ತನ್ಗ ಸರಿಯಾಗಿ ಹನ್ನೆಲ್ಡು ವರ್ಷ ಇರಬೇಕು ಅಪ್ಪಯ್ಯ ತನ್ನ ಮ್ಯಾಲ ಕೈಮಾಡಿ, ‘ಬೋಸುಡಿಕೆ ಹೆಣಗನಂಗ್ಯಾಕ್ಲೆ ಆಡ್ತಿ ಗಂಡದಿ ಮಗ್ನ ಹಂಗಿರು ಅದ್ನ ಬಿಟ್ಟು ಇನ್ನೊಂದು ಸಲ ಹೆಂಗಸರ ಸಂದ್ಯಾಗಿದ್ದೆಂದ್ರ ಕೆರ ಕಿತ್ತು ಹೊಕ್ಕಾವು’ ಅಂತೆಲ್ಲಾ ಬೈದು ಹೊಡೆದಿದ್ದ. ಕಾಡ್ಸಕಂತಲೇ ಹೆಣಗ ಅಂತ ಅಂಗ್ಸೋ ಹುಡುಗ್ರು, ಅಪ್ಪ ಎಲ್ಲೋದ್ರು ನಿನ್ನ ಮಗ ಹೆಣುಗನಂತೆ ಹೌದಾ..? ಅನ್ನೋ ಜನ. ಅಪ್ಪ ಈ ಕೊಚನ್‌ಗೆ ಬಂದು ಬಂದು ಈರನ್ನ ಹೊಡೆಯುವ ಮುಂದ ಕಮ್ಲವ್ವ ಮತ್ತ ಬಸರಾಗಿದ್ದು ಕನಪರ್ಮ್ ಆಗಿತ್ತು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಶಿವಕುಮಾರ ಚನ್ನಪ್ಪನವರ ಕತೆ “ಕರಿಯೆತ್ತ ಕಾಳಿಂಗ… ಬಿಳಿಯೆತ್ತ ಮಾಲಿಂಗ” ನಿಮ್ಮ ಓದಿಗೆ

ಹೊಸ್ಲ ಹುಣ್ವಿ ತಂಡಿಗೆ ಹೊಸ್ಲ ನಡುಗತೈತಂತ ಅನಂಗಿದ್ದ ತಂಡಿಗೆ, ಸ್ಪೇಷಲ್ ಪೈಜ ಬೀಡಿ ಹಚ್ಕೋಂಡು ರೇಡಿಯೋ ಕೆಳಕತ್ತಿದ್ದ ಕಲ್ಲಪ್ಪಜ್ಜ ಬೆಳ್ಳಬೆಳಿಗ್ಗೆ ಕೆಂಗ್ಲು ಹೊಲದಾಗ ಬರಿತನ್ನ ಕರಿ ಮೈಯಾಗ ಕುಂತಿದ್ದ. ಮುಂದಿನ ಕಾರ್ಯಕ್ರಮ ಇದೀಗ, ಪ್ರದೇಶ ಸಮಾಚಾರ ಸಿದ್ದನಗೌಡ್ರು ಅರೆಸ್ಟಾಗಿದ್ದಾರೆ ಕರ್ಫೂ ಆರ್ಡಾಗೇತಿ ಯಮನೂರಿಗೆ ಅನ್ನೋ ಸುದ್ದಿ ಕೇಳಿ, ಕೊನ್ನ ಬಾರಿ ಕಿಸ್ಸಕ್ಕನ ನಕ್ಕ ಇವನೌನ ಹೆಳಿದ್ರ ಕೇಳಲಿಲ್ಲ ಮಗ ಅಂತನ್ಕೋತ, ಇವತ್ತು ಬೆಳ್ಳಂಬೆಳಿಗ್ಗೆ ಸೂರ್ಯ ಮೂಡ್ತಿದಂಗ ಕಾಳಿಂಗ, ಮಾಲಿಂಗನ್ನ ಕೊಳ್ಳ ಕಟ್ಟಿ, ನೊಗಸುತ್ತು, ಪಟ್ಗಾಣಿ ಹಿಡ್ಕೋಂಡು, ದನದೋಣಿಗುಂಟ ಹಾದು ಕೆಂಗ್ಲು ಹೊಲಕ್ಕ ಹೊಗುವಾಗನ ಊರಾಚೆ ಹನುಮಪ್ಪನ ಕಟ್ಟಿಗಿ ಮಕ್ಕಂಡಿದ್ದ ಹೆಣ್ಣು ಶರೀರನಾ ದೂರದಿಂದ್ಲೆ ನೋಡಿ, ಯಾರೋ ದುರುಮುರುಗಿಯವ್ರು ಇಬ್ರೇಕಂತ ಅನ್ಕಂಡು ಹೋಗಿದ್ದ.

