ಭೂಮಿ ಕಂಪಿಸುತ್ತಿದೆ. ಇಮಾರತುಗಳು, ಗಿಡಮರಗಳು ಅಲುಗಾಡುತ್ತಿವೆ. ಏನಾಗುತ್ತಿದೆ? ಎಂಬುದೇ ತಿಳಿಯದೇ ಎಲ್ಲರೂ ಒಂದು ಕ್ಷಣ ದಂಗಾದರು. ಮರುಕ್ಷಣದಲ್ಲಿಯೇ ತೀವ್ರ ಭೂಕಂಪದ ಅನುಭವ ಆಗುತ್ತಿದ್ದಂತೆ, ಕೆಲವರ ಮೊಬೈಲಿನಲ್ಲಿ ಕರಾವಳಿಯಲ್ಲಿ ತ್ಸುನಾಮಿ ಎರಗಿದ ಮೆಸೇಜ್ ಬರತೊಡಗಿದಾಗ ಎದೆ ಬಡಿತ ಜೋರಾಯಿತು. ಮಾತು ಹೊರಡುತ್ತಿಲ್ಲ. ಮುಕುಲ ಇಲ್ಲಿಂದ 35-40 ಕಿಮಿ ದೂರದ ತುಕುಶಿಕ ನಗರದ ಕಂಪನಿಯ ಆಫೀಸಿನಲ್ಲಿದ್ದಳು. ಅವಳ ಕಥೆ ಏನೊ. ಮನೆ ಅಲುಗಾಡಿದರೆ ನಿಲ್ಲಬಹುದು. ಹೊರಗೆ ನೆಲದ ಮೆಲೆ ಸುರಕ್ಷಿತ ಜಾಗದಲ್ಲಿ ನಿಲ್ಲಬಹುದು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವನರಾಗ ಶರ್ಮಾ ಕತೆ “ವಿಪ್ಲವ” ನಿಮ್ಮ ಓದಿಗೆ
ಅದೊಂದು ದಿನ ಚುಮುಚುಮು ನಸುಕಿನಲ್ಲಿ ಬಾಗಿಲು ತೆರೆದು ಹೊರಬಂದಾಗ ಮಬ್ಬುಗತ್ತಲಿನಲ್ಲಿ ಅಸ್ಪಷ್ಟ ಆಕೃತಿಯೊಂದರ ನೆರಳನ್ನು ಕಂಡೆ. ಅಕರಾಳವಿಕರಾಳ ರೂಪಿನ ಆ ಆಕೃತಿಯ ನೆರಳು ಅನಾಮತ್ತು ನನ್ನನ್ನೇ ನುಂಗಿಬಿಡುವಂತೆ ಹತ್ತಿರ ಹತ್ತಿರ ಬರುತ್ತಿದ್ದಂತೆ.. ನಾನು ದಢಾರನೆ ಬಾಗಿಲು ಮುಚ್ಚಿ ಒಳಗೆ ಬಂದೆ. ಅಲ್ಲಿಯೂ ಅವನ ರಕ್ಕಸಕೈಗಳು ಬಾಗಿಲನ್ನು ಅನಾಯಾಸ ನೂಕಿಕೊಂಡು ಒಳಬರುತ್ತಿರುವಂತೆ ಅನಿಸಿತು. ನನ್ನ ಕೊಠಡಿ ಸೇರಿ ರಗ್ಗು ಎಳೆದುಕೊಂಡು ಮುಸುಕು ಹಾಕಿ ಮಲಗಿದೆ. ಇನ್ನೊಂದೇ ಕ್ಷಣದಲ್ಲಿ ಥರಥರ ಕಂಪಿಸುತ್ತ… ರಗ್ಗನ್ನು ಸುತ್ತಲೂ ಭದ್ರಪಡಿಸಿಕೊಂಡಿದ್ದರೂ ಮುಸುಕಿನ ಅಂಚಿನಿಂದ ಕೈಯ್ಯೊಂದು ತೂರಿ ಬರುತ್ತಿರುವಂತೆ ಕಂಡಾಗ ಕಿಟಾರನೇ ಕಿರುಚಿ ಧಿಗ್ಗನೆ ಎದ್ದು ಬಾಗಿಲು ತೆರೆದು ಹೊರಗೆ ಓಡಿಬಂದೆ.. ಯಮನಶೈಮಿನಿ
ಪಟ್ಟಣದಿಂದೆದ್ದು ಬಂದ ಕೈಯ್ಯೋ.. ಖಬರಸ್ತಾನದಿಂದ ತಪ್ಪಿಸಿಕೊಂಡು ಬಂದ ನೆರಳೋ..? ಅಂತೂ ನನ್ನ ಹಿಂದೆಯೇ ಅದೇ ನೆರಳು. ಯಾರವನು? ಯಾರ ಆಕೃತಿಯ ನೆರಳು ಅದು..? ಹಿಂದೆಂದೂ ಕಂಡರಿಯದ ಆಕೃತಿಯಂತೆಯೂ, ಹಿಂದೆಲ್ಲೋ ಜನ್ಮಾಂತರದ ಕಾಲಘಟ್ಟದಲ್ಲಿ ನೋಡಿದ ಪ್ರತಿರೂಪಿನಂತೆಯೂ ಅನಿಸಿ ಒಂದೇ ಸವನೆ ಓಡತೊಡಗಿದೆ.
ಓಡುತ್ತ ಓಡುತ್ತ ಮುಕುಲಳ ಮನೆಗೆ ಬಂದು ತಲುಪಿದೆ… ಆಗಲೇ ಬೆಳ್ಳಂ ಬೆಳಗಾಗಿತ್ತು. ನಾನು ಹಿಂದೆ ನೋಡುತ್ತಿರಲಿಲ್ಲ. ನೋಡುವ ಧೈರ್ಯವೂ ಇರಲಿಲ್ಲ.. ಮುಕುಲ ಅದೇ ತಾನೆ ಸ್ನಾನ ಮಾಡಿ ಬಾಗಿಲಬಳಿ ರಂಗೋಲಿ ಇಡುತ್ತಿದ್ದಳು… ಆಕೆ ನನ್ನ ರಕ್ಷಣೆಗೆ ಬಂದ ಕಿನ್ನರಲೋಕದ ಕುವರಿಯಂತೆ ಕಂಡಳು. ನೆಲದಮೇಲೆ ಆಕೆಯ ಉದ್ದ ನೆರಳುಬಿತ್ತು. ಉರುಳಲು ಹೊರಟ ಕೇದಿಗೆಯಂತೆ ಬಿಳಚಿಕೊಂಡ ಮುಖದ ನನ್ನನ್ನು ಕಂಡು ಚಕಿತಳಾಗಿ ಒಳಗೆ ಕರೆದು ಕೂರಿಸಿದಳು. ಅದುರುವ ಅಧರಗಳಿಂದ ನಾನು ಹೇಳಿದೆ: ‘ಯಾರೊ ನನ್ನನ್ನು ಅಟ್ಟಿಸಿಕೊಂಡು ಬರುತ್ತಿದ್ದಾರೆ.’ ಆಕೆ ಸುತ್ತಲೂ ನೋಡಿದಳು.. ‘ಯಾರೂ ಇಲ್ಲವಲ್ಲ’ ಎಂದಳು. ಆಗ ನಾನೂ ಸ್ವಲ್ಪ ಧೈರ್ಯ ತಂದುಕೊಂಡು ಅತ್ತಿತ್ತ ನೋಡಿದೆ..’ ಹಾಂ ಈಗ ನನಗೂ ಯಾರೂ ಕಾಣಲಿಲ್ಲ. ನಿಟ್ಟುಸಿರಿಟ್ಟೆ. ಅಷ್ಟರಲ್ಲಿ ಮುಕುಲಳ ತಾಯಿ ಕಾಫಿ ಬಟ್ಟಲಿನೊಂದಿಗೆ ಹೊರಬಂದು, ಯೋಗಕ್ಷೇಮ ವಿಚಾರಿಸಿದಾಗ ಮುಕುಲಳೇ ಯಾರೊ ನನ್ನನ್ನು ಅಟ್ಟಿಸಿಕೊಂಡು ಬಂದುದರ ಬಗ್ಗೆ ಹೇಳಿದಳು. ಮತ್ತು ‘ಯಾರು ನಿನ್ನ ಹಿಂದೆ ಬಿದ್ದಿದ್ದಾರೆ? ಅಥವಾ ನಿನ್ನ ಭ್ರಮೆಯೊ? ಯಾವುದಕ್ಕೂ ಪೋಲಿಸ್ ಕಂಪ್ಲೇಂಟ್ ಕೊಡುವುದು ಒಳಿತು’ ಎಂದು ಎಚ್ಚರಿಸಿದಳು ಕೂಡ. ‘ಅದು ಇನ್ನೊಂದೇ ಹಿಂಬಾಲಿಸುವ ಕಪ್ಪು ನೆರಳು! ಅಂದುಕೊಂಡು, ಸ್ವಲ್ಪ ಹೊತ್ತು ಮುಕುಲಳೊಂದಿಗೆ ಮಾತಾಡುತ್ತ ಕುಳಿತಿದ್ದು, ನಂತರ ಮನೆಗೆ ಮರಳಿದೆ. ಅದುವರೆಗು ನಾನೊಬ್ಬನೆ ವಾಸವಾಗಿರುವ ನನ್ನ ಮನೆಯ ಬಾಗಿಲು ತೆರೆದೇ ಇತ್ತು. ಯಾರು ತೆರೆದವರು? ಎಂಬ ಯೋಚನೆ ಬಂದರೂ ‘ಓಹ್ ನಾನೇ ತೆರದಿಟ್ಟು ಓಡಿದ್ದೆನಲ್ಲ!ʼ ಎಂಬುದು ನೆನಪಾಗಿ ಮೆಲ್ಲನೆ ಒಳಪ್ರವೇಶಿಸಿದೆ. ಮನೆವಸ್ತು ಎಲ್ಲವೂ ಹಾಗೇ ಇತ್ತಲ್ಲ..! ಯಾಕೋ ಒಂದು ಮೂಡ್ ಆಫ್ ಆಗಿದೆ ಎಂದು ಡ್ಯೂಟಿಗೆ ಲೀವ್ ನೋಟ್ ಮೇಲ್ ಮಾಡಿ, ಇಂಗ್ಲಿಷ್ ಮೂವಿಯೊಂದನ್ನು ಹಾಕಿ ಕುಳಿತೆ.
ಹೌದು ಆ ದಿನದಿಂದ ಮೊದಲ್ಗೊಂಡು ಆಗೀಗ ಅಪರಿಚಿತ ಅಸ್ಪಷ್ಟ ಆಕೃತಿಯ ನೆರಳು ನನ್ನನ್ನು ಬೆನ್ನಟ್ಟಿ ಬರುತ್ತಲೇ ಇತ್ತು. ನಾನು ತಪ್ಪಿಸಿಕೊಳ್ಳುತ್ತಿದ್ದೆ. ಭಸ್ಮಾಸುರ ಹಿಂದೆಬಿದ್ದ ಈಶ್ವರನ ನೆನಪಾಗಿ ಆಗೀಗ ನಗುವೂ ಬರುತ್ತಿತ್ತು. ಹೀಗೆ ಯಾರು ನನ್ನ ಹಿಂದೆ ಬಿದ್ದವರು? ಯಾಕೆ ನನ್ನನ್ನು ಅಟ್ಟಿಸಿಕೊಂಡು ಬರುತ್ತಿದ್ದಾರೆ? ನಿಗೂಢವಾಗುತ್ತ, ವಿಸ್ಮಯ ಹುಟ್ಟಿಸುತ್ತ ಭೂತಾಕಾರದ ಪ್ರಶ್ನೆಯಾಗಿ ಕಾಡುತ್ತ.. ದಿನದಿಂದ ದಿನಕ್ಕೆ ನನ್ನ ಆತಂಕ ಹೆಚ್ಚಿಸುತ್ತ ಹೋಯಿತು.
