ಹೇಗ್‌ನಲ್ಲಿ ಸಿಕ್ಕ ಪಾಕಿಸ್ತಾನದ ಆ ಧೈರ್ಯ ತುಂಬಿದ ಮಹಿಳೆಯರ ಬಗ್ಗೆ ಪಕ್ಕದಲ್ಲಿ ಕುಳಿತಿದ್ದ ಈ ಮಹಿಳೆಗೆ ಹೇಳಿದೆ. ‘ಈಗ ನೀವು ಹೇಳುತ್ತಿರುವುದು ತದ್ವಿರುದ್ಧವಾಗಿದೆಯಲ್ಲಾ’ ಎಂದು ತಿಳಿಸಿದೆ. ಆಗ ಆ ಮಹಿಳೆ ಹೇಳಿದಳು: ‘ಅದೆಲ್ಲಾ ಆ ಕಾಲದ ಮಾತು. ಈಗ ಪರಿಸ್ಥಿತಿ ಬಹಳ ಹದಗೆಟ್ಟಿದೆ. ಉಗ್ರರು ಪಾಕಿಸ್ತಾನವನ್ನು ಅಳಿವಿನ ಅಂಚಿಗೆ ತಂದಿಡುತ್ತಿದ್ದಾರೆ. ನಿಮ್ಮ ದೇಶ ಎಷ್ಟೋ ಪಾಲು ಮೇಲು. ನಿಮ್ಮ ಸಿನಿಮಾಗಳು, ನಿಮ್ಮ ಸಂಗೀತ, ನಿಮ್ಮ ವಸ್ತುಗಳು ನಮಗೆ ಬಹಳ ಪ್ರಿಯವಾಗಿವೆ. ಎರಡೂ ದೇಶಗಳ ಜನರ ಮಧ್ಯೆ ಸೌಹಾರ್ದ ಸಂಬಂಧ ಹೊಂದುವ ಕ್ಷಣಗಳನ್ನು ರಾಜಕೀಯ ಶಕ್ತಿಗಳು ಬದಲಾಯಿಸಿ ಬಿಡುತ್ತವೆ’! ಎಂದು ಆಕೆ ಬೇಸರ ವ್ಯಕ್ತಪಡಿಸಿದಳು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 78ನೇ ಕಂತು ನಿಮ್ಮ ಓದಿಗೆ
೨೦೧೫ರ ಏಪ್ರಿಲಲ್ಲಿ ನ್ಯೂಯಾರ್ಕಿನಿಂದ ಅಬುಧಾಬಿ ಮೂಲಕ ಬೆಂಗಳೂರಿಗೆ ಬರುವಾಗ ಪಾಕಿಸ್ತಾನಿ ಮಹಿಳೆಯೊಬ್ಬಳು ವಿಮಾನದಲ್ಲಿ ಪಕ್ಕದಲ್ಲೇ ಕುಳಿತಿದ್ದಳು. ಕರಾಚಿಯ ಮಹಿಳಾ ಕಾಲೇಜೊಂದರಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿ ನಿವೃತ್ತಳಾದ ಅವಳು ಕೆಲ ತಿಂಗಳು ನ್ಯೂಯಾರ್ಕಲ್ಲಿನ ಮಗಳ ಮನೆಯಲ್ಲಿದ್ದು ಈಗ ಪೇಷಾವರದಲ್ಲಿರುವ ಮಗಳ ಮನೆಗೆ ಹೊರಟಿದ್ದಳು. ವಿಮಾನ ಗಂಟೆಗೆ ಸಾವಿರ ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿದ್ದರೂ ನ್ಯೂಯಾರ್ಕಿನಿಂದ ಅಬುಧಾಬಿಗೆ ೧೩ ಗಂಟೆಗಳ ಪಯಣ. ಪ್ರತಿಯೊಬ್ಬರ ಮುಂದೆ ಕುರ್ಚಿಗೆ ಅಂಟಿಕೊಂಡಿರುವ ಪುಟ್ಟ ಮಾನಿಟರ್‌ನಲ್ಲಿ ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳನ್ನು ನೋಡಬಹುದು. ಮಕ್ಕಳ ಅನಿಮೇಷನ್ ಚಿತ್ರಗಳು, ಚಾನೆಲ್‌ಗಳೂ ಸೇರಿದಂತೆ ಹತ್ತಾರು ಚಾನೆಲ್‌ಗಳು ದೀರ್ಘ ಪಯಣದ ಬೇಸರ ತಗ್ಗಿಸುವುದಕ್ಕಾಗಿ ಇದ್ದವು. ಗಗನ ಸಖಿಯರು ಅನೇಕ ಸಲ ನೀರು, ಜ್ಯೂಸ್, ಕಾಫಿ, ತಿಂಡಿ, ಊಟ ಮುಂತಾದ ಕಾರಣಗಳಿಗಾಗಿ ಬರುತ್ತಲೇ ಇದ್ದರು. ವಿಮಾನದಲ್ಲಿ ಹಾಗೂ ಹೀಗೂ ಸಮಯ ಕಳೆಯುವುದೇ ಜೀವನದ ಗುರಿಯಾಗಿತ್ತು.
