ಬದುಕು ಎಲ್ಲವನ್ನು ಮರೆಸುತ್ತದೆ ನೆನಪಿಸುತ್ತದೆ ಕೂಡ. ಭೂಮಿ ಗುಂಡಾಗಿದೆ ಅಲ್ಲವೇ. ತಿರುಗುವ ಭೂಮಿಯಲ್ಲಿ ಒಬ್ಬರಿಗೊಬ್ಬರು ಸಂದಿಸಲೇಬೇಕು. ನಮ್ಮಿಬ್ಬರ ಬೇಟಿಯಾಗಿ ಎರಡು ವರ್ಷಗಳು ಕಳೆದಿರಬೇಕು ಆಕಸ್ಮಿಕವಾಗಿ ಬಸ್ಸಿನಲ್ಲಿ ಸಿಕ್ಕಾಗ ಇಬ್ಬರು ಒಬ್ಬರಿಗೊಬ್ಬರು ನೋಡಿದರೂ ನೋಡಿಲ್ಲವೆಂಬಂತೆ ದೃಷ್ಟಿ ಬದಲಿಸಿದ್ದು ಬದುಕಿನಲ್ಲಿ ಹೀಗೂ ನಡೆಯಬಹುದು ಅನ್ನಿಸಿದ್ದು ನಿಜ. ನನ್ನೊಳಗಿನ ಮನಸ್ಸು ಯೋಚನೆಯಲ್ಲಿ ಮುಳುಗಿತ್ತು ಇಬ್ಬರಲ್ಲೂ ಗುರುತು ಸಿಗಲಾರದಷ್ಟು ಬದಲಾವಣೆಗಳೇನು ಆಗಿರಲಿಲ್ಲ. ಆದರೆ ಬದುಕಿನ ಅನಿವಾರ್ಯತೆಗಳು ಪರಿಚಿತರನ್ನು ಅಪರಿಚಿತರನ್ನಾಗಿ, ಅಪರಿಚಿತರನ್ನು ಪರಿಚಿತರನ್ನಾಗಿ ಮಾಡುತ್ತದೆ. ಬಹುಶಃ ಮನುಷ್ಯನನ್ನು ಬದಲಿಸುವ ಶಕ್ತಿ ಇರುವುದು ಬದುಕಿನ ಅಷ್ಟೂ ಅನಿವಾರ್ಯತೆಗಳಿಗೆ ಅನಿಸುತ್ತದೆ.
ನೆನಪಿನ ಮಳೆ ಹೆಕ್ಕಿ ತಂದ ಕ್ಷಣಗಳ ಕುರಿತು ಬರೆದಿದ್ದಾರೆ ಮಾರುತಿ ಗೋಪಿಕುಂಟೆ
ಮಳೆ ಬಿಟ್ಟರು ಮರದ ಹನಿ ಬಿಡುವುದಿಲ್ಲ ಎಂಬ ನಾಣ್ಣುಡಿ ಇದೆ. ನೆನಪುಗಳೆ ಹೀಗೆ ಸುಳಿವೆ ಇಲ್ಲದೆ ಬರುವ ಚಂಡ ಮಾರುತದ ರಭಸಕ್ಕೆ ಭೋರ್ಗರೆವ ಅಲೆಗಳು ದಡವ ಅಪ್ಪಳಿಸಿ ಕೊರೆದಂತೆ, ಆಗಾಗ ಬಂದು ನೆನಪಿನ ಕದವ ತಟ್ಟಿ ಇನ್ನಿಲ್ಲದ ನೋವು ಹತಾಶೆ ಜೊತೆ ಜೊತೆಗೆ ಒಂದಿಷ್ಟು ಆನಂದವನ್ನು ತಂದುಕೊಡಬಲ್ಲವು. ನೆನಪು ಮರೆವುಗಳ ಸೆಣಸಾಟದಲ್ಲಿ ನೆನಪಿಗೆ ಗೆಲುವು.
