ಇಷ್ಟು ಸುಖ ಕೊಡುವ ಸಂಬಂಧ ನನ್ನ ಪಾಲಿಗೆ ಎಂದೆಂದಿಗೂ ಇಲ್ಲವಾಗುವುದು ಎಂಬ ಅರಿವಿನಿಂದ ನಾನು ತೀರಾ ವಿಹ್ವಲಳಾಗುತ್ತಿದ್ದೆ. ಆದರೆ ಅವನು? ಅವನ ಪಾಲಿಗೆ ಇದೇ ಕೊನೆಯಲ್ಲವಲ್ಲ? ಇಷ್ಟಾಗಿ ನನ್ನ ವೈಯಕ್ತಿಕ ನೋವುಗಳನ್ನು ಅವನೊಂದಿಗೆ ಹೇಳಿಕೊಳ್ಳುವುದಾಗಲೀ, ನನ್ನನ್ನೇ ಮದುವೆಯಾಗು ಎಂದು ಅತ್ತು ಕರೆಯುವುದಾಗಲೀ ನನಗೆ ಸಾಧ್ಯವಿರಲಿಲ್ಲ. ನಮ್ಮ ಸಂಬಂಧ ಎಲ್ಲ ಸಾಮಾನ್ಯ ಸಂಬಂಧಗಳಂತಾಗಿ ಬಿಡುವುದೂ ನನಗೆ ಬೇಕಾಗಿರಲಿಲ್ಲ. ಪ್ರೀತಿಗೂ ಮದುವೆಗೂ ಗಂಟು ಹಾಕುವುದರಲ್ಲಿ ಅರ್ಥವಿಲ್ಲ ಎಂದೇ ನನಗನ್ನಿಸುತ್ತಿತ್ತು. ಅವನಷ್ಟೇ ನಿರ್ಲಿಪ್ತಿ ನನಗೂ ಸಾಧ್ಯವಾಗುತ್ತಿತ್ತು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಕೆ. ಆರ್. ಸಂಧ್ಯಾರೆಡ್ಡಿ ಕತೆ “ಹೀಗೇ ಒಂದು ಪ್ರೇಮದ ಕಥೆ”
ವಾರದ ಕೊನೆಯ ದಿನಗಳು ನಗರದ ಪ್ರೇಮಿಗಳಿಗೆ ಬಹಳ ರೋಚಕವಾಗಿರುತ್ತವೆ. ನಮಗೂ ಹಾಗೆಯೇ ಇತ್ತಾದರೂ ನಮ್ಮ ಪ್ರೇಮ ಇತರೆಲ್ಲರ ಪ್ರೇಮಕ್ಕಿಂತ ಹೆಚ್ಚು ರೋಚಕವಾಗಿದೆ ಎಂದೇ ನನಗನ್ನಿಸುತ್ತಿತ್ತು. ಹೀಗನ್ನಿಸುವುದಕ್ಕೆ ಹಲವು ಕಾರಣಗಳಿರಬಹುದು. ಪಿ.ಯು.ಸಿ.ಯಿಂದಾರಂಭಿಸಿ ಕಾಲೇಜು ಮುಗಿದು, ಪೋಸ್ಟ್ ಗ್ರಾಜುಯೇಷನ್ ಮುಗಿದು ಕೆಲಸ ಸಿಗದೆ ಮನೆಯಲ್ಲಿ ಒಂದರೆಡು ವರ್ಷ ಕಳೆಯುವವರೆಗೂ ಪ್ರೀತಿಸಬೇಕು ಅನ್ನಿಸುವಂಥ ಒಬ್ಬನೇ ಒಬ್ಬ ಹುಡುಗ ಸಿಕ್ಕಿರಲಿಲ್ಲ. ಕಾಲೇಜು ದಿನಗಳಲ್ಲಿ ಹುಡುಗರೆಲ್ಲ ತೀರಾ ಎಳಸು ಅನಿಸುತ್ತಿತ್ತು. ಪೋಸ್ಟ್‌ಗ್ರಾಜುಯೇಶನ್ ದಿನಗಳಲ್ಲಿ ಒಬ್ಬನೂ ಸ್ಮಾರ್ಟ್ ಅನ್ನಿಸಿರಲಿಲ್ಲ. ಮನೆಯಲ್ಲಿದ್ದ ಒಂದೆರಡು ವರ್ಷ ನಾನು ನೋಡಿದ ಹುಡುಗರೆಲ್ಲಾ ವರದಕ್ಷಿಣೆಯ ಲೆಕ್ಕದಲ್ಲಿ ಹುಡುಗಿಯ ಸಕಲ ಗುಣಗಳನ್ನು ಅಳೆಯುವ `ಗಂಡು’ಗಳು ಮಾತ್ರ ಆಗಿದ್ದರು. ಅತ್ತ ಕೆಲಸವೂ ಇಲ್ಲ ಇತ್ತ ಮದುವೆಯೂ ಆಗಿರಲಿಲ್ಲ. ವಯಸ್ಸು ಯಾರಿಗೆ ಕಾಯುತ್ತದೆ? ಮಳೆಗಾಲದಲ್ಲಿ ಹರಿದು ಹೋಗುವ ನೀರಿನಂತೆ ಅದು ಸಲೀಸಾಗಿ ಇಪ್ಪತ್ತೈದು ದಾಟಿತ್ತು. ಹುಡುಗ ಸಿಗುವುದಕ್ಕಿಂತ ಕೆಲಸ ಸಿಗುವುದು ಸುಲಭ ಅಂತ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಸಿಕ್ಕ ಮೇಲೆ ಅನ್ನಿಸಿತ್ತು. ಕೆಲಸಕ್ಕೆ ಸೇರಿದ ಹದಿನೈದು ದಿನಗಳಲ್ಲೇ ಅವನ ಪರಿಚಯವಾಗಿ ಮೊದಲ ನೋಟದಿಂದಲೇ ಅವನು ನನ್ನ ಎದೆಯಲ್ಲಿ ಬೇರೂರಿ ಪಲ್ಲವಿಸತೊಡಗಿದ. ನಮ್ಮ ಪ್ರೀತಿ ಹೆಚ್ಚು ರೋಚಕ ಅನ್ನಿಸುವುದಕ್ಕೆ ಹೀಗೆ ಇಪ್ಪತ್ತೆÊದರ ಅಂಚಿನಲ್ಲೂ ನನಗೆ ನಾನು ಕನಸಿದಂತಹ ಹುಡುಗನೇ ಸಿಕ್ಕಿದ ಎಂಬುದು ಒಂದು ಕಾರಣವಾದರೆ, ತಲೆ ಹೃದಯಗಳೇನೂ ಇಲ್ಲದ ಸಾಮಾಜಿಕ ಕೌಟುಂಬಿಕ ನಿರ್ಬಂಧಗಳನ್ನು ಲೆಕ್ಕಿಸದೆ ಮುಂದುವರಿಯುವ ಪ್ರವೃತ್ತಿ ನಮ್ಮಿಬ್ಬರಿಗೂ ಇತ್ತು ಎಂಬುದು ಇನ್ನೊಂದು ಕಾರಣ. ನಮ್ಮ ಪ್ರೇಮಕ್ಕೆ ಸ್ವರ್ಗದ ವೈಭವವನ್ನು ತರುವಷ್ಟು ಹಣಕಾಸಿನ ಅನುಕೂಲ ಅವನಿಗೆ ಇತ್ತೆಂಬುದು ಇನ್ನೊಂದು ಕಾರಣ. ಪ್ರೇಮದ ಪ್ರತಿಕ್ಷಣವನ್ನೂ ನಾನು ಕಣ್ಣುಮುಚ್ಚಿ ಉಸಿರುಕಟ್ಟಿ ಸವಿಯತೊಡಗಿದ್ದೆ.
