Advertisement
ನಿಮ್ಮೂರ ದಾರಿಯಲಿ.. ನಮ್ಮನ್ನೇ ಹುಡುಕುತ್ತಾ..: ಬಿ.ಕೆ. ಸುಮತಿ ಲೇಖನ

ನಿಮ್ಮೂರ ದಾರಿಯಲಿ.. ನಮ್ಮನ್ನೇ ಹುಡುಕುತ್ತಾ..: ಬಿ.ಕೆ. ಸುಮತಿ ಲೇಖನ

ಕೆಲವು ಮತ್ತೆ ಮತ್ತೆ ಕಾಡುವ ಊರುಗಳು. ನಾವು ನೋಡದಿದ್ದರೂ ನಮ್ಮೊಳಗೆ ಬೆಳೆದಿರುವಂಥದ್ದು. ಮತ್ತೆ ಕೆಲವು ಕಲ್ಪನೆಗಳು. ಕಲ್ಪನೆಗಳು ನಮ್ಮನ್ನು ಒಂದು ವಿಚಿತ್ರ ಭಾವದಲ್ಲಿ ಸಿಲುಕಿಸುತ್ತವೆ. ರಾಮಾಚಾರಿ ಮತ್ತು ಚಿತ್ರದುರ್ಗ…. ನೋಡಿ. ಅವಿನಾಭಾವ ಸಂಬಂಧಚಿತ್ರದುರ್ಗ ನೋಡದೆ ಇದ್ದರೂ.. ನಾಗರಹಾವು ಮೂಲಕ ನಾವು ಬಂಡೆ, ಬಿಸಿಲು, ನೆರಳಿನ ತಪ್ಪಲನ್ನು ತಪಿಸಿ ಅನುಭವಿಸುತ್ತೇವೆ. ರಾಮಾಚಾರಿ ಮತ್ತು ಚಿತ್ರದುರ್ಗವನ್ನು ಬೇರ್ಪಡಿಸಲು ಸಾಧ್ಯವೇ.. ನಾನು ಬೆಂಗಳೂರಿನ ರಾಮಾಚಾರಿ ಎಂದು ಯಾರಾದ್ರೂ ಹೇಳಿದರೆ.. ಕೂಡಲೇ.. ನಾವು ಅರ್ಥ ಮಾಡಿಕೊಳ್ಳುತ್ತೇವೆ.. ಆಗ ಗುಣ ಗ್ರಾಹಿ ಆಗುತ್ತೇವೆ.
ಬಿ.ಕೆ.ಸುಮತಿ ಬರೆದ ಲೇಖನ

 

ಊರು ಎನ್ನುವುದು ನಮಗೆ ಉಸಿರಿನಷ್ಟೇ ಮುಖ್ಯ. ಎಲ್ಲೇ ಇರಲಿ, ಹೇಗೆ ಇರಲಿ, ನಾವು ಆಡಿ-ಬೆಳೆದ ನಮ್ಮೂರು ನಮಗೆ ಎಂದೂ ಚೆಂದ.

“ನಿಮ್ಮೂರು ಯಾವುದು” ಎಂದು ಶುರುವಾಗುವ ಸಂಭಾಷಣೆ, ‘ನಮ್ಮೂರೇ ಚಂದ’ ಎಂದು ವಾದಕ್ಕೆ ಇಳಿಯುವುದನ್ನು ಕಾಣುತ್ತೇವೆ. ಕೇಳಿರುವ, ಆದರೆ ನಾವು ಕಾಣದಿರುವ ಊರುಗಳ ಬಗ್ಗೆ, ಒಂದು ಅಚ್ಚರಿ, ಕುತೂಹಲ ನಮ್ಮೊಳಗೆ ಸದಾ ಜಾಗೃತವಾಗಿರುತ್ತದೆ. ಊರು ಒಬ್ಬ ವ್ಯಕ್ತಿಯ ಜೀವನದಲ್ಲಿ ಎಷ್ಟು ಮುಖ್ಯ ಅಲ್ಲವೇ..