*****
ಪ್ರಳಯದ ಸಂಭಾವ್ಯತೆ ನನ್ನನ್ನು ಅಧೀರನನ್ನಾಗಿಸಿತ್ತು. ಆದಷ್ಟು ಶೀಘ್ರ ಜಪಾನ್ ಬಿಟ್ಟು ನನ್ನ ತಾಯ್ನೆಲ ಭಾರತಕ್ಕೆ ಮರಳಬೇಕು, ಇದು ನನ್ನ ಯೋಚನೆಯಾಗಿತ್ತು. ಅದಕ್ಕಾಗಿಯೇ ನ್ಯೂಯಾರ್ಕ್‌ನಲ್ಲಿ ಹೆಚ್ಚಿನ ಸಂಬಳಕ್ಕೆ ಮೇಲಿನ ಹುದ್ದೆಗೆ ಹೋಗಲು ಕಂಪನಿಯಿಂದ ಬಂದ ಪ್ರೊಪೋಸಲ್ ಅನ್ನು ನಯವಾಗಿಯೇ ತಳ್ಳಿಹಾಕಿ, ಇಂಡಿಯಾಕ್ಕೆ ಹೋಗುವ ತಯ್ಯಾರಿ ನಡೆಸಿದ್ದೆ. ನನ್ನ ಸಹಾಯಕಿ ಮುಕುಲ ಭಾರತ ಮೂಲದವಳೇ ಆಗಿದ್ದು ಅವಳ ತಂದೆ ಭರತಲಾಲ್ ಐವತ್ತು ಅರವತ್ತು ವರ್ಷಗಳ ಹಿಂದೆಯೇ ಜಪಾನಿನಲ್ಲಿ ಬಂದು ನೆಲೆಸಿದ ಬಿಸಿನೆಸ್‌ಮ್ಯಾನ್. ಆಕೆ ಮತ್ತು ನಾನು ಇಬ್ಬರೂ ಟೊಕಿಯೊ ಮೂಲದ ಮೊಟಾರ್ ಕಾರ್ ಪ್ರೊಡಕ್ಶನ್ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿದ್ದು ನಾವಿಬ್ಬರೂ ಪರಸ್ಪರ ಅನುರಕ್ತರಾಗಿದ್ದುದು ಸಹಜವೇ.. . ಯಾಕೆಂದರೆ ಇಬ್ಬರೂ ಸ್ಫುರದ್ರೂಪಿಗಳೂ, ಸಮಾನಮನಸ್ಕರೂ, ಸಮಾನ ಉದ್ಯೋಗಿಗಳೂ ಆಗಿದ್ದು ಪಾಲಕರಿಂದಲೂ ಸಮ್ಮತಿ ಮುದ್ರೆ ಬಿದ್ದಿತ್ತಲ್ಲ. ಮುಕುಲಳ ಬಗ್ಗೆ ಹೇಳುವುದೇನು? ಆಕೆಯ ನಕ್ಷತ್ರ ಕಣ್ಣುಗಳು ಪ್ರಕಾಶಮಾನವಾಗಿ ಹೊಳೆಯುತ್ತಿದ್ದವು. ಹಾಲುಬಿಳುಪಿನ ದಂತಪಂಕ್ತಿಗಳು ಮಲ್ಲಿಗೆ ಅರಳಿಸುತ್ತಿದ್ದರೆ, ಆಕೆಯ ನಗು ಬೆಳುದಿಂಗಳು ಚಲ್ಲುತ್ತಿತ್ತು. ಗೋಧಿಬಣ್ಣದ ಸ್ವರ್ಣಿಮ ಮೈಕಾಂತಿ ಸುನೇರಿ ಹಾಸುತ್ತಿತ್ತು. ಎತ್ತರದ ಆಕರ್ಷಕ ಸ್ತನಗಳು ಮೋಹನಾಸ್ತ್ರಗಳಿಂದ ಸೆರೆಹಿಡಿದು ನಿಲ್ಲಿಸುತ್ತಿದ್ದವು.
ನನ್ನ ಜೊತೆಗೇ ಜಪಾನಿಗೆ ಬಂದವಳು, ನನ್ನ ಮಾವನ ಮಗಳು ಅಲಕಾ. ನಾನು ಮದುವೆಯಾಗಬೇಕಾದ ಹುಡುಗಿ ಆಗಿದ್ದಳು. ಆಕೆಯೂ ಚಲುವೆ; ಆಕೆಯ ಪ್ರೇಮವೂ ಚಲುವೇ. ಟೋಕಿಯೋದಲ್ಲಿ ಡಾಕ್ಟರ್ ಆಗಿರುವ ಅವಳ ಚಿಕ್ಕಪ್ಪನ ಮನೆಯಲ್ಲಿ ಉಳಿದುಕೊಂಡು ಮೆಡಿಕಲ್ ಓದುತ್ತಿದ್ದಳಲ್ಲ; ಆಗಲೆ ಅವಳ ಮೇಲೆ ಸದ್ದಿಲ್ಲದೇ ಬಂದೆರಗಿದ ಕರುಳ ಕ್ಯಾನ್ಸರ್ ನಮ್ಮಿಬ್ಬರ ಭವಿಷ್ಯದ ಕನಸನ್ನು ನುಚ್ಚುನೂರು ಮಾಡಿದಾಗ ಮೆಲ್ಲನೆ ನನ್ನ ಮನಸ್ಸು ಮುಕುಲಳತ್ತ ಆಸರೆ ಹುಡುಕುತ್ತ ಜಾರಿತು. ಪ್ರೇಮದ ಮನೆಯ ಸ್ಥಾನಪಲ್ಲಟವಾಯಿತು.. ಇದರಲ್ಲಿ ಅಸಹಜತೆ ಇಲ್ಲವೆಂದು ವಿಷಾದ ತುಂಬಿದ ಮನಸ್ಸಿಗೆ ಸಮಾಧಾನ ಹೇಳಿಕೊಂಡೆ. ಹೌದು, ಅದೇ ದಿನಗಳಲ್ಲೇ ಮುಂದಿನ ವರ್ಷ ಡಿಸೆಂಬರ್ ತಿಂಗಳಲ್ಲಿ ಪ್ರಳಯ ಸಂಭವಿಸುತ್ತದೆ ಎಂಬ ಗಾಬರಿ ಬೀಳಿಸುವ ಭಯಂಕರ ಸುದ್ದಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದಾಗ… ನಮ್ಮ ಮಾತೃಭೂಮಿ ಭಾರತವೇ ಹೆಚ್ಚು ಸುರಕ್ಷಿತ ಎನಿಸಿ ಹೊರಡುವ ತಯ್ಯಾರಿ ನಡೆಸಿದ್ದೆವು. ಆ ದಿನಗಳಲ್ಲಿ ದಿನಾಲೂ ನಮ್ಮಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿತ್ತು. ಅಂಥದೇ ಒಂದಿನ ಆಕೆಯ ಮನೆಯಲ್ಲೇ ಟೀ ಹೀರುತ್ತ ದುಂಡುಮೇಜಿನ ಎದುರು ಕುಳಿತಾಗ ಆಕೆ ಹೇಳಹತ್ತಿದಳು, ‘ಉಪನಿಷತ್ತು ಹೇಳುತ್ತಲ್ಲವೆ? ಭೀಷಾಸ್ಮಾತ್ ವಾತಃ ಪವತೇ, ಭೀಷೋದೀತಿ ಸೂರ್ಯಃ, ಭೀಷಾಸ್ಮಾದಗ್ನಿಶ್ಚೇಂದ್ರಶ್ಚ.. ಇಡೀ ಜಗತ್ತನ್ನೂ ಭಯ ಆಳುತ್ತಿದೆ. ಯಾರದೋ ಭಯದಿಂದ ಕರಾರುವಾಕ್ಕಾಗಿ ಜಗತ್ತು ಚಲಿಸುತ್ತಿದೆ. ಭಯವೇ ಎಲ್ಲ ಚಲನೆಗೂ ಕಾರಣ. ಭಯ ಬೇಕೇಬೇಕು.. ಆದರೆ ಅದು ಅನಾರೋಗ್ಯಕರವಾದುದು ಆಗಿರಬಾರದು… ಜೀವನ ಪ್ರೀತಿಯನ್ನು ಹೆಚ್ಚಿಸುವ, ಜೀವನೋತ್ಸಾಹವನ್ನು ತುಂಬುವ, ವ್ಯಷ್ಟಿ ಮತ್ತು ಸಮಷ್ಟಿಯ ಒಳಿತಿಗಾಗಿರುವ ಭಯ ಬೇಕು… ಇರಬೇಕು. ಈ ಹಿನ್ನೆಲೆಯಲ್ಲಿ ಭಯವನ್ನು ಪರಿಭಾವಿಸಬೆಕು. ನಿನ್ನ ಭಯ ಅನಾರೋಗ್ಯಕರ ಮನಸ್ಸಿನದಾಗಿದೆ. ಅಡ್ಡದಾರಿ ಹಿಡಿದಿದೆ.’ ಮುಕುಲ ಶಾಂತವಾಗಿ ತನ್ನ ವಾದವನ್ನು ಮಂಡಿಸುತ್ತ ಹೋದಂತೆ.. ನನ್ನ ಅಭಿಪ್ರಾಯವೆಲ್ಲಿ ನೆಲೆ ಕಳೆದುಕೊಳ್ಳುತ್ತದೊ ಎಂಬ ಭಯದಲ್ಲಿ ನಾನು ಹೇಳಿದೆ:
‘ಪ್ರಳಯ ಆಗುತ್ತದೆ ಎಂಬುದು ಒಂದು ದೇಶದ ಜನಾಂಗದ ನಂಬಿಕೆ. ಅದು ಶತಮಾನಗಳ ಅನುಭವ. ಇತಿಹಾಸದ ಆಧಾರದ ಮೇಲೆ ರೂಪುಗೊಂಡ ನಂಬಿಕೆ. ಹಾಗೆಯೇ ಜ್ಯೋತಿಷಿಗಳೂ, ಕೆಲವಿಜ್ಞಾನಿಗಳೂ ಅದನ್ನೇ ಪ್ರತಿಪಾದಿಸಿದ್ದಾರೆ. ಇದಕ್ಕೇನನ್ನುತ್ತೀಯ?’ ನಾನು ವಕೀಲನ ಆರ್ಗ್ಯುಮೆಂಟ್ ಮಾಡಿದೆ.
‘ದೇಶಕಾಲ, ಪ್ರಕೃತಿ-ಪರಿಸರ, ದಿಕ್ಕು-ದೆಸೆ ಇವುಗಳಿಗನುಸಾರ ಪ್ರಕೃತಿ ತನ್ನನ್ನು ತಾನು ತಾನು ಬದಲಾಯಿಸಿಕೊಳ್ಳುತ್ತಲೇ ಇರುತ್ತದೆ. ಆಯಾ ಕಾಲಘಟ್ಟದಲ್ಲಿ ಸಂದರ್ಭಕ್ಕನುಗುಣವಾಗಿ ಉಂಟಾಗುವ ನೈಸರ್ಗಿಕ ಬದಲಾವಣೆಯನ್ನು ಅಥವಾ ವಿಕೋಪವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇನ್ನು ಮುನ್ನೆಚ್ಚರಿಕೆ ಮತ್ತು ಪರಿಹಾರ ಒಂದು ತಾತ್ಕಾಲಿಕ ವ್ಯವಸ್ಥೆ ಮತ್ತು ಸಮಾಧಾನ ಅಷ್ಟೆ.’
‘ಅಂದರೆ ಬದಲಾವಣೆ ಆಗುತ್ತಲ್ಲ. ಮುಂದೆ ಹುಲಿ ಕಂಡಾಗ ಭಯ ಆಗದಿದ್ದರೆ ರಕ್ಷಣೆಗಾಗಿ ಮನುಷ್ಯ ಓಡದಿದ್ದರೆ ಏನಾಗುತ್ತೆ? ರೈಫಲ್ ಹಿಡಿದವನೆದುರು ಭಯ ಆಗದಿದ್ದರೆ ಮರು ಆಕ್ರಮಣವಾಗಲಿ, ತಪ್ಪಿಸಿಕೊಳ್ಳುವ ಉಪಾಯವನ್ನಾಗಲಿ ಮಾಡುತ್ತಾನೆಯೆ? ಆ ರಕ್ಷಣಾತ್ಮಕ ಹೋರಾಟ ಅನಿವಾರ್ಯ. ಅಂಥಹ ಸಂದರ್ಭದಲ್ಲಿ ನೀನೇನು ಮಾಡುತ್ತೀಯ?ʼ ನಾನು ಛೇಡಿಸುತ್ತ ಕೇಳಿದೆ.
‘ಬದಲಾವಣೆ ಆದರೂ ಅಲ್ಪಸ್ವಲ್ಪ ಆದೀತು. ಭೂಮಿ ಕೆಲಭಾಗ ಮೇಲೆ, ಮೇಲಿನ ಭಾಗ ಕೆಳಗೆ ಎಂಬಂತೆ ಉಲ್ಟಾ ಆಗಿ ಬದಲಾಗಿ ಬಿಡುತ್ತದೊ? ಭಯ ಜೀವನ ಸುಗಮತೆಗೆ ಅಗತ್ಯ. ಆದರೆ ಭಯವೇ ಜೀವನವಾದರೆ… ಆತ ಬದುಕಿದ್ದೂ ಸತ್ತಂತೆ.. ಅಂದಮೇಲೆ ಪ್ರಳಯದ ಬಗ್ಗೆ ಅತಿರಂಜಿತ ಕಲ್ಪನೆಯೊಂದಿಗೆ ನಿತ್ಯ ಸಾಯುತ್ತಿರುವುದರಲ್ಲಿ ಅರ್ಥವಿಲ್ಲ,’ ದೃಢತೆಯಿಂದ ಆಕೆ ಹೇಳಿದಳು.
‘ಪ್ರಳಯ ಆಗುವುದೇ ಇಲ್ಲವೆಂದು ನಿನ್ನ ಅಭಿಪ್ರಾಯವೆ?ʼ ಅವಳನ್ನು ಸಿಕ್ಕಿಸುವ ನನ್ನ ಪ್ರಶ್ನೆ.
‘ಹೇಗೆಂದು ಹೇಳುವುದೂ ಕಷ್ಟವೇ. ಅಲ್ಪಸ್ವಲ್ಪವೂ, ಸಂಪೂರ್ಣವೂ ಆದ ಬದಲಾವಣೆ ಆದೀತು..! ಹಿಂದೊಮ್ಮೆ ಅರಬ್ ರಾಷ್ಟ್ರಗಳಲ್ಲೆಲ್ಲ ಗಿಡಮರಗಳಿಂದ, ಹಸಿರು ಹುಲ್ಲುನೆಲದಿಂದ ಕೂಡಿದ ಸುಂದರ ನಿಸರ್ಗದ ಮಡಿಲೇ ಆಗಿತ್ತು ಎಂದು ವಿಜ್ಞಾನವೂ, ನಾಗರಿಕ ಶಾಸ್ತ್ರವೂ ಹೇಳುತ್ತೆ. ಅದೀಗ ಮರುಭೂಮಿಯಾಗಿ ಮಾರ್ಪಟ್ಟಿದೆ. ಆಗಿನ ಪೂಜಾಪದ್ಧತಿ, ಸಂಪ್ರದಾಯ ಎಲ್ಲ ಅಪ್ರಸ್ತುತ ಎನಿಸಿ, ರಕ್ತಕ್ರಾಂತಿಯೇ ಆಗಿ ಹೊಸಧರ್ಮದ ಉದಯವಾಯಿತು. ಅಂದರೆ ಪ್ರಕೃತಿ ತನ್ನ ಬದಲಾವಣೆಯನ್ನು ತನಗೆ ಬೇಕಾದಂತೆ ಮಾಡಿಕೊಳ್ಳುತ್ತಲೇ ಇರುತ್ತದೆ ಎಂದಾಯಿತು. ಇದಕ್ಕೆ ಎಷ್ಟೆಲ್ಲ ಉದಾಹರಣೆಗಳು ಸಿಗುತ್ತಿಲ್ಲ?’
‘ಇದರರ್ಥ ಪ್ರಳಯ ಆಗಿಯೇ ಆಗುತ್ತದೆ ಎಂದು ನೀನೂ ಒಪ್ಪಿಕೊಳ್ಳುತ್ತೀಯೆಂದೇ ಆಯಿತಲ್ಲ?’ ನನ್ನ ವಾದವನ್ನು ಒಪ್ಪಿಕೊಂಡಳು ಎಂಬ ಗೆದ್ದ ಭಾವದಿಂದ ನುಡಿದೆ.
‘ಹಾಗಲ್ಲ, ಈ ಜ್ಯೋತಿಷಿಗಳು, ಕಾಲಜ್ಞಾನಿಗಳು ಎಂತೆಂಬರು, ಸಾಂಪ್ರದಾಯಿಕ ಮತ್ತು ನಂಬಿಕೆ ನೆಲೆಯಲ್ಲಿ ಮಾತಾಡುವ ದೇಶ ಮತ್ತು ಜನರು ಹೇಳಿದಂತೆ ಪ್ರಳಯವೇನೂ ಆಗಲ್ಲ. ಅದು ಭೋಗಸ್. ತಮ್ಮ ಲಾಭಕ್ಕೆ, ತಮ್ಮ ಸ್ವಾರ್ಥಪರ ವಾದಕ್ಕೆ, ಭಯ ಹುಟ್ಟಿಸಲು ಹರಡುವ ವದಂತಿ ಅಷ್ಟೆ. ಆದರೆ ಸೂಕ್ಷ್ಮವೇನು ಎಂದರೆ ಕಾಲ ಕಾಲಕ್ಕೆ ಅಲ್ಲಲ್ಲಿ ಚಂಡಮಾರುತ, ಭೂಕಂಪ, ಲಾವಾರಸ ಚಿಮ್ಮುವಿಕೆ, ಸುನಾಮಿ, ಪ್ರವಾಹ ಹೀಗೆ ಏನೇನೋ ಕಾರಣಗಳಿಂದ ಪ್ರಳಯದಂತಹ ಪ್ರಾಕೃತಿಕ ಘಟನೆಗಳು ಜರುಗುತ್ತಿರುತ್ತವೆ. ಅದಕ್ಕೆ ಹೆದರಬಾರದು. ಎದುರಿಸಬೇಕು. ಮುನ್ನೆಚ್ಚರಿಕೆ ಮತ್ತು ಪರಿಹಾರ ವಾಸ್ತವ ನೆಲೆಗಟ್ಟಿನ ಮೇಲೆ ತೆಗೆದುಕೊಳ್ಳಬೇಕು. ಬದಲಿಗೆ ಪ್ರಳಯವಾಗುತ್ತದೆ ಎಂದು ಭಯ ಹುಟ್ಟಿಸುವವರ ಮತಿಗೆ ಬಲಿಬೀಳಬಾರದು. ಎಂಬುದಿಷ್ಟೇ ನನ್ನ ವಾದ.ʼ ಉಪಸಂಹಾರ ಮಾಡುವ ಹಾಗೆ ತನ್ನ ವಾದಕ್ಕೆ ಮುಕುಲ ಷರಾ ಬರೆದಳು.
ಮುಕುಲಳ ವಾದವನ್ನು ನಾನು ಒಪ್ಪದೇ ಇರಲು ಸಾಧ್ಯವಿರಲಿಲ್ಲ. ಆದರೂ ಅವರವರ ರಕ್ಷಣೆಗಾಗಿ ಅವರವರು ಪ್ರಯತ್ನಪಡಬೇಕಲ್ಲ ಎಂಬ ದೃಷ್ಟಿಯಿಂದ ನಾನು ಹೇಳಿದೆ:
‘ನೀನನ್ನುವುದೇನೂ ಸುಳ್ಳಲ್ಲ. ಆದರೆ ನಮ್ಮ ರಕ್ಷಣೆಯನ್ನು ನಾವು ಮಾಡಕೊಳ್ಳುವುದು ನಮ್ಮ ಧರ್ಮ. ಪ್ರಳಯ ಆಗುತ್ತದೋ ಬಿಡುತ್ತದೊ ಅದು ಬೇರೆ ಮಾತು. ಅಥವಾ ಅಲ್ಲಲ್ಲಿ ಪ್ರಾಕೃತಿಕವಾಗಿ ಉಪಪ್ರಳಯ ಅನ್ನುತ್ತಾರಲ್ಲ ಅಂಥದು ಆಗಲೂಬಹುದು. ಆಗ ಒಂದಿಷ್ಟು ಜನ ಜಾನುವಾರು ಸಾಯಬಹುದು. ಒಂದಿಷ್ಟು ಹಾನಿ ಆಗಬಹುದಲ್ಲ? ಅದರಿಂದ ಕೊನೇಪಕ್ಷ ನಾವು ನಮ್ಮ ಜನವಾದರೂ ಬಚಾವಾಗಬಹುದು. ಅದಕ್ಕಾಗಿ ನನು ಆದಷ್ಟು ಬೇಗ ಇಂಡಿಯಾಕ್ಕೆ ಮರಳಲು ನಿರ್ಧರಿಸಿದ್ದೇನೆ.
ಇಬ್ಬರೂ ಸ್ಫುರದ್ರೂಪಿಗಳೂ, ಸಮಾನಮನಸ್ಕರೂ, ಸಮಾನ ಉದ್ಯೋಗಿಗಳೂ ಆಗಿದ್ದು ಪಾಲಕರಿಂದಲೂ ಸಮ್ಮತಿ ಮುದ್ರೆ ಬಿದ್ದಿತ್ತಲ್ಲ. ಮುಕುಲಳ ಬಗ್ಗೆ ಹೇಳುವುದೇನು? ಆಕೆಯ ನಕ್ಷತ್ರ ಕಣ್ಣುಗಳು ಪ್ರಕಾಶಮಾನವಾಗಿ ಹೊಳೆಯುತ್ತಿದ್ದವು. ಹಾಲುಬಿಳುಪಿನ ದಂತಪಂಕ್ತಿಗಳು ಮಲ್ಲಿಗೆ ಅರಳಿಸುತ್ತಿದ್ದರೆ, ಆಕೆಯ ನಗು ಬೆಳುದಿಂಗಳು ಚಲ್ಲುತ್ತಿತ್ತು. ಗೋಧಿಬಣ್ಣದ ಸ್ವರ್ಣಿಮ ಮೈಕಾಂತಿ ಸುನೇರಿ ಹಾಸುತ್ತಿತ್ತು. ಎತ್ತರದ ಆಕರ್ಷಕ ಸ್ತನಗಳು ಮೋಹನಾಸ್ತ್ರಗಳಿಂದ ಸೆರೆಹಿಡಿದು ನಿಲ್ಲಿಸುತ್ತಿದ್ದವು.
ಮಧುರಸ್ಮೃತಿಯ ಆ ದಿನ; ನನ್ನ ಪ್ರೊಪೋಸಲ್‌ಗೆ ಕೆಲದಿನ ಮೊದಲು ಪುಕುಶಿಮ ನಗರದ ಗಾರ್ಡನ್ ಒಂದರ ಅಂಚಿನಲ್ಲಿ ನಾನು ಮುಕುಲ ಸಂಜೆಯ ಸೂರ್ಯಾಸ್ತವನ್ನು ನೋಡುತ್ತ ಸವಿಯುತ್ತ ಕುಳಿತಾಗ..
‘ಮುಕುಲ, ಸೃಷ್ಟಿ ಸ್ಥಿತಿ ಲಯ ವಿಲಯ ಪ್ರಳಯ ಎಂಬುದು ಎಲ್ಲಕ್ಕೂ ಇದೆ… ಅಂತೆಯೆ ಪ್ರಣಯಕ್ಕೂ ಪ್ರಳಯ ಇದ್ದೇ ಇದೆಯಲ್ಲ; ಅದೇ ಭಯ ನನಗೆ.’ ನಾನು ನಗುತ್ತ ನನ್ನ ಆತಂಕವನ್ನು ವ್ಯಕ್ತಪಡಿಸಿದ್ದೆ.
‘ಮಿಲಿಂದ್ ಪ್ರೇಮ ಅದು ಅಮೂರ್ತ. ಸಿಹಿ ಮುತ್ತು, ಬಿಸಿ ಅಪ್ಪುಗೆ ಅದರ ಪ್ರಾಡಕ್ಟ್; ಮೂರ್ತಸ್ಥಿತಿ. ದೇವರು ಇದ್ದಾನೊ ಇಲ್ಲವೊ ಮೂರ್ತಿ ಇದೆ. ಇದು ಹಾಗಲ್ಲ. ದೇವರ ನಂಬಿಕೆ ಇಲ್ಲದೇ ಇರಬಹುದು. ಆದರೆ ಪ್ರೇಮ ಎಂಬ ಭಾವ ಯಾವ ಕ್ರಿಯಾರೂಪದ ಮೂಲರೂಪಕ್ಕೆ ಹಾಗನ್ನುತ್ತೇವೋ ಅದು ಇದೆ. ಅದು ಇದೆ ಎಂದೇ ಜಗತ್ತು ಇದೆ, ಸೃಷ್ಟಿ ಇದೆ. ರೋಚಕತೆ ಇದೆ, ಥ್ರಿಲ್ ಇದೆ, ಬದುಕು ನೀರಸ ಆಗಿಲ್ಲ. ಅದಕ್ಕಾಗಿಯೇ ಪ್ರಳಯವೂ ಇದೆ. ಆದರೆ ಅದು ತಾತ್ಕಾಲಿಕ ಪ್ರಳಯ.. ಆದರೆ ಪ್ರೇಮ ಅನಂತ.. ಶಾಶ್ವತ.’
‘ನಿರಂತರ ಯೌವ್ವನ, ಬಾಲ್ಯ, ಮುಪ್ಪು, ಸಾವಿಲ್ಲದ ಜೀವನ ದೇವತೆಗಳು ಅದೆಂಥ ಸುಖಿಗಳು ಎನಿಸದೆ? ಅಲ್ಲಿ ಎಲ್ಲವೂ ಇದೆ. ಪ್ರೀತಿ ಪ್ರಣಯ ಅಪ್ಸರೆಯರ ಕುಡಿನೋಟ.. ನಮಗೂ ಹಾಗಿದ್ದರೆ? ಮುಕುಲ, ಆದರೆ ಅದೊಂದು ಕಲ್ಪನೆ, ಉತ್ಕೃಷ್ಟ ಕಲ್ಪನೆ..ʼ
‘ಅಷ್ಟೇ ಅಲ್ಲ, ನೂರು ವರ್ಷ ಬದುಕಿಗೊಂದು ಮಿತಿ. ಅದಲ್ಲದೇ ಹೋಗಿದ್ದರೆ ಬದುಕು ನೀರಸವೆನಿಸುತ್ತಿತ್ತು. ಹೊಸತು.. ನಿತ್ಯ ನೂತನ ಎನ್ನುವುದೆಲ್ಲ ಮಾಯವಾಗಿ ಅದೆಂತ ದುರ್ಭರ ಏಕತಾನತೆ! ಸೃಷ್ಟಿಯಲ್ಲಿ ಅದಕ್ಕೆ ಅವಕಾಶವಿಲ್ಲ..’
‘ಹೋಗಲಿ, ಪ್ರೇಮ ಶಾಶ್ವತ ಅಂದೆಯಲ್ಲ, ನಾನು ಸುಖಿ. ನನ್ನ ಮೇಲೆ ನಿನಗೆ ಅದೆಷ್ಟು ಪ್ರೀತಿ! ನಾನು ಭಾರತಕ್ಕೆ ಹೊರಡುವ ದಿನ ಹತ್ತಿರ ಬಂತು. ನೀನೂ ಬರುತ್ತೀಯ?ʼ
‘ಬರದೇ ಏನು? ನಿನ್ನನ್ನು ಬಿಟ್ಟು ನನಗೆ ಇಲ್ಲೇನಿದೆ? ನಾನೂ ಹೊರಟುಬಿಡುತ್ತೇನೆ. ಈಗಲೇ ಅಲ್ಲ; ಒಂದಷ್ಟು ದಿನ ನೀನು ಕಾಯಬೇಕು. ಅದೂ ಅಲ್ಲದೆ.’
‘ಅಲ್ಲದೆ ಏನು? ನನ್ನ ಪ್ರೀತಿಯಲ್ಲಿ ಸಂದೇಹವೆ?ʼ
‘ಹಾಗೇನೂ ಇಲ್ಲ. ಅಲಕಾ ಏನು ಮಾಡುತ್ತಾಳೆ?ʼ
‘ಓಹ್ ಅವಳ ಬಗ್ಗೆ? ಆಕೆಯನ್ನು ಬಿಟ್ಟು ಹೋಗುವುದೆ? ಸುತರಾಂ ಆಗುವುದಿಲ್ಲ.’
‘ಇಬ್ಬರೂ ಒಂದೆಡೆ ಇರಲು ಸಾಧ್ಯವಿಲ್ಲ. ಒಂದೊ ನನ್ನನ್ನು ಅಥವಾ ಅವಳನ್ನು. ಒಬ್ಬಳು ಮಾತ್ರ ನಿಮ್ಮ ಆಯ್ಕೆಯ ಸಂಗತಿ..’
‘ಹೌದು ನನಗೆ ಗೊತ್ತಿದೆ. ಅವಳಾಗಿಯೇ ನನ್ನನ್ನು ನಿನಗೆ ಒಪ್ಪಿಸಿದ್ದಾಳೆ. ಆಕೆ ಸಹ ತಾನು ಭೀಕರ ಕಾಯಿಲೆಗೆ ತುತ್ತಾಗಿದ್ದೇನೆಂದು ತಿಳಿದಾಗ ಕಂಪಿಸಿದಳು. ಅವಳಲ್ಲಿಯೂ ಅಂತಹುದೇ ವಿಪ್ಲವ! ಯಾಕೆಂದರೆ ಆಕೆ ಮದುವೆಯಾಗದಿರಲು ನಿರ್ಧರಿಸಿದ್ದಾಳೆ..’
‘ಅಂದರೆ..’
‘ಆಕೆ ಹೆಚ್ಚೆಂದರೆ ಇನ್ನು ಒಂದು ವರ್ಷ ಬದುಕಬಹುದೆಂದು ಡಾಕ್ಟರರು ಹೆಳಿದ್ದಾರೆ. ಭಾರತದಲ್ಲಿಯೇ ಸಾಯುವ ಇಚ್ಛೆ ಆಕೆಗೆ. ಶೀಘ್ರ ಒಯ್ಯಬೇಕು.’
ಆಕೆ- ಅಲಕಾ ಸಹ ತಾನು ಭೀಕರ ಕಾಯಿಲೆಗೆ ತುತ್ತಾಗಿದ್ದೇನೆಂದು ತಿಳಿದಾಗ ಅಂಥಹುದೇ ವಿಪ್ಲವ ಆಕೆಯನ್ನೂ ಕಾಡದಿರಲಿಲ್ಲ ಅಂದುಕೊಳ್ಳುತ್ತೇನೆ. ಬದುಕಬೇಕು ಪ್ರೇಮವನ್ನೂ ಜೀವಂತವಾಗಿಟ್ಟುಕೊಳ್ಳಬೇಕು ಎಂಬ ಹೊಯ್ದಾಟ! ಅದೂ ಒಂದು ಘನ ವಿಪ್ಲವ. ಆಕೆಯ ಜೀವನವೆಂಬ ನೆಲದಲ್ಲಿ. ಆದರೆ ವಾಸ್ತವದ ಕನ್ನಡಿ ಆಕೆಯ ಎದುರಿಗೇ ಇತ್ತು. ಅದನ್ನು ಆಕೆ ಸ್ವಾಗತಿಸಿದಳು. ಆಕೆಗೆ ಹ್ಯಾಟ್ಸ್ ಆಫ್. ಆದರೂ ಆಕೆಯ ಪ್ರೇಮಸಮಾಧಿಯ ಮೇಲೆ ನಾನು ಹಸೆಮಣೆ ಏರಬೇಕೆ? ಯಾಕೋ ಅಪಚಾರ ಮಾಡುತ್ತಿದ್ದೇನೇನೊ ಎಂಬ ಭಾವ.’
‘ನೀನನ್ನುವುದು ನಿಜ. ಆದರೆ ಅದು ಅನಿವಾರ್ಯ. ಅವಳು ಇಳಿಯುವ ಕಿಲೋಮೀಟರ್ ಕಲ್ಲು ಬಂದಿದೆ. ಮುಂದಿನ ದಾರಿ ನಮಗೇ ತೆರೆದುಕೊಂಡಿದೆ. ಜೀವನ ಎಂದರೇ ಹೀಗೆ. ತನ್ನ ಸ್ಟೇಶನ್‌ನಲ್ಲಿ ಓರ್ವ ಇಳಿಯುತ್ತಾನೆ. ಇನ್ನೋರ್ವ ಹತ್ತುತ್ತಾನೆ. ಅವನ ಜಾಗದಲ್ಲಿ ಕೂರುತ್ತಾನೆ.’