ನೆನಪು ಎಚ್ಚರಿಕೆಯ ಘಂಟೆಯೂ ಹೌದು ಮರೆತು ಮಲಗಿದವರಿಗೆ ಎಚ್ಚರದ ನೆನಪು, ಯೌವನಕ್ಕೆ ಕಾಲಿಟ್ಟಾಗ ಬಾಲ್ಯದ ನೆನಪು ಹಸಿ ಮಳೆಯಲ್ಲಿ ನೆನೆದು ಗುಬ್ಬಚ್ಚಿ ಗೂಡು ಕಟ್ಟಿ ತುಳಿದು ಕುಣಿದಾಡಿ ನಲಿದ ನೆನಪು ದೂರದ ಪಟ್ಟಣದಲ್ಲಿ ಜೀವಿಸುವವರಿಗೆ ಹಳ್ಳಿಯ ನೆನಪು ಒಂದೆ ಎರಡೆ ಬದುಕಿನುದ್ದಕ್ಕೂ ನೆನಪುಗಳ ಸರಮಾಲೆಯೆ ಇದೆ. ಭೂತಕಾಲದ ನೆನಪುಗಳೊಂದಿಗೆ ವರ್ತಮಾನದ ಬದುಕು ಸಾಗುತ್ತದೆ. ನೆನಪಿನ ಮೆಲುಕುಗಳೊಂದಿಗೆ ಬದುಕಿನ ಅನುಭವದೊಂದಿಗೆ ಪಕ್ವಗೊಳಿಸುತ್ತ ಜೀವನದ ಬಂಡಿಯನ್ನು ಸಾಗಿಸುತ್ತೇವೆ. ನೆನಪೊಂದು ಬಿರು ಬಿಸಿಲಿಗೆ ಘನಿಗೊಂಡ ಮೋಡವೆಲ್ಲ ಒಮ್ಮೆಲೆ ಬಿರುಮಳೆ ಬಂದು ನೆಲವೆಲ್ಲ ತಂಪಾಗಿ ತಂಗಾಳಿ ಬೀಸಿ ಮನಸ್ಸಿಗೊಂದು ಅಹಲ್ಲಾದ ಉಂಟಾಗಿ ಹುದುಗಿದ ಚೈತನ್ಯವೆಲ್ಲ ಮೈಮನ ತುಂಬಿ ದೇಹಕ್ಕೆ ಹೊಸತನ ಬಂದಂತಲ್ಲವೆ. ಪ್ರತಿಯೊಬ್ಬರು ಆಗಾಗ ನೆನಪುಗಳತ್ತ ಜಾರುತ್ತಲೆ ಇರುತ್ತಾರೆ.
ಹೀಗೊಂದು ನೆನಪು ನನಗೆ ಆಗಾಗ ಕಾಡುತ್ತಲೆ ಇರುತ್ತದೆ. ನೀನು ಒಲವ ದೀವಟಿಗೆ ಹಿಡಿದು ಬಂದ ದಿನ ನನಗಾಗ ಹದಿನೆಂಟರ ವಯಸ್ಸಿರಬಹುದು. ನಾನು ದ್ವಿತೀಯ ಪಿಯುಸಿ ಓದುತ್ತಿದ್ದೆ ಎಂಬ ನೆನಪು ಓದಿ ಬುದ್ಧಿವಂತನಾಗಬೇಕೆಂಬ ಆದರ್ಶದ ಬೆನ್ನೇರಿ ಕುಳಿತವನು ಒಮ್ಮಿಂದೊಮ್ಮೆಲೆ ನಿನ್ನ ದರ್ಶನವಾದುದು ಒಲವ ಮಿಂಚು ನನ್ನೊಳಗು ಒಂದಿಷ್ಟು ಬೆಳಕನ್ನು ಹೊತ್ತಿಸಿ ಮರೆಯಾಯಿತು. ಒಂದು ಕ್ಷಣದ ಕೋಲ್ಮಿಂಚು ನನ್ನೊಳಗೊಂದು ಭರವಸೆಯನ್ನು ಹುಟ್ಟು ಹಾಕಿದ್ದು ನಿಜ. ನೋಡಲೆಷ್ಟು ಚಂದ ಹೃನ್ಮನಗಳನ್ನು ಮುಟ್ಟಿ ಭಾವಕೋಶವನ್ನು ಅಲುಗಾಡಿಸಿತು. ಒಲವ ಬೆಳಕಿಗೆ ಇಷ್ಟು ಸಾಕಾಗಿತ್ತು. ಮುಂದೆ ಮಾತಾಡಿಸುವುದು ಹೇಗೆ ಯೋಚನೆಯಲ್ಲಿಯೇ ಮತ್ತೆರಡು ದಿನಗಳು ಕಳೆದವು.
