ಒಮ್ಮೆ ಅವನೂ, ನೀಲಿಯ ತಂದೆಯೂ ಅಂಟುವಾಳದ ಕಾಯಿಗಳನ್ನು ಹುಡುಕುತ್ತ ಕಾಡಿನಲ್ಲಿ ಬಹುದೂರದವರೆಗೆ ಸಾಗಿದರಂತೆ. ಚೀಲಗಟ್ಟಲೆ ಕಾಯಿಗಳನ್ನು ಕೊಯ್ದು ಮೂಟೆಗಟ್ಟಿ ದಣಿವಾರಿಸಿಕೊಳ್ಳಲೆಂದು ಮರವೊಂದರ ಬೇರಿನ ಮೇಲೆ ಕುಳಿತು ಕವಳ ತಿನ್ನತೊಡಗಿದರಂತೆ. ಸುಮಾರು ಹೊತ್ತಿಗೆ ನೋಡಿದರೆ ಅವರು ಕುಳಿತಿದ್ದ ಬೇರು ನಿಧಾನಕ್ಕೆ ಚಲಿಸಲು ಪ್ರಾರಂಭವಾಯಿತಂತೆ. ಅರೆ! ಇದೇನಿದು? ಎಂದು ಎದ್ದು ದೂರ ನಿಂತರೆ ಮರದ ಬೇರೆಂದು ಅವರು ಕುಳಿತದ್ದು ಮಾದೊಡ್ಡ ಹೆಬ್ಬಾವಿನ ಮೇಲಂತೆ! ಅದೇನಾದರೂ ತಿರುಗಿ ಸುತ್ತುಹಾಕಿದ್ರೆ ನಾನೂ ಇಲ್ಲ, ನಿನ್ನಪ್ಪನೂ ಇಲ್ಲ ಎಂದು ಅವನು ಕತೆ ಮುಗಿಸುವಾಗ ನೀಲಿ ಕುಳಿತಲ್ಲೇ ಬೆವರುತ್ತಿದ್ದಳು!
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಎಂಟನೆಯ ಕಂತು ನಿಮ್ಮ ಓದಿಗೆ
ಬೇಸಿಗೆ ರಜೆ ಬಂತೆಂದರೆ ನೀಲಿಗೆ ಇನ್ನಿಲ್ಲದ ಬೇಸರ. ಹೊಳೆಸಾಲಿನ ಜನರೆಲ್ಲರೂ ಮುಂದೆ ಬರುವ ಮಳೆಗಾಲದ ತಯಾರಿಯಲ್ಲಿ ಇನ್ನಿಲ್ಲದಂತೆ ಮಗ್ನರಾಗಿಬಿಟ್ಟರೆ ಮನೆಯ ಮಕ್ಕಳ ಖಬರೂ ಇರುವುದಿಲ್ಲ. ಪುಸ್ತಕ ಓದಲು ಅವಳಿಗೆ ಎಷ್ಟೊಂದು ಇಷ್ಟ! ಆದರೆ ಹೊಳೆಸಾಲಿನಲ್ಲಿ ಸಾಮಾನು ಕಟ್ಟಿ ತರುವ ಕಾಗದವಲ್ಲದೇ ಬೇರೇನೂ ಸಿಕ್ಕುವುದಿಲ್ಲ. ಬೇರೆ ದಿನಗಳಲ್ಲೆಲ್ಲ ಚಿತ್ರಕತೆ ಪುಸ್ತಕಗಳನ್ನು ಓದಲು ಕೊಡುವ ಗೌಡಮಾಸ್ತರ್ರು ರಜೆ ಬರುವ ಮೊದಲು ಎಲ್ಲಾ ಪುಸ್ತಕಗಳನ್ನು ಮರಳಿ ಪಡೆದು ಕಪಾಟಿನಲ್ಲಿಟ್ಟುಬಿಡುತ್ತಾರೆ. ರಜೆಯಲ್ಲಿ ಮಕ್ಕಳು ಅದನ್ನು ಎಲ್ಲೆಲ್ಲೋ ಇಟ್ಟು ಚಿಂದಿಚಿತ್ರಾನ್ನ ಮಾಡಿಕೊಂಡು ಬಂದರೆ ಎಂಬ ಭಯ ಅವರಿಗೆ. ಹಾಗಾಗಿ ಮನೆಯ ಕೆಲಸಗಳಲ್ಲಿ ವ್ಯಸ್ತಳಾದರೂ ಮತ್ತೇನೋ ಬೇಕೆಂಬ ಖಾಲಿತನ ನೀಲಿಯನ್ನು ಆವರಿಸುತ್ತದೆ.