ಪ್ರತಿಯೊಬ್ಬರೂ ತಮ್ಮ ಬಾಲ್ಯದ ಊರು, ತನಗೆ ಜೀವನ ಕೊಟ್ಟ ಊರು, ಇವುಗಳನ್ನು ಮನದಾಳದ ಬೇರುಗಳಾಗಿ ಪೋಷಿಸಿ ನೀರೆರೆದಿರುತ್ತಾರೆ. ಊರಿನ ಹಂಗು ತೊರೆದವರು, ಊರನ್ನೇ ಉಸಿರಾಗಿಸಿಕೊಂಡವರು, ಊರನ್ನೇ ಬಂಡವಾಳ ಮಾಡಿಕೊಂಡು ಸರಕಾಗಿ ಸಿದವರು, ಕಾಣಿಸುತ್ತಾರೆ.

“ನೀನೊಬ್ಬನೇ ಬಾರೋ ಕರೆ ತರಬೇಡ, ಕಹಿ ನೆನಪನ್ನು”.. ಎಂದು ಹೇಳತ್ತೆ ಹೆಚ್.ಎಸ್. ವೆಂಕಟೇಶ ಮೂರ್ತಿ ಅವರ ಕವನ… ಜಾತಿ, ಕುಲ, ಊರು, ಕೇರಿ, ವಂಶಾವಳಿ ಬೇಡ.. ನೀನೊಬ್ಬ ಬೇಕು ಅಷ್ಟೇ. ಹೆಸರು, ಊರೂ ಕೂಡ ಬೇಡ.. ನಮ್ಮ ಬದುಕಿಗೆ ನಾವಿಕರು ನಾವೇ ಎಂಬ ಅರ್ಥದ್ದು.

ಊರು ಯಾವುದೇ ಇರಲಿ, ಅಲ್ಲಿ ಜನ, ಮನಸು, ಬಂಧನ, ಬಣ್ಣ, ಬೆವರು, ಇದೆ. ಹಾಗಾಗಿಯೇ ನಮಗೆ ಒಂದೊಂದು ಊರು ಒಂದೊಂದು ರೀತಿ ಆಕರ್ಷಿಸುತ್ತದೆ. ಸಾಹಿತ್ಯದಲ್ಲಿ ಕಂಡುಬರುವ ಊರು-ಕೇರಿಗಳು, ಅವುಗಳ ಜೊತೆ ನಮ್ಮ ನಂಟು. ಇವು ಕೂಡ ಒಂದು ವಿಚಿತ್ರ ಬಂಧ.

ಕೆಲವು ಮತ್ತೆ ಮತ್ತೆ ಕಾಡುವ ಊರುಗಳು. ನಾವು ನೋಡದಿದ್ದರೂ ನಮ್ಮೊಳಗೆ ಬೆಳೆದಿರುವಂಥದ್ದು. ಮತ್ತೆ ಕೆಲವು ಕಲ್ಪನೆಗಳು. ಈ ಕಲ್ಪನೆಗಳು ನಮ್ಮನ್ನು ಒಂದು ವಿಚಿತ್ರ ಭಾವದಲ್ಲಿ ಸಿಲುಕಿಸುತ್ತವೆ. ರಾಮಾಚಾರಿ ಮತ್ತು ಚಿತ್ರದುರ್ಗ…. ನೋಡಿ. ಅವಿನಾಭಾವ ಸಂಬಂಧ… ಚಿತ್ರದುರ್ಗ ನೋಡದೆ ಇದ್ದರೂ.. ನಾಗರಹಾವು ಮೂಲಕ ನಾವು ಬಂಡೆ, ಬಿಸಿಲು, ನೆರಳಿನ ತಪ್ಪಲನ್ನು ತಪಿಸಿ ಅನುಭವಿಸುತ್ತೇವೆ. ರಾಮಾಚಾರಿ ಮತ್ತು ಚಿತ್ರದುರ್ಗವನ್ನು ಬೇರ್ಪಡಿಸಲು ಸಾಧ್ಯವೇ..

