`ನಿಯುಕ್ತಿ ಪುರಾಣ’ದ ಕೃತಿಕಾರ ಮೈಸೂರು ಒಡೆಯರ ಚರಿತ್ರೆಯ ಕೆಲವು ಅಂಗಗಳನ್ನು ಅಥವಾ ಮುಖ್ಯ ಅಂಶಗಳನ್ನು ಇಟ್ಟುಕೊಂಡು ಅದಕ್ಕೆ ಕಲ್ಪನೆಯಿಂದ ರಕ್ತಮಾಂಸವನ್ನು ತುಂಬಿದ್ದಾರೆ. ಹದಿನೈದು, ಹದಿನಾರು ಮತ್ತು ಹದಿನೇಳನೇ ಶತಮಾನದ ಮಹಿಷೂರಿನ ನಾಲ್ವಡಿ ಚಾಮರಾಜ ಒಡೆಯರು, ಐಮಡಿ ಚಾಮರಾಜ ಒಡೆಯರು ಮತ್ತು ರಾಜ ಒಡೆಯರ ಬದುಕನ್ನು ಬೋಳೊಡೆಯ, ಬೆಟ್ಟದೊಡೆಯ ಮತ್ತು ಮುನ್ನೊಡೆಯ ಎನ್ನುವ ಆಡು ಹೆಸರುಗಳನ್ನು ನೀಡಿ ಅವರ ಮೂಲಕ ಪುರಾಣವನ್ನು ಪೌರಾಣಿಕ, ಕಾಲ್ಪನಿಕ, ಜಾನಪದ ಮತ್ತು ಐತಿಹಾಸಿಕ ನೆಲೆಗಳಲ್ಲಿ ಪೋಣಿಸಿ ಕಥನವಾಗಿಸಿದ್ದಾರೆ.
ನಾಗರಾಜ ವಸ್ತಾರೆ ಕಾದಂಬರಿ “ನಿಯುಕ್ತಿ ಪುರಾಣ”ದ ಕುರಿತು ದೀಪಾ ಫಡ್ಕೆ ಬರಹ

ಇತಿಹಾಸದ ಮಡಿಲು ತುಂಬ ಕತೆಗಳ ಬೀಜದುಂಡೆಗಳು. ಒಂದೊಂದು ಬೀಜದುಂಡೆಯಲ್ಲಿ ಹತ್ತಾರು ಬೀಜಗಳು, ಬೀಜದೊಳಗೆ ಸಾವಿರಾರು ಬೀಜಗಳು. ಅಲ್ಲಮನ ಬೀಜದೊಳಗಿನ ವೃಕ್ಷ ಎನ್ನುವ ಸಾಲುಗಳು ಬಿಂದುವಿನೊಳಗೆ ಅಡಗಿರುವ ಸಿಂಧುವನ್ನು ತೋರುವಂತೇ ಈ ಬೀಜದುಂಡೆಗಳು ಪ್ರಕೃತಿಯ ನಿರಂತರತೆಗೆ ಅದೆಷ್ಟು ಮಹತ್ವವೆಂಬುದನ್ನು ಅರ್ಥೈಸಬಹುದು. ಈ ಬೀಜದುಂಡೆಗಳು ಪ್ರಕೃತಿಯ ಅತ್ಯಂತ ಮಹತ್ವದ ರಾಯಭಾರಿಗಳು. ಪ್ರಮುಖ ತಳಿಗಳ ಬೀಜಗಳನ್ನು ಇವು ಸಂರಕ್ಷಿಸಿ ಇಡುತ್ತವೆ. ಮಾತ್ರವಲ್ಲದೇ ತೇವ ಸಿಕ್ಕಿದೊಡನೇ ಚಿಗುರಲು ಆರಂಭಿಸುತ್ತವೆ. ಇತಿಹಾಸದ ಕೆಲವು ಕೊಂಡಿಗಳು ಹೀಗೆ ಬೀಜದುಂಡೆಗಳಂತೆ! ಕಾಯುತ್ತಿರುತ್ತವೆ, ಕಾಯಕಲ್ಪಕ್ಕೆ! ಅಂದರೆ ಈ ಕೊಂಡಿಗಳು ಎಲ್ಲ ಕಾಲದಲ್ಲಿಯೂ ಬಿದ್ದುಕೊಂಡಿರುತ್ತವೆ. ನಾವೆಲ್ಲರೂ ಅವುಗಳನ್ನು ನಿತ್ಯವೂ ನೋಡಿಕೊಂಡೇ ಮುಂದೆ ಹೋಗುತ್ತೇವೆ. ದಾಟಿಕೊಂಡೇ ನಡೆಯುತ್ತೇವೆ. ಆದರೆ ಅವುಗಳನ್ನು ಗಮನಿಸಿರುವುದಿಲ್ಲ! ಆದರೆ ಆಕಸ್ಮಿಕವೆನ್ನುವಂತೇ ಒಬ್ಬನ ಕಣ್ಣಿಗೆ ಈ ಕೊಂಡಿ ನಮ್ಮ ಕಣ್ಣಿಗೆ ಕಂಡಂತೇ ಕಾಣುತ್ತದೆ, ಆದರೆ ಅವನೊಳಗಿರುವ ತಲ್ಲಣಕ್ಕೆ ಅದು ಕತೆಯಾಗಿ ಕಾಣುತ್ತದೆ. ಕೊಂಡಿಯೊಳಗಿದ್ದ ಕತೆಯ ನಿರೂಪ ಅವನಿಗೆ ಸೂಕ್ಷ್ಮವಾಗಿ ಮುಟ್ಟಿರುತ್ತದೊ!

