ಹಿಂದೆ ಅವನು ಜಬರದಸ್ತಿಯಲ್ಲ ಇಸಿದುಕೊಂಡಿದ್ದ ಇನ್ನೂರು ರೂಪಾಯಿಗಳನ್ನು ಜ್ಞಾಪಿಸಿ, ಈಗ ಬಂದಿರುವುದು ಎಪ್ಪತ್ತೈದೆಂದು ಹೇಳಿ, ಇದು ಜಾತ ಒಂದುನೂರ ಇಪ್ಪತ್ತೈದು ನಿನ್ನಿಂದ ಬರಬೇಕೆಂದು ಕ್ಲೇಮು ಮಾಡಿದೆ. ಕೊಡುವನೇನೊ ಎಂಬ ದೂರದ ನಿರೀಕ್ಷೆಯಲ್ಲಿ. ಆದರೆ ಅವನು ಹೂಡಿದ ತರ್ಕವೆ ಆ ನಿರೀಕ್ಷೆಗೆ ಮಣ್ಣು ಹಾಕಿತು. ‘ಕ್ಯಾಸ್ಟು ಸರ್ಟಿಪೇಟುಕೇ ಇನ್ನೂರಾಗದೆ. ಅದನ್ಯಾರು ಕೊಡೋರು’ ಅಂದ. ಅದಕ್ಕೂ ನನಗೂ ಸಂಬಂಧವಿಲ್ಲ ಅಂದೆ. ‘ನೀನು ಮಾಡ್ಸು ಅಂದಿದ್ದಕಲ್ವ ನಾ ಮಾಡ್ಸಂಗಾದ್ದು. ಅವತ್ತೆ ಹಿಂಗಿಂಗೆ ಅಂದಿದ್ರೆ ನಾ ಮಾಡ್ಸೋನಲ್ಲ. ತ್ಯೆಪ್ಪು ನಿಂದೆ. ನಾ ಯಾನೂ ಮಾಡಾಕಾದೋನಲ್ಲ.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಸ. ರಘುನಾಥ ಬರೆದ ಕತೆ “ಬಿರೆಬೆತ್ಲೆ ವೆಂಕಟಸಾಮಿ” ನಿಮ್ಮ ಓದಿಗೆ
ವೆಂಕಟಸಾಮಿ ಬಂದ. ಕೂತ್ಕೊ ಅಂದೆ. ‘ಕೂತ್ಕಳಾದು ಆತಟ್ಟುಕರ‍್ಲಿ, ನೀನಿಂಗೆ ಮಾಡ್ಬೋದ? ಇದು ನಿನಕ ಸರೀನ? ಹಂಗಾರೆ ನಿನ್ತಾವ ನಂಕೇನು ಕಿಮ್ಮತ್ತಿಲ್ವ? ಶಾನೆ ಬೇಜಾರಾತು ಗೊತ್ತ? ಅಂಗ್ಯಾಕ ಮಾಡಿದ್ದು?’ ಐದು ಪ್ರಶ್ನೆಗಳೊಂದಿಗೆ ಮಾತು ಶುರು ಮಾಡಿದ. ಒಂದೊಂದು ಪ್ರಶ್ನೆಯಲ್ಲಿಯೂ ಆಕ್ಷೇಪಣೆಯನ್ನು ಒತ್ತಿ ಒತ್ತಿ ತುಂಬಿ ಕೇಳಿದ. ಅವನ ಒಂದೊಂದು ಪ್ರಶ್ನೆಯನ್ನೂ ಪ್ರತ್ಯೇಕವಾಗಿಸಿ ನಾನೇನು ಮಾಡಿದ್ದು? ಯಾವುದು ಸರಿಯಲ್ಲ? ನನ್ನಲ್ಲಿ ಅವನ ಕಿಮ್ಮತ್ತೇನಿತ್ತು? ಅವನಿಗೆ ಶಾನೆ ಬೇಜಾರಾಗುವಂಥಹುದೇನಾಯಿತು? ಇದೆಲ್ಲ ಯಾವಾಗಾಯಿತು? ಎಂದು ನೆನಪನ್ನು ಕೆದಕುತ್ತ ಉತ್ತರವನ್ನು ಹುಡುತ್ತ, ಅದು ಸಿಗದೆ, ಪ್ರಶ್ನೆಗಳನ್ನು ಕಾಯ್ದುಕೊಳ್ಳುತ್ತ, ಅವನತ್ತಲೇ ನೋಡುತ್ತ ಮಿಕಿಮಕಿ ಕಣ್ಣುಬಿಟ್ಟೆ. ‘ಏನೂ ತಿಳಿದೋನಂಗೆ ಆಡ್ಬೇಡ. ನೋಡೋಕ ಚೆಂದಾಕಿರಲ್ಲ’ ಅಂದ. ವಿಷಯಾನ ಅಥವಾ ಘಟನೆಯನ್ನ ಮುಚ್ಚಿಟ್ಟು ಇದೆಂಥ ಮಾತಿನ ಗುದ್ದಾಟ ಇವನದು ಅನ್ನಿಸಿತು. ಅದೇನು ಬಿಡಿಸಿ ಹೇಳಿ ಕೇಳೋದನ್ನ ಕೇಳಬಾರದ ಅಂದೆ. ‘ನಿನಕೇ ತಿಳಿದಿರೋದ್ನೇನು ಇಪ್ರ‍್ಸಿ ಕೇಳನ್ನೋದು? ನೀನು ಶಾನ ಕಿಲಾಡಿ ಇದ್ದಿ’ ಎಂದು ಮಾತಿನಲ್ಲೆ ಮೊಟುಕುತ್ತಿದ್ದ ಇಲ್ಲವೆ ಕುಟುಕುತ್ತಿದ್ದ ಅಥವಾ ಎರಡನ್ನೂ ಮಾಡುತ್ತಿದ್ದ. ನೋಡು, ನಾನು ಮಾಡಿದ್ದೇನು ಅಂತ ಹೇಳೋದಾದರೆ ಹೇಳಿ ಮಾತಾಡು. ಇಲ್ಲ ಅಂದರೆ ನನ್ನ ಪಾಡಿಗೆ ನನ್ನನ್ನು ಬಿಡು ಎಂದು ನಿಷ್ಟುರವಾಗಿಯೆ ಹೇಳಿದೆ. ‘ಅಂತೂ ನಿನ್ನ ನಾಟಕದ ಬುದ್ಧೀನ ಬುಡೋನಲ್ಲ ಅಂತಾತು. ನಾನೇ ಹೇಳ್ತೀನಿ ಕೇಳ್ಕೋ. ವಾರ‍್ದಿಂದೆ ನಿನ್ತಾವ್ಕ ಬಂದಿದ್ದೆ. ಅವಾಗ ನೀನು ಮಾಡಿದ್ದು ಮೆಚ್ಚೊ ಅಂತದಲ್ಲ. ನಿನ್ನಿಂದೇನೆ ನಿಂತು ಕೆಮ್ಮಿದ್ನಿ. ತಿರುಗೀ ನೋಡ್ಲಿಲ್ಲ ನೀನು. ಒಂದಲ್ಲ ಎಲ್ಡಲ್ಲ ಐದು ನಿಮ್ಸ, ಸರೀಗ ಐದು ನಿಮ್ಸ ನಿಂತಿದ್ದು. ನೋಡಾಣ ಅಂತ ಗಡಿಯಾರ ನೋಡ್ಕಂಡೇ ನಿಂತಿದ್ನಿ. ಓ, ನಮ್ಮಂತೋರು ನಿನ್ನ ಕಣುಕ ಬಿಳ್ಳಲ್ಲ ಅಂದ್ಕೊಂಡು ಹೆಂಗೆ ಬಂದ್ನೋ ಹಂಗೇ ಹೊಂಟೋದ್ನಿ’ ಅಂದ. ಯಾವತ್ತು ಅಂದೆ. ಹೇಳದ್ನಲ್ಲ ವಾರ‍್ದಿಂದೆ ಅಂತ’ ಅಂದ. ಮತ್ತೆ ನೆನಪಿನ ಮೊರೆ ಹೋದೆ. ಪ್ರಯೋಜನವಾಗಲಿಲ್ಲ. ಏನಾಯ್ತೊ ಗೊತ್ತಿಲ್ಲ. ಅದನ್ನ ಮರೆತುಬಿಡು. ಅಂಥ ಸಿರಿಯೇನು ನನಗೆ ಬಂದಿಲ್ಲ ಎಂದೆ. ನಾನು ಬೇಕೆಂದೆ ಹಾಗೆ ಮಾಡಿದೆ ಎಂದೇ ವಾದಿಸಿದ. ನಾನು ತಪ್ಪಾಯ್ತು ಅನ್ನುವವರೆಗೆ ಮುಂದುವರೆಸಿದ. ನನ್ನ ಕ್ಷಮಾಪಣೆಯೊಂದಿಗೆ ಶಾಂತನಾದ. ನನ್ನ ಆಹ್ವಾನವನ್ನು ಮಾನ್ಯ ಮಾಡಿ ಕುಳಿತುಕೊಂಡ.