ಪ್ರತಿದಿನ ಮಧ್ಯಾಹ್ನ ಕರಿಯಮ್ಮನ ಗುಡಿಯ್ಯಾಗ ಎಲ್ಡು ಗಂಟೆಯಿಂದ, ಐದು ಗಂಟೆಮಟ ಬೇಲೂರ ವಿರಕ್ತಮಠದ ಸ್ವಾಮ್ಯರು ಕೊಟ್ಟ ಮಹಾಭಾರತದ ಕತಿನ ಓದೋದು. ತನ್ನ ವಾರಿಗೆ ಬಡಿಗೇರ ವಾಮಜ್ಜ ಗಣೇಶಪ್ಪರ ಗಣಪಜ್ಜನ ಕೂಡ ಹಳೆಗನ್ನಡದಾಗ ಒಬ್ರು ಹಾಡೋದು, ಇನ್ನೊಬ್ರು ವಡಚೋದು, ಸುತ್ತ ಸಾಲಿ ಹುಡುಗ್ರು, ಹಳ್ಳಿ ವಾರಗಿ ಮಂದಿ, ಕೆಲ್ಸಿಲ್ದ ಅಡ್ಡಾಡೋ ಪುಂಡ ಪೋಕರಿಗಳನ್ನೇಲ್ಲಾ ಸೇರಿಸ್ಕೋಂಡು ನಡೆಸ್ತಿದ್ದ ಸಭೆಗಳಿಗೆಲ್ಲಾ ಕಲ್ಲಪ್ಪಜ್ಜ ಇರಾಕಬೇಕು. ನಾಕೈದು ದಿನ ಆಗಿತ್ತು ಕಲ್ಲಪ್ಪಜ್ಜನ ಮನ್ಸು ತೀರಾ ಹದಗೆಟ್ಟು, ಮೊದ್ಲಿದ್ದ ಚಿಂತಿ ಒಂದಾದ್ರ, ಇವಾಗಿಂದಂತೂ ತಲಿ ಹೊಕ್ಕು ನಿನ್ನಿಯಿಂದ ಕುಂತ ಕಡಿ ಕುಂಡಿ ಊರಂಗಾಗವಲ್ದು. ಮೊದ್ಲಿನ ಮಗ ನೋಡಿದ್ರ ಹೆಣುಗಾಗಿ, ಗಂಡ್ಸಾಗಿರು ಅಂದಿದ್ಕೆ ಮನೆ ಬಿಟ್ಟೊಗಿ ಸುಮಾರು ದಿನ ಊರಾಗ ತಲಿ ಎತ್ಕಂಡು ತಿರಗಾಡದಂಗ ಮಾಡ್ದ, ಮರ್ತು ಬಾಳಬೇಕಂದ್ರ ಊರ ಜನ ಆಡ್ಕೋಂಡು ನಕ್ಕು ನೆಪ್ಪು ತರತಿದ್ರು. ಕೊನೆಗೆ ಅವ ನನ್ನ ಮಗನ ಅಲ್ಲ ಅನ್ನೋ ತಿರ್ಮಾನ ಮಾಡಿ ಬಿಟ್ಟಿದ್ದ ಕಲ್ಲಪ್ಪಜ್ಜ. ಇನ್ನು ಇವ್ನು ಹಿಂಗ ಮಾಡ್ತಾನಂತ ಕನ್ಸು ಮನಸಿನಾಗ ಅಂದ್ಕೋಡರ‍್ಲಿಲ್ಲ. ಎಲ್ರ ಮನಿ ಪಂಚಾಯ್ತಿ ಮಾಡೋ ಕಲ್ಲಪ್ಪಜ್ಜಗ ನಿನ್ನೇ ತಮ್ಮನ ಮನ್ನಾಗ ನೋಡಿದ ಕಾಣಿ ಕಣ್ಣ ಮುಂದ ಬಂದು ಛೀ ಅನ್ನೋಂಗಾಯ್ತು. ಊರಾಗಿನ ಪಂಚಾಯ್ತಿಯಂತೆ ಸಿದ್ದನಗೌಡ್ರ ಸಾರತ್ಯದಾಗ ಹೊಂಟಿದ್ದ ಹೊರಾಟದಾಗ ಬೆಂಬಲ ಸೂಚ್ಸಿ ಊರಿಂದೂರ ಹೊಂಡಾಕ ಹೇಳಿದ್ದ ಕಲ್ಲಪ್ಪಜ್ಜ, ಅಲ್ಲಿ ನಡದುದ್ದ ಕಂಡು ದುಃಖದಿಂದ್ಲೆ ಊರಿಗೆ ವಾಪಾಸ್ಸು ಬಂದಿದ್ದ. ಮನಿ ಬಾಗ್ಲಿಗಾಗ್ಲೆ ಇವ್ನ ಬರುವಿಕೆಗಾಗೆ ಕಾದಂಗಿದ್ದ ಸೊಸೈಟಿ ಬ್ಯಾಂಕಿನವರು ಸಾಲ ಬಡ್ಡಿ ಎಲ್ಲಾ ಸೇರಿ ಎಲ್ಡೂ ಮೂವತ್ತು ಲಕ್ಷ ವಸೂಲಿ ಮಾಡ್ಕಬೇಕಂತೇಳಿ ದೊಡ್ಡ ಬ್ಯಾಂಕಿನ ತಿರ್ಮಾನದ ಪತ್ರ ಕೊಟ್ಟು ವಾರ ವಾಯ್ದೆನು ಕೊಟ್ಟು ಸಟಕ್ಕನ ತಿರುಗಿ ಹೋದ್ರು. ಮೊದ್ಲ ಸೋತ ಮ್ಯಾರಾಗಿದ್ದ ಕಲ್ಲಪ್ಪಜ್ಜ ಅವ್ರೂ ದೂರ ಮರೆಯಾಗೋಗಂಟ ನೋಡ್ತಾನ ಇದ್ದ.