(ನಾಗರಾಜ ವಸ್ತಾರೆ)

ಆಕಸ್ಮಿಕ ಮತ್ತು ವಿಧಿ ಎಂದರೆ ಒಂದೇನಾ! ಅಥವಾ ನಾವು ಹಾಗೇ ತಿಳಿಯುತ್ತೆವೆಯೊ! ಕತೆಗಾರ ಒಂದು ಕತೆಯನ್ನು ಆಯ್ಕೆ ಮಾಡುತ್ತಾನೋ ಅಥವಾ ಒಂದು ಕತೆ ಕತೆಗಾರನನ್ನು ಆಯ್ಕೆ ಮಾಡುತ್ತದೊ! ಕೊಂಡಿಗಳಿಗೆ ಸ್ವಲ್ಪ ತೈಲವನ್ನೆರೆದಾಗ ಅದು ಹಿಡಿದಿದ್ದ ಕೀಲನ್ನು ಕಳಚಿಕೊಂಡು, ಅದರ ಬಿಗಿಯನ್ನು ಬಿಟ್ಟುಕೊಂಡು ಬಾಗಿಲನ್ನು ತೆರೆಯಲು ಅನುಕೂಲವಾಗುತ್ತದೆ. ಬಾಗಿಲು ತೆರೆದು ಒಳ ಹೊಕ್ಕು ಹೊರಗನ್ನು ಮರೆತರೆ ಅಲ್ಲಿ ಇತಿಹಾಸ ವರ್ತಮಾನವಾಗಿ ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ನಿಯುಕ್ತಿ ಪುರಾಣವೆಂಬ ಕೃತಿ ಇದನ್ನೇ ಮಾಡುತ್ತಾ ಹೋಗಿದ್ದು. ಅದು ಬಾಗಿಲು ತೆರೆದು ಒಳ ಕರೆದುಕೊಂಡು ಹೋಗಿ, ಹೊರಗಿನ ಕಾಲವನ್ನು ಮರೆಸಿ ನೂರಾರು ವರುಷಗಳ ಹಿಂದಿನ ಮಹಿಷೂರಿನಲ್ಲಿ ನಿಲ್ಲಿಸಿತು. ಒಡೆಯರ ಹೆಜ್ಜೆಗಳನ್ನು ತೋರಿಸಿತು. ಒಡತಿಯರ ಹೆಜ್ಜೆಗಳನ್ನೂ ಜೊತೆಗೇ ಅರುಹಿತು. ಒಟ್ಟಿನಲ್ಲಿ ನಿರುಕ್ತಿ ಪುರಾಣ, ವಾಸ್ತುಶಿಲ್ಪಿ ನಾಗರಾಜ ವಸ್ತಾರೆಯವರ ಅತ್ಯಂತ ಸೊಗಸಾದ ಅಕ್ಷರ ಶಿಲ್ಪವಾಗಿ ತೋರುತ್ತದೆ. ಮಹಿಷೂರು, ತನ್ನ ಕತೆಯನ್ನು ಹೇಳಲು ಕೃತಿಕಾರನನ್ನು ಹೀಗೆ ನಿಯುಕ್ತಿಗೊಳಿಸಿದಂತೇ ಭಾಸವಾಗುತ್ತದೆ. ಮೈಸೂರು, ನಾನು ಮೂರು ದಶಕಗಳಿಂದ ವಾರಕ್ಕೊಮ್ಮೆಯಾದರೂ ಭೇಟಿ ನೀಡುವ ಊರಾಗಿದೆ. ಹೆತ್ತವರು, ಅಕ್ಕ, ಅಣ್ಣ, ಗೆಳತಿ ಎಲ್ಲರೂ ನೆಲೆಯಾದ ಈ ಊರು ಒನ್ನಮೂನೆ ತವರಿನಂತೇ ಎನ್ನಲಡ್ಡಿಯಿಲ್ಲ. ಆದ್ದರಿಂದ ಮಹಿಷೂರಿನ ಕತೆ ಹೇಳಿದ ಈ ನಿಯುಕ್ತಿ ಪುರಾಣ ನನ್ನೊಳಗೆ ಮೂಡಿಸಿದ ಭಾವವನ್ನು, ಅಕ್ಷರದಲ್ಲಿ ಕಟ್ಟಿ ಕೊಡುವುದು ಕಷ್ಟದ ವಿಚಾರವಾದರೂ ಮುಂದಿನದು ನಿಯುಕ್ತಿ ಪುರಾಣವೇ ಬರೆಸಿದ ನನ್ನೊಳಗಿನ ಮಾತುಗಳಾಗಿವೆ.

