ನಮ್ಮ ಮೊದಲ ಆತಂಕ, ನಾವು ಹೆರಿಗೆ ಸಮಯದಲ್ಲಿ ಹೋಗಲು ಸಾಧ್ಯವಾಗುವುದೋ ಇಲ್ಲವೋ ಎಂಬುದು. ಆವತ್ತಿನ ಪರಿಸ್ಥಿತಿಯಲ್ಲಿ ಅದು ಕನಸಿನಲ್ಲೂ ಕೂಡ ಸಾಧ್ಯವಿರಲಿಲ್ಲ. ಮಗಳು ಉದ್ಯೋಗಿಯಾಗಿದ್ದರಿಂದ ಇಲ್ಲಿಗೆ ಬಂದು ಬಾಣಂತನ ಮುಗಿಸಿಕೊಂಡು ಹೋಗುವುದು ಸಾಧ್ಯವಿರಲಿಲ್ಲ. ಮಗಳಿಗೆ ಕೂಡ ಪ್ರಾರಂಭದ ಸಂಭ್ರಮ ಮುಗಿದ ಮೇಲೆ, ನಾನಾ ರೀತಿಯ ಆತಂಕ, ಅನುಮಾನಗಳು. ಕೆಲಸ, ಸಂಸಾರ, ಸ್ಕೂಲಿಗೆ ಹೋಗುತ್ತಿರುವ ಏಳು ವರ್ಷದ ಮಗ, ತನ್ನ ಆರೋಗ್ಯ, ಹೆರಿಗೆಗೆ ತಯಾರಿ, ಹೀಗೆ. ಎಲ್ಲವನ್ನೂ ಹೇಗೆ ವ್ಯವಸ್ಥಿತಗೊಳಿಸಬೇಕೆಂಬ ಗೊಂದಲ, ಸವಾಲು.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಮೂರನೆಯ ಬರಹ

ಮಾರ್ಚ್ 2021ರ ಮೊದಲ ವಾರವಿರಬೇಕು. ನಾನು, ನನ್ನ ಹೆಂಡತಿ ಬೆಂಗಳೂರಿನ ಮನೆಯ ಹಾಲಿನಲ್ಲಿ ಕುಳಿತು ನಿರುದ್ದಿಶ್ಯ ಮಾತುಕತೆಯಲ್ಲಿ ತೊಡಗಿದ್ದೆವು. ನೆದರ್‌ಲ್ಯಾಂಡ್ಸ್‌ನಿಂದ ಮಗಳ ದೂರವಾಣಿ ಕರೆ. ನಮಗೆ ಇಳಿ ಮಧ್ಯಾಹ್ನ. ಅವರಿಗೆ ದಿನದ ಪೂರ್ವಾಹ್ನ. ಲೋಕಾಭಿರಾಮವಾಗಿ ಮಾತನಾಡುತ್ತಾ ತಾನು ಹೇಳ ಹೊರಟಿರುವುದು ಅಂತಹ ಮುಖ್ಯ ಸಂಗತಿಯಲ್ಲವೆಂಬ ಭಾವನೆ ಮೂಡಿಸಿದಳು. ನೀನು ಮಗು ಬೇಕು, ಬೇಕು ಅಂತ ಕೇಳ್ತಾ ಇರ್ತೀಯಲ್ಲ, ಈಗ ಇನ್ನೊಂದು ಮಗು ಬರುತ್ತೆ ಬಿಡು ಅಂದಳು. ನಾನು ಅವಳ ಮಾತುಗಳನ್ನು ಏಕಾಗ್ರತೆಯಿಂದೇನೂ ಕೇಳಿಸಿಕೊಳ್ಳುತ್ತಿರಲಿಲ್ಲ. ಇದ್ದಕ್ಕಿದ್ದಂತೆ ಅವಳು ಮಾತನಾಡಿದ ವಾಕ್ಯ ನನಗೆ ತಟ್ಟಲು ಕೆಲವು ನಿಮಿಷಗಳೇ ಆದವು. ಸಾವರಿಸಿಕೊಂಡು ಏನು ನೀನು ಹೇಳುತ್ತಿರುವುದು ಎಂದು ಕೇಳಿದೆ. ಆವಾಗ ತಾನು ಗರ್ಭಿಣಿಯಾಗಿರುವುದಾಗಿ, ಹಾಗೆಂದು ವೈದ್ಯರು ಖಚಿತ ಪಡಿಸಿರುವುದಾಗಿ, ಅಕ್ಟೋಬರ್ ಕೊನೆ, ನವೆಂಬರ್ ಮೊದಲ ಭಾಗದಲ್ಲಿ ಹೆರಿಗೆ ಎಂದು ಹೇಳಿ, ಸರಿ ಈಗ ಅಮ್ಮನಿಗೆ ಫೋನ್ ಕೊಡು ಅಂದಳು. ಅಭಿನಂದನೆಗಳನ್ನು ಹೇಳಿ ನಾನು ಫೋನನ್ನು ಹೆಂಡತಿಗೆ ಕೊಟ್ಟೆ. ಅವಳದು ಕೂಡ ನನ್ನದೇ ರೀತಿಯ ಪ್ರತಿಕ್ರಿಯೆ. ದೂರವಾಣಿಯಲ್ಲಿ ಮಾತುಕತೆ ಮುಗಿದಾಗ ನಾವಿಬ್ಬರೂ ಒಂದೇ ರೀತಿಯಲ್ಲಿ ಸಂತೋಷ, ಉದ್ವೇಗಕ್ಕೆ ಒಳಗಾಗಿದ್ದೆವು.

ಆ ಕ್ಷಣದಿಂದಲೇ, ಆವತ್ತಿನಿಂದಲೇ ಚರ್ಚೆ ಪ್ರಾರಂಭ. ಹಾಗೆಯೇ ಆತಂಕ, ಯೋಚನೆಗಳು ಕೂಡ. ಅವು ಕೋವಿಡ್ ದಿನಗಳು. ವ್ಯಾಕ್ಸಿನ್ ಬಂದಿರಲಿಲ್ಲ. ಬಂದ ದೇಶಗಳಲ್ಲೂ ಇನ್ನೂ ಜನಸಂಖ್ಯೆಯ ಬಹುಭಾಗವನ್ನು ತಲುಪಿರಲಿಲ್ಲ. ಅಂತರರಾಷ್ಟ್ರೀಯ ವಿಮಾನ ಹಾರಾಟಕ್ಕೆ ನಿರ್ಬಂಧ ಇತ್ತು. ಕೆಲವು ದೇಶಗಳಲ್ಲಿ ನಿಯಮಗಳನ್ನು ಸಡಿಲಗೊಳಿಸಿದ್ದರೂ ಎಲ್ಲ ಕಡೆಯೂ ಉಸಿರು ಬಿಗಿ ಹಿಡಿದ ವಾತಾವರಣ. ಎಲ್ಲ ದೇಶಗಳಲ್ಲೂ ವಿವಿಧ ಸ್ತರಗಳ Lock Down. ಈ ಸನ್ನಿವೇಶದಲ್ಲಿ ಮಗು ಬೇಕಿತ್ತೇ ಎಂಬ ಪ್ರಶ್ನೆ ಬಾಯಿಗೆ ಬಂದರೂ ಕೇಳುವ ಹಾಗಿಲ್ಲ. ನಂತರ ತಿಳದು ಬಂದದ್ದೆಂದರೆ, ಜಗತ್ತಿನಾದ್ಯಂತ ಹೆಚ್ಚಿನ ಸಂಖ್ಯೆಯ ಹೆಂಗಸರು ಈ ಕಾಲಾವಧಿಯಲ್ಲೇ ಗರ್ಭಿಣಿಯರಾಗಿದ್ದರು.