ನನ್ನೊಳಗಿನ ಬಡತನವೆಂಬ ಕೀಳರಿಮೆ ಜಾಗೃತವಾಗಿತ್ತು. ನಿನ್ನನ್ನು ಆಕರ್ಷಿಸಲು ನನ್ನಲ್ಲಿ ಹೇಳಿಕೊಳ್ಳುವಂತಹದು ಏನಿತ್ತು. ಯಕಃಶ್ಚಿತ್ ಒಲವಿನ ಮನಸ್ಸೊಂದನ್ನು ಬಿಟ್ಟು. ಆದರೆ ಅದು ಯಾರಿಗೂ ಅಷ್ಟು ಸುಲಭವಾಗಿ ಕಾಣುವುದಿಲ್ಲವಲ್ಲ. ಬಡತನವನ್ನೆ ಹೊದ್ದು ಮಲಗಿದ ನನ್ನ ಶರೀರದಿಂದ ಒಲವ ಘಮ ನಿನ್ನ ನಾಸಿಕವ ಮುಟ್ಟುವ ಮೊದಲೆ ಕೀಳರಿಮೆ ಬಾಣಲೆಯಲ್ಲಿ ಬಿದ್ದು ಕರಕಲಾಗಿ ಕಪ್ಪಾಗಿ ಹೋಗುತ್ತಿತ್ತು. ನನ್ನ ಕಣ್ಣ ಕನಸ ತುಂಬಾ ಅಪ್ಪ ಅಮ್ಮನ ನೋವಿನ ಗೆರೆಗಳೆ ಬಾದಿಸುತ್ತಿದ್ದವು. ಬೆಳೆಯಬೇಕೆಂಬ ಹಂಬಲವೊಂದೆ ನನ್ನೊಡಲ ಹೆಬ್ಬಯಕೆ. ನಿನ್ನೊಡಲ ಮಡಿಲ ಸೇರಿ ಕನಸುಗಳೆಲ್ಲಾ ಕಮರಿಹೋದರೆ ಎಂಬ ಭಯ ನನ್ನನ್ನು ಕಾಡಿತ್ತು. ಒಲವೆಂದರೆ ಅದೇನು ಕೆಟ್ಟದ್ದೆ?
ಹೀಗೆ ಯೋಚಿಸುತ್ತಲೆ ನನ್ನೊಳಗೊಂದು ಸ್ಪಷ್ಟತೆಯನ್ನು, ಯಾವುದೋ ಅನಿರ್ವಚನೀಯವಾದ ಭಾವವನ್ನು ಹುಟ್ಟು ಹಾಕಿತು. ಒಲವಿನೊಂದಿಗೆ ಗೆಲುವು ಕಾಣಬೇಕು. ಕಣ್ಣೊಳಗಿನ ಕನಸುಗಳು ನನಸಾಗಬೇಕು ಎಂದು ತೀರ್ಮಾನಿಸಿದೆ. ಆದರೆ ನಿನ್ನೊಳಗಿನ ಮಾತು ನನಗೆ ಹೇಗೆ ಗೊತ್ತಾಗಬೇಕು. ಆ ದಿನವೆ ಗಮನಿಸಿದ್ದೆ ಕಂಡೂ ಕಾಣದಂತೆ ನಿನ್ನ ಕಣ್ಣುಗಳು ನನ್ನನ್ನು ಸಂಧಿಸಿದ್ದವು. ಇಷ್ಟೆಲ್ಲಾ ಯೋಚನೆಗಳ ಮಧ್ಯೆಯೂ ಗಮನಿಸಿದ್ದೆ. ನಿನ್ನ ಆಪ್ತ ಗೆಳತಿಯೆ ನನಗೆ ಹೇಳಿದ್ದಳು, ನಿನಗಾಗಿಯೆ ಅವಳು ಆ ದಿನ ಕಡುನೀಲಿಯ ಲಂಗ ದಾವಣಿ ಹಾಕಿದ್ದಳೆಂದು. ನನಗೊ ಪರಮಾಶ್ಚರ್ಯ. ಅಂದರೆ ನನ್ನನ್ನು ಈಗಾಗಲೆ ನೀನು ಬಹಳ ದಿನಗಳಿಂದಲೂ ಗಮನಿಸುತ್ತಿದ್ದೆಯೆಂದು. ನಾನೆ ದಡ್ಡನ ಅಥವಾ ನನ್ನೊಳಗಿನ ನಿರಾಸಕ್ತಿಯೆ ಹಾಗೆ ಮಾಡಿತ್ತ, ನನ್ನ ಕಣ್ಣೊಳಗೆ ನನ್ನ ಜನ್ಮದಾತರು ಜತನವಾಗಿ ಕಾಪಿಟ್ಟ ಕನಸುಗಳು ಚದುರಿ ಹೋದಾವು ಎಂಬ ಹಪಹಪಿತನ ನನ್ನೊಳಗಿತ್ತ ಗೊತ್ತಿಲ್ಲ. ಅಂತು ನಾನು ನನ್ನೊಳಗೊಂದು ಪರಿಧಿಯನ್ನು ಹಾಕಿಕೊಂಡಿದ್ದೆ. ಅದೆ ನನ್ನೊಳಗಿನ ಕೀಳರಿಮೆ ಜಾಸ್ತಿಯಾಗಲು ಕಾರಣವಾಗಿತ್ತ? ನಿಖರವಾಗಿ ಹೇಳಲಾರೆ. ಕಡೆಗೊಂದು ದಿನ ಅಳೆದು ತೂಗಿ ನಿನ್ನ ಭೇಟಿಯಾಗುವುದೆಂದೆ ತೀರ್ಮಾನಿಸಿದೆ. ಅದು ಬದುಕಿನ ಬಹುದೊಡ್ಡ ಬದಲಾವಣೆ ಮಾಡೀತು ಎಂಬ ಯಾವ ಕಲ್ಪನೆಯೂ ಇರಲಿಲ್ಲ.
