ದಾಸಣ್ಣಚಾರ್ಯರ ಮುಖ ಪೇಲವವಾಯ್ತು. ‘ಛೆ!’ ಎಂದರು. ಆಮೇಲೆ ಮೆತ್ತಗೆ ‘ಇವಳಿಗೆ ಏನಾದರೂ ಈ ವಿಷಯ ತಿಳಿದರೆ, ಬೆಂಕಿ ಇಟ್ಟಾಳು ನನ್ನ ತಲೆಗೆ. ಆಕೆಗೆ ದನಕರು ಅಂದರೆ ದೇವರು. ಗಬ್ಬ ನಿಲ್ಲದಿದ್ದರೆ ಬೇಡ, ಹಟ್ಟಿಯಲ್ಲೇ ಇರಲಿ ಎಂದು ಆಕೆ ಅಮೇರಿಕೆಯಲ್ಲಿರುವಾಗಲೇ ಹೇಳಿದ್ದಳು. ಆದರೆ, ನನಗೆ ಗಬ್ಬ ನಿಲ್ಲದ ಮೇಲೆ ಸಾಕುವುದು ವ್ಯರ್ಥ ಎಂಬ ಭಾವನೆ ಬಂತು. ಅಲ್ಲದೆ ಈಗಾಗಲೇ ಹಟ್ಟಿಯಲ್ಲಿ ನಾಲ್ಕಾರು ದನಕರುಗಳಿವೆ. ಇವುಗಳ ಚಾಕರಿ ಮಾಡಲೂ ಕೂಲಿಗಳೂ ಬೇಕಲ್ಲ? ಎಂದು ನಿಮಗೆ ಮಾರಿಬಿಟ್ಟೆ.” ಎಂದರು
“ನಾನು ಮೆಚ್ಚಿದ ನನ್ನ ಕತೆ”ಯ ಸರಣಿಯಲ್ಲಿ ಡಾ. ನಾ. ಮೊಗಸಾಲೆ ಬರೆದ ಕತೆ “ನುಗ್ಗೆಗಿಡ” ನಿಮ್ಮ ಓದಿಗೆ
ಸೀತಾಪುರದಿಂದ ಮಧ್ಯಾಹ್ನ ಹನ್ನೆರಡು ಗಂಟೆಗೆ ಪ್ರತಿನಿತ್ಯವೂ ಕಾರ್ಕಳಕ್ಕೆ ಹೋಗುತ್ತಿದ್ದ ಬಿ.ಎಂ.ಎಸ್ ಬಸ್ಸು ಕೆಟ್ಟು ಹೋದದ್ದರಿಂದ ಕಾರ್ಕಳದ ವಾರದ ಸಂತೆಗೆ ಅದರಲ್ಲೇ ಹೋಗುತ್ತಿದ್ದ ಸೀತಾಪುರದ ಮಂದಿಗೆ ಆ ದಿನ ತುಂಬ ತೊಂದರೆಯಾಗಿತ್ತು. ಆ ಬಸ್ಸು ಕೆಟ್ಟು ಹೋದರೆ, ಮತ್ತೆ ಕಾರ್ಕಳಕ್ಕೆ ಬಸ್ ಇರುವುದು ಎರಡೂವರೆ ಗಂಟೆಗೇ. ಅದರಲ್ಲೇನೋ ಕಾರ್ಕಳಕ್ಕೆ ಹೋಗಬಹುದು. ಆದರೆ ಅದು ಕಾರ್ಕಳಕ್ಕೆ ತಲುಪುವಾಗ ಮೂರು ಕಾಲು ಗಂಟೆಯೇ ಆಗುತ್ತದೆ. ಅಷ್ಟರಲ್ಲಿ ಕಾರ್ಕಳದ ವಾರದ ಸಂತೆಯಲ್ಲಿ ಚೆನ್ನಾಗಿದ್ದ ತರಕಾರಿಗಳೆಲ್ಲ ಮಾರಾಟವಾಗಿ ಹೋಗಿರುತ್ತವೆ. ಮತ್ತೆ ಏನಿದ್ದರೂ ಎಲೆ ಇಲ್ಲದ ಬಸಳೆಯ ದಂಟಿನ ಹಾಗೆ ಇದ್ದವು ಸಿಗುತ್ತವೆ ಎಂದು ಕುಪ್ಪಣ್ಣಯ್ಯ ಗೊಣಗಿದುದ್ದಷ್ಟೇ ಅಲ್ಲ, ಆ ದಿನ ಎರಡೂವರೆ ಗಂಟೆಯ ಬಸ್ಸಿನಲ್ಲಿ ತನ್ನ ಪಕ್ಕದಲ್ಲಿ ಕುಳಿತಿದ್ದ ಶೀನಾಚಾರಿಗೂ ಹೇಳಿದರು. ಅದಕ್ಕೆ ಆತ ‘ಹೌದು ಸ್ವಾಮಿ’ ಎಂದು ‘ಹ್ಞೂಂ’ ಗುಟ್ಟಿ ‘ಮೊದಲು ತರಕಾರಿ ಏನಿದ್ದರೂ ನಾವು ಪೇಟೆಯಿಂದ ತರುವುದಿತ್ತಾ? ಎಲ್ಲಾ ಇಲ್ಲೇ ಊರಲ್ಲೇ ಬೆಳೆಯುತ್ತಿದ್ದೆವಲ್ಲ. ಈಗ ಒಂದು ಹಸಿಮೆಣಸು ಬೇಕಾದರೂ ಪೇಟೆಗೇ ಹೋಗಬೇಕು ನೋಡಿ!’ ಎಂದ. ಅದಕ್ಕೆ ಕುಪ್ಪಣ್ಣಯ್ಯ ‘ಹೌದಯ್ಯ ಶುದ್ಧ ಸೋಮಾರಿಗಳಾಗಿದ್ದೇವೆ ನಾವು, ಘಟ್ಟದ ಕೆಳಗಿನ ಜನ! ಆದರೆ ಘಟ್ಟದ ಮೇಲಿನವರು ನೋಡಿ ಈಗಲೂ ಹೇಗೆ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ!’ ಎಂದರು. ಆಗ ಶೀನಾಚಾರಿ ‘ಘಟ್ಟದವರಿಗೂ ಈಗ ಮೊದಲಿನಷ್ಟು ಆಸಕ್ತಿ ಇಲ್ಲವಂತೆ ಕೃಷಿಯಲ್ಲಿ. ಅವರೂ ಹೀಗೆ ಸೋಮಾರಿಗಳಾಗಿ ಸುಲಭದಲ್ಲಿ ಹಣ ಸಂಪಾದನೆ ಆದರೆ ಅದೇ ಸುಖ ಎಂಬಲ್ಲಿಗೆ ಬರುತ್ತಿದ್ದಾರಂತೆ’ ಎಂದು ತನ್ನ ಮಗಳನ್ನು ಕೊಪ್ಪಕ್ಕೆ ಕೊಟ್ಟುದೆಂದೂ ಆಕೆ ಇದನ್ನೆಲ್ಲ ಹೇಳುತ್ತಿರುತ್ತಾಳೆಂದು ಹೇಳಿದ. ಆಮೇಲೆ ‘ಸ್ವಾಮಿ ಕುಪ್ಪಣ್ಣಯ್ಯನವರೇ, ಇನ್ನು ಎರಡು ಮೂರು ವರ್ಷದಲ್ಲಿ ಘಟ್ಟದ ಮಂದಿಯೂ ನಮ್ಮವರ ಹಾಗೆ ಆಗ್ತಾರೆ ನೋಡಿ! ಆಮೇಲೆ ತರಕಾರಿ ಎಂದು ನಾವು ನಮ್ಮ ಕೈಕಾಲುಗಳ ಬೆರಳುಗಳನ್ನೇ ಕತ್ತರಿಸಿ ಹಾಕಿ, ಬೇಯಿಸಿ ತಿನ್ನುವ ಕಾಲ ಬರುತ್ತದೆ ನೋಡಿ!’ ಎಂದ.
‘ಹೌದೌದು, ಖಂಡಿತ ಬರುತ್ತದೆ’ ಎಂದು ಕುಪ್ಪಣ್ಣಯ್ಯ ಮಾತು ನಿಲ್ಲಿಸಿ ಧ್ಯಾನಸ್ಥರ ಹಾಗೆ ಕುಳಿತರು. ಅವರಿಗೆ ಅವರ ಬಾಲ್ಯಕಾಲದಲ್ಲಿ ಸ್ವತಃ ತಮ್ಮ ಮನೆಯಲ್ಲೇ ಬೆಳೆಯುತ್ತಿದ್ದ ತರಕಾರಿಗಳ ನೆನಪೆಲ್ಲ ಬಂತು. ಎಷ್ಟು ದೊಡ್ಡ ತೊಂಡೆ ಚಪ್ಪರ ಇತ್ತು, ದನಕರುಗಳ ಹಟ್ಟಿಯ ಹಿಂದೆ. ಅದರಲ್ಲಿ ತೊಂಡೆಕಾಯಿ ಇಲ್ಲದ ದಿನಗಳೇ ಇರುತ್ತಿದ್ದಿಲ್ಲ. ಕೊಯ್ದು ಕೊಯ್ದು ಕೈ ಸುಸ್ತಾಗುವಷ್ಟು ಕೂಡಾ. ಬಚ್ಚಲ ನೀರು ಹೋಗುವಲ್ಲಿ ಒಂದು ಬಸಳೆ ಚಪ್ಪರವೂ ಇತ್ತು. ಅದರ ಎಲೆಗಳು ಎಷ್ಟು ದೊಡ್ಡದಾಗಿದ್ದುವು! ಒಂದು ಎಲೆಯನ್ನು ಕೊಯ್ದು ತಲೆ ಮೇಲೆ ಇಟ್ಟರೆ ಅದು ಇಡೀ ತಲೆ ಮುಚ್ಚುವಷ್ಟು ದೊಡ್ಡದಿರುತ್ತಿತ್ತು. ಇನ್ನು ಬಸಳೆಯ ದಂಟೋ? ಹೆಬ್ಬೆರಳಿಗಿಂತ ತೋರ. ಅಮ್ಮ ಇಂಥ ಬಸಳೆಯನ್ನು ಮನೆಗೆ ಬಂದ ನೆಂಟರಿಷ್ಟರಿಗೆ ಮಾತ್ರವಲ್ಲ, ಆಳುಕಾಳುಗಳಿಗೂ ಕೊಡುತ್ತಿದ್ದರು. ಕೊಡುತ್ತಾ ‘ಮುರಿಯ ಹಾಕಬೇಡಿ ಮತ್ತೆ, ಹಾಗೆ ಮುರಿಯ ಹಾಕಿದರೆ ಬರುವ ವರುಷ ನಿಮಗೂ ಇಲ್ಲ, ನಮಗೂ ಇಲ್ಲ!’ ಎನ್ನಲು ಮರೆಯುತ್ತಿದ್ದಿಲ್ಲ. ಅಮ್ಮನ ಮಡಿಲಿನಿಂದ ತಮ್ಮ ಮಡಿಲಿಗೆ ಬಸಳೆಯನ್ನು ಮಗುವಿನ ಹಾಗೆ ಬದಲಾಯಿಸುತ್ತಿದ್ದ ಮಂದಿ ‘ಎಲ್ಲಾದರೂ ಉಂಟೇ ತಾಯಿ? ನಾವು ಯಾಕೆ ಮುರಿಯಹಾಕ್ತೇವೆ ಬಿಡ್ತು ಅನ್ನಿ!’ಎನ್ನುತ್ತಿದ್ದರು. ಸಾಮಾನ್ಯವಾಗಿ ಹಳ್ಳಿಯ ಮಂದಿ, ತಮಗೆ ತೀರಾ ಖುಶಿಯಾದಾಗ ಅದ್ಭುತ ಎನ್ನುವ ಬದಲು ‘ಅಬ್ಬಾ!’ ಎನ್ನುತ್ತಿದ್ದರು. ಹಾಗೇನಾದರೂ ಅಂದರೆ ಅದು ‘ಮುರಿಯಹಾಕಿ’ದ ಹಾಗೆ ಅಂದರೆ ದೃಷ್ಟಿ ತಾಗಿಸಿದ ಹಾಗೆ ಎನ್ನುವ ನಂಬಿಕೆ ಕುಪ್ಪಣ್ಣಯ್ಯನವರು ಚಿಕ್ಕವರಿದ್ದಾಗ ಸೀತಾಪುರದಲ್ಲಿ ಪ್ರಚಲಿತದಲ್ಲಿತ್ತು. ಆದರೆ ಈಗ, ಅಬ್ಬಾ ಎನ್ನುವ ಮಂದಿಯೂ ಇಲ್ಲ, ಅದ್ಭುತವಾದದ್ದೂ ಇಲ್ಲ! ಎಂದುಕೊಂಡ ಕುಪ್ಪಣ್ಣಯ್ಯ ‘ಮುರಿಯಹಾಕುವುದು’ ಎನ್ನುವುದು ಕೂಡಾ ಜನರ ಮಧ್ಯದಿಂದ ಹೋಗಿಯೇ ಬಿಟ್ಟಿತಲ್ಲ ಎಂದು ಅಚ್ಚರಿಪಟ್ಟುಕೊಂಡರು.