ಶನಿವಾರ ಸಂಜೆಗತ್ತಲು ಮೆಲ್ಲನೆ ಅಡಿಯಿಡತೊಡಗಿದಾಗ, ಒಬ್ಬರಿಗೊಬ್ಬರ ಮುಖಗಳು ನಮ್ಮ ಮನಸ್ಸುಗಳಂತೆಯೇ ಅಸ್ಪಷ್ಟವಾಗಿ ಆದರೂ ಆಪ್ಯಾಯಮಾನವಾಗಿ ಕಾಣತೊಡಗಿದಾಗ, ಅವನು ನಮ್ಮ ಆಫೀಸಿನ ಬಾಗಿಲ ಚೌಕಟ್ಟಿಗೆ ಒರಗಿ ನಿಂತು ಮುಖವನ್ನಷ್ಟೇ ಒಳಗೆ ಹಾಕಿ ಕತ್ತಲಲ್ಲಿ ಬೆಳದಿಂಗಳು ಹರಡಿದಂತೆ ನಗುವನ್ನು ನನ್ನ ಮೇಲೆ ಚೆಲ್ಲಿದಾಗ ಇಡೀ ಆರೂ ಮುಕ್ಕಾಲೂ ದಿನಗಳು ಅವನ ಹೆಸರಿನೊಂದಿಗೇ ಮಿಡಿಯುತ್ತಿದ್ದ ನನ್ನ ಹೃದಯ ಒಂದುಕ್ಷಣ ನಿಂತೇ ಬಿಡುತ್ತಿತ್ತು. ಆನಂತರದ ಕ್ಷಣಗಳೆಲ್ಲಾ ಸ್ವಪ್ನನಗರಿಯ ಕ್ಷಣಗಳು. ಎಲ್ಲ ಭಾರವೂ ಕಳೆದು ಹೂವ ಪರಿಮಳದಂತೆ ಹಗುರಾಗಿ ಗಾಳಿಯಲ್ಲಿ ತೇಲಾಡಿದ ಅನುಭವ. ಬೆಚ್ಚಗಿನ ಕತ್ತಲು, ಉದ್ದಾನು ಉದ್ದರಸ್ತೆ, ಮಿಂಚು ಬೆಳಕನ್ನು ರಾಚುತ್ತಾ ಬರ‍್ರೆಂದು ಓಡುವ ವಾಹನಗಳು, ಅಕ್ಕಪಕ್ಕದ ಮರಗಳು, ಮನೆಗಳು, ಓಡಾಡುವ ಜನರು ಎಲ್ಲವೂ ಬೇರೆ ಯಾವುದೋ ಲೋಕದ ದೃಶ್ಯಗಳಂತೆ ಕಾಣುತ್ತಿದ್ದವು. ನನ್ನ ಜಗತ್ತಿನಲ್ಲಿ ಆಗ ನಾವಿಬ್ಬರೇ, ನಮ್ಮಿಬ್ಬರಿಗಾಗೇ ಒಂದು ಜಗತ್ತು. ನನ್ನ ಕಣ್ಣು, ನಗೆ, ಬೆರಳುಗಳ ಚಲನೆ ಅವನಿಗಷ್ಟೇ ಅರ್ಥವಾಗುವ ನೂರೆಂಟು ಮಾತುಗಳನ್ನು ಆಡುತ್ತಿದ್ದವು. ನಾವು ಗಂಧರ್ವರೋ ಎಂಬಂತೆ ನಡೆಯುತ್ತ ಬಾರ್-ಕಂ-ರೆಸ್ಟುರಾವನ್ನು ತಲುಪುವಾಗ ಸರಿಯಾಗಿ ಸಂಜೆ ಏಳೂವರೆ. ಸ್ವಾಗತಕಾರ ಪರಿಚಯದ ನಗೆಬೀರಿ ಸ್ವಾಗತಿಸುತ್ತಿದ್ದ. ಜೋಡಿಸಿಟ್ಟ ಹೂವುಗಳು ನಮಗಾಗೇ ಅರಳಿದಂತೆ ಕಾಣುತ್ತಿದ್ದವು. ಎಲ್ಲ ದೃಷ್ಟಿಯಿಂದಲೂ ಉತ್ಕÈಷ್ಟವಾದ ನಮ್ಮ ಖಾಯಂ ಜಾಗ ಹಿಡಿದು ಕುಳಿತ ನಂತರ ರೋಮಾಂಚನದ ಎರಡನೆಯಘಟ್ಟ.