ಹೊಳೆಸಾಲಿನ ಮೇಲೆ ಗುಡ್ಡಯನ್ನು ಹತ್ತಿಹೋದರೆ ದಟ್ಟಕಾಡು ಸಿಗುತ್ತದೆ. ಮೇಲೆ ಮೇಲೆ ಸಾಗಿದಂತೆಲ್ಲ ನಿಗೂಢವಾಗುತ್ತ ಹೋಗುವ ಕಾಡಿನ ಬಗೆಗಿನ ಕತೆಗಳನ್ನು ಊರಿನವರ ಬಾಯಿಂದ ಕೇಳುವ ಹುಚ್ಚು ನೀಲಿಯದ್ದು. ಹೊಳೆಸಾಲಿನ ಹಿರಿಯರೆಲ್ಲ ನುರಿತ ಕತೆಗಾರರೆ. ಮಾತಿಗೆ ಕುಳಿತರೆ ದಿನರಾತ್ರಿಗಳ ಪರಿವೆಯಿಲ್ಲದಂತೆ ಕತೆ ಹೇಳುವರು. ಆದರೆ ಅವುಗಳ ಸತ್ಯಾಸತ್ಯತೆಯನ್ನು ಮಾತ್ರ ಹುಡುಕಬಾರದು. ಹೇಳುವವರೊಂದಿಗೆ ಕುಳಿತು ಕೇಳುವಾಗ ಹುವ್ವೇಹುವ್ವೆ ಸತ್ಯವೆಂಬಂತೆ ಅನಿಸುವ ಸಂಗತಿಗಳನ್ನು ಇನ್ನೊಬ್ಬರಲ್ಲಿ ಹಂಚಿಕೊಂಡಾಗ ನಕ್ಕು ಸುಳ್ಳೇ ಸುಳ್ಳು ಎಂದು ತಳ್ಳಿಹಾಕಿಬಿಡುವರು. ಆಗೆಲ್ಲ ನೀಲಿ ಸಿಕ್ಕಾಪಟ್ಟೆ ಗೊಂದಲಕ್ಕೊಳಗಾಗಿಬಿಡುವಳು. “ಅಯ್ಯಾ, ಅವ್ನು ಹೇಳಿದ್ದಾ? ನೀನು ನಂಬಿದ್ದಾದರೂ ಸಾಕು ಮಾರಾಯ್ತಿ. ಹೊಕ್ಕೆ ಹೊಡೆಯೋದೇ ಅವನ ಉದ್ಯೋಗ. ಬಾಯಿಗೆ ಬಂದದ್ದು ಹೇಳ್ತಾ” ಎಂದು ಕೇಳಿದವರು ಹೇಳಿದರೂ ನೀಲಿಗೆ ಆ ಕತೆಗಳನ್ನು ಕೇಳುವುದೆಂದರೆ ಭಾರೀ ಇಷ್ಟ. ಹಾಗಾಗಿ ಇತ್ತೀಚೆಗೆ ತಾನು ಕೇಳಿದ ಕತೆಗಳನ್ನು ಅವಳು ತನ್ನಷ್ಟಕ್ಕೇ ಆನಂದಿಸುತ್ತಾಳೆ ಹೊರತು ಯಾರಲ್ಲಿಯಾದರೂ ಹೇಳಿ ಅದರ ಸವಿಯನ್ನು ಹೋಗಲಾಡಿಸಿಕೊಳ್ಳುವುದಿಲ್ಲ.
ಹೊಳೆಸಾಲಿನ ರಾಮ ಕಾಡಿನ ಕತೆ ಹೇಳುವುದರಲ್ಲಿ ನಿಸ್ಸೀಮ. ನೀಲಿ ರಜೆಯಲ್ಲಿ ಅವನನ್ನು ಕಾಡಿಸಿ, ಬೇಡಿ ಕತೆ ಕೇಳುತ್ತಾಳೆ. ಅವನೂ ಅಷ್ಟೆ, ಕೇಳಲು ಎಳೆಯ ಕಿವಿಗಳು ಸಿಕ್ಕಿದರೆ ಅಷ್ಟೇ ಖುಶಿಯಿಂದ ಕತೆ ಹೇಳುತ್ತಾನೆ. ಅವನ ಕತೆಗಳಲ್ಲಿ ನೀಲಿಯ ಅಪ್ಪನೂ ಇರುತ್ತಾನೆ. ಅವರಿಬ್ಬರದು ಜಂಗೀದೋಸ್ತಿ. ಅವನೊಮ್ಮೆ ಹೊಳೆಸಾಲಿನ ಕಾಡಿನ ಕಾಳಿಂಗನ ಕತೆ ಹೇಳಿದ್ದ. ಹೊಳೆಸಾಲಿನ ಕಾಡಿನಲ್ಲಿ ಒಳಗೆ ಹೋದರೆ ಹರಿಯುವ ತೊರೆ ಸಿಗುವುದಂತೆ. ಅದರ ಆಸುಪಾಸಿನಲ್ಲೆಲ್ಲ ಕಾಳಿಂಗ ಸರ್ಪಗಳು ವಾಸಿಸುವುದಂತೆ. ಕಾಳಿಂಗ ಸರ್ಪಗಳು ಹೆಡೆಯೆತ್ತಿ ನಿಂತರೆ ಮನುಷ್ಯರಿಗಿಂತ ಎತ್ತರಕ್ಕೆ ಕಾಣುವುವಂತೆ. ಅವುಗಳು ಸಿಳ್ಳೆ ಹಾಕಿದರೆ ಮನುಷ್ಯರ ಸಿಳ್ಳೆಯಂತೆ ಕೇಳುತ್ತವೆಯಂತೆ. ಹೊಳೆಸಾಲಿನಲ್ಲಿ ನಸುಕಿನಲ್ಲೆದ್ದು ಸೊಪ್ಪು, ಕಟ್ಟಿಗೆಗೆಂದು ಕಾಡಿಗೆ ಹೋಗುವ ಹುಡುಗರು ಒಟ್ಟಾಗಿ ಹೋಗಲು ಪರಸ್ಪರರನ್ನು ಕರೆಯುವ ಸಲುವಾಗಿ ಜೋರಾಗಿ ಸಿಳ್ಳೆ ಹಾಕುವುದು ರೂಢಿ. ಅವರ ಸಿಳ್ಳೆಯನ್ನು ಅನುಕರಿಸಿ ಕಾಳಿಂಗಗಳೂ ಸಿಳ್ಳೆ ಹಾಕುತ್ತವೆಯಂತೆ. ಯಾರಾದರೂ ಜನರಿರಬಹುದೆಂದು ಆ ಕಡೆಗೆ ಹೋದರೆ ಅವರ ತಲೆಯ ಮೇಲೆ ಬಡಿದು ಕೊಲ್ಲತ್ತವೆಯಂತೆ. ಹೀಗೆಲ್ಲ ರಾಮ ಹೇಳುವ ಕಾಳಿಂಗನ ಕತೆಯನ್ನು ನೀಲಿ ಕಣ್ಣಗಲಿಸಿ ಕೇಳುತ್ತಿದ್ದಳು. ಅವಳಿಗೆ ಮೊದಲಿನಿಂದಲೂ ಹಾವುಗಳೆಂದರೆ ಭಯ. ಹೊಳೆಸಾಲಿನ ಹೊಳೆ ಉಕ್ಕೇರಿ ಹರಿದಾಗ ಕೆಂಪು ನೀರಿನೊಂದಿಗೆ ಕಾಡಿನ ಹಾವುಗಳೂ ತೇಲಿಬರುತ್ತವೆ. ಬೆಚ್ಚನೆಯ ತಾವು ಹುಡುಕಿ ಮನೆಯೊಳಗೂ ಸೇರಿಕೊಳ್ಳುತ್ತವೆ. ಥರಾವರಿ ಹಾವುಗಳನ್ನು ನೋಡಿದ ನೀಲಿಗೆ ಇವು ಯಾಕಾದರೂ ಬರುತ್ತಾವೋ ಅನಿಸುತ್ತದೆ. ಮನೆಯ ಬೆಕ್ಕುಗಳು ಅವುಗಳೊಂದಿಗೆ ಅಂಗಳದಲ್ಲಿ, ತೋಟದಲ್ಲಿ ಕಾದಾಡುವ ದೃಶ್ಯವಂತೂ ಹೊಳೆಸಾಲಿನಲ್ಲಿ ತೀರಸಾಮಾನ್ಯ.
ದನದ ಹಟ್ಟಿಯ ಮಾಡಿನಲ್ಲಿರುವ ಎರಡು ತಲೆಯ ಹಾವುಗಳನ್ನಂತೂ ಹಳ್ಳಿಯವರು ಕಂಡಾಗಲೆಲ್ಲ ಹೊಡೆದು ಕೊಲ್ಲುತ್ತಿದ್ದರು. ಅವುಗಳ ಮೈಯ್ಯಿಂದ ಹಾಲಿನಂತಹ ದ್ರವ ವಸರುವುದನ್ನು ನೋಡಿ ಉದ್ದದ ಕತೆ ಹೆಣೆಯುತ್ತಿದ್ದರು. ಈ ಹಾವುಗಳಿಗೆ ದನದ ಹಾಲು ಕುಡಿಯುವ ಖಯಾಲಿಯಂತೆ. ಅದಕ್ಕೇ ಹುಲ್ಲಿನ ದಾಸ್ತಾನಿನಲ್ಲಿ ಕುಳಿತು ಹೊಂಚು ಹಾಕುತ್ತವೆಯಂತೆ. ದನದ ಕಾಲುಗಳಿಗೆ ಗಟ್ಡಿಯಾಗಿ ಸುತ್ತಿಕೊಂಡು ಕೆಚ್ಚಲಿಗೆ ಬಾಯಿಟ್ಟು ಎರಡೂ ಬದಿಯ ಬಾಯಿಗಳಿಂದ ಹಾಲು ಹೀರತೊಡಗಿದರೆ ಅವುಗಳ ಹಾಲಿನ ಧಾರೆ ತುಂಡಾಗುವವರೆಗೂ ಹೀರಿ ಇನ್ನೆಂದೂ ಮೊಲೆಯಲ್ಲಿ ಹಾಲು ಬರದಂತೆ ಮಾಡುತ್ತವೆ ಎಂಬುದು ನಂಬಿಕೆ. ಸತ್ಯವೆಂದರೆ ಹಾಗೆ ಹಾವು ಹಾಲು ಕುಡಿಯುವುದನ್ನು ಇಂದಿನವರೆಗೂ ಯಾರೂ ಕಂಡವರಿಲ್ಲ.