ಯಾವತ್ತೂ ಎದಿಗುಂದದ ಕಲ್ಲಪ್ಪಜ್ಜಗ ಪೋಲಿಸ್ರು, ಬ್ಯಾಂಕಿನೌರ ಉಪಟಳ ಜಾಸ್ತಿನ ಇತ್ತು. ಎನ ಆದ್ರೂ ಮುಂದಿನ ಬಾರಿಗೆ ಮಳಿ ಬಂದ್ರ ಇವ್ರೌನ ಇವ್ರ ಸಾಲ ಎಂತಾಕತಿ ತೀರಿಸಬಿಡಬೌದಂತ ಸಮಾಧಾನದಾಗ ಇದ್ರ, ನಿನ್ನೇ ರಾತ್ರಿ ತಮ್ಮನ ಮಗ ನಾಗೇಶಿ ಹೆಂಡ್ತಿ ಕೂಡ ತನ್ನ ಚಿಕ್ಕ ಮಗ ಈಶನ್ನ ಕಂಡು ಎದಿ ಧಸಕ್ಕಂತು, ಮೂಲಿ ಹಿಡ್ದು ಸರಿರಾತ್ರಿವರೆಗೂ ಎಳದಂಗ ಕೂಂತಿದ್ದ ಕಲ್ಲಪ್ಪಜ್ಜನ್ನ ಕಮಲಮ್ಮ ಊಟಕ್ಕ ಕರ್ದು ಕರ್ದು ಸಾಕಾಗಿ ಊಟ ಮಾಡ್ದೆ ಅಲ್ಲೇ ಮಲಗಿದ್ಲು. ಮಹಾಭಾರತದೊಳಗ ದುರ್ಯೊದನ ಕುರುಕ್ಷೇತ್ರ ಯುದ್ದದಾಗ ಸೋತು ಹೆದರಿ ವೈಸಂಪಾಯನ ಸರೋವರದಾಗ ಅಡಗಿ ಕೂಂತ್ರು, ಭೀಮನ ಅವಮಾನಕ್ಕ ಸತ್ರು ಹಡ್ಡಿಲ್ಲ ಅಂತ ಕೊಸರಿ ಎದ್ದು ಬರೋ ಕತಿ ಕಲ್ಲಪ್ಪಜ್ಜನ ಕಣ್ಣ ಮುಂದ ಕಟ್ಟಿತ್ತು, ಇದ ನ್ಯಾವದಾಗ, ನಾಳೆ ಮತ್ತ ಹೋರಾಟ ಕಟ್ಟಬೇಕೆಂದು ರಾತ್ರಿ ಕರೆದಿದ್ದ ಪಂಚಾಯ್ತಿಗೂ ಹೋಗರ್ಲಿಲ್ಲ.

ಬೆಳಗು ಮುಂಜಾನಿ ಈಶ ಗಂಟು ಮೂಟೆ ಸಮೇತ ಹೊಂಟಿದ್ದು ನೋಡಿ ಕಲ್ಲಪ್ಪಜ್ಜಗ ತಡಿಬೇಕನಿಸ್ಲಿಲ್ಲ ತಡಿಲಿಲ್ಲ. ಸೂರ್ಯ ಮಾರುದ್ದ ಬಂದಿದ್ದ ಕೆಂಗ್ಲು ಹೊಲದಾಗ ಕೇಳ್ತಿದ್ದ ಪ್ರೆದೇಶ ಸಮಾಚಾರ ಮುಗ್ದು, ಅವು, ಇವು ಕಾರ್ಯಕ್ರಮ ಮುಗ್ದು, ರೇಡಿಯೋ ಗರ‍್ರೋ, ಗರ‍್ರೋ ಅನ್ನಕತ್ರೂ ಕಲ್ಲಪ್ಪಜ್ಜ ಬಂದ ಮಾಡರ್ಲಿಲ್ಲ. ದನದ ಓಣಿಗುಂಟ ಎಮ್ಮೆ ಹೋಡ್ಕಂಡು ಹೊಂಟಿದ್ದ ಕಲ್ಮನಿ ದನಕಾಯ ಹುಡ್ಗ, ಕಲ್ಲಪ್ಪಜ್ಜನ್ನ ರೇಡಿಯೋ ಸದ್ದು ಕೇಳಿ ಆಕಡಿ ಹಣುಕಿದ. ಕೊಳ್ಳ ಕಟ್ಟಿದ್ದ ಕಾಳಿಂಗ ಮಾಲಿಂಗ ಮುಂಜಾನಿಂದ ಹಂಗ ನಿಂತು ಸಾಕಾಗಿ ಮಲಗಿದ್ವು ಒಂದು ಗೇರಿನೂ ಹರಗಿಲ್ಲ, ಹೊಲದಾಗ ಹಳೇ ಮುಕ್ಕು ಹಂಗೆ ಐತಿ. ಬಿಸ್ಲು ಏರಕ್ಕತ್ತತ್ತು. ಅಲ್ಲೇ ಮಲ್ಗಿದ್ದ ಕಲ್ಲಪ್ಪಜ್ಜನ್ನ ಮಾಲಿಂಗ ಕೂಕ್ಕಿಯೊಳಗಿಂದ ನಾಲ್ಗಿ ಹೊರ ಹಾಕಿ ನೆಕ್ಕಕತ್ತಿತ್ತು.