‘ಆಕೆ ಇಳಿದು ಹೋದ ಮೇಲೆಯೇ ಮುಂದಿನ ದಾರಿಯ ಬಗ್ಗೆ ಯೋಚಿಸೋಣ. ಅಲ್ಲಿಯವರೆಗೆ ಹೀಗೆಯೇ ಇರಲಿ. ಆಕೆಯೆಂದರೆ ನನಗೂ ಪ್ರೀತಿ’
‘ಕಾಯಬೇಕು. ಹೌದು, ನಮಗೆ ಸಿಗಬೇಕೆಂದರೆ ಕಾಯಲೇಬೇಕು. ಎಷ್ಟು ದಿನಗಳಾದರೂ ಕಾಯುತ್ತೇನೆ. ಅದಿರಲಿ, ಒಂದುಬಾರಿ ಹೂ ಮುತ್ತು ಬೇಡ ಎನ್ನಬೇಡ..ʼ ಎಂದು ನಾನು ಮುಕುಲಳ ತುಟಿಯ ಹತ್ತಿರ ತುಟಿ ತಂದಾಗ ಮುಕುಲ ತನ್ನ ಕೈಯ್ಯಿಂದ ಮೆಲ್ಲಗೆ ತಳ್ಳಿ ‘ಏಳು ಹೋಗೋಣ, ಕತ್ತಲಾಯಿತು ಎಂದು ಎದ್ದು ಕಾರಿನತ್ತ ಹೊರಟಳು. ನಾನು ನಿರಾಸೆಯಿಂದ ಆಕೆಯನ್ನು ಹಿಂಬಾಲಿಸಿದೆ. ಕಾರು ಏರಿ ಮುಕುಲ ಕಾರು ಸ್ಟಾರ್ಟ್ ಮಾಡಿದಳು. ಮೌನವಾಗಿ ನಾನು ಪಕ್ಕದ ಸೀಟಿನಲ್ಲಿ ಕುಳಿತೆ. ಕಾರು ಪುಕುಶಿಮಾ ನಗರದ ನಮ್ಮ ಮನೆಯತ್ತ ಹೊರಟಿತು. ಇಬ್ಬರೂ ಮಾತಾಡಲಿಲ್ಲ.
*****
ಅದೊಂದು ಎದೆಝಲ್ಲೆನಿಸುವ ಭೀಕರ ಕರಾಳ ದಿನ;
ಭೂಮಿ ಕಂಪಿಸುತ್ತಿದೆ. ಇಮಾರತುಗಳು, ಗಿಡಮರಗಳು ಅಲುಗಾಡುತ್ತಿವೆ. ಏನಾಗುತ್ತಿದೆ? ಎಂಬುದೇ ತಿಳಿಯದೇ ಎಲ್ಲರೂ ಒಂದು ಕ್ಷಣ ದಂಗಾದರು. ಮರುಕ್ಷಣದಲ್ಲಿಯೇ ತೀವ್ರ ಭೂಕಂಪದ ಅನುಭವ ಆಗುತ್ತಿದ್ದಂತೆ, ಕೆಲವರ ಮೊಬೈಲಿನಲ್ಲಿ ಕರಾವಳಿಯಲ್ಲಿ ತ್ಸುನಾಮಿ ಎರಗಿದ ಮೆಸೇಜ್ ಬರತೊಡಗಿದಾಗ ಎದೆ ಬಡಿತ ಜೋರಾಯಿತು. ಮಾತು ಹೊರಡುತ್ತಿಲ್ಲ. ಮುಕುಲ ಇಲ್ಲಿಂದ 35-40 ಕಿಮಿ ದೂರದ ತುಕುಶಿಕ ನಗರದ ಕಂಪನಿಯ ಆಫೀಸಿನಲ್ಲಿದ್ದಳು. ಅವಳ ಕಥೆ ಏನೊ. ಮನೆ ಅಲುಗಾಡಿದರೆ ನಿಲ್ಲಬಹುದು. ಹೊರಗೆ ನೆಲದ ಮೆಲೆ ಸುರಕ್ಷಿತ ಜಾಗದಲ್ಲಿ ನಿಲ್ಲಬಹುದು. ಆದರೆ ನೆಲವೇ ಅಲುಗಾಡತೊಡಗಿದರೆ ನಿಲ್ಲುವುದೆಲ್ಲಿ?
“ಒಲೆ ಹತ್ತಿ ಉರಿದರೆ ನಿಲಬಹುದಲ್ಲದೆ
ನೆಲ ಹೊತ್ತಿ ಉರಿದರೆ ನಿಲಲುಬಹುದೆ?”
ಎಂಬ ಬಸವಣ್ಣನವರ ನುಡಿ ನೆನಪಾಯಿತು… ನಾವೆಲ್ಲ ಸಾವಿನ ಅಂಚಿನಲ್ಲಿದ್ದೇವೆ ಎನ್ನುವದು ಅರಿವಿಗೆ ಬಂತು. ಲಿಫ್ಟಂತೂ ಆಗಲೇ ಕೆಟ್ಟು ಹೋಗಿತ್ತು. ಅದರೊಳಗೆ ಸಿಕ್ಕು ಬಿದ್ದವರ ಆಕ್ರಂದನ ಮುಗಿಲು ಮುಟ್ಟಿತ್ತು. ಯಾರು ಯಾರನ್ನೂ ರಕ್ಷಿಸುವ ಸ್ಥಿತಿಯಲ್ಲಿರಲಿಲ್ಲ. ಅವರವರ ಬಚಾವಿಗಾಗಿ ಅವರವರು ಹೋರಾಡುತ್ತಿದ್ದರು. ನಾವು ಕೆಲವರು ಹೇಗೊ ಹೇಗೊ ಪ್ರಯಾಸ ಪಟ್ಟು ಕಂಪಿಸುವ ಮಹಡಿಯಿಂದ ಮೆಟ್ಟಿಲು ಮೂಲಕ ಕೆಳಗಿಳಿದು ಬಂದೆವು. ಬಯಲಲ್ಲಿ ನಿಂತೆವು. ಇನ್ನೊಂದೇ ಕ್ಷಣದಲ್ಲಿ ಅನೇಕ ಮಹಡಿ ಮನೆಗಳು ಉರುಳತೊಡಗಿದವು. ಎಲ್ಲೆಲ್ಲೂ ಚೀರಾಟ ಆಕ್ರಂದನ. ಪುಕುಶಿಮದ ಕರಾವಳಿ ಭಾಗದಲ್ಲಿ ಸುನಾಮಿ ಎರಗಿದ ಸಂಗತಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿತ್ತು.
ಮೊಬಾಯಿಲ್‌ಗಳಲ್ಲಿ ಎಸ್ಸೆಮ್ಮೆಸ್ ಕಳಿಸುತ್ತಿದ್ದರು. ಮತ್ತೆ ಸ್ವಲ್ಪ ಸಮಯದ ನಂತರ ಮಾಧ್ಯಮಗಳೂ ಸಂಪರ್ಕ ಕಳೆದುಕೊಂಡಿದ್ದವು. ಜೀವ ಉಳಿಸಿಕೊಳ್ಳಬೇಕಾಗಿತ್ತು. ನಾನು ಕಾರು ಏರಿ ರಾಜಧಾನಿಯ ಕಡೆಗೆ ಹೊರಟೆ ಎಂದುಕೊಂಡೆ. ಆದರೆ ಎಡವಟ್ಟಾಗಿತ್ತು. ಬಹುಶಃ ನಾನು ಹೊರಟದ್ದು ಕರಾವಳಿ ದಿಕ್ಕಿಗೇ ಆಗಿತ್ತೆಂದು ತೋರುತ್ತದೆ.. ಸುಮಾರು ದೂರ ಹೋಗಿದ್ದೆ. ನನ್ನ ಎದುರಿನಿಂದ ಸುನಾಮಿ ಅಲೆ ಬರುತ್ತಿರುವದು ಗೋಚರವಾಯಿತು. ಕಾರು ತಿರುಗಿಸಿಕೊಂಡು ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಹೊರಟೆ.
ಮುಕುಲ ನೆನಪಾದಳು. ಆಕೆಯನ್ನು ದೇವರೆ ರಕ್ಷಿಸಲಿ ಎಂದುಕೊಂಡು ನಾನು ಎಷ್ಟೇ ವೇಗವಾಗಿ ಕಾರು ಓಡಿಸಿದರೂ ಹಿಂಬಾಲಿಸಿದ ಸುನಾಮಿ ಅಲೆ ನನ್ನ ಕಾರಿಗೆ ಅಪ್ಪಳಿಸಿದ್ದೊಂದು ಗೊತ್ತು, ಹ್ಞಾ.. ಎಷ್ಟುಹೊತ್ತೊ, ನನಗೆ ಎಚ್ಚರಾದಾಗ.. ನನ್ನನ್ನು ನಾನೇ ನೋಡಿಕೊಂಡೆ.. ಕಾರು ಸಹಿತ ನಾನು ಅಂಗಾತ ಮಲಗಿದ ದೊಡ್ಡ ಮರವೊಂದರ ಮೇಲೆ ಬಿದ್ದಿದ್ದೆ. ಮೈ ಕೈ ಎಲ್ಲ ಜರ್ಜರಿತವಾಗಿತ್ತು. ಅಲುಗಾಡಿಸುವುದೂ ಕಷ್ಟ ಅನ್ನುವ ಅಸಾಧ್ಯ ನೋವು. ಅದು ಹೇಗೊ ಕಷ್ಟಪಟ್ಟು ಕಾಂಡದಿಂದ ಹುಳುವೊಂದು ಹೊರಬರುವಂತೆ ಕಾರಿನಿಂದ ಹೊರ ಬಂದೆ.. ಎಲ್ಲೆಲ್ಲಿ ನೋಡಿದರು ಹೆಣಗಳರಾಶಿ. ಉರುಳಿ ಬಿದ್ದ ಕಟ್ಟಡಗಳು. ಮರಗಳು. ತೇಲಿಬಂದ ಕಾರು ಟ್ರಕ್ಕು ಹಡಗು ಏನೆಲ್ಲ ವಿಕಿರಣಕ್ಕೆ ತುತ್ತಾಗಿ ಸತ್ತುಬಿದ್ದು ಸಮುದ್ರದ ಮೇಲೆ, ದಡಗಳಲ್ಲಿ ತೇಲುತ್ತಿರುವ ಮೀನಿನಿಂದ ಹಿಡಿದು ತಿಮಿಂಗಿಲಗಳವರೆಗೆ ಇರುವ ಜಲಚರಗಳಂತೆ ಕಂಡವು. ಸಾವಿರ ಸಾವಿರ ಜನ ಅಸುನೀಗಿದ್ದರು! ನಗರಕ್ಕೆ ನಗರವೇ ಅಂಗಾತ ಮಲಗಿತ್ತು. ಜನ ಜಾನುವಾರು ಪಕ್ಷಿ ಸರೀಸೃಪ ಕ್ರಿಮಿ ಕೀಟ ಎಲ್ಲವೂ ಒಂದೇ. ಯಾವ ಯಾವ ಸ್ಥಿತಿಯಲ್ಲಿದ್ದವೊ ಅದೇ ಅದೇ ಸ್ಥಿತಿಯಲ್ಲಿಯೇ ಕೊಚ್ಚಿಕೊಂಡು ಬಂದಿದ್ದವು.. ಎಲ್ಲೆಲ್ಲಿ ಸುನಾಮಿ ಅಪ್ಪಳಿಸಿದೆಯೊ ಅಲ್ಲೆಲ್ಲ ಇದೇ ಸ್ಥಿತಿ ಅಂದ ಮೇಲೆ ಅದೆಷ್ಟು ಸಾವಿರ ಜನ ಜಾನುವಾರು ಪ್ರಾಣ ಕಳಕೊಂಡಿವೆಯೊ? ಊಹಿಸದಾದೆ.. ನಾನು ದೇವರು ಎಂಬವನಿದ್ದರೆ ಅವನ ದಯದಿಂದ ಮಾತ್ರ ಬದುಕಿದ್ದೆ.. ಆದರೆ ಅದು ಎಷ್ಟು ಹೊತ್ತೊ ಯಾವುದೇ ಗಳಿಗೆಯಲ್ಲೂ ನನ್ನ ಪ್ರಾಣ ಹೋಗಬಹುದು.. ‘ನಾನು ಉಳಿಯಬಹುದು.. ಎಲ್ಲಿಂದಾದರೂ ಸಹಾಯ ಬರಬಹುದು’ ಎಂದು ಆಶೆ ಹೊತ್ತು ಉಸಿರು ಬಿಡುತ್ತ ಕಾರು ಮತ್ತು ಮರದ ಕೊಂಬೆಗೆ ದೇಹ ಆನಿಸಿ ಮಲಗಿದೆ…