(ಚಿತ್ರದುರ್ಗದ ಕೋಟೆ-ಕಲ್ಲು)

ನಾನು ಬೆಂಗಳೂರಿನ ರಾಮಾಚಾರಿ ಎಂದು ಯಾರಾದ್ರೂ ಹೇಳಿದರೆ.. ಕೂಡಲೇ.. ನಾವು ಅರ್ಥ ಮಾಡಿಕೊಳ್ಳುತ್ತೇವೆ.. ಆಗ ಗುಣ ಗ್ರಾಹಿ ಆಗುತ್ತೇವೆ. ಚಿತ್ರದುರ್ಗ ನೋಡಿರುವವರು ಗ್ರಹಿಸುವ ಶೈಲಿ ಬೇರೆ. ಬೆಂಗಳೂರು ಅಥವಾ ಧಾರವಾಡ ಮಂದಿ ಗ್ರಹಿಸುವ ಶೈಲಿ ಬೇರೆ. ತ. ರಾ. ಸು. ರಾಮಾಚಾರಿಯನ್ನು ಬೇರೆ ಯಾವುದಾದರೂ ಜಾಗದಲ್ಲಿ ಸೃಷ್ಟಿ ಮಾಡಲು ಆಗುತ್ತಿತ್ತೆ?

ಮಕ್ಕಳು Alice in Wonderland ಓದುವಾಗ… ಎಚ್. ಎಸ್. ವೆಂಕಟೇಶಮೂರ್ತಿ ಕವನದ ಹಾಗೆ. ಶುಭ್ರಾತಿಶುಭ್ರ ಮನಸ್ಥಿತಿಯಲ್ಲಿ ಇರುತ್ತಾರೆ. ಹ್ಯಾರಿ ಪಾಟರ್ ಓದುವಾಗ ಅನುಭವಿಸುವ ರೋಮಾಂಚನ!.. ಅದು ಯಾವ ಊರಾದರೇನು.. ಭಾಷೆ ಯಾವುದಾದರೇನು..ಹಾಗೇ.. ಮಾಲ್ಗುಡಿ ಊರನ್ನು ಯಾರೂ ನೋಡಿಲ್ಲ. ಆದರೆ ಎಲ್ಲರೂ R K ನಾರಾಯಣ್ ತೋರಿಸಿದ ಊರನ್ನು ನೋಡಿದ್ದಾರೆ.. ಕಥೆಗೊಂದು ಊರೋ.. ಅಥವಾ ಊರಿಗೊಂದು ಕಥೆಯೋ..

ಊರುಭಂಗ ಮಾಡುವುದು ಕಷ್ಟ. ಯು. ಆರ್. ಅನಂತಮೂರ್ತಿ ಅವರ ಒಂದು ಕಾದಂಬರಿ ಭಾರತೀಪುರ. ಅವರು ಕಥೆ ಉದ್ದಕ್ಕೂ ಭಾರತೀಪುರ ಎಂದು ಹೇಳಿದರೂ.. ನಮಗೆ ಅದು ಕಲ್ಪಿತ ಊರು ಎನಿಸುವುದಿಲ್ಲ. ಅದು ಇದೇ ಊರು ಎಂದು ಗುರುತಿಸುತ್ತೇವೆ. ಎಷ್ಟು ವಿಚಿತ್ರ ಅಲ್ಲವೇ..

(Alice in Wonderland)

ಪ್ರತಿಯೊಬ್ಬರೂ ತಮ್ಮ ಬಾಲ್ಯದ ಊರು, ತನಗೆ ಜೀವನ ಕೊಟ್ಟ ಊರು, ಇವುಗಳನ್ನು ಮನದಾಳದ ಬೇರುಗಳಾಗಿ ಪೋಷಿಸಿ ನೀರೆರೆದಿರುತ್ತಾರೆ. ಊರಿನ ಹಂಗು ತೊರೆದವರು, ಊರನ್ನೇ ಉಸಿರಾಗಿಸಿಕೊಂಡವರು, ಊರನ್ನೇ ಬಂಡವಾಳ ಮಾಡಿಕೊಂಡು ಸರಕಾಗಿ ಸಿದವರು, ಕಾಣಿಸುತ್ತಾರೆ.