ಅಂದು ಬೆಳಗಿನ ತರಗತಿಯನ್ನು ಮುಗಿಸಿಕೊಂಡು ಕ್ಲಾಸ್ ರೂಂ ನಿಂದ ಹೊರಬರುವಾಗಲೇ ನೀನು ಅವಸರವಸರವಾಗಿ ಜೊತೆಯಲ್ಲಿಯೇ ಎದ್ದು ಬಂದಿದ್ದೆ. ನನಗೂ ಒಳಗೊಳಗೆ ಖುಷಿಯಾಗಿತ್ತು, ಇಬ್ಬರೂ ಏನು ಮಾತಾಡದೆ ನೇರವಾಗಿ ಹೋಗಿದ್ದು ಲೈಬ್ರರಿಗೆ ಅದು ನನ್ನ ದಿನಚರಿಯೂ ಹೌದು ನಿನಗೂ ಅಭ್ಯಾಸವಿದೆಯೆಂದು ನನಗೇನೂ ಗೊತ್ತಿರಲಿಲ್ಲ ಅಥವಾ ಇಷ್ಟು ದಿನ ನಾನು ಗಮನಿಸಿಲ್ಲವಾ ತಿಳಿಯದು. ಇಬ್ಬರೂ ಒಂದೆ ಟೇಬಲ್ ಮೇಲೆ ಕುಳಿತು ಅಂದಿನ ದಿನ ಪತ್ರಿಕೆಯನ್ನೆಲ್ಲಾ ಓದಿದ ಮೇಲೆ ನಾವಿಬ್ಬರೂ ಪರಿಚಯಿಸಿಕೊಂಡೆವು. ಪರಿಚಯ ಬೇಕಾಗಿತ್ತ ಎನಿಸಿದ್ದು ನಿಜ. ನಂತರ ಕಾಲೇಜಿನ ಎಷ್ಟೋ ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆವು ಮಾತಾಡಿದೆವು ಚರ್ಚಿಸಿದೆವು. ಮನುಷ್ಯನ ಜೀವ ವಿಕಾಸದ ಬಗ್ಗೆ ಚರ್ಚಿಸುವಾಗ ಒಂದಷ್ಟು ಭಾವುಕರಾಗುತ್ತಿದ್ದೆವು. ಹೀಗೆಲ್ಲ ಜೀವವಿಕಾಸ ಹೊಂದಿದ ಮನುಷ್ಯ ಇಂದೇಕೆ ನಮ್ಮೊಳಗೊಂದು ಕಂದಕವನ್ನು ಸೃಷ್ಟಿಸಿಕೊಂಡು ಮಾನವೀಯತೆಯನ್ನೆ ಕಳೆದುಕೊಂಡು ಬದುಕುತ್ತಿದ್ದಾನಲ್ಲ ಎಂದುಕೊಳ್ಳುತ್ತಿದ್ದೆವು. ಸಹಜವಾಗಿ ಬದುಕುವುದಕ್ಕೆ ಸಾಧ್ಯವೆ ಇಲ್ಲವೆ ಎನಿಸುತ್ತಿತ್ತು. ಇನ್ನಷ್ಟು ಹತ್ತಿರವಾದೆವು. ಬಹುಶಃ ನಮ್ಮಿಬ್ಬರ ಆಲೋಚನೆಗಳು ಒಂದೆ ಆಗಿದ್ದರಿಂದ ಬದುಕಿನ ಕನಸಿನ ಬಗ್ಗೆ ಹಂಚಿಕೊಳ್ಳುತ್ತಿದ್ದೆವು. ಇಬ್ಬರೂ ನಮ್ಮ ನಮ್ಮ ಪರಿಧಿಯನ್ನು ದಾಟಿ ಹೋದವರಲ್ಲ. ಬದುಕಿನ ಸ್ವಾರಸ್ಯವೆ ಅಂತಹುದು.. ಇನ್ನೇನು ಎಲ್ಲಾ ಸರಿಯಾದೀತು ಎನ್ನುವಾಗಲೆ ಯಾವುದೊ ದಿಕ್ಕಿನಿಂದ ಬಂದ ಕಷ್ಟಗಳು ಅಪ್ಪಳಿಸಿ ಬದುಕಿನ ದಿಕ್ಕನ್ನೆ ಬದಲಿಸಿ ಬಿಡುತ್ತವೆ. ಬದುಕಿನ ಆಪ್ಯಾಯತೆ ಅಡಗಿರುವುದು ಇಂತಹ ಕಷ್ಟಗಳಲ್ಲೆ. ಬದುಕು ಬೇಕಿನಿಸುವುದು. ಬೇಡವೆನಿಸುವುದು ಇಂತಹ ಸಂದರ್ಭಗಳಲ್ಲೆ. ಇದಕ್ಕೆ ಯಾವ ಸಿದ್ಧ ಸೂತ್ರವು ಬೇಡ.