ಊರಾಗ ಮೊನ್ನಿಯಿಂದ ಬಂದ ಜುಬುರು ಮಳಿಗೆ ಗೇಣುಮಟ ನೆಲ ಹಸಿಯಾಗಿತ್ತು. ಐದು ವರ್ಷದಿಂದ ಮಳಿ ಬರ್ದ, ಬಂದ ಮಳಿಯ್ಯಾಗ ಉಣ್ಣಕಾಗೋವಟ ಬೆಳ್ಕಂಡವ್ರೆ ದೊಡ್ಡ ಹಿಡುವಳಿದಾರರು. ಇನ್ನು ಒಂದೆಲ್ಡೆಕ್ರೆರೆ ಇದ್ದೋರ ಗತಿ ಹೇಳಬಾರ್ದು, ಉಣ್ಣಾಕ ಹಿಟ್ಟಿಲ್ಲ. ಹಿಂಗ ಮಳಿ ಮುಕ್ಳಿ ತೋರ‍್ಸಿ ಹೋದ್ರ ಹೆಂಗಪ್ಪ, ಅಂತಾ ವಾರಗಿ ಮಂದಿ ಅಲ್ಲಲ್ಲಿ ಮಿಟಿಂಗು ಮಾಡಿ ಕೆಲವೋಬ್ರು ಗುಳೆ ಹೊಂಟ್ರ, ಇನ್ನು ಕೆಲವೋರು ಹುಬ್ಬಳ್ಯಾಗ ಎಟಿಎಮ್ ಸೆಕ್ಯೂರಿಟಿ ಕೆಲ್ಸಕ್ಕ ಹೊಂಟು ಊರು ಬರಿದಾಗಕತ್ತಿತ್ತು. ಈ ಬ್ಯಾರಿನೂ ಮಳಿ ಇಲ್ದ ನೆಲ ಕರ‍್ದು – ಕರ‍್ದು ನೇಗ್ಲು ಸವದಿದ್ವು, ಈಗೆಲ್ಡು ದಿನ ಆತು ಚೂರು ಜಿನಗಾಕತ್ತಿ. ಇಂತಿಪ್ಪ ಮುಂಜಾನೆಯೊಳ್ಗ ನಡಕ್ಕೊಂತ ಮಲ್ಗಿದ್ದ ಬಡಕಲು ಶರೀರಕ್ಕ, ಅಲ್ಲಿನ ಬೆಳಗ ವಾತಾವರಣ ನೋಡಿ ಕುಷಿಯಾದಂಗನಿಸ್ತು, ತಾ ಬಿಟ್ಟೋಗಿ ಆರು ತಿಂಗಳಾತು ಊರು ಹಂಗ ಐತಲ್ಲ ಅಂತ. ಮುಖದ ಎಸಳುಗಳಲ್ಲಿ, ಅಲ್ಲಲ್ಲಿ ಗಡ್ಡದ ಕುರುಹು ಹಂಗೆ ಇತ್ತು. ಹೊಸದಾಗಿ ನೋಡರ‍್ಗೆ ಇದೇನು ಗಂಡೋ, ಹೇಣ್ಣೋ ಅನ್ನೋ ಗುಮಾನಿ ಹುಟ್ಟದಂತೂ ಗ್ಯಾರಂಟಿ. ಗಡಸು ಧನಿ ಅನ್ನಕಿನ್ನ ಗಂಡಸ ಧನಿ, ಎತ್ರದ ಕಾಯ, ಉಟ್ಟಿದ್ದ ಬಟ್ಟೆ ಮ್ಯಾಲ ಹೇಳಬೌದು ಅದು ಹೆಣ್ಣಂತ. ಈಗ ಅವ್ಳ ಹೇಸ್ರು ಕೇಳಿದ್ರ ಈರವ್ವ, ಈರ‍್ರೀ ಅಂತ ಕರಿಬೌದು.