ಅಷ್ಟರಲ್ಲಿ ಬಸ್ಸು ಕಾರ್ಕಳ ಬಸ್‌ಸ್ಟಾಂಡಿಗೆ ಬಂದಾಗಿತ್ತು. ಕುಪ್ಪಣ್ಣಯ್ಯನಿಗೆ ಸಂತೆಯಲ್ಲಿ ವಿಶೇಷವಾಗಿ ಬೇಕಾಗಿದ್ದದ್ದು ನುಗ್ಗೆಕಾಯಿ ಮತ್ತು ಬದನೆಕಾಯಿ. ಸಾಮಾನ್ಯವಾಗಿ ವಂಶಸ್ಥರಿಗೆ ನುಗ್ಗೆಕಾಯಿ ಅಡಿಗೆಯಲ್ಲಿ ನಿಷೇಧ ಇರುವ ತರಕಾರಿ. ಬಸಳೆ, ತೊಂಡೆ, ಸೋರೆ, ನುಗ್ಗೆ ಮೊದಲಾದ ತರಕಾರಿಗಳನ್ನು ಶ್ರೀ ಮಾಧ್ವರು ತಿನ್ನಬಾರದೆಂದು ಯಾಕೆ ನಿಶ್ಚಯಿಸಿದ್ದಾರೆ ಎನ್ನುವುದು ಕುಪ್ಪಣ್ಣಯ್ಯನವರಿಗೆ ಗೊತ್ತಿದ್ದಿಲ್ಲ. ಸಾಂದರ್ಭಿಕವಾಗಿ ಸೀತಾಪುರದ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಲ್ಲಿ ಒಮ್ಮೆ ಕುಪ್ಪಣ್ಣಯ್ಯನವರು ಕೇಳಿದಾಗ ಅವರು ‘ಅದು ಅದಕ್ಕೆ, ಇದಕ್ಕೆ’, ಎಂದು ಕಾರಣಕೊಟ್ಟು ಹೇಳಿದರೂ ಅದು ತೇಲಿಕೆಯ ಮಾತು ಎಂದು ಅವರಿಗೆ ಅನಿಸಿತ್ತು. ಶ್ಯಾಮಭಟ್ಟರಿಗೆ ಇದು ತನ್ನನ್ನು ಕೀಳಂದಾಜಿಸಲು ಹೇಳಿದ್ದು ಎಂದು ಅನಿಸಿದರೂ, ಅದನ್ನು ತೋರ್ಪಡಿಸದ ಅವರು ಆ ವಿಷಯವನ್ನೇ ಬಿಟ್ಟು ಬೇರೆ ಮಾತಿಗೆ ಕುಪ್ಪಣ್ಣಯ್ಯನವರನ್ನು ಎಳೆದಿದ್ದರು. ಆದರೆ, ಕುಪ್ಪಣ್ಣಯ್ಯ ಅದೇ ವಿಷಯವನ್ನು ಮುಂದುವರೆಸಿ ‘ನನ್ನ ಅಪ್ಪ ಮಾಧ್ವರಾದರೂ, ನನ್ನಮ್ಮ ಕೋಟದವಳು ತಾನೇ?’ ಎಂದು ಹೇಳಿ ತನ್ನಮ್ಮನ ಪೌರುಷದ ಪ್ರಸ್ತಾವ ಮಾಡಿ ‘ಸುಮ್ಮನಿರಿ’ ಎಂದು ನನ್ನಪ್ಪನ ಬಾಯಿಮುಚ್ಚಿಸಿ ‘ನೀವು ತಿನ್ನಿ ಬಿಡಿ, ನಾನಂತೂ ತಿನ್ನುವವಳೇ’ ಎನ್ನುವವಳು ಎನ್ನುತ್ತಿದ್ದುದು ನೆನಪಿಗೆ ಬಂತು. ಆಮೇಲೆ ಆಕೆ ನಮ್ಮಪ್ಪ ರಾಮರಾಯರಿಗೆ ‘ನೀವು ಮಾಧ್ವರಿಗೆ ಎಂತೆಂಥ ತರಕಾರಿಗಳೆಲ್ಲ ನಿಷಿದ್ಧವೋ, ಅವುಗಳೆಂದರೆ ನನಗೆ ಪಂಚಪ್ರಾಣʼ ಎಂದು ನುಗ್ಗೆಕೋಡು ಹಾಕಿದ ಬದನೆಕಾಯಿಯ ಬೋಳುಹುಳಿ, ಸೋರೆಕಾಯಿಯ ಪಾಯಸ ಎಲ್ಲಾ ಮಾಡಲು ಹತ್ತಿದ್ದರು. ಆಗ ತನ್ನಪ್ಪನಿಗೆ ‘ಬೇಡ’ ಎನ್ನಲು ಆಗದೇ ‘ಬೇಕು’ ಎನ್ನಲು ಮನಸ್ಸು ಒಪ್ಪದೇ ಅಪ್ಪ, ಚಡಪಡಿಸುತ್ತಿದ್ದುದ್ದನ್ನು ತನ್ನ ಅಮ್ಮ ಮೊನ್ನೆ ಸಾಯುವ ತನಕವೂ ‘ರಂಗಾಗಿ’ ವರ್ಣಿಸಿ ಹೇಳುವಾಗ ಕುಪ್ಪಣ್ಣಯ್ಯನವರು ವಯಸ್ಸು ಐವತ್ತಾದರೂ ಸಣ್ಣ ಮಕ್ಕಳ ಹಾಗೆ ಬಾಯಿ ಬಿಟ್ಟು ಕೇಳುತ್ತಿದ್ದರು.
ಕಾರ್ಕಳ ಬಸ್ ನಿಲ್ದಾಣದಲ್ಲಿ ಇಳಿದ ಕುಪ್ಪಣ್ಣಯ್ಯನವರು ತನ್ನ ಜೊತೆ ಬಂದ ಶೀನಾಚಾರಿ ಇಳಿದನೋ ಇಲ್ಲವೋ ಎಂಬುದನ್ನು ಸಹ ನೋಡದೇ ಅಥವಾ ಬಸ್ಸಿನಲ್ಲಿದ್ದ ಪರಿಚಿತ ಮುಖಗಳೆಲ್ಲ ಮುಗುಳ್ನಕ್ಕು ಅವರನ್ನು ಮಾತನಾಡಿಸಲು ಮುಂದಾದ್ದನ್ನು ಕೂಡಾ ಪರಿಗಣಿಸದೇ ಅವಸರ ಅವಸರವಾಗಿ ವಾರದ ಸಂತೆ ನಡೆಯುವ ಸ್ಥಳದಾಚೆ ಹೆಜ್ಜೆ ಹಾಕಿದರು. ಅದಕ್ಕೆ ಕಾರಣ ನಾಳೆಯ ದಿನ ಸೀತಾಪುರದ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆಯುವ ಮದುವೆಯ ಊಟದ ಕಂಟ್ರಾಕ್ಟ್ ವಹಿಸಿಕೊಂಡ ಸೀತಾರಾಮಾಚಾರ್ಯರಿಗೆ ಕನಿಷ್ಟ ನೂರುಕೋಡು ನುಗ್ಗೆ ಮತ್ತು 15 ಕೆಜಿಯಷ್ಟಾದರೂ ಬದನೆ ಸಂತೆಯಿಂದ ತಂದುಕೊಡುತ್ತೇನೆ ಎಂದು ಅವರು ಆ ದಿನ ಬೆಳಗ್ಗೆ ಸಂತೆಗೆ ಹೊರಟು ನಿಂತು, ಬಸ್ಸಿಲ್ಲದೇ ಪೆಚ್ಚು ಮೋರೆ ಹಾಕಿದ್ದ ಆಚಾರ್ಯರಿಗೆ ಆಶ್ವಾಸನೆ ನೀಡಿದ್ದರು. ಈಗ ಗಂಟೆ ಮೂರು ದಾಟಿದ್ದರಿಂದ ಅಷ್ಟು ಸಿಗುತ್ತದೊ ಇಲ್ಲವೋ ಎಂಬ ಭಯ ಅವರನ್ನು ಕಾಡುತ್ತಿತ್ತು. ಜೊತೆಗೆ ಸಿಕ್ಕಿದವೂ ಕೂಡಾ ಚೆನ್ನಾಗಿಲ್ಲದೇ ಹೋದರೆ ಸೀತಾರಾಮಾಚಾರ್ಯರು ನಾಳೆ ‘ನಾನಾದರೆ ಇದನ್ನು ತರುತ್ತಿದ್ದಿಲ್ಲ, ಕುಪ್ಪಣ್ಣಯ್ಯ!’ ಎಂದು ಹೇಳದೇ ಇರುವವರೂ ಅಲ್ಲ ಎಂದು ಅನಿಸಿತು. ತಾನು ಈ ‘ಬಿಟ್ಟಿ ಕೆಲಸ’ಕ್ಕೆ ಕೈ ಹಾಕಬಾರದಿತ್ತು ಎಂದುಕೊಂಡರು.
ಕುಪ್ಪಣ್ಣಯ್ಯ ವಾರದ ಸಂತೆಗೆ ಬಂದಷ್ಟು ಸಲ ತನಗೆ ಬೇಕಾದ ತರಕಾರಿ ತೆಗೆದುಕೊಳ್ಳುತ್ತಿದ್ದುದು ಶಿವಮೊಗ್ಗೆ ಕಡೆಯಿಂದ ತರಕಾರಿ ತರುವ ಹಾಲಪ್ಪನಿಂದ. ಕುಪ್ಪಣ್ಣಯ್ಯ ತನ್ನ ಖಾಯಂ ಗಿರಾಕಿ ಎಂದು ಆತ ತಾನು ತಂದ ತರಕಾರಿಯನ್ನು ಗೋಣಿಯಿಂದ ಹೊರತೆಗೆದು ಬಿಚ್ಚಿಡುತ್ತಿರುವಾಗಲೇ ಕುಪ್ಪಣ್ಣಯ್ಯನವರ ಆಯ್ಕೆ ಯಾವುದೆನ್ನುವಂತೆ ಅರಿತಂತೆ ಕೆಲವೊಂದು ತರಕಾರಿಯಲ್ಲಿ ಒಂದಿಷ್ಟನ್ನು ಪ್ರತ್ಯೇಕವಾಗಿ ತೆಗೆದಿರಿಸುತ್ತಿದ್ದುದುಂಟು. ಅದು ಕುಪ್ಪಣ್ಣಯ್ಯನವರಿಗೂ ಗೊತ್ತಿರುತ್ತಿತ್ತು. ಹಾಗಾಗಿ ಹಾಲಪ್ಪ ತೆಗೆದಿರಿಸಿದ ತರಕಾರಿಯಲ್ಲಿ ಕುಪ್ಪಣ್ಣಯ್ಯ ‘ಬೇಡ’ ಎಂದು ಬಿಟ್ಟು ಬರುವಂತಾದ್ದು ಸಾಮಾನ್ಯವಾಗಿ ಯಾವುದೂ ಇರುತ್ತಿದ್ದಿಲ್ಲ. ಅದೂ ಅಲ್ಲದೆ, ಅನ್‌ಸೀಸನ್‌ನಲ್ಲಿಯೂ ಕೂಡಾ ಹಾಲಪ್ಪ ಕುಪ್ಪಣ್ಣಯ್ಯನವರಿಗಾಗಿ ನುಗ್ಗೆಕೋಡು ಮತ್ತು ಬದನೆಕಾಯಿಯನ್ನು ಎಲ್ಲಿಂದಾದರೂ ಹೊಂದಿಸಿ ತರುತ್ತಿದ್ದುದುಂಟು. ಅಂಥ ಸಂದರ್ಭಗಳಲ್ಲಿ ಕುಪ್ಪಣ್ಣಯ್ಯ ತನ್ನ ಪಕ್ಕದಲ್ಲಿ ಸೀತಾಪುರದವರು ಯಾರಾದರೂ ಇದ್ದರೆ, ‘ನೋಡಿ! ನೀವು ಒಂದು ನುಗ್ಗೆಕೋಡಿಗೆ ಹತ್ತು ರೂಪಾಯಿ ಕೊಡುತ್ತೇನೆ ಎಂದರೂ ಈ ಹಾಲಪ್ಪ ನಿಮಗೆ ಕೊಡುವವನಲ್ಲ!’ ಎಂದು ಹಾಲಪ್ಪನ ಸ್ನೇಹಶೀಲತೆಯನ್ನು ಕೊಂಡಾಡುತ್ತಿದ್ದರು. ಅಷ್ಟೇ ಅಲ್ಲ, ‘ಓಯ್! ಹಾಲಪ್ಪ ನೀವು ಒಮ್ಮೆ ನಮ್ಮ ಮನೆಗೆ ಬರ‍್ಬೇಕಿತ್ತಲ್ಲ ಮಾರಾಯರೇ, ನನ್ನ ಹೆಂಡತಿ ಈ ನುಗ್ಗೆಕೋಡು ಮತ್ತು ಬದನೆಕಾಯಿ ಹಾಕಿ ಮಾಡುವ ಬೋಳುಹುಳಿಯ ರುಚಿಯನ್ನು ನೀವು ನೋಡಿ ಬಿಟ್ಟರೆ ಸಾಕು, ಮತ್ತೆ ಪ್ರತಿ ಸಂತೆಯ ದಿನವೂ ರಾತ್ರೆ ನೀವು ನಮ್ಮನೆಗೆ ಬಂದೇ ಬರ‍್ತೀರಿ’ ಎಂದೂ ತಮಾಷೆಗೆ ಹೇಳುತ್ತಿದ್ದರು. ಆದರೆ, ಹಾಲಪ್ಪ ಒಮ್ಮೆಯೂ ಕುಪ್ಪಣ್ಣಯ್ಯನವರ ಮನೆಗೆ ಬರಲಿಲ್ಲ. ಬಂದಿದ್ದರೆ ಪ್ರಾಯಶಃ ಕುಪ್ಪಣ್ಣಯ್ಯನವರ ಮನೆಯ ಬೋಳುಹುಳಿಯ ರುಚಿ ಘಟ್ಟದ ಮೇಲೂ ಪರಿಮಳಿಸುತ್ತಿತ್ತೇನೋ!.
ಆ ದಿನ ಕುಪ್ಪಣ್ಣಯ್ಯ ಹಾಲಪ್ಪನ ಮುಂದೆ ಬಂದು ನಿಂತಾಗ ‘ಓ!ನೀವು ಇವೊತ್ತು ಬರುವುದಿಲ್ಲ ಅಂದುಕೊಂಡಿದ್ದೆ. ಬಂದೇ ಬಿಟ್ರಲ್ಲಾ!’ ಎಂದು ಹಾಲಪ್ಪ ‘ಹತ್ತು ನುಗ್ಗೆಕೋಡು ಮತ್ತು ಎರಡು ಕೆ.ಜಿ ಬದನೆ ತೆಗೆದಿರಿಸಿದ್ದೇನೆ. ಉಳಿದಿದ್ದರಲ್ಲಿ ನಿಮಗೆ ಇಷ್ಟವಾಗುವುದು ಯಾವುದೂ ಇರಲಿಲ್ಲ ನೋಡಿ!’ಎಂದು ತನ್ನ ಸನಿಹದಲ್ಲಿ ಕುಪ್ಪಣ್ಣಯ್ಯನವರಿಗಾಗಿಯೇ ತೆಗೆದಿರಿಸಿದ್ದ ಬದನೆ ಮತ್ತು ನುಗ್ಗೆಕೋಡುಗಳು ತುಂಬಿದ್ದ ಚೀಲವನ್ನು ಮೇಲೆತ್ತಿಕೊಡಲು ಮುಂದಾದ.
ಆಗ ಕುಪ್ಪಣ್ಣಯ್ಯ ಬಿ.ಎಂ.ಎಸ್ ಬಸ್ಸು ಕೆಟ್ಟುಹೋದದ್ದರಿಂದ ಆದ ತೊಂದರೆಯನ್ನೆಲ್ಲ ವಿವರಿಸಿ, ತನಗೆ ನಾಳೆಯ ಮದುವೆಗಾಗಿ ಬೇಕಾದ ಐಟಂಗಳನ್ನೆಲ್ಲ ಹಾಲಪ್ಪನ ಮುಂದಿರಿಸಿ ‘ಬೇರೇನಿಲ್ಲದಿದ್ದರೂ ಚಿಂತಿಲ್ಲ ನೂರುಕೋಡು ನುಗ್ಗೆ 15 ಕೆ.ಜಿ.ಬದನೆ ಬೇಕೇ ಬೇಕು ಮಾರಾಯ!’ ಎಂದರು.
ಹಾಲಪ್ಪ ತಲೆ ತುರಿಸಿಕೊಂಡ. ‘ಈಗ ಹೇಳಿದರೆ ಹೇಗೆ ಸ್ವಾಮಿ? ನನ್ನ ಮೊಬಾಯ್ಲಿನ ನಂಬ್ರ ನಿಮಗೆ ಗೊತ್ತುಂಟು. ಒಂದು ಪೋನು ಹೊಡೀತಿದ್ದರೆ ಅಷ್ಟನ್ನು ತೆಗೆದಿರಿಸುತ್ತಿದ್ದೆ. ಈಗ ಕಷ್ಟ!’ ಎಂದುಕೊಂಡ. ಆಮೇಲೆ ಉಟ್ಟ ಬಟ್ಟೆಯನ್ನು ಸ್ವಲ್ಪ ಮೇಲೆತ್ತಿ, ಬಲವಾಗಿ ಕುಂಡೆಯನ್ನು ತುರಿಸಿಕೊಂಡು ‘ಒಂದ್ನಿಮಿಷ ನಿಲ್ಲಿ! ಇದ್ರೆ ಆ ಮೀನು ಮಾರ್ಕೆಟ್ಟಿನ ಬದಿಯಲ್ಲೇ ಇರುವ ಮುನೀರ್ ಸಾಬಿಯಲ್ಲಿ ಇರಬೇಕು. ಆತ ಎರಡು ಗೋಣಿ ಚೀಲಗಳಲ್ಲಿ ನುಗ್ಗೆ ಮತ್ತು ಬದನೆ ತಂದದ್ದು ನನಗೆ ಗೊತ್ತುಂಟು!’ ಎಂದು ಕುಪ್ಪಣ್ಣಯ್ಯನವರ ಮುಖ ನೋಡಿದ.
