ಸಂರಕ್ಷಕರು
ಮೂಲ: ಅಮೃತಾ ಪ್ರೀತಮ್
ಅನುವಾದ: ನಿವೇದಿತಾ ಎಚ್
ಅದೆಷ್ಟು ಅವರು ಉತ್ಸುಕರು
ಪಕ್ಕದ ಮನೆಯಾತನ ಮಗಳ ಬಗ್ಗೆ
ಮತ್ತು ಆತನ ಮಗನ ಬಗ್ಗೆ?
ಅದೆಷ್ಟು ಕಾಳಜಿ ಅವರ ಸುಖ ಸಮೃದ್ಧಿಯ ಬಗ್ಗೆ
ಅದೆಷ್ಟು ಸಮಯ ಮೀಸಲಿಡುತ್ತಾರೆ ನೆರೆಯವರಿಂದ
ಅದರಿಂದ ಏನಾದರೂ ಸಿಗುವುದೆಂಬ ನಿರೀಕ್ಷೆಯೇ ಅವರಿಗಿಲ್ಲ
ಅವರ ಕರ್ತವ್ಯವನ್ನಷ್ಟೇ ಮಾಡುತ್ತಿದ್ದಾರೆಂದು
ಅವರ ಆಂಬೋಣ
ಗಂಟೆಗಳನ್ನು ಕಳೆಯುತ್ತಾರೆ
ಬಿರುಕುಗಳ ಮೂಲಕ ನಿರುಕಿಸುತ್ತಾ
ಬೀಗದ ಸಂದುಗಳಿಂದ ಇಣುಕುತ್ತಾ
ಅವರ ಜ್ಞಾನ ಹೆಚ್ಚಿಸಿಕೊಳ್ಳಲು
ಪಾಪದ ಈ ಸಂರಕ್ಷಕರು
ಅದೆಷ್ಟು ತ್ರಾಸ ಕೊಡುತ್ತಾರೆ ಕಣ್ಣುಗಳಿಗೆ
ಹರಕು ಪರದೆಯ ಮೂಲಕ ತಿಣುಕುತ್ತಾ
ಓಣಿಯ ತಿರುವುಗಳಲ್ಲಿ ಕತ್ತು ನೋಯಿಸಿಕೊಳ್ಳುತ್ತಾ
ತಮ್ಮ ಕರ್ತವ್ಯಕ್ಕೆ ತಪ್ಪದೇ ಹಾಜರಾಗುತ್ತಾರೆ
ತಮ್ಮ ಕಿವಿಗಳ ನಿಮಿರಿಸುತ್ತಾ
ತಲೆಕೆಡಿಸಿಕೊಂಡು ಬೇರೆಯವರ ಕಿವಿ ತುಂಬುತ್ತಾರೆ
ಮತ್ತೊಬ್ಬರಿಗೆ ಆ ಬೇರೆಯವರು ಕಿವಿ ತುಂಬುತ್ತಾರೆ
ಅದೆಷ್ಟು ಅವರು ಉತ್ಸುಕರು
ಪಕ್ಕದ ಮನೆಯಾತನ ಮಗಳ ಬಗ್ಗೆ
ಮತ್ತು ಆತನ ಮಗನ ಬಗ್ಗೆ?
ನಿವೇದಿತಾ ಎಚ್. ಯುವರಾಜ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡೇನಿಯಲ್ ಗ್ರೀನ್ಬರ್ಗ್ ನ Free At Last ಇಂಗ್ಲಿಷ್ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಕವನಗಳನ್ನು ಬರೆಯುವ ಹವ್ಯಾಸದ ಜೊತೆ ಆಯ್ದ ಒಂದಷ್ಟು ಇಂಗ್ಲಿಷ್ ಕವನಗಳನ್ನು ಅಕನ್ನಡಕ್ಕೆ ಅನುವಾದಿಸಿದ್ದು, ಇವರ ಲೇಖನಗಳು ಮತ್ತು ಪ್ರಬಂಧಗಳು ರಾಜ್ಯದ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