ಚಂದಮಾಮ ಕಥೆಗಳಲ್ಲಿ ಬರುವ ಮಗಧ, ಪಾಂಚಾಲ, ವಿದರ್ಭ, ಕಳಿಂಗ.. ಎಲ್ಲಾ ನಮ್ಮ ನಮ್ಮ ಊಹೆಯಂತೆ. ಕಥೆಗಾರನಿಗೆ ಊರಿನ ಹಂಗು ಇದೆಯೇ..?

ವಿಮರ್ಶಕ ಎಚ್. ಎಸ್. ರಾಘವೇಂದ್ರರಾವ್ ಹೇಳಿದರು.. “ಹಾಗೇನಿಲ್ಲ.. ಕಥೆಯನ್ನು ಎಲ್ಲಿ ಕುಳಿತರಲ್ಲಿ ಕಲ್ಪಿಸುವ ಹಾಗೇ ಇರಬೇಕು. ಊರು ಮತ್ತು ಪಾತ್ರ ಮಾನವೀಯ ಸಂಬಂಧಗಳ ನೆಲೆಗಟ್ಟಿನಲ್ಲಿ ಇದ್ದರೆ, ಸಂಬಂಧ ಸ್ರವಿಸುವ ರಸ ಮುಖ್ಯವೇ ಹೊರತು ಎಲ್ಲಿ ನಡೆಯಿತು ಎಂಬುದಲ್ಲ. ಆದರೆ ಇತಿಹಾಸ ಪ್ರಚೋದಿತ ಕೃತಿಗಳಿಗೆ ಊರು ಮುಖ್ಯ” ಎಂದರು.

ನೇಮಿಚಂದ್ರ ಅವರ ‘ಪೆರುವಿನ ಕಣಿವೆಯಲ್ಲಿ’, ಮಾಸ್ತಿ ಅವರ ‘ಚಿಕ್ಕ ವೀರ ರಾಜೇಂದ್ರ’, ಕೆ ವಿ. ಅಯ್ಯರ್ ಅವರ ‘ಶಾಂತಲೆ’, ‘ಕಿತ್ತೂರು ರಾಣಿ ಚೆನ್ನಮ್ಮ’ ಮುಂತಾದವು, ಊರೇ ಪ್ರಧಾನವಾದವು ಎಂಬಂತದ್ದು.. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’, ‘ಕಾರಂತರ ಮೂಕಜ್ಜಿಯ ಕನಸು’, ಅಥವಾ ‘ಮರಳಿ ಮಣ್ಣಿಗೆ’, ತೇಜಸ್ವಿ ಅವರ ‘ಕರ್ವಾಲೋ’ … ಇವುಗಳಲ್ಲಿ ನಾವು ಏನನ್ನು ಕಲ್ಪಿಸುತ್ತೇವೆ? ಯಾರನ್ನು ನೋಡುತ್ತೇವೆ? ಒಂದು ಕಥೆಗೆ ನಿರ್ದಿಷ್ಟ ಊರು ಗುರುತಿಸುವುದು ಲೇಖಕ. ಓದುಗನಿಗೆ ಅದು ಎಷ್ಟು ಮುಖ್ಯ?

ನನ್ನ ಕಥೆ ಮೂಡಿಗೆರೆಯಲ್ಲಿ ಮಾತ್ರ ನಡೆಯುತ್ತದೆ ಎಂದು ತೇಜಸ್ವಿ ಹೇಳಿದರೆ ಅದರ ಸಾರ್ವಭೂಮಿಕಾ ವಲಯ, ಮಿತಿಗೆ ಒಳಪಡುತ್ತದೆ. ಭೈರಪ್ಪ ಅವರ ಸಕಲೇಶಪುರ, ಸಮೀಪದ ಹೆಸರು ಹೊತ್ತ ಹಳ್ಳಿಗಳು ನಮ್ಮ ಮನದಲ್ಲಿ ಹೇಗೆ ಅರಳುತ್ತವೆ?