ಅಂದು ಬಂದಿದ್ದುದು ಯಾಕೆ? ಇಂದೇಕೆ ಬಂದಿದ್ದು ಎಂದು ಕೇಳಿದೆ. ‘ಅವತ್ತು ಬಂದಿದ್ಕ ಮಾಡಿದ್ಯಲ್ಲ ಮರ‍್ವಾದೆ’ ಅಂದ. ಮರೆತುಬಿಡು ಅಂದೆನಲ್ಲ. ಮರೆತುಬಿಟ್ಟು ಈಗ ಬಂದಿದ್ದೇಕೆಂದು ಹೇಳೆಂದೆ. ‘ಏನಿರ್ತದೆ? ಅರ್ಜೆಂಟದೆ ಒಂದಿನ್ನೂರು ರುಪಾಯ್ ಕೊಟ್ಟಿರು’ ಅಂದ, ಕೊಟ್ಟಿಟ್ಟಿದ್ದವನಂತೆ. ಎಲ್ಲಿದೆ ಅಂದೆ. ‘ಎಲ್ಲದೆ ಅಂದ್ರೆ ಎಂತ ಮಾತು? ಜೊಪ್ನಾಗ ಕೈ ಮಡಗಿ ತಗುದು ಕೊಡು. ಅಲ್ಲರ‍್ತದೆ’ ಅಂದ, ಸಾಲ ವಸೂಲಿಗೆ ಬಂದವನಂತೆ. ಖಚಿತವಾಗಿ ಇಲ್ಲ ಅಂದೆ. ‘ಪುಗಸಟ್ಟೆ ಕೇಳೋನಲ್ಲ ನಾನು. ನನಕೇನು ಪುಗಸಟ್ಟೆ ಕೊಡ್ಬೇಡ. ಕೊಟ್ರು ತಕ್ಕೊಳೊ ಜಾತಿಯೋನಲ ನಾನು. ನಂ ಐದುನಕ ಕಾಲರ್‌ಚಿಪ್ಪು (ಸ್ಕಾಲರ್‌ಶಿಫ್) ಕೊಡ್ತೀನಂತ ನನ್ತಾವ ಸೈನು ಮಾಡಿಸ್ಕೊಂಡ್ಯಲ್ಲ. ಅದರಾಗ ಹಿಡ್ಕೊ. ಈಗ ಕೊಡು’ ಎಂದು ಕಾಡಿದ. ಅದಿನ್ನು ಬಂದಿಲ್ಲ. ಬಂದಾಗ ಹೇಳಿ ಕಳಿಸುವೆ. ಬಂದು ತೆಗೆದುಕೊಂಡು ಹೋಗು ಅಂದೆ. ‘ಬರ‍್ದೀರ ಅದೆಂಗೆ ಸೈನು ಮಾಡಿಸಿಕೊಂಡಿ?’ ಎಂದು ಪಟ್ಟು ಹಾಕಿದ. ಅದು ಅರ್ಜಿಗೆ. ಅರ್ಜಿ ಹಾಕದೆ ಸ್ಕಾಲರ್‌ಶಿಪ್ಪು ಬರೊಲ್ಲ ಅಂದೆ. ಮುಂದಿನ ಮಾತುಗಳನ್ನು ಹೇಳುತ್ತ ಹೋದರೆ ಹೇಳುತ್ತಲೇ ಇರಬೇಕಾಗುತ್ತದೆ. ಅವನು ಕೇಳಿದ, ನಾನು ಹೇಳಿದೆ. ಅವನು ಅಂದ, ನಾನು ಅಂದೆ ಎಂದರೆ ನಮ್ಮ ಈ ವರೆಗಿನ ಮಾತುಗಳ ಸರಣಿ ಹಿಡಿದು ಏನು ಮಾತುಗಳು ನಡೆದಿರಬಹುದು ಎಂದು ಯಾರಾದರೂ ಕಲ್ಪಸಿಕೊಳ್ಳಬಹುದು. ಹೀಗೆ ಹೇಳಲು ಕಾರಣವೇನಪ್ಪ ಅಂದರೆ ಆ ಮಾತುಗಳನ್ನು ಊಹಿಸಿಕೊಳ್ಳುವುದು ಸಾಧ್ಯವಿರುವುದರಿಂದ ಸುಮ್ಮನೆ ಕಾಲ ಹರಣವಾಗುತ್ತೆ ಅನ್ನುವುದು. ಇಂದಿನ ದಿನಗಳಲ್ಲಿ ಹೆಚ್ಚಿನ ಜನ ‘ಸಮಯವಿಲ್ಲ’ ಅನ್ನುವವರೆ ಎಂಬುದನ್ನು ಬಲ್ಲವನಾಗಿ ಈ ನಿರ್ಣಯಕ್ಕೆ ಬಂದು ಮುಂದುವರೆದ ನಮ್ಮ ನಡುವಿನ ಮಾತುಗಳನ್ನು ಮೊಟಕುಗೊಳಿಸಿರುವೆ. ಆದರೆ ಮುಕ್ತಾಯ ಏನಾಯಿತೆಂಬುದು ಊಹೆಗೆ ಕಷ್ಟವಾದುದರಿಂದ ಅದನ್ನು ಹೇಳಲೇಬೇಕು.
ತನ್ನ ಮಗನಿಗೆ ಸ್ಕಾಲರ್‌ಶಿಫ್ ಬಂದಿದ್ದರೂ ನಾನು ಕೊಡದೆ ತಿಂದು ಹಾಕಿದ್ದೇನೆ ಅನ್ನುವವರೆಗೆ ವೆಂಕಟಸಾಮಿ ಮಾತನ್ನು ಬೆಳೆಸಿದ. ಇದರಿಂದ ಬೇಸರ, ಕೋಪ ಎರಡೂ ಒಟ್ಟಿಗೆ ಉಂಟಾಯಿತು. ಕೋಪದಲ್ಲಿ ಹಾಳಾಗಿ ಹೋಗಲಿ. ಸ್ಕಾಲರ್‌ಶಿಪ್ ಬಂದಾಗ ಹಿಡಿದುಕೊಂಡರಾಯಿತೆಂದು ಇನ್ನೂರು ರೂಪಾಯಿ ಕೊಟ್ಟು, ಸ್ಕಾಲರ್‌ಶಿಪ್ ಬಂದಾಗ ಹೇಳಿಕಳಿಸುತ್ತೇನೆ. ಬಂದು ಸೈನು ಮಾಡಿ ಹೋಗು ಎಂದು ಮಾತಿನಲ್ಲಿ ಹೇಳಿದರೂ ಸ್ವಗತದಲ್ಲಿ ತೊಲಗು ಎಂದುಕೊಂಡೆ. ಅವನು ತೊಲಗಿದ ನಂತರ ನನ್ನ ಸಹ ಶಿಕ್ಷಕರು ಬಂದು, ಅವನಿಗೆ ಸೊಪ್ಪು ಹಾಕಬಾರದಿತ್ತು ಎಂದರು. ಹಾಳಾಗಿ ಹೋಗಲಿ ಬಿಡಿ ಎಂದೆ. ನಾನು ಅವರಿಗೆ ಬಿಡಿ ಎಂದೆ. ನಾನೂ ಬಿಟ್ಟೆ. ಆದರೆ ಅವನು ಬಿಡಲಿಲ್ಲ. ‘ಮೇಷ್ಟ್ರು ತಿಂದಾಕಿದ ದುಡ್ನ ಕಕ್ಕುಸ್ದೆ’ ಎಂದು ಊರಿನಲ್ಲಿ ಹೇಳಿಕೊಂಡ. ಅವನು ಬೊಗಳೋನು. ಬೋಗುಳಿಕೊಳ್ಳಲಿ ಎಂದು ಸುಮ್ಮನಾದೆ. ಆದರೆ ಇನ್ನೊಂದು ಸಂಕಟ ಎದುರಾಯಿತು.
