ಗ್ರಂಥಾಲಯಕ್ಕೆ ಇಡೀ ಕುಟುಂಬ ಭೇಟಿ ಕೊಡುತ್ತದೆ. ಸದಸ್ಯರು ತಮ್ಮ ತಮ್ಮ ಆಸಕ್ತಿಗನುಗುಣವಾಗಿ ಬೇರೆ ಬೇರೆ ಭಾಗಗಳಿಗೆ ಹೋಗಬಹುದು. ಗ್ರಂಥಾಲಯದೊಳಗೆ ಶಿಶುಪಾಲನಾ ಕೇಂದ್ರವೂ ಇದೆ. ಮಕ್ಕಳ ವಿಭಾಗದಲ್ಲಿ ಎಷ್ಟೊಂದು ಅನುಕೂಲಗಳು, ಆಟದ ಸಾಮಾನು, ಚಿತ್ರಕಲೆ ರಚಿಸುವ ವಿಭಾಗ, ಸ್ಟುಡಿಯೋ, ಮಕ್ಕಳ ಎತ್ತರಕ್ಕನುಗುಣವಾದ ಕುರ್ಚಿ, ಮೇಜು, ಬೇರೆ ಬೇರೆ ವಯಸ್ಸಿನ ಮಕ್ಕಳು ಓದಬಹುದಾದ ಪುಸ್ತಕಗಳು, ನಿಯತಕಾಲಿಕೆಗಳು, ನೆಲದ ಮೇಲೆ ಕುಳಿತುಕೊಂಡು, ಅಡ್ಡ ಮಲಗಿಕೊಂಡು ಕೂಡ ಓದುವ ಅನುಕೂಲ, ಬಣ್ಣ ಬಣ್ಣದ ಪೆನ್ಸಿಲ್‌ಗಳ ರಾಶಿ.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಹದಿಮೂರನೆಯ ಬರಹ

ಬರವಣಿಗೆಯಲ್ಲಿ ಎರಡು ರೀತಿಗಳಿವೆ. ಈಗಾಗಲೇ ನನಗೆ ತಿಳಿದಿದೆ, ತಿಳಿದಿರುವುದನ್ನು ಬರೆದು ಓದುಗರಿಗೆ ತಿಳಿಸಬೇಕೆಂಬುದು ಒಂದು ಮಾದರಿ. ಇನ್ನೊಂದು ಮಾದರಿ, ವಿದ್ಯಮಾನ, ಅನುಭವವನ್ನೆಲ್ಲ ನಾನು ಕೂಡ ತಿಳಿದುಕೊಳ್ಳಬೇಕು, ತಿಳಿದಿದ್ದನ್ನು ಅರ್ಥ ಮಾಡಿಕೊಳ್ಳಬೇಕು, ಹಾಗೆ ಅರ್ಥ ಮಾಡಿಕೊಳ್ಳುವ ದಾರಿಯಲ್ಲಿ ಬರವಣಿಗೆ ಬೇಕಾಗಬಹುದು, ಆದರೆ ಬರವಣಿಗೆಯೇ ಯಾವಾಗಲೂ ಅನಿವಾರ್ಯವಲ್ಲ ಎಂಬುದು ಎರಡನೆಯ ಹಾದಿ. ನನಗೆ ಎರಡನೆ ಹಾದಿಯೇ ಇಷ್ಟ. ಆದರೆ ಎಲ್ಲ ಬರಹಗಾರರೂ ಸಾಮಾನ್ಯವಾಗಿ ಎರಡು ರೀತಿಯ ಬರವಣಿಗೆಯನ್ನೂ ಮಾಡುತ್ತಾರೆ. ಬರಹಗಾರನಿಂದ ಬರಹಗಾರನಿಗೆ ಅದರ ಪ್ರಮಾಣ, ಸ್ವರೂಪ ಬೇರೆ ಬೇರೆಯಿರುತ್ತದೆ.

ನೆದರ್‌ಲ್ಯಾಂಡ್ಸ್ ಬಗ್ಗೆ ಬರೆಯುವುದು ಒಂದು ಸವಾಲೇ ಆಗಿತ್ತು. ಅಮೆರಿಕದ ಬಗ್ಗೆ, ಅಮೆರಿಕನ್ನರ ಬಗ್ಗೆ ಬರೆಯಲು, ಯೋಚಿಸಲು ನಮಗೆ ಮಾದರಿಗಳಿವೆ. ಅಲ್ಲಿಗೆ ಹೋಗುವ ಮೊದಲೇ ಮನಸ್ಸಿನಲ್ಲೇ ಒಂದು ಮಾದರಿ ಸಿದ್ಧವಾಗಿರುತ್ತದೆ. ನೆದರ್‌ಲ್ಯಾಂಡ್ಸ್ ಬಗ್ಗೆ ಹಾಗಲ್ಲ. ಅಲ್ಲಿಗೆ ಹೋಗಿ ಬರುವವರು ಕಡಿಮೆ. ಮಾಧ್ಯಮದಲ್ಲೂ ಅದರ ಬಗ್ಗೆ ತಿಳುವಳಿಕೆ, ಬರವಣಿಗೆ ಕಡಿಮೆ. ಓದಿಕೊಳ್ಳಲು ಹೆಚ್ಚು ಮಾಹಿತಿ ಪುಸ್ತಕಗಳಿಲ್ಲ. ಇರುವ ಪುಸ್ತಕಗಳು ಕೂಡ ಈ ದೇಶವನ್ನು ಯುರೋಪಿನ ಭಾಗವಾಗಿ ಪರಿಗಣಿಸಿ ಬರೆದಂತವೇ ಆಗಿವೆ.

