Advertisement
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸ್ವಾಮಿ ಪೊನ್ನಾಚಿ ಕತೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸ್ವಾಮಿ ಪೊನ್ನಾಚಿ ಕತೆ

“ಆ ಧೂಪದ ಹೈಕಳನ್ನು ಯಾರೂ ಹತ್ತಿಸಿಕೊಂಡು ಹೊಬ್ಗ್ಯಾಡ್ರಿ” ಎಂದು ಹೇಳಿದರೆ; ಎರಡು ದಿನ ಹೈಕಳು ಇಸ್ಕೂಲಿಗೆ ಬಂದರೆ ಮೂರನೆ ದಿನಕ್ಕೆ ಮತ್ತೆ ಅದೇ ರಾಗ ಅದೇ ಹಾಡು. ರೋಸಿ ಹೋದ ಮೇಷ್ಟ್ರು ಒಮ್ಮೆ ಬೆಟ್ಟದ ಇನ್ಸಪೆಕ್ಟ್ರು ಊರಿಗೆ ಬಂದಾಗ “ಯಾರಿಗೂ ಹೆದರದ ಇವರು ಪೋಲಿಸ್ನೋರ‍್ಗೆ ಖರೇ ಹೆದ್ರೂದು” ಎಂದು ಸ್ವಾಲಿಗ್ರ ಕೇರಿಗೆ, ಹೊಲೇರಕೇರಿಗೆ ಕರ್ಕೊಂಡೋಗಿ “ಮಕ್ಕಳನ್ನ ತಾಳುಬೆಟ್ಟಕ್ಕೆ ಧೂಪ ಮಾರುವುದಕ್ಕೆ ಕಳುಹಿಸಿದರೆ ಜೇಲಿಗೆ ಹಾಕಿಸ್ತೀನಿ ಎಂದು ರೋಪ್ ಹೊಡೆಸಿದರು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸ್ವಾಮಿ ಪೊನ್ನಾಚಿ ಕತೆ “ಧೂಪದ ಮಕ್ಕಳು” ನಿಮ್ಮ ಓದಿಗೆ

ಹಾಲುಮಲೆ, ಜೇನುಮಲೆ, ಗುಂಜುಮಲೆ, ಗುಲಗಂಜಿಮಲೆ, ಎಪ್ಪತ್ತೇಳು ಮಲೆಯನ್ನು ಸುತ್ತಿ ಸುರುಳಿ ಸಿಂಬಿ ಮಾಡಿಕೊಂಡು ತಲೆದಿಂಬು ಮಾಡಿ ಮಲಗಿದಂಥ ನಮ್ಮಪ್ಪಾಜಿ ಮಾಯ್ಕಾರ ಮುದ್ದು ಮಾದೇವನಿಗೊಂದು ಸಾರಿ ಉಘೇ ಅನ್ರಪ್ಪೋ……….. ಉಘೇ……….. ಉಘೇ………… . ಆ ಭತ್ತಿ ಈ ಭತ್ತಿ ಹೂಭತ್ತಿ ಸುರ್‌ಸುರ್ ಭತ್ತಿ ಸಾಂಬ್ರಾಣಿ ಭತ್ತಿ ಬಿದರ‍್ಬುತ್ತಿಯೊಳ್ಗೆ ಗೌಳ್ ಸುತ್ತಿ……….. ಧೂಪ ದೀಪದೊಡೆಯ ಏಳುಮಲೆ ಮಾಯ್ಕಾರ ಮಾದಯ್ಯನ ಪಾದಕ್ಕೊಂದಾರ್ತಿ ಉಘೇ ಅನ್ರಪ್ಪೋ……….. ಉಘೇ……….. ಉಘೇ. ಮಾದಪ್ಪನ ಪರ‍್ಸೆಗೊಂದಪ ಉಘೇ ಅನ್ರಪ್ಪೋ……….. ಉಘೇ……….. ಉಘೇ……….. ಜನಮರುಳೋ ಜಾತ್ರೆ ಮರುಳೋ ಇಲ್ಲಾ ಇಲ್ಲಿ ಜನಜಾತ್ರೆ ಎರಡೂ ಮರುಳೋ? ಇವರೆಲ್ಲರ ಭಕ್ತಿ ಕಂಡ ಆ ಮಲೆ ಮಾದಪ್ಪ ಮರುಳೋ! ಕಾರಲ್ಲಿ, ಕಾಲಲ್ಲಿ, ಬಸ್ಸಲ್ಲಿ, ಬಯಲಲ್ಲಿ ಸ್ಕೂಟ್ರಲ್ಲಿ, ಕ್ಯೂನಲ್ಲಿ, ಸೈಡಲ್ಲಿ, ಸೈಕಲಲ್ಲಿ ಹೀಗೆ ಎಲ್ಲೆಂದರಲ್ಲಿ ಜನವೋ ಜನ. ಉಘೇ ಮಾದಪ್ಪ ಎನ್ನುತ್ತಾ ಹೈಕ್ಳು, ಮಕ್ಳು, ಹೆಂಗಸ್ರು, ಮುದುಕ್ರು, ಮುದುಕೀರು, ಹುಡುಗ್ರು, ಹುಡುಗೀರು, ಹೀಗೆ ಆ ನಮ್ಮಪ್ಪನ್ ಭಕ್ತಿಗೆ ವಯಸ್ಸುಂಟೇ, ವಾರುಂಟೇ, ಜಾತ್ಯುಂಟೇ, ಜನಗುಂಟೇ, ಬಡವರುಂಟೇ, ಬಾಗ್ದಾರುಂಟೇ ಎನ್ನುತ್ತಾ ತಲೆಯ ಮೇಲೊಂದು ಬುತ್ತಿಯ ಗಂಟನ್ನು ಹೊತ್ತುಕೊಂಡು ಇರುವೆ ಗುಂಪುಗಳು ಸಾಲಾಗಿ ಹೋಗುವಂತೆ ಜನ ಬರುತ್ತಿದ್ದರು. ತಾಳು ಬೆಟ್ಟದ ಆ ಎರಡು ಕಮಾನುಗಳ ನಡುವೆ ಇರುವ ಕಪ್ಪನೆಯ ದುಂಡನೆಯ ಕಲ್ಲಿನ ಎದುರುಗಡೆ ನಿಂತು ಬಲಗೈಯಲ್ಲಿ ಆ ತೆಂಗಿನಕಾಯಿ ಹಿಡಿದು ಆ ಕರೀಕಲ್ಲಿನ ಸುತ್ತ ಪ್ರದಕ್ಷಿಣೆ ಹಾಕುತ್ತಾ ಕಾಯಿ ತಿರುಗಿಸಿ “ನಮ್ಮಪ್ಪಾ…… ಮಾದಪ್ಪ……….. ನನಗೆ ಒಳ್ಳೇದು ಮಾಡಪ್ಪ” ಎಂದು ಕೈ ಮೇಲಕ್ಕೆತ್ತಿ ಆಕಾಶದ ಕಡೆ ಮುಖವನ್ನು ಒಮ್ಮೆ ನೋಡಿ ತುಟಿಯಲ್ಲಿ ಏನೇನನ್ನೋ ಗೊಣಗಿಕೊಳ್ಳುತ್ತಾ ಕಪ್ಪುಟಾರಿನ ರಸ್ತೆಯ ಮೇಲೆ ಆ ತೆಂಗಿನ ಕಾಯಿಯನ್ನು ಕುಕ್ಕಿದರೆ ಪಟಾರ್ ಎಂದು ಕಾಯಿ ಒಡೆದುಕೊಳ್ಳುತ್ತಿತ್ತು. ನಾ ಮುಂದು ತಾ ಮುಂದು ಎಂದು ಹಲವು ಕೈಗಳು ಚಲ್ಲಾಪಿಲ್ಲಿಯಾದ ಆ ಕಾಯಿ ಚೂರುಗಳನ್ನು ಎತ್ತಿಕೊಳ್ಳಲು ಮುನ್ನುಗ್ಗುತ್ತಿದ್ದವು. ಕೊನೆಗೆ ಯಾವುದೋ ಒಂದು ಬಲಿಷ್ಠ ಕೈ ಇತರೆ ಎಲ್ಲಾ ಕೈಗಳನ್ನು ಹಿಂದಕ್ಕೆ ತಳ್ಳಿ ಬಿದ್ದಿದ್ದ ಕಾಯಿಚೂರುಗಳನ್ನು ತೆಗೆದು ತನ್ನ ಬ್ಯಾಗಿಗೆ ಸೇರಿಸಿಕೊಳ್ಳುತ್ತಿತ್ತು. ಬಲಿಷ್ಠ ಕೈಯನ್ನು ಶಪಿಸುತ್ತಾ ಉಳಿದ ಕೈಗಳು ನಿರಾಶೆಗೊಂಡು ಮತ್ತೆ ಧೂಪದ ಬಟ್ಟಲನ್ನು ಹಿಡಿದು ಧೂಪ……….. ಧೂಪ……….. ಎಂದು ಅರಚುತ್ತಾ ಹಂಚಿಹೋಗುತ್ತಿದ್ದವು.

ಮಾದಯ್ಯನ ಪಾದವಿರುವುದು ಇಲ್ಲೇ ಎಂದು ಬೆಟ್ಟಕ್ಕೆ ಬರುವ ಯಾರೇ ಆದರೂ ತಾಳು ಬೆಟ್ಟದಲ್ಲಿ ಸ್ವಲ್ಪ ಹೊತ್ತು ಗಾಡಿಗಳನ್ನು ನಿಲ್ಲಿಸಿ ಕಮಾನು ಗೋಪುರದ ಕೆಳಗೆ ಗುಂಡಗೆ ದಪ್ಪಕ್ಕಿರುವ ಕರೀಕಲ್ಲಿಗೆ ಅರಿಶಿನ ಕುಂಕುಮ ಹಚ್ಚಿ; ಯಾವಾಗಲೂ ಬೆಂಕಿ ಮಾತ್ರ ಉರಿಯದೆ ಬರೀ ಹೊಗೆಯಾಡುತ್ತಿದ್ದ ಆ ಧೂಪದ ಹೊಂಡಕ್ಕೆ ಧೂಪ ಹಾಕಿ ಈಡುಗಾಯಿ ಒಡೆದು ಕೈ ಮುಗಿದರೆ ಅವರ ಅರ್ಧ ಹರಕೆ ಅಲ್ಲಿಗೆ ಈಡೇರಿದಂತೆಯೇ………! ಇನ್ನೂ ಅವರ ಪಾದಾರವಿಂದಗಳನ್ನು ಬಸ್ಸಿನಿಂದ ನೆಲಕ್ಕೆ ಊರಿರುವುದೇ ಇಲ್ಲ; ಕೈಯಲ್ಲಿ ಧೂಪದ ಬಟ್ಟಲನ್ನು ಹಿಡಿದು ಸಣ್ಣಗೆ ಧೂಪಹಾಕಿ ಹೊಗೆ ಬರಿಸುತ್ತಾ ಪರಿಚಯದ ವ್ಯಕ್ತಿಗಳೋ ಎನ್ನುವಂತೆ ಹೆಗಲಿಗೊಂದು ತಾತನ ಕಾಲದ ಯಾವುದೋ ಬ್ಯಾಗನ್ನು ನೇತುಹಾಕಿಕೊಂಡು “ಅಣ್ಣಾವ್ರೆ……….. ಧೂಪ……….. ಅಕ್ಕಾವ್ರೆ ಧೂಪ……….. ತಕ್ಕಳಿ……….. ಅಲ್ಲಿ ಧೂಪ ಹಾಕಿ……….. ನಿಮ್ ಪಾಪ ಕಳ್ಕಳಿ……….. ಎಂದು ಇಳಿದವರ ಮುಖಕ್ಕೆ ನೇರವಾಗಿ ಪೈಪೋಟಿಗಿಳಿದವರಂತೆ ನುಗ್ಗಿದಾಗ “ಸರಿ ನಿಮ್ಮ ಹೆಸ್ರೇಳಿ……….. ಪಾಪ ಕಳ್ಕೋತೀವಿ, ಫ್ರೀಯಾಗಿ ಧೂಪ ಕೊಡ್ರಪ್ಪಾ………..” ಎಂದು ಯಾರದರೂ ಕೇಳಿದರೆ ಶುದ್ದ ಹ್ಯಾಪರಂತೆ “………..ಯೇ………..” ಎನ್ನುತ್ತಾ ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದರು. ಯಾವತ್ತೂ ಬೆಟ್ಟಕ್ಕೆ ಬರದೆ ಈಗತಾನೆ ಮೊದಲಾಗಿ ಅಪರೂಪಕ್ಕೆ ಬಂದವರು ಎಲ್ಲೋ ಸುಮ್ಮನೆ ಧೂಪ ಹಂಚುತ್ತಿರಬಹುದೆಂದು ಕೊಟ್ಟವರ ಹತ್ತಿರವೆಲ್ಲಾ ಇಸಗೊಂಡು ಧೂಪ ಹಾಕಿ ಕೈ ಮುಗಿದು “ದೇವರೆ ಒಳ್ಳೇದು ಮಾಡಪ್ಪಾ………..” ಎಂದು ಇತ್ತ ತಿರುಗಿದರೆ ಅವೇ ಧೂಪ ಕೊಟ್ಟ ಹತ್ತಾರು ಕೈಗಳು ಕಾಯುತ್ತಿರುವವರಂತೆ ಅಣ್ಣಾ ಕಾಸುಕೊಡಿ, ಅಕ್ಕಾ ಕಾಸುಕೊಡಿ ಎಂದು ಕೈಯೊಡ್ಡಿದ್ದಾಗ ಕಕ್ಕಾಬಿಕ್ಕಿಯಾಗಿ ನಿಜಕ್ಕೂ ಮಾದಪ್ಪ ಒಳ್ಳೇದೇ ಮಾಡ್‌ಬುಟ್ಟ………..? ಪಾಪ ಕಳೀಬೇಕಾಗಿರುವುದು ಅಲ್ಲಲ್ಲ……….. ಇಲ್ಲಿ ಅಂತ ಎಲ್ಲರಿಗೂ ಚಿಲ್ಲರೆ ಇಲ್ಲದೆ; ಹಂಚುವುದರೊಳಗಾಗಿ ಹೈರಾಣಾಗಿ ಬಿಡುತ್ತಿದ್ದರು. ಯಾವುದೋ ಟೆನ್‌ಷನ್‌ನಲ್ಲಿದ್ದವರು ಇವರ ರೇಜಿಗೆ ಕಂಡು ತಲೆಮ್ಯಾಲೆ ನಾಕ್ ನಾಕ್ ಹಾಕಿ “ಥೊ……….. ಹೋಗ್ರೋ……….. ಅತ್ತಾಗೆ………..” ಅಂದುಬಿಟ್ಟರೆ ಸಣ್ಣಗೆ ಮುನಿಸಿಕೊಂಡು ಪಕ್ಕ ಸರಿದು ಈ ಬೀದಿಯಲ್ಲಿ ಉಗಿದರೆ ಆ ಬೀದಿಯಲ್ಲಿ ಒರೆಸಿಕೊಂಡು ಹೊಸ ಮನುಷ್ಯನಂತೆ ಬಂದ ಹಾಗೆ ಹೊಸ ಗಿರಾಕಿಯೊಂದಿಗೆ ಮುನಿಸನ್ನು ಮರೆಮಾಡಿ ಮತ್ತೆ ಹೊಸ ನಗುವಿನೊಂದಿಗೆ “ಅಣ್ಣಾವ್ರೆ……….. ಧೂಪ……….. ಅಕ್ಕಾವ್ರೆ……….. ಧೂಪ………..” ಎನ್ನುತ್ತಿದ್ದರು.