ವೆಂಕಟಸಾಮಿಯ ಮಾತನ್ನು ನಂಬಿದ ಮೂರ್ನಾಕು ಮಂದಿ ಬಂದು ಅವನ ವರಸೆಯಲ್ಲಿಯೇ ಮಾತನಾಡಿ ಬೆದರಿಸಿದರು. ಅವರ ಬೆದರಿಕೆಗೆ ಬಗ್ಗದೆ ಸೆಟೆದು ನಿಂತೆ. ಕಂಪ್ಲೆಂಟು ಕೊಡಿ ಹೋಗಿ ಎಂದೆ. ‘ಆಪೀಸ್ರು ನೀನು ಸಾಮೀಲು. ಅದ್ಕೇ ಈ ಧೈರ್ಯ. ನೋಡ್ತಿರು ಎಂ.ಎಲ್.ಎ.ಗೆ ಹೇಳಿ ಎತ್ತಂಗಡಿ ಮಾಡಿಸ್ತೀವಿ ನಿನ್ನ’ ಎಂದು ಗುಟುರು ಹಾಕಿದರು. ಮೊದಲು ಆ ಕೆಲಸ ಮಾಡಿ. ನಿಮ್ಮೂರಲ್ಲೆ ಇರಬೇಕು ಅನ್ನೋಕೆ ನನಗೆ ಇಲ್ಲೇನು ಮನೆ ಇದೆಯೆ, ಕಂದಾಯದ ಜಮೀನಿದೆಯೆ?’ ಅಂದೆ. ಗೊಣಗಿಕೊಂಡು ಹೋದರು.
ಮಳೆ ನಿಂತರೂ ಸೂರಿನ ನೀರು ತೊಟ್ಟಿಕ್ಕುತ್ತದಲ್ಲ ಹಾಗಾಯಿತು. ಹಿಂದೆ ಇದ್ದ ಹೆಡ್ ಮಾಸ್ಟರು ಸಿಕ್ಕಿ, ಹೀಗಾಯ್ತಂತೆ ಹೌದೆ ಎಂದರು. ಹೌದು ಅನ್ನೋದೇನು? ನಿಮಗೆ ಗೊತ್ತಾಗಿಯೆ ಇದೆಯಲ್ಲ ಅಂದೆ. ಅವನು ನನಗೂ ಹೀಗೆ ಕಾಟ ಕೊಟ್ಟಿದ್ದ. ನನಗೂ ಹಿಂದೆ ಇದ್ದವರನ್ನೂ ಬಿಟ್ಟಿರಲಿಲ್ಲ. ಅವರು ಇವನ ಮಗನನ್ನು ಶಾಲೆಗೆ ದಾಖಲಿಸಿಕೊಳ್ಳುವಾಗ ಇವನ ಹೆಸರನ್ನು ‘ವೆಂಕಟಸ್ವಾಮಿ’ ಎಂದು ಬರೆದಿದ್ದರಂತೆ. ಅದಕ್ಕೆ ‘ನನ್ನ ಹೆಸರು ವೆಂಕಟಸಾಮಿ. ವೆಂಟಸ್ವಾಮಿ ಅಂತ ಬರೆಯೋಕೆ ನೀಯೇನು ನನ್ನ ಹುಟ್ಟಿಸಿದೋನ?’ ಅಂದು ಜಗಳ ತೆಗೆದಿದ್ದನಂತೆ. ಅವರು ಇವನೆದುರಲ್ಲೆ ‘ವೆಂಕಟಸಾಮಿ’ ಎಂದು ತಿದ್ದಿ ಸಹಿ ಹಾಕಿ, ತಿದ್ದಿದ್ದೀನಿ ನೋಡು ಎಂದು ತೋರಿಸಿದರೂ ಸಮಾಧಾನಗೊಳ್ಳದೆ ಅವರು ತಪ್ಪಾಯಿತು ಅನ್ನುವವರೆಗೆ ಬಿಡಲಿಲ್ಲವಂತೆ ಅಂದರು.
ಇವರಾದ ಮೇಲೆ ಊರಿನವರಾದ ಬೈಯಪ್ಪ ಅನ್ನುವವರು ಬಂದರು. ‘ವೆಂಕಟಸಾಮಿಗಾನು ಯವಾರಕ ಬಂದಿದ್ನಂತೆ ನಿಜಾನ? ಆ ನನ್ಮಗ್ನು ಯಾರ‍್ನೂ ಬಿಡಂಗಿಲ್ಲ. ಅವನಕ ಏನಿಲ್ದಿದ್ರೂ ಬಾಯೊಂದದೆ. ಅದ್ಕೆ ಊರೋರು ಅವನ್ನ ಬಿರೇಬೆತ್ಲೆ ವೆಂಕಟಸಾಮಿ ಅನ್ನೋದು. ಎಂಡ್ರು ಕೂಲಿ ನಾಲಿ ಮಾಡ್ಕೊಂಡು ಮಕ್ಕಳ್ನ ಸಾಕ್ಕೋತಾಳೆ. ಮರ‍್ವಾದೆ ಇರೊ ಎಂಗ್ಸು. ಇವನು ಪರೋಡಿ ನನ್ಮಗ್ನು. ಕಿತಾಪತಿ ಮಾಡ್ಕೊಂಡು ಹೊತ್ತು ಮುಣುಗುತು ಅನ್ನೋವಾಗ್ಲೆ ‘ಕಂಡೋನೆಂಡ್ರಾಟು’ ಕುಡಿದು ಆವಮ್ಮನು ಮಕ್ಕಳಕ ಕೊಡಬರ‍್ದ ಕಸ್ಟ ಕೊಡ್ತಾನೆ’ ಎಂದು ಸಹಸ್ರನಾಮವನ್ನೇ ಶುರು ಮಾಡಿದರು. ಎಲ್ಲಾದರು ಹೋಗಲಿ ಬಿಡಿ ಅಂದೆ. ‘ಅದು ಸರಿ. ನೀವಾದ್ರೂ ಬುದ್ಧಿ ಕಲ್ಸ್ತೀರೇನೊ ಅಂದ್ಕೊಂಡಿದ್ದೆ. ನೀವೂ ಬಿಟ್ಟುಬಿಟ್ರಿ’ ಅಂದರು.
ಹೀಗೆ ವೆಂಕಟಸಾಮಿಯ ಪರಿಚವಾಯಿತು. ಏನೂ ಮಾಡದವನು, ಏನೂ ಇಲ್ಲದವನು, ಏನೂ ಅಲ್ಲದವನು. ಆದುದರಿಂದಲೇ ಅವನಿಗೆ ಬಿರೇಬೆತ್ಲೆ ಎಂಬುದು ಅನ್ವರ್ಥವಾಗಿತ್ತು. ಏನೂ ಮಾಡದವನು, ಏನೂ ಇಲ್ಲದವನು ಅನ್ನುವುದು ಸರಿ. ಏನೂ ಅಲ್ಲದವನು ಅನ್ನುವುದು ಸರಿಯಲ್ಲ ಅನ್ನಿಸಿತು. ಅವನು ಜಗಳಗಂಟನಾಗಿದ್ದ. ತಕರಾರಿನವನಾಗಿದ್ದ. ತಂಟೇಕೋರನಾಗಿದ್ದ. ದುಷ್ಟ ಗಂಡನಾಗಿದ್ದ, ಕೆಟ್ಟ ತಂದೆಯೂ ಆಗಿದ್ದ. ಮುಖ್ಯವಾಗಿ ಮನುಷ್ಯನಂತಲ್ಲದವನು ಅನ್ನಿಸಿಕೊಂಡಿದ್ದ.
