Advertisement
ನಾರಿ ಮತ್ತು ವಾಹನ ಸವಾರಿ – ಸಬಲೀಕರಣದ ಪರಿಣಾಮಕಾರಿ ದಾರಿ!: ಡಾ.ಎಲ್.ಜಿ.ಮೀರಾ ಅಂಕಣ

ನಾರಿ ಮತ್ತು ವಾಹನ ಸವಾರಿ – ಸಬಲೀಕರಣದ ಪರಿಣಾಮಕಾರಿ ದಾರಿ!: ಡಾ.ಎಲ್.ಜಿ.ಮೀರಾ ಅಂಕಣ

ನಮ್ಮ ಜೀವನವೆಂಬ ವಾಹನದ ಚಾಲಕಪೀಠದಲ್ಲಿ ಯಾರಿದ್ದಾರೆ? ನಾವೋ ಅಥವಾ ಬೇರೆ ಯಾರಾದರೂ ಅಧಿಕಾರಸ್ಥರೋ? ಗಂಡಾಳಿಕೆಯ ಸಮಾಜಗಳಲ್ಲಿ ಹೆಣ್ಣು ತನ್ನ ಜೀವನದ ಚಾಲಕ ಪೀಠದಲ್ಲಿ ಕುಳಿತಿದ್ದು ತೀರಾ ಅಪರೂಪ. ಅವಳು ಏನು ತಿನ್ನಬೇಕು, ಕುಡಿಯಬೇಕು, ಯಾವ ಬಟ್ಟೆ ತೊಡಬೇಕು ಮುಂತಾದ ಸಾಧಾರಣ, ದೈನಿಕ ಸಂಗತಿಗಳಿಂದ ಹಿಡಿದು ಓದು, ಕೆಲಸ, ಮದುವೆ, ಆಸ್ತಿಗಳಿಕೆಗಳಂತಹ ಮುಖ್ಯ ವಿಷಯಗಳ ತನಕ ಮನೆಯ ಗಂಡಸರೋ ಅಥವಾ ಅವರ ಪ್ರತಿನಿಧಿಗಳಾದವರೋ ನಿರ್ಧರಿಸುವ ಕಾಲ ಅನೇಕ ಶತಮಾನಗಳ ತನಕ ಇತ್ತಲ್ಲ? ಈಗಲೂ ಬಹಳಷ್ಟು ಕಡೆಗಳಲ್ಲಿ ಇದೇ ಕ್ರಮವು ಮುಂದುವರಿದಿದೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಇಪ್ಪತ್ತೊಂದನೆಯ ಬರಹ

ಸ್ತ್ರೀ ಸಬಲೀಕರಣದ ವಿಷಯ ಬಂದಾಗ ಸಾಮಾನ್ಯವಾಗಿ ಶಿಕ್ಷಣ, ಉದ್ಯೋಗ ಹಾಗೂ ಆರ್ಥಿಕ ಸ್ವಾತಂತ್ರ್ಯಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ. ಇದು ಸರಿಯೂ ಹೌದು. ಇದನ್ನು ಒಪ್ಪಿಯೂ ಇನ್ನೊಂದು ಸ್ತ್ರೀಸಬಲೀಕರಣದ ಕೌಶಲ್ಯದ ಕಡೆ ನಾವು ಗಮನ ಕೊಡಬೇಕು ಅನ್ನಿಸುತ್ತೆ ನನಗೆ. ಅದು ಯಾವುದೆಂದರೆ ವಾಹನ ಸವಾರಿಯ ಕೌಶಲ್ಯ. ಸೈಕಲ್‌ನಿಂದ ಹಿಡಿದು ಕಾರಿನ ತನಕ, ಎತ್ತಿನ ಗಾಡಿಯಿಂದ ಹಿಡಿದು ವಿಮಾನದ ತನಕ, ಭಾರೀ ಟ್ರಕ್ಕುಗಳಿಂದ ಹಿಡಿದು ರೈಲಿನ ತನಕ ಚಾಲನೆಯನ್ನು ಹೆಣ್ಣು ಕಲಿತಳು ಅಂದರೆ ಅವಳ ಜೀವನವು ಉನ್ನತಿಯ ಪಥದಲ್ಲಿ ಚಲಿಸಲಾರಂಭಿಸಿತು ಅಂತಲೇ ಅರ್ಥ.

