಾಗಿ ವಿಕಾಸಕ್ಕೊಡ್ಡಿದೆ. ಪರಿಣಾಮ, ಒಂದು ದಿನ ಆ ಜೀವಿಯು ನನಗೇ ವಿಸ್ಮಯವೆನಿಸುವಂಥ ವಿನೂತನ ಕಲಾಕೃತಿಯಾಗಿ ಹೊರಹೊಮ್ಮಿತು. ತಡಮಾಡಲಿಲ್ಲ, ಅದಕ್ಕೆ ‘ಮಾನವ’ ಎಂದು ಹೆಸರಿಟ್ಟೆ. ಸಕಲ ಜೀವಿಗಳಿಗಿಂತಲೂ ಉತ್ಕೃಷ್ಟವೆನಿಸಿದ ಮಾನವಜೀವಿಯು ನನಗೆ ಇಷ್ಟದ, ಪ್ರೀತಿಯ ಜೀವವಾದ. ಅದೇಕೋ ಅವನ ಸಣ್ಣ ನೋವೂ ನನ್ನನ್ನು ಕರಗಿಸುತ್ತಿತ್ತು. ಅದೇ ಪ್ರೇಮದಿಂದ ಅವನ ಸಂತತಿಯನ್ನು ವೃದ್ಧಿಸಿದೆ. ವಿಕಾಸವನ್ನೂ ಮುಂದುವರೆಸಿದೆ. ಆದರೆ ಆ ಖುಷಿ ನನ್ನ ಪಾಲಿಗೆ ಹೆಚ್ಚು ಸಮಯ ಉಳಿಯಲಿಲ್ಲ. ಕೆಲವೇ ಕಾಲದೊಳಗೆ ಆತನಿಂದ ಆಘಾತ ಅಪ್ಪಳಿಸಿತು. ವಿಕಾಸದ ಹಾದಿಯಲ್ಲಿ ಮುಂದೆ ಸಾಗಿದ ಅವನೊಳಗೆ ಅದು ಹೇಗೋ ಅನೇಕ ವಿಕಾರಗಳು ಕಾಣಿಸಿದುವು! ಅದರ ಪ್ರಭಾವಕ್ಕೆ ಸಿಲುಕಿದ ಆತ ಅದೆಂತಹ ಉತ್ಕ್ರಾಂತಿ ಬಯಸಿದನೆಂದರೆ ನನ್ನಿಂದಲೇ ಸಿಡಿದು ಪ್ರತ್ಯೇಕನಾಗಿ ನಿಲ್ಲಲು ಹವಣಿಸಿದ!

ನನ್ನ ಮುದ್ದಿನ ಕೈಗೂಸು ಅವನು. ಹಾಗಾಗಿ ನಾನೂ ಸಹನೆ ಕಳೆದುಕೊಳ್ಳಲಿಲ್ಲ. ಎಂದಾದರೊಂದು ದಿನ ಶುದ್ಧಾತ್ಮನಾಗಿ ಹಿಂದಿರುಗಿ ಬಂದು ಮಡಿಲು ಸೇರಿಯಾನು-ಎಂಬ ನಿರ್ಮಲ ಆಸೆಯಿಂದ ಅವನನ್ನು ಸೃಷ್ಟಿಸುತ್ತ ಸಾಗಿದೆ. ಆದರೆ ಮುಂದೆಯೂ ಆತ ಬದಲಾಗಲಿಲ್ಲ. ‘ತಾನು ಯಾರು, ತನ್ನ ಸೃಷ್ಟಿಕರ್ತನಾರು, ಈ ಮರ್ತ್ಯಲೋಕಕ್ಕೆ ತಾನೇಕೆ ಬಂದಿರುವೆ, ಇಲ್ಲಿ ತನ್ನ ಕರ್ತವ್ಯಗಳೇನು? ಎಂಬಂಥ ಸಹಜ ಪ್ರಶ್ನೆಗಳನ್ನೇ ಆತ ಕೇಳಿಕೊಳ್ಳುತ್ತಿರಲಿಲ್ಲ. ಹಾಗಾಗಿ ಮುಂದೆ ತಾನು ಹುಟ್ಟಿದ ಎಲ್ಲ ಯುಗಗಳಲ್ಲೂ ಅವನತಿ ಹೊಂದುತ್ತ ಹೋದ. ವಿಪರ್ಯಾಸವೆಂದರೆ ನಾನು ಆವರೆಗೆ ಸೃಷ್ಟಿಸಿದ್ದ ಯಾವ ಜೀವಿಯೂ ಇವನಷ್ಟು ವ್ಯರ್ಥವೆನಿಸಲಿಲ್ಲ. ಆಸ್ಥೆಯಿಂದ ಕಡೆದ ಕಲಾಕೃತಿಯೊಂದು ಶುಷ್ಕವಾದ ನಿರಾಶೆ ಬಹುಕಾಲ ಕಾಡಿತು. ಆವತ್ತು ನಿರ್ಧರಿಸಿದೆ. ಇನ್ನೊಂದು ಕೊನೆಯ ಅವಕಾಶವನ್ನು ನೀಡುತ್ತೇನೆ. ಬದಲಾದರೆ ಗೆದ್ದ. ಇಲ್ಲವಾದರೆ ಅವನ ಸೃಷ್ಟಿಯನ್ನೇ ಲಗಾಯಿಸಿಬಿಡುತ್ತೇನೆ ಎಂದು.

ನಾನು ಕಾದೆ. ಅವನೋ ಬರೇ ವಿಜ್ಞಾನ, ಆಧುನಿಕತೆ, ಸಂಶೋಧನೆ, ವ್ಯಾಪಾರ, ಲಾಭಕೋರತನ, ಸುಳ್ಳು, ದಗಾ, ವಂಚನೆ, ಕೊಲೆ ಸುಲಿಗೆ, ಆಸೆ ದುರಾಸೆಗಳೆಂಬ ಗೀಳುಗಳೊಂದಿಗೆ ನಾನು ನನ್ನದೆಂಬ ಹುಚ್ಚು ಮಿಥ್ಯೆಗೂ ಒಳಗಾದ. ತಾನಾರೆಂದು ತನಗೇ ತಿಳಿಯದಿದ್ದರೂ ಹಗಲು ರಾತ್ರಿ ಆ ‘ನಾನು’ ವಿನ ತೃಪ್ತಿಪಡಿಸುವಿಕೆ, ಅದರ ಪ್ರದರ್ಶನ, ಅದಕ್ಕೇ ಹೋರಾಟ, ಹೊಡೆದಾಟಗಳಲ್ಲೇ ಜನ್ಮಜನ್ಮಾಂತರವನ್ನು ಸವೆಸಿದ. ನನ್ನ ಅಮೂಲ್ಯ ಸೃಷ್ಟಿಯನ್ನು ನಾಶ ಮಾಡಲೇ ಹಾತೊರೆದ. ಅವನ ಪಾಪಕೃತ್ಯಗಳಿಗೆ ನನ್ನ ಪ್ರೀತಿಯ ಅಸಂಖ್ಯಾತ ಜೀವರಾಶಿಗಳು ದಾರುಣವಾಗಿ ಅಳಿದು ಹೋದುವು. ಅದ್ಭುತ ಪ್ರಕೃತಿ, ವಿಶಾಲ ಸಾಗರ, ಅನಂತ ಆಕಾಶಗಳೆಲ್ಲ ಅವನಿಂದಾಗಿ ಮಲಿನಗೊಂಡವು.