“ನನ್ನ ಕಾದಂಬರಿಯ ಭಾವ ಪ್ರಪಂಚಕ್ಕೆ ಸೇರಿದ ಹನೆಹಳ್ಳಿ, ದಾದರ್, ಮುಂಬೈ, ವಡಾಲ, ಗಿರ್ಗಾಂವ್, ಮೊದಲಾದ ದಿವ್ಯ ಹೆಸರು ಹೊತ್ತ ಭೂ ಪ್ರದೇಶ ಇಂದು ವಾಸ್ತವ ಜಗತ್ತಿನಲ್ಲಿ ನೋಡಲು ಸಿಗುವುದು ಒಂದು ಅತ್ಯದ್ಭುತ ಆಕಸ್ಮಿಕ” ಎನ್ನುತ್ತಾರೆ ಯಶವಂತ ಚಿತ್ತಾಲರು.. ಚಿಂತನೆ ವಿಸ್ತಾರಗೊಳ್ಳುತ್ತ ಸಾಗುತ್ತದೆ. ಊರು ಮನುಷ್ಯನ ಹಾಗೇ. ಇತಿ ಮಿತಿ ಹೊತ್ತು ನಮ್ಮನ್ನು ನಡೆಸುತ್ತದೆ.

ಜಯಂತ ಕಾಯ್ಕಿಣಿ ಅವರ ಮುಂಬೈ ಕಥೆಗಳನ್ನು ಓದಿ ಆ ಪ್ರದೇಶ ನೋಡಲು ಹುಡುಕಿ ಹೋದವರು ಇದ್ದಾರೆ. ಒಮ್ಮೆ ಮುಂಬೈ ನೋಡಬೇಕು ಎಂದು ಕನವರಿಸುತ್ತಾ ಅದನ್ನು ಕಲ್ಪನೆಗೆ ಅಳವಡಿಸಿಕೊಂಡವರಿದ್ದಾರೆ..” ಇದೇ ಇದೇ ಅವರು ಹೇಳಿದ್ದು” ಎಂದು ಆನಂದಿಸಿದವರು ಇದ್ದಾರೆ. ಮುಂಬೈ ಬಿಟ್ಟು ಈ ಕಥೆ ಊಹಿಸಲು ಸಾಧ್ಯವೇ..? ಮುಲುಂಡಿಯ ಲಾಲ್ ಬಹಾದ್ದೂರ್ ರಸ್ತೆ, ಬೆಂಗಳೂರಿನ ಗಾಯನ ಸಮಾಜ ರಸ್ತೆ ಆಗುತ್ತದೆಯೇ? ಶಿವಾಜಿ ಪ್ರತಿಮೆ ಕೆಂಪೇಗೌಡನ ಪ್ರತಿಮೆ ಎಂದು ಊಹಿಸಲು ಆಗುತ್ತದೆಯೇ..

(ಪೆರು)

“ನಮಗೆ ಪಾತ್ರ ಮುಖ್ಯ, ಭಾವ ಮುಖ್ಯ” ಎಂದರು ಯುವ ಕವಯತ್ರಿ ನಾಗಶ್ರೀ. “ಸಂವೇದನೆ ಮುಖ್ಯ ಆದಾಗ ಸ್ಥಳ ಬೇಕಾಗಿಲ್ಲ, ಅದು ಸೃಷ್ಟಿಕರ್ತನ ಕಥನ.. ಆತನ ಪ್ರಾದೇಶಿಕ ಅಗತ್ಯ ” ಎನ್ನುವುದು ಮತ್ತೋರ್ವ ಕತೆಗಾರ್ತಿಯ ಅನಿಸಿಕೆ.

“ಊರೇ ಏಕೆ.. ಕಥೆಗಳಲ್ಲಿ ಬರುವ ಆಸ್ಪತ್ರೆ, ರಂಗಮಂದಿರ, theater ಎಲ್ಲವನ್ನೂ ನಾವು ನೋಡಿರುವಂಥದ್ದಕ್ಕೆ ಕಲ್ಪಿಸು ತ್ತೇವೆ. ಬೆಟ್ಟ, ಗುಡ್ಡ, ನದಿ ಕೂಡ. ಸೌಂದರ್ಯ ಎಂದಾಗ ಅವರವರ ಕಣ್ಣಿಗೆ ಎನ್ನುತ್ತೇವಲ್ಲ, ಹಾಗೇ..” ಅಂದವರು ಓದುಗ ನಾಗರಾಜ್.