ವಾಹನ ಸವಾರಿಯು ಹೆಣ್ಣಿಗೆ ಒಂದು ವಿಶೇಷ ರೀತಿಯ ಸ್ವಾತಂತ್ರ್ಯ, ಸ್ವಾಯತ್ತತೆಗಳನ್ನು ಕೊಡುತ್ತದೆ. ಗಂಡಾಳಿಕೆಯ ವ್ಯವಸ್ಥೆಗಳಲ್ಲಿ ಈ ಕೌಶಲ್ಯವನ್ನು ಹೆಣ್ಣುಮಕ್ಕಳು ಕಲಿಯುವ ಬಗ್ಗೆ ಪ್ರೋತ್ಸಾಹ ಕೊಡುವುದು ಅಷ್ಟರಲ್ಲೇ ಇದೆ. ಮನೆಯ ನಾಲ್ಕು ಗೋಡೆಗಳ ನಡುವೆ ಹೆಣ್ಣಿನ ಸ್ಥಾನವನ್ನು ಮಿತಗೊಳಿಸಿದ್ದ ವ್ಯವಸ್ಥೆಯು ಅವಳು ಮನೆಯ ಹೊರಗೆ ರಸ್ತೆಗಳಲ್ಲಿ ಸ್ವತಂತ್ರವಾಗಿ ಗಾಡಿ ಓಡಿಸುವುದನ್ನು ಪ್ರೋತ್ಸಾಹಿಸದಿರುವುದರಲ್ಲಿ ಅಚ್ಚರಿಯೇನಿಲ್ಲ! ಈ ಕಾರಣಕ್ಕೋ ಏನೋ, ನಮ್ಮ ಹೆಣ್ಣುಮಕ್ಕಳಲ್ಲೂ ಈ ಕೌಶಲ್ಯವನ್ನು ಕಲಿಯುವ ಬಗ್ಗೆ ಅದು ಒಂದು ಗಂಭೀರತರ ಜೀವನ ಕೌಶಲ್ಯ ಎಂಬ ಅಭಿಪ್ರಾಯವು ಸಮಾಜದಲ್ಲಿ ಇಲ್ಲ ಅನ್ನಿಸುತ್ತದೆ ನನಗೆ. ಇನ್ನೂ ಅದು ಒಂದು ಖುಷಿ, ಲಹರಿ, ಖಯಾಲಿ ಅಷ್ಟೇ ಎಂಬ ಭಾವನೆಯೇ ಇದೆ. ಕಲಿತವರು ಕಲಿತರು, ಇಲ್ಲದಿದ್ದರೆ ಇಲ್ಲ. ಇಲ್ಲಿ ನನ್ನ ವೈಯಕ್ತಿಕ ಅನುಭವವನ್ನು ಹಂಚಿಕೊಳ್ಳಬಯಸುತ್ತೇನೆ.

ಈ ಕಾಲದಲ್ಲಿ ಎಲ್ಲವನ್ನೂ ಕಾಲ್ನಡಿಗೆಯಿಂದ ಪೂರೈಸಬಹುದಾದ ಕಾಲೂರು(ಪುಟ್ಟ ಗ್ರಾಮ)ಗಳ ಜೀವನಶೈಲಿ ಹೇಗಿರುತ್ತದೆ ಎಂದು ನನಗೆ ತಿಳಿಯದು, ಏಕೆಂದರೆ ನಾನೆಂಬ ನಾನು ಬದುಕುತ್ತಿರೋದು ಬೆಂಗಳೂರೆಂಬೋ ದೈತ್ಯ ಅಳತೆಯ, ವಾಹನ ದಟ್ಟಣೆಯ ಕಾಟದಲ್ಲಿ ಇಡೀ ಜಗತ್ತಿನಲ್ಲಿ ಬಹುಮಾನ ತೆಗೆದುಕೊಳ್ಳುವಷ್ಟು ಬೆಳೆದುಬಿಟ್ಟಿರುವ ಮಹಾಮಹಾನಗರದಲ್ಲಿ. ಇಲ್ಲಿ ನಾರಿಯೊಬ್ಬಳು ಒಬ್ಬ ಗೃಹಿಣಿ-ಉದ್ಯೋಗಿನಿ ಎಂಬ ದ್ವಿಪಾತ್ರಧಾರಿಣಿಯಾಗಿ ಬದುಕುವುದೆಂದರೆ ನಿತ್ಯ ಕಸರತ್ತು. ಒಂದು ವೇಳೆ ಈ ದ್ವಿಪಾತ್ರಧಾರಿಣಿಯೇನಾದರೂ ಸಾರ್ವಜನಿಕ ಸಾರಿಗೆಯ ಮೇಲೆ ಅವಲಂಬಿತಳಾಗಿದ್ದಾಳೆ ಅಂದರೆ ಅವಳ ಪಾಡು ಯಾರಿಗೂ ಬೇಡ! ನಡೆದು ಪೂರೈಸಲಾಗದ ದೂರಗಳು, ತುಂಬಿ ತುಂಬಿ ಬರುವ ಬಿಎಂಟಿಸಿ ಬಸ್ಸುಗಳು ಮತ್ತು ಮೆಟ್ರೋಗಳು, ಬಾಯಿಗೆ ಬಂದಂತೆ ಸವಾರಿಬೆಲೆ ಹೇಳುವ ಮನಸುಖರಾಯರಾದ ಆಟೋಚಾಲಕರು, ವಿಪರೀತ ದುಡ್ಡಿನ ಟ್ಯಾಕ್ಸಿಗಳು… ಅಯ್ಯೋ … ಇದನ್ನೆಲ್ಲ ಮೀರಿ, ಸರಿಯಾದ ಹೊತ್ತಿಗೆ ಉದ್ಯೋಗಸ್ಥಳ ತಲುಪುವುದು ಒಂದು ಅತಿಸಾಹಸಮಯ ಕಾರ್ಯ ಅಂದರೆ ಉತ್ಪ್ರೇಕ್ಷೆಯಲ್ಲ.