ಈಗ ಕೂಡ್ರಲೂ ಆಗದ ಹಂತಕ್ಕೆ ತಲುಪಿದ್ದೆ. ಏಳಿಸಲಾಗದ ಕೈಯ್ಯಿಂದ ಆಗೀಗ ಅದೇ ಮರದ ಎಲೆ ಸಹಿತ ಕಾಂಡವೊಂದನ್ನು ಕಿತ್ತು ಮೇಲಕ್ಕೆ ಆಡಿಸುತ್ತಿದ್ದೆ. ಯಾರಾದರೂ ರಕ್ಷಣೆಯವರು ಕಂಡರೆ ಬದುಕಿಯೇನು ಎಂಬ ಕಿರು ಆಶೆ. ಇದುವರೆಗೆ ನಾನು ಬದುಕಿದ್ದೇ ಅಚ್ಚರಿಯಾಗಿರುವುದರಿಂದ ನಾನು ಖಂಡಿತ ಬದುಕುತ್ತೇನೆ ಎಂದೇ ನನಗೆ ಅನಿಸುತ್ತಿತ್ತು. ಅಂತು ಮೂರು ದಿನ ಕಳೆದಮೇಲೆ ರಕ್ಷಣಾ ತಂಡದ ಕಣ್ಣಿಗೆ ಬಿದ್ದೆ. ಹೆಲಿಕಾಪ್ಟರೊಂದು ಬರ‍್ರನೆ ಕೆಳಗಿಳಿಯಿತು. ಅದರಿಂದ ಕಮಾಂಡೊಗಳಿಬ್ಬರು ಕೆಳಗಿಳಿದು ನನ್ನನ್ನು ಎತ್ತಿಕೊಂಡು ಕಾಪ್ಟರಿನ ಒಳಗಡೆ ಮಲಗಿಸಿದರು. ಕೆಲವೇ ಕ್ಷಣಗಳಲ್ಲಿ ನಾನು ಟೋಕಿಯೋದ ಆಸ್ಪತ್ರೆಯೊಂದರ ಬೆಡ್ಡಿನ ಮೇಲೆ ಮಲಗಿದ್ದೆ. ಅಲ್ಲಂತೂ ಎಲ್ಲಿ ನೋಡಿದರೂ ಗಾಯಾಳು ಜನ. ಕೈ ಕಾಲು ಕಳಕೊಂಡವರು, ಕಿವಿ ಕಣ್ಣು ಕಳಕೊಂಡವರು, ಹೊಟ್ಟೆ ಎದೆ ಎಲ್ಲೆಲ್ಲ ಗಾಯಗಳಾಗಿರುವವರು, ಅರೆಜೀವವಾದವರು; ಎಲ್ಲೆಲ್ಲೂ ಆಕ್ರಂದನ! ಗೋಳು ಪಾಡು! ಅಲ್ಲಿ ಎಲ್ಲರಿಗೂ ಚಿಕಿತ್ಸೆ ನೀಡಲು ಶತಪ್ರಯತ್ನ ನಡೆಸುತ್ತಿತ್ತು ಸರಕಾರ. ಅಲ್ಲಿ ಬಂದ ಮೇಲೆ ನನಗೆ ಇನ್ನೊಂದು ಆಘಾತಕಾರಿ ಸುದ್ದಿ ತಿಳಿದು ಬಂತು. ಜಪಾನಿನ ಮೂರು ಅಣು ಸ್ಥಾವರ ಹಾನಿಗೊಂಡಿದೆ. ಅದರಲ್ಲಿ ಎರಡಕ್ಕೆ ಬೆಂಕಿ ಬಿದ್ದಿದೆ. ವಿಕಿರಣ ಇಡೀ ದೇಶವನ್ನೂ ಸಮುದ್ರವನ್ನೂ ವ್ಯಾಪಿಸುತ್ತಿದೆ. ಕುಡಿಯುವ ನೀರು ವಿಕಿರಣಯುಕ್ತವಾಗುತ್ತಿದೆ..
ಪುಕುಶಿಮಾದ ಅನೇಕ ಬಡಾವಣೆ ನಿರ್ನಾಮವಾಗಿತ್ತು. ಅವುಗಳ ಕುರುಹೂ ಸಿಗದಷ್ಟು ಎಲ್ಲ ಕೊಚ್ಚಿ ಹೋಗಿತ್ತು. ಅಲ್ಲಿಯೇ ನನ್ನ ಮನೆ ಹಾಗೂ ಮುಕುಲಳ ಮನೆಯೂ ಇತ್ತಲ್ಲ.. ಆಕೆಯ ಅಪ್ಪ ಅಮ್ಮ ತಂಗಿ ಹಾಗೂ ತಮ್ಮ ಸುನಾಮಿಯಲ್ಲಿ ಮನೆ ಸಮೇತ ತೊಳೆದುಕೊಂಡು ಹೋಗಿದ್ದರೆಂಬುದರಲ್ಲಿ ಅನುಮಾನವಿರಲಿಲ್ಲ… ಮುಕುಲ ಏನಾದಳು? ಬದುಕಿ ಉಳಿದಿರಬಹುದೆ? ಆಕೆ ಕೆಲಸ ಮಾಡುತ್ತಿದ್ದ ಪುಟ್ಟ ನಗರ ತುಕುಷಿಕ ಸಹ .. ಗುಡಿಸಿ ಹೋದಂತಾಗಿತ್ತು. ಪ್ರಕೃತಿಯ ಭಯಾನಕ ಗುಜರಿ ಅಂಗಡಿಯೋ ಎನ್ನುವಂತಾಗಿರುವ ಜಪಾನಿನ ನಗರ-ಪಟ್ಟಣ-ಹಳ್ಳಿಗಳ..! ನನ್ನ ಮನಸ್ಸು ಪ್ರಶ್ನಿಸುತ್ತಿತ್ತು. ದೇವರಿದ್ದಾನೆಯೆ? ಇದ್ದರೆ ಹೀಗಾಗುತ್ತಿತ್ತೆ? ಪ್ರಕೃತಿ ವಿಕೋಪದಲ್ಲಿ 40-50 ಸಾವಿರ ಜನ ತರಗೆಲೆಯಂತೆ ತೇಲಿಕೊಂಡು ಹೋದ ದೃಶ್ಯವನ್ನು ಟಿ.ವಿಯಲ್ಲಿ ನೋಡುತ್ತಿದ್ದಂತೆ ಗರಬಡಿದಂತೆ ಕೂರುತ್ತಿದ್ದೆವು.. ಇಡೀ ಆಸ್ಪತ್ರೆ ನರಕ ಕೂಪವಾಗಿತ್ತು… ಆದರೆ ನಾವು ಅನೇಕ ಜನ ಪ್ರಾಣಾಪಾಯದಿಂದ ಪಾರಾಗಿದ್ದೆವು..
*****
ಅಂತೂ ಭಾರತಕ್ಕೆ ತೆರಳುವ ಕನಸು ನನಸಾಗಿತ್ತು. ನಾನು ಅಪಾಯದಿಂದ ಪಾರಾಗಿದ್ದೇನೆ ಎಂದು ದೃಢಪಟ್ಟೊಡನೆ ಭಾರತಕ್ಕೆ ಹೋಗಲು ಅನುಮತಿ ದೊರೆತು, ಸಂತಸದ ಹಕ್ಕಿ ವಿಸ್ತಾರ ರೆಕ್ಕೆಗಳನ್ನು ಬಿಚ್ಚಿದಾಗ..
ನಾವು ನೂರಾರು ಮಂದಿ ಭಾರತಕ್ಕೆ ಹೊರಡಲು ಕಾದು ನಿಂತಿದ್ದೆವು.. ಆದರೆ ಭಾರತೀಯ ರಾಯಭಾರಿ ಕಚೇರಿಯವರು ತಕ್ಷಣ ಸ್ಪಂದಿಸಲಿಲ್ಲ. ಅವರು ಇಂತಹ ಸಂದರ್ಭದಲ್ಲೂ ಜಡಭರತರೇ ಆಗಿದ್ದರೆಂಬುದನ್ನು ಹೇಗೆ ಮರೆಮಾಚುವುದು? ಭಾರತ ಸರಕಾರ ಜಪಾನಿನಿಂದ ಭಾರತೀಯರನ್ನು ಕರೆತರುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿಕೆ ನೀಡಿತ್ತು. ಏರ್ ಇಂಡಿಯಾ ವಿಮಾನ ಮೊದಲ ಟ್ರಿಪ್ ನಾಕುದಿನ ಬಿಟ್ಟು ಹೊರಡಲಿದೆ ಎಂದು ತಿಳಿದು ಬಂತು. ಆದರೆ ಒಂದು ನಿಮಿಷವೂ ಜಪಾನಿನಲ್ಲಿ ಉಳಿವುದು ಗಂಡಾಂತರಕಾರಿಯೇ ಆಗಿತ್ತಾದ್ದರಿಂದ ನಾವು ತುಂಬ ಆತಂಕಗೊಂಡಿದ್ದೆವು. ಇಂಡಿಯಾ ವಿದೇಶಾಂಗ ಮಂತ್ರಿ ದ್ವಿವೇದಿಯವರನ್ನು ಸಂಪರ್ಕಿಸಿ ನಮ್ಮ ಆತಂಕವನ್ನು ಹೇಳಿಕೊಂಡೆವು. ಅವರು ಆತಂಕ ಬೇಡ. ಕೂಡಲೇ ವಿಮಾನ ಮೂಲಕ ನಮ್ಮನ್ನು ಭಾರತಕ್ಕೆ ಕರೆತರುವುದಾಗಿ ಹೇಳಿದರು. ಕೊಂಚ ಸಮಾಧಾನವಾಯಿತು.
ಅಂತೂ ಮೂರುದಿನ ಕಾದಮೇಲೆ ಏರ್ ಇಂಡಿಯಾದಲ್ಲಿ ನಾವೆಲ್ಲ ಭಾರತಕ್ಕೆ ಬಂದಿಳಿದೆವು.. ಪಾಸ್‌ಪೋರ್ಟ ವೀಸಾ ಮುಂತಾದ ಕಾಗದಪತ್ರಗಳಿಗೂ, ಲಗ್ಗೇಜಿಗೂ ಸಂಬಂಧಿಸಿದಂತೆ ಅಲ್ಲಿಯೂ ಇಲ್ಲಿಯೂ ಎಲ್ಲ ಕಡೆ ಸಮಸ್ಯೆಗಳ ಕಳ್ಳಪಿಶಾಚಿ ಹಿಂಬಾಗಿಲಿನಿಂದಲೂ, ಟೇಬಲ್ ಕೆಳಗಿಂದಲೂ ನುಗ್ಗಿ ಪೀಡಿಸಿದ್ದನ್ನು ಕಂಡಾಗ ‘ನೆಲ ಮೂಸಿದರೂ ಗೋಡೆ ಮೂಸಿದರೂ ಮಣ್ಣೇ’ ಎಂಬ ಗಾದೆ ನೆನಪಾಯಿತು…. ಬಸ್ಸೋ ಟ್ರೇನೋ ಉರುಳಿಬಿದ್ದಾಗ ಸಹಾಯ ಮಾಡುವ ಕೈಗಳು ಒಂದೆಡೆಯಾದರೆ ಸತ್ತವರ, ಪ್ರಜ್ಞೆ ತಪ್ಪಿದವರ ಕೈಗೆ ಕೊರಳಿಗೆ ಚಿನ್ನದ ಬಳೆ-ಸರ ಇದೆಯೆ? ಪ್ಯಾಂಟಿನ ಕಿಸೆಯಲ್ಲಿ, ವ್ಯಾನಿಟಿ ಬ್ಯಾಗಿನಲ್ಲಿ ದುಡ್ಡು ಬಂಗಾರ ಇದೆಯೆ? ಎಂದು ಸಂಶೋಧಿಸಿ ಅದನ್ನು ನಾಪತ್ತೆ ಮಾಡುವ ಪೊಲೀಸರು, ಸಮಾಜಸೇವಕರು, ಕೈಚಳಕ ವಿದ್ಯಾರಹಸ್ಯ ಪರಿಣತರು ಇನ್ನೊಂದೆಡೆ… ಇದ್ದ ಕಾರಣ ವಿಮಾನು ಹತ್ತುವ ಮೊದಲು ಮತ್ತು ಇಳಿದ ಮೇಲೆ ಎದುರಾದ ನೂರಾರು ಪ್ರಶ್ನೆಗಳು… ಸಂದೇಹಗಳು.. ಅವುಗಳಿಗೆಲ್ಲ ‘ನಿಜವಾದ ಒಂದೇ ಉತ್ತರ’ ಎಂಬ ರಹಸ್ಯವನ್ನು ಅರಿತ ನಾವು ಡಾಲರು, ರೂಪಾಯಿ.. ಯೂರೋ, ಯೆನ್ ಎಂಬ ಅಮೃತಬಿಂದುಗಳನ್ನು ಚಪ್ಪರಿಸುವ ನಾಲಿಗೆಗೆ ಸವರಿ, ಕೊಸರು ಎತ್ತುವ ಕೋಟಿನ ಜೇಬುಗಳನ್ನು ಸುಮ್ಮನಾಗಿಸಿ, ಅಂಕು ಡೊಂಕು ಓರೆಕೋರೆಗಳಿಗೆ ಗಾರೆ ಹಚ್ಚಿ ವಿಮಾನ ಇಳಿದು ಏರ್‌ಪೋರ್ಟಿನಿಂದ ಹೊರ ಬರುತ್ತಿದ್ದಂತೆ ಸ್ಪೆಶಲ್ ತನಿಖಾತಂಡದವರು ನಾವು ಆರೆಂಟು ಮಂದಿಯನ್ನು ಸಂಶಯಾಸ್ಪದ ವ್ಯಕ್ತಿಗಳೆಂದು ಘೋಷಿಸಿ ಅರೆಸ್ಟ್ ಮಾಡಿದರು.. ನಿಜವಾದ ಕಳ್ಳರು ಸಜ್ಜನ ಹೀರೋಗಳಂತೆ ತಪ್ಪಿಸಿಕೊಳ್ಳುತ್ತ, ಅಮಾಯಕರು ಕಳ್ಳರಹಣೆಪಟ್ಟಿಯ ಸ್ಟಿಕರ್ ಅಂಟಿಸಿಕೊಳ್ಳಲ್ಪಡುತ್ತ ತುರಂಗವಾಸ ಅನುಭವಿಸುವುದು ವಿಶೇಷವಲ್ಲದಿರುವ ಇಲ್ಲಿ ದಿನಗಳು ಸಹಜವೆಂಬಂತೆ ಕಳೆದು ಮಾಸ ಕಂಡಾಗ ಏನೆಲ್ಲ ಕಸರತ್ತು ಮಾಡಿ ಬೇಲ್ ಪಡೆದು ಹೊರಬಂದೆವಲ್ಲ.. ಬದ್ನಸೀಬ್ ನೋಡಿ, ಅದೇ ದಿನ ದೆಹಲಿಯ ಚಾಂದಿನಿ ಚೌಕ ಮತ್ತು ಕರೋಲಬಾಗ್ ಪ್ರದೇಶಗಳಲ್ಲಿ ಸರಣಿ ಬಾಂಬ್ ಸ್ಫೋಟನಡೆದು ಇಡೀ ದೇಶದಲ್ಲಿ ಧಾರ್ಮಿಕ ವಿಪ್ಲವ ನಡೆಸುವ ಹುನ್ನಾರ ಬಯಲಾಗಿ ದೇಶದಾದ್ಯಂತ ಕಟ್ಟೆಚ್ಚರ ಘೋಷಿಸಲಾಗಿ.. ನಮ್ಮ ಅದರಲ್ಲೂ ನನ್ನ ಜೀವನದ ಕ್ಯಾನವಾಸಿನ ಮೇಲೆ ಬಿದ್ದ ಕರಿನೆರಳು ಇನ್ನಷ್ಟು ದಟ್ಟವಾಗಿ… ಬೆನ್ನಟ್ಟಿಬಂದ ಬೆಕ್ಕಿನಿಂದ ತಪ್ಪಿಸಿಕೊಂಡು ಬಂದು ಹಾವಿನಬುಟ್ಟಿ ಸೇರಿದ ಇಲಿಯಂತಾಯಿತೆ? ಎಂದು ಮಿಡುಕುತ್ತ ಮರಳಿಜೈಲು ಸೇರಿದಾಗ.. “ಬದುಕು ಜಟಕಾ ಬಂಡಿ… ಮದುವೆಗೋ ಮಸಣಕೋ ಪೋಗೆಂದ ಕಡೆಗೋಡು… ಪದಕುಸಿಯೆ ನೆಲವಿಹುದು..” ಎಂಬ ಭಾವ ನನ್ನದಾಯಿತು.
*****
ಬದುಕಿನ ಮೇಲೆ ಅಪ್ಪಳಿಸಿದ ಬಿರಗಾಳಿಯಿಂದಾಗಿ ಜೈಲೂ ಬಯಲೂ ಒಂದೇ ಎನಿಸುವ ಮಾನಸಿಕತೆಗೆ ಪಕ್ಕಾಗಿ, ನಿರ್ದೋಷಿಯೆಂದು ಬಿಡುಗಡೆಯಾಗಿ ಬಂದರೂ ಮೊದಲಿನ ಪಾದರಸ ಲವಲವಿಕೆಯನ್ನು ಕಳಕೊಂಡೆ.. ಜಪಾನಿನ ಪ್ರಳಯವೇನೋ ಬಾಹ್ಯಿಕವಾಗಿ ಶಾಂತವೆನಿಸಿದರೂ ಮಾಡಿದ ಹಾನಿ, ಆದ ಘಾಸಿ ಅಳವಿಗೆ ನಿಲುಕದ ಮೂರ್ತಸ್ಥಿತಿ. ಅನುಭವಿಸಲೇಬೇಕಾದ ಪ್ರಕೃತಿಯ ಗತಿ. ದೂರದ ನನ್ನೂರಿನಲ್ಲಿ ಸಹಜ ಜೀವನದ ಹೊಂಬಿಸಿಲು ಹಾಸುತ್ತಿದ್ದರೂ ನನ್ನ ಶುಷ್ಕ ದಿನಗಳು ನೈರಾಶ್ಯದ ಪೊರೆಬಿಡುತ್ತ ಉರುಳುತ್ತಿದ್ದವು..
ಹೌದು, ನಿರೀಕ್ಷೆಯ ದಾರಿ ನಿಗೂಢ. ಕಾಯಬೇಕೆಂದರೆ ಕಾಯಬೇಕು… ದಿನ, ಮಾಸ, ಋತು ವರುಷ ವರುಷಗಳೇ ಕಳೆದುಹೋದಾವು… ಅದೊಂದು ದಿನ ಸಫಲವಾದೀತು ಅಥವಾ ನಿರೀಕ್ಷೆ ನಿರೀಕ್ಷೆಯಾಗಿಯೇ ಉಳಿದೀತು..
ಈಗೆಲ್ಲ ನಾನು ಸಂಜೆ ಹೊತ್ತು ಮುಳುಗುವವರೆಗೂ ಮನೆಯ ಮುಂದಿನ ಸಿಮೆಂಟು ಮಂಚದ ಮೇಲೆ ಯೋಚಿಸುತ್ತ ಕುಳಿತಿರುತ್ತಿದ್ದೆ.. ನಾಕೈದು ವಸಂತಗಳೇ ಕಳೆದು ಹೋಗಿದ್ದವು.. ಹೌದು ಆಕೆಯನ್ನು ಇನ್ನೂ ನೆನೆಯುತ್ತ ದಿನಾಲೂ ಹಾಗೆಯೇ ಕುಳಿತಿರುತ್ತಿದ್ದೆ…. ಆಕೆಗಾಗಿ ಕಾಯುವುದರಲ್ಲಿ ಅರ್ಥವಿಲ್ಲೆಂದು ಗೊತ್ತಿತ್ತು… ಜಪಾನಿನ ಅರ್ಧಭಾಗಕ್ಕೆ ಪ್ರಳಯವನ್ನೇ ತಂದ ಸುನಾಮಿ ಆಕೆಯನ್ನು ಮಾತ್ರ ಬದುಕಿಸಿಟ್ಟಿರಲು ಸಾಧ್ಯವೆ? ಅದೆಷ್ಟು ಜನ ತನ್ನ ಮಡದಿ, ಮಕ್ಕಳು, ತಂದೆ ತಾಯಿ, ನೆಂಟರಿಷ್ಟರು-ಬಂಧುಗಳನ್ನು ಕಳೆದುಕೊಂಡಿದ್ದಾರೆ? ಅದೆಷ್ಟು ಜನ ಕೈ ಕಾಲು ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ? ವಿಧಿಗೆ ಕರುಣೆಯಿದೆಯೆ? ಆದರೂ ಜಪಾನಿನ ನನಗೆ ಗೊತ್ತಿರುವ ಎಲ್ಲರನ್ನೂ ರಾಯಭಾರಿ ಕಚೇರಿಯನ್ನೂ ಸಂಪರ್ಕಿಸುತ್ತ, ಅವಳಿಗಾಗಿ ಹುಡುಕಾಟ ನಡೆಸಿದ್ದೆ.. ಆಕೆಯಾಗಲಿ ಆಕೆಯ ಪರಿಚಿತರಾಗಲಿ ಆಮೇಲೆ ನನಗೆ ಸಂಪರ್ಕಕ್ಕೆ ಸಿಕ್ಕಿರಲೇ ಇಲ್ಲ.. ಆಕೆಯ ತಂದೆ ತಾಯಿ ಕುಟುಂಬದವರಂತೂ ಬದುಕಿರುವ ಸಾಧ್ಯತೆಯೇ ಇರಲಿಲ್ಲವಷ್ಟೆ..