ಯಾರಾದರೂ ಕಾಡಂಚಿನ ಜನಗಳು ಧೂಪವನ್ನು ಕೈಯಲ್ಲಿಡಿದು ಮೂಸಿ ಇದು ಧೂಪ ಅಲ್ಲವಲ್ಲ! ಅದರ ವಾಸನೆ ಇಲ್ಲವಲ್ಲ! ಎಂದರೆ “ಇಲ್ಲ…… ಕಣಣ್ಣೋ……. ಅದು ಹಸಿ ಮರದ್ದು…… ಬೇಕಾದ್ರೆ ಬೆಂಕಿಗೆ ಹಾಕಿ……….. ಹೆಂಗೆ ವಾಸನೆ ವಡೀತದೆ ನೋಡಿ” ಎನ್ನುತ್ತಿದ್ದರು. ಹಾಗಾದರೆ ವಾಸನೆ ಹೊಡಿಲಿಲ್ಲಾ ಅಂದ್ರೆ ನೀನು ದುಡ್ಡು ಕೇಳಲ್ವಾ………..” ಎಂದರೆ ತಲೆ ಕರೆದುಕೊಂಡು ಧೂಪದ ಬಟ್ಟಲನ್ನೇ ದಿಟ್ಟಿಸಿ ನೋಡುತ್ತಾ ನಿಂತುಬಿಡುತ್ತಿದ್ದರು. “ಹೋಗ್ಲಿ……….. ಆ ……….. ಒಳ್ಳೇ……….. ಧೂಪಾನೆ ಕೊಡು” ಎಂದು ಆ ಗಿರಾಕಿ ಕೈಚಾಚಿದರೆ ಎಲ್ಲಾ ಗುಟ್ಟು ಇವರಿಗೆ ತಿಳಿದುಬಿಟ್ಟದೆ ಎನ್ನುವಂತೆ ಒಳಗಿನಿಂದ ಒಳ್ಳೇ ಧೂಪದ ಗೋಂದನ್ನು ಕೊಡುತ್ತಿದ್ದರು. ಯಾರಿಂದಲೋ ದಾನ ಪಡೆದ ಹರಿದ ತೇಪೆಗಳ ಬಟ್ಟೆ; ಏನೋ ತುಂಬಿಕೊಂಡು ಡುಬ್ಬಗೆ ಕಾಣುವ ಚಡ್ಡಿಯ ಜೇಬು; ಮಂಡಿ, ತೊಡೆ, ತಿಕ ಕಾಣುವ ಅಲ್ಲಲ್ಲಿ ಹರಿದ ಲಂಗ; ಗುಂಡಿ ಇದ್ದೂ ಇಲ್ಲದಂತಿರುವ ಕುಪ್ಪಸ; ಸದಾ ನೇತಾಡುವ ಬ್ಯಾಗು ಹಣೆಗೆ ಬೆಳ್ಳಗೆ ಮೂರುಲೈನು ವಿಭೂತಿ. ಕೈಯಲ್ಲಿ ಧೂಪದ ಬಟ್ಟಲು. ಗೋಪುರದ ಕಟ್ಟೆ ಕೆಳಗೆ ಈಡುಗಾಯಿ ಒಡೆದಾಗ ಆಯ್ದಿದ್ದ ತೆಂಗಿನ ಚೂರುಗಳನ್ನು ತಿನ್ನುತ್ತಾ ವಿಚಿತ್ರ ವಿಚಿತ್ರವಾಗಿ ಅವರವರಲ್ಲೇ ಮಾತಾಡಿಕೊಂಡು ಚಾತಕಪಕ್ಷಿ ಮಳೆಗೆ ಕಾಯುವಂತೆ ಇವರು ಬರುವ ಬಸ್ಸುಗಳಿಗೋ ವ್ಯಾನುಗಳಿಗೋ……….. ಕಾರುಗಳಿಗೋ……….. ಕಾಲುಗಳಿಗೋ……….. ಕಾಯುತ್ತಾ ಕೂರುವುದು. ಮಧ್ಯಾಹ್ನದ ಹೊತ್ತು ಹೊಟ್ಟೆ ಚರ‍್ರೆಂದರೆ ಮಾಮೂಲಿ ತಿರುಪೆಯಂತೆ ಸಾಲಾಗಿ ನಿಂತು ತಡಿಕೆ ಹೋಟೆಲುಗಳಲ್ಲಿ ಒಂದು ರೂಪಾಯಿಯೋ ಎರಡು ರೂಪಾಯಿಯೋ ಕೊಟ್ಟರೆ ಹೊಟ್ಟೆ ತುಂಬುವಷ್ಟು ಅನ್ನ. ಜೊತೆಗೆ ಬಂದ ಗಿರಾಕಿಗಳನ್ನು ಆ ಹೋಟೆಲ್‌ಗೆ ಹೋಗಿ ಈ ಹೋಟೆಲ್‌ಗೆ ಹೋಗಿ ಎಂದು ಕೂಗುವ ಜಾಹಿರಾತು. ಹೊಟೆಲ್‌ನಲ್ಲಿ ಕೆಲಸ ಮಾಡುವ ಹುಡುಗರಿಂದ ಹರಿದ ಕುಪ್ಪಸದ ಮೇಲೆಲ್ಲಾ ಕೈಯಾಡಿಸಿಕೊಂಡರೆ ಹುಡುಗಿಯರಿಗೆ ಸ್ವಲ್ವ ಜಾಸ್ತಿ ಅನ್ನ. ನಾವು ಹುಡುಗಿಯರಾಗಿರಬಾರದೇ ಎಂದುಕೊಂಡೇ ಅರ್ಧಹೊಟ್ಟೆ ತಿನ್ನುತ್ತಾ ಎದ್ದು ಹೋಗುವ ಹುಡುಗರು ಯಾರೂ ನೋಡದ ಹೊತ್ತಲ್ಲಿ ತಾವೂ ಕೈಯಾಡಿಸಲು ಹೋಗಿ ಬೈಸಿಕೊಳ್ಳುವುದು “ಅದೇನ್ ಅವ್ರ‍್ತವ್ ಮಾತ್ರ ಹಾಕಿಸ್ಕತಿಯ ನಾ ಹಾಕಿದ್ರೆ ಯಾಕೆ ಇಂಗ್ ಬೋಯ್ತಿಯಾ” ಅಂದರೆ “ಅವ್ರು ಹೊಟ್ಟೆ ತುಂಬ ಅನ್ನ ಕೊಡ್ತಾರೆ. ನೀ ಏನ್ ಕೊಡ್ತಿಯಾ, ಹೋಗು ಮೂದೇವಿ” ಎಂದು ಹುಡುಗರ ಬಾಯಿ ಮುಚ್ಚಿಸುತ್ತಿದ್ದರು. ಸಾಯಂಕಾಲ ಎಷ್ಟೊತ್ತಿಗಾದರೂ ತಂದ ಧೂಪವನ್ನೆಲ್ಲ ಮಾರಿ ಬೆಟ್ಟದ ಮೂಲೆ ತಿರುವಿನಲ್ಲಿರುವ ಊರಿಗೆ ಕೊನೇ ಬಸ್ಸಲ್ಲಿ ಕ್ಲೀನರನ ಹತ್ತಿರ ಹೊಡೆಸಿಕೊಂಡೇ ಹೋಗಿ ಎರಡು ಕಾಸು ಅವಿತಿಟ್ಟುಕೊಂಡು ಇಷ್ಟೇ ಆದದ್ದು ಎಂದು ಅವ್ವನಿಗೋ ಅಪ್ಪನಿಗೋ ಒಪ್ಪಿಸಿಬಿಟ್ಟರೆ ಆವತ್ತಿನ ಸೂರ್ಯ ಮುಳುಗಿದಂತೆ.

ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗೆ ಬಿಟ್ಟಂತಹ ಸ್ಥಿತಿಯಲ್ಲ. ಕಣ್ಣಿಗೆ ಕಟ್ಟಿರುವ ಬಟ್ಟೆ ಬಿಚ್ಚಿ ಊರಿಗೆ ಬಿಟ್ಟಂತಹ ಸ್ಥಿತಿ. ಅಷ್ಟೊಂದು ಜನಗಳನ್ನು ಅವನು ಜೀವಮಾನದಲ್ಲೂ ನೋಡಿರಲಿಲ್ಲ. ಈ ಕಾರು ಬಸ್ಸುಗಳನ್ನೆಲ್ಲಾ ಆ ಗೌಡರ ಮನೆ ಟೀವಿಯಲ್ಲಿ ಕಂಡಿದ್ದ ಅಷ್ಟೆ. ಅವ್ವ ಕೊಟ್ಟ ಹಿಟ್ಟು ಬೆಳ್ಳಂ ಬೆಳ್ಳಗೆ ನುಂಗಿಕೊಂಡು ಹೈಕಳೊಂದಿಗೆ ಆಡುವುದಕ್ಕೆ ಹೋದರೆ ಮತ್ತೆ ಬರುತ್ತಿದದ್ದು ಮಧ್ಯಾಹ್ನದ ಊಟಕ್ಕೆ. ಮತ್ತೆ ಹೊರಟರೆ ಮನೆ ಸೇರುತ್ತಿದ್ದುದು ರಾತ್ರಿ ಊಟಕ್ಕೆ. ಹೀಗೆ ಆರಾಮಾಗಿ ತಿರುಗಾಡಿಕೊಂಡಿದ್ದವನನ್ನು ಒಮ್ಮಿಂದೊಮ್ಮೆಲೆ ಹೆಗಲಿಗೊಂದು ಬ್ಯಾಗು ನೇತುಹಾಕಿ ಕೈಲ್ಲೊಂದು ಧೂಪದ ಬಟ್ಟಲನ್ನು ಕೊಟ್ಟು ಧೂಪ ಮಾರುವುದಕ್ಕೆ ಅಟ್ಟಿ ಬಿಟ್ಟಿದ್ದರು. ಎಲ್ಲಾ ವಾರಿಗೆ ಹುಡುಗರು ಬಸ್ಸಿನ ಸುತ್ತ ಹೋಗಿ ಮುತ್ತಿಕೊಂಡರೆ ಇವನು ಮಾತ್ರ ನಿಂತ ಜಾಗದಲ್ಲೆ ಎಲ್ಲವನ್ನೂ ಬೆರಗುಗಣ್ಣಿನಿಂದ ನೋಡುತ್ತಿದ್ದ. ಇವರೆಲ್ಲರೆದುರಿಗೆ ನಿಲ್ಲದೆ ಎಲ್ಲಾದರೂ ದೂರಕ್ಕೆ ಮರೆಯಾಗಿ ಹೋಗಿ ನಿಂತುಕೊಳ್ಳಬೇಕೆನಿಸಿತು.

ಇವನ ಪೇಚಾಟವನ್ನು ಕಂಡು ಈರಿ “ಲೋ……….. ರಂಗಾ……….. ನೀ ಹಿಂಗೆ ಗರ್ಡ್‌ಗಂಬ ನಿಂತ್ಕಂಡಂಗೆ ನಿತಿಂದ್ರೆ ಈವತ್ತು ಧೂಪ ಮಾರ್ದಂಗೆಯಾ………..” ಅಂತ ಹೇಳಿ ರೇವಾ ಚುಂಚನಿಗೆಲ್ಲಾ ಮೊದ್ಲು ಇವನ್ನ ಬಿಡ್ರೋ ಪಾಪ ಕಲ್ತ್ಕೊಳ್ಳಲಿ” ಅಂತ ಗಿರಾಕಿಗಳನ್ನು ಹೇಗೆ ಕೇಳಬೇಕು ಎಂದು ಹೇಳಿಕೊಟ್ಟು ಕಳಿಹಿಸಿದರೆ ಅಣ್ಣಾ……….. ಧೂಪ……….. ಅಕ್ಕ……….. ಧೂಪ………..” ಅಂತ ಮಂತ್ರ ಉರು ಹೊಡೆದವರ ಹಾಗೆ ಹೇಳುತ್ತಿದ್ದರೆ ಇವನ ಮಾತು ಕಿವಿಗೇ ಬಿದ್ದಿಲ್ಲ ಎಂಬಂತೆ ಅತ್ತ ಹೊರಡುತ್ತಿದರು. ಕಾರಿನಿಂದ ಇಳಿದ ಬಿಳಿ ಜಿರಳೆಯಂಥಾ ಮೈಯೆಲ್ಲಾ ಬೆಳ್ಳಗೆ ಕಾಣಿಸುವ ಹುಡುಗಿಯರನ್ನು ಕಂಡು “ಎಲಾ……….. ಇವರಾ ದಿನಾ ರಾತ್ರಿ ನಾನು ಗೌಡರ ಡಿಸ್ ಟಿವಿಯಲ್ಲಿ ನೋಡುತ್ತಿದ್ದವರು ಇಲ್ಲಿಗೆ ಬಂದು ಬುಟ್ಟವರಲ್ಲ” ಎಂದು ವ್ಯತ್ಯಾಸ ತಿಳಿಯದೆ ಧೂಪ ಮಾರುವುದು ಬಿಟ್ಟು ಆಶ್ಚರ್ಯದಿಂದ ನೋಡುತ್ತಾ ನಿಂತುಬಿಡುತ್ತಿದ್ದ. ಊರಲ್ಲಿ ಹಟ್ಟಿತಾವ ಮಂಡಿ ಕಾಣುವಂತೆ ಲಂಗ ಹಾಕುತ್ತಿದ್ದ ಪಕ್ಕದ ಮನೆ ಲಕ್ಷ್ಮಕ್ಕನಿಗೆ ಅವ್ವ ಪದೇ ಪದೇ ಮುಚ್ಕೋ ಮುಚ್ಕೋ ಎಂದು ಹೇಳುತ್ತಿದ್ದುದು ಜ್ಞಾಪಕಕ್ಕೆ ಬಂದು “ಪಾಪ ಇವರಿಗೆ ಹೇಳುವವರು ಯಾರು ಇಲ್ಲವಲ್ಲ!” ಎಂದು ಒಳಗೊಳಗೆ ಮರುಗುತ್ತಿದ್ದ. ಇದು ನಿಜವಾಗಿಯೂ ಅವರ ಬಣ್ಣವೇನೋ ಎನಿಸಿ ಒಮ್ಮೆ ಅವರ ಬಿಳಿ ಚರ್ಮವನ್ನು ಅವನಿಗೆ ಮುಟ್ಟಬೇಕೆನಿಸುತ್ತಿತ್ತು. ತಾನೂ ಕೂಡ ಅಂತಹುದೇ ಕಾರಿನಲ್ಲಿ ಬಂದು ಇಳಿಯುವ ದೃಶ್ಯವನ್ನು ಕಲ್ಪಿಸಿಕೊಂಡು ಹಿರಿಹಿರಿ ಹಿಗ್ಗಿ ಒಳಗೊಳಗೆ ನಗುತ್ತಿದ್ದ.