ನೂರಕ್ಕೆ ತೊಂಬತ್ತೊಂಬತ್ತು ದಿನ, ನಾನು ಮಹಾರಾಣಿ ಕಾಲೇಜಿನ ನನ್ನ ಪ್ರಾಧ್ಯಾಪಕಿ ಕೆಲಸಕ್ಕೆ ಹೋಗುವುದು ಸ್ಕೂಟರ್ ಮೇಲೆ. ಅಪರೂಪಕ್ಕೆ ಗಾಡಿಯ ಸೇವಾದುರಸ್ತಿಯೋ(ಸರ್ವಿಸ್) ಅಥವಾ ಇನ್ಯಾವುದಾದರೂ ಕಾರಣಕ್ಕೋ ಸಾರ್ವಜನಿಕ ಸಾರಿಗೆಯ ಮೇಲೆ ಅವಲಂಬಿತಳಾದೆ ಅಂದರೆ ಅವತ್ತು ನನ್ನ ಬೇಸರ ಹೇಳತೀರದು! `ಅಯ್ಯೋ, ನನ್ನ ಸ್ಕೂಟರ್ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು’ ಎಂದು ದಿನಕ್ಕೆ ಐವತ್ತು ಸಲ ಅನ್ನಿಸುತ್ತಿರುತ್ತೆ.

ಅದೇನೋ ಅರಿಯೆ. ಚಿಕ್ಕಂದಿನಲ್ಲಿ ನನಗೂ ಸಹ ಗಾಡಿ ಓಡಿಸುವ ಬಗ್ಗೆ ಬಹಳ ಆಸಕ್ತಿಯೇನೂ ಇರಲಿಲ್ಲ. ಸದಾ ಪುಸ್ತಕ ಓದುವುದು, ಹಾಡು-ನಾಟ್ಯಗಳಲ್ಲಿ ಮುಳುಗಿದ್ದ ಹುಡುಗಿ ನಾನು. ಆದರೆ ನನಗಿಂತ ಸುಮಾರು ಮೂರು ವರ್ಷ ಚಿಕ್ಕವನಾದ ನನ್ನ ತಮ್ಮನಿಗೆ ಗಾಡಿ ಓಡಿಸುವುದರಲ್ಲಿ ಅಪಾರ ಆಸಕ್ತಿ ಇತ್ತು. ಅವನ ಒತ್ತಾಯಕ್ಕಾಗಿಯೇ ನಮ್ಮ ತಂದೆಯವರು ಆಗ ಮಂಗಳೂರಿನಲ್ಲಿದ್ದ ನಮ್ಮ ಮನೆಗೆ ಒಂದು ಸೈಕಲ್ ತಂದರು. ಅಚ್ಚರಿ ಅಂದರೆ ನಮ್ಮ ತಂದೆ ತಂದಿದ್ದು ಹುಡುಗರು ಮತ್ತು ಹುಡುಗಿಯರು ಇಬ್ಬರೂ ಓಡಿಸಬಹುದಾದ `ಲೇಡೀಸ್ ಸೈಕಲ್ʼ!. ನಾನೂ ಸೈಕಲ್ ಓಡಿಸಲು ಕಲಿಯಲಿ ಎಂಬ ಉದ್ದೇಶ ಬಹುಶಃ ಅವರಿಗಿದ್ದಿರಬೇಕು. ಆಗ ಆರೋ, ಏಳೋ ತರಗತಿ ಓದುತ್ತಿದ್ದೆ ನಾನು. ನಮ್ಮ ತಂದೆಯವರ ಬಲವಂತದಿಂದಾಗಿ ಬಿದ್ದು ಎದ್ದು, ಚರಂಡಿಗೆ ಸೈಕಲ್ ಇಳಿಸಿ, ಮೈಕೈ ನೋವು ಮಾಡಿಕೊಂಡು, ಅಂತೂ ಇಂತೂ ನಾನು ಸೈಕಲ್ ಕಲಿತೆ! ಮಂಗಳೂರಿನ ಉರ್ವಸ್ಟೋರ್ ಎಂಬ ಬಡಾವಣೆಯ ದಾರಿಗಳಲ್ಲಿ ತುಂಬ ಹೆದರಿ ಸೈಕಲ್ ಮೇಲೆ ಕುಳಿತು ಸೈಕಲ್ ಹಿಡಿಕೆಯನ್ನು ಹಾಗೆ ಹೀಗೆ ಅಲ್ಲಾಡಿಸುತ್ತಾ, ಅಯ್ಯೋ… ಅಯ್ಯಯ್ಯೋ ಬಿದ್ದೆ … ಎಂದು ಗಾಬರಿಗೊಳ್ಳುತ್ತಾ ಫಜೀತಿ ಅನುಭವಿಸುತ್ತಿದ್ದಾಗ, ಸೈಕಲ್ಲನ್ನು ಹಿಡಿದುಕೊಂಡು ನನ್ನ ಜೊತೆಯೇ ಓಡುತ್ತಾ, ನಾನು ಬೀಳದಂತೆ ನೋಡಿಕೊಂಡ ಅಪ್ಪನ ನೆನಪು ಸದಾ ಜೊತೆಗಿರುತ್ತೆ. `ಸೈಕಲ್/ ಸ್ಕೂಟರ್ ಓಡಿಸುವಾಗ ಒಂದು ಕೈ ಬ್ರೇಕ್‌ನ ಮೇಲೇ ಇರಬೇಕು, ಆ ಕಡೆ ಈಕಡೆ ಹೋಗದೇ ಒಂದೇ ನೇರಪಥ(ಲೇನ್)ನಲ್ಲಿ ಚಲಿಸಬೇಕು, ಸೈಕಲ್/ಸ್ಕೂಟರ್ ಮೇಲೆ ಕೂತರೆ ನೆಲಕ್ಕೆ ಕಾಲು ತಾಕುವಷ್ಟು ಎತ್ತರ ಇರುವವರು ಬೀಳುತ್ತೇನೆ ಎಂದು ಹೆದರಬೇಕಿಲ್ಲ. ಯಾಕೆ ಹೆದರ‍್ತೀಯ? ಬೀಳೋ ಹಾಗನ್ನಿಸಿದ್ರೆ ನೆಲಕ್ಕೆ ಕಾಲು ಕೊಟ್ಟರೆ ಆಯಿತಲ್ಲ’, ಎಂದು ಅವರು ಹೇಳಿದ್ದು ನಿನ್ನೆ ಹೇಳಿದಂತಿದೆ.