ಬಹಳ ಹೊತ್ತಿನವರೆಗೆ ಸುಮ್ಮನೆ ಕುಳಿತಿದ್ದೆ. ಆ ಪಾಕಿಸ್ತಾನಿ ಮಹಿಳೆಗೆ ಸಿನಿಮಾ ನೋಡಬೇಕೆನಿಸಿತು. ಬಟನ್‌ಗಳ ಗೊಂದಲದಿಂದಾಗಿ ಸಹಾಯ ಕೇಳುವುದರ ಮೂಲಕ ಮಾತು ಆರಂಭಿಸಿದಳು. ನಾನು ಅದು ಇದು ಮಾತನಾಡುತ್ತಾ ಪಾಕಿಸ್ತಾನದಲ್ಲಿ ಪರಿಸ್ಥಿತಿ ಹೇಗಿದೆ ಎಂದು ಕೇಳಿದೆ. ಅವಳು ಗಾಬರಿಯಾಗಿ ‘ಬಹಳ ಮೆಲುದನಿಯಲ್ಲಿ ಕೇಳಿ; ನಮ್ಮ ಹಿಂದೆ ಕುಳಿತವರು ಐಎಸ್ಐಎಸ್ ಏಜೆಂಟರಾಗಿರಬಹುದು’ ಎಂದಳು. ನನ್ನ ಕುತೂಹಲ ಹೆಚ್ಚಾಯಿತು. ಮೆಲು ಧ್ವನಿಯಲ್ಲೇ ಕೆಳತೊಡಗಿದೆ. ‘ಆ ಕಿಟಕಿಯ ಪಕ್ಕದಲ್ಲಿ ಕುಳಿತ ಮಹಿಳೆಯನ್ನು ನೋಡಿರಿ. ಆಕೆಗೆ ಅಕ್ಷರ ಜ್ಞಾನವಿಲ್ಲ ಎಂಬುದನ್ನು ಆಕೆಯ ಮುಖ ನೋಡಿಯೇ ಹೇಳುತ್ತೇನೆ. ಐಎಸ್ಐಎಸ್ ನೀಚರು ಅಂಥ ವಯಸ್ಸಾದ ನಿರೀಕ್ಷರಿ ಮಹಿಳೆಯರನ್ನೂ ತಮ್ಮ ದುಷ್ಟ ಕೃತ್ಯಗಳಿಗೆ ಉಪಯೋಗಿಸಿಕೊಳ್ಳುತ್ತಾರೆ. ಅವರು ಮನುಷ್ಯರೇ ಅಲ್ಲವೆಂದಮೇಲೆ ಮುಸ್ಲಿಮರು ಹೇಗಾದಾರು? ಕರಾವಳಿ ನಗರವಾದ ಕರಾಚಿ ಅವರ ಭಯದ ನೆರಳಲ್ಲಿ ಬದುಕುತ್ತಿದೆ. ಅವರು ಕರಾಚಿಯ ಗುಡ್ಡಗಾಡು ಪ್ರದೇಶಗಳಲ್ಲಿನ ಗುಹೆಗಳಲ್ಲಿ ವಾಸಿಸುತ್ತ ಒಮ್ಮಿಂದೊಮ್ಮೆಲೆ ದಾಳಿ ನಡೆಸಿ, ಸಿಕ್ಕಿದ್ದೆಲ್ಲವನ್ನೂ ದೋಚಿಕೊಂಡು ಹೋಗುತ್ತಾರೆ. ಅವರಿಗೆ ಕೊಲ್ಲುವುದು ಆಟವಾಗಿದೆ. ಕೊಲೆಗೀಡಾದವರ ರುಂಡಗಳನ್ನು