ಒಡತಿಯರ ಹೆಜ್ಜೆಗಳನ್ನು ಎಂದು ಪ್ರತ್ಯೇಕವಾಗಿ ಹೇಳಲೂ ಒಂದು ಕಾರಣವಿದೆ. ಪಂಪಭಾರತದ ಒಂದು ಆವೃತ್ತಿ ಓದುತ್ತಿದ್ದಾಗ ಅಲ್ಲಿ ಅರಿಕೇಸರಿಯ ವಂಶವೃಕ್ಷದ ಪರಿಚಯವಿತ್ತು. ಈ ಮಹತ್ವದ ವಂಶ ಎಲ್ಲಿಂದ, ಯಾರಿಂದ ಆರಂಭವಾಯಿತು ಎನ್ನುವ ವಿವರ ತಿಳಿಸುವ ವಂಶಾವಳಿ ನೋಡುತ್ತಿದ್ದಾಗ ಒಮ್ಮೆ ಮನಸ್ಸು ಕುಟುಕಿದಂತಾಗಿತ್ತು. ಕಾರಣ, ಅಲ್ಲಿ ಒಂದನೇ ನರಸಿಂಹ, ಎರಡನೇ ನರಸಿಂಹ (ಹೆಸರುಗಳು ಬೇರೆ ಇದ್ದಿರಲೂಬಹುದು) ಹೀಗೆ ಅರಿಕೇಸರಿಯ ತಾತ ಮುತ್ತಾನರ ಹೆಸರುಗಳು ರಾರಾಜಿಸುತ್ತಿದ್ದವು. ಒಮ್ಮೆ ಆಶ್ರ‍್ಯವಾಯ್ತು! ಇವರೆಲ್ಲರೂ ಅವತಾರ ಪುರುಷರೇ ಅಥವಾ ಉದ್ಬವ ವ್ಯಕ್ತಿಗಳೇ ಎಂದು. ಮನುಷ್ಯ, ಅವ ಆಳಿರಲಿ ಅರಸನಿರಲಿ ಭೂಮಿ ಮೇಲೆ ತಾಯಿ ತಂದೆಯರಿಂದಲೇ ಹುಟ್ಟಿ, ತಾಯಿಂದಲೇ ಜನಿಸಿ ಪ್ರಪಂಚ ಕಂಡವನು. ಅಲ್ಲಿ ಆ ವಂಶಾವಳಿಯಲ್ಲಿ ಪಂಪಭಾರತದ ನಾಯಕ ಅರಿಕೇಸರಿಯಾದ ಕಾರಣ ಅವನ ಹೆತ್ತಮ್ಮನ ಹೆಸರು ಬಿಟ್ಟರೆ ಬೇರೆ ಹೆಂಗಸರ ಅರ್ಥಾತ್ ಅಜ್ಜಿ, ಮುತ್ತಜ್ಜಿಯರ ಹೆಸರು ಕಂಡಿರಲಿಲ್ಲ. ಅಥವಾ ನಾನು ಓದಿದ ಕೃತಿಯಲ್ಲಿ ಕಂಡಿರಲಿಲ್ಲ. ಎಷ್ಟೆಂದರೂ ಇತಿಹಾಸ ಬರೆದವನು, ಬರೆಯಿಸಿದವನೂ ಗಂಡಲ್ಲವೇ! ಆದರೆ ಈ ಕಾಲದಲ್ಲಿ ಸಮಾಜದ ಅರ್ಥಾತ್ ಗಂಡಸಿನ ಮನಸ್ಸು ಒಂದಷ್ಟು ಉತ್ತಮ ಬದಲಾವಣೆಗಳಿಗೆ ತೆರೆದುಕೊಂಡಿದೆ. ನೈಜ ಗಂಡು ತನ್ನ ಅಸ್ತಿತ್ವದ ನೈಜ ತಿಳಿವಳಿಕೆಯನ್ನು ಪಡೆಯುತ್ತಿದ್ದಾನೆ. ತನ್ನ ಅಸ್ತಿತ್ವದ ಅರ್ಧಭಾಗ ತಾಯಿಯದು ಎನ್ನುವ ಅರಿವು ವಿಕಾಸಗೊಂಡ ಕೆಲವು ಗಂಡಸರು ಅದಕ್ಕೆ ಸರಿಯಾಗಿ ನಡೆದುಕೊಳ್ಳುತ್ತಿದ್ದಾರೆ. ವಸ್ತಾರೆಯವರು ಮಹಿಷೂರಿನ ಒಡೆಯರ ಅಂತಃಪುರವನ್ನು ಬೆಳಗಿದ ಎಲ್ಲಾ `ಅಮ್ಮಣ್ಣಿ’ಯರ ಪರಿಚಯವನ್ನು ನೀಡಿದ್ದಾರೆ (ಮಹಿಷೂರಿನ ಅರಸರ ಪಟ್ಟದರಾಣಿ ಸೇರಿದಂತೇ ಪತ್ನಿಯರನ್ನು ಅವರ ಹೆಸರಿನೊಂದಿಗೆ ಅಮ್ಮಣ್ಣಿ ಸೇರಿಸುವುದು ವಾಡಿಕೆ).