ಕುಪ್ಪಣ್ಣಯ್ಯನವರಿಗೆ ಆ ಮೀನು ಮಾರ್ಕೆಟ್ಟಿನ ಪಕ್ಕಕ್ಕೆ ಹೋಗಲು ಮುಜುಗರ, ಅಷ್ಟೇ ಅಲ್ಲ, ಕಷ್ಟವೂ ಕೂಡಾ. ಮೀನಿನ ವಾಸನೆ ಅಂದರೆ ಅವರಿಗೆ ವಾಕರಿಕೆ ಬೇರೆ. ‘ಹೇಗೆ ತಿನ್ನುತ್ತೀರಪ್ಪಾ ನೀವು ಮೀನನ್ನು?’ ಎಂದು ಅವರು ಮೀನು ತಿನ್ನುವ ತನ್ನ ಸ್ನೇಹಿತರನ್ನು ತಮಾಷೆಗೆ ಅನ್ನುವುದುಂಟು. ಆಗ ಅಂಥವರು ‘ನೀವು ಹೇಗೆ ಬದನೆ ಬೆಂಡೆ ತಿನ್ನುತ್ತೀರೋ ಹಾಗೆ!’ ಎಂದು ಪ್ರತಿತಮಾಷೆ ಮಾಡುತ್ತಿದ್ದುದುಂಟು. ಆಗ ಕುಪ್ಪಣ್ಣಯ್ಯ ಜೋಲು ಮೋರೆ ಹಾಕಿ ‘ನಾವು ತಿನ್ನುವ ಬದನೆ ಬೆಂಡೆಯನ್ನು ದಯವಿಟ್ಟು ಮೀನಿಗೆ ಹೋಲಿಸಬೇಡಿ ಮಾರಾಯರೇ. ಹಾಗೆ ಹೋಲಿಸಿದರೆ ನಾನು ಬದನೆ ಬೆಂಡೆ ತಿನ್ನುವಾಗ ಅದು ಮೀನೆಂಬಂತೆ ಆಗಿ ವಾಕರಿಗೆ ಬಂದೀತು ಬಿಡಿ!’ ಎಂದು ದಮ್ಮಯ್ಯ ಹಾಕುತ್ತಿದ್ದರು. ಆಗ ಕುಪ್ಪಣ್ಣಯ್ಯ ಸ್ನೇಹಿತರು ‘ನಿಮ್ಮ ತಲೆಯಲ್ಲಿ ಪುಳಿಚ್ಚಾರು ಕೊದ್ದೆಲು ತಿಂದೇ ಸಾಯಬೇಕು ಎಂದು ಬ್ರಹ್ಮ ಬರೆದಿದ್ದರೆ ನಾವೇನು ಮಾಡಲಿಕ್ಕಾಗುತ್ತದೆ ಸ್ವಾಮಿ? ಆದರೆ ಒಂದು ಸಲ ನೀವು ಮೂಗು ಹಿಡಿದು ‘ಮೀನು ತಿಂದಿರೋ ಆ ಮೇಲೆ ತಪ್ಪಿಯೂ ನೀವು ತರಕಾರಿ ತಿನ್ನಲಿಕ್ಕಿಲ್ಲ. ಅಷ್ಟು ರುಚಿ ಅದು!’ ಎನ್ನುತ್ತಿದ್ದರು. ಆಗ ಕುಪ್ಪಣ್ಣಯ್ಯ ‘ಆ ರುಚಿಯೂ ಬೇಡ, ನಿಮ್ಮ ವಕಾಲತ್ತು ಬೇಡ’ ಎಂದು ಅವರಿಗೆ ಕಫದ ತೊಂದರೆ ಇಲ್ಲದಿದ್ದರೂ ದೊಂಡೆಯಲ್ಲಿ ಕಫ ಕಟ್ಟಿದ ಹಾಗಾಗಿ ಕ್ಯಾಕರಿಸಿ ದೂರ ಹೋಗಿ ಉಗುಳಿ ಬರುತ್ತಿದ್ದುದೂ ಉಂಟು.
ಇಂಥ ಕುಪ್ಪಣ್ಣಯ್ಯನವರಿಗೆ ಮೀನು ಮಾರ್ಕೆಟ್ಟಿನ ಬದಿಗೆ ಹೋಗಿ ನಿಲ್ಲುವುದು ಸಾಧ್ಯವೇ? ಸಾಧ್ಯವೇ ಇಲ್ಲ ಎಂದುಕೊಂಡರು ಅವರು. ಆಮೇಲೆ ‘ನೀವು ಹೋಗಿ, ಇಲ್ಲಿ ಇದೆಯಾ ನೋಡಿ ಬನ್ನಿ. ಅಷ್ಟೇ ಅಲ್ಲ ಇದ್ದರೆ ರೇಟು ಎಷ್ಟು ಎಂದೂ ಕೇಳಿ ಬನ್ನಿ. ಅಷ್ಟರ ತನಕ ನಾನೇ ನಿಮ್ಮ ತರಕಾರಿ ಅಂಗಡಿ ಕಾಯುತ್ತೇನೆ’ ಎಂದರು.
ಹಾಲಪ್ಪ ಮೀನು ಮಾರ್ಕೆಟ್ಟಿನಾಚೆ ಹೋಗಿ ಬಂದ. “ಇಬ್ಬರು ಸಾಬಿಗಳು ಅಲ್ಲಿದ್ದಾರೆ. ಅವರಲ್ಲೊಬ್ಬ ಅಲ್ಲಿ ಇರುವ 25 ನುಗ್ಗೆಕೋಡು ತನಗೇ ಬೇಕೆಂದುಕೊಂಡು ತೆಗೆದುಕೊಂಡಿದ್ದಾನಂತೆ. ಬದನೆ ಆಗಲೇ ಖಾಲಿಯಾಗಿದೆಯಂತೆ’ ಎಂದ. ಅದನ್ನು ಕೇಳಿದ ಕುಪ್ಪಣ್ಣಯ್ಯ ‘ಇದೊಳ್ಳೆ ಕತೆಯಾಯಿತಲ್ಲ. ಸೀತಾರಾಮಾಚಾರ್ಯರಿಗೆ ಏನು ಹೇಳುವುದು? ಅವರೀಗ ತಾನು ನುಗ್ಗೆ ಮತ್ತೆ ಬದನೆ ತಂದುಕೊಡ್ತಾರೆ ಅಂತ ನಿಶ್ಚಯಿಸಿಯೇ ಬಿಟ್ಟಿರುತ್ತಾರೆ. ಆ ಐಟಂ ಇಲ್ಲ ಅಂದ್ರೆ ಬೇರೆ ಯಾವುದನ್ನು ತರಬೇಕೂಂತ ಅವರು ಹೇಳಿಲ್ಲ. ತಾನೂ ಕೇಳಿಲ್ಲ. ಖಂಡಿತ ಬದನೆ ನುಗ್ಗೆ ಸಿಗಬಹುದೆಂದು ಧೈರ್ಯದಲ್ಲಿ ತಾನಿದ್ದದ್ದೇ ತಪ್ಪಾಯ್ತು. ಈಗೇನು ಮಾಡೋದು? ಬೇರೆ ಏನಾದರೂ ಐಟಂನ್ನು ಬದಲಿಗೆ ಅಂತ ಕೊಂಡುಹೋದರೆ, ‘ಅದು ಬೇಡ ಇತ್ತು’ ಅಂತ ಆಚಾರ್ಯರು ಹೇಳಲೂಬಹುದು ಎಂದುಕೊಂಡರು. ಯಾವುದಾದರೂ ಹೌದು. ಇನ್ನೊಬ್ಬರ ಬಿಟ್ಟಿ ಚಾಕರಿಯನ್ನು ಮೇಲೆ ಬಿದ್ದು ವಹಿಸಿಕೊಳ್ಳೋದಲ್ಲ’ ಎಂದುಕೊಂಡರು.
ಅಷ್ಟರಲ್ಲಿ ಅವರಿಗೆ ಒಂದು ದೊಡ್ಡ ಕಟ್ಟು ನುಗ್ಗೆಕೋಡುಗಳನ್ನು ಹೆಗಲಿಗೆ ಏರಿಸಿಕೊಂಡು ಇದಿರಿಗೇ ಹಸನಬ್ಬ ಬರುವುದು ಕಾಣಿಸಿತು. ‘ಅರೇ ಹಸನಬ್ಬನಿಗೆ ಇಷ್ಟು ನುಗ್ಗೆಕೋಡು ಯಾಕಪ್ಪ?’ಎಂದು ಕುಪ್ಪಣ್ಣಯ್ಯ ಕೇಳಬೇಕೆನ್ನುವಷ್ಟರಲ್ಲೇ ಹಾಲಪ್ಪ ‘ನೋಡಿ ಸ್ವಾಮಿ ಇವರೇ, ಆ ಮೀನು ಮಾರ್ಕೆಟ್ಟಿನಲ್ಲಿ ನುಗ್ಗೆಕೋಡು ಕೊಳ್ಳುತ್ತಿದ್ದವರು’ ಎಂದ.
‘ಹೌದಾ?’ ಎಂದು ಪ್ರಶ್ನಿಸಿದ ಕುಪ್ಪಣ್ಣಯ್ಯ ತನ್ನ ಇದಿರಿಗೇ ಬಂದು ನಿಂತು ಸಲಾಂ ಮಾಡಿದ ಹಸನಬ್ಬನಲ್ಲಿ ‘ಹ್ಞೂ, ಇಷ್ಟೂ ನುಗ್ಗೆಕೋಡಾ? ಯಾಕೆ ಇಷ್ಟು?’ ಎಂದರು ಕುತೂಹಲದಲ್ಲಿ. ಅದಕ್ಕೆ ಹಸನಬ್ಬ ‘ನನ್ನ ತಮ್ಮ ಸೌದಿಯಿಂದ ಬಂದಿದ್ದಾನೆ. ಅವನಿಗೆ ನುಗ್ಗೆ ಅಂದರೆ ತುಂಬಾ ಇಷ್ಟ. ನಾಲ್ಕು ದಿನ ಅದರದ್ದೇ ಪಲ್ಯ ಸಾಂಬಾರು, ಸಾರು ಅಂತ ಮಾಡೋಣ ಎಂದು ಕೊಂಡುಕೊಂಡೆ” ಎಂದ.
‘ಸ್ಸರಿ, ಎಲ್ಲಿ ನಿಮ್ಮ ತಮ್ಮ?’ ಎಂದು ಕುಪ್ಪಣ್ಣಯ್ಯ ಪ್ರಶ್ನಿಸುವಷ್ಟರಲ್ಲೇ ಹಸನಬ್ಬನ ತಮ್ಮ ಕೈಯಲ್ಲಿದ್ದ ಚೀಲ ತುಂಬ ಹಣ್ಣುಗಳನ್ನು ತುಂಬಿಕೊಂಡು ಇಬ್ಬರ ಸನಿಹದಲ್ಲೇ ಬಂದು ನಿಂತ. ಹಸನಬ್ಬ ತಮ್ಮ ಹಸದುಲ್ಲಾನಿಗೆ ಕುಪ್ಪಣ್ಣಯ್ಯನವರನ್ನು ಪರಿಚಯಿಸುವಷ್ಟರಲ್ಲೇ ಆತ ಕುಪ್ಪಣ್ಣಯ್ಯನವರಿಗೆ ಸಲಾಂ ಮಾಡಿ ‘ನಾನು ಸೌದಿಗೆ ಹೋಗುವ ಮೊದಲು ಒಮ್ಮೆ ನಿಮ್ಮ ಸೀತಾಪುರಕ್ಕೆ ಬಂದಿದ್ದೆ. ಆಗ ನಮ್ಮಣ್ಣ ಬಾಳೆಕಾಯಿ ವ್ಯಾಪಾರಿ. ಹಾಗೆ ಅವರ ಜೊತೆ ಬಂದವನು ನಾನು! ನಿಮ್ಮಲ್ಲಿ ಕಾಫಿ ಕುಡಿದ ನೆನಪುಂಟು!’ ಎಂದ.
ಶಹಬ್ಬಾಷ್’ ಹೇಳಬೇಕು ನಿಮ್ಮ ನೆನಪಿಗೆ! ಎಂದ ಕುಪ್ಪಣ್ಣಯ್ಯ ಆ ಮಾತಿಗೆ ‘ಈಗ ಏನೆಂದರೂ 15 – 20 ವರುಷ ಆಗಿರಬಹುದಲ್ಲಾ?’ ಎಂದರು.
‘ಹೌದೌದು!’ ಎಂದು ಹಸನಬ್ಬ ಹೇಳುವಷ್ಟರಲ್ಲೇ ಹಸದುಲ್ಲಾ ‘ಬನ್ನಿ ಪಕ್ಕದ ಹೋಟೇಲಿಗೆ ಹೋಗಿ ಒಂದು ಕಪ್ ಟೀ ಕುಡಿಯೋಣ. ಸಂತೆಯ ನಡುವಿನಲ್ಲಿ ನಿಂತು ಯಾಕೆ ಮಾತುಕತೆ?’
‘ಬೇಡ, ನೀವು ಟೀ ಕುಡಿಯಿರಿ’ ಎಂದು ಕುಪ್ಪಣ್ಣಯ್ಯ ಮುಜುಗರ ತೋರಿದರೆ ಸಾಬಿಗಳಿಬ್ಬರೂ ಬಿಡಲಿಲ್ಲ. ‘ಬನ್ನಿ ಭಟ್ರೇ!’ ಎಂದು ಕುಪ್ಪಣ್ಣಯ್ಯನನ್ನು ಕೈ ಹಿಡಿದು ಕರೆದು ಒತ್ತಾಯಿಸಿದರು.
ಮೂವರು ಕುಳಿತು ಟೀ ಕುಡಿಯುತ್ತಿದ್ದ ಹಾಗೆ ಕುಪ್ಪಣ್ಣಯ್ಯ ಹಸದುಲ್ಲಾನ ವಹಿವಾಟಿನ ವಿಚಾರದ ಮಾತೆತ್ತಿದರು. ‘ಅವನಿಗೇನೂ ತೊಂದರೆ ಇಲ್ಲ ಬಿಡಿ ಸ್ವಾಮಿ. ಈಗ ತೊಂದರೆ ಇರುವುದು ಅವನ ಮಗನಿಗೇ’ ಎಂದ ಹಸನಬ್ಬ.
ಕುಪ್ಪಣ್ಣಯ್ಯ ‘ಅಂತಾದ್ದೇನು ತೊಂದರೆ?’ ಎಂದು ಕೇಳುತ್ತಿರುವಷ್ಟರಲ್ಲೇ ಹಸದುಲ್ಲಾ ‘ನನ್ನ ಮಗ ನನ್ನೊಟ್ಟಿಗೇ ಸೌದಿಯಲ್ಲೇ ಇದ್ದಾನೆ ಸ್ವಾಮಿ. ಒಳ್ಳೆ ಕೆಲಸವೂ ಉಂಟು ಅವನಿಗೆ ಅಲ್ಲಿ. ಆದರೆ ದೇವರು ಕೊಟ್ಟರು ಪೂಜಾರಿ ಬಿಡ, ಎನ್ನುವ ಹಾಗಾಗಿದೆ ನಮ್ಮ ಪಾಡು!’ಎಂದ.