ಹೀಗಿರುವಾಗಲೇ ಅದೊಂದುದಿನ ಸಂಜೆಗೆಂಪಿನ ಓಕುಳಿ ಚಲ್ಲುತ್ತಿರುವ ಸಮಯ.. ಶಾಲು ಹೊದ್ದು ಯಾರೊ ಒಬ್ಬಾಕೆ ನನ್ನತ್ತ ನಡೆದುಬಂದಳು.. ನಾನು ನಿಟ್ಟಿಸಿ ನೋಡಿದೆ.. ನಾನು ಗರಬಡಿದುಹೋದಂತೆ ನಿಶ್ಚಲನಾಗಿ ನಿಂತೆ.. ಎದುರು ನಿಂತ ಆಕೃತಿ ಯಾವುದು? ಅಲ್ಲಿ ಜರುಗಿದ ಘನವಿಪ್ಲವದ ನೆರಳೆ? ಇಲ್ಲಿ ಮರುಗಿದ ಕರುಳ ಹೊರಳೆ? ಮಾತು ಮೂಕವಾದ ಸ್ವಲ್ಪ ಸಮಯದ ನಂತರ ಸತ್ವಹೀನ ದನಿಯಲ್ಲಿ ಮೌನ ಮುರಿದು ಆಕೆಯೇ ಕೇಳಿದಳು..
“ಮಿಲಿಂದ್, ನಾನು..; ಗುರುತು ಸಿಗಲಿಲ್ಲ ಅಲ್ಲವೆ?”
ನಿದ್ದೆಯ ಮಂಪರು ಹರಿದಾಗ ಎಬ್ಬಿಸುತ್ತಿರುವವರಾರೆಂದು ನಿಧಾನ ತಿಳಿದುಬರುವಂತೆ ಪರಿಚಯ ಹತ್ತುತ್ತಿರುವಂತಾಗಿ..
ಒಂದು ಕಣ್ಣು ಕಣ್ಮರೆಯಾದ, ಬಿಳಿಚಿಕೊಂಡ ಪೇಲವ ಶರೀರದ, ಅಲ್ಲಲ್ಲಿ ಸುಟ್ಟುಕರಕಲಾದ ಮುಖದ. ಪಕಳೆ ಕಿತ್ತ ಹೂವಿನಂತೆ ಹಲ್ಲುಗಳ, ಮಾಸಿದ ನಗು ಮೂಡಿದ, ವೃದ್ಧೆಯಂತೆ ಕಾಣುವ ಆಕೆ ಮುಕುಲ ಎಂದು ಮರುಚಣದಲ್ಲಿಯೇ ನನಗೆ ಪಕ್ಕಾ ಆಗಿತ್ತು.. ಸೌಂದರ್ಯದ ಖನಿಯಾದ ಮುಕುಲ ಎಲ್ಲಿ? ಚಂಡ ಅಲೆಗಳ ಪ್ರವಾಹಕ್ಕೆ ತತ್ತರಿಸಿ ತರಗೆಲೆಯಂತೆ ತೂರಿಹೋದ ಮುಕುಲಳ ಈ ಆಕೃತಿಯೆಲ್ಲಿ?
ಆಕೆಯ ವಿರೂಪ ಸುನಾಮಿಯಿಂದ ಸ್ವೀಪ್ ಆದ ಪುಕುಶಿಮಾದಂತೆ, ಅಣುಸ್ಥಾವರದ ಸೋರಿಕೆಯಿಂದ ವಿಕಿರಣದಗ್ಧ ಜಪಾನಿನ ಹಳ್ಳಿ ನಗರಗಳಂತೆ ನನ್ನ ಮುಕುಲಳ ಮುಖ ದೇಹ ಬರಡು ಬಯಲಾಗಿತ್ತು.. ಕನಸು ಮೊಳೆಯದ, ಬದುಕು ಬೆಳೆಯದ ಬಂಜರು ಭೂಮಿಯಾಗಿತ್ತು! ಸರ್ವಸ್ವ ಕಳಕೊಂಡ ಮುಕುಲಳ ಎದೆಭೂಮಿಯಲ್ಲಿ ಮಹಾನ್ ಪ್ರಳಯ ಸಂಭವಿಸಿತ್ತು.. ನನ್ನ ಭವಿಷ್ಯದ ವಿಸ್ತಾರವೂ ಪ್ರಳಯಕ್ಕೆ ಬಲಿಯಾಗಿ.. ಪ್ರೇಮದ ಪುಷ್ಪೋದ್ಯಾನ ಉಧ್ವಸ್ತವಾದಂತೆ .. ಸುಂದರ ಸ್ವಪ್ನ ಸೌಧ ಕುಸಿದು ಬಿದ್ದಂತೆ..
ಬರದೇ ಇದ್ದು ಬರವಿಗಾಗಿ ಕಾಯುತ್ತಿರುವಾಗ ಬರವನ್ನು ಅಪ್ಪಿಕೊಳ್ಳುವ ಹಂಬಲ.. ಸಫಲವಾದ ನಿರೀಕ್ಷೆಯಲ್ಲಿ ಅನೂಹ್ಯ ಬದಲಾವಣೆಯಿಂದಾಗಿ ಅದು ಎದುರು ನಿಂತಾಗ ಅಪ್ಪಿಕೊಳ್ಳಲಾರದ, ಹೊರನೂಕಿ ಬಾಗಿಲು ಮುಚ್ಚುವ ವಿಪ್ಲವ… ಕಾಡುತ್ತ ಆಕೆಯನ್ನು ಈ ಸ್ಥಿತಿಯಲ್ಲಿ ಸ್ವಾಗತಿಸಲೆ? ಸ್ವಾಗತಿಸದೇ ಬಾಗಿಲು ಮುಚ್ಚಲೆ? ಎಂಬ ಪ್ರಶ್ನೆಯ ಯುಗಾಂತದ ಸಾಗರ ಉಕ್ಕೇರಿ ಉಕ್ಕೇರಿ ಮುಂದೆ ನನ್ನೆಡೆ ಬರುತ್ತಿರುವಂತೆ ಅದೇ ಅಸ್ಪಷ್ಟ ಆಕೃತಿ… ಅಲ್ಲ ಅದರ ನೆರಳು.. ಮುಂದೆ ಮುಂದೆ ಇದ್ದಂತೆ ಅನಿಸಿ..
ಮಾನವತೆ ವ್ಯಾವಹಾರಿಕತೆಯ ತುಮುಲ ವಡವಾನಲದಂತೆ.. ಅಲ್ಲಿ ಪ್ರೇಮ ಅಮರ ಎಂಬ ಆಕೆಯ ಮಾತು ಸುಟ್ಟುರಿದು ಹೋದಂತೆ ಭಾಸವಾಗಿ.. ಥರಥರ ಕಂಪಿಸುವ ಕಾಲುಗಳನ್ನು ಬಲವಾಗಿ ನೆಲಕ್ಕೆ ಊರಿ ನಿಂತೆ..
*****

(ವನರಾಗ ಶರ್ಮಾ)
ಅದೊಂದು ದಿನ ಜಪಾನಿನ ಭೀಕರ ಭೂಕಂಪ ಹಾಗೂ ಅಣುಸ್ಥಾವರ ಸೋರಿಕೆ ದುರಂತದ ಸುದ್ದಿಯನ್ನು ಟಿವಿಯಲ್ಲಿ ನೋಡುತ್ತಿದ್ದಂತೆ, ದುರ್ಘಟನೆಯ ಭೀಕರತೆ ಹಾಗೂ ಅನುಕಂಪ ನನ್ನನ್ನು ತುಂಬ ಕಾಡಿತು. ಹಾಗೆಯೇ ಮನುಷ್ಯನ ಮನಸ್ಸಿನಲ್ಲಿ ಇಂಥಹ ಘಟನೆ ಅಥವಾ ಒದಗಬಹುದಾದ ದುರಂತ ಕುರಿತಾದ ಭಯ-ಭೀಕರತೆ ಕಾಡುತ್ತ, ಮನಸ್ಸನ್ನು ಆವರಿಸಿ ಅದು ಭಯಾನಕ ರೂಪು ತಳೆದಾಗ ಏನೆಲ್ಲ ‘ಅತಿಭಯದ’ ಅನುಭವ ಆಗಬಹುದು ಎಂಬುದು ನನ್ನನ್ನು ಬಹುದಿನ ಕಾಡಿತು. ಅದನ್ನೇ ಒಂದು ಕಥೆಯನ್ನಾಗಿ ಕಟ್ಟಿಕೊಡುವ ಮನಸ್ಸು ಮಾಡಿದೆ. ಅದರ ಫಲವಾಗಿಯೇ ಮೂಡಿಬಂದ ಕೃತಿ “ವಿಪ್ಲವ” ಎಂಬ ಕಥೆ. ಇಲ್ಲಿ ಜಪಾನಿನ ಘಟನೆ ಒಂದು ಒಂದು ಬಾಹ್ಯಚಿತ್ರಣ. ಅದರ ಧ್ವನಿ ಪ್ರತಿಯೋರ್ವ ಮನುಷ್ಯನನ್ನೂ ಕಾಡುವ, ಮನುಷ್ಯನಲ್ಲೇ ಇರುವ ಮಹಾಭಯ ಅಥವಾ ಮಹಾವಿಪ್ಲವ ಮತ್ತು ಅದನ್ನು ಅನುಭವಿಸುವ, ಚಿತ್ರಹಿಂಸೆಯ ಕಥನ. ನಾನು ಡಿಪ್ರೆಶನ್ನಿಗೆ ಒಳಗಾದಾಗ ಅನುಭವಿಸಿದ ಯಾತನೆಯನ್ನೂ ಇಲ್ಲಿ ಪರೋಕ್ಷವಾಗಿ ಹೇಳಲು ಪ್ರಯತ್ನಿಸಿದ್ದೇನೆ. ಫೋಬಿಯಾ ಅಥವಾ ಮಾನಸಿಕ ಅತಿಭಯಕ್ಕೆ ಒಳಗಾದಾಗ ಜಗತ್ ಪ್ರಳಯವೇ ಆದಂಥ ಭಯಾನಕ ಯಾತನೆಯನ್ನು ಅದಕ್ಕೆ ಒಳಗಾದವರು ಅನುಭವಿಸುತ್ತಾರೆ ಎಂಬುದು ನನ್ನ ಅನುಭವ ಹಾಗೂ ಮನೋವಿಜ್ಞಾನಿಗಳ ಅಭಿಪ್ರಾಯ. ಅದನ್ನು ನಾಯಕನ ಮೂಲಕ ಅಭಿವ್ಯಂಜಿಸಿದ್ದೇನೆ. ಜೊತೆಗೆ ವಿದೇಶಕ್ಕೆ ಹೋಗಿ ಬರುವಾಗ ಕೆಲವೊಮ್ಮೆ ಸಂಶಯ, ಭ್ರಷ್ಟಾಚಾರ, ಕೆಲವು ಸಾರೆ ತಪ್ಪು ಕಲ್ಪನೆಯಿಂದ ಆಗುವ ಸಂಕಷ್ಟಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವೂ ಇಲ್ಲಿದೆ. ಮನೋವೈಜ್ಞಾನಿಕ ಗ್ರಂಥಗಳ ಸಹಾಯವನ್ನೂ ಈ ಕಥೆಯನ್ನು ಬರೆಯುವಾಗ ಪಡೆದುಕೊಂಡಿದ್ದೇನೆ.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಕಥೆ ಒಂದು ರೀತಿ ಚೆನ್ನಾಗಿದೆ. ವಿಭಿನ್ನ ಕಥಾಹಂದರ, ವಿಶಿಷ್ಠವಾದ ಪದಬಳಕೆ,ಪರಿಚಯವಿಲ್ಲದ ದೂರದೂರಿನ ಚಿತ್ರಣ ಇವೆಲ್ಲವೂ ಈ ಕಥೆಯನ್ನು ಹೊಸತನ್ನಾಗಿ ಮಾಡಿದೆ.
ಡಾ.ಕೆ ಎಸ್ ಗಂಗಾಧರ
ಬೆಂಗಳೂರು