ಅಪ್ಪನದೇ ಮನ್ನೂಕುವಿಕೆಯಿಂದ ನನ್ನ ಹದಿಹರೆಯದಲ್ಲಿ ಲೂನಾ ಎಂಬ ಪುಟ್ಟ ಗಾಡಿ ಓಡಿಸಲು ನಾನು ಕಲಿತದ್ದು. ಆದರೆ ಈ ಕೌಶಲ್ಯವು ಮುಂದೆ ನನ್ನ ಉದ್ಯೋಗ ಜೀವನದಲ್ಲಿ ಭಾರೀ ಉಪಯೋಗಕ್ಕೆ ಬಂತು. ಕೇಂದ್ರ ಸರ್ಕಾರಿ ನೌಕರಿಗೆ ಸೇರಿದ ಹೊಸದರಲ್ಲಿ ನಾನು ನನ್ನ ಮೊದಲ ಸ್ಕೂಟರ್ ಕೊಂಡಿದ್ದು. ಕಳೆದ ಮೂವತ್ತು ವರ್ಷಗಳಿಂದ ನನ್ನ ಉದ್ಯೋಗಿನಿ ಜೀವನದ ಅವಿಭಾಜ್ಯ ಅಂಗವೇ ಆಗಿಬಿಟ್ಟಿದೆ ನನ್ನ ದ್ವಿಚಕ್ರಿಣಿ(ಹೊಂಡಾ ಆಕ್ಟಿವಾ ಸ್ಕೂಟರ್)! ಈ ವಿಷಯಕ್ಕಾಗಿ ನಾನು ನನ್ನ ತಂದೆಯವರಿಗೆ ಸದಾ ಆಭಾರಿಯಾಗಿರುತ್ತೇನೆ.

ಹಾಗೆಂದ ಮಾತ್ರಕ್ಕೆ ಈಗಲೂ ನಾನೇನೂ ಅತ್ಯಾಸಕ್ತ(ಪ್ಯಾಶನೇಟ್) ವಾಹನ ಚಾಲಕಿಯಲ್ಲ. 30-40 ಕಿಲೊಮೀಟರ್ ವೇಗದಲ್ಲಿ ನನ್ನ ಹೊಂಡಾ ಆಕ್ಟಿವಾ ದ್ವಿಚಕ್ರಿಯನ್ನು ಓಡಿಸಿಕೊಂಡು, ಸಾಧ್ಯವಾದಷ್ಟು ರಸ್ತೆಯ ಎಡಬದಿಯಲ್ಲಿ ಚಲಿಸುವ ರಕ್ಷಣಾತ್ಮಕ ಚಾಲಕಿ ನಾನು! `ಎತ್ತಿನ ಗಾಡಿಗಿಂತ ತುಸು ವೇಗವಾಗಿ ಓಡಿಸ್ತಿ ನೋಡು!’ ಎಂದು ನನ್ನ ಮನೆಮಂದಿ ಸದಾ ನಗೆಯಾಡುತ್ತಾರೆ. ನಾನಂತೂ ನನಗೆ ಸರಿ ಅನ್ನಿಸಿದ ರೀತಿಯಲ್ಲಿ ಕಳೆದ ಮೂವತ್ತೆರಡು ವರ್ಷಗಳಿಂದ ನನ್ನ ಓಡಾಟಗಳನ್ನು ನಿರ್ವಹಿಸುತ್ತಾ ಬಂದಿದ್ದೇನೆ. ಮನೆಗಾಗಿ ತುಂಬ ಭಾರದ ಸಾಮಾನುಚೀಲಗಳನ್ನು ಸ್ಕೂಟರಿನಲ್ಲಿ ಇಟ್ಟುಕೊಂಡು ಬರುವಾಗ, ಹತ್ತು ಕಡೆ ಗಾಡಿ ನಿಲ್ಲಿಸಿ ಅಗತ್ಯ ಕೆಲಸಗಳನ್ನು ಮಾಡಿಕೊಳ್ಳುವಾಗ ಹೆಂಗಸರಿಗೆ ಗಾಡಿ ಓಡಿಸುವ ಕೌಶಲ್ಯ ಇರುವುದು ಎಷ್ಟು ಮುಖ್ಯ ಅನ್ನಿಸಿಬಿಡುತ್ತೆ ನನಗೆ.