ಈರ‍್ರೀ ಹುಟ್ಟಿದ್ದು ಯಮನೂರಿನ ಕಲ್ಲಪ್ಪ ಮತ್ತ ಕಮ್ಲಮ್ಮರ ಹೊಟ್ಯಾಗ ಅವಾಗ ಗಂಡ್ಸು ಆಗಿದ್ಕ ಹೇಸ್ರು ಈರಪ್ಪ. ಕಲ್ಲಪಗಬಿತ್ತೋ ಕೇಲ್ಸ ಅಂದ್ರ ಎಲ್ಲಿಲ್ಲದ ಕುಷಿ. ಅವತ್ತಿನ ಕಾಲದಾಗ ರೇಡಿಯೋ ಹೆಗ್ಲಿಗೆ ಹಾಕ್ಕೊಂಡು ಬಿತ್ತೋ ಸುಗ್ಯಾಗ ಎಲ್ಡ್ರ ಹೊಲದಾಗ ಅಕ್ಕಡಿಸಾಲು, ಗ್ವಾಜ್ವಾಳ, ಔಡ್ಲ ಬಿತ್ತೋದ್ರಲ್ಲಿ ಎಕ್ಸಪರ್ಟ್. ಮಳಿಗಾಲ ಬಂತಂದ್ರ ಸಾಕು ಪುರಸೊತಿಲ್ಲದಾಂಗ ಇರ್ತಿದ್ದ. ಕಮ್ಲವ್ವನ ಮದ್ವೆ ಆಗಿ ಲಿಂಗಾಯತರ ಓಣ್ಯಾಗ ನಾಕನೇ ಮನಿನ ಖರೀದಿ ಹಿಡ್ದಿದ್ದ. ಪ್ರತಿ ವರ್ಷ ಯಮನೂರ ಮೇಲಾಸಿ ಮುಂದೂರ ಮಸೀದಿಗೆ ಹೋಗ್ತಿದ್ದ ಮುಸಲ್ಮಾನರಿಗೆ ಅರವಟ್ಟಿಗೆ ಕಟ್ಟೋದು, ಊರಾಗ ಅಲ್ಲಾಸ್ವಾಮಿ ಕೆಂಡ ತುಳಿಯೊದು, ಕಂಬ್ದವ್ವನ ಗೂಡಿ ಪೂಜಿ ಮಾಡೋದು ಬ್ಯಾರೇ ಜಾತಿ ಮತ್ತ ತನ್ನ ಜಾತಿ ಜನಕ್ಕ ಹಿಡಿಸ್ತರ‍್ಲಿಲ್ಲ.

ಈರ‍್ರೀ ಯಾರೊಬ್ರಿಗೂ ಮುಖ ತೋರ್ಸಕಾಗ್ದ ಹನುಮಪ್ಪನ ಕಟ್ಟಿ ಬಿಟ್ಟು ಕದಲಿರಲ್ಲ, ಹಂಗ ಊರು ಕೊಂಚ ಸುದಾರಿಸಿಕೊಂಡು, ಒಬ್ಬೊಬ್ರೆ ಜನ ಓಡಾಡ್ತಿದ್ರೂ, ಯಾರೊಬ್ರೂ ಈರ‍್ರೀನ ಗುರ್ತು ಹಿಡಿಯುವ ಲಕ್ಷಣ ಕಾಣಲಿಲ್ಲ. ಬರಿ ಆರು ತಿಂಗಳಲ್ಲಾದ ತನ್ನಾಕೃತಿಯನ್ನ ಅಪ್ಪಾನೂ ಗುರ್ತು ಹಿಡಿಯಲ್ಲಂತ ಖಾತ್ರಿಯಾಯ್ತು. ಹೆಂಗ ಮುಖ ತೋರ್ಸದು, ಜನ ಕೂಡ್ಸಿ ರಂಪಾಟ ಮಾಡಿದ್ರ, ಮೊದ್ಲಿನಂಗ ಬಾರಕೊಲು ತಂಗಡು ಬಾರಿಸಿದ್ರ ಅಂತೆಲ್ಲಾ ವಿಚಾರ ತಲಿ ತಿಂದವು. ಏನಾದ್ರಾಗ್ಲಿ ಒಂದಪ ಕಣ್ತುಂಬ ನೋಡ್ಕೊಂಡು ಹೊದ್ರಾತಂತ ಅನುವಾದ್ಲು.

ದಿಕ್ಕಾರ ದಿಕ್ಕಾರ

ಸರ್ಕಾರಕ್ಕೆ ದಿಕ್ಕಾರವೆನ್ನೋ ಕೂಗೂ ಜೋರಾಗಿಯೇ ಇತ್ತು. ಅಪೋಜಿಸನ್ ಲಿಡರ್, ಆಡಳಿತದ ಸಿ.ಎಂ. ನಮ್ಗೆ ಮಹದಾಯಿ ಪರಿಹರಿಸಿಕೊಡಬೆಕೆಂಬೋ ವಾದ ಅತಿರೇಕಕ್ಕೇರುವ ಮಟ್ಟಕ್ಕೆ ಹೋರಾಟ ಇತ್ತು. ನೂರೈವತ್ತಕ್ಕೂ ಹೆಚ್ಚು ಹಳ್ಳಿಯಿಂದ ಚಕ್ಕಡಿ, ಟಾಂಗಾ ಹೊಡ್ಕಂಡು ಬಂದು, ಚನ್ನಮ್ಮನ ಸರ್ಕಲ್‌ಗೆ ಕಟ್ಟಿ ಹಾಕಿದ್ದರಿಂದ, ಅಲ್ಲೋಂದು ದೊಡ್ಡ ಜಾತ್ರಿನೇ ಮೈ ತಳದಿತ್ತು. ಮಾತಿನ ಚಕಮಕಿ ನಡುವೆ ಯಾವನೋ ಒಬ್ಬ ಕಲ್ಲು ಎಸೆಯುತ್ತಿದ್ದಂತೆ, ಅದನ್ನೇ ಕಾಯುತ್ತಿದ್ದ ಪೋಲಿಸ್ರು ರೈತರ ಗುಂಪಿನತ್ತ ಲಾಟಿ ಚಾರ್ಜು ಮಾಡಿದ್ರು. ನೋಡನೋಡುತ್ತಿದ್ದಂತೆ ಕೂಗಾಟ, ಅರಚಾಟದ ಸದ್ದು ಕೇಳಹತ್ತಿ, ಎತ್ತಂದರತ್ತ ಓಡತೋಡಗಿದ ರೈತರು ಅವರ ಎತ್ತು, ಕುದುರೆಗಳನ್ನು ಬಿಚ್ಚೋಡೆದು ಓಡಹತ್ತಿದರು. ಕಕ್ಕಾಬಿಕ್ಕಿಯಾದ ಎತ್ತು, ಕುದುರೆಗಳು ಲಾಗ ಕಿತ್ತು, ಭಯಕ್ಕೆ ಎಲ್ಲೆಂದರಲ್ಲಿ ಸಗಣಿ ಉಚ್ಚಿಕೊಂಡು ದಿಕ್ಕಾಪಾಲಾದವು. ರೈತ ಮುಖಂಡನನ್ನು ಬಂಧಿಸಿ ಅವನೂರಿಗೆ ಕರ್ಫೂ ಆರ್ಡರು ಮಾಡಲಾಯಿತು.