‘ಏನು ಅಂಥ ತೊಂದರೆ ಅವನಿಗೆ?’ಎಂದು ಕುಪ್ಪಣ್ಣಯ್ಯನವರು ಕೇಳಬೇಕೆನ್ನುವಷ್ಟರಲ್ಲಿ ಹಸನಬ್ಬ “ಅದೆಂತದೋ ಸರ್ಪಸುತ್ತಂತೆ ಅವನ ಮಗನಿಗೆ. ಮೂರು ತಿಂಗಳಿಂದ ಇದೆ ನೋಡಿ! ಒಂದು ತಿಂಗಳು ಸೌದಿಯಲ್ಲೇ ಚಿಕಿತ್ಸೆ ಆಯಿತು. ಒಂದಿಷ್ಟೂ ಗುಣ ಕಾಣಲಿಲ್ಲ. ಅದು ವೈರಸ್ ಖಾಯಿಲೆ. ಅದಕ್ಕೆ ನಾಟಿ ಔಷಧ ಮಾಡಿ’ ಎಂದು ಸೌದಿಯಲ್ಲಿರುವ ಡಾಕ್ಟ್ರೇ ಹೇಳಿದ ಮೇಲೆ ‘ಹೌದು’ ಎಂದು ನಾವು ಇಬ್ಬರೂ ಊರಿಗೆ ಬಂದೆವು. ಇಲ್ಲಿ ಮೊದಲು ಮಂಗಳೂರು ಆಮೇಲೆ ಇನ್ನೂ ನಾಲ್ಕು ನರ್ಸಿಂಗ್ ಹೋಮುಗಳಿಗೆಲ್ಲ ಹೋದೆವು. ಎಲ್ಲೂ ಪ್ರಯೋಜನವಾಗಲಿಲ್ಲ. ಆಮೇಲೆ ನಾಟಿ ಮದ್ದೂ ಆಯ್ತು. ಊಹ್ಞೂ ಆಗಲಿಲ್ಲ. ಖಾಯಿಲೆ ಹಾಗೇ ಇದೆ. ಅದು ಕುತ್ತಿಗೆ ಮತ್ತು ಮುಖದ ಮೇಲೆ ಎದ್ದಿದೆ ಬೇರೆ. ವಿಪರೀತ ಉರಿ. ಸಣ್ಣ ಸಣ್ಣ ಬೊಕ್ಕೆಗಳು ಎಣಿಸಿದರೆ ನಾಳೆ ಅವನ ಕಣ್ಣೂ ಹೋಗಬಹುದು ಅನ್ನುವ ಭಯ ಭಯ ಆಗ್ತದೆ ನನಗೆ!” ಎಂದು ಆತ ಹೇಳುವಷ್ಟರಲ್ಲೇ ಆತನ ಕಂಠ ಗದ್ಗದವಾಗಿ ಮಾತು ನಿಂತು ಹೋಯಿತು.
‘ಹೌದು ಸ್ವಾಮಿ ಹುಡುಗನನ್ನು ನೋಡಲಿಕ್ಕಾಗುವುದಿಲ್ಲ. ಈ ವರುಷ ಮದುವೆ ಮಾಡಬೇಕೆಂತಲೂ ಇದ್ದೆವು ನಾವು. ಆದರೆ ಹೀಗಾಯಿತು ನೋಡಿ. ಹುಡುಗನನ್ನು ನೀವೊಮ್ಮೆ ನೋಡಬೇಕು! ಹೇಗಿದ್ದಾನೆಂದರೆ ಕೈ ತೊಳೆದು ಮುಟ್ಟಬೇಕು! ಬಿಳಿ ಬಿಳಿ, ಕೆಂಪು ಕೆಂಪು!’ ಎಂದು ಹೇಳುತ್ತಾ ಹಸನಬ್ಬನೂ ಬರುತ್ತಿದ್ದ ದುಃಖವನ್ನು ತಡೆದುಕೊಂಡು ಕಣ್ಣಲ್ಲಿ ನೀರಿನ ರೂಪದಲ್ಲಿ ಕಾಣಿಸಿಕೊಂಡ ದುಃಖವನ್ನು ಒರೆಸಿಕೊಂಡ.
ಕುಪ್ಪಣ್ಣಯ್ಯನ ಮುಖ ಇಷ್ಟು ಚಿಕ್ಕದಾಯಿತು.ಅ ವರಿಗೆ ತಿಳಿಯದ ಹಾಗೆ ಅವರು ‘ಅಯ್ಯೋ ದೇವರೇ’ ಎಂದು ಸಣ್ಣಗೆ ಹೇಳಿಕೊಂಡರು. ಆಮೇಲೆ ಏನೋ ಛಕ್ಕನೆ ನೆನಪಾದವರಂತೆ ‘ನಿಮ್ಮ ಅದೃಷ್ಟ ಚೆನ್ನಾಗಿ ಉಂಟು ಮಾರಾಯರೇ’ ಎಂದರು.
ಸಾಬಿಗಳು ಇಬ್ಬರೂ ಕಣ್ ಬಾಯಿಬಿಟ್ಟು ‘ಎಂಥ ಅದೃಷ್ಟವಂತರು ಸ್ವಾಮಿ ನಾವು?’ ಹೇಳಿ, ಏನದು ಅಂಥ ಅದೃಷ್ಟದ ವಿಚಾರ?’ ಎಂದರು ಒಬ್ಬರ ನಂತರ ಮತ್ತೊಬ್ಬರಂತೆ.
ಅದಕ್ಕೆ ಕುಪ್ಪಣ್ಣಯ್ಯ ‘ನಮ್ಮ ಸೀತಾಪುರದಲ್ಲಿ ಪ್ರೇಮಕ್ಕ ಅಂತ ಒಬ್ಬರು ಹೆಣ್ಮಗಳಿದ್ದಾರೆ. ತುಂಬ ಒಳ್ಳೆಯ ಹೆಂಗ್ಸು. ಇಂಥ ಸರ್ಪಸುತ್ತಿಗೇ ಅಂತ ಅಲ್ಲ, ಎಲ್ಲಾ ಬಹುತೇಕ ಖಾಯಿಲೆಗೆ ನಾಟೀ ಔಷಧ ಕೊಡುವುದರಲ್ಲಿ ನಂಬರ್ ಒನ್. ಆಕೆ ಈಚೆಗೆ ಅಂದರೆ ವಾರವಾಯಿತಷ್ಟೇ ಸ್ಟೇಟ್ಸ್‌ನಿಂದ ವಾಪಾಸು ಬಂದು! ಅಲ್ಲಿಗೆ ಹೋಗಿ ಆರು ತಿಂಗಳಾಯ್ತು. ಮಗಳ ಬಾಣಂತಿ ಸಾಕಲು ಅಂತ ಆಕೆ ಹೋದದ್ದು. ಆಕೆಯ ಹತ್ರ ನೀವು ನಿಮ್ಮ ಹುಡುಗನನ್ನು ಕರಕ್ಕೊಂಡು ಹೋದ್ರೆ ವಾಸಿಯಾಗೋದಂತು ಖಾತ್ರಿ. ಎಂದರು ಆತ್ಮ ವಿಶ್ವಾಸದಲ್ಲಿ.
ಹಸನಬ್ಬ ಕುತೂಹಲದಲ್ಲಿ ‘ನಿಮ್ಮ ಸೀತಾಪುರದಲ್ಲಿ ನನಗೆ ಗೊತ್ತಿಲ್ಲದ ಮನೆ ಎಲ್ಲುಂಟು ಸ್ವಾಮಿ? ಯಾವ ಪ್ರೇಮಕ್ಕನನ್ನು ನೀವು ಹೇಳುವುದು? ರಾಘವರ ಮನೆಯ ಪ್ರೇಮಕ್ಕನೋ? ರಾಜಣ್ಣನ ಹೆಂಡ್ತಿಯೋ? ಅಥವಾ ಪಾರೊಟ್ಟುಗುತ್ತಿನ ಚೀಂಕ್ರಶೆಟ್ಟರ ಹೆಂಡತಿಯೋ?’ ಎಂದು ನಾಲ್ಕಾರು ಹೆಣ್ಮಕ್ಕಳ ಹೆಸರನ್ನು ಹೇಳಿ ತನ್ನ ಮತ್ತು ಸೀತಾಪುರದ ಸಂಬಂಧವನ್ನು ಪ್ರಚುರಪಡಿಸಿದ.
‘ಇವರಾರು ಅಲ್ಲ ಮಾರಾಯ. ಆ ದಾಸಣ್ಣ ಭಟ್ಟರ ಹೆಂಡತಿ ಪ್ರೇಮಕ್ಕ’ ಎಂದರು ಕುಪ್ಪಣ್ಣಯ್ಯ.‘ನಿಮಗೆ ಪರಿಚಯ ಇಲ್ಲದ ಇನ್ನೂ ನಾಲ್ಕಾರು ಪ್ರೇಮಕ್ಕಂದಿರು ಸೀತಾಪುರದಲ್ಲಿ ಇದ್ದಾರೆ’ ಎಂಬಂತೆ.
‘ಯಾವ ದಾಸಣ್ಣ ನೀವು ಹೇಳುವುದು? ಪಾದೆ ಮನೆಯವರೋ, ಕೀಲ್ಪಾಡಿಯವರೋ ಅಥವಾ ಪಿಜಿನೊಟ್ಟು ಮನೆಯವರೋ?’ಎಂದು ಹಸನಬ್ಬ ತಿರುಗಿ ಪ್ರಶ್ನೆ ಹಾಕಿದ. ಆಗ ಕುಪ್ಪಣ್ಣಯ್ಯ ‘ಸೋತೆ’ ಎಂಬಂತೆ ತಲೆ ಆಡಿಸಿ ‘ನೀವು ನನಗಿಂತಲೂ ಹೆಚ್ಚು ಹೊಲಬ್ಬು (ಪರಿಚಯ) ಉಳ್ಳವರಪ್ಪಾ ಸೀತಾಪುರದಲ್ಲಿ!’ಎಂದು ನಕ್ಕರು.
‘ಅಲ್ವೇ ಮತ್ತೆ? ನಾನು ನಿಮ್ಮ ಸೀತಾಪುರಕ್ಕೆ 25 ವರುಷದಿಂದ ಬರ‍್ತಾ ಇದ್ದೇನೆ. ಇಲ್ಲಾ ಎಂದರೂ ಪ್ರತಿ ಮನೆಯಿಂದಲೂ ಒಂದೇ ಒಂದು ಬಾರಿಯಾದರೂ ಅವರಿಗೆ ಬೇಡ ಅನಿಸಿದ ದನವನ್ನೋ ದನದ ಕರುವನ್ನೋ ಕೊಂಡುಹೋದವನಲ್ಲವೇ ನಾನು? ಹಾಗೆಯೇ ಎಷ್ಟೋ ಮನೆಗಳಿಗೆ ಹಾಲು ಕರೆಯುವ ದನಗಳನ್ನು ತಂದೊಪ್ಪಿಸಿದವ! ನನ್ನ ವ್ಯವಹಾರ ಅದೇ ಆಗಿದ್ದ ಕಾಲವೂ ಇತ್ತು. ಈಗ ಈ ಭಜರಂಗದಳದವರು ಸುಮ್ಮನೇ ಸಂಶಯ ಪಡುವುದು ನೋಡಿ, ದನಕರುಗಳ ವ್ಯಾಪಾರವನ್ನೇ ಬಿಟ್ಟು ಬಿಟ್ಟೆ!’ಎಂದ ಹಸನಬ್ಬ.
‘ಅದಿರಲಿ ಈಗ ನಾವು ಯಾವ ದಾಸಣ್ಣರ ಮನೆಯ ಪ್ರೇಮಕ್ಕನನ್ನು ನೋಡಬೇಕು ಹೇಳಿ?’ಎಂದ ಹಸದುಲ್ಲಾ, ಅಣ್ಣ ಮತ್ತು ಕುಪ್ಪಣ್ಣಯ್ಯನವರ ಮಾತುಕತೆ ದಾರಿ ತಪ್ಪುತ್ತಿರುವುದು ನೋಡಿ.
‘ಅದೇ ಜಲ್ಪಾದೆ ದಾಸಣ್ಣರ ಹೆಂಡ್ತಿ ಪ್ರೇಮಕ್ಕನನ್ನು!’ ಎಂದು ಹೇಳಿದ ಕುಪ್ಪಣ್ಣಯ್ಯ ಮೇಲೆದ್ದು ನಿಂತು, ‘ನಾಳೆ ಬೇಡ, ನಾಡಿದ್ದು ನೀವು ಬೆಳಗ್ಗೆ 10 ಗಂಟೆಯ ಸುಮಾರಿಗೆ ನನ್ನ ಹೋಟೇಲಿಗೆ ಬನ್ನಿ. ನಾನೇ ಖುದ್ದಾಗಿ ನಿಮ್ಮನ್ನು ಅವರಲ್ಲಿಗೆ ಕರಕೊಂಡು ಹೋಗಿ ಔಷಧ ಕೊಡಿಸಿದರೆ ಆಯ್ತಲ್ಲಾ?’ ಎಂದರು ಖುಷಿಯಲ್ಲಿ.
ಸಾಬಿಗಳಿಬ್ಬರಿಗೂ ಸಂತೋಷವಾಯಿತು. ‘ದೇವರು ದೊಡ್ಡವನು’ ಎಂದು ಇಬ್ಬರೂ ಎದ್ದು ನಿಂತರು. ಹಸನಬ್ಬ ಕುಪ್ಪಣ್ಣಯ್ಯನವರ ಬಲಗೈಯನ್ನು ಮೆಲ್ಲಗೆ ಹಿಡಿದು ಅಂಗೈಯನ್ನು ಚುಂಬಿಸಿದ. ಹಸದುಲ್ಲಾ ಆಗಲೇ ತನ್ನ ಮಗ ಪೂರ್ಣ ಚೇತರಿಸಿಕೊಂಡ ಎಂಬುದನ್ನು ಮನಸ್ಸಿನಲ್ಲಿ ಬಿಂಬಿಸಿಕೊಂಡು ಆನಂದಿಸಿದ.
ಮರುದಿನ ಮೂಡಬಿದ್ರೆಯ ಪೇಟೆಗೆ ಹೋದ ಹಸನಬ್ಬ ತನ್ನ ಫ್ಯಾಮಿಲಿ ಡಾಕ್ಟ್ರು ಶಂಕರಭಟ್ಟರನ್ನು ಭೇಟಿಮಾಡಿ ‘ಸಲಾಮುಲೇಕುಂ’ ಎಂದು ಹೇಳಿದ. ‘ನೀವು ಸರ್ಪಸುತ್ತಿಗೆ ಸೀತಾಪುರದಲ್ಲಿ ಒಬ್ಬರು ಹೆಂಗಸು ಒಳ್ಳೆ ಔಷಧ ಕೊಡ್ತಾರೆ ಎಂದು ಯಾವುದೇ ಸಂದರ್ಭದಲ್ಲಿ ನನ್ನೆದುರು ಯಾರಿಗೋ ಹೇಳಿದ್ದು ನೆನಪಿದೆ. ಅದು ನಿಜವಾ ಸ್ವಾಮಿ?’ಎಂದು ಡಾಕ್ಟರರನ್ನು ಕೇಳಿದ. ‘ನಾನೇನು ಸುಳ್ಳು ಹೇಳುತ್ತೇನಾ ಹಸನಬ್ಬರೇ? ನೂರಕ್ಕೆ ನೂರು ಗ್ಯಾರಂಟಿ. ವೈರಸ್ ಖಾಯಿಲೆಗೆ ನಿಜಕ್ಕೂ ಅದ್ಭುತ ಅವರದ್ದು!’ ಎಂದರು ಡಾ.ಶಂಕರ ಭಟ್ರು.