ಮೂರು ವರ್ಷದ ಕಾಲಾವಧಿಯಲ್ಲಿ ಒಟ್ಟು ಒಂಭತ್ತು ತಿಂಗಳು ವೂರ್‌ಬರ್ಗ್‌ನಲ್ಲಿ ಇರಬೇಕಾಯಿತು. ಅಮೆರಿಕಕ್ಕೆ ನಾಲ್ಕಾರು ಸಲ ಹೋಗಿದ್ದರೂ, ಅಲ್ಲಿ ವಾಸವಿದ್ದ ಎಲ್ಲ ದಿವಸಗಳನ್ನು ಕೂಡಿದರೂ ಇಷ್ಟೊಂದು ದಿನಗಳಾಗುವುದಿಲ್ಲ. ಈ ಕಾರಣಕ್ಕಾದರೂ ಬರವಣಿಗೆ ಸುಲಭವಾಗಬೇಕಾಗಿತ್ತು. ಹಾಗಾಗಲಿಲ್ಲ. ಬರವಣಿಗೆ ಇರಲಿಲ್ಲ ಎಂದು ಇದರ ಅರ್ಥವಲ್ಲ. ಬರೆಯುವುದರಿಂದಲೇ ನನ್ನ ಸೀಮಿತ, ಆಳವಿಲ್ಲದ ಅನುಭವ ಹೆಚ್ಚು ಅರ್ಥ ಆಗಬಹುದು ಎಂಬ ಭಾವನೆಯಿಂದ ಇದನ್ನೆಲ್ಲ ಬರೆದಿರುವೆ. ಇದು ನಿರೂಪಣಾತ್ಮಕ ಬರವಣಿಗೆಯಲ್ಲ.

*****

“ನೀನು ವಾಸಿಸುವ ಗ್ರಾಮದ ಆರು ಮೈಲಿಯ ಸುತ್ತಳತೆಯಲ್ಲೇ ನಿನಗೆ ಇಡೀ ವಿಶ್ವವೆಲ್ಲ ದೊರಕಬೇಕು, ಅದೇ ನಿನ್ನ ಫಿರ್ಕಾ” ಎಂದಿದ್ದರು ಗಾಂಧೀಜಿ. ಇಲ್ಲಿದ್ದಾಗ ನನಗೆ ಆ ಅನುಭವ ಪ್ರತಿದಿನವೂ ಆಗುತ್ತಿತ್ತು. ದಿನನಿತ್ಯದ ನಮ್ಮ ಕುಟುಂಬದ ಎಲ್ಲ ಅಗತ್ಯಗಳು, ಅವಕ್ಕೆ ಬೇಕಾದ ಸಂಘ ಸಂಸ್ಥೆ, ಸಂಪನ್ಮೂಲಗಳು, ವ್ಯವಸ್ಥೆಗಳು, ಎಲ್ಲವೂ ಒಂದೊಂದೂವರೆ ಕಿಲೋಮೀಟರ್ ವ್ಯಾಪ್ತಿಯೊಳಗೇ ಇದ್ದವು. ಶಾಲೆ, ಬಸ್, ರೈಲು ನಿಲ್ದಾಣ, ದಿನಸಿ ಅಂಗಡಿ, ಔಷಧಿ ಅಂಗಡಿ, ಸೆಲೂನ್, ಬ್ಯೂಟಿ ಪಾರ್ಲರ್, ನಾನಾ ರೀತಿಯ ಉದ್ಯಾನವನಗಳು, ಶಿಶುಪಾಲನಾ ಕೇಂದ್ರ, ಕಾಲುವೆ, ತೋಟ, ಎಲ್ಲವೂ.