ನಾವು ಏನು ಆರ್ಡರ್ ಮಾಡುತ್ತೇವೆಂದು ಸ್ಟೂವರ್ಡ್‌ಗೆ ಗೊತ್ತಿದ್ದರೂ ಮೆನೂ ಬುಕ್‌ಕೊಟ್ಟು ಅವನು ವಿಧೇಯನಾಗಿ ನಮ್ಮೆದುರು ಬಾಗಿ ನಿಂತಾಗ ನಮ್ಮ ಮಾಮೂಲು ಆಯ್ಕೆಯನ್ನು ಹೇಳಿ ಪುನಃ ಮಾತಿನಲ್ಲಿ ಮುಳುಗುತ್ತಿದ್ದೆವು. ಬಹುಶಃ ಒಂದು ಕ್ಷಣವೂ ಬಿಡದೆ ನಾವು ಮಾತೂ ಮಾತೂ ಮಾತಾಡಿರಬಹುದು. ಏನು ಮಾತಾಡುತ್ತಿದ್ದೆವು? ಈಗ ಒಂದು ಮಾತೂ ನೆನಪಿಗೆ ಬರದು. ಛೇ, ಪ್ರತಿಯೊಂದು ಕ್ಷಣವನ್ನೂ ಪ್ರತಿಯೊಂದು ಮಾತನ್ನೂ ಎದೆಯ ಗೂಡೊಳಗೇ ಹಾಕಿಕೊಂಡರೂ ಅವೆಲ್ಲ ಹೇಗೆ, ಯಾವಾಗ, ಎಂದು ಮಾಯವಾದವೋ….. ಈ ಬಗ್ಗೆ ದುಃಖಕ್ಕಿಂತ ಅಚ್ಚರಿಯೇ ಹೆಚ್ಚಾಗಿದೆ.
ನಾವು ಎಲ್ಲಿದ್ದೇವೆ, ಏನು ಮಾಡುತ್ತಿದ್ದೇವೆ, ಎಲ್ಲಿಗೆ ಮುಟ್ಟುತ್ತೇವೆ ಎಂಬ ಬಗ್ಗೆ ಅವನು ಖಂಡಿತ ಯೋಚಿಸಿರಲಾರ. ಹೀಗಿರುವುದರಿಂದಲೇ ಹುಡುಗರು ಜೀವನದಲ್ಲಿ ಹೆಚ್ಚು ಸುಖಿಗಳಾಗಿರುವರೇನೋ! ಹುಡುಗಿಯರು ಹೀಗಿರುವುದಿಲ್ಲವಾದರೂ ನಾನು ಮಾತ್ರ ಈ ವಿಷಯದಲ್ಲಿ ಜಾಣೆಯೇ ಅಂದುಕೊಳ್ಳುತ್ತೇನೆ. ನಾನು ಹೀರುತ್ತಿದ್ದ ಜಿನ್, ಮೆಲ್ಲುತ್ತಿದ್ದ ಚಿಲಿ ಚಿಕನ್ ನಡುವೆ, ಅಕ್ಕಪಕ್ಕದಲ್ಲಿ ನಮ್ಮ ತೊಡೆ ಸೋಂಕಿ ಉಂಟಾದ ಬೆಚ್ಚಗಿನ ಹಿತದ ನಡುವೆ ನನ್ನ ಭವಿಷ್ಯದ ಚಿಂತೆ ಆಗಾಗ್ಗೆ ಸುಳಿದರೂ ಆ ಚಿಂತೆಯನ್ನು ಪಕ್ಕದಲ್ಲಿ, ಎದುರಲ್ಲಿ, ತಲೆಯಲ್ಲಿ ಇಟ್ಟುಕೊಂಡೇ ಪ್ರೀತಿಯ, ಪ್ರೇಮದ ಹುಡುಗನ ಸಖ್ಯದ ಸುಖವನ್ನು ಪೂರಾ ಪೂರಾ ಅನುಭವಿಸುತ್ತಿದ್ದೆ. ಬಂದವರೆಲ್ಲ ಕೂತು ಕುಡಿದು ತಿಂದುಕುಣಿದು ಸೊಂಟಕ್ಕೆ ಕೈ ಬಳಸಿಕೊಂಡು ಮೆಟ್ಟಿಲಿದು ಹೋಗಿ ಬಾರಿನ ಮಂಕು ದೀಪಗಳು ಒಂದೊಂದಾಗಿ ಆರತೊಡಗುವುದು, ಮತ್ತು ಬರಿಸುವ ಹಾಡು ಹಾಗೆ ಹಾಗೇ ಕರಗಿ ನೀರವದ ಅಲೆ ಎಲ್ಲವನ್ನೂ ಆವರಿಸುತ್ತಾ ನಮ್ಮ ಬಳಿಗೂ ಬಂದು, ಇಂದಿಗೆ ಇಷ್ಟು ಸಾಕು ಎಂಬಂತೆ ಬಳಿ ನಿಲ್ಲುವುದು. ಸಮಯ ಇಷ್ಟುಬೇಗ ಸರಿಯಿತಲ್ಲಾ ಎಂಬ ವ್ಯಥೆಗೂ ಅವಕಾಶಕೊಡದೆ ಮನಸ್ಸಿನಲ್ಲಿ ತುಂಬಿದ ಮಧುರ ಭಾವದ ಗುಂಗಿನಲ್ಲಿ ನಾವು ಒಬ್ಬರನ್ನೊಬ್ಬರು ಅಗಲುತ್ತಿದ್ದೆವು. ಪುನಃ ಮುಂದಿನ ಶನಿವಾರ ಸಂಜೆ ಆರೂವರೆತನಕ ಇದೇ ಗುಂಗು ಆವರಿಸಿರುತ್ತಿತ್ತು.