ಈ ತೀರ್ಮಾನ ಅಥವಾ ಈ ನಿರ್ಣಯ ಸರಿಯೆ ಎಂಬ ಪ್ರಶ್ನೆ ಹುಟ್ಟುವಾಗ್ಗೆ ನಾನೂ ಹಾಗೆಯೇ ಅಂದುಕೊಂಡುದಾಗಿತ್ತು. ಇದನ್ನು ತೊಡೆದು ಹಾಕಲು ವೆಂಕಟಸಾಮಿಯಿಂದ ಅಂಥದು ಏನಾದರು ಆಗಿ, ಅದು ನನ್ನ ಗಮನಕ್ಕೆ ಬರಬೇಕಿತ್ತು. ಹೀಗಂದುಕೊಳ್ಳುವುದರಲ್ಲಿ ಅವನು ನನ್ನನ್ನು ಒಪ್ಪಿಸಬೇಕು, ನಾನು ಮೆಚ್ಚಬೇಕು ಅನ್ನುವ ಅಹಂಕಾರ ನನ್ನಲ್ಲಿದೆ ಅನ್ನಿಸಿತು.
ನಾನಿದ್ದೇನೆ. ಅವನಿರುತ್ತಾನೆ. ಹೀಗಿರುವ ಕಾಲದಲ್ಲಿ ಏನಾದರು ನಡೆಯಲಿದೆ. ಅವನು ಏನಾದರು ಮಾಡುವವನಿದ್ದಾನೆ. ಈ ಎಲ್ಲವನ್ನು ಅವಲೋಕಿಸುವ ಅವಕಾಶ, ಅವಕಾಶಗಳಿವೆ. ಆವರೆಗೆ ಕಾಯುವ ಅಂದುಕೊಂಡೆ. ಹೀಗಂದುಕೊಂಡಾಗ ಇದಕ್ಕೆಲ್ಲ ನನ್ನ ಸಮಯವನ್ನು ಮೀಸಲಿಡಬೇಕೆ ಅನ್ನಿಸಿತು. ಮೀಸಲಿಡಲು ಅವನು ಏನಂತಹ ಘನಂದಾರಿ ಕೆಲಸ ಮಾಡಿಯಾನು ಅಂದುಕೊಂಡೆ. ಮಾಡಬಾರದೇಕೆ ಎಂದಿತು ಮನಸ್ಸು. ನಾನು ಒಬ್ಬ ಸಾಮಾಜಿಕ. ಅವನೂ ನನ್ನಂತೆಯೆ ಸಾಮಾಜಿಕ. ಈ ಸಂಬಂಧದಲ್ಲಿ ನಾನು ಮಾಡಿದ್ದು ಅವನ ಮೇಲೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಪರಿಣಾಮ ಬೀರುತ್ತದೆ. ಹಾಗೆಯೆ ಅವನು ಮಾಡುವುದೂ ಸಹ. ಅಂದಮೇಲೆ ಈ ನಿಟ್ಟಿನಲ್ಲಿ ನನ್ನ ಸಮಯ ವ್ಯರ್ಥವಲ್ಲ, ಅವನು ನನ್ನ ಗಮನದ ಹತ್ತಿರದಲ್ಲೆ ಇರುತ್ತಾನೆ ಅಂದುಕೊಂಡೆ.
ಈ ನಂತರದ ದಿನಗಳಲ್ಲಿ ಒಂದು ದಿನ ಸ್ಕಾಲರ್‌ಶಿಪ್ ಮಂಜೂರಾಗಿ ಬಂದಿತು. ಕರೆದು ರುಜು ಮಾಡಿಸಿ, ಹಿಂದೆ ಅವನು ಜಬರದಸ್ತಿಯಲ್ಲ ಇಸಿದುಕೊಂಡಿದ್ದ ಇನ್ನೂರು ರೂಪಾಯಿಗಳನ್ನು ಜ್ಞಾಪಿಸಿ, ಈಗ ಬಂದಿರುವುದು ಎಪ್ಪತ್ತೈದೆಂದು ಹೇಳಿ, ಇದು ಜಾತ ಒಂದುನೂರ ಇಪ್ಪತ್ತೈದು ನಿನ್ನಿಂದ ಬರಬೇಕೆಂದು ಕ್ಲೇಮು ಮಾಡಿದೆ. ಕೊಡುವನೇನೊ ಎಂಬ ದೂರದ ನಿರೀಕ್ಷೆಯಲ್ಲಿ. ಆದರೆ ಅವನು ಹೂಡಿದ ತರ್ಕವೆ ಆ ನಿರೀಕ್ಷೆಗೆ ಮಣ್ಣು ಹಾಕಿತು. ‘ಕ್ಯಾಸ್ಟು ಸರ್ಟಿಪೇಟುಕೇ ಇನ್ನೂರಾಗದೆ. ಅದನ್ಯಾರು ಕೊಡೋರು’ ಅಂದ. ಅದಕ್ಕೂ ನನಗೂ ಸಂಬಂಧವಿಲ್ಲ ಅಂದೆ. ‘ನೀನು ಮಾಡ್ಸು ಅಂದಿದ್ದಕಲ್ವ ನಾ ಮಾಡ್ಸಂಗಾದ್ದು. ಅವತ್ತೆ ಹಿಂಗಿಂಗೆ ಅಂದಿದ್ರೆ ನಾ ಮಾಡ್ಸೋನಲ್ಲ. ತ್ಯೆಪ್ಪು ನಿಂದೆ. ನಾ ಯಾನೂ ಮಾಡಾಕಾದೋನಲ್ಲ. ನೀನು ಬತ್ತಾದೆ ಅಂದದ್ದು ಬಂದದೆ. ತಕ್ಕೊ ಆಸೆ’ ಎಂದು ಹೇಳಿದವನು ಒಂದು ಸೆಕೆಂಡೂ ನಿಂತೋನಲ್ಲ.