ಅಮೆರಿಕಗಿಂತ ದೀರ್ಘ ಇತಿಹಾಸವಿರುವ ಈ ಭಾಗದಲ್ಲಿ ನೈಸರ್ಗಿಕ ಪ್ರಾಕೃತಿಕ ಸಂಪನ್ಮೂಲಗಳಿದ್ದವು. ಆಡಳಿತದ ದೀರ್ಘ ಅನುಭವವಿತ್ತು. ಬಂಡವಾಳಶಾಹಿ ವ್ಯವಸ್ಥೆಯೇ ಸರ್ವಶ್ರೇಷ್ಠವಾದದ್ದು, ಮೌಲಿಕವಾದದ್ದು ಎಂದು ಅಮೆರಿಕದಂತೆ ರುಜುವಾತು ಪಡಿಸುವ ಅಗತ್ಯವಿರಲಿಲ್ಲ. ಸಮಾಜವಾದ, ಕಮ್ಯೂನಿಸಂಗೆ ಸ್ಪಂದಿಸಿದ ರೀತಿ ಕೂಡ ಬೇರೆಯದಿತ್ತು. ಕಲ್ಯಾಣ ರಾಜ್ಯ (Welfare State)ದ ಕಲ್ಪನೆ, ಸಾಮಾಜಿಕ ಸುರಕ್ಷತಾ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುವುದರಲ್ಲಿ, ಜಾರಿಗೆ ತರುವುದರಲ್ಲಿ, ಯುರೋಪಿನ ದೇಶಗಳು ಪ್ರಾಮಾಣಿಕ ಕ್ರಿಯಾಶೀಲತೆ ಮತ್ತು ಬದ್ಧತೆಯನ್ನು ತೋರಿದವು. ವಿಶ್ವದ ಶಕ್ತ ರಾಷ್ಟ್ರ (Powerful Nation) ಅನಿಸಿಕೊಳ್ಳಬೇಕಾದ ಅನಗತ್ಯ ಜವಾಬ್ದಾರಿಯೂ ಇರಲಿಲ್ಲ. ಪ್ರತಿಯೊಬ್ಬ ನಾಗರಿಕನ, ಪ್ರತಿಯೊಂದು ಮಗುವಿನ, ಪ್ರತಿಯೊಂದು ಕುಟುಂಬದ ದಿನನಿತ್ಯದ ಬದುಕಿನ ಅಗತ್ಯತೆಗಳಿಗೆ, ಸುಖಗಳಿಗೆ ಆದ್ಯತೆ ನೀಡುತ್ತಾ, ಸಮಾಜದ ನೆಮ್ಮದಿಯ ಉತ್ಪಾದಕತೆಯ ಸ್ತರವನ್ನು ವಿಸ್ತರಿಸಿದವು. ಭಾರತವೂ ಸೇರಿದಂತೆ ಮೂರನೇ ಜಗತ್ತಿನ ದೇಶಗಳಲ್ಲಿ ಅಭಿವೃದ್ಧಿ, ಅರ್ಥಶಾಸ್ತ್ರ, ಜಾಗತಿಕ ಆರ್ಥಿಕ ಚರಿತ್ರೆ, ತುಲನಾತ್ಮಕ ಅರ್ಥವ್ಯವಸ್ಥೆಯ ಪಾಠವನ್ನು ಹೇಳಿಕೊಡುವಾಗ, ಇದಕ್ಕಾಗಿ ಪಠ್ಯವನ್ನು ರೂಪಿಸುವಾಗ, ನೆದರ್‌ಲ್ಯಾಂಡ್ಸ್‌ನಂತಹ ಯುರೋಪಿನ ದೇಶಗಳ ಬಗ್ಗೆ ಗಮನಿಸದಿರುವುದು ಒಂದು ರೀತಿಯ ವಿಪರ್ಯಾಸವೇ ಸರಿ.