“ಏ ಕೋತಿ, ಏನು ದುರುಗುಟ್ಟಿ ನೋಡ್ತಿಯಾ ಧೂಪ ಕೊಡು” ಎಂದು ಯಾರಾದರೂ ಅನ್ನದೆ ಇರುತ್ತಿದ್ದರೆ ಭ್ರಮಾಲೋಕದಲ್ಲಿ ಎಷ್ಟೊತ್ತು ಅಲ್ಲೆ ನಿಂತು ವಿಹರಿಸುತ್ತಿದ್ದನೋ? ಊರಲ್ಲಿ ಗೌಡರ ಹಟ್ಟಿಯಲ್ಲಿ ಮಾತ್ರವೇ ಕಿವಿಗೆ ಇಟ್ಟುಕೊಂಡು ದೂರದೂರಿನಲ್ಲಿ ಇರುವವರೊಂದಿಗೆ ಇಲ್ಲಿಂದಲೇ ಮಾತಾಡುವ ಮೊಬೈಲೆಂಬ ಮಾಯಾ ಪೆಟ್ಟಿಗೆ ಕಂಡಿದ್ದ ರಂಗಪ್ಪನಿಗೆ ಇಲ್ಲಿ ಕೈಯಲ್ಲೊಂದು ಹಿಡಿದುಕೊಂಡು ಓಡಾಡುವುದನ್ನು ನೋಡಿ ಅವರನ್ನು ನಮ್ಮೂರಿನ ಗೌಡರಿಗಿಂತ ದೊಡ್ಡ ಮನುಷ್ಯರೆಂದು ಬೇರಯದೇ ರೀತಿಯಲ್ಲಿ ನೋಡುತ್ತಿದ್ದನು. ತಾನು ಯಾರ‍್ಯಾರ ಮನೆಯಲ್ಲಿ ರೇಡಿಯೋದಲ್ಲಿ ಕೇಳಿದ ಹಾಡುಗಳು ಇಪಾಟಿ ಪೆಟ್ಟಿಗೆಯಲ್ಲಿ ಕೇಳಿಯಂತೂ ಅಬ್ಬಾ………..! ಎಂಥಾ ವಿಚಿತ್ರವಪ್ಪ ಎಂದುಕೊಳ್ಳುತ್ತಿದ್ದಂತೆ ಇದ್ಯಾವುದೋ ಬೇರೇ ಲೋಕವೇನೋ ಎನ್ನಿಸಿಬಿಟ್ಟಿತು. ಅದೇ ಮೊಬೈಲಿನಿಂದ ಯಾವುದಾದರೂ ಬಿಳಿಜಿರಳೆ ಅವನ ಫೋಟೋ ತೆಗೆಯಲು ಈ ಕಡೆ ತಿರುಗಿದರೆ ಅಷ್ಟೆ ಸಂಭ್ರಮದಿಂದ ಕೈಯಿಂದ ಕ್ರಾಪನ್ನು ಸರಿಮಾಡಿಕೊಂಡು ಮೂಗಿನಿಂದ ಹರಿಯುತ್ತಿದ್ದ ಜೋಗ್ ಫಾಲ್ಸನ್ನು ಕವಚ ಕರವಸ್ತ್ರದಿಂದ ಒರಸಿ ಹೆಗಲ ಬ್ಯಾಗ ಧೂಪದ ಬಟ್ಟಲನ್ನು ಪಕ್ಕಕ್ಕಿಟ್ಟು ಪೋಜುಕೊಡಲು ನಿಂತರೆ ಅವರೋ “ಏ ಹುಡುಗಾ, ಅದನ್ನು ಕೈಯಲ್ಲಿ ಹಿಡಿದು ನಿಂತ್ಕೊಳಪ್ಪ….” ಎಂದುಬಿಡುತ್ತಿದ್ದರು. ಅವನು ಒಲ್ಲದ ಮನಸ್ಸಿನಿಂದ ಅವುಗಳನ್ನು ಕೈಲಿಡಿದುಕೊಂಡು ಈ ಪೋಟಾ ನನಗಾಗಿ ಅಲ್ಲ; ನಾನು ಇಡಕೊಂಡಿರುವ ಈ ದರಿದ್ರ ಬ್ಯಾಗು ಬಟ್ಟಲಿಗೆ ಎಂದುಕೊಳ್ಳುತ್ತಿದ್ದ.

ಎಂಟೆಂಟಾಣೆಗಾಗಿ ದಿನಗಟ್ಟಲೆ ಅತ್ತು ರಂಪ ಮಾಡಿ ಅವ್ವನ ಊದುಕೊಳವೆಯಿಂದ ಬೆಚ್ಚಗೆ ಒದೆ ತಿಂದರೆ ನಾಕಾಣೆ ಮಾತ್ರ ಸಿಗುತ್ತಿದ್ದವನಿಗೆ ಈ ಒಂದು, ಎರಡು, ಐದಾರುಪಾಯಿಗಳ ಬಂದಾ ಕಾಸುಗಳನ್ನು ನೋಡಿ ಹೀಗೆ ಸುಲಭವಾಗಿ ಸಿಕ್ಕಿದುದಕ್ಕೆ ಖುಷಿಯಾಗಿ ಜನ ಖಾಲಿಯಾದಂತೆಲ್ಲಾ ಮತ್ತೆ ಮತ್ತೆ ಅದನೇ ಲೆಕ್ಕ ಗೊತ್ತಿರದಿದ್ದರೂ ಒಂದು ಎರಡು ಮೂರು ಎಂದು ಎಣಿಸಿ ಜೇಬೊಳಗೆ ಇರಿಸಿಕೊಳ್ಳುತ್ತಿದ್ದ. “ಕೊಡ್ಲಾ ಇಲ್ಲಿ ಎಷ್ಟಾಗಿದೆಯೋ……….. ಲೆಕ್ಕ ಹಾಕುವ………..” ಎಂದು ಈರಿ ಕೈಯೊಡ್ಡಿದ್ದರೆ “ನಾ……….. ಕೊಡುದಿಲ್ಲ, ನಂತವೆ ಇರ್ಲಿ………..” ಎಂದು ಖಾತರಿ ಪಡಿಸಿಕೊಳ್ಳುತ್ತಿದ್ದ. ಬಂದ ಗಿರಾಕಿಗೆ ಧೂಪ ಕೊಡಲೆಂದು ಮೊದಮೊದಲೇ ಓಡಿ ಧೂಪಕೊಟ್ಟು ಐದುರೂಪಾಯಿ ಬಂದವನ್ನು ಬಲಜೇಬಿಗೆ ಹಾಕ್ಕೊಂಡು ಖುಷಿಯಿಂದ ಈರಿಗೆ ತೋರಲು ಕೈ ಹಾಕಿದರೆ ಆ ಜೇಬಿನಿಂದ ಕೈತೂರಿ ಹೊರಕ್ಕೆ ಬಂದಿತೆ ಹೊರತು ಐದು ರೂಪಾಯಿಯ ಬಂದ ಬರಲಿಲ್ಲ.

ಒಂದು ಕಡೆಯ ಚಡ್ಡಿಜೇಬು ಹರಿದುಹೋಗಿದ್ದು ಅವನ ಗಮನಕ್ಕೆ ಬಂದು ಮುಖವೆಲ್ಲಾ ಕಪ್ಪೆಗೆ ಸಪ್ಪಗಾಯಿತು. ಈಗ ತಾನೆ ಜಂಬ ಹೊಡೆದ ಅವನ ಪೆಚ್ಚು ಮೋರೆ ನೋಡಿ ಈರಿ ಗಹಿಗಹಿನೆ ನಗತೊಡಗಿದಳು. ಬಂದ ದಿನವೇ ಹತ್ತುರೂಪಾಯಿ ಮಾಡಿಕೊಂಡು ಮನೆಯ ಹೊಸ್ತಿಲು ತುಳಿಯುತ್ತಿದ್ದಂತೆಯೇ ಅಪ್ಪಮಾದಯ್ಯ ಅವನ ಮೂರೂ ಜೇಬುಗಳನ್ನು ತಡಕಾಡಿ ಒಂದು ಕಾಸೂ ಇರದಂತೆ ಎಲ್ಲವನ್ನೂ ಎತ್ತಿಕೊಂಡ. ನಾಳೆ ಸರಿಯಾಗಿ ಮಾಡ್ತೀನಿ ಇರು ಎಂದು ಬೆಳಗಾಗುವುದನ್ನೇ ಕಾಯುತ್ತಾ ಮಲಗಿದ ರಂಗಪ್ಪ ಮಾರನೆ ದಿನದಿಂದ ಈರಿಯ ಕೈಗೆ ಒಂದೊಂದು ರೂಪಾಯಿಗಳನ್ನು ಕೊಡುತ್ತಾ “ನಾ……….. ಕೇಳ್ದಾಗ ಕೊಡುವೆ, ನಿಂತವೆ ಇಟ್ಟಿರು……” ಎಂದು ಹೇಳಿ ಕೂಡಿಡುಸುತ್ತಿದ್ದ. ಯಾರ ಹತ್ತಿರವಾದರೂ ಅಪರೂಪದ ವಸ್ತುಗಳನ್ನು ಕಂಡರೆ ಅದನ್ನು ನೋಡಿಯೇ ಬುಡಬೇಕೆಂದು ಹಲವಾರು ಸಾರಿ ಅಂದುಕೊಳ್ಳುತ್ತಿದ್ದ. ಸಣ್ಣಪುಟ್ಟ ವಸ್ತುಗಳನ್ನು ಕುತೂಹಲಕ್ಕಾಗಿ ನೋಡಲು ಎತ್ತಿಕೊಂಡು ಹಾಗೇ ಅವನ ಬ್ಯಾಗೊಳಗೆ ಸೇರಿಸಿಕೊಳ್ಳುತ್ತಿದ್ದ. ದಿನಾ ಹೀಗೆ ಒಂದಿಲ್ಲೊಂದು ವಸ್ತುಗಳನ್ನು ಕುತೂಹಲಕ್ಕಾಗಿ ಯಾರೂ ಇಲ್ಲದಿರುವಾಗ ಬಿಚ್ಚಿ ನೋಡುವುದೇ ಅವನಿಗೊಂದು ಅವರ್ಣನೀಯ ಖುಷಿ. ಬ್ಯಾಗುಗಳಲ್ಲಿ ಇಟ್ಟಿರುವ ಆಟದ ಸಾಮಾನು, ಮಿಠಾಯಿ, ಕರ್ಪೂರ, ಗಿಲಕಿಸಾಮಾನು, ಮಕ್ಕಳಕಾಚ, ಇವುಗಳನ್ನು ಕುತೂಹಲದಿಂದ ನೋಡುವುದರಲ್ಲಿಯೇ ಕಾಲಕಳೆಯುತಿದ್ದ. ಅವುಗಳನ್ನು ನೋಡುತಿದ್ದಂತೆಯೇ ಅವನ ಕುತೂಹಲ ಮತ್ತಷ್ಟು ಹೆಚ್ಚಾಗಿ ಇನ್ನೇನಾದರೂ ಸಿಗುತ್ತದೋ ನೋಡುವಾ ಎಂದು ಅವನ ಕಣ್ಣುಗಳು ಗಿರಾಕಿಗಳ ಮಧ್ಯೇ ಮಧ್ಯೆ ಏನನ್ನೋ ತಡಕಾಡುತ್ತಿತ್ತು. ಕಾರಿನಿಂದಿಳಿದ ಬಿಳಿಜಿರಳೆ ಒಂದು; ಒಂದು ಸಣ್ಣ ಕೆಂಪು ಕೈ ಚೀಲವನ್ನು ಹೋಟೆಲಿನ ಕಟ್ಟೆಮೇಲಿರಿಸಿ ಕೈತೊಳೆಯಲು ಅತ್ತ ಹೋದುದನ್ನು ನೋಡಿದ ರಂಗಪ್ಪನಿಗೆ ಈ ಚೀಲದಲ್ಲಿ ಏನಿರಬಹುದೆಂದು ಕುತೂಹಲವುಂಟಾಗಿ ತಳಮಳವಾಯಿತು. ಮೆಲ್ಲಗೆ ಅದರ ಹತ್ತಿರ ಹೋಗಿ ಅಕ್ಕಪಕ್ಕ ಯಾರೂ ನನ್ನನ್ನು ಗಮನಿಸುತ್ತಿಲ್ಲ ಎಂದು ಅದನ್ನು ತೆಗೆದುಕೊಂಡು ತನ್ನ ಧೂಪದ ಬ್ಯಾಗಿನೊಳಗೆ ಲೀನವಾಗಿಸಿಕೊಂಡ.