ಇದಾದ ಎರಡು ವಾರಕ್ಕೆಲ್ಲ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳು ಬಂದವು. ಅದೇ ಬೈರಪ್ಪ ಬಂದು ‘ಆ ಬಿರೇಬೆತ್ಲೋನು ತಾವ ಕಾಸುಗಳು ಓಡಾಡ್ತ ಅವೆ. ನಿಮ್ಕೇ ಓಟಂತೇಳಿ ಎಲ್ಲ ಪಾರ್ಟಿಯೋರ್ ತಟ್ಟುನಿಂಚಿ ಕಾಸುಗಳು ಕಿತ್ತವ್ನೆ. ನಿನ್ನ ಕಾಸುಗಳ್ನ ವಸೂಲು ಮಾಡ್ಕ’ ಎಂದು ಸಲಹೆ ಕೊಟ್ಟರು. ನೋಡಿಬಿಡೋಣ ಅಂದುಕೊಂಡು ಕೇಳಿದೆ. ಕೇಳಿದೆ ಏಕೆ ಅನ್ನಿಸುವಂತೆ ಪ್ರಶ್ನೆ ಎತ್ತಿ ನನ್ನ ಮೇಲೆ ಕುಕ್ಕಿದ. ‘ನೀನು ಎಲೆಕ್ಸನ್ನು ದೂಟಿಕೋತಿಯಲ್ವ? ಅದರಕ ಕಾಸುಗಳು ಬತ್ತಾವಲ್ವ? ಅದರಾಗ ನನಕೇನಾರ ಕೊಟ್ಟೀಯೇನು? ನೀನೆಂಗೆ ಕೊಡೋನಲ್ಲೋ ಹಂಗೇ ನಾನೂ ಕೊಡೋನಲ್ಲ. ಓಟಾಕ್ಸೊ ದೂಟಿ ನಿಂದು. ನಿನಕ ಕಾಸುಗಳು ಕೊಡ್ತಾರೆ. ಹಾಕೊ ದೂಟಿ ನಂದು. ನನಕ ಕೊಟ್ಟವ್ರೆ. ನಿನಕ ಸರಕಾರದೋರು ಕೊಟ್ರೆ ನನಕ ಇವ್ರು ಕೊಟ್ಟಿರೋದು. ನಿಂದು ನಿಂದು, ನಂದು ನಂದು’ ಎಂದ. ಓಟಿಗಾಗಿ ದುಡ್ಡು ತೆಗೆದುಕೊಳ್ಳುವುದು ತಪ್ಪು ಎಂಬಂಥ ನೀತಿ ಮಾತುಗಳು ಅವನ ಕಿವಿಗೆ ಹೋಗದಷ್ಟು ‘ಲೋಡ್’ ಆಗಿದ್ದ. ಸುಮ್ಮನಾದೆ. ಚುನಾವಣೆ ಮುಗಿದ ನಂತರದ ಒಂದು ವಾರದವರೆಗೆ ವೆಂಕಟಸಾಮಿ ‘ಟೈಟ್ ಮಾಸ್ಟರ್’ ಆಗಿಯೆ ಇದ್ದ. ಆಮೇಲಷ್ಟೆ ಅವನು ಆ ‘ಟೈಟ’ನ್ನು ಕಳೆದುಕೊಂಡಿದ್ದು.
ಕಳೆದ ಹದಿನೈದು, ಇಪ್ಪತ್ತು ದಿನಗಳಿಂದ ವೆಂಕಟಸಾಮಿಗೆ ಇಲ್ಲದಿದ್ದ ಬಿಡುವು ಸಿಕ್ಕಿತ್ತು. ವಾರದಲ್ಲಿ ಎರಡು ದಿನ ಟ್ರಾಕ್ಟರಿಗೆ ಮರಳು ಲೋಡು ಮಾಡಲು, ಡ್ರೈವ್ ಮಾಡಲು ಹೋಗುತ್ತಿದ್ದನಂತೆ. ಉಳಿದೈದು ದಿನ ‘ಗುಂಡಿ’ನೊಂದಿಗೆ ರೆಸ್ಟು. ಈ ದಿನಚರಿಯಲ್ಲಿದ್ದವನು ಒಂದು ತಿಂಗಳು ನಾಪತ್ತೆಯಾಗಿದ್ದ. ಈ ತಿಂಗಳಿನಲ್ಲಿ ಅವನ ಮಗ ಆರು ದಿನವಷ್ಟೆ ಶಾಲೆಗೆ ಬಂದಿದ್ದ. ವಿಚಾರಿಸಲಾಗಿ ಅವನ ತಾಯಿಗೆ ಸೀರಿಯಸ್ ಕಾಯಿಲೆ ಆಗಿತ್ತಂತೆ. ಅವಳ ಜೊತೆಗೆ ಆಸ್ಪತ್ರೆಯಲ್ಲಿ ಇದ್ದೆ ಎಂದು ಹೇಳಿದ. ಏನಾಗಿತ್ತೆಂದು ಸ್ಪಷ್ಟವಾಗಿ ಹೇಳುವುದು ಅವನಿಂದ ಅಗಲಿಲ್ಲ.
ಒಂದು ದಿನ ವೈದ್ಯ ಮಿತ್ರ ವೆಂಕಟಾಚಲ ಫೋನು ಮಾಡಿ, ನಿಮ್ಮ ದೋಸ್ತನ ಕಥೆ ಹೇಳೋದಿದೆ ಬನ್ನಿ ಎಂದು ಕರೆದರು. ಯಾವ ದೋಸ್ತ ಎಂದೆ. ಅದೇ ನಿಮ್ಮ ವೆಂಕಟಸಾಮಿ ಅಂದರು. ಅವರ ಆಸ್ಪತ್ರೆ ಬಾಗಿಲು ಹಾಕುವ ವೇಳೆಗೆ ಹಾಜರಾದೆ.
ನಿಮ್ಮ ವೆಂಕಟಸಾಮಿ ಹೆಂಡತೀನ ಕರೆತಂದು ಇಲ್ಲಿ ಅಡ್ಮಿಟ್ ಮಾಡಿದ್ದ. ಎಲ್ಲೆಲ್ಲೋ ತೋರಿಸಿ ಕಡೆಗೆ ಇಲ್ಲಿಗೆ ಕರೆತಂದಿದ್ದ. ತುಂಬಾ ಸೀರಿಯಸ್ ಆಗಿದ್ದಳು. ಇಲ್ಲಿ ಆಗೋಲ್ಲ ಅಂದೆ. ಕೇಳಲಿಲ್ಲ. ನಸೀಬು ಇದ್ದಂತೆ ಆಗುತ್ತೆ ಎಂದು ಗೋಗರೆದ. ಆಕೆಯ ಮುಖನೋಡಿ ಅಡ್ಮಿಟ್ ಮಾಡಿಕೊಂಡೆ. ನನ್ನ ಮತ್ತವಳ ಅದೃಷ್ಟ ಚೆನ್ನಾಗಿತ್ತು. ಅವಳ ಮಗ ತಾಯಿಯಿಲ್ಲದ ತಬ್ಬಲಿ ಆಗೋದು ತಪ್ಪಿತು. ಇದಲ್ಲ ಕಥೆ. ವೆಂಕಟಸಾಮಿ ಏನೋ ಕೊಟ್ಟೆ ಅನ್ನೋದಿಕ್ಕೆ ಒಂದಷ್ಟು ಕೊಟ್ಟು ಡಿಸ್‌ಚಾರ್ಜ್ ಮಾಡಿಸಿಕೊಂಡು ಹೋದ. ಮೊನ್ನೆ ಬೇದಿ ಅಂತ ಬಂದಿದ್ದ. ಆಗ ಅವನ ಹೆಂಡತಿಯೂ ಜೊತೆಗಿದ್ದಳು. ಆಕೆಯನ್ನು ನೋಡಿ, ನಿನ್ನ ಅದೃಷ್ಟ ಚೆನ್ನಾಗಿತ್ತು ಬದುಕಿಕೊಂಡೆ. ಇಲ್ಲೇ ಏನಾದರು ಪ್ರಾಣ ಹೋಗಿದ್ದರೆ ಬೇಜಾರಾಗುತ್ತಿತ್ತು ಎಂದೆ. ಆಗವನು, ಜೀವ ಹೋಗಿದ್ದರೆ ನೀನು ಎರಡು ಲಕ್ಷ ಕೊಡ್ತಿದ್ದೆ ಅಂದ. ಆಶ್ಚರ್ಯ ಆಯ್ತು. ನಾನು ಯಾಕೆ ಕೊಡಬೇಕಿತ್ತು ಅಂದೆ. ಅವಳು ಸತ್ತಿದರೆ ನಿನ್ನ ಸುಮ್ಮನೆ ಬಿಡ್ತಿದ್ನ ಅಂದ. ನನಗೆ ಮಾತು ಹೊರಡಲಿಲ್ಲ. ಅವನು ಮಾತ್ರೆ ತರಲು ಹೋದಾಗ, ಏನಮ್ಮ ಹೀಗಂತಾನೆ ಎಂದು ಆಕೆಯನ್ನು ಕೇಳಿದೆ. ಅದಕ್ಕವಳು ‘ಕಾಸುಗಳಂದ್ರೆ ‘ಅದ್ನ’ ತಿನ್ನಾಕೂ ಸರೆ. ಯಾರಾರ ತಕ್ಕೊಂತೀನಿ ಅಂದ್ರೆ ನನ್ನೂ ಮಾರಿಬಿಡೋನೆ. ಅಂತ ಲುಚ್ಚ ಅವನು. ದೇವರಂಗೆ ನನ್ನ ಜೀವ ಉಳ್ಸಿ ನನ್ ಮಗ ತಬ್ಲಿ ಆಗೋದ್ನ ತಪ್ಪಿಸ್ದೆ’ ಎಂದು ಕಣ್ಣೊರೆಸಿಕೊಂಡಳು. ಇದು ನಿಮ್ಮ ವೆಂಕಟಸಾಮಿ ಅಂದರು.