ದಿನನಿತ್ಯದ ಬದುಕಿನಲ್ಲೂ, ಒಟ್ಟು ಜೀವನಧಾರೆಯಲ್ಲೂ ಒಂದು ರೀತಿಯ ನಿಧಾನ, ವ್ಯವಧಾನವನ್ನು ಇಲ್ಲಿನ ಬದುಕು ರೂಪಿಸಿಕೊಂಡಿದೆ ಮತ್ತು ಅವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಧಾವಂತವಿಲ್ಲ, ಸುಳ್ಳು ಮಹತ್ವಾಕಾಂಕ್ಷೆಯಿಲ್ಲ, ಸ್ಪರ್ಧಾ ಮನೋಭಾವವಿಲ್ಲ. ಒಂದು ಕಪ್ ಕಾಫಿ ಕೊಂಡುಕೊಂಡು, ವಿರಾಮವಾಗಿ ಕುಳಿತು ಗುಟುಕರಿಸುವುದರಲ್ಲಿ ಜೀವನದ ಸಾರ್ಥಕತೆಯನ್ನು ಕಾಣಬಲ್ಲವರು. ಅಮೆರಿಕದಲ್ಲಿ ಹೀಗಾಗುವುದಿಲ್ಲ. ಕಾಫಿ ಕೊಂಡುಕೊಂಡು ಅದನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಾ, ಇಲ್ಲ ವಾಹನವೊಂದನ್ನು ರೈಡ್ ಮಾಡುತ್ತಾ, ಆತುರಾತುರವಾಗಿ ಕುಡಿಯಬೇಕು. ನಾನು, ನನ್ನ ಹೆಂಡತಿ ಮತ್ತು ಮಗಳು ಒಂದು ದಿನ ಪೇಟೆ ಬೀದಿಯಲ್ಲಿ ವ್ಯಾಪಾರ ಮುಗಿಸಿ, ಹೋಟೆಲೊಂದರಲ್ಲಿ ಊಟ ಮಾಡಲು ನಿರ್ಧರಿಸಿದೆವು. ಸುಮಾರು ನೂರು ಜನರು ಕುಳಿತುಕೊಳ್ಳಲು ಅನುಕೂಲವಿರುವ ಹೋಟೆಲ್. ಕೆಲವು ಕುರ್ಚಿಗಳು ಹೋಟೆಲ್ ಒಳಗೆ, ಇನ್ನು ಕೆಲವು ಕುರ್ಚಿಗಳು ಹೋಟೆಲ್ ಮುಂಭಾಗದಲ್ಲಿ ರಸ್ತೆಗೆ ಹೊಂದಿಕೊಂಡ ಹಾಗೆ. ನಾವು ಮೂರು ಜನವೇ ಗಿರಾಕಿಗಳು. ಊಟಕ್ಕೆ ಏನೇನು ಬೇಕೆಂದು ಸೂಚಿಸಿದೆವು. ಸರಿ ಯಾವುದಾರೂ ತಂಗಳು ಪದಾರ್ಥವನ್ನು ಬಿಸಿ ಮಾಡಿಕೊಡುತ್ತಾರೆಂದು ನಾನು ನಿರೀಕ್ಷಿಸಿದೆ. ನಮ್ಮೆದುರಿಗೇ, ನಮ್ಮ ಕಣ್ಣಿಗೆ ಕಾಣುವ ಹಾಗೇ, ತರಕಾರಿ ಹೆಚ್ಚುವುದು, ಬೆರೆಸುವುದು, ಪಾಕ ತೆಗೆಯುವುದು, ಬೇಯಿಸುವುದು, ಎಲ್ಲವೂ ನಡೆಯಿತು. ಊಟ ಬಡಿಸಿದಾಕೆ ಕೂಡ ನಿಧಾನಸ್ಥೆ. ರಸ್ತೆಯಲ್ಲಿ ಓಡಾಡುತ್ತಿದ್ದ ಜನರು ಕೂಡ ಯಾವುದೇ ರೀತಿಯ ಆತುರ ಗಡಿಬಿಡಿಯಿಲ್ಲದೆ ಅವರವರ ಕೆಲಸದಲ್ಲಿ ತೊಡಗಿದ್ದರು. ಈ ಲಯವನ್ನು ನಾಗರಿಕರ ದಿನನಿತ್ಯದ ಓಡಾಟ, ಬದುಕಿನಲ್ಲೂ ಕಾಣಬಹುದು. ರೈಲು ಹತ್ತುವ, ಇಳಿಯುವ ರೀತಿಯಲ್ಲೂ ಕಾಣಬಹುದು. ಮನೆ ಮುಂದೆ ಸುಮ್ಮನೆ ಕುಳಿತವರು, ಕಾಲುವೆ ಬದಿಯಲ್ಲಿ ಕುಳಿತವರು, ನಿಧಾನವಾಗಿ ಸೈಕಲ್ ಹೊಡೆಯುವವರು, ಪ್ರತಿ ಕ್ಷಣವೂ ಎದುರಾಗುತ್ತಿರುತ್ತಾರೆ. ಅಮೆರಿಕದವರ ಪ್ರಕಾರ ಇಲ್ಲಿಯವರು ಸೋಮಾರಿಗಳು. ಇಲ್ಲಿಯವರ ಪ್ರಕಾರ ಅಮೆರಿಕದವರು ದುರಾಸೆಯವರು, ಹಣವನ್ನು ದುಡಿಯುವ, ಸೃಷ್ಟಿಸುವ ಆತುರದ ಯಂತ್ರಗಳು. ಬಹುಪಾಲು ನಾಗರಿಕರು ಉನ್ನತ ಶಿಕ್ಷಣದ ಪದವಿಗಳನ್ನು ಪಡೆಯಲು ಆಸೆ ಪಡುವುದಿಲ್ಲ. ಕಸುಬುದಾರರಾಗಲು, ವೃತ್ತಿಪರರಾಗಲು ಆಸೆ ಪಡುತ್ತಾರೆ. ಈ ಆಸೆಗನುಗುಣವಾಗಿ ಶಿಕ್ಷಣ ಪಡೆಯುತ್ತಾರೆ. ಬೇರೆ ಬೇರೆ ದೇಶಗಳ, ನಾಗರಿಕತೆಗಳ, ಪ್ರಜೆಗಳ ಜೊತೆ ಕೆಲಸ ಮಾಡುವುದನ್ನು ದಿನವೂ ಎದುರಿಸುವ ನನ್ನ ಮಗಳು ಹೇಳುವುದು, ಕೆಲಸ ಮಾಡಿ ಸಂಪಾದಿಸುವುದಕ್ಕಿಂತ ಹೆಚ್ಚಾಗಿ ಇಲ್ಲಿನವರು ತಮ್ಮ ವ್ಯಕ್ತಿತ್ವ, ಆಸಕ್ತಿ, ವಿರಾಮ, ಕೌಟುಂಬಿಕ ಜೀವನ, ಖಾಸಗಿ ಬದುಕು ಇವನ್ನು ವಿಸ್ತರಿಸಿಕೊಳ್ಳಲು ಆಸೆ ಪಡುತ್ತಾರೆ. ಇನ್ನೊಬ್ಬರು ಕೂಡ ಹೀಗೆ ಆಸೆ ಪಡುತ್ತಿದ್ದಾರೆ ಎಂಬುದನ್ನು ಗುರುತಿಸಿ, ಗೌರವಿಸುತ್ತಾರೆ. ಪರಸ್ಪರ ನಂಬಿಕೆ, ವಿಶ್ವಾಸವಿದೆ. ಓದುಗರು ನಂಬಬೇಕು. ಇಲ್ಲೂ ಕೂಡ ಮನೆ ಮುಂದೆ ನನಗೆ ಪ್ರಿಯವಾದ ಜಗುಲಿ ಮತ್ತು ಮೆಟ್ಟಿಲುಗಳನ್ನು ಕಂಡೆ. ಸಂಜೆಯ ಹಳದಿ ಬಿಸಿಲಿಗೆ ಎದುರಾಗಿ ಈ ಮೆಟ್ಟಿಲು, ಜಗುಲಿಗಳ ಮೇಲೆ ಕುಳಿತು, ಹರಟೆ ಹೊಡೆಯುವವರನ್ನು ಕಂಡೆ.