ಬಡತನವನ್ನೆ ಹೊದ್ದು ಮಲಗಿದ ನನ್ನ ಶರೀರದಿಂದ ಒಲವ ಘಮ ನಿನ್ನ ನಾಸಿಕವ ಮುಟ್ಟುವ ಮೊದಲೆ ಕೀಳರಿಮೆ ಬಾಣಲೆಯಲ್ಲಿ ಬಿದ್ದು ಕರಕಲಾಗಿ ಕಪ್ಪಾಗಿ ಹೋಗುತ್ತಿತ್ತು. ನನ್ನ ಕಣ್ಣ ಕನಸ ತುಂಬಾ ಅಪ್ಪ ಅಮ್ಮನ ನೋವಿನ ಗೆರೆಗಳೆ ಬಾದಿಸುತ್ತಿದ್ದವು. ಬೆಳೆಯಬೇಕೆಂಬ ಹಂಬಲವೊಂದೆ ನನ್ನೊಡಲ ಹೆಬ್ಬಯಕೆ. ನಿನ್ನೊಡಲ ಮಡಿಲ ಸೇರಿ ಕನಸುಗಳೆಲ್ಲಾ ಕಮರಿಹೋದರೆ ಎಂಬ ಭಯ ನನ್ನನ್ನು ಕಾಡಿತ್ತು. ಒಲವೆಂದರೆ ಅದೇನು ಕೆಟ್ಟದ್ದೆ?
ಹೀಗೆ ವರ್ಷಗಳೆ ಉರುಳಿದವು ನಮ್ಮಿಬ್ಬರ ಒಲವಿನ ಸ್ನೇಹದಲ್ಲಿ. ಯಾವ ಕೊರತೆಯೂ ಇರಲಿಲ್ಲ. ವಾರ್ಷಿಕೋತ್ಸವದ ತರಾತುರಿಯಲ್ಲಿರುವಾಗ ಇದ್ದಕ್ಕಿದ್ದಂತೆ ಊರಿಗೆ ಬರಬೇಕು ನಿಮ್ಮ ತಂದೆಗೆ ಹುಷಾರಿಲ್ಲ ಎಂಬ ದೂರವಾಣಿ ಕರೆ, ನಮ್ಮಿಬ್ಬರಿಗೂ ಒಂದು ಗೋಡೆಯಾಗುತ್ತದೆ ಎಂಬ ಕಲ್ಪನೆಯ ಲವಲೇಶವೂ ಇರಲಿಲ್ಲ. ನೀನು ಆತುರಾತುರವಾಗಿ ಊರಿಗೆ ಹೋಗಿದ್ದೆ. ಅಲ್ಲಿ ಏನಾಯಿತು ಎಂದು ನನಗೆ ಈಗಲೂ ತಿಳಿದಿಲ್ಲ. ನೀನು ಹೇಳುವ ಪ್ರಯತ್ನವನ್ನು ಮಾಡಲಿಲ್ಲ. ನಾನು ಕೇಳುವ ಗೋಜಿಗೂ ಹೋಗಲಿಲ್ಲ. ಇವತ್ತು ಯೋಚಿಸಿದರೆ ಹೌದು ನಾನು ಕೇಳಬಹುದಿತ್ತಲ್ಲ ಅನಿಸಿದರೂ ಅವಳಾದರೂ ಹೇಳಬಹುದಿತ್ತಲ್ಲ ಎಂಬ ಪ್ರಶ್ನೆ ಮೂಡುತ್ತದೆ. ನಮ್ಮಿಬ್ಬರ ಪ್ರಶ್ನೆಗಳು ಹಾಗೆಯೇ ಉಳಿದಿದ್ದವು. ಉತ್ತರ ಬೇಡದ ಪ್ರಶ್ನೆಗಳಾಗಿ ಮೌನದ ಉತ್ತರಗಳಾಗಿ. ಆ ಉತ್ತರಗಳು ಇಬ್ಬರನ್ನು ಮುಟ್ಟಲಿಲ್ಲ ಅಥವಾ ಮುಟ್ಟಿಸುವ ಪ್ರಯತ್ನವನ್ನೆ ಮಾಡಲಿಲ್ಲವ ಇವತ್ತಿಗೂ ತಿಳಿದಿಲ್ಲ. ಅಂತೂ ವಾರದ ನಂತರ ಕಾಲೇಜಿಗೆ ಮರಳಿದ್ದೆ. ಆದರೆ ನಿನ್ನೊಳಗಿನ ಆ ಒಲವ ಬೆಳಕು ಬಾಡಿದಂತೆ ಕಂಡಿತು. ನಿನ್ನ ನಡಿಗೆಯಲ್ಲಿ ಯಾವ ಲಾಸ್ಯವೂ ಇರಲಿಲ್ಲ ಮನದ ದುಗುಡ ಕಾಲಿಗೂ ಇಳಿದಿತ್ತ ತಿಳಿದಿಲ್ಲ. ಆ ನಿರುತ್ಸಾಹ ಸೋತ ಆ ನಿನ್ನ ಕೆನ್ನೆ ಸವರುತ್ತಿದ್ದ ಮುಂಗುರುಳು ಎಲ್ಲವೂ ಯಾವುದೊ ದುಗುಡಕ್ಕೆ ಒಳಗಾದಂತೆ ಅನ್ಯಮನಸ್ಕತೆಯನ್ನು