ಕೈತೊಳೆದುಕೊಂಡು ಬಂದ ಬಿಳಿಜಿರಳೆ ಕೈಚೀಲ ಇಲ್ಲದುದನ್ನು ಕಂಡು “ಅಯ್ಯೋ… ಅದರಲ್ಲಿ ಹರಕೆ ಒಪ್ಪಿಸಲು ತಂದ ಚಿನ್ನದ ಕಣ್ಣುಗಳಿತ್ತು. ಯಾರಾದರೂ ನೋಡಿದಿರಾ” ಎಂದು ಒಂದೇ ಸಮನೆ ಕೇಳುತ್ತಾ ಪತರಗುಟ್ಟಿದಳು. ಅವಳ ಸ್ಥಿತಿಯನ್ನು ನೋಡಿದ ಇತರರು ಅವಳೂಂದಿಗೆ ಸೇರಿಕೊಂಡು ಚೀಲವನ್ನು ಹುಡುಕಲು ಶುರುಮಾಡಿದರು. ಮೂರನೆ ಕ್ಲಾಸು ಓದಿ ಮೇಷ್ಟ್ರ ಒದೆ ತಾಳಲಾರದೆ ಬಂದುಬಿಟ್ಟಿದ್ದ ಲಿಂಗ, ಬುಡ್ಡ, ಏಳನೇ ಕ್ಲಾಸ್‌ವರಗೂ ಓದಿ ಬಿಟ್ಟಿದ್ದ ಈರಿ, ಸ್ಕೂಲೇ ನೋಡದಿದ್ದ ಚುಂಚ, ರೇವಾ, ಇವರ ಮಧ್ಯೆ ಎರಡು ವರ್ಷ ಇಸ್ಕೂಲಿಗೆ ಹೋಗಿ ಒಂದಕ್ಷರವೂ ಬರದೆ ಧೂಪ ಮಾರಲು ಬಂದ ಈ ರಂಗಪ್ಪನೆಂಬ ಗಾಂಪ, ಒಟ್ಟು ಏಳೆಂಟು ಮಂದಿಯ ಒಂದು ಬೆಟಾಲಿಯಾನ್ ಸೈನ್ಯ. ಇತ್ತ ನೋಡಿದರೆ ತೀರ ಭಿಕ್ಷುಕರೂ ಅಲ್ಲದೇ ಮತ್ತೆ ನೋಡಿದರೆ ಭಿಕ್ಷುಕರಂತೆಯೇ ಕಾಣುವ ಇವರ ಮುಖಗಳು ಒಂದೇ ಭಾವನೆಯಿಂದ ಕೂಡಿರದೆ ಕೋಪ, ಮುನಿಸು, ನಗು, ಹತಾಶೆ ಮುಂತಾದ ನವರಸಗಳನ್ನು ಆಗಾಗ್ಗೆ ವ್ಯಕ್ತಪಡಿಸುತ್ತಲೇ ಇದ್ದವು. ಇದೇ ಗಲಾಟೆಯನ್ನು ಒಟ್ಟಿಗೆನಿಂತು ನೋಡುತ್ತಿದ್ದ ಧೂಪದ ಹೈಕಳ ಮೇಲೆ ಹೋಟೆಲಿನ ಯಜಮಾನ ನಾಗಣ್ಣನಿಗೆ ಡೌಟು ಬಂದು “ಯಾರೋ……….. ಕದ್ದವರು” ಎಂದು ಕೇಳಲಾಗಿ “ನಾನಂತೂ……….. ಕದ್ದಿಲ್ಲಾಪ್ಪ………..” ಎಂದು ಹಿಂದೆಹಿಂದೆ ಹೋಗುತ್ತಿದ್ದ ರಂಗಪ್ಪ. “ಹೇಳು ……….. ಇಲ್ಲಾಂದ್ರೆ ನಿಮ್ಮನ್ನು ಬೆಟ್ಟದ ಸ್ಟೇಷನ್‌ಗೆ ಕಳುಹಿಸ್ತೀನಿ” ಎಂದ ನಾಗಣ್ಣ ಜೋರುಮಾಡಿ ಹೆದರಿಸಿದಾಗ; ಇವನ ಚಾಳಿಗೊತ್ತಿದ್ದ ಈರಿ “ಅಣ್ಣ….. ಅವನ ಬ್ಯಾಗನ್ನು ಬೇಕಾದ್ರೆ ನೋಡಿ” ಎಂದು ಹಿಂದೆ ನಿಂತುಕೊಂಡಿದ್ದ ರಂಗಪ್ಪನ ಕಡೆ ಕೈ ತೋರಿಸಿದಳು. “ಇಲ್ಲಾಪ್ಪಾ……….. ಇಲ್ಲಾಪ್ಪಾ……….. ನಾನು ಎತ್ಕಂಡಿಲ್ಲ” ಎಂದು ಹಿಡಿಯಲು ಹೋದಂತೆಲ್ಲಾ ಹಿಂದೆ ಹಿಂದೆ ಹೋಗುತ್ತಿದ್ದ ರಂಗಪ್ಪನನ್ನು ರೇವಾ ಹಿಡಿದುಕೊಟ್ಟಾಗ ಬ್ಯಾಗನ್ನು ಉಲ್ಟಾಮಾಡಿದರೆ ಅದರಿಂದ ಧೊಪ್ಪಂತ ಕೆಂಪನೆ ಕೈಚೀಲ ಕೆಳಕ್ಕೆ ಬಿತ್ತು. “ಬೋಳಿಮಕ್ಳ ಹೊಟ್ಟೆಗಿಟ್ಟಿಲ್ಲ, ನಾಕುಕಾಸು ಸಂಪಾದ್ನೆ ಮಾಡ್ಲಿ ಅಂತ ಬುಟ್ರೆ ನಮ್ ಹೋಟೆಲ್ಗೆ ಕೆಟ್ಟಹೆಸರು ತತ್ತೀರಾ………..” ಎಂದವನೇ ರಂಗಪ್ಪನ ಕತ್ತರಿಸದೇ ಬಿಟ್ಟ ಕೈಗೆ ಇಡಿಯಾಗೆ ಸಿಕ್ಕ ಜುಟ್ಟನ್ನು ಹಿಡಿದು ಬಗ್ಗಿಸಿಕೊಂಡು ಬೆನ್ನಿಗೆ ನಾಕು ಗೂಸ ಕೊಟ್ಟ. ಈ ಕೇಸು ಇಷ್ಟೊಂದು ದೊಡ್ಡದಾಗುತ್ತೆ ಅಂತ ಊಹೇನೇ ಮಾಡಿರದ ರಂಗಪ್ಪ “ಅಯ್ಯೋ ತಪ್ಪಾಯ್ತು ಕಣಣ್ಣೋ, ಇನ್ನೊಂದಪ ಇಂಗೆ ಮಾಡುದಿಲ್ಲ, ಸ್ವಾಮಿ ಸ್ವಾಮಿ……….. ನಿನ್ನ ಕಾಲು ಹಿಡಿತೀನಿ” ಅಂತ ಕಾಲಿಡಿಯಲು ಹೋದವನಿಗೆ “ನೀನು ಇದ್ರೆ ತಾನೆ ಇನ್ನೊಂದಪ್ಪ ಮಾಡಕ್ಕೆ”ಎಂದು ಝಾಡಿಸಿ ಒದ್ದ. ಅವನ ಒಂದೇ ಒದೆತಕ್ಕೆ ಉಸಿರು ಕಟ್ಟಿದವನಂತಾಗಿ ಬ್ಯಾಗೊಂದು ಕಡೆ ಅವನ ಬಟ್ಟಲೊಂದು ಕಡೆ ಹೋಗಿ ಬೆಂಕಿ ಹೊಂಡದ ಹತ್ತಿರ ಬಿದ್ದ. ಬಟ್ಟಲಿನಲ್ಲಿದ್ದ ಕೆಂಡವೆಲ್ಲಾ ಬೂದಿಸಹಿತ ಚೆಲ್ಲಾಪಿಲ್ಲಿಯಾಗಿ ಬೂದಿಯ ಧೂಳೋ ಇಲ್ಲಾ ಬೆಂಕಿಯ ಹೊಗೆಯೋ…….. ಒಂದೂ ತಿಳಿಯದಂತಾಗಿ ಕಣ್ಣು ಮಂಕುಕವಿಯತೊಡಗಿತು. ಧೂಪದ ಹೊಂಡದಲ್ಲಿ ಬುಗ್ಗನೆ ಬೆಂಕಿಹೊತ್ತಿಕೊಂಡು ಉರಿಯಲತೊಡಗಿತು. ಇದನ್ನು ನೋಡಿದ ಧೂಪದ ಹೈಕಳು ಥರಥರನೆ ನಡುಗುತ್ತಾ ನಿಂತಿದ್ದವು. ಕಣ್ಣಿನಲ್ಲಿ ಬೆಂಕಿ ಉಗುಳುತಾ ಇದ್ದ ಯಜಮಾನನನ್ನು “ಹೋಗಲಿ ಬಿಡಿ” ಎಂದು ಬಿಳಿಜಿರಳೆ ಸಮಾಧಾನ ಮಾಡಿತು. ‘ಇನ್ ಮ್ಯಾಕೆ ಇವನ್ನ ಯಾವನಾದ್ರು ಕರ್ಕೊಂಡ್ ಬಂದ್ರಿ ಅನ್ನಿ ಅವನವುನ್ ತಿಥಿ ಮಾಡ್‌ಬುಡ್ತೀನಿ’ ಅಂತ ಅವನು ಧೂಪದ ಹೈಕಳಿಗೆ ವಾರ್ನ್ ಮಾಡಿ ಒಳಕ್ಕೆ ಹೋದ. ಎದ್ದೇಳಲು ನಿತ್ರಾಣನಾಗಿ ಬಿದ್ದಿದ್ದ ರಂಗಪ್ಪನ್ನು ಈರಿ ಮೇಲೆತ್ತಿ ನೀರು ಕುಡಿಸಿದಳು. ಯಾವುದೋ ಬಸ್ ಜೋರಾಗಿ ಹಾರ್ನ್ ಮಾಡುತ್ತಾ ಬಂದು ನಿಂತಿತು.‌ ಜನ ಅವಸರಿಂದ ಇಳಿದವರೇ ಎರಡೂ ಕೈಯೆತ್ತಿ ನಮಸ್ಕರಿಸುತ್ತಾ “ಮಾದಪ್ಪನ ಪಾದಕ್ಕೆ ಒಂದ್ಸಾರ್ತಿ ಉಘೇ ಅನ್ರಪ್ಪೋ……….. ಉಘೇ ಮಾದಪ್ಪ……….. ಎನ್ನುತ್ತಿಂತೆಯೇ ಧೂಪ ಧೂಪ ಎನ್ನುತ್ತಾ……….. ಅವರ ಹತ್ತಿರ ಹೈಕಳು ಓಡತೊಡಗಿದವು. ಈರಿಯ ತೊಡೆ ಮೇಲೆ ಮಲಗಿದ್ದ ರಂಗಪ್ಪನಿಗೆ ಬಣ್ಣದ ಚಿತ್ರ ನಿಧಾನವಾಗಿ ಬಣ್ಣಕಳೆದುಕೊಂಡು ಮುಸುಕಾಗುವಂತೆ ಮಾಸಲು ಮಾಸಲಾಗಿ ಕಾಣುತ್ತಾ ಕೊನೆಗೆ ಏನೂ ಕಾಣದಂತಾಗಿ ಹಾಗೇ ಮಂಪರು ಬಂದವನಂತೆ ಒರಗಿದ.