ಆದರೆ ಅಂಥವರ ನಡುವೆ, ಒಂದಷ್ಟು ಉತ್ತಮರೂ ಹುಟ್ಟುತ್ತಿದ್ದರು. ಅವರು ತಮ್ಮ ಲೌಕಿಕ ಸುಖ ಭೋಗಗಳನ್ನು ತೊರೆದು ನನ್ನಲ್ಲಿ ಐಕ್ಯರಾಗಲು ತುಡಿಯುತ್ತಿದ್ದರು. ಅಂಥ ಸಜ್ಜನ, ಋಷಿಮುನಿಗಳಿಗಾಗಿ, ಅವನ ಸಂಕುಲವನ್ನು ಪೋಷಿಸುವುದು ಅನಿವಾರ್ಯವಾಯಿತು. ಸದಾ ನನ್ನನ್ನು ಸೇವಿಸುತ್ತಿದ್ದ ಆ ಜನರ ಪ್ರೀತಿ, ಭಕ್ತಿಯ ಕಂಪನಗಳು ನನ್ನತ್ತ ಹರಿದು ಬರತೊಡಗಿದುವು. ನಾನು, ಸರ್ವಾಂತರ್ಯಾಮಿ ಎಂಬರಿವು ಅವರಿಗಿದ್ದರೂ ಮಾನವಜೀವಿಗಳ ಕಲ್ಯಾಣಕ್ಕೋಸ್ಕರ ತಾವು ನಿರ್ಮಿಸುತ್ತಿದ್ದ ನಿಸರ್ಗದತ್ತ ಗುಡಿಗೋಪುರಗಳಲ್ಲಿ, ಕೃಷ್ಣವರ್ಣದ ದುಂಡು ಶಿಲೆಗಳಲ್ಲಿ ನನ್ನಂಶವು ಆವಿರ್ಭವಿಸುವಂತೆ ಅವರು ಪ್ರಾರ್ಥಿಸುತ್ತಿದ್ದರು. ಅವರ ನಿಶ್ಕಲ್ಮಶ ಭಕ್ತಿಗೊಲಿದು ಅಂಥ ಸಹಸ್ರಾರು ದೇಗುಲಗಳಲ್ಲಿ ನಾನು ನಿಲ್ಲುತ್ತಾ ಸಾಗಿದೆ.

ಅಂಥ ದೇಗುಲಗಳಿಗೆ, ನನ್ನನ್ನರಸಿ ಬರುತ್ತಿದ್ದ ಭಕ್ತಾದಿಗಳಲ್ಲಿ ವ್ಯಾವಹಾರಿಕ ಭಕ್ತಿ, ಸ್ವಾರ್ಥ ಅಥವಾ ಕಾಂಚಾಣದ ಮೋಹವಾಗಲೀ ಇರುತ್ತಿರಲಿಲ್ಲ. ಇದ್ದರೂ ಅಲ್ಲಿನ ಯೋಗಿಗಳು ಅವನ್ನು ತೊಡೆದು ಹಾಕುವ ಜ್ಞಾನಮಾರ್ಗವನ್ನು ಅಂಥವರಿಗೆ ಬೋಧಿಸಿ ಕಳುಹಿಸುತ್ತಿದ್ದರು. ಹಾಗಾಗಿ ಆತ್ಮೋದ್ಧಾರಕ್ಕಾಗಿ ಬರುತ್ತಿದ್ದವರೊಂದಿಗೆ ನನಗೂ ಐಕ್ಯಭಾವವಿತ್ತು. ಇಂದು, ಕೋಟ್ಯಾನುಕೋಟಿ ಜೀವರಾಶಿಗಳೊಂದಿಗೆ ಮಾನವನನ್ನೂ ಪೋಷಿಸುತ್ತಿರುವ ಸಹ್ಯಾದ್ರಿ ಪರ್ವತಶ್ರೇಣಿಗಳೊಳಗೆ ನನ್ನಂಶ ಸಂಭೂತವಾಗಿದ್ದ ಅದೆಷ್ಟು ಪ್ರಾಚೀನ ದೇವಾಲಯಗಳಿದ್ದವು ಗೊತ್ತೇ? ಆದರೆ ಅಂಥ ದೇವಳದ ನನ್ನ ಭಕ್ತರ ತಲೆಮಾರಿಗೂ ಸುಖ ಭೋಗದ ಲಾಲಸೆ ಅಂಟಿಕೊಂಡಿತು!