ನಮ್ಮ ಮೊದಲ ಆತಂಕ, ನಾವು ಹೆರಿಗೆ ಸಮಯದಲ್ಲಿ ಹೋಗಲು ಸಾಧ್ಯವಾಗುವುದೋ ಇಲ್ಲವೋ ಎಂಬುದು. ಆವತ್ತಿನ ಪರಿಸ್ಥಿತಿಯಲ್ಲಿ ಅದು ಕನಸಿನಲ್ಲೂ ಕೂಡ ಸಾಧ್ಯವಿರಲಿಲ್ಲ. ಮಗಳು ಉದ್ಯೋಗಿಯಾಗಿದ್ದರಿಂದ ಇಲ್ಲಿಗೆ ಬಂದು ಬಾಣಂತನ ಮುಗಿಸಿಕೊಂಡು ಹೋಗುವುದು ಸಾಧ್ಯವಿರಲಿಲ್ಲ. ಮಗಳಿಗೆ ಕೂಡ ಪ್ರಾರಂಭದ ಸಂಭ್ರಮ ಮುಗಿದ ಮೇಲೆ, ನಾನಾ ರೀತಿಯ ಆತಂಕ, ಅನುಮಾನಗಳು. ಕೆಲಸ, ಸಂಸಾರ, ಸ್ಕೂಲಿಗೆ ಹೋಗುತ್ತಿರುವ ಏಳು ವರ್ಷದ ಮಗ, ತನ್ನ ಆರೋಗ್ಯ, ಹೆರಿಗೆಗೆ ತಯಾರಿ, ಹೀಗೆ. ಎಲ್ಲವನ್ನೂ ಹೇಗೆ ವ್ಯವಸ್ಥಿತಗೊಳಿಸಬೇಕೆಂಬ ಗೊಂದಲ, ಸವಾಲು.

ಹೇಗೆ ತಯಾರಾಗುವುದು? ನಮ್ಮ ಪ್ರಯಾಣವು ಗ್ಯಾರಂಟಿಯಿಲ್ಲ. ಹಾಗೆಯೇ ಅವಳ ಪ್ರಯಾಣವೂ ಕೂಡ. ಪರಸ್ಪರ ಹೋಗಲು/ಬರಲು ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಂಡೇ ತಯಾರಿ ಪ್ರಾರಂಭಿಸುವುದು ಒಳ್ಳೆಯದೆಂದು ಮಗಳು ಅನಿವಾರ್ಯವಾಗಿ ನಿರ್ಧರಿಸಿದಳು. ಹೆರಿಗೆಯ ದಿನಕ್ಕೆ ಮುಂಚಿನ ಮೂರು ನಾಲ್ಕು ವಾರಗಳಿಂದ ಅಡುಗೆಯವರನ್ನು ಒದಗಿಸುವ ಗುರುದ್ವಾರದವರ ಮೂಲಕ ವ್ಯವಸ್ಥೆ ಮಾಡಿಕೊಳ್ಳುವುದು, ಅಂದರೆ ವಾರಕ್ಕೆ ಮೂರು ನಾಲ್ಕು ದಿನ ಮನೆಗೆ ಬಂದು ಚಪಾತಿ, ಪಲ್ಯ ಮಾಡಿಟ್ಟು ಹೋಗುವುದು. ಕೆಲಸದವಳು, ಮನೆಯನ್ನು ಚೊಕ್ಕಟವಾಗಿಡುವವಳು ಈಗ ಹದಿನೈದು ದಿನಕ್ಕೊಮ್ಮೆ ಬರುತ್ತಾಳೆ. ಬದಲಿಗೆ, ಅವಳು ವಾರಕ್ಕೆ ಒಮ್ಮೆ ಬರುವ ವ್ಯವಸ್ಥೆ ಮಾಡಿಕೊಳ್ಳುವುದು. ಹೆರಿಗೆಯು ಆಸ್ಪತ್ರೆಯಲ್ಲೇ ಆಗುವ ಸಂದರ್ಭ ಬಂದರೆ, ಸ್ಕೂಲಿಗೆ ಹೋಗುವ ಏಳು ವರ್ಷದ ಮಗುವನ್ನು ಬೇರೆ ಬೇರೆ ಸ್ನೇಹಿತರ ಮನೆಯಲ್ಲಿ ಮೂರು-ನಾಲ್ಕು ದಿನದ ಲೆಕ್ಕದಲ್ಲಿ ಬಿಡುವುದು. ಯಾರ ಮನೆಯಲ್ಲಿ ಬಿಟ್ಟಿರುತ್ತಾರೋ ಆ ಮನೆಯವರೇ ಸ್ಕೂಲಿಗೆ ಕರೆದುಕೊಂಡು ಹೋಗುವ, ಸ್ಕೂಲಿಂದ ವಾಪಸ್ ಕರೆದುಕೊಂಡು ಬರುವ ಜವಾಬ್ದಾರಿಯನ್ನು ಕೂಡ ಒಪ್ಪಿಕೊಳ್ಳುವುಂತೆ ಕೋರುವುದು. ಇದೆಲ್ಲ ಸೂಚನೆ, ಜವಾಬ್ದಾರಿಗಳಿಗೂ ಸಹೋದ್ಯೋಗಿಗಳು, ಒಡನಾಡಿಗಳು ಸ್ಪಂದಿಸಿದರು.

ಈ ಮಧ್ಯೆ ಒಂದು ಆಶಾಕಿರಣ. ನೆದರ್‌ಲ್ಯಾಂಡ್ಸ್‌ನಲ್ಲಿ ಗರ್ಭಿಣಿ ಹೆಂಗಸರನ್ನು ಸರ್ಕಾರವೇ ಪ್ರೀತಿಯಿಂದ, ಕಾಳಜಿಯಿಂದ ನೋಡಿಕೊಳ್ಳುವ ಕ್ರಮ. ಮಕ್ಕಳಾಗುವುದು, ಹೆರಿಗೆ, ಬಾಣಂತನ ಎಲ್ಲವೂ ಸಹಜವಾದ ನೈಸರ್ಗಿಕ ಪ್ರಕ್ರಿಯೆ. ಇಡೀ ಕುಟುಂಬವೇ ಸಂಭ್ರಮ ಪಡಬೇಕಾದ ಸಂದರ್ಭ. ನಾಗರಿಕತೆಯ ಇದುವರೆಗಿನ ಇತಿಹಾಸದಲ್ಲಿ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ವೈದ್ಯರು, ದಾದಿಯರು ಇದೆಲ್ಲದರ ಗೊಡವೆಯೇ ಇಲ್ಲದೆ, ಹೆರಿಗೆಗಳು ನಡೆದಿವೆ, ಮಕ್ಕಳಾಗಿವೆ. ಈಗಲೂ ಅದೇ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು. ಇದು ಸರ್ಕಾರದ, ಸಮಾಜದ ತಾತ್ವಿಕತೆ.