ಅವನು ತೊಲಗಿದ ನಂತರ ನನ್ನ ಸಹ ಶಿಕ್ಷಕರು ಬಂದು, ಅವನಿಗೆ ಸೊಪ್ಪು ಹಾಕಬಾರದಿತ್ತು ಎಂದರು. ಹಾಳಾಗಿ ಹೋಗಲಿ ಬಿಡಿ ಎಂದೆ. ನಾನು ಅವರಿಗೆ ಬಿಡಿ ಎಂದೆ. ನಾನೂ ಬಿಟ್ಟೆ. ಆದರೆ ಅವನು ಬಿಡಲಿಲ್ಲ. ‘ಮೇಷ್ಟ್ರು ತಿಂದಾಕಿದ ದುಡ್ನ ಕಕ್ಕುಸ್ದೆ’ ಎಂದು ಊರಿನಲ್ಲಿ ಹೇಳಿಕೊಂಡ. ಅವನು ಬೊಗಳೋನು. ಬೋಗುಳಿಕೊಳ್ಳಲಿ ಎಂದು ಸುಮ್ಮನಾದೆ. ಆದರೆ ಇನ್ನೊಂದು ಸಂಕಟ ಎದುರಾಯಿತು.
ಪುಣ್ಯಾತ್ಮರೊಬ್ಬರು ಬಡ ಮಕ್ಕಳಿಗೆ ಕೊಡಲು ಒಂದಷ್ಟು ಬಟ್ಟೆ ಕೊಡಿಸಿದ್ದರು. ಆಗ ಅವರನ್ನೇ ಬೇಡಿ ಹತ್ತು ಸೀರೆಗಳನ್ನು ತೆಗೆಸಿಕೊಂಡೆ. ಅದರಲ್ಲಿ ವೆಂಕಟಸಾಮಿಯ ಹೆಂಡತಿಗೂ ಒಂದು ಸೀರೆ ಕೊಡಬೇಕೆನ್ನಿಸಿ ಆಕೆಗೆ ಹೇಳಿ ಕಳುಹಿಸಿದೆ. ಬಂದಳು. ಸೀರೆಯನ್ನು ಕೊಟ್ಟೆ. ಜೊತೆಗೆ ಅವಳ ಮಗನಿಗೂ ಕೊಟ್ಟೆ. ಆಗ ಆಕೆ ‘ಅವ್ನ ಮಾತುಗಳನ ಮನಸುನಾಗ ಮಡಿಕ್ಕೊ ಬ್ಯಾಡ ಸಾ. ಊರುಕೇ ಮೂರೂ ಬಿಟ್ಟ ನನ ಬಟ್ಟೆ ಅವ್ನು.. ಇದ್ರೆ ಅವನಕೂ ಒಂದು ಸೊಗಬಟ್ಟೆ ಕೊಟ್ಟು ಪುಣ್ಯಕಟ್ಕೊ’ ಎಂದು ಕೇಳಿಕೊಂಡಳು. ಇಲ್ಲ ಅನ್ನಲಾಗದೆ ಕೊಟ್ಟೆ. ಅವಳು ಹೋಗುತ್ತಲೆ ನನ್ನ ಸಹೋದ್ಯೋಗಿ ರಾಮರತ್ನ ಅವನಿಗೆ ಮಾತ್ರ ಕೊಡಬಾರದಿತ್ತು ಸಾರ್ ಅಂದರು. ಕ್ಷಣ ಸುಮ್ಮನಿದ್ದು, ‘ನಾನು ಕೇಳಿದಾಗ ಅವರು ಬಟ್ಟೆಗಳನ್ನು ಕೊಡಿಸಬಾರದಿತ್ತಮ್ಮ. ಅವರು ಕೊಡಿಸಿಬಿಟ್ಟರಲ್ಲ. ಏನು ಮಾಡಲಿ’ ಅಂದೆ. ಆಕೆ ನಕ್ಕರು. ಆ ನಗೆಗೆ ಅರ್ಥ ಹುಡುಕುತ್ತ ಕುಳಿತೆ.
ವೆಂಕಟಸಾಮಿ ಬರುತ್ತಾನೆ. ಇಂದು ಅಥವಾ ನಾಳೆ, ಇನ್ನೊಂದು ದಿನ ಅನ್ನಿಸಿತು. ಆದರೆ ಏಕೆಂದು ತಿಳಿಯಲಿಲ್ಲ. ಬರುತ್ತಾನೆ ಅನ್ನಿಸುತ್ತಲೇ ಇತ್ತು. ಏಕೆ ಬಂದಾನು, ಹೇಗೆ ಬಂದಾನು ಅಂದುಕೊಳ್ಳುತ್ತ, ಅವನು ಬರುವುದಕ್ಕಾಗಿ ಕಾಯತೊಡಗಿದೆ. ಇದು ವಿಚಿತ್ರ ಅನ್ನಿಸಿತು. ಏಕೇ ಬರಲಿ, ಹೇಗೇ ಬರಲಿ ಅವನು ಬರಲಿ ಅಂದುಕೊಂಡೆ. ಪಾಠ ಮಾಡುತ್ತಿರುವಾಗ ಇದ್ದಕಿದ್ದಂತೆ ಅವನು ಬಂದುಬಿಟ್ಟಂತಾಗಿ ಬಾಗಿಲತ್ತ ನೋಡುತ್ತಿದ್ದೆ. ಹತ್ತಾರು ದಿನಗಳು ಕಳೆದರೂ ಈ ಅನಿಸಿಕೆ, ನಿರೀಕ್ಷೆ ದೂರವಾಗದೆ ಹತ್ತಿರಾಗುತ್ತಲೆ ಇತ್ತು. ಮನೆಯಲ್ಲಿದ್ದಾಗಲೂ ಹೀಗೆಯೆ. ಬಾಗಿಲಿಗೆ ಬಂದು ಬಾಗಿಲು ಬಡಿದಂತೆ, ಒಳಗೆ ಬರಲೆ ಎಂದು ಕೇಳಿದಂತೆ, ಯಾರೋ ಬಂದು ಬಾಗಿಲು ಬಡಿದರೂ ಅವನೇ ಅನ್ನುವಂತೆ ಭಾಸವಾಗುತ್ತಿತ್ತು. ಈ ಗುಂಗು, ಈ ಭ್ರಮೆ ಏಕೆ ಅನ್ನುವುದು ಅರ್ಥವಾಗದಾಗಿತ್ತು. ಅವನು ಬರುತ್ತಾನೆ, ಬಂದಾಗ ನಮ್ಮಿಬ್ಬರ ನಡುವೆ ಏನೋ ನಡೆಯಲಿದೆ ಅನ್ನಿಸುತ್ತಿದ್ದರೂ ಅದೇನೆಂದು ತಿಳಿಯುತ್ತಿರಲಿಲ್ಲ.
ಇದೊಂದು ಕಾಟವಾಗಿ ಪರಿಣಮಿಸಿತ್ತು. ತಡೆಯಲಾಗದೆ ಅವನ ಗುಡಿಸಲಿಗೇ ಹೋದೆ. ಅವನಿರಲಿಲ್ಲ. ಹೆಂಡತಿ ಅವನೇನು ಮಾಡಿರುವನೊ ಎಂಬ ಆತಂಕದಲ್ಲಿ ಏಕೆಂದು ಕೇಳಿದಳು. ಸುಮ್ಮನೆ ಅಂದು ಹೊರಟು ಬಂದೆ. ಬಾಗಿಲಿಗೆ ಬಂದು ನಿಂತು ನೋಡುತ್ತಿದ್ದವಳ ಕಣ್ಣುಗಳಲ್ಲಿ ಗಾಬರಿ ತುಂಬಿತ್ತು.