ಶುಷ್ಕ ನಗರ ಪಟ್ಟಣಗಳ, ನಾನಿಲ್ಲದ ವೈಭವೋಪೇತ ಕಾಂಕ್ರೀಟ್ ಗುಡಿಗೋಪುರಗಳಲ್ಲಿ ನಡೆಯುವ ಧಾರ್ಮಿಕ ವ್ಯಾಪಾರಗಳನ್ನು ಕಂಡ ಕೆಲವರು ಮಾರುಹೋದರು. ಆ ದುಷ್ಕೃತ್ಯಕ್ಕೆ ನಗರದ ಶ್ರೀಮಂತರ ಕಪ್ಪು ಸಂಪಾದನೆಯು ನೀರಿನಂತೆ ಹರಿದು ಬಂದಿತು. ಅಂಥವರ ಹೆಸರುಗಳೂ ಅಮೃತಶಿಲೆಗಳಲ್ಲಿ ಕೆತ್ತಲ್ಪಟ್ಟುವು. ಭಿಕ್ಷೆ ಕೊಡುವ ಹಣಕ್ಕೂ ಚಿಲ್ಲರೆ ಕೇಳುವಂಥ ಜಿಪುಣರೂ ದೇವರ ಹೆಸರಿನಲ್ಲಿ ಚಕಾರವೆತ್ತರು. ಹಾಗಾಗಿ ನಿಷ್ಕಲ್ಮಶ ಪ್ರೀತಿ, ಭಕ್ತಿಯಿಂದ ನನ್ನನ್ನು ಸಂತೃಪ್ತಿಗೊಳಿಸುತ್ತಿದ್ದಂಥ ಮಂತ್ರತಂತ್ರ, ವೇದ ಪುರಾಣ ಪಠಣ, ಧ್ಯಾನ, ಪೂಜೆ ಪುನಸ್ಕಾರಗಳಿಗೂ ಒಂದೊಂದು ಬೆಲೆ ನಿಗದಿಪಡಿಸಿ, ದೇಗುಲದ ಗೋಡೆ ಗೋಡೆಗಳಿಗೆ ಮೊಳೆ ಹೊಡೆದು ನೇತು ಹಾಕಲಾಯಿತು.
ಮಾನವರ ಇಂಥ ದುರಾಸೆಗಳಿಗೆ ನನ್ನಂಶವಿರುವದೇಗುಲಗಳೂ, ಸುಂದರ ಪರಿಸರಗಳೂ ಮತ್ತು ನನ್ನನ್ನೇ ನಂಬಿರುವ ಜೀವರಾಶಿಗಳೂ ನಿರ್ನಾಮವಾಗುತ್ತಿರುವುದು; ಮನುಕುಲ ಸೃಷ್ಟಿಯ ನನ್ನ ಗೌಪ್ಯ ಉದ್ದೇಶವೊಂದಕ್ಕೆ ಅವರು ಎಸಗುತ್ತಿರುವ ದೊಡ್ಡ ಅತ್ಯಾಚಾರವೇಸರಿ. ಆದ್ದರಿಂದ ಇನ್ನು ನಾನು ಮಾನವ ಕಲ್ಯಾಣಕ್ಕಾಗಿ ತುಡಿಯುವುದರಲ್ಲಿ ಅರ್ಥವಿಲ್ಲ ಎಂದೆನಿಸುತ್ತದೆ. ಬೆಳ್ಮುಗಿಲ ವರ್ಣದ ಶುದ್ಧ ಬಾನಾಡಿಯಂತೆ ನಾನು. ಪ್ರಶಾಂತ ತಾಣವೇ ನನ್ನ ನೆಲೆ. ಹಾಗಂತ ಅಶಾಂತಿಯಲ್ಲೂ ನಾನಿಲ್ಲವೆಂದಲ್ಲ, ಅಲ್ಲಿ ರೌದ್ರ, ಸಂಘರ್ಷಕ ಪಾತ್ರ ನನ್ನದು. ‘ಮಾಡಿದ್ದುಣ್ಣೋ ಮಾರಾಯ’ ಎಂಬುದು ಮಾನವನೇ ತನ್ನ ಜೀವನಾನುಭವದಿಂದ ಕಂಡುಕೊಂಡು ಪೋಣಿಸಿರುವ ನುಡಿಮುತ್ತು. ಇನ್ನು ಮುಂದೆ ಅವನೂ ಹಾಗೆಯೇ ಬದುಕಬೇಕು. ಆದ್ದರಿಂದ ಅವನ ಪಾಲಿಗೆ ನಾನಿನ್ನು ಸದಾ ಮೌನಿ!”

‘ಢಮಾರ್…!’ ಎಂದು ಕಾಡಿಗೆ ಕಾಡೇ ಪ್ರತಿಧ್ವನಿಸಿ ಸಿಡಿದ ಭೀಕರ ಶಬ್ದ! ಮಲಗಿದ್ದ ಬಂಡೆಯೇ ಅದುರಿದಂತಾಗಿ ಬೆಚ್ಚಿ ಎದ್ದು ಕುಳಿತ ವಿಶ್ವ. ಭೀತ ಪ್ರಾಣಿಪಕ್ಷಿಗಳ ಕೂಗು ಮುಗಿಲು ಮುಟ್ಟಿತ್ತು. ದೇವಸ್ಥಾನದ ಮೇಲಣ ಆಗಸದಲ್ಲಿ ಕರಿಯ ಧೂಮದುಂಡೆಗಳು ಸುರುಳಿಸುರುಳಿಯಾಗಿ ಹರಡುತ್ತಿದ್ದುವು. ದೇವಸ್ಥಾನದ ಜೀರ್ಣೋದ್ಧಾರದ ಯಾವುದೋ ವಿಧಿಯೊಂದರ ಸೂಚನೆಯಾಗಿ ಸಿಡಿಸಿದ ಗರ್ನಾಲಿನ ಸದ್ದು ಅದೆಂದು ಅರಿವಿಗೆ ಬಂತು. ವಿಶ್ವ ಕನಸನ್ನು ಮೆಲುಕು ಹಾಕಿದ. ‘ಅಬ್ಬಾ! ಎಂತಹ ಕನಸದು? ದೇವರೇ ಬಂದು ಸಂವಾದಿಸಿದನೇ…!? ಅಥವಾ ನನ್ನ ಅಂತರಾತ್ಮವೇ ಅಂಥ ವಿಚಿತ್ರ ಕನಸು ಹೆಣೆಯಿತೋ…?’ ಒಂದೂ ತಿಳಿಯಲಿಲ್ಲ. ಎದ್ದು, ಬೆನ್ನಿಗೆ ಅಂಟಿದ್ದ ಧೂಳು ಕೊಡವಿಕೊಂಡು ಹೊರಟ. ದೇವಳ ನಿರ್ಮಾಣದ ಮುಖ್ಯಸ್ಥನೂ, ಆಮಂತ್ರಣ ತುರುಕಿಸಿದವನೂ ಎದುರಾದವರು, ತನ್ನನ್ನು ಕಂಡೂ ಕಾಣದಂತೆ ಮುಖ ತಿರುವಿದ್ದು ವಿಶ್ವನಲ್ಲಿ ವಿಷಾದದ ನಗು ತರಿಸಿತ್ತು. ಅದು ನಡು ಮಧ್ಯಾಹ್ನದ ಹೊತ್ತು. ಕಾರ್ಮಿಕರು, ಅಲ್ಲಲ್ಲಿ ಮರದಡಿಗಳಲ್ಲಿ ಕೂತು ಹರಟುತ್ತ ಉಣ್ಣುತ್ತಿದ್ದರು. ಅವರ ತಲೆಯ ಮೇಲೆ, ಹೊಳೆವ ಮೈಬಣ್ಣದ, ದೊಡ್ಡ ಗಾತ್ರದ ಹತ್ತಾರು ಕಾಗೆಗಳು ಕ್ರಾ…!ಕ್ರಾ…!ಕ್ರಾ…! ಎಂದರಚುತ್ತ ವಿಕ್ಷಿಪ್ತಗೊಂಡಂತೆ ಹಾರಾಡುತ್ತಿದ್ದುವು. ಅವು ಅರಣ್ಯದಲ್ಲೇ ಹುಟ್ಟಿ ಬದುಕುವ ಕಾಡು ಕಾಗೆಗಳು. ಪಾಪ, ಅವಕ್ಕಿಂದು ಮನುಷ್ಯನ ಎಂಜಲು ಹೆಕ್ಕುವ ವಾಂಛೆ ಹುಟ್ಟಿದೆ. ಆದರೆ ಅದು ತಮಗೊಗ್ಗದ ಹೊಲಸೆಂದು, ಅದನ್ನು ತಿಂದರೆ ಮುಂದೊಂದು ದಿನ ತಾವೂ ನಾಡ ಕಾಗೆಗಳಂತೆ ಅಳಿವಿನಂಚಿಗೆ ತಲುಪಿಯೇವೆಂಬ ಒಳ ಅರಿವಿನ ತಲ್ಲಣವೋ ಅವಕ್ಕಿಲ್ಲ. ಅದನ್ನು ಕಂಡ ವಿಶ್ವ ಭಾರವಾದ ಮನಸ್ಸಿನಿಂದ ಕಾರು ಹತ್ತಿದ.