ಕಥೆಯು ಊರಿನ ಒಳಗೋ.. ಊರು ಕಥೆಯ ಒಳಗೊ. ಊರು ಕಥೆಗಳೆರಡೂ ನಮ್ಮೊಳಗೋ. ನಾವು ಲೇಖಕನ ಒಳಗೋ, ಲೇಖಕ ನಮ್ಮೊಳಗೋ.. ಲೇಖಕ ನಾವು ಎರಡೂ ಊರೊಳಗೋ… ನಿಮ್ಮೂರೆ ನಮ್ಮೂರು, ನಿಮ್ಮೋರೆ ನಮ್ಮೋರು.. ಎಂಬ ಆಪ್ತ ಮನಸು, ಚಿತ್ರ ಚೈತ್ರ ಮೂಡಿಸಲಿ. ವಿಶ್ವವೇ ನಮ್ಮೂರಾಗಲಿ. ನಮ್ಮೂರೇ ವಿಶ್ವವಾಗಲಿ.

About The Author

ಬಿ.ಕೆ. ಸುಮತಿ

ಬಿ.ಕೆ. ಸುಮತಿ ಆಕಾಶವಾಣಿಯಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿರೂಪಣೆ, ಭಾಷೆ, ಸಾಹಿತ್ಯ ಕುರಿತ ಹಲವು ಲೇಖನಗಳನ್ನು ಬರೆದಿದ್ದಾರೆ.. ‘ನಿರೂಪಣೆ, ಮಾತಲ್ಲ ಗೀತೆ’ ಇವರ ಪ್ರಕಟಿತ ಪುಸ್ತಕ.

2 Comments

  1. Sarayu

    ಚೆಂದದ ಲೇಖನ ಸುಮತಿ. ನನ್ನ ಮನಸಿನಲ್ಲಿರುವುದನ್ನೇ ಬರೆದಿದ್ದೀರೇನೋ ಅಂತ ಅನ್ನಿಸ್ತು.

    ನಾನು ಪಕ್ಕಾ ಬೆಂಗಳೂರಿನವಳು. ಇತ್ತೀಚೆಗೆ ಕೆಲವು ಲೇಖಕರು ಬೆಂಗಳೂರಿನ ಬಗ್ಗೆ ಕೇವಲವಾಗಿ ಬರೆದಿದ್ದನ್ನು ಓದಿ ಸಿಟ್ಟೇ ಬಂದಿತ್ತು ಹಾಗೂ ಮನಸ್ಸಿಗೆ ಬೇಸರವಾಗಿದ್ದೂ ನಿಜ. ಯಾಕಿವರುಗಳು ಹೀಗೆ, ಬೆಂಗಳೂರಿನಲ್ಲಿ ನೆಲೆಸಿ, ಇಲ್ಲಿಯ ಸವಲತ್ತುಗಳನ್ನೆಲ್ಲ ಉಪಯೋಗಿಸಿ ದೊಡ್ಡ ಹೆಸರು ಮಾಡಿ ಅಭಿವೃದ್ದಿ ಹೊಂದಿ ಇನ್ನೇನೆಲ್ಲ ಆದರೂ ಬೆಂಗಳೂರನ್ನು ತೆಗಳುತ್ತಾ ನಮ್ಮೋರೇ ಚೆಂದ ಎಂದು ಬಡಾಯಿ ಕೊಚ್ಚುತ್ತಾರೆ. ಇಂತಹವರು ಆ ಪರಿ ಚೆಂದದ ತಮ್ಮೊರಿನಲ್ಲೇ ಇದ್ದು, ತಮ್ಮ ಮಕ್ಕಳನ್ನು ಅಲ್ಲಿಯೇ ಓದಿಸಿ, ಬೆಳೆಸಿ ಊರನ್ನು ಇನ್ನಷ್ಟು ಹಾಡಿ ಹೊಗಳುತ್ತಾ ಅಲ್ಲೇ ಇರಲಿ ಎಂದನಿಸದೆ ಇದ್ದಿಲ್ಲ,ಇದೆಲ್ಲ ಭಾವನೆಗಳಿಗೂ ಕಳಶವಿಟ್ಟಂತಿದೆ ನಿಮ್ಮ ಲೇಖನ.