ಮೈದಾನದಲ್ಲಿ ಎಸೆದು ಫುಟ್ಬಾಲ್‌ನಂತೆ ಆಡಲೂ ಹೇಸುವುದಿಲ್ಲ. ಮಹಿಳೆಯರು ಹೊರಗೆ ಹೋಗಬಾರದು, ಶಿಕ್ಷಣ ಪಡೆಯಬಾರದು, ನೌಕರಿ ಮಾಡಬಾರದು, ಅವರ ಸ್ಥಾನವೇನಿದ್ದರೂ ನಾಲ್ಕು ಗೋಡೆಗಳ ಮಧ್ಯೆ ಎಂಬುದನ್ನು ಮಹಿಳೆಯರಿಗೆ ಮನವರಿಕೆ ಮಾಡುವ ಉದ್ದೇಶದಿಂದಲೂ ಅವರು ಹೀಗೆ ‘ತಪ್ಪಿತಸ್ಥ’ ಮಹಿಳೆಯರ ಮೇಲೆ ಎಲ್ಲ ರೀತಿಯ ದೌರ್ಜನ್ಯ ಎಸಗಲು ಹಿಂಜರಿಯುವುದಿಲ್ಲ. ನಾವು ಮಹಿಳೆಯರು ಕರಾಚಿಯಲ್ಲಿ ಭಯದಿಂದ ಬದುಕುತ್ತಿದ್ದೇವೆ’ ಎಂದು ನೋವನ್ನು ತೋಡಿಕೊಂಡಳು.
‘ಬಾಲಕಿ ಮಲಾಲಾ ಎಂಥ ಧೈರ್ಯವಂತೆ. ಅವಳ ಪ್ರತಿ ಮಾತಿನಲ್ಲೂ ಎಷ್ಟೊಂದು ಸತ್ವವಿದೆ. ಅವಳು ನಮಗೆ ಸ್ಫೂರ್ತಿಯಾಗಿದ್ದಾಳೆ’ ಎಂದು ಹೇಳಿದ ಆಕೆ ಶಿಕ್ಷಣದಿಂದ ಹೊಸ ವ್ಯಕ್ತಿತ್ವ ರೂಪುಗೊಳ್ಳುವುದರ ಬಗ್ಗೆ ವಿವರಿಸಿದಳು.
‘ಈ ಉಗ್ರರು ಕೆಲ ತಿಂಗಳುಗಳ ಹಿಂದೆ ಶಾಲೆಯೊಂದರಲ್ಲಿ ಅಷ್ಟೊಂದು ಮಕ್ಕಳನ್ನು ನಿರ್ದಯದಿಂದ ಕೊಂದರು. ಉಗ್ರರ ದಾಳಿಯಿಂದ ತಪ್ಪಿಸಿಕೊಳ್ಳಬೇಕೆಂದು ಆ ಶಾಲೆಯ ಮುಖ್ಯೋಪಾಧ್ಯಾಯಿನಿಗೆ ಮಕ್ಕಳು ಅಂಗಲಾಚಿದರೂ ಆಕೆ ಒಂದಿಂಚೂ ಹಿಂದೆ ಸರಿಯಲಿಲ್ಲ. ನಿಮ್ಮನ್ನು ಬಿಟ್ಟು ನಾನು ಓಡಿ ಹೋಗಬೇಕೆ ಎಂದು ಆ ಮಕ್ಕಳ ಜೊತೆಗೇ ಸಾವಿಗೀಡಾದಳು. ಇವೆಲ್ಲ ನಮ್ಮ ಕರುಳು ಹಿಂಡುವಂಥ ಘಟನೆಗಳು’ ಎಂದು ಮರುಗಿದಳು.