ಇಡೀ ನಗರವೇ, ಬಡಾವಣೆಯೇ ಉದ್ಯಾನವನದಂತಿದೆ ಅನ್ನುವುದು ಬೇರೆಯ ಮಾತು. ಲಾಲ್‌ಬಾಗ್, ಕಬ್ಬನ್ ಪಾರ್ಕ್ ನಡುವೆ ವಾಸ ಮಾಡುತ್ತಿರುವ ಅನುಭವವಾಗುತ್ತದೆ. ನಾವಿದ್ದ ಪ್ರತಿದಿನವೂ ನಾಲ್ಕಾರು ಉದ್ಯಾನವನಗಳಿಗೆ ಭೇಟಿ ಕೊಡುತ್ತಿದ್ದೆವು., ಓಡಾಡುತ್ತಿದ್ದೆವು. ಮಕ್ಕಳ ಜೊತೆ ಆಟವಾಡುತ್ತಿದ್ದೆವು. ಯಾವುದೇ ಪಾರ್ಕಿನಲ್ಲೂ ಜನಸಂದಣಿಯಿಲ್ಲ, ಗಡಿಬಿಡಿಯಿಲ್ಲ. ಪಾರ್ಕ್ ಮುಂದೆ ಇರುವ ಕಲ್ಲು ಬೆಂಚುಗಳ ಮೇಲೆ ಇಳಿ ವಯಸ್ಸಿನವರು ಬಂದು ಒಂದು ಗ್ಲಾಸ್ ಬಿಯರ್ ಮತ್ತು ಒಂದೆರಡು ಸಿಗರೇಟ್ ಇಟ್ಟುಕೊಂಡು ಹರಟುತ್ತಾ ಕುಳಿತಿರುತ್ತಿದ್ದರು. ಇದು ನಾವು ಪ್ರತಿದಿನವೂ ಎದುರಾಗುತ್ತಿದ್ದ ದೃಶ್ಯ. ಇಲ್ಲಿ ಯಾವುದೇ ಭಾಷೆ ಬಾರದ ನನ್ನ ಮೊಮ್ಮಗಳ ಜೊತೆ ಈ ಮುದುಕರು ನಗುತ್ತಾ ಹರಟುತ್ತಿದ್ದರು. ಇಳಿ ವಯಸ್ಸಿನ ದಂಪತಿಗಳು ಕೂಡ ಹೀಗೇ ಮನೆಯ ಮುಂದಿನ ಉದ್ಯಾನವನಗಳಲ್ಲಿ, ಬೀದಿ ಬದಿಯ ಕಲ್ಲು ಬೆಂಚುಗಳ ಮೇಲೆ ಗಂಟೆಗಟ್ಟಲೆ ನಗುತ್ತಾ, ಹರಟುತ್ತಾ ಕುಳಿತಿರುತ್ತಾರೆ. ಹಾಗೆ ಇಳಿ ವಯಸ್ಸಿನಲ್ಲಿ ನಗುತ್ತಾ, ಹರಟುತ್ತಾ ಗಂಟೆಗಟ್ಟಲೆ ಕೂರುವಂಥದ್ದು ಏನಿರುತ್ತದೆ ಎಂಬುದು ನನಗೆ ಅರ್ಥವೇ ಆಗುತ್ತಿರಲಿಲ್ಲ. ಆದರೆ ಅವರನ್ನೆಲ್ಲ ನೋಡಿದಾಗ ನನಗೊಂದು ರೀತಿಯ ಸಂತೋಷವಾಗುತ್ತಿತ್ತು, ಮನಸ್ಸು ತುಂಬಿಬರುತ್ತಿತ್ತು ಎಂಬುದೂ ಕೂಡ ನಿಜ.