ಡಾ. ಶಂಕರಭಟ್ಟರು ಮಿಲಿಟರಿ ಸರ್ವಿಸಿನಲ್ಲಿ ಇದ್ದು, ನಡುವೆ ಒಲಿಯಂಟರಿ ರಿಟಯರ್‌ಮೆಂಟ್ ತೆಗೆದುಕೊಂಡು ಬಂದವರು. ಈಚೆಗೆ ಮೂಡಬಿದ್ರೆಯಲ್ಲಿ ಖಾಸಗಿ ಚಿಕಿತ್ಸಾಲಯ ತೆರೆದು ಸಾಕಷ್ಟು ಹೆಸರನ್ನೂ ತೆಗೆದುಕೊಂಡವರು. ‘ಅವರು ಹೇಳಿದರೆ ಮುಗಿಯಿತು’ ಎಂಬ ಗಾದೆ ಅವರ ಬಗ್ಗೆ ಮೂಡಬಿದ್ರೆಯ ಆಸುಪಾಸಿನಲ್ಲಿ ಇರುವುದು ಎಲ್ಲರಿಗೂ ಗೊತ್ತುಂಟು. ಅಷ್ಟೇ ಅಲ್ಲ, ಅದರ ಅನುಭವ ಹಸನಬ್ಬನಿಗೂ ಆದದ್ದುಂಟು. ಹಾಗಾಗಿ ಹಸನಬ್ಬ ಡಾಕ್ಟ್ರು ‘ಗ್ಯಾರಂಟಿ ಗುಣವಾಗುತ್ತದೆ’ ಎಂದು ಹೇಳಿದ್ದನ್ನು ಖುಶಿಯಲ್ಲಿಯೇ ಹೋಗಿ ತಮ್ಮ ಹಸದುಲ್ಲಾನಿಗೆ ಹೇಳಿದ. ಸರ್ಪಸುತ್ತಿನಿಂದ ಬಳಲುತ್ತಿರುವ ಅವರ ಮಗ ಉಸ್ಮಾನನಿಗೂ ತಿಳಿಸಿದ. ಅವರೆಲ್ಲ ನಾಳೆ ಬೆಳಕು ಯಾಕೆ ಬೇಗ ಹರಿಯಬಾರದು ಎಂಬಂತೆ ಇಡೀ ರಾತ್ರಿ ಕಾದು ಕಾದು ತಂತಮ್ಮ ಕಣ್ಣುಗಳಲ್ಲೇ ಬೆಳಗು ಮಾಡಿದರು.
ಮರುದಿನ ಬೆಳಗ್ಗೆ ಕುಪ್ಪಣ್ಣಯ್ಯನವರು ತಮ್ಮ ಹೋಟೇಲಿನಲ್ಲಿ ದಾಸಣ್ಣರ ಮನೆಗೆ ಹೋಗಲು ಸಿದ್ಧರಾದವರಂತೆ ಬೆಳಗ್ಗೆಯೇ ಸಿದ್ಧರಾಗಿ ಕುಳಿತಿದ್ದರು. ಸೀತಾಪುರದ ರಥಬೀದಿಯಿಂದ ಜಲ್ಪಾದೆಗೆ ಹೆಚ್ಚೆಂದರೆ ಮೂರು ಕಿ.ಮೀ ಯಷ್ಟು ದೂರ. ಹಸನಬ್ಬನಿಗೆ ತನ್ನ ತಮ್ಮನ ಕಾರಿನಲ್ಲಿ ಅಲ್ಲಿಗೆ ಹೋಗಬೇಕೆಂದರೆ ಹೆಚ್ಚೆಂದರೆ ಕಾಲುಗಂಟೆ ಸಾಕು. ಅಲ್ಲಿ ಔಷಧ ತೆಗೆದುಕೊಳ್ಳಲಿಕ್ಕೆ ಕಾಲುಗಂಟೆ ಅಂತ ಹಿಡಿದರೂ ಒಟ್ಟು ಒಂದು ಗಂಟೆಯಷ್ಟು ಹೊತ್ತು ಬೇಕು. ಅಷ್ಟು ಹೊತ್ತು ಹೋಟೇಲಿಗೆ ಬಾಗಿಲು ಹಾಕಿ ಹೋದರೂ ಆಗುವ ನಷ್ಟ ಹೆಚ್ಚೆಂದರೆ ಒಂದೈವತ್ತು ರೂಪಾಯಿ. ಅದು ಅಂಥಹ ನಷ್ಟವೇನಲ್ಲ. ಒಂದು ಬಳಲುತ್ತಿರುವ ಜೀವಕ್ಕಾಗಿ ಅಷ್ಟೂ ಮಾಡದಿದ್ದರೆ ತಾನು ಮನುಷ್ಯನೇ ಎಂದುಕೊಂಡ ಅವರು ಹಸದುಲ್ಲಾನ ಬರುವಿಕೆಗಾಗಿ ಕಾಯುತ್ತಾ ಕುಳಿತವರಂತೆ ಕುಳಿತಿದ್ದರು.
ಕುಪ್ಪಣ್ಣಯ್ಯ ಹೀಗೆ ಕಾಯುತ್ತಿದ್ದಂತೆ ಹಸದುಲ್ಲಾನ ಕಾರು ಬಂತು. ಅದರಿಂದ ಹಸನಬ್ಬ ಹಸದುಲ್ಲಾ ಮತ್ತು ಉಸ್ಮಾನ ಕೂಡಾ ಇಳಿದು ಕುಪ್ಪಣ್ಣಯ್ಯನ ಹೋಟೇಲಿಗೆ ಕಾಲಿಟ್ಟರು. ಹಸದುಲ್ಲಾನ ಕೈಯಲ್ಲೊಂದು ದೊಡ್ಡ ರಟ್ಟಿನ ಪೆಟ್ಟಿಗೆ ಇತ್ತು. ಅದನ್ನು ನಿಧಾನವಾಗಿ ಎತ್ತಿ ಆತ ಮುಂದೆ ತಂದು ಕುಪ್ಪಣ್ಣಯ್ಯ ಕುಳಿತುಕೊಂಡಿದ್ದ ಕ್ಯಾಷ್ ಕೌಂಟರಿನ ಬದಿಯ ಕುರ್ಚಿಯ ಹತ್ತಿರ ಇಟ್ಟು ‘ಇದು ಇಲ್ಲಿರಲಿ’ ಎಂದ. ಅದನ್ನು ನೋಡಿದ ಕುಪ್ಪಣ್ಣಯ್ಯ ‘ಏನಿದು?’ ಯಾರಿಗೆ ಕೊಡಲಿಕ್ಕೆ’ ಎಂದರು. ‘ಯಾರ‍್ಯಾರಿಗೆ ಯಾಕೆ ಸ್ವಾಮಿ, ಇದು ನಿಮಗೇ!’ಎಂದ ಹಸನಬ್ಬ.
ಕುಪ್ಪಣ್ಣಯ್ಯ ಗಂಭೀರವಾದರು. ‘ನೀವು ನನಗೇನಾದರೂ ಹೀಗೆ ಕೊಡುವುದೇ ಆದರೆ, ನಾನು ಜಲ್ಪಾದೆಗೆ ಬರೋದೇ ಇಲ್ಲ. ನೀವು ಕೊಡಬೇಕಾದದ್ದು ಏನಾದರೂ ಇದ್ದರೆ, ನನಗಲ್ಲ ಪ್ರೇಮಕ್ಕನಿಗೆ. ಆದರೆ ಆಕೆ ಎಂದೂ ದುಡ್ಡಿಗೆ ಔಷಧ ವಿಕ್ರಯಿಸುವುದಿಲ್ಲ. ನೀವು ಖುಶಿಯಲ್ಲಿ ತರಕಾರಿ ಗಿರಕಾರಿ ಕೊಟ್ಟರೆ ಆಕೆ ತೆಗೆದುಕೊಳ್ಳಬಹುದು. ಬಟ್ಟೆ ಬರೆ ಕೊಟ್ಟರೆ ತೆಗೆದು ನಿಮ್ಮ ಮುಖಕ್ಕೆ ಬಿಸಾಕಿಯಾರು ಅಂತಹ ಹೆಂಗಸು ಆಕೆ’ ಎಂದರು.
‘ಹೌದಾ?’ ಎಂದು ಅಣ್ಣ ತಮ್ಮ ಇಬ್ಬರೂ ಪರಸ್ಪರ ಮುಖ ನೋಡಿ ಆಶ್ಚರ್ಯಪಟ್ಟರು. ‘ಇದರಲ್ಲಿ ಬರೇ ತರಕಾರಿ ಹಣ್ಣು ಹಂಪಲು ಇದೆ ಸ್ವಾಮಿ. ಆಮೇಲೆ ಫ್ರೈ ಮಾಡಿದ ಗೇರು ಬೀಜ. ಇದೇನೂ ಲಂಚಗಿಂಚ ಅಲ್ಲ, ಪ್ರೀತಿಯ ಕೊಡುಗೆ. ಎರಡು ದಿನ ನೀವೂ ನಿಮ್ಮ ಹೆಂಡ್ತಿ ಮಕ್ಕಳೂ ಇವನ್ನೆಲ್ಲ ತಿಂದರೆ ನಮಗೆ ಸಂತೋಷ!’ ಎಂದ ಹಸನಬ್ಬ.
ಕುಪ್ಪಣ್ಣಯ್ಯನವರಿಗೆ ಸಿಟ್ಟು ಬಂತು. ‘ಏನೆಂದು ತಿಳಿದುಕೊಂಡಿದ್ದೀರಿ ನೀವು ನನ್ನನ್ನು? ಇಂಥದ್ದೆಲ್ಲ ನನಗಾಗದು. ದಯವಿಟ್ಟು ಅದನ್ನು ನಿಮ್ಮ ಕಾರಿನಲ್ಲಿ ಇಡಿ’ ಎಂದು ಮೆತ್ತಗೆ ಗದರಿದರು. ಆಮೇಲೆ ಹೋಟೇಲಿನ ಮಾಣಿಯನ್ನು ಕೂಗಿ ಕರೆದು, ‘ಒಂದರ್ಧಗಂಟೆಯಲ್ಲಿ ನಾನು ಮರಳಿ ಬರ‍್ತೇನೆ. ಯಾರಾದರೂ ಬಂದರೆ ಹೇಳು’ ಎಂದು ಹೋಟೇಲಿನ ಬಾಗಿಲು ಎಳೆದುಕೊಂಡು ‘ನೀನು ಇಲ್ಲೇ ಪಕ್ಕದ ಅಂಗಡಿಯಲ್ಲೇ ಇರು ಮತ್ತೆ. ಹೊರಗೆಲ್ಲಾ ಹೋಗಬೇಡ’ ಎಂದು ಆತನನ್ನು ಎಚ್ಚರಿಸಿ ಕಾರು ಹತ್ತಿದರು.
ಕಾರು ಗಂಟೆಯಲ್ಲಿ ಜಲ್ಪಾದೆ ದಾಸಣ್ಣನವರ ತೋಟದ ಬಾಗಿಲಿಗೆ ಬಂದು ನಿಂತಿತು. ಅಲ್ಲಿಂದ ಒಂದು ತೋಡು ದಾಟಿ ತಡಮೆಯ ಆಚೀಚೆ ಕಾಲು ಹಾಕಿ ನೆಗೆದರೆ ದಾಸಣ್ಣನ ತೋಟ. ಆ ತೋಟದಲ್ಲೇ ಮುಂದೆ ಮುಂದೆ ಒಂದರ್ಧ ಫರ್ಲಾಂಗು ಹೋದರೆ, ಸಿಗುವುದು ದಾಸಣ್ಣರ ಮನೆ. ಮನೆ ಅಂದರೆ ಅಂತಿಂಥ ಮನೆ ಅಲ್ಲ, ನಾಲ್ಕು ಸುತ್ತಿನ ತೊಟ್ಟಿ ಮನೆ. ಒಮ್ಮೆ ಯಾರಾದರೂ ಅಂಗಳದಲ್ಲಿ ನಿಂತು ನೋಡಬೇಕು ಅಂಥ ಮನೆ.
ನಾಲ್ಕು ಮಂದಿಯೂ ತೋಡುದಾಟಿ ತಡಮೆಯ ಮೇಲೆ ಕಾಲಿಟ್ಟು ಆಚೆ ಜಿಗಿದರು. ತೋಟದೊಳಗೆ ಕಾಲಿಟ್ಟ ಕೂಡಲೇ ಹಸದುಲ್ಲಾನಿಗೆ ತಾನು ಬೇರೆ ಯಾವುದೇ ಲೋಕವನ್ನು ಹೊಕ್ಕಂತಹ ಅನುಭವವಾಯ್ತು. ಆಕಾಶಕ್ಕೆ ಮುಖ ಮಾಡಿ ನಿಂತ ತೆಂಗು ಕಂಗು ನಡುನಡುವೆ ಹಿಂಡುಹಿಂಡುಗಳಲ್ಲಿ ಎದ್ದು ನಿಂತ ಬಾಳೆ ಗಿಡಗಳು, ಅಲ್ಲಿ ಇಲ್ಲಿ ಕೊಡೆ ಬಿಡಿಸಿ ಇಟ್ಟ ಹಾಗೆ ಬೆಳೆದು ನಿಂತ ಕೊಕ್ಕೋ ಗಿಡಗಳು, ತಂಪು ಅಂದರೆ ತಂಪು. ಕಣ್ಣಿಗೆ, ತಲೆಗೆ ಮೈ ಕೈಗೆ ಮಾತ್ರವಲ್ಲ, ಮನಸ್ಸಿಗೆ ಕೂಡಾ. ಆ ಖುಶಿಯಿಂದ ಹಸದುಲ್ಲಾ ಅಣ್ಣ ಹಸನಬ್ಬನನ್ನು ಪ್ರಶ್ನಿಸಿದ. ‘ಈ ಭಟ್ರ (ಕುಪ್ಪಣ್ಣಯ್ಯನವರ) ಸ್ನೇಹ ನಿಮಗೆ ಯಾವಾಗಿನಿಂದ?’.
ಹಸದುಲ್ಲಾ ಹಸನಬ್ಬನನ್ನು ಪ್ರಶ್ನಿಸಿದ್ದು ಉರ್ದುವಿನಲ್ಲಿ. ಅದಕ್ಕೆ ಉರ್ದುವಿನಲ್ಲೇ ಹಸನಬ್ಬ ಉತ್ತರ ಪ್ರಾರಂಭಿಸುತ್ತಿದ್ದ ಹಾಗೆ ಕುಪ್ಪಣ್ಣಯ್ಯನವರೇ ‘ನೀವು ಹೇಳುವುದು ಬೇಡ, ನಾನೇ ಹೇಳಿ ಬಿಡ್ತೇನೆ’ ಎಂದು ಉರ್ದು ಭಾಷೆಯಲ್ಲೇ ತನ್ನ ಮತ್ತು ಹಸನಬ್ಬರ ದೀರ್ಘಕಾಲದ ಒಡನಾಟವನ್ನೆಲ್ಲ ಪ್ರಸ್ತಾಪಿಸಿದರು. ನಿಮ್ಮ ಅಣ್ಣ ತುಂಬ ಪ್ರಾಮಾಣಿಕ ವ್ಯಕ್ತಿ. ಹಾಗಾಗಿ ನಮ್ಮ ತೋಟದ ಬಾಳೆಕಾಯಿ ಯಾಕೆ ಅಡಿಕೆಯನ್ನು ಸಹ ನಾವು ಕೊಡುತ್ತಿದ್ದುದು ಅವರಿಗೆ!’ ಎಂದರು.