ವೆಂಟಸಾಮಿ ಬರುವನೆಂದುಕೊಂಡಂತೆಯೇ ದಿನಗಳು ಕಳೆಯುತ್ತಿದ್ದವು. ಟ್ರಾಕ್ಟರ್ ಕೆಲಸದ ಮೇಲೆ ಹೋದರೆ ಈ ದಿನಕ್ಕೇ ಬರುತ್ತಾನೆ ಎಂದು ಹೇಳಲಾಗದು. ವಾರವೂ ಆದೀತು, ಹದಿನೈದು ದಿನಗಳೂ ಆದಾವು ಎಂದಿದ್ದಳು ಅವನ ಹೆಂಡತಿ. ಈ ಮಾತು ಕೇಳಿದ ಮೇಲೊಂದು ದಿನ ಆಕೆ ಶಾಲೆಗೆ ಬಂದು, ತಾನು ಬರುವುದು ಇನ್ನಷ್ಟು ದಿನಗಳಾದೀತು. ಆವರೆಗೆ ತವರು ಮನೆಗೆ ಹೋಗಿರು ಎಂದು ಹೇಳಿ ಕಳಿಸಿದ್ದಾನೆ. ಅಲ್ಲಿಗೆ ಹೊರಟಿದ್ದೇನೆ. ಇಲ್ಲಿ ಮಗನೊಬ್ಬನನ್ನೆ ಬಿಟ್ಟು ಹೋಗಲು ಅನುಕೂಲವಿಲ್ಲ. ಆದುದರಿಂದ ಮಗನಿಗೆ ರಜೆ ಕೊಡಬೇಕೆಂದು ಆಕೆ ಕೇಳಿಕೊಂಡಳು. ಆದಷ್ಟು ಬೇಗ ಬಂದು ಅವನನ್ನು ಶಾಲೆಗೆ ಕಳುಹಿಸುವಂತೆ ಹೇಳಿದೆ.
ತರಗತಿಯಲ್ಲಿ ಹಾಜರಾತಿ ತೆಗೆದುಕೊಳ್ಳುವಾಗ ಮಗನೊಂದಿಗೆ ವೆಂಕಸಾಮಿಯ ನೆನಪಾಗುತ್ತಿದ್ದರೂ ಆ ಹುಡುಗ ಬರುವ ದಿನದ ನಿರೀಕ್ಷೆಯಲ್ಲಿ ದಿನಕ್ಕೊಮ್ಮೆ ಅವನು ಊರಿನಿಂದ ಬಂದನೇನ್ರೋ ಎಂದು ಮಕ್ಕಳನ್ನು ಕೇಳಿ ಇಲ್ಲ ಎಂಬ ಉತ್ತರವನ್ನು ಪಡೆಯುತ್ತಿದ್ದೆ.
ಬೈರಪ್ಪ ಬಂದು ನಿನ್ನೆ ರಾತ್ರಿ ವೆಂಕಟಸಾಮಿ ತೀರಿಕೊಂಡ ಅಂದರು. ಏಕೆ, ಏನಾಗಿತ್ತು ಎಂದೆ ಆತಂಕಗೊಂಡು. ಆಕ್ಸಿಡೆಂಟು ಅಂದರು. ಹೇಗಾಯಿತೆಂದು ಕೇಳುವ ಮೊದಲೆ, ಕುಡಿದು ಟ್ರಾಕ್ಟರು ಓಡಿಸಿ ಆಕ್ಸಿಡೆಂಟು ಮಾಡಿದ. ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿಯಲ್ಲೆ ಉಸಿರೆಳೆದ ಎಂದು ಲೊಚಗುಟ್ಟಿದರು. ಸುದ್ದಿ ಕೇಳಿ ಮನಸ್ಸಿಗೆ ಕಸಿವಿಸಿಯಾಯಿತು. ಮಾರನೇ ದಿನ ಅವನಿಗೆ ದೂರದ ಸಂಬಂಧಿಯೊಬ್ಬ ಸಿಕ್ಕಿ, ವೆಂಕಟಸಾಮಿ ಟ್ರಾಕ್ಟರ್ ಓಡಿಸುತ್ತಿದ್ದ. ಕುಂಟು ಕಾಲಿನ ಎಳೆಗರುವೊಂದು ರಸ್ತೆ ದಾಟುತ್ತಿತ್ತು. ಮೊಬೈಲ್ ಫೋನನ್ನು ಕಿವಿಗಿಟ್ಟುಕೊಂಡ ಲಾರಿ ಡ್ರೈವರ್ ಕರುವನ್ನು ಗಮನಿಸದೆ ವೇಗವಾಗಿ ಓಡಿಸುತ್ತಿದ್ದ. ಇವನು ಇಳಿದು ಹೋಗಿ ಕರುವನ್ನು ಓಡಿಸಬೇಕೆಂಬ ಆತುರದಲ್ಲಿ ಟ್ರಾಕ್ಟರನ್ನು ರಸ್ತೆಯಲ್ಲಿ ನಿಲ್ಲಿಸಿ ಇಳಿಯುತ್ತಿದ್ದಾಗ ಲಾರಿ ಡ್ರೈವರು ಕರುವನ್ನು ಕಂಡು ಗಾಬರಿಯಾಗಿ ಅದನ್ನು ಉಳಿಸಲು ಹೋಗಿ ಟ್ರಾಕ್ಟರಿಗೆ ಗುದ್ದಿದ. ಆಗ ವೆಂಕಟಸಾಮಿ ಉರುಳಿಬಿದ್ದು ತಲೆಗೆ ಪೆಟ್ಟಾಗಿ ಹೋಗಿಬಿಟ್ಟ ಎಂದು ಹೇಳಿ ಅವನು ಅತ್ತ ಹೋಗುತ್ತಲೆ, ಇದನ್ನೆಲ್ಲ ಕೇಳಿಸಿಕೊಳ್ಳುತ್ತ ನಿಂತಿದ್ದ ನಮ್ಮ ಶಾಲೆಯ ಅಡುಗೆಯಾಕೆಯ ಗಂಡ, “ಹಾಗಲ್ಲ. ಇವನು ಸಿಂಗಲ್ ಲೈಟಿನಲ್ಲಿ ಹೋಗುತ್ತಿದ್ದ. ಲಾರಿಯೋನೂ ಸಿಗಲ್ ಲೈಟಿನಲ್ಲೆ ಬರುತ್ತಿದ್ದ. ಇಬ್ಬರದೂ ಲೆಫ್ಟ್ ಲೈಟೆ, ಹಾಗಾಗಿ ಆಕ್ಸಿಡೆಂಟ್ ಆಗಿದೆ. ಇವನು ಸತ್ತ. ಲಾರಿ ಡ್ರೈವರನ ಎರಡೂ ಕಾಲುಗಳು ಹೋಗಿವೆ” ಅಂದ. ಯಾಕೊ ಏನೊ ಅವನಿಗೆ ಸಂತಾಪ ಸೂಚಿಸಬೇಕು ಅನ್ನಿಸಿತು. ಮಕ್ಕಳು ಸಂಜೆಯ ಪ್ರಾರ್ಥನೆಗೆ ಸೇರಿದಾಗ ವಿಷಯ ಹೇಳಿ ಒಂದು ನಿಮಿಷದ ಮೌನಾಚರಣೆಗೆ ಸೂಚನೆ ಕೊಟ್ಟೆ.