*****

ಭೌಗೋಳಿಕ, ನೈಸರ್ಗಿಕ ಆಯಾಮಗಳು ಕೂಡ ಸಮಾಜವು ಬದುಕಿಗೆ ಸಂಬಂಧ ಪಟ್ಟಹಾಗೆ ಮಾಡಿಕೊಳ್ಳುವ ಆಯ್ಕೆಯ ರೀತಿಯನ್ನು ನಿರ್ಧರಿಸುತ್ತದೆ. ಇಲ್ಲಿಯ ಬರಹಗಳಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಚರ್ಚಿಸಿರುವ ಹಾಗೆ, ಯುರೋಪಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ, ನೆದರ್‌ಲ್ಯಾಂಡ್ಸ್ ದೊಡ್ಡ ದೇಶವೂ ಅಲ್ಲ, ಬಲಿಷ್ಠ ದೇಶವೂ ಅಲ್ಲ. ಆದರೆ ಶ್ರೀಮಂತ ದೇಶ. ಹೀಗಾಗಿ, ತನ್ನ ವಿಶಿಷ್ಟತೆಯನ್ನು ಉಳಿಸಿಕೊಂಡು, ಇನ್ನೊಬ್ಬರೊಡನೆ ಬೆರೆಯುವ ಗುಣವನ್ನು ಸಮರ್ಥವಾಗಿ, ಸಕ್ರಿಯವಾಗಿ ರೂಪಿಸಿಕೊಂಡಿದೆ. ಇದರ ಜೊತೆಗೆ ಇಲ್ಲಿಯ ಹವಾಮಾನವನ್ನು ಕೂಡ ಸೇರಿಸಿಕೊಳ್ಳಬೇಕು. ಒಂದೇ ದಿನದೊಳಗೆ ಹವಾಮಾನದ ಎಲ್ಲ ವೈವಿಧ್ಯವನ್ನು ಇಲ್ಲಿ ಕಾಣಬಹುದು. ಚಳಿ, ಮಳೆ, ಶೀತ, ಗಾಳಿ, ಬಿಸಿಲು, ಧಗೆ, ಎಲ್ಲವೂ ಇಲ್ಲಿ ಅಭಿನಯಗೊಳ್ಳುತ್ತದೆ. ಸಮುದ್ರಕ್ಕೆ ಹತ್ತಿರವಿರುವುದು ಮಾತ್ರವಲ್ಲ, ದೇಶದ ನಾಲ್ಕನೇ ಒಂದು ಭಾಗ ಭೂಮಿ ಸಮುದ್ರ ಮಟ್ಟಕ್ಕಿಂತ ಕೆಳಗಿದೆ. ಕೃಷಿ ಉತ್ಪನ್ನಗಳ ರಫ್ತಿನಿಂದ ದೇಶದ ಆದಾಯದ ಗಣನೀಯ ಪ್ರಮಾಣ ಸಾಕಷ್ಟು ಮೂಡಿ ಬರುತ್ತದೆ. ನೆದರ್‌ಲ್ಯಾಂಡ್ಸ್‌ನ ವೈವಿಧ್ಯಮಯವಾದ ಹವಾಮಾನದ ರೀತಿ ಕೂಡ ಕೃಷಿ ಕ್ಷೇತ್ರದ ಬೆಳವಣಿಗೆಗೆ ಕಾರಣವಾಗಿದೆಯೆಂದು ಹೇಳುತ್ತಾರೆ. ದೇವರು ಭೂಮಿಯನ್ನು ಸೃಷ್ಟಿಸಿದ, ಆದರೆ ಡಚ್ಚರು ಹಾಲೆಂಡನ್ನು ಇನ್ನೂ ಸುಂದರವಾಗಿ ಸೃಷ್ಟಿಸಿಕೊಂಡರು ಎಂಬುದು ಸ್ವಾಭಿಮಾನವನ್ನು ಸೂಚಿಸುವ ಒಂದು ಜನಪ್ರಿಯವಾದ ನಾಣ್ನುಡಿ.

*****

ಮನೆಗಳ ವಿನ್ಯಾಸ ತುಂಬಾ ಕುತೂಹಲ ಮೂಡಿಸಿತು. ಮನೆಯ ಮುಂದಿನ ಅಂಗಳ ಮತ್ತು ಹಿಂಬದಿಯ ಹಿತ್ತಲು ಎರಡನ್ನೂ ಸೇರಿಸಿದರೆ ಮನೆಯ ವಿಸ್ತೀರ್ಣಕ್ಕಿಂತ ದೊಡ್ಡದಾಗುತ್ತದೆ. ನಮ್ಮ ಮನೆಯ ಹಿತ್ತಲಿನ ವಿಸ್ತೀರ್ಣವೇ ವರಾಂಡ, ದಿವಾನ್‌ಖಾನೆ, ಊಟ ತಿಂಡಿ ಮಾಡುವ ಮೇಜು, ಕುರ್ಚಿಗಳನ್ನು ಇಟ್ಟುಕೊಳ್ಳುವ ಭಾಗದಷ್ಟೇ ಇತ್ತು. ಅಂಗಳ ಒಂದು ವಿಶಾಲವಾದ ಕೋಣೆಯಷ್ಟಿತ್ತು. ಅಡುಗೆ ಮನೆಯ ಭಾಗ ತುಂಬಾ ಕಡಿಮೆಯಿರುತ್ತದೆ. ಇದು ಭಾರತದ ಮನೆಗಳ ವಿನ್ಯಾಸಕ್ಕೆ ಹತ್ತಿರವಾದದ್ದು, ಅಮೆರಿಕದಲ್ಲಿ ಅಡುಗೆ ಮನೆಯೇ ಒಟ್ಟು ಮನೆಯ ಮೂರನೇ ಒಂದು ಭಾಗದಷ್ಟಿರುತ್ತದೆ.