ನೀವು ವಾಸಿಸುವ ಬಡಾವಣೆಗನುಗುಣವಾಗಿ ಮಿಡ್‌ವೈಫ್ ಗೊತ್ತುಮಾಡಿಕೊಳ್ಳಬೇಕು. ಈಕೆ ಏನೂ ಪರಿಣತ ವೈದ್ಯೆಯಲ್ಲ, ವಿಶೇಷ ತಜ್ಞೆಯೂ ಅಲ್ಲ. ಸೂಕ್ತ ತರಬೇತಿ ಪಡೆದ, ವೃತ್ತಿಯಲ್ಲಿ ಬದ್ಧತೆ ಇರುವ ದಾದಿ. ಗರ್ಭಿಣಿ ಹೆಂಗಸನ್ನು ಯಾವ ರೀತಿ ನೋಡಿಕೊಳ್ಳಬೇಕು ಎಂಬ ಸೂಕ್ಷ್ಮವನ್ನು ತಿಳಿದವಳು. ಎಲ್ಲ ಪರೀಕ್ಷೆಗಳನ್ನೂ ಅವಳೇ ಮಾಡಿಸುತ್ತಾಳೆ. ಔಷಧಿ, ಮಾತ್ರೆ, ಟಾನಿಕ್‌ಗಳನ್ನು ಕೂಡ ಸೂಚಿಸುತ್ತಾಳೆ. ತೀರಾ ಅಗತ್ಯ ಬಿದ್ದರೆ ಮಾತ್ರ ವೈದ್ಯರಿಗೆ, ವಿಶೇಷ ತಜ್ಞರಿಗೆ, ಆಸ್ಪತ್ರೆಗೆ ಪ್ರಸ್ತಾಪ ಸಲ್ಲಿಸಿ ಗರ್ಭಿಣಿಯರನ್ನು ಕಳಿಸಿಕೊಡುತ್ತಾಳೆ. ಈಕೆ ಅಸ್ಪತ್ರೆಯಿಂದೇನು ಕೆಲಸ ನಿರ್ವಹಿಸುವುದಿಲ್ಲ. ಮನೆಯಂತಿರುವ ಒಂದು ಫ್ಲಾಟ್‌ನಲ್ಲಿ ಈ ಮಿಡ್‌ವೈಫ್ ಇರುತ್ತಾಳೆ. ಗರ್ಭಿಣಿ ಹೆಂಗಸು ಅವಳನ್ನು ಕಾಣಲು ಹೋದಾಗ ಸಾಮಾನ್ಯವಾಗಿ ಅವಳೊಬ್ಬಳೇ ಇರುತ್ತಾಳೆ. ಒಬ್ಬ ಸಹಾಯಕಿ ಜೊತೆಯಲ್ಲಿರಬಹುದು. ಗರ್ಭಿಣಿ ಹೆಂಗಸು ಬಂದಾಗ ಖಾಸಗಿ, ಆತ್ಮೀಯ ವಾತಾವರಣವನ್ನು ಸೃಷ್ಟಿಸಿರಬೇಕು ಎಂಬುದು ಇದರ ಹಿಂದಿರುವ ಆಲೋಚನೆ. ನೀವು ಇಷ್ಟಪಟ್ಟರೆ ಮಾತ್ರ ಮಗುವಿನ ಲಿಂಗವನ್ನು ಕುರಿತು ತಿಳಿಸುತ್ತಾಳೆ. ಮುಂಚಿತವಾಗಿ ತಿಳಿದುಕೊಳ್ಳುವುದು ಬೇಡ ಎಂದು ನನ್ನ ಮಗಳು ಹೇಳಿದಾಗ, ವಿಶೇಷ ಗೌರವ, ಪ್ರೀತಿ ತೋರಿದಳಂತೆ. ಫೀಸ್ ವಸೂಲು ಮಾಡಲೆಂದೇ ನಿಮ್ಮನ್ನು ವಿಶೇಷ ತಜ್ಞರು ಅಥವಾ ಬೇರೆ ಪ್ರಯೋಗಾಲಯಗಳ ದಿಕ್ಕಿನಲ್ಲಿ ದೂಡುವುದಿಲ್ಲ. ಗರ್ಭಿಣಿಯು ಉದ್ಯೋಗ, ಸಾಂಸಾರಿಕ ಜವಾಬ್ದಾರಿಗಳನ್ನು ನಿರ್ವಹಿಸಿಕೊಂಡು ಚಟುವಟಿಕೆಯಿಂದಿರಲು ಬೇಕಾಗುವ ಆಹಾರದ ರೀತಿ ನೀತಿ ಮತ್ತು ವಿಟಮಿನ್‌ಗಳ ಅಗತ್ಯದ ಬಗ್ಗೆ ಮಾತ್ರ ನಿರಂತರವಾಗಿ ಮಾರ್ಗದರ್ಶನ ಮಾಡಲಾಗುತ್ತದೆ.

ಹೆರಿಗೆ ಮತ್ತು ಮಗುವಿನ ಜನನ ಒಂದು ಹರ್ಷೋಲ್ಲಾಸದ ಸಂದರ್ಭ. ಆದ್ದರಿಂದ ಅದು ಮನೆಯ ವಾತಾವರಣದಲ್ಲಿ, ಆವರಣದಲ್ಲಿ ಜರುಗಲಿ, ನಾವೇ (ಸರ್ಕಾರ) ನಿಮ್ಮಲ್ಲಿಗೆ ಬಂದು ಪ್ರೋತ್ಸಾಹಿಸುತ್ತೇವೆ ಎಂದು ಸೂಚಿಸುತ್ತಾರೆ. ಹೆರಿಗೆಯ ದಿನ ಸಮೀಪಿಸಿ, ಗಡವು ಮೀರಿದಾಗಲೂ ಹೆರಿಗೆಯಾಗದಿದ್ದರೆ ಮಾತ್ರ ನೀವು ಆಸ್ಪತ್ರೆಗೆ ಸೇರುವ ಯೋಚನೆ ಮಾಡಬಹುದು. ಅಂತಹ ಅಗತ್ಯ ಬಿದ್ದರೆ, ಯಾವ ಆಸ್ಪತ್ರೆ, ಯಾವ ಡಾಕ್ಟರ್ ಎಂದು ನಾವೇ ಸೂಚಿಸಿ, ಸೂಕ್ತ ಸಮಯದಲ್ಲಿ ಮಾರ್ಗದರ್ಶನ, ನೆರವು ನೀಡುತ್ತೇವೆ ಎಂಬ ತಿಳುವಳಿಕೆ-ಮಾಹಿತಿಯನ್ನು ಕೂಡ ಮುಂಚೆಯೇ ನೀಡಿರುತ್ತಾರೆ. ಎಲ್ಲವೂ ಅನಿಶ್ಚಯತೆಯಿಂದ ಕೂಡಿದ ದಿನಗಳಲ್ಲಿ, ಮಗಳು Midwife ಅನ್ನು ಪ್ರತಿಸಲ ಭೇಟಿ ಮಾಡಿದಾಗಲೂ ಪಡೆಯುತ್ತಿದ್ದ ಮಾರ್ಗದರ್ಶನ, ನೆರವು, ಸಲಹೆ, ಉಪಚಾರ ಇದರ ವಿವರಗಳನ್ನೆಲ್ಲ ನಮಗೆ ದೂರವಾಣಿಯಲ್ಲಿ ತಿಳಿಸುತ್ತಿದ್ದಾಗ ನಮಗೂ ಸಂತೋಷವಾಗುತ್ತಿತ್ತು. ಆತ್ಮವಿಶ್ವಾಸ ಹೆಚ್ಚುತ್ತಿತ್ತು. ದಿನ ತುಂಬಿದಂತೆ ಮಗಳಲ್ಲೂ ಭರವಸೆ, ಆತ್ಮವಿಶ್ವಾಸ ಹೆಚ್ಚುತ್ತಿರುವುದನ್ನು ನಾವು ಕಂಡೆವು, ಅನುಭವಿಸಿದೆವು.

ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಅಂತರರಾಷ್ಟ್ರೀಯ ಪ್ರಯಾಣಕ್ಕಿದ್ದ ನಿರ್ಬಂಧ ಸಡಿಲವಾಗುವುದೆಂದು ನಿರೀಕ್ಷಿಸಲಾಗಿತ್ತು. ವೀಸಾಗೆ ಅರ್ಜಿ ಹಾಕಿಕೊಳ್ಳಲು ಕೂಡ ಹೇಳಲಾಗುತ್ತಿತ್ತು. ಎಲ್ಲವೂ ಗಾಳಿ ಸುದ್ದಿ, ಯಾವುದೂ ನಿಗದಿಯಿಲ್ಲ. ವಿರೋಧಾಭಾಸದ ಸುದ್ದಿಗಳು ಕೂಡ ದಿನವೂ ಹರಡುತ್ತಿದ್ದವು.