ಇದಾದ ಹದಿನೈದನೆಯ ದಿನದಂದು ಅಂಚೆಯಲ್ಲೊಂದು ಕಾಗದ ಶಾಲೆಯ ವಿಳಾಸಕ್ಕೆ ಬಂದಿತು. ಅದು ವೆಂಕಟಸಾಮಿಯ ಹೆಂಡತಿಯ ಊರಿನ ಶಾಲೆಯಿಂದ ಬಂದಿತ್ತು. ಒಡೆದು ಓದಿದೆ. ಆ ಶಾಲೆಯ ಮುಖ್ಯೋಪಾಧ್ಯಾರು ‘ಚಿನ್ನವೆಂಕಟಸ್ವಾಮಿ ಬಿನ್ ದಿವಂಗತ ವೆಂಕಟಸ್ವಾಮಿ ನಮ್ಮ ಶಾಲೆಗೆ ಹಾಜರಾಗುತ್ತಿರುತ್ತಾನೆ. ಇವನ ದಾಖಲೆಗೆ ಅಗತ್ಯವಾದ ವರ್ಗಾವಣೆ ಪತ್ರ ಹಾಗು ಪ್ರಗತಿ ಪತ್ರಗಳೊಂದಿಗೆ ಸುವರ್ಣ ಆರೋಗ್ಯ ಕಾರ್ಡನ್ನೂ ಕಳುಹಿಸಲು ಕೋರಲಾಗಿದೆ’ ಎಂದು ಬರೆದಿದ್ದರು. ದಾಖಲಾತಿ ಪಂಜಿಯನ್ನು ತೆಗೆದು ವರ್ಗಾವಣೆ ಪತ್ರ ಬರೆಯುತ್ತ ಎಚ್ಚರಿಕೆಯಿಂದ ಗಮನಿಸಿದೆ. ವೆಂಕಟಸ್ವಾಮಿ ಎಂದು ಬರೆದು, ವೆಂಕಟಸಾಮಿ ಎಂದು ತಿದ್ದಿ ಸಹಿ ಹಾಕಿದ್ದಂತೆ ಚಿನ್ನವೆಂಕಟಸ್ವಾಮಿ ಎಂದು ಬರೆದುದನ್ನು ಚಿನ್ನವೆಂಕಟಸಾಮಿ ಎಂದು ತಿದ್ದಿ ಆಗಿನ ಮುಖ್ಯೋಪಾಧ್ಯಾಯರು ಸಹಿ ಹಾಕಿದ್ದರು. ಇದನ್ನು ಗಮನಿಸಿ ಅದರಂತೆಯೇ ಬರೆಯಲು ಪೆನ್ನು ತೆರೆದಾಗ ತಲೆಯಲ್ಲಿ ನಾಯಿಯ ಕಾಲ್ಕೆರೆತ ಆರಂಭವಾಯಿತು. ಇಲ್ಲಿ ಚಿನ್ನವೆಂಕಟಸಾಮಿಯೂ ಅಪ್ಪನಂತೆ ಆಗುತ್ತಾನೆ ಎಂಬ ಸೂಚನೆಯನ್ನ ಇಟ್ಟಿರುವುದೆ? ನಾಯಿ ಕಾಲ್ಕೆರತವನ್ನು ನಿಲ್ಲಿಸಲಿಲ್ಲ. ವರ್ಗಾವಣೆ ಪತ್ರವನ್ನು ಬರೆಯುವುದಾಗಲಿಲ್ಲ. ಆದರೆ ಬರೆಯಲೇಬೇಕಿತ್ತು, ಕಳುಹಿಸಲೇ ಬೇಕಿತ್ತು.
ಯೋಚಿಸಿದಷ್ಟೂ ಗೋಜಲು. ಈ ಸ್ಥಿತಿಯಲ್ಲೆ ವರ್ಗಾವಣೆ ಪತ್ರ ಬರೆಯಲು ಕುಳಿತೆ. ಬರೆಯುತ್ತಿದ್ದ ಪ್ರತಿ ಕ್ಷಣದಲ್ಲೂ ಶಿಕ್ಷಣದ ಉದ್ದೇಶದಂತೆ ಚಿನ್ನವೆಂಕಟಸಾಮಿ ಆಗಲೆಂದು ಮನಸ್ಸು ಹಾರೈಸುತ್ತಿತ್ತು.
*****
‘ನಾನು ಮೆಚ್ಚಿದ ನನ್ನ ಕಥೆ’ ಯಾವುದು? ಏಕೆ? ಎಂದು ಹೇಳಲಾಗದವರಲ್ಲಿ ನಾನೂ ಒಬ್ಬ. ಸಂಪಾದಕರಲ್ಲಿ ಒಬ್ಬನಾಗಿ ನಿರ್ಣಯಿಸಿದ ಗೆರೆಯನ್ನು ಅಳಸಿ ಹಾಕಲಾಗದು. ಹಾಗೆಂದು ಬರೆಯಲೂ ಆಗದಾಗಿ ಒದ್ದಾಡಿದ್ದೇನೆ.
ಕಥೆ ಹೋಗೋ ನನ್ನಲ್ಲಿ ಸಂಭವಿಸಿಬಿಟ್ಟಿತು. ಏಕೆ ಸಂಭವಿಸಿತು ಎಂದು ಹೇಳಲಾರೆ. ಈ ಕಥೆಯ ವೆಂಕಟಸಾಮಿ ‘ಬಿರೇಬೆತ್ಲೆ’ಯವನು ಅನ್ನಿಸಿದರೂ ಸಾಮಾಜಿಕನಾಗಿ ಅವನು ಏನೋ ಆಗಿರುವವನು. ಅವನು ಏನು ಎಂಬುದನ್ನು ಕಥೆಯೇ ಹೇಳುವುದೆಂದು ಭಾವಿಸಿದ್ದಾನೆ. ಸಾಮಾಜಿಕವಾಗಿ ಯಾರೂ ಕೆಲಸಕ್ಕೆ ಬಾರದವರಲ್ಲ. ಯಾವ ಕೆಲಸಕ್ಕೆ ಬರುತ್ತಾರೆ ಎಂಬುದು ಆ ವ್ಯಕ್ತಿಯ ವ್ಯಕ್ತಿತ್ವದಲ್ಲಿಯೇ ಕಂಡುಕೊಳ್ಳಬೇಕು. ಹೀಗೆ ಕಂಡುಕೊಳ್ಳಬೇಕಾದವನು ವೆಂಕಟಸಾಮಿ. ಅವನ ನಡವಳಿಕೆಯೂ ತೆರೆದಂತೆ ಕಾಣುತ್ತದೆ ಅನ್ನಿಸಿದರೂ ಅದು ತೆರೆದುಕೊಳ್ಳದೆ ಹುಡುಕಿಕೊಳ್ಳಲು ದೂಡುತ್ತದೆ. ಆ ದೂಡಿಕೆಯಲ್ಲಿ ಕಾಣುವುದು ವೆಂಕಟಸಾಮಿಯನ್ನಲ್ಲ, ಅವನಂತಹ ಅನೇಕರನ್ನು. ಆ ಅನೇಕರನ್ನು ಹುಡುಕಿಕೊಳ್ಳಲು ನನಗೆ ಈ ಕಥೆ ನೆರವಾಯಿತೆಂದು ಮೆಚ್ಚುಗೆಯಾಯಿತೆ ಎಂದರೆ ಹೌದು ಎಂಬುದು ಅರೆದಿಟ. ಉಳಿದರ್ಧ ಯಾವುದು? ವೆಂಕಟಸಾಮಿ ಮತ್ತು ಅವನಂತಹವರು ನನ್ನೊಂದಿಗೆ ಮುಂದುವರೆಯದೆ ಹೋದ್ದದ್ದು ಇದ್ದೀತು. ಅವರೆಲ್ಲರ ಜೊತೆಗೂಡುವ ಅವಕಾಶವನ್ನು ಮುಂದಿನ ದಿನಗಳಲ್ಲಿ ಅಡಗಿಸಿಟ್ಟ ಕಾಲವನ್ನು ಸಂಧಿಸುವ ಸಲುವಾಗಿ ಪಯಣಿಗನಾಗಿರುವುದರಿಂದ ಈ ಕಥೆಯನ್ನು ಆಯ್ದುಕೊಂಡಿದ್ದೇನೆ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