ದಿವಾನ್‌ಖಾನೆಗಿಂತ ಹೆಚ್ಚಾಗಿ ಅಂಗಳ ಮತ್ತು ಹಿತ್ತಲನ್ನು ಬಳಸುವ ರೀತಿಯಲ್ಲಿ ಪ್ರತಿಯೊಂದು ಕುಟುಂಬವೂ ವೈವಿಧ್ಯತೆಯನ್ನು ತೋರುತ್ತದೆ. ಆಟದ ಮೈದಾನವಾಗಿ, ಕೈ ತೋಟವಾಗಿ, ಸೈಕಲ್ ಸ್ಟ್ಯಾಂಡ್ ಆಗಿ, ಉಯ್ಯಾಲೆ ಆಡುವ ಜಾಗವಾಗಿ, ಗೋಡೌನ್ ಆಗಿ, ಈ ಭಾಗವನ್ನು ರೂಪಿಸಿಕೊಳ್ಳುತ್ತಾರೆ. ವರ್ಷಕ್ಕೆ ಸುಮಾರು ಆರು ತಿಂಗಳ ಕಾಲ ವಿಪರೀತ ಶೀತ-ಮಳೆ-ಗಾಳಿ ಇದ್ದಾಗ, ಹಿತ್ತಲಿನ ಭಾಗ ಸಂಪೂರ್ಣವಾಗಿ ಬಂದಾಗುತ್ತದೆ. ಉತ್ತರ ಧ್ರುವಕ್ಕೆ ವರ್ಷದ ಕೆಲವು ಭಾಗ ಪ್ರವೇಶಕ್ಕೆ ನಿಷಿದ್ಧವಾದಂತೆ, ಇಲ್ಲೂ ಕೂಡ ಪ್ರವೇಶ ನಿಷಿದ್ಧವಾಗಿರುತ್ತದೆ.

*****

ಪ್ರತಿಯೊಂದು ಬೀದಿಯಲ್ಲೂ ಒಂದು ಗ್ರಂಥಾಲಯವಿರುತ್ತದೆ. ಗ್ರಂಥಾಲಯವೆಂದರೆ ಹೋಗಿ ಕುಳಿತು ಓದುವ, ಬರೆಯುವ ಜಾಗವಲ್ಲ. ಬೀದಿಯ ಮಧ್ಯದಲ್ಲಿ ಪುಸ್ತಕಗಳನ್ನು ಇಡಲು ಒಂದು ತೆರೆದ ಕಪಾಟಿರುತ್ತದೆ. ಈ ಕಪಾಟಿನಲ್ಲಿ ಯಾರು ಬೇಕಾದರೂ ಯಾವ ರೀತಿಯ ಪುಸ್ತಕಗಳನ್ನಾದರೂ ಇಡಬಹುದು. ಬೀದಿಯಲ್ಲಿ ವಾಸಿಸುವವರೆಲ್ಲೂ ಈ ಗ್ರಂಥಾಲಯವನ್ನು ಬಳಸಬಹುದು. ಹೆಚ್ಚಿನ ಪುಸ್ತಕಗಳು ಡಚ್ ಭಾಷೆಯವು. ಇತಿಹಾಸಕ್ಕೆ ಸಂಬಂಧಪಟ್ಟವು. ಆಂಗ್ಲ ಭಾಷೆಯ ಪುಸ್ತಕಗಳಲ್ಲಿ ಮ್ಯಾನೇಜ್‌ಮೆಂಟ್ ಪುಸ್ತಕಗಳೇ ಹೆಚ್ಚಾಗಿದ್ದವು. ಪೂಲನ್ ದೇವಿಯ ಜೀವನ ಚರಿತ್ರೆಯನ್ನು ಡಚ್ ಭಾಷೆಗೆ ಅನುವಾದಿಸಿದ್ದರು. ಅದರ ಒಂದು ಪ್ರತಿ ಈ ಕಪಾಟಿನಲ್ಲಿತ್ತು. ಈ ಕಪಾಟಿನಲ್ಲಿ ನೀವು ಪುಸ್ತಕವನ್ನು ಇಡುವಾಗ ಬೀದಿಯ ಯಾವ ಮನೆಯವರು ಇದನ್ನು ತೆಗೆದುಕೊಂಡು ಹೋಗಿ ಓದುತ್ತಾರೆಂದು ಗೊತ್ತಾಗುವುದಿಲ್ಲ. ಪುಸ್ತಕಗಳನ್ನು ವಾಪಸ್ ಕೂಡ ತಂದು ಇಡದೆ ಇರಬಹುದು. ನೀನು ಕೂಡ ಪುಸ್ತಕಗಳನ್ನು ಇಡು ಎಂದು ನನ್ನ ಮಗಳು ಪ್ರೋತ್ಸಾಹಿಸುತ್ತಿದ್ದಳು. ನನ್ನ ಒಂದೇ ಒಂದು ಪುಸ್ತಕವನ್ನು ಕೂಡ ಕಳೆದುಕೊಳ್ಳಬಾರದೆಂಬ ನಿಲುವಿನಿಂದ ನಾನು ಯಾವ ಪುಸ್ತಕವನ್ನೂ ಇಡಲು ಹೋಗಲೇ ಇಲ್ಲ.