ಅವರ ಈ ಮಾತುಕತೆ ಮುಗಿಯಿತೆನ್ನುವಷ್ಟರಲ್ಲಿ ನಾಲ್ಕೂ ಮಂದಿಯೂ ದಾಸಣ್ಣರ ಅಂಗಳ ತಲುಪಿಯಾಗಿತ್ತು. ಅಂಗಳ ತುಂಬ ಅಡಿಕೆಯನ್ನು ಒಣ ಹಾಕಿದ್ದರಿಂದ ಅದರ ಮೇಲೆ ನಡೆದು ಹೋಗುವುದು ಬೇಡ ಎಂದು ಸುತ್ತು ಬಳಸಿ ನಾಲ್ವರೂ ಮನೆಯಾಚೆ ನಡೆದು ಬಂದರು. ಅವರನ್ನು ನೋಡಿ ಸಂಕೋಲೆ ಬಿಗಿದಿದ್ದ ಎರಡು ನಾಯಿಗಳು ತಮ್ಮ ಹಿಂದಿನ ಎರಡು ಕಾಲುಗಳಲ್ಲಿ ಎದ್ದು ನಿಂತು ದೊಡ್ಡದಾಗಿ ಬೊಗಳಿದವು. ತತ್‌ಕ್ಷಣ ‘ಯಾರದು?’ ಎನ್ನುತ್ತಾ ಒಳಗಿನಿಂದ ದಾಸಣ್ಣಾಚಾರ್ಯರು ಚಾವಡಿಗೆ ಕಾಲಿಟ್ಟರು. ‘ಓ ಕುಪ್ಪಣ್ಣಯ್ಯನವರು ಇದೇನು ಹಸನಬ್ಬನವರ ಜೊತೆ?’ ಎಂದು ಬಾಯಿ ತುಂಬ ನಗುತ್ತಾ ಸ್ವಾಗತಿಸಿದರು.
ನಾಲ್ವರೂ ಚಾವಡಿಗೆ ಕಾಲಿಡುತ್ತಿದ್ದ ಹಾಗೆ ಕುರ್ಚಿಗಳ ಕಡೆ ಕೈ ತೋರಿಸಿದ ದಾಸಣ್ಣಾಚಾರ್ಯರು ‘ಬಹಳ ಅಪರೂಪ ನಮ್ಮ ಕುಪ್ಪಣ್ಣಯ್ಯ! ಸಾಬಿಗಳನ್ನು ಕರಕೊಂಡು ಬಂದಿದ್ದಿರಲ್ಲ? ಏನು ಕತೆ? ದನದ ಗಿನದ ವ್ಯಾಪಾರಕ್ಕೇನಾದರೂ ಇಳಿದಿದ್ದಿರ ಮತ್ತೆ?’ ಎಂದು ಕುರ್ಚಿಯನ್ನು ಎಳೆದು ಕುಳಿತುಕೊಂಡರು.
‘ಹೌದು ಸ್ವಾಮಿ ಹುಡುಗನನ್ನು ನೋಡಲಿಕ್ಕಾಗುವುದಿಲ್ಲ. ಈ ವರುಷ ಮದುವೆ ಮಾಡಬೇಕೆಂತಲೂ ಇದ್ದೆವು ನಾವು. ಆದರೆ ಹೀಗಾಯಿತು ನೋಡಿ. ಹುಡುಗನನ್ನು ನೀವೊಮ್ಮೆ ನೋಡಬೇಕು! ಹೇಗಿದ್ದಾನೆಂದರೆ ಕೈ ತೊಳೆದು ಮುಟ್ಟಬೇಕು! ಬಿಳಿ ಬಿಳಿ, ಕೆಂಪು ಕೆಂಪು!’ ಎಂದು ಹೇಳುತ್ತಾ ಹಸನಬ್ಬನೂ ಬರುತ್ತಿದ್ದ ದುಃಖವನ್ನು ತಡೆದುಕೊಂಡು ಕಣ್ಣಲ್ಲಿ ನೀರಿನ ರೂಪದಲ್ಲಿ ಕಾಣಿಸಿಕೊಂಡ ದುಃಖವನ್ನು ಒರೆಸಿಕೊಂಡ.
ಇದಿರಿಗಿದ್ದ ಕುರ್ಚಿಗಳಲ್ಲಿ ಎಲ್ಲರೂ ಕುಳಿತುಕೊಂಡ ಮೇಲೆ ‘ಅಂಥದ್ದೇನಿಲ್ಲ ಆಚಾರ್ಯರೇ, ಮನೆಮುಂದಿರುವ ಗಿಡದಲ್ಲಿ ನುಗ್ಗೆಕೋಡು ಇರುವುದನ್ನು ಮರೆತು ಅದನ್ನು ತರಲು ಸಂತೆಗೆ ಹೊರಟ ಹಾಗಾಗಿದೆ ಇವರ ಪಾಡು! ಅದಕ್ಕಾಗಿ ಇವರನ್ನು ಕರಕೊಂಡು ಬಂದೆ’ ಎಂದರು.
ತಮ್ಮ ಅಂಗಳದ ದಿಪಣೆಯ ಬುಡದಲ್ಲಿ ಬೆಳೆದು ನಿಂತ ನುಗ್ಗೆಗಿಡದಲ್ಲಿ ತುಂಬ ಕೋಡುಗಳಿರುವುದನ್ನು ನೋಡಿಯೇ ಕುಪ್ಪಣ್ಣಯ್ಯ ಈ ಮಾತು ಆಡಿರಬೇಕೆಂದುಕೊಂಡರು ಆಚಾರ್ಯರು. ಆದರೂ ಅವರು ‘ಎಂಥದೋ ಒಗಟಿನ ರೀತಿ ನೀವು ಹೇಳಿದರೆ, ನನಗೆ ಹೇಗೆ ಹೊಳೆಯಬೇಕಯ್ಯ ನಿಮ್ಮ ಮನಸ್ಸಿನಲ್ಲಿ ಇರುವುದು? ಯಕ್ಷಗಾನ ತಾಳಮದ್ದಳೆ ಕೂಟದಲ್ಲಿ ಅರ್ಥ ಹೇಳಲು ಹೊರಟ ಹಾಗೆ ಇದೆಯಲ್ಲ ನೀವು ಮಾತನಾಡುವ ರೀತಿ! ಯಾವಾಗಿನಿಂದ ಇಂಥ ವರಸೆ?’ ಎಂದರು ದೊಡ್ಡದಾಗಿ ನಗುತ್ತಾ.
ಅದಕ್ಕೆ ಕುಪ್ಪಣ್ಣಯ್ಯನೂ ದೊಡ್ಡದಾಗಿ ನಕ್ಕು ‘ನಿನ್ನೆ ದಿನ ನಮ್ಮ ದೇವಸ್ಥಾನದಲ್ಲಿ ಒಂದು ಮದುವೆ ಇತ್ತಲ್ಲ. ಅದಕ್ಕೆ ಒಂದು ನೂರಾದರೂ ನುಗ್ಗೆಕೋಡು ತನ್ನಿ; ಬದನೆಯೂ 15 ಕೆ.ಜಿ ಇರಲಿ ಎಂದಿದ್ದರು ಅಡಿಗೆಯ ಕಂಟ್ರಾಕ್ಟ್ ವಹಿಸಿಕೊಂಡ ಸೀತಾರಾಮಾಚರ‍್ರು. ನಾನು ಇಡೀ ಕಾರ್ಕಳ ಸಂತೆಯಲ್ಲಿ ಹುಡುಕಿದರೂ ನನಗೆ ನೂರು ಕೋಡು ಬಿಡಿ ಐವತ್ತು ಕೋಡೂ ಸಿಗಲಿಲ್ಲ. ಅದರ ಬದಲು ಇಲ್ಲಿಗೆ ಬಂದಿದ್ದರೆ ಇಲ್ಲಿ ಧಾರಾಳ ಸಿಗುತ್ತಿತ್ತು. ನಿಮ್ಮ ನುಗ್ಗೆಗಿಡದಲ್ಲಿ ಎಲೆಗಳೇ ಕಾಣದ ಹಾಗೆ ಕೋಡುಗಳಿವೆ ನೋಡಿ’ ಎಂದು ಹೇಳಿ, ಮತ್ತೆ ಮೆತ್ತಗಿನ ದನಿಯಲ್ಲಿ ‘ಸುಮ್ಮನೇ ಹೇಳಿದೆ ಅಷ್ಟೆ! ಈ ಹಸನಬ್ಬ ಗೊತ್ತಲ್ಲ ನಿಮಗೆ? ಇವರ ತಮ್ಮ ಈತ ಮತ್ತು ಅವರ ಪಕ್ಕದಲ್ಲಿರುವವ ಅವರ ಮಗ’ ಎಂದು ಇಬ್ಬರನ್ನೂ ಪರಿಚಯಿಸಿದರು. ಆಮೇಲೆ ಇಬ್ಬರೂ ಸೌದಿಯಲ್ಲಿ ಇರುವವರು. ಪಾಪ ಆ ಹುಡುಗನಿಗೆ ಮೂರು ತಿಂಗಳಿಂದ ಸರ್ಪಸುತ್ತಂತೆ. ಹೋಗದ ಆಸ್ಪತ್ರೆ ಇಲ್ಲ, ಮಾಡದ ಔಷಧ ಇಲ್ಲ ಎಂಬಂತೆ ನಾಲ್ಕೂರು ಸುತ್ತಿ ಸುತ್ತಿ ಸೋತಿದ್ದಾರೆ. ನನಗೆ ನಿಮ್ಮ ಹೆಂಡತಿಯ ನೆನಪು ಬಂತು. ಅದಕ್ಕಾಗಿ ಅವರನ್ನು ಕರಕೊಂಡು ಬಂದೆ. ಅದಕ್ಕೇ ನಾನು, ಇದನ್ನು ಊರಲ್ಲಿ ಹುಡುಕುವುದು ಬಿಟ್ಟು ಸಂತೆಯಲ್ಲಿ ನುಗ್ಗೆಕೋಡು ಹುಡುಕಿದ ಹಾಗಾಯ್ತು ಎಂದು ಹೋಲಿಕೆ ಕೊಟ್ಟದ್ದು’ ಎಂದು ಹೇಳಿ ಸಣ್ಣಗೆ ನಕ್ಕರು.
‘ಓ ಹಾಗೋ ವಿಷಯ’ ಎಂದು ದಾಸಣ್ಣಾಚಾರ್ಯರು ‘ಒಳ್ಳೇದಾಯ್ತು ಬಿಡಿ ಇಲ್ಲಿಗೆ ಬಂದದ್ದು. ನನ್ನ ಹೆಂಡತಿ ಅಂತ ಹೇಳ್ತಾ ಇಲ್ಲ. ಆಕೆ ಔಷಧ ಕೊಟ್ಟದ್ದೆಲ್ಲ ಗುಣವಾಗದ್ದೇ ಇಲ್ಲ!’ ಎಂದು ‘ಹ್ಹಿ ಹ್ಹಿ’ ಎಂದರು ‘ಅಂದಜೇ’ (ಹೌದಾ ಹೆಣ್ಣೇ ಇದು ಶ್ರೀ ಮಾಧ್ವರು ತಮ್ಮ ಪತ್ನಿಯರನ್ನು ಕರೆಯುವ ರೀತಿ) ಎಂದು ಹೆಂಡತಿಯನ್ನು ಕೂಗಿ ಕರೆದು ‘ನಮ್ಮ ರಥಬೀದಿಯ ಕುಪ್ಪಣ್ಣಯ್ಯ ಬಂದಿದ್ದಾರೆ ನೋಡು, ಒಂದು ಗಳಿಗೆ ಹೊರಗೆ ಬರ‍್ತಿಯೇನು?’ ಎಂದು ದೊಡ್ಡದಾಗಿ ಹೇಳಿದರು. ಆಮೇಲೆ ‘ನಿನ್ನೆ ತಾನೆ ಆಕೆ ಅಮೇರಿಕೆಯಿಂದ ಬಂದದ್ದು. ಈಗ ಅಡಿಗೆ ಮನೆಯಲ್ಲಿ ಒತ್ತರೆ ಇಡುವ ಕೆಲಸ. ಇನ್ನು ಒಂದು ವಾರ ಬೇಕು ವ್ಯವಸ್ಥಿತಗೊಳಿಸಲಿಕ್ಕೆ ಆಕೆಗೆ ಎಂದರು.
ಕುಪ್ಪಣ್ಣಯ್ಯ ‘ಹೌದೌದು ಪ್ರೇಮಕ್ಕನಿಗೆ ಎಲ್ಲವೂ ಅಚ್ಚುಕಟ್ಟಾಗಿ ಇರಬೇಕು ಎನ್ನುವುದು ನನಗೂ ಗೊತ್ತು’ ಎಂದು ಹೇಳಿದರು. ಅಷ್ಟರಲ್ಲಿ ‘ಉಳೆತ್ತರಾ?’ (ಕರೆದಿರಾ) ಎಂದು ಸೀರೆಯ ತುದಿಯಲ್ಲಿ ಮುಖ ಕುತ್ತಿಗೆಯ ಬೆವರನ್ನು ಒರೆಸಿಕೊಳ್ಳುತ್ತಾ ಬಂದರು ಪ್ರೇಮಕ್ಕ. ಚಾವಡಿಗೆ ಕಾಲಿಟ್ಟ ಕೂಡಲೇ ‘ಸಲಾಮುಲೇಕುಂ’ ಎಂದು ಎದ್ದು ನಿಂತು ಮೂವರು ಸಾಬಿಗಳಿಗೂ ನಮಸ್ಕರಿಸಿದರು. ಪ್ರೇಮಕ್ಕ ಪ್ರತಿ ನಮಸ್ಕರಿಸಿ ‘ಕುಪ್ಪಣ್ಣಯ್ಯ ಬಾಯಾರಿಕೆಗೆ ಏನು ತರಲಿ?’ ಎಂದರು.
‘ಛೆ! ಛೆ! ನಮಗೀಗ ಕುಡಿಯಲು ಏನೂ ಬೇಡ ಪ್ರೇಮಕ್ಕ. ಮೊದಲು ಬೇಕಾಗಿದ್ದು ಇವರಿಗೆ ನಿಮ್ಮ ಔಷಧ. ನೀವು ಅಮೇರಿಕೆಯಿಂದ ನಿನ್ನೆ ಮರಳಿದ್ದೇ ಈ ಸಾಬಿಗಳ ಅದೃಷ್ಟ’ ಎಂದು ಹೇಳಿದರು. ಆಮೇಲೆ ಎಲ್ಲಾ ವಿಷಯ ಹೇಳಿ ಬಿಡಿ’ ಎಂದರು ಪಕ್ಕದಲ್ಲಿ ಕುಳಿತಿದ್ದ ಹಸನಬ್ಬನಿಗೆ.
‘ಪೂಚೋ’ ಎಂದು ಹಸನಬ್ಬ ಹಸದುಲ್ಲಾನಿಗೆ ಹೇಳಿದ. ಆತ ಮಗ ಉಸ್ಮಾನನನ್ನು ಎದ್ದು ನಿಲ್ಲಿಸಿ ತಾನೂ ಎದ್ದು ನಿಂತು ‘ಎಲ್ಲಿ ತೋರಿಸು ನಿನ್ನ ಕುತ್ತಿಗೆ’ ಎಂದು ಮಗ ಉಸ್ಮಾನನ ಅಂಗಿ ತೆಗೆಸಿ ತೋರಿಸಿದ. ಉಸ್ಮಾನನ ಮುಖದ ಎಡಭಾಗದಿಂದ ತೊಡಗಿದ ಸರ್ಪಸುತ್ತು ಆತನ ಎದೆಯ ಅರ್ಧದಷ್ಟೂ ಭಾಗವನ್ನು ಆಕ್ರಮಿಸಿತ್ತು. ಅದನ್ನು ನೋಡಿದ ಕುಪ್ಪಣ್ಣಯ್ಯ ಮತ್ತು ದಾಸಣ್ಣ ‘ಅಬ್ಬಾ’ ಎಂದರು. ಪ್ರೇಮಕ್ಕ ‘ಅಯ್ಯೋ ದೇವರೇ ಎಷ್ಟು ನೋವಿದ್ದಿತು ಈ ಹುಡುಗನಿಗೆ!’ ಎಂದು ‘ರಾಮಾ ರಾಮಾ!’ ಎಂದುಕೊಂಡು ಔಷಧ ಸಿದ್ಧಪಡಿಸಲು ಒಳನಡೆದರು.