ಸುತ್ತ ಎತ್ತ ನೋಡಿದರೂ ಹೊರಕ್ಕೆ ಹೋಗಲು ಜಾಗವೇ ಇಲ್ಲವೇನೋ ಎಂಬಂತೆ ಸುತ್ತುವರೆದಿರುವ ಬೆಟ್ಟಗಳ ಸಾಲು. ಅಲ್ಲೊಂದು ನಾಕುಮನೆ; ಇಲ್ಲೊಂದು ನಾಕುಮನೆ. ಎಲ್ಲಾ ಸೇರಿ ಒಂದೂರು. ಆ ನಾಕುನಾಕು ಮನೆಗಳಲ್ಲೇ ಲಿಂಗಾಯಿತರ ಕೇರಿ. ಹೊಲೆಮಾದಿಗ್ರಕೇರಿ, ಸೋಲಿಗ್ರಕೇರಿ, ಎಲ್ಲ. ಎಲ್ಲರಿಗೂ ಮಧ್ಯೆ ಇರುವ ಯಾವುದೋ ಅನಾದಿ ಕಾಲದಿಂದ ಬಂದ ಅವಶೇಷದಂತೆ ನಿಂತಿರುವ ಇಸ್ಕೂಲು ಬಿಲ್ಡಿಂಗ್. ಇನ್ನೂ ಜೀವಂತವಾಗಿದೆ ಅದು ಎಂದು ತೋರಿಸುವಂತೆ ಆಗಾಗ್ಗೆ ನಾಲ್ಕಾರು ಮಕ್ಕಳು ಹೊರಕ್ಕೆ ಒಳಕ್ಕೆ ಓಡಾಡುವುದನ್ನು ಬಿಟ್ಟರೆ ಮತ್ತೆ ಅದು ಜೀವಂತವಾಗಿದೆ ಎಂದು ತಿಳಿಯುವುದು ಮಧ್ಯಾಹ್ನ ನಾಲ್ಕಾರು ಕತ್ತೆಗಳು ಸೇರಿ ಒಟ್ಟಾಗಿ ಅರಚಿಕೊಂಡಂತೆ ಭಾಸವಾಗುವ ಎರಡೊಂದ್ಲ ಎರಡು……….. ಎರಡೆರಡ್ಲಾ……….. ನಾಲ್ಕು ಹೈಕಳು ಮಗ್ಗಿ ಹೇಳುವ ಸದ್ದು. ಇಸ್ಕೂಲು ಇಲ್ಲವೇನೋ ಎಂಬಂತೆ ಆ ಕಡೆ ತಿರುಗಿಯೂ ಕೂಡ ನೋಡದೆ ಓಡಾಡುವ ಜನ. ಫಾಲಕ್ಷಪ್ಪ ಮೇಷ್ಟ್ರಿಗೆ ಈ ಇಸ್ಕೂಲು ಕಂಡು ರೇಗಿ ರೇಗಿ ಸಾಕಾಗಿ ಹೋಗಿತ್ತು. ಒಳ್ಳೇ ಕಪ್ಪೆಗಳನ್ನು ಹಿಡಿದು ಮಂಕರಿಗೆ ತುಂಬುವಂಥಾ ಕೆಲಸ. ಒಂದನ್ನು ಹಿಡ್ದ್ ಹಾಕಿದ್ರೆ ಮತ್ತೊಂದು ಹೋಗಿಬಿಡ್ತಿತ್ತು. “ಇವ್ರ್ ಮನಿ ಹಾಳಾಗ್ಲಿ ಹೇಳಿ ಹೇಳಿ ಸಾಕಾಯ್ತುಪ್ಪ…… ಅವನ್ನಪ್ನಾ ಯಾವ ಮಂದೀನು ತಿರ‍್ಗಿನೋಡಂಗಿಲ್ಲ……….. ಮಂಗ್ಯನ ಕಾಟ ಆಯ್ತಪಾ………… ಇನ್ನು ಆ ಮಲೆ ಮಾದಯ್ಯನೋ ಯಾರೋ ಇವರಿಗೆ ಬುದ್ದಿಹೇಳೋಮಟ್ಟ ಆಗ್ಬೇಕು”ಅನ್ಕಂಡು ಊರಿಗೊಂದೇ ಬರುವ ಬಸ್ಸಿನ ಡೈವರ್ ಕಂಡಕ್ಟ್ರಗಳಿಗೆಲ್ಲಾ “ಆ ಧೂಪದ ಹೈಕಳನ್ನು ಯಾರೂ ಹತ್ತಿಸಿಕೊಂಡು ಹೊಬ್ಗ್ಯಾಡ್ರಿ” ಎಂದು ಹೇಳಿದರೆ; ಎರಡು ದಿನ ಹೈಕಳು ಇಸ್ಕೂಲಿಗೆ ಬಂದರೆ ಮೂರನೆ ದಿನಕ್ಕೆ ಮತ್ತೆ ಅದೇ ರಾಗ ಅದೇ ಹಾಡು. ರೋಸಿ ಹೋದ ಮೇಷ್ಟ್ರು ಒಮ್ಮೆ ಬೆಟ್ಟದ ಇನ್ಸಪೆಕ್ಟ್ರು ಊರಿಗೆ ಬಂದಾಗ “ಯಾರಿಗೂ ಹೆದರದ ಇವರು ಪೋಲಿಸ್ನೋರ‍್ಗೆ ಖರೇ ಹೆದ್ರೂದು” ಎಂದು ಸ್ವಾಲಿಗ್ರ ಕೇರಿಗೆ, ಹೊಲೇರಕೇರಿಗೆ ಕರ್ಕೊಂಡೋಗಿ “ಮಕ್ಕಳನ್ನ ತಾಳುಬೆಟ್ಟಕ್ಕೆ ಧೂಪ ಮಾರುವುದಕ್ಕೆ ಕಳುಹಿಸಿದರೆ ಜೇಲಿಗೆ ಹಾಕಿಸ್ತೀನಿ ಎಂದು ರೋಪ್ ಹೊಡೆಸಿದರು. ಇನ್ಸಪೆಕ್ಟ್ರ ರೋಪ್ ವರ್ಕಔಟ್ ಆಯಿತು ಎಂದು ಮೇಷ್ಟ್ರು ಅಂದುಕೊಳ್ಳುವಷ್ಟರಲ್ಲಿ “ಶಿವರಾತ್ರಿ ಸೀಜನ್ನು ದುಡ್ಡು ಜಾಸ್ತಿ ಮಾಡ್ಕಬೌದು. ಈಗ ಬಿಟ್ರೆ ಹೋಯ್ತು” ಎಂದು ಮತ್ತೆ ಮಕ್ಕಳನ್ನು ಧೂಪಮಾರುವುದಕ್ಕೆ ಕಳುಹಿಸಲು ಶುರುಮಾಡಿದರು.

ಮೂರನೆ ಕ್ಲಾಸು ಓದಿ ಮೇಷ್ಟ್ರ ಒದೆ ತಾಳಲಾರದೆ ಬಂದುಬಿಟ್ಟಿದ್ದ ಲಿಂಗ, ಬುಡ್ಡ, ಏಳನೇ ಕ್ಲಾಸ್‌ವರಗೂ ಓದಿ ಬಿಟ್ಟಿದ್ದ ಈರಿ, ಸ್ಕೂಲೇ ನೋಡದಿದ್ದ ಚುಂಚ, ರೇವಾ, ಇವರ ಮಧ್ಯೆ ಎರಡು ವರ್ಷ ಇಸ್ಕೂಲಿಗೆ ಹೋಗಿ ಒಂದಕ್ಷರವೂ ಬರದೆ ಧೂಪ ಮಾರಲು ಬಂದ ಈ ರಂಗಪ್ಪನೆಂಬ ಗಾಂಪ, ಒಟ್ಟು ಏಳೆಂಟು ಮಂದಿಯ ಒಂದು ಬೆಟಾಲಿಯಾನ್ ಸೈನ್ಯ.

ಇಸ್ಕೂಲಲ್ಲಿ ಪಾಠ ಮಾಡುವುದಕ್ಕಿಂತ ಹೆಚ್ಚಾಗಿ ಮೇಷ್ಟ್ರಿಗೆ ಐಕಳನ್ನು ಎತ್ತಾಕೊಂಡು ಬರಲು ಹುಡುಗರನ್ನು ಜೊತೆಮಾಡಿಕೊಂಡು ಸ್ವಾಲಿಗ್ರ ಹೊಲೇರಕೇರಿಗೆ ತಿರುಗುವುದರಲ್ಲೆ ಒಂದುದಿನ ಅನಾಮತ್ತಾಗಿ ಕಳೆದುಹೋಗಿತ್ತು. “ಯಾವ ಹಟ್ಸಿಮಗನಿಗೆ ಬೇಕು ಈ ಕೆಲಸ…..” ಎಂದು ಅವರು ರೇಗಿಕೊಳ್ಳುತ್ತಿದ್ದರು. ಯಾವತ್ತು ಬಸ್ ಪಂಚರ್ ಆಗಿ ಕಾಡುಮಧ್ಯದಲ್ಲಿಯೇ ನಿಂತು ಊರಿಗೆ ಬರುವುದಿಲ್ಲವೋ ಆವತ್ತು ಸ್ಕೂಲಿಗೆ ಎಲ್ಲಾ ಮಕ್ಕಳು ಹಾಜರ್. ಮೇಷ್ಟ್ರು ಫುಲ್ ಖುಷಿಯಿಂದ ಪಾಠ. “ದೇವ್ರೆ ದಿನಾಲು ಈ ಬಸ್ ಹೀಂಗಾ……….. ಪಂಚರ್ ಆಗ್ಲಿ ಮತ್ತಾ………..” ಎಂದು ಆ ಮಲೆ ಮಾದಯ್ಯನಿಗೆ ಮೇಷ್ಟ್ರು ಆವತ್ತೊಂದಿನ ಮಾತ್ರ ಎರಡೂ ಕೈಯೆತ್ತಿ ಮುಗಿತಾ ಇದ್ರು. ಉತ್ತರ ಕರ್ನಾಟಕದ ಮೂಲದಿಂದ ಮೊದಮೊದಲು ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ಬಂದಾಗ ಈ ಬೆಟ್ಟಗುಡ್ಡ ನೋಡಿ ದಂಗುಬಡಿದಿದ್ದರು. ಯಾರೋ ಬೆಟ್ಟದ ಹತ್ರ ಒಳ್ಳೇ ಊರು ತಗೊಳ್ಳಿ ಎಂದರಂತೆ. ಮಾದಪ್ಪನ ಜಾತ್ರೆ ಬಗ್ಗೆ ಕೇಳಿದ್ದ ಈಯಪ್ಪ ಇದೇ ಊರಿಗೆ ಇಸ್ಕೂಲನ್ನು ಆರಿಸಿಕೊಂಡು ಬಂದು ಬೆಪ್ಪನಾಗಿ ನಿಂತಿದ್ದಾಗ ಊರಗೌಡರು ವಿಚಾರಿಸಿ ಎಲ್ಲವನ್ನು ಸ್ಥೂಲವಾಗಿ ಹೇಳಿ ಇರುವುದಕ್ಕೆ ರೂಮು ಕೊಟ್ಟಿದ್ದರು. “ಬಿದ್ದಿರೋದೆ ಕೆಸರಿಗೆ. ಕೈಗಾದರೇನು, ಮೈಗಾದರೇನು” ಎಂದು ಮೊದಲ ದಿನವೇ ಊರಿನ ತುಂಬಾ ಓಡಾಡಿ ಜನಗಳನ್ನು ಪರಿಚಯ ಮಾಡಿಕೊಂಡು ಮಾರನೆ ದಿನ ಇಸ್ಕೂಲಿಗೆ ನುಗ್ಗಿದರೆ ನಾಕೇ ನಾಕು ಮಕ್ಕಳು ಪಿಳಿಪಿಳಿ ಕಣ್ಣು ಬಿಟ್ಟುಕೊಂಡು ವಾರಕ್ಕೆ ಮೂರುದಿನಾ ಮಾತ್ರ ಬರುತ್ತಿದ್ದ ಡುಮ್ಮ ಮೇಸ್ಟ್ರು ಬರದೆ ಇವರು ಬಂದಿದ್ದನ್ನು ಕಂಡು ಗಾಬರಿಯಾಗಿ ಎದ್ದು ನಿಂತು ರಾಗವಾಗಿ “ಬೆ………..ಳ………..ಗಿ………..ನ………..ವಂ………..ದ………..ನೆ…..ಗ….ಳು……….. ಗು..ರು..ಗ..ಳೇ” ಹೇಳಿದ್ದವು. “ಯಾಕ್ರಲೇ……….. ನಾಕೇ ನಾಕು ಮಂದಿ ಬಂದೀರಿ……….. ಈ ಊರ್ನಾಗ ಇರೂದು ಇಷ್ಟೇ ಮಂದಿ ಖರೇ ಏನು………..” ಎಂದರೆ ತಕ್ಷಣ ಇವರ ಭಾಷೆ ಅರ್ಥವಾಗದ ಹೈಕಳು ನಿಧಾನಕ್ಕೆ ತಹಬದಿಗೆ ಬಂದಾಗ ವಿಚಾರಿಸಲಾಗಿ ಅವರಿಗೆ ತಿಳಿದುಬಂದಿದ್ದು ಇಷ್ಟು. ಊರಿಗೆ ಅಂಟಿದಂತೆ ಕೊನೆಯಲ್ಲಿ ಇಕ್ಕೆಲಗಳಲ್ಲಿರುವ ಸ್ವಾಲಿಗ್ರ ಕೇರಿಯಿಂದಲೇ ಜಾಸ್ತಿ ಹೈಕಳು ಇಸ್ಕೂಲಿಗೆ ಬರಬೇಕಿತ್ತು. ಅಷ್ಟೂ ಮಂದಿ ಸೋಲಿಗರು ಊರವರ ಕೆಲಸಗಳಿಗೆ; ಬಿಟ್ಟರೆ ಕಾಡಿನಲ್ಲಿ ದನ ಮೇಯಿಸುವುದಕ್ಕೆ ಹೋಗುತ್ತಿದ್ದರು. ಲಿಂಗಾಯಿತ ಕೇರಿಯವರು ಕೊಟ್ಟ ಅಷ್ಟೋ ಇಷ್ಟೋ ಕಾಸಿನಲ್ಲಿ ಸಾಯಂಕಾಲವಾಗುವುದನ್ನೇ ಕಾದು ಸಾರಾಯಿ ಅಂಗಡಿಯಲ್ಲಿ ಕಂಠಗಟ್ಟಲೇ ಕುಡಿದು ಮಲಗಿ ಬಿಡುತ್ತಿದ್ದರು. ಲಿಂಗಾಯಿತರು ಕೊಡುವ ಕಾಸು ಮೂರೇ ಮೂರು ದಿನಕ್ಕೆ ಮುಗಿದು ಹೋಗುತ್ತಿತ್ತು. ತಾಳುಬೆಟ್ಟದಲ್ಲಿ ಜಾತ್ರೆಗೆ ಬರುವ ಜನಕ್ಕೆ ಧೂಪ ಬೇಕಾಗಿರುವುದ ತಿಳಿದು ಕೆಲವರು ಕಾಡಿಗೆ ಹೋದಾಗ ಧೂಪದ ಮರದಿಂದ ಗೋಂದನ್ನು ತಂದು ಒಣಗಿಸಿ ವತ್ತಾರೇಗೆ ಎದ್ದು ತಾಳುಬೆಟ್ಟಕ್ಕೆ ನಡಕೊಂಡು ಹೋಗಿ ಮಾರಿ ವಾಪಸ್ ದನಬಿಡುವ ವೇಳೆಗೆ ಬಂದು ಬಿಡುತ್ತಿದ್ದರು. ಮಕ್ಕಳಿಗೆ ಸುಮಾರಾಗಿ ಬುದ್ದಿಬಂದಾಗ ಬ್ಯಾಗೊಂದನ್ನು ಹೆಗಲಿಗೆ ಜೋತುಮಾಡಿ; ಕೈಗೆ ಧೂಪಹಾಕಿ ಹೊಗೆ ಬರಿಸಲು ಬಿದಿರಿನ ಹಚ್ಚೆಸಿಗಿದು ತಗಡಿನ ಡಬ್ಬಾವನ್ನು ಡಬ್ಬಿಯ ಹಾಗೆ ಮಾಡಿ ಅದರಲ್ಲಿ ಕೆಂಡಹಾಕಿ ಬಟ್ಟಲು ಮಾಡಿ ಕಳುಹಿಸುತ್ತಿದ್ದರು. ಕೆಂಡವೂದಿ ಚೂರು ಧೂಪ ಹಾಕಿದರೆ ಘಮ್ಮೆನ್ನುವ ಹೊಗೆ ಏಳುತ್ತಿತ್ತು. ವರ್ಷವೆಲ್ಲಾ ಗೇದು ಕೈಗೆ ನಾಕುಕಾಸು ಸಿಗುವುದಕ್ಕೆ ಕಾಯುತ್ತಿದ್ದವರು ದಿನಾ ಕಾಸುಸಿಗುವುದು ಕಂಡು ತಮಗೆ ಹುಟ್ಟುವ ಮಕ್ಕಳೆಲ್ಲವನ್ನೂ ಧೂಪ ಮಾರಲು ಕಳುಹಿಸುತ್ತಿದ್ದರು.