ಅಕ್ಟೋಬರ್‌ನಲ್ಲಿ ಒಂದು ದಿನ ವೀಸಾ ಗವಾಕ್ಷಿ ಕೆಲವು ಘಂಟೆಗಳ ಕಾಲ ತೆರೆಯಿತು. ನಾವು ಕೆಲವು ವಿವರಗಳನ್ನು, ದಾಖಲೆಗಳನ್ನು ಹೊಂದಿಸಿಕೊಳ್ಳುವುದು ತಡವಾದಾಗ ಗವಾಕ್ಷಿ ಬಂದಾಗಿ, ಮತ್ತೆ ತೆರೆಯುವುದನ್ನೇ ಆತಂಕದಿಂದ ಕಾದೆವು. ಕೊನೆಗೆ ಅರ್ಜಿ ಹಾಕುವ ಅವಕಾಶ ಸಿಕ್ಕಿ, ನವೆಂಬರ್ ನಾಲ್ಕಕ್ಕೆ ಪ್ರಯಾಣ ಎಂದು ನಿಗದಿಯಾಯಿತು. ಆದರೆ ಕೋವಿಡ್ ನಿಯಮಾವಳಿಗಳು ಇನ್ನೂ ನೆದರ್‌ಲ್ಯಾಂಡಿನಲ್ಲಿ ಜಾರಿಯಲ್ಲಿದ್ದುದ್ದರಿಂದ ಭಾರತದಲ್ಲೇ ಇನಾಕ್ಯುಲೇಶನ್ ಮಾಡಿಸಿಕೊಂಡು ಸಂಬಂಧಪಟ್ಟ ದಾಖಲೆಪತ್ರಗಳನ್ನು ತೆಗೆದುಕೊಂಡು ಹೋಗುವುದು ಕಡ್ಡಾಯವಾಗಿತ್ತು.

4.11.2021ರ ಗುರುವಾರ ರಾತ್ರಿ ನಾವು ಬೆಂಗಳೂರಿನಿಂದ ಹೊರಡುವುದೆಂದು ನಿರ್ಧಾರವಾಯಿತು. 5.11.2021ರ ಶುಕ್ರವಾರ ಮಧ್ಯಾಹ್ನ ಮಗಳ ಮನೆ ತಲುಪಿದಾಗ ಯಾರಲ್ಲೂ ಆತಂಕವಿರಲಿಲ್ಲ. ಮೊಮ್ಮಗ ಸ್ಕೂಲಿಂದ ಬಂದು ಟೆಲಿವಿಷನ್ ನೋಡುತ್ತಾ ಟೆನಿಸ್ ತರಬೇತಿಗೆ ಹೋಗಲು ತಯಾರಾಗುತ್ತಿದ್ದ. ಮಗಳು ಟ್ರಾಮ್‌ನಲ್ಲಿ ಮಿಡ್‌ವೈಫ್ ಹತ್ತಿರ ಹೋಗಿದ್ದಳು. ಕುಡಿಯಲು ನಮಗೆ ಬಿಸಿನೀರು ಕೊಟ್ಟು ಅಳಿಯ, ಮೊಮ್ಮಗ ಟೆನಿಸ್ ಕ್ಲಬ್‌ಗೆ ಹೊರಟರು. ನಾವು ಮಗಳಿಗೆ ಕಾಯುತ್ತಾ ಕೂತೆವು. ಮಿಡ್‌ವೈಫ್ ಹತ್ತಿರ ಕೊನೆಯ ದಿನಗಳ ಮಾರ್ಗದರ್ಶನ ಮುಗಿಸಿಕೊಂಡು ಬಂದ ಮಗಳು ಹಸನ್ಮುಖಿಯಾಗಿದ್ದಳು, ಆರೋಗ್ಯವಾಗಿದ್ದಳು.

ಹೆರಿಗೆಗೆ ಗೊತ್ತಾದ ದಿನಕ್ಕೆ ಇನ್ನೂ ಒಂದು ವಾರವಿತ್ತು. ಮೊದಲನೇ ಹೆರಿಗೆ ಬೆಂಗಳೂರಿನಲ್ಲಿ 2014ರಲ್ಲಿ ಸಿಸೇರಿಯನ್ ಆಗಿತ್ತು. ತೀರಾ ಅನಿವಾರ್ಯ, ಅಗತ್ಯವಾದರೆ ಮಾತ್ರ ನೆದರ್‌ಲ್ಯಾಂಡ್ಸ್‌ನಲ್ಲಿ ಸಿಸೇರಿಯನ್‌ಗೆ ಕೈ ಹಾಕುತ್ತಾರೆ. ಇಲ್ಲದಿದ್ದರೆ ನೈಸರ್ಗಿಕ ಹೆರಿಗೆಗೆ ಕಾಯಬೇಕು ಎಂಬುದು ನಿಯಮ. ಏನೇ ಆಗಲಿ ಎರಡೂ ರೀತಿಯ ಹೆರಿಗೆಗೂ ಸಿದ್ಧವಾಗಿರಬೇಕೆಂದು ಮಿಡ್‌ವೈಫ್ ಸೂಚಿಸಿದ್ದಳು. ಇನ್ನು ಒಂದು ವಾರ ಆತಂಕ, ಅನಿಶ್ಚತತೆ. ಈ ಮಧ್ಯೆ ಒಂದು ಸಂಜೆ ಭಾರತೀಯ ಹೋಟೆಲ್ ಒಂದಕ್ಕೆ ಊಟಕ್ಕೆ ಹೋದೆವು. ಆ ಸಂಜೆ ನಮಗೆ ಗೊತ್ತಾಗದೆ ಹೋಗಿದ್ದ ಒಂದು ಸಂಗತಿಯೆಂದರೆ, ಮುಂದಿನ ಮೂರು ತಿಂಗಳು ನಾವು ಎಲ್ಲೂ ಹೊರಗೆ ಹೋಗುವ ಹಾಗಿರಲಿಲ್ಲ. ಅದೇ ಹೋಟೆಲಿನಲ್ಲಿ ಮೊದಲ ಮತ್ತು ಕೊನೆಯ ಹೊರಗಡೆಯ ಊಟ, ಈ ಪ್ರವಾಸದ ಮಟ್ಟಿಗೆ. ಮೂರೇ ದಿನದಲ್ಲಿ ಲಾಕ್‌ಡೌನ್ ಘೋಷಣೆಯಾಯಿತು.

12ನೇ ನವೆಂಬರ್ ಬೆಳಿಗ್ಗೆ ತನಕ ನೋಡಿ, ಸುಮಾರು ಎಂಟು ಘಂಟೆಯ ಹೊತ್ತಿಗೆ ಅಳಿಯ, ಮಗಳು ಡೆಲಿವರಿಗೆ ಆಸ್ಪತ್ರೆಗೆ ಹೊರಟರು. ಮೊಮ್ಮಗನನ್ನು ಸ್ಕೂಲಿಗೆ ಅದೇ ತಾನೇ ಬಿಟ್ಟು ಬಂದಿದ್ದರು. ಸುಮಾರು 10.10ರ ಹೊತ್ತಿಗೆ ನನ್ನ ಮೊಮ್ಮಗಳು ಸಿದ್ಧಿ, ಆಸ್ಪತ್ರೆಯಲ್ಲಿ ಜನಿಸಿದಳು. ಸುಮಾರು 32 ವರ್ಷಗಳ ಹಿಂದೆ ಇನ್ನೊಂದು ಶುಕ್ರವಾರ ಇದೇ ಸಮಯದಲ್ಲಿ ನನ್ನ ಮಗಳು ಬೆಂಗಳೂರಿನಲ್ಲಿ ಜನಿಸಿದ್ದಳು.