ಸರ್ಪಸುತ್ತಿಗೆ ಪ್ರೇಮಕ್ಕನ ಔಷಧ ತೀರಾ ಸರಳ. ನಿರ್ವಿಷಧ ಬೇರು ಮತ್ತು ಬೈಹುಲ್ಲನ್ನು ಸುತ್ತಿ ಹಗ್ಗದ ಹಾಗೆ ಮಾಡಿ ಎರಡನ್ನೂ ಒಂದು ತಂಬಿಗೆ ನೀರಿನ ಜೊತೆ ಕೈಯಲ್ಲಿ ಹಿಡಿದುಕೊಂಡು ಚಕ್ಕಳಮಕ್ಕಳ ಕುಳಿತುಕೊಂಡು ಆಕೆ ತನ್ನ ಕೊನೆಯ ದಿನಗಳಲ್ಲಿ ಆಕೆಯ ತಂದೆ ಉಪದೇಶಿಸಿದ ಮಂತ್ರವನ್ನು ನೂರೊಂದು ಸಲ ಜಪಿಸಿ ಕೊಟ್ಟರೆ ಮುಗಿಯಿತು. ರೋಗಿಯು ಮಂತ್ರಿಸಿದ ಹಗ್ಗವನ್ನು ಒಡವೆಯ ಹಾಗೆ ತನ್ನ ಕುತ್ತಿಗೆಯಲ್ಲಿ ಧರಿಸಬೇಕು. ನಿರ್ವಿಷದ ಬೇರನ್ನು ಮಂತ್ರಿಸಿದ ನೀರಲ್ಲಿ ಒಂದಿಷ್ಟು ತೇದು ಮೊದಲ ದಿನ ರೋಗಿ ನಾಲಿಗೆಗೆ ತಾಗಿಸಬೇಕು. ಆಮೇಲೆ ದಿನಾ ಒಣಗಿದ ಲಿಂಬೆ ಹಣ್ಣಿನ ಸಿಪ್ಪೆಯ ಜೊತೆ ನಿರ್ವಿಷದ ಬೇರನ್ನು ಮಂತ್ರಿಸಿದ ನೀರಲ್ಲಿ ನಾಲ್ಕಾರು ಬಾರಿ ತೇದು ಎಲ್ಲಿ ಸರ್ಪಸುತ್ತಿನ ಹುಣ್ಣು ಇದೆಯೋ ಅಲ್ಲಿಗೆ ಹಚ್ಚಬೇಕು. ಇಷ್ಟು ಮಾಡಿದರೆ ಮುಗಿಯಿತು. ಎಷ್ಟು ಜೋರಾಗಿದ್ದ ಸರ್ಪಸುತ್ತಾದರೂ ಸರಿಯೇ, ವಾರದೊಳಗೆ ಗುಣಮುಖವಾಗುವುದು ಖಾತ್ರಿ ಎಂದು ದಾಸಣ್ಣಾಚಾರ್ಯರು ತನ್ನ ಪತ್ನಿಯ ಚಿಕಿತ್ಸಾವಿಧಾನವನ್ನೂ ವಿವರಿಸುತ್ತಿದ್ದ ಹಾಗೆ, ಅತ್ತ ಪ್ರೇಮಕ್ಕ ಕೈಯಲ್ಲಿ ನಾಲ್ಕು ಬೈ ಹುಲ್ಲಿನ ಕಡ್ಡಿ, ನಿರ್ವಿಷದ ಬೇರು ಮತ್ತು ಅದೇ ತಾನೇ ಬಾವಿಯಿಂದ ಎತ್ತಿದ ನೀರನ್ನು ಒಂದು ತಂಬಿಗೆಯಲ್ಲಿ ತುಂಬಿಕೊಂಡು ‘ಹತ್ತು ನಿಮಿಷದಲ್ಲಿ ಎಲ್ಲಾ ರೆಡಿ ಮಾಡಿಕೊಡ್ತೇನೆ, ನೀವು ಒಂದಿಷ್ಟು ಪಥ್ಯ ಹೇಳಿ ಬಿಡಿ ಅವರಿಗೆ’ ಎಂದರು ತನ್ನ ಗಂಡನಿಗೆ.
‘ಹೌದೌದು! ಇಂಥ ನಾಟಿ ಚಿಕಿತ್ಸೆಯಲ್ಲಿ ಪಥ್ಯ ಬಹಳ ಮುಖ್ಯ’ ಎಂದು ಕುಪ್ಪಣ್ಣಯ್ಯ ಹೇಳುತ್ತಿದ್ದಂತೆ ದಾಸಣ್ಣಾಚಾರ್ಯರು ‘ತೆಂಗಿನಕಾಯಿ ಹಾಕಿದ ಪದಾರ್ಥ ಒಂದು ತಿಂಗಳು ಮುಟ್ಟಬಾರದು. ಮೀನು ಮಾಂಸ ಒಂದೆರಡು ತಿಂಗಳು ಬಿಟ್ಟರೆ ಒಳ್ಳೆಯದು. ಪಿತ್ತಜ ಅಂದರೆ ಹಾಗಲಕಾಯಿ, ಹುರುಳಿ ಮೊದಲಾದ ಪದಾರ್ಥ ಬೇಡವೇ ಬೇಡ. ನುಗ್ಗೆ ಬದನೆ ಮುಟ್ಟಲೇಬಾರದು!’ ಎಂದು ಹೇಳುತ್ತಿದ್ದಂತೆ ‘ಹಾಗಾದರೆ ನಮ್ಮಲ್ಲಿರುವ ಎಲ್ಲಾ ನುಗ್ಗೆಕೋಡನ್ನು ಈ ಕುಪ್ಪಣ್ಣಯ್ಯನವರಿಗೆ ಕೊಡುವುದು ಒಳ್ಳೆಯದು’ ಎಂದ ಹಸನಬ್ಬ ನಗುತ್ತಾ.
‘ಕುಪ್ಪಣ್ಣಯ್ಯನವರಿಗೆ ಬೇಕಾದರೆ ನಾನೇ ಕೊಡ್ತೇನೆ. ಕೊಡದಿದ್ದರೆ ಈ ಮರಕ್ಕೆ ಅವರ ದೃಷ್ಟಿ ತಾಗಿ ಬರುವ ವರ್ಷ ನುಗ್ಗೆಯೇ ಆಗದು ನೋಡಿ’ ಎಂದರು ಆಚಾರ್ಯರು ನಗುತ್ತಾ. ಈವೊತ್ತು ಬೇಡ ಆಚಾರ್ಯರೇ. ನುಗ್ಗೆಕೋಡು ಕೊಂಡುಹೋಗಲಿಕ್ಕೆ ಮತ್ತು ಅದೇ ದಿನ ನುಗ್ಗೆ ಮತ್ತು ಬದನೆಕಾಯಿ ಹಾಕಿ ಪ್ರೇಮಕ್ಕ ಮಾಡುವ ಮಜ್ಜಿಗೆ ಹುಳಿ ಉಣ್ಣಲಿಕ್ಕೆ ಎಂದೇ ನಾನು ಇನ್ನೊಮ್ಮೆ ಬರ‍್ತೇನೆ’ ಎಂದರು ಕುಪ್ಪಣ್ಣಯ್ಯ.
ಹೀಗೆ ಚಾವಡಿಯಲ್ಲಿ ಕುಶಾಲು ತಮಾಷೆಯ ಮಾತುಕತೆ ಮುಂದುವರಿಯುತ್ತಿದ್ದ ಹಾಗೆ, ಚಾವಡಿಯ ಒಳಗಿನ ಕೋಣೆಯಲ್ಲಿ ಕುಳಿತು ಮಂತ್ರ ಪಠಿಸುತ್ತಿದ್ದ ಪ್ರೇಮಕ್ಕ ‘ಸ್ವಲ್ಪ ಮೆತ್ತಗೆ ಮಾತನಾಡಬಾರದೇ ನೀವು? ನಿಮ್ಮ ಮಾತಿನಿಂದ ನನ್ನ ಮಂತ್ರ ಎಲ್ಲೆಲ್ಲೋ ಹೋಗುತ್ತದೆ’ ಎಂದು ದೊಡ್ಡದಾಗಿ ಹೇಳಿ ಸಣ್ಣಗೆ ಗದರಿದರು.
‘ಹೌದು ಮೆತ್ತಗೆ ಮಾತಾಡೋಣ’ ಎಂದು ಕುಪ್ಪಣ್ಣಯ್ಯ ಹೇಳಿದ ಒಡನೆಯೇ ಸ್ವರವನ್ನು ತೀರಾ ತಗ್ಗಿಸಿದ ದಾಸಣ್ಣ ಹಸನಬ್ಬನನ್ನು ಕೈ ಸನ್ನೆ ಮಾಡಿ ಕರೆದು ಪಕ್ಕದ ಕುರ್ಚಿಯಲ್ಲಿ ಕುಳಿತುಕೊಳ್ಳಿಸಿ ‘ನಾನು ಕೊಟ್ಟ ಗಡಸಿಗೆ (ಹೆಣ್ಣು ಕರು) ಗಬ್ಬ ನಿಂತಿತೇನು?’ ಎಂದು ಪ್ರಶ್ನಿಸಿದರು ಕುತೂಹಲದಲ್ಲಿ.
‘ಇಲ್ಲ ಸ್ವಾಮಿ’ ಎಂದ ಹಸನಬ್ಬ ‘ನೀವು ಇಲ್ಲಿ ಏಳೆಂಟು ಸಲ ಡಾಕ್ಟ್ರನ್ನು ಕರೆಸಿ ಗಬ್ಬ ನಿಲ್ಲಲಿಕ್ಕೆ ಇಂಜೆಕ್ಷನ್ ಮಾಡಿಸಿದ್ದೇನೆ ಎಂದಿದ್ದೀರಿ. ಆಮೇಲೆ ನಾನೂ ನಾಲ್ಕಾರು ಬಾರಿ ಕೊಡಿಸಿದೆ. ಕರು ಹೀಟಿಗೆ ಬಂದಾಗ ಹೋರಿ ಇದ್ದಲ್ಲಿಗೂ ಕೊಂಡುಹೋದೆ. ಗಬ್ಬ ನಿಲ್ಲುವ ಹಾಗೆ ಕಾಣಲಿಲ್ಲ. ಗೋ ಡಾಕ್ಟ್ರ ಹತ್ತಿರ ಕೇಳಿದ್ದಕ್ಕೆ ಅದಕ್ಕೆ ಗಬ್ಬ ನಿಲ್ಲುವುದು ಇನ್ನು ಕಷ್ಟ ಎಂದರು. ಮತ್ತೇನು ಮಾಡಲಿ ಸುಳ್ಳು ಹೇಳಿ ಮಾರುವ ಜಾಯಮಾನ ನನ್ನದಲ್ಲ. ನಮ್ಮ ಹಬ್ಬದ ಸಮಯ ಕಸಾಯಿಖಾನೆಗೆ ಕೊಟ್ಟು ಬಿಟ್ಟೆ’ ಎಂದ.
ದಾಸಣ್ಣಚಾರ್ಯರ ಮುಖ ಪೇಲವವಾಯ್ತು. ‘ಛೆ!’ ಎಂದರು. ಆಮೇಲೆ ಮೆತ್ತಗೆ ‘ಇವಳಿಗೆ ಏನಾದರೂ ಈ ವಿಷಯ ತಿಳಿದರೆ, ಬೆಂಕಿ ಇಟ್ಟಾಳು ನನ್ನ ತಲೆಗೆ. ಆಕೆಗೆ ದನಕರು ಅಂದರೆ ದೇವರು. ಗಬ್ಬ ನಿಲ್ಲದಿದ್ದರೆ ಬೇಡ, ಹಟ್ಟಿಯಲ್ಲೇ ಇರಲಿ ಎಂದು ಆಕೆ ಅಮೇರಿಕೆಯಲ್ಲಿರುವಾಗಲೇ ಹೇಳಿದ್ದಳು. ಆದರೆ, ನನಗೆ ಗಬ್ಬ ನಿಲ್ಲದ ಮೇಲೆ ಸಾಕುವುದು ವ್ಯರ್ಥ ಎಂಬ ಭಾವನೆ ಬಂತು. ಅಲ್ಲದೆ ಈಗಾಗಲೇ ಹಟ್ಟಿಯಲ್ಲಿ ನಾಲ್ಕಾರು ದನಕರುಗಳಿವೆ. ಇವುಗಳ ಚಾಕರಿ ಮಾಡಲೂ ಕೂಲಿಗಳೂ ಬೇಕಲ್ಲ? ಎಂದು ನಿಮಗೆ ಮಾರಿಬಿಟ್ಟೆ. ಆದರೆ, ನೀವು ಅದನ್ನು ಕಸಾಯಿ ಖಾನೆಗೆ ಕೊಡೋದೇ ಆಗಿದ್ದರೆ, ನನ್ನಲ್ಲಿ ಒಂದು ಮಾತು ಕೇಳಬಹುದಿತ್ತು. ನಾನೇ ವಾಪಾಸು ನಮ್ಮ ಹಟ್ಟಿಗೆ ಹಿಂದೆ ಹೊಡೆಯುತ್ತಿದ್ದೆ’ ಎಂದರು.
ಹಸನಬ್ಬ ಮಾತನಾಡಲಿಲ್ಲ. ತನ್ನ ಪರ್ಸನ್ನು ತೆಗೆದು ನಿಧಾನವಾಗಿ ಅದರಿಂದ ಐದು ನೂರರ ನೋಟೊಂದನ್ನು ತೆಗೆದು ‘ನೀವು ನನಗೆ ಒಂದೂವರೆ ಸಾವಿರಕ್ಕೆ ಆ ಗಡಸನ್ನು ಮಾರಿದ್ದು. ನಾನು ಅದನ್ನು ಮೂರು ಸಾವಿರಕ್ಕೆ ಮಾರಿದ್ದು. ಇದು ಐನ್ನೂರು ನಿಮಗೇ’ ಎಂದು ಮುಂದೆ ಚಾಚಿದ.
‘ಬೇಡ ಬೇಡ ಆಗ ನಾನೇ ಅದನ್ನು ಕಸಾಯಿಖಾನೆಗೆ ಮಾರಿದ ಹಾಗಾಗುತ್ತದೆ!’ ಎಂದರು ಆಚಾರ್ಯರು ವಿಷಾದದಲ್ಲಿ.