ನೀಲಿಯ ಕತೆ ಕೇಳುವ ಹುಚ್ಚಿಗೆ ಸೋತ ರಾಮ ಕಾಡಿನ ಕತೆಗಳನ್ನು ಇನ್ನಷ್ಟು ರಂಜನೀಯವಾಗಿ ಹೇಳುತ್ತಿದ್ದ. ಒಮ್ಮೆ ಅವನೂ, ನೀಲಿಯ ತಂದೆಯೂ ಅಂಟುವಾಳದ ಕಾಯಿಗಳನ್ನು ಹುಡುಕುತ್ತ ಕಾಡಿನಲ್ಲಿ ಬಹುದೂರದವರೆಗೆ ಸಾಗಿದರಂತೆ. ಚೀಲಗಟ್ಟಲೆ ಕಾಯಿಗಳನ್ನು ಕೊಯ್ದು ಮೂಟೆಗಟ್ಟಿ ದಣಿವಾರಿಸಿಕೊಳ್ಳಲೆಂದು ಮರವೊಂದರ ಬೇರಿನ ಮೇಲೆ ಕುಳಿತು ಕವಳ ತಿನ್ನತೊಡಗಿದರಂತೆ. ಸುಮಾರು ಹೊತ್ತಿಗೆ ನೋಡಿದರೆ ಅವರು ಕುಳಿತಿದ್ದ ಬೇರು ನಿಧಾನಕ್ಕೆ ಚಲಿಸಲು ಪ್ರಾರಂಭವಾಯಿತಂತೆ. ಅರೆ! ಇದೇನಿದು? ಎಂದು ಎದ್ದು ದೂರ ನಿಂತರೆ ಮರದ ಬೇರೆಂದು ಅವರು ಕುಳಿತದ್ದು ಮಾದೊಡ್ಡ ಹೆಬ್ಬಾವಿನ ಮೇಲಂತೆ! ಅದೇನಾದರೂ ತಿರುಗಿ ಸುತ್ತುಹಾಕಿದ್ರೆ ನಾನೂ ಇಲ್ಲ, ನಿನ್ನಪ್ಪನೂ ಇಲ್ಲ ಎಂದು ಅವನು ಕತೆ ಮುಗಿಸುವಾಗ ನೀಲಿ ಕುಳಿತಲ್ಲೇ ಬೆವರುತ್ತಿದ್ದಳು!
ಆದರೆ ಹೊಳೆಸಾಲಿನ ಕಾಡಿನ ಹೊರಭಾಗ ಹಣ್ಣುಗಳ ಆಗರ. ಅಲ್ಲಿಗೆ ದನ ಮೇಯಿಸಲೆಂದು ಹೋಗುವ ತರುಣಿಯರು ಹೇಳುವ ಕತೆಗಳು, ಅವರು ತರುವ ವಿವಿಧ ಹಣ್ಣುಗಳು ನೀಲಿಗೆ ಸದಾ ನೆಚ್ಚು. ಆದರೆ ಅವರೆಂದೂ ಮಕ್ಕಳನ್ನು ತಮ್ಮೊಡನೆ ಕರೆದೊಯ್ಯುವ ಸಾಹಸ ಮಾಡಲಾರರು. ಕಾಡಿನಲ್ಲಿ ಕಾಲಿಗೆ ಚುಚ್ಚುವ ಮುಳ್ಳುಗಳು, ದಾರಿಯಲ್ಲಿ ಗೀರುವ ಮರದ ಟೊಂಗೆಗಳು, ದಿನವಿಡೀ ಹಸಿವೆ, ನೀರಡಿಕೆಯನ್ನು ತಡೆದಿರಬೇಕಾದ ಅನಿವಾರ್ಯತೆಗಳು ಇವೆಲ್ಲವೂ ಮಕ್ಕಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗದಂತೆ ಅವರನ್ನು ತಡೆಯುತ್ತವೆ. ನೀಲಿ ಮಾತ್ರ ದೊಡ್ಡವಳಾಗುವ ಮೊದಲೇ ಅವರೊಂದಿಗೆ ಒಂದು ದಿನವಾದರೂ ಕಾಡನ್ನು ಸುತ್ತಿ ಬರಲೇಬೇಕೆಂದು ಕನಸು ಕಾಣುತ್ತಿದ್ದಳು.
ಬೇಸಿಗೆಯ ರಜೆ ಬಂದೊಡನೆ ತನ್ನ ಅತ್ತೆಯೊಂದಿಗೆ ದನ ಮೇಯಿಸಲು ಒಂದಿನವಾದರೂ ತಾನು ಬರುವುದಾಗಿ ಹಠ ಹಿಡಿದಳು. ಊರಿನ ಪೋರರಿಗೆಲ್ಲ ಏನಾದರೂ ತೊಂದರೆಯಿರುವ ದಿನ ಮಾತ್ರ ಅಪರೂಪಕ್ಕೆ ಊರಿನ ತರುಣಿಯರು ಗುಂಪುಕಟ್ಟಿಕೊಂಡು ತಮ್ಮ, ತಮ್ಮ ಮನೆಯ ದನಕರುಗಳನ್ನು ಮೇಯಿಸಲು ಕಾಡಿಗೆ ಹೋಗುತ್ತಿದ್ದರು. ಹಾಗೆ ಹೋಗುವ ಮೊದಲ ದಿನವೇ ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳುತ್ತಿದ್ದರು. ತೋಟದಲ್ಲಿ ಬೆಳೆದ ಎಲೆಯ ಕಾಡುಕೆಸುವಿನ ಚಿಗುರನ್ನು ಕೊಯ್ದು ತಂದು ಉಪ್ಪು, ಹುಳಿ, ಖಾರವನ್ನು ಸಕತ್ತಾಗಿ ಹಾಕಿ ಬೇಯಿಸಿ, ಬೆಳ್ಳುಳ್ಳಿಯ ಘಮ್ಮೆನ್ನುವ ಒಗ್ಗರಣೆ ಮಾಡಿದ ಕರಗಲಿಯನ್ನು ತಯಾರಿಸುತ್ತಿದ್ದರು. ಅದರೊಂದಿಗೆ ನಿನ್ನೆ ಉಳಿದ ತಂಗಳನ್ನು ಸೇರಿಸಿ ಮುದ್ದೆ ಹೊಟ್ಟೆ ತುಂಬುವಷ್ಟು ಊಟವನ್ನು ಬೆಳಿಗ್ಗೆಯೇ ಮಾಡಿಕೊಳ್ಳುತ್ತಿದ್ದರು. ಜತೆಗೆ ಬಾಯಾರಿಕೆಯಾಗದಿರಲೆಂದು ಕಡೆದ ಮಜ್ಜಿಗೆಯನ್ನು ಚೊಂಬುಗಟ್ಟಲೆ ಕುಡಿಯುತ್ತಿದ್ದರು. ಕೈಯ್ಯಲ್ಲೊಂದು ಕತ್ತಿಯನ್ನು ರಕ್ಷಣೆಗೆಂದು ಹಿಡಿದುಕೊಂಡು, ಹೆಗಲಲ್ಲಿ ಒಂದು ಟುವಾಲು ಹಾಕಿಕೊಂಡು ಗೋ ಪಾಲಕರ ವೇಷ ಧರಿಸುತ್ತಿದ್ದರು. ಕೆಲವರು ಬಿಡುವಿನಲ್ಲಿ ಹೇನುಹೆಕ್ಕಲೆಂದು ಸೀರಣಿಗೆ ತೆಗೆದುಕೊಂಡರೆ ಇನ್ನು ಕೆಲವರು ಆಡಲೆಂದು ಬುಗುರಿಯನ್ನು ತೆಗೆದುಕೊಳ್ಳುತ್ತಿದ್ದರು. ಅವರೆಲ್ಲ ಮಾಡಿಕೊಳ್ಳುವ ತಯಾರಿಯೇ ನೀಲಿಯಲ್ಲಿ ಅವರೊಂದಿಗೆ ಹೋಗುವ ಕನಸನ್ನು ಹುಟ್ಟಿಸುತ್ತಿತ್ತು.
ಅಂತೂ ಆ ಬೇಸಿಗೆಯಲ್ಲಿ ನೀಲಿಗೆ ಕಾಡುನೋಡುವ ಯೋಗವೊಂದು ಒದಗಿಬಂತು. ದನಮೇಯಿಸುವ ಗ್ಯಾಂಗಿನೊಂದಿಗೆ ತಾನೂ ಒಂದು ಟುವಾಲು ಹಿಡಿದು ಸಿದ್ಧಳಾಗಿಯೇಬಿಟ್ಟಳು. ಹೊಳೆಸಾಲಿನ ಗುಡ್ಡದ ಕಡೆಗೆ ದನಗಳನ್ನು ಹಿಂಬಾಲಿಸುತ್ತ ಹೊರಟ ತಂಡವನ್ನು ಸೇರಿಕೊಂಡಳು. ಬಿಸಿಲೇರುತ್ತಿದ್ದಂತೆಯೇ ದನಗಳು ಕಾಡಿನ ಒಳಗೊಳಗೆ ಸೇರಿಕೊಳ್ಳುತ್ತಾ, ಗಿಡಮರಗಳ ಕೆಳಗೆ ಬೆಳೆದ ಹುಲ್ಲು, ಸೊಪ್ಪುಗಳನ್ನು ಕರಕರನೆ ತಿನ್ನತ್ತಾ ಸಾಗುತ್ತಿದ್ದವು. ತಮ್ಮೊಂದಿಗೆ ಬಂದ ಕಿರಿಯಳಿಗೆಂದು ತಂಡದವರೆಲ್ಲ ಕಾಡಿನ ಹಣ್ಣುಗಳನ್ನು ತಂದು, ತಂದು ತಿನ್ನಿಸತೊಡಗಿದರು. ಹುಳಿಹುಳಿಯಾದ ಕರಜಲ ಹಣ್ಣು, ಸಿಹಿಯಾದ ಬಿಳಿಮುಳ್ಳೆಹಣ್ಣು, ಒಗರು ರುಚಿಯ ಕರಿಸೂಜಿ ಹಣ್ಣು ಧಾರಾಳ ನೀಲಿಯ ಅಂಗಿಯೊಳಗೆ ಬಿದ್ದವು. ಅಲ್ಲಲ್ಲಿ ನೆರಳಲ್ಲಿ ಕುಳಿತು ಎಲ್ಲರೂ ಸೇರಿ ಹಣ್ಣುಗಳನ್ನು ತಿಂದರು. ಪೊದೆಯಂತೆ ಬೆಳೆಯುವ ಕುಸುಮಾಲೆ ಗಿಡಗಳಲ್ಲಂತೂ ಕೆಂಪುಹಣ್ಣುಗಳು ತೇರಿನಂತೆ ತುಂಬಿದ್ದವು. ಮೊದಮೊದಲು ಅವುಗಳನ್ನು ನೀಲಿ ಖುಶಿಯಿಂದ ತಿಂದಳಾದರೂ ಮತ್ತೆ ನಾಲಿಗೆ ದಪ್ಪವಾಗಿ ಫೂ ಎಂದು ಉಗುಳತೊಡಗಿದಳು.