ಆಸ್ಪತ್ರೆಯೊಳಗೆ ಹೊರಗಿನವರನ್ನು ಬಿಡುವುದಿಲ್ಲ ಎಂಬ ಕಠಿಣ ನಿಯಮ. ಅದೂ, ಇದೂ ವಿತಂಡವಾದ ಮಾಡಿ ನಾನು ನನ್ನ ಹೆಂಡತಿ ಎರಡು ಸಲ ಆಸ್ಪತ್ರೆಗೆ ಹೋಗಿ ಬಂದೆವು. ನಾವು ಹೋಗುವ ಅವಶ್ಯಕತೆಯೇ ಇರಲಿಲ್ಲ. ಶ್ರೀಲಂಕಾದ ದಾದಿಯೊಬ್ಬಳು ಚೆನ್ನಾಗಿ ನೋಡಿಕೊಂಡಳು. ನನ್ನ ಮಗಳು ದಕ್ಷಿಣ ಭಾರತೀಯಳು ಎಂದು ಗೊತ್ತಾದ ತಕ್ಷಣ ಕಾಫಿಗೂ ಕೂಡ ವ್ಯವಸ್ಥೆ ಮಾಡಿದ್ದಳು. ಮಗಳಿಗೆ ನೀಡಿದ್ದ ಕೋಣೆ, ಪಂಚತಾರಾ ಹೋಟೆಲ್ ಮಟ್ಟದ್ದಾಗಿತ್ತು.

ಒಮ್ಮೆ ನೀವು ಮಿಡ್‌ವೈಫ್ ಹತ್ತಿರ ಗರ್ಭಿಣಿ ಹೆಂಗಸು ಎಂದು ನೋಂದಾಯಿಸಿಕೊಂಡರೆ ಸಾಕು, ನಂತರ ಎಲ್ಲ ವೆಚ್ಚ, ಚಿಕಿತ್ಸೆ, ಔಷಧಿ, ಶಸ್ತ್ರಚಿಕಿತ್ಸೆ, ಆಸ್ಪತ್ರೆಯ ಖರ್ಚು, ಎಲ್ಲದರ ಜವಾಬ್ದಾರಿಯೂ ವಿಮಾ ಕಂಪನಿಯದೇ! ಅಮೆರಿಕದಂತೆ ಇಲ್ಲೂ ಕೂಡ ಪ್ರತಿಯೊಬ್ಬ ನಾಗರಿಕನೂ/ವಲಸಿಗನೂ ವಿಮೆಯನ್ನು ಮಾಡಿಸಿಕೊಳ್ಳುವುದು ಕಡ್ಡಾಯ. ಮಗು ಹುಟ್ಟಿದ ತಕ್ಷಣವೇ ವಿಮೆ ತೆಗೆದುಕೊಳ್ಳುವುದು ಕಡ್ಡಾಯ. ಇಲ್ಲದಿದ್ದರೆ ದಂಡ ಹಾಕಲಾಗುತ್ತದೆ. ಭಾರತದಲ್ಲೂ ಈಗ ವಿಮಾ ಸೌಕರ್ಯ ಹರಡುತ್ತಿದೆ. ಆದರೆ ಅದು ನಾಗರಿಕರ ಪರವಾಗಿಲ್ಲ. ಆಸ್ಪತ್ರೆ ಮತ್ತು ವೈದ್ಯರ ಪರವಾಗಿದೆ. ವಿಮೆಯ ಮೊತ್ತವನ್ನು ಪಡೆಯುವುದು ಅಷ್ಟು ಸುಲಭವಲ್ಲ. ಅಮೆರಿಕದ ವಿಮಾ ವ್ಯವಸ್ಥೆಯೂ ಕೂಡ ವೈದ್ಯರನ್ನು ರಕ್ಷಿಸುವುದಕ್ಕೇ ಹೆಚ್ಚು ಗಮನ ಕೊಡುತ್ತದೆ. ವಿಮೆಯು ದುಬಾರಿ ಕೂಡ. ಇಲ್ಲಿಯ ವಿಮಾ ವ್ಯವಸ್ಥೆ, ನಾಗರಿಕರ ಪರವಾಗಿದೆ. ಒಮ್ಮೆ ನೋಂದಾಯಿಸಿಕೊಂಡರೆ, ಹೆರಿಗೆ ಆಗುವ ತನಕ ಚಿಕ್ಕ ಪುಟ್ಟ ಮೊತ್ತಗಳಿಂದ ಹಿಡಿದು ಹೆರಿಗೆ ಖರ್ಚಿನ ತನಕ ಎಲ್ಲವನ್ನೂ ವಿಮಾ ಕಂಪನಿಯೇ ನೋಡಿಕೊಳ್ಳುತ್ತದೆ. ನೀವು ನಿರಾತಂಕವಾಗಿರಬಹುದು. ಮೊದಲು ನೀವು ಖರ್ಚು ಮಾಡಿ ನಂತರ ವಿಮಾ ಕಂಪನಿಯಿಂದ ವಾಪಸ್ ಪಡೆಯುವ ಕಿರಿಕಿರಿ ಇರುವುದಿಲ್ಲ.

ಸಿಸೇರಿಯನ್ ಹೆರಿಗೆ ಆದರೂ, ಅನಗತ್ಯವಾಗಿ ಒಂದು ಕ್ಷಣ ಕೂಡ ನಿಮ್ಮನ್ನು ಆಸ್ಪತ್ರೆಯಲ್ಲಿ ಇಟ್ಟುಕೊಳ್ಳುವುದಿಲ್ಲ. ಎರಡು ದಿನ ಇಟ್ಟುಕೊಂಡು ಮನೆಗೆ ಕಳಿಸಿಬಿಡುತ್ತಾರೆ. ಅಲ್ಲಿಂದ ಮುಂದೆ ಎಲ್ಲವೂ ಸರ್ಕಾರದ ಜವಾಬ್ದಾರಿ, ಕಾಳಜಿಯುತ ಜವಾಬ್ದಾರಿ. ನೆದರ್‌ಲ್ಯಾಂಡ್ಸ್ ತುಂಬಾ ಹೆಮ್ಮೆ ಪಡುವ Karamzorg ಪದ್ಧತಿಯ ಎಲ್ಲ ಪ್ರಕ್ರಿಯೆಗಳು ಪ್ರಾರಂಭವಾಗುತ್ತದೆ. ಸುಮಾರು ಎರಡು ವಾರ ಮನೆಗೆ ಒಬ್ಬರು ಸಹಾಯಕರನ್ನು ಕಳಿಸುತ್ತಾರೆ. ಮನೆ ಕೆಲಸ, ಸುತ್ತು ಕೆಲಸ, ಅಡುಗೆ ಮಾಡುವುದು, ಬಾಣಂತಿಗೆ ಉಪಚಾರ, ಬುದ್ಧಿಮಾತು, ಎಲ್ಲವೂ ಅವಳದೇ ಜವಾಬ್ದಾರಿ. ಒಬ್ಬಳಿಗೇ ಇಷ್ಟೆಲ್ಲ ಮಾಡಲು ಸಾಧ್ಯವೇ ಎಂದು ನಾನು ಯೋಚಿಸಿ ಹೆದರಿದ್ದೆ. ಬಂದವಳು ವೃತ್ತಿಪರೆ, ಸ್ನೇಹಶೀಲೆ, ಹಸನ್ಮುಖಿ. ಎಲ್ಲರೊಡನೆ ಬೆರೆತು, ಚೂರೂ ದಣಿವು ತೋರದೆ, ಎಲ್ಲವನ್ನೂ ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದಳು. ಮನೆಯಲ್ಲಿ ಎಲ್ಲರ ಗಮನ ಸಹಜವಾಗಿ ನವಶಿಶುವಿನ ಕಡೆಗೇ ಇರುತ್ತದೆ. ಬಾಣಂತಿಯ ದೈಹಿಕ, ಮಾನಸಿಕ ಅಗತ್ಯಗಳನ್ನು ಕೂಡ ಗಮನಿಸಿ, ಅವಳು ಖಿನ್ನತೆಗೆ ಒಳಗಾಗದಂತೆ ನೋಡಿಕೊಳ್ಳಬೇಕು ಎಂಬುದು ಕೂಡ ಬಾಣಂತಿ ನೀತಿಯ ಒಂದು ಭಾಗ. ಇದರ ಮೇಲ್ವಿಚಾರಣೆಗೆ ಇನ್ನೊಬ್ಬಳು ಆಗಾಗ್ಗೆ ಬಂದು ಸಹಾಯಕಿಯೊಡನೆ, ಬಾಣಂತಿಯೊಡನೆ ವಿವರವಾಗಿ ಚರ್ಚಿಸಿ, ಸಂಶೋಧನಾ ವರದಿಯ ರೀತಿಯಲ್ಲಿ ಪುಟಗಟ್ಟಲೆ ವರದಿ ತಯಾರಿಸುತ್ತಾಳೆ. ಇಬ್ಬರ ನಡುವೆ ಸಮಾಲೋಚನೆ ನಡೆಯುತ್ತಲೇ ಇರುತ್ತದೆ. ವರದಿ ಬರೆಯುವಾಗಿನ ಅವಳ ಏಕಾಗ್ರತೆ, ತೊಡಗುವಿಕೆ ಕಂಡು ನನಗೆ ತುಂಬಾ ಗೌರವ ಮೂಡಿತು. ವರದಿಯಲ್ಲಿ ಒಂದು ಆಯಾಮವನ್ನು ಕಡ್ಡಾಯವಾಗಿ ನಮೂದಿಸಲೇಬೇಕು. ಮನೆಯ ವಾತಾವರಣ, ಮನೋಧರ್ಮ, ಎಲ್ಲವೂ ಹೊಸ ಮಗುವಿನ ಲಾಲನೆ, ಪಾಲನೆ, ಬೆಳವಣಿಗೆಗೆ ಪೋಷಕವಾಗಿ ಇದೆಯೇ, ಇಲ್ಲವೇ ಎಂಬುದನ್ನು ಚರ್ಚಿಸಲೇಬೇಕು. ಇವರಿಬ್ಬರೂ ಕೆಲಸ ಮಾಡುತ್ತಿದ್ದ ಕಾಲಾವಧಿಯಲ್ಲಿ ಮನೆ-ಮನಸ್ಸು ಎರಡೂ ತುಂಬಿದ ಹಾಗಿತ್ತು. ಅವರಿಗೆ ಇಂಗ್ಲಿಷ್ ಬರುವುದಿಲ್ಲ. ನಮಗೆ ಡಚ್ ಬರುವುದಿಲ್ಲ. ಆದರೂ ಎಷ್ಟೊಂದು ಮಾತನಾಡುತ್ತಿದ್ದೆವು, ನಗುತ್ತಿದ್ದೆವು, ಚುಡಾಯಿಸುತ್ತಿದ್ದೆವು. ನೆದರ್‌ಲ್ಯಾಂಡ್ಸ್ ಬದುಕಿನ ಬಗ್ಗೆ ಇಬ್ಬರೂ ಎಷ್ಟೊಂದು ತಿಳಿಸಿಕೊಟ್ಟರು.