ಈ ಎಲ್ಲ ಅನ್ಯಾಯಗಳಿಗೆ ಬಹುಪಾಲು ಮುಲ್ಲಾಗಳ ಕುಮ್ಮಕ್ಕಿದೆ. ಅವರಲ್ಲಿ ಅನೇಕರು ಶ್ರೀಮಂತರಾಗಿದ್ದಾರೆ. ವ್ಯವಹಾರವನ್ನೂ ನಡೆಸುತ್ತಾರೆ. ಆದರೆ ಮೂಲಭೂತವಾದವನ್ನು ರಕ್ಷಿಸದೆ ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಲಿಕ್ಕಾಗದು ಎಂಬ ಭ್ರಮೆಯಿಂದ ಅವರು ಹೊರಗೆ ಬರಲಿಕ್ಕೆ ಸಾಧ್ಯವೇ ಇಲ್ಲದಂಥ ಸ್ಥಿತಿಯಲ್ಲಿ ಇದ್ದಾರೆ. ಈ ಉಗ್ರರನ್ನು ಎದುರಿಸುವ ಶಕ್ತಿ ಸರ್ಕಾರಕ್ಕೂ ಇಲ್ಲ. ವಿರೋಧ ಪಕ್ಷಗಳಿಗೂ ಇಲ್ಲ. ಆಡಳಿತ ಪಕ್ಷವನ್ನು ತೀವ್ರವಾಗಿ ವಿರೋಧಿಸುವ ಇಮ್ರಾನ್ ಖಾನ್ ಉಗ್ರರ ವಿಚಾರದಲ್ಲಿ ಜಾಣ ಕುರುಡರಾಗಿದ್ದಾರೆ. ಬೇನಜೀರ್ ಭುಟ್ಟೋರ ಗಂಡ ಜರದಾರಿಯಂತೂ ನಾಜೂಕಯ್ಯನಂತೆ ರಾಜಕೀಯ ಮಾಡುತ್ತ ಕಾಲ ಕಳೆಯುತ್ತಿದ್ದಾನೆ. ಆಕೆಯ ಮಗ ಮಾತ್ರ ಈ ಉಗ್ರರನ್ನು ನೇರವಾಗಿ ಟೀಕಿಸುವ ಧೈರ್ಯ ತಾಳಿದ್ದಾನೆ. ಅವನಿಗೆ ಪದೆ ಪದೆ ಕೊಲೆ ಬೆದರಿಕೆ ಹಾಕುತ್ತಿದ್ದರೂ ಆತ ಹಿಂಜರಿದಿಲ್ಲ. ಬಲೂಚಿಸ್ತಾನದವರು ಪ್ರತ್ಯೇಕ ರಾಷ್ಟ್ರವಾಗಲು ಹವಣಿಸುತ್ತಿದ್ದಾರೆ. ಪಶ್ತೂನಿಗಳು ತಮ್ಮದೇ ಗುಂಗಿನಲ್ಲಿದ್ದಾರೆ. ನವಾಜ್ ಶರೀಫರ ಸಹೋದರ ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ. ಅವರು ಮಾತ್ರ ಭ್ರಷ್ಟಾಚಾರ ಮತ್ತು ಉಗ್ರಗಾಮಿಗಳ ಉಪಟಳವನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಸಿಕ್ಕಷ್ಟು ಹೊಡ್ಕೊ ಯೋಜನೆಯಲ್ಲಿರುವ ಶರೀಫ್ ಮತ್ತು ನಿಮ್ಮ ಪ್ರಧಾನಿ ಮಧ್ಯೆ ಆದ ಒಪ್ಪಂದದ ಪ್ರಕಾರ ವಸ್ತುಗಳ ಆಮದು ಹೆಚ್ಚಾಗಿದೆ. ಅದೇನೇ ಇದ್ದರೂ ಶರೀಫರ ಮುಸ್ಲಿಂ ಲೀಗ್‌ಗಿಂತಲೂ ಭುಟ್ಟೋರ ಪೀಪಲ್ಸ್ ಪಾರ್ಟಿ ಎಷ್ಟೋ ಉತ್ತಮ. ನನ್ನ ಮತ ಪೀಪಲ್ಸ್ ಪಾರ್ಟಿಗೆ. ಆದರೆ ರಾಜಕೀಯದಲ್ಲಿ ಅವಕಾಶ ಸಿಕ್ಕರೂ ನಾನು ಒಪ್ಪಿಕೊಳ್ಳಲಿಲ್ಲ. ಅಲ್ಲಿರುವುದು ಹರಾಮ್. ಧರ್ಮದ ಭಯವುಳ್ಳ ನನಗೆ ಅಂಥ ದುಷ್ಟರ ಮಧ್ಯೆ ಇರಲಿಕ್ಕಾಗದು. ಅಪ್ರಾಮಾಣಿಕವಾದುದು ನನಗೆ ಹಿಡಿಸುವುದಿಲ್ಲ’ ಎಂದು ರಾಜಕೀಯ ವ್ಯವಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದಳು. ‘ಪ್ರಾಮಾಣಿಕರು ಹೀಗೆ ಹಿಂಜರಿಯುವ ಕಾರಣದಿಂದಲೇ ಭ್ರಷ್ಟರು ರಾಜಕೀಯದಲ್ಲಿ ವಿಜೃಂಭಿಸುತ್ತಾರೆ’ ಎಂದು ನಾನು ಹೇಳಿದ್ದು ಅವಳ ತಲೆಗೆ ಹೋಗಲೇ ಇಲ್ಲ.
ನನ್ನ ಮನಸ್ಸು ಹಿಂದೆ ಹಿಂದೆ ಹೋಗುತ್ತಿತ್ತು. ೧೯೯೯ರ ಮೇ ತಿಂಗಳಲ್ಲಿ ನೆದರ್ಲ್ಯಾಂಡ್ಸ್‌ನ ರಾಜಧಾನಿ ಹೇಗ್‌ನಲ್ಲಿ ‘ಹೇಗ್ ಪೀಸ್ ಎಕಾರ್ಡ್’ ನ ದ್ವಿಶತಮಾನೋತ್ಸವದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಅಲ್ಲಿನ ರಾಜ ೧೭೯೯ರಲ್ಲಿ ನೆರೆಯ ದೇಶದೊಂದಿಗೆ ಶಾಂತಿಯ ಒಪ್ಪಂದ ಮಾಡಿಕೊಂಡು ಯುದ್ಧ ತಪ್ಪಿಸಿದ್ದರ ನೆನಪಿಗಾಗಿ ಆ ಅಂತರರಾಷ್ಟ್ರೀಯ ಸಮ್ಮೇಳನ ಏರ್ಪಡಿಸಲಾಗಿತ್ತು. ಅದು ಐರೋಪ್ಯ ಖಂಡದ ಮೊದಲ ಶಾಂತಿಯ ಒಪ್ಪಂದ ಆಗಿದ್ದರಿಂದ ಆ ಸಮ್ಮೇಳನದಲ್ಲಿ ೧೦೦ ದೇಶಗಳ ೮೦೦೦ ಜನ ಭಾಗವಹಿಸಿದ್ದರು. ಪಾಕಿಸ್ತಾನದಿಂದ ಕಾರ್ಮಿಕ ನಾಯಕ ಕರಾಮತ್ ಅಲಿ ಅವರ ನೇತೃತ್ವದಲ್ಲಿ ೨೦೦ ಮಂದಿ ಬಂದಿದ್ದರು. ಅವರಲ್ಲಿ ಬಹಳಷ್ಟು ಮಂದಿ ಮಹಿಳೆಯರಿದ್ದರು. ಕೆಲ ಹಿಂದೂ ಮಹಿಳೆಯರೂ ಇದ್ದರು. ಅವರಲ್ಲಿನ ಬಹುಪಾಲು ಮಹಿಳೆಯರು ಎನ್.ಜಿ.ಒ.ಗಳಲ್ಲಿ ಕಾರ್ಯಕರ್ತರಾಗಿದ್ದರು. ಅವರಲ್ಲಿ ಹೊಸತನ ಮತ್ತು ಧೈರ್ಯವಿತ್ತು. ಮೂಲಭೂತವಾದಿಗಳ ಬಗ್ಗೆ ತೀವ್ರ ಅಸಮಾಧಾನವಿತ್ತು. ಒಬ್ಬ ಯುವತಿ ತನ್ನ ಅನುಭವ ಹೇಳಿದಳು: ‘ರಸ್ತೆಯಲ್ಲಿ ಹೋಗುವಾಗ ಒಬ್ಬ ಮುಲ್ಲಾ ಎದುರಾಗಿ, ನೀನೇಕೆ ಬುರ್ಖಾ ಧರಿಸಿಲ್ಲ ಎಂದು ಗದರಿಸಿದ. ಆಗ ನಾನು ಏನೂ ಮಾತನಾಡಲಿಲ್ಲ. ಆತನ ಗಡ್ಡ ಹಿಡಿದು ಮುಖಕ್ಕೆ ಹೊಡೆಯತೊಡಗಿದೆ. ಆಗ ಆತ ಕೊಸರಿಕೊಂಡು ಓಡಿಹೋದ’ ಎಂದು ನಕ್ಕಿದ್ದಳು.