ಸ್ಕೂಟರ್ ಚಾಲನೆಯು ನನಗೆ ಸಮಯ ಸ್ವಾತಂತ್ರ್ಯವನ್ನು ಕೊಟ್ಟಿದೆ. ಸ್ವಾಯತತ್ತೆಯನ್ನು ಕೊಟ್ಟಿದೆ. ಕೆಲಸಕ್ಕೆ ಹೋಗುವಾಗಂತೂ ಸಾರ್ವಜನಿಕ ಸಾರಿಗೆಯ ಮೇಲೆ ಅವಲಂಬಿಸದೆ ಬಾಗಿಲಿಂದ ಬಾಗಿಲಿಗೆ ನನ್ನದೇ ಗಾಡಿಯಲ್ಲಿ ಹೋಗುವುದು ಬಹಳ ನೆಮ್ಮದಿಯ ವಿಷಯ ಅನ್ನಿಸಿಬಿಡುತ್ತದೆ. ಇನ್ನು, ಹದಿನೈದು ಎಕರೆಗಳಷ್ಟು ವಿಸ್ತೀರ್ಣದಲ್ಲಿ ಹಾಸಿಕೊಂಡಿರುವ ಮಹಾರಾಣಿ ವಿಶ್ವವಿದ್ಯಾಲಯ(ನನ್ನ ಕೆಲಸದ ಸ್ಥಳ)ದಲ್ಲಿ ನಾನು ವಿವಿಧ ಕೆಲಸಗಳಿಗಾಗಿ ಸದಾ ಓಡಾಡಲು ಸಹಾಯ ಮಾಡುವ ಒಂದು ವಾಹನಮಿತ್ರೆ ನನ್ನ ಗಾಡಿ. ಸಾಕು ಇಲ್ಲಿಗೆ ನನ್ನ ಗಾಡಿ ಪುರಾಣ!

ಬೆಂಗಳೂರನ್ನು ದೂರಗಳ ನಗರಿ ಎನ್ನುತ್ತಾರೆ. ಅನೇಕ ಬಡಾವಣೆಗಳಲ್ಲಿ ಚಿಕ್ಕ ಚಿಕ್ಕ ಸಾಮಾನು ತರುವುದಕ್ಕೂ ಅರ್ಧ ಕಿ.ಮೀ. ಅಥವಾ ಒಂದು ಕಿ.ಮೀ. ನಡೆಯಬೇಕಾಗಬಹುದು. ಭಾರತದ ಅನೇಕ ನಗರಗಳು ಹೀಗೆಯೇ ಇದ್ದಾವು. ಮಕ್ಕಳ ಶಾಲೆ, ನೆಂಟರ ಮನೆ, ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣ ಪ್ರತಿಯೊಂದೂ ಗಡಿಬಿಡಿಯಲ್ಲಿ ನಡೆದು ಪೂರೈಸದಷ್ಟು ದೂರವೇ. ಇಂತಹ ಹೊತ್ತಲ್ಲಿ ಪ್ರತಿ ಸಲವೂ ಮನೆಯ ಗಂಡಸರನ್ನು ಕಾಯಲು ಸಾಧ್ಯ ಆಗುವುದಿಲ್ಲ. ಗಾಡಿ ಓಡಿಸುವ ಕೌಶಲ್ಯ ಹೆಂಗಸರಲ್ಲಿದ್ದರೆ ಇಂತಹ ಸನ್ನಿವೇಶಗಳಲ್ಲಿ ಅವರಿಗೆ ಬಹಳ ಅನುಕೂಲವಾಗುತ್ತದೆ. ದಿನಸಿ, ಹಣ್ಣು ತರಕಾರಿ ಚೀಲಗಳಂಥ ಭಾರ ಭಾರದ ಚೀಲಗಳನ್ನು ತರುವ ಕೆಲಸ ಇದ್ದಾಗಲಂತೂ ಗಾಡಿ ಬೇಕೇ ಬೇಕು.

*****

`ನಾರಿ ಮತ್ತು ವಾಹನ ಸವಾರಿ’ ಎಂಬ ವಿಷಯದ ಬಗ್ಗೆ ಆಲೋಚಿಸಿದರೆ ಇದು ಆಧುನಿಕ ಯುಗಕ್ಕೆ ಸೀಮಿತವಾದುದಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ನಮ್ಮ ಕನ್ನಡ ನಾಡಿನ ನಾಡದೇವಿ ಚಾಮುಂಡೇಶ್ವರಿಯು ಸಿಂಹವಾಹಿನಿಯಲ್ಲವೆ? ಹಾಗೆಯೇ ಬೇರೆ ಬೇರೆ ದೇವಿಯರಿಗೆ ಬೇರೆ ಬೇರೆ ವಾಹನಗಳಿವೆ. ಸರಸ್ವತಿಗೆ ನವಿಲು, ಲಕ್ಷ್ಮೀಗೆ ಗೂಬೆ….. ಹೀಗೆ. ಕಿತ್ತೂರು ಚೆನ್ನಮ್ಮರಂತಹ ಇತಿಹಾಸ ಪ್ರಸಿದ್ಧ ರಾಣಿಯರು ಕುದುರೆ ಸವಾರಿಯಲ್ಲಿ ಪರಿಣತರಾಗಿದ್ದರು, ರಾಮಾಯಣದ ಕೈಕೆಯು ತನ್ನ ಗಂಡ ದಶರಥನ ಜೊತೆ ಯುದ್ಧಕ್ಕೆ ಹೋಗಿ ರಥದ ಕೀಲು ಮುರಿದಾಗ ತನ್ನ ಬೆರಳನ್ನೇ ಕೀಲಾಗಿ ಇಟ್ಟು ಅದು ಓಡಲು ಸಹಾಯ ನೀಡಿದವಳಲ್ಲವೆ?