ಬದುಕಿನಒಂದು ನಡೆ ಹೀಗೇ ಹಿತವಾದರಾಗದಲ್ಲಿ ಸಂಚರಿಸುವಾಗ ಇನ್ನೊಂದು ನಡೆಯೂ ತನ್ನದೇ ಆದ ಲಯಬದ್ಧತೆಯಲ್ಲಿ ಸಾಗಿತ್ತು. ಅದನ್ನೂ ಹೇಳಿ ಬಿಡುತ್ತೇನೆ, ಕೇಳಿ-
ಮದುವೆಯ ಪ್ರಯತ್ನಗಳನ್ನು ಮಾಡುವುದು ಅಪ್ಪಅಮ್ಮ ಎನಿಸಿಕೊಂಡವರ ಕರ್ತವ್ಯವೇ ಆಗಿಬಿಟ್ಟಿರುವುದರಿಂದ ಅವರು ಎಡಬಿಡದೆ ತಮ್ಮ ಪ್ರಯತ್ನ ಮುಂದುವರಿಸಿದ್ದರು. ಹುಡುಗಿಯರನ್ನು ನೋಡಲು ಈ ದಿನ ಬರುತ್ತಾರೆ ಎಂಬುದರೊಂದಿಗೆ ಈ ನಡೆಯ ಆರಂಭ. ನೋಡಿ ಹೋದ ನಂತರ `ನನಗೇನೋ ಒಪ್ಪಿಗೆ, ಅಪ್ಪಅಮ್ಮ ಹೂಂ ಅಂದರಾಯಿತು’. ಎಂಬ ಉತ್ತರ ಹೆಚ್ಚೆಂದರೆ ಮೂರು ತಿಂಗಳು, ಕಡಿಮೆ ಎಂದರೆ ಒಂದು ತಿಂಗಳೊಳಗಾಗಿ ನಾವೇ ಕೇಳಿದ ನಂತರ ತಿಳಿಯುತ್ತಿತ್ತು. ಊರಲ್ಲಿರುವ ಹುಡುಗನ ತಾಯಿಯ ತಂದೆಯೋ, ತಂದೆಯ ತಂದೆಯೋ, ತಂದೆಯ ತಮ್ಮನೋ, ಅಣ್ಣನ ಹೆಂಡತಿಯೋ, ಹೆಂಡತಿಯ ಅಪ್ಪನೋ, ಅಪ್ಪನ ಗೆಳೆಯನೋ…. ಹೀಗೆ ಅಂತೂ ಒಂದು ಮನೆಗೆ ಹೆಣ್ಣನ್ನು ತಂದುಕೊಳ್ಳುವುದೆಂದರೆ ಸಾಮಾನ್ಯವೆ? ಹೀಚು ತಲೆಕಾಯಿಯ ಹುಡುಗಒಪ್ಪಿ ಬಿಟ್ಟರೆ ಮುಗಿಯಿತೆ? ಎಲ್ಲರೂ ಬಂದು ಕೂತು ತಿಂದು ನೋಡಿ ಅಂತಿಮ ಉತ್ತರ ನೀಡುವ ವೇಳೆಗೆ ಆರು ತಿಂಗಳೇ ಕಳೆಯುತ್ತಿತ್ತು. ಈ ಅವಧಿಯಲ್ಲಿ ಬಂದವರಿಗೆ ಸಲ್ಲಬೇಕಾದ ಉಪ್ಪಿಟ್ಟು-ಜಾಮೂನ್, ಕೇಸರಿಬಾತ್-ಬೋಂಡಾ, ಬರ್ಫಿ-ಪಕೋಡಾಗಳ ಕೋಟಾ ಮುಗಿದು ಇನ್ಯಾರಾದರೂ ಅವರ ಮನೆಯಿಂದ ನೋಡಲು ಬಂದರೆ ಏನು ಸ್ವೀಟ್ ಮಾಡುವುದು, ಏನು ಖಾರಮಾಡುವುದು ಎಂಬ ಯೋಚನೆ ಅಮ್ಮನ ತಲೆಯನ್ನೆಲ್ಲ ತುಂಬುತ್ತಿತ್ತು. ಈ ಆವರ್ತಕ್ರಮಕ್ಕೆ ನಾವೆಲ್ಲ ಎಷ್ಟು ಚೆನ್ನಾಗಿ ಹೊಂದಿಕೊಂಡು ಬಿಟ್ಟಿದ್ದೇವೆಂದರೆ ಗಂಡಿನವರು ಹೋದ ನಂತರ ನಮ್ಮ ವಿಮರ್ಶೆ ಬರ್ಫಿಯ ಹದ, ಉಪ್ಪಿಟ್ಟಿನರುಚಿ, ಪಕೋಡದ ಗರಿ ಇಷ್ಟಕ್ಕೇ ಸೀಮಿತವಾಗಿಬಿಟ್ಟಿತ್ತು. ನೋಡಲು ಬಂದ ಹುಡುಗರ ಬಗ್ಗೆ ಏನು ಹೇಳಲಿ? ಇವರಿಗಿಂತ ಕುರಿಗಳಲ್ಲೆ ಹೆಚ್ಚು ವ್ಯತ್ಯಾಸವಿದೆ ಅನ್ನಿಸುವುದು. ಹೆಣ್ಣು ನೋಡುವಲ್ಲಿ ತಲೆಗೇನು ಕೆಲಸ ಎಂಬ ರೀತಿಯಲ್ಲಿ ಅವರ ವರ್ತನೆ ಇರುತ್ತಿತ್ತು. ಇವರಲ್ಲಿ ವೈವಿಧ್ಯವನ್ನರಸಿ ನಿರಾಶಳಾಗಿದ್ದೆ. ಬೇಡವೆಂಬುದಕ್ಕೆ ಕೊಡುತ್ತಿದ್ದ ಕಾರಣಗಳೂ ತೀರಾ ಮಾಮೂಲು. ಹೆಣ್ಣು ನೋಡಲು ಬರುವಾಗ ಬೆಕ್ಕು ಅಡ್ಡ ಬಂತಂತೆ, ಹುಡುಗಿ ಬಂದಕೂಡಲೇ ಕರೆಂಟ್ ಹೋಯಿತಂತೆ, ಹುಡುಗಿ ಹುಡುಗನಿಗಿಂತ ತುಸುದಪ್ಪ, ಅವಳ ಕಾಲ ಬೆರಳಿನ ಲಕ್ಷಣ ಅಜ್ಜನಿಗೆ ಹಿಡಿಸಲಿಲ್ಲವಂತೆ, ಅತ್ತಿಗೆಗೆ ಮನೆಯವರ ಮಾತುಕತೆಯರೀತಿ ಸರಿಬರಲಿಲ್ಲವಂತೆ, ಇತ್ಯಾದಿ ಇತ್ಯಾದಿ.ಈ ಉತ್ತರಗಳಿಂದ ನನಗೆ ಏನೇನೂ ನಿರಾಶೆಯಾಗುತ್ತಿರಲಿಲ್ಲ. ಶನಿವಾರ ಸಂಜೆ ಇವರುಗಳು ನನ್ನನ್ನು ನೋಡಲು ಬರದಿದ್ದರೆ ಸಾಕು ಎಂದಷ್ಟೇ ನಾನು ಹಾರೈಸುತ್ತಿದ್ದೆ.