ಹೇಳುತ್ತಿದ್ದವು. ನಿನ್ನ ತಂದೆ ತೀರಿಕೊಂಡರೆಂಬ ಸುದ್ದಿ ತಿಳಿದಿತ್ತು. ಆ ದುಗುಡವೆಲ್ಲಾ ಕಳೆಯಲಿ ಮತ್ತೆ ನಮ್ಮಿಬ್ಬರ ಭೇಟಿ ಆ ಕ್ಲಾಸ್ ರೂಂ ಅಥವಾ ಲೈಬ್ರರಿಯಲ್ಲಿ ಸೇರುತ್ತೇವೆ, ಮತ್ತದೆ ಚರ್ಚೆ ಅದೇ ಉತ್ಸಾಹ ಮರುಕಳಿಸಬಹುದು ಎಂದುಕೊಂಡಿದ್ದ ನನಗೆ ಇಂತದ್ದೊಂದು ವಿದಾಯ ಬರುತ್ತದೆಯೆಂಬ ಯಾವ ಮುನ್ಸೂಚನೆಯೂ ಇರಲಿಲ್ಲ. ಆದರೆ ಯಾವ ದುಗುಡವನ್ನು ಯಾರೊಂದಿಗೂ ಹಂಚಿಕೊಳ್ಳದೆ ನಿನ್ನಲ್ಲೆ ಮಂಜಿನ ಗಡ್ಡೆಯನ್ನಾಗಿ ಘನೀಕರಿಸಿಕೊಂಡಿದ್ದು ನಿನ್ನ ಶಕ್ತಿಯೆ ಇರಬೇಕು ಅಥವಾ ಜಗತ್ತಿನ ಎಲ್ಲಾ ಮಹಿಳೆಯರಿಗೂ ಈ ಶಕ್ತಿ ಇರುತ್ತಾ ಗೊತ್ತಿಲ್ಲ. ನೀನಂತೂ ಮಹಾಮೌನಿಯಾದೆ. ಮೌನದ ಹಿಂದೆ ನಿಗೂಢವಿರತ್ತದೆ ಎಂದು ಕೇಳಿದ್ದೇನೆ. ಇರಬಹುದೇನೊ ನೀನಂತೂ ಯಾವುದನ್ನು ಹೇಳಲಿಲ್ಲ. ಅಥವಾ ನಾನೇ ಕೇಳಲಿಲ್ಲವಾ… ನಾನು ಮೌನಿಯಾಗಲು ಕಾರಣವಾದರೂ ಏನು? ಇವತ್ತಿಗೂ ತಿಳಿದಿಲ್ಲ. ಹಾಗಾಗಿ ಇಬ್ಬರಲ್ಲೂ ಯಾವ ಮಾತುಗಳೂ ಇರಲಿಲ್ಲ. ಬರಿಯ ನೋಟವಷ್ಟೆ… ಆಗಾಗ ಒಂದು ಮುಗುಳ್ನಗೆ ಇದರಲ್ಲೆ ಮುಗಿದು ಹೋಯಿತು ಅನ್ನುವಾಗಲೆ ವಾರ್ಷಿಕೋತ್ಸವದ ಜವಾಬ್ದಾರಿ ನಮ್ಮಿಬ್ಬರ ಹೆಗಲಿಗೆ ಬೀಳಬೇಕೆ. ಒಂದಿಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿ ನಿರೂಪಕಳಾಗಿ ನಿರೂಪಕನಾಗಿ ಕಾರ್ಯಕ್ರಮವನ್ನೇನೊ ಮುಗಿಸಿದ್ದೆವು. ಸಂಭ್ರಮ ಸಡಗರದ ಸಮಯ ಸರಿದದ್ದೆ ತಿಳಿಯಲಿಲ್ಲ. ಆದರೆ ಕಾರ್ಯಕ್ರಮದ ನೆಪಕಷ್ಟೆ ಕೆಲವು ನೋವುಗಳು ಹೊರಜಗತ್ತಿಗೆ ಗೊತ್ತಾಗಬಾರದು. ನೋವುಗಳಿಗೂ ನಗುವಿನ ಲೇಪನವಃಚ್ಚಿ ಖುಷಿಪಡುವವರೆ ಜಾಸ್ತಿ. ಹಾಗಾಗಿ ಇಬ್ಬರೂ ನಗುವಿನ ಮುಖವನ್ನಿಟ್ಟುಕೊಂಡೆ ಕಾರ್ಯಕ್ರಮ ಮುಗಿಸಿದ್ದೆವು. ಆಗಾಗ ಮಾತನಾಡುವ ತವಕ ತಲ್ಲಣಗಳು ನನ್ನಲ್ಲಿದ್ದರೂ ನಿನ್ನಿಂದ ಯಾವ ಪ್ರತಿಕ್ರಿಯೆಯೂ ಇಲ್ಲ. ಕನಸುಗಳೆಲ್ಲಾ ನುಚ್ಚು ನೂರಾದವೆ ಅನಿಸಿದ್ದುಂಟು. ಕೆಲವೊಮ್ಮೆ ಮೌನ ಮುರಿಯಬೇಕು. ಇಲ್ಲದಿದ್ದರೆ ಮೌನದ ಬೆಂಕಿಯಲಿ ಕನಸುಗಳೆಲ್ಲಾ ಕಮರಿಹೋಗಿಬಿಡುತ್ತವೆ ಎಂಬ ಸತ್ಯ ತಿಳಿದಿದ್ದರೂ ಮಾತು ಹೊರಬರಲಿಲ್ಲ. ಮರೆತು ಬಿಡಬೇಕು ಅನಿಸಿದರೂ ಮರೆತು ಹೋಗುವ ಒಲವು ನಮ್ಮದಾಗಿರಲಿಲ್ಲ. ಯಾಕೆಂದರೆ ಬದುಕು ಇಬ್ಬರದೂ ಅಲ್ಲವೇ. ಒಬ್ಬರ ಬದುಕು ನಿರ್ಧರಿಸಲು ಯಾರಿಗೂ ಅಧಿಕಾರ ಇಲ್ಲ ಎಂಬ ಮಾತು ಆಗಾಗ ಚರ್ಚೆಯ ಸಂದರ್ಭದಲ್ಲಿ ನೀನೆ ಹೇಳಿದ್ದುಂಟು. ಹಾಗಾಗಿಯೇ ಮೌನದ ಹಿಂದಿನ ಕಾರಣವನ್ನು ನಾನು ಕೇಳಲಿಲ್ಲ ನೀನು ಹೇಳುವ ಪ್ರಯತ್ನವನ್ನು ಮಾಡಲಿಲ್ಲ. ನಮ್ಮಿಬ್ಬರ ಮಧ್ಯೆ ಮೌನದ ಬೇಲಿಯನ್ನೆ ಹಾಕಿಕೊಂಡ ನೀನು ವಿದಾಯದ ಸಮಯದಲ್ಲಂತು ಒಳಗೊಳಗೆ ನೊಂದು ಕೈ ಬೀಸಿದ್ದು ನನಗೇನು ತಿಳಿಯಲಿಲ್ಲ ಅಂದುಕೊಂಡಿರಬಹುದು. ಕಂಡು ಕಾಣದಂತೆ ಕಣ್ಣಂಚಿನ ಹನಿ ಮಣ್ಣ ಸೇರಿದ್ದು ನೋಡಿ ನನ್ನ ಕಣ್ಣಂಚಿನಲ್ಲೂ ನೀರು ತರಿಸಿತ್ತು ಇಬ್ಬರು ಒಲ್ಲದ ಮನಸ್ಸಿನಿಂದಲೇ ಬೇರೆಯಾಗಿದ್ದೆವು.
ಬದುಕು ಎಲ್ಲವನ್ನು ಮರೆಸುತ್ತದೆ ನೆನಪಿಸುತ್ತದೆ ಕೂಡ. ಭೂಮಿ ಗುಂಡಾಗಿದೆ ಅಲ್ಲವೇ. ತಿರುಗುವ ಭೂಮಿಯಲ್ಲಿ ಒಬ್ಬರಿಗೊಬ್ಬರು ಸಂದಿಸಲೇಬೇಕು. ನಮ್ಮಿಬ್ಬರ ಬೇಟಿಯಾಗಿ ಎರಡು ವರ್ಷಗಳು ಕಳೆದಿರಬೇಕು ಆಕಸ್ಮಿಕವಾಗಿ ಬಸ್ಸಿನಲ್ಲಿ ಸಿಕ್ಕಾಗ ಇಬ್ಬರು ಒಬ್ಬರಿಗೊಬ್ಬರು ನೋಡಿದರೂ ನೋಡಿಲ್ಲವೆಂಬಂತೆ ದೃಷ್ಟಿ ಬದಲಿಸಿದ್ದು ಬದುಕಿನಲ್ಲಿ ಹೀಗೂ ನಡೆಯಬಹುದು ಅನ್ನಿಸಿದ್ದು ನಿಜ. ನನ್ನೊಳಗಿನ ಮನಸ್ಸು ಯೋಚನೆಯಲ್ಲಿ ಮುಳುಗಿತ್ತು ಇಬ್ಬರಲ್ಲೂ ಗುರುತು ಸಿಗಲಾರದಷ್ಟು ಬದಲಾವಣೆಗಳೇನು ಆಗಿರಲಿಲ್ಲ. ಆದರೆ ಬದುಕಿನ ಅನಿವಾರ್ಯತೆಗಳು ಪರಿಚಿತರನ್ನು ಅಪರಿಚಿತರನ್ನಾಗಿ, ಅಪರಿಚಿತರನ್ನು ಪರಿಚಿತರನ್ನಾಗಿ ಮಾಡುತ್ತದೆ. ಬಹುಶಃ ಮನುಷ್ಯನನ್ನು ಬದಲಿಸುವ ಶಕ್ತಿ ಇರುವುದು ಬದುಕಿನ ಅಷ್ಟೂ ಅನಿವಾರ್ಯತೆಗಳಿಗೆ ಅನಿಸುತ್ತದೆ. ಸುಮ್ಮನೇ ನೋಡಿಕೊಂಡೆ ಬಸ್ಸಿಳಿದು ಇಬ್ಬರು ನಮ್ಮ ನಮ್ಮ ದಾರಿ ಹಿಡಿದವು.