ಹುಬ್ಬಳ್ಳಿ ಚನ್ನಮ್ಮ ಸರ್ಕಲ್ನ್ಯಾಗ ಸಿದ್ದನಗೌಡ್ರು ಅರೆಸ್ಟಾದ ಮ್ಯಾಲ ಊರಾಗ ಎಲ್ಡ್ರೂ ಮುಕುಳಿ ಬಿಗಿ ಹಿಡ್ದು ಓಡಾಡ್ತರ. ಯಾವ ಕ್ಷಣಕ್ಕೆ ಎನು ಅಕ್ಕಾತನ್ನೊದು ಗೊತ್ತಲ್ದದ್ದಕ್ಕೆ.

ಬಸವಣ್ಣನ ಮೈಕಿನಲ್ಲಿ ಸಾರಿದಂಗ ನಡಿಬೇಕಿದ್ದ ಪಂಚಾಯ್ತಿಗೆ, ಯಾರೊಬ್ರೂ ಬರಕ ಮನಸ್ಸ ಮಾಡ್ದ ಅಲ್ಲಲ್ಲಿ ನಾಕ ಮಂದಿ ನಿಂತು ಮಾತಾಡಿ, ಕೇರಿಯೊಳಗೊಬ್ಬನ್ನ ಕೂಡ್ಸಿ ಕಲೆ ಹಾಕಿದ್ದ ಜ್ವಾಳ, ದುಡ್ಡು, ಅಕ್ಕಿಗಳನ್ನ ಪಂಚಾಯ್ತಿಗೊಪ್ಸೊಕೆ ಕಳ್ಸೋವಟತ್ತಿಗೆ ಸಂಜಿ ಕವ್ದು ಕತ್ತಲಾಗಿತ್ತು. ಹತ್ತಹದ್ನೈದು ಮಂದಿ ಆಟ ಸರ‍್ಕೋಡು ಕಾಳುಕಡಿ ದುಂಡಗಿಟ್ಟು, ನಾಳೇ ಇದ್ನ ತಗೊಂಡೊಗಿ ಹುಬ್ಬಳ್ಳಿ ಚನ್ನಮ್ಮ ಸರ್ಕಲ್‌ನ್ಯಾಗ ಚಲ್ಲಿ ಅದ್ರಲ್ಲೇ ಉಪವಾಸ ಧರಣಿ ಕೂರೋದಂತ, ಅದ್ಕ ಕಲ್ಲಪ್ಪಜ್ಜನ ಮುಂದಾಳತ್ವ ವಹಿಸದಂತ ತಿರ್ಮಾನ ಮಾಡಿ, ಹಲಿಗಿದೊರ್ಗೆ ಹೇಳೋಕು ಒಬ್ನಿಗೆ ಹೇಳಿ ಓಣಿ ವಾರಿ ಹಿಡ್ಕೋಂಡು ನಾಕ್ನಾಕ ಮಂದಿ ಮರೆಯಾದ್ರು. ಎಲ್ಡ್ರಿಗೂ ಡೌಟು ಊರಾಗಿನ ಹಿರಿಮನ್ಸ ಕಲ್ಲಪ್ಪಜ್ಜ ಪಂಚಾಯ್ತಿಗೆ ಬರದದ್ದು, ಆಟೋತ್ತಿಗೆ ಹಲ್ಟ ಬಸ್ಸು ಬಂತು; ಈರ‍್ರೀ ಹನುಮಪ್ಪನ ಕಟ್ಟಿ ಸ್ಟಾಪಿಗೆ ಇಳಿದ್ಲು. ಊರ ವಾಸ್ನಿ ಬಡಿತಿದ್ದಂಗ ಜಡ ಹಿಡ್ದ ಮೈಯೊಳ್ಗ ಹುಮಸ್ಸು ಉಕ್ಕಿ ಬಂದಂಗಾತು.