ನನ್ನ ಮಗಳು ಜರ್ಮನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದುದರಿಂದ, Maternity Leave ಸೌಕರ್ಯ ಇತ್ತು. ಅಳಿಯ ಭಾರತೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಯಾವ ರೀತಿಯ ಸೌಕರ್ಯವೂ ಇರಲಿಲ್ಲ. ಕೇಂದ್ರ ಸರ್ಕಾರ, ಸ್ತ್ರೀ ಉದ್ಯೋಗಿಗಳಿಗೆ ಹೆರಿಗೆ-ಬಾಣಂತನಕ್ಕೆ ಸಂಬಂಧಪಟ್ಟ ಹಾಗೆ ದೀರ್ಘಕಾಲದ ರಜೆ ನೀಡುವ ನೀತಿಯನ್ನು ಜಾರಿಗೆ ತಂದಾಗ, ಉನ್ನತ ಅಧಿಕಾರಿಗಳಾಗಿ ನಮಗೆಲ್ಲ ಹೊಂದಿಕೊಳ್ಳಲು ತುಂಬಾ ಕಷ್ಟವಾಯಿತು. ಇದ್ದಕ್ಕಿದ್ದಂತೆ ಇವರು ಹೀಗೆ ತಿಂಗಳಾನುಗಟ್ಟಲೆ ರಜಾ ಹಾಕಿ ಹೋಗಿಬಿಟ್ಟರೆ? ಎಂಬುದೇ ನಮ್ಮಲ್ಲರ ಮಾನಸಿಕ ತಕರಾರು. ರಜಾ ಹೋದವರಿಗೆ ಪರ್ಯಾಯವಾಗಿ ಇನ್ನೊಬ್ಬರನ್ನು ನೇಮಿಸುವುದಿಲ್ಲ. ಉಳಿದವರು ರಜಾ ಹೋದವರ ಜವಾಬ್ದಾರಿಯನ್ನು ಹಂಚಿಕೊಳ್ಳುವುದಿಲ್ಲ. ಈ ನೀತಿ ಹೊಸದಾಗಿ ಜಾರಿಗೆ ಬರುವ ಹೊತ್ತಿಗೆ ನಾನು ಇಲಾಖಾ ಮುಖ್ಯಸ್ಥನಾಗಿದ್ದೆ. ಹೊಸ ನೀತಿಯನ್ನು ಜಾರಿಗೆ ತರುವುದು, ಎಲ್ಲರನ್ನೂ ಸಂತೋಷವಾಗಿಟ್ಟುಕೊಳ್ಳುವುದು ಸ್ವಲ್ಪ ಕಷ್ಟವೇ ಆಯಿತು. ಹೆಂಗಸರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಮಾಡಬೇಕಾದರೆ, ಈ ರೀತಿಯ ಅನುಕೂಲಗಳು ಅಗತ್ಯ. ಪಶ್ಚಿಮದಲ್ಲಿ ಸ್ತ್ರೀ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆಯೆಂದರೆ, ಈ ರೀತಿಯ ಎಲ್ಲ ಅನುಕೂಲಗಳನ್ನು ಅವರು ಹೃತ್ಪೂರ್ವಕವಾಗಿ ಜಾರಿಗೆ ತಂದಿದ್ದಾರೆ ಎಂದೇ ಅರ್ಥ. ಕೃಷಿ ಕ್ಷೇತ್ರದಲ್ಲಿ, ಅಸಂಘಟಿತ ವಲಯದಲ್ಲಿ ದುಡಿಯುವ ಕೋಟ್ಯಂತರ ಮಹಿಳೆಯರು, ಯಾವ ರೀತಿಯ ಸವಲತ್ತು, ಸೌಕರ್ಯಗಳೂ ಇಲ್ಲದೆ, ಈಗಲೂ ದುಡಿಯುತ್ತಿದ್ದಾರೆ.