ಪುರಾಣ-ಇತಿಹಾಸಗಳ ಸ್ತ್ರೀಯರ ವಾಹನಸವಾರಿಯ ಕಥೆಗಳು ಏನೇ ಇರಲಿ, ವಾಹನ ಚಾಲನೆಯ ಕೌಶಲ್ಯದ ವಿಷಯದಲ್ಲಿ ಹೆಣ್ಣುಮಕ್ಕಳನ್ನು ನಮ್ಮ ಪರಂಪರೆಯು ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ. ಹಿಂದಿನ ಕಾಲದಲ್ಲಿ ಗಂಡು ಮಕ್ಕಳನ್ನು ಗಾಡಿ ಓಡಿಸುವಂತೆ ಪ್ರೋತ್ಸಾಹಿಸಿದಷ್ಟು ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಿಲ್ಲ ಎಂಬುದು ನಿಜ. ಹೀಗಾಗಿ ನಮಗೆ, ವಾಸ್ತವಿಕ ಜೀವನದ ಐವತ್ತು-ನೂರು ವರ್ಷಗಳ ಹಿಂದಿನ ಇತಿಹಾಸದಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ವಾಹನ ಸವಾರಿಣಿಯರು (ಸವಾರ ಪದಕ್ಕೆ ಈ ಪದ ಸರಿಯಾದ ಸ್ತ್ರೀಲಿಂಗವಾಗಬಹದೆ?) ಮಾತ್ರ ಕಾಣಸಿಗುತ್ತಾರೆ.

*****

ಇನ್ನು ಪಾಶ್ಚಾತ್ಯ ಪ್ರಪಂಚದಲ್ಲಿ ಸವಾರಿಣಿಯರ ಚರಿತ್ರೆಯನ್ನು ತುಸು ಗಮನಿಸೋಣ. ಬರ್ಥಾ ಬೆಂಝ್ ಎಂಬ ಮಹಿಳೆಯು ತನ್ನ ಗಂಡ ಕಾರ್ಲ್ ಬೆಂಝ್‌ನು ತಯಾರಿಸಿದ ಕಾರಿನ ಪ್ರಥಮ ರೂಪವಾದ ಮೋಟಾರು ವಾಹನ(ಮೋಟಾರ್ ವ್ಯಾಗನ್)ವನ್ನು, ತನ್ನ ಇಬ್ಬರು ಮಕ್ಕಳನ್ನು ಅದರಲ್ಲಿ ಕೂರಿಸಿಕೊಂಡು 05-08-1888ರಂದು 65 ಮೈಲಿ ಮೈಲಿಯಷ್ಟು(105 ಕಿಲೋಮೀಟರ್) ದೂರಕ್ಕೆ ಚಾಲನೆ ಮಾಡಿದಳು. ಪ್ರಯಾಣದ ಮಧ್ಯೆ ವಾಹನಕ್ಕೆ ಆದ ತೊಂದರೆಗಳನ್ನು ಸಹ ಸರಿಪಡಿಸಿ ತನ್ನ ಚಾಲನಾಪ್ರಯಾಣವನ್ನು ಯಶಸ್ವಿಯಾಗಿ ಪೂರೈಸಿದಳು. ಇದರಿಂದಾಗಿ ಆ ಮೋಟಾರುವಾಹನವನ್ನು ಖರೀದಿಸಲು ಗಿರಾಕಿಗಳು ಸಿಕ್ಕಿದರು ಮತ್ತು ಇದಕ್ಕೆ ಬೌದ್ಧಿಕ ಹಕ್ಕುಸ್ವಾಮ್ಯ(ಪೇಟೆಂಟ್) ದೊರೆಯಿತು! ಇವಳನ್ನು ಮೋಟಾರು ವಾಹನವನ್ನು ಚಾಲನೆ ಮಾಡುತ್ತಾ ದೂರಪ್ರಯಾಣ ಮಾಡಿದ ಪ್ರಪ್ರಥಮ ವ್ಯಕ್ತಿ ಎಂದು ಮನುಕುಲದ ಇತಿಹಾಸ ಗುರುತಿಸುತ್ತದೆ (ಮನುಷ್ಯರ ಇತಿಹಾಸದಲ್ಲಿ ಮೊಟ್ಟ ಮೊದಲು ಮೋಟಾರು ವ್ಯಾಗನ್ ಓಡಿಸಿದ ಹೆಗ್ಗಳಿಕೆ ಅವಳ ಗಂಡ ಕಾರ್ಲ್ ಬೆಂಝ್‌ನದು)! ನಾರಿಯರು ಉತ್ತಮ ವಾಹನ ಸವಾರಿಣಿಯರು ಎಂಬುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕಿಲ್ಲ, ಅಲ್ಲವೆ?