ಹನುಮಪ್ಪಗ ನಮಸ್ಕಾರ ಮಾಡಿ ಹಿಂದಿನ ಕಟ್ಟಿನ ಸವ್ರಿಕೊಂತ ಸುಖಪಟ್ಲು. ಇದ ಆಲದಮರಕ್ಕ ಜೋಕಾಲಿ ಕಟ್ಟಿ ಪಂಚಮ್ಯಾಗ ಜೋಕಾಲಿ ಆಡಿದ್ದು, ಕನ್ನಡಸಾಲಿ ಮಗ್ಗಿ ಪಾಠಗಳೆಲ್ಲಾ ಹರಿದಾಡಿ ಹೋದ್ವು ಈರ‍್ರೀ ನೆಪ್ಪಿನ್ಯಾಗ. ತನ್ಗ ಸರಿಯಾಗಿ ಹನ್ನೆಲ್ಡು ವರ್ಷ ಇರಬೇಕು ಅಪ್ಪಯ್ಯ ತನ್ನ ಮ್ಯಾಲ ಕೈಮಾಡಿ, ‘ಬೋಸುಡಿಕೆ ಹೆಣಗನಂಗ್ಯಾಕ್ಲೆ ಆಡ್ತಿ ಗಂಡದಿ ಮಗ್ನ ಹಂಗಿರು ಅದ್ನ ಬಿಟ್ಟು ಇನ್ನೊಂದು ಸಲ ಹೆಂಗಸರ ಸಂದ್ಯಾಗಿದ್ದೆಂದ್ರ ಕೆರ ಕಿತ್ತು ಹೊಕ್ಕಾವು’ ಅಂತೆಲ್ಲಾ ಬೈದು ಹೊಡೆದಿದ್ದ. ಕಾಡ್ಸಕಂತಲೇ ಹೆಣಗ ಅಂತ ಅಂಗ್ಸೋ ಹುಡುಗ್ರು, ಅಪ್ಪ ಎಲ್ಲೋದ್ರು ನಿನ್ನ ಮಗ ಹೆಣುಗನಂತೆ ಹೌದಾ..? ಅನ್ನೋ ಜನ. ಅಪ್ಪ ಈ ಕೊಚನ್‌ಗೆ ಬಂದು ಬಂದು ಈರನ್ನ ಹೊಡೆಯುವ ಮುಂದ ಕಮ್ಲವ್ವ ಮತ್ತ ಬಸರಾಗಿದ್ದು ಕನಪರ್ಮ್ ಆಗಿತ್ತು. ಹೊಡೆದಷ್ಟು ಹೆಣ್ಣಿನ ಅಂಶ ಆವರಿಸ್ಕೋತ ಒಂದಿನ ಅಪ್ಪನ ಹೊಡ್ತ ತಾಳಲಾಗದೇ ಹುಬ್ಬಳ್ಳಿ ಟ್ರೇನು ಹತ್ತಿದ್ದ ಈರ, ಊರ ಬಿಟ್ಟ ಮ್ಯಾಲ ಕೇಲವೋಸು ದಿನ ಅಲ್ಲಲ್ಲಿ ಕೆಲ್ಸ ಮಾಡಿ ಹುಬ್ಬಳ್ಳಿ ಬಸ್ಟಾಂಡಿನ್ಯಾಗ ಮಂಗಳಮುಖಿಯರ ಪರಿಚಯ ಹತ್ತಿ ಅವ್ರ ಗುಂಪಿಗೆ ಸೇರಿ ಈರ‍್ರ, ಈರ‍್ರೀ ಆದ್ಲು. ಹೆಣ್ಣಾಗಿ ಊರಿಗೆ ಬರೊಕಾಗ್ದೆ, ಸಮಾಜದಲ್ಲಿ ಬಾಳಕಾಗ್ದೆ, ಹುಬ್ಬಳ್ಳಿ, ಎಲ್ಲಮ್ಮನಗುಡ್ಡ ಅಂತೆಲ್ಲಾ ತಿರುಗಾಡಿ ಅಪ್ಪ ಅವ್ವನ್ನ ನೋಡೋ ಆಸೆಯಿಂದ ಬಂದಿದ್ದ.

ಊರ ಕಡಿಂದ ಧರಣಿ ಬೋರ್ಡು ಹಿಡ್ಕಂಡು ಜನ ಹುಬ್ಬಳ್ಳಿಗೊಗಾಕ ಬರಕತ್ತಿದ್ರು, ಅವ್ರ ಗುಂಪಿನ್ಯಾಗ ಕಲ್ಲಪ್ಪಜ್ಜ ಇದ್ದಿಲ್ಲ ಎಲ್ಲರ ಕೊಚನ್ ಎಲ್ಲಿ ಕಲ್ಲಪ್ಪಜ್ಜ ಅನೋದೇ ಆಗಿತ್ತು. ಇತ್ತ ಹನುಮಪ್ಪನ ಕಟ್ಟಿ ಕಡೆಯಿಂದ ರ‍್ರೀ ಊರೋಳಗ ಹೊಂಟಿದ್ಲು, ದನದ ಓಣಿ ದಾರಿಗುಂಟ ದನಕಾಯ ಹುಡ್ಗ ಬಂದು ಒಂದ ಉಸ್ರಿಗೆ ಎಲ್ಲಾ ಹೇಳ್ಬಿಟ್ಟ, ಸುದ್ದಿ ಆಗ್ಲೇ ಹುಬ್ಬಳ್ಳಿ ಮುಟ್ಟಿ ಪೋಲಿಸ್ರು ವ್ಯಾನು ಸಮೇತ ಬರಾಕ ಹತ್ತಿದ್ರಂತ.