ಕೋವಿಡ್ ಲಾಕ್‌ಡೌನ್ ಪ್ರಾರಂಭವಾಗಿದ್ದರಿಂದ ನಾವು ಗೃಹಬಂಧನಕ್ಕೊಳಗಾದೆವು. ಯುರೋಪಿನ ಚಳಿಗಾಲ, ಹಿಮಪರ್ವ, ಕಗ್ಗತ್ತಲೆ, ಶೀತಗಾಳಿ, ಎಲ್ಲವನ್ನೂ ಅನುಭವಿಸಿದ್ದಾಯಿತು. ಒಂದು ರೀತಿಯ ದಣಿವು, ಅಸಹಾಯಕತೆ, ಸೋಮಾರೀತನ. ಕೈ ಕಾಲು ಕಟ್ಟಿ ಹಾಕಿದ ಅನುಭವ. ವ್ಯಂಗ್ಯವೆಂದರೆ, ನಾನು ಇಲ್ಲಿದ್ದಾಗ ಅಲ್ಲಿ ನನ್ನ “ಕೋವಿಡ್ ದಿನಚರಿ” ಪುಸ್ತಕ ಹೊರಬಂತು. ಭಾರತದ ಎರಡನೇ ಲಾಕ್‌ಡೌನ್ ಕಾಲಾವಧಿಯ ನಮ್ಮ ಜೀವನ, ಸಂಕಷ್ಟ, ಆಲೋಚನೆ ಹೇಗಿತ್ತು ಎಂಬುದರ ದಿನಚರಿ/ದಾಖಲೆ ಅದು. ಆ ದಿನಚರಿಯಲ್ಲಿ ಬರೆದದ್ದಕ್ಕಿಂತಲೂ ತೀವ್ರವಾಗಿ ನಾವು ಕೋವಿಡ್ ಕಷ್ಟಗಳನ್ನು ಅನುಭವಿಸಿದ್ದು ನೆದರ್‌ಲ್ಯಾಂಡ್ಸ್‌ನಲ್ಲಿ. ಅದನ್ನು ಕುರಿತು ನಾನು ಬರೆಯಲಿಲ್ಲ. “ಮನುಷ್ಯರು ಬದಲಾಗುವರೆ?” ಸಂಕಲನದ ಕತೆಗಳನ್ನು ಬರೆಯುತ್ತಿದ್ದೆ. ಕೋವಿಡ್, ಪ್ಲೇಗ್, ಕಥನ ಹೇಳುವುದು ಕೂಡ ಅದನ್ನೇ ತಾನೇ? ಬೇರೆ ಬೇರೆ ಚಹರೆಗಳಲ್ಲಿ, ತೀವ್ರತೆಗಳಲ್ಲಿ ಕಾಣಿಸಿಕೊಳ್ಳುತ್ತದೆ, ಅಷ್ಟೇ. ಯಾವುದು ಚಿರವಾಸ್ತವವೋ ಅಥವಾ ಚರವಾಸ್ತವವೋ ಗೊತ್ತಾಗುವುದಿಲ್ಲ. ಮನುಷ್ಯ ಬದಲಾಗುವುದಿಲ್ಲ ಅನ್ನುವುದು ಸತ್ಯವಲ್ಲ. ಬದಲಾಯಿಸಲು ಮನುಷ್ಯನಿಗೇ ಇಷ್ಟವಿಲ್ಲ, ಆಸೆಯಿಲ್ಲ ಎಂಬುದೇ ಸತ್ಯ.

ಬಾಣಂತಿಯನ್ನು ನೋಡಿಕೊಳ್ಳುವ ಸರ್ಕಾರದ/ಸಮಾಜದ ವ್ಯವಸ್ಥೆ, ಇಲ್ಲಿಯ health care ವ್ಯವಸ್ಥೆ, ಸಾಮಾಜಿಕ ರಕ್ಷಣೆಯ ವ್ಯವಸ್ಥೆಗೆ ಒಂದು ರೂಪಕವಾಗಿ ನನಗೆ ಕಂಡಿದೆ. ಪ್ರತಿ ಬಡಾವಣೆಗೂ ಸರ್ಕಾರವೇ ಒಬ್ಬ ವೈದ್ಯರನ್ನು ನಿಗದಿ ಮಾಡುತ್ತದೆ. ಆದರೆ ಈ ವೈದ್ಯರು ಅಷ್ಟು ಸುಲಭಕ್ಕೆ ನಿಮಗೆ ಔಷಧಿ, ಮಾತ್ರೆ, ಚುಚ್ಚುಮದ್ದು ಕೊಡುವುದಿಲ್ಲ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೆ ಸಾಕು ಔಷಧಿ ಮಾತ್ರೆಗೆ ವೈದ್ಯರ ಕಡೆಗೆ ತಕ್ಷಣ ನುಗ್ಗುವುದನ್ನು ಒಪ್ಪುವುದಿಲ್ಲ, ಪ್ರೋತ್ಸಾಹಿಸುವುದಿಲ್ಲ. ಹಾಗೆಯೇ ಸಹಜವಾಗಿ ಒಂದೆರಡು ದಿನಗಳಲ್ಲಿ ವಾಸಿಯಾಗುವುದಾದರೆ ಆಗಲಿ, ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಲಿ ಎಂಬ ನೈಸರ್ಗಿಕ ಚಿಕಿತ್ಸಾ ವಿಧಾನವಿದೆ. ಇಷ್ಟಕ್ಕೂ ನಿಮಗೆ ಔಷಧಿ, ಮಾತ್ರೆಗಳು ಬೇಕೆಂದರೆ, ವೈದ್ಯರ ಸೂಚನಾ ಟಿಪ್ಪಣಿ ಅಥವಾ ಆದೇಶವಿಲ್ಲದೆಯೇ ಅಂಗಡಿಗಳಿಂದ ನೀವೇ ನೇರವಾಗಿ ಪಡೆಯಬಹುದು. ನನಗೇ ವೈಯಕ್ತಿಕವಾಗಿ ಕೆಲವು ಮಾತ್ರೆಗಳು ಬೇಕಾಗುತ್ತಿದ್ದವು. ಭಾರತೀಯ ವೈದ್ಯರು ಸೂಚಿಸಿದ್ದ ಮಾತ್ರೆಗಳಿಗೆ ಸಮಾನವಾದ ಮಾತ್ರೆಗಳು ಯಾವುದು ಎಂದು ಗೂಗಲ್‌ನಲ್ಲಿ ಹುಡುಕಿ ನಾನೇ ಅಂಗಡಿಯಲ್ಲಿ ಕೊಳ್ಳುತ್ತಿದ್ದೆ. ಅಮೆರಿಕದಲ್ಲಿ ಹೀಗೆ ಮಾಡಲು ಸಾಧ್ಯವಿಲ್ಲ. ಎಲ್ಲವೂ ವೈದ್ಯರ ಮೂಲಕವೇ ಆಗಬೇಕು. ಸಣ್ಣ ತಲೆನೋವು ಜ್ವರಕ್ಕೂ ವೈದ್ಯರು ಚೀಟಿ ಬರೆದುಕೊಟ್ಟರೆ ಮಾತ್ರೆ, ಔಷಧಿ, ಇಲ್ಲದಿದ್ದರೆ ಇಲ್ಲ.

ಆದರೆ ನಿಮಗೆ ತುರ್ತು ಚಿಕಿತ್ಸೆ, ನಿರಂತರವಾದ ಶುಶ್ರೂಷೆ ಬೇಕೆಂದು ವೈದ್ಯರಿಗೆ ಮನವರಿಕೆ ಆದರೆ, ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ವ್ಯವಸ್ಥೆ ಸೂಕ್ಷ್ಮವಾಗಿ ಸ್ಪಂದಿಸುತ್ತದೆ. ನನ್ನ ಮೊಮ್ಮಗಳಿಗೆ mumps (ಉರಿಯೂತ) ಬಂತು. ದೂರವಾಣಿ ಕರೆ ಮಾಡಿ ಹೇಳಿದಾಗ ತುರ್ತು ಚಿಕಿತ್ಸಾ ವಿಭಾಗಕ್ಕೆ ರಾತ್ರೋರಾತ್ರಿ ಸೇರಿಸಿಕೊಂಡರು. ನನ್ನ ಮೊಮ್ಮಗಳು, ಅವಳ ತಂದೆ ಮತ್ತು ಅಣ್ಣನನ್ನು ಬಿಟ್ಟರೆ ಬೇರೆ ಗಂಡಸರನ್ನು ಇಷ್ಟಪಡುತ್ತಿರಲಿಲ್ಲ, ಒಗ್ಗಿಕೊಳ್ಳುತ್ತಿರಲಿಲ್ಲ. ಮಗುವನ್ನು ಪರೀಕ್ಷಿಸಲು ಒಬ್ಬ ಪುರುಷ ವೈದ್ಯರು ಬಂದಾಗ ತುಂಬಾ ತಗಾದೆ ಮಾಡಿದಳು. ಏಕೆಂದು ನಾವು ವಿವರಿಸಿದಾಗ, ಮುಂದೆ ಪುರುಷ ವೈದ್ಯರು ಬರಲೇ ಇಲ್ಲ, ಮಹಿಳಾ ವೈದ್ಯರೇ ಬರುತ್ತಿದ್ದರು.