*****

ಗುರುರಾಜ್ ಸನಿಲ್
‘ಬದಲಾವಣೆ ಜಗದ ನಿಯಮ’ ಎಂಬ ನುಡಿಮುತ್ತು ಮಾನವನಿಗೆ ಅನ್ವಯಿಸಿ ಮಾತನಾಡುವುದು ಅಭ್ಯಾಸ. ಆದರೆ ಈ ಮಾನವಜೀವಿ ವಿಕಾಸ ಹೊಂದುತ್ತ ಹೋದಂತೆಲ್ಲ ಚಿತ್ರವಿಚಿತ್ರವಾಗಿ ಪರಿವರ್ತನೆಯಾಗುತ್ತ ಸಾಗುತ್ತಿರುವುದೇ ಒಂದು ವಿಪರ್ಯಾಸ. ಇಂದೆಂಥ ಬಗೆಯ ವಿಕಾಸ? ಮಾನವನ ಸರ್ವಾಂಗೀಣ ವಿಕಾಸ ಹೇಗೆ? ಅಂಥದ್ದೊಂದು ಸಮಗ್ರ ವಿಕಾಸದತ್ತ ಸಾಗುವುದರಿಂದ ತಡೆಯಲ್ಪಟ್ಟ ನಾವು ಈ ಹಿಂದಿನ ಪ್ರಜ್ಞಾವಂತ ಪೂರ್ವಜರು ಶ್ರದ್ಧಾಭಕ್ತಿಯಿಂದ ಸೇವಿಸುತ್ತ ಬಂದಂಥ ಆಧ್ಯಾತ್ಮಿಕ ಸತ್ಯ ಅಥವಾ ಶಕ್ತಿಕೇಂದ್ರಗಳು ನಮ್ಮ ಸುತ್ತಮುತ್ತ ಇರುವುದು ಶಕ್ಯವಲ್ಲವೇ?
ಹೀಗಿರುವಾಗ ನಾವು ನಮ್ಮ ಯಾವ್ಯಾವುದೋ ಆಸೆ, ಅನುಕೂಲಕ್ಕೋಸ್ಕರ ಆ ಸತ್ಯವನ್ನು ದಿಢೀರ್ ಪ್ರಖ್ಯಾತಗೊಳಿಸುವ ಹುನ್ನಾರದಲ್ಲಿ ಅಂಥ ಶಕ್ತಿಕೇಂದ್ರಗಳ ತಾಣಗಳನ್ನು ಕಮರ್ಶಿಯಲೈಸ್ ಮಾಡುವ ಮೂಲಕ ಆಂತರಂಗಿಕ ದರಿದ್ರರೂ ಆಗುತ್ತಿರುವುದು ಕಂಡುಬರುತ್ತದೆ! ಈ ಬಗೆಯ ಅನಾಚಾರಗಳು ಈಚೀಚೆಗೆ ಗೊತ್ತುಗುರಿಯಿಲ್ಲದೆ ನಡೆಯುತ್ತಿರುವುದನ್ನು ಕಾಣುತ್ತ ಬಂದಿರುವ ಲೇಖಕನೊಳಗೆ ಉದ್ಭವಿಸಿದ ಹತಾಶೆಯನ್ನು ಜೀರ್ಣಿಸಿಕೊಳ್ಳಲು ಆತ ಸಾಕಷ್ಟು ಹೆಣಗಾಡಿದ್ದಾನೆ. ಆ ಸನ್ನಿವೇಶದಲ್ಲೇ ಮೊಳೆತ ಕಥಾ ಬರಹವಿದು.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