ಇನ್ನೊಬ್ಬಳು ಹೇಳಿದಳು: ‘ಈ ಮುಷರಫ್ ಭಾರತದ ಮೇಲೆ ಯುದ್ಧ ಆರಂಭಿಸುವ ತರಾತುರಿಯಲ್ಲಿದ್ದಾನೆ. ನೀವು ನಿಮ್ಮ ದೇಶಕ್ಕೆ ಹೋಗುವುದರೊಳಗಾಗಿ ಯುದ್ಧ ಆರಂಭವಾಗಬಹುದು’ ಎಂದಳು. ಈ ಹೆಣ್ಣುಮಕ್ಕಳಿಗೆ ತಮ್ಮ ದೇಶದ ಸೂಕ್ಷ್ಮ ವಿಚಾರಗಳೂ ಗೊತ್ತಿವೆಯಲ್ಲಾ ಎಂದು ಆಶ್ಚರ್ಯಚಕಿತನಾದೆ.
ಪಾಕಿಸ್ತಾನದಲ್ಲಿ ನಡೆಯುವ ಮಹಿಳಾ ಹೋರಾಟಗಳ ಕುರಿತು ಅನೇಕ ಮಹಿಳೆಯರು ವಿವರಿಸಿದರು. ಆ ಎಲ್ಲರೂ ಸದೃಢ ಮತ್ತು ಆಕರ್ಷಕ ಯುವತಿಯರಾಗಿದ್ದು ಎತ್ತರದ ನಿಲುವಿನವರಾಗಿದ್ದರು. ಅವರ ಸಾಮಾಜಿಕ ಪ್ರಜ್ಞೆ ಮತ್ತು ಹೋರಾಟದ ಮನೋಭಾವ ಮೆಚ್ಚುವಂತಿತ್ತು. ಅಲ್ಲಿನ ಎಡಪಕ್ಷಗಳು ದುರ್ಬಲವಾಗಿದ್ದರಿಂದ ಎನ್. ಜಿ.ಒ.ಗಳು ಹೋರಾಟಗಳ ಜವಾಬ್ದಾರಿ ಹೊತ್ತಂತಿತ್ತು.