ಹೇಗ್ ನಗರದ ಗ್ರಂಥಾಲಯ ನಾಲ್ಕೈದು ಅಂತಸ್ತುಗಳದ್ದು. ಗ್ರಂಥಾಲಯದೊಳಗೆ ಲಿಫ್ಟ್ ಮತ್ತು ಎಲೆವೇಟರ್ ಸೌಕರ್ಯವಿತ್ತು. ಪ್ರತಿ ಅಂತಸ್ತಿನಲ್ಲೂ ಒಂದು ಭಾಗವನ್ನು ಮಾತ್ರ ಪುಸ್ತಕಗಳನ್ನು ಇಡಲು ಉಪಯೋಗಿಸುತ್ತಿದ್ದರು. ಉಳಿದ ಭಾಗ ಗಾಳಿ, ಬೆಳಕಿನಿಂದ ತುಂಬಿ ಚೇತೋಹಾರಿ ವಾತಾವರಣವನ್ನು ನಿರ್ಮಿಸಿತ್ತು. ಇಂಗ್ಲಿಷ್ ಪುಸ್ತಕಗಳು ತುಂಬಾ ಕಡಿಮೆ. ಆದರೆ ಎಲ್ಲವೂ ಉತ್ತಮ ಮಟ್ಟದವು. ಇಂಗ್ಲಿಷ್ ಭಾಷೆಯ ಬಹುಪಾಲು ಪುಸ್ತಕಗಳು ಡಚ್ ಭಾಷೆಗೂ ಅನುವಾದವಾಗಿರುವುದನ್ನು, ಹಾಗೆ ಅನುವಾದಗೊಂಡ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಇಟ್ಟಿರುವುದನ್ನು ಗಮನಿಸಬಹುದು.

ಗ್ರಂಥಾಲಯಕ್ಕೆ ಇಡೀ ಕುಟುಂಬ ಭೇಟಿ ಕೊಡುತ್ತದೆ. ಸದಸ್ಯರು ತಮ್ಮ ತಮ್ಮ ಆಸಕ್ತಿಗನುಗುಣವಾಗಿ ಬೇರೆ ಬೇರೆ ಭಾಗಗಳಿಗೆ ಹೋಗಬಹುದು. ಗ್ರಂಥಾಲಯದೊಳಗೆ ಶಿಶುಪಾಲನಾ ಕೇಂದ್ರವೂ ಇದೆ. ಮಕ್ಕಳ ವಿಭಾಗದಲ್ಲಿ ಎಷ್ಟೊಂದು ಅನುಕೂಲಗಳು, ಆಟದ ಸಾಮಾನು, ಚಿತ್ರಕಲೆ ರಚಿಸುವ ವಿಭಾಗ, ಸ್ಟುಡಿಯೋ, ಮಕ್ಕಳ ಎತ್ತರಕ್ಕನುಗುಣವಾದ ಕುರ್ಚಿ, ಮೇಜು, ಬೇರೆ ಬೇರೆ ವಯಸ್ಸಿನ ಮಕ್ಕಳು ಓದಬಹುದಾದ ಪುಸ್ತಕಗಳು, ನಿಯತಕಾಲಿಕೆಗಳು, ನೆಲದ ಮೇಲೆ ಕುಳಿತುಕೊಂಡು, ಅಡ್ಡ ಮಲಗಿಕೊಂಡು ಕೂಡ ಓದುವ ಅನುಕೂಲ, ಬಣ್ಣ ಬಣ್ಣದ ಪೆನ್ಸಿಲ್‌ಗಳ ರಾಶಿ.

ವೃತ್ತಪತ್ರಿಕೆಗಳ ವಿಭಾಗವೇ ಇರಲಿಲ್ಲ.

*****

ನನಗೆ ಗೊತ್ತಿಲ್ಲದ ಹಾಗೇ ಮನಸ್ಸು ಹೋಲಿಕೆಗೆ ತೊಡಗುತ್ತದೆ. ಭಾರತದ ಸಂದರ್ಭ, ಸನ್ನಿವೇಶ ಭಿನ್ನವಾದದ್ದು ಎಂಬುದು ಗೊತ್ತಿದ್ದರೂ, ಹೋಲಿಕೆಗಲ್ಲದಿದ್ದರೂ, ಈ ಅನುಕೂಲವೆಲ್ಲ ನಮ್ಮ ದೇಶದಲ್ಲಿ ಯಾವಾಗ ಎಲ್ಲರಿಗೂ ಲಭ್ಯವಾಗುತ್ತದೆ ಎಂಬ ಆಸೆಯಾಗುತ್ತದೆ.

ಪ್ರತಿ ಹಂತದಲ್ಲೂ ಇದನ್ನೆಲ್ಲ ಅಮೆರಿಕದ ಆಯ್ಕೆ ಮತ್ತು ಜೀವನಶೈಲಿಯೊಡನೆ ಹೋಲಿಸುವ ಆಸೆಯೂ ಆಗುತ್ತದೆ. ನಮ್ಮೆಲ್ಲರಿಗೂ ಅಮೆರಿಕದ ಬಗ್ಗೆ ಇರುವ ಪ್ರೀತಿ-ದ್ವೇಷದ ಕಾರಣದಿಂದಾಗಿ ಮನಸ್ಸು ಯಾವಾಗಲೂ ಯುರೋಪಿನ ಪರವಾಗಿಯೇ ಇರುತ್ತದೆ. ಡಚ್ಚರು ನಮ್ಮನ್ನು ಆಳಿದವರಲ್ಲವಾದ್ದರಿಂದ ನಾವು ಕೂಡ ಯೋಚಿಸುವಾಗ, ಹೋಲಿಸುವಾಗ ಸಾಕಷ್ಟು ವಸ್ತುನಿಷ್ಠವಾಗಿರುತ್ತೇವೆ.