ಬಿಸಿಲು ನೆತ್ತಿಗೇರುವ ಹೊತ್ತಿಗೆ ದನಕರುಗಳು ಗುಡ್ಡದ ನೆತ್ತಯನ್ನು ತಲುಪಿದ್ದವು. ಅಲ್ಲೆಲ್ಲ ಎಲ್ಲಿ ನೋಡಿದರಲ್ಲಿ ನೆಲ್ಲಿ ಮರದ ಸಾಲುಗಳು. ಗಿಡದ ತುಂಬೆಲ್ಲಾ ತೇರಿನಂತೆ ತೂಗುಬಿಟ್ಟ ನೆಲ್ಲಿಯ ಕಾಯಿಗಳು. ಒಂದೊಂದು ಗಿಡದ ಕಾಯಿಗೂ ಒಂದೊಂದು ರುಚಿ. ಹಸಿರು ಕಾಯಿಗೆ ಹುಳಿರುಚಿಯಾದರೆ, ನಸುಗೆಂಪು ಕಾಯಿಗಳಿಗೆ ತೀರ ಒಗರು ರುಚಿ. ನೀಲಿ ಕೈಗೆ ಸಿಕ್ಕಿದ ಕಾಯಿಗಳನ್ನು ಬಾಯಲ್ಲಿಟ್ಟು ಅಗೆಯುತ್ತಾ ಬೆಟ್ಟದ ನೆಲ್ಲಿಯ ರುಚಿಯನ್ನು ಮೆಲ್ಲುತ್ತಿದ್ದಳು. ಅದನ್ನು ಗಮನಿಸಿದ ನೀಲಿಯ ಅತ್ತೆ, ” ಕೂಸೇ, ನೆಲ್ಲಿಕಾಯಿಯೊಂದು ತಿನ್ನಬೇಡ. ಬಾಯಾರಿಕೆಯಾಗಿ ಗಂಟಲು ಕಟ್ಟಿದರೆ ಸುತ್ತೆಲ್ಲೂ ನೀರಿನ ಪಸೆಯಿಲ್ಲ” ಎಂದು ಎಚ್ಚರಿಸಿದರೂ ನೀಲಿ ಅದನ್ನು ಗಮನಿಸಲೇ ಇಲ್ಲ.
ದಿನದ ಮೇವು ಮುಗಿಸಿದ ದನಗಳು ತರುಣಿಯರ ಅಣತಿಯಂತೆ ಮತ್ತೆ ಮನೆಯೆಡೆಗೆ ತಿರುಗಿದವು. ನೀಲಿಗೀಗ ಗಂಟಲೊಣಗಿ ಬಾಯಾರತೊಡಗಿತು. ಹೇಳಿದರೆ ಅತ್ತೆಯೆಲ್ಲಿ ಬಯ್ಯುವಳೇನೋ ಎಂದು ಸುಮಾರು ಹೊತ್ತು ತಡೆದಳು. ಇನ್ನೇನು ತಡೆಯಲೇ ಆಗದೆಂದು ಅನಿಸಿದಾಗ ಮೆಲ್ಲನೆ ನನಗೆ ನೀರು ಬೇಕು ಎಂದು ಕುಸುಗುಟ್ಟಿದಳು. ಅಷ್ಟಕ್ಕೇ ಅತ್ತೆಯ ಸಹಸ್ರನಾಮ ಶುರುವಾಗಿಯೇಬಿಟ್ಟಿತು. “ಅದಕ್ಕೇ ನಾನು ನಿನ್ನನ್ನು ಬರಬೇಡವೆಂದು ಹೇಳಿದ್ದು. ಸಣ್ಣ ಮಕ್ಕಳಿಗೆಲ್ಲ ಇಡೀದಿನ ದನ ಮೇಯಿಸುವ ಉಸಾಬರಿ ಬೇಕಾ? ಹಸುವಾದ್ರೆ ಇಲ್ಲೇನಾದ್ರೂ ಹಣ್ಣೊ, ಹಂಪಲೋ ಕೊಡಬಹುದು. ಆಸರಿಕೆಗೆ ಬೇಕಂದ್ರೆ ಎಂಥಾ ಮಾಡೂದು? ಇದ್ದಬಿದ್ದ ಝರಿಯೆಲ್ಲಾ ಬೇಸಿಗೆಗೆ ಬತ್ತಿ ಹೋಯ್ದು. ಈಗ ನೀರೆಲ್ಲಿ ತಪ್ದು ಮಾರಾಯ್ತಿ?” ಎಂದು ರೇಗತೊಡಗಿದಳು. ನೀಲಿಗೆ ನೆಲ್ಲಿ ತಿಂದು ಗಂಟಲು ಹತ್ತಿ ನಿಲ್ಲದ ಬಿಕ್ಕಳಿಕೆ ಶುರುವಾಗಿಬಿಟ್ಟಿತು. ಇನ್ನಿವಳು ನಡೆಯಲಾರಳೆಂದು ಅವಳನ್ನೆತ್ತಿ ಸೊಂಟದ ಮೇಲಿಟ್ಟು ಅತ್ತೆ ಗುಡ್ಡ ಇಳಿಯತೊಡಗಿದಳು.
ಕಟ್ಟಿಗೆ ಕಡಿಯಲೆಂದು ಅಲ್ಲೇ ಕೆಲಸ ಮಾಡುತ್ತಿದ್ದ ನಾಗಿ ನೀಲಿಯನ್ನು ನೋಡಿದಳು. ನಾಗಿ ಮತ್ತು ನೀಲಿಯ ಅಮ್ಮ ಭಾರೀ ದೋಸ್ತಿಗಳು. ಅವಳನ್ನು ಕಂಡದ್ದೇ ನೀಲಿಯ ಅತ್ತೆ ಮತ್ತೊಮ್ಮೆ ನೀಲಿಯ ಮೇಲಿನ ಆಪಾದನೆಗಳನ್ನು ಪುನರಾವರ್ತಿಸಿದಳು. ನಾಗಿ ಅವಳ ಮಾತನ್ನು ಕೇಳಿ ನಗುತ್ತಾ, “ನಿಂಗೆಂತ ಮಗಾ, ನೀರು ಬೇಕು ಈಗ ಅಲ್ದಾ? ಈ ನಾಗಿ ಇಪ್ಪತಿಗೆ ಎಂಥ ಹೆದರಿಕೆ ಹೇಳು? ಈ ಕಾಡೇ ನನ್ನ ಮನಿ ಗೊತ್ತಿತ್ತ. ಈಗ ನೋಡು, ಮ್ಯಾಜಿಕ್ ಮಾಡಿ ನೀರು ತತ್ತೆ” ಅಂದವಳೇ ಅಲ್ಲೇ ಹತ್ತಿರದಲ್ಲಿದ್ದ ಬಲೆಯಲ್ಲಿ ನುಗ್ಗಿ ಒಂದು ದಪ್ಪನೆಯ ಬಳ್ಳಿಯಂತಹ ಗಿಡವನ್ನು ಎಳೆದಳು. ನೀಲಿಯ ಬಾಯಿಯ ಹತ್ತಿರ ತಂದು ಬಳ್ಳಿಯನ್ನು ಕಚ್ಚಕ್ಕೆಂದು ಕತ್ತರಿಸಿದ್ದೇ ಅದರೊಳಗಿಂದ ಸಳ್ ಎಂದು ನೀರು ಸುರಿಯಿತು. ನೀಲಿ ಚಪ್ಪರಿಸಿ ಆ ನೀರನ್ನು ಕುಡಿಯುತ್ತಾ “ಲಾಯ್ಕಿದ್ದು” ಎಂದು ನಕ್ಕಳು. ಹುಡುಗಿಯರೆಲ್ಲ ನಾಗಿಯ ಮ್ಯಾಜಿಕ್ ನೋಡುತ್ತಾ, “ಎಂಥ ಬಳ್ಳಿಯೇನೊ ಮಾರಾಯ್ತಿ? ಕುಡಿದು ಮತ್ತೆ ತಲೆತಿರುಗಿ ಬೀಳೂಕಿದ್ಲು, ಸಣ್ಣ ಹುಡುಗಿ ಬೇರೆ” ಎಂದು ಬೆದರಿದರು. ಅವರ ಮಾತಿಗೆ ನಾಗಿ ಖೊಳ್ಳನೆ ನಗುತ್ತಾ, “ದಿನಾ ಕಾಡಿಗೆ ಬತ್ರಿ. ಇನ್ನೂ ಕುಕ್ಕುಸದ ಬಳ್ಳಿ ಗೊತ್ತಿಲ್ಲ ನಿಮ್ಗೆ. ನಮ್ಮ ಅಜ್ಜಿ ಕಾಲದಿಂದ್ಲೂ ಕಾಡಲ್ಲಿ ಆಸರಾದ್ರೆ ಇದ್ರ ನೀರೇ ಕುಡಿಯೂದು. ಎಂಥದ್ದೂ ಆಗೂದಿಲ್ಲ. ಜೀವಕ್ಕೆ ಭಾರೀ ತಂಪು. ನೀವೂ ಆಸ್ರಾಗಿದ್ರೆ ಬಾಯೊಡ್ಡಿ” ಎನ್ನುತ್ತಾ ಅವರ ಬಾಯಿಗೂ ನೀರಿನ ಸಿಂಚನ ಮಾಡಿದಳು. ಅಲ್ಲೇ ಬಲ್ಲೆಯಲ್ಲಿ ನಾಲ್ಕುದಿನಗಳ ಹಿಂದೆ ಹಣ್ಣಿಗೆ ಇಟ್ಟಿದ್ದ ಹಲಸಿನ ಹಣ್ಣನ್ನು ಹೊರತೆಗೆದು ಕತ್ತಿಯಲ್ಲಿ ಅಡ್ಡಡ್ಡ ಸೀಳಿ ಎಲ್ಲರಿಗೂ ತಿನ್ನಲು ಕೊಟ್ಟಳು. ಬೆಳಗಿನಿಂದ ಕಾಡನ್ನು ಅಲೆದು ಸುಸ್ತಾಗಿದ್ದ ತರಳೆಯರಿಗೆ ಅಮೃತ ಸಿಕ್ಕಂತೆ ಖುಶಿಯಾಗಿತ್ತು.