ಇಸ್ಕೂಲಲ್ಲಿ ಬಟ್ಟೆಗೆ; ಮಧ್ಯಾಹ್ನದ ಬಿಸಿ ಊಟಕ್ಕೆಂದು ಮೊದಲು ಅಡ್ಮಿಷನ್ ಮಾಡಿಸಿ ನಾಕು ದಿನ ಕಳಿಸಿ ಆ ಮೇಲೆ ಬಿಡಿಸಿ ಧೂಪ ಮಾರಲು ಅಟ್ಟುತ್ತಿದ್ದರು. ಇವರ ದುರಾಸೆಗೆ ಧೂಪದ ಮರದ ತೊಗಟೆಗಳೆಲ್ಲಾ ಒಣಗಿ ಕೊನೆಗೆ ಅದರ ಚಕ್ಕೆಯನ್ನೇ ತರಿದು ತಂದು ಪುಡಿಮಾಡಿ ಅದನ್ನೇ ಧೂಪ ಎಂದು ಪೇಟೆ ಜನಕ್ಕೆ ಮರಳು ಮಾಡುತ್ತಿದ್ದರು. ಇಷ್ಟನ್ನೂ ತಿಳಿದುಕೊಂಡ ಪಾಲಾಕ್ಷಪ್ಪ ಮೇಷ್ಟ್ರು ಕೇರಿಗೆ ಹೋಗಿ“ಸಾಲಿಗೆ ಕಳ್ಸಿ ಮಕ್ಕಳು ನಮ್ಮ ಹಾಂಗ ನಾಕು ಅಕ್ಷರ ಕಲೀಲಿ” ಎಂದು ಅಲವತ್ತುಕೊಂಡರು. ಇಸ್ಕೂಲಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಲು ಆಗಾಗ್ಗೆ ಬರುತ್ತಿದ್ದ ಮಾದಯ್ಯನ ಮೇಲೆ ಮೇಷ್ಟ್ರು ಸಲುಗೆ ಚೆನ್ನಾಗಿ ಬೆಳೆದು ಅವನ ಮಗ ರಂಗಪ್ಪ ಇಸ್ಕೂಲಲ್ಲಿ ಎಲ್ಲಾ ಹೈಕಳಿಗಿಂತ ಚಾಲಾಕಿ ಇದ್ದುದ್ದರಿಂದ ತಪ್ಪದೇ ದಿನಾ ಇಸ್ಕೂಲಿಗೆ ಕಳುಹಿಸುವಂತೆ ಮಾಡಿದರು. ಮಗ ಇಸ್ಕೂಲಿಗೆ ಹೋಗಾಕೆ ಶುರುಮಾಡಿದ ಮೇಲೆ ಸಾರಾಯಿ ಅಂಗಡಿಯ ಸಾಲ ನೆತ್ತಿಗೇರಿದ್ದರಿಂದ ವಾರಕ್ಕೆ ನಾಕು ದಿನ ಮಗನನ್ನು ಧೂಪ ಮಾರುವುದಕ್ಕೆ ಕಳುಹಿಸಲು ಶುರುಮಾಡಿದ್ದ. ಮಗ ಈಗ ಏನೋ ಕಿತಾಪತಿ ಮಾಡಿಕೊಂಡು ನಾಕು ಕಾಸು ತರುವುದಕ್ಕೂ ಕಲ್ಲು ಹಾಕಿಕೊಂಡಾಗ ವಿಷ್ಯ ತಣ್ಣಗಾಗುವವರೆಗೂ ಮೇಷ್ಟ್ರು ಮಾತಿಗೆ ಬೆಲೆ ಕೊಟ್ಟಂತಾಗಲಿ ಎಂದು ಇಸ್ಕೂಲಿಗೆ ಬರುವುದಕ್ಕೆ ಹಿಂದುಮುಂದು ನೋಡುತ್ತಿದ್ದ ಮಗನನ್ನು ಕರೆದುಕೊಂಡು ಬಂದಿದ್ದ.

ಇಸ್ಕೂಲಿಗೆ ತಂದು ಬಿಟ್ಟ ಅಪ್ಪನ ಮೇಲೆ ರಂಗಪ್ಪನಿಗೆ ಬಹಳ ಸಿಟ್ಟು ಬಂದುಬಿಟ್ಟಿತ್ತು. ಎಲ್ಲಾದರೂ ತಲೆ ತಪ್ಪಿಸಿಕೊಂಡು ಓಡಿ ಬಿಡಬೇಕೆನಿಸಿತು. ಧೂಪ ಮಾರುವಾಗ ಯಾವಾಗಾಲೂ ಓಡಾಡಿಕೊಂಡಿರುತ್ತಿದ್ದ ಅವನಿಗೆ ಒಂದೇ ಜಾಗದಲ್ಲಿ ಚುಪ್ ಅಂತ ಕೂರುವುದು ಯಮಯಾತನೆಯಾಗಿತ್ತು. ಅದೂ ಅಲ್ಲದೆ ಬಟ್ಟೆ ಕೊಳೆ ಅಂತ ಒದೆ; ಮೂಗಿನಿಂದ ಬರುವ ಗಂಗಾ ಕಾವೇರಿಗೆ ಒದೆ; ಸರಿಯಾಗಿ ಕೂತಿಲ್ಲ ಎನ್ನುವುದಕ್ಕೆ ಒದೆ; ಪಕ್ಕದವನನ್ನು ಕೀಟಲೆ ಮಾಡಿದ ಅಂತ ಒದೆ; ಗಲಾಟೆ ಮಾಡ್ತಾನೆ ಅಂತ ಒದೆ; ಹೀಗೆ ಒದೆತಿಂದು ತಲೆ ಕೆಟ್ಟುಹೋಗಿತ್ತು. ನಾಲ್ಕನೇ ತರಗತಿಗೆ ಬಂದಿದ್ದರೂ ಆ ಇ — — ಬರದೆ ಕುಂತಿದ್ದರೆ ವಾರಿಗೆ ಹುಡುಗರೆಲ್ಲಾ “ಪಾಠ ಒಂದು, ಮಂಗ ಮತ್ತು ಮೊಸಳೆ” ಎಂದು ಒಬ್ಬೊಬ್ಬರಾಗಿ ಪಾಠ ಹೇಳುತ್ತಿದ್ದರು. ಆಗಲೇ ಬಾಕಿ ದಿವಸಗಳು ಇಸ್ಕೂಲಿಗೆ ಬರದೆ ಇದ್ದದಕ್ಕಾಗಿ ಫಾಲಾಕ್ಷ ಮೇಷ್ಟ್ರು ಕುಂಡಿಗೆ ಬಾರಿಸಿ ಗಪ್ಪಂತ ಕೂರಿಸಿದ್ದರು. ಹೈಕಳು ಒಬ್ಬೊಬ್ಬರಾಗಿ ಪಾಠ ಓದುತ್ತಿದ್ದರೆ ಯಾರೋ ಪಕ್ಕದಲ್ಲಿ ಧೂಪ ಧೂಪ ಎನ್ನುತಿರುವಂತೆ ಭಾಸವಾಗುತ್ತಿತ್ತು. ಮೇಷ್ಟ್ರು ಪಾಠ ಮಾಡುತ್ತಿದ್ದರೆ ಯಾವುದೋ ಗಿರಾಕಿ ಧೂಪಕ್ಕಾಗಿ ಹೊಡೆದಾಡುತ್ತಿದೆ ಎನ್ನಿಸುತ್ತಿತ್ತು. ಅಲ್ಲಿ ಕಾಣುವ ಬೋರ್ಡು, ಬೆಂಚು, ಹುಡುಗರು, ಚಾರ್ಟು ಮೇಷ್ಟ್ರು ಎಲ್ಲವೂ ನಿಧಾನವಾಗಿ ಮಾಸಲಾಗುತ್ತಾ ಕಪ್ಪು ಬಿಳಪು ರೇಖೆಗಳಂತೆ ಕಾಣುತ್ತಾ ಹಾಗೇ ಸ್ತಬ್ದವಾಗಿಬಿಡುತಿದ್ದವು. ಕೊನೆಗೆ ಎಲ್ಲಾ ಗದ್ದಲದ ನಡುವೆ ನಾನೊಬ್ಬನೆ ಇದ್ದೇನೆ. ಅವರೇ ಬೇರೆ ನಾನೇ ಬೇರೆ, ನನಗೂ ಅವರಿಗೂ ಸಂಬಂಧವಿಲ್ಲ; ಏನು ಮಾಡಬೇಕೆಂದು ದಿಕ್ಕೇ ತೋಚದಂತಾಗಿ ಪುಸ್ತಕದಲ್ಲಿರುವ ಪುಟಗಳನ್ನು ಒಂದೊಂದಾಗಿ ತಿರುವಿ ಹಾಕುತ್ತಾ ಅದರಲ್ಲಿದ್ದ ಬಣ್ಣದ ಚಿತ್ರಗಳನ್ನು ನೋಡುತ್ತಾ ಕುಳಿತ. ಇಸ್ಕೂಲಿನ ಹೊರಗಡೆ ಬೇರೆಯದೇ ಲೋಕ ಇದೆ. ಆ ಲೋಕದಲ್ಲಿ ತಾನು ಲೀನವಾಗಿ ಬಿಡಬೇಕೆಂದು ಬೆಲ್ಲು ಹೊಡೆಯುವುದನ್ನೇ ಕಾಯುತ್ತಿದ್ದ. ಢಣಢಣ ಎಂದು ಬೆಲ್ಲು ಬಾರಿಸಿದಂತಾಗಿ ಇದು ಕನಸೋ ನಿಜವೋ ಎಂದು ಗೊಂದಲದಲ್ಲಿರಬೇಕಾದರೆ ಎಲ್ಲಾ ಹೈಕಳು ಬ್ಯಾಗನ್ನು ನೇತುಹಾಕಿಕೊಂಡು ಹೋಗುತ್ತಿರುವುದನ್ನು ನೋಡಿ ಇದು ನಿಜವೇ ಎಂದು ಅವನು ಎದ್ದು ಓಡಲನುವಾದಾಗ “ರಂಗಪ್ಪ……… ಮೇಷ್ಟ್ರು ಕರೀತಾವ್ರೆ ಬರ್ಬೇಕಂತೆ……” ಯಾವನೋ ಹುಡುಗ ಕೂಗಿ ಹೇಳಿದ ಮಾತಿಗೆ ಎಚ್ಚರವಾದಂತಾಗಿ ಮೇಷ್ಟ್ರ ರೂಮಿನತ್ತ ನಡೆದ. ಯಾವತ್ತೂ ಮೇಷ್ಟ್ರ ರೂಮಿಗೆ ಹೋಗಿರದವ ಮೇಷ್ಟ್ರ ರೂಮೆಂದರೆ ಯಾವುದೋ ಮಹಾನ್ ಜಾಗ ಅಲ್ಲಿಗೆ ಕೆಲವರಷ್ಟೇ ಹೋಗುವುದಕ್ಕೆ ಸಾಧ್ಯ, ಎಲ್ಲರಿಗೂ ಆ ಪುಣ್ಯವಿಲ್ಲ ಎಂದುಕೊಂಡೇ ಹೊಸ್ತಿಲಲ್ಲಿ ಕಾಲಿಟ್ಟವನಿಗೆ ಬಚ್ಚಲಲ್ಲಿ ಮೇಷ್ಟ್ರು ನೀರಿನ ಶಬ್ದ ಮಾಡುತ್ತಿರುವುದು ಕೇಳಿಸಿತು. ಅಲ್ಲಿ ಸಾಲಾಗಿ ಜೋಡಿಸಿಟ್ಟ ಪುಸ್ತಕಗಳು; ಟೇಬಲ್ ಮೇಲಿದ್ದ ತೂಗು ಹಾಕಿದ ಮೇಷ್ಟ್ರು ಬಟ್ಟೆಗಳು ಎಲ್ಲವನ್ನೂ ಒಂದು ಕಡೆಯಿಂದ ಕಣ್ಣಾಡಿಸುತ್ತಾ ಆನಂದಿಸುತ್ತಾ ಬರುತ್ತಿದ್ದ ಅವನಿಗೆ ಕಿಟಕಿ ಪಕ್ಕದಲ್ಲಿ ಕಪ್ಪಗೆ ಹೊಳೆಯುತ್ತಿರುವ ವಸ್ತುವೊಂದು ಅಣಕಿಸಿತು. ಥಟ್ಟನೆ ತಾನು ಧೂಪ ಮಾರುತ್ತಿದ್ದಾಗ ಪೋಟ ತೆಗೆಯಲು ಬಂದದ್ದು; ಕಿವಿಯಲ್ಲಿಟ್ಟುಕೊಂಡು ಯಾರೊಂದಿಗೋ ಮಾತನಾಡುತ್ತಿದ್ದದ್ದು; ಬೇಕೆಂದಾಗಲೆಲ್ಲಾ ಬೇಕಾದ ಹಾಡನ್ನು ಹಾಡುತ್ತಿದ್ದದು ಎನ್ನುವುದು ನೆನಪಾಗಿ ವಿಚಿತ್ರ ಕುತೂಹಲವುಂಟಾಯಿತು. ತಾಳುಬೆಟ್ಟದಲ್ಲಿ ಒದೆ ತಿಂದದ್ದೂ ಅದರ ಬೆನ್ನ ಹಿಂದೆ ಬ್ಯಾತಾಳನಂತೆ ಜ್ಞಾಪಕಕ್ಕೆ ಬಂದರೂ “ಎಲ್ಲಾ…….. ರಂಗಾ…… ಮಗ್ನೆ ಇಂಥಾ ಚಾನ್ಸು ಸಿಗುದಿಲ್ಲ ಉಡಾಯಿಸು……..” ಎಂದು ಯಾರೋ ಕಿವಿಯಲ್ಲಿ ಗುಂಯ್ ಗುಟ್ಟಿದಂತಾಯಿತು. ಏನಾರ ಆಗಲಿ ನೋಡಿಯೇ ಬಿಡೋಣ ಎಂದು ಹಠಕ್ಕೆ ಬಿದ್ದವನಂತೆ ನಾಕು ಹೆಜ್ಜೆ ಮುಂದೆ ಹೋಗಿ ತನ್ನ ಮೋಹದ ವಸ್ತುವನ್ನು ಜೇಬಿಗೆ ಇಳಿಸೇ ಬಿಟ್ಟ. ಮೇಷ್ಟ್ರು ಬಚ್ಚಲ ಮನೆಯಲ್ಲಿ ಇನ್ನೂ ನೀರಿನ ಶಬ್ದ ಮಾಡುತ್ತಲೇ ಇದ್ದರು. ಅಲ್ಲಿಂದ ಒಂದೇ ಉಸುರಿಗೆ ಮನೆಗೆ ಓಡಿ ಬಂದು ಮಜ್ಜಿಗೆ ಕಡೆಯುವ ಕಂಬಕ್ಕೆ ಇಸ್ಕೂಲು ಬ್ಯಾಗನ್ನು ಸಿಕ್ಕಿಸಿ ಯಾರಿಗೂ ಕಾಣದಂತೆ ಮನೆಯಿಂದ ದೂರ ಇರುವ ಹುಣಸೇಮರ ಏರಿ ತಾನು ತಂದಿದ್ದ ವಸ್ತುವನ್ನು ಹೊರತೆಗೆದು ಏನೇನೋ ಅಮುಕ ತೊಡಗಿದ. ಏನು ಮಾಡಿದರೂ ಸದ್ದೇ ಬರಲಿಲ್ಲದೆ ಅವನು ನಿರಾಶೆಗೊಂಡ. ಹಗಲಿನ ಬೆಳಕಲ್ಲಾ ಅವನ ಕುತೂಹಲದಂತೆ ಕರಗಿಹೋಗಿ ಎಲ್ಲಾ ಕಡೆ ಕತ್ತಲು ಭಯದಿಂದ ನಿಧಾನವಾಗಿ ಆವರಿಸಿಕೊಂಡು ಬರುತ್ತಿತ್ತು. ಎಷ್ಟು ಅಮುಕಿದರೂ ಏನೂ ಗೊತ್ತಾಗದೆ ಯಾಕಾದರೂ ತಂದೆನೋ ನಾಳೆ ಏನು ಮಾಡುವುದು ಎಂದುಕೊಂಡು ಕತ್ತಲಾಗುತ್ತಿರುವುದನ್ನು ಕಂಡು ನಿಧಾನವಾಗಿ ಮರವನ್ನು ಇಳಿಯುತ್ತಿರುವಾಗ ಮರದ ಕೆಳಗೆ ಎರಡು ಆಕೃತಿಗಳನ್ನು ಕಂಡಂತಾಗಿ ಬೆಚ್ಚಿ ಹಾಗೇ ನೋಡಿದ. ಪಕ್ಕದ ಮನೆ ಲಕ್ಷ್ಮೀಯನ್ನು ಮರಕ್ಕೆ ಆನಿಸಿಕೊಂಡು ಲಿಂಗಾಯಿತರ ಕೇರಿ ಪರಮೇಶಣ್ಣ ಏನೇನೋ ಮಾಡುತ್ತಿದ್ದುದನ್ನು ಕಂಡು “ಅಯ್ಯೋ…….. ಕೆಟ್ಟೋಯ್ತು ಕೆಲಸ ನನ್ನ ನೋಡ್ಕೊಂಡು ಬಿಟ್ರೆ ಏನುಗತಿ” ಎಂದು ಮರದ ಪಂಡೆಯ ಮೇಲೆ ಗಪ್‌ಚುಪ್ ಎನ್ನದೆ ಅವರು ಹೋಗಲಿ ಎಂದು ಕಾಯುತ್ತಾ ಕುಂತ. ದಿನಾ ಸಾಯಂಕಾಲ ಮನೆ ಮುಂದೆ ಹಾದು ಹೋಗುತ್ತಿದ್ದ ಲಕ್ಷ್ಮೀಯನ್ನು ಅವ್ವ “ಎಲ್ಲಿಗೆ ಲಕ್ಷ್ಮೀ ಇಷ್ಟೊತ್ತಿನಾಗೆ…….. ಎಂದರೆ “ಹುಣಸೆ ಹಣ್ಣು ಹಾಯ್ಕಂತ್ತೀನಿ ಕಣಕ್ಕಾ…..” ಎಂದು ಬಿರಬಿರನೆ ಬರತ್ತಿದ್ದುದ್ದು ಇದಕ್ಕೆ ಇರಬೇಕು ಎಂದುಕೊಂಡ. ಎಷ್ಟೂ ಹೊತ್ತಾದರೂ ಅವರು ಹೋಗದಿದ್ದುದ್ದು ನೋಡಿ ಬೇಜಾರಾಗಿ ಮತ್ತೆ ಆ ಮೊಬೈಲನ್ನು ತೆಗೆದು ಏನೇನೋ ಅಮುಕ ತೋಡಗಿದ. ಇದ್ದಕ್ಕಿದ್ದಂತೆ ಅದರೂಳಗಿಂದ ಒಮ್ಮೆಲೆ ಬೆಳಕು ಹತ್ತಿಕೊಂಡು “ಸಾರೆ…….. ಜಹಾಂಸೆ…….. ಅಚ್ಚಾ….” ಎಂದು ಜೋರಾಗಿ ಕೈ ಅದುರುವಂತೆ ಹೊಡೆದುಕೊಳ್ಳತೊಡಗಿತು. ರಂಗಪ್ಪನಿಗೆ ದಿಕ್ಕು ತಪ್ಪಿದಂತಾಗಿ ಗಾಬರಿಯಾಗಿ ಕೈಜಾರಿ ಮೇಲಿಂದ ಕೆಳಗಡೆ ಅವರ ಎದುರಿನಲ್ಲಿ ದೊಪ್ಪನೆ ಬಿದ್ದ. ಸತ್ತೆನೋ ಕೆಟ್ಟೆನೋ ಎಂದು ಬೆಚ್ಚಿಬಿದ್ದವರಂತೆ ಪರಮೇಶ ಬಿದ್ದವರು ಯಾರು ಎಂಬುದನ್ನೂ ಗಮನಿಸದೆ ಅವಳೊಬ್ಬಳನ್ನೇ ಬಿಟ್ಟು ಕತ್ತಲಲ್ಲಿ ಮರೆಯಾದ. ಬೆಪ್ಪನೆ ಬೆತ್ತಲೆಯಾಗಿ ಹೊರಗಿಣಕಿ ನೋಡುತಿದ್ದ ಮೊಲೆಗಳನ್ನು ಕುಪ್ಪಸದೊಳಕ್ಕೆ ಸೇರಿಸಿ ಗುಂಡಿಹಾಕಿ ಸೆರಗನ್ನು ಸರಿಮಾಡಿಕೊಳ್ಳುತ್ತಾ ಕೆಳಗೆ ಬಿದ್ದಿದ್ದ ರಂಗಪ್ಪನನ್ನೇ ದುರುದುರು ನೋಡಿದಳು “ಏ….. ಲಕ್ಷ್ಮಕ್ಕ…….. ಅವ್ವಂಗೆ ಹೇಳ್ತೀನಿ ಇರು……..” ಎಂದು ರಂಗಪ್ಪ ಹೆದರಿಸುವುದನ್ನು ಕಂಡು “ಲೋ…….. ರಂಗಪ್ಪ…….. ಯಾರ್ಗೂ ಹೇಳ್ಬ್ಯಾಡ…….. ನೀನು ಇಸ್ಕೂಲಿಂದ ತಪ್ಪಿಸ್ಕ ಬಂದ್ರೆ ಅವಿತುಕೊಳ್ಳೋಕೆ ಜಾಗ ತೋರಿಸ್ತೀನಿ ಆಯ್ತಾ……..?” ಎಂದಳು. ಯಾವ ಮೆದೆ, ಮನೆ, ಕೊಟ್ಟಿಗೆಗಳಲ್ಲಿ ಅವಿತುಕೊಂಡರೂ ಹಾಳಾದ ಮೇಷ್ಟ್ರು ಹುಡುಗರನ್ನು ಕಳುಹಿಸಿ ಹುಡುಕಿಸಿ ಎಳೆದುಕೊಂಡು ಹೋಗುತ್ತಿದ್ದರು “ಸರಿ…….. ಆಯ್ತು ನಾನು ಇಸ್ಕೂಲು ತಪ್ಪಿಸ್ಕಳದು ಯಾರ್ಗೂ ಹೇಳ್ಬಾರ್ದು……. ನೀನೇಳ್ದ್ರೆ ನಾನು ಹೇಳ್ತೀನಿ……..” ಎಂದು ಮೊಬೈಲು ಇದೆಯೋ ಇಲ್ಲವೊ ಎಂದು ಚೆಡ್ಡಿಮುಟ್ಟಿನೋಡಿಕೊಂಡ. ಈ ವಿಷಯದಲ್ಲಿ ಅವನು ಅಷ್ಟು ಆಸಕ್ತಿಯನ್ನು ವಹಿಸದಿದ್ದುದ್ದನ್ನು ಕಂಡು ಖುಷಿಯಾದ ಲಕ್ಷ್ಮೀ ಅವನ ಕೈಹಿಡಿದು ಮನೆಕಡೆ ಹೆಜ್ಜೆ ಹಾಕಿದಳು.