ಅದಾದ ಒಂದು ತಿಂಗಳಿಗೆ ಗೆಳೆಯನೊಬ್ಬ ಸಿಕ್ಕಿ ಅವಳ ಬದುಕಿನ ಕಥೆಯನ್ನು ಒಂದೇ ಸಾಲಿನಲ್ಲಿ ಮುಗಿಸಿದ್ದ. ಅಯ್ಯೋ ಅವಳಿಗೆ ಈಗಾಗಲೆ ಮದುವೆಯಾಗಿದೆ. ಅಂದು ನಿನ್ನೊಂದಿಗೆ ಮಾತಾಡದೆ ಇರುವುದಕ್ಕೂ ಅದೇ ಕಾರಣವಂತೆ ಅವರಪ್ಪ ಸಾಯುವಾಗ ನಿನ್ನ ಸೋದರ ಮಾವನನ್ನೆ ಮದುವೆಯಾಗಬೇಕು ಎಂದು ಭಾಷೆ ತೆಗೆದುಕೊಂಡಿದ್ದರಂತೆ ಎಂಬ ವಿಚಾರ ಇತ್ತೀಚೆಗಷ್ಟೆ ನನಗೂ ತಿಳಿದದ್ದು. ಎಂದ ಗೆಳೆಯನ ಮಾತನ್ನು ಕೇಳಿ ನನಗೂ ಮನಸ್ಸು ತೊಳಿಸಿದಂತಾದರೂ ಬದುಕಿನ ಸಂದರ್ಭಕ್ಕೆ ಎಲ್ಲರೂ ಒಳಗೊಳ್ಳಲೇಬೇಕು ಎಂಬ ಸತ್ಯವಂತು ತಿಳಿದಿತ್ತು. ಈಗ ಆಕೆಯ ಬದುಕಿನ ಬಂಡಿಯೆ ಬೇರೆಯಾಗಿರುವಾಗ ನೆನಪಿಗೆಲ್ಲಿ ಜಾಗವಿದೆ? ನೆನಪಾದರೂ ಅದು ಬಂದು ಹೋಗುವ ತಂಗಾಳಿಯಷ್ಟೆ. ಆಕೆ ಗಂಡ ಮನೆ ಮಕ್ಕಳ ಲಾಲನೆಗೆ ಪಾಲನೆಯಲ್ಲಿ ಮುಳುಗಿರುವಾಗ ಯಾರನ್ನು ಮಾತಾಡಿಸಿ ಏನಾಗಬೇಕು ಅನಿಸಿರಬೇಕು. ಬದುಕಿನ ಪಾಠಕ್ಕಿಂತ ಬಹುದೊಡ್ಡ ಪಾಠ ಯಾವುದು ಇಲ್ಲವೆನಿಸಿತು. ಬದುಕು ಬಂದಂತೆ ಸ್ವೀಕರಿಸಬೇಕು. ಇಲ್ಲಿ ಯಾವುದು ಶಾಶ್ವತವಲ್ಲ. ಯಾರು ಶಾಶ್ವತವಲ್ಲ. ಎನಿಸಿದ ನನಗೆ ಬದುಕು ಯಾವಾಗಲೂ ಕೌತುಕ ಅದರ ಒಡಲಲ್ಲಿ ಏನೆಲ್ಲಾ ಇದೆಯೋ ಅದನ್ನು ಅನುಭವಿಸಿಯೇ ಸವಿಯಬೇಕು. ಸವಿದು ಸವೆಯಬೇಕು. ಸವೆದು ಅಂತ್ಯ ಕಾಣಬೇಕು ಎನಿಸಿತು…