ಹುಡುಗರು ಬಂದು ನೋಡಿಹೋದ ವಿಷಯವನ್ನು `ಅವನಿಗೆ’ ಹೇಳಿದಾಗ ಅವನಲ್ಲಿ ಯಾವ ಪ್ರತಿಕ್ರಿಯೆಯೂ ಕಾಣುತ್ತಿರಲಿಲ್ಲ. ಮದುವೆ ನಿಶ್ಚಯವಾಗೇ ಬಿಡುವುದು ಎಂಬ ಹಂತ ತಲುಪಿದಾಗಲೂ ಅವನು ನಿರ್ಲಿಪ್ತನಾಗೇ ಇರುತ್ತಿದ್ದ. ನಿಜವಾಗಿಯೂ ಪ್ರೀತಿಸುವವರಿಗೆ ಇಂಥ ನಿರ್ಲಿಪ್ತಿ ಸಾಧ್ಯವೇ? ಇಷ್ಟು ಸುಖ ಕೊಡುವ ಸಂಬಂಧ ನನ್ನ ಪಾಲಿಗೆ ಎಂದೆಂದಿಗೂ ಇಲ್ಲವಾಗುವುದು ಎಂಬ ಅರಿವಿನಿಂದ ನಾನು ತೀರಾ ವಿಹ್ವಲಳಾಗುತ್ತಿದ್ದೆ. ಆದರೆ ಅವನು? ಅವನ ಪಾಲಿಗೆ ಇದೇ ಕೊನೆಯಲ್ಲವಲ್ಲ? ಇಷ್ಟಾಗಿ ನನ್ನ ವೈಯಕ್ತಿಕ ನೋವುಗಳನ್ನು ಅವನೊಂದಿಗೆ ಹೇಳಿಕೊಳ್ಳುವುದಾಗಲೀ, ನನ್ನನ್ನೇ ಮದುವೆಯಾಗು ಎಂದು ಅತ್ತು ಕರೆಯುವುದಾಗಲೀ ನನಗೆ ಸಾಧ್ಯವಿರಲಿಲ್ಲ. ನಮ್ಮ ಸಂಬಂಧ ಎಲ್ಲ ಸಾಮಾನ್ಯ ಸಂಬಂಧಗಳಂತಾಗಿ ಬಿಡುವುದೂ ನನಗೆ ಬೇಕಾಗಿರಲಿಲ್ಲ. ಪ್ರೀತಿಗೂ ಮದುವೆಗೂ ಗಂಟು ಹಾಕುವುದರಲ್ಲಿ ಅರ್ಥವಿಲ್ಲ ಎಂದೇ ನನಗನ್ನಿಸುತ್ತಿತ್ತು. ಅವನಷ್ಟೇ ನಿರ್ಲಿಪ್ತಿ ನನಗೂ ಸಾಧ್ಯವಾಗುತ್ತಿತ್ತು. ಹೀಗಿದ್ದೂ ಕೂಡ ಪರಿಮಳದಂತೆ ನನ್ನನ್ನು ಆವರಿಸಿಕೊಂಡು ಬರುತ್ತಿದ್ದ ಸುಖದ ಅಲೆ, ಎದೆಯ ಆಳದಿಂದ ಎದ್ದ ನೋವಿನ ಅಲೆಯೊಡನೆ ಎಲ್ಲೋ ಒಂದುಕಡೆ ಬೆರೆತು ವಿಚಿತ್ರ ಮನಃಸ್ಥಿತಿಯುಂಟಾಗುತ್ತಿತ್ತು. ನಾನು ಹೀರುತ್ತಿದ್ದ ಮಧುರವಾದ ಜಿನ್ ಉಪ್ಪು ಕಣ್ಣೀರಾಗಿ ಅದೇ ಗ್ಲಾಸಿನೊಳಗೆ ಜಾರುತ್ತಿತ್ತು. ಮಂಕು ದೀಪದ ಬೆವಕಿನಲ್ಲಿ ಅವನು ಚೆಲ್ಲುತ್ತಿದ್ದ ಹಿತವಾದ ಸಿಗರೇಟಿನ ಹೊಗೆಯ ಹಿಂದೆ ನನ್ನ ಮುಖದ ಮ್ಲಾನತೆ ಮರೆಯಾಗಿಬಿಡುವುದು.
ಸಾಮಾನ್ಯವಾಗಿ ಎಲ್ಲ ಮಧ್ಯಮ ವರ್ಗದ ಹೆಣ್ಣುಗಳಿಗೂ ಆಗುವಂತೆಯೇ ನನಗೂ ಪ್ರೀತಿಸಿದವನನ್ನು ಬಿಟ್ಟು ಬೇರೊಬ್ಬನೊಂದಿಗೆ ಮದುವೆಯಾಯಿತು. ಮದುವೆಗೆ ಮೊದಲು ಬೆರಳು ಸಹ ಸೋಂಕಿರದಿದ್ದರೂ ಅಡಿಯಿಂದ ಮುಡಿಯವರೆಗೆ ಒಂದೇ ರಾತ್ರಿಯಲ್ಲಿ ಈ ಬೇರೊಬ್ಬನ ಅಧಿಕಾರ ಸ್ಥಾಪಿತವಾಯಿತು. ಮೋಹಕವಾದ ನಗೆಯಿಂದ ನನ್ನ ಎದೆಯನ್ನು ಹೊಕ್ಕಿದ್ದ ಅವನೊಂದಿಗೆ ಈ ಹಂತತಲುಪುವುದಕ್ಕೆ ಎರಡು ವರ್ಷಕ್ಕೂ ಹೆಚ್ಚು ಕಾಲ ಹಿಡಿಸಿತ್ತಲ್ಲ…? ಅವನಿಗೆ ಅವನಪ್ಪನ ಅಂತಸ್ತು, ಅವನ ವಿದ್ಯೆ, ರೂಪ, ಸದ್ಗುಣಗಳಿಗೆ ತಕ್ಕ ಹೆಣ್ಣಿನೊಂದಿಗೆ ಮದುವೆಆಗಿಯೇ ಆಯಿತು. ಸೂರ್ಯಚಂದ್ರರ ನಡೆಯಲ್ಲಿ ವ್ಯತ್ಯಾಸಗಳಾಗಬಹುದೇನೋ, ಮನುಷ್ಯರ ಬಾಳಿನಲ್ಲಿ ನಡೆಯುವ ಮದುವೆಗಳಲ್ಲಿ ಮಾತ್ರ ಯಾವ ವ್ಯತ್ಯಾಸವೂ ಇಲ್ಲ.