ಮಕ್ಕಳಿಗೆ ಯಾವ ಯಾವ ವಯಸ್ಸಿನಲ್ಲಿ ಯಾವ ಯಾವ ಇನಾಕ್ಯುಲೇಶನ್ ಕೊಡಬೇಕು ಎಂದರ ಸರ್ಕಾರವೇ ನಿರ್ಧರಿಸಿ, ನಿಮಗೆ ಸೂಚನಾ ಪತ್ರವನ್ನು ಮುಂಚಿತವಾಗಿಯೇ ಕಳಿಸಿ, ಇಂಥ ದಿನ ಈ ಆಸ್ಪತ್ರೆಗೆ ಬನ್ನಿ ಎಂದು ಆಹ್ವಾನಿಸುತ್ತಾರೆ. ಒಂದು ವ್ಯವಸ್ಥೆ ಮತ್ತು ಪದ್ಧತಿಯನ್ನು ಹುಟ್ಟುಹಾಕುವುದು ಸುಲಭ. ಆದರೆ ಅದನ್ನು ಶಿಸ್ತಿನಿಂದ ನಡೆಸಿಕೊಂಡು ಹೋಗುವುದು ಕಷ್ಟ. ಅದಕ್ಕೆ ತುಂಬಾ ಬದ್ಧತೆ, ಕಾಳಜಿ ಬೇಕಾಗುತ್ತದೆ. ಇಲ್ಲಿ ನನಗೆ ಆ ಬದ್ಧತೆ, ಕಾಳಜಿ ಕಂಡು ಬಂತು.

ನಾಗರಿಕರ ಆರೋಗ್ಯವು ಸರ್ಕಾರದ ಜವಾಬ್ದಾರಿ ಎಂಬುದನ್ನು ಹೃತ್ಪೂರ್ವಕವಾಗಿ ಒಪ್ಪಿಕೊಂಡಿರುವ ಸರ್ಕಾರವು ಇದಕ್ಕೆ ಬೇಕಾದ ಸಂಪನ್ಮೂಲವನ್ನು ತೆರಿಗೆಯ ಮೂಲಕ ಸಂಗ್ರಹಿಸುತ್ತದೆ. ಉದ್ಯೋಗ ಮಾಡುವವರೆಲ್ಲ ವಿಮೆ ತೆಗೆದುಕೊಳ್ಳಲೇ ಬೇಕು. ಉದ್ಯೋಗಕ್ಕೆ ಸಂಬಂಧಪಟ್ಟ ರಕ್ಷಣೆಯನ್ನು ಈ ವಿಮೆ ಒದಗಿಸುತ್ತದೆ. ಇದಕ್ಕೆ ಬೇಕಾದ ಹಣವನ್ನು ಉದ್ಯೋಗಿಗಳೇ ನೀಡಬೇಕು. ಇನ್ನೊಂದು ಸಾರ್ವತ್ರಿಕ ವಿಮೆ. ಇದಕ್ಕೆ ಎಲ್ಲ ನಾಗರಿಕರು, ವಲಸಿಗರು ಅರ್ಹರು.

ವಿಮೆಯ ಮಾತು ಹಾಗಿರಲಿ, ದಿನನಿತ್ಯದ ಬದುಕನ್ನು ರೂಪಿಸುವಲ್ಲೇ ಸರ್ಕಾರವು ಬಾಣಂತಿಯರನ್ನು ಕುರಿತು ತೋರುವ ಕಾಳಜಿ, ಎಚ್ಚರವನ್ನೇ ತೋರುತ್ತದೆ. ದಿನಪತ್ರಿಕೆಗಳಲ್ಲಿ ಈ ಬಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ. ಸುದ್ದಿ ಪ್ರಕಟವಾಗುತ್ತಲೇ ಇರುತ್ತದೆ. ಇನ್ನು ಎಷ್ಟು ವರ್ಷದೊಳಗೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಓದುವಾಗ ರಿಯಾಯಿತಿ ವಸತಿ ಗೃಹ ದೊರಕಬೇಕು, ಚರಂಡಿ ನೀರನ್ನು ನಿರಂತರವಾಗಿ ಪರೀಕ್ಷೆಗೆ ಒಳಪಡಿಸಿ ಹೊಸ ಬ್ಯಾಕ್ಟೀರಿಯಾಗಳನ್ನು ಹೇಗೆ ಗುರುತಿಸಬೇಕು, ಸಮಾಜ ಕಲ್ಯಾಣ ವೆಚ್ಚ ಹೆಚ್ಚಾಗಬೇಕಾದರೆ, ರಕ್ಷಣಾ ವೆಚ್ಚವನ್ನು ಹೇಗೆ ನಿಯಂತ್ರಿಸಬೇಕು, ವಲಸಿಗರು ಕಾನೂನನ್ನು ವಿರೋಧಿಸಿ ಇಲ್ಲಿ ವಾಸವಾಗಿದ್ದರೂ ಏಕೆ ಅವರನ್ನು ದೇಶದಿಂದ ಹೊರ ದಬ್ಬಬಾರದು, ಸಾರ್ವಜನಿಕ ಅರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಕೆಲಸಬಿಟ್ಟು ಹೋಗದಂತೆ ಮೊದಲು ಯಾವ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು, ರಸ್ತೆ ರಿಪೇರಿ ಏಕೆ ತುರ್ತಾಗಿ ನಿರಂತರವಾಗಿ ಆಗುತ್ತಲೇ ಇರಬೇಕು, ಮಕ್ಕಳ ಈಜು ನೀತಿ (swimming policy)ಯಲ್ಲಿ ತರಬೇಕಾದ ಬದಲಾವಣೆಗಳು ಯಾವ ಸ್ವರೂಪದ್ದು, ಪತ್ರಿಕೆಗಳಲ್ಲಿ ಈ ಸಂಗತಿಗಳೇ ಅಗ್ರಸುದ್ದಿ, ಸಂಪಾದಕೀಯ ಲೇಖನಗಳು, ವಾಚಕರ ವಾಣಿ, ಎಲ್ಲ ಭಾಗಗಳಲ್ಲೂ ಪ್ರಧಾನವಾಗಿ ಕಾಣಿಸಿಕೊಳ್ಳುತ್ತಿದ್ದವು.

ಸರ್ಕಾರ, ಸಮಾಜ, ನಾಗರಿಕರ, ಆಡಳಿತ ವ್ಯವಸ್ಥೆ ಎಲ್ಲದರಲ್ಲೂ ಒಮ್ಮತವಿದೆ, ಬದ್ಧತೆಯಿದೆ. ಇದೇ ರೀತಿಯ ಮನೋಧರ್ಮವನ್ನು ಶಿಕ್ಷಣ, ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದ ಹಾಗೆ ಇರುವುದನ್ನು ಕೂಡ ನಾನು ಬೇರೆ ಅಧ್ಯಾಯಗಳಲ್ಲಿ ಚರ್ಚಿಸಿದ್ದೇನೆ, ವಿವರಿಸಿದ್ದೇನೆ. ದಾವಂತವಿಲ್ಲದ, ದುಂದಿಲ್ಲದ ನೆಮ್ಮದಿಯ ಬದುಕಿಗೆ ಆಸೆ ಪಡುವ ಒಂದು ರೂಪಕವಾಗಿ ಇಲ್ಲಿಯ ಬಾಣಂತನದ ವ್ಯವಸ್ಥೆ ನನಗೆ ಕಂಡಿದೆ. ಇದೆಲ್ಲ ರೂಪುಗೊಳ್ಳಲು ತುಂಬಾ ಸಮಯ ತೆಗೆದುಕೊಂಡಿದೆ, ತುಂಬಾ ಪ್ರಯೋಗಗಳು ಕೂಡ ಆಗಿವೆ ಎಂಬುದನ್ನು ಮರೆಯಬಾರದು.

(ಹಿಂದಿನ ಕಂತು: ಏಕೆ ಇಷ್ಟೊಂದು ದ್ವೇಷ!)