ಮೈಸೂರು ಅಥವಾ ಮಹಿಷೂರು ಅನಾದಿ ಕಾಲದಿಂದಲೂ ಅನೇಕ ನೆಲೆಗಳಲ್ಲಿ ವಿವಿಧ ಸ್ತರಗಳಲ್ಲಿ ಅಸ್ತಿತ್ವ ಕಂಡುಕೊಂಡ ನಾಡು. ಮೈಸೂರು ಸಂಸ್ಥಾನ, ಮೈಸೂರು ನೃತ್ಯ ಶೈಲಿ, ಮೈಸೂರು ವರ್ಣಚಿತ್ರ ಶೈಲಿ, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದೆಲೆ, ಮೈಸೂರು ಕನ್ನಡ ಭಾಷೆ ಅಲ್ಲದೇ ಸಶಕ್ತವಾದ ಜನಪದ ಪರಂಪರೆ ಹಾಗೂ ವೈಭವದ ದಸರೆಯಿಂದ ರಾಜ್ಯ, ರಾಷ್ಟ್ರದಲ್ಲಿ ಮಹತ್ವದ ಛಾಪನ್ನು ಬಿತ್ತಿ, ಆ ಛಾಪನ್ನು ಉಳಿಸಿಕೊಂಡ ನಾಡು. ಆದರೆ `ಜಗತ್ತೇ ಒಂದು’ ಎಂದಾಗಿರುವ ವ್ಯವಧಾನವಿಲ್ಲದ ಈ ಹೊತ್ತಿನಲ್ಲಿ ಮೈಸೂರು ಕೇವಲ ದಸರೆಯ ಹೊತ್ತಿನಲ್ಲಷ್ಟೇ ಜಗಮಗಿಸಿ ನವರಾತ್ರಿಯ ಹೊತ್ತಿನಲ್ಲಿ ಜಗದಗಲದ ಜನ ಬಂದು ನೋಡಿ, ಹಾಡಿ ಕುಣಿದು ಕುಪ್ಪಳಿಸಿ ಮುಂದೆ ನಡೆಯುವಂತೇ ಆಗಿದೆ. ಅಂದರೆ ಜನ ಮರುಳೋ ಜಾತ್ರೆ ಮರುಳೋ ಎಂದು ತಲೆ ತಿರುಗಿಸಿಕೊಂಡು ಬದುಕುತ್ತಿರುವವರಿಗೆ `ಇದೋ ನೋಡಿ, ನಮ್ಮ ನಾಡು ರಾಜ್ಯವಾಗುವ ಮೊದಲು ಇಂತಿಂಥ ನಡೆಗಳಲ್ಲಿ ಹಾದು ಬಂದಿದೆ. ತಲಕಾಡು ಮರಳಾಗಲಿ, ಮಾಲಂಗಿ ಮಡುವಾಗಲಿ ಎನ್ನುವ ಘನಘೋರ ಮಾತಿನ ಕತೆಯ ಹಿಂದೆ ಅಲಮೇಲು, ರಂಗನಾಯಕಿ ಎನ್ನುವ ರಾಣವ್ವೆಯರ ಕಣ್ಣು ಕೋರೈಸಿದ ಮೂಗು ಬಟ್ಟುಗಳ ಪುರಾಣವಿದೆ’ ಎಂದ ನಿಯುಕ್ತಿ ಪುರಾಣ, ನಮ್ಮನ್ನು ಮೆಲ್ಲ ಮೆಲ್ಲನೇ ಆವರಿಸಿಕೊಳ್ಳುತ್ತದೆ.

`ನಿಯುಕ್ತಿ ಪುರಾಣ’ದ ಕೃತಿಕಾರ ನಾಗರಾಜ ವಸ್ತಾರೆಯವರು ಹೇಳುವಂತೆ ಇದು ಮೊದಲ ಕಂತು. ಮುಂದೆ `ಪ್ರಯುಕ್ತಿ ಪುರಾಣ’ ಹಾಗೂ `ಸಂಯುಕ್ತಿ ಪುರಾಣ’ಗಳು ಬರಲಿವೆ ಎಂದೆನ್ನುತ್ತಾ ಕನ್ನಡ ನಾಡಿನ ಇತಿಹಾಸಕ್ಕೆ ಕನ್ನಡಿ ಹಿಡಿಯುವ ಕೆಲಸ ಇನ್ನೂ ನಡೆದೇ ಇದೆ ಎಂದು ಅರುಹಿ ಬಿಟ್ಟಿದ್ದಾರೆ. ನಿಜ, ಮಹಿಷೂರಿನ ಪುರಾಣ ಒಂದು ಸಂಪುಟದಲ್ಲಿ ಕಡಿದು ಕೊಡುವುದು ಕಷ್ಟಸಾಧ್ಯವೇ!