ಈಗ ನನಗೆ ಬಿಡುವಿಲ್ಲದ ಕೆಲಸ. ಗಂಡ, ಮಕ್ಕಳು ಎಂದು ಹಲ್ಲುಜ್ಜುವುದರಿಂದ ಹಿಡಿದುರಾತ್ರಿ ಮಲಗುವ ತನಕ ಕೆಲಸವೋ ಕೆಲಸ. ಅವರ ಬೇಕು ಬೇಡಗಳನ್ನು ನೋಡಿಕೊಳ್ಳುವುದು, ಮನೆಗೆ ಬಂದ ಅತಿಥಿಗಳೊಡನೆ ಸವಿಯಾಗಿ ಮಾತನಾಡಿ ಉಪಚರಿಸುವುದು, ಎಂದೆಂದೂ ಮುಗಿಯದ ಅಡುಗೆ ಮನೆಯ ಕೆಲಸಗಳನ್ನು ಮುಗಿಸಲೇಬೇಕೆಂದು ಹಟತೊಟ್ಟು ಮಾಡುವುದು. ಆಫೀಸಿನಲ್ಲಿ ಮೂರುಕಾಸಿನ ಕೆಲಸವಿರದಿದ್ದರೂ ಸಹೋದ್ಯೋಗಿಗಳ ಮಾತನ್ನು ತಲೆಗೆಲ್ಲ ಹಚ್ಚಿಕೊಂಡು ಒದ್ದಾಡುವುದು. ಹೀಗೇ ಹತ್ತು ವರ್ಷಗಳು ಕಳೆದಿವೆ. ಈ ದಿನಚರಿಯಲ್ಲಿ ಸೂಜಿ ಮೊನೆಯಷ್ಟೂ ವ್ಯತ್ಯಾಸವಿರದ ಇನ್ನೂ ಎಷ್ಟೋ ವರ್ಷಗಳು ಬಾಕಿ ಇವೆ.
`ಅವನೂ’ ಅಷ್ಟೆ, ಬಿಸಿನೆಸ್ಸು ಮಾಡುತ್ತ ಸೈಟಿನ ಮೇಲೆ ಸೈಟು ಕೊಳ್ಳುತ್ತಾ, ಮನೆಯ ಮೇಲೆ ಮನೆ ಕಟ್ಟುತ್ತಾ ಹೆಂಡತಿಯ ಜೊತೆ ಗೋವಾ, ಕೋವಳಂ ಬೀಚು, ಕೊಡೈಕೆನಾಲ್‌ಗಳನ್ನು ಸುತ್ತುತ್ತಾ ಪಾರ್ಟಿಗಳಲ್ಲಿ ಮುಳುಗಿಹೋದ.
ಈಗಲೂ ಎಲ್ಲೆಲ್ಲಿಂದಲೋ ತೂರಿಕೊಂಡು ಅವನ ನೆನಪು ನುಗ್ಗಿ ಬರುತ್ತದೆ. ಆ ನೆನಪುಗಳಿಗೆ ಬಣ್ಣತುಂಬುತ್ತಾ ಮತ್ತೊಮ್ಮೆ ಆನಂದಿಸಬೇಕು ಎಂದುಕೊಳ್ಳುತ್ತೇನೆ. ಕೆಲಸದ ಒತ್ತಡ ನೆನಪನ್ನು ಅದುಮಿ ಹಾಗೇ ಕೆಳಕ್ಕೆ ತಳ್ಳಿದಾಗ ಏಟುತಿಂದ ಮಗುವಿನಂತೆ ಅದು ಚೀರಿಡುತ್ತದೆ. ಅತ್ತು ರಂಪ ಮಾಡಿ ಸುಸ್ತಾಗಿ ಮಲಗಿದ ಮಗುವಿನಂತೆಯೇ ಮಲಗಿಬಿಡುತ್ತದೆ. ಅಪರೂಪಕ್ಕೊಮ್ಮೆ ಬಿಡುವು ಸಿಕ್ಕಾಗ ಪುನಃ ಈ ನೆನಪನ್ನು ಕೈಗೆತ್ತಿಕೊಳ್ಳುತ್ತೇನೆ. ಅದರೊಂದಿಗೆ ಆಡುತ್ತಿದ್ದ ಮಾತುಗಳೆಲ್ಲ ಮರೆತುಹೋಗಿ ಪಿಳಪಿಳನೆ ಅದನ್ನು ದಿಟ್ಟಿಸುತ್ತೇನೆ. ಮಂಜುಗಡ್ಡೆಯಲ್ಲಿ ಹುದುಗಿಸಿಟ್ಟ ಭಾವಗಳೆಲ್ಲ ಹಾಗೇ ಮರಗಟ್ಟಿ ಸತ್ತುಬಿಟ್ಟವೇನೋ ಎನಿಸಿ ಕಂಪಿಸುತ್ತೇನೆ.
ಆಗೊಮ್ಮೆ ಈಗೊಮ್ಮೆ ಅವನು ಮನೆಗೆ ಬರುತ್ತಾನೆ. ಆಡಬೇಕಾದ ಮಾತನ್ನು ಆಡಲಾಗದೆ, ಆಡಿದ ಮಾತಿನಲ್ಲಿ ಅರ್ಥಕಾಣದೆ ಮೌನ ಗೂಡುಕಟ್ಟುತ್ತದೆ. ನೆನಪು ಘಮಘಮಿಸುತ್ತ ನಮ್ಮನ್ನು ಬಂಧಿಸುತ್ತದೆ.