ಹೇಗ್‌ನಲ್ಲಿ ಸಿಕ್ಕ ಪಾಕಿಸ್ತಾನದ ಆ ಧೈರ್ಯ ತುಂಬಿದ ಮಹಿಳೆಯರ ಬಗ್ಗೆ ಪಕ್ಕದಲ್ಲಿ ಕುಳಿತಿದ್ದ ಈ ಮಹಿಳೆಗೆ ಹೇಳಿದೆ. ‘ಈಗ ನೀವು ಹೇಳುತ್ತಿರುವುದು ತದ್ವಿರುದ್ಧವಾಗಿದೆಯಲ್ಲಾ’ ಎಂದು ತಿಳಿಸಿದೆ. ಆಗ ಆ ಮಹಿಳೆ ಹೇಳಿದಳು: ‘ಅದೆಲ್ಲಾ ಆ ಕಾಲದ ಮಾತು. ಈಗ ಪರಿಸ್ಥಿತಿ ಬಹಳ ಹದಗೆಟ್ಟಿದೆ. ಉಗ್ರರು ಪಾಕಿಸ್ತಾನವನ್ನು ಅಳಿವಿನ ಅಂಚಿಗೆ ತಂದಿಡುತ್ತಿದ್ದಾರೆ. ನಿಮ್ಮ ದೇಶ ಎಷ್ಟೋ ಪಾಲು ಮೇಲು. ನಿಮ್ಮ ಸಿನಿಮಾಗಳು, ನಿಮ್ಮ ಸಂಗೀತ, ನಿಮ್ಮ ವಸ್ತುಗಳು ನಮಗೆ ಬಹಳ ಪ್ರಿಯವಾಗಿವೆ. ಎರಡೂ ದೇಶಗಳ ಜನರ ಮಧ್ಯೆ ಸೌಹಾರ್ದ ಸಂಬಂಧ ಹೊಂದುವ ಕ್ಷಣಗಳನ್ನು ರಾಜಕೀಯ ಶಕ್ತಿಗಳು ಬದಲಾಯಿಸಿ ಬಿಡುತ್ತವೆ’! ಎಂದು ಆಕೆ ಬೇಸರ ವ್ಯಕ್ತಪಡಿಸಿದಳು.
‘ದೇಶ ಬಿಟ್ಟು ನ್ಯೂಯಾರ್ಕ್‌ನಲ್ಲಿ ಉಳಿಯಬೇಕೆಂದರೆ ಅನೇಕ ತೊಡಕುಗಳಿವೆ. ಇಷ್ಟು ದಿನಗಳವರೆಗೆ ಕರಾಚಿಯಲ್ಲೇ ಬದುಕಿ ಈಗ ಬಿಟ್ಟು ಬರಲು ಸಾಧ್ಯವಾಗುತ್ತಿಲ್ಲ. ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವಂಥ ಸ್ಥಿತಿ ತಲುಪಿದೆ. ಪೇಷಾವರದಲ್ಲಿ ಇರುವ ಮಗಳು ಮತ್ತು ಅಳಿಯ ಅಲ್ಲಿಂದ ಹೊರಹೋಗಲು ಇಚ್ಛಿಸುತ್ತಿಲ್ಲ. ನನಗೆ ಯಾವುದೂ ತೋಚುತ್ತಿಲ್ಲ. ಏತನ್ಮಧ್ಯೆ ಯುವಕರು ಐ.ಎಸ್.ಐ.ಎಸ್. ಗಾಳಕ್ಕೆ ಬೀಳುತ್ತಿರುವುದು ಬಹಳ ಆತಂಕ ಮೂಡಿಸುತ್ತಿದೆ. ಈ ರಾಕ್ಷಸರು ಅವರ ತಲೆಯಲ್ಲಿ ಧರ್ಮದ ನಶೆ ತುಂಬುತ್ತಿದ್ದಾರೆ. ಕಳೆದ ವಾರ ಲಂಡನ್ನಿನ ಮೂವರು ಯುವತಿಯರು ಸಿರಿಯಾ ಮತ್ತು ಇರಾಕ್ ಮಧ್ಯದ ಐ.ಎಸ್.ಐ.ಎಸ್.ನ ಹಿಡಿತದಲ್ಲಿರುವ ತಾಣ ಸೇರಿದ್ದಾರೆ ಎಂಬ ಸುದ್ದಿ ಬಂದಿದೆ. ವಿಶ್ವದ ವಿವಿಧ ದೇಶಗಳ ಯುವಕರು ಜೀವದ ಹಂಗು ತೊರೆದು ಆ ದುಷ್ಟರ ಗುಂಪನ್ನು ಸೇರುತ್ತಿದ್ದಾರೆ. ಕೆಲ ಯುವತಿಯರು ಅವರ ಜೊತೆ ಮದುವೆ ಮಾಡಿಕೊಳ್ಳಲೂ ಸಿದ್ಧರಿದ್ದಾರೆ. ಈ ಭಯಾನಕ ಪರಿಸ್ಥಿತಿಯ ಬಗ್ಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ ಎಂದು ಆಕೆ ನಿಟ್ಟುಸಿರು ಬಿಟ್ಟರು.
ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.