ಮೈಸೂರಿನಲ್ಲಿ ಅಸ್ಖಲಿತ ಶಿಷ್ಟ ಕನ್ನಡದ ಸಾಹಿತ್ಯದಷ್ಟೇ ಸಶಕ್ತವಾಗಿ ಅಲ್ಲಿ ಮನುಮುಟ್ಟುವ ಜನಪದ ಸಾಹಿತ್ಯವಿದೆ. ಬೆಟ್ಟ ಬೆಟ್ಟಗಳ ಬದುಕು ಹಾಡಾಗಿ ಹರಿದಿದೆ. ಜನರ ಮಾತಾಡುವ ಎರಡೂ ಆಡುಭಾಷೆಗಳು ಇಲ್ಲಿ ಸರಿಸಮನಾಗಿ ಉಸಿರಾಡುತ್ತಿವೆ. ಇಲ್ಲಿನ ಜನಜೀವನದ ಮುಖ್ಯ ಭಾಗದಲ್ಲಿ ಚಾಮುಂಡಿ ಬೆಟ್ಟ ಮಹತ್ವದ ಭಾಗವಾಗುತ್ತದೆ. ಆಸ್ತಿಕರಿಗೊಂದು ನೆಲೆಯಲ್ಲಿ ಈ ಬೆಟ್ಟ ದಕ್ಕಿದರೆ ನಾಸ್ತಿಕರಿಗೆ ಬೆಟ್ಟವೇರುವ ಸಾಹಸದಲ್ಲಿ ಬೆಟ್ಟ ದಕ್ಕುತ್ತಿದೆ. ಹಾಗೆ ನೋಡಿದರೆ ಧಾರ್ಮಿಕತೆಯೂ ಒಂದು ಸಾಹಸವೇ. ಕಾಣದ್ದನ್ನು ಊಹಿಸಿ ಪೂಜೆ ಮಾಡುವ, ಆರಾಧಿಸುವ ಕೆಲಸವೇನು ಸಾಮಾನ್ಯವೇ! ಹಾಗೇ ಸಮಾಜವಾದ ಮತ್ತು ಧಾರ್ಮಿಕವಾದ ಇಲ್ಲಿ ಜೊತೆಯಾಗಿ ಬದುಕುತ್ತದೆ. ಜನರನ್ನು ಬೆಟ್ಟದ ಮೇಲೊಬ್ಬಳು ಒಂದು ರೀತಿಯಲ್ಲಿ ಹರಸುತ್ತಾ ಪೊರೆಯುತ್ತಿದ್ದರೆ ಬೆಟ್ಟದ ಕೆಳಗೂ ಒಬ್ಬಳು ಇನ್ನೊಂದು ರೀತಿಯಲ್ಲಿ ಹರಿಸುತ್ತಾ ಪೊರೆಯುತ್ತಲೇ ಇರುತ್ತಾಳೆ. ನಿಯುಕ್ತಿ ಪುರಾಣ ಇದಕ್ಕೆ ವೆಂಕಟಪತಿರಾಯನ ರಕ್ತಸಾಕ್ಷಿ ನೀಡುತ್ತದೆ. ಬಹುಷಃ ಇಂಥ ವಿಶೇಷತೆಗಳು ಮಹಿಷೂರಿನಲ್ಲಿ ಮಾತ್ರವೇ ಕಾಣಸಿಗುವುದೇನೋ. ಇಂತಿಪ್ಪ ಮಹಿಷೂರಿನ ಪುರಾಣವನ್ನು ಹೇಳಲು ಕೃತಿಕಾರ ತೆಗೆದುಕೊಂಡ ಮಾರ್ಗ ಜನಪದೀಯ ಧಾಟಿ. ಮಲೆ ಮಾದೇವನ, ಬಿಳಿಗಿರಿ ರಂಗನ ಹಾಡುಗಳು ಮೌಖಿಕ ಸಂಪ್ರದಾಯದಿಂದಲೇ ಹಂಚಿ ಹರಡಿ ಉಳಿದು ಬೆಳೆದ ಸಾಕ್ಷಿಯಿರುವ ಜಾನಪದದ ಮಟ್ಟು ಶಿಷ್ಟ ಪರಂಪರೆಯನ್ನು ಹಿಂದಿಕ್ಕಿ ಮನ ಮುಟ್ಟುವುದಿದೆ. ಕೃತಿಕಾರ ಆಯ್ದುಕೊಂಡ ಈ ಧಾಟಿ ಆಕರ್ಷಕವಾಗಿದ್ದರೂ ಆರಂಭದಲ್ಲಿ ಸಲೀಸಾಗಿ ತೋರದೇ ಸ್ವಲ್ಪ ಕ್ಲಿಷ್ಟವೆನಿಸುತ್ತದೆ. ಮತ್ತೆ ಒಳ ಹೊಕ್ಕಂತೇ ಇದೇ ಇದೇ ಧಾಟಿ ಪರಮಸೂಕ್ತವೆಂದು ಕೊನೆಯಲ್ಲಿ ಅನಿಸುವಂತೇ ಅಥವಾ ಇದೊಂದು ಆರಂಭದ ಸಣ್ಣ ತೊಡಕಷ್ಟೇ ಮತ್ತೆ ಓದುಗ ಕೃತಿಕಾರ ಅಕ್ಷರಗಳಲ್ಲಿ ಮೂಡಿಸಿದ ಆನೆಮಲೆ, ಜೇನುಮಲೆ, ಕಾನುಮಲೆ, ಪಚ್ಚೆಮಲೆ, ಪವಳಮಲೆಗಳ ಮಾಲೆಯಲ್ಲಿ ಓದುತ್ತಾ ಜಾರತೊಡಗುತ್ತಾನೆ. ಮತ್ತು ಕತೆಯ ಜೊತೆಗೆ ಒಮ್ಮೊಮ್ಮೆ ಸರಿಸಮನಾಗಿ ಮತ್ತೊಮ್ಮೆ ಸ್ವಲ್ಪ ಹಿಂದುಮುಂದಾಗಿ ಹೆಜ್ಜೆಯಿಡುತ್ತಾನೆ.