ಎಲ್ಡು ತಿಂಗಳಾತು, ಕೆಂಗ್ಲು ಹೊಲದಾಗ ಮಾಲಿಂಗ, ಕಾಳಿಂಗ ಅನ್ನೋ ಸದ್ದು ಕೇಳತೈತಿ ಹೊಲ ಹೋಡಿಯೊಕ್ಕತ್ತಿದ್ದು ಆಕೃತಿ ಹೇಣ್ಣೋ, ಗಂಡೋ ತಿಳಿವಲ್ದು.

*****

ನಾನು ಹಳ್ಳಿಯಿಂದ ಬಂದವನಾದ್ದರಿಂದ ನಮ್ಮೂರಲ್ಲಿ ನಮಗೆ ಯಾವುದೇ ಸಾಹಿತ್ಯದ ಸೊಗಡಿರಲಿಲ್ಲ. ಸಾಹಿತ್ಯದ ಪುಸ್ತಕಗಳಿರಲಿಲ್ಲ, ಪತ್ರಿಕೆಗಳು ಸಿಗುತ್ತಿರಲಿಲ್ಲ. ನಾನು ಎಂಟನೆಯ ತರಗತಿಯಲ್ಲಿದ್ದಾಗ ‘ಬಸಯ್ಯ ಮತ್ತು ಜೇನುಗೂಡು’ ಎಂಬ ಅಮರೇಶ ನುಗಡೋಣಿಯವರ ಕತೆ ಪಠ್ಯಕ್ಕಿತ್ತು, ಅದೇ ನಾನು ಓದಿದ ಮೊದಲ ಕತೆ. ಅವತ್ತಿನಿಂದಲೇ ನಾನು, ನನ್ನ ಅನುಭವಗಳಿಗೆ ಕತೆಯ ರೂಪ ಕೊಡಬೆಕೆಂಬ ಗುಂಗಿಹುಳು ಹೊಕ್ಕಿದ್ದು. ಒಮ್ಮೆ ರವಿ ಬೆಳಗೆರೆಯವರು ಅವರ ಸಂದರ್ಶನದಲ್ಲಿ ಹೇಳಿದ್ದರು ‘ನೀನು ಬರೆದ ಬರಹವನ್ನು ಹತ್ತು ವರ್ಷಗಳವರೆಗೆ ನಿನ್ನ ಬಳಿಯೇ ಇರಲಿ ಆಮೇಲೆ ಪತ್ರಿಕೆಗೆ ಅಥವಾ ಪ್ರಕಟಣೆಗೆ ಕಳಿಸು, ಆಗಲೂ ಅದು ಪ್ರಸ್ತುತವಾಗಿದ್ದರೇ ಅದು ಮೌಲ್ಯಯುತ ಬರಹ’ವೆಂದು, ಅದು ತುಂಬಾ ಸತ್ಯವೆನಿಸಿತು ನನಗೆ. 2015ರಲ್ಲಿ ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್‌ನಲ್ಲಿ ಮಹದಾಯಿ ಹೋರಾಟ ನಡೆಯುತ್ತಿತ್ತು. ಅಲ್ಲಿ ರೈತರು ಚಕ್ಕಡಿ ಹೊಡಕ್ಕೊಂಡು ಬಂದು ಹೊರಾಟಕ್ಕೆ ಬೆಂಬಲಿಸಿದ್ದರು. ಅವತ್ತು ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್‌ನಲ್ಲಿ ಮತ್ತು ಯಮನೂರಿನಲ್ಲಿ ನಡೆದ ಪೋಲಿಸರ ದಬ್ಬಾಳಿಕೆಯಿಂದ ಹಲವಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾಗಿದ್ದವು, ಅವಾಗ ಬರೆದ ಕತೆ ‘ಕರಿಯೆತ್ತ ಕಾಳಿಂಗ ಬಿಳಿಯೆತ್ತ ಮಾಲಿಂಗ’ ಅದು ಸತ್ಯವಾಗಿ ಕಂಡಿದ್ದ ಕತೆಯಾದ್ದರಿಂದ ನಮ್ಮ ಹುಬ್ಬಳ್ಳಿಯ ಭಾಷೆಯಲ್ಲೇ ಬರೆದೆ. 2019ರವರೆಗೆ ಅದನ್ನು ಎಲ್ಲಿಯೂ ಕಳಿಸಿರಲಿಲ್ಲ, 2019ರ ವಿಜಯ ಕರ್ನಾಟಕ ಯುಗಾದಿ ಕಥಾಸ್ಪರ್ಧೆಗೆ ಅದನ್ನು ಕಳಿಸಿದೆ, ಮೂರನೇ ಬಹುಮಾನಕ್ಕಾಗಿ ಆ ಕತೆ ಆಯ್ಕೆಯಾದಾಗ ತುಂಬಾ ಖುಷಿಯಾಯಿತು.