    ಕತೆಗಾರನಿಗೆ ಊರಿನ ಹಂಗಿದೆಯೇ ಎನ್ನುವ ಪ್ರಶ್ನೆಗೆ ವಿಮರ್ಶಕ ರಾಘವೇಂದ್ರರ ಅಭಿಪ್ರಾಯವನ್ನು ನಾನೂ ಅನುಮೋದಿಸುತ್ತೀನಿ. ಕತೆಯ ಶೀರ್ಷಿಕೆಯೂ ಸಹ ಸೂಕ್ತವಾಗಿದೆ. ಹಾಗೆಯೇ ಲೇಖನದ ಕೊನೆಯಲ್ಲಿ ನೀವು ಬರೆದಂತೆ ವಿಶ್ವವೇ ನಮ್ಮೂರಾಗಲಿ , ನಮ್ಮೂರೇ ವಿಶ್ವವಾಗಲಿ ಎನ್ನುವ ಮಾತು ತುಂಬಾ ಇಷ್ಟವಾಯ್ತು.

    ಹೀಗೆ ಬರೆಯುತ್ತಿರಿ

    Reply
  2. ಶ್ರೀಧರ

    ಅರ್ಥಪೂರ್ಣ ಬರಹ. ನಾವು ಎಲ್ಲೇ ಇದ್ದರೂ ನಮ್ಮದೆಂಬ ನೆಲೆಯನ್ನು ಕಲ್ಪಿಸದ ನಮ್ಮ ಅಸ್ಮಿತೆ ಇರುತ್ತದೆ ಎಂದು ನನಗೆ ಊಹಿಸಲೂ ಸಾಧ್ಯವಿಲ್ಲ. ನಾನು ಕನಸು ಕಾಣುವಾಗ ಸಹಾ ನನ್ನದು ಎಂಬ ಒಂದೇ ನೆಲೆ ನಿರಂತರವಾಗಿರುವುದು ನನ್ನ ಜೊತೆ ಇರುತ್ತೆ ಎಂಬ ನಂಬಿಕೆ ನನ್ನದು. ಅದೊಂದು ರೀತಿ ಒಂದೇ ರಂಗದ ಮೇಲೆ ವಿಧ ವಿಧ ಪರದೆಗಳು ಸರಿದುಹೋಗುವ ಹಾಗೆ.

    ನಾನು 1983ರ ಸಮಯದಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕನ್ನಡದ ಹಲವು ಭಾಗಗಳಲ್ಲಿ ಸಂಚರಿಸಿದಾಗ ಈ ಜಾಗಗಳನ್ನೆಲ್ಲ ಬೆಟ್ಟಗುಡ್ಡಗಳನ್ನೆಲ್ಲ ಎಲ್ಲೋ ನೋಡಿದ್ದೇನೆ ಅನಿಸುತ್ತಿತ್ತು. ನಿಜವೇನೆಂದರೆ ನಾನು ಅಲ್ಲಿಯವರೆಗೆ ಪ್ರಯಾಣವೇ ಹೋಗಿರಲಿಲ್ಲ. ಆಗ ನನಗೆ ಅರಿವಿಗೆ ಬಂದಿದ್ದು, ಓಹ್ ಇದೆಲ್ಲ, ನಾನು ನೊಡುತ್ತಿರುವುದೆಲ್ಲ ಕಾರಂತರ ಕಾದಂಬರಿಗಳನ್ನು ಓದಿದಾಗ ನನ್ನ ಸ್ಮೃತಿಯಲ್ಲಿ ದಾಖಲಾಗಿರುವ ಚಿತ್ರಗಳೊಂದಿಗಿನ ತುಲನೆ ಎಂದು.

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