ಅಧಿಕಾರ, ಗದ್ದುಗೆ, ತಂತ್ರ, ಕುತಂತ್ರ, ಶಾಪ ಮತ್ತು ವರ ಇತಿಹಾಸದ ತುಂಬ ಕೇಳಿದ ಕಥನಗಳು. ನಿಯುಕ್ತಿ ಪುರಾಣವೂ ಇವುಗಳನ್ನು ಮಹಿಷೂರಿನ ಒಡೆಯರ ವಂಶಾವಳಿಯೊಂದಿಗೆ ತಳುಕು ಹಾಕುತ್ತಾ ಕತೆ ಹೆಣೆದಿದೆ. ಅಧಿಕಾರದಲ್ಲಿ ಇದ್ದವನಿಗೆ ಗದ್ದುಗೆಯಷ್ಟೇ ವರ. ಬಾಕಿ ಎಲ್ಲವೂ ಶಾಪವೇ! ತಾನು ನೇರವಾಗಿ ಯಾವುದೇ ಕುತಂತ್ರ ಅಥವಾ ಕೊಲೆಯಲ್ಲಿ ಭಾಗಿಯಾಗದಿದ್ದರೂ ತನ್ನ ಕೆಳಗಿನವರು ನಡೆಸಿದ ತಂತ್ರದಿಂದಾದ ಅವಘಡಗಳಿಗೆ ಗದ್ದುಗೆಯಲ್ಲಿರುವವ ಹೊಣೆಯಾಗುತ್ತಾನೆ. `ತಲಕಾಡು ಮರಳಾಗಿ ಮಾಲಿಂಗಿ ಮಡುವಾಗಿ… ಮಹಿಷೂರು ಅರಸರಿಗೆ..’ ಈ ಮಾತಿನ ಪುರಾಣ ತಿಳಿಯುವಾಗ ಶಾಪ ಮತ್ತು ವರದ ಇನ್ನೊಂದು ಆಯಾಮದ ಅರಿವಾಗುತ್ತದೆ. ಇಲ್ಲಿ ನಾವೆಲ್ಲರೂ ಒಮ್ಮೆಯಾದರೂ ಆಟವಾಡಿದ ಆಟವೊಂದರ ನೆನಪಾಗುತ್ತದೆ. ಇಲಿ ಹೋಗಿದ್ದರೂ ಹುಲಿ ಹೋಯಿತೆಂದು ಬದಲಾಗುವ ಮಾತಿನಂತೇ ಕಿವಿಯಿಂದ ಕಿವಿಗೆ ಗುಟ್ಟಿನಲ್ಲಿ ಹೇಳುವ ಆಟವೊಂದು ಆರಂಭದಲ್ಲಿ ಹೇಳಿದ್ದ ವಿಷಯದ ಸಂಪೂರ್ಣ ಭಿನ್ನ ರೂಪವನ್ನು ಕೊನೆಯಲ್ಲಿ ಎಲ್ಲರ ಮುಂದೆ ಅರುಹುವವನು ಹೇಳುವಾಗ ಹೇಗೆ ಅಚ್ಚರಿ ಮೂಡಿಸುತ್ತದೊ ಹಾಗೇ ಇತಿಹಾಸದ ಗರ್ಭದ ತುಂಬ ಇಂಥ ಬಾಯಿಂದ ಬಾಯಿಗೆ ಹೋದ ಕಥನಗಳದ್ದೇ ಕಾರುಬಾರೆಂದು ಅನಿಸುತ್ತದೆ.