(ಸ್ವಾಮಿ ಪೊನ್ನಾಚಿ)

ಶಾಲೆಗೆ ಬರದೆ ಚಕ್ಕರ್ ಹೊಡೆದಿದ್ದ ರಂಗಪ್ಪನನ್ನು ಎಳೆದು ತರಲು ಮೇಷ್ಟ್ರು ನಾಲ್ಕು ಹುಡುಗರ ಗುಂಪು ಮಾಡಿ ನಾಕು ದಿಕ್ಕಿಗೆ ಕಳುಹಿಸಿದರು. ರಂಗಪ್ಪನ ಮನೆ ಸೌದೆ ಒಟ್ಲು; ಹುಣಸೇಮರ ಎಲ್ಲಿ ತಡಕಿದರೂ ರಂಗಪ್ಪನ ಸುಳಿವಿಲ್ಲ. ಲಕ್ಷ್ಮೀಯು ಹಟ್ಟಿತಾವ ಇಸ್ಕೂಲು ಹೈಕಳನ್ನು ಗುಟ್ಟಾಗಿ ಕರೆದು “ನಾ ಹೇಳ್ದೆ ಅಂತ ಹೇಳ್ಬ್ಯಾಡಿ ನಮ್ಮ ಮನೆಯಲ್ಲಿ ಉಡುಕ್ರಿ” ಎಂದು ತೋರಿಸಿದಳು. ಹುಡುಗರು ಏನೋ ಘನಂದಾರಿ ಕೆಲ್ಸ ಮಾಡುವಂಗೆ ಲಕ್ಷ್ಮೀ ಮನೆಯೊಳಗೆಲ್ಲಾ ತಡಕಾಡಿದರು. ರಂಗಪ್ಪನ ಸುಳಿವೇ ಇಲ್ಲಾ” ಎಲಾ…….. ಇವ್ನ…….. ಈಗ್ತಾನೆ ಅವಿತುಕೊಳ್ಳೋಕೆ ಬಂದ್ನಲ್ಲ…….. ಎಂದು ಲಕ್ಷ್ಮೀಗೂ ಸೋಜಿಗವಾಯಿತು. ಹೈಕಳೆಲ್ಲಾ ಇನ್ನೇನು ಇವನು ಸಿಗುವುದಿಲ್ಲ ಎಂದು ಹೊರಗೆ ಹೋಗುವಷ್ಟರಲ್ಲಿ“ಸಾರೆ…….. ಜಹಾಂಸೆ……..ಅಚ್ಚಾ……..” ಎಂದು ಜೋರಾಗಿ ಮೂಲೆಯಲ್ಲಿ ನಿಲ್ಲಿಸಿದ್ದ ದಪ್ಪ ಬಿದಿರಿನ ದೊಂಬೆಯೊಳಗಿಂದ ಈಪೇ ಇಪಾಟಿ ಮೊಬೈಲ್ ಹೊಡೆದುಕೊಳ್ಳತೊಡಗಿತು. ಸಿಕ್ದಾ ಅಂತ ಕಿರುಚುತ್ತಾ ಹುಡುಗರು ದೊಂಬೆಯನ್ನು ದಪ್ಪಂತ ಕೆಡವಿದರು. “ಬೋಳಿಮಕ್ಳಾ…….. ಸೂಳೆಮಕ್ಳಾ…….. ನಿಮ್ಗೆಲ್ಲಾ ಮಾಡ್ತೀನಿ ತಡೀರಿ” ಎಂದು ಕಿರುಚಾಡುತ್ತಿದ್ದವನನ್ನು ಅಷ್ಟೂ ಹುಡುಗರು ಸೇರಿ ಹೆಡೆಮುರಿಗೆ ಕಟ್ಟಿಹೊತ್ತುಕೊಂಡು ಬಂದಂತೆ ಎತ್ತಿಕೊಂಡು ತಂದು ಮೇಷ್ಟ್ರು ಎದುರಿಗೆ ನಿಲ್ಲಿಸಿದರು. ಮೇಷ್ಟ್ರು ಕಣ್ಣು ಕೆಂಪಗೆ ಮಾಡಿಕೊಂಡು ಅವನ ಎರಡೂ ಕಿವಿಗಳನ್ನು ಮೇಲಕ್ಕೆ ಎತ್ತಿ “ಏನ್ಲೆ…….. ಹಟ್ಸಿಮಗನೆ. ನನ್ನ ಮೊಬೈಲ್ ಎಲ್ಲಿಟ್ಟಿದ್ದಿಯಾ ಹೇಳ್ತೀಯೋ ಇಲ್ವೋ…….”. ರಪ್ಪಂತ ನೆಲಕ್ಕೆ ಕುಕ್ಕಿ ಕೇಳಿದರು “ಇಲ್ಲಾ ಸಾ, ನಾ ಎತ್ಕಲಿಲ್ಲ” ಎಂದು ಅಳಲು ಶುರುಮಾಡಿದ ಅವನನ್ನು ನೋಡಿ ಹುಡುಗ್ರ ಕಡೆಗೆ ತಿರುಗಿ “ಏನ್ರಲೇ…….. ಅವನು ತುಡುಗು ಮಾಡಿಲ್ಲ ಅಂತಾನ!?” ಮೇಷ್ಟ್ರು ಕಣ್ಣು ಅಗಲಿಸಿ ಕೇಳಿದರು “ಇಲ್ಲಾ ಸಾ ಅವ್ನ ಜೇಬೊಳಗೆ ಮಡಿಕಂಡು ಗುಟ್ ಗುಟ್ಟಾಗಿ ಆಟ ಅಡ್ತಿದ್ನಂತೆ. ಲಕ್ಷ್ಮ ಹೇಳಿದ್ಲು…….. ಅವರ ಮನೇಲೇ ಸಾ ಇವ್ನು ಸಿಕ್ಕಿದ್ದು…….. ಹುಡುಗರೆಲ್ಲಾ ಒಟ್ಟಾಗಿ ಅವನ ಮೇಲೆ ದೂರು ಹೇಳಿದರು. ಮೇಷ್ಟ್ರು ಅವನ ಹತ್ತಿರ ಎಳೆದುಕೊಂಡು ಒಂದು ಜೇಬಿಗೆ ಕೈ ನುಗ್ಗಿಸಿದರೆ ಜೇಬು ಹರಿದುಹೊಗಿದ್ದ ಅದು ನೇರವಾಗಿ ರಂಗಪ್ಪನ ಮರ್ಮಾಂಗಕ್ಕೆ ಮುಟ್ಟಿತ್ತು. ಕಚಗುಳಿ ಇಟ್ಟಂತವನಾಗಿ ರಂಗಪ್ಪ ಅಳುತ್ತಿದ್ದನ್ನು ನಿಲ್ಲಿಸಿ ಹ್ಹಿ…….. ಹ್ಹಿ…….. ಹ್ಹಿ…….. ಎಂದು ನಗತೊಡಗಿದ. “ಥೂ ಇವನಪ್ಪನಾ” ಹುಡುಗರಿಗೆಲ್ಲಾ ಗೊತ್ತಾಗಿ ತನ್ನನ್ನು ಗೇಲಿ ಮಾಡಿ ನಕ್ಕುಬಿಡುವರೋ ಎಂದು ಏನು ಮಾತಾಡದೆ ಸರಕ್ಕನೆ ಕೈ ಎಳೆದುಕೊಂಡ ಮೇಷ್ಟ್ರು ಮತ್ತೊಂದು ಜೇಬನ್ನು ಚೆಕ್ ಮಾಡಲು ಭಯವಾಗಿ “ಬರ‍್ಲಾ…….. ಇಲ್ಲಿ…….. ಇದನ್ನು ಚೆಕ್ ಮಾಡು ಅಂತ ಬೇರೆ ಹುಡುಗನನ್ನು ಬಿಟ್ಟರು. ಅವನು ಕೈ ಹಾಕಿ ಏನು ಇರದಿದುದ್ದ ಕಂಡು “ಏನು ಇರಲಿಲ್ಲ ಸಾ” ಎಂದ. “ಎಲ್ಲಿಟ್ಟಿದ್ದೀಯೋ…….. ಮಂಗ್ಯಾ ನನ್ನಮಗನೆ” ಎಂದು ಲಂಟಾನದ ಚಬಕೆ ಕೈಗೆ ತೆಗೆದುಕೊಂಡು ಬೆನ್ನ ಮೇಲೆ ಕುಂಡಿಮೇಲೆ ಎಲ್ಲೆಂದರಲ್ಲಿ ರಪ ರಪನೆ ಬಾರಿಸುತ್ತಿದ್ದರು. ಹಟ್ಟಿಯಲ್ಲಿಟ್ಟಿದ್ದೀನಿ ಸಾರ್ ಎಂದು ಮೇಷ್ಟ್ರು ಕಾಲಿಗೆ ಬಿದ್ದ ರಂಗಪ್ಪ. ಮೇಷ್ಟ್ರು ಹುಡುಗರನ್ನು ಅವನನ್ನು ಜೋಪಾನವಾಗಿ ಹಿಡಿದುಕೊಂಡು ಮನೆವರೆಗೂ ಹೋಗಿ ಮೊಬೈಲ್ ತರಲು ಜೊತೆಯಲ್ಲಿ ಕಳುಹಿಸಿದರು. ಇನ್ನೇನೂ ಮನೆ ಹತ್ತಿರದಲ್ಲಿ ಸಿಗಬೇಕು ಅನ್ನುವಷ್ಟರಲ್ಲಿ ಹಿಡಿದುಕೊಂಡಿದ್ದವರ ಕೈಗಳನ್ನು ಕಚ್ಚಿ ಬಿಡಿಸಿಕೊಂಡು ಅಷ್ಟು ದೂರ ಹೋಡಿಹೋಗಿ “ಮೇಷ್ಟ್ರು ಗೆ ಹೋಗಿ ಹೇಳ್ರೋ ನಾನು ಸಾಯ್ತಿನಿ ಅಂತ; ನಾನ್ ಸತ್ರೆ ಆವಯ್ಯನೆ ಸಾಯ್ಸಿದ್ದು ಅಂತ ಹೇಳ್ತೀನಿ…….. ಇದೇ ಕೊನೆ ಸರ್ತಿ ನನ್ ಮುಖ ನೋಡ್ಕಳಿ, ನಾನು ಸಾಯೋಕೆ ಹೋಗ್ತೀನಿ”ಎಂದೇಳಿ ಓಡತೊಡಗಿದ್ದನ್ನು ಕಂಡು ಹುಡುಗರು ಅವನ ಹಿಂದೆಯೇ ಹಿಡಿಯಲು ಓಡುತಿದ್ದರು.ಆ ಕಡೆಯಿಂದ ಬಳಸಿ ಬಂದು ಹಿಡಿಯಲು ಹೋದ ಹುಡುಗರೆನ್ನೆಲ್ಲಾ ಝಾಡಿಸಿಕೊಂಡು ರಾಗಿ ಹೊಲಗಳತ್ತ ಎಗರಿ ಮರೆಯಾದ. ಮೇಷ್ಟ್ರು ಮತ್ತೆ ಹುಡುಗರನ್ನು ಗುಂಪುಮಾಡಿ ಹುಡುಕಲು ಕಳುಹಿಸಿದರು. ಸಾಯಂಕಾಲದವರೆಗೂ ಹುಡುಹುಡಿಕಿ ಸುಸ್ತಾದ ಮಕ್ಕಳು ಬರಿಗೈಯಲ್ಲೇ ವಾಪಾಸಾಗಿದ್ದರು. ರಂಗಪ್ಪ ಸಾಯುತ್ತೇನೆ ಎಂದು ಹೇಳಿ ಹೋದ ಸುದ್ದಿ ಬಸವಿ ಮಾದಯ್ಯರ ಕಿವಿಗೂ ಬಿದ್ದು ಗಾಬರಿಯಾಗಿ ಅಲ್ಲಿಂದಲೇ ಲಬೋ ಲಬೋ ಎಂದು ಬಾಯಿ ಬಡಿದುಕೊಂಡು ಬಂದ ಬಸವಿ ಮೇಷ್ಟ್ರು ಮುಖ ನೋಡುತ್ತಲೇ “ನಿನಗೆ ನಾರ‍್ದಾವು ಕಚ್ಚಾ…….. ನನ್ ಮಗನ್ನ ಏನ್ ಮಾಡ್‌ಬುಟ್ಯೋ ನಿನ್ ಮನೆ ಹಾಳಾಗ ಎಂದು…….. ಎರಡೂ ಕೈಯಿಂದ ನಟಿಕೆ ಮುರಿದು ಜೋರು ಮಾಡಿದುದನ್ನು ಕಂಡು ಅಷ್ಟೊಂದು ಸೀರಿಯಸ್ಸಾಗಿ ತಗೊಂಡಿರದ ಮೇಷ್ಟ್ರುಗೆ ಒಂಥರ ಭಯ ಆವರಿಸಿದಂತಾಯ್ತು. “ಸ್ವಲ್ಪ ಸುಮ್ನೆ ಕುಂದ್ರಲೇ…….. ಅವ್ವ…….. ಹುಡುಗರನ್ನು ಹುಡ್ಕಾಕ ಕಳೀಸೀನಿ…….. ಇಲ್ಲೇ ಎಲ್ಲೋ ಬಚ್ಚಿಟ್ಟುಕೊಂಡಿರಬೇಕು” ಅವರೂ ರಾಂಗು ಮಾಡಿದರು. ಅಷ್ಟೊತ್ತಿಗೆ ಮಾದಯ್ಯನೂ ಎರಡು ಪಾಕೀಟು ಏರಿಸಿಕೊಂಡು “ಏನ್ರಿ ಮೇಷ್ಟ್ರೆ ಏನಾಯ್ತು” ಎಂದು ಸಮಾಧಾನದಿಂದಲೇ ಕೇಳಿದ. ಅವರುಗಳು ಹೇಳುವ ಮಾತುಗಳನ್ನು ಕೇಳಿ ಮಾಸ್ಟರಿಗೆ ಬಾರಿ ದೊಡ್ಡತಪ್ಪು ಮಾಡಿಬಿಟ್ಟಿನೇನೋ ಎನ್ನಿಸಿತು. ಹುಡುಗರು ಬಂದು “ಸಾ ಎಲ್ಲಾ ಕಡೆ ಹುಡುಕಿದೆವು ಅವ್ನು ಪತ್ತೇನೆ ಇಲ್ಲ” ಎಂದು ಮಾಸ್ಟರ ಮುಂದೆ ಹೇಳುವುದ ಕೇಳಿದ ಬಸವಿ ಇನ್ನೂ ಲಬೋ ಲಬೋ ಬಡಿದುಕೊಳ್ಳುತ್ತಾ “ಎಲ್ಲೋದೆ ನನಕಂದಾ……..” ಎಂದು ಅಳತೊಡಗಿದಳು. ಅವಳನ್ನು ಬೈಯಲು ಯಾವಾಗಲೂ ಚಾನ್ಸೇ ಸಿಗದಿದ್ದ ಮಾದಯ್ಯನಿಗೆ ಇದೇ ಸರಿಯಾದ ಸಮಯ ಎಂದೆನಿಸಿ “ಮುಚ್ಚಮ್ಮಿ ಬಾಯ…….. ಒಳ್ಳೇ ಸತ್ತೋರ್ ಮನೆ ಮುಂದೆ ಅತ್ತಂಗೆ ಅಳ್ತಿಯಲ್ಲ…….. ಇಲ್ಲೇ ಎಲ್ಲೋ ಅವಿತ್ಕಂಡವನೆ. ಅದೆಂಥಾ ರಾಗ ಹಾಡಿಯೇ” ಎಂದು ಬಸವಿಯ ಮೇಲೆ ಜೋರು ಮಾಡಿದ. ಮೇಷ್ಟ್ರಿಗೆ ಸ್ವಲ್ಪ ಸಮಾಧಾನವಾದಂತೆನಿಸಿತು. “ಈವತ್ತು ನಮ್ ಮಗ ನಮ್ ಕೈಗೆ ಸಿಕ್ದೇ ಇರ್ಲಿ…….” ಅಂತ ಪಾಲಾಕ್ಷಪ್ಪ ಮೇಷ್ಟ್ರು ಕಡೆ ತಿರುಗಿ ಪುನಃ ನಟಿಕೆ ಮುರಿಯುತ್ತಾ ಬಸವಿ ಮನೆ ಕಡೆ ಹೋದಳು. ಅಷ್ಟುಹೊತ್ತಿಗೆ ಹಾಕಿದ್ದ ಪಾಕೀಟಿನ ಕರಾಮತ್ತೆಲ್ಲಾ ಕಂಗಿಹೋಗಿ ಅವಳ ಹಿಂದೆ ಮಾದಯ್ಯನೂ ನಡೆದ.

ಹಗಲೂ ಇರುಳೂ ಒಂದಾಗಿ ಪ್ರಸ್ತ ಮಾಡಿಕೊಳ್ಳುವ ಮುಸ್ಸಂಜೆ ಹೊತ್ತು. ಎಲ್ಲರೂ ತಮ್ಮ ತಮ್ಮ ಮನೆಗೆಲಸ ಮುಗಿಸಿ ಕಟ್ಟೇ ಮೇಲೆ ಕುಂತು ಸಾಯಂಕಾಲ ಹರಟೆ ಹೊಡೆಯುವ ಹೊತ್ತು. ಅಲ್ಲೋ ಇಲ್ಲೋ ಮರೆಯಲ್ಲಿ ಜೋಡಿಗಳು ಮೈಮರೆಸಿಕೊಳ್ಳುವ ಹೊತ್ತು. ದೂರ ಹೋಗುವುದಕ್ಕೆ ಆಗದೆ ಮುದಿ ಜೀವಿಗಳು ಹಟ್ಟಿ ಅಂಗಳದಾಗೇ ಬಹಿರ್ದೆಶೆಗೆ ಕೂರುವಂತಾ ಹೊತ್ತು. ಪಾಪಮ್ಮ ನಡುಗುತ್ತಾ ಕೈಲಿ ಕೋಲು ಹಿಡಿದುಕೊಂಡು ನಿಧಾನವಾಗಿ ಇಸ್ಕೂಲು ಹಿಂದಿರುವ ಹೊಲದಲ್ಲಿ ಗುಡಿಸಲ ಮೆದೆ ಕೆಳಗೆ ಬಹಿರ್ದೆಶೆಗೆ ಕುಂತಳು. ಗುಡಿಸಲಿನಲ್ಲಿ ಥರಥರ ಸದ್ದು ಕೇಳಿಸಿದಂತಾಗಿ ಈ ಪಾಳು ಬಿದ್ದ ಅಟ್ಟಲಿನಲ್ಲಿ ಯಾರಿದ್ದಾರೆ ಎಂದುಕೊಂಡು ತನ್ನ ಪಾಡಿಗೆ ತಾನು ಕುಂತಳು. ಮತ್ತೆ ಜೋರಾಗಿ ಸರಸರಶಬ್ದ. ಮುದುಕಿಗೆ ಅನುಮಾನ ಶುರುವಾಗಿ ಯಾವುದೋ ದೆವ್ವದ ಶಂಕೆ ಇರಬೇಕೆಂದುಕೊಂಡಳು. ನಾಲ್ಕು ಕವೆಗಳ ಆಧಾರದ ಮೇಲೆ ನಿಂತಿದ್ದ ಇಡೀ ಅಟ್ಟವೇ ಜೋರಾಗಿ “ಸಾರೆ…….. ಜಹಾಂಸೆ…….. ಅಚ್ಚಾ…….. ಹಿಂದು ಸಿತಾ ಹಮಾರ…….. ಹಮಾರ……..” ಎಂದು ಪದವಾಡತೊಡಗಿದ್ದನ್ನು ಕಂಡು ಕೇಳಿದ ಮುದುಕಿ “ಅಯ್ಯೋ…….. ದೆವ್ವ……..” ಎಂದು ಕಿರುಚಿಕೊಂಡು ಕೋಲುಪಾಲು ಎಲ್ಲಾ ಬಿಸಾಡಿ ಎದ್ದನೊ ಬಿದ್ದನೊ ಎಂದು ಬೀದಿ ಕಡೆ ಓಡತೊಡಗಿದಳು.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