ಭಾರತದ ವಿಷಯಕ್ಕೆ ಬಂದರೆ ನಮ್ಮ ಹಳ್ಳಿಗಳಲ್ಲಿ ಎತ್ತಿನ ಗಾಡಿ ಓಡಿಸಿದ ಮಹಿಳೆಯರ ಉದಾಹರಣೆಗಳು ನಿಜ ಜೀವನದಲ್ಲಿ ಮತ್ತು ಸಾಹಿತ್ಯದಲ್ಲಿ ಕ್ವಚಿತ್ತಾಗಿಯಾದರೂ ಅಲ್ಲಲ್ಲಿ ಸಿಗುತ್ತವೆ. 1900ರಲ್ಲಿ ಮೊಟ್ಟ ಮೊದಲು ಸೈಕಲ್ ಓಡಿಸಿದ ಕಚ್ಚೆಸೀರೆ ಧಾರಿಣಿ ಮಹಿಳೆಯ ಚಿತ್ರವು ಅಂತರ್ಜಾಲದಲ್ಲಿ ಸಿಗುತ್ತದೆ. ಸುಝೇನ್ ಆರ್ ಡಿ ಟಾಟಾ ಎಂಬವರು ಭಾರತದಲ್ಲಿ ಕಾರು ಓಡಿಸಿದ ಮೊದಲ ಮಹಿಳೆಯಂತೆ. ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಗಾಡಿ ಓಡಿಸಿದ ಮೊದಲ ಮಹಿಳೆ ರೋಶ್ನಿ ಶರ್ಮಾ. ಸಾಹಿತಿ ಲಂಕೇಶರು ತಮ್ಮ ಅನುಭವ ಕಥನವೊಂದರಲ್ಲಿ ಹುಡುಗಿಯೊಬ್ಬಳಿಗೆ ತಾವು ಬೈಸಿಕಲ್ ಓಡಿಸಲು ಕಲಿಸಿದ್ದರ ಬಗ್ಗೆ ಬರೆದಿದ್ದಾರೆ. ದೊಡ್ಡ ಟ್ರಕ್ ಓಡಿಸುವ ಕೇರಳದ ಒಬ್ಬ ಹುಡುಗಿಯ ಕತೆಯೊಂದನ್ನು ಅಂತರ್ಜಾಲದ ಮಾಧ್ಯಮಗಳಲ್ಲಿ ನಾನು ಗಮನಿಸಿದ್ದೇನೆ. ತನ್ನ ತಂದೆಯ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಆಸೆಯಿಂದ ಅವರ ಚಾಲನಾಉದ್ಯೋಗ ಮುಂದುವರಿಸಲು ಈ ಕೌಶಲ್ಯವನ್ನು ಕಲಿತವಳು ಆಕೆ. ವಿಮಾನ, ಆಟೋರಿಕ್ಷಾ, ರೈಲು, ಆಂಬುಲೆನ್ಸ್‌ಗಳನ್ನು ಸಹ ಭಾರತ ದೇಶದಲ್ಲಿ ಇಂದು ಹೆಂಗಸರು ಓಡಿಸುತ್ತಿದ್ದಾರೆ.

ಮೇಲ್ಕಂಡ ದಾಖಲೆಗಳನ್ನು ಗೌರವಿಸುತ್ತಲೇ, ದಿನದಿನದ ದಂದುಗವಾದ ವಾಸ್ತವ ಬದುಕನ್ನು ಗಮನಿಸುವಾಗ, ಈ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಉದ್ಯೋಗಿನಿಯರಿಗೆ, ಏಕ ಪೋಷಕಿಯರಾದ ಮಹಿಳೆಯರಿಗೆ ವಾಹನ ಓಡಿಸುವ ಕೌಶಲ್ಯ ಕೊಡುವ ಅನುಕೂಲವು ಗಮನೀಯವಾದುದು.

ಆದಾಗ್ಯೂ `ಹೆಂಗಸರಿಗೆ ಚೆನ್ನಾಗಿ ಗಾಡಿ ಓಡಿಸಲು ಬರುವುದಿಲ್ಲ’ ಎಂಬ ಸಿದ್ಧರೂಪಿ ಸಾಂಪ್ರದಾಯಿಕ ಪೂರ್ವಗ್ರಹ ಈಗಲೂ ಅನೇಕರಲ್ಲಿದೆ. `ಏನಕ್ಕೆ ಬರ್ತೀರಾ ರಸ್ತೆ ಮೇಲೆ? ಮನೆಯಲ್ಲಿ ಅಡಿಗೆ ಮಾಡ್ಕೊಂಡು ಇರಕ್ಕಾಗಲ್ವಾ? ಯಾಕಮ್ಮಾ ಹಾವು ಹೋದಂಗೆ ಹೋಗ್ತೀಯಾ? ನಿಮ್ಗೆಲ್ಲಾ ಯಾರು ಲೈಸೆಸ್ಸ್ ಕೊಡ್ತಾರೋ!’ – ಇಂತಹ ಮಾತುಗಳನ್ನು ಸವಾರಿಣಿಯರು ಕೇಳುತ್ತಾ ಕೇಳುತ್ತಾ ಬೇಸರ ಪಟ್ಟುಕೊಳ್ಳಬೇಕಾಗುತ್ತದೆ. ಈ ಪರಂಪರಾನುಗತ ಸ್ತ್ರೀ ಅಪಮೌಲ್ಯೀಕರಣವು ಇಲ್ಲವಾಗಬೇಕಾದರೆ ಇನ್ನೆಷ್ಟು ಸ್ತ್ರೀಯರು ಇನ್ನೆಷ್ಟು ಗಾಡಿಗಳನ್ನು ಓಡಿಸಬೇಕೊ! ಇಷ್ಟಾಗಿ ಪುರುಷರಿಗಿಂತ ಸ್ತ್ರೀಯರೇ ಸುರಕ್ಷಿತವಾಗಿ ಗಾಡಿ ಓಡಿಸುವವರು ಎಂಬುದನ್ನು ಸಹ ಸಂಶೋಧನೆ ಹೇಳುತ್ತದೆ!