`ನಿಯುಕ್ತಿ ಪುರಾಣ’ದ ಕೃತಿಕಾರ ಮೈಸೂರು ಒಡೆಯರ ಚರಿತ್ರೆಯ ಕೆಲವು ಅಂಗಗಳನ್ನು ಅಥವಾ ಮುಖ್ಯ ಅಂಶಗಳನ್ನು ಇಟ್ಟುಕೊಂಡು ಅದಕ್ಕೆ ಕಲ್ಪನೆಯಿಂದ ರಕ್ತಮಾಂಸವನ್ನು ತುಂಬಿದ್ದಾರೆ. ಹದಿನೈದು, ಹದಿನಾರು ಮತ್ತು ಹದಿನೇಳನೇ ಶತಮಾನದ ಮಹಿಷೂರಿನ ನಾಲ್ವಡಿ ಚಾಮರಾಜ ಒಡೆಯರು, ಐಮಡಿ ಚಾಮರಾಜ ಒಡೆಯರು ಮತ್ತು ರಾಜ ಒಡೆಯರ ಬದುಕನ್ನು ಬೋಳೊಡೆಯ, ಬೆಟ್ಟದೊಡೆಯ ಮತ್ತು ಮುನ್ನೊಡೆಯ ಎನ್ನುವ ಆಡು ಹೆಸರುಗಳನ್ನು ನೀಡಿ ಅವರ ಮೂಲಕ ಪುರಾಣವನ್ನು ಪೌರಾಣಿಕ, ಕಾಲ್ಪನಿಕ, ಜಾನಪದ ಮತ್ತು ಐತಿಹಾಸಿಕ ನೆಲೆಗಳಲ್ಲಿ ಪೋಣಿಸಿ ಕಥನವಾಗಿಸಿದ್ದಾರೆ.

ಮುನ್ನೊಡೆಯಂಥ ಮಹತ್ವಾಕಾಂಕ್ಷೆಯ ಒಡೆಯ, ಬೆಟ್ಟದೊಡೆಯನಂಥ ವಿಲಾಸಿ ಮತ್ತು ಅವನ ಮನದನ್ನೆಯರೊಂದಿಗೆ ಜೋಡು ಪ್ರಣಯದಲ್ಲಿದ್ದಾಗ ಆದ ಸಾವಿನಿಂದ ಹುಟ್ಟಿದ ವಿರಕ್ತ ಒಡೆಯ, ಸಾಧು, ಸಾಮಂತ ದೊರೆ ಶ್ರೀರಂಗಪಟ್ಟಣದ ತಿರುಮಲರಾಯ ಮತ್ತವನ ಅತ್ಯಪೂರ್ವ ಸುಂದರ ಪತ್ನಿಯರಾದ ಅಲಮೇಲು ರಂಗನಾಯಕಿಯರೂ ಮತ್ತವರ ಅತ್ಯಪೂರ್ವ ಗಿಣಿನವಿಲು ವಿನ್ಯಾಸದ ಮೂಗುಬೊಟ್ಟು (ಇಲ್ಲೊಂದು ಅಮ್ಮ ಹೇಳಿದ್ದ ಮಾತೊಂದು ನೆನಪಿಸಿ ಪ್ರಸ್ತಾಪಿಸುತ್ತಿದ್ದೇನೆ. ಅತ್ಯಪೂರ್ವ ವಿನ್ಯಾಸದ ಒಡವೆ ದೇವರು ಮಾತ್ರವೇ ತೊಡಬೇಕಂತೆ. ಸಾಮಾನ್ಯ ಜನರು ತೊಟ್ಟಾಗ ಅದು ದೃಷ್ಟಿ ತಾಗಿ ಅದನ್ನು ಕಳಕೊಳ್ಳುವರಂತೆ. ಅಂದರೆ ಅದೇ ಮನೆತನದಲ್ಲಿ ಉಳಿದುಕೊಳ್ಳದಂತೆ. ಇದಕ್ಕೆ ಯಾವ ಸಾಕ್ಷ್ಯಾಧಾರಗಳು ಇಲ್ಲದಿದ್ದರೂ ಇತಿಹಾಸದ ಅಥವಾ ಪುರಾಣದ ಅನೇಕ ಪ್ರಸಂಗಗಳು ಹೀಗೆ ಹೇಳುತ್ತವೆ), ಮಾಚವ್ವೆ ಮತ್ತು ಸೊಟ್ಟಂಭಟ್ಟನ ಗುಪ್ತ ಪ್ರಣಯ ಮತ್ತು ಮುನ್ನೊಡೆಯ ಕಂಡ ಸಾಲು ಸಾಲು ಸಾವುಗಳು! ಗದ್ದುಗೆಗೆ ಸದಾ ಮುಂದಿನ ಒಡೆಯನಾರು ಎನ್ನುವ ಸಂಕಟ ಮತ್ತು ಕಥೆಗೆ ಒಂದು ಕುತೂಹಲಕಾರಿ ನಡೆ ಮತ್ತು ಓಟವನ್ನು ಕೊಟ್ಟ ಕೃತಿಕಾರ ಕಾಲ್ಪನಿಕವೆಂದ ಪಾತ್ರವಾದ ಶೇರಖಾನಬಾಬಾ ಮತ್ತವನ ಗೋಲ, ನಿಯುಕ್ತಿ ಪುರಾಣವನ್ನು ಅತ್ಯಂತ ಕುತೂಹಲಕಾರಿಯಾಗಿಸುತ್ತದೆ. ಬೇರೆಲ್ಲ ವಿವರಗಳು ಕಾಲ್ಪನಿಕವಾದರೂ ಅಚ್ಚುಕಟ್ಟಾಗಿ ತಲೆಗೆ ಹೋಗುತ್ತವೆ. ಆದರೆ ಮಲಯಾಳ ನಾಡಿನ ಮಾಪುಳ (ಮಾಪಿಳ್ಳೆ) ಜನಾಂಗದ ತಾಜುದ್ದೀನನಿಗೆ ಉತ್ತರಭಾರತದ ಹೆಸರಾದ ಶೇರ್ ಖಾನ್ ಬಾಬಾ ಎನ್ನುವ ಉಪಹೆಸರು ನೀಡಿದ್ದು ಅರ್ಥವಾಗಲಿಲ್ಲ. ಪ್ರಾಯಶಃ ಮುಂದಿನ ಪುರಾಣಗಳಲ್ಲಿ ತಿಳಿಯಬಹುದೇನೋ. ನಿರುಕ್ತಿ ಪುರಾಣದಲ್ಲಿ ಶೇರ್ ಖಾನನ ಬಾಯಲ್ಲಿ ಸಮೂದಿರಿ ಜನಾಂಗದ ಕತೆಯನ್ನು ಹೇಳಿಸಿ ಕನ್ನಡ ನಾಡಿನ ಕತೆಯೊಂದಿಗೆ ಅದನ್ನು ಜೋಡಿಸಿದ್ದು ಕಾದಂಬರಿಗೆ ಕುತೂಹಲದ ಬಣ್ಣ ಕೊಟ್ಟಿದೆ. ಇವೆಲ್ಲದರ ನಡುವೆ ಮುನ್ನೊಡೆಯನ ಸತಿಯಾದ ತಿಮ್ಮಾಜಮ್ಮಣ್ಣಿಯನ್ನೂ ಅವಳ ನಕ್ಷಾಸಕ್ತಿಯನ್ನೂ ಕಥಿಸಿದ ರೀತಿ ಅತ್ಯಂತ ಮುದ ನೀಡುತ್ತದೆ. ಸ್ತ್ರೀ ಪಾತ್ರವೊಂದನ್ನು ಕೇವಲ ಅಂತಃಪುರದ ನೆರಳಾಗಿಯಷ್ಟೇ ಇರಿಸದೇ ಕಾದಂಬರಿಯಲ್ಲಿ ಒಡೆಯ ಸಂಸ್ಥಾನದ ರಾಜಕಾರಣದ ಪ್ರಮುಖ ಯೋಚನಾ ಶಕ್ತಿಯಾಗಿ ಬಿಂಬಿಸಿದ್ದು ಕಾದಂಬರಿಯ ಆಶಯವನ್ನು ಉನ್ನತಿಗೇರಿಸುತ್ತದೆ.

ನಿಯುಕ್ತಿ ಪುರಾಣ, ಸಾವಕಾಶದ ಓದು ಬೇಡುವ ಕಥನಕ್ರಮದ ಕಾದಂಬರಿ. ಐದಾರು ಶತಮಾನಗಳ ಐತಿಹಾಸಿಕ ಚೌಕಟ್ಟನ್ನು ಎಷ್ಟು ಕಿರಿದುಗೊಳಿಸಿದರೂ ಅದರ ಊಹೆಯ ವಿಸ್ತಾರ ಅತೀ ದೊಡ್ಡದಾಗಿದೆ. ಅದನ್ನು ಕಲ್ಪನೆಯ ಕಣ್ಣಿನಲ್ಲಿ ನೋಡಿ ಅಕ್ಷರಕ್ಕಿಳಿಸುವ ಸಾಹಸ ಎಷ್ಟು ತ್ರಾಸದಾಯಕವೋ ಅದರ ವಿನ್ಯಾಸದಲ್ಲಿ ಕಿಂಚಿದೂನ ಕಂಡರೂ ತಪ್ಪಾಗಿ ಮುಟ್ಟುವ ಅಪಾಯವೂ ಅಷ್ಟೇ ಸೂಕ್ಷ್ಮವಾದುದು. ಕೃತಿಕಾರ ವಸ್ತಾರೆಯವರು ಮೊದಲ ಹಂತದ ಗೆಲುವು ಸಾಧಿಸಿರುವಂತೇ ಕಾಣುತ್ತದೆ.

(ಕೃತಿ: ನಿಯುಕ್ತಿ ಪುರಾಣ (ಕಾದಂಬರಿ), ಲೇಖಕರು: ನಾಗರಾಜ ವಸ್ತಾರೆ, ಪ್ರಕಾಶಕರು: ಸಾಹಿತ್ಯಲೋಕ ಪಬ್ಲಿಕೇಷನ್ಸ್, ಬೆಲೆ: 530/-)