ಹೀಗೇ ಒಂದು ಪ್ರೇಮದಕಥೆ
ಇದು ನಾನು ಬರೆದ ಮೊದಲ ಕಥೆ. ನನ್ನ ಮೊದಲ ಕಥೆಯೇ ನನ್ನ ಮೆಚ್ಚಿನ ಕಥೆಯೂ ಹೌದು. ಕವಿತೆಗಳನ್ನು ಬರೆಯುತ್ತಾ ಕವಯತ್ರಿ ಎಂದು ಹೆಸರು ಪಡೆಯತೊಡಗಿದ್ದ ನಾನು ಕಥೆಗಳನ್ನು ಬರೆಯಬಹುದು ಅಂತ ಅಂದುಕೊಂಡಿರಲೇ ಇಲ್ಲ. ಆದರೆ ನನ್ನ ಮನಸ್ಸಿನಲ್ಲಿ ತುಣುಕು ಮೋಡಗಳಂತೆ ತೇಲಾಡುತ್ತಿದ್ದ ಕೆಲವೊಂದು ಸಂಗತಿಗಳನ್ನು ಸುಮ್ಮನೇ ಬರೆಯುತ್ತಾ ಹೋದ ಹಾಗೆ ಅವು ನನಗರಿವಿಲ್ಲದೇ ಒಂದಕ್ಕೊಂದು ಹೆಣೆದುಕೊಳ್ಳುತ್ತಾ ಸುಸಂಬದ್ಧರೂಪ ಪಡೆಯತೊಡಗಿದ್ದವು. ಇಂಥದ್ದೇ ಆರಂಭ ಇಂಥದ್ದೇ ಅಂತ್ಯ ಎಂದು ಪೂರ್ವ ನಿಯೋಜಿತವಾಗಿ ಬರೆಯದಿದ್ದರೂ ಅದು ಹೇಗೋ ನನ್ನ ನಿರೂಪಣೆ ಯಾವುದೋ ಒಂದುಘಟ್ಟಕ್ಕೆ ಬಂದು ನಿಂತು ಕಥೆಯ ರೂಪ ಪಡೆದುಕೊಂಡಿತ್ತು. ಈ ಪ್ರಕ್ರಿಯೆ ನನಗೇ ಒಂದು ಅಚ್ಚರಿಯಾಗಿತ್ತು.
ನಾನು ಬರೆದ ಮೊದಲ ಕಥೆ ತರಂಗ ವಾರಪತ್ರಿಕೆಯಲ್ಲಿ ಪ್ರಕಟವಾಯಿತು, ಮಾತ್ರವಲ್ಲ, ಓದುಗರಿಂದ ಅನಿಸಿಕೆ, ಅಭಿಪ್ರಾಯ ಮೆಚ್ಚುಗೆಗಳ ಮಹಾಪೂರವೇ ಹರಿದು ಬಂದಿತ್ತು. ಇಷ್ಟೊಂದು ಓದುಗರ ಮೆಚ್ಚುಗೆ ಗಳಿಸಲು ಅದೇನೂ ಯಾರೂ ಬರೆಯದಂಥ ಕಥೆಯೇನೂ ಆಗಿರಲಿಲ್ಲ. ಅದೊಂದು ತೀರಾ ಮಾಮೂಲು ಪ್ರೇಮಕಥೆ. ಆದರೆ ಇದು ಓದುಗರ ಗಮನವನ್ನು ವಿಶೇಷವಾಗಿ ಸೆಳೆದಿದ್ದಕ್ಕೆ ಇಲ್ಲಿ ಪ್ರೇಮ ವಿರಹಗಳ ತೀರಾ ಭಿನ್ನವಾದ ಚಿತ್ರಣವಿದ್ದುದೇ ಕಾರಣವಿರಬೇಕು. ಇಲ್ಲಿನ ಕಥಾನಾಯಕಿ, ಅಷ್ಟೆಲ್ಲ ಪ್ರೇಮಿಸಿದ ವ್ಯಕ್ತಿಯೊಂದಿಗೆ ತನ್ನ ಮದುವೆಯಾಗದಿದ್ದರೂ, ಎಲ್ಲ ಭಗ್ನಪ್ರೇಮಿಗಳಂತೆ ಅಳುತ್ತಾ ಕೂರದೆ, ಪುರುಷದ್ವೇಷ ಬೆಳೆಸಿಕೊಳ್ಳದೆ, ಅಥವಾ ಆತ್ಮಹತ್ಯೆ ಮಾಡಿಕೊಳ್ಳದೆ ಬೇರೊಬ್ಬ ವ್ಯಕ್ತಿಯೊಂದಿಗೆ ಮದುವೆಯಾಗುತ್ತಾಳೆ. ತನ್ನ ಜೀವನದ ಒಂದು ಹಂತದಲ್ಲಿ ಪಡೆದ ಅನುಭವವನ್ನು ಮೂರನೇ ವ್ಯಕ್ತಿಯಂತೆ ನಿರೂಪಿಸುವ ಧೋರಣೆ ಓದುಗರಿಗೆ ಹೊಸ ರೀತಿಯ ಅನುಭವ ನೀಡಿರಬಹುದು. ಇಷ್ಟು ನಿರ್ಲಿಪ್ತವಾಗಿ ಮುಗಿದ ಈ ಕಥೆ ಒಬ್ಬೊಬ್ಬರನ್ನು ಒಂದೊಂದು ರೀತಿಯಲ್ಲಿ ಕಾಡಿತ್ತು. ಬಹುಶಃ ಎಲ್ಲಯುವ ಪ್ರೇಮಿಗಳೂ ಈ `ಭಗ್ನಪ್ರೇಮ’ದ ಕಥೆಗೆ ಸಹೃದಯತೆಯಿಂದ ಸ್ಪಂದಿಸಿದ್ದರು. ಅನೇಕರ ದೃಷ್ಟಿಯಲ್ಲಿ ಇದು `ಕ್ರಾಂತಿಕಾರಕ’ ವಿಚಾರಧಾರೆಯಾಗಿ ಕಂಡಿತ್ತು. ಈ ಕಥೆಗೆ ಓದುಗರಿಂದ ಬಂದ ಪ್ರತಿಕ್ರಿಯೆಗಳು ಅದೆಷ್ಟು ಸ್ವಾರಸ್ಯಕರವಾಗಿದ್ದವೆಂದರೆ ನಾನು ಆನಂತರ ಬರೆದ ಕೆಲವೊಂದು ಕಥೆಗಳಿಗೆ ಈ ಪತ್ರಗಳ ಸಾಲುಗಳೇ ಪ್ರೇರಣೆಯಾದವು. ನನ್ನ ಮೊದಲ ಕಥೆಯಿಂದಲೇ ನಾನು ಕಥೆಗಾರ್ತಿಯಾಗಿ ಗುರುತಿಸಲ್ಪಟ್ಟಿದ್ದೆ. ಅನಂತರದ ಮೂರುನಾಲ್ಕು ವರ್ಷಗಳಲ್ಲಿ ನಾನು ಬರೆದ ಕಥೆಗಳೆಲ್ಲ `ಬೇರೊಂದುದಾರಿ’ ಎಂಬ ಸಂಕಲನ ರೂಪದಲ್ಲಿ ಪ್ರಕಟವಾಗಿವೆ. (ನೆಲ ಮನೆ ಪ್ರಕಾಶನ-1998)
ಮಾಮೂಲು ಅನ್ನಿಸಿದ ಸಂಗತಿಗಳನ್ನು ನಾನು ನೋಡುವದೃಷ್ಟಿ ಭಿನ್ನವೆಂದು ಅನ್ನಿಸುವ ಕಾರಣದಿಂದಲೋ ಏನೋ, ನನ್ನ ಕಥೆಗಳನ್ನು ಬಹಳ ಮಂದಿ ಮೆಚ್ಚಿಕೊಂಡಿದ್ದಾರೆ. ಕವಿತೆಗಿಂತ ನಿಮ್ಮ ಕಥೆಗಳೇ ಚೆನ್ನಾಗಿರುತ್ತವೆ. ಅವನ್ನೇ ಹೆಚ್ಚಾಗಿ ಬರೆಯಿರಿ ಎಂದು ಹೇಳಿದವರಿದ್ದಾರೆ. ಆದರೆ ನನ್ನ ಮೆಚ್ಚಿನ ಲೇಖಕರಾದ ಲಂಕೇಶ್ ಅವರು ತಾವಾಗಿಯೇ ನನ್ನ ಕಥಾ ಸಂಕಲನವನ್ನು ಕೇಳಿ ಓದಿದ ಬಳಿಕ ನಿನ್ನ ಕಥೆಗಳಿಗಿಂತ ಕವಿತೆಗಳೇ ಚೆನ್ನಾಗಿರುತ್ತವೆ ಅಂದಿದ್ದರು. ಆದರೆ ನಾನು ಬರೆಯುವ ಕಥೆ ಕವಿತೆಗಳ ನಡುವೆ ನನಗೆ ಅಂತಹ ವ್ಯತ್ಯಾಸವಿದೆ ಎಂದೇನೂ ಅನಿಸುವುದಿಲ್ಲ.
ಆನಂತರದ ವರ್ಷಗಳಲ್ಲಿ ನಾನು ಏಳೆಂಟು ಕಥೆಗಳನ್ನು ಬರೆದೆನಾದರೂ ಯಾಕೋ ಅವು ಅಪೂರ್ಣವಾಗಿಯೇ ಉಳಿದುಬಿಟ್ಟವು. ಇತ್ತೀಚೆಗೆ ಕಥೆಗಳನ್ನು ಬರೆದೇ ಇಲ್ಲ. ಕಥೆ ಬರೆಯುವಷ್ಟು ವ್ಯವಧಾನವಾಗಲೀ ಸಮಯವಾಗಲೀ ಇಲ್ಲ. ಅಥವಾ ಅನುಭವದ ಕೊರತೆ ಇದಕ್ಕೆ ಕಾರಣವಿರಬಹುದು. ಮುಂದೆ ನಾನು ಮತ್ತೆ ಕಥೆಗಳನ್ನು ಬರೆಯುವ ಸಾಧ್ಯತೆ ಇದೆಯೋ ಇಲ್ಲವೋ ಹೇಳಲಾರೆ.
ಅದರೆ ನಾನು ಬರೆದ ಈ ಮೊದಲ ಕಥೆ ನನಗೆ ಈಗಲೂ ಇಷ್ಟವಾಗುತ್ತದೆ. ಯಾಕೆಂದರೆ ಈ ಹಂತದಲ್ಲಿ ನಾನು ಅಂಥ ಕಥೆಯನ್ನು ಬರೆಯಲು ಸಾಧ್ಯವೇ ಇಲ್ಲ. ನನ್ನ ಮೊದಲ ಕಥೆಯನ್ನು ಮತ್ತೆಮತ್ತೆ ಓದಿದಾಗ ನನಗೆ ಅನ್ನಿಸುವುದೇನೆಂದರೆ, ನೆನಪು ಮತ್ತು ಅನುಭವಗಳಿಗೆ ಒಂದುಥರಾ ಜೀವವಿದೆ. ಜೀವವಿರುವುದರಿಂದಲೇ ಯೌವನ ಮುಪ್ಪು ಕೂಡಇದೆ. ನೆನಪು ಅನುಭವಗಳ ದಾಖಲೆಯಾದ ಈ ಕಥೆಯನ್ನು ಆಗ ಬರೆಯದೆ ಈಗ ಬರೆದಿದ್ದರೆ ಅದು ಬೇರೆಯೇ ಕಥೆಯಾಗಿರುತ್ತಿತ್ತು. ಮೊದಲಲ್ಲಿರುವ ಬಿಸುಪು, ಕಾವು, ಬಿಸಿ, ಹಸಿ,…. ಇರುತ್ತಿರಲಿಲ್ಲ ಎಂದು ನನ್ನ ನಂಬಿಕೆ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ನಿಮ್ಮ ಕಥೆ ಓದಿ ಬಹಳ ವರ್ಷಗಳ ಬಳಿಕ ಕಥಾ ನಾಯಕ ನನ್ನು ಕುರಿತು ಕೇಳಿದ್ದು ನೆನಪಿದೆ ಯ ಸಂಧ್ಯಾ…ಈ ಕತೆ ಚೆನ್ನಾಗಿದೆ. ಬಹುಶಃ ಸಂವೇದನಾ ಶೀಲ ಹೆಣ್ಣಿನ ಮನದಲ್ಲಿ ಇಂತಹ ಕತೆಯೊಂದು ಇರುತ್ತದೆ.
ಒಬ್ಬ ಮದುವೆ ವಯಸ್ಸಿನ ಹೆಣ್ಣು ಮಗಳ ಮನಸ್ಸಿನ ಬೇಗುದಿಯನ್ನು ಚೆನ್ನಾಗಿ ಚಿತ್ರಿಸಿ ಕೊಟ್ಟ ಕಥೆ.