ಅಷ್ಟರಲ್ಲಿ ಒಳಗಿನಿಂದ ಇದನ್ನೆಲ್ಲ ಕೇಳಿಸಿಕೊಂಡ ಪ್ರೇಮಕ್ಕ ಆವೇಶದಿಂದ ಬಂದ ಹಾಗೆ ಚಾವಡಿಗೆ ಕಾಲಿಟ್ಟರು. ‘ನೀವು ನಮ್ಮ ಗಡಸನ್ನು ಮಾರಿದ್ದು ಈ ಸಾಬಿಗಾ?’ ಆತ ಅದನ್ನು ಕಸಾಯಿಖಾನೆಗೆ ಮಾರಿದನಂತಲ್ಲ? ನೀವು ಪಿಸುಗುಟ್ಟಿದ್ದೆಲ್ಲವನ್ನು ಕೇಳಿಸಿಕೊಂಡೆ ನಾನು!’ ಎಂದು ಕೈಯಲ್ಲಿ ಮಂತ್ರಿಸಿ ಹಿಡಿದುಕೊಂಡಿದ್ದ ಬೈ ಹುಲ್ಲಿನ ಹಗ್ಗ, ನಿರ್ವಿಷದ ಬೇರು ಮತ್ತು ನೀರು ತುಂಬಿದ್ದ ತಂಬಿಗೆಯನ್ನು ನಿಂತಲ್ಲಿಂದಲೇ ಬೀಸಿ ಅಂಗಳಕ್ಕೆ ಎಸೆದು ‘ನಡೀರಿ, ನನ್ನ ಚಾವಡಿಯಿಂದ ನೀವೆಲ್ಲ. ಇಂಥವರನ್ನು ನೀವು ಕರಕೊಂಡು ಬರುವುದೇ ನನ್ನ ಮನೆ ಬಾಗಿಲಿಗೆ ಕುಪ್ಪಣ್ಣಯ್ಯ? ದನವನ್ನು ಕೊಂದು ತಿನ್ನುವವರಿಗೆ ನಾನು ಔಷಧ ಕೊಡುವುದಿಲ್ಲ!’ ಎಂದು ಎಲ್ಲರನ್ನೂ ಕೆಂಗಣ್ಣಿನಿಂದ ನೋಡಿ ದುರ್ದಾನ ತೆಗೆದುಕೊಂಡವರಂತೆ ಒಳನಡೆದರು.
ಚಾವಡಿಯಲ್ಲಿದ್ದ ಐದೂ ಮಂದಿಯ ಬಾಯಿ ಬಿದ್ದು ಹೋಯಿತು. ದಾಸಣ್ಣಚಾರ್ಯರಿಗಂತೂ ಇನ್ನು ಈಕೆ ದಿನಾ ತನ್ನನ್ನು ಹಂಗಿಸಿ ಇಂಚಿಂಚು ಕೊಲ್ಲುತ್ತಿರುತ್ತಾಳೆ ಎಂಬ ಆತಂಕ ಹುಟ್ಟಿಕೊಂಡಿತು. ಕುಪ್ಪಣ್ಣಯ್ಯನವರಿಗೆ ಯಾಕೆ ತಾನು ಇಲ್ಲಿಗೆ ಬಂದೇನೋ ಎಂಬ ಭಾವ ಮೂಡಿ ಬಂತು. ಹಸನಬ್ಬನ ಕಣ್ಣುಗಳು ತುಂಬಿಕೊಂಡವು. ಹಸದುಲ್ಲಾ ‘ಪಾಪಿ ಹೋದಲ್ಲಿ ಮೊಣಕಾಲು ನೀರು’ ಎಂಬಂತೆ ಅಧೀರನಾದ.
ದಾಸಣ್ಣಚಾರ್ಯರು ‘ತಪ್ಪೆಲ್ಲ ನನ್ನದೇ. ನಾನು ಈ ವಿಚಾರ ಈಗ ಎತ್ತಲೇಬಾರದಿತ್ತುʼ ಎಂದರು ಸ್ವಗತದ ಹಾಗೆ. ಅದಕ್ಕೆ ಪ್ರತಿಯಾಗಿ ಹಸನಬ್ಬ ‘ನೀವು ಕೇಳಿದರೂ ನಾನು ಸತ್ಯ ಹೇಳಬಾರದಿತ್ತು!’ ಎಂದ. ‘ದಮ್ಮಯ್ಯ ಸ್ವಾಮಿ, ನೀವು ಹೇಗಾದರೂ ಮಾಡಿ ಔಷಧ ಕೊಡಿಸಿ ಪುಣ್ಯಕಟ್ಟುಕೊಳ್ಳಿ’ ಎಂದು ಹಸದುಲ್ಲಾ ಕುಪ್ಪಣ್ಣಯ್ಯನವರ ಇದಿರು ಬಂದು ನಿಂತು ಕೈ ಮುಗಿದ. ಕಂಗಾಲಾದ ಹಾಗೆ ಕುಳಿತಿದ್ದ ಕುಪ್ಪಣ್ಣಯ್ಯ ‘ನಾನು ಹೇಳಿದರೆ ಪ್ರೇಮಕ್ಕನಿಗೆ ಸಮಾಧಾನ ಬಂದೀತೆ?’ ಎಂದು ಕೇಳಿದರು ದಾಸಣ್ಣಚಾರ್ಯರಿಗೆ.
ಆಚಾರ್ಯರು ‘ನನ್ನ ಹೆಂಡತಿ ಅಂದರೆ ನುಗ್ಗೆ ಗಿಡದ ಹಾಗೆ. ಮುರಿಯುವುದು ಬೇಗ. ಚಿಗುರುವುದೂ ಬೇಗ. ಒಂದು ಮಾತು ನೀವು ಕೇಳಿ ನೋಡಿ. ನಾನಂತೂ ಹೇಳುವುದು ಸಾಧ್ಯವಿಲ್ಲ. ಆಕೆಯ ಎಲ್ಲಾ ಕೋಪಕ್ಕೂ ನಾನೇ ಕಾರಣ ತಾನೇ?’ ಎಂದರು ಹಸನಬ್ಬನನ್ನು ನೋಡುತ್ತಾ.
ಕುಪ್ಪಣ್ಣಯ್ಯ ನಿಧಾನವಾಗಿ ‘ಪ್ರೇಮಕ್ಕ’ ಎಂದು ಒಳನಡೆದರು. ಆದರೆ ಪ್ರೇಮಕ್ಕ ಓಗೊಡಲಿಲ್ಲ. ಅಲ್ಲಿ ಇಲ್ಲಿ ಎಲ್ಲೂ ಪ್ರೇಮಕ್ಕನನ್ನು ಕಾಣದೆ ಅವರು, ಹೊರಗೆ ಬಂದು ಗಾಬರಿಯಲ್ಲಿ. ‘ಒಳಗೆ ಇಲ್ಲವಲ್ಲ ಪ್ರೇಮಕ್ಕ’ ಎಂದರು ಆಚಾರ್ಯರಿಗೆ.
‘ಹಟ್ಟಿಗೆ ಹೋಗಬಹುದು ಆಕೆ’ ಎಂದರು ಆಚಾರ್ಯರು ಮೆತ್ತಗೆ. ಕುಪ್ಪಣ್ಣಯ್ಯ ನಿಧಾನವಾಗಿ ದನಕರುಗಳು ಇರುವ ಹಟ್ಟಿಯಾಚೆ ಹೆಜ್ಜೆ ಹಾಕಿದರು. ಅಲ್ಲಿ ದನಕರುಗಳಿಗೆ ಅಕ್ಕಚ್ಚು ಹೊಯ್ಯುವ ಬೈಪಣೆಯಲ್ಲಿ ನಿಂತು ಪ್ರೇಮಕ್ಕ, ಹಟ್ಟಿಯ ಅಟ್ಟದಿಂದ ಬೈ ಹುಲ್ಲನ್ನು ಎಳೆಯುತ್ತಿದ್ದರು.
ಕುಪ್ಪಣ್ಣಯ್ಯ ‘ಪ್ರೇಮಕ್ಕ’ ಎಂದು ಮೆತ್ತಗೆ ಕೂಗಿದರು. ಆದರೆ ಅವರಿಗೆ ಪ್ರೇಮಕ್ಕ ಓಗೊಡದೆ ಇದ್ದರೂ ಆಕೆ ಬೈಹುಲ್ಲಿನ ಕಡ್ಡಿಯಿಂದ ಮತ್ತೆ ಹಗ್ಗವನ್ನು ಮಾಡಿಕೊಳ್ಳುತ್ತಾ ಉಸ್ಮಾನನಿಗೆ ನಿರ್ವಿಷದ ಬೇರು ಮತ್ತು ನೀರನ್ನು ಮಂತ್ರಿಸಿಕೊಡಲು ಹೊರಟಿದ್ದಾರೆ ಎಂಬುದು ಅರ್ಥವಾಯಿತು.
ಪ್ರೇಮಕ್ಕನ ಕಣ್ಣಲ್ಲಿ ತುಂಬಿ ಉಕ್ಕುತ್ತಿದ್ದ ಕಣ್ಣೀರನ್ನು ಅವರು ನೋಡಿದರು. ಆ ಕಣ್ಣೀರನ್ನು ಒರೆಸಲು ಅವರಿಗೆ ಸಾಧ್ಯವಿಲ್ಲ ಅನಿಸಿತು. ಅವರ ಇದಿರಿಗೆ ಇದ್ದ ನುಗ್ಗೆಗಿಡ, ‘ಇಂದೇ ನೀನು ಕೈತುಂಬ ಕೋಡು ಕೊಂಡು ಹೋಗು!’ ಎಂಬಂತೆ ಗಾಳಿಗೆ ತೊನೆಯುತ್ತಿತ್ತು.
‘ನುಗ್ಗೆಗಿಡ’ವನ್ನು ನಾನು ಯಾಕೆ ಆಯ್ಕೆ ಮಾಡಿದೆ?
‘ನಿಮ್ಮ ಬರೆಹಗಳಲ್ಲಿ ನಿಮಗೆ ಯಾವುದು ಇಷ್ಟ?’ ಎಂದು ಯಾರಾದರೂ ಪ್ರಶ್ನಿಸಿದರೆ ಉತ್ತರ ನೀಡುವುದು ತುಂಬಾ ಕಷ್ಟ. ಬರೆಯುವ ಕಾಲಕ್ಕೆ ಎಲ್ಲಾ ಬರೆಹಗಳೂ ಇಷ್ಟ. ಹೆರುವ ತಾಯಿಗೆ ಹೆರಿಗೆಯಾಗುವ ಮಗು ಇಷ್ಟವಾಗುವ ಹಾಗೆ! ಆಮೇಲೆ ಆಯ್ಕೆಯ ಪ್ರಶ್ನೆ ಬಂದಾಗ ಬೇರೆ ಬೇರೆ ದೃಷ್ಟಿಕೋನದಲ್ಲಿ ‘ಇದು ಈ ಕಾರಣಕ್ಕೆ ಇಷ್ಟ’ ಎನ್ನಬಹುದೇನೋ! ಆದರೂ ಆ ಆಯ್ಕೆಯಲ್ಲಿ ಅತೃಪ್ತಿ ಇದ್ದೇ ಇರಬಹುದು.
‘ನುಗ್ಗೆಗಿಡ’ ಎನ್ನುವುದು ಕಡಿದಷ್ಟೂ ಅಥವಾ ನೋವು ಕೊಟ್ಟಷ್ಟೂ ಅದನ್ನು ಸಹಿಸಿಕೊಂಡು ಮತ್ತೆ ಚಿಗುರುವ ಗಿಡ. ಅಷ್ಟೇ ಅಲ್ಲ, ಕಡಿದವರನ್ನೇ ಮರೆತು ಎದೆತುಂಬಿ ಮತ್ತೆ ಮತ್ತೆ ನುಗ್ಗೆಕಾಯಿಗಳನ್ನು ಕಡಿದವರಿಗೇ ನೀಡುವುದು ಅದರ ಹೆಗ್ಗಳಿಕೆ. ಪ್ರಾಯಶಃ ಸ್ತ್ರೀಯರನ್ನು ನಾವು ನೋಡುವುದು ಮತ್ತು ಉಪಯೋಗಿಸಿಕೊಳ್ಳುವುದು ‘ನುಗ್ಗೆಗಿಡ’ದ ರೀತಿಯಲ್ಲೇ. ಆದರೆ ಎಂಥ ಹೆಣ್ಣೇ ಆಗಿರಲಿ, ಆಕೆಯ ಒಳಗೆ ನುಗ್ಗೆಗಿಡದ ವ್ಯಕ್ತಿತ್ವ ಇದೆ ಎನ್ನುವುದಕ್ಕೆ ‘ನುಗ್ಗೆಗಿಡ’ ರೂಪಕವಾಗಿದೆ ಎಂದುಕೊಂಡಿದ್ದೇನೆ ನಾನು.
‘ಸಣ್ಣಕತೆ’ಗೆ ಕತೆಯೇ ಬೇಡ ಎನ್ನುವಂತೆ ‘ಕತೆ’ಗಳನ್ನು ದೂರ ಇಟ್ಟು ಬರೆಯುವುದನ್ನು ಈಗ ನಾವು ರೂಢಿಸಿಕೊಂಡಿದ್ದೇವೆ. ಪ್ರತಿ ಸಣ್ಣ ಕತೆಯೊಳಗೆ ತೀರಾ ಸಣ್ಣದಾದ ಒಂದು ಕತೆ ಇರಬೇಕು, ಅದು ಒಂದು ಸಂದೇಶವನ್ನು ಕೊಡಬೇಕು ಎನ್ನುವ ಭಾವ ನವೋದಯ ಕಾಲದ ಸಣ್ಣಕತೆಗಾರರಲ್ಲಿ ಇತ್ತು. ಯಾಕೋ ಅದೇ ನನಗೆ ಈಗಲೂ ಇಷ್ಟ. ಹಾಗಾಗಿ ನನ್ನ ಕತೆಗಳೆಲ್ಲ ‘ಮಾತುಕತೆ’ಗಳ ಹಾಗೆ ಇರುತ್ತವೆ ಮತ್ತು ಕೆಲವು ಸಂದರ್ಭದಲ್ಲಿ ‘ಮಾತೇ’ ಹೆಚ್ಚಾಗಿ ‘ಕತೆ’ ಕಡಿಮೆಯಾದದ್ದು ಇಲ್ಲದಿಲ್ಲ! ಆದರೆ ಅದು ನನ್ನದೇ ಸ್ಟೈಲ್. ಯಾಕೆಂದರೆ ನನ್ನ ಅನುಭವಗಳನ್ನು ಈ ರೀತಿಯಲ್ಲಿ ಹೇಳುವುದು ಮಾತ್ರ ನನಗೆ ಸಾಧ್ಯ! ಅದು ನನ್ನ ‘ಮಿತಿ’ ಎಂದು ನೀವು ಅಂದುಕೊಂಡರೆ, ಅದಕ್ಕೆ ನನ್ನ ಆಕ್ಷೇಪ ಇಲ್ಲ!
ಡಾ. ನಾ. ಮೊಗಸಾಲೆ ಕಾಸರಗೋಡು ತಾಲ್ಲೂಕಿನ ಕೋಳ್ಯೂರಿನ ಮೊಗಸಾಲೆಯವರು. ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆ ಕಥೆ ಕಾದಂಬರಿಗಳನ್ನೂ ಬರೆದಿದ್ದಾರೆ. ವರ್ತಮಾನದ ಮುಖಗಳು, ಪಲ್ಲವಿ, ಪ್ರಭವ, ಕಾಮನ ಬೆಡಗು ಬೆಳಗು ಸೇರಿದಂತೆ ಹಲವು ಕವನ ಸಂಕಲನಗಳು, ಮಣ್ಣಿನ ಮಕ್ಕಳು, ಕನಸಿನ ಬಳ್ಳಿ, ಅನಂತ, ಧಾತು ಸೇರಿದಂತೆ ಹಲವು ಕಾದಂಬರಿಗಳು, ವ್ಯಕ್ತಿಚಿತ್ರಗಳ ಸಂಗ್ರಹ ಸೇರಿದಂತೆ ಇನ್ನೂ ಹಲವು ಕೃತಿಗಳನ್ನು ರಚಿಸಿದ್ದಾರೆ
ಮೊಗಸಾಲೆಯವರ ‘ಉಲ್ಲಂಘನೆ’ನೆನಪಿಸದ್ದಿದ್ದರೆ ತುಳುನಾಡಿನ ಸಾಹಿತ್ಯ ಲೋಕ ಅಪೂರ್ಣ.