ಇನ್ನು ಚಾಲನೆಯ ಹಿಂದಿನ ತಾತ್ವಿಕತೆಯ ಬಗ್ಗೆ ಮಾತಾಡುವುದಾದರೆ, `ಇನ್ ದ ಡ್ರೈವರ್ಸ್‌ ಸೀಟ್’ ಎಂಬುದು ಇಂಗ್ಲಿಷ್ ಭಾಷೆಯಲ್ಲಿ ಬಹು ಪ್ರಸಿದ್ಧವಾದ ಒಂದು ನುಡಿಗಟ್ಟು. ಬರೀ ಗಾಡಿ ಓಡಿಸುವುದಕ್ಕಲ್ಲ, ಜೀವನಕ್ಕೂ ಅನ್ವಯಿಸುವ ಮಾತು ಇದು. ನಮ್ಮ ಜೀವನವೆಂಬ ವಾಹನದ ಚಾಲಕಪೀಠದಲ್ಲಿ ಯಾರಿದ್ದಾರೆ? ನಾವೋ ಅಥವಾ ಬೇರೆ ಯಾರಾದರೂ ಅಧಿಕಾರಸ್ಥರೋ? ಗಂಡಾಳಿಕೆಯ ಸಮಾಜಗಳಲ್ಲಿ ಹೆಣ್ಣು ತನ್ನ ಜೀವನದ ಚಾಲಕ ಪೀಠದಲ್ಲಿ ಕುಳಿತಿದ್ದು ತೀರಾ ಅಪರೂಪ. ಅವಳು ಏನು ತಿನ್ನಬೇಕು, ಕುಡಿಯಬೇಕು, ಯಾವ ಬಟ್ಟೆ ತೊಡಬೇಕು ಮುಂತಾದ ಸಾಧಾರಣ, ದೈನಿಕ ಸಂಗತಿಗಳಿಂದ ಹಿಡಿದು ಓದು, ಕೆಲಸ, ಮದುವೆ, ಆಸ್ತಿಗಳಿಕೆಗಳಂತಹ ಮುಖ್ಯ ವಿಷಯಗಳ ತನಕ ಮನೆಯ ಗಂಡಸರೋ ಅಥವಾ ಅವರ ಪ್ರತಿನಿಧಿಗಳಾದವರೋ ನಿರ್ಧರಿಸುವ ಕಾಲ ಅನೇಕ ಶತಮಾನಗಳ ತನಕ ಇತ್ತಲ್ಲ? ಈಗಲೂ ಬಹಳಷ್ಟು ಕಡೆಗಳಲ್ಲಿ ಇದೇ ಕ್ರಮವು ಮುಂದುವರಿದಿದೆ.

ರೂಪಕಾತ್ಮಕವಾಗಿ ಹೇಳುವುದಾದರೆ ಹೆಣ್ಣು ಚಾಲಕಪೀಠ ಏರುವುದೆಂದರೆ ತನ್ನ ಜೀವನದ ಗತಿಯನ್ನು ತಾನೇ ನಿರ್ಧರಿಸುವುದು. ಇದು ಭಾಗಶಃ ಆರ್ಥಿಕ ಸ್ವಾತಂತ್ರ್ಯದಿಂದ ಆಗುತ್ತದೆ, ಆದರೆ ಮುಖ್ಯವಾಗಿ ಇದು ಸಾಧ್ಯವಾಗುವುದು ಭಾವನಾತ್ಮಕ ಸ್ವಾತಂತ್ರ್ಯದಿಂದ ಮತ್ತು ಜೀವನದಲ್ಲಿ ಏನೇ ಬಂದರೂ ನಾನು ಎದುರಿಸಬಲ್ಲೆ ಎಂಬ ಧೈರ್ಯದಿಂದ. ತನ್ನ ವಾಹನವನ್ನು ತಾನೇ ಓಡಿಸುವುದು ಅವಳ ಈ ಒಟ್ಟು ಜೀವನಸ್ವಾತಂತ್ರ್ಯದ ಭಾಗವಾಗುತ್ತದೆ.

ಹೆಂಗಸರಿಗಾಗಿ ಹೆಂಗಸರೇ ನಡೆಸುವ ವಾಹನಚಾಲನಾ ತರಬೇತಿ ಕೇಂದ್ರಗಳು, ಹೆಂಗಸರು ಸ್ಥಾಪಿಸಿದ ವಾಹನ ದುರಸ್ತಿ ಗಾಡಿಖಾನೆ ಅಂದರೆ ಗ್ಯಾರೇಜ್‌ಗಳು(ದೂರದರ್ಶನ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ `ಸತ್ಯ’ ಎಂಬ ಧಾರಾವಾಹಿ ನೆನಪಾಗುತ್ತದೆ. ಬೈಕ್ ಓಡಿಸುತ್ತ, ತನ್ನದೇ ಗಾಡಿಖಾನೆ ಇಟ್ಟಿದ್ದ ಒಬ್ಬ ಹೆಣ್ಣುಮಗಳ ಕಥೆ ಅದು), ಕೇವಲ ಹೆಂಗಸರು ಜೊತೆಗೂಡಿ ಹೋಗುವ ವಾಹನಚಾಲನಾ ಪ್ರವಾಸಗಳು – ಇವು ನಮ್ಮ ಭವಿಷ್ಯದ ಕನಸುಗಳು. ವಾಹನ ಸವಾರಿಣಿಯಾದ ನಾರಿ ಅಂದರೆ ತನ್ನ ಜೀವನಕ್ಕೆ ಸ್ವಾತಂತ್ರ್ಯದ ಹೆಚ್ಚಿನ ಮಟ್ಟವೊಂದನ್ನು ಪಡೆದ ನಾರಿ.

About The Author

ಡಾ. ಎಲ್.ಜಿ. ಮೀರಾ

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ  ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