ಕುಕ್ಕುಸದ ನೀರು ಕುಡಿದು, ಹಲಸಿನ ಹಣ್ಣು ತಿಂದ ನೀಲಿಗೆ ಹೊಸಚೈತನ್ಯ ಬಂದಂತಾಗಿತ್ತು. ಜಿಗಿಯುವ ನಡಿಗೆಯಲ್ಲಿ ಗುಡ್ಡವನ್ನು ಇಳಿಯತೊಡಗಿದಳು. ಆದರೆ ದನಕರುಗಳು ಮಾತ್ರ ಕೋಲುಹಿಡಿದು ಎಬ್ಬಿದರೂ ಮತ್ತೆ, ಮತ್ತೆ ಆಚೀಚೆಯ ಸೊಪ್ಪನ್ನು ಹರಿಯುತ್ತಾ ಮನೆಗೆ ಬರಲು ನಿರಾಕರಿಸುತ್ತಿದ್ದವು. ಅದನ್ನು ನೋಡಿದ ನೀಲಿ ಅತ್ತೆಯನ್ನು ಕೇಳಿದಳು, “ಹಾಗಾದ್ರೆ ಈ ದನಗಳಿಗೆ ಹೊಟ್ಟೆ ತುಂಬುವುದೇ ಇಲ್ವಾ? ಬೆಳಗಿಂದ ಸಂಜೆಯವರೆಗೆ ಮೆಂದರೂ ಮತ್ತೂ ತಿನ್ನುತ್ತಿವೆ?” ಅತ್ತೆ ನಕ್ಕು ದನಗಳ ಮೇವಿನ ಕತೆ ಹೇಳಿದಳು. ಈ ಭೂಮಿಯ ಮೊದಲ ಗೋಪಾಲಕ ಕೃಷ್ಣನಂತೆ. ಅವನಿಗೆ ಗೋವುಗಳೆಂದರೆ ಪ್ರಾಣವಂತೆ. ಒಂದು ಸಲ ಕೃಷ್ಣ ನೋಡೇಬಿಡುವ ಎಂದು ಏಳು ಹಗಲು, ಏಳು ರಾತ್ರಿ ನಿರಂತರವಾಗಿ ಗೋಕುಲದಲ್ಲಿ ದನಗಳನ್ನು ಮೇಯಿಸುತ್ತಲೇ ಹೋದನಂತೆ. ಆದರೂ ಈ ದನಗಳು ಸಂತೃಪ್ತಿಗೊಳ್ಳದೆ ಮತ್ತೆಯೂ ಮೇಯುತ್ತಲೇ ಇದ್ದವಂತೆ. ಸಿಟ್ಟಿಗೆದ್ದ ಕೃಷ್ಣ ದನವೊಂದರ ಪಕ್ಕೆಗೆ ಒದ್ದು, “ನಿಮ್ಮ ಹೊಟ್ಟೆ ಎಂದಿಗೂ ತುಂಬದಿರಲಿ” ಎಂದು ಶಾಪ ಕೊಟ್ಟನಂತೆ. ಹಾಗಾಗಿ ದನಗಳ ಪಕ್ಕೆಯಲ್ಲಿ ಕೃಷ್ಣನ ಕಾಲಿನ ಗುರುತು ಇದೆಯೆಂದು ಅತ್ತೆ ತೋರಿಸಿದಳು. ಅಂದಿನಿಂದ ಯಾವ ದನಗಳಿಗೂ ಹೊಟ್ಟೆ ತುಂಬುವುದೇ ಇಲ್ಲವಂತೆ. ಸದಾ ಏನಾದರೊಂದು ತಿನ್ನುತ್ತಲೇ ಇರುತ್ತವೆಯಂತೆ.
ಅತ್ತೆಯ ಕತೆಯನ್ನು ಕೇಳುತ್ತಾ ನೀಲಿ ಮನೆಸೇರಿದಳು. ರಾತ್ರಿ ಮಲಗಿದಾಗ ಯೋಚಿಸತೊಡಗಿದಳು, “ಅಲ್ಲಾ, ಆ ಕೃಷ್ಣ ಸಿಟ್ಟಿನಿಂದ ತುಳಿದದ್ದು ದನದ ಹೊಟ್ಟೆಯ ಒಂದೇ ಬದಿಗಲ್ಲವೆ? ಆದರೆ ಹೊಟ್ಟೆಯ ಎರಡೂ ಬದಿಯಲ್ಲೂ ಒಳಹೊಕ್ಕಿದಂತಹ ಗುರುತುಗಳಿರುವುದು ಹೇಗೆ?” ಯಾವುದಕ್ಕೂ ನಾಳೆ ಅತ್ತೆಯನ್ನು ಕೇಳಬೇಕು ಎಂದು ಅನಿಸಿತಾದರೂ ಹಾಗೆಲ್ಲ ಕೇಳಿದರೆ ಅತ್ತೆ ಇನ್ನೊಮ್ಮೆ ತನ್ನನ್ನು ಕಾಡಿಗೆ ಕರೆದುಕೊಂಡು ಹೋಗುವಳೋ ಇಲ್ಲವೋ ಎಂಬ ಅನುಮಾನವೂ ಕಾಡತೊಡಗಿತು.
ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಕುಕ್ಕುಸದ ಬಳ್ಳಿ ನೆಡೋದೇ ಸೈ
ಹೊರಡ್ವನಾ ಕಾಡಿಗೆ?
ನನಗೆ ಕೂಡಾ ನೀಲಿ ಜೊತೆಗೆ ಕಾಡಿನೊಳಗೆ ಸುತ್ತಿ ಬರುವ ಅನ್ನಿಸ್ತಿದೆ.
ಬನ್ನಿ ಹೋಗುವ